2017ರಲ್ಲಿ ಹೊರಬಂದ ಸುಜಾತಾ ಗಿಢ್ಲಾ ಅವರ ಪುಸ್ತಕ “Ants among Elephants : An Untouchable Family and the Making of Modern India” ಭಾರತ ಮತ್ತು ಅಂತರಾಷ್ರೀಯ ಮಟ್ಟದಲ್ಲಿ ಸದ್ದು ಮಾಡಿತು . ಸದ್ಯ ಅಮೇರಿಕೆಯಲ್ಲಿ ನೆಲೆಸಿರುವ ಸುಜಾತಾ ತಾನು ಬಾಲ್ಯ ಕಳೆದ ಆಂಧ್ರದ ಪ್ರದೇಶದಲ್ಲಿನ ತನ್ನ ಕುಟುಂಬದ ಬದುಕನ್ನು ಈ ಪುಸ್ತಕದಲ್ಲಿ ಕಟ್ಟಿಕೊಡುತ್ತಲೇ ಜಾತಿ ವ್ಯವಸ್ಥೆ , ಕ್ರೈಸ್ತ ಮತ ಮತ್ತು ಕಮ್ಯೂನಿಸಮ್ ತನ್ನ ಬಾಲ್ಯವನ್ನು ಆವರಿಸಿಕೊಂಡದ್ದನ್ನು ಮತ್ತು ಮೇಲೆ ತಿಳಿಸಿದ ಉಳಿದೆರಡು ಜಾತಿ ವ್ಯವಸ್ಥೆಯನ್ನು ಹೋಗಲಾಡಿಸುವಲ್ಲಿ ಹೇಗೆ ಎಡವಿದವು ಎಂಬುದನ್ನು ಚಿತ್ರಿಸುತ್ತಾರೆ. ಈ ಪುಸ್ತಕ ಆಧುನಿಕ ಭಾರತದಲ್ಲಿ ದಲಿತ ಜೀವನದ ಮೇಲೆ ಬಂದ ಪ್ರಮುಖ ಪುಸ್ತಕಗಳಲ್ಲೊಂದು ಎಂದು ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ .
ಇಂಡಿಯಾ ಉಪಖಂಡ ಬೇರೆ ಯಾವ ಸಮಾಜದಲ್ಲಿ ಇರದಂತಹ ಜಾತಿ ಪದ್ದತಿ ಎಂಬ ವಿಶೇಷ ಸಾಮಾಜಿಕ ವ್ಯವಸ್ಥೆ ಹೊಂದಿದೆ, ದೇಶದಲ್ಲಿ ಸುಮಾರು ೩೦೦೦(ಕರ್ನಾಟಕದಲ್ಲಿ ನಡೆದ ಜಾತಿ ಸಮೀಕ್ಷೆಯಲ್ಲಿ ಸುಮಾರು ೧೫೦೩ ಜಾತಿಗಳು ಹಾಗೂ ಹೊಸ ಸೇರ್ಪಡೆಗೆ ಅವಕಾಶ ಕೊಡಲಾಗಿತ್ತು) ಅಧಿಕೃತ ಜಾತಿಗಳು ಹಾಗೂ ಸುಮಾರು ೨೫,೦೦೦ ಕ್ಕೂ ಮೀರಿದ ಉಪಜಾತಿಗಳು ಇವೆ. ಸನಾತನ ಮತದ ಧಾರ್ಮಿಕ ಕಾನೂನು ಗ್ರಂಥ ಮನುಸ್ಮೃತಿಯಲ್ಲೇ ಸುಮಾರು ೫೦ಕ್ಕೂ ಮೀರಿದ ಜಾತಿಗಳು, ಅವಕ್ಕೆ ಮೀಸಲಾದ ಕೆಲಸಗಳು ದಾಖಲಾಗಿದೆ. ಜಾತಿ ಕೇವಲ ಸನಾತನ ಮತದ(Sanatana Brahminic religion) ಭಾಗ ಮಾತ್ರ ಆಗಿರದೆ, ಜಾತಿ ಪದ್ದತಿಯಂತಹ ವ್ಯವಸ್ಥೆಯನ್ನು ಹೊಂದದ ಹಾಗೂ ಜಾತಿ ಪದ್ಧತಿಯನ್ನೇ ವಿರೋಧಿಸಿದ ಇತರ ಮತಗಳಿಗೂ ಹಬ್ಬಿದೆ. ಜಾತಿ ಅಸಮಾನತೆಯನ್ನೇ ಬಂಡವಾಳ ಮಾಡಿಕೊಂಡು ಮತ ಪ್ರಚಾರ ಮಾಡಿದ ಕ್ರೈಸ್ತ ಹಾಗೂ ಇಸ್ಲಾಂ ಮತಗಳಲ್ಲಿ ಜಾತಿಗೆ ಸ್ಥಾನವೇ ಇಲ್ಲ, ಆದರೆ ಮತಾಂತರವಾದ ಜನರ ಜಾತಿಗಳು ಅವರನ್ನು ಮತಾಂತರವಾದ ಮೇಲೂ ಬಿಟ್ಟಿಲ್ಲ. ನಮ್ಮ ರಾಜ್ಯದಲ್ಲೇ ರಾಜ್ಯದಲ್ಲೇ ನೋಡುವುದಾದರೆ ಕ್ರೈಸ್ತ ಮತದಲ್ಲಿ ಅಧಿಕೃತವಾಗಿ ೫೦ ಕ್ರೈಸ್ತ ಜಾತಿಗಳನ್ನು ಗುರುತಿಸಲಾಗಿದೆ, ಇವು ಕ್ಯಾಥೋಲಿಕ್, ಪ್ರೊಟೆಸ್ಟೆಂಟ್ ಪಂಗಡವನ್ನು ಹೊರತುಪಡಿಸಿದ ಈ ನೆಲದ ಜಾತಿಗಳು. ಇನ್ನೂ ಇಸ್ಲಾಂ ಮತದಲ್ಲಿ ೩೦೦ಕ್ಕೂ ಹೆಚ್ಚಿನ ಜಾತಿಗಳಿವೆ. ಜಾತಿ ಮಾತ್ರವಲ್ಲದೆ ಅಸ್ಪೃಶ್ಯತೆ, ಅಸಮಾನತೆಯನ್ನು ಕೂಡ ಕಾಣಬಹುದು. ನಮ್ಮ ದೇಶದಲ್ಲಿ ದಲಿತರ ಸಂಖ್ಯೆ ದೇಶದ ಒಟ್ಟೂ ಜನಸಂಖ್ಯೆಯ ಸುಮಾರು ೧೭*% ಮತ್ತು ಆದಿವಾಸಿಗಳ ಸುಮಾರು ೯*%(೨೦೧೧ರ ಜನಗಣತಿಯ ಪ್ರಕಾರ, * ಅಂದಾಜು). ದಲಿತರು ಹಾಗೂ ಆದಿವಾಸಿಗಳು ಸಿಖ್ ಬೌದ್ಧ, ಕ್ರೈಸ್ತ, ಮುಸ್ಲಿಂ, ಇತ್ಯಾದಿ ಮತಗಳಲ್ಲಿ ಕೂಡ ಪ್ರತ್ಯೇಕವಾಗಿದ್ದಾರೆ.
ಜಾತಿ ಅನ್ನೋದು ಹುಟ್ಟಿನಿಂದ ಹಾಗೂ ಜಾತಿಗೊಂದು ಕೆಲಸ ಹಾಗೂ ಜಾತಿ ಜಾತಿಯ ನಡುವೆಯೇ ಮದುವೆ ಆಗುತ್ತಾ ಸುಮಾರು ೨೦೦೦ವರ್ಷಕ್ಕೂ ಮೀರಿ ಜಾತಿ ಪದ್ದತಿ ಗಟ್ಟಿಯಾಗಿ ನಮ್ಮ ಸಮಾಜದಲ್ಲಿ ತಳಊರಿದೆ. ಜಾತಿ ಎಷ್ಟು ಪ್ರಭಾವಶಾಲಿ ವ್ಯವಸ್ಥೆ ಅಂದರೆ ಅಂತರ್ಜಾತಿ ಮದುವೆ ಆದ ದಂಪತಿಗಳು ಸಹಿತ ಜಾತಿ ವ್ಯವಸ್ತೆಯ ಭಾಗವಾಗುವಷ್ಟು. ಆಧುನಿಕ ಕಾಲಘಟ್ಟದಲ್ಲಿ ಜಾತಿಗೊಂದು ಗಂಡು ಹೆಣ್ಣು ಹುಡುಕಿ ಕೊಡುವ ವಿಶೇಷ ಸಂಸ್ಥೆಗಳು, ಗಾಯಾಳುಗಳಿಗೆ ತಮ್ಮದೇ ಜಾತಿಯ ವ್ಯಕ್ತಿಯ ರಕ್ತ ಬೇಕೆಂದು ಸಾಮಾಜಿಕ ಮಾದ್ಯಮದಲ್ಲಿ ಮನವಿ ಮಾಡುವವರೆಗೆ, ಜಾತಿ ಹೆಸರು ಹೊಂದಿದ ತಿನಿಸುಗಳಿಂದ ಹಿಡಿದು ನಗರದಲ್ಲಿ ಜಾತಿಗೆ ಪ್ರತ್ಯೇಕ ಗೇಟೆಡ್ ಕಮ್ಯುನಿಟಿ ವರೆಗೆ, ಮನೆ ಬಾಡಿಗೆ ಜಾಹೀರಾತಿನಲ್ಲಿ ಇಂತವರಿಗೆ ಮಾತ್ರವೇ ಮನೆ ಎಂದು ಘೋಷಿಸಿಕೊಳ್ಳುವವರೆಗೆ ಮಾರ್ಪಟ್ಟಿರುವ ಜಾತಿ ವ್ಯವಸ್ಥೆಯನ್ನು ಈ ಕಾರಣಕ್ಕೆ ಬಂಡವಾಳಶಾಹಿಗೆ ಹೋಲಿಸಬಹುದು. !
