ಮಹಾನಗರವೆಂಬ ಆಧುನಿಕ ಮೂಢನಂಬಿಕೆ!

ಬೆಂಗಳೂರಿನಲ್ಲಿ ತಳವೂರಿರುವ ಗ್ರಾಮೀಣ ಯುವಕನೊಬ್ಬ ಮಹಾನಗರವನ್ನು ಬಗೆವ ಬಗೆ ಇಲ್ಲಿದೆ. ಚಿಕ್ಕ ಊರಿನ ಸಮುದಾಯಗಳಲ್ಲಿ ಮಹಾನಗರಗಳು ಹೇಗೆ ಆಧುನಿಕ ಮೂಡನಂಭಿಕೆಗಳಾಗಿ ಬೇರು ಬಿಡುತ್ತಿದೆ ಎಂಬುದನ್ನ ಈ ಲೇಖನ ವಿವೇಚಿಸುತ್ತದೆ.

 ಈಗ ಏಳು ವರ್ಷಗಳ ಹಿಂದೆ ‘ಹಳ್ಳಿಯ ನೆನಪು ಮತ್ತು ನಗರದ ಬದುಕು’ ವಿಷಯದ ಕುರಿತು ಒಂದು ಲೇಖನ ಬರೆದಿದ್ದೆ. ಆಗ ನಾನಿನ್ನೂ ಹುಬ್ಬಳ್ಳಿಯಲ್ಲಿ ಬಿ.ಎ. ಪದವಿ ಓದುತ್ತಿದ್ದೆ. ಬೆಂಗಳೂರಿಗೆ ಹೋಲಿಸಿದರೆ ಅದೇನೂ ಅಂಥ ದೊಡ್ಡ ನಗರವಲ್ಲ. ನನ್ನ ಆ ಲೇಖನ ‘ಮೊದಲೇ ಹೇಳಿಬಿಡುತ್ತೇನೆ. ನಾನು ಪಕ್ಕಾ ಹಳ್ಳಿ ಜೀವನದ ಪಕ್ಷಪಾತಿ. ನಾನು ನಗರವನ್ನು ನೋಡುವುದು, ಅಲ್ಲಿನ ಜನ–ಜೀವನವನ್ನು ಅರ್ಥೈಸಿಕೊಳ್ಳುವುದು ಹಳ್ಳಿಯ ಕಣ್ಣಿನಿಂದಲೇ…’ ಹೀಗೆ ಶುರುವಾದ ನೆನಪು.

ಈಗಲೂ ನಾನು ನಗರವನ್ನು ನೋಡುವುದು ಅರ್ಥೈಸಿಕೊಳ್ಳುವುದು ಹಳ್ಳಿ ಬದುಕಿನಲ್ಲಿ ರೂಪುಗೊಂಡ ಕಣ್ಣಿನಿಂದಲೇ. ಆದರೂ ಏಳು ವರ್ಷಗಳ ಹಿಂದಿನ ಮನಸ್ಥಿತಿ ಈಗಲೂ ಹಾಗೆಯೇ ಇದೆಯೇ ಎಂದು ಕೇಳಿಕೊಂಡರೆ ಹೌದು ಎಂದು ಗಟ್ಟಿಯಾಗಿ ಹೇಳಲು ತಡವರಿಸುತ್ತೇನೆ. ಏನೇನೋ ಪ್ರಶ್ನೆಗಳು, ಅನುಮಾನಗಳು ಮನಸ್ಸಲ್ಲಿ ಪರಸ್ಪರ ಡಿಕ್ಕಿ ಹೊಡೆದುಕೊಳ್ಳಲಾರಂಭಿಸಿ ಯಾವೊಂದು ಮಾತನ್ನೂ ಸ್ಪಷ್ಟವಾಗಿ ಕೇಳಿಸಿಕೊಳ್ಳಲಾಗದ ಕಲ್ಯಾಣಮಂಟಪದ ಗದ್ದಲ ತಲೆಯಲ್ಲಿ ತುಂಬಿಕೊಳ್ಳುತ್ತದೆ. ಇದಕ್ಕೆ ಈ ಏಳು ವರ್ಷದಲ್ಲಿ ಬದಲಾದ ನನ್ನ ಮನಸ್ಥಿತಿ ಎಷ್ಟು ಕಾರಣವವೋ, ನಾನು ಬದುಕುತ್ತಿರುವ ಮಹಾನಗರದೊಟ್ಟಿಗೇ ನನ್ನ ಊರಿನಲ್ಲಿ ಆದ–ಆಗುತ್ತಿರುವ ಬದಲಾವಣೆಗಳೂ ಅಷ್ಟೇ ಕಾರಣ. ಆದ್ದರಿಂದ ಈ ಇಡೀ ಬರಹ ನಾನು– ಮಹಾನಗರ– ನನ್ನ ಊರು ಈ ಮೂರು ಅಂಚುಗಳ ನಡುವೆ ಯಾವೊಂದರಲ್ಲಿಯೂ ವಿಶ್ರಮಿಸಲಾಗದೇ ಹೊಯ್ದಾಡುವ ಗೊಂದಲ–ಅನುಮಾನಗಳಲ್ಲಿಯೇ ಅಕ್ಷರಗೊಂಡಿದೆ.

ಈ ನಗರದ ಕುರಿತಾಗಿಯಾಗಲಿ, ನನ್ನೂರಿನ ಕುರಿತಾಗಲಿ ನನ್ನ ಬಗ್ಗೆಯೂ ಹೀಗೆ ಎಂದು ನಿರ್ಧಾರಾತ್ಮಕವಾಗಿ ಹೇಳಲು ನನಗೆ ಸಾಧ್ಯವೇ ಇಲ್ಲ. ಅದ್ದರಿಂದ ನನ್ನ ಈ ಕ್ಷಣದ ಅನಿಸಿಕೆಗಳು, ಅನುಭವಗಳು, ನಾನು ಕಂಡ ಜನರ– ನಾನು ಅರ್ಥೈಸಿಕೊಂಡ ಹಾಗೆ ಮನಸ್ಥಿತಿಗಳು ಹೀಗೆ ಅಸ್ಥಿರ ಆಧಾರಗಳ ಮೇಲೆಯೇ ಮಾತನಾಡಬೇಕಷ್ಟೆ.

