ಸಮಾಜವಾದಿಗಳೊಂದಿಗೆ ಗಾಂಧಿ : ಗುಹಾ – ಡಿ . ಎಸ್ . ನಾಗಭೂಷಣ ಸಂವಾದ ಭಾಗ ೪

ಡಿಎಸ್ಸೆನ್ ಉತ್ತರ :

೧೦-೧೦-೧೭

ಶ್ರೀ ಗುಹಾ,

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಆ ದಿನ ನಿಮ್ಮ ಮಾತಿಗೆ ನನ್ನ ಆಕ್ಷೇಪಣೆ ಇದ್ದದ್ದು ಗಾಂಧಿಯವರ ಪ್ರಮುಖ ಮಾತುಕತೆಗಳ ಪಟ್ಟಿಯಲ್ಲಿ ಸಮಾಜವಾದಿಗಳೊಂದಿಗೆ ನಡೆಸಿದ ಮಾತುಕತೆಗಳನ್ನು ನೀವು ಯಾಕೆ ಪರಿಗಣಿಸಲಿಲ್ಲ ಎಂಬುದು. ಸಮಾಜವಾದಿಗಳ ಮೇಲೆ ನಿಮಗಿರುವ ಗೌರವವನ್ನು ಮನಗಂಡ ಮೇಲೆ ನನ್ನ ಆಕ್ಶೇಪಣೆ ಇನ್ನಷ್ಟು ಪ್ರಸ್ತುತವೆಂದು ನನಗನ್ನಿಸುತ್ತಿದೆ. ಗಾಂಧಿಯೊಂದಿಗೆ ವೈಯಕ್ತಿಕ ಸಂಬಂಧವನ್ನೇನೂ ಹೊಂದಿರದ ಭಗತ್ ಸಿಂಗ್ ಜೊತೆಗಿನ ಮಾತುಕತೆಯನ್ನು ನೀವು ಮಹತ್ವದ್ದೆಂದು ಪರಿಗಣಿಸುವುದಾದರೆ, ಗಾಂಧಿ ಗೌರವವನ್ನೂ, ವೈಯಕ್ತಿಕ ನೆಲೆಯ ಸಂಬಂಧವನ್ನೂ ಹೊಂದಿದ ಸಮಾಜವಾದಿಗಳನ್ನು ನೀವು ಯಾಕೆ ಪರಿಗಣಿಸುವುದಿಲ್ಲ ? ರಾಮಚಂದ್ರ ಗುಹಾರ ಪ್ರಕಾರ ಸಮಾಜವಾದಿಗಳಿಗೆ ಗಾಂಧಿ ಹತ್ತಿರವಾಗಿದ್ದರೆ ಇಲ್ಲವೆ ಎಂಬುದರ ಬಗ್ಗೆ ನನಗೆ ಹೆಚ್ಚಿನ ಆಸಕ್ತಿ ಇಲ್ಲ ಎಂದು ಮತ್ತೆ ನಿಮಗೆ ತಿಳಿಸಬಯಸುವೆ.

ಹೌದು. ದೇಶ ಸಮಾಜವಾದಿಗಳನ್ನು ಮರೆತಿದೆ. ಆದರೆ ಇತಿಹಾಸಕಾರರೂ ಯಾಕೆ ಅವರನ್ನು ಮರೆಯುತ್ತಿದ್ದಾರೆ? ಅದರಲ್ಲೂ – ಕೆಲವು ಪ್ರಾಮಾಣಿಕರು ಮಾತ್ರ- ಸಮಾಜವಾದಿಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿದಾಗ ಮಾತ್ರ ಅವರನ್ನು ನೆನೆಯುತ್ತಾರೆ. ಇದು ನಮ್ಮ ಅನಂತಮೂರ್ತಿ ನಮ್ಮಲ್ಲಿ ಕೆಲವರನ್ನು ಖಾಸಗಿಯಲ್ಲಿ ಮಾತ್ರ ಮೆಚ್ಚಿಕೊಂಡು ಸಾರ್ವಜನಿಕ ವೇದಿಕೆಯಲ್ಲಿ ಅಥವಾ ಬರವಣಿಗೆಯಲ್ಲಿ ಜಾಣ ಮರೆವು ಪ್ರದರ್ಶಿಸಿದ ಹಾಗೆ. ಈ ಸಂದರ್ಭದಲ್ಲಿ ಅನಂತಮೂರ್ತಿಯವರ ಕೊನೆಯದಾದ ಸ್ವರಾಜ್ ಕುರಿತಾದ ಪುಸ್ತಕದ ಬಗೆಗಿನ ನಿಮ್ಮ ಮೆಚ್ಚಿಗೆಯ ಕುರಿತು ನನಗೆ ಅಸಮಧಾನವಿದೆ. ಮೋದಿ ಮೇಲಿನ ಅಪ್ರಾಮಾಣಿಕ ದಾಳಿಯ  ವ್ಯರ್ಥ ಪ್ರಯತ್ನವದು.  ನಾನು ಯಾಕೆ ಇದನ್ನ ಅಪ್ರಾಮಾಣಿಕ ಎನ್ನುತ್ತೇನೆಂದರೆ ೨೦೦೨ ರಲ್ಲಿ ಗುಜರಾತಿನಲ್ಲಿ ನರಹತ್ಯೆಗಳು ನಡದಾಗ ಅದರ ವಿರುದ್ದ ಅನಂತಮೂರ್ತಿ ಸೊಲ್ಲೆತ್ತಿರಲಿಲ್ಲ. ಬಹುಷಃ ಆಗಿನ ಎನ್ ಡಿ ಎ ಸರ್ಕಾರದ ಋಣ ಅವರ ಬಾಯಿಯನ್ನ ಕಟ್ಟಿಹಾಕಿದ್ದಿರಬಹುದು. ನಾನೇ ಖುದ್ದು ಸಂದರ್ಶನವೊಂದರಲ್ಲಿ ಈ ಬಗ್ಗೆ ಅವರನ್ನು ಪ್ರಶ್ನಿಸಿದ್ದೆ. ಬಹುಷಃ ಅದು ಅವರ ಕೊನೆಯ ಸಂದರ್ಶನವೂ ಇರಬಹುದು. ಅವರ ಮೊದಲ ದಿನಗಳ ಬರವಣಿಗೆಯಿಂದ ಹಿಡಿದು , ಮೋದಿ ಪ್ರಧಾನಿಯಾಗುವ ತನಕದ ಅವರ ಸಾರ್ವಜನಿಕ ಸಂವಾದಗಳವರೆಗಿನ ಈ ಧೀರ್ಘ ಸಂದರ್ಶನವನ್ನ ನಾನೇ ಸಂಪಾದಿಸುತ್ತಿರುವ (೨೦೧೬ ರವರೆಗೆ ಆರು ವರ್ಷ ನಡೆಸಿ ನನ್ನ ಅನಾರೋಗ್ಯದ ಕಾರಣ ನಿಂತು, ಇದೀಗ ಮತ್ತೆ ಪುನರ್ ಪ್ರಕಟಗೊಳ್ಳುವ ಹಂತದಲ್ಲಿದೆ)  ಹೊಸ ಮನುಷ್ಯ ಪತ್ರಿಕೆಗಾಗಿ ಮಾಡಿದ್ದೆ.

ಇನ್ನು ಜೆ ಪಿ ಯವರನ್ನು ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಬೇಕೆಂಬ ಗಾಂಧಿಯವರ ಪ್ರಸ್ತಾಪದ ಕುರಿತು ನಿಮಗಿರುವ ಅನುಮಾನದ ಕುರಿತು. ಈ ವಿಷಯವನ್ನು ನೀವು ದೃಢೀಕರಿಸಿಸಿಕೊಳ್ಳುವಲ್ಲಿ ವಿಫಲವಾಗಿರುವುದಕ್ಕೆ ಸಾಕ್ಷಿಯ ಕುರಿತು ನಿಮ್ಮ ಪರಿಭಾಷೆಯಲ್ಲಿರುವ ಸಮಸ್ಯೆಯೇ ಕಾರಣ. ಅಧಿಕೃತ ಮೊಹರುಳ್ಳ ಕಾಗದದ ಚೂರನ್ನಷ್ಟೇ ನೀವು ಸಾಕ್ಷಿ ಎಂದು ಪರಿಗಣಿಸುತ್ತೀರೆಂದು ಕಾಣುತ್ತದೆ. ಈ ರೀತಿಯಲ್ಲಿ ನಿಮ್ಮ ಇತಿಹಾಸ ಕೇವಲ ’ಪವಿತ್ರೀಕರಿಸಲ್ಪಟ್ಟ’ ಇತಿಹಾಸವಾಗುತ್ತದೆಯಷ್ಟೇ. ದಿವಂಗತ ಮಿನೂ ಮಸಾನಿಯವರ ಪ್ರಾಮಾಣಿಕತೆಯನ್ನು ಕುರಿತು ನಿಮಗ್ಯಾವ ಅನುಮಾನವೂ ಇಲ್ಲವೆಂದು ಭಾವಿಸುತ್ತೇನೆ. ೪೦ ರ ದಶಕದ ಕೊನೆಯ ದಿನಗಳಲ್ಲಿ ನಡೆದ ರಾಜಕೀಯದಾಟಗಳನ್ನು ನಮ್ಮಿಬ್ಬರಿಗಿಂತ ಹತ್ತಿರದಿಂದ ನೋಡಿದ ಅವರು ” ಜೆ ಪಿ ಉತ್ತರವೇ?” (ಮ್ಯಾಕ್ ಮಿಲನ್) ಎಂಬ ಪುಸ್ತಕದಲ್ಲಿ ಹೀಗೆ ಬರೆದಿದ್ದಾರೆ:

