ಅಂಕಣ – ’ಕಣ್ಣು ಕಡಲು’ : ಉತ್ತರ ಕೊಟ್ಟ ಕರಾವಳಿ

ಮುಖ್ಯವಾಹಿನಿಯ ಗೌಜು ಗದ್ದಲಗಳಿಂದ ರಂಗದಿಂದೊಂದಿಷ್ಟು ದೂರ ಎಂಬಂತಿರುವ ಉತ್ತರ ಕನ್ನಡ ತನ್ನೊಡಲೊಳಗೆ ಕಾಡನ್ನೂ ಕಡಲನ್ನೂ ಅಪ್ಪಿಕೊಂಡಿರುವ ವಿಶಿಷ್ಟ ಜಿಲ್ಲೆ. ಒಂದು ದಶಕದ ಮಹಾನಗರದ ವಾಸ್ತವ್ಯದಿಂದ ಬೇರ್ಪಟ್ಟು ಸದ್ಯ ಕುಮಟೆಯಲ್ಲಿ ನೆಲೆಸಿರುವ ನಮ್ಮ ತಂಡದ ಕಿರಣ್ ಇಲ್ಲಿಯ ತಮ್ಮ ಅನುಭವಗಳಿಗೆ ಆಗಾಗ್ಗೆ  ಅಕ್ಷರ ರೂಪ ನೀಡಲಿದ್ದಾರೆ.

ಮೂರು ವರುಷದ ಹಿಂದೆ ನಾನು ಬೆಂಗಳೂರು ಬಿಟ್ಟು ಕುಮಟೆ ನನ್ನ ಕರ್ಮಭೂಮಿಯಾಗಿದ್ದರಲ್ಲಿ ಅನಿವಾರ್ಯತೆ, ಆಯ್ಕೆ ಎರಡರ ಪಾಲೂ ಇದೆ. ಅತ್ತ ಮಹಾನಗರವೂ ಅಲ್ಲದ ಇತ್ತ ಹಳ್ಳಿಯೂ ಅಲ್ಲದ ಪುಟ್ಟ ಊರಿನಲ್ಲಿ ವಾಸಿಸುವ ಆಸೆ ನನಗೆ ಮೊದಲಿನಂದಲೂ ಇತ್ತು. ಪುಟ್ಟ ಊರಿನ ಗಮ್ಮತ್ತೆ ಬೇರೆ. ದೊಡ್ಡ ಊರುಗಳ ಗತ್ತು ಮತ್ತು ಹಳ್ಳಿಯ ಏಕತಾನತೆ ಇವೆರಡರಿಂದ ತಪ್ಪಿಸಿಕೊಂಡ ಪುಟಾಣಿ ನಗರಗಳು ನನಗೆ ಅಚ್ಚು ಮೆಚ್ಚು.

ಈಗ ಕುಮಟೆ ಸುದ್ದಿಯಲ್ಲಿರುವ ವರ್ತಮಾನದ ಕಾರಣದಿಂದಲೇ ಈ ಅಂಕಣವನ್ನು ಶುರುಮಾಡುವ ಮನಸ್ಸಾಗಿದೆ.

