ಶ್ರೀ ರಾಮಾಯಣ ದರ್ಶನಂ : ಶ್ರೀ ವೆಂಕಣ್ಣಯ್ಯನವರಿಗೆ..

ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ, ಕುಪ್ಪಳ್ಳಿ ಮತ್ತು ಅವಿರತ ಪ್ರತಿಷ್ಠಾನ, ಬೆಂಗಳೂರು ಇವರ ಸಹಯೋಗದಲ್ಲಿಸೆಪ್ಟೆಂಬರ್ 23-24 2018 ರಂದು ಕುಪ್ಪಳ್ಳಿಯಲ್ಲಿ ನಡೆದ “ಶ್ರೀ ರಾಮಾಯಣ ದರ್ಶನಂ” ( ವಾಚನ – ವಾಖ್ಯಾನ – ಉಪನ್ಯಾಸ ) ಕಾರ್ಯಕ್ರಮದ ದಾಖಲೀಕರಣ ಋತುಮಾನ ಕೈಗೆತ್ತಿಕೊಂಡಿತ್ತು. ಗಮಕ ಮತ್ತು ಹಲವು ಪ್ರಾಜ್ಞರ ಉಪನ್ಯಾಸಗಳು ಮುಂದೆ ಋತುಮಾನದಲ್ಲಿ ಪ್ರಕಟಗೊಳ್ಳಲಿವೆ. ಮೊದಲಿಗೆ ಕುವೆಂಪು ತಮ್ಮ ಕೃತಿಯ ಆರಂಭದಲ್ಲೇ ತಮ್ಮ ಗುರು ಶ್ರೀ ವೆಂಕಣ್ಣಯ್ಯನವರಿಗೆ ಅರ್ಪಣೆಯಾಗಿ ಬರೆದಿರುವ ಈ ಸಾಲುಗಳನ್ನು ಶ್ರೀಯುತ ಚಂದ್ರಶೇಖರ ಕೆದಿಲಾಯರು ಹಾಡಿದ್ದಾರೆ .

ಹೊಸಗನ್ನಡ ಸಾಹಿತ್ಯದ ನಿರ್ಮಾತೃಗಳಲ್ಲಿ ಬಹುಮುಖ್ಯವಾದ ಹೆಸರೆಂದರೆ ತಳುಕಿನ ಸುಬ್ಬಣ್ಣ ವೆಂಕಣ್ಣಯ್ಯ ಅವರದು.1/10/1885ರಲ್ಲಿ ಚಿತ್ರದುರ್ಗದ ಚಳ್ಳೆಕೆರೆ ತಾಲೋಕಿನ ತಳುಕು ಗ್ರಾಮದಲ್ಲಿ ಜನಿಸಿದರು.ಇವರ ತಂದೆ ಸುಬ್ಬಣ್ಣನವರು ಯಕ್ಷಗಾನ ಕವಿಯಾಗಿದ್ದವರು.ಚಳ್ಳಕೆರೆ, ಚಿತ್ರದುರ್ಗ,ಮೈಸೂರು ನಂತರ ಎಲ್ ಎಲ್ ಬಿ ಗಾಗಿ ಮುಂಬಯಿಗೆ ಹೋಗಿ ಮತ್ತೆ ಎಂ.ಎ.ಪದವಿ ಪಡೆಯಬೇಕೆಂಬ ಹಂಬಲದಿಂದ ಮೈಸೂರಿಗೆ ಹಿಂದಿರುಗಿ ಖಾಸಗಿಯಾಗಿ ಎಂ.ಎ ಪದವಿ ಪಡೆದರು.