ಅಧಿಕಾರ ಹಸ್ತಾಂತರದ ಮುನ್ನಾ ದಿನಗಳಲ್ಲಿ ನೆಹರೂಪಟೇಲ್ ರಿಂದ ಅಸಂತುಷ್ಟರಾಗಿದ್ದ ಗಾಂಧಿ, ಜೆಪಿ ಯನ್ನು ಕಾಂಗ್ರೆಸ್ ಅಧ್ಯಕ್ಷಗಿರಿಗೆ ಪರಿಗಣಿಸುವ ಮೂಲಕ ಕಾಂಗ್ರೆಸ್ ಅನ್ನು ಸಂಭಾಳಿಸುವ ಕುರಿತು ಆಲೋಚಿಸಿದ್ದರು. ಮೂಲಕ ಹೊಸ ಸರಕಾರದಲ್ಲಿ ಅಧಿಕಾರ ಪಡೆಯಲಿದ್ದ ನೆಹರೂ ಮತ್ತು ಪಟೇಲ್ ಮೇಲೆ ನಿಗಾ ಇರಿಸುವ ಆಲೋಚನೆ ಅವರಿಗಿತ್ತು. ಗಾಂಧಿ ಜೆಪಿಯ ಹೆಸರನ್ನು ಪ್ರಸ್ತಾಪಿಸಿದಾಗ ನೆಹರು ಪ್ರತಿಕ್ರಿಯಿಸಲಿಲ್ಲ. ಬದಲಿಗೆ ತಮಗೆ ಆತ್ಮೀಯರಾಗಿದ್ದ ಆಚಾರ್ಯ ನರೇಂದ್ರ ದೇವ ಹೆಸರನ್ನು ಸೂಚಿಸಿದರು. ನರೇಂದ್ರ ದೇವಾ ಸರ್ದಾರ್ ಪಟೇಲ್ ರಿಂದ ವೀಟೋ ಪಡೆದ ಕಾರಣ ಕೊನೆಯಲ್ಲಿ ಡಾ. ರಾಜೇಂದ್ರ ಪ್ರಸಾದ್ ಅಧ್ಯಕ್ಷರಾಗಿ ನೊಂದಾಯಿತರಾದರು

ಮಿನೂ ಮಸಾನಿ ಮಾತ್ರವಲ್ಲ, ಜೆಪಿ ಕುರಿತಾದ ಎಲ್ಲ ಜೀವನ ಚರಿತ್ರಕಾರರೂ (ನನ್ನ ಮೊದಲ ಪತ್ರದಲ್ಲಿ ಪ್ರಸ್ತಾಪಿಸಿರುವಂತೆ) ಗಾಂಧಿಯ ಈ ಪ್ರಸ್ತಾಪವನ್ನು ದಾಖಲಿಸಿದ್ದಾರೆ. ಇದನ್ನ ನಂಬುವುದು ಬಿಡುವುದು ನಿಮಗೆ ಬಿಟ್ಟದ್ದು. ನಿಮ್ಮ ಹೆಚ್ಚಿನ ಮಾಹಿತಿಗೆ : ಗೂಗಲ್ ಕೂಡ ಈ ಮಾಹಿತಿ ನೀಡುತ್ತದೆ. ನೀವು ಹೇಳಿದಂತೆ ೧೯೪೮ ರಲ್ಲಿ ಪಟ್ಟಾಭಿ ಸೀತಾರಾಮಯ್ಯ ಕಾಂಗ್ರೆಸ್ ನ ಅಧ್ಯಕ್ಷರಾಗಿದ್ದು ಹೌದು. ಆದರೆ ಅವರು ರಾಜೇಂದ್ರ ಪ್ರಸಾದ್ ನಂತರವೇ ಆ ಸ್ಥಾನವನ್ನ ಅಲಂಕರಿಸಿದ್ದು. ರಾಜೇಂದ್ರ ಪ್ರಸಾದ್ ನವೆಂಬರ್ ೧೯೪೭ ರಲ್ಲಿ, ಜೆ.ಬಿ ಕೃಪಲಾನಿಯವರ ರಾಜಿನಾಮೆಯ ನಂತರ ಕಾಂಗ್ರೆಸ್ ಅಧ್ಯಕ್ಷ ಗಾದಿಯನ್ನೇರಿದ್ದು.

ನಿಮ್ಮಂತಹ ಇತಿಹಾಸಕಾರರ ಮತ್ತು ರಾಜಕೀಯ ವಿದ್ವಾಂಸರ ಸಮಸ್ಯೆಯೆಂದರೆ ನೀವು ನೆಹರೂಗೆ ವಿರುದ್ಧವಾಗಿ ಬರುವ ಏನನ್ನೂ ನಂಬಲು ಬಯಸುವುದಿಲ್ಲ. ಸ್ವಾತಂತ್ರ್ಯನಂತರದ ಇತಿಹಾಸದ ರಚನೆಯ ದೊಡ್ಡ ಸಮಸ್ಯೆ ಇದು. ಇತಿಹಾಸದ ರಚನೆ ಮತ್ತು ಸಮಾಜವಾದಿ ಇತಿಹಾಸ ಇದರ ದೊಡ್ಡ ಬಲಿಪಶು. ಇದೇ ಕಾರಣಕ್ಕೇ-ಆದರೆ ಹೆಚ್ಚಿನ ಅಪಾಯಕಾರಿ ರಾಜಕೀಯ ಉದ್ದೇಶ ಸಾಧನೆಗಾಗಿ ಸಂಘ ಪರಿವಾರ ಈ ಬಗೆಯ ಒಂದೆಡೆಗೆ ವಾಲಿಕೊಂಡ ಇತಿಹಾಸ ರಚನೆಯ ವಿರುದ್ಧ ಪ್ರಚಾರಾಂದೋಲನ ನಡೆಸುತ್ತಿದೆ. ಈ ಅರ್ಥದಲ್ಲಿ ಹಿಂದುತ್ವದ ಶಕ್ತಿಗಳು ಅಪಾಯಕಾರಿಯಾಗಿ ಬೆಳೆಯಲು ಈ ಇತಿಹಾಸಕಾರರೂ ಕಾರಣರಾಗಿದ್ದಾರೆ.

ಸಮಾಜವಾದಿ ಇತಿಹಾಸ ಬರೆಯಲು ನೀವು ನನಗೆ ಸಲಹೆ ನೀಡಿದ್ದೀರಿ. ನಾನೀಗಾಗಲೇ ಕನ್ನಡದಲ್ಲಿ ಈ ಕುರಿತು ಸಾಕಷ್ಟು ಬರೆದಿದ್ದೇನೆ. ಅದನ್ನ ಇತಿಹಾಸವೆಂದು ಕರಾರುವಾಕ್ಕಾಗಿ ಹೇಳಲಾಗುವುದಿಲ್ಲವೇನೋ! ಜೆಪಿ ಮತ್ತು ಲೋಹಿಯಾ ಕುರಿತೂ ಸಂಕ್ಷಿಪ್ತ ಜೀವನ ಚರಿತ್ರೆಗಳನ್ನೂ ಬರೆದಿದ್ದೇನೆ. ಇಂಗ್ಲೀಷ್ನಲ್ಲಿ ನಾನು ಪರಿಣಿತನಲ್ಲ ಹಾಗಾಗಿ ನಾನು ಬರೆಯಲಾರೆ. ನಮ್ಮ ಈ ಮಾತುಕತೆಯಲ್ಲೇ ನಿಮಗಿದಕ್ಕೆ ಸಾಕಷ್ಟು ಪುರಾವೆ ಸಿಗುತ್ತದೆ. ಇಂಗ್ಲೀಷ್ ನಲ್ಲಿ ಬರೆಯುವುದು ಹೆಚ್ಚು ತ್ರಾಸದಾಯಕ. ಈ ಕಾರಣಕ್ಕೆ ನಿಮ್ಮಂತಹವರು ಸ್ಥಳೀಯ ಭಾಷೆ ಕೊನೆಯ ಪಕ್ಷ ಮಾತನಾಡಲಾದರೂ ಕಲಿಯಬೇಕೆಂದು ನಾನು ಅಪೇಕ್ಷಿಸುತ್ತೇನೆ. ಆಗಲಾದರೂ ನಾವು-ನೀವು ಸ್ಪಷ್ಟವಾಗಿ, ಮುಕ್ತವಾಗಿ ವಿಷಯಗಳನ್ನು ಹಂಚಿಕೊಳ್ಳಬಹುದು.

ಸದ್ಯಕ್ಕೆ ಈ ಮಾತುಕತೆಯನ್ನ ಇಲ್ಲಿಗೆ ನಿಲ್ಲಿಸುವುದು ಒಳಿತೆಂದು ಅಂದುಕೊಳ್ಳುತ್ತೇನೆ. ಈ ಪತ್ರ ವ್ಯವಹಾರದಲ್ಲಿ ನಾನು ಸಾಕಷ್ಟು ಕಲಿತೆ ಮತ್ತು ಸಾಕಷ್ಟನ್ನು ಅರಿತೆ. ನನ್ನ ತಪ್ಪು ತಪ್ಪಾದ ಇಂಗ್ಲೀಷ್ ನಿಂದ ನಿಮಗೆ ತೊಂದರೆಯಾಗಿದ್ದಲ್ಲಿ ಕ್ಷಮೆ ಇರಲಿ.