“ಇಂಗ್ಲೀಶ್ ಪೇಪರ್ ಹೆಡ್ ಲೈನ್ ನಲ್ಲೆಲ್ಲ ನಮ್ಮ ಕುಮಟೆಯದೇ ಹೆಸರಂತೆ ..” ಮೊನ್ನೆ ರಾಮಾ ನಾಯ್ಕ ಅರ್ಧ ಅಭಿಮಾನ ಇನ್ನರ್ಧ ಬೇಸರದಿಂದ ಹೇಳಿದಾಗ ಕಟಿಂಗ್ ಶಾಪಿನಲ್ಲಿದ್ದವರೆಲ್ಲ ಒಮ್ಮೆ ಹುಬ್ಬೇರಿಸಿದರು. ಕುಮಟಾದ ಇತಿಹಾಸದಲ್ಲೇ ಇಂಗ್ಲೀಷ್ ಪೇಪರ್ ಮುಖಪುಟದಲ್ಲಿ ಅದು ಮೊದಲ ಬಾರಿಗೆ ಕಾಣಿಸಿಕೊಂಡಿದ್ದರ ಕುರಿತು ಅಲ್ಲಿದ್ದವರೆಲ್ಲ ಬಿಸಿ ಬಿಸಿಯಾಗಿ ಚರ್ಚೆ ನಡೆಸಿದರು. ಯಡಿಯೂರಪ್ಪನವರ ಪರಿವರ್ತನಾ ಯಾತ್ರೆ, ಸಿದ್ದರಾಮಯ್ಯನವರ ಭೇಟಿ ಎಲ್ಲ ನಡೆದ ಆಸುಪಾಸಿನಲ್ಲೇ ಚಂದಾವರ ಎಂಬ ಮಧುರ ಹೂವಿನಂತ ಹೆಸರಿನ ಊರಿನಲ್ಲಿ ಶುರುವಾದ ಗಲಾಟೆ, ಹೊನ್ನಾವರ, ಕುಮಟಾ, ಶಿರಸಿ ಅಂತೆಲ್ಲ ಉತ್ತರಕನ್ನಡದ ತುಂಬೆಲ್ಲ ವೈರೆಸ್ಸಿನಂತೆ ಚಾಚಿಕೊಂಡಿತು. ಈ ಗಲಾಟೆ ಯಾಕೆ ಶುರುವಾಯಿತು? ಇದರ ಹಿಂದಿನ ರಾಜಕೀಯವೇನು? ತಪ್ಪು ಯಾರದು ಎಂಬೆಲ್ಲ ಅಧಿಕಪ್ರಸಂಗದ ಮಾತುಗಳಿಗೆ ನಾನು ಹೋಗುವುದಿಲ್ಲ. ಆದರೆ ಈ ಘಟನೆಯ ಬಿಸಿ ಇದ್ದ ಅಷ್ಟೂ ದಿನ ಪತ್ರಿಕೆಯಲ್ಲಿ ಶೋಭಾ ಕರಂದ್ಲಾಜೆಯವರು “ಐಸಿಸ್ ಜಿಹಾದಿಗಳು” ಎಂದು ಪದೇ ಪದೇ ಉಲ್ಲೇಖಿಸಿದ್ದು ವಾಟ್ಸ್ ಅಪ್ಪುಗಳಲ್ಲೂ ಇದೇ ಪದಬಳಕೆಯ ನೂರಾರು ಮೆಸೆಜುಗಳು ಹರಿದಾಡಿದ್ದು ನಮ್ಮೆಲ್ಲರೊಳಗೂ ಆತಂಕ ಮತ್ತು ನೋವನ್ನು ಹುಟ್ಟಿಸಿದೆ.

ಗಲಭೆ ಶುರುವಾದ ದಿನ ನಾನು ತೆಂಗಿನ ಮರಗಳಿಗೆ ನೀರುಣಿಸುತ್ತಿದ್ದರೆ, ಕಾಯಿ ಕೀಳಲು ಬಂದ ಪಾಡೇಕರ್ ಇನ್ನು ಎರಡು ಮರ ಹತ್ತಿರಲಿಲ್ಲ ಆಗಲೇ ಅವನ ಮೊಬೈಲ್ ಹತ್ತಾರು ಬಾರಿ ರಿಂಗಾಗತೊಡಗಿತ್ತು. ತರಾತುರಿಯಲ್ಲಿ ಕೆಳಗೆ ಬಂದವನೇ

“ಒಡೆಯ..ಗಲಾಟೆ ಶುರುವಾಗಿದೆಯಂತೆ .. ನಾನು ಮತ್ತೊಮ್ಮೆ ಬರ್ತೇನೆ ” ಅಂತ ಹೊರಟು ನಿಂತ.

” ಅಲ್ಲೋ ಮಾರಾಯ.. ಅಲ್ಲಿ ಗಲಾಟೆ ಶುರುವಾದರೆ ನೀನು ಕಾಯಿ ಕೀಳೋಕೆ ಏನಾಯ್ತೋ.. ಮೂಲೆಲಿರೋ ಈ ತೋಟದಲ್ಲಿ ಯಾರು ಗಲಾಟೆಗೆ ಬರಲ್ಲ.. ಧೈರ್ಯವಾಗಿ ಮರ ಹತ್ತು” ಎಂದೆ.

ನನ್ನ ಮಾತು ಕೇಳಿ ಹಲ್ಲು ಬಿಟ್ಟವನು ” ನನ್ನ ಮೈ ಮುಟ್ಟೊ ಧೈರ್ಯ ಯಾರಿಗಿದೆ ಒಡೆಯ. ನಮ್ಮೂರಲ್ಲಿ ಗಲಾಟೆ ನಡಿವಾಗ ನಾ ಇಲ್ಲಾಂದ್ರೆ ಹೆಂಗೆ ಹೇಳ್ರ” ಅಂದ.

