ರಾಷ್ಟೀಯ ಶಿಕ್ಷಣ ನೀತಿ – ೨೦೧೯ ( ಕರಡು ಪ್ರತಿ ) : ಮುಖ್ಯಾಂಶಗಳು

ಒಕ್ಕೂಟ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆ ಈ ತಿಂಗಳ ಆರಂಭದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ – ೨೦೧೯ ರ ಕರಡು ಪ್ರತಿಯನ್ನು ಸಾರ್ವಜನಿಕ ಪರಾಮರ್ಶೆಗೆ ಬಿಡುಗಡೆ ಮಾಡಿದೆ . ಈ ಕರಡಿಗೆ ಸಾರ್ವಜನಿಕರು ಜುಲೈ ೧ ರ ಒಳಗಾಗಿ ತಮ್ಮ ಆಕ್ಷೇಪಣೆಯನ್ನು ಸಲ್ಲಿಸಬಹುದಾಗಿದೆ . ನಮ್ಮ ಮಕ್ಕಳ ಮುಂದಿನ ಶೈಕ್ಷಣಿಕ ಭವಿಷ್ಯವನ್ನು ರೂಪಿಸುವ ಈ ಕಾಯಿದೆಯ ಮುಖ್ಯಾಂಶಗಳನ್ನು ಇಲ್ಲಿ ಕೊಡಲಾಗಿದೆ . ಆಕ್ಷೇಪಗಳಿದ್ದಲ್ಲಿ ಸಚಿವಾಲಯಕ್ಕೆ ಸಲ್ಲಿಸಿ . 

ನಾಲ್ಕು ನೂರಕ್ಕೂ ಹೆಚ್ಚು ಪುಟಗಳಿರುವ ಕರಡಿನಿಂದ ಮುಖ್ಯಾಂಶಗಳನ್ನು ಹೆಕ್ಕುವಾಗ ಮತ್ತು ಕನ್ನಡಕ್ಕೆ ಅನುವಾದಿಸಿದಾಗ ಸಣ್ಣ ಪುಟ್ಟ ತಪ್ಪುಗಳಾಗಿರುವ ಸಾಧ್ಯತೆ ಇದೆ . ಆಕ್ಷೇಪಣೆ ಸಲ್ಲಿಸುವ ಮುನ್ನ ಮೂಲ ಕರಡಿನಲ್ಲಿ ನಿಮ್ಮ ತಕರಾರಿನ ಅಂಶಗಳನ್ನು ಮತ್ತೊಮ್ಮೆ ಪರೀಕ್ಷಿಸಿ ಖಾತ್ರಿಪಡಿಸಿಕೊಳ್ಳಿ. 

  1. ಇಂಗ್ಲೀಷ್ ಭಾಷೆಯಲ್ಲಿರುವ ಮೂಲ ಕರಡನ್ನು ಈ ಕೊಂಡಿಯಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು :  http://bit.ly/2L0IwTc
  2. ಇಂಗ್ಲೀಷ್ ಭಾಷೆಯಲ್ಲಿರುವ ಕರಡಿನ ಮುಖ್ಯಾಂಶಗಳನ್ನು ಈ ಕೊಂಡಿಯಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು : http://bit.ly/2Kt2Kpf
  3. ಕನ್ನಡಕ್ಕೆ ಅನುವಾದಿಸಲಾಗಿರುವ ಕರಡಿನ ಮುಖ್ಯಾಂಶಗಳನ್ನು ಈ ಕೊಂಡಿಯಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು : http://bit.ly/2Xs9s58

divderspa


ರಾಷ್ಟೀಯ ಶಿಕ್ಷಣ ನೀತಿ೨೦೧೯ ( ಕರಡು ಪ್ರತಿ ) : ಮುಖ್ಯಾಂಶಗಳು

ಡಾI ಎಸ್ ವೆಂಕಟರಾಮನ್ |ಅಸಿಸ್ಟೆಂಟ್ ಪ್ರೊಫೆಸರ್ | ಅಣ್ಣಾಮಲೈ ವಿಶ್ವವಿದ್ಯಾಲಯ


 

 ಶಾಲಾ ಶಿಕ್ಷಣ

ಮಾಧ್ಯಮಿಕ(ಪ್ರೌಢ ಶಿಕ್ಷಣ) ಮತ್ತು ಉಚ್ಚ ಮಾಧ್ಯಮಿಕ ಶಿಕ್ಷಣವನ್ನು(ಪದವಿ ಪೂರ್ವ ಶಿಕ್ಷಣ) ವಿಲೀನಗೊಳಿಸಿ ಮಾಧ್ಯಮಿಕ ಶಿಕ್ಷಣವಾಗಿ ಬದಲಿಸುವುದು ಮತ್ತು 9 ರಿಂದ 12ನೆಯ ತರಗತಿಗಳಿಗೆ ಒಟ್ಟಾರೆ 8 ಸೆಮಿಸ್ಟರುಗಳುಳ್ಳ ಪದ್ಧತಿಯನ್ನು ಅನುಷ್ಠಾನಗೊಳಿಸುವುದು.

ಶಾಲಾ ಶಿಕ್ಷಣ 3ನೇ ವಯಸ್ಸಿನಿಂದ ಆರಂಭಿಸುವುದು.

ಅಂಗನವಾಡಿಗಳನ್ನು ಶಾಲೆಯೊಂದಿಗೇ ವಿಲೀನಗೊಳಿಸಿ, ಶಾಲಾ ಸಮುಚ್ಚಯಗಳನ್ನು ಆರಂಭಿಸುವದು.

ನಾಲ್ಕು ವರ್ಷದ  ಸಂಯೋಜಿತ ಬಿಎಡ್ ಪದವಿಯನ್ನು ಎಲ್ಲ ಶಿಕ್ಷಕರಿಗೂ ಅನ್ವಯಿಸುವುದು.

ಬಿಎಡ್  ಶಿಕ್ಷಣವನ್ನು ಬಹು-ಶಿಸ್ತೀಯ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ಮಾತ್ರ ನಡೆಸಬಹುದು.  ಬಿಎಡ್ ಮಾತ್ರ ಕಲಿಸುವ ಎಲ್ಲ ಕಾಲೇಜುಗಳನ್ನು ಮುಚ್ಚಬೇಕು.

ಎರಡು ವರ್ಷದ ಬಿಎಡ್ ಪದವಿಯನ್ನು ಒಂದು ವರ್ಷದ ಪದವಿ ಶಿಕ್ಷಣವಾಗಿ ಮಾರ್ಪಡಿಸುವುದು ಮತ್ತು ನಾಲ್ಕು ವರ್ಷದ ಸಂಯೋಜಿತ ಪದವಿ ನಡೆಸುವ ಸಂಸ್ಥೆಗಳು ಇದನ್ನು ನಡೆಸಬೇಕು.

ಶಾಲಾ ಶಿಕ್ಷಣದಲ್ಲಿ ಔದ್ಯೋಗಿಕ ಶಿಕ್ಷಣದ ಸೇರ್ಪಡೆ.

ಮೂರನೇ ವಯಸ್ಸಿನಿಂದಲೇ ಮಕ್ಕಳಿಗೆ 3 ಅಥವಾ ಅದಕ್ಕಿಂತ ಹೆಚ್ಚು ಭಾಷೆಗಳಿಗೆ ತೆಗೆದುಕೊಳ್ಳಲು ಕ್ರಮ .  ಗ್ರೇಡ್ 3 ರಿಂದಲೇ ಮಕ್ಕಳಿಗೆ 3 ಭಾಷೆಗಳ ಲಿಪಿಗಳಲ್ಲಿ ಕಲಿಕೆ .

ಮನೆಭಾಷೆ ಮತ್ತು ಭಾರತೀಯ ಭಾಷೆಗಳಿಗೆ  ಹೆಚ್ಚಿನ ಮಹತ್ವ, ಇಂಗ್ಲೀಷಿಗೆ ಕಡಿಮೆ ಒತ್ತು.

TET (ಶಿಕ್ಷಕರ ಅರ್ಹತಾ ಪರೀಕ್ಷೆ )  ಪರೀಕ್ಷೆಯ ಒಂದು ಭಾಗವಾಗಿ ಪ್ರಾತ್ಯಕ್ಷಿಕೆ ತರಗತಿಗಳನ್ನು ಮೌಲ್ಯಮಾಪನಕ್ಕೆ ಅಳವಡಿಸುವುದು.

