ಮನಕ್ಕೆ ಹಾಕಿದ ಹಿಜಾಬ್ ಸರಿಸಿದಾಗ…

ಅಮೇರಿಕಾದಲ್ಲಿ ಬಹುಕಾಲದಿಂದ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ, ಕನ್ನಡದ ಪ್ರಮುಖ ಬರಹಗಾರರಲ್ಲೊಬ್ಬರಾದ ಗುರುಪ್ರಸಾದ ಕಾಗಿನೆಲೆ ತಮ್ಮ ಹೊಸ ಕಾದಂಬರಿ ಹೊರತಂದಿದ್ದಾರೆ. ಅದು “ಹಿಜಾಬ್” .ಋತುಮಾನಕ್ಕಾಗಿ ಇದನ್ನು ವಿಮರ್ಶಿಸಿದ್ದಾರೆ ಕರ್ಕಿ ಕೃಷ್ಣಮೂರ್ತಿ.

ಈ ಬಾರಿ ಕಾದಂಬರಿಕಾರರು ಹೇಳಹೊರಟಿರುವುದು ಅಮೇರಿಕಾದ ‘ಅಮೋಕಾ’ ಎನ್ನುವ ಕಾಲ್ಪನಿಕ ಊರಿನಲ್ಲಿ ನಡೆಯುವ ಕಥೆ. ಆ ಕಥೆಯೇ ವಿಭಿನ್ನ ಹಾಗೂ ವಿಚಿತ್ರ. ಆ ಊರಿನಲ್ಲಿ ಸೋಮಾಲಿಯಾದಿಂದ ವಲಸೆ ಬಂದ ನಿರಾಶ್ರಿತರು ಸಾಕಷ್ಟು ಸಂಖ್ಯೆಯಲ್ಲಿ ವಾಸವಿದ್ದಾರೆ. ಅವರ ಪದ್ಧತಿಯಂತೆ ಸೋಮಾಲಿ ಹೆಂಗಸರು ಎಂತಹಾ ಕ್ಲಿಷ್ಟ ಪರಿಸ್ಥಿತಿಯಲ್ಲೂ ಸಿಜರಿನ್ ಹೆರಿಗೆ ಮಾಡಿಸಿಕೊಳ್ಳುವಂತಿಲ್ಲ. ಒಂದು ವೇಳೆ ಅನಿವಾರ್ಯವಾಗಿ ವೈದ್ಯರು ಸಿಜರಿನ್ ಮಾಡಿದರೆ ಅಲ್ಲಿ ಕೋಲಾಹಲವೇ ಉಂಟಾಗುತ್ತದೆ. ಆ ಕೋಲಾಹಲವೇ ಒಂದು ಕಾದಂಬರಿಯಾಗುತ್ತದೆ. ಕನ್ನಡದ ನೆಲ, ಸಂಸ್ಕೃತಿ, ಆಚಾರ ವಿಚಾರಗಳ ಸೋಂಕೇ ಇಲ್ಲದ ‘ಸ್ಥಿತಿ’ಯಲ್ಲಿ ಸಿಲುಕಿಕೊಂಡಿರುವ ಕನ್ನಡದ ಮನಸ್ಸೊಂದು; ಅವುಗಳ ಅರಿವೇ ಇಲ್ಲದ ಇನ್ನೊಂದು ಕನ್ನಡದ ಮನಸ್ಸಿಗೆ ಅಲ್ಲಿಯ ಕಥೆಯನ್ನು ದಾಟಿಸುವ ಈ ಕಾದಂಬರಿಯ ಓದೇ ಒಂದು ವಿಶಿಷ್ಟ ಅನುಭವ. ವಿವೇಕ ಶಾನಭಾಗರು (ಬೆನ್ನುಡಿಯಲ್ಲಿ) ಹೇಳಿರುವಂತೆ ‘ಇಲ್ಲಿ ಆಕಾರ ಪಡೆದಿರುವ ಅನುಭವವವು ಕನ್ನಡ ಕಾದಂಬರಿ ಲೋಕವನ್ನು ಮೊದಲಬಾರಿಗೆ ಪ್ರವೇಶಿಸುತ್ತಿದೆ’ !

