ಪಳಕಳ ಸೀತಾರಾಮ ಭಟ್ಟ – ನನ್ನ ಓದಿಗೆ ದಕ್ಕಿದ್ದು!

ಖ್ಯಾತ ಮಕ್ಕಳ ಸಾಹಿತಿ, ನಿವೃತ್ತ ಅಧ್ಯಾಪಕ ಪಳಕಳ ಸೀತಾರಾಮ ಭಟ್ಟ ಸೆಪ್ಟೆಂಬರ್ 25ರಂದು ನಮ್ಮನಗಲಿದರು. ಪಳಕಳರ ಚಿಣ್ಣರ ಹಾಡು, ಕಿರಿಯರ ಕಿನ್ನರಿ, ಮಕ್ಕಳ ಮುದ್ದು ಎಂಬ ಮೊತ್ತಮೊದಲ ಮೂರು ಪುಸ್ತಕಗಳು ಪ್ರಕಟವಾಗಿ, ಮದ್ರಾಸ್‌ ಸರಕಾರದ ಮಕ್ಕಳ ಸಾಹಿತ್ಯ ಬಹುಮಾನ ಪಡೆದರು. ಅಂದಿನಿಂದ ಮೊನ್ನೆಯವರೆಗೂ ಪಳಕಳರ ಪ್ರಕಟವಾದ ಕೃತಿಗಳ ಸಂಖ್ಯೆ 140ಕ್ಕೂ ಹೆಚ್ಚು. ಅವುಗಳಲ್ಲಿ 36 ಮಕ್ಕಳ ಕವನ ಸಂಕಲನಗಳು, 61 ಮಕ್ಕಳ ಕಥಾಸಂಕಲನಗಳು, 26 ಮಕ್ಕಳ ನಾಟಕಗಳು, 07 ಮಕ್ಕಳ ಜೀವನಚರಿತ್ರೆಗಳು ಹಾಗೂ ಪ್ರೌಢಕೃತಿಗಳು 15. 2013ರ ಕೇಂದ್ರ ಸಾಹಿತ್ಯ ಅಕಾಡೆಮಿಯೂ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಪಳಕಳ ಸೀತಾರಾಮ ಭಟ್ಟರ ಕುರಿತಾಗಿ ಪುಟ್ಟ ಲೇಖನವೊಂದನ್ನು ಬರೆಯಲೇಬೇಕೆಂದು ಕುಳಿತಾಗ ಎರಡು-ಮೂರು ಘಟನೆಗಳು ಮನಸ್ಸಿನಿಂದ ಮರೆಯಾಗುವುದಕ್ಕೆ ಕೇಳುತ್ತಿಲ್ಲ. ಇಲ್ಲಿ ಬರೆದರೆ ಸಂಗತವಾಗಬಹುದೋ ಇಲ್ಲವೋ ತಿಳಿಯುತ್ತಿಲ್ಲ. ಬರೆಯದಿದ್ದರೆ ವಿಷಯ ಪ್ರವೇಶಕ್ಕೆ ನನಗೆ ಕಷ್ಟವಾದೀತು. ಸಹೃದಯರು ಕ್ಷಮಿಸಬೇಕು.
ಒಂದನೆಯದು, ಇಸವಿ ನೆನಪಾಗುತ್ತಿಲ್ಲ, 80ರ ದಶಕವೆಂಬುದನ್ನು ಕರಾರುವಾಕ್ಕಾಗಿ ಹೇಳಬಲ್ಲೆ. ಜೈನಕಾಶಿ ಮೂಡಬಿದಿರಿಯಲ್ಲಿ ರತ್ನಾಕರ ವರ್ಣಿ ಉಪಯೋಗಿಸುತ್ತಿದ್ದರು ಎನ್ನಲಾದ ತೂಗುಮಂಚದ ಮೇಲೆ ಕುಳಿತು ಕವಿತಾ ವಾಚನ ಮಾಡುವ ಭಾಗ್ಯ ನನಗೊದಗಿಬಂದಿತ್ತು. ಅದು ಮೂಡಬಿದಿರಿಯ ಜೈನ್ ಹೈಸ್ಕೂಲ್ ಹೆಡ್ ಮಾಸ್ಟರ್ ಮನೆ. ಮುಂದೆ ಅದೇ ಹೈಸ್ಕೂಲಿಗೆ ನನ್ನ ನಾದಿನಿ ಇಂಗ್ಲಿಷ್ ಶಿಕ್ಷಕಿಯಾಗಿ ಸೇರಿಕೊಂಡಳು. “ಅತ್ತಿಗೆ, ನೀನು ಬಂದ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ನಮ್ಮ ಕನ್ನಡ ಮೇಸ್ಟ್ರು ಪಳಕಳ ಸೀತಾರಾಮ ಭಟ್ಟರೂ ಇದ್ದರಂತೆ…”
ಹೌದು ಎಂದಷ್ಟೇ ಹೇಳಿದೆ. ಅವರು ಓದಿದ ಕವಿತೆ ನನ್ನ ನೆನಪಿಂದ ದೂರ ಸರಿದಿತ್ತು. ಮೊನ್ನೆ ಅಲ್ಪಕಾಲದ ಅಸೌಖ್ಯದಿಂದ ಪಳಕಳರ ನಿಧನದ ಸುದ್ದಿ ಓದಿದಾಗ ನೆನಪಾದದ್ದು ರತ್ನಾಕರ ವರ್ಣಿ ಉಪಯೋಗಿಸಿದ ತೂಗುಮಂಚ…ಮತ್ತೆ ಪಳಕಳ ಸೀತಾರಾಮ ಭಟ್ಟರು.