ಹಾಗಾದರೆ ಜಾತಿಯನ್ನು ಹೇಗೆ ವಿವರಿಸಬಹುದು? ಮಾನವ ಶಾಸ್ತ್ರಜ್ಞ ಲೂಯಿಸ್ ದುಮಾಂಟ್ ತನ್ನ ಹೋಮೊ ಹೈರಾರ್ಕಿಕಸ್ (Homo hierarchicus) ಪುಸ್ತಕದಲ್ಲಿ, ‘’ಜಾತಿಯೊಂದು ಸಾಮಾಜಿಕ ವ್ಯವಸ್ಥೆ, ನಿರ್ಧಿಷ್ಟವಾಗಿ ಗುರುತುಮಾಡಿರುವ, ವಿಂಗಡಿಸಿರುವ ಸಮುದಾಯಗಳು ಜಾತಿಯೊಳಗಿನ ಕಡ್ಡಾಯ ಮದುವೆಯ ಮೂಲಕ ಬಂದಿಗಳಾಗಿದ್ದು ಪ್ರತಿ ಸಮುದಾಯವು ಒಂದು ನಿರ್ಧಿಷ್ಟ ಕೆಲಸವನ್ನು ಮಾಡುವುದು ಅಷ್ಟೇ ಅಲ್ಲದೆ ಪ್ರತಿ ಕೆಲಸವೂ ಶುದ್ಧ ಅಶುದ್ಧ ಎಂಬ ಮಾನದಂಡದ ಮೂಲಕ ಮೇಲೂ ಹಾಗೂ ಕೀಳು ಎಂದು ಶ್ರೇಣೀಕರಿಸಿರುವುದು’’ ಎಂದು ವಿವರಿಸುತ್ತಾನೆ. ಮುಂದುವರೆದು ‘’ಸಮಾಜದ ಪ್ರತಿಯೊಬ್ಬರೂ ಈ ವ್ಯವಸ್ಥೆಯ ಭಾಗವಾಗಿದ್ದು ಎಲ್ಲಿಯೂ ಇದರಿಂದ ಬಿಡುಗಡೆ ಇಲ್ಲ’’. ಇದಕ್ಕೆ ಸನಾತನ ಹಿಂದೂ ಮತದ ಧಾರ್ಮಿಕ ಮುದ್ರೆಯಿರುವ ಕಾರಣಕ್ಕಾಗಿಯೇ ಅಂಬೇಡ್ಕರ್ ” ಜಾತಿ ವ್ಯವಸ್ಥೆಯ ನಾಶ, ಜಾತಿ ವ್ಯವಸ್ಥೆಯ ಪ್ರತಿಪಾದಿಸುವ ಧಾರ್ಮಿಕ ಕಲ್ಪನೆಗಳನ್ನು ನಾಶಪಡಿಸದೆ ಸಾದ್ಯವಿಲ್ಲ” ಎನ್ನುತ್ತಾರೆ. ಇತಿಹಾಸದಲ್ಲಿ ಎರಡನೆಯ ನಗರೀಕರಣ(ಮೌರ್ಯ ಆಳ್ವಿಕೆ ಕಾಲ), ಕೃಷಿಯ ಅಭಿವೃದ್ಧಿ ಆದಂತೆ,ಆದಿವಾಸಿ ಸಮುದಾಯಗಳನ್ನು ಯುದ್ಧದ ಮೂಲಕ ಗುಲಾಮರಾಗಿ, ಇಲ್ಲವೇ ಜೀತದಾಳುಗಳಾಗಿ, ಬೆಳೆಯುತ್ತಿರುವ ನಗರದ ಅಗತ್ಯಕ್ಕೆ ಬೇಕಾದ ವಿವಿಧ ಕೆಲಸಗಳನ್ನು ಇವರಿಗೆ ಹಂಚುತ್ತಾ ಜಾತಿ ವ್ಯವಸ್ಥೆಯನ್ನು ವೇದಕಾಲದ ನಂತರ ಇದ್ದ ಸಮಾಜ ಸೃಷ್ಟಿಸಿತು ಎಂದು ಕೆಲ ಇತಿಹಾಸಕಾರರು ಗುರುತಿಸುತ್ತಾರೆ, ಇದು ಮೂರನೇ ನಗರೀಕರಣದ(ಗುಪ್ತ ಆಳ್ವಿಕೆ) ಸಮಯದಲ್ಲಿ ಸದೃಢವಾಯಿತು. ‘’ಜಾತಿ ಕೆಲಸಗಳ ವಿಂಗಡಣೆಯಲ್ಲ ಬದಲಾಗಿ ಕೆಲಸಗಾರರ ವಿಂಗಡಣೆ’’ ಎಂದು ಅಂಬೇಡ್ಕರ್ ಈ ನಿಟ್ಟಿನಲ್ಲಿ ಗುರುತಿಸಿರುವುದು ಸರಿಯಾಗಿಯೇ ಇದೆ.
ಜಾತಿಯು ಕೇವಲ ಕೆಲಸದ ಆಧಾರದಲ್ಲಿ, ಆ ಕೆಲಸವೂ ಶುದ್ಧ ಅಶುದ್ಧ ಎಂಬ ಮಾನದಂಡದ ಆಧಾರದಲ್ಲಿ ಇರುವುದು ಮಾತ್ರವಲ್ಲದೆ ಜಾತಿಯು ಹುಟ್ಟಿನಿಂದ ಬರುವ ಕಾರಣ ಇದಕ್ಕೂ ಸಂಪತ್ತಿನ ಹಾಗೂ ಅಧಿಕಾರದ ಹಂಚಿಕೆಗೂ ನೇರ ನೇರ ಸಂಬಂಧ ಮಾಡುವುದು ಸಾದ್ಯವಿಲ್ಲ. ಅದರಲ್ಲೂ ಕೆಳಜಾತಿಯ ಅಸ್ಪೃಶ್ಯರು ಸಂವಿಧಾನದ, ಹಾಗೂ ವಿವಿಧ ಯೋಜನೆಗಳ ಹೊರತಾಗಿಯೂ ಇಂದಿಗೂ ಸಂಪತ್ತಿನ ಒಡೆತನದಲ್ಲೂ ಕೆಳಗೆಯೇ ಇದ್ದಾರೆ. ಈ ಸಮೀಕರಣ ಕೆಲವು ಜಾತಿಗಳಲ್ಲಿ ಸಂಸ್ಕೃತೀಕರಣದ ಕಾರಣ ಮಾತ್ರವೇ ಬದಲಾಗಿದೆ. ಆದರೆ ಜಾತಿಗೆ, ಜಾತಿಯ ಕೆಲಸದ ಪರಿಶುದ್ಧತೆಗೆ ಅನುಗುಣವಾಗಿ ಸಮಾಜದಲ್ಲಿ ಸಿಗುವ ಜಾತಿ ಆಧಾರಿತ ಸವಲತ್ತುಗಳು ಹಾಗೂ ಅವಮಾನ, ಗೌರವ ಅಗೌರವ ಇತ್ಯಾದಿ(ಸರ್ಕಾರದ ಸವಲತ್ತು ಅಲ್ಲ, ಸಮಾಜದಲ್ಲಿ ದೊರಕುವ ಸವಲತ್ತು) ಸಂಪತ್ತಿನ ಹೊರತಾಗಿಯೂ ಕಡ್ಡಾಯವಾಗಿ ಸಿಗುತ್ತದೆ.
****
ಕಮ್ಯುನಿಸಂ ಒಂದು ರಾಜಕೀಯ ಚಿಂತನೆ, ಸಿದ್ಧಾಂತ: ಸಂಪತ್ತು ಮತ್ತು ಅಧಿಕಾರವನ್ನು, ವರ್ಗರಹಿತ ಸಮಾಜದಲ್ಲಿ ಸಮನಾಗಿ ಹಂಚುವುದು ಅಂತ ಸರಳವಾಗಿ ಅರ್ಥಮಾಡಿಕೊಂಡರೆ, ಕಮ್ಯುನಿಸಂ ಒಂದು ಸಾಮಾಜಿಕ ವ್ಯವಸ್ಥೆ, ಇಲ್ಲಿ ಆಸ್ತಿಯು ಸಮುದಾಯ ಸುಪರ್ದಿಯಲ್ಲಿದ್ದು ಸಮುದಾಯದ ಪ್ರತಿ ವ್ಯಕ್ತಿ ತನ್ನ ಶಕ್ಯಾನುಸಾರ ಆಸ್ತಿಗೆ ಕೊಡುಗೆ ಕೊಡುತ್ತಾನೆ(ಳೆ) ಇಲ್ಲವೇ ಅಗತ್ಯಕ್ಕೆ ಅನುಗುಣವಾಗಿ ಆಸ್ತಿಯ ಭಾಗ ಪಡೆಯುತ್ತಾನೆ(ಳೆ), ಅಂತ ಆಕ್ಸ್ಫರ್ಡ್ ನಿಘಂಟು ಹೇಳುತ್ತದೆ.
೧೯೨೦ರ ಹೊತ್ತಿಗೆ ಬ್ರಿಟಿಷ್ ಇಂಡಿಯಾದಲ್ಲಿ ಕಮ್ಯುನಿಸ್ಟ್ ಪಾರ್ಟೀ ಸೋವಿಯಟ್ ಪ್ರೇರೇಪಣೆ, ಮಾರ್ಗದರ್ಶ ಮತ್ತು ಬೆಂಬಲದೊಂದಿಗೆ ಶುರುವಾಯಿತು. ಪಾರ್ಟಿ ಸಿ ಪಿ ಐ ಒಂದೇ ಆದರೂ ಹಲವಾರು ಸಂಘಟನೆಗಳು, ಟ್ರೇಡ್ ಯೂನಿಯನ್ಗಳು ಕಮ್ಯುನಿಸ್ಟ್ ಸಿದ್ಧಾಂತದ ಮೇಲೆ ಸ್ಥಾಪಿತವಾದವು. ಮಾರ್ಕ್ಸ್ ಎಂಗೆಲ್ಸ್ ವರ್ಗ ಸಂಘರ್ಷದ ನಿರೂಪಣೆಯನ್ನು ಅನುಸರಿಸಿ ಕ್ರಾಂತಿ ಮಾಡಿದ ರಷಿಯಾ ರೀತಿಯಲ್ಲೇ ಇಂಡಿಯಾದಲ್ಲೂ ಕ್ರಾಂತಿ ಮಾಡುವ ಕನಸು ಇವರದ್ದಾಗಿತ್ತು. ಕೈಗಾರಿಕಾ ಕ್ರಾಂತಿಯ ಪೂರ್ಣ ಅನುಷ್ಟಾನದ ನಂತರ, ಅದರ ಹಿನ್ನಲೆ, ಉಂಟಾದ ಸಮಸ್ಯೆಯನ್ನು ಅದ್ಯಯನ ಮಾಡಿ ಕಮ್ಯುನಿಸ್ಟ್ ಸಿದ್ಧಾಂತವನ್ನು ಮಾರ್ಕ್ಸ್ ಎಂಗೆಲ್ಸ್ ಯುರೋಪಿನ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ವ್ಯವಸ್ತೆಗೆ ಬಂಡವಾಳಶಾಹಿ ವಸಾಹತುಶಾಹಿ ವ್ಯವಸ್ತೆಗೆ ಪರ್ಯಾಯವಾಗಿ ಬಹುಸಂಖ್ಯಾತ ಕೆಳವರ್ಗದ ಕಾರ್ಮಿಕರ ಏಳಿಗೆಗೆ ಪ್ರತಿಪಾದಿಸಿದರು. ಉಪಖಂಡ ಆಗ ತಾನೆ ಕೈಗಾರಿಕಾ ಅಭಿವೃದ್ಧಿಗೆ ಕಾಲಿಡುತ್ತಿತ್ತು, ಆಧುನಿಕ ಶಿಕ್ಷಣ ವಸಾಹತುಶಾಹಿ ಆಡಳಿತದ ಅನುಕೂಲಕ್ಕೆ ಆರಂಭವಾಗಿ ಸುಮಾರು ಒಂದು ಶತಮಾನ ಕಳೆದಿತ್ತು ಆದರೆ ಯುರೋಪಿನ ಸಿದ್ಧಾಂತ, ರಷಿಯಾದ ಕ್ರಾಂತಿಯ ಸ್ಪೂರ್ತಿಯನ್ನು ಯಥಾವತ್ ನಮ್ಮ ದೇಶಕ್ಕೆ ಅನ್ವಯಿಸಿದರೂ. ಜಾತಿ ಪದ್ಧತಿ ಇಲ್ಲಿನ ವಿಶೇಷ ಆಗಿತ್ತು, ದೇಶದಲ್ಲಿ ಕೋಮು ಗಲಭೆಗಳು ಶುರುವಾಗಿದ್ದವು, ಇದನ್ನೆಲ್ಲ ಮೀರಿ ಅತ್ಯುತ್ಸಾಹದಿಂದ ಕ್ರಾಂತಿಯ ಕನಸು ಕಂಡರು.ಇವರ ಮೇಲೆ ರಶಿಯನ್ ಕ್ರಾಂತಿ ಎಷ್ಟು ಪ್ರಭಾವ ಬೀರಿತ್ತು ಎಂದರೆ ಪಕ್ಷದ ನಿರ್ಮಾತೃಗಳಲ್ಲಿ ಒಬ್ಬರಾದ ಎಂ ಎನ್ ರಾಯ್, ಜಾತಿ ವ್ಯವಸ್ಥೆ(ಜಾತಿಗಳು) ಇಂಡಿಯಾದಲ್ಲಿ ಮುಗಿದುಹೋದ ಕಥೆ ಅಂತ ಸೋವಿಯಟ್ನಲ್ಲಿ ಹೇಳುವಷ್ಟು.
