ರಂಗಭೂಮಿ ನಿಜದ ಅರ್ಥದ “ಭೂಮಿ”ಯಾಗಿ…

“ಮಲೆಗಳಲ್ಲಿ ಮದುಮಗಳು” ರಂಗಕೃತಿಯು ಈಗ ಮತ್ತೊಮ್ಮೆ ಹಲವು ಕಾರಣಗಳಿಗೆ ಚರ್ಚೆಯಲ್ಲಿದೆ. ಪ್ರಮುಖ ದೈನಿಕವೊಂದರಲ್ಲಿ ಪ್ರಕಟವಾದ ವಾಚಕರ ಪತ್ರದಿಂದ ಆರಂಭಗೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಲವು ವಾದ ವಿವಾದಗಳು ನಡೆದವು . ಇಂತಹ ಸರಕಾರಿ ಪ್ರಾಯೋಜಿತ ಬಹುವೆಚ್ಚದ ಪ್ರಯೋಗಗಳು ನಗರ ಕೇಂದ್ರಗಳಲ್ಲಷ್ಟೇ ನಡೆಯುತ್ತಿರುವುದರ ಬಗ್ಗೆ ಎದ್ದಿರುವ ಪ್ರಶ್ನೆ ಔಚಿತ್ಯಪೂರ್ಣವಾದದ್ದೇ ಮತ್ತು ಪ್ರಶ್ನಿಸುತ್ತಿರುವವರು ಕೂಡ ರಂಗಭೂಮಿಯನ್ನು ಪ್ರೀತಿಸುವವರು ಮತ್ತು ಅದರೊಂದಿಗೆ ಸುಧೀರ್ಘವಾಗಿ ಗುರುತಿಸಿಕೊಂಡವರೇ ಆಗಿದ್ದಾರೆ . ಮತ್ತೆ ಮತ್ತೆ ಎದ್ದಿರುವ ಪ್ರಶ್ನೆಗೆ ಯಾವುದೇ ಸಂಬಂಧ ಪಟ್ಟವರು ಉತ್ತರಿಸಿದಂತೆ ಕಾಣುತಿಲ್ಲ . ಋತುಮಾನಕ್ಕೆ ಈ ಕುರಿತು ಲಕ್ಷಣ್ ಕೆ. ಪಿ ಬರೆದಿದ್ದಾರೆ .

ಈ ಲೇಖಕ್ಕೆ ಪರ- ವಿರೋಧದ ಪ್ರತಿಕ್ರಿಯೆಗಳನ್ನು [email protected] ಈಮೇಲ್ ಮೂಲಕ ಗೆ ಕಳುಹಿಸಿಕೊಡಿ.

ಈಗಾಗಲೇ ನಾಲ್ಕು ಬಾರಿ ದೊಡ್ಡ ಮೊತ್ತದ ಹಣವನ್ನೇ ಖರ್ಚು ಮಾಡಿ (ಬಳಕೆಯಾದ ಹಣದ ಬಗ್ಗೆ ನಿಖರವಾದ ಮಾಹಿತಿ ಯಾರಿಗೂ ಇಲ್ಲವಾದ್ದರಿಂದ ಸಂಭಂದಪಟ್ಟ ಇಲಾಖೆಯವರು ಅದನ್ನು ಸಾರ್ವಜನಿಕವಾಗಿ ಪ್ರಕಟಿಸಿದರೆ ಈ ಕುರಿತು ಹಲವು ಊಹಾಪೋಹಗಳಿಗೆ ತೆರೆಬೀಳಬಹುದು) ನಿರ್ಮಾಣಗೊಂಡು ಪ್ರದರ್ಶನಗೊಂಡಿರುವ, ಸಾಕಷ್ಟು ಜನರ ಮೆಚ್ಚುಗೆಯನ್ನು ಗಳಿಸಿಕೊಳ್ಳುತ್ತಿರುವ ಕನ್ನಡದ ಮಹತ್ವದ ರಂಗ ನಿರ್ದೇಶಕ ಸಿ. ಬಸವಲಿಂಗಯ್ಯನವರ ನಿರ್ದೇಶನದ ಕುವೆಂಪು ಅವರ ಮಹಾಕಾದಂಬರಿ “ಮಲೆಗಳಲ್ಲಿ ಮದುಮಗಳು” ರಂಗಕೃತಿಯು ಮತ್ತೊಮ್ಮೆ ಹಲವು ಕಾರಣಗಳಿಗೆ ಚರ್ಚೆಯಲ್ಲಿದೆ. ಫೇಸ್ಬುಕ್ನಲ್ಲಿ ಕನ್ನಡ ಉಪನ್ಯಾಸರೊಬ್ಬರು ಪ್ರಜಾವಾಣಿಗೆ ಬರೆದ ಪತ್ರದಿಂದ ಶುರುವಾದ ಈ ಚರ್ಚೆಯು ಪ್ರಯೋಗದ ಬಜೆಟ್, ಅನಿವಾರ್ಯತೆ, ಗುಣಮಟ್ಟ, ಕಾಣ್ಕೆ ,ಸಾಂಸ್ಕೃತಿಕ ರಾಜಕಾರಣ, ಸಂಪನ್ಮೂಲಗಳ ವಿಕೇಂದ್ರೀಕರಣ ಹೀಗೆ ಎಲ್ಲವನ್ನು ದಾಟಿ ತೀರ ಹೊಲಸಾದ ವೈಯಕ್ತಿಕ ನಿಂದನೆಗೆ ಬಂದು ನಿಂತಿದೆ.ಆದರೂ ಉತ್ತರಿಸಬೇಕಾದ ಯಾರಿಂದಲೂ ಯಾವುದೇ ಪ್ರತಿಕ್ರಿಯೆ ದಾಖಲಾಗಿಲ್ಲ,ಅದಕ್ಕೆ ಹಲವು ಕಾರಣಗಳಿರಬಹುದು,ಆದರೆ ಈ ಮೌನ ಮತ್ತೊಂದಿಷ್ಟು ಊಹಾಪೋಹಗಳಿಗೆ ಕಾರಣವಾಗಬಹುದು.ರಂಗಭೂಮಿಯ ಒಳಿತಿಗೆ ಇದು ಒಳ್ಳೆಯ ಬೆಳವಣಿಗೆ ಅಂತೂ ಅಲ್ಲ .