ಇನ್ನೊಂದು ಘಟನೆ…ನಮ್ಮ ಲೇಖಕಿಯೊಬ್ಬರು ಅಬ್ಬಕ್ಕರಾಣಿಯ ಕುರಿತು ಮಕ್ಕಳಿಗಾಗಿ ಒಂದು ಪುಸ್ತಕವನ್ನು ಬರೆದು, ಬಿಡುಗಡೆ ಸಂದರ್ಭದಲ್ಲಿ ಪುಸ್ತಕ ಪರಿಚಯ ಮಾಡುವಂತೆ ನನ್ನಲ್ಲಿ ಕೇಳಿಕೊಂಡಿದ್ದರು. ಅವರು ಪ್ರಕಾಶಕಿ. ಹಾಗಾಗಿ ತಮ್ಮದೇ ಪ್ರಕಾಶನದಲ್ಲಿ ಅಸಂಖ್ಯಾತ ತಮ್ಮದೇ ಪುಸ್ತಕಗಳನ್ನು ಪ್ರಕಟಿಸಿ, ಕನ್ನಡ ಸಾಹಿತ್ಯ ಕಣಜವನ್ನು ತುಂಬಿಸಿದ್ದರು, ತುಂಬಿಸುತ್ತಿದ್ದಾರೆ.

ಪುಸ್ತಕದ ಕುರಿತಾಗಿ ಮಾತನಾಡುವಾಗ ನಾನು ‘ಸಾಕೇತ್’ ಎಂಬ ಹಿಂದಿ ಕಾವ್ಯದಲ್ಲಿಯ ಮೈಥಿಲೀಶರಣ ಗುಪ್ತರ ಪದ್ಯಾಂಶವನ್ನು ಉಲ್ಲೇಖಿಸಿದೆ- “ಜೋ ಜೈಸಾ ಹೈ, ಉಸೆ ವೈಸಾ ಹೀ ಹಮನೇ ಕಹಾ ತೋ ಕ್ಯಾ ಕಹಾ… (ಯಾವುದು ಹೇಗಿದೆಯೋ ಅದನ್ನು ನಾವೂ ಹಾಗೇ ಹೇಳಿದರೆ, ನಾವೇನು ಹೇಳಿದಹಾಗಾಯ್ತು…) “ಮಕ್ಕಳ ಮನೋವಿಕಾಸಕ್ಕೆ ಈ ಪುಸ್ತಕದ ಕೊಡುಗೆ ಏನೂ ಇಲ್ಲ. ನಮಗೆ ಗೊತ್ತಿರುವ ಕತೆಯನ್ನೇ ನೀವು ಮತ್ತೊಮ್ಮೆ ಓದಲು ಕೊಟ್ಟಿರುವಿರಲ್ಲ…” ಅಬ್ಬಾ! ಆ ಲೇಖಕಿಗೆ ವಿಪರೀತ ಕೋಪ ಬಂತು. ಸಾಲದ್ದೆಂಬಂತೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದವರೂ ಲೇಖಕಿಯ ಸಾಧನೆಯನ್ನು ಶ್ಲಾಘಿಸಿದರು. ಇಷ್ಟಾಗುವಾಗ ನಾನಲ್ಲಿ ಖಳನಾಯಕಿಯಾಗಿದ್ದೆ. ಸ್ವಂತ ಪ್ರಕಾಶನದಲ್ಲಿಯ ದುರಂತಗಳಲ್ಲಿ ಇದೊಂದು. ಇಲ್ಲಿ ಕಾಳು ಜೊಳ್ಳು ಎಲ್ಲವೂ ಮಾರುಕಟ್ಟೆಯ ಮುಖ ನೋಡುತ್ತವೆ. ಇನ್ನೊಂದೆಂದರೆ, ಸ್ವಂತ ಪ್ರಕಾಶನ ಇದ್ದಾಗಲೂ ಒಂದು ಸಲಹಾ ಮಂಡಳಿಯಿದ್ದರೆ ಸಮತೂಕದ ಸಾಹಿತ್ಯ ಪ್ರಕಟವಾಗಬಹುದೇನೋ! ಲಾಬಿಯಿದ್ದರೆ…ಭಟ್ಟಂಗಿಗಳಿದ್ದರೆ…ಅದೂ ಅಸಾಧ್ಯ!!!

