ನಿಂದಾಸ್ತುತಿಯಿಂದ ಆರಂಭಿಸಿ…
ನಾನು ದಶಕಗಳ ಹಿಂದಿನ ಘಟನೆ ಮೆಲುಕು ಹಾಕುವುದಿಲ್ಲ, ಅದನ್ನು ಮಾಡಲಿಕ್ಕೆ ನನ್ನ ವಯಸ್ಸೂ ಅಷ್ಟು ದೊಡ್ಡದಲ್ಲ. ನನ್ನ ಅವರ ನೆನಪೇನಿದ್ದರು ಹತ್ತದಿನೈದು ವರ್ಷದ ಒಳಗಿನದ್ದು. ಚಿಕ್ಕಂದಿನಲ್ಲಿ ಕಾರ್ನಾಡರೆಂದರೆ ನನಗೆ ನಟ ಅಷ್ಟೇ ಆಗಿದ್ದರು. ಆ ನಿಲುವು, ಧ್ವನಿ, ಹಾವಭಾವ ಪ್ರಭಾವಿಸದೇ ಇರಲು ಸಾಧ್ಯವೇ? “ಒಂದ್ಸಲ ಕರೆದರೆ ತಿಳಿಯೂದಿಲ್ಲೇನು ದಡ್ಸೂಳೀಮಗನ” ಎಂದು ಶರೀಫನ ಪಾತ್ರಧಾರಿಯನ್ನು ಕರೆದು ಜನಿವಾರ ಹಾಕುವ ಗೋವಿಂದಭಟ್ಟನ ಪಾತ್ರ ನನ್ನ ಕಣ್ಣಲ್ಲಿ ಹಾಗೇ ನಿಂತುಬಿಟ್ಟಿದೆ. ನಂತರ ರಂಗಭೂಮಿಯಲ್ಲಿ ನಿರತನಾದಾಗ ಇನ್ನೊಂದು ಕಾರ್ನಾಡ್ ನನಗೆ ತೆರೆದುಕೊಂಡರು, ಕನ್ನಡದಲ್ಲಿ ಯಾರು ಈಗ ಅದ್ಭುತ ನಾಟಕ ರಚನಕಾರ? ಓದೇಬಿಡೋಣ… ಎಂದು ಶ್ರೀರಂಗ, ಭಾಸ, ಕೈಲಾಸಂ ಓದಿದ್ದ ನಾನು ಅಬ್ಬರಿಸಿ ಓದಲು ಶುರುವಿಟ್ಟಿದ್ದೆ. ಯಯಾತಿಯನ್ನೇ ಮೊದಲು ಓದಿದೆ, ತುಘಲಕ್ ಇಳಿಸಿಕೊಂಡೆ, ಹಯವದನದಿಂದಿಡಿದು ಎಲ್ಲವನ್ನೂ ನುಂಗಿದೆ (ಆಸ್ವಾದಿಸಿರಲಿಲ್ಲ) ಆಗಿನ್ನೂ ನಟನಾಗಿದ್ದ, ಒಂದೆರೆಡು ಪೀಚು ನಾಟಕ ಬರೆದು ಪ್ರದರ್ಶಿಸಿದ್ದ ನಾನು, ಅವನ್ನೆಲ್ಲಾ ಮೆಚ್ಚಿದ್ದರೂ, ಕಷ್ಟಪಟ್ಟು ನಾನು ಹುಡುಕಿದ ತಪ್ಪುಗಳನ್ನು ಅವರ ಮೇಲೆ ಎರಚಬೇಕು ಎಂದು ತುದಿಗಾಲಲ್ಲಿ ನಿಂತಿದ್ದೆ…
ಒಡಕಲು ಬಿಂಬ ನಾಟಕದ ಮೊದ ಮೊದಲ ಪ್ರದರ್ಶನ ರಂಗಶಂಕರದಲ್ಲಿ…
ಅಂದು ನಾಟಕ ಮುಗಿದಮೇಲೆ, ಕಾರ್ನಾಡರು ಅಲ್ಲೇ ಆವರಣದಲ್ಲಿ ಯಾರಿಗೋ ಬಲು ಉಲ್ಲಾಸದಲ್ಲಿ ಏನೋ ಹೇಳುತಿದ್ದರು. ನನಗೆ ನಾಟಕ ಇಷ್ಟವಾಗಿರಲಿಲ್ಲ, ಸ್ನೇಹಿತರ ಮಾತು ಕಡಿದು, ಅವರ ಮಾತುಕತೆಯಲ್ಲಿ ನಾನು ತಲೆ ತೂರಿಸಿ ನಿಂತೆ, ಕಾರ್ನಾಡ್ ಗಮನಿಸಿದರು ಕಣ್ಣು ತಿರುಗಿಸಲಿಲ್ಲ, ಕಾರ್ನಾಡರ ಮಾತು ಮುಗಿಯಿತು ಎಂದ ತಕ್ಷಣ ನಾನು ಮಾತನಾಡಲು ಶುರುವಿಟ್ಟೆ, ಕಾರ್ನಾಡರ ಮುಖ ನನ್ನ ಕಡೆಗಿತ್ತು. ನನ್ನ ಓದಿನ ಅಷ್ಟೂ ಸಾಮಗ್ರಿಯನ್ನು ಅವರ ಮುಂದಿಟ್ಟು, ನಿಮ್ಮ ಹಳೇ ನಾಟಕಗಳ ಸೌಷ್ಠವಕ್ಕೂ ಇದಕ್ಕೂ ಅಜಗಜಾಂತರ, ಇದೊಂದು ಸಪ್ಪೆ, ಸಾಮಾನ್ಯ ಭಾಷೆಯಲ್ಲಿ ಹೇಳಬೇಕೆಂದರೆ ಡಬ್ಬಾ ನಾಟಕ ಎಂದುಬಿಟ್ಟೆ. ಪೂರ್ಣ ಪಾಠ ನೆನಪಿಲ್ಲ, ಆದರೆ ನಾನು ‘ಡಬ್ಬಾ’ ಎಂದಾಗ ಕಾರ್ನಾಡರು ನಕ್ಕಿದ್ದು ಮಾತ್ರ ನೆನಪಿದೆ! ಅವರು ನನಗೆ ಪ್ರತಿಕ್ರಿಯಿಸಲೇ ಇಲ್ಲ. ಮುಖತಪ್ಪಿಸಿ ಹೋಗೇಬಿಟ್ಟರು. ಆಗ ಬಲವಾದ ಕೋಪ ನನಗೆ ಬಂದಿದ್ದು ನಿಜ, ಆದರೆ ತದನಂತರ ಎಷ್ಟೋ ದಿನ ನನ್ನ ಅರ್ಹತೆ ಏನು? ಎಂದು ಬಹಳವಾಗಿ ಕಾಡಿ, ನನ್ನ ದುಡುಕಿನ ಬಗ್ಗೆ ಪಶ್ಚಾತಾಪ ಮೂಡಿಬಿಟ್ಟಿತು. ಆದರೆ ಕಾರ್ನಾಡ್ ಗುಣಗ್ರಾಹಿ ಎಂಬುದು