ನನ್ನ ಪ್ರಶ್ನೆ ಮತ್ತು ಕಾಳಜಿ ಇರುವುದು ಈ ಪ್ರಯೋಗವನ್ನು ಒಳಗೊಂಡಂತೆ ಕನ್ನಡ ಮತ್ತು ಸಂಸ್ಕೃತಿಯ ಮತ್ತು ವಾರ್ತಾ ಮತ್ತು ಪ್ರಸಾರ ಇಲಾಖೆಯ ದೊಡ್ದ ದೊಡ್ಡ ಉತ್ಸವಗಳೆಲ್ಲ ನಗರ ಕೇಂದ್ರಗಳಲ್ಲಿ ಆಗುವುದರ ಕುರಿತು. ಹಿಂದಿನ ಮನುಷ್ಯ ಜಾತಿ ತಾನೊಂದೆ ಒಲಮ್ನಿಂದ ಹಿಡಿದು ಇತ್ತೀಚಿನ ಭಾರತ ಭಾಗ್ಯ ವಿಧಾತಾ, ಮಲೆಗಳಲ್ಲಿ ಮದುಮಗಳು ತನಕ ಎಲ್ಲ ಪ್ರಯೋಗಗಳು ಪ್ರದರ್ಶನಗೊಂಡಿರುವುದು ಜಿಲ್ಲಾ ಕೇಂದ್ರಗಳಲ್ಲಿ.(ಅವುಗಳ ಗುಣಮಟ್ಟದ ಕುರಿತು ನಾನಿಲ್ಲಿ ಮಾತನಾಡಲು ಹೋಗುವುದಿಲ್ಲ) ನನಗೆ ತಿಳಿದ ಮಟ್ಟಿಗಂತೂ ಬೆಂಗಳೂರಿನಲ್ಲಿ ರಂಗ ಚಟುವಟಿಕೆಗಳಿಗೆ ಬರವೇನು ಇಲ್ಲ. ರವಿಂದ್ರ ಕಲಾಕ್ಷೇತ್ರದಲ್ಲಿ ಆಗಾಗ ನಡೆಯುವ ಉತ್ಸವಗಳನ್ನು ಒಳಗೊಂಡಂತೆ, ರಂಗ ಶಂಕರ , ಎ ಡಿ ಎ, ಕೆ ಹೆಚ್ ಕಲಾಸೌದ ,ಕಲಾಗ್ರಾಮ ,ಚೌಡಯ್ಯ ಹಾಲ್ ,ಯವನಿಕ , ಇವೆಲ್ಲಾ ರಂಗಮಂದಿರಗಳಲ್ಲಿ ಸಾಕಷ್ಟು ನಾಟಕ ಪ್ರದರ್ಶನಗಳು ನಡೆಯುತ್ತಲೇ ಇರುತ್ತವೆ. ಕ್ರಿಯಾಶೀಲವಾಗಿ ಕೆಲಸ ಮಾಡುವ ಹಲವಾರು ಹವ್ಯಾಸಿ ರಂಗ ತಂಡಗಳಿವೆ . ಕೆಲವು ಜಿಲ್ಲೆಗಳನ್ನು ಹೊರತು ಪಡಿಸಿ ಕರ್ನಾಟಕದ ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಸರಕಾರವೇ ನಿರ್ವಹಿಸುವ ಜಿಲ್ಲಾ ರಂಗ ಮಂದಿರಗಳಿವೆ ಅಲ್ಲಿ ಗುಣಮಟ್ಟದ ಕೊರತೆ ಇದ್ದರೂ ಸಾಂಸ್ಕೃತಿಕ ಚಟುವಟಿಕೆಗಳು ತಕ್ಕಮಟ್ಟಿಗೆ ನಡೆಯುತ್ತವೆ. ಇನ್ನೂ ಸರ್ಕಾರವೇ ನಡೆಸುವ ನಾಲ್ಕು ರಂಗಾಯಣಗಳು ಮೈಸೂರು ,ಶಿವಮೊಗ್ಗ ,ಧಾರವಾಡ, ಗುಲ್ಬರ್ಗದಂತಹ ಜಿಲ್ಲಾ ಕೇಂದ್ರಗಳಲ್ಲಿ ಕೆಲಸ ಮಾಡುತ್ತವೆ. ಇಷ್ಟೆಲ್ಲಾ ಆದ ನಂತರವೂ ಸರಕಾರ ತನ್ನ “ಮೆಘಾ ಪ್ರಾಜೆಕ್ಟ್” ಗಳಿಗೆ ಆಯ್ಕೆ ಮಾಡಿಕೊಳ್ಳುವುದು ಮತ್ತೂ ಬೆಂಗಳೂರನ್ನೇ ಅಥವಾ ಬೆಂಗಳೂರಿನಂತಹ ಮತ್ತೊಂದು ಜಿಲ್ಲೆಯನ್ನೇ ..