” ಈಗ ನೀನು ಗಲಾಟೆ ಮಾಡೋಕೆ ಹೋಗ್ಬೇಕೇನೋ?”

” ಹೌದು.. ಸಂಘದಿಂದ ಆಗಲೇ ನಾಲ್ಕೈದು ಸಲ ಫೋನ್ ಬರ್ತಾ ಇದೆ. ನಾ ಕುಮಟೆ ಕಡೆ ಹೋಗಿ ಬರ್ತೆ” ಅಂತ ಹೊರಟೇ ಬಿಟ್ಟ.
ಇವನದ್ಯಾವ ಸಂಘಾ ನೋ.. ಗಲಾಟೆ ಗೆ ಏಕಾಏಕಿ ಹೊರಟು ನಿಂತ ಇವನನ್ನ ಬೈಕೋತಾ ಇವತ್ತೂ ಕಾಯಿ ತೆಗಿಯಲಿಕ್ಕಾಗದೇ ಹೋದದ್ದಕ್ಕೆ ಪರಿತಪಿಸುತ್ತ ಉಳಿದ ಗಿಡಗಳಿಗೆ ನೀರು ಹಾಕಿ ನಾನು ಮನೆ ಸೇರ್ಕೊಂಡಿದ್ದೆ.

ಆ ದಿನ ಅಂತೆ ಕಂತೆಗಳ ಸಂತೆಯಲ್ಲಿ ಗಲಭೆ ಅಂದುಕೊಂಡಿದ್ದಕ್ಕಿಂತ ಹೆಚ್ಚಾಗಿ ಸೆಕ್ಷನ್ ೧೪೪ ಹಾಕಲಾಗಿತ್ತು. ಐಜಿಪಿ ಹೇಮಂತ್ ನಿಂಬಾಳ್ಕರ್ ಕಾರು ಬೆಂಕಿಗೆ ಆಹುತಿಯಾಗಿತ್ತು. ಕಾಸರಕೋಡಿನಲ್ಲಿ ಮುಸಲ್ಮಾನನ ಕೊಲೆ ಆಯ್ತಂತೆ, ಚಂದಾವರದ ಹತ್ರ ಯಾರೋ ಎರಡು ದನಗಳನ್ನ ಕೊಂದು ಅದರ ಮೇಲೆ ಚಾಕುವಿನಿಂದ ಹಿಂದೂ ಅಂತ ಬರೆದು ಬಿಸಾಕಿದ್ರಂತೆ ಹೀಗೆ.. ಅಂತೆ ಕಂತೆಗಳು ಹಬ್ಬಿದಾಗ ಜನರು ಉದ್ರೇಕಗೊಳ್ಳುವುದು ಸಾಮಾನ್ಯ. ಜನರನ್ನೂ ಉದ್ರೇಕಗೊಳಿಸಲೆಂದೇ ಈ ಬಗೆಯ ಸುಳ್ಳುಗಳನ್ನ ವ್ಯವಸ್ಥಿತವಾಗಿ ತೇಲಿಬಿಡಲಾಗುತ್ತದೆಯೇ?

ಇದೆಲ್ಲದರ ನಡುವೆ ರಾತ್ರಿ ಅಚಾನಾಕ್ಕಾಗಿ ಪಾಡೇಕರ್ ಮನೆಗೆ ಬಂದ. ಬೆಳಿಗ್ಗೆ ಕಾಯಿ ಕೀಳದೇ ಹೋದ ಅವನ ಮೇಲೆ ಕೋಪ ಬಂದಿದ್ದರೂ.. ಗಲಾಟೆಯಲ್ಲಿ ಇವನನ್ನೂ ಪೋಲಿಸರು ಹೊತ್ತೊಯ್ದಿರಬಹುದೇ ಎಂಬ ಅನುಮಾನವೂ ನನಗಿತ್ತು. ಈಗ ಪಾಡೇಕರ್ ಜೊತೆಗೆ ಮಂಚಿಗಂಡನೂ ಬಂದಿದ್ದ.

