ಋತುಮಾನದ ಓದುಗರಿಗೆ ರಾಜ್ಯೋತ್ಸವದ ಶುಭಾಶಯಗಳು.
ಒಂದು ಸಂಸ್ಕೃತಿಯ ಅಸ್ಮಿತೆ ಅದರ ಭಾಷೆಯಲ್ಲಿರುತ್ತದೆ. ಮನುಷ್ಯ ನಾಗರಿಕತೆಯ ಅಸಂಖ್ಯಾತ ವೈವಿಧ್ಯಮಯ ಸಾಂಸ್ಕೃತಿಕ ಕಥನಗಳಲ್ಲಿ ಅದೆಷ್ಟು ಬಗೆಯ ಭಾಷೆಗಳು ರೂಪ ತಳೆದಿವೆಯೆಂಬುದು ಅಗಣಿತ ವಿಚಾರ.
ಕರ್ನಾಟಕದೊಳಗೆಯೇ ಅದೆಷ್ಟು ಬಗೆಯ ಕನ್ನಡವಿದೆ. ಪ್ರತಿ ಮೂವತ್ತು ಕಿಲೋಮಿಟರಿಗೆ ನಮ್ಮ ಭಾಷೆಯ ಸ್ವರೂಪ ಬದಲಾಗುತ್ತದೆ. ಆಧುನಿಕ ಬದುಕಿನ ಏಕಮುಖಿ ಜೀವನ ಕ್ರಮ ಈ ಭಾಷೆಗಳನ್ನು ನಿಧಾನಕ್ಕೆ ಕೊಲ್ಲುತ್ತಿದೆ. ನಮ್ಮ ಕಣ್ಣೆದುರಿಗೇ ನಮ್ಮ ನುಡಿಗಟ್ಟುಗಳು ನಶಿಸಿ ಹೋಗುತ್ತಿರುವುದನ್ನ ನೋಡುವುದನ್ನ ಬಿಟ್ಟು ಇನ್ನೇನು ಮಾಡಲು ಸಾಧ್ಯವಿದೆ?
ಈ ಹಂತದಲ್ಲಿ ನಮ್ಮ ಆಲೋಚನೆಗೆ ಬಂದಿದ್ದು ಈ ವೈವಿಧ್ಯಮಯ ಭಾಷೆಯನ್ನ ದಾಖಲಿಸುವುದರ ಯೋಜನೆ. ಈ ಯೋಜನೆ ಸಾಧ್ಯವಾಗುವುದು ಇಡೀ ಸಮುದಾಯದ ಪಾಲ್ಗೊಳ್ಳುವಿಕೆಯಿಂದ ಮಾತ್ರ ಸಾಧ್ಯ. ನುಡಿ ಋತು ಯೋಜನೆ ನಿಮ್ಮ ಮುಂದೆ.
ಏನಿದು ನುಡಿ ಋತು ಯೋಜನೆ:
ಸಾಧ್ಯವಾದಷ್ಟು ವೈವಿಧ್ಯಮಯ ಕನ್ನಡ ನುಡಿಯನ್ನು ಸಹಜವಾಗಿ ದೃಶ್ಯ ರೂಪದಲ್ಲಿ ದಾಖಲಿಸಿ ಕನ್ನಡಿಗರ ಮುಂದಿಡುವುದು.
ವೈವಿಧ್ಯಮಯ ಕನ್ನಡ ನುಡಿ ಎಂದರೇ..?
ಕರ್ನಾಟಕದಾದ್ಯಂತ ಸಂಚರಿಸಿದರೆ ಪ್ರತಿ ಮೂವತ್ತು ಕಿಲೋಮೀಟರಿಗೆ ನಮ್ಮ ನುಡಿ ಬದಲಾಗುತ್ತದೆ. ಉದಾಹರಣೆಗೆ ಇಂಗ್ಲೀಷಿನ ‘ಓಕೆ’ ಗೆ ಪರ್ಯಾಯವಾಗಿ ಕನ್ನಡದಲ್ಲಿ ಸರಿ, ಪರ್ವಾಗಿಲ್ಲ, ಅಡ್ಡಿಲ್ಲ, ತೊಂದ್ರೆಯಿಲ್ಲ, ಆಗಲಿ…. ಎಂಬಷ್ಟು ಪದಗಳು ನಮಗೆ ಸಿಗುತ್ತವೆ. ಅಷ್ಟು ವೈವಿಧ್ಯಮಯವಾಗಿದೆ ನಮ್ಮ ಭಾಷೆ.
ಹೇಗೆ ದಾಖಲಿಸುವುದು?