ಯಾಕೆ ? ಇದಕ್ಕೆ ಬಳಕೆಯಾಗುತ್ತಿರುವ ಸಂಪನ್ಮೂಲ ಬರಿಯ ನಗರವಾಸಿಗಳಿಗೆ ಸೇರಿದ್ದೇ ? ಮತ್ತು ಈ ಮೆಗಾ ಪ್ರಾಜೆಕ್ಟ್ಗಳ ಅವಶ್ಯಕತೆ ಆದರೂ ಏನು ? ಈ ತರದ ಪ್ರಶ್ನೆಗಳನ್ನು ಕೇಳಿಕೊಳ್ಳುವುದು ಈ ಪ್ರಾಜೆಕ್ಟ್ಗಳಲ್ಲಿ ಕೆಲಸ ಮಾಡಿದ ಕಲಾವಿದರನ್ನು, ತಂತ್ರಜ್ಞರನ್ನು ಅವರ ಪ್ರತಿಭೆ ಮತ್ತು ಶ್ರಮವನ್ನು ಅಗೌರವದಿಂದ ನೋಡಿದಂತೆ ಆಗುತ್ತದೆಂದು ವಯ್ಯಕ್ತಿಕವಾಗಿ ನನಗೆ ಅನಿಸುವುದಿಲ್ಲ. ಬದಲಿಗೆ ಅವರ ಪ್ರತಿಭೆ, ಶ್ರಮವನ್ನು ಇನ್ನಷ್ಟು ಗೌರವದೊಂದಿಗೆ ಸಮರ್ಪಕ ಬಳಸಲು ಒತ್ತಾಯಿಸಿದಂತಾಗುತ್ತದೆ.

ಸಾಣೆಹಳ್ಳಿ ,ಶೇಷಗಿರಿ , ರಕ್ಷಿದಿ , ಮಂಚಿಕೆರೆ ,ಆದಿಮ ಶಿವಗಂಗೆ, ತಿಪಟೂರಿನ ಕೊನೆಹಳ್ಳಿ ಹೀಗೆ ಲೆಕ್ಕ ಮಾಡಿದರೆ ಬೆರಳು ಎಣಿಕೆಯಷ್ಟು ಹಳ್ಳಿಗಳು ಬಿಟ್ಟರೆ ಕರ್ನಾಟಕದ ಸಾವಿರಾರು ಹಳ್ಳಿಗಳಿಗೆ ಇಂದಿಗೂ ಆಧುನಿಕ ರಂಗಭೂಮಿಯ ಸಣ್ಣ ಪರಿಚಯವೂ ಇಲ್ಲ. ಅವರಿಗೆ ಯಾವುದೊ ಸರಕಾರಿ ಯೋಜನೆಯ ಪ್ರಚಾರಕ್ಕೆ,ಕೆಲವು ಜಾಗೃತಿಗಳಿಗೆ ಬಂದ ಬೀದಿ ನಾಟಕವೇ ನಾಟಕ (ನಾನಿಲ್ಲಿ ಬೀದಿ ನಾಟಕವನ್ನು ಕನಿಷ್ಟವೆಂದು ಹೇಳುತ್ತಿಲ್ಲ) ಕಡೆ ಪಕ್ಷ ಒಂದೇ ಒಂದು ಆಧುನಿಕ ರಂಗ ಪ್ರಯೋಗವನ್ನು ಹಳ್ಳಿಯ ಹಿರಿಯರಿರಲಿ ಇತ್ತೀಚಿನ ಮಕ್ಕಳೂ ನೋಡಿರುವುದಿಲ್ಲ. ಇದೊಂದು ವಂಚನೆಯೆಂದೇ ಅನಿಸುತ್ತದೆ ನನಗೆ. ಈ ವಂಚನೆಗೆ ಯಾರು ಹೊಣೆ ?. ಅದು ಪ್ರಜ್ಞಾಪೂರ್ವಕವೋ ಅಥವಾ ಅಪ್ರಜ್ಞಾಪೂರ್ವಕವೋ ಅದು ಬೇರೆಯ ಮಾತು. ಕೆಲವು ಹಳ್ಳಿಗಳು , ತಾಲೂಕು ಕೇಂದ್ರಗಳು ಇಂತಹ ವಂಚನೆಯಿಂದ ಹೊರತಾಗಿದ್ದಾರೆ ಅದು ನೀನಾಸಂ ,ಸಾಣೆಹಳ್ಳಿ ,ಕಿನ್ನರಮೇಳ , ಜಮುರದಂಥ ಮುಖ್ಯ ರೆಪರ್ಟರಿಗಳನ್ನು ಒಳಗೊಂಡು ಜನಮನದಾಟ, ಆಟ ಮಾಟ , ಥೀಯೇಟರ್ ಸಮುರಾಯ್ ನಂತಹ ಸಣ್ಣ ಪುಟ್ಟ ರಂಗತಂಡಗಳು ಮತ್ತು ಆ ನಾಟಕಗಳನ್ನು ಆಯೋಜಿಸಿದ ಆಯೋಜಕರು ಕಾರಣ. ಈ ಮೆಗಾ ಪ್ರಾಜೆಕ್ಟ್ಗಳಿಗೆ ಬಳಕೆಯಾಗುವ ಸಂಪನ್ಮೂಲದಲ್ಲಿ ಅದೆಷ್ಟು ಹಳ್ಳಿಗಳನ್ನು ಸಾಂಸ್ಕೃತಿಕವಾಗಿ ಒಳಗೊಳ್ಳಬಹುದು?