ನೆನಪಿರಲಿ, ನನ್ನ ನಾಟಕಗಳಿಗೆ ಲೈಟಿಂಗ್ ಮಾಡುತ್ತಿದ್ದ ಮುಸ್ತಾಫ ಅವರು ರಂಗಶಂಕರ ನಾಟಕದ ಪ್ರೊಡಕ್ಷನ್ನಿಗೂ ಕೆಲಸ ಮಾಡುತ್ತಿದ್ದರು (ಮುಸ್ತಾಫ ಈಗ ಬದುಕಿಲ್ಲ, ಕಾರು ಅಪಘಾತದಲ್ಲಿ ತೀರಿಕೊಂಡರು. ಪ್ರತಿಭಾನ್ವಿತ ಬೆಳಕು ವಿನ್ಯಾಸಕನನ್ನು ನಾವು ಕಳೆದುಕೊಂಡೆವು). ಅವರ ಜೊತೆಯಲ್ಲಿರುವಾಗ ಪುನಃ ಕಾರ್ನಾಡರ ಮುಂದೆ ಮಾತಿಗೆ ನಿಲ್ಲುವ ಅವಕಾಶಗಳು ಬಂದವು. ನನ್ನ ನೆನಪು ಅವರಿಗೆ ಬಹಳಿತ್ತು “ಒಡಕಲು ಬಿಂಬ ನಿನಗೆ ಇಷ್ಟ ಆಗಿಲ್ಲ ತಾನೆ ಮುಂದೆ ಹೇಳು” ಎಂದು ಒಂದೇ ಮಾತಿಗೆ ನನ್ನನ್ನು ತೆಗೆದಿದ್ದರು, ಆ ಭೇಟಿಯಲ್ಲಿ ನಾನು ಮೃದುವಾದೆ, ನಾನು ಅವರ ನಾಟಕಗಳ ಬಗ್ಗೆ ಕೊಂಕು ಮಾತಾಡುವುದು ಅವರಿಗೆ ಇಷ್ಟವಾಗಿತ್ತು ಎಂದು ಕಾಣುತ್ತೆ, ಪ್ರತಿ ಬಾರಿ ‘ಅಯ್ತ್, ಏನು ಹೇಳಬೇಕಂತಿದ್ದಿ ಅದು ಹೇಳು’ ಎಂದು ಹೊಗಳಿಕೆಯನ್ನು ಬಲವಾಗಿ ನಿರ್ಲಕ್ಷಿಸುತ್ತಿದ್ದರು. ಅಂದು ಜೆಪಿ ನಗರದ ಅವರ ಮನೆಯಲ್ಲಿ ‘ತಲೆದಂಡ’ ನಾಟಕದ ಬಗ್ಗೆ ಆದ ಚರ್ಚೆ ನನಗಿನ್ನೂ ನೆನಪಿದೆ, ಎಲ್ಲೋ ಹೊರಟವರು, ನಾನು ಬಂದಿದ್ದು ನೋಡಿ, ಅಲ್ಲೇ ಅವರ ಮನೆಯ ಈಚೆ ಬೆಂಚಿನಲ್ಲಿ ಕೂತು ಚರ್ಚೆಗೆ ಕುಳಿತರು. ತಲೆದಂಡ ನಾಟಕದ ಕೊನೆಯ ದೃಶ್ಯದಲ್ಲಿ ಸೋವಿದೇವನ ಆಂತರ್ಯವನ್ನು ನಾನು ವಿವರಿಸಿದೆ, ಅದು ಈಗಲೂ ನನಗೆ ಬಹಳ ಕಾಡುವ ದೃಶ್ಯ. ‘ಇದು ಹೊಳೆದಿದ್ದಿಲ್ಲ ನೋಡು’ ಎಂದು ಅವರು ಪಿಟಿಪಿಟಿ ಹೇಳಿದರು. ಬಹುಶಃ ಅಂದು ಅವರು ನನ್ನನ್ನು ಗಂಭೀರವಾಗಿ ಪರಿಗಣಿಸಿದರು ಎನ್ನಿಸುತ್ತೆ. ನನ್ನ ಎರಡನೇ ನಾಟಕ ಪುರಹರವನ್ನು ಅವರು ಓದಬೇಕು ಮತ್ತು ನೋಡಬೇಕು ಎಂಬುದು ನನ್ನ ಆಸೆಯಾಗಿತ್ತು. ರಂಗಶಂಕರ ಪ್ರದರ್ಶನಕ್ಕೂ ಮುನ್ನವೇ ನಾನು ಸ್ಕ್ರಿಪ್ಟ್ ತಲುಪಿಸಿದ್ದೆ. ಅವರು ಪುನಃ ಕಾಲ್ ಏನು ಮಾಡಿರಲಿಲ್ಲ, ಮಾಡುವ ಪೈಕಿಯೂ ಅವರಲ್ಲ! ಅವರ ಮುನಿಸು, ಕಾಲ್ ಕುಕ್ಕುವ ಅಭ್ಯಾಸ ಹತ್ತಿರದವರಿಗೆ ತಿಳಿದೇ ಇರುತ್ತದೆ. ಹೋಗಲಿ ನಾಟಕಕ್ಕಾದರು ಬರಲಿ ಎಂದು ಅವರ ಮನೆಗೆ ಆಮಂತ್ರಣ ನೀಡಲು ಹೋಗಿದ್ದೆ, ಅಂದು ಬಾಗಿಲು ತೆರೆದದ್ದು ರಘು, ಕಾರ್ನಾಡ್ ಒಳಗಿದ್ದರು… ರಘು ಈಚೆ ಹೊರಟರು ಅನ್ನಿಸುತ್ತೆ. ಅದಾಗಲೇ ಸಮಯವಾಗಿತ್ತು, ಕಾರ್ನಾಡರ ಕಣ್ಣು ಕೆಂಪಗಾಗಿತ್ತು! ‘ಬನ್ನಿ ನಾಟಕಕ್ಕೆ’ ಎಂದು ನಾನು ಕರೆದೆ… ‘ನಾನು ಬರಲ್ಲ, ಒಳ್ಳೇದು ನಾಟಕ ಚೆನ್ನಾಗಿ ಆಗಲಿ’ ಎಂದುಬಿಟ್ಟರು, ಆಯಪ್ಪನೇ ಹಠ ಎಂದರೆ ನಾನಿನ್ನೂ ಚಿಕ್ಕವ ಇನ್ನೂ ಹಠ, ‘ನಾಟಕ ಚೆನ್ನಾಗಿಲ್ಲವ? ಓದಿದರಾ?’ ಎಂದೆ. ‘ನಿನ್ನ ನಾಟಕದ ಆಬ್ಜೆಕ್ಟ್ ಚೆನ್ನಾಗಿದೆ, ಇಂಟೆಂಟ್ ಸರಿ ಇಲ್ಲ’ ಎಂದವರೇ ಬಾಗಿಲ ದಾರಿಯನ್ನು ಅವಸರದಲ್ಲಿ ತೋರಿಸಿದರು.