ಆರಂಭ ಹಾಗೂ ಅಂತ್ಯ:

‘ನಾನಿಲ್ಲಿ ಏನು ಮಾಡುತ್ತಿದ್ದೇನೆ?’ ಎನ್ನುವುದು ಹುಟ್ಟಿದ ಊರನ್ನು ಬಿಟ್ಟು ಬಂದ ಅನೇಕರನ್ನು ಕಾಡುವ ಪ್ರಶ್ನೆ. ಅಂಥದೇ ಒಂದು ಪ್ರಶ್ನೆಯೊಂದಿಗೆ ಈ ಕಾದಂಬರಿ ತೆರೆದುಕೊಳ್ಳುತ್ತದೆ. ಇಲ್ಲಿಯ ನಿರೂಪಕ ಅಮೇರಿಕಾದ ಅಮೋಕಾ ಎನ್ನುವ ಊರಿನಲ್ಲಿ ವೈದ್ಯ. ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ಮುಖ್ಯಸ್ಥ. ಯಾರೂ ಹೋಗಲು ಇಷ್ಟಪಡದ ಆ ಊರಿನಲ್ಲಿ ಆತ ಕೆಲಸಕ್ಕಿರುವುದು ಗ್ರೀನ್ ಕಾರ್ಡಿನ ಆಸೆಗಾಗಿ. ಅವನೊಡನೆ ಇನ್ನೆರಡು ಕನ್ನಡದ ವೈದ್ಯರೂ ಅದೇ ಕಾರಣಕ್ಕಾಗಿ ಜೊತೆಯಾಗಿದ್ದರೆ. ಆ ಊರಿನ ವಿಚಿತ್ರ ಪರಿಸರ, ಕಲ್ಪಿಸಲೂ ಆಗದ ಜನಜೀವನ, ಇಂಥ ವಿಷಯಗಳೆಲ್ಲ ಅತೀ ಕುತೂಹಲಕಾರಿ ಸಂಗತಿಯೆನಿಸಿ ಆರಂಭದಲ್ಲೇ ಕಾದಂಬರಿಗೆ ಒಂದು ‘ಗ್ರಿಪ್’ ತಂದುಕೊಡುತ್ತದೆ. “ಮೈನಸ್ ಇಪ್ಪತ್ತರ ಛಳಿಯ ಹಿಮ ತುಂಬಿದ ರಸ್ತೆಗಳಲ್ಲಿ ಮಧ್ಯರಾತ್ರಿ ಕಂಠ ತುಂಬಾ ಕುಡಿದು ಗಾಡಿ ಓಡಿಸಿ ಅಪಘಾತ ಮಾಡಿ ಆಸ್ಪತ್ರೆಗೆ ಬಂದ ಬಿಳಿ ತೊಗಲಿನವನನ್ನು ಉಪಚರಿಸಿ, ಹೊಲಿಗೆ ಹಾಕಿ ಕಳಿಸಿ, ಹಿಂದಿರುಗಿ ಹೋಗುತ್ತಿರುವ ಅವನಿಂದಲೇ ‘ಫಕ್ ಯು ಡ್ಯೂಡ್’ ಎಂದು ಬೈಸಿಕೊಳ್ಳುವ ಪುರುಷಾರ್ಥಕ್ಕೆ ಇಲ್ಲಿ ಕೆಲಸ ಮಾಡುವುದು; ಅಮೋಕಾ ಅಮೇರಿಕಾದಲ್ಲಿದೆಯೆಂತಲೇ ?” ಎಂಬ ಪ್ರಶ್ನೆಯನ್ನು ತನಗೇ ಕೆಳಿಕೊಳ್ಳುತ್ತಾನೆ ನಿರೂಪಕ. ಆದರೆ ಅದು ಕೇವಲ ಗ್ರೀನ್ ಕಾರ್ಡಿಗಾಗಿ ಹಪಹಪಿಸುವ ಭಾರತೀಯರ ಪ್ರಶ್ನೆ ಮಾತ್ರ ಎನ್ನಿಸುವುದಿಲ್ಲ.

