ಕಾವ್ಯ ಮನೆಯ ಮೂಲಕ ಹೊಸಬರ ಕವಿತೆ

ಕಾವ್ಯಮನೆ ಪ್ರಕಾಶನ ಯುವ ಕವಿಗಳ ಆಯ್ದ ಕವನಗಳನ್ನು ‘ಕಾವ್ಯ ಕದಳಿ’ ಎಂಬ ಸಂಕಲನ ರೂಪದಲ್ಲಿ ಹೊರತಂದಿದೆ . ವಿಮರ್ಶಕರಾದ ಸುರೇಶ್ ನಾಗಲಮಡಿಕೆ ಋತುಮಾನಕ್ಕಾಗಿ ಈ ಪುಸ್ತಕವನ್ನಿಲ್ಲಿ ವಿಮರ್ಶಿಸಿದ್ದಾರೆ .

ಇಂದಿನ ಕವಿತೆಯನ್ನು ಕುರಿತು ಬರೆಯ ಹೊರಟರೆ ಹಲವು ಇಕ್ಕಟ್ಟುಗಳು, ಸವಾಲುಗಳು ಎದುರಾಗಬಲ್ಲವು ಎಂದು ಯಾರಿಗಾದರೂ ಅನಿಸುತ್ತದೆ. ನಮ್ಮ ಪೂರ್ವಸೂರಿಗಳು ಹಿಡಿದ ಕಾವ್ಯದ ಪರಿಕರಗಳನ್ನು ಬಳಸಿಕೊಂಡು ಇಂದಿನವರ ಕವಿತೆಯನ್ನು ಅಭ್ಯಾಸ ಮಾಡಿದರೆ ನಮಗೆ ಅಷ್ಟೊಂದು ಪ್ರಯೋಜನಗಳು ಸಿಗಲಾರವೇನೋ? ಹಾಗಾಗಿಯೇ ದೊಡ್ಡವರಿಗೆ ಇಂದಿನ ಕವಿತೆ ಏನಾಗುತ್ತಿದೆ ಎಂಬುದರ ಬಗ್ಗೆ ಸಾಕಷ್ಟು ಅನುಮಾನ, ಸಂದೇಹಗಳು ಎದುರಾಗಿವೆ. ಕಾವ್ಯದ ಸಂಗತಿಗಳು ಇಂದು ಯಾವ ದಿಕ್ಕಿನಿಂದಲಾದರೂ ನುಗ್ಗಬಹುದು; ಇಂಥದ್ದೇ ಮೂಲದಿಂದ ಬಂದಿದೆ ಎಂದು ಹೇಳಲು ಬರವುದಿಲ್ಲ. ನಮ್ಮ ಹಿರಿಯ ಜೀವಗಳು ಕವಿತೆಗೆ ಬೇಕಾದ ಆಕರಗಳನ್ನು ಎರಡು ದಿಕ್ಕಿನಿಂದ ಪಡೆಯುತ್ತಿದ್ದರು ಎಂಬುದು ಸದ್ಯಕ್ಕೆ ತಿಳಿಯಬಹುದು. ಒಂದು; ಸ್ವ ಅನುಭವದಿಂದ ಎರಡು; ಭಾರತೀಯ ತತ್ವಶಾಸ್ತ್ರೀಯ ನೆಲೆಗಳಿಂದ. ಇದನ್ನ ಧಾಟಿಕೊಂಡು ನಮ್ಮದೇ ತಿಳಿವಿನ ದಾರಿಯಾಗಿದ್ದ ಜನಪದ ಲೋಕದಿಂದ ಪಡೆಯಬಲ್ಲರಾಗಿದ್ದರು. ಇದರಲ್ಲಿ ನಮ್ಮ ಸುತ್ತಣ ನಿಸರ್ಗದ ಅವಯವಗಳು ಬದುಕನ್ನು ಅದರ ಪಲ್ಲಟಗಳನ್ನು ಗರ್ಭೀಕರಿಸಿಕೊಂಡಿದ್ದು ತಿಳಿದ ಸಂಗತಿ. ಆದರೆ ಎಳೆಯರ ಕವಿತೆಗೆ ಮೂಲ ಆಕರಗಳು ಯಾವುದೆಂಬುದು ತಿಳಿಯಲಾಗಿಲ್ಲ, ಇದಕ್ಕೆ ಕಾರಣಗಳನ್ನು ಹುಡುಕುವುದಕ್ಕೆ ನಾವು ಸಾಕಷ್ಟು ದಿನಗಳನ್ನು ಮುಂದೋಡಬೇಕಿಲ್ಲ. ಹಿಂದಿನವರು ಸವೆದ ಹಾದಿಯಲ್ಲಿ ನಾವು ಸಾಗಿದರೆ ಏನಾಗಬಹುದೆಂಬ ಆತಂಕವೂ ಅವರಿಗಿದೆ.