***

ನಾನು ಮೊದಲು ಬೆಂಗಳೂರಿಗೆ ಬಂದಿದ್ದು ಎಂಟನೆಯತ್ತೆಯಲ್ಲಿದ್ದಾಗ. ಸರ್ಕಾರದಿಂದ ಹಳ್ಳಿಯ ಯುವಕರಿಗೆ  ಎಂಟು ದಿನದ ವ್ಯಕ್ತಿತ್ವ ವಿಕಸನ ಶಿಬಿರ ಮಾಡಿದ್ದರು. ಸರ್ಕಾರದ ಖರ್ಚಿನಲ್ಲಿಯೇ ಬೆಂಗಳೂರಿಗೆ ಹೋಗಿಬರುವ ಛಾನ್ಸು ಸಿಕ್ಕಿದ್ದಕ್ಕೆ ನಾವು ಏಳೆಂಟು ಜನ ಬೆಂಗಳೂರಿಗೆ ಬಂದಿದ್ದೆವು. ಮೆಜೆಸ್ಟಿಕ್‌ನಲ್ಲಿ ಇಳಿದುಕೊಂಡು ಇನ್ನೊಂದು ಬಸ್‌ ಹತ್ತಿ ಶಿಬಿರ ನಡೆಯುವ ಜಾಗಕ್ಕೆ ಹೋಗಬೇಕಾಗಿತ್ತು. ಆ ಜಾಗ ಯಾವುದು ಎಂಬುದು ನನಗೆ ನೆನಪಿಲ್ಲ. ಆ ದಿನ ಮೆಜೆಸ್ಟಿಕ್‌ ಬಸ್‌ ನಿಲ್ದಾಣದ ಪ್ಲಾಟ್‌ಫಾರಂ ಬೆಂಚಿನ ಮೇಲೆ ಕೂತುಕೊಂಡು, ಅಷ್ಟು ಬೆಳ್ಳಂಬೆಳಿಗ್ಗೆಯೇ ಅತ್ತಿತ್ತ ಗಮನ ಹರಿಸಲು ಪುರಸೊತ್ತರದ ಹಾಗೆ ದುಡುದುಡು ಓಡುವ, ಯಾವ್ಯಾವುದೋ ಬಸ್‌ಗೆ ಜೋತು ಬೀಳುವ ಜನರನ್ನು ಬೆರಗಿನಿಂದ ನೋಡಿದ್ದು ನೆನಪಿದೆ. ಅಷ್ಟು ಬೆಳಿಗ್ಗೆಯೇ ಕಿವಿಗೆ ಹಿಯರ್‌ಫೋನ್‌ ಹಾಕಿಕೊಂಡು ಬಿಗಿ ಟೀ ಷರ್ಟ್‌, ಟಾಪ್‌ಗಳನ್ನು ತೊಟ್ಟು ಬರುವ ಹುಡುಗಿಯರ ತುಂಬಿದೆದೆಯನ್ನು ನೋಡಿ ಅಚ್ಚರಿಪಟ್ಟದ್ದೂ ನೆನಪಿದೆ. ‘ಇಲ್ಲಿನ ಹುಡುಗಿಯರ ಮೊಲೆಗಳ ನೋಡು, ಎಷ್ಟು ದೊಡ್ಡದಿವೆ. ಬೆಂಗಳೂರಿನ ಹವಾಮಾನವೇ ಹಾಗಿದೆ. ಅದಕ್ಕೆ ಇಲ್ಲಿನ ಹುಡುಗಿಯರ ಎದೆ ಅಷ್ಟು ಬೆಳೆಯುತ್ತದೆ’ ನಮ್ಮಲ್ಲೇ ಹೆಚ್ಚು ತಿಳಿವಳಿಕಸ್ಥ ಗೆಳೆಯನೊಬ್ಬ ಹೇಳಿದ್ದನ್ನು ನಾವೆಲ್ಲ ಅಕ್ಷರಶಃ ನಂಬಿದ್ದೆವು.

***

ನಂಬಿಕೆ–ಮೂಢನಂಬಿಕೆಗಳ ಮಾತು ಬಂದಾಗಲೆಲ್ಲ ನನ್ನ ಮನಸ್ಸಲ್ಲಿ ಯಾಕೋ ಬೆಂಗಳೂರಿನ ಚಿತ್ರ ಮೂಡುತ್ತದೆ. ನನ್ನೂರಿನ ಪಾಲಿಗೆ ಬೆಂಗಳೂರೇ ಒಂದು ಆಧುನಿಕ ಮೂಢನಂಬಿಕೆ ಎನಿಸುತ್ತದೆ.

ಮೂಢನಂಬಿಕೆ ಅಂದಾಕ್ಷಣ ನಾವು ಸಾಮಾನ್ಯವಾಗಿ ಅದು ಧಾರ್ಮಿಕ ಆಚರಣೆಗಳಿಗೆ, ನಂಬಿಕೆಗಳಿಗೆ ಸಂಬಂಧಿಸಿದ್ದು ಎಂದುಕೊಳ್ಳುತ್ತೇವಲ್ಲ, ಏನದು ಮೂಢನಂಬಿಕೆ ಎಂದರೆ? ತುಂಬಾ ಮೇಲುಮಟ್ಟದಲ್ಲಿಯೇ, ಸದ್ಯ ಹೆಚ್ಚು ಪ್ರಚಲಿತದಲ್ಲಿರುವ ಪಾಪ್ಯುಲರ್‌ ಸ್ಟೇಟ್‌ಮೆಂಟ್‌ಗಳನ್ನೇ ಆಧರಿಸಿ ‘ವೈಜ್ಞಾನಿಕವಾಗಿ ಸಾಬೀತಾಗದ, ಅರ್ಥವಿಲ್ಲದ, ಸತ್ಯವಲ್ಲದ ನಂಬಿಕೆಗಳು’ ಎಂದು ಎಂದಿಟ್ಟುಕೊಳ್ಳೋಣ. ಅಂದರೆ ಕುರಿ ಬಲಿಕೊಟ್ಟರೆ ದೇವರು ಸಂತೃಪ್ತನಾಗುತ್ತಾನೆ ಎಂಬುದು ನಂಬಿಕೆ. ಆದರೆ ವೈಜ್ಞಾನಿಕವಾಗಿ ಆಧಾರವಿಲ್ಲದ್ದರಿಂದ ಅದು ಮೌಢ್ಯ.  ಈ ವ್ಯಾಖ್ಯಾನವನ್ನೇ ಇಂದಿನ ಸೋ ಕಾಲ್ಡ್‌ಆಧುನಿಕ ಜಗತ್ತಿನ ಬೆಂಗಳೂರೆಂಬ ಮಹಾನಗರಕ್ಕೂ ಅನ್ವಯಿದರೆ ಹೇಗಿರುತ್ತದೆ?

ಒಂಚೂರು ವಿಸ್ತರಿಸಿ ನೋಡೋಣ.

