“ಸರಿ ಗುರುಗಳೇ, ಆದರೂ ‘ಅದೂ’ ಒಂದು ಹಿತಾಸಕ್ತಿ ಅಷ್ಟೇ ತಾನೆ”, ನೀವು ಮಧ್ಯ ಬಾಯಿ ಹಾಕಿ ಹೀಗೆನ್ನಬಹುದು. ಕ್ಷಮಿಸಿ ಸ್ವಾಮೀ, ಒಂದು ನಿಮಿಷ ಮಾತನಾಡಲು ಬಿಡಿ, ಆ ವಿಷಯವನ್ನೂ ನೆಟ್ಟಗೆ ಹೇಳುತ್ತೇನೆ ಈಗ, ದಯಮಾಡಿ ಸುಮ್ಮನೆ ಕೇಳಿ. ಈ ಅನುಕೂಲ ಶಾಸ್ತ್ರ ತುಂಬಾ ಮಹತ್ವದ್ದು; ಏಕೆಂದರೆ ಇದು ಎಲ್ಲ ವರ್ಗೀಕರಣಗಳನ್ನೂ ಮುರಿದು, ಮಾನವಕುಲದ ಹಿತಕ್ಕೆಂದು ಮನುಕುಲದ ಪ್ರೇಮಿಗಳು ಕಟ್ಟಿದ್ದ ವ್ಯವಸ್ಥೆಯನ್ನು ನಿರಂತರವಾಗಿ ದಿಕ್ಕಾಪಾಲಾಗಿಸಿ ಎಲ್ಲವನ್ನು ಅಲ್ಲೋಲಕಲ್ಲೋಲ ಮಾಡಿಬಿಡುತ್ತದೆ. ಈ ಅನುಕೂಲ ಶಾಸ್ತ್ರಕ್ಕೆ ಹೆಸರು ಕೊಡುವ ಮುನ್ನ ರಾಜಿಯಾಗಿ ನಾನು ಒಂದು ಕೆಚ್ಚಿನ ಘೋಷಣೆಯ ಮಂಡಿಸುವೆ, ಕೇಳಿ. ಈ ಸೊಗಸಾದ ವ್ಯವಸ್ಥೆಗಳು, ಈ ಸಿದ್ಧಾಂತ, ಈ ನೀತಿಪಾಠಗಳು ಮನುಷ್ಯಜಾತಿಗೆ ಅದರ ಅಸಲಿ, ಸಹಜ, ಹಿತಾಸಕ್ತಿಗಳನ್ನು ವಿವರಿಸುತ್ತವೆ ಎನ್ನುತ್ತಾರೆ. ಏಕೆಂದರೆ ಈ ಹಿತಾಸಕ್ತಿಗಾಗಿ ಶ್ರಮಿಸಿದವರೆಲ್ಲಾ ಆಗ ತತ್ಕ್ಷಣವೇ ಸಭ್ಯರೂ, ಪ್ರಾಮಾಣೀಕರೂ ಆಗಿಬಿಡುತ್ತಾರೆ. ಈಗ ಬೆಳಗ್ಗೆಯಿಂದ ಸಂಜೆಯವರೆಗೂ ಕತ್ತೆಯಂತೆ ದುಡಿಯುವುದೇ ಮನುಷ್ಯರ ನಿಜ ಆಸಕ್ತಿಯೆಂದು ಈ ಸಿದ್ಧಾಂತಗಳು ನಿರ್ಣಯಿಸಿದರೆ, ಬೆಳಗ್ಗೆಯಿಂದ ಸಂಜೆಯವರೆಗೂ ಕತ್ತೆಯಂತೆ ದುಡಿಯುವವರೆಲ್ಲಾ ಸಹಜರೂ ಸಭ್ಯರೂ, ಪ್ರಾಮಾಣೀಕರು! ಆದರೆ ನನ್ನ ದೃಷ್ಟಿಯಲ್ಲಿ ಇವೆಲ್ಲಾವೂ ಬರಿಯ ತರ್ಕದ ಅಭ್ಯಾಸ ಅಷ್ಟೇ, ಹೌದು ಸ್ವಾಮಿ! ಅವೆಲ್ಲವೂ ಕೃತ್ರಿಮ ಮರುಳು ತರ್ಕದ ಕ್ರಮಬದ್ಧ ಅಭ್ಯಾಸ. ಮನುಕುಲದ ಪುನರುತ್ಧಾನವಾಗುವುದು ಅದು ಶಿಸ್ತುಬದ್ಧವಾಗಿ ತನ್ನ ಹಿತಾಸಕ್ತಿಯನ್ನು ಅನ್ವೇಷಿಸಿದಾಗ ಮಾತ್ರ ಎಂಬ ‘ಥಿಯರಿ’ ನನಗೆ ಬಕಲ್ನ* ತರ್ಕವನ್ನು ನೆನೆಪಿಸುತ್ತದೆ. ಅವನು ಒತ್ತಿ ಹೇಳಿದ್ದ, ನಾಗರೀಕತೆ ಮಾತ್ರ ಮನುಕುಲವನ್ನು ಸಮಾಧಾನದಲ್ಲಿಡುವ ಮದ್ದು; ನಿಧಾನವಾಗಿ ನಮ್ಮ ರಕ್ತದಾಹ ಕಡಿಮೆಯಾಗಿ, ಯುದ್ಧ ಕಾಮ ಇಂಗುವುದು ನಾವು ಹೆಚ್ಚು ಹೆಚ್ಚು ನಾಗರೀಕತೆಯ ಹತ್ತಿರ ಬಂದಾಗಲೇ, ಎಂದೆಲ್ಲಾ. ಆದರೆ ವ್ಯವಸ್ಥೆಯ ಪರವಿದ್ದು ಪೂರ್ವಗ್ರಹ ಪೀಡಿತರಾಗಿರುವ ಈ ಮನುಷ್ಯರು ಸತ್ಯವನ್ನೇ ವಿರೂಪಗೊಳಿಸಿ ತಮ್ಮ ತರ್ಕವನ್ನೂ ಸಮರ್ಥಿಸಲು, ಕಿವಿ-ಕಣ್ಣುಗಳನ್ನು ಮುಚ್ಚಿ ಅವರ ಇಂದ್ರಿಯಗಳನ್ನೇ ನಿರಾಕರಿಸಲು ಹೆದರಲಿಲ್ಲ. ಅದಕ್ಕೇ ನಾನು ಈ ಹೊಳೆಯುವ ದೃಷ್ಟಾಂತವನ್ನು ಇಲ್ಲಿ ನೆನೆಪಿಸಿದ್ದು. ಆದರೂ ನಿಮ್ಮ ಸುತ್ತಮುತ್ತ ಕಣ್ಣಾಡಿಸಿ ಸಜ್ಜನರೇ, ಎಲ್ಲವೂ ರಕ್ತಮಯ. ನೀವು ಕಣ್ಣು ಮುಚ್ಚಿದರೂ, ಮೂಗು ಮುಚ್ಚಿದರೂ, ನೆತ್ತರ ಪ್ರವಾಹ ರಸ್ತೆಯುದ್ಧಕ್ಕೂ ಹರಿಯುತ್ತಿದೆ ಹರುಷದಲ್ಲಿ, ದ್ರಾಕ್ಷಾರಸದಂತೆ.
ಅಲ್ಲಿ ಇಡೀ ಹತ್ತೊಂಭತ್ತನೆಯ ಶತಮಾನವೇ ರಭಸವಾಗಿ ಜಲಪಾತದ ಥರ ಭುಸುಗುಡುತಿದೆ, ಅಲ್ಲಿ ಬಕಲ್ ಸಹಾ ಬದುಕಿದ್ದ, ಅಲ್ಲಿ ನೆಪೋಲಿಯನ್ ಇದ್ದ,(ಮಹಾ ಮತ್ತು ಅಸಲಿ ನೆಪೋಲಿಯನ್ ಇಬ್ಬರೂ) ಅಲ್ಲಿ ನಿಮಗೆಂದೇ ಉತ್ತರ ಅಮೇರಿಕಾವಿದೆ- ಆ ಅಪೂರ್ವ ರಕ್ತ ಮಿಲನ!* ಕಟ್ಟ ಕಡೆಗೆ ಅಲ್ಲಿ ನಗೆಪಾಟಲಿನ ಶ್ಲೆಸ್ವೀಶ್- ಹೋಲ್ಸ್ಟೈನ್* ಪ್ರಾಂತ್ಯಗಳಿವೆ. ಈ ಸಿವಿಲೈಶೇನ್ನು ನಮ್ಮನ್ನು ಸಮಾಧಾನದಲ್ಲಿಡುತ್ತದಂತೆ, ಏನು ಸಮಾಧಾನದಲ್ಲಿಡುವುದು ಮಣ್ಣು! ನಾಗರೀಕತೆ, ನಮ್ಮೊಳಗೊಂದು ಬಗೆಬಗೆ ರೂಪಗಳ ಮಹಾ ಸಂಚಲನಗಳನ್ನು ಸೃಷ್ಟಿsಸುತ್ತದೆ(ಆಫೀಮಿನಂತೆ!) ಅಷ್ಟೇ! ಮತ್ತೇನಿಲ್ಲ. ಈ ಬಗೆಬಗೆ ರೂಪಗಳು ಬೆಳೆದಂತೆ ಮನುಷ್ಯ ಬಹುಶಃ ರಕ್ತದ ರುಚಿ ಹತ್ತಿಸಿಕೊಂಡು, ಅದರ ಕಂಪಲ್ಲೇ ಆನಂದ ಕಾಣಬಹುದೇನೋ. ಇದೆಲ್ಲವೂ ಹಿಂದೆ ಘಟಿಸಿರುವ ಕಥೆಯೇ. ಇತರರ ಕುತ್ತಿಗೆ ಹರಿದು ಶುಭ್ರ ರಕ್ತ ಚೆಲ್ಲಿದರಲ್ಲ, ಅವರೆಲ್ಲರೂ ಸಾಚಾ ಸಭ್ಯ ಸಜ್ಜನ ನಾಗರೀಕರೇ ಸ್ವಾಮಿ! ಇವರ ರಕ್ತದಾಹದ ಕಥೆ, ಇತಿಹಾಸದಲ್ಲಿ ನಿಮ್ಮ ವಿವಿಧ ಆಟೀಲಾರ ಮತ್ತು ಸ್ಟೆಂಕಾ ರಾಝ್ನ್ರ* ರಕ್ತಚರಿತೆಯಂತೆ ಕಣ್ಣಿಗೆ ರಾಚುವುದಿಲ್ಲ, ಏಕೆಂದರೆ ಈ ಸಜ್ಜನರು ಆಗಾಗ ಕಾಲದ ಜತೆ ಬಂದು ಹೋಗುತ್ತಲೇ ಇರುತ್ತಾರೆ. ಇಂಥವರನ್ನು ಆಗಾಗ ನೋಡಿ-ನೋಡಿ, ಇವರ ರಕ್ತಪಾತದ ಅತಿರೇಕಕ್ಕೆ ನಾವು ಕೂಡ ಒಗ್ಗಿ ಹೋಗಿದ್ದೇವೆ; ಹಾಗಾಗಿ ಈ ಮಹಾನೀಯರು ಚಚ್ಚಿ-ಕೊಚ್ಚಿ ಹಾಕಿದ ನಿಜಕಥೆಗಳು ನಮಗೆ ಸಹಜವೂ ಸಾಮಾನ್ಯವೂ ಆಗಿ ಬಿಟ್ಟಿದೆ. ಹಾಗೊಂದು ವೇಳೆ, ನಾಗರೀಕತೆ ಮನುಜರ ರಕ್ತದಾಹವನ್ನು ಏರಿಸದೇ ಹೋದರೂ, ಅವರನ್ನು ಕ್ರೂರ ನರಭಕ್ಷಕ ಪಶುಗಳಂತೆ ನೆತ್ತರ ರುಚಿಯ ಬೆನ್ನು ಹತ್ತಲು ಹಿಂದಿನಕಾಲಕ್ಕಿಂತಲೂ ಹೆಚ್ಚೇ ಪ್ರೇರಿಪಿಸಿದೆ. ಒಂದಾನೊಂದು ಕಾಲದಲ್ಲಿ ರಕ್ತಪಾತವೇ ಒಂದು ಧರ್ಮವಾಗಿತ್ತು. ಶೂಲಕ್ಕೆ ಏರಲು ಯೋಗ್ಯವಾದವರನ್ನು ಮುಲಾಜಿಲ್ಲದೆ, ಮಗುವಿನ ಮನಸ್ಸಿನ ಮುಗ್ಧತೆಯಲ್ಲಿ ಕತ್ತರಿಸಿ ಬಿಡುತ್ತಿದ್ದರು. ಈಗ ರಕ್ತಪಾತವೇ ಅಪಾಯಕಾರಿ, ಅಸಹ್ಯ ಕ್ಷುದ್ರ ವ್ಯಾಪಾರವೆಂಬ ತಿಳುವಳಿಕೆ ಇದ್ದರೂ ಈ ದಂಧೆ ನಡೆಸಲು ನಾವು ಹಿಂದೆಂದೂ ಇಲ್ಲದ ಪುಟಿಯುವ ಜೀವಂತಿಕೆಯಲ್ಲಿ ಕಿಕ್ಕಿರಿದು ಮುಗಿಬೀಳುತ್ತೇವೆ. ಅವರು ಹೇಳುತ್ತಿದ್ದರು, ರಾಣಿ ಕ್ಲಿಯೋಪಾತ್ರಳು(ರೋಮನ್ ಇತಿಹಾಸದಿಂದ ಈ ನಿದರ್ಶನವನ್ನು ಎತ್ತಿದ್ದಕ್ಕೆ ನನ್ನನ್ನು ಕ್ಷಮಿಸಿ ಬಿಡಿ) ಚಿನ್ನದ ಗುಂಡು ಸೂಜಿಗಳನ್ನು ತನ್ನ ದಾಸಿಯರ ಮೊಲೆಗಳಿಗೆ ಚುಚ್ಚಿ ಅವರೆಲ್ಲಾ ನೋವಿನಲ್ಲಿ ಬಾಯಿ, ಬಾಯಿ ಬಡಿಯುತ್ತಾ ಚೀರಾಡುವಾಗ ಆಕೆ ವಿಚಿತ್ರ ಆನಂದ ಕಾಣುತ್ತಿದಳು ಎಂದು. ಈಗ ನೀವು, “ಅಯ್ಯೋ ಬಿಡಿ ಅದೆಲ್ಲಾ ಆದದ್ದು ಆ ಹಳೆಯ ಬರ್ಬರ ಕಾಲದಲ್ಲಿ…” ಎನ್ನಬಹುದು. ಹಾಗೆ ಹೋಲಿಸಿದರೆ ಈಗ ನಾವಿರುವುದು ಬರ್ಬರ ಕಾಲಮಾನದಲ್ಲೇ. ಈಗಲೂ ಜನರಿಗೆ ಗುಂಡು ಸೂಜಿಗಳು ಚುಚ್ಚಿಕೊಂಡಿವೆ. ಆ ಬರ್ಬರ ಕಾಲದಿಂದ ವಿಕಾಸವಾಗುತ್ತಾ ಬಂದ ಮಾನವ, ಈ ಯುಗದಲ್ಲಿ ಇನ್ನೂ ಸ್ಪಷ್ಟವಾಗಿ ಗ್ರಹಿಸಲು ಕಲಿತ ನಿಜ. ಆದರೆ ವಿಜ್ಞಾನ ಮತ್ತು ವಿವೇಚನೆ ಭೋಧಿಸಿದಂತೆ ವರ್ತಿಸಲು ಅರಿಯಲಿಲ್ಲ. ವಿಷಯ ಈಗ ಹೀಗಿದ್ದರೂ ಸಹ, ನಿಮಗಿನ್ನು ಮನುಷ್ಯರಲ್ಲಿ ನಂಬಿಕೆ ಇದೆ , ಅಲ್ಲವೇ? ಅವನು ಬದುಕಲು ಕಲಿಯುವನು, ಆ ಹಳೆ ಚಾಳಿಗಳೂ ಮಾಯವಾದ ಕೂಡಲೇ ಮನುಷ್ಯರೆಲ್ಲ ಬದಲಾಗುವರು, ಪಾಂಡಿತ್ಯ ಮತ್ತು ಸಾಮಾನ್ಯಜ್ಞಾನವು ಮನುಷ್ಯರ ಸ್ವಭಾವವನ್ನು ಮತ್ತೆ ಮತ್ತೆ ತಿದ್ದಿ ಸಹಜತೆಯೆಡೆಗೆ ಎಳೆದೊಯ್ಯುವುದು. ಆಗ ಮನುಷ್ಯರು ಸ್ವಯಂ ಪ್ರೇರಣೆಯಿಂದಲೇ ತಪ್ಪುಗಳನ್ನೇ ಮಾಡುವುದಿಲ್ಲ… ಇಂತಹ ಸೊಬಗಿನ ಭರವಸೆ ನಿಮ್ಮದು. ಇನ್ನೂ ಹೇಳಬೇಕೆಂದರೆ, ಆಗ ಅವರಿಗೆ ತಮ್ಮ ಸಹಜ ಹಿತಾಸಕ್ತಿಯ ವಿರುದ್ಧ ಮಸಲತ್ತು ನಡೆಸುವ ಸ್ವಂತ ಇಚ್ಛೆಯೇ ಬೇಕಾಗಿರುವುದಿಲ್ಲ. ಅಷ್ಟೇ ಅಲ್ಲ, ಆ ಕಾಲ ಬಂದಾಗ ವಿಜ್ಞಾನವೇ ಮನುಷ್ಯರಿಗೆ ಒಳ್ಳೆಬುದ್ಧಿ ಕಲಿಸುವ ಶಿಕ್ಷಕ(ನನ್ನ ದೃಷ್ಟಿಯಲ್ಲಿ ಇದೊಂದು ಐಷಾರಾಮಿ ವಿಲಾಸ) ಎಂದೂ ನೀವು ಹೇಳಬಹುದು. ಆಗ, ಮನುಷ್ಯರೆಲ್ಲಾ ಸ್ವಂತಇಚ್ಛೆಯೂ ಇಲ್ಲದೆ, ಯಾವ ಖಯಾಲಿಯೂ ಇಲ್ಲದ ಪದಾರ್ಥಗಳು. ಆಗ, ಮನುಷ್ಯನೇ ವೀಣೆ, ಮನುಷ್ಯನೇ ತಂತಿ, ನೈಸರ್ಗಿಕ ವಿಧಿಯೇ ವೈಣಿಕ. ಆಗ, ಅವರ ಕ್ರಿಯೆಗಳೆಲ್ಲಾ ಅವರ ಇಚ್ಛೆಯಾಗಿರದೆ, ನೈಸರ್ಗಿಕ ವಿಧಿಗಳ ಪ್ರತಿಕ್ರಿಯೆ ಆಗಿರುತ್ತದೆ. ಆಗ, ಮನುಜರ ಸಕಲ ನಡೆ-ನುಡಿ, ಚರ್ಯೆ, ಕಾರ್ಯವೈಖರಿ, ಸಂಭೋಗಗಳು ಎಣಿಕೆಯಂತೆ!, ಆಗ, ಈ ನೈಸರ್ಗಿಕ ವಿಧಿಗಳ ಪ್ರತಿಕ್ರಿಯೆಗಳನ್ನು ಪತ್ತೆ ಹಚ್ಚುವುದು ಮಾತ್ರ ಅನಿವಾರ್ಯ ಅಷ್ಟೇ! ಆಗ, ಮನುಷ್ಯರ ಕ್ರಿಯೆಗೆ ಅವರೇ ಜವಾಬ್ದಾರರಲ್ಲ! ಇಷ್ಟೆಲ್ಲ ‘ಆಗ’ಗಳಿರುವುದಕ್ಕೇ ಆ ಕಾಲ ಬಂದಾಗ ಬದುಕುವುದೇ ಬಹು ಸುಲಭ. ಏಕೆಂದರೆ ಆಗ, ಮನುಷ್ಯನ ಕ್ರಿಯೆಗಳೆಲ್ಲವೂ ಲೆಕ್ಕಕ್ಕೆ ಸಿಗುತ್ತದೆ, ಗಣಿತದ ಲೋಗೋರಿದಂ ಪುಸಕದಲ್ಲಿ 108,000ವರೆಗೂ ಇರುವ ಕೋಷ್ಟಕಗಳಂತೆ… ಲೋಗೋರಿದಂ ಬಿಟ್ಟ್ಹಾಕಿ ಸ್ವಾಮೆ, ಆಗ, ವಿಶ್ವಕೋಶದಂತಹ ನಿಘಂಟುಗಳು ಕರಾರುವಕ್ಕಾಗಿ ಮನುಷ್ಯರ ಸರ್ವವನ್ನೂ ದಾಖಲಿಸಿ, ಹೇಗೆ ನಮೂದಿಸಿರುತ್ತವೆಂದರೆ, ಯಾವ ಹೊಸ ಅನ್ವೇಷಣೆಗಾಗಲೀ ಹೊಸ ಆಘಾತಗಳಿಗಾಗಲೀ, ಹೊಸ ನೋವುಗಳಿಗಾಗಲೀ ಆಗ ಅವಕಾಶವಿರುವುದಿಲ್ಲ.
ಆಗ – ಇನ್ನೂ ನೀವೇ ಆಡುತ್ತಿರುವ ಮಾತುಗಳು- ನೂತನ ಆರ್ಥಿಕ ಸಂಬಂಧಗಳು ನಿರ್ಮಾಣವಾಗುತ್ತವೆ… ಆಗ, ಗಣಿತ ಶಾಸ್ತ್ರದ ಪರಿಶುದ್ಧತೆಯಲ್ಲಿ ಎಲ್ಲವನ್ನು ಕರಾರುವಕ್ಕಾಗಿ ಹೇಗೆ ಅಳೆದಿರುತ್ತಾರೆಂದರೆ, ಎಲ್ಲ ಪ್ರಶ್ನೆಗಳು ಆ ಕಾಲದಲ್ಲಿ ಕಣ್ಣು ಮಿಟುಕಿಸುವಷ್ಟರಲ್ಲಿ ಮಾಯ. ಏಕೆಂದರೆ ಆಗ, ಈ ಗಣಿತ ಸಾಮ್ರಾಜ್ಯದಲ್ಲಿ ಎಲ್ಲಕ್ಕೂ ‘ನಿಖರ’ವಾದ ಉತ್ತರಗಳಿರುತ್ತವೆ. ಅವರು ಸ್ಫಟಿಕದರಮನೆಯನ್ನು* ಕಟ್ಟುವುದು ಆಗಲೇ. ಆಗ ಮಿಂಚುಳ್ಳಿ ಪಕ್ಷಿಯು ಶುಭ-ಶಕುನದ ಹಾಡ ಹಾಡುವ ದಿನಗಳು ಬರುವವು… ಎಲ್ಲವೂ ಬರೀ ಮಂಗಳ-ಮಂಗಳವಷ್ಟೇ… ಆಗ?
ಇನ್ನೂ ಏನ್ ಆಗ… ಆಗ… ಹೊಡಿರೀ ಲಾಗ! ಏಕೆಂದರೆ ಆಗ, ಉಳಿಯುವುದು ಘೋರ ವಿರಕ್ತಿಪರ್ವ ಅಷ್ಟೇ(ಇದು ನನ್ನ ಮಾತು), ಎಲ್ಲವೂ ಮೊದಲೇ ಲೆಕ್ಕಾಚಾರವಾಗಿ, ಒಂದು ಆಧಾರಕಾರ್ಡಿನಲ್ಲಿ ನಮೂದಿಸಲ್ಪಟ್ಟಿರುವಾಗ ಹೊಸದಾಗಿ ನೀವೇನು ಮಾಡುತ್ತೀರಿ? ಆದರೂ ಆಗ, ಎಲ್ಲವೂ ಭಯಂಕರವಾಗಿ ರೀಸನಬಲ್ಲಾಗಿರಿವುದು ಬಿಡಿ; ಅಂದರೆ ನೀವು ಸಂಡೆ ಕಾರಲ್ಲಿ ಸಂತೆಗೆ ಹೋಗಿ, ಫ್ರೆಶ್ ಸೊಪ್ಪು-ತರಕಾರಿಗಳನ್ನು ಬಟ್ಟೆಚೀಲಕ್ಕೆ ಹಾಕಿ ಪ್ರಿಡ್ಜ್ ನಲ್ಲಿಟ್ಟಷ್ಟು ರೀಸನಬಲ್ಲು! ಈ ರೀಸನಬಲ್ಲ್ ಲೈಫಿನ ತಾಯಿ ವಿರಕ್ತಿಯೇ ತಾನೇ? ಹೌದಪ್ಪ, ಹೌದು, ಆವಿಷ್ಕಾರದ ತಾಯಿಯೂ ಸಹ ವಿರಕ್ತಿಯೇ! ಹತಾಶೆ, ಬೇಸರ, ಮಿತಿಮೀರಿ ಆಗ ಮನುಷ್ಯ, ಹಾಗೆ ಸುಮ್ಮನೆ ಅಂತ ಚಿನ್ನದ ಸೂಜಿಗಳನ್ನು ಎದೆಗೆ ಚುಚ್ಚಿಕೊಳ್ಳಲೂಬಹುದು. ಅದೇನು ಅಷ್ಟು ಕೆಟ್ಟದಲ್ಲ ಬಿಡಿ. ಆದರೆ(ಇದು ನನ್ನ ಮಾತು) ಆಣೆ ಹಾಕಿ ಹೇಳುತ್ತಿದ್ದೇನೆ ಮಹಾನೀಯರೇ, ಈ ಚಿನ್ನದ ಸೂಜಿಗಳಿಗೂ ಜನ ಚಿರಋಣಿಗಳಾಗಿರುತ್ತಾರೆ(ಇದು ನಿಜಕ್ಕೂ ಕೆಟ್ಟದ್ದು). ಈ ಮನುಷ್ಯರು ಅಂತಿಥ ಪೆದ್ದರಲ್ಲ… ಅಸಾಧಾರಣ ಪೆದ್ದರು!