ಕಮ್ಯುನಿಷ್ಟರು ಜಾತಿಯನ್ನು, ಜಾತಿ ವ್ಯವಸ್ಥೆಯನ್ನು ಪೂರ್ವ ಬಂಡವಾಳವಾದದ ಸಾಮಾಜಿಕ ವ್ಯವಸ್ಥೆ (Pre-Capitalist Social Formation) ಎಂದು ಪರಿಗಣಿಸಿ, ಬ್ರಿಟಿಷ್ ವಸಾಹತುಶಾಹಿ ಇಲ್ಲಿಗೆ ತಂದ ಆಧುನಿಕ ಶಿಕ್ಷಣ ಹಾಗೂ ಕೈಗಾರಿಕೆ, ಕಮ್ಯೂನಿಷ್ಟ ಸಿದ್ಧಾಂತ ಹೇಳುವ ಕೆಲಸಗಾರರ ವರ್ಗವನ್ನು; ಜಾತಿಪದ್ದತಿಯನ್ನು,ಅಸ್ಪೃಶ್ಯತೆಯನ್ನು ನಾಶ ಮಾಡಿ ಸೃಷ್ಟಿಸುತ್ತದೆ ಅಂತ ಬಲವಾಗಿ ನಂಬಿದರು ಹಾಗೂ ಪ್ರತಿಪಾದಿಸಿದರು. ಬ್ರಿಟಿಷ್ ಶಿಕ್ಷಣದ ಕಾರಣ ಹೊಸ ವಿಚಾರಗಳಿಗೆ ತೆರೆದುಕೊಂಡ ಮೇಲ್ವರ್ಗದ ಶ್ರೀಮಂತರು, ಭೂಮಾಲೀಕರು, ಮೇಲ್ಜಾತಿಯ ಸ್ವತಂತ್ರ ಹೋರಾಟಗಾರರು, ಕಮ್ಯುನಿಸ್ಟ್ ಕ್ರಾಂತಿಯೇ ವಸಾಹತುಶಾಹಿ ಆಳ್ವಿಕೆಯ ಅಂತ್ಯಕ್ಕೆ ಹಾಗೂ ಹೊಸ ಸಮ ಸಮಾಜದ ನಿರ್ಮಾಣಕ್ಕೆ ಸರಿಯಾದ ದಾರಿ ಎಂದು ಭಾವಿಸಿದರು. ಪಕ್ಷ ಕೂಡ ಸಹಜವಾಗಿಯೇ ಮೇಲ್ಜಾತಿ ವರ್ಗಕ್ಕೆ ಸೇರಿದ ಜನರಿಂದಲೇ ತುಂಬಿತ್ತು. ಇವರಲ್ಲಿ ಬಹುತೇಕರು ತಮ್ಮ ಆಸ್ತಿಯನ್ನು ಬಿಟ್ಟುಕೊಟ್ಟು ಸರಳ ಜೀವನ ಮಾಡುತ್ತಿದ್ದರೂ ಸಹಜವಾಗಿ ಮೇಲ್ಜಾತಿ ಜನರಿಗೆ ಅನ್ನಿಸುವಂತೆ ಜಾತಿ ಒಂದು ಪ್ರಶ್ನೆಯಾಗಿ ಕಾಡಲಿಲ್ಲ. ಆಧುನಿಕ ಚಿಂತನೆಯ ಹೊರತಾಗಿಯೂ, ಸಾಮಾಜಿಕ ಕಟ್ಟುಪಾಡು ಮೀರಿ ನಡೆಯುವ ಸಾಮರ್ಥ್ಯ ಹಾಗೂ ಸಂವೇದನೆ ಬಹುಶಹ ಇವರಲ್ಲಿ ಬಹುತೇಕರಿಗೆ ಇರಲಿಲ್ಲ. ಆದರೆ ಅದೇ ಪರಿಸ್ಥಿತಿ ಇಂದಿಗೂ ಮುಂದುವರೆದಿರುವುದು ಮಾತ್ರ ಆಘಾತಕಾರಿ. ಕಮ್ಯುನಿಸ್ಟ್ ಪಕ್ಷ ಹುಟ್ಟಿ ೯ ದಶಕಗಳಿಗಿಂತಲೂ ಹೆಚ್ಚಿನ ಕಾಲವಾಗಿದ್ದರು ದೇಶದ ಜನಸಂಖ್ಯೆಯ ಸುಮಾರು ೧೭% ದಲಿತರು ಇದ್ದರೂ ಕಮ್ಯುನಿಸ್ಟ್ ಪಕ್ಷದಲ್ಲಿ ಅವರಿಗೆ ಮೀಸಲಾದ ಸಂಘಟನೆ ಇಲ್ಲ, ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ, ಕಾರ್ಮಿಕರಿಗೆ, ರೈತರಿಗೆ ಕೊನೆಗೆ ಆದಿವಾಸಿಗಳಿಗೆ ಕೂಡ ಪ್ರತ್ಯೇಕ ವಿಭಾಗವಿದೆ. ಇದು ಅತ್ಯಂತ ಅಚ್ಚರಿಗೆ ಕಾರಣವಾಗುವ ಅಂಶ. ಪಕ್ಷದಲ್ಲಿ ಮಹಿಳಾ ಪ್ರಾತಿನಿಧ್ಯ ಕೂಡ ಕಡಿಮೆ ಇದ್ದು ಅದು ಇನ್ನೊಂದು ಚರ್ಚೆಯ ಭಾಗವಾಗಿ ಪರಿಗಣಿಸಬಹುದು.
ಇಂಡಿಯಾದ ಕಮ್ಯುನಿಸ್ಟ್ ಧುರೀಣರ ಜಾತಿ ವ್ಯವಸ್ಥೆಯನ್ನು ಪ್ರಶ್ನೆಯಾಗಿ ಪರಿಗಣಿಸದೆ ನಮ್ಮ ಸ್ಥಳೀಯ ಸಾಮಾಜಿಕ ವ್ಯವಸ್ತೆಯನ್ನು ಅರಿಯುವಲ್ಲಿ ಎಡವಿದ, ಅಥವಾ ಸಾಮಾಜಿಕ ಹಾಗೂ ಆರ್ಥಿಕ ವ್ಯವಸ್ತೆಯ ನಡುವಿನ ಸಂಬಂಧವನ್ನು ಗ್ರಹಿಸಲು ವಿಫಲವಾದ ಹಾಗೂ ಇಂದಿಗೂ ಅದನ್ನು ತಿದ್ದುಕೊಳ್ಳದ ಧೋರಣೆಯ ಬಗ್ಗೆ ಹಿಂದಿನಿಂದಲೂ ಸಾಕಷ್ಟು ಟೀಕೆಗಳು ಬಂದಿವೆ. ಒಂದು ಕಾಲದಲ್ಲಿ ಸ್ವಂತ ಬಲದ ಮೇಲೆ ಅಬ್ಯರ್ಥಿಗಳನ್ನು ಶಾಸನಸಭೆ ಲೋಖಸಭೆಗೆ ಕರ್ನಾಟಕ, ಆಂದ್ರಪ್ರದೇಶ ಪ್ರದೇಶದಲ್ಲಿ ಸುಲಭವಾಗಿ ಕಳುಹಿಸುವ ಸಾಮರ್ಥ್ಯ ಹೊಂದಿದ್ದ ಎಡ ಪಕ್ಷಗಳು ಸಂಪೂರ್ಣ ನೆಲಕ್ಕಚ್ಚಿದೆ, ಕೇರದಲ್ಲಿ ಒಂದಿಷ್ಟು ಭಾಗದಲ್ಲಿ ಸ್ವಂತ ಬಲವಿದ್ದರೆ ಉಳಿದ ಪ್ರದೇಶದಲ್ಲಿ ಸಮಾನಮನಸ್ಕರೊಂದಿಗೆ ಹೊಂದಾಣಿಕೆ ಬಂಗಳದಲ್ಲೂ ಇದೆ ಅದೇ ಸ್ಥಿತಿ ಇಂದು ತ್ರಿಪುರಕ್ಕೂ ವ್ಯಾಪಿಸಿದೆ. ಎಡರಂಗದ ಅಧಿಕಾರವಿದ್ದ ಬಂಗಾಳದಲ್ಲಿ, ತ್ರಿಪುರದಲ್ಲಿ ಹಾಗೂ ದೇಶದಲ್ಲೇ ಮೊದಲಿಗೆ ಅಧಿಕಾರ ಪಡೆದ ಕೇರಳದಲ್ಲಿ ಜಾತಿ ಅಸಮಾನತೆ ಹೋಗಲಾಡಿಸಿ ಸಾಮಾಜಿಕ ನ್ಯಾಯ ಕೊಡಿಸುವಲ್ಲಿ ಎಡರಂಗ ಸಾಧನೆ ಎಷ್ಟು ಎಂದು ನೋಡಿದರೆ ಅಂತಹ ಗಮನಾರ್ಹ ಅಂಕಿ ಅಂಶಗಳೇನು ನಮ್ಮ ಕಣ್ಣಿಗೆ ಬೀಳೋಲ್ಲ. ! ಕೇರಳದ ದಲಿತರು ದೇಶದಲ್ಲಿ ಅತ್ಯಂತ ಕಡಿಮೆ ಜಮೀನು ಆಸ್ತಿ ಹೊಂದಿದ್ದಾರೆ ಎಂದು ಸಮೀಕ್ಷೆಯೊಂದು ತಿಳಿಸುತ್ತದೆ.