 ನಮ್ಮೂರಿನ ಬ್ರಾಹ್ಮಣ ಸಮುದಾಯದ ಬಹುತೇಕ ಹುಡುಗಿಯರ ಅಪ್ಪ– ಅಮ್ಮಂದಿರು ಬೆಂಗಳೂರಿನಲ್ಲಿರುವ ಹುಡುಗನಿಗೆ ಮಗಳನ್ನು ಮದುವೆ ಮಾಡಿಕೊಟ್ಟರೆ ಸುಖವಾಗಿರುತ್ತಾಳೆ ಎಂದು ನಂಬುತ್ತಾರೆ. ‘ಬೆಂಗಳೂರಿನಲ್ಲಿ ನಮ್ಮ ಸಂಸ್ಕೃತಿ ಇರೂದಿಲ್ಲ, ಬರೀ ದುಡ್ಡಿರ್ತದೆ ಅಷ್ಟೆ, ಸಂಬಂಧಗಳು ಇರೂದಿಲ್ಲ. ಆದ್ದರಿಂದ ಮನೇಲಿ ಕೃಷಿ ಮಾಡಿಕೊಂಡು, ದನ–ಕರು ಇರೋ ಮನೆಗೆ ಹೆಣ್ಮಕ್ಕಳನ್ನು ಮದುವೆ ಮಾಡಿಕೊಡಬೇಕು. ಆಗ ಮಾತ್ರ ಅವ್ರಿಗೆ ಸಂಸ್ಕಾರ ಇರ್ತದೆ. ನಮ್ಮ ಸಂಸ್ಕೃತಿ ಮುಂದಿನ ಪೀಳಿಗೆಗೂ ಉಳಿಸಲು ಸಾಧ್ಯವಾಗುತ್ತದೆ’ ಎಂದೆಲ್ಲ ಕಂಡ ಕಂಡವರ ಮುಂದೆ ಒಣ ಭಾಷಣ ಬಿಗಿಯುವವರೂ ತಮ್ಮ ಮಗಳು ವಯಸ್ಸಿಗೆ ಬಂದಾಗ ಒಂದಿಷ್ಟು ಕಾಲ ಸುಮ್ಮನಾಗಿ ನಂತರ ಬೆಂಗಳೂರಿನಲ್ಲಿನ ಸಾಪ್ಟವೇರ್‌ ಹುಡುಗನಿಗೆ ಕೊಟ್ಟು ಮದುವೆ ಮಾಡಿಬಿಡುತ್ತಾರೆ. ಹಾಗೆ ನೋಡಿದರೆ ಇದೂ ಒಂದು ಮೌಢ್ಯವೇ ಅಲ್ಲವೇ? ಬೆಂಗಳೂರಿನಲ್ಲಿರುವವರು ಸುಖವಾಗಿರುತ್ತಾರೆ. ಸಾಪ್ಟ್‌ವೇರ್‌ ಎಂಜಿನಿಯರ್‌ಗಳು ಸುಖವಾಗಿರುತ್ತಾರೆ. ತುಂಬಾ ಸಂಬಳ ತರುವ ನೌಕರರು ಸುಖವಾಗುತ್ತಾರೆ ಎಂಬುದಕ್ಕೆಲ್ಲ ವೈಜ್ಞಾನಿಕವಾಗಿ ಯಾವ ಸಮರ್ಥನೆಯಿದೆ? (ಅವರು ಸುಖವಾಗಿರುವುದಿಲ್ಲ ಎನ್ನುವುದೂ ಅಂಥದ್ದೇ ಇನ್ನೊಂದು ಮೂಢನಂಬಿಕೆಯಷ್ಟೆ). ಧರ್ಮಸ್ಥಳ ಮಂಜುನಾಥನಿಗೆ ಹರಕೆ ತೀರಿಸಿದರೆ ಕಷ್ಟ ಪರಿಹಾರ ಆಗುತ್ತದೆ ಎನ್ನುವುದಕ್ಕೂ, ಬೆಂಗಳೂರಿನಲ್ಲಿರುವ ಸಾಪ್ಟ್‌ವೇರ್‌ ಎಂಜಿನಿಯರ್‌ ಮದುವೆಯಾದರೆ ತಾನು ಸುಖವಾಗಿರುತ್ತೇನೆ ಎಂಬ ನನ್ನೂರಿನ ಹುಡುಗಿಯರ ನಂಬಿಕೆಗೂ, ಬೆಂಗಳೂರಿನ ಹವಾಮಾನದಿಂದ ಅಲ್ಲಿನ ಎಲ್ಲ ಹುಡುಗಿಯರಿಗೆ ದೊಡ್ಡ ಮೊಲೆಗಳಿರುತ್ತವೆ ಎಂಬ ನಮ್ಮ ನಂಬಿಕೆಗೂ ಮೂಲಭೂತವಾಗಿ ಏನಾದರೂ ವ್ಯತ್ಯಾಸ ಇದೆಯೇ?

 

ನನ್ನೂರಿನ ಇನ್ನೊಂದು ವರ್ಗದ ಜನರಿಗೂ ಬೆಂಗಳೂರು ಎನ್ನುವುದು ಹೇಗೋ ಸೆಳೆದುಕೊಳ್ಳುವ ಚುಂಬಕ. ತಳಸ್ತರದ, ಕೂಲಿ ಮಾಡಿ ಜೀವನ ಸಾಗಿಸುವವರ ಮಕ್ಕಳಿಗೆ ಬೆಂಗಳೂರು ಬದುಕಿನ ಗುರಿಯಾಗಿ ಕಾಡುವುದನ್ನು ನಾನು ಗಮನಿಸಿದ್ದೇನೆ. ಎಸ್ಸೆಸ್ಸೆಲ್ಸಿನೋ ಪಿಯೂಸಿನೋ ಮುಗಿಸಿ, ಹೆಚ್ಚೆಂದರೆ ನಂತರ ಯಾವುದೋ ಡಿಪ್ಲೋಮಾ ಕೋರ್ಸು ಮುಗಿಸಿ ಅವರು ಹತ್ತುವುದು ಬೆಂಗಳೂರಿನ ನೈಟ್‌ ಬಸ್ಸನ್ನು. ಇಂಥ ನನ್ನ ವಯಸ್ಸಿನವರು, ಸಹಪಾಠಿಗಳು ಆಗೀಗ ಸಿಕ್ಕಾಗಲೆಲ್ಲ ನಾನು ಅವರನ್ನು ಏನು ಮಾಡ್ತಿದ್ದೀಯಾ? ಕೇಳಿದರೆ ಅವರು ಹೇಳುವುದು ‘ಬೆಂಗಳೂರಿನಲ್ಲಿದ್ದೇನೆ!’. ಇನ್ನೂ ಕೆದಕಿ ಕೇಳಿದರೆ ಮಾತ್ರ ‘ಕಂಪೆನಿಯಲ್ಲಿದ್ದೇನೆ’ ಎಂದು ಹೇಳುತ್ತಾರೆ. ಅದರಾಚೆಗೆ ಅವರು ಬೆಂಗಳೂರಿನ ತಮ್ಮ ಅಡ್ರೆಸ್ಸನ್ನು ಬಿಟ್ಟುಕೊಡುವುದೇ ಇಲ್ಲ.

