ಕಣ್ಣು ಕಡಲು ಅಂಕಣದಲ್ಲಿ ಈ ವಾರ ‘ಪಕೋಡ ಮತ್ತು ಗಿರ್ಮಿಟ್’

ಇದೇ ಫೇಬ್ರವರಿ ತಿಂಗಳಿನಲ್ಲಿ ಶಿರಸಿ ಮಾರಿ ಜಾತ್ರೆಗೆ ಬಂದರೆ ಶಿವಾಜಿ ಸರ್ಕಲ್ಲಿನ ಬಳಿ ಗಿರ್ಮಿಟ್ ಅಬ್ದುಲ್ಲ ಸಿಗುತ್ತಾನೆ. ಪ್ರಕಾಶ್ ರೈ ಭಾಷಣ ಮಾಡಿ ತದನಂತರ ಪವಿತ್ರ ಗೋ ಮೂತ್ರದಿಂದ ಶುದ್ಧಿಗೊಳಿಸಲಾದ ರಾಘವೇಂದ್ರ ಮಠದಿಂದ ಒಂದು ಕಿಲೋ ಮೀಟರಿನಷ್ಟು ದೂರದಲ್ಲಿದೆ ಶಿವಾಜಿ ಸರ್ಕಲ್. ಗಿರ್ಮಿಟ್ ಅಬ್ದುಲ್ಲನ ವಿಶೇಷ ಅವನು ಮಾಡುವ ಗಿರ್ಮಿಟ್ ನಲ್ಲಿಲ್ಲ ಬದಲಿಗೆ ಆತನ ಎರಡೂವರೆ ಅಡಿ ಹೈಟಿನಲ್ಲಿದೆ. ಆತ ಮಾಡುವ ಗಿರ್ಮಿಟ್ -ನಮ್ಮ ಕಡೆಯ ಮಸಾಲೆ ಮಂಡಕ್ಕಿ- ನ ರುಚಿಯ ಬಗ್ಗೆ ನಾನೇನೂ ಹೇಳಲಾರೆ. ಆದರೆ ಎರಡೂವರೆ ಅಡಿಯ ಈ ಮನುಷ್ಯ ಗರಿಗರಿ ಮಂಡಕ್ಕಿಯ ಸಂಗಡ ಮೆಣಸು, ಚೌ ಚೌ ಖಾರ, ಟೊಮೆಟೊ ಹೋಳುಗಳನ್ನ ಬಾಂಡ್ಲಿಯಲ್ಲಿ ಹಾಕಿ ಚಕಚಕನೆ ತಿರುಗಿಸುವುದನ್ನ ನೋಡುವುದು ಚಂದ. ಆ ಚಂದಕ್ಕೆ ಮರುಳಾಗಿ ಮಂಡಕ್ಕಿ ಬಾಯಿಗಿಟ್ಟರೆ ಉಪ್ಪಿದ್ದರೆ ಖಾರ ಇಲ್ಲ . ಖಾರ ಇದ್ದರೆ ಉಪ್ಪಿಲ್ಲ. ಒಮ್ಮೆ ಅಥವಾ ಕೆಲವೊಮ್ಮೆ ಹೀಗಾದರೆ ಓಕೆ. ಪ್ರತಿಬಾರಿಯೂ ಹೀಗಾದರೆ ಹೇಗೆ? ಕುಮಟಾ ತೇರಿಗೆ ಬಂದಿದ್ದ ಅವನಿಗೆ ಈ ಬಾರಿ ಸರಿಯಾಗಿ ಎಕ್ಕಿಳಿದಿದ್ದೆ.

ಅಲ್ಲಯ್ಯ ಎಲ್ಲಾ ಬಿಟ್ಟು ನಾನು ನಿನ್ನ ಕಡೆ ಗಿರ್ಮಿಟ್ ತಿನ್ನೋಕೆ ಬಂದ್ರೆ ಒಂದು ಸಲನಾದ್ರೂ ಸರಿಯಾಗಿ ಮಾಡ್ತಿಯಾ? ನಾಲಿಗೆ ರುಚಿ ನೆ ಹಾಳು ಮಾಡಿ ಹಾಕ್ತಿಯಲ್ಲಯ್ಯ ನೀನು”

ಜಾತ್ರೆಪೇಟೆ ಜನಜಂಗುಳಿಯಲ್ಲಿ ಎಲ್ಲರ ಎದುರಿಗೆ ಹೀಗಂದಿದ್ದು ಅಬ್ದುಲ್ಲನಿಗೆ ತಡೆದುಕೊಳ್ಳಲಿಕಾಗಲಿಲ್ಲವೇನೋ.