ಕಾದಂಬರಿ ಕೊನೆಗೊಳ್ಳುವುದೂ ಇದೇ ಪ್ರಶ್ನೆಯೊಂದಿಗೇ. ಆದರೆ ಅದು ಕಾದಂಬರಿಯುದ್ದಕ್ಕೂ ಹಲವು ಮಜಲುಗಳನ್ನು ದಾಟಿ, ವಿಚಿತ್ರ ಆಯಾಮಗಳನ್ನು ಮೈಮೇಲೆಳೆದುಕೊಂಡು, ಹಲವು ಪಾತ್ರಗಳ ಉಸಿರನ್ನು ಎದೆಯಲ್ಲಿ ತುಂಬಿಕೊಂಡು ದೊಡ್ಡದಾಗುತ್ತಾ, ಬ್ರಹದಾಕಾರ ಪಡೆದು ವಿಕ್ಷಿಪ್ತ ಘಳಿಗೆಯೊಂದರಲ್ಲಿ ಸ್ಫೋಟಗೊಳ್ಳುತ್ತದೆ. ಆ ಸ್ಫೋಟದ ಕಂಪನದ ಅನುಭವ ಓದುಗನನ್ನೂ ತಾಕುವುದು ಈ ಕಾದಂಬರಿಯ ಹೆಗ್ಗಳಿಕೆ.

ಮಧ್ಯ:

ಇನ್ನು ಕಾದಂಬರಿಯ ಒಳ ಹೊಕ್ಕರೆ ಅದು ಬೇರೆಯದೇ ಲೋಕ. ‘ನನ್ನ ಹೆಂಡತಿಗೆ ಸಿಜರಿನ್ ಹೆರಿಗೆ ಮಾಡಿಸಿದರೆ ಹೆಣಗಳುರುಳುತ್ತವೆ’ ಎನ್ನುತ್ತಾನೆ ಸೋಮಾಲಿ ಗಂಡ. ಮಹಿಳೆಯ ಪ್ರಾಣ ಉಳಿಸುವ ಸಲುವಾಗಿ ಸಿಜರಿನ್ನನ್ನೇ ವೈದ್ಯರು ಮಾಡಬೇಕಾದಾಗ ಆತ ಹೇಳಿದಂತೆ ಅಕ್ಷರಶಃ ಹೆಣಗಳು ಬೀಳುತ್ತವೆ. ಯಾರ ಹೆಣ? ಯಾರು ಕಾರಣ?…ಎಂಬುದಕ್ಕೆಲ್ಲಾ ಕಾದಂಬರಿಯಲ್ಲಿ ಉತ್ತರ ಸಿಗುತ್ತಲೇ ಹೋಗುತ್ತದೆ ಹಾಗೂ ಓದುಗರನ್ನು ತತ್ತರಿಸುತ್ತದೆ. ಹೆರಿಗೆಯೆನ್ನುವುದು (೧)ಧರ್ಮಕ್ಕೂ (೨) ವ್ಯಾಪಾರಕ್ಕೂ (೩) ವ್ಯಕ್ತಿಗಳ ಸೋಗಲಾಡಿತನಕ್ಕೂ (೪) ಕೀರ್ತಿ, ಪ್ರಚಾರ, ಸ್ವಾರ್ಥಕ್ಕೂ ಹೇಗೆ ಒಂದು ವಸ್ತುವಾಗಿ ಬಳಸಿಕೊಳ್ಳಲ್ಪಡುತ್ತದೆ ಎಂಬುದು ಕಾದಂಬರಿಯುದ್ದಕ್ಕೂ ಮನದಟ್ಟಾಗುತ್ತಾ ಹೋಗುತ್ತದೆ. ಇಂಥ ವಿಚಾರಗಳನ್ನು ಹೇಳುವಾಗ ಕಾದಂಬರಿಕಾರ ‘ಪ್ರಜ್ಞಾ ಪ್ರವಾಹ’ದಂತಹ ತಂತ್ರಗಾರಿಕೆಗೆ ಮೊರೆಹೋಗುವುದನ್ನು ಅನೇಕ ಕಡೆ ನೋಡಿದ್ದೇನೆ. ಆದರೆ ಆ ಕ್ರಮ ಎಲ್ಲ ಪ್ರಸಂಗಗಳಲ್ಲೂ ಓದುಗನನ್ನು ಮೋಡಿ ಮಾಡಿಯೇ ಬಿಡುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಇಲ್ಲಿ ಗುರುಪ್ರಸಾದ ಕಾಗಿನೆಲೆ ತಮ್ಮ ಕಥೆ ಕಟ್ಟುವ ಚತುರಗಾರಿಕೆಯಿಂದ ತಾವು ಹೇಳಬೇಕಾದುದನ್ನು ಘಟನೆಗಳ ವಿವರದಲ್ಲಿ, ಸಂಭಾಷಣೆಗಳಲ್ಲಿ ಅರುಹುವ ಪರಿ ನಿಜಕ್ಕೂ ಅನನ್ಯ. ತುಸು ಹೆಚ್ಚಾದರೆ ಹೈಲೀ ಟೆಕ್ನಿಕಲ್ ಎನ್ನಿಸುವ ವೈದ್ಯಕೀಯ ಕಾದಂಬರಿಯಾಗಬಹುದಾದ ( ‘ರಾಬಿನ್ ಕುಕ್’ನ ಇಂಗ್ಲೀಷ್ ಕಾದಂಬರಿಗಳ ರೀತಿ); ಕಡಿಮೆಯಾದರೆ ಯಾವುದೋ ದೇಶದ ಸಾಮಾಜಿಕ ಸಂಘರ್ಷದ ಡಾಕ್ಯುಮೆಂಟರಿ ಆಗಿಬಿಡಬಹುದಾದ ಅರಿವು ಅವರಿಗಿದೆ. ಹಾಗೆಯೇ, ಈ ಕಾದಂಬರಿಯ ವಿಷಯ ಕೂಡಾ ಕಂಪೌಂಡ್ ಗೋಡೆಯ ಮೇಲಿನ ನಡಿಗೆಯಂಥದ್ದು. ತುಸು ಆಯ ತಪ್ಪಿದರೂ ಎಡಕ್ಕೋ ಇಲ್ಲ ಬಲಕ್ಕೋ ವಾಲಬಹುದಾದ ಅಪಾಯದ ವಸ್ತುವದು. ಆದರೆ ಹಾಗಾಗದ ಎಚ್ಚರಿಕೆಯಲ್ಲೇ ಇಡೀ ಕಾದಂಬರಿಯನ್ನು ಹೆಣೆದಿರುವುದು ಲೇಖಕರ ನೈಪುಣ್ಯಕ್ಕೆ ಸಾಕ್ಷಿ.