ನಾನು ನಾಟಕಕಾರನಿಂದ ಕಾದಂಬರಿಕಾರನಾದ ಮೇಲೆ…
ನನ್ನ ಮೊದಲ ಕಾದಂಬರಿಯನ್ನು ಅವರಿಗೆ ಕಳಿಸಲು ಫೋನ್ ಮಾಡಿದಾಗಲೂ ಅವರು ಹೀಗೇ ವರ್ತಿಸಿದ್ದರು. ಬಹುಶಃ ಇವನು ಗುಂಪಿಗೆ ಸೇರದ ಪದ ಎಂದು ನನ್ನನ್ನು ನಿರ್ಣಯಿಸಿದ್ದರು ಅನ್ನಿಸುತ್ತದೆ. ನಾಟಕಗಳ ನಂತರ ಆಗುವ ಪಾನಪಾರ್ಟಿಗೂ ನಾನು ಗುಂಪಿಗೆ ಸೇರದ ಪದವೇ ಆಗಿದ್ದರಿಂದ! ಎಷ್ಟೋ ಆತ್ಮೀಯ ಕ್ಷಣ ನನಗೆ ಸಿಗಲಿಲ್ಲ ಎನ್ನಬಹುದು. ಬೇರೆ ಸಮಯದಲ್ಲಿ ಸಿಕ್ಕಾಗ ನಮ್ಮ ತಿಕ್ಕಾಟ-ಮಾತು ಇದ್ದೇ ಇರುತ್ತಿದ್ದವು. ‘ವಂಶವೃಕ್ಷ ಕಾದಂಬರಿ ಅಂಥಾ ಗಟ್ಟಿ ಕೃತಿ ಏನಲ್ಲ’ ಎಂದು ನನ್ನ ಮುಂದೆಯೇ ಅಂದಾಗ ನಾನು ‘ಮತ್ತೇಕೆ ನಿರ್ದೇಶನ ಒಪ್ಪಿಕೊಂಡಿರಿ? ನೀವು ಆಗ ಚಿಕ್ಕವರೇನಲ್ಲ’ ಎಂದಿದ್ದೆ, ಆ ಮಾತು ಕೊನೆಗೆ ಎಲ್ಲೆಲ್ಲೋ ಹೋಗಿ ‘ಸಂಸ್ಕಾರ ಸಿನಿಮಾ ಎರೋಟಿಕ್ ದೃಶ್ಯದಿಂದ ಗೆದ್ದಿತಷ್ಟೇ’ ಎನ್ನುವ ಹಂತಕ್ಕೆ ಬಂದು ಅನಂತಮೂರ್ತಿಯವರ ಬುಡಕ್ಕೂ ಕಾರ್ನಾಡರು ಉರಿ ಮುಟ್ಟಿಸಿದ್ದರು. ಇದನ್ನು ನಾನು ಭೈರಪ್ಪನವರ ಹತ್ತಿರ ಚರ್ಚಿಸಿದ್ದೂ ಇದೆ, ಅವರ ಕಡೆಯಿಂದ ಈ ಬಗ್ಗೆ ಒಂದಷ್ಟು ವಿವರಣೆಯೂ ಬಂದಿತ್ತು, ಅದೆಲ್ಲಾ ಈಗ ಬೇಡ. ಆದರೆ ಒಂದು ಮಾತಿಗೆ ನಾನೇ ಪ್ರಮಾಣ, ಎಂಥಾ ಟೀಕೆಯ ಉತ್ತುಂಗಕ್ಕೆ ಹೋದರೂ, ಎಂಥಾ ಖಾಸಗೀ ಮಾತಲ್ಲೂ ಭೈರಪ್ಪನವರಾಗಲಿ, ಕಾರ್ನಾಡರಾಗಲಿ ಒಬ್ಬರ ಬಗ್ಗೆ ಇನ್ನೊಬ್ಬರು ಲಘುವಾಗಿ ಮಾತಾಡಿದ್ದಿಲ್ಲ. ಸಾಹಿತ್ಯದಾಚೆಗೂ ಅವರಿಬ್ಬರ ವ್ಯಕ್ತಿತ್ವ ಮೆಚ್ಚಲು ನನಗಿಷ್ಟು ಸಾಕು. ಅದೇಕೋ ನನ್ನ ಅವರ ಭೇಟಿ ಎಲ್ಲಾದರು ಮುಖಕ್ಕೆ ಸಿಕ್ಕರಷ್ಟೇ ಎಂಬಂತಾಯಿತು. ಬೆಂಗಳೂರು ಲಿಟ್ರೇಚರ್ ಫೆಸ್ಟಿವಲ್ಲಲ್ಲಿ ಎಸ್ ಜಿ ವಾಸುದೇವ್ ಅವರ ಜೊತೆ ಕುಳಿತು ಮಾಡಿದ ಗೋಷ್ಠಿಯಲ್ಲಿ ಅನಂತಮೂರ್ತಿಯವರ ಬಗ್ಗೆ ಕೆಳಗಿಂದ ಮೇಲಿನ ತನಕ ಅವರನ್ನು ವಿಮರ್ಶಿಸಿದ ಅವರ ಕಾಠಿಣ್ಯಕ್ಕೆ ಸಾಕ್ಷಿಯೂ ಆಗಿದ್ದೆ. ಕಾರ್ನಾಡರು ಹಾಗೆಯೇ ಯಾರನ್ನೂ ಬಿಡರು… ಹಾಗೇ ನಾನು ಅವರನ್ನೂ ಬಿಡುತ್ತಿರಲಿಲ್ಲ. ಬೆಂಗಳೂರಿನ ಆಂತರ್ಯದ ಬಗ್ಗೆ ಕಾದಂಬರಿಯೇ ಬಂದಿಲ್ಲ ಎಂದಾಗ, ಫೋನ್ ಮಾಡಿ ‘ಕಳಿಸಿಕೊಡಲ ಓದುತ್ತೀರಾ’ ಎಂದು ತಾಕೀತು ಮಾಡಿದ್ದೆ. ಎಂ ಜಿ ರೋಡಿನಲ್ಲಿ ಕುಳಿತು ‘ಬಾರ್ ಡ್ಯಾನ್ಸರ್ ಬೇಕು, ಪಬ್ ಕಲ್ಚರ್ ಉಳಿಯಬೇಕು’ ಎಂದು ಅವರು ಮಾಡಿದ ಧರಣಿಯನ್ನು ನೆನೆದು ನಗಾಡಿದ್ದೇನೆ. ಆದರೆ ಅವರು ಇದನ್ನೆಲ್ಲಾ ನಾನು ಯಾವುದೇ ಕಲ್ಮಶವಿಲ್ಲದೇ ನನ್ನ ಅಂತರಾತ್ಮಕ್ಕೆ ಬದ್ಧನಾಗಿ ಮಾಡಿದ್ದೇನೆ ಎಂಬಂತೆಯೇ ಸಮರ್ಥಿಸುತ್ತಿದ್ದರು. ಅದು ನಿಜವೂ ಹೌದು.