ಅವರಿಗೆ ಬೆಂಗಳೂರಿನಲ್ಲಿರುವುದೇ ಜೀವನಕ್ಕೆ ಘನತೆ ತಂದುಕೊಡುವ ಸಂಗತಿ. ಎಸ್ಸೆಸ್ಸೆಲ್ಸಿ ಮುಗಿಸಿ ಬೆಂಗಳೂರಿಗೆ ಬಂದು ಹೋಟೆಲು, ಗಾರೆ ಕೆಲಸ ಮಾಡುವವರೂ ಇದ್ದಾರೆ. ಇಲ್ಲಿನ ಖರ್ಚು, ವಸತಿ ಕಷ್ಟಗಳನ್ನು ಗಣನೆಗೆ ತೆಗೆದುಕೊಂಡು ಅವರ ಆದಾಯವನ್ನು ಗಮನಿಸಿದರೆ ಊರಿನಲ್ಲಿ ಕೂಲಿ ಮಾಡಿಕೊಂಡಿರುವುದೇ ಹೆಚ್ಚು ಲಾಭದಾಯಕ. ಆದರೆ ಅವರು ಹಾಗೆ ಮಾಡುವುದಿಲ್ಲ. ಹೇಗಾದರೂ ಬೆಂಗಳೂರಿಗೆ ಹೋಗಬೇಕು ಎಂದು ಹೊರಡುತ್ತಾರೆ. ‘ಬೆಂಗಳೂರಿನಲ್ಲಿದ್ದೇನೆ’ ಎನ್ನುವ ಅವರ ಉತ್ತರದಿಂದ ಊರಿನಲ್ಲಿ ಅವರಿಗೆ ಸಿಗುವ ಗೌರವಕ್ಕೂ ಬೆಂಗಳೂರಿನ ಕುರಿತಾದ ಮೂಢನಂಬಿಕೆ(?)ಗಳಿಗೂ ನೇರ ಸಂಬಂಧವಿದೆ.

ನಮ್ಮೂರಿನಿಂದ ನೈಟ್ ಬಸ್‌ ಹತ್ತಿ  ಬೆಂಗಳೂರಿಗೆ ಹೊರಡುವ ಪ್ರತಿಯೊಬ್ಬರಲ್ಲಿಯೂ ಈ ನಗರದ ಕುರಿತಾದ ಇಂಥ ಹಲವು ಮೂಢನಂಬಿಕೆಗಳಿರುತ್ತವೆ. ಯಾವ್ಯಾವುದೋ ಕಾರಣಗಳಿಗೆ ಬೆಂಗಳೂರಿಗೆ ಬರಲಾರದೇ ಊರಲ್ಲೇ ಉಳಿದವರಲ್ಲಿಯೂ ಅಷ್ಟೇ –ಅಥವಾ ಅದಕ್ಕಿಂತ ಹೆಚ್ಚು ಮೂಢನಂಬಿಕೆಗಳಿಂದ ಬೇಯುತ್ತಿರುವುದನ್ನು ಗಮನಿಸಿದ್ದೇನೆ.

ಮತ್ತದೇ ಪುನರಾವರ್ತಿಸುವುದಾದರೆ ನಮ್ಮೂರಿನ ಬದುಕಿನಲ್ಲಿ ಬೆಂಗಳೂರು ಎನ್ನುವುದು ಒಂದು ಆಧುನಿಕ ಮೂಢನಂಬಿಕೆ.

ಇಷ್ಟು ಹೇಳಿ ಮಾತು ಮುಗಿಸಿಬಿಡಬಹುದು. ಆರು ವರ್ಷಗಳ ಹಿಂದಾದರೆ ಅದನ್ನೇ ಮಾಡುತ್ತಿದ್ದೆನೇನೋ. ಆದರೆ ಹೀಗೆ ಹೇಳುತ್ತಿದ್ದಂತೆಯೇ ಈ ಮಾತಿನ ಇನ್ನೊಂದು ಮುಖ ಮನಸ್ಸಲ್ಲಿ ದಿಗಿಣ ಕುಣಿಯಲು ಶುರುಮಾಡುತ್ತದೆ. ತನ್ನನ್ನೂ ಹೇಳಲೇಬೇಕು ಎಂದು ಒತ್ತಾಯಿಸುತ್ತಿದೆ.

ಬೆಂಗಳೂರಿನ ಕುರಿತಾಗಿ ನಮ್ಮೂರಿನ ಎರಡು ವರ್ಗಗಳ ದೃಷ್ಟಿಕೋನದ ಹಿಂದಿನ ಕಾರಣ ಪ್ರೇರಣೆಗಳು ಏನಿರಬಹುದು? ನಿಜವಾಗಿಯೂ ನಮ್ಮೂರಿನ ಬ್ರಾಹ್ಮಣ ಹುಡುಗಿಯರಿಗೆ ಮತ್ತು ಕೇಳವರ್ಗದ ಹುಡುಗರಿಗೆ ಬೆಂಗಳೂರಿಗೆ ಸೇರುವುದೇ ಬೇಕಾಗಿದೆಯೋ ಅಥವಾ ಈ ಊರಿನಿಂದ ತಪ್ಪಿಸಿಕೊಳ್ಳಬೇಕಾಗಿದೆಯೋ? ಎರಡನೆಯದೇ ವಾಸ್ತವಕ್ಕೆ ಹೆಚ್ಚು ಹತ್ತಿರ ಎನಿಸುತ್ತದೆ.

ಹಳ್ಳಿಯ ಬದುಕೆಂದರೆ ಅದು ಚಾಪೆಯ ಹೆಣಿಗೆಯಂತೆ. ಒಂದು ಊರಿನ ಎಲ್ಲರ ಮನೆಯ ಬಹುತೇಕ ಖಾಸಗಿ ವಿಷಯಗಳು ಎಲ್ಲರಿಗೂ ತಿಳಿದಿರುತ್ತದೆ. ಒಂದು ಥಿಯೇಟರ್‌ ಇಲ್ಲದ, ಮಾಲ್‌ ಇಲ್ಲದ, ಬೆಳಿಗ್ಗೆ–ಸಂಜೆಯ ವಿಹಾರಕ್ಕೆ ಒಂದು ಪಾರ್ಕೂ ಇಲ್ಲದ ನನ್ನೂರಲ್ಲಿ ಒಬ್ಬರ ಮನೆಯ ಸುದ್ದಿ ಇನ್ನೊಬ್ಬರಿಗೆ ಗಾಳಿ–ಬೆಂಕಿಯಷ್ಟೇ ವೇಗವಾಗಿ ಹಬ್ಬುತ್ತದೆ. ನನ್ನೂರಿನ ಹತ್ತಿರದ ಪೇಟೆ ಎಂದರೆ ಯಲ್ಲಾಪುರ. ನಾನು ಒಂದು ಸಂಜೆ ಯಲ್ಲಾಪುರಕ್ಕೆ ಸುತ್ತಾಡಲು ಹೋದರೆ ಕನಿಷ್ಠ ಐದಾರು ಜನ ಪರಿಚಿತರು ಸಿಗುತ್ತಾರೆ. ಈ ಪರಿಚಯ ಸಂಬಂಧಗಳ ದಾರದ ನೇಯ್ಗೆಯಲ್ಲಿಯೇ ಹಳ್ಳಿ ಜೀವನ ಸಾಗುತ್ತಿರುತ್ತದೆ. ಇದು ಒಂದು ಪೀಳಿಗೆಯವರಿಗೆ ಬಂಧನ ಎನಿಸಿರಲಿಕ್ಕೂ ಸಾಕು. ಆಧುನಿಕತೆ ನನ್ನೂರಿಗೆ ಹಲವು ಸೌಲಭ್ಯಗಳನ್ನು ಒದಗಿಸಬಹುದೇ ಹೊರತು ಸ್ವಾತಂತ್ರ್ಯವನ್ನಲ್ಲ. ಇದರಿಂದ ರೇಜಿಗೆ ಹುಟ್ಟಿಸಿಕೊಂಡವರಿಗೆಬೆಂಗಳೂರು ಮಾಯಾನಗರಿಯಾಗಿ ಕರೆಯುತ್ತದೆ. ಮಹಾನಗರದ ಸಹವಾಸ ನಮ್ಮೂರಲ್ಲಿ ನಮಗೆ ದೊರಕಿಸುವ ಗೌರವದೊಟ್ಟಿಗೆ ಅದು ನಮಗೆ ಕೊಡುವ ಅನಾಮಿಕತೆ ಇದೆಯಲ್ಲ, ಅದೂ ತುಂಬ ಮಹತ್ವದ್ದು ಅನಿಸುತ್ತದೆ ನನಗೆ.