ಅಲ್ಲ… ಬರೀ ಪೆದ್ದರಲ್ಲ ಮಹಾ ಧೂರ್ತರು, ಇಂತಹ ಮತ್ತೊಬ್ಬ ಧೂರ್ತನನ್ನು ಸೃಷ್ಟಿಯ ಯಾವ ಮೂಲೆಯಲ್ಲೂ ನೀವು ಹುಡುಕಲಾಗುವುದಿಲ್ಲ. ಏಕೆಂದರೆ ಹೀಗೆ ರೀಸನಬಲ್ಲಾದ ಒಳ್ಳೆಯ ದಿನಗಳು ನಡೆಯುತ್ತಿರುವಾಗ, ಅಘೋರಿಯ ಹಾಗಿರುವ ಸಜ್ಜನನೊಬ್ಬ, ಕೆಂಡಕಾರುವ ವ್ಯಂಗ್ಯದಲ್ಲಿ, ನಕ್ಸಲನಂತೆ ಎದ್ದು, ಸೊಂಟದ ಮೇಲೆ ಕೈಯಿಟ್ಟು ಹೇಳುತ್ತಾನೆ, “ಸಜ್ಜನರೇ, ಈ ರೀಸಬಲ್ಲುಗಳನ್ನು ಜಾಡಿಸಿ ಒದೆಯುವ ಅಮೃತ ಘಳಿಗೆ ಇದು. ಉರಿಸಿರಿ ಗಣಿತ ಸೂತ್ರಗಳನ್ನು… ಆ ಲೋಗೋರಿದಂಗಳನ್ನು, ಆಧಾರಕಾರ್ಡುಗಳನ್ನು, ಒಂದು ನಿಮಿಷವಾದರೂ ನಮ್ಮ ಕೋಡಂಗಿ ಮನಸ್ಸಿನ ಮಾತು ಕೇಳೋಣ! ಅದರಿಚ್ಛೆಯಂತೆ ಬಾಳೋಣ” ಹೀಗೆ ಅನಾಮತ್ತಾಗಿ ಎಲ್ಲಿಂದಲೋ ಬಂದ ಅಪರಿಚಿತನೊಬ್ಬ ಉಪದೇಶಿಸಿದರೂ ನನಗೆ ಆಶ್ಚರ್ಯವಾಗುವುದಿಲ್ಲ. ಆದರೆ ವಿಪರ್ಯಾಸವೆಂದರೆ, ಅವನಿಗೂ ಆಗ ಅಭಿಮಾನಿ ಸಂಘಗಳು, ಮಠಗಳೂ ಹುಟ್ಟಿಕೊಳ್ಳುತ್ತವೆ. ಈ ಜನರೇ ಹಾಗೆ, ಎಲ್ಲೇ ಇರಲಿ ಹೇಗೆ ಇರಲಿ. ಒಟ್ಟಿನಲ್ಲಿ ಇವರಿಗೆ ತಮ್ಮ-ತಮ್ಮ ಇಚ್ಛೆಯಂತೆ ಬಾಳುಬೇಕು ಅಷ್ಟೇ. ತಾರ್ಕಿಕ ಮತ್ತು ಅನುಕೂಲಶಾಸ್ತ್ರಗಳ ಆಜ್ಞೆ-ಆದೇಶಗಳನ್ನು ಕುಂಡೆಗೆ ಹಾಕಿ ಕೂತು, ಎಷ್ಟೋ ಸಲ ತಮ್ಮ ಹಿತಾಸಕ್ತಿಗೆ ವಿರುದ್ಧವಾಗಿರುವುದನ್ನೇ ಇಷ್ಟ ಪಟ್ಟಿರುತ್ತಾರೆ; ಕೆಲವೊಮ್ಮೆ ಹಾಗೆ ಇಷ್ಟ ಪಡುವುದೇ ಅವರಿಗೆ ಅನಿವಾರ್ಯ ಕೂಡ(ಇದು ನನ್ನ ಚಿಂತನೆ). ಒಬ್ಬನ ಉಗ್ರ ಕನಸು, ಒಬ್ಬನ ಮಾಯಾಲೋಕ, ಒಬ್ಬನ ತೀರದ ಬಯಕೆ, ಒಬ್ಬನ ಸ್ವೇಚ್ಛೆ, ಮನಸೆಂಬ ಒಲೆಯಲ್ಲಿ ಧಗ-ಧಗನೆ ಉರಿದು, ಹುಚ್ಚಿನ ಹೊಗೆಯನ್ನು ದಟ್ಟವಾಗಿಸುತ್ತದೆ. ಇದೇ ನಾನು ಇಷ್ಟು ಹೊತ್ತು ನಿಖರವಾಗಿ ಹೇಳಲು ಯತ್ನಿಸುತ್ತಿದ್ದ ಅನುಕೂಲಶಾಸ್ತ್ರ ಅಥವಾ ಹಿತಾಸಕ್ತಿ. ಯಾವ ವರ್ಗಕ್ಕೂ ಒಳಪಡದ ಅಮೂರ್ತತೆ. ಇದಕ್ಕೆ ಢಿಕ್ಕಿ ಹೊಡೆದ ತರ್ಕಗಳು, ಸೂತ್ರಗಳು, ಪ್ರಮೇಯಗಳು ಪುಡಿ-ಪುಡಿಯಾಗಿ ಸತ್ತಿವೆ. ಈ ಅತಿಬುದ್ಧಿವಂತರು ಮನುಷ್ಯರಿಗೆ ಸಹಜವಾದ ಕೆಡುಕಿಲ್ಲದ ಆಸೆಗಳಿರಬೇಕು ಎಂದರಲ್ಲ, ಈ ಅಧ್ವಾನವನ್ನು ಅವರೆಲ್ಲಿಂದ ಕಲಿತರು? ಮನುಷ್ಯನಾದ ಮೇಲೆ ತರ್ಕಸಮ್ಮತವೂ, ರೀಸನಬಲ್ಲೂ ಆಗಿರುವ ಹಿತಾಸಕ್ತಿಯೊಂದು ಇರಲೇ ಬೇಕೆಂದು ಏಕೆ ಅವರು ಕಲ್ಪನೆ ಮಾಡಿಕೊಂಡಿದ್ದಾರೆ? ಮನುಷ್ಯನಿಗಿರುವ ಮೂಲವಾದ ಆಸೆಯೇ ಮುಕ್ತ ಸ್ವಚ್ಛಂದ ಆಸೆ. ಈ ಸ್ವಾತಂತ್ರ್ಯವನ್ನು ಎಷ್ಟೇ ಬೆಲೆ ತೆತ್ತಾದರೂ ಪಡೆಯುವ ಛಲ ಆತನಿಗೆ; ಅದರ ಜಾಡನ್ನು ಹಿಡಿದು ಯಾವ ನರಕಕ್ಕಾದರು ಜಿಗಿಯುವ ವ್ಯಕ್ತಿಯವನು. ಹಾಗಾದರೆ, ಆಸೆ ಎಂದರೆ…?- ದೆವ್ವಕ್ಕೆ ಮಾತ್ರ ಗೊತ್ತಿರಬೇಕು, ಆಸೆಯ ಬಗೆಗೆ…
-೮-
“ಆಸೆಯೆಂಬುದೇ ಮಿಥ್ಯ” ಮತ್ತೊಮ್ಮೆ ಗಹಗಹಿಸಿ ಮಧ್ಯ ಬಾಯಿ ಹಾಕುವಿರಿ ನೀವು. “ವಿಜ್ಞಾನವು ಮನುಷ್ಯನನ್ನು ಎಷ್ಟು ಅದ್ಭುತವಾಗಿ ವಿಶ್ಲೇಷಿಸಿದೆ ಎಂದರೆ ಇಚ್ಛಾಸ್ವಾತಂತ್ರ್ಯವೆಂದು ಕರೆಯಲ್ಪಡುವುದು, ಆಸೆಯೂ, ಆಯ್ಕೆಯೂ ಕೇವಲ…” ತಾಳಿ…ತಾಳಿ… ಸಜ್ಜನರೇ ನಾನು ಅದೇ ರೀತಿ ಶುರು ಮಾಡಿದ್ದೆ, ಆ ಮಾತು ನನ್ನನ್ನು ಹೆದರಿಸಿತ್ತು ಕೂಡ. “ದೆವ್ವಕ್ಕೆ ಮಾತ್ರ ಗೊತ್ತಿರಬೇಕು, ಆಸೆಯ ಬಗೆಗೆ…” ಅಂತಾನೆ ಕಿರುಚಲಿದ್ದೆ ನಾನು… ಬಹುಶಃ ದೆವ್ವಕ್ಕೆ ಮಾತ್ರ ಆ ವಿಷಯ ಗೊತ್ತಿರುವುದು ಉತ್ತಮವೇನೋ. ಆದರೆ ಏಕೋ ಆ ಕ್ಷಣದಲ್ಲಿ ವಿಜ್ಞಾನದ ಉಪದೇಶಗಳು ನೆನೆಪಾಗಿ… ಮುಚ್ಚಿಕೊಂಡೆ. ಆಗ ನೀವು ಮಾತು ಶುರು ಮಾಡಿದಿರಿ. ಅದೆಲ್ಲ ಬಿಡಿ. ನೋಡಿ, ಒಂದಲ್ಲ ಒಂದು ದಿನ ನಮ್ಮೆಲ್ಲಾ ಆಸೆ, ಖಯಾಲಿಗಳನ್ನೆಲ್ಲಾ ಖಚಿತವಾಗಿ ನಿರ್ಧರಿಸುವ ಗಣಿತ ಸೂತ್ರವನ್ನು ಅವರು ಪತ್ತೆ ಹಚ್ಚಬಹುದು- ಅಂದರೆ ಆಸೆ, ಖಯಾಲಿಗಳ ಬುಡವೆಲ್ಲಿ, ಯಾವ ವಿಧಿಗಳು ಇವುಗಳ ಮೂಲಗಳನ್ನು ನಿರ್ಣಯಿಸುತ್ತವೆ, ಹೇಗೆ ಈ ಎಲ್ಲದರ ಲಕ್ಷ್ಯ ಸಂಧರ್ಭಕ್ಕೆ ತಕ್ಕಂತೆ ಬದಲಾಗುತ್ತವೆ, ಇತ್ಯಾದಿ, ಇತ್ಯಾದಿ- ಹಾಗೇ ನೇರವಾಗಿ ಹೇಳುವುದಾದರೆ, ಎಲ್ಲವನ್ನು ನಿರೂಪಿಸುವ ಖಚಿತ ಗಣಿತ ಫಾರ್ಮುಲಾ . ಹಾಗಾದಾಗ ಮನುಷ್ಯರು ತಕ್ಷಣವೇ ಆಸೆಯಿಂದ ಮುಕ್ತರಾಗುತ್ತಾರೇನೋ; ಬೇಡ, ಆ ಗತಿ ಬಂದರೆ ಆತ ಆಸೆಗಳನ್ನೇ ಬಿಟ್ಟು ಬಿಡುತ್ತಾನೆ ಅಷ್ಟೇ. ಯಾವುದೋ ಸುಡುಗಾಡ್ ಫಾರ್ಮುಲಾಕ್ಕೆ ಹೊಂದೋ ಹಾಗೆ ಯಾರಾಕ್ರೀ ಆಸೆ ಪಡಬೇಕು? ಅಷ್ಟೇ ಅಲ್ಲ ಆಸೆ, ಇಚ್ಛಾಸ್ವಾತಂತ್ರ್ಯವಿಲ್ಲದೆ ಇರುವ ಮನುಷ್ಯ ವೀಣೆಯ ತಂತಿಯಂತೆ ನಿರ್ಜೀವ. ಈ ಮಾನವ ಗುಂಡಿ ಒತ್ತಿದರೆ ಪೀಪೀ ಊದುವ ಗೊಂಬೆ. ಹೇಳಿ, ಹೀಗಾದರೆ ಹೇಗೆ? ಅಥವಾ ಹೀಗಾಗಬಹುದೇ? ಈ ಸಂಭವನೀಯತೆಯ ಚರ್ಚಿಸೋಣ.
“ಹೂಮ್! ನಿಮ್ಮ ಮನಸ್ಸನ್ನು ಲಯಗೊಳಿಸಿ ನಿರ್ಧರಿಸಿರಿ. “ಆಸೆಪಡುವುದು ನಮ್ಮ ಅನುಕೂಲಕ್ಕೆ ಎಂಬ ಭ್ರಮೆಯಲ್ಲಿ ನಾವಿದ್ದೇವೆ. ಎಷ್ಟೋ ಸಲ ಶುದ್ಧ ಅರ್ಥಹೀನತೆಯನ್ನೇ ನಾವೆಲ್ಲ ಇಷ್ಟ ಪಟ್ಟಿದ್ದೇವೆ. ಏಕೆಂದರೆ ಈ ಅರ್ಥಹೀನತೆಯೇ, ಎಲ್ಲರೂ ಹೇಳಿದ್ದ ಆ ಅನುಕೂಲ ಶಾಸ್ತ್ರವನ್ನು ಗಳಿಸುವ ಸುಲಭ ಮಾರ್ಗವೆಂದು ತಿಳಿಯುವ ಮೂಢರು ನಾವು. ಸರಿ ಯಾವಾಗ ಇವೆಲ್ಲವನ್ನೂ ಕಾಗದದ ಹಾಳೆಯ ಮೇಲೆ ಚೊಕ್ಕಟವಾಗಿ ಲೆಕ್ಕ ಹಾಕಿ ವಿವರಿಸಿದರೆ(ಇದು ನಿಜಕ್ಕೂ ಸಾಧ್ಯವಿದೆ, ನಿಸರ್ಗದ ಕೆಲ ವಿಧಿಗಳನ್ನು ಮನುಷ್ಯರು ಪತ್ತೆ ಹಚ್ಚಲಾಗುವುದಿಲ್ಲ, ಎಂದು ಊಹಿಸುವುದೇ ಹೇಸಿಗೆ ಮತ್ತು ಅರ್ಥಹೀನ), ಆಸೆಯೆಂಬೋ ಆಸೆ ಖಂಡಿತ ಅಸ್ತಿತ್ವದಲ್ಲಿರುವುದಿಲ್ಲ. ಏಕೆಂದರೆ ತರ್ಕಸಮ್ಮತ ತೀರ್ಪು ಎನ್ನುವುದೇ ಈ ಆಸೆಯ ಬಿಂಬವಾದರೆ ನಾವು ಆಸೆಯನ್ನು ಬಿಟ್ಟು ತರ್ಕವನ್ನು ಅಪ್ಪುತ್ತೇವೆ. ಆಗ ನಾವು ಒಂದು ಬುದ್ಧಿಗೇಡಿ ಹಂಬಲದ ಬೆಂಬತ್ತಿ ತರ್ಕವನ್ನು ಒದ್ದು, ಗಂಡಾತರಕ್ಕೆ ಮೈಯೊಡ್ಡುವುದಿಲ್ಲ. ಹಾಗೆಯೇ ಎಲ್ಲ ಆಸೆ ಮತ್ತು ತರ್ಕಸಮ್ಮತ ತೀರ್ಪುಗಳನ್ನು ನಿಜಕ್ಕೂ ಲೆಕ್ಕ ಹಾಕಲು ಸಾಧ್ಯವಿರುವುದರಿಂದ ಒಂದು ದಿನ ಅವರು ಇಚ್ಛಾಸ್ವಾತಂತ್ರ್ಯದ ವಿಧಿಗಳೆಂಬ ಫಾರ್ಮುಲಾಗಳನ್ನು ಅನ್ವೇಷಿಸುತ್ತರೆ. ಹೌದು, ತಮಾಷೆ ಅಲ್ಲ. ಅಷ್ಟಾದ ಮೇಲೆ ಆ ಎಲ್ಲಾ ವಿಧಿಗಳು ಅಚ್ಚಾಗಿರುವ ಒಂದು ಆಧಾರಕಾರ್ಡು ಸಿದ್ಧವಾಗುತ್ತದೆ. ಆಗಂತೂ ನಾವು ಆ ಆಧಾರ್ಕಾರ್ಡಿನಲ್ಲಿ ಮೂಡಿರುವ ವಿಧಿಗಳಿಗೆ ಅನುಸಾರವಾಗಿಯೇ ಆಸೆ ಪಡಬೇಕು ಅಷ್ಟೇ. ಇಷ್ಟೆಲ್ಲಾ ಸಂಶೋಧನೆಯಾದ ಮೇಲೆ ಒಬ್ಬನನ್ನು ನೋಡಿ ನಾನು ಯಾವುದೋ ಸಂದರ್ಭದಲ್ಲಿ ಮೂಗು ಸಿಂಡರಿಸಿದ್ದರೆ, ಅವರು ಲೆಕ್ಕಾಚಾರ ಮಾಡಿ ಕರಾರುವಕ್ಕಾಗಿ ನಾನು ಇಂತಹ ಕಾರಣಗಳಿಂದ ಆತನಾಚೆ ನೋಡಿ ಮೂಗು ಸೊಟ್ಟ ಮಾಡಿದೆ, ಎಂದು ನನ್ನನ್ನು ಒಂದು ಯಂತ್ರದ ಕ್ರಿಯಾವಳಿಯನ್ನು ರೂಪಿಸುವಂತೆ ನಿರೂಪಿಸಿದರೆ ಇನ್ನು ಯಾವ ಬಗೆಯ ಸ್ವಾತಂತ್ರ್ಯ ನನಗೆ ಮಿಗುತ್ತದೆ? ಈಗ ಒಂದು ವೇಳೆ ನಾನೇನಾದರೂ ಜಾಸ್ತಿ ಓದಿದ ಬುದ್ಧಿವಂತನಾಗಿ, ಯಾವುದೋ ಲಂಡನ್ನ್ ಯುನಿವರ್ಸಿಟಿಯಿಂದ ಡಿಗ್ರಿ ಪಡಿದಿದ್ದರೆ ಆಗ ನನ್ನ ಕಥೆ ಏನಾಗಬೇಕು? ಉತ್ತರ: ನನ್ನ ಬದುಕಲ್ಲಿ ಬರಲಿರುವ ಮುವತ್ತು ವಸಂತಗಳನ್ನು, ಮುಂಚೆಯೇ ಲೆಕ್ಕ ಹಾಕಿ ಮುಚ್ಚಿಕೊಂಡು ಕೂರಬೇಕು. ಒಂದೇ ವಾಕ್ಯದಲ್ಲಿ ಹೇಳುವುದಾದರೆ ಹೀಗೆನಾದರೂ ಆದರೆ ಮುಚ್ಚಿಕೊಂಡು ನಮ್ಮ ಸ್ಥಿತಿಯನ್ನು ಒಪ್ಪಿಕೊಳ್ಳುವುದೊಂದನ್ನು ಬಿಟ್ಟು ಮಾಡಲು ಬೇರೆ ಏನೂ ಉಳಿದಿರುವುದಿಲ್ಲ. ಆದರೆ, ಇಂತಹ ಸನ್ನಿವೇಶಗಳಲ್ಲಿ, ಪ್ರಕೃತಿಗೆ ನಮ್ಮ ಸಮ್ಮತಿ ಬೇಕಾಗಿಲ್ಲ; ಅದು ನಿಜಕ್ಕೂ ಹೇಗೆ ಇದೆಯೋ ಹಾಗೇ ಸ್ವೀಕರಿಸಬೇಕೇ ಹೊರತು ನಾವು ಇಷ್ಟ ಪಟ್ಟು ಚಿತ್ರಿಸಿದ ಕಲ್ಪನೆಯಂತಲ್ಲ, ಎಂಬ ಮಂತ್ರವನ್ನು ನಾವು ಎಡೆಬಿಡದೆ ಜಪಿಸಬೇಕು. ಇದೆಲ್ಲ ಆಗಿ, ಆಗಿ, ನಾವು ಈ ಸೂತ್ರಗಳ, ಈ ಆಧಾರ್ ಕಾರ್ಡುಗಳ, ಈ ಕಾಲನಿರ್ಣಯಗಳ ಕೊನೆಗೆ… ಈ ರಾಸಯನಿಕ ಪ್ರತ್ಯುತ್ತರಗಳ ಆಕಾಂಕ್ಷಿಗಳಾದರೂ, ಆಗಲೂ ಏನೂ ಮಾಡಲು ಸಾಧ್ಯವಿಲ್ಲ ನಮಗೆ. ಆ ರಾಸಯನಿಕ ಪ್ರತ್ಯುತ್ತರಗಳನ್ನು ಒಪ್ಪಬೇಕು, ಇಲ್ಲದಿದ್ದರೆ ಅದು ನಮ್ಮ ಅನುಮತಿಗೆ ಕಾಯದೆ ಸ್ವೀಕರಿಸಲ್ಪಡುತ್ತದೆ.