ಅವರ ಬರೆಹದಿಂದ ಪಡೆದದ್ದು, ಕೊನೆಗಾಲದಲ್ಲಿ ಮಾತಾಡಿದ್ದು…
ಮುಖ್ಯವಾಗಿ ಗಮನಿಸಬೇಕಾದ ಅಂಶ, ನಾಟಕ ಎಂದರೆ ಸಂಭಾಷಣೆಯ ರಾಶಿ ಎಂಬಂಥ ಮನಸ್ಥಿತಿಯನ್ನು ಕಾರ್ನಾಡ್ ತಮ್ಮ ರಚನಾ ಕೌಶಲ್ಯದಿಂದ ತೆಗೆದರು. ನಾಟಕ ಕಟ್ಟುವ ಬಗೆಯನ್ನು ಅವರಿಂದ ಕಲಿಯಬೇಕು. ಸಂಸ್ಕೃತ ನಾಟಕದಿಂದ ಅವರು ಪಡೆದದ್ದು ಬಹಳ. ಯಯಾತಿ ನಾಟಕವನ್ನೇ ತೆಗೆದುಕೊಂಡರೆ ಅದರ ಪೂರ್ವರಂಗ, ಅಂಕ ವಿಭಜನೆ, ಪಾತ್ರ ಪೋಷಣೆ, ಎರಡೆರೆಡೇ ಪಾತ್ರದ ಘಟನೆ ಎಲ್ಲಾ ಸಂಸ್ಕೃತ ನಾಟಕದ ಮಾದರಿ. ಹಯವದನವನ್ನೇ ತೆಗೆದುಕೊಂಡರೆ ಥಾಮನ್ ಮನ್ನನ ‘ಟ್ರಾನ್ಸ್ಪೋಸ್ಡ್ ಹೆಡ್ಸ್’ ಇಂದ ಪ್ರಭಾವಿತವಾದರು ವಾತಾವರಣ ನಿರ್ಮಾಣ, ಕ್ಷೇತ್ರ ಆಯ್ಕೆ, ಪಾತ್ರ ಚಾರಿತ್ರ್ಯ, ಭಾಸನ, ಕಾಳಿದಾಸನ ನಾಟಕಗಳಿಂದ ತೆಗೆದುಕೊಂಡಿದ್ದಾರೆ. ಕೀರ್ತಿನಾಥ ಕುರ್ತಕೋಟಿಯವರಿಂದ ಸಂಸ್ಕೃತ ನಾಟಕಗಳ ಬಗ್ಗೆ ಸಾಕಷ್ಟು ತಿಳಿದೆ ಎಂದು ಅವರೇ ಹೇಳಿದ್ದಾರೆ. ಹೆಣ್ಣಿನ ಆಂತರ್ಯವನ್ನ ರಂಗದ ಮೇಲೆ ಕಟ್ಟಲು ಸಾಧ್ಯವಿಲ್ಲ ಎಂಬಂಥ ದುರ್ಭಿಕ್ಷ ಕಾಲದಲ್ಲಿ, ಹೆಣ್ಣಿನ ಪಾತ್ರವನ್ನು ಬೃಹತ್ ಪ್ರತಿಮೆಯಾಗಿ ಅವರು ಬಳಸಿದರು, ಯಯಾತಿಯಿಂದ – ರಾಕ್ಷಸ ತಂಗಡಿವರೆಗೂ ಇದನ್ನು ಗಮನಿಸಬಹುದು. “ಮನುಷ್ಯನ ಜೀವನ ಪಂಚಾಗದ ಮೇಲೆ ನಡೆಯುವುದಿಲ್ಲ, ನಾಡಿಯ ಸ್ಪಂದನದ ಮೇಲೆ ನಡೆಯುತ್ತದೆ” ಯಯಾತಿಯ ಚಿತ್ರಲೇಖೆಯ ಮಾತು, “ಬದುಕಲಿಕ್ಕೊಂದು ಭ್ರಾಂತಿ ಬೇಕಾಗಿರತದೆ, ಸುಲ್ತಾನರಿಗೂ ಇರತದೆ, ಪ್ರಜೆಗಳಿಗೂ ಇರತದೆ” ಎಂಬ ರಾಕ್ಷಸ ತಂಗಡಿಯ ಬೇಗಮ್ಮಳ ಮಾತು, ಇಂಥಾ ಪ್ರವಾದಿ ವಾಕ್ಯವನ್ನು ಅವರು ದೊಡ್ಡ, ಮುಖ್ಯ (ಗಂಡು) ಪಾತ್ರದಲ್ಲಿ ಹೇಳಿಸದೇ ಸಾಮಾನ್ಯ ಪಾತ್ರದಲ್ಲಿ ಹೇಳಿಸುತ್ತಾರೆ. ಮತ್ತು ಹೆಣ್ಣಿನ ಮಾತಲ್ಲಿ ಅದಕ್ಕೆ ಅರ್ಥ ಕೊಡಿಸುತ್ತಾರೆ. ಮದುವೆಯ ಆಲ್ಬಮ್ ನಾಟಕದಲ್ಲಿ ಈ ಸೂಕ್ಷ್ಮಗಳ ಒಟ್ಟು ರೂಪ ಇದೆ. ನಾನು ಒಂದು ನಾಟಕ ಬರೆಯುವ ಮುನ್ನ ಕಾರ್ನಾಡರ ಯಾವುದಾದರೂ ಒಂದು ನಾಟಕವನ್ನು ಓದುತ್ತೇನೆ, ವಸ್ತು ಸಾಮಾಗ್ರಿ ದೋಚಲಲ್ಲ, ರಸಸ್ಥಾನ ಹೇಗೆ ಹಿಡಿದಿದ್ದಾರೆ ಎಂದು ತಿಳಿಯಲು, ಒಬ್ಬ ನಟನಿಗೆ ಮಾತ್ರ ರಸಸ್ಥಾನದ ತಿಳುವಳಿಕೆ ಇರುತ್ತದೆ. ಕಾರ್ನಾಡ್ ಒಬ್ಬ ಪ್ರಬುದ್ಧ ನಟರು ಆಗಿದ್ದರಿಂದಲೇ ಅವರು ಉತ್ತಮ ನಾಟಕಕಾರರಾದರು ಎಂಬುದು ನನ್ನ ಸ್ಪಷ್ಟೋಕ್ತಿ, ಇದನ್ನು ಅಶ್ವಘೋಷನಿಗೂ, ಶೇಕ್ಸಪಿಯರನಿಗೂ ಅನ್ವಯಿಸಿಕೊಳ್ಳಬಹುದು. ಮತ್ತು ಬಿ ವಿ ಕಾರಂತ, ಅಲ್ಕಾಜಿ, ಸತ್ಯದೇವ್ ದುಬೆಯಂಥ ನಿರ್ದೇಶಕರು ಸಿಕ್ಕಿದ್ದರಿಂದ ಕಾರ್ನಾಡರ ನಾಟಕಗಳು ಹೊಳಪನ್ನು ಕಂಡವು ಎಂಬುದೂ ಸತ್ಯವೇ.
