ಎಚ್.ಎಸ್. ಶಿವಪ್ರಕಾಶ್ ಕವಿತೆ ‘ಸಮಗಾರ ಭೀಮವ್ವ’

ಕನ್ನಡದ ಕವಿತೆಗಳಿಗೆ ಹೊಸತೊಂದು ನುಡಿಗಟ್ಟು ಮತ್ತು ಅರ್ಥಲೋಕವನ್ನು ನೀಡಿದ ಎಚ್. ಎಸ್. ಶಿವಪ್ರಕಾಶ್ ಕವಿಯಾಗಿ, ನಾಟಕಕಾರರಾಗಿ, ಅನುವಾದಕರಾಗಿ, ವಿಮರ್ಶಕರಾಗಿ ಹೆಸರು ಮಾಡಿರುವ ವಿಶಿಷ್ಟ ಬರಹಗಾರರು.

ಮಿಲರೇಪ , ಮಳೆ ಬಿದ್ದ ನೆಲದಲ್ಲಿ , ಅನುಕ್ಷಣ ಚರಿತೆ , ಸೂರ್ಯ ಜಲ,ನವಿಲು ನಾಗರ, ಮಳೆಯೇ ಮಂಟಪ , ಮತ್ತೆ ಮತ್ತೆ , ಮಬ್ಬಿನ ಹಾಗೆ ಕಣಿವೆಯಾಸಿ, ಮೀಸಲು ಕವಿತೆಗಳು ಮುಂತಾದುವು ಇವರ ಕವನಸಂಕಲನಗಳು. ಶಿವಪ್ರಕಾಶರ ಕವಿತೆಗಳಲ್ಲಿ ಪರಂಪರೆ ಮತ್ತು ತನ್ನ ಪರಿಸರದೊಡನೆ ಕವಿ ನಡೆಸಿದ ಸಂವಾದಗಳು, ನುಡಿಯ ನುಡಿಗಟ್ಟಿನ ಎಲ್ಲೆಗಳನ್ನು ಉಲ್ಲಂಘಿಸುತ್ತಾ ತನ್ನದೇ ಆದ ಹೊಸತೊಂದು ಶೈಲಿಯನ್ನು ಪಡೆದುಕೊಂಡು ನಿಂತಿವೆ .

ಸದ್ಯ ನವದೆಹಲಿಯ ಜೆ.ಎನ್.ಯು ವಿಶ್ವ ವಿದ್ಯಾನಿಲಯದ ಸ್ಕೂಲ್ ಆಫ್ ಆರ್ಟ್ಸ್ ಅಂಡ್ ಎಸ್ತೆಟಿಕ್ಸ್ ನಲ್ಲಿ ಪ್ರೊಫೆಸರ್ ಆಗಿದ್ದಾರೆ.

ಇಲ್ಲಿ ಅವರ ‘ಸಮಗಾರ ಭೀಮವ್ವ’ ಕವಿತೆಯ ಹುಟ್ಟಿದ ಬಗೆಯನ್ನು ಸ್ವತ: ಶಿವಪ್ರಕಾಶ್ ವಿವರಿಸಿದ್ದಾರೆ ಮತ್ತು ರಂಗಕರ್ಮಿ ಎಚ್. ಜನಾರ್ಧನ ( ಜೆನ್ನಿ ) ಕವಿತೆಯನ್ನು ವಾಚಿಸಿದ್ದಾರೆ . ಕವಿತೆಯ ಪೂರ್ಣ ಪಠ್ಯ ಮತ್ತು ಇಂಗ್ಲೀಷ್ ಅನುವಾದವನ್ನು ಕೂಡ ಕೊಡಲಾಗಿದೆ .