ಕ್ಷಮಿಸಿ… ವೇದಾಂತ ಸ್ವಲ್ಪ ಜಾಸ್ತಿ ಆಯಿತು. ನಲ್ವತ್ತು ವರುಷ ನೆಲಮಾಳಿಗೆಯಲ್ಲಿದ್ದ ಪರಿಣಾಮವಿದು. ನನ್ನ ತಡೆಯಬೇಡಿ, ಈ ನನ್ನ ಕಲ್ಪನೆಗಳು ಸ್ವಲ್ಪ ಅಡ್ಡಾಡಲಿ. ತರ್ಕಸಮ್ಮತ ತೀರ್ಪುಗಳು ಒಳ್ಳೆಯವೇ-ಅದರ ಬಗ್ಗೆ ಚರ್ಚೆ ಬೇಡವೇ ಬೇಡ- ಆದರೆ ಈ ನಿರ್ಧಾರಗಳೂ ತರ್ಕವನ್ನೇ ಪ್ರತಿಪಾದಿಸುತ್ತವೆ, ಹಾಗೂ ಮನುಷ್ಯನಲ್ಲಿರುವ ವಿವೇಚನೆಯನ್ನು ತಣಿಸುತ್ತವೆ ಅಷ್ಟೇ. ಅದೇ ಇಚ್ಛೆ ನಮ್ಮ ಪೂರ್ಣ ಬದುಕಿನ ಅಭಿವ್ಯಕ್ತಿ, ನಿಮ್ಮ ತರ್ಕಸಮ್ಮತ ತೀರ್ಪುಗಳು ಮತ್ತಿತರ ತಲೆಕೆರೆಸುವ ಲೆಕ್ಕಾಚಾರಗಳನ್ನೆಲ್ಲಾ ಅರಗಿಸಿಕೊಂಡಿರುವ ಒಂದು ಇಡಿಯಾದ ಅಭಿವ್ಯಕ್ತಿ. ಹೌದು, ಈ ಅಭಿವ್ಯಕ್ತಿಯಲ್ಲಿ ಕಾಣುವ ಬದುಕು ಎಷ್ಟೋ ಸಲ ಲದ್ದಿಯಾಗಿಯೇ ಪರ್ಯಾವಸನಗೊಳ್ಳುತ್ತದೆ! ಆದರೂ ಅದು ಬದುಕು, ಕೂಡು, ಕಳೆ ಲೆಕ್ಕವಲ್ಲ. ನಾನು ಬದುಕುವುದು ಈ ಜೀವಧಾರೆಯನ್ನು ತಣಿಸಲು ಮಾತ್ರ, ಇದರ ಚಿಕ್ಕ ಛೇದವಾದ ವಿವೇಚನೆಯನ್ನಲ್ಲ. ಈ ವಿವೇಚನೆ, ತರ್ಕಸಮ್ಮತ ತೀರ್ಪು ಇವಕ್ಕೆಲ್ಲ ಕೇವಲ ತಾವು ಅಭ್ಯಸಿಸಿ ಕಲಿತಿರಿವುದು ಮಾತ್ರ ಗೊತ್ತು(ಹಾಗಿದ್ದೂ ಕೆಲವು ಸಂಗತಿಗಳನ್ನು ಇವು ಕಲಿಯುವುದೇ ಇಲ್ಲ ಬಿಡಿ, ಅದರಿಂದ ನಮಗೆ ಯಾವ ಬಗೆಯ ಸಮಾಧಾನವಿಲ್ಲ, ಹಾಗಿದ್ದೂ ಅದನ್ನು ನೇರವಾಗಿ ಹೇಳುವುದರಲ್ಲೇನು ತಪ್ಪಿಲ್ಲ ತಾನೇ?), ಆದರೆ ಮನುಷ್ಯಸ್ವಭಾವ ಸರ್ವವನ್ನೂ ತನ್ನಲಿಟ್ಟುಕೊಂಡು ಇಡಿಯಾಗಿ ಬದುಕುತ್ತದೆ; ಅರಿವಿದ್ದೂ ಅರಿವಿಲ್ಲದೆಯೂ ಪೂರ್ಣವಾಗಿರುತ್ತದೆ. ಇದು ಸುಳ್ಳು ಹೇಳಿದರೂ ಹೇಳಬಹುದು, ತಪ್ಪು ಮಾಡಿದರೂ ಮಾಡಬಹುದು ಆದರೆ ಬದುಕುತ್ತದೆ.
ಈಗ ನೀವು ನನ್ನ ಕಡೆ ಕರುಣಾ ದೃಷ್ಟಿ ಬೀರಿ, ಮತ್ತೆ ಮತ್ತೆ ಆ ಮಾತನ್ನೇ ಪುನಾರವರ್ತಿಸುವಿರಿ “ಅಚ್ಚುಕಟ್ಟಾಗಿ ಕಲಿತ ಸೂಕ್ಷ್ಮಾಭಿರುಚಿಯ ಮನುಷ್ಯ- ಅಂದರೆ ಭವಿಷ್ಯದ ಮನುಷ್ಯ- ತಿಳಿದು, ತಿಳಿದು ತನ್ನನ್ನೇ ಅನಾಹುತಕ್ಕೆ ನೂಕುವ ಆಸೆಯ ಹಿಂದೆ ಬೀಳುವುದಿಲ್ಲ ಗಣಿತ ಶಾಸ್ತ್ರವು ಇದನ್ನಾಗಲೇ ನಿರೂಪಿಸಿದೆಯಲ್ಲ…” ಆಯಿತಪ್ಪ, ಗಣಿತ ಶಾಸ್ತ್ರಕ್ಕೆ ಅನುಸಾರವಾಗಿ ನೋಡಿದರೆ ನಿಮ್ಮ ಮಾತು ನಿಜವೆಂದೇ ಒಪ್ಪುವೆ ನಾನು. ಆದರೆ ಮನುಷ್ಯನಿಗೆ ಮಾತ್ರ ಒಂದು ಹಕ್ಕಿದೆ ಎಂದು ನೂರನೆಯ ಸಲ ಪುನರುಚ್ಛರಿಸುವೆ. ಎಡವಟ್ಟಿಗೆ ಎಡೆ ಮಾಡುವ ಆಸೆಗಳ ಅರಸುವ ಹಕ್ಕು, ವಕ್ರ ಇಚ್ಛೆಗಳ ಹಿಂಬಾಲಿಸುವ ಹಕ್ಕು, ಯಾವ ಪುರುಷಾರ್ಥಗಳನ್ನೂ ಈಡೇರಿಸದೆ, ವಿನಾಶದತ್ತ ಎಸೆಯುವ ಇಚ್ಛೆಗಳ ಬೆನ್ನು ಹತ್ತುವ ಹಕ್ಕು… ಈ ಚಟವೇ ಮನುಷ್ಯನನ್ನು ಜೀವಾಗ್ನಿಯಲ್ಲಿ ಉರಿಸಿ, ಆತನಿಗೆ ಪ್ರಾಣ ನೀಡುವ ಶಕ್ತಿದೇವತೆ, ನಮ್ಮ ವ್ಯಕ್ತಿತ್ವವನ್ನು ಕೆಡದಂತೆ ಜೀವಂತವಾಗಿಡುವ ಅಮೃತ. ವಾಸ್ತವವಾಗಿ ಪ್ರತಿಯೊಬ್ಬ ಮನುಷ್ಯರಿಗೂ ಆಮ್ಲಜನಕದಷ್ಟೇ ಅಗತ್ಯವಾಗಿರುವ ಚೇತನವದು. ಕೆಲವು ಮಹನೀಯರು ಮನುಕುಲಕ್ಕೆ ಈ ಗುಣ ಅತ್ಯಮೂಲ್ಯ ಎಂದು ಒಪ್ಪುತ್ತಾರೆ; ಇಚ್ಛೆಯು ತಾನು ಇಚ್ಛಿಸಿದರೆ ಮಾತ್ರ ವಿವೇಕದ ಜತೆ ಒಪ್ಪಂದ ಮಾಡಿಕೊಳ್ಳಬಹುದು, ವಿಶೇಷವಾಗಿ, ನೀವು ಈ ಇಚ್ಛೆಯನ್ನು ಅಪವ್ಯಯಗೊಳಿಸದೆ, ಹದ್ದುಬಸ್ತಿನಲ್ಲಿಟ್ಟರೆ ಅದೇ ದೊಡ್ಡ ಲಾಭ. ಕೆಲವು ಸಲ ಅದೇ ಮಹಾ ಪ್ರಶಂಸೆ. ಆದರೆ ಪದೇ ಪದೇ ಇಚ್ಛೆಯು ವಿವೇಕದ ಕಡು, ಹಠಮಾರಿ ಶತ್ರುವಾಗಿಯೇ ಬಿಡುತ್ತದೆ. ಸಜ್ಜನರೇ ಈ ವಿರೋಧವು ಸಹ ಲಾಭವೇ! ಕೆಲವು ಸಲ ಇದೇ ಶ್ಲಾಘಾನೀಯವಲ್ಲವೆ?