ಮಾತುಗಳು ಹುಟ್ಟುವುದೆಲ್ಲಿ? ಸಾಮಾನ್ಯವಾಗಿ ಅಡಿಗೆ ಮನೆಯಲ್ಲಿ, ಊರಿನ ಅರಳಿಕಟ್ಟೆಗಳಲ್ಲಿ, ಮನೆ ಮುಂದಿನ ಬೀದಿಯಲ್ಲಿ, ಸಂತೆಯಲ್ಲಿ ಅದೆಲ್ಲೇ ಇರಲಿ ಸಹಜವಾಗಿ ಆಡುಭಾಷೆಯನ್ನ ಉತ್ತಮ ಗುಣಮಟ್ಟದ ಧ್ವನಿ ಮುದ್ರಣದಿಂದ ಮತ್ತು ಒಂದೊಳ್ಳೆ ಕ್ಯಾಮೆರಾ ಸಹಾಯದಿಂದ ಚಿತ್ರಿಸುವುದು.
ಯಾರು ದಾಖಲಿಸುವುದು?
ಆಸಕ್ತಿ ಇರುವ ಯಾರೇ ಈ ಕೆಲಸವನ್ನ ಕೈಗೊತ್ತಿಕೊಳ್ಳಬಹುದು. ಸಂಕೋಚವನ್ನು ಬದಿಗಿರಿಸಿ ನಿಮ್ಮ ಹಳ್ಳಿ, ಬೀದಿ, ಪಟ್ಟಣಗಳಲ್ಲಿ ನಡೆಯುವ ಸಹಜ ಮಾತುಕತೆಯನ್ನ ದಾಖಲಿಸುವುದು.
ದಾಖಲಿಸಲು ಬೇಕಾದ ಸಲಕರಣೆಗಳೇನು?
ಕನಿಷ್ಟ FULL HD (1920 x 1080 pixels) ಶೂಟ್ ಮಾಡಬಹುದಾದ ಕ್ಯಾಮೆರಾ ( ಇದೆ ಸೌಲಭ್ಯವಿರುವ ಮೊಬೈಲ್ ಫೋನ್ ಕೂಡ ಆಗಬಹುದು ) . ಅನುಕೂಲವಿದ್ದರೆ ಒಂದು ಮೈಕ್ . ಮೈಕನ್ನು ಮಾತಾಡುವವರ ದೇಹಕ್ಕೆ ಸಿಕ್ಕಿಸಬಾರದು .
ದಾಖಲಿಸಿದ ವೀಡಿಯೋವನ್ನು ಎಲ್ಲಿ ಮತ್ತು ಹೇಗೆ ಕಳುಹಿಸುವುದು?
ನಮ್ಮ ಮಿಂಚಂಚೆ editor@ruthumana.com ಗೆ ಕಳುಹಿಸಿಕೊಡಿ . ಆಥಾವ ಗೂಗ್ಲೆ ಡ್ರೈವ್ , ಡ್ರಾಪ್ ಬಾಕ್ಸ್ ಮೂಲಕ ನಮ್ಮ ಮಿಂಚಂಚೆಯೊಡನೆ ಹಂಚಿಕೊಳ್ಳಿ . ಡಿ ವಿ ಡಿ, ಪೆನ್ ಡ್ರೈವ್ ನಲ್ಲಿ ಶೇಕರಿಸಿ ಈ ಕೆಳಗಿನ ವಿಳಾಸಕ್ಕೆ ಕಳುಹಿಸಿಕೊಡಬಹುದು .
#ಎಫ್3, ‘ಎ’ ಬ್ಲಾಕ್, ಶಾಂತಿನಿಕೇತನ ಅಪಾರ್ಟ್ಮೆಂಟ್ , ಶಾಂತಿನಿಕೇತನ ಲೇಯೌಟ್,
ಅರೆಕೆರೆ, ಬನ್ನೇರ್ಘಟ್ಟ ರಸ್ತೆ
ಬೆಂಗಳೂರು – 560 076
ಹೀಗೆ ಕಳುಹಿಸಿಕೊಡುವಾಗ ಅದರ ಜೊತೆಗೆ ಈ ಕೆಳಗಿನ ವಿವರಗಳನ್ನು ಕಳುಹಿಸಿಕೊಡುವುದು ಕಡ್ಡಾಯ.
1. ನಿಮ್ಮ ಹೆಸರು , ವಿಳಾಸ , ಸಂಪರ್ಕ ಸಂಖ್ಯೆ
2. ವಿಡಿಯೋ ದಾಖಲಿಸಿಕೊಂಡ ದಿನಾಂಕ , ಸ್ಥಳ , ಮಾತುಗಾರ ಜನಾಂಗದ ಪರಿಚಯ
ಈ ಬಗ್ಗೆ ಇರುವ ಅನುಮಾನಗಳಿಗೆ ಪರಿಹರಿಸಲು ಯಾರನ್ನು ಸಂಪರ್ಕಿಸುವುದು?