ಊರಿನಲ್ಲಿ ಬೆಳಿಗ್ಗೆ ಎದ್ದು ಗಡಿಬಿಡಿಯಲ್ಲಿ ಭಟ್ಟರ ಮನೆಗೆ ಹೋಗಿ ಅವರು ಮೇಲಿನಿಂದ ಕೊಡುವ ದೊಸೆ, ದೂರದಲ್ಲಿಯೇ ಇಟ್ಟು ಹೋಗುವ ಚಾ ಕುಡಿದು, ತಟ್ಟೆ ತೊಳೆದಿಟ್ಟು, ದಿನವಿಡೀ ದುಡಿದು ವಾಪಸಾಗುವ ಅಪ್ಪ–ಅಮ್ಮನನ್ನು ನೋಡಿ ಬೇಸತ್ತವರಿಗೆ ಮಹಾನಗರದ ಕೊಡುವ ಅನಾಮಿಕ ಸ್ವಾತಂತ್ರ್ಯ ಸಣ್ಣದಲ್ಲವೇ ಅಲ್ಲ. ಇಲ್ಲಿಯೂ ಅವನು ಕೂಲಿ ಕೆಲಸ–ಹೋಟೆಲ್‌ ಕೆಲಸ ಮಾಡಿಕೊಂಡು ದಿನವಿಡೀ ಯಜಮಾನನ ಬಳಿ ಬೈಸಿಕೊಂಡು ಕೆಲಸಲ ಹೊಡೆಸಿಕೊಂಡು ಬದುಕಿದರೂ ಸಂಜೆ ಹೊತ್ತಿಗೆ ಬೇರೆ ಅಂಗಿ ತೊಟ್ಟು ರಸ್ತೆಗಿಳಿದರೆ ಅವನನ್ನು ಹೋಟೆಲ್‌ ಮಾಣಿ ಎಂದೋ, ಗಾರೆ ಕೆಲಸದವನೆಂದೋ ಯಾರೂ ಗುರ್ತು ಹಿಡಿಯುವುದಿಲ್ಲ. ಮೆಜೆಸ್ಟಿಕ್‌ನ ಫ್ಲೈಓವರ್  ಮೇಲೆ ನಿಂತ ಹೆಂಗಸು– ತನ್ನಪ್ಪ ಕೆಲಸ ಮಾಡುವ ಭಟ್ಟರ ಮನೆ ಹುಡುಗನ್ನು ಕರೆದ ಹಾಗೆಯೇ ಸನ್ನೆ ಮಾಡಿ ನನ್ನನ್ನೂ ಕರೆಯುತ್ತಾಳೆ ಎಂಬುದು ಕೊಡುವ ವಿಶ್ವಾಸಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಆದರೆ ಊರಿನಲ್ಲಿ ಹಾಗಲ್ಲ, ಎಷ್ಟೇ ಒಳ್ಳೆಯ ಬಟ್ಟೆ ತೊಟ್ಟು, ಅಲಂಕಾರ ಮಾಡಿಕೊಂಡು ಹೋದರೂ ಅವನನ್ನು ಗುರ್ತಿಸುವುದು, ಸ್ಥಾನ ಮಾನ ಕೊಡುವುದು ಜಾತಿಯ ಆಧಾರದ ಮೇಲೆಯೇ.

ಹರಕೆಗಳ ಕುರಿತಾದ ಮೂಢನಂಬಿಕೆಗಳೂ ಹುಟ್ಟಿದ್ದು ಹೇಗೆ?