ಅಸ್ಪೃಶ್ಯತೆಯ ಸಮಸ್ಯೆಯನ್ನು, ದಲಿತರ ವಿಚಾರವನ್ನು ಎತ್ತುವ ಅವಶ್ಯಕತೆ ಹಾಗೂ ಇದುವರೆಗೂ ಮಾಡಿರುವ ನಿರ್ಲಕ್ಷದ ಕುರಿತು ಪಕ್ಷದ ಆಂತರಿಕ ವಲಯದಲ್ಲಿ ಮೊದಲು ಗುರುತಿಸಿದ್ದು ಹಾಗೂ ಪ್ರಶ್ನಿಸಿದ್ದು ಅಂದ್ರಪ್ರದೇಶದಲ್ಲಿ ಕ್ರಾಂತಿಕಾರಿ, ಕವಿ, ತೀವ್ರಗಾಮಿ ಎಡಪಂಥೀಯ ಚಳುವಳಿಯನ್ನು ಅಂದ್ರ ತೆಲಂಗಾಣ ಭಾಗದಲ್ಲಿ ಸ್ಥಾಪಿಸಿ ಕೊನೆಗೆ ಎಡಪಂಥಿಯರೇ ಅವರನ್ನು ಹೊರಗೆ ಹಾಕಿದ ಕೆ. ಜಿ. ಸತ್ಯಮೂರ್ತಿ ಅವರು. ೧೯೮೫ರ ಕರಂಛೇಡು ಹತ್ಯಾಕಾಂಡ(೮ದಲಿತರನ್ನು ಕೊಚ್ಚಿ ಸಾಯಿಸಲಾಯಿತು ೨೦ಕ್ಕೂ ಹೆಚ್ಚಿನವರಿಗೆ ಮಾರಣಾಂತಿಕ ಗಾಯ ಆಯಿತು, ಅತ್ಯಾಚಾರ, ಆಸ್ತಿಪಾಸ್ತಿ ನಾಶ ಕೂಡ) ಮಾದಿಗ ಸಮುದಾಯದ ಮೇಲೆ ನಡೆದ ಭೀಕರ ಮೇಲ್ಜಾತಿ ಜನರ ಹಲ್ಲೆ ಪ್ರಕರಣದ ನಂತರ ತೀವ್ರಗಾಮಿ ಎಡಪಂಥೀಯ ಚಳುವಳಿಗಳು ದಲಿತ ವಿಚಾರದ ಬಗ್ಗೆ ಚಿಂತನೆ ಶುರುಮಾಡಿದರೂ, ಎಡಪಂಥೀಯ ರಾಜಕೀಯ ಪಕ್ಷಗಳ ಧೋರಣೆ ಹಾಗೆಯೇ ಇದೆ. ಎಸ್. ಕೆ ಅವರನ್ನು ಜಾತಿಯ ಬಗೆಗಿನ ಚರ್ಚೆಯನ್ನು ಪಕ್ಷಕ್ಕೆ ತಂದಿದ್ದಕ್ಕೆ ಹಾಗೂ ಸಂಘಟನೆಯ ಜಾತಿ ಪದ್ದತಿಯ ಕುರಿತಾಗಿನ ಅಲಕ್ಷ ಧೋರಣೆಯ ವಿರೋಧ ಮಾಡಿದ್ದಕ್ಕೆ ತಾವೇ ಶುರು ಮಾಡಿದ ಸಂಘಟನೆಯಿಂದ ಸಂಘಟನೆ ಒಡೆಯುವ ಆರೋಪ ಮಾಡಿ ಸಂಘಟನೆಯಿಂದ ತೆಗೆಯಲಾಗುತ್ತದೆ.
ಜಾತಿ ವ್ಯವಸ್ತೆಯ ಹಾಗೂ ಅಸ್ಪೃಶ್ಯತೆಯ ನಾಶಕ್ಕೆ ಎಡಪಂಥೀಯ ಪಕ್ಷಗಳ ಕೊಡುಗೆಗಳು ಏನು ಎಂದರೆ ಗಮನಾರ್ಹ ಸಂಗತಿಗಳು ಕಣ್ಣಿಗೆ ಬೀಳೋಲ್ಲ. ಅನಿಲ್ ರಾಜಿಂವಾಲೆ ತಮ್ಮ ಬರಹಗಳಲ್ಲಿ, ಕಮ್ಯುನಿಸ್ಟ್ ವಿಚಾರವಾದಿಗಳ ಸಾಮಾಜಿಕ ರಾಜಕೀಯ ಆರ್ಥಿಕ ಐತಿಹಾಸಿಕ ಜಾತಿ ವ್ಯವಸ್ಥೆ ಬಗೆಗಿನ ಅದ್ಯಯನಗಳು, ಸಹಕಾರ, ಕೆಲವೊಂದು ಮೇಲ್ಜಾತಿ ಪೂರ್ಣಾವಧಿ ನಾಯಕರುಗಳು ಕಾರ್ಖಾನೆ ಕಾರ್ಮಿಕರ ಜೊತೆ ಸಹಪಂಕ್ತಿ ಊಟ, ಹತ್ತಿಗಿರಣಿಯಲ್ಲಿ ಕೆಲವು ದಲಿತ ಕಾರ್ಮಿಕರಿಗೆ ಹತ್ತಿ ಮುಟ್ಟಲು(ಹತ್ತಿ ನೂಲುವಾಗ ಗಿರಣಿಯಲ್ಲಿ ಅದಕ್ಕೆ ಎಂಜಲು ಮುಟ್ಟಿಸುವುದು ಅನಿವಾರ್ಯ ಆಗಿತ್ತು), ಹತ್ತಿ ಪಾವಿತ್ರ್ಯತೆಯ ಸಂಕೇತ ಮಾಡಿಕೊಂಡಿದ್ದ ಮೇಲ್ಜಾತಿಯವರು ಅದನ್ನು ಮುಟ್ಟುವುದರಿಂದ ದಲಿತರನ್ನ ಹೊರಗಿಟ್ತಿದ್ದರು, ಇದರ ವಿರುದ್ಧ ಕಾರ್ಮಿಕ ಸಂಘಟನೆಗಳ ಹೋರಾಟ ಒಂದಿಷ್ಟು ಸುಧಾರಣೆ ತಂದಿತು, ಸಣ್ಣ ಕೃಷಿಕರು, ಗೇಣಿದಾರರ ಪರವಾದ ೭೦, ೮೦, ೯೦ ರ ದಶಕದ ಹೋರಾಟಗಳು ಪರೋಕ್ಷವಾಗಿ ಅಸ್ಪೃಶ್ಯರಿಗೂ ಒಂದಿಷ್ಟು ಸಹಾಯ ಮಾಡಿತು ಎಂದು ಗುರುತಿಸುತ್ತಾರೆ. ಆದರೆ ಇವ್ಯಾವೂ ಅಂಬೇಡ್ಕರ್ ರಚಿತ ಸಂವಿಧಾನದ ಹೊರತು ಸಾದ್ಯವಾಗುತ್ತಿರಲಿಲ್ಲ ಅಲ್ಲದೆ ಅಂಬೇಡ್ಕರ್ ಹೋರಾಟ ತಂದ ಸುಧಾರಣೆಯಂತೆ ಗಂಭೀರ ಬದಲಾವಣೆಯನ್ನು ತರಲಿಲ್ಲ.
****
ಈ ಪೀಠಿಕೆಯೊಂದಿಗೆ ಮುಂದುವರೆದು , ತ್ರಿಪುರ ಚುನಾವಣೆಯ ಎಡರಂಗ ಸೋಲು, ಕರ್ನಾಟಕದಲ್ಲಿ ಚುನುವಣಾ ಕಣಕ್ಕೆ ಎಡರಂಗ ಅಭ್ಯರ್ಥಿಗಳು, ಎಡಪಂಥೀಯ ಧೋರಣೆ?! ಅಥವಾ ಚಿಂತನೆ!(ಚಿಂತೆ?!!)ಯ ಬದಲಾವಣೆಯ ಕುರಿತಾಗಿನ ಪ್ರಗತಿಪರರ ಚರ್ಚೆಗಳು, ಇದೆ ಸಮಯಕ್ಕೆ ತಕ್ಕಂತೆ ನಾನು ಓದಿದ ಸುಜಾತಾ ಗಿಢ್ಲಾ ಅವರ Ants Among Elphants (ಆನೆಗಳ ನಡುವೆ ಇರುವೆಗಳು’) ಪುಸ್ತಕ ಭಾರತೀಯ ಎಡಪಂಥೀಯ ಪಕ್ಷ ಹಾಗೂ ಜಾತಿಯ ಬಗೆಗಿನ ಧೋರಣೆ ಕುರಿತಾದ ಈ ವಿಮರ್ಶೆಗೆ ಕಾರಣವಾಯಿತು.