ಮತ್ತು ಅದು ಮುಖ್ಯವಲ್ಲವೆ ? ಹೀಗೆ ಆಧುನಿಕ ರಂಗಪ್ರಯೋಗವೊಂದನ್ನು ಇಡೀ ರಾತ್ರಿ ಚಳಿಯಲಿ ಕೂತು ನೋಡುವುದೊಂದು ಪುಳಕ ಅನ್ನುವುದಾದರೆ ಹಳೆ ಮೈಸೂರು ಭಾಗದ ಸಣ್ಣ ಹಳ್ಳಿಗಳಲ್ಲಿ ಪ್ರತಿ ವರ್ಷ ಹಳ್ಳಿಯ ಒಂದಷ್ಟು ಜನ ಕೂಡಿಕೊಂಡು ಆಡುವ ರಾಮಾಯಣ ಮತ್ತು ಕುರುಕಕ್ಷೇತ್ರದಂತಹ ನಾಟಕಗಳಿಗೆ ಸಂಸ್ಕೃತಿ ಇಲಾಖೆಯು ಯಾಕೆ ನೆರವಾಗಬಾರದು. ಅವುಗಳ ಗುಣಮಟ್ಟವನ್ನು ಹೆಚ್ಚಿಸುವ ಕುರಿತು ಯಾಕೆ ಯೋಚಿಸಬಾರದು ?. ಹೀಗೆ ರಾಜ್ಯದ ಇತರ ಭಾಗದ ಬಯಲಾಟ,ಯಕ್ಷಗಾನಗಳಿಗೂ ಕೂಡ. ಆಗಬೇಕಿರುವುದು ನದಿಗಳನ್ನು ಕೂಡಿಸಿ ಸಾಗರಕ್ಕೆ ಬಿಡುವುದಲ್ಲ . ಹಳ್ಳಿ ಹಳ್ಳಿಗಳಲ್ಲೂ ಹಳ್ಳಗಳು ಹರಿಯುವಂತೆ ಮಾಡುವುದು. ಇಲ್ಲದೆ ಹೋದರೆ ಈಗಾಗಲೇ ಆಗುತ್ತಿರುವಂತೆ ಡ್ರಾಮಾ ಜುನಿಯರ್ಸ್ ಅನ್ನುವ ರಿಯಾಲಿಟಿ ಶೋಗಳೇ ಮಕ್ಕಳ ರಂಗಭೂಮಿಯ ನಿಜವಾದ ಮಾದರಿಗಳೆಂದು ಎಲ್ಲರೂ ನಂಬ ತೊಡಗಿದರೆ ಅದರಲ್ಲಿ ಆಶ್ಚರ್ಯವೇನು ಇಲ್ಲ .

ರಾಜ್ಯದ ಹಳ್ಳಿಗಳನ್ನು ಸಾಂಸ್ಕೃತಿಕವಾಗಿ ಒಳಗೊಳ್ಳುವ ಜವಾಬ್ದಾರಿ ಸಂಬಂಧಪಟ್ಟ ಇಲಾಖೆಗೆ ಇದೆಯೋ ಇಲ್ಲವೋ ? ಖಂಡಿತವಾಗಿಯೂ ಇದೆ. ದೇಶದ ಅತಿ ಸಣ್ಣ ಘಟಕ ಹಳ್ಳಿ ಮತ್ತು ಅಲ್ಲಿನ ಮನುಷ್ಯ. ಅವನ್ನನ್ನು ಸಾಂಸ್ಕೃತಿಕವಾಗಿ ಒಳಗೊಳ್ಳುವುದು ಸಂಬಂಧಪಟ್ಟ ಇಲಾಖೆಯ ಪ್ರಾತಿನಿಧ್ಯ ಮತ್ತು ಗುರಿಯಾಗಬೇಕು. ಅದು ಬಿಟ್ಟು ನಗರ ಕೇಂದ್ರಿತ “ಮೆಘಾ ಪ್ರಾಜೆಕ್ಟ್” ಗಳನ್ನು ಮಾಡುತ್ತಾ ಇಷ್ಟೊಂದು ದೊಡ್ಡ ತಾರತಮ್ಯವಿರುವಾಗ ಕುವೆಂಪು ಅವರ “ ಯಾರೂ ಮುಖ್ಯವಲ್ಲ ಯಾರೂ ಅಮುಖ್ಯವಲ್ಲ” ಮಾತಿಗಾಗಲಿ ಭಾರತ ಭಾಗ್ಯ ವಿಧಾತ ಬಾಬಾ ಸಾಹೇಬ್ ಅಂಬೇಡ್ಕರರ ಸಾಮಾಜಿಕ ನ್ಯಾಯ ಸೂತ್ರಕ್ಕಾಗಲಿ ಗೌರವ ನೀಡಿದಂತೆ ಆಗುತ್ತದಯೇ ? ನನಗೆ ಅನ್ನಿಸುವ ಹಾಗೆ ಕುವೆಂಪು ಮತ್ತು ಅಂಬೇಡ್ಕರ್ರಂತ ಮಹಾನ್ ದಾರ್ಶನಿಕರು ತಲುಪಬೇಕ್ಕದ್ದು ಹಳ್ಳಿಗಳಿಗೆಯೇ. ಹಾಗೆಂದ ಮಾತ್ರಕ್ಕೆ ನಗರವಾಸಿಗಳಿಗೆ ಇದರ ಅವಶ್ಯಕತೆ ಇಲ್ಲವೆಂದಲ್ಲ. ಎಷ್ಟು ಮತ್ತು ಹೇಗೆ? ಅನ್ನುವುದು ಇಲ್ಲಿ ಮುಖ್ಯವಾದ್ದು. ಇದನ್ನು ರಂಗಭೂಮಿಯ ಬಳಗದ ಹಿರಿಯರು ನನ್ನಂತಹ ಕಿರಿಯರಿಗಿಂತ ಚನ್ನಾಗಿ ಬಲ್ಲರು ಎಂದು ನಂಬುತ್ತೇನೆ .