ಸಜ್ಜನರೇ, ಮನುಷ್ಯ ಮೂರ್ಖನಲ್ಲ ಎಂದೇ ಊಹಿಸೋಣ.(ಹಾಗಂತ ನೀವು ಅವನ ಮೇಲೆ ಆರೋಪ ಹೊರಿಸುವುದು ಕಷ್ಟ ನಿಜ; ಏಕೆಂದರೆ ಒಂದು ವೇಳೆ, ಊಹೆಯಿಂದದಾರೂ ಮನುಷ್ಯ ಮೂರ್ಖನೇ ಎಂದಾದರೆ, ಜಾಣರು ಯಾರು?) ಸರಿ, ಮನುಷ್ಯ ಮೂರ್ಖನಲ್ಲ ಎಂದಾದರೆ ಅವನೊಬ್ಬ ಅದ್ಭುತ, ಅಮಾನುಷ ಕೃತಘ್ನ. ಸುಲಭವಾಗಿ ಹೇಳಬೇಕೆಂದರೆ ಎರಡು ಕಾಲಲ್ಲಿ ನಡೆಯುವ ಕೃತಘ್ನ. ಆದರೆ ಅದೇ ಅವನ ಮುಖ್ಯ ಲೋಪವಲ್ಲ, ಅವನ ನಿರಂತರ ವಕ್ರ ನೈತಿಕತೆ, ಹಾಗೂ ಕೇಡಿನ ವರ್ತನೆ ಮಹಾ ಪ್ರವಾಹದ ಸಮಯದಲ್ಲೂ ಆನಂದದಲ್ಲಿ ಹರಿದಿದ್ದವು. * ಶ್ಲೆಸ್ವೀಶ್- ಹೋಲ್ಸ್ಟೈನ್ ಕಾಲದಲ್ಲೂ ಇವೇ ಮನುಷ್ಯ ವಿಧಿಯನ್ನು ಬರೆಯುತಿದ್ದುದು. ವಕ್ರ ನೈತಿಕತೆಯಿಂದ ಕೇಡಿನ ವರ್ತನೆ, ಯಾವ ಕಾಲದಲ್ಲೋ ತೀರ್ಮಾನವಾಗಿರುವ ಕಥೆಯಿದು. ಈ ಮನುಕುಲದ ಭೂತವಾಗಿರುವ ಇತಿಹಾಸದತ್ತ ಸುಮ್ಮನೆ ಕಣ್ಣು ಹಾಯಿಸಿ. ಈ ಕಥೆಗೆ ನಿಮಗೆ ಬೇಕಾದಷ್ಟು ಸಾಕ್ಷಿ ಸಿಗುತ್ತದೆ. ಏನು ಕಾಣುತ್ತಿದೆ ನಿಮಗೆ ಅಲ್ಲಿ? ಅದೇ ವೈಭವವೇ ? ನಿಮಗಿಷ್ಟವಿದ್ದರೆ ಹಾಗೇ ಅನ್ನಿ… ಬಹುಶಃ ಅದೇ ನಿಜವೇನೋ. ಈ ಭವ್ಯ ವೈಭವಕ್ಕೆ ಗ್ರೀಕ್ನ ಟೈಟನ್ ದೇವತೆಯ Colossus of Rhodes ನ ದೃಷ್ಟಾಂತವಿದೆ. ಮಹಾಶಯ ಅನ್ಯೇವ್ಸ್ಕಿ* ಅದರ ಬಗ್ಗೆ ಮಾತನಾಡುತ್ತಾ “ಕೆಲವರಿಗೆ ಈ ಮಹಾ ಪ್ರತಿಮೆ ಮನುಷ್ಯ ಕೈಗಳ ಕೆಲಸದಂತೆ ಕಂಡರೆ, ಇತರರಿಗೆ ಇದೇ ಪ್ರಕೃತಿಯ ಸೃಷ್ಟಿ…” ಎಂದು ಸುಮ್ಮನೆ ಸುಮ್ಮನೆ ಹೇಳಿದ್ದಲ್ಲ. ಹಾಗಾದರೆ ನಮ್ಮ ಇತಿಹಾಸವೆಂದರೆ ಸಹಸ್ರ ಬಣ್ಣಗಳೇ? ಇರಬಹುದು. ಅಪರಿಮಿತ ಬಣ್ಣಗಳು ಇಲ್ಲಿ ಸಂಯೋಗಿಸಿರಬಹುದು. ಎಲ್ಲಾ ಕಾಲಘಟ್ಟದಲ್ಲಿ ನಾಗರೀಕರು ಮತ್ತು ಸೈನಿಕರು ರಂಗುರಂಗಿನ ಬಟ್ಟೆ ತೊಡುತಿದ್ದರು. ಅಷ್ಟೇ ಸಾಕು ಈ ಬಣ್ಣಗಳ ಮೇಳವ ಅಳೆಯಲು. ಅದೇ ನೀವು ಇತಿಹಾಸದೆಲ್ಲಿ ಸರಕಾರಿ ನೌಕರರು ಹಾಕುತ್ತಿದ್ದ ಯೂನಿಫಾರ್ಮ್ಗಳನ್ನು ಲೆಕ್ಕ ಹಾಕಿ, ಎಣಿಸಿ ಪಟ್ಟಿ ಮಾಡಲು ಕೂತರೆ ನಿಮ್ಮ ತಲೆ ಗಿರ್ರನೇ ಸುತ್ತಿ ಸುತ್ತಿ ಸುಸ್ತಾಗುತ್ತವೆ. ಮಹಾ ಮೇಧಾವಿ ಇತಿಹಾಸಕಾರರು ಈ ಟಾಸ್ಕನ್ನು ಯಶಸ್ವಿಯಾಗಿ ಮುಗಿಸಲಾಗದೆ ಓಡಿ ಹೋಗುತ್ತಾರೆ. ಅದು ಏಕಾತಾನತೆಯೆ? ಇರಬಹುದು ಅದೇ ರಾಗದಿಂದ ಚಿಟ್ಟು ಹಿಡಿಸುವ ಏಕತಾನತೆಯಿರಬಹುದು. ಬಡಿದಾಟ… ಬಡಿದಾಟ…ಬಡಿದಾಟ. ಹಿಂದೆ ಬಡಿದಾಡಿದ್ದರು, ಇಂದೂ ಬಡಿದಾಡುತ್ತಿದ್ದಾರೆ, ಮುಂದೆಯೂ ಆಡುವರು. ಹೌದು, ನೀವೀಗ ಒಪ್ಪಬಹುದು, “ಹೌದಪ್ಪ, ತೀರದ ಏಕತಾನತೆ ಇದು…” ಚುಟಕಾಗಿ ಹೇಳುವುದಾದರೆ ನೀವು ಬೇಕಾದದ್ದು ಊಹಿಸಿ; ಅದು ಇಲ್ಲಿ ಆಗಿದೆ, ನಿಮ್ಮ ಜ್ವರ ಮಿಶ್ರಿತ ಉತ್ಪ್ರೇಕ್ರ್ಷೆಯ ಕಲ್ಪನೆ, ಕನಸು-ಕನವರಿಕೆಗಳು ಇಲ್ಲಿ ಸಂಭವಿಸಿವೆ. ಇಷ್ಟೆಲ್ಲ ಆದರೂ ನೋಡಿ, ಈ ಇತಿಹಾಸ ರೀಸನಬಲ್ಲು ಎಂದು ಮಾತ್ರ ನೀವು ಅಪ್ಪಿತಪ್ಪಿಯೂ ಅನ್ನಲು ಸಾಧ್ಯವೇ ಇಲ್ಲ; ಹಾಗೇನಾದರೂ ಅನ್ನ ಬೇಕೆನಿಸಿದರೂ ಆ ಶಬ್ಧಗಳೇ ನಿಮ್ಮ ಗಂಟಲೊಳಗೆ ಸಿಕ್ಕಿಕೊಳ್ಳುತ್ತವೆ. ಓ ಹಾಗೆ, ಇನ್ನೊಂದು ವಿಲಕ್ಷಣವನ್ನು ನೀವು ಎಲ್ಲ ಕಾಲದಲ್ಲೂ, ನಿಮ್ಮ ಪ್ರತಿಯೊಂದು ಹೆಜ್ಜೆಯಿಡುವಾಗಲೂ ಪದೇ-ಪದೇ ಭೇಟಿಯಾಗುತ್ತಲೇ ಇದ್ದೀರಿ: ನೀತಿವಂತರು, ವಿವೇಕಿಗಳು, ಮಹಾತ್ಮರು, ಸಾಧು-ಸಂತರೂ, ಮನುಕುಲ ಪ್ರೇಮಿಗಳೂ, ಆಗಾಗ ಮುಖ ತೋರಿಸಿ, ತಮ್ಮ ಆಯುಷ್ಯವಿಡೀ ರೀಸನಬಲ್ಲಾಗಿ ಉನ್ನತಮಾರ್ಗದಲ್ಲಿ ಬದುಕಿರುತ್ತಾರೆ(ಕಡೇ ಪಕ್ಷ ಮನುಷ್ಯ ಹಾಗೆ ಬದುಕಬಹುದು ಎಂದು ತಮ್ಮ ಅಕ್ಕ-ಪಕ್ಕದವರಿಗೆ ದಾರಿ ದೀಪವಾಗಲಾದರೂ). ಹಾಗಿದ್ದೂ ನಮಗೆಲ್ಲರಿಗೂ ಗೊತ್ತಿರುವ ಇನ್ನೊಂದು ಸಂಗತಿಯೆಂದರೆ ಇಂತಹ ಜನರು ಒಮ್ಮೊಮ್ಮೆ- ತಮ್ಮ ಬದುಕಿನ ಉತ್ತರಾರ್ಧದಲ್ಲಿಯಾದರೂ-ತಮ್ಮ ತತ್ವ, ನೀತಿನಿಯಮ, ರೀತಿರಿವಾಜುಗಳ ಮುಕುಳಿಗೆ ಜಾಡಿಸಿ ಒದ್ದು, ಅಸಂಭವ ವಕ್ರ ಜೀವನಕ್ಕೆ ಮೈಯೊಡ್ಡಿ, ತಮ್ಮ ವಿಕ್ಷಿಪ್ತ ಮುಖವನ್ನು ಬಿಚ್ಚಿರುತ್ತಾರೆ. ಈಗ ಹೇಳಿ, ಇಂತಹ ಮನುಷ್ಯನೆಂಬ ವಿಚಿತ್ರ ಗುಣಗಳಿರುವ ಜೀವಿಯಿಂದ ನೀವು ಏನು ತಾನೇ ನಿರೀಕ್ಷಿಸಲು ಸಾಧ್ಯ? ಈ ಜಗತ್ತಿನ ಅನುಕೂಲ ಶಾಸ್ತ್ರ, ಹಿತಾಸಕ್ತಿಗಳಲ್ಲಿ ಆತನನ್ನು ಮುಚ್ಚಿ ಹಾಕಿ ನೀವು. ಖುಷಿಯ ಕಡಲಲ್ಲಿ ಅವನ ತಲೆಯನ್ನು ಮುಳುಗಿಸಿ; ಆಗ ಆ ಖುಷಿಯ ಮೇಲ್ಪದರದಲ್ಲಿ ಗುಳು-ಗುಳು ಗುಳ್ಳೆಗಳು ಅರಳುತ್ತವೆ, ನೀರ್ಗುಳ್ಳೆಯಂತೆ. ಹಾಗೆ ಐಹಿಕ ಸಂಪತ್ತು ಸಿಕ್ಕಾಗ, ಮಾಡಲು ಏನು ಕೆಲಸವಿಲ್ಲದೆ ಆತ ಸದಾ ನಿದ್ದೆ ಹೊಡೆಯುತ್ತಾ, ಬಾಯಲ್ಲಿಟ್ಟರೆ ಕರಗುವ ಬಾದಾಮಿ ಹಲ್ವ ಮುಕ್ಕಿ, ಜಗತ್ತಿನ ಇತಿಹಾಸ ನಿರಂತರ ಎಂದು ಖಚಿತಪಡಿಸಿಕೊಳ್ಳುವುದರಲ್ಲೇ ಮಗ್ನನಾಗುತ್ತಾನೆ. ಇಷ್ಟೆಲ್ಲಾ ಆದ ಮೇಲೆ ಶುದ್ಧ ದುಷ್ಟಬುದ್ಧಿಯಲ್ಲಿ, ಉರಿಯುವ ಹಗೆಯಲ್ಲಿ, ನಿಮ್ಮ ಮೇಲೆ ಮಣ್ಣೆರೆಚುವ ಆಸೆಯಿಂದಲೇ ಆತ ನೀಚಕೃತ್ಯವೊಂದನ್ನು ಎಸಗುತ್ತಾನೆ. ನಿಮ್ಮ ಈ ಧನಾತ್ಮಕ ವಿವೇಚನೆಯನ್ನು ತನ್ನ ವಿನಾಶಕಾರಿ ಕಲ್ಪನೆಯ ಜತೆ ಬೆರೆಸಿ ಅಶುದ್ಧ ಮಾಡುವ ಅಚಲ ಸಂಕಲ್ಪದಲ್ಲಿ, ತನ್ನ ಪುಣಾಣಿ ಹಲ್ವಗಳನ್ನು ಬಿಟ್ಟು ಕೊಟ್ಟು ಬುದ್ಧಿಪೂರ್ವಕವಾಗಿ ವಿನಾಶಕಾರಿ ಹುಚ್ಚಾಟದತ್ತ, ಅಸಂಗತ ಬಂಜರು ಖಯಾಲಿಗಳತ್ತ ಎಲ್ಲೆ ಮೀರಿದ ಒಲವಲ್ಲಿ ವಾಲುತ್ತಾನೆ. ಹಾಗೆ ನೋಡಿದರೆ ತನ್ನನ್ನು ತಾನು ನಿರ್ವೀಯ ವೀಣೆಯ ತಂತಿಯಲ್ಲವೆಂದು ನಿರೂಪಿಸಬೇಕೆಂದು ಮನುಷ್ಯ(ವಾಸ್ತವದಲ್ಲಿ ಇವಕ್ಕೆಲ್ಲಾ ಕವಡೆ ಕಾಸಿನಷ್ಟು ಮಹತ್ವವಿಲ್ಲದಿದ್ದರೂ) ಅವನ ಭ್ರಾಂತ್ಯಾತ್ಮಕ ಕನಸುಗಳನ್ನೂ, ಮಿತಿಮೀರುತ್ತಿರುವ ಹೊಲಸು ಅವಿವೇಕಿ ಆಲೋಚನೆಗಳನ್ನು ಸಂರಕ್ಷಿಸಲು ಇಚ್ಛಿಸುವುದೇ ನಿಜ. ಇಲ್ಲದಿದ್ದರೆ ಈ ನೈಸರ್ಗಿಕ ವಿಧಿಗಳೆಂಬ ವೈಣಿಕರು ಮನುಷ್ಯನನ್ನು ಹೈರಾಣಾಗಿಸಿ ಬಿಡುತ್ತಾರೆ ಅಷ್ಟೇ. ಗಣಿತ ಶಾಸ್ತ್ರದಿಂದ ಹುಟ್ಟಿದ ಆಧಾರಕಾರ್ಡಿನಲ್ಲಿ ಇಲ್ಲದೇ ಇರುವುದನ್ನು ಮನುಷ್ಯ ಇಚ್ಛಿಸುವುದು ಅಸಾಧ್ಯವಾಗುವವರೆಗೂ ಆತನನ್ನು ತಮ್ಮದೇ ಬೆರಳುಗಳಲ್ಲಿ ಅಡಿಯಾಳಾಗಿ ಇಟ್ಟುಕೊಳ್ಳುವ ಬೆದರಿಕೆಯನ್ನೊಡ್ಡುವ ಮಹಾ ಅದೃಷ್ಯ ಸರ್ವಾಧಿಕಾರಿಗಳವರು.