ಈಮೇಲ್ : editor@ruthumana.com
ಮೊಬೈಲ್ : 9480009997 / 9591368966
ದಾಖಲಿಸುವ ಮುನ್ನ ನೆನಪಿಟ್ಟುಕೊಳ್ಳಬೇಕಾದ ಅಂಶಗಳು:
೧. ದಾಖಲೆ ಸಹಜವಾಗಿರಲಿ. ಕ್ಯಾಮೆರಾವನ್ನು ಎದುರಿಗಿಟ್ಟು ಸಂದರ್ಶನದ ರೂಪದಲ್ಲಿ ಮಾತನಾಡಿಸಬೇಡಿ. ಕ್ಯಾಮೆರಾ ಎದುರು ಇದೆ ಅಂದ ತಕ್ಷಣ ಮಾತುಗಳು ಕೃತಕವಾಗುವ ಸಾಧ್ಯತೆ ಹೆಚ್ಚು. ಆದಷ್ಟು ಕ್ಯಾಮೆರಾದ ಇರುವಿಕೆ ಮಾತನಾಡುವವರಿಗೆ ತಿಳಿಯದೇ ಇರಲಿ.
೨. ಧ್ವನಿ ಸ್ಪಷ್ಟವಾಗಿರಲಿ. ಚೆನ್ನಾಗಿ ಚಿತ್ರಿಕರಿಸಿ ಧ್ವನಿಯ ಗುಣಮಟ್ಟ ಸರಿ ಇಲ್ಲವೆಂದರೆ ಮಾಡಿದ ಪ್ರಯತ್ನ ವ್ಯರ್ಥ. ಚಿತ್ರೀಕರಿಸುವ ಮುನ್ನ ಒಂದೆರಡು ಬಾರಿ ಪರೀಕ್ಷಿಸಿ.
೩. ಶಬ್ದ ಮಾಲಿನ್ಯವಿರುವ ಕಡೆ ಚಿತ್ರಿಕರಿಸಬೇಡಿ. ಆದಷ್ಟು ನಿಶ್ಯಬ್ದವಿರುವ ಸ್ಥಳಗಳಲ್ಲಿ ಚಿತ್ರೀಕರಿಸಿ.
೪. ಸಂದರ್ಶನ ರೂಪದ ಚಿತ್ರೀಕರಣ ಬೇಡ. ತಮ್ಮ ಪಾಡಿಗೆ ತಾವು ಮಾತನಾಡುತ್ತಿರುವ ಸನ್ನಿವೇಶ ಇದ್ದಷ್ಟು ಒಳ್ಳೆಯದು. ನಿಮ್ಮ ಅನುಕೂಲಕ್ಕೆ ಇಲ್ಲಿ ಕೆಲವು ಉದಾಹರಣೆ ಕೊಡಲಾಗಿದೆ:
ಅ. ಕಿರಾಣಿ ಅಂಗಡಿಯಲ್ಲಿ ವ್ಯಾಪಾರ ಮಾಡುವಾಗಿನ ಮಾತುಕತೆ.
ಆ. ಅಡಿಗೆಮನೆಯಲ್ಲಿ ಹೆಂಗಸರ ಪಟ್ಟಾಂಗ
ಇ. ಮನೆಯ ಮುಂದಿನ ಕಟ್ಟೆ ಅಥವಾ ಊರ ಮಂದಿ ಸೇರುವ ಜಾಗದಲ್ಲಿನ ಹರಟೆ.
ಉ. ಲೋಕಲ್ ಬಸ್ಸಿನಲ್ಲಿ ಪರಿಚಯಸ್ಥರ ನಡುವೆ ನಡೆಯುವ ಮಾತುಕತೆ.
ಇ. ಹೊಲ ಗದ್ದೆಗಳಲ್ಲಿ ನಡೆಯಬಹುದಾದ ಮಾತುಕತೆ.
ಕನ್ನಡ ಭಾಷೆಯ ಚೆಲುವಿರುವುದೇ ವೈವಿಧ್ಯಮಯ ಆಡು ನುಡಿಗಳಲ್ಲಿ. ಅಪರೂಪದ ನಿಮ್ಮ ನುಡಿವೈವಿಧ್ಯದ ದಾಖಲೀಕರಣ ಯೋಜನೆ ಖುಷಿ ನೀಡಿತು. ಆಫ್ರಿಕಾದಲ್ಲಿ ಆದಿಭಾಷೆಯನ್ನೊಂದನ್ನ ಆಡುವ ಏಕೈಕ ವ್ರದ್ಧ ಕಳೆದ ವರ್ಷ ತೀರಿಕೊಂಡನಂತೆ. ಆ ನುಡಿಯನ್ನು ದಾಖಲಿಸಲು ಆ ವ್ರದ್ಧನಿಗೇ ಕೆಲವು ವರ್ಷಗಳಿಂದ ಧ್ವನಿಗ್ರಾಹಕವನ್ನು ಜೋಡಿಸಿದ್ದರಂತೆ. ನುಡಿ ಸಂಗ್ರಹ ಅಭಿಯಾನಕ್ಕೆ ಯಶ ಸಿಗಲಿ.