“ಏನ್ರೋ ಎಲ್ಲ ಗಲಾಟೆ ಮುಗಿತಾ? ಎಷ್ಟು ಜನರನ್ನ ಕೊಚ್ಚಿ ಹಾಕಿ ಬಂದ್ರಿ” ಅಂದೆ.

” ನಾವ್ಯಾಕೆ ಒಡೆಯ ಗಲಾಟೆ ಅಂತೆಲ್ಲ ಹೋಗಿ ನಮ್ಮ ಹೊಟ್ಟೆಗೆ ನಾವೇ ಹೊಡ್ಕೊಳೊಣ ” ಅಂದ ಮಂಚಿಗಂಡ ವಿನಮ್ರತೆ ನಟಿಸುತ್ತ.

” ಮತ್ತೆ ಈ ಪಾಡೇಕರ್ ಬೆಳಿಗ್ಗೆ ಹಂಗೆ ಹೊರಟು ಬಿಟ್ಟಿದ್ನಲ್ಲ ಗಲಾಟೆ ಮಾಡಕೆ..”

ಪಾಡೆಕರ್ ಪೆಕರು ಪೆಕರಾಗಿ ನಕ್ಕ. ಮಂಚಿಗಂಡ ” ಅಯ್ಯೋ ಒಡೆಯ ಇವನೆಲ್ಲಿ ಹೋಗ್ತಾನೆ ಗಲಾಟೆಗೆ. ದೊಂಬಿ ಜೊರಾದ್ರೆ ಸಾರಾಯಿ ಪ್ಯಾಕೆಟೂ ಸಿಗಕಿಲ್ಲ.. ಗೋವಾ ಫೆನ್ನಿನೂ ಸಿಗಕ್ಕಿಲ್ಲ .. ಅಂತ ನಿಮ್ಮ ತೋಟದಿಂದ ಓಡಿ ಬಂದಿದ್ದ ಅಷ್ಟೇ.”

ಆ ಕ್ಷಣ ನನಗೆ ನಗು ಬಂದರೂ ಕುಡಿತದ ಕುರಿತಾದ ಅವನ ಶ್ರದ್ಧೆ, ಸಮಯ ಪ್ರಜ್ನೆ ಗೆ ಬಗ್ಗೆ ಆಸಕ್ತಿ ಹುಟ್ಟಿತ್ತು.

” ಸರಿ.. ಈಗ ಏನು ಈ ಕಡೆ ಬಂದ್ರಿ..” ಅಂದೆ.

” ಅದೇ ಒಡೆಯ ಇನ್ನೊಂದು ವಾರ ಬಂದ್ ಅಂತೆ . ಸ್ವಲ್ಪ ಬೇಳೆ ಕಾಳು ಸಾಮಾನಿಗೆ ರೊಕ್ಕ ಬೇಕಿತ್ತು” ಅಂತ ರಾಗವೆಳೆದರು.

ಅವರಿಗೆ ಇನ್ನೆರಡು ದಿನ ಗೋವಾ ಫೆನ್ನಿ ಸಿಗದೇ ಇರೋದೆ ಚಿಂತೆ ಅಂತ ನನಗೆ ತಿಳಿದಿತ್ತು. ಮನೆ ಬೇಳೆ ಕಾಳು ಬಗ್ಗೆ ಚಿಂತೆ ಮಾಡೋ ಆಸಾಮಿಗಳಲ್ಲ ಇವರು ಅನ್ನೋದು ಅವರ ಹೆಂಡ್ರೆ ನಂಗೆ ಹೇಳಿದ್ರು. ನಾನೆನೂ ಮಾತನಾಡದೇ ಇಬ್ರಿಗೂ ಸ್ವಲ್ಪ ಹಣ ಕೊಟ್ಟು ಕಳುಹಿಸಿದೆ.