ಮತ್ತೊಂದು ಘಟನೆ… ಒಂದು ಕವಿಗೋಷ್ಠಿಗೆ ಅಧ್ಯಕ್ಷಳಾಗಿ ಹೋಗಿದ್ದೆ. ಅಲ್ಲಿ ಕೂರಾಡಿ ಸೀತಾರಾಮ ಅಡಿಗರ ಒಂದು ಕವಿತೆಯನ್ನು ಸಾಂದರ್ಭಿಕವಾಗಿ ಉಲ್ಲೇಖಿಸಿದೆ. “ಕನ್ನಡದ ತಾಳ ಲಯ ನನ್ನೆದೆಯ ಗೇಯ/ ಕನ್ನಡದ ಹಾಡೊಂದ ಹಾಡಬೇಕು/ ಕವಿ ರನ್ನ ಜನ್ನ ಪಂಪ ಮೇಣ್ ಮುದ್ದಣ/ ನನ್ನೆದೆಗೆ ತನಿಗಾಳಿಯೂಡಬೇಕು…” ಕಾರ್ಯಕ್ರಮ ಮುಗಿದ ಬಳಿಕ ಕಾರ್ಯಕ್ರಮ ಸಂಯೋಜಕರಲ್ಲಿ ಒಬ್ಬರಾದ ಅವರ ಅಳಿಯ ಕೇಳಿದರು, “ನಾನು ಕೂರಾಡಿಯವರ ಅಳಿಯ ಎಂದು ನಿಮಗೆ ಗೊತ್ತೆ?” ಇಲ್ಲ, ಎಂದೆ. “ಹಾಗಿದ್ದರೆ ನಾನು ಇಲ್ಲಿದ್ದೆ ಎಂಬ ಕಾರಣಕ್ಕೆ ನೀವು ಅವರನ್ನು ನೆನಪಿಸಿಕೊಂಡದ್ದಲ್ಲ…”

ನಾನು ಖಂಡಿತಾ ಇಲ್ಲ ಎಂದು ಹೇಳಿದ್ದನ್ನು ಕೇಳಿ ಅವರಿಗೆ ರೋಮಾಂಚನವಾಯಿತಂತೆ. ಮಕ್ಕಳ ಗೀತೆಯಾಗಿ ಅದು ಮಾಡಿದ ಪ್ರಭಾವದಿಂದಾಗಿ ನಾನದನ್ನು ಎತ್ತಿಕೊಂಡಿದ್ದೆ. ಪಂಜೆ ಮಂಗೇಶರಾಯರು, ದಿನಕರ ದೇಸಾಯಿ, ಜಿ.ಪಿ. ರಾಜರತ್ಮಂ, ಕೈಯಾರ, ಪಳಕಳರ ಮಕ್ಕಳ ಕವಿತೆಗಳು ಇಷ್ಟವಾಗುವುದು ಇದೇ ರೀತಿ ನಾಲಿಗೆಯ ತುದಿಯಲ್ಲಿ ನರ್ತಿಸುವ ಕಾರಣದಿಂದಾಗಿ.

