ಡೇವಿಡ್ ಬಾಂಡ್ ಬರೆಯುವ ಚಿತ್ರ ಭಾರತ : ಫಾಂಡ್ರಿ

ಫಾಂಡ್ರಿ (ನಾಗರಾಜ್ ಮಂಜುಳೆಯ ನಿರ್ದೇಶನದಲ್ಲಿ ೨೦೧೩ರಲ್ಲಿ ಬಂದ ಮರಾಠಿ ಚಿತ್ರ)

ಈ ಹಿಂದಿನ ಎರಡು ಲೇಖನಗಳಲ್ಲಿ ನಾನು ಗಮನಿಸಿದ ವೆಟ್ರಿಮಾರನ್ ನಿರ್ದೇಶನದ ಎರಡು ತಮಿಳು ಚಲನಚಿತ್ರಗಳಲ್ಲಿ ಸ್ಥಿತ್ಯಂತರವಿತ್ತು. ಮೊದಲನೆಯದಕ್ಕೆ ಜನಪ್ರಿಯ ಮತ್ತು ವಾಣಿಜ್ಯ ಸ್ಪರ್ಶವಿದ್ದರೆ, ಎರಡನೆಯದರಲ್ಲಿ ಕಲಾತ್ಮಕವಾಗುತ್ತಲೇ ಅಂತರಾಷ್ಟ್ರೀಯ ಸಮುದಾಯಕ್ಕೆ ಪ್ರಿಯವಾಗುವಂತಹ ಪ್ರಯತ್ನವಿತ್ತು ಮತ್ತು ಈ ಪ್ರಜ್ಞಾಪೂರ್ವಕ ಪ್ರಯತ್ನದಿಂದಾಗಿ ಎರಡನೆಯ ಚಿತ್ರ ಅಷ್ಟರಮಟ್ಟಿಗೆ ತನ್ನ ನೈಜತೆ ಕಳೆದುಕೊಂಡಿತ್ತು. ಮುಂದಿನ ಎರಡು ಲೇಖನಗಳಲ್ಲಿ ನಾನು ಗಮನಿಸಲು ಬಯಸುವ ಮಂಜುಳೆಯ ಎರಡು ಮರಾಠಿ ಚಿತ್ರಗಳಲ್ಲಿನ ನಡುವಿನ ಸ್ಥಿತ್ಯಂತರ ವಿರುದ್ಧ ದಿಕ್ಕಿನಲ್ಲಿದೆ. ‘ಫಾಂಡ್ರಿ’ಯ ಮೂಲಕ ಮಂಜುಳೆಯ ‘ಕಲಾತ್ಮಕ’ ನಿರ್ದೇಶಕ ಎನಿಸಿಕೊಂಡರೆ, ನಂತರದ ‘ಸೈರಾಟ್’ ಅವರನ್ನು ಜನಪ್ರಿಯತೆಯ ನೆಲೆಯಲ್ಲಿ ತಂದಿರಿಸಿತು.

‘ಫಾಂಡ್ರಿ’ ಮಂಜುಳೆಯ ಮೊದಲ ಚಿತ್ರ. ೨೦೦೯ರಲ್ಲಿಯೇ ಪ್ರಶಸ್ತಿ ವಿಜೇತ ಕಿರುಚಿತ್ರ ‘ಪಿಸ್ತುಲ್ಯಾ’ ಮೂಲಕ ಅವರು ಗಮನ ಸೆಳೆದಿದ್ದರು. ದಮನಿತ ಜಾತಿಯೊಂದರ ಯುವಕ ಎದುರಿಸುವ ಸಮಸ್ಯೆಗಳು ಈ ಕಿರುಚಿತ್ರದ ಹಂದರವಾಗಿತ್ತು. ಇದೇ ದನಿ ಮುಂದೆ ಸೈರತ್‍ನಲ್ಲಿಯೂ ಪುನರಾವರ್ತನೆಯಾಯಿತು. ಸ್ವತಃ ಸೋಲಾಪುರ್ ಬಳಿಯ ಅಜ್ಞಾತ ಹಳ್ಳಿಯೊಂದ ಕಲ್ಲು ಒಡೆಯುವ ಕಸುಬಿನ ಕುಟುಂಬದವರಾದ ಮಂಜುಳೆ, ತಮ್ಮ ಸುತ್ತಲಿನ ದನಿಗಳಿಂದಲೇ ಈ ಮೂರು ಕೃತಿಗಳನ್ನು ಕಟ್ಟಿದ್ದಾರೆ.