 

ಉನ್ನತ ಶಿಕ್ಷಣ

ವಿಶ್ವವಿದ್ಯಾಲಯ ಧನ ಸಹಾಯ ಆಯೋಗದ ಸ್ಥಾನದಲ್ಲಿ ರಾಷ್ಟ್ರೀಯ ಉನ್ನತ ಶಿಕ್ಷಣ ನಿಯಂತ್ರಣ ಪ್ರಾಧಿಕಾರ ಎಂಬ ಬದಲೀ ಸಂಸ್ಥೆಯನ್ನಾಗಿ ಸ್ಥಾಪಿಸುವುದು.

 

ಉನ್ನತ ಶಿಕ್ಷಣದ ವ್ಯವಸ್ಥೆಯನ್ನು  ವರ್ಗ 1 (Type 1)  ವರ್ಗ 2 (Type 2) ,ವರ್ಗ 3 (Type 3) ಎಂದು ವಿಭಾಗಗಳಾಗಿ ಮಾರ್ಪಾಡುಗೊಳಿಸುವುದು.

# ವರ್ಗ 1 (Type1) ಎಲ್ಲಾ ಸಂಶೋಧನಾ ವಿಶ್ವವಿದ್ಯಾಲಯಗಳನ್ನು ಒಳಗೊಳ್ಳುವುದು.

# ವರ್ಗ 2 (Type 2) ಎಲ್ಲಾ   ಸ್ನಾತಕೋತ್ತರ ವಿದ್ಯಾಲಯಗಳನ್ನು ಒಳಗೊಳ್ಳುವುದು.

# ವರ್ಗ 3 (Type 3) ಎಲ್ಲಾ ಪದವಿ ಶಿಕ್ಷಣ ಕಾಲೇಜುಗಳನ್ನು ಒಳಗೊಳ್ಳುವುದು.

# ಅಫಿ಼ಲಿಯೇಶನ್ (Affiliation) ಎಂಬ ಸಾಂಸ್ಥಿಕ ರಚನೆಯನ್ನು  ತೆರವುಗೊಳಿಸಿ ಪ್ರತಿಯೊಂದು ಉನ್ನತ ಶಿಕ್ಷಣ ಸಂಸ್ಥೆಯು ಈ ಮೇಲೆ ಉಲ್ಲೇಖಿಸಿದ ಯಾವುದಾದರೂ ಒಂದು ಶೀರ್ಷಿಕೆಯಡಿಯಲ್ಲಿ ಬರುವಂತೆ ವ್ಯವಸ್ಥೆಗೊಳಿಸುವುದು. ಎಲ್ಲಾ ಪದವಿ ಹಂತದ ಕಾಲೇಜುಗಳನ್ನು 3ನೇ ವರ್ಗದ ಅಡಿಯಲ್ಲಿ ಬರುತ್ತವೆ.

# 1 ,2 ಹಾಗೂ ಮೂರನೇ ವರ್ಗದ ಶಿಕ್ಷಣ ಸಂಸ್ಥೆಗಳಲ್ಲೂ ಶಾಲಾ ಶಿಕ್ಷಣವನ್ನು ಉನ್ನತ ಶಿಕ್ಷಣ ದೊಂದಿಗೆ ಬೆಸೆಯುವ ಸಲುವಾಗಿ, ನಾಲ್ಕು ವರ್ಷಗಳ ಬಿಎಡ್ ಪದವಿ ಶಿಕ್ಷಣವನ್ನು ನೀಡಬಹುದಾಗಿದೆ.

 

ಎಚ್ ಆರ್ ಡಿ ಸಿ ಕೇಂದ್ರಗಳನ್ನು ವಿಶ್ವವಿದ್ಯಾಲಯಗಳೊಂದಿಗೆ ವಿಲೀನಗೊಳಿಸಲಾಗುವುದು. ಬಹುಶಿಸ್ತೀಯ ಅಧ್ಯಯನ ಶಾಖೆಗಳನ್ನು ಹೊಂದಿರುವ  ವಿಶ್ವವಿದ್ಯಾಲಯಗಳಲ್ಲಿ ನೂತನ ಎಚ್ ಆರ್ ಡಿ ಸಿ ಕೇಂದ್ರಗಳನ್ನು ಅಭಿವೃದ್ಧಿಪಡಿಸುವುದು .

 

ರಾಷ್ಟ್ರೀಯ ಸಂಶೋಧನಾ ಸಂಸ್ಥೆ (ನ್ಯಾಷನಲ್ ರಿಸರ್ಚ್ ಫೌಂಡೇಶನ್) ಸ್ಥಾಪನೆ .ಎಲ್ಲಾ ಜ್ಞಾನ ಶಿಸ್ತುಗಳಲ್ಲಿ ಅತ್ಯುತ್ತಮವಾದ ಸಂಶೋಧನಾ ಪ್ರಸ್ತಾವನೆಗಳಿಗೆ ಧನ ಸಹಾಯ ಒದಗಿಸುವ ಉದ್ದೇಶದಿಂದ ಕೂಡಿರುವ ಸಂಸ್ಥೆಯಾಗಿರುತ್ತದೆ.

 

ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಶೋಧನಾ ಯೋಜನೆಗಳಿಗೂ ಧನಸಹಾಯವನ್ನು ವಿಸ್ತರಿಸಲಾಗುವುದು .

 

NEET ಮಾದರಿಯಲ್ಲಿ ಎಂಬಿಬಿಎಸ್ ವೈದ್ಯಕೀಯ ಶಿಕ್ಷಣದ ಅಂತಿಮ ವರ್ಷದ ವಿದ್ಯಾಭ್ಯಾಸ ಮುಗಿಸಿ ನಿರ್ಗಮಿಸುತ್ತಿರುವ ವಿದ್ಯಾರ್ಥಿಗಳಿಗೆ ಸಾಮಾನ್ಯ ಸ್ಪರ್ಧಾತ್ಮಕ ಪರೀಕ್ಷೆಯನ್ನು ಆಯೋಜಿಸಲಾಗುವುದು.

ರಾಷ್ಟ್ರೀಯ ಉನ್ನತ ಶಿಕ್ಷಣ ಸ೦ಶೋಧನಾ ಕಾರ್ಯಸೂಚಿ (NHERA) ಮಾತ್ರ ವ್ರತ್ತಿ ಶಿಕ್ಷಣವೂ ಸೇರಿದ೦ತೆ ಎಲ್ಲ ಉನ್ನತ ಶಿಕ್ಷಣಗಳ ನಿಯ೦ತ್ರಕವಾಗಿರುತ್ತದೆ

 

ಅಖಿಲ ಭಾರತೀಯ ತಾ೦ತ್ರಿಕ ಶಿಕ್ಷಣ ಸಲಹಾ ಮ೦ಡಳಿ (AICTE), ರಾಷ್ಟ್ರೀಯ ಬೋಧಕ ಶಿಕ್ಷಣ ಸಲಹಾ ಮ೦ಡಳಿ (NCTE) ಹಾಗೂ ಇನ್ನಿತರ ಅ೦ಗ ಸ೦ಸ್ಥೆಗಳನ್ನು ವೃತ್ತಿಪರ ಗುಣಮಟ್ಟ ಸ್ಥಾಪನ ಸ೦ಸ್ಥೆಗಳನ್ನಾಗಿ (PSSBs) ಪರಿವರ್ತಿಸಲಾಗುವುದು.

 

ಆನ್ ಲೈನ್ ದೂರಶಿಕ್ಷಣ(MOOC) ಕ್ಕೆ ಹೆಚ್ಚಿನ ಪ್ರಾಧಾನ್ಯತೆ

 

ದೂರಶಿಕ್ಷಣವನ್ನೂ ಕೂಡ ರಾಷ್ಟ್ರೀಯ ಮೌಲ್ಯ ನಿರ್ಧಾರ ಮತ್ತು ಗುಣಮಟ್ಟ ಮನ್ನಣೆ ಸ೦ಸ್ಥೆ (NAAC) ಯಡಿ ತರಲಾಗುವುದು ಮತ್ತು ಮನ್ನಣೆ ಪಡೆದ ಶಿಕ್ಷಣ ಸ೦ಸ್ಥೆಗಳಿಗೆ ಮಾತ್ರ ದೂರಶಿಕ್ಷಣ ಕೊಡುವ ಅವಕಾಶ ಮಾಡಿಕೊಡಲಾಗುವುದು

 