ಎಲ್ಲಕ್ಕಿಂತ ಮುಖ್ಯವಾಗಿ ದಲಿತ ಬಂಡಾಯದ ಸಂದರ್ಭದಲ್ಲಿ ಕಾಣಿಸಿಕೊಂಡ ಹಲ ಬಗೆಯ ಸಮುದಾಯಗಳ ಅನುಭವಗಳು ಈಗ ಅದಕ್ಕಿಂತ ಬೇರೆಬಗೆಯಲ್ಲಿ ಕಾಣಿಸಿಕೊಳ್ಳುತ್ತಿವೆ ಎಂಬುದನ್ನು ಮರೆಯ ಬಾರದು. ಅಂದಿನ ದಲಿತ ಬಂಡಾಯದಲ್ಲಿ ಅಲ್ಲಲ್ಲಿ ಕಾಣಿಸಿಕೊಂಡ ಢೋಂಗಿ ತನದ ಮುಖವಾಡಗಳು ಇವತ್ತಿನ ಕವಿತೆಗೆ ಬೇಕಿಲ್ಲ. ದಲಿತ ಬಂಡಾಯ ಎಂಬ ಪರಿಕಲ್ಪನೆಗಳೇ ಇಂದು ಮರು ರೂಪಕ್ಕೆ ತಿರುಗಿವೆ. ಅಥವಾ ಅನುಭವಗಳ ಪ್ರಾಮಾಣಿಕತೆಗಳು ಮುನ್ನೆಲೆಗೆ ಬರುತ್ತಿವೆ.ಧರ್ಮ, ಸಂಸ್ಕøತಿ, ಜಾತಿ, ಪ್ರೇಮ, ನಿಸರ್ಗದ ಪ್ರತಿಮೆಗಳು ಇಂದು ಪಡೆದುಕೊಳ್ಳುತ್ತಿರುವ  ಅರ್ಥಗಳು ಸಾರ್ವಜನಿಕ ಆಯಾಮಗಳ ಬೇರುಗಳಿಂದಲೇ ಪ್ರವೇಶವಾಗುತ್ತಿವೆ. ಆರ್ಥಿಕತೆಯ ಪಲ್ಲಟಗಳು, ಆಧುನಿಕೋತ್ತರ ಎಂದು ಕರೆಯಬಹುದಾದ ಅನುಭವಗಳು ಭಾರತೀಯ ಹಾಗೂ ಕರ್ನಾಟಕ ಸಂಧರ್ಬದಲ್ಲಿ ಆಗುತ್ತಿರುವ ತರಗಳು; ಸಮಕಾಲೀನ ಘಟನೆಗಳು ಪಡೆದುಕೊಳ್ಳುತ್ತಿರುವ ಸ್ವರೂಪಗಳು; ಹೆಣ್ಣಿನ ನೋವಿನ ನೆಲೆಗಳು; ಇನ್ನೂ ಹೊಸ ವೇಷಗಳನ್ನು ಧರಿಸುತ್ತಿರುವ ಧಾರ್ಮಿಕ ಒಳ ಗುದ್ದಾಟಗಳು ನಮ್ಮ ಕಣ್ಣ ಮುಂದೆ ಬೇರೆ ಅವತಾರಗಳನ್ನು ತಾಳುತ್ತಲೇ ಇವೆ.ಕೊನೆಗೂ ಇವೆಲ್ಲವೂ ನಡೆಯುತ್ತಿರುವುದು ನಮ್ಮ ಬದುಕಿನಲ್ಲಿಯೇ ಅಲ್ಲವೇ. ಇವೆಲ್ಲವನ್ನು ಕವಿತೆಯ ಮಾಧ್ಯಮವು ತನಗೆ ದಕ್ಕಿದಷ್ಟು ಕಸುವುನಿಂದ ಅಭಿವ್ಯಕ್ತಿಗೆ ಒಳಪಡಿಸುವ ಸವಾಲು ಇದ್ದೇ ಇದೆ. ಆ ದಿಕ್ಕಿನಲ್ಲಿ ಇಲ್ಲಿನ ಕವಿತೆಗಳು ಒಂದಾಗಿಯೂ, ಹಲವೊಮ್ಮೆ ಬೇರೆಯಾಗಿಯೂ ಕಾಣಿಸುತ್ತವೆ. ಕವಿತೆಗೆ ವಸ್ತು ಏನಾದರೂ ಆಗಬಹುದೆಂಬುದು ಈ ಕಾಲದ ನಿಲುವು ಆಗಿದೆ. ಹೊಸಬರ ಕವಿತೆಗೆ ದಟ್ಟವಾದ ಜೀವನದ ಕಾಣ್ಕೆ ಬೇಕು ನಿಜ ಆದರೆ ಆ ಜೀವನದ ಕಾಣ್ಕೆ ಇಂದು ಯಾವ ಸ್ವರೂಪದಲ್ಲಿದೆ ಎಂಬುದನ್ನು ನಾವು ಅರಿತಿರಬೇಕಲ್ಲವೆ? ಹಾಗಾದರೇ ಇಂದಿನ ಕವಿತೆಯ ಬದುಕಿನ ಕಾಣ್ಕೆ ಯಾವುದು? ಗುಮಾನಿಯ ಬದುಕಿನ ಕ್ರಮದಲ್ಲಿ ಇರುವ ನಮಗೆ ಆಕ್ಷಣದ ತೀರ್ಮಾನಗಳೇ ನಮ್ಮನ್ನು ನಿರ್ಧಾರಮಾಡುತ್ತಿವೆ ಅಲ್ಲವೇ?  ನಂಬಿಕೆಯ ಪ್ರಶ್ನೆಯಲ್ಲಿ ಮನುಷ್ಯ ದ್ವಂದ್ವದಲ್ಲಿದ್ದಾನೆ ಎಂದು ಅನಿಸುವುದಿಲ್ಲವೇ? ಮನುಷ್ಯ ಸ್ವ ಬದುಕು ಮತ್ತು ಅನ್ಯ ಬದುಕುಗಳ ನಡುವೆ ಹಲ ಬಗೆಯ ಸಂಕಟಗಳನ್ನು ಎದುರಿಸುತ್ತಿದ್ದಾನೆ. ತಾನು ಎದುರಿಸಬೇಕಾದ್ದು ಯಾರನ್ನು? ಒಳಗಿನ ಒತ್ತಡಗಳನ್ನೋ ಅಥವ ಸಮಾಜದ ಒತ್ತಡಗಳನ್ನೋ? ಅಥವ ಕೆಲವೊಮ್ಮೆ ಸ್ವ ಒತ್ತಡಗಳೇ ಸಮಾಜದ ಒತ್ತಡಗಳೂ ಆಗಿರಬಹುದಲ್ಲವೇ? ಹೊಸಬರ ಕವಿತೆಯ ಒಳಗೆ ಇವೆಲ್ಲವೂ ಮಸುಕಾಗಿ ಕಾಣಿಸುತ್ತ ಸಾಗಿವೆ.

ಕಾವ್ಯ ವಿಮರ್ಶೆಯಲ್ಲಿ ನಾವು ಹಲವು ಬಾರಿ ಪಾಶ್ಚಾತ್ಯರು ಬಳಸುವ ಪರಿಕಲ್ಪನೆಗಳನ್ನು ಯಥಾವತ್ತಾಗಿ ಅನ್ವಯಮಾಡಿ ಬಳಸುವುದು ಕಾಣಬಹುದು, ತಪ್ಪಲ್ಲ ಆದರೆ ನಮ್ಮ ಸಂದರ್ಭಗಳು ಹಲವು ಬಾರಿ ಅವುಗಳಿಗೆ ಎದುರೀಜು ಹೊಡೆಯಬಹುದು. ಇದಕ್ಕೆ ಸಣ್ಣ ನಿದರ್ಶನವೆಂದರೆ ಇಂದಿಗೂ ಬುದ್ಧ, ಅಂಬೇಡ್ಕರ್,ಗಾಂಧೀ ಕುರಿತ ರೂಪಕಗಳು ಕಾಣಿಸಿಕೊಳ್ಳುತ್ತಿರುವುದು. ಇವರನ್ನು ಕನ್ನಡದ ಪ್ರಾತಿನಿಧಿಕ ಕವಿಗಳು ಬಳಸುವುದಕ್ಕೂ ಈಗಿನ ಕವಿಗಳು ಬಳಸುವ ರೂಪಕಗಳಿಗೂ ಹಲವು ರೀತಿಯಲ್ಲಿ ವ್ಯತ್ಯಾಸಗಳು ರಾಚುತ್ತವೆ. ಹಲವು ನೆಲೆಗಳಲ್ಲಿ ಬುದ್ದ ಮತ್ತು ಅಂಬೇಡ್ಕರ್ ಇಂದಿನ ಸಾಂಸ್ಕøತಿಕ ಪ್ರತಿಮೆಗಳಾಗಿಯೂ  ಕಾಣಿಸಬಲ್ಲರು. ಅಂದರೆ ನಾವು ಎದುರುಗೊಳ್ಳುತ್ತಿರುವ ಎರಡು ಪರಿಕಲ್ಪನೆಗಳಾದ ‘ಬಹುತ್ವ’ ಮತ್ತು ‘ನವ ರಾಷ್ಟ್ರೀಯತೆ’ಗಳು ನಮ್ಮ ಚಿಂತನೆಯ ಕ್ರಮಗಳನ್ನು ಅಲುಗಾಡಿಸುತ್ತಿವೆ. ಬಹುತ್ವ ನಮ್ಮ ನೆಲೆದ ನಿಲುವು. ಇದನ್ನು ಒಡೆಯುವ ಹವಣಿಕೆಯಲ್ಲಿ ನವ ರಾಷ್ಟ್ರೀಯತೆ ಇದೆ.ಆದರೆ ಎರಡರ ನಡುವೆ ಮುಗ್ಧಲೋಕವೊಂದು ಮಾಯವಾಗುವ ಸ್ಥಿತಿ ಇದೆ. ಹೊಸಬರ ಕವಿತೆ ಈ ಮುಗ್ಧಲೋಕವನ್ನು ಹೆಚ್ಚು ತಾಕಬೇಕಾಗಿದೆ. ಆ ನಿಟ್ಟಿನಲ್ಲಿ ಕೆಲವಾದರೂ ಪದ್ಯಗಳು ನಮ್ಮಲ್ಲಿ ಬರುತ್ತಿವೆ. ಆಗಲೇ ಹೇಳಿದ ಹಾಗೆ ಬುದ್ದನ ರೂಪಕಗಳು ಮರುರೂಪಕ್ಕೆ ಒಳಪಟ್ಟಿರುವುದು ಸ್ವ ಅನುಭವಗಳು ಜತೆಗೆ ಸಮಾಜದ ಅಂಗಳದಲ್ಲಿ ಎನ್ನಬಹುದು.