ತಿಂಗಳ ಹಿಂದೆ ಜಯಪುರದ ಸಾಹಿತ್ಯ ಸಂಭ್ರಮದಲ್ಲಿ “ಗಾಂಧಿ ಒಬ್ಬ ಜನಾಂಗೀಯವಾದೀ ಹಾಗೂ ಜಾತಿವಾದಿ ಆಗಿದ್ದರು, ಇಸ್ಲಾಂ ವಿರುದ್ಧವಾಗಿ ಹಿಂದೂಗಳ ಬಹುಸಂಖ್ಯಾತ ಮೇಲ್ಗಾರಿಕೆ ರಾಜಕೀಯವಾಗಿ ಅಗತ್ಯವಾಗಿದ್ದ ಕಾರಣಕ್ಕಾಗಿ ಮಾತ್ರವೇ, ಜಾತಿ ಪದ್ದತಿಯನ್ನು ತೊಡೆಯುವ ಬದಲು, ತೊಳೆಯುವ(ಹೊಸ ಚಿಂತನೆ) ಕೆಲಸ ಮಾಡಿದರು’’ ಅಂತ ಸುಜಾತಾ ಹೇಳಿದರು ಅನ್ನೋ ಸುದ್ದಿ ಪತ್ರಿಕೆಯಲ್ಲಿ ಓದಿದೆ. ಯಾರಪ್ಪಾ ಇಂತಹ ಧಿಟ್ಟ ಹೇಳಿಕೆ ನೀಡಿದ್ದು ಎಂದು ಹಿನ್ನಲೆ ತಿಳಿಯಲು ಹೊರಟ ನನ್ನ ಕಣ್ಣಿಗೆ ಬಿದ್ದಿದ್ದು ಅವರ ಕಳೆದ ವರ್ಷದ ಈ ಪುಸ್ತಕ. ಸುಜಾತಾ, ಸತ್ಯಮೂರ್ತಿ ಅವರ ತಂಗಿ ಮಂಜುಳಾ ಅವರ ಮಗಳು. ಅಮೆರಿಕೆಯಲ್ಲಿ ವಾಸವಿರುವ ಇವರ ತುಡಿತ ತಮ್ಮ ಕುಟುಂಬದ ಹಿನ್ನಲೆ, ವಂಶವೃಕ್ಷವನ್ನು ದಾಖಲಿಸುವುದಾಗಿತ್ತು. ಪುಸ್ತಕ ಪೀಠಿಕೆಯಲ್ಲಿ ”ನನ್ನ ಕಥೆಗಳು, ನನ್ನ ಕುಟುಂಬದ ಕಥೆಗಳು ಇಂಡಿಯಾದಲ್ಲಿ ಕಥೆಗಳೇ ಅಲ್ಲ, ಅವು ಕೇವಲ ಜೀವನ. ನಾನು ದೇಶ ಬಿಟ್ಟು ಹೊಸ ಸ್ನೇಹಿತರು ಹೊಸ ಸಮಾಜದ ಪರಿಚಯವಾದ ಮೇಲೆ ನನ್ನ ಜೀವನದ ಘಟನೆಗಳು ಕಥೆಗಳಾದವು, ಬರೆಯುವಂತಹ, ಎಲ್ಲರಿಗೂ ಹೇಳುವಂತಹ ಕಥೆಗಳು’’, “ನಾನು ಹುಟ್ಟಿದ್ದು ಅಸ್ಪೃಶ್ಯೆಯಾಗಿ ” ಎಂದು ಹೇಳಿಕೊಳ್ಳುತ್ತಾರೆ.
ವೇದಗಳಲ್ಲಿ ಇದ್ದ ನಾಲ್ಕು ವರ್ಣಗಳು, ಮನುಸ್ಮೃತಿಯಲ್ಲಿ ಇದ್ದ ಸುಮಾರು ಐವತ್ತರಷ್ಟು ಜಾತಿಗಳು(ವೃತ್ತಿ ಸಂಬಂಧಿ ವಿಂಗಡಣೆಗಳು) ಇಂದು ಸಹಸ್ರಾರು ಸಂಖ್ಯೆಯಲ್ಲಿ ನಮ್ಮ ನಡುವೆ ಇರುವುದಕ್ಕೆ ಕಾರಣಗಳನ್ನು ಕೊಸಾಂಬಿ, ಇರ್ಫಾನ್ ಹಬೀಬ್ ತರಹರ ಇತಿಹಾಸಕಾರರು ಹೀಗೆ ಕೊಡುತ್ತಾರೆ. ಪಟ್ಟಣ ಪ್ರದೇಶಗಳು ಕಡಿಮೆ ಇದ್ದು, ಕೃಷಿ ಇನ್ನೂ ಪ್ರಚಲಿತವಾಗಿಲ್ಲದಿದ್ದ(ಕಬ್ಬಿಣ ಕಂಡುಹಿಡಿಯದ ಹಾಗೂ ವ್ಯಾಪಾರ ವಹಿವಾಟು ಇಲ್ಲದ ), ಆರ್ಥಿಕ ವ್ಯವಸ್ಥೆ ಸದೃಢವಾಗಿರದ ಸಮಯದಲ್ಲಿ ಸಾಮಾಜಿಕ ಕಾರ್ಯಭಾರ ಮತ್ತು ಜವಾಬ್ದಾರಿಗಳು ಕೇವಲ ನಾಲ್ಕು ವರ್ಣಗಳಿಂದ ಪೂರ್ತಿಯಾಗುತ್ತಿತ್ತು. ಕೃಷಿಯ ಕಬ್ಬಿಣದ ಬಳಕೆ ,ಕೃಷಿ ಭೂಮಿಯ ವಿಸ್ತರಣೆಗೆ ಬಲಿಯಾದ ಕಾಡು, ಅದರ ಜೊತೆಗೆ ಕಾಡಿನ ಆದಿವಾಸಿಗಳೊಂದಿಗೆ ನಡೆದ ಯುದ್ಧಗಳು, ಆದಿವಾಸಿ ಸಮುದಾಯಗಳನ್ನು ಪಟ್ಟಣದ ನಿಯಂತ್ರಣಕ್ಕೆ ತಂದಿತು. ಇದರ ಪಲಿತಾಂಶವಾಗಿ ಉದಯಿಸಿದ ನಗರೀಕರಣ ಹೊಸ ಕೌಶಲ್ಯವನ್ನು ಬಯಸುತ್ತದೆ. ಆಗ ಸೋಲಿಸಿ ನಿಯಂತ್ರಣದಲ್ಲಿಟ್ಟುಕೊಂಡ ಆದಿವಾಸಿ ಸಮುದಾಯಗಳು ಬೇಡಿಕೆಗೆ ಅನುಗುಣವಾಗಿ ಹೊಸ ವ್ಯತ್ತಿಗೆ ನಿಯುಕ್ತಿ ಆಗುವುದರೊಂದಿಗೆ ಜಾತಿ ಪದ್ದತಿ ಶುರುವಾಯಿತು ಎಂದು ಒಂದು ವಿವರಣೆ ಕೊಡುತ್ತಾರೆ. ಈ ಸಮುದಾಯಗಳು ಕಟ್ಟುನಿಟ್ಟಿನ ಸಂಪ್ರದಾಯ ಪಾಲನೆ ಮಾಡುತ್ತಾ ತಮ್ಮ ತಮ್ಮಲ್ಲೇ ಮದುವೆ(Strict Endogamous Marriage) ಆಗುತ್ತಾ ಇದ್ದವರು. ಆದಿವಾಸಿಗಳನ್ನು ಸಾಮಾಜಿಕ ವ್ಯವಸ್ಥೆಗೆ ಎಳೆದುತಂದ ಮೇಲೆ ಅದಕ್ಕೆ ಸಾಮಾಜಿಕ ಅಸ್ತಿತ್ವವನ್ನು ಕಾನೂನು ಕಟ್ಟಳೆಯನ್ನು ಬ್ರಾಹ್ಮಣರು ಧಾರ್ಮಿಕ ಶಾಸ್ತ್ರದ ಮೂಲಕ ವಿಧಿಸಿದರು. ಈ ಇತಿಹಾಸದ ವಿವರಣೆಗೆ ಹೊಂದುವಂತೆ ಇರುವುದು ಲೇಖಕಿಯ ಸಮುದಾಯ.
ಆಂದ್ರಪ್ರದೇಶದ ಕಮ್ಮಂ ಜಿಲ್ಲೆಯಲ್ಲಿ ಅಲೆಮಾರಿ ಆದಿವಾಸಿ ಸಮುದಾಯಕ್ಕೆ ಸೇರಿದವರು. ೧೮೦೦ರ ಸಮಯದಲ್ಲಿ ಬ್ರಿಟಿಷ್ ಕಂಪನಿಯ ವಸಾಹತುಶಾಹಿ ವಿಸ್ತರಣೆಯ ಫಲವಾಗಿ ಕಾಡಿನ ಬಳಿ ಉಳುಮೆ ಮಾಡುತ್ತಿದ್ದ ಈ ಆದಿವಾಸಿ ಅಲೆಮಾರಿ ಜನಾಂಗ ತನ್ನ ನೆಲೆ ಕಳೆದುಕೊಂಡಿತು. ಆ ಭೂಮಿ ಮತ್ತು ವಸತಿ ಇಲ್ಲದ ಆದಿವಾಸಿಗಳು ಹಳ್ಳಿಯ ಅಂಚಿನಲ್ಲಿ ಬಿಡಾರ ಹಾಕಿಕೊಂಡು ಹೊಟ್ಟೆಪಾಡಿಗೆ ಕೆಲಸ ಮಾಡಲು ಶುರು ಮಾಡುತ್ತಾರೆ, ಇದು ಅವರನ್ನು ಸಮಾಜದ ಕೊನೆಯ ಸ್ಥಾನದಲ್ಲಿ ಗುರುತಿಸುವಂತೆ ಮಾಡುತ್ತದೆ. ಇದು ಇವರ ಅಸ್ಪೃಶ್ಯತೆಗೆ ಮೊದಲ ಪ್ರವೇಶ. ಇವರ ಕೇರಿಯ ಬಳಿ ಇನ್ನೊಂದು ಅಲೆಮಾರಿ ಪಂಗಡ ‘ಯನಡಿ’ ಗೆ ಸೇರಿದ ವ್ಯಕ್ತಿಯೊಬ್ಬ ಅಪರಾಧ ಪ್ರಕರಣವೊಂದರಲ್ಲಿ ಪೊಲೀಸರಿಗೆ ಬೇಕಾಗಿರುತ್ತಾನೆ. ಸಮುದಾಯಗಳ ನಡುವೆ ಪರಿಚಯವಿದ್ದ ಇವರು, ಪೊಲೀಸ್ ಅಪರಾಧ ಕಾನೂನು ಇತ್ಯಾದಿ ಗೊತ್ತಿಲ್ಲದೆ ಆ ವ್ಯಕ್ತಿಗೆ ಆಶ್ರಯ ಕೊಟ್ಟದ್ದಲ್ಲದೆ ಆತನನ್ನು ಹುಡುಕಿ ಬಂದ ಪೊಲೀಸರಿಗೆ ಹೊಡೆದು ರಂಪ ಮಾಡಿಕೊಳ್ಳುತ್ತಾರೆ. ಇದನ್ನು ಹತ್ತಿರದಲ್ಲೇ ಇದ್ದ ಕೆನಡಾದ ಮಿಷನರಿ ಗುಂಪಿನವರಿಗೆ ಇದು ಗೊತ್ತಾಗಿ ಅವರು ತಮ್ಮ ವಕೀಲರ ಮೂಲಕ ವಾದಿಸಿ ಸಮುದಾಯಕ್ಕೆ ಸಹಾಯ ಮಾಡುತ್ತಾರೆ. ಇದಕ್ಕೆ ಗೌರವಪೂರ್ವಕವಾಗಿ ಬಹುತೇಕ ಜನ ಕ್ರೈಸ್ತ ಮತಕ್ಕೆ ಮತಾಂತರ ಆಗ್ತಾರೆ. ಇಲ್ಲಿಂದ ಇವರ ಮಾತಾಂತರವಾದ ದಲಿತರು. ! ಇವರ ಮುತ್ತಜ್ಜ ಮುತ್ತಜ್ಜಿಯ ೬ ಮಕ್ಕಳಲ್ಲಿ ಕಿರಿಯ ಮಗ ಲೇಖಕಿಯ ಅಜ್ಜ ಪ್ರಸನ್ನ ರಾವ್ ಮಾತಾಂತರವಾದ ಸಮುದಾಯದ ಮೊದಲಿಗ, ಅಣ್ಣಂದಿರೆಲ್ಲಾ ಓದುವ ಧೈರ್ಯ ಮಾಡದೆ ಕೇವಲ ಇವರು ಮಾತ್ರ ಮಿಷನರಿ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಾರೆ. ಮತಾಂತರದಿಂದ ಸಮುದಾಯಕ್ಕೆ ಅಸ್ಪೃಶ್ಯತೆಯಿಂದ ಬಿಡುಗಡೆ ಸಿಗಲಿಲ್ಲ, ಊರಿನೊಳಗೆ ಪ್ರವೇಶ ಸಿಗಲಿಲ್ಲ, ಊರ ಬಾವಿಯ ನೀರು ಮುಟ್ಟುವಂತಿರಲಿಲ್ಲ, ಊರ ಹೊರಗೆ ಪ್ರತ್ಯೇಕ ಕೇರಿ, ಅಲ್ಲಿ ಗುಡಿಸಲು ,ಆದರೂ ಆಧುನಿಕ ಶಿಕ್ಷಣ ಮಾತ್ರ ದೊರಕಿತು.