ಶಿಕ್ಷಣ ಸ೦ಸ್ಥೆಗಳನ್ನು ನ್ಯಾಕ್ ಪ್ರಕಾರ “ಮಾನ್ಯ” ಅಥವ “ಅಮಾನ್ಯ” ಎ೦ದು ವರ್ಗೀಕರಿಸಲಾಗುವುದು (ಎರಡೇ ವರ್ಗಗಳು) ಮತ್ತು ಸಧ್ಯದ ದರ್ಜೆ (Grading) ಪದ್ಧತಿಯನ್ನು ಬಿಡಲಾಗುವುದು

 

ಅಸಿಸ್ಟೆ೦ಟ್, ಅಸೋಸಿಯೇಟ್ ಮತ್ತು ಪ್ರೊಫೆಸರ್ ವರ್ಗಗಳ ನಡುವೆ ಹೊಸ ಹುದ್ದೆಗಳನ್ನು ಪರಿಚಯಿಸಲಾಗುವುದು

 

ಕಾಲೇಜು ಮತ್ತು ೧, ೨ ,೩ ವರ್ಗೀಕೃತ ಶಿಕ್ಷಣ ಸ೦ಸ್ಥೆಗಳಿಗಾಗಿ ಸ್ವಾಯತ್ತ-ಸಲಹಾ-ಮ೦ಡಳಿಗಳನ್ನು ಸ್ಥಾಪಿಸಲಾಗುವುದು

 

ಡಿಎಸ್ಟಿ (DST), ಐ ಸಿ ಎಸ್ ಎಸ್ ಆರ್ (ICSSR), ತರಹದ ವಿತ್ತೀಯ ವ್ಯವಹಾರ ಸಮಿತಿಗಳೂ ಕೂಡ ರಾಷ್ಟ್ರೀಯ ಸ೦ಶೋಧನಾ ಸ೦ಸ್ಥೆ(NRF)ಯ೦ತೆಯೇ ಕಾರ್ಯನಿರ್ವಹಿಸುವವು

 

ಶಾಲಾ ಶಿಕ್ಷಣದ ಬಗ್ಗೆ ಹೆಚ್ಚಿನ ಮಾಹಿತಿ

 

ಶೈಶವ ಶಿಕ್ಷಣದ ಪಠ್ಯಕ್ರಮ ಮತ್ತು ಬೋಧನಾ ಶಾಸ್ತ್ರದ ಚೌಕಟ್ಟನ್ನು ನಿರ್ಧರಿಸಲಾಗುವುದು

 

ಆರುವರ್ಷಗಳ ಒಳಗಿನ ಮಕ್ಕಳ ಶಿಕ್ಷಣಕ್ಕೆ ಮಹತ್ವ ನೀಡಲಾಗುವುದು

 

ಸಾಧ್ಯವಾದ ಮಟ್ಟಿಗೆ ಅ೦ಗನವಾಡಿ ಮತ್ತು ಇತರ ಶೈಶವ ಶಿಕ್ಷಣ ಸ೦ಸ್ಥೆಗಳನ್ನು ಪ್ರಾಥಮಿಕ ಶಿಕ್ಷಣ ಸ೦ಸ್ಥೆಗಳೊಟ್ಟಿಗೆ ಅಳವಡಿಸಲಾಗುವುದು

 

ಮಗುವಿನ ಬಾಲ್ಯ ಶಿಕ್ಷಣಕ್ಕೆ ಸಂಬಂಧಿಸಿದ ಎಲ್ಲಾ ಅಂಶಗಳು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ವ್ಯಾಪ್ತಿಗೆ ಒಳಪಡುವುದು .

ಆರ್ ಟಿ ಇ ಕಾಯಿದೆಯ ವ್ಯಾಪ್ತಿಯನ್ನು ಬಾಲ್ಯ ( 3-6 ವರ್ಷಗಳು) ಶಿಕ್ಷಣಕ್ಕೂ ವಿಸ್ತರಿಸುವುದು .

ಮಕ್ಕಳಿಗೆ ನೀಡುವ ಬಿಸಿಯೂಟ ಯೋಜನೆಯನ್ನು ಬೆಳಿಗ್ಗಿನ ಉಪಹಾರಕ್ಕೂ ವಿಸ್ತರಿಸುವುದು

ಬೋಧನಾ ಸಹಾಯಕರನ್ನು ಆಯ್ಕೆ ಮಾಡಲಾಗುತ್ತದೆ, ಅವರು ಬಿ.ಎಡ್ ಹೊಂದಿರಬೇಕು, ಮತ್ತು ಅವರನ್ನು ಸ್ಥಳೀಯ ಶಿಕ್ಷಣವನ್ನು ಖಾತ್ರಿಪಡಿಸಿಕೊಳ್ಳಲು ಬಳಸಿಕೊಳ್ಳಲಾಗುವುದು, ಭವಿಷ್ಯದ ಉದ್ಯೋಗಗಳಿಗಾಗಿ ಸಾಲವನ್ನು ನೀಡುವುದು.

ದೊಡ್ಡ ಪ್ರಮಾಣದ ಸಮುದಾಯದ ಪ್ರೋತ್ಸಾಹ ಮತ್ತು ಸ್ವಯಂಸೇವಕರ ಪಾಲ್ಗೊಳ್ಳುವಿಕೆ.

ಸರಿಯಾದ ಶಿಕ್ಷಕರ ನಿಯೋಜನೆ ಮತ್ತು ಶಿಕ್ಷಕರ ಸ್ಥಿತಿಗತಿಗಳನ್ನು ಖಚಿತಪಡಿಸುವುದು, ಸರಿಯಾದ ಶಿಕ್ಷಕರ ನಿಯೋಜನೆ ಮತ್ತು ಶಿಕ್ಷಕರ ಸ್ಥಿತಿಗತಿಗಳನ್ನು ಖಾತ್ರಿಪಡಿಸುವುದು, ಮತ್ತು ವಿದ್ಯಾರ್ಥಿ  – ಶಿಕ್ಷಕರ ಅನುಪಾತ ಪ್ರತಿ ಶಾಲೆಯಲ್ಲಿ 30: 1 ಕ್ಕಿಂತ ಕಡಿಮೆ ಇರುವಂತೆ ನೋಡಿಕೊಳ್ಳುವುದು.

ಶಾಲಾ ಶಿಕ್ಷಣಕ್ಕೆ ಹೊಸತನ ನೀಡಲು ಹೊಸ ಸೂಕ್ತವಾದ ತರಗತಿ ವಿನ್ಯಾಸಮತ್ತು ಪಠ್ಯಕ್ರಮ : 5 + 3 + 3 + 4 ವಿನ್ಯಾಸ.

5 ವರ್ಷಗಳ ಅಡಿಪಾಯ : ಪ್ರಿ-ಪ್ರೈಮರಿ ಶಾಲೆಯ 3 ವರ್ಷಗಳು ಮತ್ತು ಗ್ರೇಡ್ 1, 2.

ಪೂರ್ವಸಿದ್ಧತೆಯ 3 ವರ್ಷಗಳು (ಅಥವಾ ಪ್ರಾಥಮಿಕ ಹಂತದ ನಂತರದ ) ಹಂತ: 3, 4, 5.

ಮಧ್ಯಮ (ಅಥವಾ ಪ್ರಾಥಮಿಕ ಹಂತದ ಮೇಲಿನ ) ಹಂತದ 3 ವರ್ಷಗಳು: 6, 7, 8

ಉನ್ನತ (ಅಥವಾ ದ್ವಿತೀಯ) ಹಂತದ 4 ವರ್ಷಗಳು: 9, 10, 11, 12

ದ್ವಿತೀಯ ಹಂತವು ನಾಲ್ಕು ವರ್ಷಗಳ ಬಹುಶಿಸ್ತೀಯ ಅಧ್ಯಯನವನ್ನು ಒಳಗೊಂಡಿರುತ್ತದೆ, ಮತ್ತು ಮುಂದಿನ ಮಧ್ಯಮ ಹಂತದ ವಿಷಯ-ಆಧಾರಿತ ಶಿಕ್ಷಣ ಮತ್ತು ಪಠ್ಯಕ್ರಮದ ಶೈಲಿಗೆ ಅಡಿಪಾಯ ಹಾಕುತ್ತದೆ .  ವಿಮರ್ಶಾತ್ಮಕ ಚಿಂತನೆ, ಜೀವನ ಆಕಾಂಕ್ಷೆಗಳಿಗೆ ಹೆಚ್ಚಿನ ಗಮನ, ಮತ್ತು ಪರಸ್ಪರ ಹೊಂದಾಣಿಕೆ  ಮತ್ತು ವಿದ್ಯಾರ್ಥಿಗಳ ಆಯ್ಕೆ ಸ್ವಾತಂತ್ಯಕ್ಕೆ ಒತ್ತು ನೀಡುವುದು.