ಪತ್ನಿಯೊಂದಿಗೆ ಪಳಕಳ

ಪಳಕಳ ಸೀತಾರಾಮ ಭಟ್ಟರು ಹುಟ್ಟಿದ್ದು 1930ರಲ್ಲಿ ಮೂಡಬಿದಿರೆಯ ಬಳಿ ಇರುವ ಪುತ್ತಿಗೆಯ ಮಿತ್ತಬೈಲಿನ ಪಳಕಳ ಎಂಬ ಊರಲ್ಲಿ. 1951ರಲ್ಲಿ ಶಿಕ್ಷಣ ತರಬೇತಿ ಪಡೆದು 12 ವರ್ಷ ಮೂಡಬಿದಿರೆಯ ಪಾಲಡ್ಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ 1963ರಲ್ಲಿ ಬಿ.ಎಡ್ ಮುಗಿಸಿ ಮೂಡಬಿದಿರೆಯ ಜೈನ್ ಪ್ರೌಢಶಾಲೆಯಲ್ಲಿ ಕನ್ನಡ ಅಧ್ಯಾಪಕರಾಗಿದ್ದವರು 1988ರಲ್ಲಿ ನಿವೃತ್ತರಾಗಿದ್ದಾರೆ.

ಎಂಟನೆಯ ತರಗತಿಯಲ್ಲಿರುವಾಗಲೇ ಬರೆಯುವ ಗೀಳು ಹಚ್ಚಿಕೊಂಡು ಬಾಲಸಹಜ ಶಬ್ದ ಜೋಡಣೆ ಮಾಡುತ್ತಿದ್ದ ಪಳಕಳರಿಗೆ ಪಂಜೆಯವರ ಕತೆ-ಕವನಗಳು ಪ್ರೇರಣೆಯಾಗಿದ್ದವು. ಸೋದರತ್ತೆ ಚೆನ್ನಮ್ಮನ ಕತೆಹೇಳುವ ಪರಿಗೆ ಬೆರಗಾಗಿ ಪಳಕಳರು ಮಕ್ಕಳ ಕತೆಗಳನ್ನು ಬರೆಯತೊಡಗಿದ್ದರು. ಮುಂದೆ ಅವರ ಪ್ರಕಟಣೆಗೆ ಕಿನ್ನಿಗೋಳಿಯ ‘ಯುಗಪುರುಷ’ ಪ್ರಕಾಶನದಿಂದ ಸಹಾಯ-ಸಹಕಾರ ಒದಗಿಬಂತು. 1945ರಲ್ಲಿಯೇ ಶಿಶು ಸಾಹಿತ್ಯ ಮಾಲೆ ಎಂಬ ಪ್ರಕಟನಾ ಮಾಲಿಕೆಯ ಮೂಲಕ ಅವರು ತಮ್ಮ 31 ಕೃತಿಗಳನ್ನು ಪ್ರಕಟಿಸಿದ್ದಾರೆ. ಜೊತೆಗೆ ನಾಟಕ, ಪ್ರಬಂಧ, ಜೀವನ ಚರಿತ್ರೆ, ಕಿರು ಕಾದಂಬರಿ, ಚುಟುಕು, ಕವನ ಹೀಗೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೈಯಾಡಿಸಿದ ಪಳಕಳರು ಸರಿಸುಮಾರಾಗಿ 150 ವೈವಿಧ್ಯಮಯ ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಸುಮಾರು 65 ವರ್ಷಗಳ ಸುದೀರ್ಘ ಸಾಹಿತ್ಯ ಸೇವೆ ಮಾಡುತ್ತ ಮೊನ್ನೆ-ಮೊನ್ನೆಯಷ್ಟೆ ಸೆಪ್ಟೆಂಬರ್ 25ರಂದು ಇಹಲೋಕದ ಯಾತ್ರೆ ಮುಗಿಸಿದ್ದಾರೆ. ಇಂದು ಶ್ರೀನಿವಾಸ ರಾವ್ ದಂಪತಿಗಳು ನಡೆಸಿಕೊಂಡು ಬರುತ್ತಿರುವ ‘ಮಕ್ಕಳ ಸಾಹಿತ್ಯ ಸಂಗಮ(ರಿ) ಯನ್ನು ಸ್ಥಾಪಿಸಿ, ಅದರ ಸ್ಥಾಪಕಾಧ್ಯಕ್ಷರಾದ ಹೆಮ್ಮೆ ಪಳಕಳರಿಗೆ ಸಲ್ಲುತ್ತದೆ.