‘ನಿರುತ್ತರಿ’ ಎಂಬ ಕವಿತೆಯೊಂದಿದೆ. ಅದರಲ್ಲಿನ ಬುದ್ದ ಮತ್ತು ಅಸಹಾಯಕ ಹೆಣ್ಣು ಮಗಳಿನ ಚಿತ್ರಗಳು ಬರುವುದೇ ಸ್ವ ಮತ್ತು ಅನ್ಯಗಳ ತಿಕ್ಕಾಟದಲ್ಲಿ. ‘ಸುಟ್ಟು ಕರಕಲಾಗಿದೆ ಬಾಲ್ಯ/ ಬರೀ ಲಂಗದ ಆಸೆ’ (ಕಾವ್ಯ ಕೋಳೀವಾಡ) ಎಂಬ ಚಿತ್ರಗಳು ಕನ್ನಡ ಕಾವ್ಯದಲ್ಲಿ ಸ್ವಲ್ಪಕಾಲ ಕಾಣೆಯಾಗಿದ್ದ ಬಾಲ್ಯದ ಅನುಭವಗಳು ಮರುಕಳಿಸುತ್ತಿವೆ. ಈ ಬಗೆಯ ಅನುಭವಗಳು ಕವಿಗಳಿದೇ ಆಗಬೇಕಿಲ್ಲ. ಬಾಲ್ಯದ ಅನುಭವಗಳು ಹಲವು ರೀತಿಯಲ್ಲಿ ಇರಬಲ್ಲವು ನೆನಪುಗಳ ಆದಿಯಲ್ಲಿ: ದುಃಖದ ಬೆನ್ನಲ್ಲಿ. ಆದರೆ ಇಲ್ಲಿನ ಕಂಡ ಬಾಲ್ಯದ ಅನುಭವ ಹೆಣ್ಣಿನ ಆಂತರ್ಯದಲ್ಲಿ ಕಾಣುವ ಗತಿಗಳೇ ಕ್ರೌರ್ಯದಿಂದ ಕೂಡಿವೆ.ಧಾರ್ಮಿಕ ಪ್ರತಿಮೆಗಳು ಎಂದ ತಕ್ಷಣವೇ ನಮಗೆ ಏಸು,ಬುದ್ದ, ಪೈಗಂಬರ ನೆನಪಾಗುವುದು ಸಹಜ.ಕವಿಚಂದ್ರ ಮತ್ತು ಕೃಷ್ಣದೇವಾಂಗಮಠ ಇಬ್ಬರೂ ತಮ್ಮ ಕವಿತೆಗಳಲ್ಲಿ ಸಮರ್ಥವಾಗಿ ಬಳಸಿಕೊಂಡಿದ್ದಾರೆ. ‘ಕಣ್ಣ ಕೋಣೆಯ ಹರಿದ ಪರದೆಯಲ್ಲಿ/ ಕ್ರಿಸ್ತನ ನೆತ್ತರು ನರಳಾಡುತಿದೆ’/ ಹೆಜ್ಜೆ ಅಳಿಸಿಕೊಂಡ ಪೈಗಂಬರನ/ಹರಿದ ಟೋಪಿ ನೇತಾಡುತ್ತಿದೆ’( ಕವಿಚಂದ್ರ) ‘ಪ್ರಾಣ ಕಳಕೊಂಡ ದೀಪದ ಆತ್ಮ’ ( ಆರಡಿ ಮಲ್ಲಯ್ಯ)

‘ಅಲ್ಲಾ ಎಂದ ಕ್ರಿಸ್ತನಾದ
ದಿಗಂಬರ ಮಲಗಿದ್ದ ಪೈಗಂಬರಗೆ ಹೆಣದ
ಮುಷ್ಟಿಯಲ್ಲಿ ಶಿಲುಬೆ ಸಿಕ್ಕಿತು
ಖುರಾನಿನ ಕೊನೆಯ ಪುಟದಲ್ಲಿ ಯಥಾವತ್ತಾದ
ಅದರ ಚಿತ್ರ ಬಿಡಿಸಿದ
ಮೇರಿಯನ್ನು ಬಾಯ್ತುಂಬ ತಾಯಿ ಎಂದ( ಕೃಷ್ಣ ದೇವಾಂಗ ಮಠ)