ಸಾರ್… ಏನ್ಸಾರ್ ಹೀಗಂದ್ಬಿಟ್ರಿ. ಇಷ್ಟು ವರ್ಷದಿಂದ ಗಿರ್ಮಿಟ್ ಮಾಡ್ತಿರೋದನ್ನೆ ಸುಳ್ಳು ಮಾಡಿಬಿಟ್ರಲ್ಲ. “

ಮತ್ತೇನು.. ನೀನೆ ತಿಂದು ನೋಡು. ಗಿರ್ಮಿಟ್ ಹೀಗಾ ಇರುತ್ತೆ. ಒಂದರ್ಧ ಇರುಳ್ಳಿ ಹೆಚ್ಚಾಕಕ್ಕು ಆಗಲ್ವ ನಿಂಗೆ” ಎಂದೆ.

ತಟ್ಟನೆ ಈರುಳ್ಳಿ ಹಾಕುವುದನ್ನ ಮರೆತದ್ದನ್ನ ನೆನೆಸಿಕೊಂಡ ಅಬ್ದುಲ್..

ತಥ್ ತೇರಿಕೆ .. ಇಲ್ಲೇ ಇದೆ ನೋಡಿ ಸಾರ್ ಈರುಳ್ಳಿ. ” ಎಂದು ಪ್ಲಾಸ್ಟಿಕ್ ಖೊಟ್ಟೆಯಲ್ಲಿದ್ದ ಈರುಳ್ಳಿ ಹೋಳುಗಳನ್ನ ತೋರಿಸಿದ.

” ಎಲ್ಲಾ ಈ ಈಸ್ಮಾರ್ಟ್ ಫೋನಿಂದ ಸಾರ್ ನಮ್ಮ ವ್ಯಾಪಾರ ಕೆಟ್ಟೋಗ್ಬಿಟ್ಟಿದೆ.” ಎಂದು ತನ್ನೆಲ್ಲಾ ತಪ್ಪುಗಳಿಗೆ ಮೊಬೈಲ್ ಅನ್ನು ಹೊಣೆಗಾರನನ್ನಾಗಿ ಮಾಡಿದ.

ನನಗೆ ತಲೆ ಬುಡ ಅರ್ಥ ಆಗಲಿಲ್ಲ. ಅವನೇ ಬಿಡಿಸಿ ಹೇಳಿದ.

ನೋಡಿ ಸಾರ್ ಈ ಜನ ಎಲ್ಲ ಸುಮ್ ಸುಮ್ಕೆ ಇಲ್ಲಿ ಬಂದು ಸೆಲ್ಫಿ , ಫೋಟೊ ಅಂತ ಎಷ್ಟು ತೊಂದ್ರೆ ಕೊಡ್ತಾರೆ. ಬರೋರು ವ್ಯಾಪಾರ ಎಂತದೂ ಮಾಡೋದಿಲ್ಲ. ಸುಮ್ನೆ ಸೆಲ್ಫಿ ಅಂತ ನಮ್ಮ ವ್ಯಾಪಾರಕ್ಕೆ ಕಲ್ಲು ಹಾಕ್ತಾರೆ. ಲೋಕಲ್ ಜನ. ನಾವು ಮಾತಾಡೋ ಹಂಗೂ ಇಲ್ಲ. ಬಂದು ಸುಮ್ನೆ ಫೋಟೊ ಆದ್ರೂ ತೊಗೊಂಡು ಹೋಗ್ತಾರಾ? ಆ ಕಡೆ ಹೋಗಿ ಮತ್ತೆ ಐದು ಮಂದಿ ನಾ ಕರ್ಕೊಂಡು ಬರ್ತಾರೆ. ಮತ್ತೆ ಅವರದ್ದು ಶುರು.” ಅಂತ ತನ್ನ ಗೋಳು ತೋಡಿಕೊಂಡ.