ಮಹಾತ್ಮಾ ಗಾಂಧೀಜೀಯವರ ಆದರ್ಶಗಳನ್ನು ಪಾಲಿಸಿಕೊಂಡ ಪಳಕಳರು ಸದಾ ಬಿಳಿ ಅಂಗಿ ಮತ್ತು ಬಿಳಿ ಪಂಚೆಯನ್ನು ಧರಿಸುತ್ತಿದ್ದರು. ಮಕ್ಕಳಿಗಾಗಿಯೇ ಬರೆಯುತ್ತಿದ್ದರು. ಅವರ ‘ಎಳೆಯರ ಗೆಳೆಯ’ದಲ್ಲಿ 16 ಮಕ್ಕಳ ಹಾಡುಗಳಿವೆ. ‘ಕಂದನ ಕೊಳಲು’ ಸಂಕಲನದಲ್ಲಿ ಚಿಕ್ಕ-ಪುಟ್ಟ 36 ಕವನಗಳಿವೆ. ‘ಬಾಲರ ಬಾವುಟ’ದಲ್ಲಿಯೂ 16 ಹಾಡುಗಳಿವೆ. ಮಕ್ಕಳ ಮುದ್ದು, ಪುಟ್ಟನ ಪೀಪೀ, ಗಾಳಿಪಟ, ಕಿರಿಯರ ಕಿನ್ನರಿ, ತಿಮ್ಮನ ತುತ್ತೂರಿ ಮುಂತಾದ ಕವನ ಸಂಕಲನಗಳಲ್ಲದೆ, ಪುಟಾಣಿ ಕತೆಗಳು, ಹೂವಾದಳು ಹುಡುಗಿ, ಹೂದೋಟದ ಹುಡುಗಿಯರು, ಕಟಂ ಕಟಂ ಕಪ್ಪೆಯಣ್ಣ, ಗಡಿಬಿಡಿ ಗುಂಡ, ಮಿಠಾಯಿ ಗೊಂಬೆ, ಪುಟ್ಟ ಬಿಲ್ಲಿ, ಚಿಕ್ಕಣೆ ಚೋಮ ಮುಂತಾದವುಗಳು ಮಕ್ಕಳಿಗಾಗಿಯೇ ಬರೆದವುಗಳು.

ಗಾಂಧೀಜೀಯವರ ಅನುಯಾಯಿಯಾಗಿ ಅವರು ಮಾಡಿರುವ ಅವಿಸ್ಮರಣೀಯ ಕೆಲಸವೆಂದರೆ, ತನ್ನ ಸ್ವಂತದ ಆದಾಯದಿಂದ ಪಳಕಳ ಪ್ರತಿಷ್ಠಾನವನ್ನು ಮಾಡಿಕೊಂಡು ಆ ಮೂಲಕ ಕಡು ಬಡ ಮಕ್ಕಳಿಗೆ ಶೈಕ್ಷಣಿಕವಾಗಿ ಸಹಾಯ ಮಾಡಿದ್ದು, ನಿವೇಶನ ಇಲ್ಲದ ನಾಲ್ಕು ನಿರ್ಗತಿಕ ಕುಟುಂಬಕ್ಕೆ ಐದು ಸೆಂಟ್ಸ್‍ನಂತೆ ಜಾಗವನ್ನು ದಾನವಾಗಿ ಕೊಟ್ಟಿದ್ದು ಅವರ ಬದುಕಿನ ಅತ್ಯಂತ ಉದಾತ್ತ ಗುಣಗಳ ಸಾಲಿನಲ್ಲಿ ಬರುವಂತವುಗಳು. ಅವರ ಈ ಸಮಾಜಮುಖೀ ನೀತಿಯೆದುರು ನಮ್ಮ ಮಸ್ತಕ ತನ್ನಿಂದತಾನೆ ಬಾಗಿಬಿಡುತ್ತದೆ. ಇದು ಏ.ಸಿ. ರೂಮ್ ನಲ್ಲಿ ಕುಳಿತು ಬಿಸಿಲಲ್ಲಿ ದುಡಿದು ಬಸವಳಿಯುವವರ ಕುರಿತಾಗಿ ಬರೆಯುವುದಕ್ಕಿಂತ ನೂರು ಪಾಲು ಶ್ರೇಷ್ಠವಾದದ್ದು!