ಒಬ್ಬ ಲೇಖಕನ ಹಳೇ ಕೃತಿಗಳು ತಾಜಾವಾಗಿಯೂ, ನಂತರದ ಕೃತಿಗಳು ಒಣಗಿದ ಕೊರಡಿನಂತೆಯೂ, ಕೇವಲ ತನ್ನ ಪೂರ್ವ ಪ್ರತಿಷ್ಠೆಯಿಂದ ಉಸಿರಾಡುವಂತೆಯೂ ಇರುತ್ತದೆ, ಕೆಲವೊಬ್ಬರು ಅದಕ್ಕೆ ಅಪವಾದವಾಗುತ್ತಾರೆ, ಕಾರ್ನಾಡರು ರಾಕ್ಷಸ ತಂಗಡಿಯ ಮೂಲಕ ಅದನ್ನು ಸಾಧಿಸಿದರು. ‘ಟಿಪ್ಪು ಸುಲ್ತಾನ ಕಂಡ ಕನಸು’ ಎಂಬ ಯಾರದ್ದೋ ದರ್ದಿಗೆ ಬಿದ್ದು ಬರೆದ ನಾಟಕದಿಂದ ಒಡಕಲು ಬಿಂಬದ ತನಕ, ಕಾರ್ನಾಡ್ ಕಳೆದೋದರು ಎಂಬಂತೆ ನನಗನ್ನಿಸಿತ್ತು, ‘ಆಡಾಡತಾ ಅಯುಷ್ಯ’ ಅವರಿಂದ ಪಡೆದ ದಿನವೂ “ನಾಟಕ ಬರೆಯಿರಿ, ನಾಟಕ” ಎಂದು ನಾನು ಹಪಹಪಿಸಿದ್ದೆ. ರಾಕ್ಷಸ ತಂಗಡಿ ಬಂದ ದಿನವೇ ಆ ದಾಹ ನೀಗಿಸಿಕೊಂಡು, ಉದ್ದ ವಿಮರ್ಶೆಯನ್ನು ಸಾಮಾಜಿಕ ತಾಣದಲ್ಲೇ ಪ್ರಕಟಿಸಿದ್ದೆ, ಕಾರ್ನಾಡರ ಪ್ರತಿಕ್ರಿಯೆಯ ತುಣುಕನ್ನೂ ನಾನು ಸಾಮಾಜಿಕ ತಾಣದಲ್ಲೇ ನೀಡಿದ್ದೆ. ಈ ಮೇಲ್ ಅಲ್ಲಿ ನಡೆದ ಚರ್ಚೆ ಹದ್ನಾಲ್ಕು ಹದಿನೈದು ಮೇಲಿನ ಥ್ರೆಡ್ ಆಗಿ ರಾತ್ರಿಯ ತನಕ ನಡೆಯಿತು. ಇದುವರೆಗೂ ಯಾವತ್ತೂ ಅವರು ಅಷ್ಟು ಖುಷಿಯಾಗಿದ್ದು ನಾನು ಕಂಡಿರಲಿಲ್ಲ, ಆಗ ತಾನೇ ನಾನು ವಸುಂಧರಾ ಫಿಲಿಯೋಜ (ಫ್ರಾನ್ಸ್ ಅಲ್ಲಿ ನೆಲೆಸಿರುವ ಕನ್ನಡ ಇತಿಹಾಸಕಾರರು) ಅವರನ್ನು ಭೇಟಿಯಾಗಿದ್ದೆ, ಅವರಿಂದ ಪಡೆದ ಹೊಳಹುಗಳನ್ನು ಅವರಿಗೆ ಹೇಳಿದೆ. ಈ ನಾಟಕ ನನ್ನನ್ನು ಮತ್ತೆ ಬದುಕಿಸಿತು ಎಂಬಂಥ ಧ್ವನಿ ಮಾರನೆಯ ದಿನ ಅವರೊಡನೆ ಫೋನಿನಲ್ಲಿ ಮಾತಾಡಿದಾಗ ನನಗೆ ಕೇಳಿತು. “ವಸುಂಧರಾ ಅವರ ಅಣ್ಣಾ, ನನ್ನ ಬ್ಯಾಚ್’ಮೇಟು, ಧಾರವಾಡ ಕರ್ನಾಟಕ ಕಾಲೇಜು, ಅವರು ಇದ್ದಾರ? ಫ್ರಾನ್ಸಿಗೆ ಹೊರಟರ? ಮಾತಾಡಬೇಕಲ್ಲ” ಎಂದು ಅವರ ನಂಬರ್ ನನ್ನ ಬಳಿ ಪಡೆದರು. ಇಬ್ಬರಿಗೂ ಆರೋಗ್ಯ ಸ್ವಲ್ಪ ವೈಪರೀತ್ಯವಾದ್ದರಿಂದ ಭೇಟಿ ಆಗಲಿಲ್ಲ. “ಬನ್ನಿ ಮನೆಗೇ… ನಿಮ್ಮನ್ನ ಏನಂಥ ಕರೀಬೇಕು ಕರಣಂ ಅನ್ನಲೋ, ಪವನ್ ಅನ್ನಲೋ, ಪ್ರಸಾದ್ ಅನ್ನಲೋ? ಎಂದು ಛೇಡಿಸಿದರು” ನನಗೆ ಅವರು ಮೊದಲಿನಂತೆ ‘ಏನ್ ಹೇಳಬೇಕಂತಿದ್ದೀ ಅದು ಹೇಳು’ ಎನ್ನುವ ಏಕವಚನ ಬೇಕಿತ್ತು.