ಹಾಗೆ ನೋಡಿದರೆ, ಫಾಂಡ್ರಿಯ ಮುಖ್ಯ ಪಾತ್ರ ಜಾಬ್ರಿ (ಜಂಬೂನಾಥ್)ಯ ಕುಟುಂಬದ ಕಸುಬು ಇನ್ನೂ ಹೆಚ್ಚು ಅವಮಾನಕರವಾದ ಹಂದಿ ಹಿಡಿಯುವ ಕೆಲಸ. ಕೈಕಡಿ ಎನ್ನುವ ಈ ಸಮುದಾಯದ ಮುಖ್ಯ ಕಸುಬು ಬುಟ್ಟಿ ಹೆಣೆಯುವುದು. ಕುಟುಂಬದ ಹಿರಿಯಜ್ಜ ಬುಟ್ಟಿ ಹೆಣೆಯುತ್ತಿರುವ ಒಂದು ದೃಶ್ಯವೂ ಸಿನಿಮಾದಲ್ಲಿದೆ. ಒಂದು ಕಾಲದ ಅರೆ-ಅಲೆಮಾರಿ ಜನಾಂಗವಾದ ಕೈಕಡಿ ಒಂದೆಡೆ ‘ನೆಲೆಗೊಳ್ಳುವ’ ಸಂದರ್ಭದಲ್ಲಿ ಹಂದಿಹಿಡಿಯುವ ಕಸುಬಿಗೆ ಹೊಂದಿಕೊಳ್ಳಬೇಕಾದ ಸಾಮಾಜಿಕ ಸಂದರ್ಭವನ್ನೂ ಇದು ಸೂಚ್ಯವಾಗಿ ಎತ್ತಿಹಿಡಿಯುತ್ತದೆ. ೨೦೧೫ರ ಹಿಂದಿ ಚಿತ್ರ ‘ಮಸಾನ್’ ವಿಮರ್ಶಿಸುವಾಗಲೂ ಈ ಅಂಶ ಎದ್ದುಕಂಡಿತ್ತು. ಹೀಗೆ ಜಾತಿ ಎನ್ನುವುದು ಹಲವರು ಹೇಳುವಂತೆ  ‘ಶತಮಾನಗಳಷ್ಟು ಹಳೆಯದಾದ ಪೆಡಂಭೂತ’ವಾಗಿರದೆ, ಜನಾಂಗಗಳ ರೂಪಾಂತರದ ಹಿನ್ನೆಲೆಯಲ್ಲಿ ನೋಡಿದಾಗ ಆಧುನಿಕ ಅನಿಷ್ಟವೇ ಆಗಿದೆ.

‘ಪಿಸ್ತುಲ್ಯಾ’ದಲ್ಲಿ ಶಿಕ್ಷಣ ಪ್ರವೇಶದ ಸಮಸ್ಯೆ ವಿವೇಚಿಸುವ ಮಂಜುಳೆ ‘ಫಾಂಡ್ರಿ’ಯಲ್ಲಿ ಅದನ್ನೇ ದೊಡ್ಡದಾಗಿ ವಿಸ್ತರಿಸುತ್ತಾರೆ. ಸ್ವತಃ ಕವಿಯಾಗಿರುವ ಅವರ ಪ್ರತಿಭೆಯಿಂದಾಗಿ ಎರಡು ಸಾಹಸೀ ಕಲ್ಪನೆಗಳು ಜಾಬ್ರಿಯಲ್ಲಿ ಮೂಡುತ್ತವೆ. ಮೊದಲನೆಯದು, ಮೇಲ್ವರ್ಗದ ಯುವತಿಯೊಬ್ಬಳನ್ನು ದೂರದಿಂದಲೇ ಮೂಕವಾಗಿ ಜಾಬ್ರಿ ಪ್ರೀತಿಸುವುದು. ಮತ್ತೊಂದು, ಎಲ್ಲಾ ಕಲ್ಪನೆಗಳನ್ನು ನಿಜವಾಗಿಸುವ ಮಾಯಾಶಕ್ತಿಯಿದೆ ಎನ್ನಲಾದ ‘ಕಪ್ಪು ಗುಬ್ಬಚ್ಚಿ’ಯೊಂದನ್ನು ಜಾಬ್ರಿ ಬಯಸುವುದು. ಇವರಡೂ ಕನಸುಗಳು ಭಿನ್ನ ಹಳಿಗಳಾಗಿ ಕಥಾ ವಿನ್ಯಾಸಕ್ಕೆ ಒತ್ತು ಕೊಟ್ಟಿವೆ. ಶಾಲಾ ಪ್ರೀತಿ ಹಾಗೂ ಕಸುಬಿನ ಕರ್ತವ್ಯದ ನಡುವಿನ ಜಾಬ್ರಿಯ ಘರ್ಷಣೆಯ ಜೊತೆಯಲ್ಲಿಯೇ ಈ ಎರಡೂ ಕಲ್ಪನೆಗಳಿಂದಾಗಿ, ಕತೆ ನಿಧಾನವಾಗಿ ಸಾಗಿದರೂ ಗತಿ ಸಮರ್ಪಕವಾಗಿದೆ. ಮೇಲುನೋಟಕ್ಕೆ ವಿನೋದವಾಗಿಯೂ ಆಳದಲ್ಲಿ ಆಘಾತಕಾರಿಯಾಗಿಯೂ ಆಗಿರುವ ಕ್ಲೈಮ್ಯಾಕ್ಸನ್ನು ಸರಿಯಾದ ಸಮಯಕ್ಕೆ ತಲುಪುವಲ್ಲಿ ಕಥೆಯ ಗತಿ ಸಫಲವಾಗಿದೆ.