ದ್ವಿತೀಯ ಹಂತವನ್ನು ಪ್ರತಿ ವರ್ಷಕ್ಕೆ  2 ಸೆಮಿಸ್ಟರ್ ಗಳಂತೆ  ಒಟ್ಟು 8  ಸೆಮಿಸ್ಟರ್ ಗಳಾಗಿ ವಿಂಗಡಿಸಲಾಗುತ್ತದೆ. ಪ್ರತಿ ವಿದ್ಯಾರ್ಥಿಯು ಪ್ರತಿ ಸೆಮಿಸ್ಟರ್‌ನಲ್ಲಿ 5 ರಿಂದ 6 ವಿಷಯಗಳನ್ನು ತೆಗೆದುಕೊಳ್ಳುತ್ತಾರೆ.

ಪದವಿ ಪೂರ್ವ ಅಥವಾ ಜೂನಿಯರ್ ಕಾಲೇಜು ಅನ್ನುವ ವರ್ಗೀಕರಣ ಇನ್ನು ಮುಂದೆ ಇರುವುದಿಲ್ಲ. 11 ಮತ್ತು 12 ನೇ ತರಗತಿಯನ್ನ ಎರಡನೇ ಹಂತದ ಭಾಗವಾಗಿಯೇ ಪರಿಗಣಿಸಲಾಗುವುದು.

ಬೋಧನಾ ಮಾಧ್ಯಮವಾಗಿ ಮನೆಭಾಷೆ/ಮಾತೃಭಾಷೆ: ಸಾಧ್ಯವಾದಲ್ಲಿ, ಮನೆಭಾಷೆ/ಮಾತೃಭಾಷೆ/ಸ್ಥಳೀಯ ಭಾಷೆಯು ಕನಿಷ್ಟ 5ನೇ ತರಗತಿಯವರೆಗೆ, ಸಾಧ್ಯವಾದರೆ ಕನಿಷ್ಟ 8 ತರಗತಿಯವರೆಗೂ ಬೋಧನೆಯ ಮಾಧ್ಯಮವಾಗಿರುತ್ತದೆ. ಅಲ್ಲಿಂದಾಚೆಗೆ, ಮನೆಭಾಷೆ/ಸ್ಥಳೀಯ ಭಾಷೆಯನ್ನು ಎಲ್ಲಿ ಸಾಧ್ಯವೋ ಅಲ್ಲಿ ಒಂದು ಭಾಷೆಯಾಗಿ ಕಲಿಸುವುದನ್ನು ಮುಂದುವರೆಸಲಾಗುತ್ತದೆ.

6ನೇ ತರಗತಿಯಿಂದ ಮೂರು ಭಾಷೆಗಳು.

ಇಂಗ್ಲಿಷ್ಗೆ ಪ್ರಾಮುಖ್ಯತೆಯನ್ನು ಕಡಿಮೆ ಮಾಡಿ ಭಾರತೀಯ ಭಾಷೆಗಳ ಮೇಲೆ ಗಮನ ಕೇಂದ್ರೀಕರಿಸುವುದು.

ಸಂಸ್ಕೃತವನ್ನು ಶಾಲೆಯ ಎಲ್ಲಾ ಹಂತಗಳಲ್ಲಿ ಮತ್ತು ಉನ್ನತ ಶಿಕ್ಷಣದಲ್ಲಿ ಷೆಡ್ಯೂಲ್ 8ರ ಪ್ರಕಾರ  ನಿಗದಿತ ಭಾಷೆಗಳಿಗೆ ಸಮಾನವಾದ ಐಚ್ಛಿಕ ಭಾಷೆಯಾಗಿ ನೀಡಲಾಗುತ್ತದೆ.

ಮಾಧ್ಯಮಿಕ ಶಿಕ್ಷಣದ 8 ಸೆಮಿಸ್ಟರ್‍ಗಳಿಗೆ ಬೋರ್ಡ್ ಪರೀಕ್ಷೆಗಳಿರುತ್ತವೆ ಮತ್ತು ವಿದ್ಯಾರ್ಥಿಗಳು ತಮಗೆ ಬೇಕಾದ ವಿಷಯಗಳನ್ನು ಆಯ್ದುಕೊಂಡು ಅವುಗಳ ಪರೀಕ್ಷೆಯನ್ನು ಯಾವುದೇ ಸೆಮಿಸ್ಟರ್ನಲ್ಲಿ ಬರೆಯಬಹುದು.

ನೇಮಕಾತಿ ಮತ್ತು ನಿಯೋಜನೆ: ನಿಜವಾಗಿಯೂ ಅತ್ಯುತ್ತಮ ವಿದ್ಯಾರ್ಥಿಗಳು ಬೋಧನಾ ವೃತ್ತಿಯನ್ನು ಪ್ರವೇಶಿಸುವುದನ್ನು ಖಾತ್ರಿಪಡಿಸಿಕೊಳ್ಳಲು (ವಿಶೇಷವಾಗಿ ಗ್ರಾಮೀಣ ಪ್ರದೇಶಗಳಿಂದ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ) ಅತ್ಯುತ್ತಮವಾದ ನಾಲ್ಕು ವರ್ಷಗಳ ಸಂಯೋಜಿತ ಬ್ಯಾಚುಲರ್ ಆಫ್ ಎಜುಕೇಷನ್ (ಬಿ.ಎಡ್) ಶಿಕ್ಷಣಕ್ಕಾಗಿ ಹೆಚ್ಚಿನ ಸಂಖ್ಯೆಯ ಅರ್ಹತೆ-ಆಧಾರಿತ ವಿದ್ಯಾರ್ಥಿವೇತನಗಳನ್ನು ದೇಶದಾದ್ಯಂತ ನೀಡುವ ವ್ಯವಸ್ಥೆ ಮಾಡಲಾಗುವುದು.

ಶಿಕ್ಷಕರು ಪ್ರಸ್ತುತವಾಗಿ ಬೋಧನೇತರ ಚಟುವಟಿಕೆಗಳಲ್ಲಿ ವ್ಯಯಿಸುತ್ತಿರುವ ದೊಡ್ಡ ಪ್ರಮಾಣದ ಸಮಯವನ್ನು ಉಳಿಸುವುದು- ಶಿಕ್ಷಕರು ಇನ್ನು ಮುಂದೆ ಬೋಧನೆಗೆ ನೇರವಾಗಿ ಸಂಬಂಧಿಸದ ಸರಕಾರಿ ಕೆಲಸದಲ್ಲಿ ತೊಡಗಲು ಅನುಮತಿ ಇರುವುದಿಲ್ಲ (ತಮ್ಮ ತರಗತಿಯ ಕೆಲಸದಲ್ಲಿ ಅಡ್ಡಿಪಡಿಸದಂತಹ ಅಪರೂಪದ ಘಟನೆಗಳನ್ನು ಹೊರತುಪಡಿಸಿ); ನಿರ್ದಿಷ್ಟವಾಗಿ, ಶಿಕ್ಷಕರು ಚುನಾವಣೆಯಲ್ಲಿ ತೊಡಗುವುದು, ಬಿಸಿಯೂಟದ ಅಡುಗೆ ಮತ್ತು ಇತರ ಶ್ರಮದಾಯಕ ಆಡಳಿತಾತ್ಮಕ ಕಾರ್ಯಗಳಲ್ಲಿ ತೊಡಗುವುದಿಲ್ಲ. ಇದರಿಂದಾಗಿ ಅವರು ತಮ್ಮ ಬೋಧನೆಯ-ಕಲಿಕೆಯ ಕರ್ತವ್ಯಗಳತ್ತ ಸಂಪೂರ್ಣವಾಗಿ ಗಮನಹರಿಸಬಹುದು.

