ಮೂರು ದಶಕಗಳಷ್ಟು ಕಾಲ ಕರ್ನಾಟಕದ ಸಮಾಜವಾದಿ ಚಿಂತನೆ ಮತ್ತು ರೈತ ಸಮುದಾಯಗಳ ಚಳುವಳಿಗಳ ಧನಿಯಾಗಿದ್ದ ಪ್ರೊ. ಎಂ. ಡಿ. ನಂಜುಂಡಸ್ವಾಮಿಯವರನ್ನು ಕನ್ನಡದ ಪ್ರಮುಖ ಚಿಂತಕ, ವಿಮರ್ಶಕರಾದ ರಹಮತ್ ತರೀಕೆರೆಯವರು 27/01/2003 ರಂದು ಹೊಸಪೇಟೆಯಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ‘ಕನ್ನಡ ಅಧ್ಯಯನ’ ತ್ರೈಮಾಸಿಕ ಪತ್ರಿಕೆಗೆ ಮಾಡಿದ ಸಂದರ್ಶನದ ಧ್ವನಿ ಮುದ್ರಣ ಇದು .
ಮಾರ್ಕ್ಸ್ ವಾದವನ್ನು ಅಧ್ಯಯನ ಮಾಡಿದ ಮೇಲೆ ಭಾರತದ ಅಗತ್ಯಗಳಿಗೆ ತಕ್ಕ ಸಮಾಜವಾದವನ್ನು ರೂಪಿಸಬೇಕೆಂದು ಪ್ರಯತ್ನಿಸಿದ ಲೋಹಿಯಾ ರೀತಿಯಲ್ಲಿಯೇ ಎಂ.ಡಿ.ಎನ್ ಕೂಡ ಚಿಂತಿಸಿದರು. ೧೯೬೦ ರಿಂದ ಈಚೆಗೆ ಕರ್ನಾಟಕದಲ್ಲಿ ರೂಪುಗೊಂಡ ಹಲವು ಬಗೆಯ ವೈಚಾರಿಕ, ಆರ್ಥಿಕ , ಸಾಂಸ್ಕೃತಿಕ ಚಿಂತನೆ , ವೈಜ್ಞಾನಿಕ ಮನೋಭಾವದ ಬೆಳವಣಿಗೆ , ಸಂಘಟನೆ , ಪ್ರತಿಭಟನೆ , ಸಾಮಾಜಿಕ ವಿಶ್ಲೇಷಣೆ, ರಾಜಕೀಯ ಪರ್ಯಾಯಗಳು , ಪ್ರಾದೇಶಿಕ ಪಕ್ಷ ಹಾಗೂ ಅನೇಕ ಕಾರ್ಯಕ್ರಮಾಧಾರಿತ ಹೋರಾಟಗಳ ಹಿಂದೆ ಎಂ.ಡಿ.ಎನ್ ಅವರ ವಿಶಿಷ್ಟ ಚಿಂತನೆ ಹಾಗೂ ಪ್ರೇರಣೆಗಳಿವೆ . ಕರ್ನಾಟಕದ ಸಮಾಜವಾದಿ ಚಳುವಳಿ , ವಿಚಾರವಾದಿ ಚಳುವಳಿ , ಪವಾಡ ಬಯಲು ಮಾಡುವ ಕಾರ್ಯಕ್ರಮಗಳು , ಶೂದ್ರ ಬರಹಗಾರರ ಒಕ್ಕೂಟ , ದಲಿತ ಚಳುವಳಿ , ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯದ ಪ್ರಶ್ನೆ , ಸಾಹಿತ್ಯದಲ್ಲಿ ಸಾಮಾಜಿಕ ಪ್ರಜ್ಞೆಯ ಪ್ರಶ್ನೆ , ನದಿನೀರಿನ ಹಂಚಿಕೆ , ದೇಶಿ ಕೃಷಿ ಪದ್ದತಿ ಕುರಿತ ಚಿಂತನೆ , ಜಾಗತೀಕರಣ ವಿರೋಧಿ ಚಳುವಳಿ , ಜಾಗತಿಕ ಮಾರುಕಟ್ಟೆಯ ಹುನ್ನಾರದ ವಿರುದ್ದದ ಹೋರಾಟಗಳು ಈ ಎಲ್ಲ ಸಂಧರ್ಭಗಳಲ್ಲೂ ಎಂ.ಡಿ.ಎನ್ ಮುಖ್ಯ ತಾತ್ವಿಕ ನೋಟಗಳನ್ನು ನೀಡುತ್ತಾ ಬಂದವರು. ಜಾಗತೀಕರಣವನ್ನು ಅತ್ಯಂತ ಸಮರ್ಥವಾಗಿ ವಿವರಿಸಿದ ಎಂ.ಡಿ.ಎನ್ ವರ ಸಮಗ್ರ ಸಾಮಾಜಿಕ ಗ್ರಹಿಕೆ , ಆಳವಾದ ಅಧ್ಯಯನ , ತೀಕ್ಷ್ಣ ಹಾಗೂ ನಿಷ್ಟುರ ವಿಶೇಷಣೆಗಳು ಕರ್ನಾಟಕದ ವಿಧಾನಸಭೆಯಲ್ಲಿ ಅವರು ೧೯೮೯ರಿಂದ ೧೯೯೪ರ ವರೆಗೆ ಮಂಡಿಸಿರುವ ವಿಚಾರಗಳಲ್ಲಿ ಹಾಗೂ ರೈತ ಸಭೆಗಳಲ್ಲಿ ಅವ್ರು ಮಾಡಿದ ಭಾಷಣಗಳಲ್ಲಿ ಕೂಡ ಅತ್ಯಂತ ಖಚಿತವಾಗಿ ವಕ್ತವಾಗಿದೆ. ತಮ್ಮ ಚಿಂತನೆಗಳನ್ನು ಕಾರ್ಯರೂಪಕ್ಕಿಳಿಸುವ ಸೇನಾನಿಯಾಗಿಯೂ ಕ್ರಿಯಾಶೀಲರಾಗಿದ್ದ ಅವರು ಸ್ವಾತಂತ್ರೋತ್ತರ ಕರ್ನಾಟಕದ ಶ್ರೇಷ್ಠ ಆಕ್ಟಿವಿಷ್ಟ್ ಚಿಂತಕರೆಂದರೆ ಉತ್ಪ್ರೇಕ್ಷೆಯಾಗಲಾರದು .
ಪೋಸ್ಟರ್ ಮತ್ತು ಧ್ವನಿ ಸಂಸ್ಕ್ರರಣೆ : ಗೌರೀಶ್ ಕಪನಿ