ಆರಂಭದಲ್ಲಿ ಇವರ ಹೆಚ್ಚಿನ ಶಾಲಾ ಗೀತೆಗಳು ಅನುಕರಣೆಯ ರೂಪದಲ್ಲಿ ಬರೆದವುಗಳು. ಉದಾ: “ಲೋಕನಾಥನೆ ಲೋಕದೇವನೇ/ ಪೊರೆವುದೆಮ್ಮನು ದೇವನೇ/ ಮುಗಿದು ಕೈಗಳ ಬಾಗುತಿರುವೆವು/ ನೀಡು ಶುಭವನು ಕಾವನೇ.” (ಸ್ವಾಮಿ ದೇವನೆ ಲೋಕಪಾಲನೆ/ ತೇ ನಮೋಸ್ತು ನಮೋಸ್ತುತೆ/ ಪ್ರೇಮದಿಂದಲಿ ನೋಡು ನಮ್ಮನು ತೇ ನಮಸ್ತೆ ನಮೋಸ್ತುತೆ…) ಹಾಗಂತ “ಈಶ ಅಲ್ಲಾ ಎನುವುದೆಲ್ಲವೂ/ ಹೆಸರು ನಿನ್ನವು ಸಾವಿರ/ ಜಗದೊಡೆಯನು ನೀನು ಒಬ್ಬನೆ/ ಕಾವ ಕರುಣಾಸಾಗರ…”ಸಾಲುಗಳು ಅವರಲ್ಲಿ ಹುದುಗಿರುವ ಸಮಾಜವಾದಿ ಸಿದ್ಧಾಂತಕ್ಕೆ ಇಂಬುಕೊಡುತ್ತವೆ. ಇದು ಒಬ್ಬ ಅಧ್ಯಾಪಕನಿಗೆ ಬೇಕಾಗಿರುವ ಸರ್ವ ಧರ್ಮ ಸಮನ್ವಯತೆಯ ಪ್ರತೀಕವಾಗಿದೆ.

“ಪಾವಾಣಿ ಕೊಟ್ಟು/ ಪಟಾಕಿ ತಂದನು/ ಪೋಕರಿ ಪುಟ್ಟಪ್ಪ/ ಕಡ್ಡಿಯ ಗೀರಿ/ಬೆಂಕಿಯ ಕೊಟ್ಟನು ಕಿಲಾಡಿ ಕಿಟ್ಟಪ್ಪ/ ಸುರ್ ಸುರ್ ಎನ್ನುತ್ತ/ ಕೈಯ ಪಟಾಕಿಯು/ ಮೇಲಕ್ಕೆ ಹಾರಿತ್ತು/ ಠೋಪ್ ಎನ್ನುತ/ ಗಿರಿಗಿರಿ ತಿರುಗುತ/ ನೆಲಕ್ಕೆ ಬಿದ್ದಿತ್ತು…” ಈ ಗೀತೆ ಇಲ್ಲಿದ್ದ ಪ್ರಸಂಗವನ್ನು ಬಿಟ್ಟು ಹೊರಮೈ ಚಾಚುವುದೇ ಇಲ್ಲ.

ಆ ಕಾಲದ ಮಕ್ಕಳ ಸಾಹಿತಿಗಳಿಗೆ ಹೋಲಿಸಿದರೆ ಅಷ್ಟು ಗಟ್ಟಿಯಾದ ಕವಿತೆಗಳು ಪಳಕಳರಲ್ಲಿ ಸಿಗುವುದಿಲ್ಲ, ಎಂದು ಬೇಸರದಲ್ಲಿ ಜೊತೆಗೆ ಅಷ್ಟೇ ವಿನಮ್ರವಾಗಿ ಹೇಳಬಯಸುತ್ತೇನೆ. ಗಟ್ಟಿಕಾಳುಗಳ ಜೊತೆಗೆ ಜೊಳ್ಳುಗಳೂ ಹಾಗೆಯೇ ಸೇರಿಹೋಗಿವೆ. ಹಾಗಂತ ಅವರ ಕವನಗಳಲ್ಲಿ ಏನೂ ಇಲ್ಲ ಎಂದು ಸಾರಾಸಗಟಾಗಿ ಹೇಳುತ್ತಿಲ್ಲ. ಮಕ್ಕಳ ಮನಸ್ಸಿಗೆ ಹಿತ ನೀಡುವ ಕಲ್ಪನೆಗಳು, ಮಕ್ಕಳ ಸ್ತರವನ್ನು ಮನಸ್ಸಿನಲ್ಲಿಟ್ಟುಕೊಂಡು ಬಳಸುವ ಭಾಷೆ, ಹಾಸ್ಯಮಿಶ್ರಿತ ನಾಟಕೀಯ ಶೈಲಿ ಇವೆಲ್ಲವೂ ಪಳಕಳರ ಬರವಣಿಗೆಯ ಹೂರಣ. ನಶಿಸಿಹೋಗುತ್ತಿರುವ ಪ್ರಾಕೃತಿಕ ಸಂಪತ್ತಿನ ಬಗ್ಗೆ ಅವರು ಮಕ್ಕಳಲ್ಲಿ ಜಾಗೃತೆ ಮೂಡಿಸಿದ್ದನ್ನು ನಾವಿಲ್ಲಿ ಕಾಣಬಹುದು – “ಬದಲಿ ಶಕ್ತಿ ಕಂಡು ಹುಡುಕಿ/ ಉಪಯೋಗಿಸೆ ಜನಗಳು/ ಜಗಕೆ ಮುಂದೆ ಬಳಸಲೆಂದು/ ಉಳಿಯಬಹುದು ಅವುಗಳು.” ಆದರಿದು ಗೇಯತೆಯಿಂದ ಗಾವುದ ದೂರದಲ್ಲಿದೆ. ಆದರವರ ‘ಸಾಕ್ಷರತೆಯ ಹಾಡು’ ಖುಷಿಕೊಡುವುದರ ಜೊತೆಗೆ ಮಕ್ಕಳ ಮನೋಭೂಮಿಕೆಯನ್ನು ನಿರ್ಮಾಣ ಮಾಡುವುದರಲ್ಲಿ ಯಶಸ್ವಿಯಾಗಿದೆ. “ಮೋಸಕೆ ಸಿಲುಕದೆ ಮೌಢ್ಯಕೆ ನಿಲುಕದೆ/ ಬದುಕುವ ಬಗೆಯನು ಕಲಿಯೋಣ ಬಾ/ ಹಿರಿಯರು ಉಳಿಸಿದ ಜ್ಞಾನದ ಸಂಪದ/ ಬೆಳೆಸಲು ಬೆಳಗಲು ಕಲಿಯೋಣ ಬಾ.”