ನಿಮ್ಮ ,

ಡಿ ಎಸ್ ನಾಗಭೂಷಣ್


ಗುಹಾ ಅವರ ಪ್ರತಿಕ್ರಿಯೆ:

10.10. 2017

ಪ್ರಿಯ ಶ್ರೀ ನಾಗಭೂಷಣ,

(ಇಂಗ್ಲಿಷ್ ಭಾವಿಯ) ಮುದ್ದು ಕಪ್ಪೆಗಳ ಸ್ಥಾನದಿಂದ ನಾನು ಇದೀಗ ಹಿಂದುತ್ವದ ಉತ್ತಥಾನಕ್ಕೆ ಕಾರಣವಾದ ಇತಿಹಾಸಕಾರನಾಗಿಬಿಟ್ಟಿರುವೆ. ನಿಮ್ಮಂತಹ ದಿಟ್ಟ ವಿದ್ವಾಂಸರಿಗೆ ಇಂತಹ ವೈಯಕ್ತಿಕ ನಿಂದನೆಗಳು ಶೋಭೆ ತರುವುದಿಲ್ಲ.

ನಿಮ್ಮ ಇಂಗ್ಲೀಷ್ ಸರಾಗವಾಗಿದೆ. ಲೋಹಿಯಾ, ಜೆಪಿ, ಗಾಂಧಿ, ಅಂಬೇಡ್ಕರ್, ಟಾಗೋರ್ರಂತೆ ನಿಮ್ಮ ಮಾತೃಭಾಷೆಯ ಜೊತೆಗೆ ನಮ್ಮನ್ನಾಳಿದವರ ಭಾಷೆಯಲ್ಲೂ ನಿಮ್ಮನ್ನು ಅಭಿವ್ಯಕ್ತಿಸಿಕೊಳ್ಳುವ ಸಾಮರ್ಥ್ಯ ನಿಮಗಿದೆ.   ಇವರೆಲ್ಲ ತಮ್ಮ ಸಾಂಸ್ಕೃತಿಕ ಲೋಕದ ಆಚೆಗೆ ಜಿಗಿಯಲು ಇಂಗ್ಲೀಷಿನಲ್ಲಿ ಬರೆದರು. ನೀವು ಸಮಾಜವಾದಿ ಪರಂಪರೆಯ ಕುರಿತಾದ ಜ್ಞಾನ ಮತ್ತು ತಿಳುವಳಿಕೆಯನ್ನು ಪುಸ್ತಕ ರೂಪದಲ್ಲಿ ತಂದರೆ ಅದು ಭಾರತೀಯರಿಗೆ ಮಾಡುವ ದೊಡ್ಡ ಸೇವೆ ಎಂದೇ ನಾನು ಭಾವಿಸುವೆ. ಈ ಸುಕಾರ್ಯಕ್ಕೆ ಮಧ್ಯೆ ನಿಮ್ಮ ಅಭಿಮಾನ ನಡುವೆ ಬಾರದಿರಲಿ.

ಇಂತಿ,

ಗುಹಾ


ಡಿಎಸ್ಸೆನ್ ಉತ್ತರ :

ಪ್ರಿಯ ಗುಹಾ,

ಕ್ಷಮಿಸಿ ಸ್ವಾಮಿ.. ನನ್ನ ಇಂಗ್ಲೀಷ್ ಎಷ್ಟು ಬಡವಾಗಿದೆಯೆಂದರೆ ನಿಮ್ಮ ಮೇಲಿನ ಪತ್ರದ ಎರಡನೇ ಸಾಲೇ ನನಗೆ ಅರ್ಥವಾಗಲಿಲ್ಲ. ವಿದ್ವಾಂಸನೆನಿಸಿಕೊಳ್ಳುವ ಯಾವ ಅರ್ಹತೆಯೂ ನನ್ನಲ್ಲಿಲ್ಲ ಎಂದು ನೀವು ಹೇಳುತ್ತಿರುವಿಯಾದರೆ ನೀವು ಹೇಳುತ್ತಿರುವುದು ಸರಿಯೇ!

ಹೌದು ನಿಮ್ಮಂತಹ ಇತಿಹಾಸಕಾರರಿಂದ ದೇಶದಲ್ಲಿ ಹಿಂದುತ್ವದ ಗುಂಪುಗಳ ಶಕ್ತಿ ಹೆಚ್ಚಿದೆ ಎಂದೇ ನಾನು ಹೇಳುತ್ತಿರುವುದು. ಇದನ್ನು ಒಪ್ಪುವುದು ಅಥವಾ ತೆಗೆದು ಹಾಕುವುದು ನಿಮಗೆ ಬಿಟ್ಟದ್ದು. ಇಂಗ್ಲೀಷ್ ನಲ್ಲಿ ಬರೆಯುವುದು ತಪ್ಪು ಅಥವಾ ಒಪ್ಪಿತವಲ್ಲ ಎಂದು ನಾನೆಲ್ಲೂ ಹೇಳಿಲ್ಲ. ನಾನು ಹೇಳುತ್ತಿರುವುದು ನೀವು ಇಂಗ್ಲೀಷ್ ಬಿಟ್ಟು ಬೇರೆ ಯಾವುದೇ ಭಾರತೀಯ ಭಾಷೆಯಲ್ಲಿ ಬರೆಯಲಾಗದ ವಿಕಲ ಸ್ಥಿತಿಯಲ್ಲಿರುವ ಕಾರಣ ನಾನು ಇಂಗ್ಲೀಷ್ನಲ್ಲಿ ಬರೆಯಬೇಕಾಗಿರುವ ಶೋಚನಿಯ ಸ್ಥಿತಿ ಬಂದಿದೆ ಎಂದಷ್ಟೆ. ಇಂಗ್ಲೀಷ್ ಕಲಿಕೆ ಮತ್ತು ಮಾತೃಭಾಷಾ ಕಲಿಕೆಯ ಕುರಿತಂತೆ ಗಾಂಧಿ ಮತ್ತು ಅವರ ಸ್ನೇಹಿತ ಪೊಲಾಕ್ ನಡುವೆ ನಡೆದ ಸಂಭಾಷಣೆಯನ್ನೊಮ್ಮೆ ಗಾಂಧಿ ಆತ್ಮಕತೆಯಲ್ಲಿ ಓದಿ.

ಇಂತಿ,

ಡಿ ಎಸ್ ಎನ್


ಗುಹಾ ಅವರ ಪ್ರತಿಕ್ರಿಯೆ:

೧. ಶ್ರೀ ನಾಗಭೂಷಣ್.

ಧನ್ಯವಾದಗಳು- ಗಾಂಧಿ ಪೊಲಾಕ್ ಚರ್ಚೆಯ ಬಗ್ಗೆ ನನಗೆ ತಿಳಿದಿದೆ. ಇದರ ಕುರಿತು ೨೦೧೧ ರಲ್ಲಿ ನಾನು ಬರೆದಿರುವೆ.

http://ramachandraguha.in/archives/a-question-of-english-the-telegraph.html

ನಿಮ್ಮಂತಹ ದ್ವಿಭಾಷೀಯ ಭಾರತೀಯರು  (ಗಾಂಧಿ ಲೋಹಿಯಾರಂತೆ) ಎರಡೂ ಭಾಷೆಗಳಲ್ಲಿ ಸಂವಹಿಸಬಲ್ಲಿರಿ. ಹಾಗಂತ ನನ್ನ ಮಾತನ್ನು ತಳ್ಳಿಹಾಕಬೇಡಿ.

ಹಿಂದುತ್ವದ ಉತ್ಥಾನನನದ ಬಗ್ಗೆ ಯಾರ್ಯಾರು ಕಾರಣಕರ್ತರಾಗಿದ್ದಾರೆ ಎಂಬ ಬಗ್ಗೆ.

೧. ಕಾಂಗ್ರೆಸ್ ವಿರೋಧದ ಕುರಿತು ಒಲವು ಹೊಂದಿದ್ದ ಲೋಹಿಯಾ ಸಮಾಜವಾದಿ ಮತ್ತು ಜನಸಂಘದೊಂದಿಗೆ ೧೯೬೭ರಲ್ಲಿ ರಚಿಸಿದ ಒಕ್ಕೂಟ ಹಿಂದುತ್ವದ ುತ್ಥಾನಕ್ಕೆ ಕಾರಣವಾಯಿತು.

೨. ಇಂದಿರಾ ವಿರೋಧಿ ಚಳುವಳಿಯಲ್ಲಿ ಜೆಪಿ, ಆರ್ ಎಸ್ ಎಸ್ ಅನ್ನು ಒಳಸೇರಿಸಿಕೊಂಡಿದ್ದು ಮತ್ತವರಿಗೆ ದೇಶಪ್ರೇಮದ ಅರ್ಹತಾ ಪತ್ರ ಕೊಟ್ಟದ್ದು ಹಿಂದುತ್ವ ಉತ್ಥಾನಕ್ಕೆ ಸಹಕಾರಿಯಾಯಿತು.