ಆತನ ವೇದನೆ ನನಗೇನೋ ಅರ್ಥವಾಯಿತು. ಈಗ ಇವನ ಗಿರ್ಮಿಟ್ ಚೆನ್ನಾಗಿಲ್ಲ ಅಂದ್ಕೊಂಡು ಅಲ್ಲಿ ಸೆಲ್ಫಿ ತೊಗೊಳೊರ್ನ ಕೇಳೊಕಾಗುತ್ತ. ಈತ ಬೇರೆ ಟಿಪ್ ಟಾಪ್ ಆಗಿ ಐಷಾರಾಮಿ ಹೋಟೆಲುಗಳಲ್ಲಿ ಶೆಫ್ ಗಳು ಧರಿಸುವಂತೆ ಕೆಂಪು ಬಣ್ಣದ ಶರ್ಟು ತಲೆ ಮೇಲೊಂದು ಹಾಳೆಯಲ್ಲಿ ಮಾಡಿದ ಉದ್ದನೆಯ ಬಿಳಿ ಟೋಪಿ ಧರಿಸಿಕೊಂಡು ಮೂರಡಿಯ ಟೇಬಲ್ಲಿನ ಮೇಲೆ ನಿಂತಿರುತ್ತಾನೆ. ಆ ದಿನ ಅವನು ಹೇಳಿದ ಹಾಗೆಯೇ ಹತ್ತಾರೂ ಹುಡುಗರು ಅದೇನೋ ಪಾಂಪ್ಲೆಟ್ ಹಿಡಿದುಕೊಂಡು ಹಂಚುತ್ತಿದ್ದವರು ಇವನ ಬಳಿ ಸೆಲ್ಫಿ ತೆಗೆದುಕೊಳ್ಳಲು ಹಲವು ಆಂಗಲ್ ಗಳ ಕಸರತ್ತು ನಡೆಸಿದ್ದರು.

ಏನೋ ಹಾಳಾಗಿ ಹೋಗ್ಲಿ ತಿಂದ ತಪ್ಪಿಗೆ ದುಡ್ಡು ಕೊಡಬೇಕಲ್ಲಾ ಅಂತ ಪ್ಯಾಂಟು ಜೇಬಿನಿಂದ ದುಡ್ಡು ತೆಗೆಯುತ್ತಿರುವಾಗಲೇ ಜಾತ್ರೆ ಪೇಟೆಯ ಮಧ್ಯೆ ಮಂಚಿಗಂಡ ಪ್ರತ್ಯಕ್ಷನಾದ.

ಈ ಮಂಚಿಗಂಡ ಎಂಥ ಶತಸೋಂಬೇರಿ ಎಂದರೆ ಅವನಿಗೆ ಅವನದ್ದೇ ಆದ ಹೆಸರೂ ಇಲ್ಲ. ಅಸ್ತಿತ್ವವೂ ಇಲ್ಲ. ಎಲ್ಲರಿಗೂ ಅವ ಮಂಚಿಯ ಗಂಡನೇ. ಮಂಚಿ ಗೋವೆಯಿಂದ ಮಂಗಳೂರಿಗೆ ಹಾದು ಹೋಗಿರುವ ಹೈವೇ ನಡುವಿನ ದೊಡ್ಡ ಹೋಟೆಲೊಂದರಲ್ಲಿ ಮುಸುರೆ ಕೆಲಸ ಮಾಡುತ್ತಾಳೆ. ಅಲ್ಲಿಂದ ಮಧ್ಯಾಹ್ನ ಬಂದು ಮನೆ ಕೆಲಸ ಮುಗಿಸಿ ಮತ್ತೆ ಗದ್ದೆ ಕೆಲಸಕ್ಕೆ ಹೋಗುತ್ತಾಳೆ. ಇಂವ ಮಂಚಿಗಂಡ ಬೆಳಗ್ಗೆ ಎದ್ದವನೇ ಕುಮಟೆ ಪೇಟೆಯ ಕಡೆ ಟೆಂಪೊ ಹತ್ತುತ್ತಾನೆ. ಹಳೆ ಬಸ್ ಸ್ಟ್ಯಾಂಡಿನಲ್ಲಿ ಇಳಿದು ಅಲ್ಲಿಂದ ಒಂದು ಕಿಲೋಮೀಟರ್ ಒಳಹೊಕ್ಕಿದರೆ ಪೆದ್ರುವಿನ ಗೋವೆಯ ಹೆಂಡದಂಗಂಡಿ ಸಿಗುತ್ತದೆ. ಇಡೀ ಜಗತ್ತಿನಲ್ಲಿ ಮಂಚಿಗಂಡನಿಗೆ ಸಾಲ ಕೊಡುವ ಪುಣ್ಯಾತ್ಮ ಈ ಪೆದ್ರು ಮಾತ್ರ. ಇಲ್ಲಿ ಕಂಠಪೂರ್ತಿ ಕುಡಿದು ಮೀನುಪೇಟೆಗೆ ಹಾಜರಾಗುತ್ತಾನೆ. ಅಲ್ಲಿಯ ಮಹಾ ಚೌಕಾಶಿ ಹೆಂಗಸರ ಬಳಿ ಗಂಟೆಗಟ್ಟಲೆ ನಿಂತು ಇನ್ನಷ್ಟು ಚೌಕಾಶಿಗಿಳಿದು ಹತ್ತು ರೂಪಾಯಿಗೆ ನಾಲ್ಕು ತಾರಲೇ ಮೀನನ್ನುಎತ್ತುಕೊಂಡು ಮನೆಗೆ ಬರುವಲ್ಲಿ ಮಂಚಿಗಂಡನ ನಿತ್ಯದ ಫರ್ಸ್ಟ್ ಹಾಫ್ ಮುಗಿಯುತ್ತದೆ.