ಕಾರ್ನಾಡರು ತೀರಿಕೊಂಡ ದಿನ, ನನ್ನ ಪ್ರಕಾಶಕರು ಕರೆ ಮಾಡಿದರು, ನಾನು ದಿನಪತ್ರಿಕೆ ಓದುತ್ತಿದ್ದೆ, “ಕಾರ್ನಾಡರು ಹೋಗಿಬಿಟ್ಟರಂತೆ” ಎಂದರು, ಸಾಮಾನ್ಯ ಏನಾದರು ನಾನು ಪ್ರತಿಕ್ರಿಯಿಸುತ್ತೀನಿ, ‘ನಾನು ಆಹ್, ಎಲ್ಲಿ, ಯಾವಾಗ?’ ಎಂದಷ್ಟೇ ಅಂದವನು ಕುಸಿದು ಕೂತೆ. ಅವರ ಸಾವು ಅಷ್ಟು ನನ್ನನ್ನು ಕೆಳಗೆ ದಬ್ಬಿ ನೋಯಿಸುತ್ತದೆ ಎಂದು ನಾನು ಎಣಿಸಿರಲಿಲ್ಲ, ಕಾರ್ನಾಡರು ನನ್ನ ಮನೋಲೋಕದಲ್ಲಿ ನೆಲೆಸಿಬಿಟ್ಟಿದ್ದರು ಎಂಬುದು ಸ್ಪಷ್ಟವಾಯಿತು. ಅಂಥವನು, ಇಂಥವನು, ಹಾಗಿದ್ದನಂತೆ, ಹೀಗಿದ್ದನಂತೆ ಎಂಬುದೆಲ್ಲಾ ವಾಚ್ಯ, ಬೇರೋಬ್ಬರ ಯೋಗ್ಯತೆ ಅಳೆಯುವ ಮುನ್ನ ನಮ್ಮ ಯೋಗ್ಯತೆಯ ಅಳತೆ ನಮಗೆ ಗೊತ್ತಿರಬೇಕು. ಕಾರ್ನಾಡರು ತಾನು ಸಭ್ಯ ಎಂದು ಘೋಷಿಸಿಕೊಂಡಿಲ್ಲ, ಆಡಾಡುತಾ ಆಯುಷ್ಯ ಓದಿದವರಿಗೆ ಅವರ ನಿರ್ಭಿಡೆ ತಿಳಿದೇ ಇರುತ್ತದೆ, ಹಾಗೆಂದು ಅವರು ನೀಚರಂತೂ ಅಲ್ಲ, ಅಷ್ಟಾಗಿ ನಮ್ಮನ್ನು ನಾವು ವಿಮರ್ಶಿಸಿಕೊಂಡರೆ ನಾವೂ ನಿಜದಲ್ಲಿ ಅಷ್ಟು ಸಭ್ಯರಲ್ಲ!
ನನ್ನಷ್ಟು ಅವರನ್ನು ಟೀಕೆ ಮಾಡಿದವರಿಲ್ಲ, ನನ್ನ ನಾಟಕದಲ್ಲೇ ಅವರ ಪಾತ್ರ ಸೃಷ್ಟಿಸಿ ವಿಡಂಬನೆ ಮಾಡಿದ್ದಿದೆ, ಛೇಡಿಸಿದ್ದಿದೆ, ಕೊಂಕಾಡಿದ್ದಿದೆ, ಆದರೆ ಅವೆಲ್ಲವೂ ವಿಷಯಾಧಾರಿತ. ಇಷ್ಟಾಗಿ ಕಾರ್ನಾಡರಂಥ ಪ್ರತಿಭೆ ಕನ್ನಡದಲ್ಲಿ ಬರೆದರಲ್ಲ! ಅಬ್ಬಾ ಎಂದು ಸದಾ ನಾನು ಉಸಿರು ತೆಗೆದುಕೊಳ್ಳುತ್ತೇನೆ.
ಲೇಖಕರು ಬರೆದ ಕಾರ್ನಾಡರ ಕೊನೆಯ ನಾಟಕ ‘ರಾಕ್ಷಸ ತಂಗಡಿ’ ಯ ಮೇಲಿನ ವಿಮರ್ಶೆಯನ್ನು ಇಲ್ಲಿ ನೀವು ಓದಬಹುದು .
ಕಾದಂಬರಿಕಾರರಾಗಿ ಗುರುತಿಸಿಕೊಂಡಿರುವ ಯುವ ಲೇಖಕ ಕರಣಂ ಪವನ್ ಪ್ರಸಾದ್, ತಮ್ಮ ಮೊದಲ ಕಾದಂಬರಿ ಕರ್ಮ ದಿಂದ ಓದುಗರ ಮನ್ನಣೆ ಗಳಿಸಿದವರು. ನನ್ನಿ ಮತ್ತು ಗ್ರಸ್ತ ಅವರ ಇನ್ನೆರಡು ಕಾದಂಬರಿಗಳು. ಬೀದಿ ಬಿಂಬ ರಂಗದ ತುಂಬ ಮತ್ತು ಪುರಹರ ಅವರೆರಡು ನಾಟಕ ಕೃತಿಗಳು.