ಕಷ್ಟಕಾಲದಲ್ಲಿರುವ ಮನುಷ್ಯ ಪರಿಸ್ಥಿತಿ ಕೈ ಮೀರಿದಾಗ ಈ ಎಲ್ಲವೂ ಕ್ಷಣಾರ್ಧದಲ್ಲಿ ಬದಲಾಗಿ ಎಲ್ಲ ಕಷ್ಟಗಳೂ ಕಣ್ಮುಚ್ಚಿ ತೆರೆವಷ್ಟರಲ್ಲಿ ನಿವಾರಣೆಯಾಗಿಬಿಟ್ಟಿದ್ದರೆ ಎಷ್ಟು ಚೆನ್ನ ಎಂದು ಯೋಚಿಸುತ್ತಾನಲ್ಲ, ಹಾಗೆ ಬದಲಾಯಿಸುವ ಸಾಧ್ಯತೆ ಇರುವ ಶಕ್ತಿಯನ್ನು ಅರಸುತ್ತಾನಲ್ಲ, ಹರಕೆಯೂ ಅಂಥದ್ದೇ ಅರಸುವಿಕೆಯ ಒಂದು ಕ್ರಮದಂತೆ ತೋರುತ್ತದೆ ನನಗೆ. ಕಷ್ಟವನ್ನು ದಾಟಲು ಅವನು ಕಂಡುಕೊಳ್ಳುವ ಹಲವು ದಾರಿಗಳಲ್ಲಿ ಅದೂ ಒಂದು. ಇಲ್ಲಿ ಸಮಸ್ಯೆ ಪರಿಹಾರವಾಗುತ್ತದೋ ಇಲ್ಲವೋ ಎಂಬ ಫಲಿತಾಂಶ ಅಷ್ಟು ಮಹತ್ವ ಪಡೆದುಕೊಳ್ಳುವುದಿಲ್ಲ. ಬದಲಿಗೆ ಸಮಸ್ಯೆ ಪರಿಹಾರವಾಗುತ್ತದೆ ಎಂಬ ನಂಬಿಕೆಯೇ ಹೆಚ್ಚು ಮುಖ್ಯ. ಮೈಮೇಲೆ ದೆವ್ವ ಬರುವುದನ್ನೇ ತೆಗೆದುಕೊಳ್ಳಿ. ದೆವ್ವ ಬಂದರೇನು ಸುಲಭವೇ? ಮೈಮುರಿಯೆ ಕುಣಿಯಬೇಕು, ತನಗೆ ತಾನೇ ಬಾರುಕೋಲಿನಲ್ಲಿ ಬಾರಿಸಿಕೊಳ್ಳಬೇಕು, ಹಾಗೆಯೇ ಜನರು ನಂಬಲು– ನಂಬಿ ನಡುಗಲು, ನಡೆದುಕೊಳ್ಳಲು ತನ್ನ ದೇಹಕ್ಕೆ ಏನೇನು ಹಿಂಸೆ ಮಾಡಿಕೊಳ್ಳಬೇಕೋ ಅದು ಇಹದ ಜೀವಕ್ಕಿಂತ ಹಿಂಸಾತ್ಮಕ. ಆದರೆ ಹಾಗೆ ಮೈಮೇಲೆ ಬಂದಾಗ ಹೆಂಡತಿ ಗಂಡನ ಜುಟ್ಟು ಹಿಡಿದು ಬಾರಿಸಲು ಸಾಧ್ಯವಾಗುತ್ತದಲ್ಲ, ಆಳುಮಗ ತನ್ನ ಕಾಲಿಗೆ ಬೀಳುವ ಯಜಮಾನನ್ನು ನೋಡಿ ಆಶೀರ್ವದಿಸಲು ಸಾಧ್ಯವಾಗುತ್ತದಲ್ಲ, ಅದೆಲ್ಲಕ್ಕಿಂತ ಈಗ ಈ ಜೀವನದಲ್ಲಿ ಎಷ್ಟೆಲ್ಲ ಜನರ ಮಧ್ಯೆ ನಾನೂ ಹೇಗೆ ಒಬ್ಬನಾಗಿದ್ದೆನೋ ಅದಕ್ಕಿಂತ ತುಂಬ ಬೇರೆ ಬಗೆಯಲ್ಲಿ ವಿಶೇಷವಾಗಿ ಕಾಣಿಸಿಕೊಳ್ಳಲು ಸಾಧ್ಯವಿದೆಯಲ್ಲ, ಅದು ತುಂಬ ಮುಖ್ಯ. ಅವನ/ಅವಳ ಪಾಲಿಗೆ ಅದೊಂದು ಚೈತನ್ಯಪೂರಣದ ಘಟಕ. ಪರಕಾಯ ಪ್ರವೇಶ.

ಈ ಪರಕಾಯ ಪ್ರವೇಶದಲ್ಲಿ ದೊರಕುವ ಅನಾಮಿಕತೆಯ ವಿಶ್ವಾಸವನ್ನು ನನ್ನಂಥರಿಗೆ ಮಹಾನಗರ ಕೊಡುತ್ತದೆ. ಹಾಗೆಯೇ ಊರಿನಲ್ಲಿ ನನ್ನ ಸ್ಥಾನವನ್ನು ಹಿಗ್ಗಿಸುತ್ತದೆ. ಹೀಗೆ ಈ ಆಧುನಿಕ ಮೂಢನಂಬಿಕೆಯ ಮುಖವಾಡದಾಚೆಗೆ ಬದುಕಿನ ಒಳದಾರಿಗಳೂ ಇವೆ. ಆದ್ದರಿಂದಲೇ ಹೇಗೆ ನಂಬಿಕೆ–ಮೂಢನಂಬಿಕೆಯನ್ನು ಗೆರೆಕೊರೆದು ಬೇರ್ಪಡಿಸಲು ಸಾಧ್ಯವಿಲ್ಲವೋ, ಹಾಗೆಯೇ ಬೆಂಗಳೂರಿನ ಕುರಿತಾದ ನನ್ನೂರಿನ ಆಕರ್ಷಣೆಯನ್ನು ಹೀಗೇ ಎಂದು ನಿರ್ಧಾರಾತ್ಮಕವಾಗಿ ಹೇಳಲು ಸಾಧ್ಯವಿಲ್ಲ.

***

ಇವುಗಳ ಜತೆಗೆ ಇನ್ನೂ ಕೆಲವು ಸಂಗತಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು. ನಾನು ಊರು ಬಿಟ್ಟು ಸುಮಾರು ಹತ್ತು ವರ್ಷಗಳಾಯ್ತು. ಹಾಗೆ ನೋಡಿದರೆ ತೀರಾ ದೀರ್ಘಾವಧಿಯೇನಲ್ಲ. ಆದರೆ ಈ ಅವಧಿಯಲ್ಲಿಯೇ ನಾನೂ–ನನ್ನೂರೂ– ಈ ಮಹಾನಗರವೂ ಸಾಕಷ್ಟು ಬದಲಾಗಿದೆ. ನಮ್ಮ ಕಡೆಯ ಹಳ್ಳಿಗಳಿಂದ ನನ್ನ ಓರಿಗೆಯ–ಪರಿಚಯದ ಹಲವು ಜನರು ಮಹಾನಗರದ ಒಡಲು ಸೇರಿದ್ದಾರೆ. ಮಠದ ಸ್ವಾಮೀಜಿಗಳೆಲ್ಲ ಚಾತುರ್ಮಾಸಕ್ಕೆ ಬೆಂಗಳೂರಿಗೇ ಬರುತ್ತಾರೆ. ಆಗಾಗ ನಮ್ಮ ಸಮುದಾಯಗಳ ಮಹಾಸಮಾವೇಶಗಳೂ, ಸಂಘಟನೆಯ ಚುನಾವಣೆಗಳೂ ಇಲ್ಲಿಯೇ ನಡೆಯುತ್ತವೆ. ನಾನು ಮಲ್ಲೇಶ್ವರ ಅಥವಾ ಗಿರಿನಗರದ ಒಂದು ಮನೆಯಲ್ಲಿ ಬಾಡಿಗೆ ಹಿಡಿದರೆ, ಪಕ್ಕದ  ಮೂರ್ನಾಲ್ಕು ರಸ್ತೆಗಳಾಚೀಚೆಗೆ ನನ್ನ ದೊಡ್ಡಮ್ಮನ ಮಗಳೋ, ಅಮ್ಮನ ಯವುದೋ ಸಂಬಂಧಿಕರ ಮನೆಯೋ ಇರುತ್ತದೆ. ನಮ್ಮ ಎಲ್ಲ ಸಂಬಂಧಿಕರ ಮನೆಗಳಲ್ಲಿಯೂ ಒಬ್ಬಿಬ್ಬರು ಬೆಂಗಳೂರಿನಲ್ಲಿರುತ್ತಾರೆ. ಆದರೆ ನಾವೆಲ್ಲ ಪರಸ್ಪರ ಭೇಟಿಯಾಗುವುದು ಮಾತ್ರ ಊರಲ್ಲಿ ಯಾರದೋ ಮದುವೆ–ಮುಂಜಿ ಇದ್ದಾಗ ಊರಿನಲ್ಲಿ. ಅಲ್ಲಿ ಭೇಟಿಯಾಗಿ ‘ಓ.. ನೀನೂ ಆ ಏರಿಯಾದಲ್ಲೇ ಇದ್ದಿಯಾ? ನಮ್ಮ ಮನೆನೂ ಅಲ್ಲೇ ಹತ್ರ. ಬಾ ಮಾರಾಯಾ ಯಾವಾಗಲಾದ್ರೂ ವೀಕೆಂಡಲ್ಲಿ’ ಎಂದು ಪರಸ್ಪರ ಆಮಂತ್ರಿಸಿಕೊಂಡರೆ ಮತ್ತೆ ಮುಖ ನೋಡುವುದು ಮತ್ತೊಂದು ಮದುವೆಯಲ್ಲಿಯೇ.