ಇಂಥ ನಿಷ್ಪ್ರಯೋಜಕ, ನಿರುಪಯುಕ್ತ ಪ್ರಾಣಿ ಮಂಚಿಗಂಡ ನನ್ನ ಕಿಸೆಯಿಂದ ಹಣ ಹೊರಬರುವಾಗಲೆಲ್ಲ ನನ್ನೆದುರು ಅದ್ಯಾವ ಮಾಯದಿಂದಲೋ ಪ್ರತ್ಯಕ್ಷನಾಗಿಬಿಡುತ್ತಾನೆ.

ಈಗಲೂ ಹಾಗೆಯೇ..

ನನ್ನ ಕೈಯಲ್ಲಿ ನೂರರ ನಾಲ್ಕು ನೋಟುಗಳು .. ಎದುರಿಗೆ ಹುಳುಕು ಹಲ್ಲು ಬಿಟ್ಟು ಕೊಂಡು ನಿಂತ ಮಂಚಿಗಂಡ. ನನ್ನ ಕಣ್ಣಿನ ಗಾಬರಿ ಅರ್ಥವಾಯಿತೇನೋ ಎಂಬ ವೀರ ನಗೆ ಅವನದ್ದು. ಎಂಥ ಟೈಮ್ ನಲ್ಲಿ ಬಂದ ಡಬ್ಬಾ ನನ್ಮಗ ಎಂದು ಹಲ್ಲು ಕಡಿದೆ.

ವಡೇರು ಜಾತ್ರೆ ಖರ್ಚಿಗೆ ಏನಾದ್ರೂ ಕೊಡ್ರಾ” ಅಂದ.

ಮೊದಲೇ ಕೆಟ್ಟ ಗಿರ್ಮಿಟ್ ತಿಂದು ನಾಲಿಗೆ ಕೆಟ್ಟಿತ್ತು. ಈಗ ಇವನಿಂದ ತಲೆನೂ ಕೆಡ್ತಾ ಇತ್ತು.

ಹೋದ ತಿಂಗಳು ಬಂದ್ ಅಂತ ನೀನು ಮತ್ತೆ ಆ ಪಾಡೇಕರ್ ಹಣ ಇಸ್ಕೊಂಡೊದ್ರಲ್ಲ.. ಎಲ್ಲಿ ಅದು” ಎಂದೆ ಗರಂ ಆಗಿ..

ಅಯ್ಯೋ ವಡೇರಾ.. ಅದರಲ್ಲಿ ನಾನು ಹತ್ತು ರೂಪಾಯಿ ಮುಟ್ಟಿದ್ರೆ ಕಾಣಿ. ಎಲ್ಲ ಅವನೇ ಈಟ್ಕೊಂಡ .. ದೇವರ ಸತ್ಯವಾಗ್ಲೂ ” ಅಂದ

ಹಾಗಾದರೆ ಅವನ ಹತ್ರಾನೇ ಇಸ್ಕೊ ” ಅಂತ ಹೇಳಿ ನಾನು ಬಿರ ಬಿರನೆ ನಡೆದೆ. ಆತ ಬಿಟ್ಟಾನೆ..? ಹಿಂದೆಯೇ ಬಂದ.