ದೇಶದಲ್ಲಿ ಮೊದಲಿಗೆ ಆಧುನಿಕ ಶಿಕ್ಷಣ ಪರಿಚಯ ಮಾಡಿದ್ದು, ಶಾಲೆ ತೆರೆದಿದ್ದು ಎಲ್ಲವೂ ಕ್ರೈಸ್ತರೆ, ಹಾಗಾಗಿ ಇಲ್ಲಿ ಅವಕಾಶವನ್ನು ಮತಾಂತರ ಆದ ಒಂದಿಷ್ಟು ಜನರಿಗೆ ಕೊಟ್ಟ ಕಾರಣ ವಿದ್ಯಾಭ್ಯಾಸಕ್ಕೆ ತೊಂದರೆ ಆಗಲಿಲ್ಲ. ಹಾಗಾಗಿ ಪ್ರಸನ್ನ ರಾವ್ ಶಿಕ್ಷಣ ಮುಗಿಸಿದ್ದು ಅಲ್ಲದೆ ಮಿಷನರಿ ಶಾಲೆಯಲ್ಲೇ ಶಿಕ್ಷಕ ವೃತ್ತಿ ಕೂಡ ಸಿಕ್ಕುತ್ತೆ, ಇವರ ಮಡದಿಯು ಇವರದ್ದೇ ಮಾಲಾ ಜಾತಿಗೆ ಸೇರಿದ ವಿದ್ಯಾವಂತೆ ಶಿಕ್ಷಕಿ. ಶಿಕ್ಷಣ ಮತ್ತು ಉದ್ಯೋಗದಿಂದ ಅಸಮಾನತೆ ಅಸ್ಪೃಶ್ಯತೆ ಅಳಿಯುತ್ತದೆ ಎಂಬ ಪ್ರಸಿದ್ದ ನಂಬಿಕೆಗೆ ವಿರುದ್ದವಾಗಿ ಶಾಲಾ ಶಿಕ್ಷಕ ವೃತ್ತಿಯ ನಂತರವೂ ಅಸ್ಪೃಶ್ಯರಂತೆ ಊರ ಹೊರಗಿನ ಕೇರಿಯಲ್ಲಿ ವಾಸ, ಪಟ್ಟಣದಲ್ಲಿ ಸುಳ್ಳು ಹೇಳಿ ಜೀವನ. ಕಲಿಕೆ ಮುಗಿಸಿ ಬಂದ ಅಂಬೇಡ್ಕರ್ ಬಾಂಬೆ ಪಟ್ಟಣದಲ್ಲಿ ಬಾಡಿಗೆ ಮನೆಗೆ ಪಟ್ಟ ಕಷ್ಟ, ನಂತರ ಕಾಲೇಜು ಉಪನ್ಯಾಸಕರಾಗಿದ್ದಾಗ ಸಹದ್ಯೋಗಿಗಳು ಅವರೊಂದಿಗೆ ಕುಡಿಯುವ ನೀರನ್ನು ಹಂಚಿಕೊಳ್ಳದಿರುವ ಸನ್ನಿವೇಶವನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಪುಸ್ತಕ ಬರೆಯಲು ಆಕೆ ತೆಗೆದುಕೊಂಡ ಶ್ರಮ, ಆಕೆಯ ಕಥನದ ಪಾತ್ರಗಳು ಆಕೆಯೇ ಹೇಳುವಂತೆ ವೃದ್ಧರು ಒಬ್ಬೊಬ್ಬರಾಗಿಯೆ ತೀರಿಕೊಂಡ್ರು ಅಲ್ಲದೆ ಮುಖ್ಯ ವ್ಯಕ್ತಿ ಲೇಖಕರ ಸೋದರಮಾವ ಸತ್ಯಮೂರ್ತಿಯವರ ಅವಿರತ ಹೋರಾಟದ ಸಮಯ, ಅವರು ಭೂಗತ ಆದ ಸಮಯದಲ್ಲಿ ಸಮಯ ಹೊಂದಿಸಿಕೊಂಡು ಅಮೆರಿಕದಿಂದ ಬಂದು ವಿಷಯ ಸಂಗ್ರಹಣೆ ಮಾಡಿ, ದ್ವನಿ ಮುದ್ರಿಕೆಯನ್ನು ತೆಗೆದುಕೊಂಡು ಹೋಗಿ ದಾಖಲು ಮಾಡುವುದು ಮತ್ತೆ ಸಮಯಕ್ಕೆ ಕಾಯೋದು ದೊಡ್ಡ ಶ್ರಮವೇ ಸರಿ. ಲೇಖಕಿಯ ಪುಸ್ತಕದ ಪಾತ್ರಗಳ ಕಥನಗಳು ಬಡತನ, ಅಸ್ಪೃಶ್ಯತೆ, ಅವಮಾನ, ಹೇಸಿಗೆ, ದೌರ್ಜನ್ಯದ ನೈಜ ಚಿತ್ರಣಗಳು. ೭ದಶಕದ ಸ್ವಾತಂತ್ರ್ಯದ ನಂತರವೂ ಈ ಪರಿಸ್ಥಿತಿ ದಲಿತ ಹಾಗೂ ಆದಿವಾಸಿ ಸಮುದಾಯಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಬದಲಾಗಿಲ್ಲದಿರುವ ಚೋದ್ಯ.!
ಆಂಧ್ರ, ತೆಲಂಗಾಣದ ಕಮ್ಯುನಿಸ್ಟ್ ಕ್ರಾಂತಿಕಾರಿ ಕವಿ ನಾಯಕರಲ್ಲಿ ಮುಖ್ಯರಾದ ಸತ್ಯಮೂರ್ತಿಯವರ ಚಳುವಳಿಯ ಅನುಭವ, ಪಕ್ಷದಲ್ಲಿದ್ದ ಅಸ್ಪೃಶ್ಯತೆ ಅವರ ಕೆಲವು ಮಾತಿನಲ್ಲೇ ನಮಗೆ ಗೊತ್ತಾಗುತ್ತದೆ. ಸಿವಸಾಗರ್(ಎಸ್. ಕೆ) ತಮ್ಮ ಕೊನೆಯ ದಿನದಲ್ಲಿ ಪತ್ರಕರ್ತರಿಗೆ ಕೊಟ್ಟ ಸಂದರ್ಶನದಲ್ಲಿ ಬರುವ ಮಾತುಗಳಿವು, ”ನಾನು ಮಾಲಾ(ಜಾತಿ) ಅಸ್ಪೃಶ್ಯ, ನಾನು ಸ್ನಾನಕ್ಕೆ ಹೋಗುವಾಗಲೆಲ್ಲ, ಮುಂಚೆ ಹೋದವರು ಸ್ನಾನದಮನೆಯಲ್ಲಿ ಬೆಲೆಬಾಳುವ ವಸ್ತುಗಳನ್ನು ಬೇಕಂತಲೇ ಇಟ್ಟು ನಾನು ಕದಿಯುತ್ತೇನೋ ಇಲ್ಲವೋ ಎಂದು ಪರೀಕ್ಷೆ ಮಾಡುತ್ತಿದ್ದರು, ಬಹುಶಹ ಕದಿಯುವುದು ಜಾತಿಗುಣ ಎಂದು ಅವರು ಭಾವಿಸಿದ್ದಿರಬಹುದು”. ಇಷ್ಟುರ ಮಟ್ಟಿಗಿನ ಅಸ್ಪೃಶ್ಯತೆ ಅಸಮಾನತೆ ಇರುವ ಎಡಪಂಥೀಯ ಸಂಘಟನೆಯಲ್ಲಿ ಜಾತಿ ಕುರಿತಾಗಿನ ಚರ್ಚೆ ಒಂದು ರೀತಿ ನಿಷಿದ್ಧವಾಗಿತ್ತು ಏಂದು ಕೂಡ ಗುರುತಿಸುತ್ತಾರೆ. ಪುಸ್ತಕದಲ್ಲಿ ಬರುವ ಸನ್ನಿವೇಶ ಪಾರ್ಟಿಯ ಪಲಾಯನವಾದದಕ್ಕೆ ನಿದರ್ಶನ ಕೊಡುತ್ತದೆ. ಸತ್ಯಮೂರ್ತಿ ಅವರ ಕೆಳ ಜಾತಿಯ ಶಿಕ್ಷಕ ಸ್ನೇಹಿತನೊಬ್ಬ ಮೇಲ್ಜಾತಿ ಹುಡುಗಿಯೊಬ್ಬಳನ್ನು ಪ್ರೀತಿಸಿ ಓಡಿ ಬಂದಾಗ ಪಾರ್ಟಿ ಮೇಲ್ಜಾತಿ ಕೋಪಕ್ಕೆ ಗುರಿಯಾಗುವ ಕಾರಣಕ್ಕೆ ಈ ವಿಚಾರದಲ್ಲಿ ಹಸ್ತಕ್ಷೇಪ ಮಾಡಲಿಕ್ಕೆ ತಿರಸ್ಕರಿಸಿ, ಪಾರ್ಟಿಯಿಂದ ವಯಕ್ತಿಕ ವಿಚಾರಗಳನ್ನು ದೂರ ಇಡಬೇಕು ಎಂದು ನಿರ್ದೇಶನ ಕೊಡಲಾಗುತ್ತದೆ.! ಕೊನೆಗೆ ಸತ್ಯಮೂರ್ತಿ ಮನೆಯವರು ಆ ದಂಪತಿಯನ್ನು ಜೋಪಾನ ಮಾಡುತ್ತಾರೆ.!