ಅನಂತರ ಧಾರವಾಡದ ಮಿಷನ್ ಹೈಸ್ಕೂಲ್,ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಸಹೋಪಧ್ಯಾಯರಾಗಿ ನಂತರ ದೊಡ್ಡಬಳ್ಳಾಪುರದ ಕನ್ನಡ ಹೈಸ್ಕೂಲಿನಲ್ಲಿ ಮುಖ್ಯೋಪಾಧ್ಯಾಯರಾಗಿದ್ದು 1917ರಲ್ಲಿ ಬೆಂಗಳೂರಿನ ಇಂಗ್ಲಿಶ್ ಹೈಸ್ಕೂಲ್ ,ಸೆಂಟ್ರಲ್ ಕಾಲೇಜು,ಕಡೆಗೆ 1927 ರಲ್ಲಿ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಕನ್ನಡ ಪ್ರೊಪೆಸರ್ ಆದರು. ಕನ್ನಡ,ಇಂಗ್ಲಿಶ್,ಸಂಸ್ಕೃತ, ಭಾಷಾಸಾಹಿತ್ಯವನ್ನು ಆಳವಾಗಿ,ಓದಿಕೊಂಡಿದ್ದ ಇವರಿಗೆ ಬಂಗಾಳಿ,ತೆಲುಗು,ತಮಿಳು ಭಾಷೆಗಳ ಮೇಲೂ ಹಿಡಿತವಿತ್ತು. ಶ್ರೀ ರಾಮಕೃಷ್ಣ ಪರಮಹಂಸರ ಜೀವನ ಚರಿತ್ರೆಯನ್ನು ಬಂಗಾಳಿಯಿಂದ ಕನ್ನಡಕ್ಕೆ ತಂದರು(ಶ್ರೀ ರಾಮಕೃಷ್ಣ ಮಠಕ್ಕಾಗಿ )ಜೊತೆಗೆ ‘ ಶ್ರೀ ರಾಮಕೃಷ್ಣ ಲೀಲಾಪ್ರಸಂಗದ ಒಂದು ಭಾಗವನ್ನೂ ಕನ್ನಡಿಕರಿಸಿದ್ದಾರೆ. ಟಿ.ಎಸ್.ವೆಂಕಣ್ಣಯ್ಯನವರು ರವೀಂದ್ರನಾಥ ಟಾಗೋರರು ಸಾಹಿತ್ಯದ ಬಗೆಗೆ ಬರೆದಿರುವ ವಿಮರ್ಶಾಲೇಖನಗಳನ್ನು ‘ ಪ್ರಾಚೀನ ಸಾಹಿತ್ಯ’ ಎನ್ನುವ ಹೆಸರಿನಲ್ಲಿ ಪ್ರಬುದ್ಧ ಕರ್ನಾಟಕದಲ್ಲಿ ಮೊದಲು ಪ್ರಕಟಿಸಿದರು. ಕನ್ನಡ ಪ್ರಾಚೀನ ಸಾಹಿತ್ಯದ ಬಗ್ಗೆ ಅಪಾರ ಆಸಕ್ತಿ ಮತ್ತು ಪಾಂಡಿತ್ಯ ಹೊಂದಿದ್ದ ಇವರು,”ಹರಿಶ್ಚಂದ್ರ ಕಾವ್ಯ ಸಂಗ್ರಹ” ” ಕಾದಂಬರಿ ಸಂಗ್ರಹ” ಹರಿಹರನ ” ಬಸವರಾಜದೇವರ ರಗಳೆ” ಯನ್ನು ಸಂಪಾದಿಸಿ ಕೊಟ್ಟಿದ್ದಾರೆ.ಅಷ್ಟೇ ಅಲ್ಲದೆ “ಕನ್ನಡ ಕೈಪಿಡಿ” ಗೆ ಹಳೆಗನ್ನಡ ವ್ಯಾಕರಣದ ಒಂದು ಭಾಗವನ್ನು ,ಭಾಷಾಚರಿತ್ರೆಯ ಭಾಗವನ್ನು ಬರೆದಿದ್ದಾರೆ.ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟ ಮಾಡಿದ ಪಂಪಭಾರತ ಸಂಪಾದನ ಕಾರ್ಯದಲ್ಲಿಯೂ ,ಓರಿಯಂಟಲ್ ಲೈಬ್ರರಿ ಪ್ರಕಟಿಸಿದ ಕುಮಾರವ್ಯಾಸ ಭಾರತದ ಸಂಪಾದನ ಕಾರ್ಯದಲ್ಲಿ ಇವರ ಕೊಡುಗೆ ಮರೆಯಲಾಗದ್ದು.ಬಹು ಮುಖ್ಯವಾಗಿ ಮೈಸೂರು ವಿ.ವಿ.ಹೊರತಂದ ಕನ್ನಡದ ಬಹುಮುಖ್ಯ ಸಾಹಿತ್ಯ ಪತ್ರಿಕೆಯಾದ ” ಪ್ರಬುದ್ಧ ಕರ್ನಾಟಕದ ಸಂಪಾದಕರಾಗಿದ್ದರು. ಸಾಹಿತ್ಯದ ಓದಿನಲ್ಲಿ ಅವರಿಗಿದ್ದ ಒಳನೋಟ,ಕಾವ್ಯವಿಮರ್ಶನ ಸೂಕ್ಷತೆಯನ್ನು ಹೊಂದಿದ್ದ ಟಿ.ಎಸ್.ವಿ. ಸ್ವತಃ ಗಮಕಿಯಾಗಿದ್ದು ಕಾವ್ಯಗಳನ್ನು ತರಗತಿಯಲ್ಲಿ ಹಾಡುವುದನ್ನು ಕೇಳುವುದೇ ವಿದ್ಯಾರ್ಥಿಗಳ ಪಾಲಿಗೆ ಅದೃಷ್ವವಾಗಿತ್ತಂತೆ. ಇನ್ನು ವಿದ್ಯಾರ್ಥಿಗಳ ಜೊತೆ ತಂದೆಯಂತೆ, ಗೆಳೆಯನಂತೆನಡೆದುಕೊಂಡು ಅವರ ಜ್ಞಾನಾಭಿವೃದ್ಧಿ,ಯೋಗಕ್ಷೇಮಗಳ ಬಗ್ಗೆ ಸದಾ ಗಮನವಿಟ್ಟು ಅವರನ್ನು ಭವಿಷ್ಯದ ಬರಹಗಾರರನ್ನಾಗಿ ತಯಾರುಮಾಡುವುದರಲ್ಲಿ,ಅದಕ್ಕಾಗಿ ಉತ್ಸಾಹ ತುಂಬುದರಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರಂತೆ.ಅವರ ಆ ಆಸ್ಥೆಯ ಫಲವೇ “ಕುವೆಂಪು” ಎನ್ನುವ ಮೇರು ವ್ಯಕ್ತಿತ್ವ. ಕನ್ನಡದ ಏಳಿಗೆಗಾಗಿ ಶ್ರಮಿಸಿದ ಆರಂಭಿಕ ಮಹನೀಯರಲ್ಲಿ ಬಹುಮುಖ್ಯರಾಗಿದ್ದ ಟಿ.ಎಸ್ .ವೆಂಕಣ್ಣಯ್ಯನವರು 24/2/1939ರಲ್ಲಿ ನಿಧನರಾದರು.