ಪ್ರತಿ ಶಿಕ್ಷಕನೂ ತನ್ನ ವೃತ್ತಿಪರ ಬೆಳವಣಿಗೆಗಾಗಿ ಪ್ರತಿ ವರ್ಷ ಸುಮಾರು 50 ಗಂಟೆಗಳ ಸಿಪಿಡಿ ಅವಕಾಶಗಳಲ್ಲಿ ಭಾಗವಹಿಸುವುದನ್ನು ನಿರೀಕ್ಷಿಸಲಾಗುತ್ತದೆ

ಶಿಕ್ಷಕ ಶಿಕ್ಷಣಾ ವಿಧಾನ: ಉತ್ತಮ ಶಿಕ್ಷಕರಿಗೆ ವಿಷಯದ ತರಬೇತಿಯ ಜೊತೆಗೆ ಶಿಕ್ಷಣ ಕಲೆಯ ತರಬೇತಿಯ ಅಗತ್ಯವೂ ಇರುತ್ತದೆ ಎಂದು ಗುರುತಿಸಿ, ಶಿಕ್ಷಕ ಶಿಕ್ಷಣವನ್ನು ಕ್ರಮೇಣ ಬಹುಶಿಸ್ತೀಯ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳಿಗೆ ವರ್ಗಾಯಿಸಲಾಗುತ್ತದೆ. ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳೆಲ್ಲಾ ಬಹುಶಿಸ್ತೀಯವಾಗುವತ್ತ ಹೆಜ್ಜೆಯಿಡುವ ಸಮಯದಲ್ಲಿ (P10.4 ನೋಡಿ), ಅವುಗಳು ಬಿ.ಎಡ್ ಮತ್ತು ಎಂ.ಎಡ್ ಡಿಗ್ರಿಗಳನ್ನು ನೀಡುವ ಪ್ರಮುಖ ಶಿಕ್ಷಣ ವಿಭಾಗಗಳಿಗೂ ಆಶ್ರಯ ನೀಡಲಿವೆ.

*ಶಿಕ್ಷಕರ ಶಿಕ್ಷಣದತ್ತ ದೃಷ್ಟಿ: ಅತ್ಯುತ್ತಮ ಶಿಕ್ಷಕರಿಗೂ ವಿಷಯ ಜ್ಞಾನ ಮತ್ತು ಶಿಕ್ಷಣ ಶಾಸ್ತ್ರಕ್ಕೆ ಸಂಬಂಧಿಸಿದಂತೆ ತರಬೇತಿಯ ಅವಶ್ಯಕತೆ ಇದೆ ಎಂಬುದನ್ನು ಗುರುತಿಸಿ ಶಿಕ್ಷಕರ ಶಿಕ್ಷಣವು ಮುಂದೆ ನಿಧಾನವಾಗಿ ಬಹುಶಿಸ್ತೀಯ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ನಡೆಯಲಿದೆ. ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ಬಹುಶಿಸ್ತೀಯ ಅಧ್ಯಯನಕ್ಕೆ ಅವಕಾಶ ನೀಡುತ್ತಾ ಹೋದಂತೆ ಬಿ.ಎಡ್ ಮತ್ತು ಎಂ ಎಡ್ ಪದವಿಗಳನ್ನು ನೀಡುವ ಅತ್ಯುತ್ತಮ ಶಿಕ್ಷÀಣಶಾಸ್ತ್ರದ ವಿಭಾಗವನ್ನು ಇವು ಹೊಂದುತ್ತವೆ. (See P10.4)

 

*2030 ರ ಹೊತ್ತಿಗೆ ವಿವಿಧ ಜ್ಞಾನ ವಿಷಯಗಳು ಮತ್ತು ಶಿಕ್ಷಣಶಾಸ್ತ್ರವು ಸಂಯೋಜಿಸಲ್ಪಟ್ಟ ಸಂಯೋಜಿತ ಬಿ.ಎಡ್ ಪದವಿಯು ಶಿಕ್ಷಕರಾಗಲು ಇರುವ ಕನಿಷ್ಠ ವಿದ್ಯಾರ್ಹತೆಯಾಗಿರುತ್ತದೆ. ಈ ವ್ಯಾಸಂಗವು ಸ್ಥಳೀಯ ಶಾಲಾ ವಿದ್ಯಾರ್ಥಿಗಳೊಂದಿಗೆ ತರಗತಿ ಸಂವಹನವನ್ನು ನಡೆಸುವ ಪ್ರಾಯೋಗಿಕ ಕಲಿಕೆಯನ್ನೂ ಒಳಗೊಂಡಿರುತ್ತದೆ. ಈಗಾಗಲೇ ಪದವಿ ಅಥವಾ ಯಾವುದಾದರೂ ವಿಷಯದಲ್ಲಿ ಸ್ನಾತ್ತಕೋತ್ತರ ಪದವಿ ಹೊಂದಿರುವವರಿಗಾಗಿ ಎರಡು ವರ್ಷಗಳ ಬಿ.ಎಡ್/ ಡಿ. ಇಎಲ್. ಎಡ್ ( ಇನ್ನು ಮುಂದೆ ಬಿ.ಎಡ್) ವ್ಯಾಸಂಗವು ಇವೇ ಕಾಲೇಜುಗಳು/ವಿಶ್ವವಿದ್ಯಾಲಯಗಳಲ್ಲಿ ನಡೆಯುತ್ತದೆ. ನಾಲ್ಕು ವರ್ಷಗಳ ಬಹುಶಿಸ್ತೀಯ ಪದವಿಗೆ ಸಮಾಂತರವಾದ ಯಾವುದೇ ಪದವಿ ಅಥವಾ ಯಾವುದಾದರೂ ವಿಶೇಷ ವಿಷಯದಲ್ಲಿ ಸ್ನಾತ್ತಕ್ಕೋತ್ತರ ಪದವಿ ಹೊಂದಿರುವ ಮತ್ತು ವಿಶೇಷ ವಿಷಯದ ಶಿಕ್ಷಕರಾಗಲು ಬಯಸುವವರಿಗಾಗಿ ಎರಡು ವರ್ಷಗಳ ಬಿ.ಎಡ್ ವ್ಯಾಸಂಗವನ್ನು ಸೂಕ್ತ ಮಾರ್ಪಾಡುಗಳೊಂದಿಗೆ ಒಂದೇ ವರ್ಷದ ವ್ಯಾಸಂಗವನ್ನಾಗಿ ಬದಲಾಯಿಸಬಹುದಾಗಿದೆ. ಆದರೆ, ಈ ಬಿ.ಎಡ್ ಪದವಿ ಕಾರ್ಯಕ್ರಮಗಳು ನಾಲ್ಕು ವರ್ಷಗಳ ಸಂಯೋಜಿತ ಬಿ.ಎಡ್ ವ್ಯಾಸಂಗವಿರುವ ಪ್ರಮಾಣೀಕೃತ ಬಹುಶಿಸ್ತೀಯ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಮಾತ್ರ ನಡೆಯಲಿದೆ.

ಶಿಕ್ಷಕರ ಶಿಕ್ಷಣದ ಸಮಗ್ರತೆಯನ್ನು ಮರುಸ್ಥಾಪಿಸುವ ಸಲುವಾಗಿ ದೇಶದಲ್ಲಿರುವ ಕಳಪೆಗುಣಮಟ್ಟದ ಮತ್ತು ಬಿ.ಎಡ್/ ಡಿ. ಇಎಲ್. ಎಡ್ ಪದವಿಯನ್ನು ಮಾತ್ರ ನೀಡುವ ಸಾವಿರಾರು ಶಿಕ್ಷಕರ ಶಿಕ್ಷಣ ಕಾಲೇಜುಗಳು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಮುಚ್ಚಲಿವೆ.