ಸೋಮಾಲಿಯಾ ಹೆಂಗಸರ ಹೆರಿಗೆ ಕಾದಂಬರಿಯ ಕೇಂದ್ರ. ಉಳಿದೆಲ್ಲ ಪಾತ್ರಗಳೂ, ಘಟನೆಗಳೂ ಅದರ ಸುತ್ತಲೇ ಸುತ್ತುತ್ತವೆ. ಒಂದೇ ವಸ್ತುವನ್ನು ಮೂಲವಾಗಿಟ್ಟುಕೊಂಡು ಮುನ್ನೂರು ಪುಟದ ಕಾದಂಬರಿ ರಚಿತವಾಗಬೇಕಾದರೆ ಆ ‘ವಸ್ತು’ ಸಶಕ್ತವಾಗಿರುವುದು ಅತೀ ಅಗತ್ಯ. ಅದಿಲ್ಲಿ ಸಿದ್ಧಿಸಿದೆ. ಈ ‘ಗರ್ಭ ಬಗೆಯುವ’ ಸಂಗತಿ ಕೊನೆಗೆ ಯಾವ ಹಂತಕ್ಕೆ ಹೋಗಿ ತಲುಪುತ್ತದೆಯೆಂದರೆ; ತಮ್ಮ ಆಸ್ಪತ್ರೆಯಲ್ಲಿ ನಡೆಯುವ ಸಿಜರಿನ್ನನ್ನು ಸಮರ್ಥಿಸಿಕೊಳ್ಳಲು ಮ್ಯಾನೇಜ್ಮೆಂಟಿನವರು ಆಪರೇಷನ್ನಿನ ‘ಲೈವ್ ಟೆಲಿಕಾಸ್ಟಿ’ಗೂ ಇಳಿಯುತ್ತಾರೆ! ಈ ನೇರ ಪ್ರಸಾರವನ್ನು ಸಫಲಗೊಳಿಸಲು ನಡೆಯುವ ಪರದಾಟಗಳು ಅಷ್ಟಿಷ್ಟಲ್ಲ. ಇದಕ್ಕೆ ಬಲಿಪಶುವಾಗಲು ಯಾರೂ ಮುಂದೆ ಬರದಿದ್ದಾಗ, ಯಾರೋ ಸಂಬಂಧವಿಲ್ಲದವಳನ್ನು ಹಿಡಿದು ತಂದು ಆಕೆಯ ಮುಖಕ್ಕೆ ಹಿಜಾಬ್ ಹಾಕಿಸಿ ಆಪರೇಷನ್ ಮಾಡುವ ಆಲೋಚನೆಗೂ ಇಳಿಯುತ್ತದೆ ಆಸ್ಪತ್ರೆಯ ವೈದ್ಯ ತಂಡ. ಹೀಗೇ, ಕಾದಂಬರಿ ಹಂತ ಹಂತವಾಗಿ ತನ್ನ ಪದರಗಳನ್ನು ಬಿಚ್ಚಿಕೊಳ್ಳುತ್ತಿರುವಂತೆ- ಜನ ಸಮೂಹದ ನರಳಾಟ, ಒಂಟಿತನದ ಹತಾಶೆ, ದ್ವೇಷ, ಅಸಹಾಯಕತೆಗಳೆಲ್ಲ ಒಂದೊಂದಾಗಿ ಅನಾವರಣಗೊಳ್ಳುತ್ತಾ ಹೋಗುತ್ತದೆ.