ಹಾಗೆಂದು ಇಷ್ಟು ದೊಡ್ಡ ನಗರದಲ್ಲಿ ನಮ್ಮ ನೋಡುವವರ್‍ಯಾರು ಅಂತ ಯಾವುದಾದರೂ ಹುಡುಗಿಯ ಜತೆ ಮಂತ್ರಿ ಮಾಲ್‌ನಲ್ಲಿಯೋ, ಲಾಲ್‌ ಬಾಗ್‌ನಲ್ಲಿಯೋ ಸುತ್ತಾಡಲು ಹೊರಡರೆ ಮಾತ್ರ ಯಾವುದಾದರೊಬ್ಬ ಸಂಬಂಧಿಕರು– ಊರಿನ ಪರಿಚಯಸ್ಥರು ಮುದ್ದಾಂ ಸಿಕ್ಕುಬಿಡುತ್ತಾರೆ. ಸಂಜೆಯೊಳಗಾಗಿ ಊರೆಲ್ಲ ಅದು ಸುದ್ದಿಯಾಗಿ ನಮ್ಮ ಮನೆಗೂ ಮುಟ್ಟಿ ರೂಮಿಗೆ ಬರುವಷ್ಟರಲ್ಲಿ ಅಮ್ಮ ಮುಸಿಮುಸಿ ಅಳುತ್ತಾ ಫೋನ್‌ ಮಾಡುವುದು ಗ್ಯಾರಂಟಿ.

ಇತ್ತೀಚೆಗೆ ನನ್ನೂರಿನಲ್ಲಿಯೂ ಏರ್‌ಟೆಲ್‌ ಮೊಬೈಲ್‌ ಟವರ್‌ ಆಗಿದೆ. ಎಲ್ಲರ ಬಳಿಯಲ್ಲಿಯೂ ಸ್ಮಾರ್ಟ್‌ ಫೋನ್‌ಗಳಿವೆ. ವಾಟ್ಸ್‌ ಆ್ಯಪ್‌ನಲ್ಲಿಯೋ ಫೇಸ್‌ಬುಕ್‌ನಲ್ಲಿಯೋ ಬೆಂಗಳೂರನ್ನು ಅವರ ಮನೆಯ ಅಂಗಳಕ್ಕೇ ತಂದಿಟ್ಟುಕೊಂಡು ಆರಾಮು ಕವಳ ಹಾಕುತ್ತಾ ನೋಡುತ್ತಿರುತ್ತಾರೆ. ಯಾವ ಟ್ರಾಫಿಕ್‌ ಗದ್ದಲವಿಲ್ಲದೆ, ಅಡ್ವಾನ್ಸು, ರೆಂಟು, ಲೀಸುಗಳ, ಬಾಡಿಗೆ ಗೂಡುಗಳ ತಾಪತ್ರಯ ಇಲ್ಲದೆ, ಕೊಟ್ಟೆ, ಹಾಲು, ಹಿಟ್ಟು, ಗಡಿಬಿಡಿ ಚಿತ್ರಾನ್ನಗಳ ಕಲಸುಮೇಲೋಗರಗಳಿಲ್ಲದೇ ಬೆಂಗಳೂರನ್ನು ಇನ್ನಷ್ಟು ರಂಜನೀಯವಾಗಿ ಅವರು ಊರಲ್ಲಿಯೇ ಕುಳಿತು ಆಸ್ವಾದಿಸುತ್ತಿದ್ದಾರೆ.

ಆದರೆ ನಾವು, ಬೆಂಗಳೂರಿಗೆ ಬಂದವರು, ‘ಒಂದು ಸ್ವಂತ ಸೂರು ಅಂತ ಮಾಡ್ಕೋಬೇಕು’ ಎಂಬ ಹಂಬಲಕ್ಕೆ ಬಿದ್ದು ಆಕಾಶ ಮಧ್ಯದ ತ್ರಿಶಂಕು ಪ್ಲ್ಯಾಟನ್ನು ದಶಲಕ್ಷಾಂತರ ಕೊಟ್ಟು ಕೊಂಡುಕೊಂಡು ಅದಕ್ಕಾಗಿ ಗಂಡ–ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗುತ್ತಾ, ಇಪ್ಪತ್ತಿಪ್ಪತ್ತು ವರ್ಷ ಕಂತು ಕಟ್ಟುತ್ತಾ, ಎಷ್ಟನೇ ಇಸ್ವಿಗೆ ಎಷ್ಟು ದೊಡ್ಡವರಾಗ್ತಾರೆ, ಆಗ ಮನೆ ಸಾಲ ಎಷ್ಟಿರ್ತದೆ? ಯಾವ ಇಸ್ವಿಯಲ್ಲಿ ಶಾಲೆಗೆ ಸೇರಿಸಬೇಕಾಗ್ತದೆ? ಫೀಸು ಎಷ್ಟಿರ್ತದೆ ಅಂತೆಲ್ಲ ರಾತ್ರಿ ಕೂತು ಲೆಕ್ಕಚಾರ ಹಾಕಿ ಪಕ್ಕಾ ಪ್ಲ್ಯಾನ್ಡ್‌ ಮಕ್ಕಳ ಹುಟ್ಟಿಸಿಕೊಳ್ಳುತ್ತಾ, ಊರಿಂದ ಮಗುವನ್ನು ನೋಡಿಕೊಳ್ಳಲು ಕೆಲಸದವರ ತಂದು ಅವರು ಉಳಿಯಲಾರದೇ ಬಿಟ್ಟುಹೋದ ಮೇಲೆ ಮಗುವನ್ನು ಊರಿನಲ್ಲಿ ಬಿಟ್ಟು, ಇಲ್ಲವೇ ಪಾಳಿ ಪ್ರಕಾರ ಗಂಡನ ಅಮ್ಮ ಹೆಂಡತಿಯ ಅಮ್ಮನ ಊರಿಂದ ಕರೆಸಿಕೊಂಡು ಸಲುಹುತ್ತಾ ದಮ್ಮುಗಟ್ಟಿಕೊಂಡು ಯಾವುದೋ ದಾರಿಯಲ್ಲಿ ಓಡುತ್ತಲೇ ಇದ್ದೇವೆ. ಬೆಂಗಳೂರಿನಲ್ಲಿಯೇ ಇದ್ದರೂ ಬೆಂಗಳೂರನ್ನು ಆಸ್ವಾದಿಸಲಾಗದೇ ವರ್ಷಕ್ಕೆರಡು ಸಲ ಊರಿಗೆ ಹೋಗಿ ತೆಂಗಿನ ತೋಟದಲ್ಲಿ ಎಳೆನೀರು ಕುಡಿಯುತ್ತಾ, ‘ಆಹಾ! ಎಂಥ ಗಾಳಿ ಮರಾಯಾ, ಎಂಥ ಸಿಹಿ ಸಿಯಾಳ. ಎಷ್ಟು ಹೆಲ್ದಿ.. ಆ ಸುಡುಗಾಡು ಬೆಂಗಳೂರಲ್ಲಿ ಏನುಂಟು? ಇನ್ನೊಂದಿಷ್ಟು ವರ್ಷ ಕೆಲಸ ಮಾಡಿ ನಾನು ಆರಾಮ ಮನೆಗೆ ಬಂದು ಕೃಷಿ ಮಾಡಿಕೊಂಡು ಇದ್ದುಬಿಡ್ತೇನೆ. ಯಾರಿಗೆ ಬೇಕು ಆ ನರಕ’ ಎಂದು ಬೈದುಕೊಂಡು ಮತ್ತೆ ಬೆಂಗಳೂರು ಬಸ್ಸು ಹತ್ತುತ್ತೇವೆ. ಮತ್ತೆ ಜಾಲಹಳ್ಳಿ ಕ್ರಾಸ್‌ ಹತ್ತಿರ ವಿಪರೀತ ಟ್ರಾಫಿಕ್ಕು ಸಿಕ್ಕು ತೆವಳಲು ಶುರುಮಾಡುತ್ತೇವೆ.