ಒಂದು ವೇಳೆ ಅವನು ನಿಜಕ್ಕೂ ವೀಣೆ ತಂತಿಯೇ ಆಗಿ, ಆ ಥಿಯರಿಯನ್ನು ಗಣಿತ, ಸ್ವಾಭಾವಿಕ ವಿಜ್ಞಾನ ಪ್ರಮೇಯಗಳಿಂದ ಸಾಬೀತು ಪಡಿಸಿದರೂ, ಆಗಲೂ ಆತ ಅದನ್ನು ಒಪ್ಪಿ ತರ್ಕಬದ್ಧವಾಗಿ, ವಿವೇಚನಾಶೀಲನಾಗುವುದಿಲ್ಲ. ಆದರೆ ಅದಕ್ಕೆ ವಿರುದ್ಧವಾಗಿ ಬೇಕುಬೇಕಂತಲೇ ಶುದ್ಧವಾದ ದುಷ್ಟಬುದ್ಧಿಯಲ್ಲಿ, ಆತನದ್ದೇ ಆದ ವಿಶೇಷ ಪಥವನ್ನು ನಿರ್ಮಿಸಲು ಏನೋನೋ ವಿಕೃತ ಕ್ರಿಯೆಗಳನ್ನು ಸೃಷ್ಟಿಸುತ್ತಾನೆ. ತನ್ನಿಷ್ಟ ಬಂದ ಕ್ರಿಯೆಗಳನ್ನು ಕಾರ್ಯರೂಪಕ್ಕೆ ತರಲು ಬೇಕಾದ ಸೌಲಭ್ಯಗಳಿಲ್ಲದಿದ್ದರೆ, ಈತನೇ ಗೊಂದಲ ಹಾಗೂ ನಾಶದ ಹಾದಿಯ ಕಟ್ಟಿ, ಅವನದೇ ದಾರಿಯನ್ನು ಸೃಷ್ಠಿಸಲು ಅಗಣಿತ ಯಾತನೆಗಳ ಸೃಷ್ಠಿಕರ್ತನಾಗುತ್ತಾನೆ! ಇಡೀ ಪ್ರಪಂಚಕ್ಕೆ ಶಾಪವಿತ್ತು(ಅದೊಂದೇ ಪ್ರಾಯಶಃ ಮನುಷ್ಯನಿಗೆ ದಕ್ಕಿರುವ ವಿಶೇಷ ಸವಲತ್ತು, ಇದೊಂದೇ ಇವನನ್ನು ಬೇರೆ ಪ್ರಾಣಿಗಳಿಂದ ವಿಭಿನ್ನವಾಗಿರಿಸಿರುವುದು), ಬಹುಶಃ ಹಾಗೆ ಶಾಪ ಹಾಕಿ-ಹಾಕಿಯೇ ಒಂದು ದಿನ ತನ್ನ ಗುರಿ ಮುಟ್ಟುತ್ತಾನೇನೋ. ನಾನೊಬ್ಬ ಮನುಷ್ಯನೇ, ವೀಣೆಯ ತಂತಿಯಲ್ಲ ಎಂದು ಅವನಿಗೆ ಅವನೇ ಮನವರಿಕೆ ಮಾಡಿಕೊಡಲಾದರೂ ಈ ಮಹಾಶಯ ಇಷ್ಟೆಲ್ಲ ದೊಂಬರಾಟ ಆಡುತ್ತಾನೆ. “ಆಯಿತು, ಗೊಂದಲ, ವಿನಾಶಗಳು, ಈ ಮನುಷ್ಯ ಹಾಕುವ ಶಾಪಗಳು… ಈ ಎಲ್ಲವನ್ನು ಸಹ ಗಣಿತ ಶಾಸ್ತ್ರದಿಂದ ಸಿದ್ಧಿಸಿದ ಆಧಾರ್ಕಾರ್ಡಿನ ಸಹಾಯದಿಂದ ಲೆಕ್ಕ ಹಾಕಬಹುದು ಆಗ ಈ ಕೇವಲ ಲೆಕ್ಕಾಚಾರದ ಸಾಧ್ಯತೆಗಳಿಂದಲೇ ಈ ಅತಿರೇಕ-ಅವಾಂತರಗಳು ಆಗದಂತೆ ನೋಡಿಕೊಳ್ಳಬಹುದು, ಆಗ ಮತ್ತೆ ಮನುಷ್ಯ ರೀಸನಬಲ್ಲಾಗುತ್ತಾನೆ…” ಎನ್ನಬಹುದು ನೀವು. ಒಂದು ಪಕ್ಷ ಹಾಗಾದರೆ, ಮನುಷ್ಯ ತನ್ನ ವಿಶಿಷ್ಟ ಸಿದ್ಧಾಂತವನ್ನು ಸಮರ್ಥಿಸಲೆಂದೇ ಎಲ್ಲಾ ತರದ ವಿವೇಚನೆಗಳನ್ನು ಗಾಳಿಗೆ ತೂರಿ ಹಾರುವನು, ಹಾಗೇ ಹಾರುತ್ತಲೇ ನಿಯಮಗಳು ನಿರೂಪಿಸಿರುವ ವಿವೇಕದಿಂದ ಬೇರೆಯಾಗಲು ಉದ್ದೇಶಪೂರ್ವಕವಾಗಿಯೇ ಹುಚ್ಚನಾಗಿ ತನ್ನ ಸ್ವಂತ ಸೃಷ್ಟಿಯಾದ ಶೂನ್ಯ ಪಂಥದ ದೊರೆಯಾಗುವನು. ಇದೇ ನನ್ನ ಅಚಲ ನಂಬಿಕೆ. ಮನುಷ್ಯನಾಗುವ ವ್ಯಾಪಾರವಿದೆಯಲ್ಲ, ಅದರ ವಹಿವಾಟು ನಡೆಯುವುದೇ ಹೀಗೆ; ಪ್ರತಿಕ್ಷಣವೂ ತಾನು ಮನುಷ್ಯ, ಕೀಲು ಗೊಂಬೆಯಲ್ಲವೆಂದು ಆತ ಕನಿಷ್ಠ ಪಕ್ಷ ತನಗೆ ತಾನೇ ಆದರೂ ಸಾಬೀತು ಮಾಡುತ್ತಿರಲೇಬೇಕು. ಜೀವವನ್ನೇ ಒತ್ತೆ ಇಟ್ಟೋ, ಚರ್ಮ ಸುಲಿದುಕೊಂಡೋ, ಪುನಃ ಶಿಲಾಯುಗದ ಮಾನವನಾಗಿ ಬದುಕಿಯೋ, ನರಭಕ್ಷಕನಾಗಿಯೋ, ಎಲ್ಲರಿಂದಲೂ ಛೀಮಾರಿ, ಬಹಿಷ್ಕಾರ ಹಾಕಿಸಿಕೊಂಡೋ ಆತ ತನ್ನ ಪಂಥವನ್ನು ರಕ್ಷಿಸಿ, ಸಮರ್ಥಿಸಿಯೇ ಸಮರ್ಥಿಸುವನು. ಆದರೆ ಅವನು ಇಷ್ಟೆಲ್ಲಾ ಶ್ರಮ ಹಾಕಿ ಹಿಂಬಾಲಿಸುವ ಆಸೆ ಯಾವುದು? ಅದು ದೆವ್ವಕ್ಕೆ ಮಾತ್ರ ಗೊತ್ತು…”
ನೀವೀಗ ನನ್ನ ನೋಡಿ ಕೂಗಾಡುತ್ತಿದ್ದೀರಿ (ನಿಮ್ಮ ಛೀಮಾರಿಗಳಿಗೆ ನಾನು ಇನ್ನೂ ಯೋಗ್ಯನಾಗಿದ್ದರೆ) “ಯಾರೂ ನನ್ನ ಇಚ್ಛಾ ಸ್ವಾತಂತ್ರ್ಯವನ್ನು ನನ್ನಿಂದ ಕಿತ್ತುಕೊಳ್ಳುತ್ತಿಲ್ಲ, ನನ್ನ ಆಸೆ, ಬಯಕೆ, ಆಯ್ಕೆಗಳು, ನನ್ನ ಹಿತಾಸಕ್ತಿಗಳನ್ನು, ಹಾಗೇ ನೈಸರ್ಗಿಕ ವಿಧಿಗಳನ್ನು, ಗಣಿತಶಾಸ್ತ್ರವನ್ನು ಚಾಚೂ ತಪ್ಪದೆ ಪ್ರತಿಬಿಂಬಿಸಲಿ ಎಂದೇ ಅವರು ಎಲ್ಲವನ್ನೂ ಕ್ರಮವಾಗಿ ಇರಿಸಲು ಶ್ರಮಿಸುತ್ತಿರುವುದು”
ಆಹ್! ಸಜ್ಜನರೇ, ಎರೆಡೆರೆಡಲ ನಾಲ್ಕು ಎನ್ನುವುದು ಮಾತ್ರ ಸತ್ಯವೆಂದು ಸ್ವೀಕರಿಸಲ್ಪಟ್ಟರೆ, ಇಚ್ಛೆಯೆನ್ನುವುದು ಹೇಗೆ ಹುಟ್ಟುತ್ತದೆ? ಗಣಿತಶಾಸ್ತ್ರ ಮತ್ತು ಪುಟ್ಟ ಆಧಾರ್ಕಾರ್ಡು ಇವೆರೆಡೂ ಇಲ್ಲಿ ಶಾಮೀಲಾಗಿರುವಾಗ ಯಾವ ಇಚ್ಛೆಯು ಹೇಗೆ ತಾನೆ ಹುಟ್ಟುತ್ತದೆ? ನೀವು ಇಚ್ಛೆಯೇ ಪಡದಿದ್ದರೂ ಎರೆಡೆರೆಡಲ ನಾಲ್ಕು ನಾಲ್ಕೇ! ಹಾಗಾದರೆ ನಿಮ್ಮ ಇಚ್ಛೆಯ ಒಟ್ಟು ಮೊತ್ತ, ಅದು ಇಲ್ಲದಿದ್ದಕ್ಕೆ ಸಮ!
-೯-
ತಮಾಷೆ ಮಾಡುತ್ತಿದೆ ಗೆಳೆಯರೇ, ಪ್ರಾಯಶಃ ಅತಿ ಕೆಟ್ಟ ಹಾಸ್ಯ; ಗಂಭೀರವಾಗಿ ಹೇಳಿತ್ತಿದ್ದೇನೆ ಸಜ್ಜನರೇ, ತಾವು ನನ್ನ ಎಲ್ಲ ಮಾತುಗಳನ್ನು ಹಾಸ್ಯವೆಂದು ಪರಿಗಣಿಸಬೇಡಿ. ಕೋಡಂಗಿಯಾಟ ಆಡುವಾಗ ಹಗೆಯಲ್ಲಿ ಹಲ್ಲುಮಸೆಯುತ್ತಿರಬಹುದು ನಾನು. ಸಜ್ಜನರೇ ಎಷ್ಟೋ ಪ್ರಶ್ನೆಗಳು ನನ್ನನ್ನು ಕಾಡುತ್ತಿವೆ, ನನಗೋಸ್ಕರ ಅವಕ್ಕೆಲ್ಲ ಉತ್ತರ ಕೊಡಿ. ಮನುಷ್ಯರು ತಮ್ಮ ಹಳೆ ಚಾಳಿಗಳ ಬಿಟ್ಟು, ವಿಜ್ಞಾನ ಮತ್ತು ಸಾಮಾನ್ಯ ಜ್ಞಾನಗಳಿಗನುಸಾರವಾಗಿ ತಮ್ಮ ಕಾಮನೆಗಳನ್ನು ತಿರುಚಿಕೊಳ್ಳಬೇಕು, ಅದು ನಿಮ್ಮ ಆಶಯ ಅಲ್ಲವೇ? ಏತಕ್ಕಾಗಿ ಮನುಷ್ಯ ವಿಜ್ಞಾನ, ಗಣಿತಶಾಸ್ತ್ರ, ಕೋಷ್ಟಕದ ಫಾರ್ಮುಲಾಗಳಿಗೆ ಅನುಗುಣವಾಗಿ ಹೊಂದಿಕೊಳ್ಳಬೇಕೆಂದು ನೀವು ಅಷ್ಟು ಆಳವಾಗಿ ನಿರ್ಧಸಿದ್ದೀರಿ? ಏಕೆ ತರ್ಕ, ವಿಜ್ಞಾನ, ಅಂಕಗಣಿಗಳು “ಮನುಷ್ಯನ ಸಹಜ ಅನುಕೂಲ ಶಾಸ್ತ್ರಗಳು” ಎಂದು ಖಾತರಿ ನೀಡಿ ನಿರೂಪಿಸಿರುವ ವಿಧಿಗಳಿಗೆ ವಿರುದ್ಧವಾಗಿ ಸಾಗದಿರುವುದೇ ಆತನಿಗೆ ಕ್ಷೇಮ, ಎಂದು ಇಷ್ಟೊಂದು ಕಠಿಣವಾಗಿ ನಂಬಿರುವಿರಿ? ಹಾಗಾದರೆ ನಿಮ್ಮ ಅನಿಸಿಕೆ ಇದೇ ಮನುಕುಲದ ವಿಧಿ ಎಂದೇ? ಅಲ್ಲ, ಇದು ನಿಮ್ಮ ಊಹೆಯಷ್ಟೇ. ಬೇಕಾದರೆ ಇದನ್ನು ತರ್ಕವಿಧಿಯೆನ್ನೋಣ. ಆದರೆ ಖಂಡಿತವಾಗಿಯೂ ಮನುಷ್ಯತ್ವವನ್ನು ನಿರೂಪಿಸುವ ವಿಧಿಯಿದಲ್ಲ. ಬಹುಶಃ ಈಗ ನೀವು ನನಗೆ ನಿಜಕ್ಕೂ ಹುಚ್ಚೇ ಎಂದು ಖಡಕ್ಕಾಗಿ ನಂಬುತ್ತಿದ್ದೀರಿ. ಪರ್ವಾಗಿಲ್ಲ ನಂಬಿ, ನಂಬಿ ಆದರೆ ಒಂದು ನಿಮಿಷ, ನನ್ನ ಪ್ರತಿವಾದವನ್ನು ಮಂಡಿಸಲು ಅವಕಾಶ ನೀಡಿ. ಮನುಷ್ಯ ಒಂದು ಸರ್ವೋಚ್ಛ ಸೃಜನಾತ್ಮಕ ಪ್ರಾಣಿ. ಈ ವಾದವನ್ನು ನಾನು ಒಪ್ಪಿದ್ದೇನೆ. ಈ ವಿಷಯವನ್ನು ಸ್ಪಷ್ಟವಾಗಿ ತಿಳಿದುಕೊಳ್ಳಿ. ಆದರೆ ಶಾಪಗ್ರಸ್ಥನಾಗಿ ಎಚ್ಚರಸ್ಥಿತಿಯಲ್ಲಿ, ತನ್ನ ಗುರಿಯ ಕಡೆಗೆ ಸಾಗಲು ಹೆಣಗುವುದೇ ಈ ಪ್ರಾಣಿಯ ಹಣೆಬರಹ. ಆತ ಸಾಗಲು ಅನಂತ ಮಾರ್ಗಗಳನ್ನು ನಿರ್ಮಿಸುವ ಶಾಪವೂ ಇವನಿಗೆ ತಗುಲಿದೆ. ಆ ಮಾರ್ಗ ಎಲ್ಲಿ ಬೇಕಾದರೂ ಸಾಗಬಹುದು, ಆದರೆ ಇವನು ಮಾತ್ರ ಅವುಗಳನ್ನು ನಿರಂತರವಾಗಿ ಕಟ್ಟುತ್ತಲೇ ಇರಬೇಕು, ಕಟ್ಟುವ ಕಲೆಯನ್ನು ಕಲಿಯಲು. ಹಾಗಂತ ಎಷ್ಟು ದಿನ ಅಂತ ಕಟ್ಟುತ್ತಲೇ ಇರುತ್ತಾನೆ ಹೇಳಿ; ಪಾಪ ಎಷ್ಟೇ ಆದರೂ ಆತ ಮನುಷ್ಯ; ಅವನಿಗೂ ಬೇಸರ ಬರುವುದಿಲ್ಲವೇ? ಅದಕ್ಕೇ ಆಗಾಗ ಗುರಿಯ ತಲುಪಲೆಂದು ತಾನು ಕಟ್ಟುತ್ತಿರುವ ಮಾರ್ಗದಿಂದ ತಾನೇ ಚದುರುತ್ತಾನೆ.