ಫಾದುಮಾ ಎನ್ನುವ ಸೋಮಾಲಿ ಮಹಿಳೆ ಆತ್ಮಹತ್ಯೆ ಮಾಡಿಕೊಳ್ಳುವುದು ಕಾದಂಬರಿಯ ಪ್ರಮುಖ ಘಟನೆಗಳಲ್ಲೊಂದು. ಹಾಗೆ ನೋಡಿದರೆ ಆಕೆಯ ಹೆರಿಗೆ ಹಾಗೂ ಸಾವು ಇಲ್ಲಿ ಒಂದು ನೆಪ ಮಾತ್ರ. ಅದರ ನೆರಳಿನಲ್ಲಿ ಕಾದಂಬರಿ ಹೇಳಹೊರಟಿರುವುದು ಬರೀ ಹೆರಿಗೆಯ ಕಥೆಯಲ್ಲ. ಅದು ಒಂದು ಸಮಾಜದ ಸಂಘರ್ಷದ ಕಥೆ. (ಮೇಲ್ನೋಟಕ್ಕೆ ಹೆಣ್ಣಿನ ಶೋಷಣೆ ಹಾಗೂ ಹೋರಾಟ ಎಂದೆನಿಸಿದರೂ, ಅಷ್ಟಕ್ಕೇ ಅದು ಸೀಮಿತವಾಗಿಲ್ಲ) ಇದು ಹಳೇ ನಂಬಿಕೆ ಹಾಗೂ ಆಧುನಿಕತೆಯ ನಡುವಿನ ಸಂಘರ್ಷ; ಧರ್ಮ ಹಾಗೂ ವಿಜ್ಞಾನದ ನಡುವಿನ ಸಂಘರ್ಷ, ದೇಶ ಹಾಗೂ ಕಾಲದ ನಡುವಿನ ಸಂಘರ್ಷ. ಇಲ್ಲಿ ಯಾವುದು ಸರಿ, ಯಾವುದು ತಪ್ಪು ಎಂದು ಹೇಳುವ, ತನ್ನದೇ ವಾದವನ್ನು ‘ಇದೇ ಸರಿ’ ಎಂದು ಮಂಡಿಸುವ ದರ್ದು ನಿರೂಪಕನಿಗಿಲ್ಲ. ಇದು ಕಾದಂಬರಿಯ ಪ್ಲಸ್ ಪಾಯಿಂಟ್ ಕೂಡ. ನಿರೂಪಕನೇ ಆ ಇಡೀ ವ್ಯವಸ್ಥೆಯ ಒಂದು ಭಾಗವಾಗಿರುವುದು ಆತನ ಧ್ವನಿಗೊಂದು ನಿರ್ಲಿಪ್ತ ಭಾವವನ್ನು ದಕ್ಕಿಸಿಕೊಟ್ಟಿದೆ.