ಟಿ.ಎಸ್.ವೆಂಕಣ್ಣಯ್ಯನವರ ಬಗ್ಗೆ ಮಾಸ್ತಿಯವರು ತಮ್ಮ ಒಂದು ಉಪನ್ಯಾಸದಲ್ಲಿ ಅವರನ್ನು ವರ್ಡ್ಸ್ ವರ್ತ್ ನು ಮಿಲ್ಟನ್ ಕವಿಯ ಬಗ್ಗೆ ಹೇಳಿರುವ ಕೆಳಗಿನ ಈ ಮಾತುಗಳು ಸರಿಯಾಗಿ ಹೊಂದುತ್ತವೆ ಎಂದಿದ್ದಾರೆ.

Thy soul was like a Star, and dwelt apart:
Thou hadst a voice whose sound was like the sea:
Pure as the naked heavens, majestic, free,
So didst thou travel on life’s common way,
In cheerful godliness; and yet thy heart
The lowliest duties on herself did lay.

 

ಟಿ.ಎಸ್.ವೆಂಕಣ್ಣಯ್ಯ ಕುಳಿತವರಲ್ಲಿ ಎಡದಿಂದ ನಾಲ್ಕನೆಯವರು,ಮೂರನೆಯವರು ಬಿ.ಎಂ.ಶ್ರೀಕಂಠಯ್ಯ. ನಿಂತವರಲ್ಲಿ ಕುವೆಂಪು ಎಡದಿಂದ ಆರನೆಯವರು.


ಪ್ರತಿಕ್ರಿಯಿಸಿ