ಇಲ್ಲಿನ ಅಭಿವ್ಯಕ್ತಿಯ ಕ್ರಮದಲ್ಲಿ ಗೊಂದಲವಿದ್ದರೂ ಅರ್ಥಕ್ಕೇನೂ ದೋಷವಿಲ್ಲ. ಇದರ ಸಮಸ್ಯೆಯನ್ನು ಹೊಸಬರು ಕ್ರಮೇಣ ಬಿಡಿಸಿಕೊಳ್ಳಬಲ್ಲರು ಇರಲಿ. ಧರ್ಮ ಮತ್ತು ಮನುಷ್ಯನ ಸಂಬಂಧಗಳು ಎಂದಿಗಿಂತ ಇಂದು ಮರು ರೂಪಕ್ಕೆ ಒಳಪಡುತ್ತಿವೆ. ಇಂಥ ಸಮಯಗಳಲ್ಲಿ ಮನುಷ್ಯನ ಆಶಯಗಳು ಏಕರೂಪತೆಯಿಂದ ಇರಬಲ್ಲವು ಎಂದು ಹೇಳಲು ಬರುವುದಿಲ್ಲ. ಮನುಷ್ಯನನ್ನು ನೆಮ್ಮದಿಯ ತಾಣಕ್ಕೆ ಎಳೆಯಬಹುದಾದ ಸಂಗತಿಗಳಾಗಿ ಧಾರ್ಮಿಕ ಪರಿಕಲ್ಪನೆಗಳು, ವ್ಯಕ್ತಿ ಚಿತ್ರಗಳು ಇದ್ದರೂ ನೆತ್ತರಿನ ಚಿತ್ರಗಳಾಗಿ ಮಾರ್ಪಡುತ್ತಿರುವ ಸಂದರ್ಭಗಳೇ ಇಂದು ಮುನ್ನೆಲೆಗೆ ಬರುತ್ತಿವೆ.ಆದರೆ ಹೊಸಬರ ಕವಿತೆಗೆ ಇಂಥ ಕಡೆ ತಾತ್ವಿಕ ಆಳತೆ ಬೇಕಾಗಬಹುದು. ಅದಿಲ್ಲದಿದ್ದರೆ ಕವಿತೆ ಕಸುವಿಲ್ಲದ ಹೇಳಿಕೆಗಳಾಗಿ ಕಾಣಿಸುತ್ತವೆ. ಕವಿತೆಯಲ್ಲಿನ ತಾತ್ವಿಕತೆ ಎಂದರೇನು? ಅದು ಸಮಕಾಲೀನ ಸಂಗತಿಗಳನ್ನು ನಿಭಾಯಿಸುವಬಗೆ ಹೇಗೆ ಎಂಬ ಪ್ರಶ್ನೆಗಳು ಇಲ್ಲಿ ಮುಖ್ಯವಾಗುತ್ತವೆ. ಯಾವುದೇ ತಾತ್ವಿಕ ಸಂಗತಿ ಜೀವಂತಿಕೆಯನ್ನು ಪಡೆಯುವುದು ಅದು ತತ್ಕಾಲೀನ ಬದುಕಿನೊಂದಿಗೆ ಸಂಬಂಧವನ್ನು ತೀವ್ರಗೊಳಿಸಿಕೊಂಡಾಗ. ಈ ಬಗೆಯ ತೀವ್ರತೆಗೆ ಕವಿತೆಯ ಮಾಧ್ಯಮವು ಪ್ರತಿಸ್ಪದಿಸುವುದು ತನ್ನ ಆಂತರಿಕ ಸಂವಹನದ ಗಟ್ಟಿತನದಿಂದಲೇ ಅಲ್ಲವೆ. ಧರ್ಮದ ನೆಲೆಗಳು ಪಡೆಯುತ್ತಿರುವ ಸ್ವರೂಪಗಳು ಕೂಡ ಮನುಷ್ಯನ ಇರುವಿಕೆಗೆ ಕೆಲವೊಮ್ಮೆ ಒಳಪಟ್ಟಿರುತ್ತವೆ. ಕವಿತೆಯ ಆಂತರಿಕ ಸಂವಹನವೂ ಕೂಡ ಈ ನೆಲೆಗಳನ್ನು ಸ್ವೀಕರಿಸುತ್ತಲೇ ಗಟ್ಟಿಯಾದ ಬದುಕಿನ ಕಾಣ್ಕೆಯನ್ನು ನೀಡಬೇಕಾಗುತ್ತದೆ. ಹೊಸಬರ ಕವಿತೆ ಈ ನಿಟ್ಟಿನಲ್ಲಿ ಸಾಧಿಸಬೇಕಾದ್ದು ಸಾಕಷ್ಟಿದೆ. ಧರ್ಮದ ಕುರಿತು ಕೇವಲ ಅಭಿಪ್ರಾಯಗಳನ್ನು ಮಂಡಿಸುವುದು ಕವಿತೆಯ ಉದ್ದೇಶವಾಗಬಾರದು.ಸಮಕಾಲೀನ ಬದುಕನ್ನು ಹಿಡಿಯುವ ಸಾಂಸ್ಕ್ರತಿಕ ಪ್ರತಿಮೆಗಳು ಗಟ್ಟಿಯಾಗಬೇಕಾದ ತುರ್ತು ಇದೆ. ಈ ನಿಟ್ಟಿನಲ್ಲಿ ಕೆಲವರು ಪ್ರಯತ್ನ ಪಡುತ್ತಿರುವುದು ಸಮಾಧಾನದ ಸಂಗತಿ. ಈಚಿನ ಕವಿತೆ ಕೇವಲ ಸುತ್ತಣ ಸಂಗತಿಗಳಿಗೆ ಸ್ಪಂದಿಸುತ್ತಿಲ್ಲ ಎಂಬುದು ಅದರ ಬೆಳವಣಿಗೆಯ ದೃಷ್ಟಿಯಿಂದ ಗಮನಿಸಬೇಕು. ಕವಿತೆ ಕಾಡುವ ಸಂಗತಿಗಳು ಹಲ ಬಗೆಯದಾದರೂ ಅವು ಬದುಕಿನ ಸುತ್ತಲೇ ಗಿರಿಕಿಹೊಡೆಯುತ್ತವೆ. ಆದರೆ ಅನುಭವಗಳ ತೀವ್ರತೆ ಹೊಸಬರನ್ನು ಕೈಹಿಡಿದರೂ ಕವಿತೆಯ ರೂಪವನ್ನು ಪಡೆಯುವಾಗ ಕಟ್ಟುವಿಕೆಯಲ್ಲಿ ಎಡವುತ್ತಿರಬಹುದು ಆದರೆ ಜೀವನದ ಶ್ರಧ್ದೆಯನ್ನು ಸಾಕಷ್ಟು ಬಾರಿ ಮರೆಯುವುದಿಲ್ಲ. ಹಲವು ವೃತ್ತಿಗಳಿಂದ ಬಂದು ಕವಿತೆ ಬರೆಯುತ್ತಿರುವ ಹೊಸಬರು ತಮ್ಮ ಭಾವಗಳನ್ನು ಮಾತ್ರ  ಅನಾವರಣ ಮಾಡುತ್ತಿಲ್ಲ ಬದಲಿಗೆ ಕವಿತೆಯ ಮೂಲಕ ತಮ್ಮನ್ನು ಕಂಡುಕೊಳ್ಳುವ ಹಾದಿಯಲ್ಲಿ ಇದ್ದಾರೆ. ಕೆಲವೊಮ್ಮ ಸ್ವ ಅನುಭವಗಳು ಗಟ್ಟಿಯಾದಾಗ ಕವಿತೆ ಭಾಷಿಕ ನುಡಿಗಟ್ಟು ಹೇಗೆ ತೀವ್ರತೆಯನ್ನು ಪಡೆದುಕೊಳ್ಳಬಲ್ಲವು ಎಂದರೆ ಒಂದು ಕವಿತೆಯನ್ನು ಗಮನಿಸಿ.

‘ಯಾವ ಗೆರೆಗಳ ಪರದಿಯೂ ಇರದ
ಪೋಲಿಯಂತಾಡುವ ಮೆದುಳ ಹಿಂದಿನ ನೆನಪು 
ಹೃದಯವನ್ನು ಇನ್ನಷ್ಟು ಪ್ರಚೋದಿಸುತ್ತದೆ
ಖಾಲಿತನದ ಪರಮಾಧಿಗೆ ತಲುಪಿರುವ ಹೃದಯ
ಯೌವನವು ಹೆಣೆದಿಟ್ಟ ಕನಸನ್ನು ತುಂಬಿಕೊಳ್ಳುತ್ತದೆ’ (ಕಡಲು ಬೇಟೆಗಾರ)

ಅನುಭವವು ಇಲ್ಲಿ ಸುಳ್ಳಿನ ಹಾದಿಯನ್ನು ಹಿಡಿದಿಲ್ಲ. ವೈಯಕ್ತಿಕ ಬದುಕಿನ ಯಾನವು ಇಲ್ಲಿ ಹಲವು ಮಗ್ಗಲುಗಳನ್ನು ಬದಲಾಯುಸುವ ಪ್ರಕ್ರಿಯೇ ಸಾಗಿದೆ. ಈ ಕವಿಯನ್ನು ಆವರಿಸಿರುವ ಎರಡು ಬಿಂದುಗಳೆಂದರೆ ಒಂದು ಆಂತರಿಕ ಪ್ರೇಮ ಮತ್ತೊಂದು ಕಡಲಿನ ಅನುಭವಗಳು. ಇವುಗಳ ನಡುವೆ ಸ್ವ ಬದುಕನ್ನು ಅನಾವರಣ ಮಾಡಬಲ್ಲರು. ಮೀನುಗಾರಿಕೆಯ ವೃತ್ತಿಯಲ್ಲಿರುವ ಈತ ಕಡಲಿನ ಪ್ರತಿಮೆಗಳನ್ನು ಇನ್ನ ಗಟ್ಟಿಯಾಗಿ ತರಬಹುದು. ಈತನಿಗೆ ನಿಸರ್ಗದ ರೂಪಗಳು ಕಾಣುವ ಬಗೆ ವಿಚಿತ್ರದ್ದು.