*ಶಿಕ್ಷಕರ ನೇಮಕಾತಿಗೆ ಟಿ.ಇ.ಟಿ ಜೊತೆಗೆ ಆರೇಳು ನಿಮಿಷಗಳ ಪ್ರಾಯೋಗಿಕ ತರಗತಿ ನೀಡುವುದು ಕಡ್ಡಾಯ

ಶಿಕ್ಷಕರ ನಿರಂತರ ವೃತ್ತಿ ಬೆಳವಣಿಗಾಗಿ ಅಗತ್ಯಕ್ಕೊದಗುವಂತೆ ಬದಲಾಯಿಸಿಕೊಳ್ಳಬಹುದಾದ(flexible) ಮತ್ತು ಅರ್ಥಪೂರ್ಣ ಘಟಕಗಳಾಗಿ ವಿಂಗಡಿಸಲ್ಪಟ್ಟ (modular) ವಿಧಾನ: ಶಿಕ್ಷಕರು ತಮ್ಮ ವೃತ್ತಿ ಬೆಳವಣಿಗಾಗಿ ಅಲ್ಪಅವಧಿಯ ಪ್ರಮಾಣೀಕೃತ ವ್ಯಾಸಂಗ/ ತರಬೇತಿ ಪಡೆಯಲು ಅವಕಾಶವಿರಬೇಕು. ಈ ಕೋರ್ಸುಗಳು ಯಾವುದಾದರೂ ಒಂದು ನಿರ್ದಿಷ್ಟ ವಿಷಯದ ಸಮಗ್ರತೆಯನ್ನು ಅರ್ಥಪೂರ್ಣ ಘಟಕಗಳಾಗಿ ವಿಂಗಡಿಸಲಟ್ಟ ರೀತಿಯಲ್ಲಿ ವಿನ್ಯಾಸಗೊಂಡಿದ್ದು, ಈ ಪ್ರಮಾಣಿಕೃತ ಕೋರ್ಸುಗಳನ್ನು ಶಿಕ್ಷಕರು ಸಂಚಯಿಸುತ್ತಾ ಡಿಪ್ಲೋಮಾ, ವೃತ್ತಿಪರ ಪದವಿ, ಸ್ನಾತ್ತಕೋತ್ತರ ಪದವಿಗಳನ್ನು (ಏಂ.ಎ ಶಿಕ್ಷಣ, ಎಂ ಎಡ್ ಇತ್ಯಾದಿ) ಪಡೆಯುವ ಅವಕಾಶ ನೀಡಬೇಕು. ಇಂತಹ ಕೋರ್ಸುಗಳನ್ನು ಪೂರ್ಣಾವಧಿ ಕೋರ್ಸುಗಳ ಮೂಲಕ ಮಾತ್ರವಲ್ಲದೆ ಅರೆಕಾಲಿಕವಾಗಿ, ಸೇವಾಂತರ್ಗತವಾಗಿ, ಸಂಜೆ ಕಾಲೇಜುಗಳಲ್ಲಿ, ರಜಾ ಸಮಯದಲ್ಲಿ, ಆನಲೈನ್ ಕೋರ್ಸುಗಳ ಮೂಲಕ ಹೀಗೆ ವಿವಿಧ ನಮೂನೆಗಳಲ್ಲಿ ವಿಶ್ವವಿದ್ಯಾನಿಲಯದ ಶಿಕ್ಷಣ ವಿಭಾಗವು ಅಥವಾ ಶಿಕ್ಷಕರ ವೃತ್ತಿ ಬೆಳವಣಿಗೆಗಾಗಿ ಸ್ಥಾಪಿಸಲ್ಪಟ್ಟ ಕೇಂದ್ರಗಳಲ್ಲಿ ಪಡೆಯುವಂತಿರಬೇಕು. ಸಂಶೋಧನೆಯಲ್ಲಿ ತೊಡಗಲು, ವೃತ್ತಿಬಾಂಧವರೊಡನೆ ಸಂವಹನ ನಡೆಸಲು ಮತ್ತು ಆ ಮೂಲಕ ತಮ್ಮ ವೃತ್ತಿ ಜ್ಞಾನವನ್ನು ವೃದ್ಧಿಸಿಕೊಳ್ಳಲು ಅಥವಾ ಹಂಚಿಕೊಳ್ಳಲು ಅವಕಾಶ ನೀಡಬೇಕು. ವೃತ್ತಿಯಲ್ಲಿರುವ ಶಿಕ್ಷಕರನ್ನು ವಿಶ್ವವಿದ್ಯಾನಿಲಯದ ಶಿಕ್ಷಣ ವಿಭಾಗಗಳು ವ್ಯಾಸಂಗವನ್ನು ಅಪೇಕ್ಷಿಸುತ್ತಿರುವ ವಿದ್ಯಾರ್ಥಿಯಾಗಿ ನೋಡಬೇಕು. ಇದರಿಂದ ಈ ವಿಭಾಗಗಳಲ್ಲಿ ಶಿಕ್ಷಕರ ಸಂಶೋಧನಾ ಬೇಡಿಕೆಗೆ ಮತ್ತು ಹೆಚ್ಚಿನ ವ್ಯಾಸಂಗಕ್ಕೆ ಅನುಸಾರವಾದ ಕಾರ್ಯಕ್ರಮಗಳನ್ನು ಅಭಿವೃದ್ಧಿಗೊಳಿಸಲು ಸಾಧ್ಯವಾಗುತ್ತದೆ.

ವೃತ್ತಿನಿರತ ಪದವಿಗಳೆಡೆಗೊಯ್ಯುವ (ಎಮ್.ಎ. ಶಿಕ್ಷಣ ಅಥವಾ ಎಮ್‍ಎಡ್ ಪದವಿಗಳು). ಆ ರೀತಿಯ ಪದವಿಗಳ ಕಾರ್ಯಕ್ರಮಗಳನ್ನು, ಶಿಕ್ಷಣ ವಿಭಾಗಗಳ ವತಿಯಿಂದ ವಿಶ್ವವಿದ್ಯಾಲಯಗಳಲ್ಲಿ ಅಥವಾ ಮಾನ್ಯತೆ ಪಡೆದ ವೃತ್ತಿ ಅಭಿವೃದ್ಧಿ ಕೇಂದ್ರಗಳಲ್ಲಿ, ಪೂರ್ಣಕಾಲಿಕ ಕೋರ್ಸುಗಳ ಜೊತೆಗೆ ಅರೆಕಾಲಿಕ, ಸಂಜೆ ಕೋರ್ಸುಗಳು, ಮಿಳಿತವಾದ ಕೋರ್ಸುಗಳು ಹಾಗೂ ಆನ್‍ಲೈನ್ ಕೋರ್ಸುಗಳಂತಹ ವಿವಿಧ ಕಾರ್ಯಕ್ರಮ ಶೈಲಿಗಳ ಒಂದು ಕಾರ್ಯಕ್ರಮಗಳ ಶ್ರೇಣ ಯನ್ನು ಮುಂದಿಡಬೇಕು. ಶಿಕ್ಷರುಗಳಿಗೆ ಸಂಶೋಧನೆಗೆ ಅವಕಾಶವಿರಬೇಕು, ಅಲ್ಲದೆ ಅವರಿಗೆ ತಮ್ಮ ವೃತ್ತಿಪರ ಜ್ಞಾನವನ್ನು ಹಂಚಿಕೊಳ್ಳಲು ಮತ್ತು ಉತ್ತಮಪಡಿಸಿಕೊಳ್ಳಲು ಇತರ ವೃತ್ತಿನಿರತ ಸಮುದಾಯಗಳೊಡನೆ ಸಂಬಂಧಕ್ಕೆ ಅವಕಾಶವಿರಬೇಕು. ಕೆಲಸಮಾಡುತ್ತಿರುವ ಅಧ್ಯಾಪಕರುಗಳನ್ನು ವಿಶ್ವವಿದ್ಯಾಲಯದ ಶಿಕ್ಷಣ ವಿಭಾಗಗಳು ಒಂದು ಮುಖ್ಯವಾದ ವಿದ್ಯಾರ್ಥಿ-ಗ್ರಾಹಕ ಗುಂಪಿನಂತೆ ಕಾಣಬೇಕು ಹಾಗೂ ಅದಕ್ಕೆ ತಕ್ಕಂತೆ ಅವರ ಸಂಶೋಧನೆಗಳಿಗೆ ಮತ್ತು ಉನ್ನತ ವ್ಯಾಸಂಗಕ್ಕೆ ಅನುಕೂಲವಾಗುವಂತಹ ಕಾರ್ಯಕ್ರಮಗಳನ್ನು ರೂಪಿಸಿ ಕೊಡಬೇಕು.

 