ಅದಕ್ಕೇ ಈ ಸ್ವಪ್ರಚೋದಿತ ಕ್ರಿಯಾಶೀಲ ಮಾನವ ಎಷ್ಟೇ ಹೆಡ್ಡನಾಗಿದ್ದರೂ ಯಾವಗಲಾದರೂ ಒಂದು ಯೋಚನೆ ಅವನ ಮನಸ್ಸಿನಲ್ಲಿ ಮೂಡಿಯೇ ಮೂಡುತ್ತದೆ, “ನನ್ನ ರಕ್ತಬೆವರು ಮಿಶ್ರಿಸಿ ಕಟ್ಟಿದ ಈ ಮಾರ್ಗ ವಾಸ್ತವದಲ್ಲಿ ನನ್ನನ್ನು ಎಲ್ಲಿಗೋ ಕರೆದೊಯ್ಯುವುದಿಲ್ಲ…” ಕರೆದೊಯ್ಯುವುದೂ ಬೇಡ, ಆದರೆ ಆ ಮಾರ್ಗ ಅಸ್ತಿತ್ವದಲ್ಲಿರಬೇಕು ಅಷ್ಟೇ ಅಲ್ಲವೇ? ಇದರ ಹಿಂದೆಯೂ ಒಂದು ಅಜೆಂಡಾವಿದೆ. ಅದು ನಮ್ಮ ಒಳ್ಳೆಯ ವರ್ತನೆಯ ಮುದ್ದು ಕಂದನನ್ನು ಆಲಸಿಯೆಂಬ ಮಹಾ ವಿನಾಶಕಾರಿ ಬಿರುಗಾಳಿಯ ಮಜದಿಂದ ಕಾಪಾಡುವುದು- ಎಷ್ಟೇ ಆದರೂ ಆಲಸ್ಯವೇ ತಾನೇ ಎಲ್ಲ ಕೆಟ್ಟಚಾಳಿಗಳ ಮಾತೆ- ಇಲ್ಲದಿದ್ದರೆ ಆ ಮಗು ಕಟ್ಟುವ ಇಂಜಿನಿಯರ್ ಕಲೆಯನ್ನು ಜಾಡಿಸಿ, ಒದ್ದು ಬಿಡುವ ಅಪಾಯ ಸದಾ ಇದ್ದೇ ಇರುತ್ತದೆ. ಇದನ್ನು ನಮ್ಮ ದೊಡ್ಡವರಿಗೆ ಸಹಿಸಲಾಗುವುದಿಲ್ಲ.
ಮನುಷ್ಯರು ಮಾರ್ಗಗಳನ್ನು ನಿರ್ಮಿಸುತ್ತಾರೆ. ಇದರ ಬಗೆಗೆ ಏನೇನೂ ತಕರಾರಿಲ್ಲ. ಹಾಗಿದ್ದರೆ ಯಾಕೆ ಇದೇ ಮನುಷ್ಯರು ನಾಶ, ಗೊಂದಲಗಳನ್ನು ಉಗ್ರವಾಗಿ ಪ್ರೀತಿಸುತ್ತಾರೆ? ಒಮ್ಮೆ ನನಗೆ ಹೇಳಿ ನೋಡೋಣ. ಈಗ ಈ ವಿಷಯದ ಬಗ್ಗೆ ಕೆಲವು ಮಾತುಗಳು.
ನಾಶ ಹಾಗೂ ಗೊಂದಲಗಳನ್ನು ಮನುಷ್ಯರು ಅಷ್ಟು ಪ್ರೀತಿಸಲು ಕಾರಣವೆಂದರೆ ( ಈ ಮಾತಿನ ಬಗ್ಗೆ ಅನುಮಾನವೇ ಬೇಡ, ಹಲವು ಸಲವಂತೂ ಮನುಷ್ಯರು ಇವೆರಡನ್ನು ಪ್ರೀತಿಸಿದಷ್ಟು ಸೃಷ್ಠಿಯಲ್ಲಿ ಮತ್ತೇನನ್ನೂ ಪ್ರೀತಿಸಿಲ್ಲ), ತನ್ನ ಲಕ್ಶ್ಯವನ್ನು ಪೂರ್ಣಗೊಳಿಸಿ, ಇಷ್ಟು ಕಾಲದಿಂದಲೂ ಕಟ್ಟುತ್ತಿರುವ ಸೌಧದ ಕಾಮಗಾರಿಯನ್ನು ಕೊನೆಗೂ ಸಂಪೂರ್ಣಗೊಳಿಸಿದರೆ ಎಂಬ ಭಯ! ಬಹುಶಃ ಈ ಸೌಧವನ್ನು ಇವರೆಲ್ಲ ದೂರದಿಂದ ಇಷ್ಟಪಡುತ್ತಾರೆ ಅಷ್ಟೇ; ಸಮೀಪದಿಂದಲ್ಲ. ಬಹುಶಃ ಅದನ್ನು ಸೃಷ್ಠಿಸುವುದರಲ್ಲೇ ಅವರಿಗೆ ಸುಖ; ಅದೊರಳಗೆ ಬದುಕುವುದರಲ್ಲಲ್ಲ. ಅದಕ್ಕೇ ಸೌದವನ್ನು ಕಟ್ಟಿದ ತಕ್ಷಣವೇ ಅದನ್ನು ಇರುವೆ, ಗೆದ್ದಲು, ನಾಯಿ, ಹಂದಿ, ಕುರಿ ಮುಂತಾದ ಸಮಾಜಮುಖಿ ಪ್ರಾಣಿಗಳಿಗೆ ಬಿಟ್ಟುಕೊಟ್ಟು ಪೇರಿ ಕೀಳುವ ಆಸಾಮಿಗಳು ಈ ಮನುಷ್ಯರು.
ಅದೇ ಈ ಗೌರಾವಾನ್ವಿತ ಗೆದ್ದಲು ಹುಳಗಳ ಕಥೆಯೇ ಬೇರೆ, ವಿಶೇಷವಾದ, ಕೆಡಿಸಲಾಗದ ಹುತ್ತ ಕಟ್ಟುತ್ತಲೇ ಕಟ್ಟುತ್ತಲೇ, ಬಹುಶಃ ಆ ಕ್ರಿಯೆಯಲ್ಲಿ ಮಗ್ನವಾಗಿ ಮುಗಿದು ಹೋಗುತ್ತವೆ, ಎಂತಹ ಸ್ಥಿರತೆ! ಎಂತಹ ರಚನಾತ್ಮಕ ಕ್ರಿಯೆ! ಅದೇ ಮನುಷ್ಯನೊಬ್ಬ ಬೆಡಗಿನ ದೂರದೃಷ್ಟಿಯೇ ಇರದ, ಚದುರಂಗದಾಟಗಾರನಂತೆ, ಗುರಿಗಿಂತ, ಅದರತ್ತ ಸಾಗುವ ಪ್ರಕ್ರಿಯೆಯನ್ನೇ ಆನಂದಿಸುವ ಜೀವಿ. ಒಂದೇ ಏಟಿಗೆ ನಿಪುಣ ಆಟಗಾರ ರಾಜನನ್ನೇ ಎಗರಿಸುತ್ತಾನೋ ಏನೋ; ಆದರೆ ನಮ್ಮ ಪ್ರೀತಿಯ ಮನುಷ್ಯ ಅಷ್ಟು ನಿಪುಣನಲ್ಲ, ಅಥವಾ ನಿಪುಣನಾಗಿದ್ದರೂ, ಬೇಗನೆ ರಾಜನನ್ನು ಹೊಡೆಯುವ ತಾಕತ್ತಿದ್ದರೂ ಹೊಡೆಯಲಾರ! ಏಕೆಂದರೆ ಆಗ ಆಟ ಮುಗಿದೇ ಹೋಗಿ, ಮತ್ತೆ ಬೇರೆ ಆಡಲು ಏನೂ ಉಳಿದೇ ಇರುವುದಿಲ್ಲ ಎಂಬ ತಳಮಳ. ಯಾರಿಗೆ ಗೊತ್ತು, ಈ ಇಹಲೋಕದಲ್ಲಿ ಮನುಷ್ಯರು ಸಾಧಿಸಲು ಹೆಣಗುತ್ತಿರುವ ಇಡೀ ಲಕ್ಷ್ಯವೇ, ಲಕ್ಷ್ಯದತ್ತ ಸಾಗುವ ಪ್ರಕ್ರಿಯೆಯನ್ನು ಬಿಡುವಿಲ್ಲದೆ ಕಾಪಾಡುವುದರಲ್ಲೇ ಇರಬೇಕು. ಹಾಗಾದರೆ ಲಕ್ಷ್ಯವೆಂದರೆ? ಗುರಿಯೆಂದರೆ? ಅಯ್ಯೋ, ಅವೆಲ್ಲ ಅಂತಿಮ, ಎರೆಡೆರೆಡಲ ನಾಲ್ಕು ಎಂಬಷ್ಟು ಕರಾರುವಕ್ಕಾಗಿ ನಿರೂಪಿಸಲಾಗುವಷ್ಟು ನಿಖರವಾಗಿರುವ ಫಾರ್ಮುಲಾಗಳು… ಆದರೆ ಈ ಪಾಸಿಟಿವ್ ಫಾರ್ಮುಲಾ ಇದೆಯೆಲ್ಲ ಅದು ಸಾವಿನಾಗಮನ; ಖಂಡಿತಾ ಬದುಕಲ್ಲ. ಎರೆಡೆರೆಡಲ ನಾಲ್ಕು ಅಂದರೆ ಮುಗಿಯಿತಲ್ಲ ಕಥೇ! ರಾಜ ಎಗರಿದಂತನೇ ಲೆಕ್ಕ! ಆಟ ಸಮಾಪ್ತಿ ಎಂದೇ ಅರ್ಥ! ಏಕೆಂದರೆ ಈ ಫಾರ್ಮುಲಾವನ್ನು ನೀವೆಷ್ಟೇ ಕುಣಿದಾಡಿದರು ಉಲ್ಟಾ ಮಾಡಲು ಆಗುವುದೇ ಇಲ್ಲ. ಇನ್ನೊಂದು ಥರ ಹೇಳುವುದಾದರೆ ಸತ್ತವನನ್ನು ಬದುಕಿಸುವುದು ಹೇಗೆ ಅಸಾಧ್ಯವೋ, ಹಾಗೇ ಇದೂ ಸಹ! ಮನುಷ್ಯ ಗಣಿತ ಶಾಸ್ತ್ರದ ಈ ನಿಶ್ಚಿತ ಫಾರ್ಮುಲಾಕ್ಕೆ ಹಿಂದಿನಿಂದಲೂ ಹೆದರಿಯೇ ಇದ್ದ. ಈಗ ನನಗೂ ಇದು ಹೆದರಿಕೆ ಹುಟ್ಟಿಸಿದೆ. ಮನುಷ್ಯ ಎಲ್ಲಾ ಬಿಟ್ಟು ಹುಡುಕುವುದು ಎರೆಡೆರೆಡಲ ನಾಲ್ಕು ಎಂಬ ಸೂತ್ರವನ್ನೇ. ಆತ ಅನ್ವೇಷಿಸುತ್ತಲೇ ಆ ಹುಡುಕಾಟದಲ್ಲಿ ಮಹಾ ಸಾಗರಗಳನ್ನು ದಾಟುತ್ತಾನೆ, ಆ ಹುಡುಕಾಟಕ್ಕಾಗಿ ತನ್ನ ಬದುಕನ್ನೇ ಬಲಿಕೊಡುತ್ತಾನೆ; ಆದರೂ ಅದನ್ನು ನಿಜಕ್ಕೂ ಬೆಂಬತ್ತಿ ಪತ್ತೆ ಹಚ್ಚಿಯೇ ಬಿಡಲು ಮನುಷ್ಯ ಅಂಜುತ್ತಾನೆ (ದೇವರಾಣೆ ಹಾಕಿ ಹೇಳುತ್ತಿದ್ದೇನೆ). ಒಮ್ಮೆ ಆ ಅನ್ವೇಷಣೆ ಸುಖಾಂತವಾದರೆ ನಂತರ ಅವನ ಹುಡುಕಾಟದ ಕಥೆಯೇನಾಗಬೇಕು? ಆಗ ದಾಟಲು ಸಪ್ತ ಸಮುದ್ರಗಳು ಇರುವುದಿಲ್ಲ, ಆ ಸಾಗರಗಳಾಚೆ ಯಾವ ರಾಜಕುಮಾರಿಯೂ ಅವನಿಗಾಗಿ ಕಾಯುತ್ತಿರುವುದಿಲ್ಲ. ಅವನ ಸ್ಥಿತಿಯಾಗ ಕೂಲಿ ಕಾರ್ಮಿಕರಿಗಿಂತಲೂ ಹೀನವಾಗಿರುತ್ತದೆ. ಅವರಾದರು ದಿನವಿಡೀ ದುಡಿದು ಸಿಕ್ಕಿದ್ದ ಕೂಲಿ ದುಡ್ಡಲ್ಲಿ ಶೇಂದಿ ಅಂಗಡಿಗೆ ಹೋಗಿ, ಚೆನ್ನಾಗಿ ಕುಡಿದು, ತಮ್ಮ ತಮ್ಮಲ್ಲೇ ಹೊಡೆದುಕೊಂಡು, ರಕ್ತ ಹರಿಸಿ, ಜೈಲು ಸೇರುತ್ತಾರೆ-ಒಂದು ವಾರದ ಕಸುಬದು. ಅದೇ ಈ ಮನುಷ್ಯ ಎಲ್ಲಿಗೆ ಹೋಗಬೇಕು? ಕಡೇ ಪಕ್ಷ ಗುರಿ ಸಾಧಿಸಿದ ಮನುಷ್ಯ ಒಂಥರಾ ವಿಲಕ್ಷಣನೇ… ಅಲ್ಲಾ ನೀವೇ ನೋಡಿ ಇವನನ್ನು ಸೂಕ್ಷ್ಮವಾಗಿ… ಎಂತಹಾ ವಿದೂಷಕ ಈತ… ಗುರಿ ತಲುಪುವ ಪ್ರಕ್ರಿಯೆಯೆಂದರೆ ಇಷ್ಟ; ಆದರೆ ಅದನ್ನು ಪೂರ್ಣಗೊಳಿಸಪ್ಪ ಅಂದರೆ, ಹಿಂದೇಟು ಹಾಕಿ ಮೂಗುಸಿಂಡರಿಸುತ್ತಾನೆ. ಇದೇ ಭಯಂಕರ ತಮಾಷೆ, ಇದೇ ಮಹಾ ಅಸಂಗತತೆ. ಒಂದೇ ಶಬ್ಧದಲ್ಲಿ ಹೇಳುವೆ, ಮನುಷ್ಯನೆಂದರೆ ಕೋಡಂಗಿ.
ಇರಲಿ, ಇಷ್ಟೆಲ್ಲಾ ಆದರೂ ಎರೆಡೆರೆಡಲ ನಾಲ್ಕು ಎಂಬುದು, ಸಹಿಸಲಾಗದ ಪ್ರಮೇಯ. ನನ್ನ ಪ್ರಕಾರ ಎರೆಡೆರೆಡಲ ನಾಲ್ಕು ಉದ್ಧಟತನದ ಪರಮಾವಧಿ. ಸೊಂಟದ ಮೇಲೆ ಕೈ ಇಟ್ಟು, ಹಾದಿಯನ್ನು ಅಡ್ಡಗಟ್ಟಿ ನಿಮ್ಮನ್ನೇ ತಡೆದು ಉಗಿಯುವ ಅಹಂಕಾರಿಯೇ ಈ ಎರೆಡೆರೆಡಲ ನಾಲ್ಕು. ಆಯಿತು, ಎರೆಡೆರೆಡಲ ನಾಲ್ಕು ಎಂಬುದು ಶ್ರೇಷ್ಠ, ನಾನು ಒಪ್ಪುವೇ. ಆದರೆ ನಿಮಗೆ ಎಲ್ಲವನ್ನೂ ಹೊಗಳುವ ಆಸೆಯಿದ್ದರೆ ಎರೆಡೆರೆಡಲ ಐದು ಎನ್ನಿ, ಕೆಲವು ಸಾರಿ ಅದೇ ಚೆಂದ.