ಈ ಬರಹದ ಟೈಟಲ್ಲು: “ಗಿರೀಶ್ ಕಾರ್ನಾಡ್- ಕರಣಂ ಪವನ್ ಪ್ರಸಾದರ ಒಬಿಚುಯರಿ” ಅಂತಿರಬೇಕಿತ್ತು. ತೀರಿದವರನ್ನು ನೆನಪಿಸಿಕೊಳ್ಳುವ ನೆಪದಲ್ಲಿ ತನ್ನನ್ನೇ ನೆನೆಸಿಕೊಂಡಿದೆ ಈ ಬರಹ. (“ನೆನೆಸಿಕೊಂಡಿದೆ” ಎನ್ನುವುದರಲ್ಲಿರುವ ಶ್ಲೇಷೆಯನ್ನು, ತಾತ್ವಿಕರನ್ನಾಗಿಯೂ ತಮ್ಮನ್ನು ಕಾಣಿಸಿಕೊಳ್ಳುವ ಹಾಗೆ ಬರೆಯುವ ಕರಣಂ ರಿಗೆ ಹೇಳಬೇಕಿಲ್ಲ). ರವಿ ಬೆಳಗೆರೆಗೆ ಈ ಖಾಯಿಲೆಯಿತ್ತು. “ಮೇನಕಾ ಗಾಂಧಿ ಅನ್ನುತ್ತಾರೆ, ಆದ್ರೆ ಅದು ಮನೇಕಾ ಗಾಂಧಿ ಅಂತ ಅನೇಕರಿಗೆ ಗೊತ್ತಿಲ್ಲ” ಎನ್ನುವ ಥರದ ಛಿಲ್ರೆ ಫ್ಯಾಕ್ಟ್ ಗಳನ್ನು ಬ್ರಹ್ಮಜ್ನಾನದಂತೆ ಬರೆಯುವ ಹಾಗಿರುತ್ತದೆ ಇವರ ಫೇಸ್-ಬುಕ್ ಪೋಸ್ಟ್ ಗಳು.
ಒಬಿಚುಯರಿ ಕಾರ್ನಾಡರ ಬದಲು ಲೇಖಕರ ಬಗ್ಗೆಯೇ ಹೆಚ್ಚು ಇದ್ದದ್ದರಿಂದ, ಪ್ರತಿಕ್ರಿಯೆಯನ್ನೂ ಅವರ ಬಗ್ಗೆಯೇ ಬರೆಯಬೇಕಾಯಿತು. ಆಲ್ಫ್ರೆಡ್ ನೋಬೆಲ್ ನಿಗೆ ತನ್ನ ಒಬಿಚುಯರಿಯಿಂದ ಜ್ನಾನೋದಯವಾದ ಹಾಗೆ ಎಂಬ ಕಥೆಯಂತೆ ಒಬಿಚುಯರಿ ಬರೆಯುವವರಿಗೂ ಆಗಲಿ.
“ಬೇರೋಬ್ಬರ ಯೋಗ್ಯತೆ ಅಳೆಯುವ ಮುನ್ನ ನಮ್ಮ ಯೋಗ್ಯತೆಯ ಅಳತೆ ನಮಗೆ ಗೊತ್ತಿರಬೇಕು.” ಲೇಖನದ ಈ ಮಾತು ಈ ರೀತಿಯ ಬೇನಾಮಿ ಹೆಸರಿನ ಬಹೂದ್ದರರನ್ನು ಗಮನದಲ್ಲಿಟ್ಟೇ ಹೇಳಿದ್ದು. ನಿಮಗೆ ನಿಜವಾಗಲೂ ಲೇಖಕರಿಗೆ ಈ ವಿಚಾರವನ್ನು ಮುಟ್ಟಿಸಬೇಕು ಎಂಬ ಸಹೃದಯ ಕನ್ಸರ್ನ್ ಇದ್ದಿದ್ದರೆ, ಇಷ್ಟು ಕಹಿ ಕುಕ್ಕುತ್ತಿರಲಿಲ್ಲ, ಬಹಳ ದಿನದಿಂದ ಕೂಡಿಟ್ಟು ನನ್ನೆದುರಿಗೆ ಕಕ್ಕಲಾಗದ ಕಹಿಯನ್ನು ಒಂದು ಆವರಣದಲ್ಲಿ ಅವಕಾಶ ಸಿಕ್ಕಿತೆಂದು ಮಾತು ಹರಿಬಿಟ್ಟಿದ್ದೀರಷ್ಟೇ. ನಿಮ್ಮ ತೊಳಲಾಟ ಅರ್ಥವಾಗುತ್ತದೆ. ಹಾಗೆಂದು ನಿಮ್ಮ ಮಾತನ್ನು ಪೂರ್ಣ ನಿರ್ಲಕ್ಷಿಸುವುದಿಲ್ಲ, ಆ ಮಟ್ಟಿಗೆ ನಾನು ಮುಕ್ತ ಚಿಂತಕ (ತಾತ್ತ್ವಿಕವಾಗಿ ನೆನೆಸಿಕೊಳ್ಳುತ್ತಿದ್ದೇನೆ!) ಹ್ಹ ಹ್ಹ. ಹೆಸರಿನೊಂದಿಗೆ ಬನ್ನಿ ಒಂದು ಉತ್ತರದಾಯಿತ್ವ ಏರ್ಪಾಡಾಗುತ್ತದೆ. ಲೇಖನ ಓದಿದ್ದಕ್ಕೆ ಧನ್ಯವಾದ. ಶುಭವಾಗಲಿ.
ಕರಣಂ,
ವಿಚಾರವನ್ನು “ಸಹೃದಯ”ತೆ ಯಲ್ಲೇ ಮುಟ್ಟಿಸಲಾಗಿದೆ. ಸಹೃ-ದಯತೆ ಎಂದರೆ ಓದುಗನ ದಯ ಎಂಬ ಕನ್ನಡದ ನನ್ನ ಸಮಾಸವನ್ನೂ ಒಪ್ಪಿಸಿಕೊಳ್ಳಿ.
ಕಹಿ ಇಲ್ಲ. ಖಂಡಿತ ಇಲ್ಲ..
ಆದರೆ ನಿಮ್ಮ ಭಾಷೆಯ ಬಗ್ಗೆ ಭಯಂಕರ ತಕರಾರಿದೆ. ಕೆಟ್ಟ ಅಹಂಕಾರದ ಭಾಷೆ ನಿಮ್ಮದು. ಅದಕ್ಕೇ “ರವಿ ಬೆಳಗೆರೆ” ಯಂಥ ಕೆಟ್ಟ ಉಪಮೆ ಬಳಸಿದ್ದು.