‘ಗುಳೆಹೊರಟ ಕರಿಮೋಡಗಳು
ಒಂದಕ್ಕೊಂದು ಕಾಲಡಿಸಿಕ್ಕಿ ಎಡುವುತ್ತಿವೆ
ನೋವುಂಡ ಮೋಡಗಳು ಅತ್ತು
ಮುಂದೆ ಮುಂದೆ ಸಾಗುತ್ತಿದ್ದರೆ
ಬಿದ್ದ ಕಣ್ಣೀರಿಗೆ ಭೂಮಿಯಲ್ಲಿ
ಮಳೆಯೆಂದರಲ್ಲ.’ (ಕಡಲು ಬೇಟೆಗಾರ)

ನಿಸರ್ಗ ಪ್ರೇಮವನ್ನು ತನ್ನೊಳಗಿನ ಪ್ರೇಮಕ್ಕೆ ಡಿಕ್ಕಿಹೊಡೆಸುವ ಪರಿ ಎಂದು ಭಾವಿಸಬಹುದೇ? ಈ ಬಗೆಯ ಪ್ರತಿಮೆಗಳು ಕನ್ನಡಕ್ಕೆ ತೀರ ಹೊಸವು ಎಂದು ಹೇಳಲಾರೆ ಆದರೆ ಸ್ವ ಬದುಕಿನ ಯಾನದ ಬೆನ್ನಲ್ಲಿ ನಿರ್ವಹಿಸಿರುವ ರೀತಿ ಭಿನ್ನದ್ದು. ಹೊಸಬರ ಕವಿತೆಯನ್ನು ಆವರಿಸಿರುವ ಕಾಳಜಿಗಳೇನು ಎಂದು ಮತ್ತೆ ಮತ್ತೆ ಕೇಳಿಕೊಳ್ಳಬೇಕಾದ ಸಂದರ್ಭವಿದು. ಬಾಲ್ಯದ ನೆನಪುಗಳು ವರ್ತಮಾನದ ಸಂಗತಿಗಳ ಸಂಗಡ ಮುಖಾಮುಖಿಯಾಗುವ ಬಗೆ ಎಲ್ಲರಲ್ಲೂ ಕಾಣುತ್ತದೆ. ರೈತರ ಬಗೆಗಿನ ಕಾಳಜಿಗಳು; ಭೂಮಿಯ ಪ್ರಶ್ನೆ: ಜಾಗತೀಕರಣವನ್ನು ಮೀರಿಸುವ ಅಂಶಗಳನ್ನು ಇವರು ಕವಿತೆಯಲ್ಲಿ ಕಟ್ಟಿದ್ದಾರೆ. ತಮ್ಮ ವಯೋಮಾನವನ್ನು ಹೆಚ್ಚು ಕಾಡುವ ನೆನಪುಗಳ ಕಡೆಗೆ  ಧಾವಿಸುವ ಅನೇಕರು ಮನುಷ್ಯನ ಅಸ್ತಿತ್ವವನ್ನು ಹುಡುಕುತ್ತಾರೆ. ಕೆಲವರಲ್ಲಿ ನೆನಪು ಸಡಿಲವಾಗದೇ ಬದುಕಿನಲ್ಲಿ ಚಾಚಬಹುದಾದ ಭಾವಗಳ ಕಡೆ ತಿರುಗುತ್ತವೆ.ಇಂಥ ಕಡೆಯೂ ಸವಾಲುಗಳು ಎದುರಾಗಬಲ್ಲವು. ಬಾಲ್ಯದ ನೆನಪುಗಳನ್ನು ಭಾಷಿಕ ರೂಪಕ್ಕೆ ಇಳಿಸುವಾಗ ಮತ್ತು ಅವುಗಳನ್ನು ಅನುಭವಗಳ ಆವರಣಕ್ಕೆ ಎಳೆದುತರುವಾಗ ಸತ್ಯ-ಅಸತ್ಯಗಳ ತಾಕಲಾಟಗಳಂತೂ ಇದ್ದೇ ಇರುತ್ತವೆ.ಅಥವಾ ನೆನಪುಗಳ ಮಾಗುವಿಕೆಯಲ್ಲಿನ ದ್ವಂದ್ವಗಳೂ ಹೀಗೆ ಅಲ್ಲವೇ? ಅನುಭವಗಳು ಆ ಕ್ಷಣದ್ದು ಎಂದು ತಿಳಿದರೆ ಏನಾಗಬಹುದು? ಅನುಭವಗಳಿಗೆ ಕವಿತೆಯಲ್ಲಿ ಬಹುದೊಡ್ಡ ಸ್ಥಾನವಿದೆ ಎಂದಾದರೆ ಬದುಕಿನ ಕಾಣ್ಕೆಯನ್ನು ಅನಾವರಣಗೊಳಿಸುವುದು ಹೇಗೆ? ಮುಂತಾದ ಪ್ರಶ್ನೆಗಳು ಇಲ್ಲಿನ ಕೆಲವು ಕವಿತೆಗಳನ್ನು ಓದಿದ ನಂತರ ಅನಿಸಿದರೇ ಆಶ್ಚರ್ಯವಲ್ಲ.

‘ಅಜ್ಜ ಬಿಟ್ಟುಹೋದ ಗದ್ದೆ
ಅಡಿಕೆ ತೆಂಗುಗಳ ತುಂಬಿಕೊಂಡು
ಮೆಹಂದಿ ಗಿಡದ ನೆರಳ ನೆರವಲ್ಲಿ 
ಬಾಳು ಪಡೆದ ಅಜ್ಜನ ಗೋರಿಯಂತೆ
ತೆಪ್ಪಗೆ ಬಿದ್ದುಕೊಂಡಿದೆ….. (ಯಂಶ ಬೇಂಗಿಲ)

ನೆನಪುಗಳ ಸಿಕ್ಕುಗಳು
ಹೃದಯಕ್ಕೆ ಬಲೆ ಹಾಕಿವೆ
ಅಲ್ಲೊಂದು ಹೂ ಕನಸು ಅರಳಿಸಿದೆ. (ಪ್ರವೀಣ ಮುತಾಲಿಕ್)

ಅವ್ವಳ ಕೆಂಪಾದ ಕಣ್ಣಿಗೆ ಕೆಂಪಂಗಿ ಬೇಕೆಂದೆ
ಅಪ್ಪ ಸಾಬರದಂಗಡಿಯ ತುಂಡು ಬೀಡಿಗಳ
ಹೊಗೆ ನೆಲದಾಕಾಶದ ನಿಟ್ಟುಸಿರಿನಂತೆ ಬಿಟ್ಟ! (ಕಪಿಲ.ಪಿ.ಹುಮನಾಬಾದೆ)