ಆದರೂ ನೀವು ತುಂಬಾ ಹಠಕ್ಕೇ ಬೀಳುತ್ತೀರಪ್ಪ! ಎಲ್ಲರೂ ಅಷ್ಟು ಭಾವವೇಶದಲ್ಲಿ, ಒಳ್ಳೆ ರಾಷ್ಟ್ರಗೀತೆ ಹಾಡಿದ ಹಾಗೆ, ¸ ಸಹಜ ಹಾಗೂ ಪಾಸಿಟಿವ್-ಒಂದೇ ವಾಕ್ಯದಲ್ಲಿ ಹೇಳುವುದಾದರೆ ಏನೆಲ್ಲ ಮನುಷ್ಯನ ಸಮೃದ್ಧ ಜೀವನಕ್ಕೆ ಎಡೆ ಮಾಡುತ್ತವೋ ಅವೆಲ್ಲ- ಮಾತ್ರ ಮನುಷ್ಯನ ಹಿತಾಸಕ್ತಿ… ಅಂತ ಒಕ್ಕೊರೊಳಲ್ಲಿ ಹಾಡುತ್ತಿದ್ದೀರಿ. ಆ ನಿಮ್ಮ ರೀಸನಬಲ್ಲ್ನೆಸ್ಸು ಈ ವಿಷಯದಲ್ಲಿ ತಪ್ಪಿಲ್ಲವೆಂದು ಏನು ಖಾತ್ರಿ? ಬಹುಶಃ ಸಮೃದ್ಧಿಯಲ್ಲಿ ನಲಿದಂತೆ ನೋವಿನಲ್ಲಿ ಬೇಯುವುದೂ ಸಹ ಮನುಷ್ಯನ ಹಿತಾಸಕ್ತಿಯೇ. ಹಾಗೆ ನೋಡಿದರೆ ಕೆಲವು ಸಾರಿ ಈತ ವೇದನೆಯನ್ನೇ ಭಯಂಕರವಾಗಿ ಪ್ರೀತಿಸುತ್ತಾನೆ. ಇದೇ ಸತ್ಯ. ಈ ಮಾತಿಗೆ ಸಾಕ್ಷಿ ಬೇಕೆಂದು ಜಗತ್ತಿನ ಇತಿಹಾಸದ ಪುಟಗಳನ್ನೇಕೆ ಮತ್ತೆ ತಿರುವುತ್ತಿದ್ದೀರಿ ಸ್ವಾಮಿ? ನೀವು ಮನುಷ್ಯರೇ ತಾನೇ? ನಿಮ್ಮೊಳಗೆ ಇಣುಕಿ ಒಮ್ಮೆ… ಆದರೆ ನಿಜಕ್ಕೂ ನೀವು ಮನುಷ್ಯರಾಗಿದ್ದು, ಚೂರಾದರೂ ಬದುಕಿದ್ದರೆ ಮಾತ್ರ ಈ ಚೆಲುವನ್ನು ನಿಮ್ಮ ದೃಷ್ಟಿ ಗ್ರಹಿಸುತ್ತದೆ. ನನ್ನ ಅಭಿಪ್ರಾಯ ಕೇಳಿದರೆ, ಬರೀ ಸಮೃದ್ಧಿಯನ್ನೇ ಪ್ರೀತಿಸುವುದೇ ಅಸಭ್ಯತೆ. ಸರಿಯೋ, ತಪ್ಪೇ ಆಗಾಗ ಕೆಲ ವಸ್ತುಗಳನ್ನು ಒಡೆದು ಪುಡಿ-ಪುಡಿ ಮಾಡುವುದೇ ಆಹ್ಲಾದಕರ. ವೇದನೆ ಅಥವಾ ಸಮೃದ್ಧಿ ಇವೆರೆಡರಲ್ಲಿ ಯಾವುದರ ಪರವಾಗಿಯೂ ನಾನಿಲ್ಲಿ ವಕಾಲತ್ತು ವಹಿಸುತ್ತಿಲ್ಲ. ಬರೀ ನನ್ನ ಖಯಾಲಿಯನ್ನು ಇಲ್ಲಿ ಬೆಂಬಲಿಸುತ್ತಿದ್ದೇನೆ. ಬೇಕೆಂದಾಗ ಇದು ಸಿಕ್ಕೇ ಸಿಗುತ್ತದೆ ಎಂದು ಖಾತ್ರಿಯಾಗಬೇಕು ನನಗೆ ಅಷ್ಟೇ. ಸಂಗೀತ ಕಛೇರಿಯಲ್ಲಿ ವೇದನೆಗೆ ಜಾಗವಿಲ್ಲ, ಅದು ಗೊತ್ತು ನನಗೆ. ಸ್ಫಟಿಕದ ಮಹಲಿನಲ್ಲಿ ನೀವು ವೇದನೆಯ ಕುರಿತು ಯೋಚಿಸುವ ಹಾಗೂ ಇಲ್ಲ. ವೇದನೆಯೆಂದರೆ ಗುಮಾನಿ, ನಿರಾಕರಣೆ ತಾನೆ? ಸ್ಫಟಿಕ ಮಹಲಿನ ಬಗೆಗೇ ನಿಮಗೆ ಅನುಮಾನಗಳಿದ್ದರೆ ಅದು ಸ್ಫಟಿಕ ಮಹಲು ಹೇಗಾಗುತ್ತದೆ ಅಲ್ಲವೇ? ವಿಷಯ ಹೀಗಿದ್ದರೂ ಮನುಷ್ಯ ನಿಜ ವೇದನೆಯನ್ನು, ಅಂದರೆ ನಾಶ- ಗೊಂದಲಗಳನ್ನು ಎಂದಿಗೂ ತ್ಯಜಿಸುವುದಿಲ್ಲ. ಆ ನೋವಿನ ಜ್ಞಾನದ ರುಚಿ ಹತ್ತಿಸಿಕೊಂಡವನೀತ. ಅರಿವಿನ ಏಕಮಾತ್ರ ಪಿತೃವೇ ನೋವು. ಹಿಂದೊಮ್ಮೆ ನಾನು ಅರಿವೇ ಮನುಷ್ಯನನ್ನು ಅನರ್ಥದತ್ತ ಎಳೆಯುವ ದೆವ್ವ ಎಂದಿದ್ದೆ, ಒಪ್ಪುತ್ತೇನೆ. ಆದರೆ, ಮನುಷ್ಯರು ಅರಿವನ್ನೇ ಪ್ರೀತಿಸುತ್ತಾರೆ ಅದೂ ಗೊತ್ತು ಬಿಡಿ ನನಗೆ. ಏನೇ ಆಗಲಿ, ಎಂತಹ ಸ್ವರ್ಗ ಕೈಗೆ ಸಿಕ್ಕಲಿ ಮನುಷ್ಯರು ಅರಿವನ್ನು ಮಾತ್ರ ಬಿಟ್ಟು ಬಿಡುವುದಿಲ್ಲ. ಈ ಅರಿವೇ ಈ ಎರೆಡೆರೆಡಲ ನಾಲ್ಕು ಎಂಬ ಫಾರ್ಮುಲಾವನ್ನು ಸುಟ್ಟು ಬೂದಿಯಾಗಿಸುವ ಮಹಾದೇವ. ಎರೆಡೆರೆಡಲ ನಾಲ್ಕು ಎನ್ನುವುದೇ ಅಂತಿಮ ನಿಜ ಅಂತೇನಾದರೂ ಆದರೆ, ಕಲಿಯಲು ಏನೂ ಇರದೆ ನಮ್ಮ ಇಂದ್ರಿಯಗಳನ್ನೆಲ್ಲಾ ಖೈದುಗೊಳಿಸಿ, ಧ್ಯಾನದಲ್ಲಿ ಮುಳುಗುವ ಸೋಮಾರಿಗಳು ನಾವು. ಅರಿವೂ ಸಹ ಕೊನೆಗೆ ನಮ್ಮನ್ನು ಇದೇ ಅವಸ್ಥೆಗೆ ತರುವುದು- ಅಂದರೆ ಆಗಲೂ ನಮಗೆ ಮಾಡಲೇನೂ ಮಿಕ್ಕಿರುವುದಿಲ್ಲ ಬಿಡಿ- ಆದರೆ ಆಗಾಗ ನಮಗೆ ನಾವೇ ಚಾವಟಿಯಲ್ಲಿ ಬಾರಿಸಿಕೊಂಡು ಏಟು ತಿನ್ನಲು* ಮುಕ್ತಾವಕಾಶ ಸಿಗುವುದು, ಅರಿವಿದ್ದಾಗ ಮಾತ್ರ! ಮತ್ತೆ ಜೀವಝರಿಯನ್ನು ನಮ್ಮೊಳಗೆ ಹರಿಸಲು ಇರುವ ಕೊನೆಯ ಮಾರ್ಗ ಇದೊಂದೇ. ನಕ್ಸಲನ ಮಾತಿನಂತೆ ನಿಮಗಿದು ಕೇಳಬಹುದು. ಆದರೂ ಏನು ಮಾಡದೇ ನಿರ್ಜೀವವಾಗಿರುವುದಕ್ಕಿಂತ, ಹೀಗೆ ನೋವಲ್ಲಿ ಅರಿವನ್ನು ಉದ್ದೀಪನಗೊಳಿಸುವುದು ಎಷ್ಟೋ ಉತ್ತಮ ಅಲ್ಲವೇ?
ಅನುವಾದ : ಗೌತಮ್ ಜ್ಯೋತ್ಸ್ನಾ
ಚಿತ್ರ : ಮದನ್ ಸಿ.ಪಿ
ಟಿಪ್ಪಣಿಗಳು
*ಬಕಲ್-ಎಚ್ ಟಿ ಬಕಲ್ : ಹಿಸ್ಟರಿ ಆಫ್ ಸಿವಿಲೈಜೇಶನ್ ಇನ್ ಇಂಗ್ಲೆಂಡ್ (1857-1861ರ ಕಾಲಾವಧಿಯ ನಡುವೆ ಪ್ರಕಟವಾಯಿತು) ಇವನ ವಾದವು ನಾಗರೀಕತೆಯ ಉನ್ನತವಾಗುತ್ತಾ ಹೋಗಿ, ಕಡೆಗೆ ಜಗತ್ತಿನಲ್ಲಿ ಯುದ್ಧಗಳೇ ಇಲ್ಲವಾಗುತ್ತದೆ ಎಂದು ವಾದಿಸಿತ್ತು. ಆದರೆ ಈ ವಾದ ಎಷ್ಟು ವ್ಯತಿರಿಕ್ತವಾಗಿದೆಯೆಂದರೆ ಬಹುಶಃ ನಾಗರೀಕ ಸಮಾಜ ಕಂಡಷ್ಟು ಹೀನ ಕದನಗಳನ್ನು ಬೇರ್ಯಾವ ಆದಿವಾಸಿ ಜನಾಂಗಗಳೂ ಕಂಡಿರಿಲಕ್ಕಿಲ್ಲ!
*ಶ್ಲೆಸ್ವೀಶ್- ಹೋಲ್ಸ್ಟೈನ್: ಉತ್ತರ ಯುರೋಪಿನ ನಿರಂತರ ಜಟಾಪಟಿಯ ಮೂಲ ಈ ಎರಡು ಡಚ್ ಪ್ರಾಂತ್ಯಗಳು. 1864ರಲ್ಲಿ ಪ್ರೂಷ್ಯಾ ಹಾಗೂ ಆಸ್ಟ್ರಿಯಾ, ಡೆನ್ಮಾರ್ಕ್ ಅನ್ನು ಮಣಿಸಿ, ಈ ಪ್ರಾಂತ್ಯಗಳ ಮೇಲೆ ತಮ್ಮ ಸಾಮ್ಯತೆಯನ್ನು ಮೆರೆದವು.
*ಆ ಅಪೂರ್ವ ರಕ್ತಮಿಲನ: ಇಲ್ಲಿ ವ್ಯಂಗ್ಯಾತ್ಮಕವಾಗಿ ಬಳಸಲಾಗಿದೆ. 1861ರಲ್ಲಿ ಅಂತರ್ಯುದ್ಧವು ಅಮೇರಿಕಾದಲ್ಲಿ ಆರಂಭವಾಗಿ 1864ರಲ್ಲಿ ತುತ್ತತುದಿಗೆ ಮುಟ್ಟಿತು. ಅದೇ ಇಸವಿಯಲ್ಲಿ ಈ ಪುಸ್ತಕವು ಪ್ರಕಟವಾದದ್ದು.
*ಆಟೀಲಾರೂ ಮತ್ತು ಸ್ಟೆಂಕಾ ರಾಝಿನ್: ಆಟಿಲಾ(406-53) : ಹನ್ನಿಕ್ ಸಾಮ್ರಾಜ್ಯದ ನಾಯಕ, ಐದನೆಯ ಶತಮಾನದ ಮಧ್ಯಭಾಗದಲ್ಲಿ ಮಧ್ಯ ಯುರೋಪನ್ನು ಸಂಪೂರ್ಣ ಸ್ವಾಧೀನದಲ್ಲಿ ಇರಿಸಿಕೊಂಡು, ಪಾಶ್ಚಿಮಾತ್ಯ ರೋಮನ್ ಸಾಮ್ರಾಜ್ಯಕ್ಕೆ ತುಂಬಾ ಕಾಟ ಕೊಟ್ಟನು.
ಸ್ಟೆಂಕಾ(ಸ್ಟೀಫನ್)ರಝೀನ್(1630-71): ಇವನು ಒಬ್ಬ ಡಾನ್ ಕೊಸಾಕ್, 1671 ಮಹಾ ದಂಗೆಯನ್ನು ಉನ್ನತವರ್ಗದ ವಿರುದ್ಧ ಎಬ್ಬಿಸಿದ ಇವನನ್ನು ಕಡೆಗೂ ಸೆರೆಹಿಡಿದು, ಮಾಸ್ಕೋ ನಗರದಲ್ಲಿ ಸಾರ್ವಜನಿಕವಾಗಿ ಜೀವಂತವಾಗಿರುವಾಗಲೇ ತರಿದು ಕತ್ತರಿಸಿ ನಾಲ್ಕು ಭಾಗಗಳನ್ನಾಗಿ ವಿಭಾಗಿಸಿ ಕೊಲ್ಲಲಾಯಿತು.
ಕಂತು ೧ : http://ruthumana.com/2018/10/14/notes-from-underground-part-1/
ಕಂತು ೨ : http://ruthumana.com/2018/10/14/notes-from-underground-part-2/