ಜಾತ್ರೆ ಪೇಟೆಯ ಗಲಾಟೆಯಿಂದ ತುಸು ದೂರದಲ್ಲಿನ ಅಂಗಡಿ ಕಟ್ಟೆಯಲ್ಲಿ ಹೋಗಿ ಕುಳಿತೆ. ಮಂಚಿಗಂಡನೂ ಬಂದು ಒಂದು ಮೆಟ್ಟಿಲು ಕೆಳಗೆ ಕುಳಿತ.

“ಅಲ್ವೋ.. ಸುಮ್ನೇ ಅವ್ರಿವ್ರ ಹತ್ರ ಕಾಸು ಇಸ್ಕೊಂಡು ಎಷ್ಟು ದಿನ ಅಂತ ಅಲಿತಿರ್ತಿಯಾ. ಏನಾದ್ರೂ ಕೆಲಸ ಮಾಡಬಾರ್ದಾ ಅಥವಾ ಚಿಕ್ಕದಾಗಿ ವ್ಯಾಪಾರ ಶುರು ಮಾಡಬಾರ್ದಾ” ಎಂದು ಬಿಟ್ಟಿ ಉಪದೇಶವೊಂದನ್ನ ಒಗೆದೆ.

ಯಾರಾದರೂ ಈ ಮಾತನ್ನ ಹೇಳಲಿ ಎಂದು ಕಾಯುತ್ತಿದ್ದವನಂತೆ ತನ್ನ ಪಕೋಡಾ ಪುರಾಣವನ್ನ ಬಿಚ್ಚಿಟ್ಟ.

ನಾಲ್ಕು ವರುಷದ ಹಿಂದೆ ಮೂವತ್ತು ಸಾವಿರ ರೂಪಾಯಿ ಸಾಲ ಮಾಡಿ ತನ್ನ ಊರು ಕಡೇಕೋಡಿಯಲ್ಲಿ ಪಕೋಡಾ ಅಂಗಡಿ ಇಟ್ಟನಂತೆ. ಮೊದ ಮೊದಲು ಕೇರಳ, ಮಂಗಳೂರಿನ ಕಡೆ ಹೋಗುವ ಲಾರಿ ಡ್ರೈವರ್ ಗಳು ಚಾ ಕುಡಿಯಲು ನಿಲ್ಲಿಸುತ್ತಿದ್ದುದರಿಂದ ವ್ಯಾಪಾರ ಚೆನ್ನಾಗೆ ಇತ್ತಂತೆ. ಇನ್ನೇನು ವ್ಯಾಪಾರ ಕುದುರಬೇಕು ಅನ್ನೋಷ್ಟರಲ್ಲಿ ಈ ಹಾಳಾದ್ದು ಪೋರ್ ಲೇನ್ ಹೈವೆ ಕಾಮಗಾರಿ ಶುರುವಾಗಿ ಅಂಗಡಿ ಹೈವೆಯಿಂದ ಸ್ವಲ್ಪ ಒಳಕ್ಕೆ ಹೋಯಿತಂತೆ. ಅಲ್ಲಾದ್ರೂ ವ್ಯಾಪಾರ ಆಗಭಹುದೇನೋ ಅಂತ ಒಂದಾರು ತಿಂಗಳು ಕಾದನಂತೆ.

“ಎಲೆ ಅಡಿಕೆ ಕಾಸು ಕೂಡ ಹುಟ್ಟಿಲ್ಲ ಒಡೇರ..ಅದಕ್ಕೆ ಕ್ಲೋಸ್ ಮಾಡ್ಬಿಟ್ಟೆ ” ಅಂದ..

” ಯಾಕೆ ನಿಮ್ಮೂರಲ್ಲಿ ಬಜ್ಜಿ, ಪಕೋಡ ತಿನ್ನೋರು ಇರ್ಲಿಲ್ವ ” ಎಂದೆ.

” ನಾ ಹರಿಕಾಂತದವನು.. ಊರ ಮಂದಿಯೆಲ್ಲ ಶೆರೆಗಾರರು, ನಾಮಧಾರಿಗಳು, ಬ್ರಾಮಣರು, ಕೊಂಕಣಿಗಳು.. ನಾವು ಮಾಡಿದ್ದು ಪಕೋಡ ಅವರು ತಿಂತಾರಾ.. ದೂರದ ಊರಿನ ಜನ ಏನಾದ್ರೂ ಬರಕ್ಕೆ ನಮ್ಮೂರಲ್ಲೇನೈತಿ..”