ಪ್ರತಿಷ್ಠಿತ ಭಾಷೆ ಇಂಗ್ಲೀಷ್ ನಲ್ಲಿ ಬರೆಯುವ ವಿದ್ವಾಂಸರ ಮಾತುಗಳಿಗಿಂತ ನೀವು ಮೆಚ್ಚುವ ರಾಜಕಾರಣಿಗಳ ಈ ಎರಡು ನಡೆಗಳು ಹೆಚ್ಚು ಅಗತ್ಯವಾಗಿ ವಿಮರ್ಶಿಸಲ್ಪಡಬೇಕಾದ ವಿಷಯ

ನೀವು ಈ ಅಂಶವನ್ನು ಒತ್ತಿ ಹೇಳಿದ ಕಾರಣ ಇವತ್ತಿನ ಪತ್ರಿಕೆಯನ್ನು ದಯಮಾಡಿ ಓದಿ. ಮಲ್ಲೆಶ್ವರಂ ಪೋಲಿಸ್ ಠಾಣೆಯಲ್ಲಿ ಹಿಂದುತ್ವವಾದಿಗಳು …. ಬಿಜೆಪಿ ಮತ್ತು ಆರ್ ಎಸ್ ಎಸ್ ಅಂತೂ ನನ್ನನ್ನು ಖಂಡಿತ ತಮ್ಮ ಹಿಂದುತ್ವದ ಸ್ನೇಹಿತನೆಂದು ಒಪ್ಪಿಕೊಳ್ಳಲಾರರು. ಬದಲಿಗೆ ಅವರು ಆಗಾಗ ನನ್ನನ್ನು ಬೆದರಿಸುತ್ತಲಿರುತ್ತಾರೆ.

ಇರಲಿ..

ಈ ಮಾತಿನ ಚಲಮಕಿಯನ್ನೆಲ್ಲ ಬಿಟ್ಟು ನಮ್ಮಿಬ್ಬರಿಗೂ ಬೇಕಾದ ವಿಚಾರಗಳ ಕುರಿತು ಯೋಚಿಸೋಣ. ನಮ್ಮ ಯುವ ಮನಸ್ಸುಗಳು ನಮ್ಮ ಸಮಾಜವಾದಿ ಸಂಪ್ರದಾಯದ ಇತಿಹಾಸ, ನಡೆದು ಬಂದ ಹಾದಿ, ಸಮಕಾಲೀನ ಪ್ರಸ್ತುತತೆಗಳ ಕುರಿತು ತಿಳಿದುಕೊಳ್ಳಬೇಕೆಂದು ನಾವಿಬ್ಬರೂ ಬಯಸುತ್ತೇವೆ. ಹಾಗಾಗಿ ನಾನು ಹಿಂದಿನ ಪತ್ರದಲ್ಲಿ ವಿವರಿಸಿದ ಪ್ರಸ್ತಾವನೆಗಳನ್ನು ಸಹಾನುಭೂತಿಯಿಂದ ನೋಡಿ.

ಇಂತಿ,

ರಾ.ಗುಹಾ

೨. ಪ್ರಿಯ ಶ್ರೀ ನಾಗಭೂಷಣ್,

ಈ ಕೆಳಗಿನ ಈ ಮೇಲ್ ನೋಡಿ. ನಾನು ಈ ಯುವ ವಿದ್ವಾಂಸನನ್ನು ನಿಮ್ಮ ಬಳಿ ಕಳುಹಿಸಲೇ? ನಿಮ್ಮ ಸಲಹೆ, ಪ್ರೋತ್ಸಾಹ ಈತ ತೆಗೆದುಕೊಂಡಿರುವ ಈತನಿಗೆ ಸಹಕಾರಿಯಾಗಬಲ್ಲದು.

ಇಂತಿ,

ಗುಹಾ

3 . ಪ್ರಿಯ ಶ್ರೀ ನಾಗಭೂಷಣ್,

ನಿಮ್ಮ ಮಾತುಗಳಿಂದ ಪ್ರೇರಿತನಾಗಿ ನಾನು ಗಾಂಧಿಯವರ ಸಂಗ್ರಹಿತ ಬರಹಗಳನ್ನು ನೋಡಿದೆ. ನೀವು ಹೇಳಿರುವುದು ಸರಿ. ೧೯೪೮ ರ ಜನವರಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಗಾದಿಗೆ ಜೆ.ಪಿ ಹೆಸರು ಚರ್ಚೆಗೆ ಬಂದಿದ್ದು ಹೌದು. ಇದು ನಿಜವಾಗಿ ಆಗಿದ್ದರೆ ನೆಹರೂ ಇದನ್ನು ಸ್ವಾಗತಿಸಿರುತ್ತಿದ್ದರು ಎಂಬ ನನ್ನ ಅನುಮಾನವೂ ನಿಜವಾಗಿದೆ. ನೆಹರೂ ಅಧ್ಯಕ್ಷ ಹುದ್ದೆಗೆ ರಾಜಿನಾಮೆ ನೀಡಿದಾಗ ಸಮಾಜವಾದಿ ಮುಖಂಡನೇ ಅಧ್ಯಕ್ಷನಾಗಬೇಕೆಂದು ಬಯಸಿ ನರೇಂದ್ರ ದೇವ ಅವರ ಹೆಸರನ್ನು ಪ್ರಸ್ತಾಪಿಸಿದಂತೆ ಕಾಣುತ್ತದೆ. ಗಾಂಧಿ ಇದಕ್ಕೆ ಜೆಪಿ ಯವರನ್ನೇ ಉತ್ತರಾಧಿಕಾರಿಯಾಗಿ ನೇಮಿಸಬಹುದೆಂದು ಪ್ರತಿಕ್ರಿಯಿಸಿದ್ದಾರೆ. (ನರೇಂದ್ರ ದೇವರಿಗಿಂತ ಜೆ.ಪಿ ನೆಹರೂಗೆ ಹೆಚ್ಚು ಹತ್ತಿರವಾಗಿದ್ದರು.) ನೆಹರೂವಿನ ಈ ಪ್ರಸ್ತಾಪ, ಗಾಂಧಿಯ ತಿದ್ದುಪಡಿಯೊಂದಿಗೆ ಕಾಂಗ್ರೆಸ್ ನ ಮುಂದೆ ಬಂದಾಗ ಪಟೇಲ್ ಬಣದವರು ನರೇಂದ್ರ ದೇವ ಅಥವಾ ಜಿಎಪಿ ಯಾವುದೇ ಸಮಾಜವಾದಿಯನ್ನು ಅಧ್ಯಕ್ಷನಾಗಿ ನೇಮಿಸುವುದನ್ನ ಬೆಂಬಲಿಸಲಿಲ್ಲ.

ಆಗ ಹಿಂದು-ಮುಸ್ಲಿಂ ಐಕ್ಯತೆಯ ಕುರಿತಾದ ವಿಚಾರದಲ್ಲಿ ನಿರತರಾಗಿದ್ದ ಗಾಂಧಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಗಳ ಸಭೆಗಳಲ್ಲಿ ಭಾಗವಹಿಸಲಾಗುತ್ತಿರಲಿಲ್ಲ ಎಂಬ ವಿಚಾರ ಕೆಲವು ಮೂಲಗಳಿಂದ ತಿಳಿದುಬರುತ್ತದೆ. ಪ್ರೇಮಾಬೆನ್ ಕಂಟಕ್‌ಗೆ ಬರೆದ ಪತ್ರದಲ್ಲಿ ಗಾಂಧಿ ಹೀಗೆನ್ನುತ್ತಾರೆ. “ನನಗೆ ತಿಳಿದ ಮಟ್ಟಿಗೆ ಜಯಪ್ರಕಾಶ್ ರ ನಿಲುವು ಮತ್ತು ಸಿದ್ದಾಂತಗಳು ಈ ದೇಶಕ್ಕೆ ಮಾರಕವೇನಲ್ಲ ಆದರೆ ಅವರ ವಿಧಾನಗಳ ಮಟ್ಟಿಗೆ ಹೀಗೆ ಹೇಳಬರುವುದಿಲ್ಲ. ಒಂದು ವೇಳೆ ಅವರು ಅಧ್ಯಕ್ಷರಾದಲ್ಲಿ ಕಾಂಗ್ರೆಸ್ ಸಿದ್ದಾಂತಗಳನ್ನು ಒಪ್ಪಿಕೊಳ್ಳಬೇಕಾಗುತ್ತದೆ. ತಮಗೆ ಬಂದ ವಿರೋಧದ ಕಾರಣದಿಂದ ಅಧ್ಯಕ್ಷ ಗಾದಿಯನ್ನ ಅವರು ತಿರಸ್ಕರಿಸುವುದು ಬುದ್ದಿವಂತ ನಿರ್ಧಾರ. ಪಕ್ಷದ ಅಧಿಕೃತ ತೀರ್ಮಾನಗಳನ್ನು ಹೊರಗಿನಿಂದ ವಿರೋಧಿಸಿದ ಮನುಷ್ಯನೊಬ್ಬ ಪಕ್ಷದೊಳಗಿನಿಂದ ಇಡೀ ದೇಶದ ಅಧ್ಯಕ್ಷನಾಗಬೇಕಾಗಿ ಬಂದಾಗ ತನ್ನೊಳಗೆ ಸ್ವಲ್ಪ ಮಾತ್ರ ದೇಶಪ್ರೇಮವಿದ್ದರೂ ಆ ಪದವಿಯನ್ನು ಬಿಟ್ಟು ಬಿಡುತ್ತಾನೆ. “. ಬೇರೆ ಪದಗಳಲ್ಲಿ ಹೇಳುವುದಾದರೆ ಜೆಪಿ ಕಾಂಗ್ರೆಸ್ ಅಧ್ಯಕ್ಷರಾಗಲು ಒಪ್ಪಿಕೊಂಡಿದ್ದಲ್ಲಿ ತಮ್ಮ ಸಮಾಜವಾದಿ ಸಿದ್ದಾಂತವನ್ನೇ ಬಿಟ್ಟುಕೊಡಬೇಕಾಗಿ ಬರುತ್ತಿತ್ತು.