ಬೆಂಗಳೂರಿನ ರಂಜನೀಯ ಸವಲತ್ತುಗಳು, ಆಮಿಷಗಳೆಲ್ಲ ವೇಗವಾಗಿ ನನ್ನೂರಿನತ್ತ ಗುಳೆ ಹೊರಟಿವೆ. ಅಲ್ಲಿ ತನ್ನ ಕುರಿತು ಹೊಸ ಹೊಸ ಮೂಢನಂಬಿಕೆಗಳನ್ನು ಸೃಷ್ಟಿಸಿ ಆ ಮೂಲಕ ಅಲ್ಲಿನವರನ್ನು ತನ್ನ ಒಡಲಿಗೆ ಕರೆಸಿಕೊಳ್ಳುತ್ತಿದೆ. ತನ್ನ ಬೃಹತ್‌ ಮಿಕ್ಸಿಂಗ್‌ ಯಂತ್ರದಲ್ಲಿ ಹಾಕಿ ಗರಗರ ತಿರುಗಿಸಿ ಏನೇನೋ ಸೇರಿಸಿ, ಹದ ಕಾಂಕ್ರೀಟ್‌ ಆಗಿಸಿ ತನ್ನನ್ನು ತಾನು ಕಟ್ಟಿಕೊಳ್ಳುತ್ತದೆ. ಅಲ್ಲಿಂದ ಬರುವಾಗ ಅಪ್ಪನ ಕಪಾಟಿನೊಳಗೆ ಬಟ್ಟೆಗಳ ಅಡಿಯ ಖಾನೆಯಲ್ಲಿದ್ದ ಎಣಿಸೆಣಿಸಿ ನೋಡುವ ಘನ ಹಣವಾಗಿದ್ದವರೆಲ್ಲ, ಇಲ್ಲಿ ಬಂದ ಮೇಲೆ ಕ್ರೆಡಿಟ್‌ ಕಾರ್ಡ್‌ಗಳಾಗಿ ಬದಲಾಗುತ್ತಾರೆ. ಎಣಿಸದೇ, ನೋಡದೇ, ಮುಟ್ಟದೇ, ಲೆಕ್ಕಾಚಾರ, ಚೌಕಾಶಿ ಮಾಡದೇ ಸಾವಿರ ಸಾವಿರಗಟ್ಟಲೇ ಹಣವನ್ನು ಖರ್ಚು ಮಾಡುವ ಹಗುರ ಕಾರ್ಡುಗಳಾಗಿ ಬದಲಾಗುತ್ತಾರೆ.

ಹೌದು! ಬೆಂಗಳೂರು ಎನ್ನುವುದು ನನ್ನ ಪಾಲಿಗೆ ಒಂದು ಮೂಢನಂಬಿಕೆಯೇ. ತನ್ನ ಒಡಲಲ್ಲಿ ಹಲವು ಒಳಬಾಳುಗಳನ್ನು ಅಡಗಿಸಿಟ್ಟುಕೊಂಡಿರುವ ಮೂಢನಂಬಿಕೆ.

ಚಿತ್ರ : ಗಿರಿಧರ ಕಾರ್ಕಳ

2 comments to “ಮಹಾನಗರವೆಂಬ ಆಧುನಿಕ ಮೂಢನಂಬಿಕೆ!”
  1. ಕನ್ನಡ ಜಿಲ್ಲೆಯ ಗ್ರಾಮೀಣ ಯುವಕನೊಬ್ಬನ ಕಣ್ಣಿನಿಂದ ಈ ಬೆಂಗಳೂರು ವಾಸ್ತವವಾಗಿ ಹೇಗೆ ಕಾಣಬಹುದೋ ಹಾಗೇ ರೂಬುರೂಬು ಪದಗೊಳಿಸಿದ ಲೇಖನ. ಬಹಳ ಇಷ್ಟ ಆಯ್ತು. ಪಕ್ಕದ ತುಮಕೂರು ಜಿಲ್ಲೆಯ ಹಳ್ಳಿಯಿಂದ ಬರುವ ಹುಡುಗನೊಬ್ಬನಿಗೂ ಇದೇ ಅನಿಸುತ್ತದೆ ಈ ಬೆಂಗಳೂರಮ್ಮನ ನಾನಾ ವೈಯ್ಯಾರಗಳನ್ನು ನೋಡಿದಾಗ, ಪದಗೊಳಿಸುವಾಗ ಬಳಸುವ ಪದಗಳು ಬದಲಾವಣೆ ಆಗಬಹುದಷ್ಟೆ. ಈ ಇವಳೇ ನಮ್ಮ ಈಗಿನ ಬೆಂಗಳೂರಮ್ಮ, ನೂರಾರು ಸರ್ಕಲ್ ಮಾರಮ್ಮಗಳಿಂತ “ಪವರ್ ಫುಲ್” ಮಾರಮ್ಮ!

ಪ್ರತಿಕ್ರಿಯಿಸಿ