ಹಳ್ಳಿಯನ್ನು ಬಾಧಿಸುತ್ತಿರುವ ಹಂದಿಯೊಂದನ್ನು ಹಿಡಿದು ಕೈ ಕೊಳಕಾಗಿಸಿಕೊಳ್ಳುವುದಕ್ಕೆ ಯಾರೂ ಮುಂದಾಗಿರುವುದಿಲ್ಲ. ಮಾನವ ಹಾಗೂ ಪ್ರಾಣಿಯ ನಡುವಿನ ಹೋರಾಟದಂತೆ ಚಿತ್ರಿಸಲ್ಪಡುವ ಈ ಪ್ರಸಂಗದಲ್ಲಿ ಗೋಡೆಯಾಗಿ ಜಾಬ್ರಿಯ ಕುಟುಂಬವೊಂದೇ ನಿಲ್ಲಬೇಕಾಗುತ್ತದೆ. ಯಾವಾಗ ಶಾಲೆ ಪುನರಾರಂಭವಾಗುವುದೋ ಎಂಬ ತವಕದಲ್ಲಿರುವ ಜಾಬ್ರಿಗೆ ಈ ಪ್ರಸಂಗದಲ್ಲಿ ಭಾಗಿಯಾಗಲು ಕಿಂಚಿತ್ತೂ ಮನಸಿಲ್ಲ. ಯಾಕೆಂದರೆ ಇದು ಊರಿಗೆ ಉಪಕಾರವಾಗುವಂತಹ ಹಾಗೂ ಎಲ್ಲರೂ ಶಿಳ್ಳೆ ಹಾಕಿ ಪ್ರೋತ್ಸಾಹಿಸುವಂತಹ ಸಾಹಸ ಭೇಟೆಯಲ್ಲ. ಬದಲಿಗೆ ಅವಮಾನಕರ ಲೇವಡಿ ಕೀಟಲೆಗಳಾಡುತ್ತಿರುವ ಪ್ರೇಕ್ಷಕ ಗಣದ ಮುಂದೆ ವಿಧಿಯಿಲ್ಲದೆ ನಿರ್ವಹಿಸಬೇಕಾದ ಕರ್ತವ್ಯ. ಆ ಗುಂಪಿನಲ್ಲಿ ಜಾಬ್ರಿಯ ಸಹಪಾಠಿಗಳಿದ್ದಾರೆ, ಅವನ ಖಾಸಗಿ ಕನಸುಗಳ ಒಡತಿಯಾದ ಯುವತಿಯೂ ಇದ್ದಾಳೆ.