ರೋಹಿತ ವೆಮುಲ ಅಸ್ಪೃಶ್ಯ ಜಾತಿಯ ಹಿನ್ನಲೆಯ ಕಾರಣ ವಿಶ್ವವಿದ್ಯಾನಿಲಯದಲ್ಲಿ ಅವಮಾನಕ್ಕೆ ಒಳಗಾಗಿ ಹೋರಾಟ ಮಾಡಿ ನ್ಯಾಯ ಸಿಗದೆ ವ್ಯವಸ್ಥೆ ಆತನಿಗೆ ಜೀವಹತ್ಯೆ ಮಾಡುವಂತೆ ಪ್ರೇರೇಪಿಸಿತು. ಸುಮಾರು ೬-೭ ದಶಕದ ಹಿಂದೆಯೂ ಲೇಖಕಿಯ ತಾಯಿ ಮಂಜುಳಾ ಅವರು ಬನಾರಸ್ ವಿಶ್ವವಿದ್ಯಾನಿಲಯದಲ್ಲಿ ಬ್ರಾಹ್ಮಣ ಉಪನ್ಯಾಸಕರ ಅಸ್ಪೃಶ್ಯರ ಮೇಲಿನ ಕೀಳು ಭಾವನೆಯ ಕಾರಣ ಕನಿಷ್ಟ ಅಂಕ ಪಡೆದು ಕೆಲಸಕ್ಕೆ ಪರದಾಡುತ್ತಾರೆ, ನಂತರ ಕಾಲೇಜು ಉಪನ್ಯಾಸಕ ಕೆಲಸದಲ್ಲೂ ಮೇಲ್ಜಾತಿ ಸಹದ್ಯೋಗಿಗಳ ಅಸಹಕಾರ. ವಿಶ್ವವಿದ್ಯಾನಿಲಯ ಹಾಗೂ ಸರ್ಕಾರಿ ಕಚೇರಿಯ ಪರಿಸ್ಥಿತಿ ಬದಲಾಗಿಲ್ಲವೇಕೆ ಎಂಬ ಪ್ರಶ್ನೆ ಮೂಡುತ್ತದೆ.
ಮತಾಂತರ ಆದಮೇಲೆ ಎಷ್ಟಾದರೂ ಎಲ್ಲರೂ ಯೇಸುವಿನ ಮಕ್ಕಳಲ್ಲವೇ? ಇದು ಕೇವಲ ದೈವವಾಣಿ ಮಾತ್ರವೇ. ಕೇರಳ ಬ್ರಾಹ್ಮಣರು ಮತಾಂತರ ಆಗಿ ಸಿರಿಯನ್ ಕ್ರೈಸ್ತರು, ಕರ್ನಾಟಕ ಕರಾವಳಿಯಲ್ಲಿ ಮಾತಾಂತವಾದ ಮೇಲ್ಜಾತಿ ಜನ ಕೊಂಕಣಿ ಕ್ರೈಸ್ತರು, ದಲಿತ ಕ್ರೈಸ್ತರು, ಆದಿವಾಸಿ ಕ್ರೈಸ್ತರು, ಕನ್ನಡ ಕ್ರೈಸ್ತರು( ಕರ್ನಾಟಕದ ಕೆಳ ಜಾತಿಇಂದ ಮತಾಂತರ ಆದ ಕ್ರೈಸ್ತರು, ಇವರೆಲ್ಲ ಒಟ್ಟಿಗೆ ಸೇರಿ ನಂಬುವ ಒಂದೇ ದೇವರಿಗೆ ಒಂದೇ ಪುಸ್ತಕದ ಪ್ರಾರ್ಥನೆ ಒಟ್ಟಿಗೆ ಕೂಡಿ ಮಾಡುವುದಿಲ್ಲ, ಮದುವೆ ಸಂಬಂಧಗಳು ಇವರ ನಡುವೆ ಆಗೋಲ್ಲ ಅನ್ನುವಷ್ಟರ ಮಟ್ಟಿಗಿನ ಅಸಮಾನತೆ ಅಸ್ಪೃಶ್ಯತೆ ಇದೆ. ಕಾಲೇಜು ದಿನದಲ್ಲಿ ಸತ್ಯಂ ಇಷ್ಟ ಪಟ್ಟ ಮೇಲ್ಜಾತಿ ಕ್ರೈಸ್ತರ ಹುಡುಗಿಯೊಬ್ಬಳು ನೇರವಾಗಿ ನೀನು ಕೆಲ ಜಾತಿಯವನು ನನಗೂ ನಿನಗೂ ಸರಿಬರೋಲ್ಲ ಎಂದು ತಿರಸ್ಕರಿಸುವ ದೃಶ್ಯ ಜಾತಿ ವ್ಯವಸ್ಥೆಯ ಸಂಕೀರ್ಣತೆಯನ್ನು ತೋರಿಸುತ್ತದೆ.!
ಒಂದು ಕಾಲದಲ್ಲಿ ಭೂಸುಧಾರಣೆ ಹೋರಾಟಗಳು, ಕಾರ್ಮಿಕ ಚಳುವಳಿಗಳು, ರೈತ ಚಳುವಳಿಯ ನೇತೃತ್ವ ವಹಿಸಿದ್ದ ಎಡಪಂಥೀಯ ನಾಯಕರುಗಳು ಅವರ ವರ್ಚಸ್ಸು ಅವರ ಜೀವಿತಾವಧಿಯಲ್ಲೇ ಕುಗ್ಗಿ ಈಗ ಎಡಪಂಥೀಯ ಇತಿಹಾಸವನ್ನೇ ಕೆದಕಿ ಹುಡುಕುವ ಪರಿಸ್ಥಿತಿ ಕರ್ನಾಟಕ ಆಂದ್ರಪ್ರದೇಶ ಇತ್ಯಾದಿ ಪ್ರದೇಶದಲ್ಲಿ ಇದೆ. ೬೦, ೭೦, ೮೦ ದಶಕದ ಹೋರಾಟದ ನೇತೃತ್ವ ವಹಿಸಿದ್ದ ಒಂದಿಷ್ಟು ಹಿರಿಯ ಜೀವಗಳು ಅಲ್ಲಲ್ಲಿ ಕಾಣುತ್ತಾರೆಯೇ ಹೊರತು ಕಮ್ಯುನಿಸ್ಟ್ ಸಿದ್ಧಾಂತ, ಹೋರಾಟ ಕಾಣುತ್ತಿಲ್ಲ!. ಕಮ್ಯುನಿಸ್ಟ್ ಅಂದರೆ ಸಮಾಜದಲ್ಲಿ ಅದರಲ್ಲೂ ಯುವಜನತೆ ಅದೊಂದು ವಿನಾಶ ಎಂದು ಭಾವಿಸುವಷ್ಟರ ಮಟ್ಟಿಗೆ ಕೆಟ್ಟಾಭಿಪ್ರಾಯ ವನ್ನು ಹೊತ್ತುಕೊಂಡಿದೆ. ಬಂಡವಾಳವಾದ ಕಾಲಕ್ಕೆ ತಕ್ಕಂತೆ ಪ್ರದೇಶಕ್ಕೆ ತಕ್ಕಂತೆ ಮರುರೂಪುಗೊಳ್ಳುತ್ತಿದ್ದರೆ ಎಡಪಂಥೀಯ ಚಿಂತನೆ ಇನ್ನೂ ದೇಶದ ಸಾಮಾಜಿಕ ಪರಿಸ್ಥಿತಿಯನ್ನೇ ಅರಿಯಲಿ ವಿಫಲವಾಗಿದೆ. ತಮ್ಮ ”’ದಲಿತ್ ಕ್ವಶ್ಚನ್ಸ್”(Dalit Questions) ಪುಸ್ತಕದಲ್ಲಿ ಸಿಪಿಐ(ಎಂ)ನ ಡಿ.ರಾಜ, ಕಮ್ಯುನಿಷ್ಟ್ ವರ್ಗ ಸಂಘರ್ಷದ ಹೋರಾಟಗಳಿಂದ ಅಸ್ಪೃಶ್ಯತೆಯ ಮೇಲೆ ಗಂಭೀರ ಪರಿಣಾಮ ಆಗಿಲ್ಲ, ಒಂದು ಹಂತದಲ್ಲಿ ಈ ವರ್ಗ ಹೋರಾಟಗಳಿಂದ ಭೂಮಾಲಿಕರ ಶೋಷಣೆ ಅಸ್ಪೃಶ್ಯರ ಮೇಲೆ ಹೆಚ್ಚಾಯಿತು ಎಂದು ಗುರುತಿಸುತ್ತಾರೆ. ಅಷ್ಟೇ ಅಲ್ಲದೆ ಸಮಾಜದಲ್ಲಿ ಜಾತಿ ವ್ಯವಸ್ತೆ ನಾಶವಾಗುವವರೆಗೆ ವರ್ಗ ರಹಿತ ಸಮಾಜದ ಸ್ಥಾಪನೆ ಸಾದ್ಯವಿಲ್ಲ ಎನ್ನುವ ಅಂಬೇಡ್ಕರ್ ಮಾತನ್ನು ಒಪ್ಪುತ್ತಾರೆ.
ಪುಸ್ತಕದಲ್ಲಿ ಪ್ರಸ್ತಾಪವಾಗುವ ಕಡು ಬಡತನ, ಅಸ್ಪೃಶ್ಯತೆಯ ರೌರವ ನರಕದ ದೃಶ್ಯಗಳು, ಅವಮಾನ ಇವು ಒದುಗರ ಸಂವೇದನೆಯನ್ನು ಇಂಚಿಂಚಾಗಿ ಚುಚ್ಚುತ್ತದೆ. ಕೆಲವೊಂದು ವಿವರಣೆ ಎಷ್ಟು ನೈಜತೆಯಿಂದ ಕೂಡಿವೆ ಎಂದರೆ ನೀವು ಅಲ್ಲೊಂದು ಪಾತ್ರವಾಗುವಷ್ಟು.! ಅಸ್ಪೃಶ್ಯತೆಯನ್ನು ನುಂಗಿ ನೀರು ಕುಡಿದ ಜನರು ಇದನ್ನು ಓದಿದರೆ ಬಹುಶಹ ಅವರ ಜೀವನವೇ ಕಣ್ಮುಂದೆ ಬರುವುದೇನೋ! ಅಲ್ಲಲ್ಲಿ ಒಂದಿಷ್ಟು ಕಾಲಾವಧಿ ಗೊಂದಲ ಮೂಡಿಸುತ್ತದೆ.