ನವಲಗುಂದದ ನಾಗಲಿಂಗಪ್ಪನು ಶಿಶುನಾಳ ಷರೀಫ ಮತ್ತು ಗರಗದ ಮಡಿವಾಳ ಯೋಗಿಯ ಸಮಕಾಲೀನ. ಚಿಕ್ಕಂದಿನಲ್ಲಿಯೇ ಮನೆಯನ್ನು ತೊರೆದು ಅಲೆಮಾರಿಯಾಗಿ, ಕೊನೆಗೆ ನವಲಗುಂದದಲ್ಲಿ ನೆಲೆಸಲು ಅಲ್ಲಿಗೆ ಬರುತ್ತಾನೆ. ಅಲ್ಲಿಯ ಮೌನೇಶ್ವರ ಮಠದಲ್ಲಿ ಆಶ್ರಯ ಪಡೆದಿದ್ದಾಗ, ಭಯಂಕರ ಬೇನೆಯೊಂದು ತಗಲುತ್ತದೆ. ಆಗ ಆ ಮಠವನ್ನೂ ಅಲ್ಲಿದ್ದ ಆಲಯವನ್ನೂ ದಿನಾಲೂ ಒಬ್ಬಗೊಳಿಸುತ್ತಿದ್ದ ಸಮಗಾರ ಭೀಮವ್ವನೆಂಬ ಅಸ್ಪೃಶ್ಯ ಹೆಣ್ಣು ಅವಿವಾಹಿತೆಯಾದರೂ ತನ್ನ ಮೊಲೆ ಹಾಲನ್ನು ನೀಡಿ ನಾಗಲಿಂಗನನ್ನು ಉಳಿಸಿದಳು ಎಂಬ ಹರಿಕಥೆಯಿದೆ. ಮುಂದೆ ತನ್ನ ಬದುಕಿನುದ್ದಕ್ಕೂ ನಾಗಲಿಂಗ ಆಕೆಯನ್ನು ತನ್ನ ತಾಯಿ, ಗುರು ಜಗದೀಶ್ವರಿಯ ಅವತಾರ ಎಂದು ಕರೆಯುತ್ತಿದ್ದನಂತೆ.


 

ಸಮಗಾರ ಭೀಮವ್ವ

ಸಮಗಾರ ಭೀಮವ್ವ ಎದೆ ಹಾಲ ನೀಡವ್ವ

ನೆಲದೆದೆಯ ಹಾಲು ಹೀರಿ ನೆತ್ತಿಗೇರಿದ ಬಿಸಿಲು
ಕಾರಗಳಾಗದೆ ಬೀಳ್ಬಿಡುವ ನವಲಗುಂದ ಗುಡ್ಡ
ಅತ್ತ ಇತ್ತ ಸುಡುವೆಲರ ಸುಯ್ಲು ಊರು…

ನಡುಹಗಲಿನಲ್ಲಿಯೇ ಗ್ವವಿರುಳು ಕಣ್ಣಿಗಿಳಿಯಿತು ತಾಯಿ
ನಿಂತನೆಲ ಒಮ್ಮೆಗೇ ಚಿಮ್ಮಿ
ಪುಟಿಯಿತು ಮೇಲೆ ಕೆಳಗೆ
ಎಡಗಡೆಗೆ ಬಲಗಡೆಗೆ
ಕಿಕ್ಕಿರಿದು, ತಾರೆ ಸಂಕುಳ ದಿಕ್ಕೆಟ್ಟ ಹಾಗಾಗಿ
ಸ್ವಪ್ನ ಬಂದೆರಗಿತ್ತು; ಗಿರಿಗಟ್ಟಲೆ ಜಗದ ಮಧ್ಯ
ಕಾಯಿವ ಗುಡ್ಡದ ಮೇಲೆ ಬೇಯುವ ಜ್ವರದ
ಮೈಯಾರಿ ಬಾಯೇಹಾರಿ
ಹೋಗುವ ಮುನ್ನ
ಸಮಗಾರ ಭೀಮವ್ವ ಎದೆ ಹಾಲ ನೀಡವ್ವ

