ಕವನ ಚಿತ್ತಾರ : ಜ.ನಾ. ತೇಜಶ್ರೀ ಅವರ ‘ಪುರಾತನ ಮರ’

`ಋತುಮಾನ’ಕ್ಕಾಗಿ ‘ಲೋಕಚರಿತ’ ನಿರ್ಮಿಸಿರುವ “ಕವನ ಚಿತ್ತಾರ” ಸರಣಿಯ ಮೂರನೇ ಚಿತ್ರ ಕವನ — ನಮ್ಮ ನಡುವಿನ ಯುವ ಕವಯತ್ರಿ ಜ.ನಾ. ತೇಜಶ್ರೀ ಅವರ ‘ಪುರಾತನ ಮರ’ ಎನ್ನುವ ಕವಿತೆ — ಮರವೊಂದಕ್ಕೆ ವ್ಯಕ್ತಿತ್ವವನ್ನು ರೂಪಿಸಿ, ಬದುಕಬೇಕೆಂಬ ಜೀವನ ಸ್ಪೂರ್ತಿಯನ್ನು ಇಮ್ಮಡಿಗೊಳಿಸುವ ಈ ಕವಿತೆ `ನಮ್ಮ ಬದುಕು ಇತರರ ಬದುಕಿನೊಟ್ಟಿಗೆ ಕಟ್ಟಿಕೊಂಡಿರುವ ಕಣಿಯನ್ನು ಹೇಳುತ್ತದೆ. ದೃಶ್ಯದಲ್ಲಿ ಸಾಧ್ಯವಾದಷ್ಟೂ ವಾಚ್ಯವಾಗಿಸದೇ ಇರುವ ಪ್ರಯತ್ನಪಟ್ಟಿದ್ದೇವೆ. ನೋಡಿ-ಕೇಳಿ ಆನಂದಿಸಿ.

ಇಂತಹ ಒಂದು ಕವನ ಚಿತ್ತಾರದ ವಿಡಿಯೋ ಪ್ರಸ್ತುತಿಗೆ ಕನಿಷ್ಠವೆಂದರೂ 5 ಸಾವಿರ ರೂಪಾಯಿಗಳಷ್ಟು ವೆಚ್ಚ ತಗಲುತ್ತದೆ. ಇಂತಹ ಪ್ರಯೋಗಗಳು ನಿಮಗಿಷ್ಟವಾದಲ್ಲಿ ನಿಮ್ಮಿಂದ ಸಾಧ್ಯವಾದಷ್ಟು ಆರ್ಥಿಕ ನೆರವನ್ನು ಋತುಮಾನ ಅಪೇಕ್ಷಿಸುತ್ತದೆ. ನೆರವಾಗಲು ಇಲ್ಲಿ ಕ್ಲಿಕ್ ಮಾಡಿ https://imjo.in/5fZZ9X

ಕವನ ಚಿತ್ತಾರ : ಜ.ನಾ. ತೇಜಶ್ರೀ ಅವರ ‘ಪುರಾತನ ಮರ’ | Poem : Ja. Na. Tejashri's 'Puratana Mara'


ಪುರಾತನ ಮರ
-- ಜ.ನ. ತೇಜಶ್ರೀ

ಹುಲ್ಲೆಮರಿಯಂತೆ ಮಿಡುಕೋ ಚಿಗುರೆಸಳ ತುಳುಕಿಸುತ್ತ
ಬೆಟ್ಟದ ಬುಡದ ಬಟ್ಟ ಬಯಲಲ್ಲಿ ನೆಟ್ಟಗೆ ನಿಂತಿತ್ತು ಪುರಾತನ ಮರ,
ಮೈ ಮುದಿಯಾದರೂ ಜೀವ ಮುದಿಯಾಗಗೊಡದ
ಗಿಳಿಪೊಟರೆಗಳು ಆ ಮರದ ನಿಟ್ಟುನಿಟ್ಟಲ್ಲಿ,
ನೆಲದೆದೆಗೇ ಬೇರೂರಿ ತೂಗುತ್ತಿತ್ತು ಮರ
ಗಿಳಿರೆಕ್ಕೆಯ ಲಯಕ್ಕೆ ಮಿಡಿಯುತ್ತ
ಥೇಟು ಅದರಂತೆ ಹಸಿರು ತಾನೂ ಆಗಲು ಬಯಸುತ್ತ.

ಒತ್ತಿ ಮರದ ಮೈಯಿಗೆ ಜೀವ ಹನಿಯೋ ಕೆಂಪು ಕೊಕ್ಕು
ಹೇಳುತ್ತಿದ್ದವು ಗಿಳಿಗಳು ದಿನಕ್ಕೊಂದು ಕಣಿ:
ಆ ಊರು, ಈ ಮರ, ಅತ್ತಣದ ಆಳ್ತನ, ಇತ್ತಣದ ಬಾಳ್ತನದ ಕಥೆಯ.