ಎಂದು ತನ್ನ ಜಾತಿ ಲೆಕ್ಕಚಾರ ಮತ್ತು ಅದರಿಂದ ತನ್ನ ವ್ಯಾಪಾರಕ್ಕೆ ಬಿದ್ದ ದೊಡ್ಡ ಹೊಡೆತವನ್ನ ಎಳೆ ಎಳೆಯಾಗಿ ಬಿಡಿಸಿಟ್ಟ.

” ಅಲ್ವೋ .. ಮೊದಲ್ನೆದಾಗಿ ಪಕೋಡ ಅಂಗಡಿಗೆ ಮೂವತ್ತು ಸಾವಿರ ಯಾಕೆ ಖರ್ಚು ಮಾಡಿದ್ಯೋ ಆ ಭಗವಂತನಿಗೆ ಗೊತ್ತು. ಅಲ್ಲಿ ಹೈವೆ ಬದಿಗೆ ಕೆಲಸ ನಡಿತಿದ್ರೆ ನಿಂಗೆ ಹೈವೆನಲ್ಲಿ ಮತ್ತೆಲ್ಲೂ ಜಾಗ ಸಿಕ್ಕಿಲ್ವ.. ನೀನು ಮಾಡಿದ ಪಕೋಡ ನಿಮ್ಮೂರ ಮಂದಿ ತಿನ್ನಲ್ಲ ಅಂದ್ಮೇಲೆ.. ಅಲ್ಲೇಂತಕೆ ಅಂಗಡಿ ಇಟ್ಟೆ” ಎಂದು ತರಾಟೆಗೆ ತೆಗೆದುಕೊಂಡೆ.

“ಈಗ ಅದೆಲ್ಲ ಯಾಕ್ರ.. ಜಾತ್ರೆ ಖರ್ಚಿಗೆ ಏನಾರು ಕೊಡ್ರ. ” ಅಂತ ದುಂಬಾಲು ಬಿದ್ದ.

ಅತ್ತ ಗಿರ್ಮಿಟ್ ಅಬ್ದುಲ್ಲನ ಬಳಿ ಸೆಲ್ಫಿಗೆ ಮುಗಿಬಿಳುತ್ತಿದ್ದ ಹುಡುಗರಲ್ಲೊಬ್ಬ ಈ ಬದಿಯಲ್ಲಿ ಹರಟೆ ಹೊಡೆಯುತ್ತಿದ್ದ ನಮ್ಮನ್ನ ಗಮನಿಸುತ್ತಿದ್ದ. ನನ್ನ ಕಣ್ಣು ಅವನ ಕಣ್ಣ ಮೀಟಿದಂತೆ ಹತ್ತಿರ ಬಂದ. ಆತನ ಕೈಯಲ್ಲಿ ಕಿತ್ತಳೆ ಬಣ್ಣದ ಪಾಂಪ್ಲೆಟ್ ಗಳು.

” ಸಾರ್.. ನಾಳೆ ಗಿಬ್ಸ್ ಗ್ರೌಂಡ್ ಗೆ ಬನ್ನಿ ಸೂಲಿ ಬೆಲೆ ಅಣ್ಣ ಬರ್ತಿದಾರೆ.. ಪುಲ್ ಜೋರ್ ಇರತ್ತೆ ” ಅಂದ ಪಾಂಪ್ಲೆಟ್ ಕೈಗಿಡುತ್ತ.

“ಏನಕ್ಕೆ ಬರ್ತಿದಾರೋ ” ಪಾಂಪ್ಲೇಟ್ ಅನ್ನು ತೆಗೆದು ಓದಿದೆ.

” ನನ್ನ ಕನಸಿನ ಕುಮಟಾ” ಎಂಬ ವಿಷಯದ ಮೇಲೆ ಚಕ್ರವರ್ತಿ ಸೂಲಿಬೆಲೆಯವರ ಭಾಷಣ ಎಂಬುದು ಅದರಲ್ಲಿತ್ತು. ಜೊತೆಗೆ ಶುಭಕೋರುವವರ ಉದ್ದ ಲೀಸ್ಟೂ ಇತ್ತು.