ಮನುಷ್ಯ ಸ್ವಭಾವವನ್ನು ಕಾದಂಬರಿ ಓದುಗನೆದುರು ತೆರೆದಿಡುವ ರೀತಿ ಇಲ್ಲಿ ಗಮನಾರ್ಹ. ಅದರಲ್ಲಿ ಎರಡು ವಿಧವಿದೆ. ರಾಧಿಕಾ ಎನ್ನುವ ವೈದ್ಯೆಯ ಪಾತ್ರ ಇಲ್ಲಿ ಬಹು ಮುಖ್ಯ. ಪರಿಸ್ಥಿತಿಯನ್ನು ನಿಭಾಯಿಸಲಾಗದೇ ಆರಂಭದಲ್ಲಿ ಸೋತ ಆಕೆ ನಂತರ ಅದೇ ಪರಿಸ್ಥಿತಿಯನ್ನು ತನ್ನ ಅನುಕೂಲಕ್ಕೆ ಬಳಸಿಕೊಳ್ಳುವ ಚಾಕಚಕ್ಯತೆ, ಆಕೆಯ ಗೆಳತಿ ಸಾನ್ವಿಯ ಸ್ವಾರ್ಥ, ಆಸ್ಪತ್ರೆಯ ಮ್ಯಾನೇಜ್ಮೆಂಟಿನ ಧೂರ್ತ ದೂರಾಲೋಚನೆ, ಎಲ್ಲ ಸಂದರ್ಭಗಳಲ್ಲೂ ವ್ಯಾಪಾರವನ್ನೇ ಧರ್ಮವಾಗಿಸಿಕೊಳ್ಳುವ ಮಾಧ್ಯಮಗಳು………..ಇತ್ಯಾದಿಗಳೆಲ್ಲಾ ಢಾಳಾಗಿ ಹೇಳಲ್ಪಟ್ಟಿರುವುದು ಒಂದು ವಿಧಾನ. “ಡಾ. ಮಹಮ್ಮದನ ಬಗ್ಗೆ ವಿಕಿಪೀಡಿಯಾದಲ್ಲಿ ಸಾಕಷ್ಟು ಮಾಹಿತಿ ಇರುವುದ ಕಂಡು; ನನ್ನ ಬಗ್ಗೂ ಏನಾದರೂ ಹೇಳಿದ್ದಾರೆಯೇ ಎಂದು ಗೂಗಲ್ಲಿನಲ್ಲಿ ಟೈಪಿಸಿ ನೋಡಿದೆ” ಎಂದು ನಿರೂಪಕ ಹೇಳುವಲ್ಲಿ ಮನುಷ್ಯ ಸ್ವಭಾವವನ್ನು ಎತ್ತಿ ತೋರಿಸುವುದು ಇನ್ನೊಂದು ವಿಧಾನ. ಒಂದು ದಟ್ಟವಾದರೆ ಇನ್ನೊಂದು ತೆಳು. ಈ ಎರಡೂ ಪ್ರಯೋಗಗಳು ಕಾದಂಬರಿಯಲ್ಲಿ ಸಾಕಷ್ಟು ಕಂಡುಬರುತ್ತದೆ. ‘ಸುದ್ದಿಯನ್ನು ಕೂಡಾ ಹೇಗೆ ಖಾಸಗಿಯಾಗಿಸಿಕೊಳ್ಳಬಹುದು’, ‘ಯಾವುದೇ ಒತ್ತಡವನ್ನು ಕಾನೂನಿಗಿಂತ ಧರ್ಮ ಚೆನ್ನಾಗಿ ನಿಭಾಯಿಸುತ್ತದೆಯೋ ?’ ಎನ್ನುವ ಸಂಗತಿಗಳೆಲ್ಲಾ ಇವಕ್ಕೆ ಇಂಬುಗೊಡುವಂಥವುಗಳು.