ಈ ಮೂರು ಕವಿತೆಗಳು ವೈಯಕ್ತಿಕವಾಗಿ ಹಲವು ಸಂದರ್ಭಗಳಲ್ಲಿ ರಚನೆಯಾಗಿದ್ದರೂ, ಕೂಡುವ ಜಾಗ ಮಾತ್ರ ಒಂದೇ.  ಇವರ ನೆನಪುಗಳು ಜೀವಂತಿಕೆ ಪಡೆಯುತ್ತಿರುವುದು ತಾವು ಅಕ್ಷರಲೋಕಕ್ಕೆ ಕಾಲಿಟ್ಟ ಮೇಲೆ. ಅಲ್ಲಿಯ ತನಕ ಅವು ಅಂತರಂಗದ ಬಂಧಿಗಳೇ ಅಲ್ಲವೆ ಇರಲಿ. ಆ ನೆನಪುಗಳಾದರೂ ಯಾವ ಬಗೆಯವು ನೋಡಿ ಗದ್ದೆ ಅಜ್ಜನಗೋರಿಯಂತೆ ಕಾಣುತ್ತಿದೆ. ಇದು ಈ ಕಾಲಮಾನದ ಕೃಷಿ ಬದುಕಿಗೆ ಹಿಡಿದ ಕನ್ನಡಿಯೂ ಕೂಡ.ಮನುಷ್ಯ ಮತ್ತು ಭೂಮಿಯ ಸಂಬಂಧಗಳು ಮುರಿದು ಹೋಗುತ್ತಿರುವ ಕಾಲವೂ ಇದಾಗಿದೆ.ಇನ್ನೊಬ್ಬರಿಗೆ ನೆನಪುಗಳು ಸಿಕ್ಕುಗಳಂತೆ ಕಾಣಲಾರಂಭಿಸಿವೆ. ಕಪಿಲ ವರ್ತಮಾನದಲ್ಲಿ ನಿಂತು ಹಿಂದಿನ ಬದುಕನ್ನು ಮೆಲುಕು ಹಾಕುತ್ತಾರೆ. ಇವು ಕೂಡ ನಮ್ಮ ಬದುಕಿನ ಭಾಗವೇ ಅಲ್ಲವೆ.ಇಂಥ ಜಾಗಗಳಲ್ಲಿ ಸಹಜವಾಗಿಯೇ ಮಗ್ಧತನವನ್ನು ಕಾಣಬಹುದು. ವಸ್ತುವನ್ನು ನಿರ್ವಹಿಸುವುದರಲ್ಲಿ ಇವರಿಗೆ ಗೊಂದಲವಿಲ್ಲ ಆದರೆ ಅದನ್ನು ಭಾಷಿಕ ಲಯಗಳಲ್ಲಿ ಹಿಡಿಯುವುದು ಇವರಿಗೆ ನಿಧಾನ ದಕ್ಕಬಹುದು. ಸ್ವಲ್ಪ ಮಟ್ಟಿಗೆ ಕಡಲು ಬೇಟೆಗಾರ, ಹಸನ್ಮುಖಿ ಬಡಗನೂರು, ಮುಂತಾದವರಿಗೆ ಈ ಸಂಕಲನದ ಮಟ್ಟಿಗೆ ದಕ್ಕಿದೆ ಎನ್ನಬಹುದು.ದೇವರ ಕುರಿತ ಅನುಭವಗಳನ್ನು ಅಭಿವ್ಯಕ್ತಿಸುವಾಗಲೂ ಎಚ್ಚರ ಅಗತ್ಯವೆಂದು ಕಾಣುತ್ತದೆ. ಏಕೆಂದರೆ ವರ್ತಮಾನದ ಎಲ್ಲ ಸಂಗತಿಗಳೂ ಕೆಲವೊಮ್ಮೆ ಕವಿತೆಯಾಗಲಾರವು.

ನಾವು ಕವಿತೆಗೆ ಎತ್ತಿಕೊಳ್ಳುವ ವಸ್ತು ಯಾವುದೇ ಆಗಿರಿಲಿ ಅದು ಅನುಭವಕ್ಕೆ ಮೊದಲು ದಕ್ಕಬೇಕಲ್ಲವೇ. ಕಂಡ ಅನುಭವಗಳು ಕೆಲವೊಮ್ಮೆ ಈಗಾಗಲೇ ಪ್ರಚಲಿತದಲ್ಲಿ ಮುನ್ನೆಲೆಗೆ ಬಂದಿರುವಾಗ ಅವುಗಳನ್ನು ತಮ್ಮದೇ ಅಭಿವ್ಯಕ್ತಿಯಲ್ಲಿ ಮಂಡಿಸುವುದು ಕಷ್ಟ. ಅದು ವರದಿ ಯಾಗುವ, ಹೇಳಿಕೆಯಾಗುವ ಸಂಭವ ಜಾಸ್ತಿ. ಇದರಿಂದ ತಪ್ಪಿಸಿಕೊಳ್ಳುವ ಇರಾದೆಯನ್ನು ಹೊಸಬರು ಹೊಂದಲೇಬೇಕು. ಸಮಕಾಲೀನ ಸಂಗತಿಗಳಾಚೆಗೂ ಬದುಕಿನ ದರ್ಶನ ಇದ್ದೇ ಇದೆ. ಅದು ಸ್ವ ಆಲೋಚನೆಯ ಕ್ರಮ. ತನಗೆ ಮಾತ್ರ ದಕ್ಕಿದ್ದು ಎಂದು ಮೇಲುನೋಟಕ್ಕೆ ಅನಿಸುತ್ತಿರುವಾಗಲೇ ಅದು ಎಲ್ಲರಿಗೂ ದಕ್ಕುವ ಉಮೇದಿನಲ್ಲಿರುತ್ತದೆ. ಆ ಬಗೆಯ ಕೆಲ ಕವಿತೆಗಳನ್ನು ಕಟ್ಟುವ ಯತ್ನವನ್ನು ನಾಗಣ್ಣ ಕಿಲಾರಿ, ರಮ್ಯ ಕಡೂರು, ಶ್ರೀದೇವಿ ಕೆರೆಮನೆ, ಕಾವ್ಯ ಶಿವಮೊಗ್ಗೆ, ಶ್ವೇತಾ ಮುಂತಾದವರು ಮಾಡಿದ್ದಾರೆ. ತಾನು ಮತ್ತು ಬದುಕು ಈ ಬಗ್ಗೆ ಕೆಲವರಾದರೂ ಚಿಂತಿಸಿದ್ದಾರೆ. ಕಾಣದ ಸತ್ಯಗಳ ಜೊತೆ ಗುದ್ದಾಡುವುದು ಅಷ್ಟು ಸುಲಭವಲ್ಲ. ನಿಸರ್ಗದ ಪ್ರತಿಮೆಗಳನ್ನು ಹೊಸ ತಲೆಮಾರು ತಮಗೆ ಒಗ್ಗುವ ದಾರಿಗಳಲ್ಲಿ ರೂಪಿಸಿಕೊಳ್ಳುತ್ತಿದ್ದಾರೆ. ತನ್ನತನದ ಹುಡುಕಾಟ, ಸುಖ-ದುಃಖಗಳ ಹೊಯ್ದಾಟ, ಭಾಹ್ಯದ ಒತ್ತಡಗಳಿಗೆ ಪ್ರತೀಕಗಳಾಗಿ ನಿಸರ್ಗವನ್ನು ಒಳಗುಮಾಡಿಕೊಳ್ಳುತ್ತಾರೆ. ಈ ಸಂಕಲನದ ಮಟ್ಟಿಗೆ ನಾಗಣ್ಣ ಕಿಲಾರಿಯವರ ‘ತಪಸ್ಸಿಗಿಳಿದ ಮಳೆ’ ಕವಿತೆ ಮುಖ್ಯವಾಗುತ್ತದೆ.ಭಾಷೆಯನ್ನು ಧ್ಯಾನಸ್ಥ ಸ್ಥಿತಿಯಲ್ಲಿ ದುಡಿಸಿಕೊಳ್ಳುವ ಬಗೆ, ಆಶಯಕ್ಕೆ ತಕ್ಕಂತೆ ರೂಪಿಸಿಕೊಳ್ಳುವ ನಿಸರ್ಗದ ಪ್ರತಿಮೆಗಳು ಇಡೀ ಕವಿತೆಯನ್ನು ಜೀವಂತವಾಗಿಸಿವೆ. ಆರಂಭದಲ್ಲಿ ನವೋದಯ ಚಿತ್ರಗಳು ನೆನಪಾದರೂ ಕಡೆಯ ಸಾಲುಗಳ ಶಬ್ಧ ಜಗತ್ತು ಒಳಗಿನ ಒತ್ತಡಗಳನ್ನು ಅನಾವರಣಗೊಳಿಸಿದೆ.’ಎದೆಯ ಗೂಡಿನಲಿ ತಪಸ್ಸಿಗಿಳಿದ ಎಳೆ/ ಮಾಟಗಾತಿಯ ಮುಂಗುರುಳು ಏನೋ ಧ್ಯಾನಿಸಿದಂತೆ’ ಎಂಬ ಒಳ ಚಿತ್ರ ನಮ್ಮನ್ನು ಬೇರೊಂದು ಕಡೆಗೆ ಎಳೆದೊಯ್ಯೊತ್ತದೆ. ಸ್ವ ಬದುಕಿನ ನೆನಪುಗಳನ್ನು  ಗಾಢವಾಗಿ ಅಂಟಿಸಿಕೊಂಡು ಬಂದಿರುವ ನಾಗಣ್ಣ ಅವುಗಳಿಗೆ ತಕ್ಕ ಭಾಷಿಕ ವಿನ್ಯಾಸಗಳನ್ನು ರೂಪಿಸಿಕೊಳ್ಳುವ ಧಾವಂತದಲ್ಲಿ ಇದ್ದಾರೆ. ಬದುಕಿನ ನಿಗೂಢತೆಯನ್ನು ಕವಿ ಮನಸ್ಸುಗಳು ಹುಡುಕುವ ಪರಿ ವಿಚಿತ್ರ ಬಗೆಯದು. ಇದರ ನಡುವೆ ಧ್ಯಾನಸ್ಥ ಪ್ರತಿಮೆಯಾದ ಬುದ್ಧ ಹೆಣ್ಣು ಮಕ್ಕಳಿಗೆ ವರ್ತಮಾನದ ಸಂಗತಿಯಾಗಿ ಕಾಣುವ ಬಗೆಯೇ ಬೇರೆ ರೀತಿಯದು. ಇದರ ಪರಂಪರೆ ನಮಗೆ ಪ್ರತಿಭ ನಂದಕುಮಾರ್ ಅವರಿಂದಲೇ ದೊಡ್ಡ ಮಟ್ಟದಲ್ಲಿ ಕಾಣಿಸಿಕೊಂಡಿತು ಎಂದು ಹೇಳಲು ಅಡ್ಡಿಯಿಲ್ಲ ಇರಲಿ. ಆದರೂ ಈಚಿನ ಹೆಣ್ಣು ಕಾವ್ಯ ಅದನ್ನು ಮೀರುವ ಯತ್ನದಲ್ಲಿದೆ. ಒಳತುಡಿತಗಳೂ ಅವರನ್ನು ಸಾಕಷ್ಟು ಬಾಧಿಸಿವೆ.ಕಾಮ ಮತ್ತು ಒಲುವುಗಳ ನಡುವಿನ ಕರ್ಷಣಗಳನ್ನು ತಡಕಾಡುವ ಕಾವ್ಯ ಶಿವಮೊಗ್ಗೆ ಯವರ ಕವಿತೆಯ ಹೆಸರೇ ‘ಚೌಕದೊಳಗಿನ ಅಟ್ಟಹಾಸ’ ತಾಜತನದ ರೂಪಕಗಳಿಂದಲೇ ಈ ಕವಿತೆ ಒಳಗೆ ಇಳಿಯಬಲ್ಲದು.