ಅವರ ‘ಹೂವಾದಳು ಹುಡುಗಿ’ ಜಾನಪದ ಕತೆಗಳ ಸಂಕಲನವನ್ನು ತೆರೆದು ನೋಡಿದರೆ, ಅದರಲ್ಲಿ ಅವರು ಮೌಢ್ಯವನ್ನೇ ಪ್ರತಿಪಾದಿಸಿದಂತಿದೆ. ‘ಅದೃಷ್ಟ ಒಲಿದ ಜೋಯಿಸ’, ‘ಹೂವಾದಳು ಹುಡುಗಿ’, ‘ಪುಂಡ ಗುಂಡನ ಕಾರುಬಾರು’, ‘ಪರರಿಗೆ ಬಗೆದುದು ತನಗಾಯಿತು’, ‘ಭವಿಷ್ಯ ನಿಜವಾಯಿತೆ?’- ಈ ಎಲ್ಲ ಕಥೆಗಳು ವೈಚಾರಿಕ ಒಳನೋಟ ಇಲ್ಲದವುಗಳು ಎನ್ನುವುದಕ್ಕಿಂತ ಓದಿಕೊಂಡು ಖುಷಿಪಡುವಂತವುಗಳು ಎಂದೆನ್ನಬಹುದೇನೋ!
1980ರಲ್ಲಿ ರಾಜ್ಯ ಸರಕಾರದ ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯರಾಗಿ ಪಳಕಳರು ಕಾರ್ಯ ನಿರ್ವಹಿಸಿದ್ದಾರೆ. ಅನೇಕ ರಾಜ್ಯಮಟ್ಟದ ಮಕ್ಕಳ ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. 1996ರಲ್ಲಿ ಹಾಸನದಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಮಕ್ಕಳ ಸಾಹಿತ್ಯ ಗೋಷ್ಠಿಯ ಅಧ್ಯಕ್ಷತೆಯನ್ನು ಅವರು ವಹಿಸಿದ್ದರು. 1998ರಲ್ಲಿ ಕನ್ನಡ ಸಾಹಿತ್ಯ ಪರಿಷತ್‍ನ ಮಕ್ಕಳ ಸಾಹಿತ್ಯ ಸಂಚಿಕೆಯ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 2004ರಲ್ಲಿ ಜಿಲ್ಲಾ ಮಟ್ಟದ ಚುಟುಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಇಷ್ಟೆಲ್ಲದರ ಹಿರಿಮೆ-ಹೆಗ್ಗಳಿಕೆ ಅವರದು.