ಅಜಾತನಾದವನಿಗೆ ಜಾತಿ ಯಾವುದೆ ತಾಯಿ?
ಹೊಟ್ಟೆಯಲ್ಲಿಟ್ಟುಕೊಂಡದ್ದಕ್ಕೆ ತಾಯಿ ನೋವಿಗೆ ತೊಟ್ಟು;
ತಂದೆ ಹಾಕುವ ತುತ್ತು; ಸುತ್ತು ಮುತ್ತು ಊರುಕೇರಿ
ದಿಕ್ಕು ದೇಶ ಹರಿದು
ಜ್ಯೋತಿಯನ್ನರಸುತ್ತ
ಬಿಸಿಲ ಮಳೆ ಗಾಳಿ ಮಾಜಿ ಮಂಜನಿಬ್ಬನಿತೊಟ್ಟ
ನಾಗಲಿಂಗನ ಮೈಯಿ ಇಂದು ಕೆಂಡ
ಓದಲು ಹಸಿವಿನ ಕುಂಡ, ಹಾಲು ಸುರಿಯೇ ತಾಯಿ
ಸಮಗಾರ ಭೀಮವ್ವ ಎದೆ ಹಾಲ ನೀಡವ್ವ

ಏನಾಯ್ತು ನಿತಿಳ ಭ್ರೂಮಧ್ಯದ ಸ್ಫಟಿಕ ವರ್ಣದ ದೀಪ್ತಿ
ಮೇರುದಂಡದಿ ಹರಿದ ತಿಳಿಬೆಳಕಿನ ಹಾದಿ
ದಾಟಿ ಕದಳಿ ಶಿಖರ ಮೀರಿ ಹಾರಿ
ಅಂಬರದಲ್ಲಿ ತೇಲಾಡಿ ನನ್ನ ಆತ್ಮದ ಪಕ್ಷಿ
ಯಾಕೆ ನಾಟಿತೋ ಯಾವ ಬಾಣವೋ ಏನೋ…
ನಿನ್ನ ಕಾಲಡಿ ಬಿದ್ದ ಹಸಿವು ಜ್ವರಗಳ ಮುದ್ದೆ
ಸೀದಾ ಕಿರುಮರಿ ಹಕ್ಕಿ
ಎಡೆಗುಟುಕ ನೀಡವ್ವ ಸಮಗಾರ ಭೀಮವ್ವ
ಸಮಗಾರ ಭೀಮವ್ವ ಎದೆಹಾಲ ನೀಡವ್ವ

ಈ ರೀತಿ ಲಕ್ಷಯೋಜನದಾಚೆ ಕೋಟಿಯೋಚನೆಯಾಚೆ
ನೀ ಯಾಕೆ ಕುಳಿತಿರುವಿ?
ಬಂಜೆಗಂಬನಿ ಮಣಿಯ ಯಾಕೆ ಪೋಣಿಸಿರುವಿ
ಮೌನದೆಳೆ ಎಳೆ ಎಳೆಯ ರಾಟೆಯ ಸುತ್ತಿ ಬಿಚ್ಚಿ
ಮತ್ತೆ ಸುತ್ತುತ್ತಿರುವಿ?
ನೆಲದ ಕಸವನ್ನು ಗುಡಿಸಿ ಕಸವ ಗೊಬ್ಬರ ಮಾಡಿ
ಬೀಜಬಿತ್ತುವ ಕೈಯೆ,
ದೇಸಾಯಿ ಪಾಟೀಲ ಕುಲಕರಣಿಗಳ ಕಾವು
ಕಡಿಯಾಲಾಗದ ಮರವೆ, ಕಡಿದರೂ ಹೊಲೆ
ಹೊಲೆಯೆಂಬ ಒಲೆಯಲ್ಲಿ ಸುಟ್ಟರೂ
ರೊಟ್ಟಿಯಾಗುವೆ ಬಾಯ್ಗೆ,
ಮೊಲೆಬಾರದ ಕೊಡಗೂಸೆ
ಮದುವೆಯಾಗದ ತಾಯೆ
ಮೊಲೆಹಾಲು ಬೇಡ್ವವ ಎದೆಹಾಲ ನೀಡವ್ವ
ಸಮಗಾರ ಭೀಮವ್ವ

ತಂದಿರುವೆ ನಿನಗೆಂದು
ಗದಗುಡುವ ಗದಗ ಬೀದಿಗಳ ಪ್ಲೇಗನ್ನು
ವಿಕ್ಟೋರಿಯಾ ರಾಣಿ ನಾಣ್ಯದ ಬೆಳಕು
ಕಮರಿಸಿದ ಸೂರ್ಯರನ್ನು;
ಹಸಿರು ಜಗ್ಗನೆ ಉರಿವ ಹೊಲದ ಆಳಗಳಲ್ಲಿ
ಬಸಿರ ಮಕ್ಕಳ ಹೂತು ಕೊಯ್ಲಾದ
ತೆನೆ ತೆನೆ ಜೋಳಗಂಬನಿಯನ್ನು;