ಈ ಪತ್ರದಲ್ಲಿ ಗಾಂಧಿ ಮುಂದುವರೆದು ” ಸಮಾಜವಾದಿಗಳು ನನ್ನ ಪ್ರಕಾರ ನಿಸ್ವಾರ್ಥರು, ಬದ್ದತೆಯುಳ್ಳವರು ಮತ್ತು ಧೈರ್ಯವಂತರು. ” ಎಂದು ಹೇಳುತ್ತಾರೆ. ಜೊತೆಗೆ ಈ ಮಾತುಗಳನ್ನೂ ಸೇರಿಸುತ್ತಾರೆ.

” ಅವರೇನು ಮಾಡುತ್ತಿದ್ದಾರೆಂದು ನನಗೆ ತಿಳಿದಿಲ್ಲ. ದಿನಪತ್ರಿಕೆಯಲ್ಲಿ ಬರುವ ಸುದ್ದಿಗಳಷ್ಟೇ ಸಾಕೆಂದು ಭಾವಿಸುವುದಾದರೆ ನನಗೆ ಅವರ ಬಗ್ಗೆ ತಿಳಿದಿರುವುದೂ ಅಷ್ಟೇ.” ಈ ಮಾತು ನಿಮ್ಮನ್ನು ರೇಗಿಸಿದ ನನ್ನ ವಾದಕ್ಕೆ ಪೂರಕವಾಗಿದೆ. ಗಾಂಧಿಗೆ ಸಮಾಜವಾದಿಗಳ ಮೇಲೆ ಗೌರವಾದಾರಗಳಿದ್ದರೂ ಅವರ ಆತ್ಮೀಯ ಬಳಗದಲ್ಲಿ ಅವರಿರಲಿಲ್ಲ. ಮತ್ತೊಂದು ಕಡೆ ಗಾಂಧಿ ಜೀವನದ ಕೊನೆಯ ತಿಂಗಳಿನಲ್ಲಿ ಕಾಂಗ್ರೆಸ್ ಅಧ್ಯಕ್ಷ ಗಾದಿಗೆ ಜೆಪಿ ಒಬ್ಬ ಸ್ಪರ್ಧಿ ಆಗಿದ್ದರು ಎಂಬ ನಿಮ್ಮ ಮಾತು ಸರಿಯಾಗಿದೆ. ಇದು ನನ್ನ ಗಮನಕ್ಕೆ ಬಂದಿರಲಿಲ್ಲ.

ಈ ಹೊಸ ವಿಚಾರವನ್ನು ತಿಳಿಸಿಕೊಟ್ಟದ್ದಕ್ಕಾಗಿ ಧನ್ಯವಾದಗಳು.

ಇಂತಿ,

ರಾ.ಗುಹಾ


ಡಿ ಎಸ್ ಎನ್ ಪ್ರತಿಕ್ರಿಯೆ:

ಅಭಿನಂದನೆಗಳು ಗುಹಾಜಿ! ಕೊನೆಗೂ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಹುದ್ದೆಗೆ ಜೆಪಿ ಯ ಹೆಸರನ್ನು ಗಾಂಧಿ ಪ್ರಸ್ತಾಪಿಸಿದ್ದರು ಎನ್ನುವ ವಿಷಯಕ್ಕೆ ನಿಮಗೆ ಸಾಕ್ಷಿ ಸಿಕ್ಕಿದೆ. ಆ ಸಾಕ್ಷಿಯ ಮೂಲಕ ಗಾಂಧಿ ಸಮಾಜವಾದಿಗಳಿಗೆ ಅವರೊಂದಿಗೆಮಾತುಕತೆ ನಡೆಸುವಷ್ಟು ಹತ್ತಿರವಾಗಿರಲಿಲ್ಲ ಎಂಬ ಮಾತನ್ನು ನಿಮಗೆ ನೀವು ಮನವರಿಕೆಮಾಡಿಕೊಂಡಿದ್ದಕ್ಕೂ ಅಭಿನಂದನೆಗಳುಧನ್ಯವಾದಗಳು.

ಹೌದು, ಈಗ ನಿಮ್ಮ ಪ್ರಕಾರ ಗಾಂಧಿಯೊಂದಿಗೆ  ಮಾತುಕೆ ನಡೆಸಿದ ಪ್ರಮುಖರಾದ ಭಗತ್ ಸಿಂಗ್/ ಸಾವರ್ಕರ್, ಜಿನ್ನಾ ಮತ್ತು ಅಂಬೇಡ್ಕರ್‌ಗಿಂತ ನಿಮ್ಮ ಪ್ರಕಾರ ಅವರೊಡನೆ ಪ್ರಮುಖ ಮಾತುಕತೆಗಳಳಲ್ಲಿ ಭಾಗಿಯಾಗದ  ಗಾಂಧಿಗೆ ಹೆಚ್ಚು ಹತ್ತಿರವಿದ್ದರೋ ಅಥವಾ ನಿಮ್ಮ ಪ್ರಕಾರ ಗಾಂಧಿಯೊಂದಿಗೆ ಪ್ರಮುಖ ಮಾತಕತೆ ನಡೆಸದ ಸಮಾಜವಾದಿಗಳು  ಅವರಿಂದ ದೂರವಿದ್ದರು ಎಂದು ನೀವು ತೀರ್ಮಾಸಿಸಿಕೊಳ್ಳಳು ಸ್ವತಂತ್ರರಿದ್ದೀರಿ!

ಇಂತಿ,

ಡಿ ಎಸ್ ಎನ್


ಗುಹಾ ಅವರ ಪ್ರತಿಕ್ರಿಯೆ:

11.10.2017

ಶ್ರೀ ನಾಗಭೂಷಣ್ 

ಜಿನ್ನಾ ಮತ್ತು ಅಂಬೇಡ್ಕರ್ ಜೊತೆ ಗಾಂಧಿಯ ಮಾತುಕತೆಗಳು ಈ ದೇಶದ ಹಿತದೃಷ್ಠಿಯಿಂದ ಮಹತ್ವದ್ದೆಂದು ನೀವು ಒಪ್ಪದೇ ಇರಲಾರಿರಿ ಎಂದು ನಂಬಿದ್ದೇನೆ. ನಿಮ್ಮನ್ನು ಆ ದಿನ ಬೇಸರಕ್ಕೊಡ್ಡಿದ ವಿಚಾರ ಬಹುಷಃ ಸಮಾಜವಾದಿಗಳ ಬದಲಿಗೆ, ಗಾಂಧಿ ಶಸ್ತ್ರಸಹಿತ ಕ್ರಾಂತಿಕಾರಿಗಳೊಂದಿಗೆ ನಡೆಸಿದ ವಾದಗಳನ್ನು ನಾನು ಪ್ರಸ್ತಾಪಿಸಿದ್ದು ಆಗಿರಬಹುದು. ಇದಕ್ಕೆ ಕಾರಣ ತೀರ ಸರಳವಾಗಿದೆ. ೨೦೧೭ರ ಭಾರತದಲ್ಲಿ ನಮ್ಮ ಯುವಜನರಿಗೆ ಭಗತ್ ಸಿಂಗ್ ಮತ್ತು ಮಾವೋವಾದಿಗಳ ವಿಧಿ ವಿಧಾನಗಳ ಮೇಲೆ ಒಂದು ಬಗೆಯ ಪ್ರೇಮವಿದೆ. ಈ ಹಿಂಸಾತ್ಮಕ ರಾಜಕೀಯದೆಡೆ ಒಲವು ಹೆಚ್ಚುತ್ತಿರುವ ಹೊತ್ತಿನಲ್ಲಿ ಅಹಿಂಸೆಯ ಮಾರ್ಗಗಳನ್ನು ಸಮರ್ಥನೆ ಮಾಡಿಕೊಳ್ಳುವುದು ಅತ್ಯಗತ್ಯ.

ನಿಮ್ಮ ಅಭಿಮಾನಕ್ಕಾದ ಧಕ್ಕೆಯ ನೋವಿನಿಂದ ನೀವು ಹೊರಬರುತ್ತಿರೆಂದು ಆಶಿಸುತ್ತೇನೆ. ಸಮಾಜವಾದಿಗಳಿಗೆ ಈ ದೇಶದ ಸದ್ಯ ಮತ್ತು ಭವಿಷ್ಯದ ರಾಜಕೀಯ ಪರಿಧಿಯಲ್ಲಿ ಸರಿಯಾದ ನ್ಯಾಯ ಸಿಗಬೇಕೆಂದು ನಿಮ್ಮಂತೆ ನಾನೂ ಬಯಸುತ್ತೇನೆ. ಇದಕ್ಕೆ ನಿಮ್ಮ ನೆರವೂ ಬೇಡುತ್ತೇನೆ. ಸಮಾಜವಾದದ ಕುರಿತ ನಿಮ್ಮ ಬರಹಗಳ ಸಂಗ್ರಹವನ್ನ ಇಂಗ್ಲೀಷಿನಲ್ಲಿ ಭಾಷಾಂತರಿಸಿ ಇನ್ನೂ ಹೆಚ್ಚಿನ ಜನರಿಗೆ ತಲುಪಿಸುವ ಕುರಿತು ಯೋಚಿಸುವಿರಾ? ಭಾರತೀಯ ಸಮಾಜವಾದದ ಇತಿಹಾಸದ ಕುರಿತ ಸಂಶೋಧನೆಯಲ್ಲಿ ನಿರತರಾಗಿರುವ ಈ ಯುವಕನ ಬಳಿ ಮಾತನಾಡುತ್ತೀರಾ? ಮೊದಲನೆಯದಾಗದಿದ್ದರೂ .. ಎರಡನೆಯದು..? ಅಥವಾ ಎರಡೂ..?