ಪಳಕಳರು ತಮ್ಮ ಸಾಹಿತ್ಯ ಸೇವೆಗಾಗಿ ಹಲವಾರು ಪ್ರಶಸ್ತಿ-ಗೌರವಗಳಿಗೆ ಭಾಜನರಾಗಿದ್ದಾರೆ. ಮದ್ರಾಸ್ ಸರಕಾರದ ಮಕ್ಕಳ ಸಾಹಿತ್ಯ ಗೌರವ (1955), ಕನ್ನಡ ಸಾಹಿತ್ಯ ಪರಿಷತ್‍ನ ಜಿ. ಪಿ. ರಾಜರತ್ನಂ ದತ್ತಿ ಬಹುಮಾನ(1983), ದೆಹಲಿಯ ಬಾಲ ಶಿಕ್ಷಕ್ ಪರಿಷದ್ ಪುರಸ್ಕಾರ್(1987), ರಾಜ್ಯ ಸಾಹಿತ್ಯ ಅಕಾಡಮಿಯ ಮಕ್ಕಳ ಸಾಹಿತ್ಯ ಪುರಸ್ಕಾರ (1999), ಕೋ.ಅ. ಉಡುಪ ಪ್ರಶಸ್ತಿ ಹಾಗೂ ಡಾ.ಶಿವರಾಮ ಕಾರಂತ ಪ್ರತಿಷ್ಠಾನದ ಗೌರವ (2002), ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ (2003), ಕರ್ನಾಟಕ ಸಂಘ, ಶಿವಮೊಗ್ಗಾದ ಮಕ್ಕಳ ಸಾಹಿತ್ಯ ಪ್ರಶಸ್ತಿ (2004), ಆಳ್ವಾಸ್ ನುಡಿಸಿರಿ ಪ್ರಶಸ್ತಿ (2005), 75ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸನ್ಮಾನ (2009), ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಗೌರವ ಪುರಸ್ಕಾರ(2010), ರಾಜ್ಯಮಟ್ಟದ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ಕರ್ನಾಟಕ ಮಕ್ಕಳ ಸಾಹಿತ್ಯ ರತ್ನ ಗೌರವ((2012), ಇವೆಲ್ಲವುಗಳಿಗೂ ಅವುಗಳದೇ ಆದ ಗಾತ್ರ-ತೂಕಗಳಿದ್ದರೂ, ಇವುಗಳಿಗೆಲ್ಲ ಕಳಶಪ್ರಾಯವಾಗಿ ಮಕ್ಕಳ ಸಾಹಿತ್ಯಕ್ಕೆ ಪಳಕಳರು ನೀಡಿದ ಸೇವೆಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (2012).

ಇಷ್ಟಾಗಿಯೂ ಸ್ವಂತ ಪ್ರಕಾಶನ ಇಟ್ಟುಕೊಂಡಿದ್ದ ಪಳಕಳರು ತಮ್ಮ ಪುಸ್ತಕಗಳ ಮಾರ್ಕೆಟಿಂಗ್ ಮಾಡಿದ್ದು ಏನೇನೂ ಸಾಲದು. ಅವರ ಹೆಸರು ಎಲ್ಲರಿಗೂ ಗೊತ್ತು, ಪ್ರಾಥಮಿಕ ಶಾಲೆಯ ಪಠ್ಯಪುಸ್ತಕದಲ್ಲಿ ಪ್ರತಿಬಾರಿಯೂ ಎಂಬಂತೆ ಅವರ ಶಿಶುಗೀತೆ ಸೇರ್ಪಡೆಯಾಗಿರುತ್ತದೆ. ಆದರೆ ಅವರ ಪುಸ್ತಕ ನಗರದ ಗ್ರಂಥಾಲಯಗಳಲ್ಲಿ ಲಭ್ಯವಿಲ್ಲ. ಪಳಕಳರ ಹಿತೈಷಿಗಳೂ, ಅವರ ಸಾಹಿತ್ಯ ಕೃಷಿಗೆ ಬೆನ್ನೆಲುಬಾಗಿದ್ದವರೂ ಆದ ಶ್ರೀ. ಹರಿಕೃಷ್ಣ ಪುನರೂರರವರು ಮನಸ್ಸು ಮಾಡಿದರೆ, ಅವರ ಸಮಗ್ರ ರಚನೆಗಳನ್ನು ಸಾರ್ವಜನಿಕರಿಗೆ ಲಭ್ಯವಾಗುವ ದಿಶೆಯಲ್ಲಿ ಮುತುವರ್ಜಿವಹಿಸಬಹುದು.

ಚಿತ್ರಗಳು : ಎ. ಎನ್ . ಮುಕುಂದ್

ಪ್ರತಿಕ್ರಿಯಿಸಿ