ಶಿಕ್ಷಕರ ಶಿಕ್ಷಣವನ್ನು ವಿಶ್ವವಿದ್ಯಾಲಯದ ವ್ಯವಸ್ಥೆಗೆ ತರುವುದು ; ನಾಲ್ಕು ವರ್ಷದ ಸಂಯೋಜಿತ ಬಿ.ಎಡ್ ಕಾರ್ಯಕ್ರಮ ; ಎಲ್ಲಾ ಮಟ್ಟದಲ್ಲೂ ಶಿಕ್ಷಕರ ಶಿಕ್ಷಣ – ದತ್ತಿ ಶಾಲೆಗಳು, ಪ್ರಾಥಮಿಕ, ಮಾಧ್ಯಮಿಕ ಮತ್ತು ಸೆಕಂಡರಿ – ಇವು ವಿಶ್ವವಿದ್ಯಾಲಯದ ಉನ್ನತ ವ್ಯಾಸಂಗದ ವ್ಯವಸ್ಥೆಯ ಒಳಗಡೆಯಲ್ಲಿ ನಡೆಸಲ್ಪಡುವ ವಿದ್ಯಾಭ್ಯಾಸ ಮಟ್ಟಕ್ಕೆ ನಿರ್ದಿಷ್ಟವಾದ ವಿಷಯಗಳು, ಬೋಧಕ ತತ್ವಗಳು ಮತ್ತು ಪ್ರಾಯೋಗಿಕ ಶಿಕ್ಷಣಗಳೆಲ್ಲವನ್ನೂ ಒಳಗೊಂಡ ನಾಲ್ಕು ವರ್ಷಗಳ ಸಂಯೋಜಿತ ಬಿ.ಎಡ್ ಕಾರ್ಯಕ್ರಮವಾಗಿರುತ್ತದೆ. ನಾಲ್ಕು ವರ್ಷಗಳ ಸಂಯೋಜಿತ ಬಿ.ಎಡ್ ಕಾರ್ಯಕ್ರಮವನ್ನು ವಿಶ್ವವಿದ್ಯಾಲಯದ ಮಟ್ಟದಲ್ಲಿ ( ಶಿಕ್ಷಣ ಮತ್ತು ಇನ್ಯಾವುದೇ ಆರಿಸಿದ ವಿಶಿಷ್ಟ ವಿಷಯದ) ಒಂದು ಸ್ನಾತಕಪೂರ್ವ ದ್ವಿ-ಪದವಿ (dual degree)ಯಾಗಿ, ವಿವಿಧ ವಿಷಯಗಳ ಬೋಧನೆಗಾಗಿರುವ ವೃತ್ತಿ-ಪೂರ್ವ ಶಿಕ್ಷಕರ ತರಬೇತಿ ಕಾರ್ಯಕ್ರಮದಂತೆ  ನೀಡಲಾಗುವುದು. ಈ ಕೋರ್ಸುಗಳು ಬೋಧನ ಶಾಖೆಗಳನ್ನೂ ಹಾಗೂ ಶಿಕ್ಷಕರ ತರಬೇತಿಯನ್ನೂ ಒಳಗೊಂಡಿರುತ್ತದೆ.

 

ಈ ನಾಲ್ಕು ವರ್ಷದ ಬೋಧನಕ್ರಮ ಇತರ ಸ್ನಾತಕಪೂರ್ವ ಪದವಿಗಳಿಗೆ ಸರಿಸಮನಾಗಿರುತ್ತದೆ. ಈ ನಾಲ್ಕು ವರ್ಷದ ಸಂಯೋಜಿತ ಬಿ.ಎಡ್ ಪದವಿ ಪಡೆದ ವಿದ್ಯಾರ್ಥಿಗಳು ಮುಂದೆ ತಮ್ಮ ಆರಿಸಿದ ನಿರ್ದಿಷ್ಟ ಜ್ಞಾನ ಶಾಖೆಯಲ್ಲಿ ಅಥವಾ ಬೋಧಕ ತತ್ವಗಳಲ್ಲಿ ತಮ್ಮ ಮುಂದಿನ ಸ್ನಾತಕೋತ್ತರ ಪದವಿಗಳನ್ನು ಪಡೆಯಬಹುದು.

 

ನೇರವಾಗಿ ಶಿಕ್ಷಕರಾಗಲು ಎರಡು ವರ್ಷದ ಬಿ.ಎಡ್. ಕಾರ್ಯಕ್ರಮ : ಎರಡುವರ್ಷದ ಬಿ.ಎಡ್ ಪದವಿಯನ್ನು ವಿವಿಧ ವಿಷಯಗಳ ಪದವೀಧರರಿಗೆ ವಿವಿಧ ಮಟ್ಟದ ಶಾಲಾ ಶಿಕ್ಶಣಕ್ಕೆ ಶಿಕ್ಷಕರಾಗಲು ತರಬೇತಿಯಂತೆ ನೀಡಲಾಗುವುದು. ಉದಾಹರಣೆಗೆ :

ವಿವಿಧ ಹಂತಗಳ ಶಾಲಾ ಶಿಕ್ಷಕರ ತರಬೇತಿ ಹಾಗು ಸಿದ್ದತೆಗಾಗಿ (ಮಧ್ಯಮ ಹಾಗು ಮಾಧ್ಯಮಿಕ ಶಿಕ್ಷಣ)  ನಾನಾ ವಿಭಾಗದ ಪದವೀಧರರಿಗೆ ಎರಡು ವರ್ಷದ ಬಿ.ಎಡ್ ಪದವಿಯ ಅವಕಾಶ ಕಲ್ಪಿಸಿಕೊಡಲಾಗುತ್ತದೆ ಮತ್ತು ಈ ಪದವಿ ಬಲವಾದ ಪ್ರಾಯೋಗಿಕ ಅಂಶಗಳನ್ನೊಳಗೊಂಡಿರುತ್ತದೆ, ನಾಲ್ಕು ವರ್ಷದ ಸಂಯೋಜಿತ ಬಿ.ಎಡ್ ಕೋರ್ಸ್ ಹೊರತುಪಡಿಸಿದ ಈ ಎರಡು ವರ್ಷದ ಬಿ.ಎಡ್ ಕೋರ್ಸ್ ವೃತ್ತಿಜೀವನದ ವಿವಿಧ ಹಂತಗಳಲ್ಲಿರುವವರು ಶಿಕ್ಷಣ ಕ್ಷೇತ್ರಕ್ಕೆ ಪ್ರವೇಶ ಪಡೆಯಲು ಮತ್ತು ಪ್ರತಿಭಾನ್ವಿತರನ್ನು ಶಿಕ್ಷಕ ವೃತ್ತಿಯತ್ತ ಸೆಳೆಯಲು ಸಹಕಾರಿಯಾಗುತ್ತೆದೆ.  ನಾಲ್ಕು ವರ್ಷದ ಬಿ.ಎಡ್ ಕೋರ್ಸ್ಗಳು ವಿಶ್ವವಿದ್ಯಾಲಯಗಳಲ್ಲಿ ಶುರುವಾಗಿ, ವಿದ್ಯಾರ್ಥಿಗಳು ಪದವಿ ಪಡೆದು, ಸಾಕಷ್ಟು ಮಂದಿ ಶಿಕ್ಷಕರಾಗಿ ಹೊರಬರುವವರೆಗೂ, ಎರಡು ವರ್ಷದ ಬಿ.ಎಡ್ ಕೋರ್ಸ್ ಅನ್ನು ಸಿಟಿಇ- ಶಿಕ್ಷಕ ಶಿಕ್ಷಣ ಕಾಲೇಜ್(CTEs), ಪ್ರಾಂತೀಯ ಶಿಕ್ಷಣ ಸಂಸ್ಥೆಗಳಲ್ಲಿ (RIEs) ಮತ್ತು ಬೇರೆ ಸಂಸ್ಥೆಗಳಲ್ಲಿ  ನಡೆಸಲು  ಅವಕಾಶ ಮಾಡಿಕೊಡಲಾಗುತ್ತದೆ. ಇದರಾಚೆಗೆ ಎರಡು ವರ್ಷದ ಡಿಗ್ರಿಯನ್ನು ನಾಲ್ಕು ವರ್ಷದ ಸಂಯೋಜಿತ ಬಿಎಡ್ ಅನ್ನು ಆಫರ್ ಮಾಡುವ ಬಹುಶಿಸ್ತಿನ ಬೋಧಕ ಸಂಸ್ಥೆಗಳಲ್ಲಿ ಮಾತ್ರ ಉಳಿಸಿಕೊಳ್ಳಲಾಗುವುದು. ಈಗಾಗಲೇ ನಾಲ್ಕು ವರ್ಷದ ಬೇರೆಯ ಪ್ರಗತಿಪರ ಪದವಿ ಪಡೆದಿರುವವರಿಗೆ ಅಥವಾ ಆಯ್ಕೆ ಮಾಡಿಕೊಂಡ ವಿಷಯದಲ್ಲಿ ನಿಷ್ಣಾತರಾಗಿರುವವರಿಗೆ (ಸ್ನಾತಕೋತ್ತರ ಪದವೀಧರರು) ಎರಡು ವರ್ಷದ ಬಿ.ಎಡ್ ಪದವಿಯ ಬದಲಾಗಿ ಸ್ವಲ್ಪ ಕಡಿಮೆ ಅವಧಿಯ ಬಿ.ಎಡ್ ಕಾರ್ಯಕ್ರಮವನ್ನು ಆಫರ್ ಮಾಡಲು ನಾಲ್ಕು ವರ್ಷದ ಸಂಯೋಜಿತ ಬಿಎಡ್ ಆಫರ್ ಮಾಡುತ್ತಿರುವ ಬಹುಶಿಸ್ತಿನ ಸಂಸ್ಥೆಗಳು ನಿರ್ಧರಿಸಬಹುದು.