ಮಲೆಗಳಲ್ಲಿ ಮದುಮಗಳು ಕುರಿತಾಗಿ ಶುರುವಾಗಿರುವ ಚರ್ಚೆ ಇದೊಂದೇ ಪ್ರಯೋಗಕ್ಕೆ ಲೋಪಾರೋಪಗಳಿಗೆ ಸೀಮಿತವಾಗದೆ , ದಾರಿ ತಪ್ಪದೆ ಸರಿಯಾದ ರೀತಿಯಲ್ಲಿ ಗಂಭೀರವಾಗಿ ನಡೆದು, ರಂಗಭೂಮಿಯ ಹಿರಿಯರು ,ಸಂಭಂದಪಟ್ಟ ಇಲಾಖೆ ಮತ್ತು ಅಧಿಕಾರಿಗಳು ಈ ಕುರಿತು ಸರಿಯಾಗಿ ಯೋಚಿಸಿ, ಈ ಮೆಘ ಪ್ರಾಜೆಕ್ಟ್ಗಳ ಜಪವನ್ನು ಬಿಟ್ಟು ಹೊಸ ಮಾರ್ಗಗಳನ್ನು ಕಂಡು ಕೊಳ್ಳ ಬಲ್ಲರು ಅಂದುಕೊಳ್ಳುತ್ತೇನೆ. ಇದು ಸಾಧ್ಯವಾದರೆ ರಂಗಭೂಮಿ ವ್ಯಕ್ತಿ ಕೇಂದ್ರಿತ ನೆಲೆಯಿಂದ ಜಿಗಿದು ಸಮದಾಯದ ನೆಲೆಯಲ್ಲಿ ಹೊಸದೊಂದು ಬಗೆಯ ಒಳಗೊಳ್ಳುವಿಕೆ ಸಾಧ್ಯವಾಗಬಹುದು ,ಹೊಸ ಅವಕಾಶಗಳು ಮತ್ತು ಸಾಧ್ಯತೆಗಳು ತೆರೆದುಕೊಳ್ಳಬಲ್ಲವು ಎಂದು ನಂಬುತ್ತೇನೆ.ಹೊಸ ತಲೆಮಾರಿನಲ್ಲಿ ರಂಗಭೂಮಿ ಕೆಲಸ ಮಾಡಬಯಸುವವನಾಗಿ ರಂಗಭೂಮಿಯು ಧರ್ಮ ,ಜಾತಿ ,ಲಿಂಗ ,ಪ್ರಾದೇಶಿಕತೆ, ಭಾಷೆಯ ಪರಿಧಿಗಳನ್ನು ಮೀರಿ ಎಲ್ಲವನ್ನು ಒಳಗೊಳ್ಳಬಲ್ಲ ನಿಜದ ಅರ್ಥದ “ಭೂಮಿ” ಆಗಲಿ. ಇದು ನನ್ನ ಸದಾಶಯ ಅಥವಾ ಪ್ರಾರ್ಥನೆ.

5 comments to “ರಂಗಭೂಮಿ ನಿಜದ ಅರ್ಥದ “ಭೂಮಿ”ಯಾಗಿ…”
  1. ಲಕ್ಷ್ಮಣ್ ಹೇಳಿರುವುದನ್ನು ನಾನು ಸಂಪೂರ್ಣವಾಗಿ ಬೆಂಬಲಿಸುವೆ.