” ಯಾರು ವಡೇರ ಇವರು ಚಕ್ರವರ್ತಿ ಈ ಸಲ ಎಮ್ ಎಲ್ ಎ ಕ್ಯಾಂಡೇಟಾ (ಕ್ಯಾಂಡಿಡೇಟಾ?)? ” ಅಂತ ಈ ಮಂಚಿಗಂಡ ಕೇಳೊಷ್ಟರಲ್ಲಿ ಆ ಪಾಂಪ್ಲೆಟ್ ಕೊಟ್ಟ ಪೋರ ನಮ್ಮೆದುರಿರಲಿಲ್ಲ.

“ಸದ್ಯ ಬಚಾವಾದೆ ಕಣೋ ನೀನು.. ಯಾರು ಅಂತೆಲ್ಲ ಕೇಳಿದ್ರೆ ಆ ಹುಡುಗನ ಕೈಯಲ್ಲಿ ಒದೆ ತಿಂತಿದ್ದೆ.”

“ಕೇಳಿದಕ್ಕೆಲ್ಲ ಯಾರು ಒದಿತಾರೆ ವಡೆಯ.. ಸುಮ್ಕೆ ಮಸ್ಕಿರಿ ಮಾಡ್ತಿರಾ. ಜಾತ್ರೆ ಖರ್ಚಿಗೆ ಕಾಸು ಕೊಡುಕೆ ಎಷ್ಟು ಸತಾಯಿಸ್ತಿರಾ” ಅಂತ ಶುರು ಹಚ್ಕೊಂಡ.

“ಎಲ್ಲಿ ಹೋದ್ರೂ ಮತ್ತೆ ತಿರುಗಾ ದುಡ್ಡಿನ ವಿಷಯಕ್ಕೆ ಬರ್ತಿಯಲ್ಲೊ.. ನೀನೂ ಒಂಥರಾ ಚಕ್ರವರ್ತಿ ಅಣ್ಣನ ಥರನೇ ನೋಡು” ಅಂಥ ನೂರರ

ಒಂದು ನೋಟು ಕೊಡಲು ಹೊರಟವನು ಮನಸ್ಸು ಬದಲಾಯಿಸಿ ಹತ್ತರ ಹತ್ತು ನೋಟನ್ನ ಅವನ ಕೈಗೆ ಕೊಟ್ಟೆ .ಇಷ್ಟು ಹೊತ್ತು ಕಾದದ್ದಕ್ಕೆ ಇಷ್ಟಾದರೂ ಸಿಕ್ಕಿತಲ್ಲ ಎನ್ನುವ ಸಂತೃಪ್ತಿಯಲ್ಲಿ ಅಂವ ಹೋದ.

ಮಂಚಿಯ ಅಸ್ತಿತ್ವದಲ್ಲಿ ಗಂಡನಾದ ಈ ಮಂಚಿಗಂಡ. ಯಾರೋ ಮಂಡಕ್ಕಿ ಮಾಡುವವನ ನೆಪದಲ್ಲಿ ತಮ್ಮ ಅಸ್ತಿತ್ವ ಹುಡುಕುವ ಹುಡುಗರು, ಅದೇ ಮಂಡಕ್ಕಿಯನ್ನು ತಮ್ಮ ಎಡಗೈಲಿ ಹಿಡಿದು ಬಲಗೈಯಲ್ಲಿ ಪಾಂಪ್ಲೆಟ್ ಹಂಚುವ ಪೋರರು, ಆ ಪೋರರ ಅಸ್ತಿತ್ವದಲ್ಲಿ ಭಾಷಣ ಹಂಚುವ ಚಕ್ರವರ್ತಿಗಳು ಮತ್ತು ಚಕ್ರವರ್ತಿಗಳ ತಲೆ ಮೇಲೆ ಬದುಕುವ ಚಹಾ ಮಾರುವ ಜನಗಳು. ಅಧಿಕಾರದ ಚಕ್ರ ಹೀಗೇ ತಿರುಗುತ್ತದೆ. ಅಸ್ತಿತ್ವ ಅಸ್ಥಿರ ಅಸ್ಥಿಯಾಗುವವರೆಗೆ.

******

3 comments to “ಕಣ್ಣು ಕಡಲು ಅಂಕಣದಲ್ಲಿ ಈ ವಾರ ‘ಪಕೋಡ ಮತ್ತು ಗಿರ್ಮಿಟ್’”
  1. ಗಿರ್ಮಿಟ್ ತಿನ್ಬೇಕನ್ನಿಸ್ತಿದೆ.
    ಲೇಖನ ಇಷ್ಟವಾಯ್ತು. .

ಪ್ರತಿಕ್ರಿಯಿಸಿ