ಇಂತಿ,

ರಾ. ಗುಹಾ


ಡಿ ಎಸ್ ಎನ್ ಪ್ರತಿಕ್ರಿಯೆ:

11.10.2017

ಪ್ರೀತಿಯ ಶ್ರೀ ಗುಹಾ,

ನನ್ನ ಉದ್ದನೆಯ ಪತ್ರಗಳಿಗೆ (ಇದಕ್ಕೆ ನಿಮ್ಮ ಸಹಕಾರವೂ ಇದೆ) ಏನೇನೋ ಕಾರಣಗಳನ್ನು ಊಹಿಸಬೇಡಿರಿ.. ಆ ದಿನ ನನ್ನ ಪ್ರಾಥಮಿಕ ಪ್ರಶ್ನೆ, ಆ ನಾಲ್ಕು ಮಾತುಕತೆಗಳನ್ನೇ ಗಾಂಧಿಯ ಪ್ರಮುಖ ಮಾತೆಗಳೆಂದು ನೀವು ಆಯ್ಕೆ ಮಾಡಿಕೊಂಡಿದ್ದಕ್ಕ ಮತ್ತು ಅ ನಾಲ್ಕು ಮಾತುಕತೆಗಳೇ ಅವರ ಜೀವನದ ಪ್ರಮುಖ ಮಾತುಕತೆಗಳೆಂದು ನೀವು ಭಾವಿಸಲು ಏನಾದರೂ ನಿರ್ದಿಷ್ಟ ಕಾರಣಗಳಿವೆಯೇ ಎಂಬುದನ್ನು ತಿಳಿಯುವುದಾಗಿತ್ತು. ಸಮಾಜವಾದಿ ಚಳುವಳಿಯೊಂದಿಗೆ ಸಹಾನುಭೂತಿ ಹೊಂದಿದವನಾಗಿ , ಗಾಂಧಿ ಸಮಾಜವಾದಿಗಳೊಂದಿಗೆ ನಡೆಸಿದ ಮಾತುಕತೆ ನಿಮಗೇಕೆ ಪ್ರಮುಖವಾದದ್ದೆಂದೆನಿಸಲಿಲ್ಲ ಎಂಬುದನ್ನೂ ತಿಳಿದುಕೊಳ್ಳಬಯಸಿದ್ದೆ. ನನ್ನ ಅನುಮಾನಗಳಿಗೆ ವಸ್ತುನಿಷ್ಠವಾಗಿ ಆಗಿ ಪ್ರತಿಕ್ರಿಯಿಸುವ ಬದಲು ನನ್ನ ಪ್ರಶ್ನೆಯನ್ನು ಆಧುನಿಕ ಭಾರತದ ಇತಿಹಾಸದ ಮೇಲಿನ ನಿಮ್ಮ ಅಧಿಕಾರವನ್ನು ಪ್ರಶ್ನಿಸುತ್ತಿದ್ದೇನೇನೋ ಎಂಬಂತೆ ನೀವು ವರ್ತಿಸಿದಿರಿ. ಗಾಂಧಿ ಸಮಾಜವಾದಿಗಳೊಂದಿಗೆ ಹತ್ತಿರವಾಗಿರಲಿಲ್ಲ ಎಂಬ ನಿಮ್ಮ ವಾದಕ್ಕೆ ಪುಷ್ಠಿ ನೀಡಲು ಪ್ರಾರಂಭಿಸಿದಿರಿ. ಈ ಮಾತನ್ನ ನಾನಿಗಲೂ ಒಪ್ಪುತ್ತಿಲ್ಲ. ಏಕೆಂದರೆ ಇತಿಹಾಸದ ಕುರಿತ ನನ್ನ ಓದು ನನಗೆ ಬೇರೆಯದೇ ಕತೆ ಹೇಳುತ್ತಿದೆ. ಹಾಗಾಗಿ ಇಲ್ಲಿ ಬೇಸರಗೊಳ್ಳುವ ಅಥವಾ ನೋವುಗೊಳ್ಳುವ ಪ್ರಶ್ನೆ ಎಲ್ಲಿ ಉದ್ಭವಿಸುತ್ತದೆ.?

***

ಇಂಗ್ಲೀಶಿನಲ್ಲಿ ಮಾತ್ರ ಬರೆಯುವ ಲೇಖಕರನ್ನೂ- ಎಚ್.ರಾಜಾರಾವ್, ಆರ್ .ಕೆ ನಾರಾಯಣ್, ಮುಲ್ಕ್ ರಾಜ್ ಆನಂದ್, ವಿಕ್ರಂ ಸೇತ್, ಅರುಂಧತಿ ರಾಯ್ ಇತ್ಯಾದಿ-ನಾನು ಓದುತ್ತೇನೆ. ನಿಮ್ಮನ್ನೂ ಓದುತ್ತೇನೆ. ಆದರೆ ಅವರು ಇಂಗ್ಲೀಶ್ ನಲ್ಲಿ ಬರೆಯುತ್ತಾರೆಂಬ ಕಾರಣಕ್ಕೆ ನಾನು ಅವರ ಬರಹಗಳಿಗೆ ಇಲ್ಲದ ಪ್ರಾಮುಖ್ಯತೆ ಕೊಡಲಾರೆ ಮತ್ತು ತಮ್ಮ ಇಂಗ್ಲೀಶ್ ಭಾಷೆಯ ಅಧಿಕಾರ ಆವಾಹನರಯೊಂದಾಗಿ ಅಹಂಕಾರ ಪ್ರದರ್ಶಿಸಿದಾಗ  ಅವರ ಬಗ್ಗೆ ಮರುಕ ಮಾತ್ರ ಪಡುತ್ತೇನೆ. ದಿನ ಗ್ಗೋಡಿನಲ್ಲಿ ಜೆ.ಪಿ ಅಧ್ಯಕ್ಷ ರಾಗಲು ಗಾಂಧಿಯ ಪ್ರಸ್ತಾಪಕ್ಕೆ ನೀವು ಸಾಕ್ಷಿ ಕೇಳಿದಾಗ ನಾನು ನಿಮ್ಮ ಬಳಿ ವಾದ ಮುಂದುವರೆಸಲಿಲ್ಲ. ಏಕೆಂದರೆಆ ದಿನ ನೀವು  ನಮ್ಮ ಅತಿಥಿಗಳಾಗಿದ್ದಿರಿ. ನಾನೊಬ್ಬ ಸಾಮಾನ್ಯ ಪ್ರೇಕ್ಷಕನಾಗಿದ್ದೆ. ( ಅಣದಿನ ನಿಮ್ಮ ಇಂಗ್ಲಿಷ್ ವಾಕ್ಪ್ರವಾಹವೂ ನಾನು ಮುಂದೆ ಮಾತನಾಡದಂತೆ ತಡೆಯಿತು ಎಂಬುದೂ ನಿಜ!)

***

ಸಮಾಜವಾದಿಗಳೊಂದಿಗೆ ಗಾಂಧಿಯ ಮಾತುಕತೆ ಕುರಿತ ಬೈಬಲ್ ಎಂದು ನೀವು ನಂಬಿರುವ ’ಗಾಂಧಿ ಸಂಗ್ರಹಿತ ಲೇಖನಗಳಿಂದ’ ನಿಮಗೆ ಕೆಲವು ಸಾಕ್ಷ್ಯ ನೀಡುವುದು ನನ್ನ ಕರ್ತವ್ಯ ಎಂದಷ್ಟೇ ಭಾವಿಸಿ ನಾನು ನಿಮ್ಮೊಂದಿಗೆ ಪತ್ರ ವ್ಯವಹಾರಕ್ಕಿಳಿದೆ. ಬೇರೆ ಬೇರೆ ಕಾರಣಗಳಿಗಾಗಿ ಈ ಮಾತುಕತೆ ಇಷ್ಟು ಉದ್ದವಾಯ್ತು!

ನೀವು ಸರಿಯಾಗಿ ಗಮನಿಸಿರುವಂತೆ ನಾನೊಬ್ಬ ವಿದ್ವಾಂಸನಲ್ಲ.  ಜೊತೆಗೆ ವಿದ್ವದ್ವಲಯಗಳು ಮತ್ತು ವಿಶ್ವವಿದ್ಯಾಲಯಗಳ ಯೋಜನೆಗಳಲ್ಲಿ ಪಾಲ್ಗೊಳ್ಳಬಯಸುವವನೂ ಅಲ್ಲ. ನಿಜ ಹೇಳಬೇಕೆಂದರೆ ಈ ’ಪ್ರಾಜೆಕ್ಟ್”ಗಳೆಂದರೇನೆ ನನಗೆ ಭಯ! ನನ್ನ ಬರವಣಿಗೆಗಳ ಇಂಗ್ಲೀಶ್ ಅನುವಾದದ ಕುರಿತಾದ ನಿಮ್ಮ ಕಳಕಳಿಯ ಬಗ್ಗೆ ಹೇಳುವುದಾದದರೆ, ಅದು ಇಂಗ್ಲಿಶ್ ಬಲ್ಲ ಕನ್ನಡಿಗರಿಂದ ಆಗಬೇಕಾದ ಕೆಲಸ (ಅದಕ್ಕೆ ಆ ಅರ್ಹತೆ ಇದ್ದರೆ.). ನನಗಂತೂ ಅದರಲ್ಲಿ ಆಸಕ್ತಿ ಇಲ್ಲ. ಈ ವಿಷಯದಲ್ಲಿ ನಾನೊಬ್ಬ ಸ್ವರಾಜ್ಯವಾದಿ.. ನನ್ನ ’ನೆರೆಹೊರ”ಯಷ್ಟೇ ನನಗೆ ಸಾಕು.