‘ತೃಷೆಯ ತುಷ್ಟಿಗುಣ
ಹರೆಯದ ಬೇಸಿಗೆ ಕನಸು
ಉರಿವ ಜಡದೊಳಗೆ
ಹೊತ್ತಿದ ಅಮೂರ್ತದ ಕಿಡಿ
ಬತ್ತಿದ ನಾಲಿಗೆಗೆ ಒರತೆಯ ಹುಡುಕಾಟ
ಬೆವರು ಬದಲಾಯಿಸುವ ಕ್ರಿಯೆಗೆ 
ಒಲವೆಂಬ ಲೇಪನ
ಅರ್ಥವಾಗದ ಸುಳ್ಳು’ (ಕಾವ್ಯ ಶಿವಮೊಗ್ಗೆ)

ಇದು ಕೇವಲ ಶಬ್ಧಗಳ ಮೇಲಾಟವಲ್ಲ. ಹಾಗೇನಾದರೂ ಇದ್ದರೆ ಕವಿತೆ ತನ್ನ ಪ್ರಾಮಾಣಿಕತೆಯನ್ನು ಕಳೆದುಕೊಳ್ಳುವ ಅಪಾಯವಿರುತ್ತದೆ. ಕಾವ್ಯ ಇಲ್ಲಿ ಹುಡುಕಾಟದ ಹವಣಿಕೆಯಲ್ಲಿದ್ದಾರೆ. ಯಾವುದೇ ಪದ್ಯ ತನ್ನ ಆತ್ಯಂತಿಕವನ್ನು ಪ್ರತಿಪಾಧಿಸುವುದಿಲ್ಲ. ಬದುಕಿನ ಹಾಗೆ. ಅದು ಮುಂದಕ್ಕೆ ಸಾಗುತ್ತಲೇ ಇರುತ್ತದೆ.ಶ್ರೀದೇವಿ ಕೆರೆಮನೆಯವರ ‘ದೇವದಾಸಿಯ ಸ್ವಗತ’ ಈ ನಿಟ್ಟಿನಲ್ಲಿ ನೋಡಬಹುದು. ಸಾಕ್ಷಿಯ ಗುಟ್ಟನ್ನು ಕೇಳುವ ವ್ಯಕ್ತಿಗೆ ಹಣ್ಣೊಬ್ಬಳು ನೀಡುವ ಉತ್ತರಗಳು ಸಮಾಜದ ವಿನ್ಯಾಸವನ್ನು ಪ್ರಶ್ನಿಸುವಂತೆ ಮಾಡುತ್ತವೆ. ಸ್ವ ಬದುಕನ್ನು ವಿಷಾದದ ಧಾಟಿಯಲ್ಲಿ ಧಾಟಿಸುವ ಕ್ರಮವನ್ನು ಬಿಟ್ಟಿರುವುದು ಈ ಕಾಲದ ಹೆಣ್ಣು ಕಾವ್ಯದ ದೊಡ್ಡ ಪಲ್ಲಟ. ದೇವದಾಸಿಯ ಮನಸ್ಸಿನ ಪಲ್ಲಟಗಳನ್ನು ಅತಿಯಾದ ಗದ್ಯದ ಆವರಣದಲ್ಲಿ ಕಟ್ಟಿಕೊಡುವ ಕೆರೆಮನೆಯವರು ಧ್ಯಾನಸ್ಥ ಸ್ಥಿತಿಗೆ ಮರಳಬಹುದೆಂದು ಭಾವಿಸುವೆ. ಕೆರೆಮನೆಯವರ ಪದ್ಯದ ಹೆಣ್ಣಿನ ಆಶಯದ ಸ್ವಗತ ಮತ್ತಷ್ಟು ಹೆಪ್ಪುಗಟ್ಟುವಂತೆ ಕಾಣುವುದು ರಮ್ಯ ಕಡೂರು ಅವರ ‘ಮೌನರತಿ’ ಎಂಬ ಕವಿತೆಯಲ್ಲಿ. ಹೆಣ್ಣು ಕಾವ್ಯದಲ್ಲಿ ಮೌನ, ಮನಸ್ಸು, ಬಂಧನ, ಕೊನೆಗೆ ಮಾತು ಇವೆಲ್ಲಾ ಆಂತರ್ಯದಿಂದ ಸಾಮಾಜಿಕ ನೆಲೆಗೆ ಜಿಗಿಯುತ್ತವೆ.’ಮೌನ ಪಯಣ’ ಎಂಬ ರೂಪಕ ಇದನ್ನೇ ಸೂಚಿಸುತ್ತದೆ.