    ಲಲಿತಾ ಸಿದ್ಧಬಸವಯ್ಯ

  2. ಮಲೆಗಳಲ್ಲಿ ಮದುಮಗಳು ಮೈಸೂರಿನ ಪ್ರಯೋಗವಾದಾಗ ಅದರ ಬಗ್ಗೆ ಉತ್ಸಾಹದಿಂದ ಕನ್ನಡದ ಮೇರು ಕೃತಿಯೊಂದು ದೃಶ್ಯ ಕಾವ್ಯವಾಗುವ ಬಗ್ಗೆ ಆಸಕ್ತಿಯಿಂದ ನಾವೆಲ್ಲ ಬೆಂಬಲಿಸಿದೆವು. ಆ ಪ್ರಯೋಗದಿಂದ ಮತ್ತು ನಂತರ ಇದೇ ರೀತಿ ಕನ್ನಡ ಇನ್ನಿತರ ಅನೇಕ ಮೇರುಕೃತಿಗಳು ಜನರಿಗೆ ನಿಲುಕಲಿ ಎಂಬುದು ನಮ್ಮೆಲ್ಲರ ಆಶಯವೂ ಆಗಿತ್ತು.
    ಮೈಸೂರಿನ ಪ್ರಯೋಗದ ವಿಡಿಯೋ ಕೂಡಾ ಲಭ್ಯವಿದೆ. ನಮ್ಮಲ್ಲಿ ಅದನ್ನು ಕೂಡಾ ಹಲವು ಬಾರಿ ಪ್ರದರ್ಶಿಸಿದ್ದೇವೆ. ವಿಡಿಯೋ ಮೂಲಕ ನೋಡುವುದು ನೇರ ನೋಡಿದಷ್ಟು ಪರಿಣಾಮಕಾರಿ ಅಲ್ಲ ನಿಜ ಆದರೆ ಕಾದಂಬರಿಯನ್ನು ಓದದ ಅನೇಕರಿಗೆ ಒಂದು ಚಿತ್ರಣ ಮತ್ತು ಅನುಭವವನ್ನು ಖಂಡಿತ ನೀಡುತ್ತದೆ.
    ಆಗ ಪ್ರಯೋಗಿಸಿದ್ದು ಮೈಸೂರು ರಂಗಾಯಣದ ಅಡಿಯಲ್ಲಿ.
    ಅದರ ವೆಚ್ಚದ ಬಗ್ಗೆ ಆಗ ನಾವು ಅಷ್ಟೊಂದು ತಲೆಕೆಡಿಸಿಕೊಂಡಿರಲಿಲ್ಲ. ಕಾರಣ ಮೇಲೆ ಹೇಳಿದ್ದೇ . ಕನ್ನಡದ ಮಹಾನ್ ಕಾದಂಬರಿಯನ್ನು ಈ ರೀತಿ ಪರಿಚಯಿಸುವ ಸಾಹಸದ ಬಗ್ಗೆ ನಮಗೆ ಮೆಚ್ಚುಗೆಯಿತ್ತು.
    ಆದರೆ ನಂತರ ನಾಟಕದ ಪರಿಚಯ ಪತ್ರದಲ್ಲಿ ಮುದ್ರಿತವಾದ “ ಜಡಗೊಂಡ ಕನ್ನಡ ರಂಗಭೂಮಿಗೆ, ನವಚೈತನ್ಯ ನೀಡಿದ ನಾಟಕ” ಎಂಬ ವಾಕ್ಯವನ್ನು ನೋಡಿ ನಾನು ಬಸವಲಿಂಗಯ್ಯನವರಲ್ಲಿ ತಕರಾರು ತೆಗೆದೆ “ಇದು ನಿಮ್ಮ ದುರಹಂಕಾರ ಎಂದೆ” ಅದಕ್ಕವರು “ಇಲ್ಲ ಇಲ್ಲ ವಾಕ್ಯ ಮುದ್ರಿಸಲು ನಾನು ಕಾರಣನಲ್ಲ, ನಾನು ಅದನ್ನು ನಾಟಕವೆಂದೂ ಕರೆದಿಲ್ಲ” ಎಂದರು.
    ಆಗ ನಾನು “ನೋಡಿ ನಾವೆಲ್ಲ ಚಿಕ್ಕವರಿದ್ದಾಗ ಹಾಸನ ಜಾತ್ರೆಗೆ ಸರ್ಕಸ್ ಬರುತ್ತಿತ್ತು. ಇಡೀ ಜಿಲ್ಲೆಯಲ್ಲಿ.ಮಕ್ಕಳೆಲ್ಲ ಮನೆಯವರನ್ನು ಮೂರುತಿಂಗಳ ಮೊದಲೇ ಸರ್ಕಸ್ಸಿಗೆ ಕರೆದೊಯ್ಯ ಬೇಕೆಂದು ಪೀಡಿಸಲು ಪ್ರಾರಂಭಿಸುತ್ತಿದ್ದರು. ನಂತರ ಒಂದು ದಿನ ಸರ್ಕಸ್ ನೋಡುವ ಅವಕಾಶ ಸಿಗುತ್ತಿತ್ತು. ಎಷ್ಟೋ ಶಾಲೆಗಳಿಂದ ಮಕ್ಕಳನ್ನು ಬಸ್ ಬಾಡಿಗೆಗೆ ಪಡೆದು ಕರೆದೊಯ್ಯತ್ತಿದ್ದರು. ಸರ್ಕಸ್ ಒಂದು ಅದ್ಭುತ ಅನುಭವವಾಗಿರುತ್ತಿತ್ತು. ಈಗ ಆಗಿದ್ದರೆ ಸರ್ಕಸ್ ಕಂಪೆನಿಯ ಮಾಲಿಕನಿಗೆ ಪ್ರಚಾರ ಪತ್ರಿಕೆಯಲ್ಲಿ “ಆಟವಿಲ್ಲದೆ ಸೊರಗುತ್ತಿರುವ ಮಕ್ಕಳಿಗೆ ನವಚೈತನ್ಯ ನೀಡುವ ಸರ್ಕಸ್” ಎಂದು ಮುದ್ರಿಸಲು ಹೇಳುತ್ತಿದ್ದೆ ಎಂದೆ. ನನ್ನ ಬೆನ್ನಿಗೆ ಹೊಡೆದು ನಕ್ಕರು.