***

ನನ್ನನ್ನು ಬಿರುಸಾಗಿ ಮುಖಾಮುಖಿಯಾಗುವ ನಿಮ್ಮ ಕೊನೆಯ ಪ್ರಯತ್ನದಂತೆ ಲೋಹಿಯಾ ಮತ್ತು ಜೆಪಿಯವರ ಹೆಸರು ಕೆಡಿಸಲು ಅವರ ವಿರುದ್ಧ ಸುಸ್ತಾಗಿರುವ ನಮ್ಮ ಜಾತ್ಯತೀತವಾದಿಗಳು ಮತ್ತು ಮಾಕ್ಸ್‌ವಾದಿಗಳು ಮಾಡುವ ಆ ಹಳೆಯ ತುಕ್ಕು ಹಿಡಿದ ಆರೋಪಗಳನ್ನೇ ನೀವು ಬಳಸಿರುವುದು ಖೇದಕರ. ಲಃಇಯಾ ಅವರ ಕಾಂಗ್ರೆಸ್ಸೇತರವಾದವನ್ನೂ ಮತ್ತು ಜೆಪಿಯವರು ತಮ್ಮ ’ಸಂಪೂರ್ಣ ಕ್ರಾಂತಿ” ಆಂದೋಲನಕ್ಕೆ ಜನಸಂಘ ಮತ್ತು ಆರೆಸಸೆಸಗಳನ್ನು ಸೇರಿಸಿಕೊಂಡಿದ್ದನ್ನು ಆಯಾ ರಾಜಕೀಯ ಸಂದರ್ಭಗಳ ಮತ್ತು ರಾಜಕೀಯ ಅನಿವಾರ್ಯತೆಗಳ ಸಂದರ್ಭದಲ್ಲಿಟ್ಟು ನೋಡಬೇಕು. ಆಗ ಜನಸಂಘವಾಗಲೀ, ಆರೆಸ್ಸೆಸ್ಸಾಗಲೀ ಇಷ್ಟು ಪ್ರಬಲ ಶಕ್ತಿಗಳಾಗಿರಲಿಲ್ಲ. ಜೊತೆಗೆ ಲೋಹಿಯಾ ಮತ್ತು ಜೆಪಿ ಎಂದೂ ತಮ್ಮ ರಾಜಕೀಯ ತತ್ವಗಳೊಂದಿಗೆ ಯಾವುದೇ ರಾಜಿ ಮಾಡಿಕೊಳ್ಳಲಿಲ್ಲ ಎಂಬುದನ್ನ ನೀವು ಮರೆಯಬಾರದು. ಪ್ರೋಪೆಸರ್ ಬ್ರಾಸ್ ನೊಂದಿಗೆ ಲೋಹಿಯಾರ ಜೀವನದ ಕೊನೆಯ ಸಂದರ್ಶನ (ಆಗಸ್ಟ್ ೧೯೬೭) ವನ್ನು ನೀವು ಓದಿ. ಅಲ್ಲಿ ಹಲವು ಬಗೆಯ ರಾಜಕಾರಣದ ತೊರೆಗಳೊಂದಿಗೆ ತಮಗಿದ್ದ ಸಂಬಂಧದ ಕುರಿತು ಲೋಹಿಯಾ ಮಾತನಾಡಿದ್ದಾರೆ. (ಲೋಹಿಯಾ ವಿಶೇಷ ಸಂಚಿಕೆ ಜನತಾ,೨೦೧೦).  ಜೆಪಿಯ ನಂತರ, ಜನಸಂಘವು ತನ್ನ ಬಿಜೆಪಿ ‌ಎಂಬ ಹೊಸ ಅವತಾರದಲ್ಲಿ ಪ್ರತ್ಯಕ್ಷವಾದಾಗ ೧೯೮೪ ರ ಚುನಾವಣೆಯಲ್ಲಿ ಕೇವಲ ೨ ಸೀಟುಗಳಿಗಿಳಿದಿದ್ದನ್ನ ನೀವು ಮರೆತುಬಿಟ್ಟಿರಾ? ಅಲ್ಲಿಂದ ಸಂಘಪರಿವಾರದವರು ತನ್ನ ಪಕ್ಷವನ್ನು ಸಂಘಟಿಸಿ ಇಂದಿನ ಈ ಹಂತ ತಲುಪಿದ್ದಾರೆ. ಇನ್ನೊಂದು ಕಡೆ ಈ ತಥಾಕಥಿತ ಜಾತ್ಯಾತಿತವಾದಿಗಳು ಕೇವಲ ಹಿಂದೂ ಮೂಲಭೂತವಾದ ವಿರೋಧಿ ಘೊಷಣೆಗಳ ಮೇಲೆ (ಮತ್ತು ಸಾಮಾಜಿಕ ನ್ಯಾದ ಕೂಗುಗಳ ಮೇಲೆ) ಬೆಳೆಯಲು ಪ್ರಯತ್ನಿಸಿದರು. ತಮ್ಮ ಪಕ್ಷವನ್ನು ಬುಡದಿಂದ ಸಂಘಟಿಸುವ ಕೆಲಸವನ್ನ ಇವರ್ಯಾರೂ ಮಾಡಲಿಲ್ಲ. ಈಗ ಜನತಾ ನ್ಯಾಯಾಲಯದಲ್ಲಿ ತಮಗಾದ ಮುಖಭಂಗದಿಂದ ಮುಖ ಮುಚ್ಚಿಕೊಳ್ಳಲು ಲೋಹಿಯಾ, ಜೆಪಿ ಯವರ ಮುಖಕ್ಕೆ ಮಸಿ ಬೆಳೆಯಲು ನೋಡುತ್ತಿದ್ದಾರೆ. ಅವರಿಗೆ ಒಳ್ಳೆಯದಾಗಲಿ. ಹಾಗೆ ನಿಮಗೂ ಸಹ!

ಇಂತಿ,

ಡಿ ಎಸ್ ಎನ್


ಗುಹಾ ಅವರ ಪ್ರತಿಕ್ರಿಯೆ:

11.10. 2017

ಶ್ರೀ ನಾಗಭೂಷಣ,

ನಾನು ಈ ಹಿಂದೆ ಹೇಳಿದ ಭಾರತೀಯ ಸೋಶಿಯಲಿಸಂ ನ ಯುವ ಸಂಶೋಧಕ ನನ್ನ ನಿಮ್ಮ ಬಳಿ ಕಳುಹಿಸಲೇ?

ಇಂತಿ,

ರಾ. ಗುಹಾ


ಡಿ ಎಸ್ ಎನ್ ಪ್ರತಿಕ್ರಿಯೆ:

11.10.2017

೧. ಶ್ರೀ ಗುಹಾ,

ನನ್ನ ಕೈ ತುಂಬಾ ಕೆಲಸವಿದೆ, ಜೊತೆಗೆ ಆಗಾಗ ಕೈ ಕೊಡುವ ಆರೋಗ್ಯವು ಹೊಸ ಜವಾಬ್ದಾರಿ ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತಿಲ್ಲ.

ನಿಮ್ಮ ಪ್ರೀತಿ ಮತ್ತು ವಿಶ್ವಾಸಗಳಿಗೆ ಕೃತಜ್ಞ

ಡಿ ಎಸ್ ಎನ್

12.10. 2017

೨. ಶ್ರೀ ಗುಹಾ,

ಲೋಹಿಯಾ ಮೇಲಿನ ’ಇಂಡಿಯನ್ ಎಕ್ಸ್ ಪ್ರೆಸ್”ನಲ್ಲಿನ ಲೇಖನಕ್ಕೆ ಧನ್ಯವಾದಗಳು

ಇಂತಿ,

ಡಿ ಎಸ್ ಎನ್


ಗುಹಾ ಅವರ ಪ್ರತಿಕ್ರಿಯೆ:

12.10.2017

ಶ್ರೀ ನಾಗಭೂಷಣ,

ನಾನು ಅರ್ಥ ಮಾಡಿಕೊಳ್ಳಬಲ್ಲೆ. ನೀವು ಕೈಗೆತ್ತಿಕೊಂಡಿರುವ ಕೆಲಸಗಳು ಯಶಸ್ವಿಯಾಗಲಿ. ನಿಮ್ಮ ಆರೋಗ್ಯ ನೂರ್ಕಾಲ ಚೆನ್ನಾಗಿರಲಿ. ನಮ್ಮ ನಡುವಿನ ಈ ಮಾತುಕತೆಗೆ ನಾನು ನಿಮಗೆ ಧನ್ಯವಾದಗಳನ್ನು ಹೇಳಬೇಕು. ಜೆಪಿ ಅಧ್ಯಕ್ಷತೆ ಕುರಿತು ಮಾತ್ರವಲ್ಲ ಮತ್ತಷ್ಟು ವಿಷಯಗಳನ್ನು ತಿಳಿದುಕೊಳ್ಳುವಲ್ಲಿ ನಿಮ್‌ಒಡನೆಯ ಈ  ಸಂವಾದಸಹಕಾರಿಯಾಗಿದೆ. ಟ್ವಿಟರ್ ಮತ್ತು ಫೇಸ್ ಬುಕ್ಕಿನ ದಿನಗಳಲ್ಲಿ ಈ ಬಗೆಯ ಮಾತುಕತೆ ಅಸಾಧ್ಯವೆನಿಸುವಷ್ಟು ವಿರಳ.