ಬ್ರಾಹ್ಮಣರ ಕೇರಿಯಲಿ ಕಾಲರದ ಹೊಲೆಯ
ಕೂಸು ಮಕ್ಕಳನೊಯ್ದು ಸಿಡಿಗಿ ಬೊಂಬುಗಳನ್ನು;
ಕಿತ್ತೂರ ವಂಶವನು ಕಿತ್ತೆಸೆದ ಕಾಡುಗೋಪಿ
ಹುಚ್ಚ ಮಡಿವಾಳನ ಕಣ್ಣುಗಳನು;
ತೊಲೆಬಿದ್ದ ಯಮನ ಮನೆಯಲ್ಲಿ
ಉಳುಹಿಕೊಳ್ಳದೆ ಮಡದಿಯ
ಕಳುಹಿಕೊಟ್ಟಿರುವ ಶಿಶುವಿನ ಹಾಳು
ಶರೀಫನ ಕರುಳ ಹುಣ್ಣುಗಳನು.

ಯಾವ ಗುಡಿಸಿಲಿನಲ್ಲಿ ಯಾವ ಆಕಳು ಬರಡು
ಯಾರ ತಾಲಿಗೆಕುತ್ತು
ಕ್ಷಾಮಲಕ್ಷ್ಮಿಯ ಸಿಟ್ಟು ಯಾರ ಹೊಲದಲಿ ಬಿತ್ತು
ಊರಸೀರೆಗೆ ಹಿಗ್ಗಿ ಹೀರೆಯಾಗುವ ಆಗಸ
ಯಾರ ಚಿನ್ನಕೋ ಕೊಬ್ಬಿದ್ದ ಪತ್ತಾರಣ್ಣ
ಕೂಸುಗಳ ಕದಪು ಎಷ್ಟೊಂದು ಕೆಂಪು
ಯಾವ ಹೂವಿನ ಕಂಪು…
ಕೂಳುಂಡು ಬದುಕಲಾರದೆ ಹೇಲುಂಡು ಬದುಕೇನೆಂಬ
ಈ ಚಿಂತೆಗಳ ಹುಲುಗೂರ ಸಂತೆ
ಹರಿಯುವ ಮೊದಲು
ಸಮಗಾರ ಭೀಮವ್ವ ಎದೆಹಾಲ ನೀಡವ್ವ

ಎಳೆಗೂಸು ನೀನು ಮುದಿಗಣ್ಣೀರನೊರೆಸವ್ವ
ಕೊಡಗೂಸು ಗೆಳತಿ ಕೈ ಹಿಡಿದು ನಡೆಸವ್ವ
ತಾರವ್ವ ಮಳೆಯ ಎಳೆಎಳೆಯ ಎದೆಹಾಲ
ಸಿಂಪಡಿಸು ಗುಡ್ಡಕ್ಕೆ ನವಲಗುಂದಕ್ಕೆ
ಗದಗಕ್ಕೆ ಗಿರಣಿಗಳು ಕಿರುಗುಡುವ ಹುಬ್ಬಳ್ಳಿ ನಗರಕ್ಕೆ
ತಾರೆಮಂಡಲ ಬುಗುರಿ ಕೆದರಿರುವ ವ್ಯೋಮಕ್ಕೆ
ತಾರವ್ವ ಚಂದ್ರವ್ವ ಮುಗಿಲವ್ವ ಭುಗಿ ಭುಗಿಲವ್ವ
ಎದೆಯಲ್ಲಿ ಕರುಳಲ್ಲಿ ನೆಲದಲ್ಲಿ…

ಏಸು ಕಾವಿತ್ತವ್ವ ಮಳೆಬಿದ್ದ ನೆಲದಲ್ಲಿ?
ಕಾವು ತಡೆಯದೆ ಹಾವೇಸು ಹುಟ್ಟವ್ವ ಬಿಟ್ಟು
ನೆಲದುದ್ದ ನೆಲಗದಲ ಹೊರಳಿದುವವ್ವಾ…

ಸಮಗಾರ ಭೀವವ್ವ ಎದೆ ಹಾಲ….