೨೦೧೬ರಲ್ಲಿ ದೇಶದ ವಿವಿಧ ಭಾಗದಲ್ಲಿ ೪೦,೮೦೧ ದಲಿತರ/ ಆದಿವಾಸಿಗಳ ಮೇಲಿನ ದೌರ್ಜನ್ಯ ಪ್ರಕರಣಗಳು(ರಾಷ್ಟ್ರೀಯ ಅಪರಾಧ ದಾಖಲೆ) ದಾಖಲಾಗಿದೆ, ೨೦೧೫ರಲ್ಲಿ ಇದು ೩೮,೬೭೦ ಇತ್ತು. ಸ್ವತಂತ್ರ ಕಳೆದು ೭೦ವರ್ಷಗಳು ಆದರೂ ಸಹಸ್ರಾರು ಸಂಖ್ಯೆಯಲ್ಲಿ ದೌರ್ಜನ್ಯ ಪ್ರಕರಣ ನಡೆಯುತ್ತಿದೆ, ಹಾಗೂ ವರ್ಷದಿಂದ ವರ್ಷಕ್ಕೆ ಕಡಿಮೆ ಆಗುವ ಬದಲು ಹೆಚ್ಚುತ್ತಿದೆ. ಇಷ್ಟು ಪ್ರಮಾಣದ ಪ್ರಕರಣ ದಾಖಲಾಗುತ್ತಿದೆ ಅಂದರೆ ಇಷ್ಟೇ ಘಟನೆಗಳು ಸಂಭವಿಸುತ್ತಿದೆ ಎಂದೇನಲ್ಲ, ದೌರ್ಜನ್ಯ ನಡೆದು ಊರ ಪಂಚಾಯಿತಿ, ಹಿರಿಯರ ಪಂಚಾಯಿತಿ ಕಟ್ಟೆಯಲ್ಲೇ ಕಳೆದುಹೋಗುವ ಪ್ರಕರಣಗಳು ಮತ್ತಷ್ಟಿದೆ. ಜಾತಿ ಪದ್ದತಿಯ ಒಂದಿಷ್ಟು ಹಲ್ಲುಗಳು ಜಾಗತೀಕರಣದ ಇಂಡಿಯಾದಲ್ಲಿ ಮುರಿದಿದ್ದರೆ, ಬಂಡವಾಳವಾಡದಂತೆ ಜಾತಿ ಆಧುನಿಕ ಕಾಲಘಟ್ಟಕ್ಕೆ ಸರಿಯಾಗಿ ಬದಲಾಗಿದೆ ಒಂದಷ್ಟು ಕಡೆ ಮುಂಚೆಗಿಂತಲೂ ಹೆಚ್ಚು ಸದೃಢವಾಗಿದೆ. ಸಂಸ್ಕೃತೀಕರಣದ ಭಾಗವಾಗಿ ಒಂದಿಷ್ಟು ಸುಮುದಾಯಗಳು ಜಾಗತೀಕರಣದ ಲಾಭ ಪಡೆದು ಮುಂದುವರೆದರೆ, ಸಾಂವಿಧಾನಿಕ ರಕ್ಷಣೆ ಮತ್ತು ಹಕ್ಕಿನ ಹೊರತಾಗಿಯೂ ದಲಿತರಲ್ಲಿ ಬಹುತೇಕರು ಹಾಗೂ ಎಲ್ಲ ಆದಿವಾಸಿಗಳು ಅತ್ಯಂತ ಹೀನಾಯ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ.
ಅಂಬೇಡ್ಕರ್ ಇಂಡಿಯನ್ ಎಡಪಂಥೀಯರ ಕುರಿತು ಮಾರ್ಮಿಕವಾಗಿ ಹೀಗೆ ನುಡಿಯುತ್ತಾರೆ “ಇಂಡಿಯನ್ ಕಮ್ಯುನಿಸ್ಟ್ ಪಾರ್ಟೀ ಕೇವಲ್ ಒಂದಿಷ್ಟು ಬ್ರಾಮಣ ಹುಡುಗರ ಕೈಯಲ್ಲಿದೆ, ಅವರು ಮರಾಠ ಸಮುದಾಯ ಹಾಗೂ ದಲಿತರನ್ನು ಗೆಲ್ಲಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅದರಲ್ಲಿ ಸಫಲರಾಗಿಲ್ಲ. ಯಾಕೆಂದರೆ ಅವರು ಒಂದು ಬ್ರಾಹ್ಮಣರ ಗುಂಪು. ಸೋವಿಯಟ್ ಇಂತವರ ಕೈಗೆ ಜವಾಬ್ದಾರಿ ಕೊಟ್ಟು ತಪ್ಪು ಮಾಡಿದೆ, ಒಂದೋ ರಶಿಯನ್ನರಿಗೆ ಇಂಡಿಯಾದಲ್ಲಿ ಕಮ್ಯುನಿಸ್ಟ್ ಬೇಡವಾಗಿತ್ತು ಇಲ್ಲವೇ ಬರಿಯ ನಗಾರಿ ಹೊಡೆಯುವವರು ಬೇಕಿತ್ತು ಏನೋ”. ಇದೆ ಭಾವನೆ ಇಂದು ಹೆಚ್ಚಿನ ದಲಿತ ಹೊರಾಟಗರಲ್ಲೂ ಇದೆ. ಯಾಕಿದು ಬದಲಾಗಿಲ್ಲ? ಎಡಪಂಥೀಯರು ಕೇಳಿಕೊಳ್ಳಬೇಕಾದ ಪ್ರಶ್ನೆಯಿದು.
ಮುಂದೇನು ಎಂಬ ಪ್ರಶ್ನೆ ಕೊನೆಗೆ ನಮ್ಮನ್ನು ಕಾಡುತ್ತದೆ ?!! ಅಸ್ಪೃಶ್ಯತೆ, ಎಡಪಂಥೀಯ ಸಿದ್ದಾಂತ, ಎಡಪಂಥೀಯ ನಾಯಕರುಗಳ ಧೋರಣೆ !! ಸಮಾಜ ಬದಲಾಗುವುದೇ? ಬದಲಾಗಲು ಯಾವ ಚಿಂತನೆ ಬೇಕು? ಹಿಂದುಳಿದ ಜಾತಿ, ಹಿಂದುಳಿದ ಸಮುದಾಯಗಳನ್ನು ಒಂದು ಮಾಡಿ ಸಂಘರ್ಷ ಕಟ್ಟಲು ಎಡಪಂಥೀಯ ಹೋರಾಟ, ಪಕ್ಷದ ಧುರೀಣರಿಗಿಂತ ಬೇರೆಯ ಉತ್ತಮ ಆಯ್ಕೆ ಬೇಕಿದೆಯೇ? ಇನ್ನಾದರೂ ದಲಿತರನ್ನು ಅವರ ಸಮಸ್ಯೆಯನ್ನು ಮುಖ್ಯವಾಗಿ ತೆಗೆದುಕೊಂಡು, ಎಡಪಂಥ ಹಾಗೂ ಅಂಬೇಡ್ಕರ್ ವಾದ ಜೊತೆಯಾಗಿ ಸಾಗುವ ಅನಿವಾರ್ಯತೆ ಇದೆಯೆಂದು ಅಲ್ಲಲ್ಲಿ ಬರುತ್ತಿರುವ ಚರ್ಚೆಗಳಲ್ಲಿ ನಾವು ಗಮನಿಸಬಹುದು. ಎಡಪಂಥೀಯ ಪಕ್ಷಗಳು ಸಮನ್ವಯಕಾರರಂತೆ ಕೆಲಸ ಮಾಡಬೇಕಿದೆ ಏನೋ!? ಅಥವಾ ಎಡ ಬಲಕ್ಕೆ ಮೀರಿದ ಚಿಂತನೆ ನಮ್ಮ ಸಮಾಜಕ್ಕೆ ಅಗತ್ಯವಿದೆಯೇನೋ ಪ್ರಜ್ಞಾವಂತರಿಗೆ ಬಿಟ್ಟ ಪ್ರಶ್ನೆ ಅದು.
ಶೃಂಗೇರಿಯವರಾದ ಕೃಷಿಕ್ regenerative medicine ಮೇಲೆ ಎಮ್ ಎಸ್ ಸಿ ಮಾಡಿದ್ದಾರೆ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ರಿಸರ್ಚ್ , ಬೆಂಗಳೂರಿನಲ್ಲಿ ಸಂಶೋಧಕ ಸಹಾಯಕರಾಗಿ ಮೂರು ವರ್ಷದ ಅನುಭವ. ಪರಿಸರ ಮತ್ತು ಸಾಮಾಜಿಕ ಸಮಸ್ಯೆಗಳು ಇವರ ಆಸಕ್ತಿಯ ವಿಷಯ.
ವಾವ್ ಸುಪರ್
ಕೃಷಿಕ್,
“ಮದ್ದಾನೆಗಳ ಮಧ್ಯೆ ಕಟ್ಟಿರುವೆ” ಅಂತ ಈ ಪುಸ್ತಕವನ್ನ ಅನುವಾದ ಮಾಡಲು ಪ್ರಯತ್ನಿಸಿದೆ.
ವಿವೇಕ್ ಶಾನಭಾಗ ರವರ ಸೂಚನೆಯ ಮೇರೆಗೆ ಈ ಪುಸ್ತಕ ಓದಿದೆ.
ಕನ್ನಡದಲ್ಲಿ ಇದಕ್ಕಿಂತಲೂ ತೀವ್ರ ಮತ್ತು ವಾಸ್ತವ ಬರಹಗಳು ಬಂದಿವೆಯಾದ್ದರಿಂದ ಅನುವಾದ ನಿಲ್ಲಿಸಿದೆ….
ನಿಮ್ಮ observation ಗಮನಾರ್ಹ ವಾಗಿವೆ.
ನಾನೂ ಪುಸ್ತಕ ಓದಿದೆ, ನನಗೆ ತುಂಬ ಕಾಡಿತು, ಅನುವಾದ ಮಾಡೋಣ ಎನ್ನಿಸಿ, ಒಪ್ಪಿಗೆ ಕೇಳಿದೆ, ಅವರಿಂದ ಏನೂ ಉತ್ತರ ಬರಲಿಲ್ಲ. ಸುಮ್ಮನಾದೆ. @ ವೀರಣ್ಣ ಮಡಿವಾಳರ್… ನಿಮಗೆ ಒಪ್ಪಿಗೆ ಕೊಟ್ಟಿದ್ದರೇ?