ಕ್ಲೈಮ್ಯಾಕ್ಸ್‌ನ ಈ ಪ್ರಸಂಗದಲ್ಲಿ ಜಾಬ್ರಿಯ ಸಂಕಟ ಮನೋಜ್ಞವಾಗಿದೆ. ಒಂದೆಡೆ ಅವನಿಗೆ ಇಡೀ ರಂಗಸ್ಥಳದಿಂದ ಓಡಿಹೋಗಿ ಮುಖ ಮುಚ್ಚಿಕೊಂಡು ಅದೃಶ್ಯವಾಗಿಬಿಡುವ ತವಕವಿದೆ. ಮತ್ತೊಂದೆಡೆ, ಊರಿನ ಮುಂದೆ ತಾನೂ ತನ್ನ ಕುಟುಂಬವೂ ಅನುಭವಿಸುತ್ತಿರುವ ಅಪಾರ ಅವಮಾನದ ಕುರಿತು ಸಹಜ ಕೋಪವಿದೆ. ಇವರಡರ ನಡುವಿನ ಘರ್ಷಣೆಯಲ್ಲಿ ಕ್ರಮೇಣ ಆಕ್ರೋಶ ಹೆಮ್ಮರವಾಗಿ ಬೆಳೆದು ಪ್ರತಿಭಟನೆಯ ಸೊಲ್ಲಿನಲ್ಲಿ ಸಿನೆಮಾ ಮುಕ್ತಾಯವಾಗುತ್ತದೆ.

ಈ ಚಿತ್ರದಲ್ಲಿ ಎದ್ದು ಕಾಣುವುದು ಅತ್ಯುನ್ನತ ದರ್ಜೆಯ ಛಾಯಾಗ್ರಹಣ (ವಿಕ್ರಮ್ ಅಮ್ಲಾಡಿ) ಮತ್ತು ಸಂಗೀತ ನಿರ್ದೇಶನ (ಅಲೋಕಾನಂದ ದಾಸಗುಪ್ತ). ಇವೆರಡರಿಂದಾಗಿ ಚಿತ್ರ ನೋಡಲೂ ಕೇಳಲೂ ಸುಂದರವಾಗಿ ಮೂಡಿಬಂದಿದೆ. ಬಹುತೇಕ ನಟರು ಕಲಾವಿದರಲ್ಲದಿರುವುದು ಚಿತ್ರದ ನೈಜತೆಗೆ ಪೂರಕವಾಗಿದೆ. ಜಾಬ್ರಿಯ ಅಸಾಧಾರಣ ಕನಸುಗಳನ್ನು ಮೂಢನಂಬಿಕೆಗಳನ್ನೂ ಪ್ರೋತ್ಸಾಹಿಸುವ ಹಿರಿಯ ಗೆಳೆಯ ಚಾಣಕ್ಯನ ಪಾತ್ರದಲ್ಲಿ ಖುದ್ದು ಮಂಜುಳೆಯೇ ಕಾಣಿಸಿಕೊಂಡಿದ್ದಾರೆ.

ಜಾತಿ ಶೋಷಣೆ ಆಧಾರಿತ ಬೇರೆ ಯಾವುದೇ ಭಾರತೀಯ ಚಿತ್ರಗಳಿಗಿಂತ ಹೆಚ್ಚು ನೈಜ ಹಾಗೂ ವಾಸ್ತವಿಕ ಸಿನೆಮಾ ಫ್ಯಾಂಡ್ರಿ. ಆದರೆ ಅಷ್ಟಕ್ಕೇ ನಿಲ್ಲದೆ ಈ ಸಮಸ್ಯೆಯ ಸಂಕೀರ್ಣತೆಗಳ ಬಗ್ಗೆ ಅನೇಕ ಮುಖ್ಯ ಪ್ರಶ್ನೆಗಳನ್ನು ಈ ಚಿತ್ರ ಎತ್ತುತ್ತದೆ. ಮಂಜುಳೆ ಅನೇಕ ಸಂದರ್ಶನಗಳಲ್ಲಿ ಸೂಚಿಸಿರುವಂತೆ , ಪರಿಸ್ಥಿತಿ ಎಷ್ಟೇ ಬದಲಾಗಿದ್ದರೂ ಬಾಹ್ಯ ರೂಪದ ಶೋಷಣೆ ಕಡೆಮೆಯಾಗಿರುವುದೇ ಹೊರತು ಆಂತರಿಕ ಶೋಷಣೆಯಲ್ಲ. ಆಂತರ್ಯದಲ್ಲಿನ ಶೋಷಿತ ಸ್ಥಿತಿ ಬಲಿಪಶುವಿನ ಮನದಲ್ಲಿನ ಸ್ವಚಿತ್ರಣದಲ್ಲಿಯೂ ದಾಖಲಾಗಿರುವುದನ್ನು ಈ ಚಿತ್ರದಲ್ಲಿ ಎಲ್ಲವನ್ನೂ ಒಪ್ಪಿಕೊಂಡು ಬಿಮ್ಮಗಿರುವ ಜಾಬ್ರಿಯ ಕುಟುಂಬದ ವರ್ತನೆ ಹಾವ ಭಾವಗಳಲ್ಲಿ ಕಾಣಬಹುದು. ಇದೇ ಮೇಲಾಂಕಲಿ ಮುಂದೆ ಸೈರಾಟ್ ಚಿತ್ರ ದಲ್ಲಿ ದಲಿತ ಪಾಶ್ವನ ಕುಟುಂಬದಲ್ಲಿಯೂ ಮುಂದುವರಿಯುತ್ತದೆ.