    ಎರಡನೇ ಬೆಂಗಳೂರಿನ ಪ್ರಯೋಗಕ್ಕೆ ತಯಾರಾಗುತ್ತ ಇದ್ದ ಸಮಯದಲ್ಲೇ ನಾನು ಮತ್ತು ಬಸು ಅವರು ಇಡೀ ಒಂದು ದಿನ ರೈಲಿನಲ್ಲಿ ಪ್ರಯಾಣ ಮಾಡುತ್ತ ಜೊತೆಗಿದ್ದೆವು. ಆಗ ಮಾತಾಡಿದ ಎಲ್ಲ ಸಂಗತಿಗಳನ್ನು ಇಲ್ಲಿ ತಿಳಿಸಲು ಸಾಧ್ಯವಾಗದು.
    ಈಗ ಮತ್ತೊಮ್ಮೆ ಖರ್ಚು ಮಾಡಿ ಅದನ್ನೇ ಯಾಕೆ ಪ್ರಯೋಗ ಮಾಡುತ್ತೀರಿ. ಬೇರೆ ಯಾಕೆ ತೆಗೆದುಕೊಳ್ಳಬಾರದು. ಎಂದಾಗ ಅದರ ಹಣ ಕಾಸಿನ ವಿವರಗಳನ್ನೆಲ್ಲ ವಿವರಿಸಿ ಇದರಲ್ಲಿ ಹೆಚ್ಚಿನ ಭಾಗವನ್ನು ಸರ್ಕಾರಕ್ಕೆ ಹಿಂತಿರುಗಿಸಿದ್ದೇನೆ. ಎಂದರು. ಸರಿ ಹಾಗಿದ್ದರೆ. ಈಗಾಗಲೇ ಸಿದ್ಧವಿದ್ಧ ಮೈಸೂರಿನ ತಂಡದೊಂದಿಗೆ ಕರ್ನಾಟಕದ ಕೆಲವು ಕಡೆ ಅದನ್ನು ಪ್ರದರ್ಶಿಸಬಹುದಿತ್ತಲ್ಲ? ಎಂದದಕ್ಕೆ ಏನೇನೋ ತಾಂತ್ರಿಕ ಕಾರಣಗಳನ್ನು ಕೊಡುತ್ತ ಹೋದರು. ಇಡೀ ಒಂದು ದಿನ ಇದೇ ಚರ್ಚೆ ನಡೆಯಿತು. ಬೇರೆ ಬೇರೆ ಕೃತಿಗಳನ್ನು ಮಾಡಬಹುದು ಎಂಬುದನ್ನವರು ತಾತ್ವಿಕವಾಗಿ ಒಪ್ಪಿಕೊಂಡರೇ ವಿನಃ ಅದನ್ನು ಕೃತಿಗಿಳಿಸುವ ಯಾವ ಸೂಚನೆಯನ್ನೂ ನೀಡಲಿಲ್ಲ. ಇದಕ್ಕೆ ಬಸು ಒಬ್ಬರೇ ಕಾರಣರು ಎಂದು ನನಗೆ ಅನ್ನಿಸುತ್ತಿಲ್ಲ. ನಮ್ಮ ಅನೇಕ ಗೆಳೆಯರು ಹೇಳಿದಂತೆ ರಂಗಭೂಮಿಯಲ್ಲಿ ಇರುವ ಸಾಂಸ್ಕೃತಿಕ ಗುತ್ತಿಗೆದಾರರು ಮತ್ತು ಸಾಂಸ್ಕೃತಿಕ ರಾಜಕಾರಣಿಗಳು ಕಾರಣ.
    ನಾವೆಲ್ಲ ಸೇರಿ ಈ ಬಗ್ಗೆ ಒಂದು ನಿಯಮಾವಳಿ ರೂಪಿಸುವಂತೆ ಸರ್ಕಾರವನ್ನು ಒತ್ತಾಯಿಸಬೇಕು.