ಆಗ, ಕೆಂಪಾನೆ ಕೆಂಪು ಕೊಕ್ಕ ಚೆಲುವಿಗೆ
ಮರದ ಗೊರಟು ಕಾಂಡದೊಳಗೆಲ್ಲ ಹೊಸ ರಕ್ತಕಣಗಳು ಹುಟ್ಟಿ
ಅದರ ತಲೆತೊನೆಯೋ ಚಿಗುರ ಕಣ್ಣಲ್ಲಿ ಕೆಂಪು ಎಲೆಯ ಮಿನುಗು.

ಮಳೆಯ ಹನಿಗಳ ಪಕ್ಕೆ ಗರಿಯಿಂದ ಕೊಡವುವ ಕಾಗೆ,
ನೆರಳಿನಲಿ ನೆಲೆ ಕಂಡ ಮೇಕೆ,
ಕತ್ತಲಿಗೆ ಡಿಕ್ಕಿ ಹೊಡೆಯುತ್ತ ಬರುವ ಬಾವಲಿಗಳಿಗೆಲ್ಲ
ಸದ್ಯದ ತಂಗುದಾಣ ಈ ಮರದ ಗೆಲ್ಲು, ಎಲೆ,
ಶಾಶ್ವತದ ಆಸರೆ ಇದೆ ಇಲ್ಲೇ ಎಂಬ ಇಂಬು ಮರಕ್ಕೆ.

ನೇಯುತ್ತಿದೆ ಮರದೆದೆಯಲ್ಲಿ ಮರಿಹುಳ
ಒಂದೇ ಒಂದೊಂದೇ ಎಳೆಯನ್ನು ತನ್ನ ಮೈಯ ಸುತ್ತ,
ಮರಿಹುಳವ ತಬ್ಬುತ್ತ ಬಿಗಿಯಾಗಿ
ಕಾಲದ ಮುಳ್ಳೂ ಸುತ್ತುತ್ತಿದೆ ತನ್ನದೇ ಸುತ್ತ.

ಹೊಡೆದ ಅಡ್ಡ ಮಳೆಗೆ ಒಂದು ದಿನ
ಕೆರೆ ಕಟ್ಟೆ ಹಳ್ಳ ಕೊಳ್ಳಗಳೆಲ್ಲ ತುಂಬಿ
ತುಳುಕಾಡೋ ನೀರ ವಯ್ಯಾರ ಇಳಕಲಲ್ಲಿ ನುಗ್ಗಿ
ಗಳಿಗೆ ಕಳೆಯೋ ಒಳಗೆ
ಬೆಟ್ಟದ ಬುಡದ ಬಟ್ಟ ಬಯಲಲ್ಲಿ ನೀರೋ ನೀರು.

ಬಂದಷ್ಟೇ ಬಿರುಸಲ್ಲಿ ಮಳೆ ಹೋಗಿ
ಸುತ್ತೆತ್ತಲೂ ಈಗ ಮಳೆ ನಿಂತ ಮೇಲಿನ ಮೌನ,
ಪುರಾತನ ಮರ ತೇಲುತ್ತಿದೆ ನೀರ ಮೇಲೆ
ತನ್ನದೇ ಬಿಂಬವ ನೋಡುತ್ತ ಬೆರಗುಗೊಂಡು.

ದಿನ ಕಳೆದು ದಿನವಾಗಿ ಸುರಿವ ಮಳೆ ಮತ್ತೆ ಸುರಿಯುತ್ತಲೇ ಹೋಗಿ
ನಿಂತ ನೀರು ನಿಂತೇ ಇದ್ದು, ಎಲ್ಲಿ ವಲಸೆ ಹೋದವೋ ಗಿಳಿಗಳೆಲ್ಲ,
ಸದಾ ಗಿಳಿಯ ಧ್ಯಾನದೊಳಿರಲು ಮರವು
ಅದರ ಕಾಂಡದ ಮೇಲೆಲ್ಲ ಹಾವಸೆ ಹಬ್ಬಿ
ಬರಿಗಣ್ಣಿಗೆ ತೋರತೊಡಗಿತು ಪುರಾತನ ಮರವು ಗಿಳಿಯೇ ಆಗಿ
ಮರದೆದೆಯಲ್ಲಿ ನಡೆಯುತ್ತಲೇ ಇದೆ ಮರಿಹುಳಗಳ ಗೌಜು.

ಪ್ರತಿಕ್ರಿಯಿಸಿ