ಹೆಗ್ಗೋಡಿನಲ್ಲಿ ನಿಮಗೆ ಪ್ರತಿಕ್ರಿಯಿಸುವಾಗ ನನ್ನ ಮಾತು ಅಥವಾ ವರ್ತನೆಯಲ್ಲಿ ಗರ್ವ ಅಥವಾ ಹೀಯಾಳಿಕೆ ಇಣುಕಿದ್ದರೆ ದಯವಿಟ್ಟು ಕ್ಷಮಿಸಿ.

ಇಂತಿ,

ರಾಮಚಂದ್ರ ಗುಹಾ.

ಮರೆತ ಮಾತು: ನನ್ನ ವೈಯಕ್ತಿಕ ವಿಚಾರಗಳನ್ನು ಇಲ್ಲಿ ಹಂಚಿಕೊಂಡರೆ ತಾವು ತಪ್ಪು ತಿಳಿಯುವುದಿಲ್ಲವೆಂದು ಭಾವಿಸುತ್ತೇನೆ. ನನ್ನ ಪೋಷಕರು ಮನೆಯಲ್ಲಿ ಇಂಗ್ಲೀಷ್ ಮಾತನಾಡುತ್ತಾರೆ. ನಾನು ಡೆಹರಾಡೂನ್ ನಲ್ಲಿ ಬೆಳೆದಿದ್ದರಿಂದ ಹಿಂದಿಯನ್ನು ಎರಡನೆಯ ಭಾಷೆಯಾಗಿ ಕಲಿತೆ. ನನ್ನ ಮೊದ ಮೊದಲ ಸಂಶೋಧನೆಗಳಲ್ಲಿ ಹಿಂದಿ ಭಾಷೆಯ ಮೂಲದಿಂದ ಸಾಕಷ್ಟು ಪಡೆದೆ, ಜೊತೆಗೆ ಹಿಂದಿಯಿಂದ ಇಂಗ್ಲೀಷ್ ಗೆ ಸಾಕಷ್ಟು ಸಣ್ಣ ಪುಟ್ಟ ಅನುವಾದಗಳನ್ನೂ ಮಾಡಿದೆ. ಜೆಪಿ ಯವರ ಪ್ರಮುಖ ಪ್ರಬಂಧ “ನಾಗಲ್ಯಾಂಡ್ ನಲ್ಲಿ ಶಾಂತಿಯ ಪ್ರಯಾಸ” ವನ್ನೂ ಭಾಷಾಂತರಿಸಿದೆ. ನಮ್ಮೀ ಈ ಮಾತುಕತೆಯಿಂದ ತುಂಬಾ ಹಿಂದಿನಿಂದ ಆಲೋಚಿಸಿದ್ದ ಅನುವಾದವನ್ನು ಈಗ ಪುನಃ ಕೈಗೆತ್ತಿಕೊಳ್ಳುವವನಿದ್ದೇನೆ. ಶೇಖರ್ ಪಾಠಕ್ ಉತ್ತರಾಖಂಡದ ಆಧುನಿಕ ಇತಿಹಾಸದ ಕುರಿತ ಹಿಂದಿ ಗ್ರಂಥವನ್ನು ಇಂಗ್ಲೀಷ್ ಗೆ ಅನುವಾದಿಸುವ ಯೋಜನೆಯದು.


ಡಿ ಎಸ್ ಎನ್ ಪ್ರತಿಕ್ರಿಯೆ:

12.10.2017

ಶ್ರೀ ಗುಹಾ,

ನಿಮ್ಮ ಪತ್ರಕ್ಕೆ ಧನ್ಯವಾದಗಳು. ನಿಮ್ಮ ಮಾತುಗಳು ನನ್ನನ್ನ ವಿನೀತನನ್ನಾಗಿಸಿದೆ.

ಇಂತಿ,

ಡಿ ಎಸ್ ನಾಗಭೂಷಣ

ನಂತರದ ಟಿಪ್ಪಣಿಗಳು : ಈ ಪತ್ರ ವ್ಯವಹಾರ ಮುಕ್ತಾಯವಾದ ಕೆಲವೇ ದಿನಗಳ ನಂತರದಲ್ಲಿ ಆಶ್ಚರ್ಯವೆಂಬಂತೆ ನನಗೂ, ಗುಹಾರಿಗೂ ಒಟ್ಟಿಗೇ ರಾಜ್ಯ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಯಿತು, ಇದಕ್ಕಾಗಿ ಅವರು ನನ್ನನ್ನು ಅಭಿನಂದಿಸಿದರು ಮತ್ತು ನಾನು ಅವರನ್ನು ಅಭಿನಂದಿಸಿದೆ. ನಾನು ಆ ಪ್ರಶಶ್ತಿಯನ್ನು ಸ್ವೀಕರಿಸಲಿಲ್ಲ ಎಂಬುದು ಬೇರೆ ವಿಚಾರ.

ಈ ಸಂಬಂಧವಾದ ಇನ್ನೊಂದು ಆಶ್ಚರ್ಯಕರ ಸಂಗತಿಯೊಂದಿದೆ. ಗುಹಾ ಅವರು ನನ್ನೊಡನೆ ಮುಖತಃ ಇನ್ನಷ್ಟು ಮಾತಾಡಲು ನನ್ನ ಬೆಂಗಳೂರು ಭೇಟಿಯ ಬಗ್ಗೆ (ನಾನಿರುವುದು ಶಿವಮೊಗ್ಗದಲ್ಲಿ) ಪದೇ ಪದೇ ವಿಚಾರಿಸುತ್ತಿದ್ದರು. ಕೊನೆಗೆ ಡಿಸೆಂಬರ್‍೧೧ರ ಸಂಜೆ ಬೆಂಗಳೂರಿನಲ್ಲಿ ಬೇಟಿಯಾಗಲು ನಿಶ್ಚಯಿಸಿಕೊಂಡಾದ ಮೇಲೆ, ಅದೇ ದಿನ :ಸಂಜೆಅವರಿಗೆ ಅವರ ಮನೆಯಲ್ಲೇ ಮುಖ್ಯಮಂತ್ರಿಗಳು ಅವರಿಗೆ ರಾಜ್ಯೋತ್ಸವ ಪ್ರಶಶ್ತಿ ಪ್ರದಾನ ಮಾಡವ ಕಾರ್ಯಕ್ರಮ ನಿಗದಿಯಾಯಿತು. ಆದರೂ ಗುಹಾ ಅವರು ಆ ಸಂಜೆ ಪ್ರಶಸ್ತಿ ಪ್ರದಾನ ಸಮಯಕ್ಕಿಂದ ಮುಂಚೆ ಸ್ವಲ್ಪ ಬಿಡುವು ಮಾಡಿಕೊಂಡು ಬಂದು ನನ್ನನ್ನು ಭೇಟಿಯಾಗಿ ಅನೌಪಚಾರಿಕ ಮಾತುಕತೆ ನಡೆಸಿದರು.,ಅವರ ಪ್ರೀತಿ-ವಿಶ್ವಾಸಗಳಿಗೆ ನಾನು ಕೃತಜ್ಞನಾಗಿದ್ದೇನೆ.

-ಡಿ.ಎಸ್. ನಾಗಭೂಷಣ


ಸಂವಾದದ ಮೊದಲ ಮೂರು ಭಾಗವನ್ನು ನೀವು ಇಲ್ಲಿ ಓದಬಹುದು .

1. http://ruthumana.com/2017/10/31/gandhi-with-socialists-ramachandra-guha-and-d-s-nagabhushana-correspondance-part1/
2. http://ruthumana.com/2017/11/14/gandhi-with-socialists-ramachandra-guha-and-d-s-nagabhushana-correspondance-part2/
3. http://ruthumana.com/2017/12/05/gandhi-with-socialists-ramachandra-guha-and-d-s-nagabhushana-correspondance-part3/

One comment to “ಸಮಾಜವಾದಿಗಳೊಂದಿಗೆ ಗಾಂಧಿ : ಗುಹಾ – ಡಿ . ಎಸ್ . ನಾಗಭೂಷಣ ಸಂವಾದ ಭಾಗ ೪”
  1. ಇಂಥ ವಿಷಯಗಳು – ನಮ್ಮ ಟಿ. ವಿ ಚಾನಲ್ ಗಳಲ್ಲಿಯಂತಲ್ಲದ ರೀತಿಯಲ್ಲಿ – ಇನ್ನಷ್ಟು ಮತ್ತಷ್ಟು ಪ್ರಕಾರವಾಗಿ ಯಲ್ಲರಿಗೂ ತಲುಪಬೇಕಾಗಿರುವ ಜರೂರು ಎಲ್ಲ ಕಾಲಕೂ ಅವಶ್ಯಕ ಎಂದು ಇಲ್ಲಿಯ ಪತ್ರವ್ಯವಹಾರಗಳೇ ಮನವರಿಕೆ ಮಾಡಿಕೊಡುತ್ತವೆ.

    ಮತ್ತೆ …
    ನಾಗಭೂಷಣ ಅವರು ಗುಹಾ ಅವರು ಪ್ರಸ್ತಾಪಿಸಿದ ಸಂಶೋಧಕರಿಗೆ ತಮ್ಮ ಕೈಲಾದ ಸಲಹೆಗಳನ್ನು ನೀಡಬೇಕೆಂದು ನನ್ನ ವಿನಂತಿ…

ಪ್ರತಿಕ್ರಿಯಿಸಿ