ಇನ್ನೊಂದೆಡೆ- ಇಂದಿನ ‘ಆಧುನಿಕ’ ಎಂದು ಕರೆಸಿಕೊಳ್ಳುವ ಯುಗದಲ್ಲಿಯ ಬದುಕಿನ ಸಂಕೀರ್ಣತೆಯನ್ನು, ವೈರುಧ್ಯವನ್ನು ಕಾದಂಬರಿ ಸಮರ್ಥವಾಗಿ ಸೆರೆಹಿಡಿಯುತ್ತದೆ. ಧರ್ಮಕ್ಕೋ, ಸಂಪ್ರದಾಯಕ್ಕೋ ಗಂಟು ಬಿದ್ದು ತನ್ನ ಜನನಾಂಗವನ್ನೇ ‘ಕಟ್’ ಮಾಡಿಕೊಳ್ಳುವ ಸೋಮಾಲೀ ಹೆಂಗಸಿನ ಮಗ್ಗುಲಲ್ಲೇ, ಭಾರತೀಯರು ಮಾತನಾಡುವ ಇಂಗ್ಲೀಷ್ ಅರ್ಥವೇ ಆಗುವುದಿಲ್ಲ ಎಂದು ಹಂಗಿಸುವ ಅಪ್ಪಟ ಅಮೇರಿಕಿ ಸೋಮಾಲಿ ಕೂಡಾ ಸಿಗುತ್ತಾಳೆ ಇಲ್ಲಿ. ಪ್ರಾಣ ಹೋದರೂ ಹೊಟ್ಟೆಗೆ ಕತ್ತರಿ ತಾಗಿಸಲೊಲ್ಲದ ದಂಪತಿಗಳ ಎದುರೇ ಸತ್ತ ಭ್ರೂಣವನ್ನು ಇಡಿಯಾಗಿ ಪಡೆಯಲು ಪ್ರಾಣವನ್ನೇ ಒತ್ತೆಯಿಟ್ಟು ಹೊಟ್ಟೆ ಕತ್ತರಿಸಿಕೊಳ್ಳುವ ದಂಪತಿಗಳು ಅಚ್ಚರಿ ಹುಟ್ಟಿಸುತ್ತಾರೆ. ಹೀಗೇ, ಕಾದಂಬರಿ ತನ್ನ ಮಧ್ಯ ಭಾಗದಲ್ಲಿ ಪಡೆದುಕೊಳ್ಳುವ ‘ಪಿಚ್’ ಅದಕ್ಕೊಂದು ಥ್ರಿಲ್ಲರ್ ರೂಪವನ್ನು ತಂದುಕೊಟ್ಟಿದೆ.

ಒಟ್ಟಾರೆಯಾಗಿ ಹೇಳಬೇಕೆಂದರೆ- ಮನುಷ್ಯನ ಮನಸ್ಸಿಗೆ ಆವರಿಸಿರುವ ‘ಹಿಜಾಬ್’ ಒಂದನ್ನು ಸರಿಸಿದಾಗ ಕಾಣಸಿಗುವ, ಬೆಚ್ಚಿಬೀಳಿಸುವ, ಹೇಸಿಗೆ ಹುಟ್ಟಿಸುವ ಸಂಗತಿಗಳ ಕಥನವೇ ಈ ಕಾದಂಬರಿ. ಮುಖಕ್ಕೆ ಹಾಕಿರುವ ಹಿಜಾಬ್ ಸರಿದಾಗ ಒಬ್ಬ ಫಾದುಮಾ, ಒಬ್ಬ ರುಖಿಯಾ ಕಾಣಸಿಕ್ಕರೆ; ಮನಸ್ಸಿಗೆ ಹಾಕಿರುವ ಹಿಜಾಬ್ ಸರಿದಾಗ ನಮಗೆ ರಾಧಿಕಾ, ಶ್ರೀಕಾಂತ, ಡಾ.ಮಹಮ್ಮದ, ಕುಕಿ, ರಿಕ್ ಜಾನ್ಸನ್, ಇಗಾಲ್‌ನಂಥ ಸಾಲು ಸಾಲು ಜನಗಳು ಕಾಣಸಿಗುತ್ತಾರೆ.

ಕೊನೆಯಲ್ಲಿ ಒಂದಿಷ್ಟು;