೧೯೮೨


Bhimavva Of the Tanner Caste

Bhimavva of the tanner caste was a great influence on the great 19th century saint Nagalinga Yogi. After decades of intense asceticism, Nagalinga returned to his home village, Navalgund. Afflicted with a strange and incurable fever and sinking fast, he took shelter at a temple on the hilltop. According to the legend, he was brought back to life by a virgin, Bhimavva, from the untouchable tanner caste. Compassion filled her virgin breasts with milk and she gave the suck to the old Yogi, now turned into a baby. For the rest of his life, the Yogi regarded her as his mother and Guru. Historically, the above event took place when British rule was spreading in Karnataka.

1

Give me the suck of your heart’s milk
Bhimavva of the tanner caste

Sunlight sucking the earth’s breast milk
Hillocks of Navalgund that crack and do not melt;
All around
The town
Of hot air, sighs….

2

Midday gloom poured into the eyes
And the still earth
Leaped up, down
Swung to the left and right
When constellations crowed
Dispersed —
A dream that swooped on me.
At the centre of the spinning earth
On the top of the flaming hillock
Before this body smoking hot
And the tongue gives way
Give me your heart’s milk
Bhimavva of the tanner caste

3

What caste has the unborn?
But this birth:
The mother who bore me was a slave of throes
And those begrudged morsels father gave
I left them all off
The surroundings the town the street
The province the country

And in quest of light
Wore
Sunlight rain wind autumn snow dew.
But now my body is all cinders
An oven of hunger
Pour down milk
Give me your heart’s milk
Bhimavva of the tanner caste

4

Where are they now?
The blazing light at the eyebrow centre
The pillar of flame up the spine
The banana grove beyond
The peak?
Beyond them all
My soul-bird soared.
But now
Short with a sharp wayward arrow
It is a scorched fledgling
A heap of hunger and fever
Dropped at your feet

Give me a gulp of your milk
Bhimavva of the tanner caste

5

Why sit again
A million miles away
And a billion thoughts away

Why string together again
Those pearls of barren tears

Why spin again
Unwinding the bobbin of silence
Weaving unweaving

You are the hand
That sweeps the dirt of the earth
And makes manure out of dirt
And plant seedlings

You are the tree
The lust of Desais and Patels
Could not cut down
Or if cut down
You are the firewood
The fuel in the oven of untouchability
You are the bread in our mouth

Breast-less virgin
Unmarried mother

No, not your breast milk
But give me your heart’s milk
Bhirnavva of the tanner caste

6

The plague from seething streets of Gadag;
The coins with the seal of Queen Victoria
Brighter than suns;
The ears of tear-jowar grains
Mowed down
In the depths of fields of blazing green
The graveyard of infants;
The parish of cholera
Who carts away in bamboo biers
The corpses of children;
The rage of blind Madivala
Whose curse destroyed the dynasty of Kittur;
The ulcers in the guts of Sherrif
Who abandoned his starving wife
In the house of Yama
Where the roof collapsed

7

Which cow is barren, in which hut
Whose marriage-bed is afflicted
Whose fields are planted with the fury of famine
The washermen flaunting someone else’s sari
The goldsmith proud of someone else’s jewels
How red the cheeks of babies
What fragrance is this?
Before the market of these grief’s breaks up
Where they eat shit when they don’t get grains
Bhimavva of the tanner caste

8

Infant, wipe off these aged tears
Virgin, lead me by the hand
O bringer of rains
Of streaks of heart’s milk
Sprinkle it
On this hillock
On the city of Gadag
On the city of Hubli where mills screech
On the space where galaxies spin
In the heart
In the guts
On the earth
O mother of stars
O mother of the moon
O mother of clouds
O mother of flames

The steam rising from the rain drenched earth
The snakes
Crawling out of shake-houses
Rolling
The lengths and breadths of the earth

Mother Bhimavva of the tanner caste
Give me….

(Translated by the poet and Madhava Prasad)
(1982)

ಪ್ರತಿಕ್ರಿಯಿಸಿ