ಮಾರನೇ ದಿನ ಕುಮಟಾ ಪೇಟೆಯನ್ನೆಲ್ಲ ಒಂದು ಸುತ್ತು ಹಾಕಿ ಬಂದೆ. ಹೈವೆಯ ಮೈತುಂಬಾ ಹಿಂದಿನ ದಿನದ ಗಲಭೆಯ ಕಪ್ಪು ಕಲೆಗಳು. ಮುಸಲ್ಮಾನರ ಅಂಗಡಿಯನ್ನೆಲ್ಲ ಹುಡುಕಿ ಹುಡುಕಿ ಅಂಗಡಿಗಳ ಮೇಲೆ ಕಲ್ಲೆಸೆಯಲಾಗಿತ್ತು. ಇಡೀ ಪೇಟೆ ಗಾಯಗೊಂಡು ಆಸ್ಪತ್ರೆಯ ಬೆಡ್ ಮೇಲೆ ಮಲಗಿದ ಪೇಶಂಟಿನಂತಾಗಿತ್ತು. ಇದಾದ ಒಂದೇ ದಿನಕ್ಕೆ ಊರು ಮರಳಿ ಚೇತರಿಸಿಕೊಂಡಿದ್ದು ಇಲ್ಲಿನ ಜನರ ಪ್ರಜ್ನಾವಂತಿಕೆಯಿಂದಲ್ಲದೆ ಇನ್ನೇನು. ಒಂದು ವೈವಿಧ್ಯಮಯ ಸಮುದಾಯದ ಸಾಮರಸ್ಯವನ್ನು ಕದಡುವ ಪ್ರಯತ್ನಕ್ಕೆ ಫಲ ದೊರಕಲಿಲ್ಲ.

ಅದೇ ದಿನ ಬ್ಯಾಂಕಿನಲ್ಲಿ ನನಗೆ ವನ್ನಳ್ಳಿ ಇಬ್ರಾಹಿಂ ಸಿಕ್ಕಿದ. ಇವನದೊಂದು ಚಿಕ್ಕ ಕೋಳಿ ಅಂಗಡಿ ಇದೆ. ಕೋಳಿ ಮಾಂಸ ತರಲು ನಾನು ಇವನಲ್ಲಿಗೇ ಹೋಗುವುದು. ಇವನ ಅಂಗಡಿಯ ಮುಂದೆ ’ಇಲ್ಲಿ ಮಾಂಸದ ಕೋಳಿ ಸಿಗುತ್ತದೆ’ ಅಂತ ಬೋರ್ಡ್ ಹಾಕಿಸಿಕೊಂಡಿದ್ದ. ನಾನು ಪ್ರತಿ ಬಾರಿ ಹೋದಾಗ ” ನಿನ್ನ ಹತ್ರ ಮೂಳೆ ಕೋಳಿ ಸಿಗೋದಿಲ್ವ.. ಬರೀ ಮಾಂಸದ ಕೋಳಿ ನಾ?” ಅಂತ ಚೇಡಿಸುತ್ತಿದ್ದೆ.
ಬ್ಯಾಂಕಿನಲ್ಲಿ ಆತ ಅಡವಿಡಲು ಎರಡು ಜೋಡಿ ಪುಟಾಣಿ ಕಿವಿ ಓಲೆ ತಂದಿದ್ದ. ಅದನ್ನು ಅಳೆದು ತೂಗಿ ನೋಡಿದ ಬ್ಯಾಂಕಿನವನು

” ಇದ್ರಲ್ಲಿ ಹೆಚ್ಚು ಬಂಗಾರ ಇಲ್ಲ.. ೫೦೦೦ ಸಿಗಬಹುದು ಅಷ್ಟೇ” ಎನ್ನುತ್ತಿದ್ದ. ಇವನು ಎಷ್ಟು ಸಿಕ್ರೆ ಅಷ್ಟು ಕೊಡಿ ಅಂತಿದ್ದ.

” ಇಷ್ಟು ಚಿಕ್ಕ ಓಲೆ ಯಾಕೆ ಅಡವಿಡ್ತಾ ಇದಿಯಾ?” ಅಂತ ಕೇಳಿದೆ.

” ನಿನ್ನೆ ಗಲಾಟೆ ನಡಿವಾಗ ಯಾರೋ ನಮ್ಮ ಅಂಗಡಿ ಯಿಂದ ಕೋಳಿಗಳನ್ನೆಲ್ಲ ಎತ್ಕೊಂಡು ಹೋಗ್ಬಿಟ್ರು. ಈಗ ವ್ಯಾಪಾರಕ್ಕೆ ಒಂದು ಕೋಳಿನೂ ಇಲ್ಲ. ಹಣಾ ನೂ ಇಲ್ಲ. ಇರೋದು ಇದೊಂದೆ ಜುಮಕಿ. ಮಗಳಿಗೆ ಮಾಡಿಸಿದ್ದು. ಈಗ ಅದರಲ್ಲೂ ಜಾಸ್ತಿ ಬಂಗಾರ ಇಲ್ಲ ಅಂತಾರೆ.” ಅಂದ.