ಉತ್ತರದಾಯಿತ್ವ ಹೆಸರಿನೊಂದಿಗಷ್ಟೇ ಏರ್ಪಡುವುದಿಲ್ಲ; ಅದೂ ಈ ಕಾಲದಲ್ಲಿ. ಅದು ವಿಚಾರದೊಂದಿಗೆ ಏರ್ಪಡುತ್ತದೆ.
ಇದೇನೇ ಇರಲಿ, ನೀವು ಕಾರ್ನಾಡರ ಬಗ್ಗೆ ಬರೆದದ್ದು ಚೆನ್ನಾಗಿದೆ.
ಈಗಿನ ಕಾಲದ ಬರಹಗಾರರು- ತೇಜಸ್ವಿಯ ಥರ ಹಿಂದಿರದೆ, ಲಂಕೇಶರ ಥರ ಪಕ್ಕಕ್ಕಿರದೆ, ಅನಂತಮೂರ್ತಿಯ ಥರ ಮುಂದಿರದೆ- ನಿಮ್ಮ ಥರ ಬರಹವನ್ನೇ ಬಿಟ್ಟು ಬರಹಗಾರನೇ ಮುಂದಿರುವ ಸೂಪರ್ ಸ್ಟಾರ್ ದರ್ಶನ್ ಥರ ಆಗುತ್ತಿದ್ದೀರಿ ಅನ್ನಿಸುವುದಿಲ್ಲವೇ ನಿಮಗೆ?
ಸಶೇಷ/
ಇದೇ ಸರಳ ಭಾಷೆ, ಸಹೃದಯತೆ ಮೊದಲೇ ತೋರಿದ್ದರೆ… ನನ್ನ ಪ್ರತಿಕ್ರಿಯೆಯೂ ಹಾಗಿರುತ್ತಿರಲಿಲ್ಲ ಅಲ್ಲವೇ? ಈಗಿನ ನಿಮ್ಮ ಅಭಿಪ್ರಾಯ ನಿಜಕ್ಕೂ ಒಬ್ಬ ಬರೆಹಗಾರನು ತನ್ನನ್ನು ತಾನು ವಿಮರ್ಶಿಸಿಕೊಳ್ಳಲು ಅನುವು ಮಾಡಿಕೊಡುವಂಥದ್ದು. ಖಂಡಿತಾ, ಆ ರೀತಿಯ self-aggrandizement ಒಮ್ಮೊಮ್ಮೆ ಅಪ್ರಯತ್ನಪೂರ್ವಕವಾಗಿ ಆಗಿಬಿಡುತ್ತದೆ. ಸಂಪಾದಕರು, ನಿಮ್ಮ ಮೇಲೆ ಅವರ ಪ್ರಭಾವದ ಬಗ್ಗೆ ಬರೆಯಿರಿ ಎಂದು ಕೇಳಿದ್ದರಿಂದ, ಅದು ‘ನಾನು’ ಎಂಬ ಬಿಂದುವಿನ ಸುತ್ತ ಗಿರ್ಕಿ ಹೊಡೆದಿದೆ ಅಷ್ಟೇ. ಈ ಅಹಂಕಾರವು ಅವರ ಪ್ರಭಾವವೇ! ಅದನ್ನು ತಿದ್ದಿಕೊಳ್ಳುವ ಅವಶ್ಯಕತೆ ಇದೆ, ಪರಿಗಣಿಸುತ್ತೇನೆ… ನನ್ನ ಕಾದಂಬರಿ ಓದುಗರಿಗೆ ತಿಳಿದೇ ಇದೆ ನಾನು ಸ್ಟಾರ್’ಗಿರಿ ಮಾಡುವವನಲ್ಲ. ನನ್ನ ಫೋಟೋವನ್ನು ಕೂಡ ಪುಸ್ತಕದ ಮುಖಪುಟದಲ್ಲಿ ಹಾಕೋಲ್ಲ, ಬೇರೆಯವರ ಉದ್ದುದ್ದ ಮುನ್ನುಡಿ, ಕಿರೀಟ ಹಾಕಿಸಿಕೊಳ್ಳಲ್ಲ, ಕೃತಿಯ ಹೆಸರಿಗಿಂತ ನನ್ನದೇ ದೊಡ್ಡ ಹೆಸರು ಹಾಕಿಕೊಳ್ಳಲ್ಲ. ಎಷ್ಟೋ ಓದುಗರು ನನ್ನ ಮುಂದೆ ಬಂದರೂ, ನಾನೇ ಕರಣಂ ಎಂದು ಗುರುತಿಸುವುದಿಲ್ಲ. ಆದರೆ ನನ್ನ ಕಾದಂಬರಿ ಓದಿರುತ್ತಾರೆ, ನನ್ನ ಮುಂದೆಯೇ ಬೈದಿದ್ದಾರೆ, ಹೊಗಳಿದ್ದಾರೆ.
ಒಬ್ಬ ಮನುಷ್ಯನನ್ನು ಫೇಸ್ಬುಕ್ ಪೋಸ್ಟಿನ ಮೂಲಕ ನಿರ್ಧರಿಸುವುದು ಎಷ್ಟು ಪೇಲವ ಅನ್ನಿಸುವುದಿಲ್ಲವೇ? ದೃಷ್ಟಿ ವಿಶಾಲ ಆದಷ್ಟು, ಮನಸ್ಸು ಒಳ್ಳೆಯದನ್ನು ಹೆಚ್ಚು ಗುರುತಿಸುತ್ತದೆ. ಮಿಕ್ಕಂತೆ ತಕರಾರು ಇದ್ದೇ ಇರಲಿ… ಯಾರೂ ಇಲ್ಲಿ ಪರಿಪೂರ್ಣರಲ್ಲ. ನಾನೂ ಸಹ!
ಧನ್ಯವಾದ
ಲೇಖನ ಇಷ್ಟವಾಯಿತು.
ಇಡೀ ವ್ಯಕ್ತಿತ್ವವನ್ನೇ ಅನಾವರಣಗೊಳಿಸಿದೆ .
ನಿಮ್ಮ ಮತ್ತು ಕಾರ್ನಾಡ್ ರ ನಂಟು ಬೇರೆಯವರಿಗೆ ಅರ್ಥವಾಗಿಲ್ಲದಿರಬಹುದು.ನಿಮ್ಮ ದಾಟಿ ಚೆನ್ನಾಗಿದೆ.
ಒಳ್ಳೆಯ ಲೇಖನ.
ಕಾರ್ನಾಡರನ್ನು ಓದಲೇ ಬೇಕು ಎಂದು ನಿಮ್ಮ ಲೇಖನದಿಂದ ಅರಿವಾಗುತ್ತದೆ.
ಧನ್ಯವಾದಗಳು