ಕೆಲವರನ್ನು ಬಿಟ್ಟರೆ ಕಾವ್ಯಮನೆಯ ಕಾವ್ಯ ಸಂಕಲನದಲ್ಲಿ ಮೂವತೈದು ವರ್ಷದೊಳಗಿನವರೇ ಜಾಸ್ತಿ ಇದ್ದಾರೆ. ಅಂತವರು ಕೆಲವರಾದರೂ ಮುಂದೆ ನಿಂತುಕೊಳ್ಳಬಲ್ಲರು ಎಂಬ ನಂಬಿಕೆಯಂತೂ ಇದೆ. ಇವರಾಚೆ ಈ ವಯಸ್ಸಿನವರಾದ ರಾಜೇಂದ್ರ ಪ್ರಸಾದ್,  ನಿರಂಜನ, ಮಹಾಂತೇಶ ಪಾಟೀಲ್, ಗಿರಿಯಪ್ಪ, ಮಧು ಬಿರಾದಾರ, ಸ್ಪೂರ್ತಿ ಹರವು, ಪ್ರವರ, ಸಿದ್ದು ಸತ್ಯಣ್ಣ  (  ಪಟ್ಟಿ ಅಪೂರ್ಣ) ಮುಂತಾದ ಹಲವರು ಕವಿತೆಯನ್ನು ಗಂಭೀರವಾಗಿ ಸ್ವೀಕರಿಸಿದ್ದಾರೆ. ಆದರೆ ಕಾವ್ಯ ಮನೆಯ ಕಾವ್ಯಕ್ಕಿಂತ ತೀರ ಭಿನ್ನವಾಗಿ ಬರೆಯುತ್ತಿದ್ದಾರೆ ಎಂದು ಹೇಳಲಾರೆ. ಹೊಸ ತಲೆಮಾರಿನ ಕವಿತೆಯ ವಿಚಾರಕ್ಕೆ ಬಂದಾಗ ಈ ಸಂಕಲನಕ್ಕೆ ಮಹತ್ವ ಇದ್ದೇ ಇದೆ. ಈ ಲೇಖನದಲ್ಲಿ ಪ್ರಸ್ತಾಪವಾದ ಕವಿಗಳನ್ನು ಬಿಟ್ಟು ಆಕಾಶ ರಂಜೇರಿ, ಮಮತಾ,ರೋಹಿತ, ವಿಲ್ಸನ್,ನವಿಲೇಶಾಲು,ಸ್ಪೂರ್ತಿ ಮಿಲನ್, ಕಟೀಲ್, ಮುಂತಾದವರಿಗೂ ಕವಿತೆಯನ್ನು ಚೆನ್ನಾಗಿ ಬರೆಯುವ ಶಕ್ತಿ ಇದೆ. ಇವರನ್ನೊಳಗೊಂಡಂತೆ  ಎಲ್ಲರೂ ಕವಿತೆ ಬರೆಯುವುದು ಕೇವಲ ಅಭ್ಯಾಸವಲ್ಲ ಅದು ನಮ್ಮೊಳಗಿನ ಒತ್ತಡ ಎಂದು ಅನಿಸಬೇಕು. ಕೊನೆಗೂ ಹೊಸ ತಲೆಮಾರು ಪರಂಪರೆಯ ದಿಕ್ಕುಗಳನ್ನು ಗಂಭೀರವಾಗಿ ನೋಡಬೇಕಾಗಿದೆ.

6 comments to “ಕಾವ್ಯ ಮನೆಯ ಮೂಲಕ ಹೊಸಬರ ಕವಿತೆ”
  1. ಕಾವ್ಯ ಮನೆಯ ಪ್ರತಿನಿಧಿಯಂತಹ ಈ ಸಂಕಲನ ಮತ್ತು ಅದರ ಪ್ರಮುಖ ಭಾಗವಾಗಿರುವ ಎಲ್ಲ ಕವಿಮಿತ್ರರಿಗೂ ಅಭಿನಂದಿಸುತ್ತಾ.. ತುಂಬಾ ಇಷ್ಟ ಆಗುವ ಕವಿತೆಗಳನ್ನು ನಿರೀಕ್ಷೆ ಮಾಡಬಹುದು. ಇಲ್ಲಿ ಹೆಸರಿಸಲಾದ ಕವಿತೆಗಳೇ ಸಂಕಲನದ ಶಕ್ತಿಯನ್ನು ಅನಾವರಣಗೊಳಿಸಿವೆ. ಕಾವ್ಯ ಮನೆ ಪ್ರಕಾಶನ ಮೂಂಚೂಣಿಗಯ್ಲಲಿರುವ ಪ್ಕಕಾಶನಗಳ ಸಾಲಿಗೆ ಸೇರಲಿ ಎಂಬ ಆಶಯಗಳು.

  2. ಅಧ್ಭುತವಾದ ವಿಮರ್ಶೆ ಸರ್
    ನಮ್ಮ ಕಾವ್ಯ ಮನೆಯ ಏಳಿಗೆ ಆಕಾಶದೆತ್ತರಕ್ಕೆರಲಿ.

  3. ನಮ್ಮ ಕಾಲದ ಯುವಕಾವ್ಯ ಅನಾಥ ಪ್ರಜ್ಞೆ ಅನುಭವಿಸುವಾಗ,ಯುವಕರ ಕವಿತೆಯನ್ನು ಗಂಭೀರವಾಗಿ ಸ್ವೀಕರಿಸಿ,ಶ್ರದ್ಧೆಯಿಂದ ಪ್ರಾಮಾಣಿಕವಾಗಿ ವಿಮರ್ಶೆಗೆ ಒಳಪಡಿಸುತ್ತಿರುವ ಸುರೇಶ್ ನಾಗಲಮಡಿಕೆ ಸರ್, ಅವರ ಈ ಲೇಖನ ೬೦-೭೦ರ ದಶಕ ನೆನಪಿಸುತ್ತದೆ. ನಿಮ್ಮ ಮೇಲಿನ ಜವಾಬ್ದಾರಿ ಮತ್ತು ನಿರೀಕ್ಷೆ ಇನ್ನಷ್ಟು ಹೆಚ್ಚಿಸಿದೆ. ತಮಗೆ ಅಭಿನಂದನೆ ಸರ್.

    ಕಾವ್ಯ ಮನೆ ಕ್ರಿಯಾಶೀಲ ತರುಣ ಕವಿಗಳಿಂದ ಹುಟ್ಟಿಕೊಂಡ ಪ್ರಕಾಶನ.ನಮ್ಮ ಕಾಲದ ಅಭಿರುಚಿಗೆ ತಕ್ಕಂತೆ ಪುಸ್ತಕ ಪ್ರಕಟಣೆ ಮಾಡುತ್ತಿದೆ.ಹಿರಿ-ಕಿರಿಯರೆನ್ನದೆ ಎಲ್ಲರಿಗೂ ಹತ್ತಿರವಾದ ಆಪ್ತ ಪ್ರಕಾಶನ…ಕಪಿಲ್ ಹಾಗೂ ಗೆಳೆಯರ ಬಳಗಕ್ಕೆ ಅಭಿನಂದನೆ.

  4. ಎಲ್ಲೋ ಹಾರುವ ನಮ್ಮಂಥ ಬಾನಾಡಿಗಳ ಕರೆದು ನೆರಳು ಕೊಡುವ ಕಾವ್ಯಮನೆ ಆಲದ ಮರದಂತೆಯೆ.ಬಾನಾಡಿಗಳ ಹಾರಾಟವನ್ನು ಆಲದ ಮರದ ಕೊಂಬೆ ಹೊಗಳಿದೆ ಎಂದರೆ ಎದೆಯುಬ್ಬಿ ಬರುವ ವಿಷಯ. ಕಾವ್ಯ ಮನೆ ಕಾವ್ಯಲೋಕದಲ್ಲಿ ಮತ್ತೆ ಹೊಸದೊಂದು ಹೆಜ್ಜೆಯಿಟ್ಟಿದೆ ಯಶಸ್ಸಾಗಲಿ.

ಪ್ರತಿಕ್ರಿಯಿಸಿ