ಇವನ ಕೋಳಿಗಳನ್ನೆಲ್ಲ ಹೊತ್ತೊಯ್ದವರು ಅದನ್ನೆಲ್ಲ ಏನು ಮಾಡಿರಬಹುದು ಎಂದು ಯೋಚಿಸುತ್ತಲೇ ಬ್ಯಾಂಕಿನಿಂದ ಹೊರಗೆ ಬಂದೆ. ಮತ್ತೆ ವಾಟ್ಸಾಪಿನಲ್ಲಿ ಮೆಸೆಜುಗಳ ಹಾವಳಿ. ” ಮುಸಲ್ಮಾನ ಜಿಹಾದಿ ಅಂಗಡಿಗಳಲ್ಲಿ ಯಾರೂ ವ್ಯಾಪಾರ ಮಾಡಬಾರದು” ಎಂಬ ಹತ್ತಾರು ಸಂದೇಶಗಳ ನಡುವೆಯೇ ನನ್ನ ಪರಿಚಯದ ಮುಸಲ್ಮಾನ ಜಿಹಾದಿಯ ಅಂಗಡಿಗೆ ಹೋಗಿ ಎರಡು ಪೊಟ್ಟಣ ಕರಾಚಿ ಬಿಸ್ಕತ್ತನ್ನು ಕೊಂಡು ತಂದೆ.

****

8 comments to “ಅಂಕಣ – ’ಕಣ್ಣು ಕಡಲು’ : ಉತ್ತರ ಕೊಟ್ಟ ಕರಾವಳಿ”
 1. ಜೀವಪರ ಧ್ವನಿ ಇದೆ…
  ಮುಂದಿನದನ್ನು ಓದಲು ಕಾಯುವೆ…

 2. ತುಂಬಾ ಒಳ್ಳೆಯ ಮಾತುಗಳು. ದಯವಿಟ್ಟು ಬರೆಯುತ್ತಾ ಇರಿ. ಮನಸ್ಸಿಗೆ ನೆಮ್ಮದಿ ಅನ್ನಿಸುತ್ತೆ

 3. ಆಸಕ್ತಿಕರವಾಗಿದೆ. ಮುಂದಿನ ಕಂತಿಗಾಗಿ.ಕಾಯುವಂತೆ ಮಾಡಿದೆ !! 👍
  ಮಾಲತಿ.ಶೆಣೈ

 4. ಯಾರ ತಪ್ಪಿಗೆ ಒಳ್ಳೆಯವರೆಲ್ಲರಿಗು ಹಿಂಸೆ ತೊಂದರೆ,ಯಾಕೆಂದ್ರೆ ಒಳ್ಳೇವ್ರಾರು ಇಂಥ ಹಿಂಸೆ ಕೊಡ್ಲಿಕ್ಕಿಲ್ಲ,.ಹಿಂದೂ ಮುಸ್ಲಿಂ ಭೇದವಿಲ್ದೆ ನೆಮ್ಮದಿಯ ತಾಣವಾಗಿದ್ದ ಪುಟ್ಟ ಪುಟ್ಟ ಗ್ರಾಮಕ್ಕು ಬಂತು ರಾಜಕೀಯದ ಬೆಂಕಿ. ನಾಕಾರು ಒಳ್ಳೆ ಕೆಲಸ ಮಾಡಕಾಗ್ದಿದ್ರು ದಯವಿಟ್ಟು ಮತ್ತೊಬ್ರಿಗ್ ತೊಂದರೆ ಮಾಡ್ದಿದ್ರೆ ಸಾಕು.ಕಿರಣ್ ಅವರ ಈ ಅಂಕಣದಿಂದ ಜನ ಎಚ್ಚೆತ್ಕೊಂಡ್ರೆ ಸಾಕು.

 5. ಎಂಥಹ ಗಲಭೆಯಾದರೂ ಬಹಳ ಬೇಗ ಚೇತರಿಸಿಕೊಂಡು ಸಹಜ ಸ್ಥಿತಿಗೆ ಮರಳುವ ನಮ್ಮ ಜನರ ಸಾಮರ್ಥ್ಯ ಅಚ್ಚರಿ ಹುಟ್ಟಿಸುತ್ತದೆ. ಬರಹ ಚೆನ್ನಾಗಿದೆ.
  .

ಪ್ರತಿಕ್ರಿಯಿಸಿ