ಕಥೆ/ಕಾದಂಬರಿಯನ್ನು ಊಹೆಗೂ ಮೀರಿದ ಒಂದು ಉಚ್ಛ್ರಾಯ ಸ್ಥಿತಿಗೆ ತೆಗೆದುಕೊಂಡು ಹೋಗಿ, ಆ ಹಂತದಲ್ಲಿ ಅದನ್ನು ಹ್ಯಾಂಡಲ್ ಮಾಡುವುದು ಸುಲಭದ ಕೆಲಸವಲ್ಲ. ಅದು ನುರಿತ ಕಥೆಗಾರನಿಗೆ ಮಾತ್ರ ದಕ್ಕುವ ಕಲೆ. ಕಾದಂಬರಿಯ ಇಂಥುದೇ ಸನ್ನಿವೇಶವನ್ನು ಗುರುಪ್ರಸಾದ ಕಾಗಿನೆಲೆ ನಿಭಾಯಿಸಿರುವ ರೀತಿ ಮೆಚ್ಚುವಂಥದ್ದು. ಅದಕ್ಕಾಗಿಯೇ ಅವರು ‘ಉಪಸಂಹಾರ’ದ ರೀತಿಯಲ್ಲಿ ಕಾದಂಬರಿಯ ತುದಿಯಲ್ಲಿ ಇನ್ನೊಂದು ಭಾಗವನ್ನು ಸೇರಿಸಿದ್ದಾರೆ. ಮೇಲ್ನೋಟಕ್ಕೆ ಒಂದಕ್ಕೊಂದು ಸಂಬಂಧವಿಲ್ಲದ ಸಂಗತಿಗಳಂತೆ ಗೋಚರಿಸುವ ಈ ಎರಡು ವಿಭಾಗಗಳು ಸೂಕ್ಷ್ಮವಾಗಿ ಗಮನಿಸಿದಾದ ಹೊಸದೊಂದು ರೂಪು ಪಡೆದು ನಮ್ಮ ಒಳಹೊಳವನ್ನು ವಿಸ್ತರಿಸುತ್ತಾ ಸಾಗುತ್ತದೆ. ವಿಭಿನ್ನ ಆಕಾರದ ಎರಡು ಚಿತ್ರಗಳನ್ನು ಒಟ್ಟಿಗೇ ಸೇರಿಸಿದಾಗ ಮೂಡುವ ಆಕೃತಿ ಹೊಸದೇ ಆದ ರೂಪದಲ್ಲಿ ಕಂಗೊಳಿಸುತ್ತದೆ.

ಕನ್ನಡ ಸಾಹಿತ್ಯಲೋಕ, ಅದರಲ್ಲೂ ಕಾದಂಬರಿ ಪ್ರಕಾರ ಇವತ್ತು ನಿಂತಿರುವ ಕಾಲಘಟ್ಟ ಅತೀ ಕ್ಲಿಷ್ಟವಾದುದು. ಕನ್ನಡ ಅಕ್ಷರ ಪ್ರೇಮಿ ಇಂದು ಹಳೆಯ ಪಲಕುಗಳನ್ನು ಜೇಬಿನಲ್ಲಿಟ್ಟುಕೊಂಡೇ ಹೊಸತನದ ಹುಡುಕಾಟದಲ್ಲಿದ್ದಾನೆ. ಇಂಥ ಸಂದರ್ಭದಲ್ಲಿ ಗುರುಪ್ರಸಾದರ ಈ ಕಾದಂಬರಿ ಅತೀ ಮಹತ್ವದ್ದೆನಿಸುತ್ತದೆ. ಈ ಹೊತ್ತಿನ ಆಗು ಹೋಗುಗಳಿಗೆ ತೀವ್ರವಾಗಿ ಸ್ಪಂದಿಸುವ ಮನಸ್ಸುಗಳು ಕೂಡಾ ಮುದಗೊಳ್ಳುವಂತೆ ರೋಚಕವಾಗಿ ಕಥೆಯನ್ನು ಹೇಳುವ ಜೊತೆಜೊತೆಗೇ, ನಾಜೂಕಾಗಿ ಮತ್ತೇನನ್ನೋ ಹೇಳುತ್ತಾರೆ ಅವರು. ಕಥೆಯ ಆ ‘ಇನ್ನೊಂದು ಮಗ್ಗಲು’ ಕೂಡಾ ತನ್ನ ಅರ್ಥವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳುತ್ತಲೇ ಹೋಗುವುದು ಈ ಕೃತಿಯ ಶಕ್ತಿ.

ಒಂದು ‘ಸೀಮಾತೀತ’ವೆನ್ನುವ ಅನುಭವವನ್ನು ಭೌಗೋಳಿಕವಾಗಿಯೂ, ಭೌದ್ಧಿಕವಾಗಿಯೂ ಕೊಡಮಾಡುವ ಈ ಕಾದಂಬರಿಯನ್ನು ಕನ್ನಡದ ಓದುಗ ಮಿಸ್ ಮಾಡುವಂತಿಲ್ಲ ಎನ್ನುವುದು ನನ್ನ ಖಚಿತ ಅಭಿಪ್ರಾಯ.

ಪ್ರತಿಕ್ರಿಯಿಸಿ