  3. ಸ್ನೇಹಿತರೇ, ನಾನು ಚರ್ಚೆಯಲ್ಲಿ ಹೇಳಿದ್ದು ಇದನ್ನೇ,
    ಮತ್ತೆ ಮತ್ತೆ ಬೆಂಗಳೂರು ಏಕೆ? ಒಂದೇ ನಾಟಕಕ್ಕೆ ಅಷ್ಟು ಬಾರಿ ಅನುದಾನ ಏಕೆ? ಎಂದು. ನಾವುಗಳು ನಾಟಕ ಚೆನ್ನಾಗಿಲ್ಲ ಅಂತ ಹೇಳುತ್ತಿಲ್ಲ.ಪ್ರಯತ್ನದ ಬಗ್ಗೆ ಮೆಚ್ಚುಗೆ ಇದೆ ಆದರೆ ಪದೇ ಪದೇ ಏಕೆ? ಪ್ರೇಕ್ಷಕರ ಮೇರೆಗೆ ಎಂದೂ ಹೇಳಲಾಗುತ್ತಿದೆ. ಪ್ರೇಕ್ಷಕರು ಕೇಳಿದ ನಾಟಕಗಳಿಗೆಲ್ಲಾ ಅನುದಾನ ಕೊಡಲಾಗುವುದೇ? ಇವೆಲ್ಲಾ ಪ್ರಶ್ನೆಗಳಿವೆ
    ನಮ್ಮ ತಂಡದ್ದೇ ಉದಾಹರಣೆ ಕೊಡುವುದಾದರೆ ಗುಬ್ಬಿ ವೀರಣ್ಣನವರ 125 ನೇ ವರ್ಷಾಚರಣೆಗೆ ಸರ್ಕಾರ ಮತ್ತು ಟ್ರಸ್ಟ್‌ ಸೇರಿ ಹೆಸರಾಂತ ಕಲಾವಿದರಿಗೆ ಹಣ ಕೊಟ್ಟು ಪ್ರದರ್ಶನ ಮಾಡಿಸಿದರು. ಕಂಪೆನಿ ನಾಟಕಗಳನ್ನೆ ನೋಡಿಬೆಳೆದ ನಮಗೂ ಆಸೆ ಇತ್ತು ಮಾಡುವ ಶಕ್ತಿ ಯೂ ಇತ್ತು ಆದರೆ ಅಂತಹಾ ಪ್ರಾಜೆಕ್ಟ್ ಗಳು ನಮಗೆ ಸಿಗಲ್ಲ ಅದು ಬೆಂಗಳೂರಿನ ದೊಡ್ಡವರಿಗೆ ಸೀಮಿತ. ನಿರಾಶರಾಗದೆ ನಾನೇ ಶ್ರಮವಹಿಸಿ ಉತ್ತರಕುಮಾರ ನಾಟಕ ಬರೆದು ಕಂಪನಿ ಮಟ್ಟುಗಳನ್ನೇ ಹಾಕಿ ನಾಟಕವೂ ಸಿದ್ದಗೊಂಡಿದೆ. ಬೇಕಾಗಿರುವ ಪರದೇ ಬರೆಸಲು ನಮ್ಮ ಬಳಿ ಹಣವಿಲ್ಲ. ಪ್ರದರ್ಶನ ಇರೊದರಲ್ಲೇ ನಡೆಯುತ್ತಿದೆ
    ಇಲಾಖೆ 50ಸಾವಿರ ಇಲ್ಲ1ಲಕ್ಷ ಅನುದಾನ ವರ್ಷಕ್ಕೆ ಕೊಟ್ಟರೆ ಪುಣ್ಯ. ನಮಗೂ ಸ್ವಲ್ಪ ಹಣ ಜಾಸ್ತಿ ಕೊಟ್ಟರೆ ಇಂತದ್ದನ್ನು ಮಾಡಬಹುದು ಅನ್ನಿಸುತ್ತದೆ.
    ಮಲೆಗಳಲ್ಲಿ ಮದುಮಗಳು ತರದ ಪ್ರದರ್ಶನ ಗಳು ಮತ್ತೆ ಮತ್ತೆ ಸರ್ಕಾದ ಹಣದಲ್ಲಿ ಮಾಡುವ ಬದಲಿ ಜನರ ಹಣದಿಂದ ಮಾಡಲಿ ಟಿಕೇಟ್ ನಿಂದ ಬಾರಿ ಹಣ ಬರ್ತಾ ಇದೆ ಅನ್ನುವವರು ಆಹಣವನ್ನೇ ಬಳಸಬಹುದು.
    ನಾವು ತಯಾರು ಮಾಡಿಕೊಂಡಿರುವ ನಾಟಕಗಳಿಗೆ ಹಣಕೊಟ್ಟರೆ ಹಳ್ಳಿಗಳಿಗೆ ಹೋಗಲು ನಾವು ತಯಾರಿದ್ದೇವೆ.
    ನಮ್ಮ ಈ ಮಾತುಗಳನ್ನು ಹೊಟ್ಟಕಿಚ್ಚು, ಮಾಡಲಾಗದವರು, ಸಹಿಸಲಾಗದವರು,ಕುವೆಂಪು ವಿರೋದಿಗಳು, ಇತ್ಯಾದಿ ಯಾಗಿ ಕಂಡಿಸುವುದನ್ನು ಮೂರ್ಖತನ ಎನ್ನದೇ ವಿದಿಯಿಲ್ಲ

  4. ಉತ್ತರಕನ್ನಡ ದಂತ ಬಹುದೂರದ ಪ್ರದೇಶದಲ್ಲಿರುವ ನಮಗೆ‌ಅಂಥ ಪ್ರಯೋಗ ಗಳೇ ಗಗನಕುಸುಮವಾಗುತ್ತದೆ. ಅದೂ ಸಹ ವಿಕೇಂದ್ರೀಕರಣ ವಾಗುವ ಅವಶ್ಯಕತೆ ಯಿದೆಯೇನೊ.

ಪ್ರತಿಕ್ರಿಯಿಸಿ