ನಾನು ಇತ್ತೀಚೆಗೆ ನೋಡಿದ ಭಾರತೀಯ ಚಿತ್ರಗಳಲ್ಲೇ ಫಾಂಡ್ರಿ ನನ್ನನ್ನು ಅತಿಹೆಚ್ಚು ಕಲಕಿದ ಚಿತ್ರ. ಕೊನೆಯಲ್ಲಿ ಕೆಲವೊಂದು ಬಿಡುಗಡೆ ದಾರಿಗಳನ್ನು ತೋರಿಬಿಡುವ ಸಮಾಧಾನಕರ ಚಿತ್ರವಲ್ಲ ಇದು. ನಿಜ. ವ್ಯಕ್ತಿಗೆ ಶಿಕ್ಷಣ, ನಗರೀಕರಣ ಮುಂತಾದ ಆಧುನಿಕ ಪರಿಪಾಠಗಳಿಂದ ಜಾತಿ ವರ್ಗದ ಪ್ರಶ್ನೆಗಳ ಅಗತ್ಯವಿಲ್ಲದೇ ಜೀವಿಸುವುದು ಶಕ್ಯವಿದೆ. ಆದರೆ ಇದು ವ್ಯಕ್ತಿಯೊಬ್ಬನಿಗೆ ಬಿಡುಗಡೆಯ ಉಪಾಯಗಳಾಗುತ್ತವೆಯೇ ಹೊರತು, ಸಮುದಾಯಗಳಿಗೆ ಪರಿಹಾರವಾಗಿಲ್ಲ. ಪರಂಪರಾಗತ ಸಮುದಾಯಗಳಿಗೆ ತಮ್ಮ ಮೌಲ್ಯ ಜೀವನಶೈಲಿಯನ್ನು ಸಂಭಾಳಿಸಿಕೊಂಡೇ ನೆಮ್ಮದಿ ಹಾಗೂ ಘನತೆಯಲ್ಲಿ ಬದುಕುವ ಸ್ಥಿತಿಯನ್ನೂ ಆಧುನಿಕತೆಯಂತೂ ಇನ್ನೂ ಸೃಷ್ಟಿಸಿಲ್ಲ. ಹೆಚ್ಚುತ್ತಿರುವ ವರ್ಗ-ಭೇದವಂತೂ ಜಾತಿಶೋಷಣೆಯ ಕಹಿಯನ್ನು ಇನ್ನಷ್ಟು ತೀವ್ರವಾಗಿಸಬಹುದು. ಹೀಗಾಗಿ ಇಲ್ಲಿ ವ್ಯಕ್ತಿಗೆ ಭರವಸೆಯಿದೆಯೇ ಹೊರತು, ಸಮುದಾಯಗಳ ನೆಲೆಯಲ್ಲಿ ಪೂರ್ಣಚಿತ್ರ ನೋಡಿದಾಗ ‘ಫಾಂಡ್ರಿ’ಯಲ್ಲಿ ತೋರಿರುವಂತೆ, ಪರಿಸ್ಥಿತಿ ನಿರಾಶಾದಾಯಕವೇ ಆಗಿದೆ.

ಇಂಗ್ಲೀಷಿ ನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ


ಅನುವಾದ : ಅವಿರತ ಮಾವಿನಕುಳಿ
ಮೂಲತಃ ಮೈಸೂರಿನವರಾದ ಅವಿರತ ಮಾವಿನಕುಳಿ ಭಾರತೀಯ ರಿಸರ್ವ್ ಬ್ಯಾಂಕ್ ನಲ್ಲಿ ಉದ್ಯೋಗಿ .

ಪ್ರತಿಕ್ರಿಯಿಸಿ