ಮತ್ತೊಮ್ಮೆ ಒಂದು ವರ್ಷದ ಬಿ.ಎಡ್, ಪದವೀಧರರಿಗಾಗಿ, ಸಂಯೋಜಿತ ಬಿ ಎಡ್ ನೊಂದಿಗೆ

ಶಾಲೆಗಳನ್ನು ಶಾಲಾ ಸಮುಚ್ಚಯವಾಗಿ ಮಾರ್ಪಾಡು ಮಾಡುಲಾಗುವುದು

ಮೌಲ್ಯಮಾಪನ ಮಂಡಳಿ ರಚಿಸಲಾಗುವುದು

ಖಾಸಗಿ ಶಾಲೆಗಳು “ಪಬ್ಲಿಕ್” ಎಂಬ ಪದವನ್ನು ತಮ್ಮ ಸಂಸ್ಥೆಯ ಹೆಸರಿನಲ್ಲಿ ಉಪಯೋಗಿಸಬಾರದು. ಸಾರ್ವಜನಿಕ ಅನುದಾನದಿಂದ ನಡೆಯುತ್ತಿರುವ ಶಾಲೆಗಳು ಮಾತ್ರ ಪಬ್ಲಿಕ್ ಶಾಲೆಗಳು- ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳು.

ಖಾಸಗೀ ಶಾಲೆಗಳು ಸ್ವತಃ ಶುಲ್ಕವನ್ನು ನಿಗದಿಪಡಿಸಿಕೊಳ್ಳುವ ಅವಕಾಶವಿದೆ. ಆದಾಗ್ಯೂ ಶುಲ್ಕಗಳನ್ನು ನಿರಂಕುಶವಾಗಿ ಏರಿಸುವಂತಿಲ್ಲ. ಸಾರ್ವಜನಿಕ ಹಿತವನ್ನು ಕಾಯ್ದುಕೊಳ್ಳುವ ಸಮಂಜಸ ಏರಿಕೆಯನ್ನು ಮಾಡಬಹುದಾಗಿದೆ.

 

ಉನ್ನತ ಶಿಕ್ಷಣ

ರಾಷ್ತ್ರೀಯ ಸಂಶೋಧನಾ ಪ್ರತಿಷ್ಠಾನವನ್ನು ಸ್ಥಾಪಿಸುವುದು:

ವಿಭಾಗಾತೀತವಾಗಿ ಎಲ್ಲಾ ಅತ್ಯುತ್ತಮ ಸಂಶೋಧನಾ ಪ್ರಸ್ತಾವನೆಗಳನ್ನು ಸಹ-ಸಂಶೋಧಕರ  ಪರಾಮರ್ಶೆ ಮತ್ತು ಸಂಶೋಧನೆಯ ಯಶಸ್ಸನ್ನು ಆಧರಿಸಿ ಆಯ್ಕೆಮಾಡಿ ಸ್ಪರ್ಧಾತ್ಮಕವಾಗಿ ಧನಸಹಾಯ ನೀಡುವ ಒಂದು ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನವನ್ನು ಸ್ಥಾಪಿಸುವುದು. ಪ್ರಮುಖವಾಗಿ ಶೈಕ್ಷಣಿಕ ಸಂಸ್ಥೆಗಳ ಸಂಶೋಧನಾ ವಿಭಾಗಗಳಲ್ಲಿ ಕೈಗೆತ್ತಿಕೊಂಡಿರುವ ಅಥವಾ ಕೈಗೆತ್ತಿಕೊಳ್ಳಲಿರುವ ಸಂಶೋಧನೆಗಳನ್ನು ಬೆಳೆಸಲು ಹಾಗೂ ಪೋಷಿಸಲು ನೆರವಾಗುವುದು. ಪ್ರಮುಖ ಸಂಶೋಧನಾ ಸಂಸ್ಥೆಗಳಿಂದ ಈಗಾಗಲೇ ನಿವೃತ್ತಿ ಹೊಂದಿರುವ ಅಥವಾ ನಿವೃತ್ತಿಯ ಅಂಚಿನಲ್ಲಿರುವ ವಿದ್ವಾಂಸರ ಸಕ್ರಿಯ ಮಾರ್ಗದರ್ಶನದ ಮೂಲಕ ಇದನ್ನು ಜಾರಿಗೊಳಿಸುವುದು.

ಸದರಿ ನೀತಿಯ ದೃಷ್ಟಿಕೋನದಲ್ಲಿ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳೂ ಸಹ  ಮೂರು ವಿಧದ ಸಂಸ್ಥೆಗಳಾದ ಸಂಶೋಧನಾ ಸಂಸ್ಥೆಗಳು, ಬೋಧನಾ ವಿವಿಗಳು ಹಾಗೂ ಕಾಲೇಜುಗಳಲ್ಲಿ ಒಂದಾಗಿರುತ್ತದೆ. ಇವುಗಳನ್ನು ಮುಂದೆ ನಾವು 1, 2 ಮತ್ತು 3 ವರ್ಗಗಳೆಂದು ಉಲ್ಲೇಖಿಸುತ್ತೇವೆ.

 

ವರ್ಗ 1: ಸಂಶೋಧನಾ ವಿವಿಗಳು: ಇವು ಸಂಶೋಧನೆ ಹಾಗೂ ಬೋಧನೆಯ ಕಡೆಗೆ ಸಮಾನ ಗಮನವಹಿಸುತ್ತವೆ. ಇವು ತೀಕ್ಷ್ಣ ಹಾಗೂ ಉನ್ನತ ಮಟ್ಟದ ಸಂಶೋಧನೆಗಳ ಕಡೆಗೆ ಗಮನ ಹರಿಸುವ ಜೊತೆಗೆ ಪದವಿಪೂರ್ವ, ಸ್ನಾತಕೋತ್ತರ, ಪಿಹೆಚ್.ಡಿ, ವೃತ್ತಿಪರ ಕೋರ್ಸುಗಳಲ್ಲಿ ಉನ್ನತಮಟ್ಟದ ಬೋಧನಾ ಕಾರ್ಯಕ್ರಮಗಳನ್ನು ನಡೆಸುತ್ತದೆ.  ಪ್ರಸ್ತುತ ಅನೇಕ ಪದವಿ ಮತ್ತು ಸಂಶೋಧನಾ ಸಂಸ್ಥೆಗಳು ಪದವಿಪೂರ್ವ ಶಿಕ್ಷಣವನ್ನು ಒದಗಿಸುತ್ತಿಲ್ಲ. ಮುಂದಿನ ಪೀಳಿಗೆಯು ಉತ್ತಮ ಶಿಕ್ಷಣ ಸಂಸ್ಥೆಗಳಿಂದ ದೊಡ್ಡ ಪ್ರಮಾಣದಲ್ಲಿ ತೇರ್ಗಡೆ ಹೊಂದುವ ಭರವಸೆ ನೀಡುವುದು ಅತ್ಯಗತ್ಯ. ಆದ್ದರಿಂದ ಈ ಸಂಸ್ಥೆಗಳು ಪದವಿಪೂರ್ವ ಕಾರ್ಯಕ್ರಮಗಳನ್ನು ನಡೆಸುವಂತೆ ಪ್ರೋತ್ಸಾಹವನ್ನೂ ನೀಡಲಾಗುವುದು.

ಇನ್ನು ಮುಂಬರುವ ಎರಡು ದಶಕಗಳಲ್ಲಿ ಹಲವಾರು ಸಂಸ್ಥೆಗಳು, ಅಂದರೆ ಸುಮಾರು 150-300 ಸಂಸ್ಥೆಗಳು 1 ನೇ ವಿಧದ ಅಡಿಯಲ್ಲಿ ಬರುತ್ತವೆ. ಮತ್ತು ಪ್ರತಿಯೊಂದು ಸಂಸ್ಥೆಯೂ ಸುಮಾರು 5000 ದಿಂದ 25000 ಅಥವಾ ಹೆಚ್ಚು ವಿದ್ಯಾರ್ಥಿಗಳನ್ನು ದಾಖಲುಮಾಡಿಕೊಳ್ಳುವ ಗುರಿಯನ್ನು ಹೊಂದಲಾಗಿದೆ.

ಅಂದಾಜಿನ ಪ್ರಕಾರ, ಎರಡು ದಶಕಗಳ ಅವಧಿಯಲ್ಲಿ, ಸುಮಾರು ೧೫೦ ರಿಂದ ೩೦೦ ಸಂಸ್ಥೆಗಳು ಮೊದಲನೇ ವರ್ಗಕ್ಕೆ(Type 1 category) ಸೇರುತ್ತವೆ ಮತ್ತು ಅಂತಹ ಪ್ರತೀ ಸಂಸ್ಥೆಯು ೫೦೦೦ ರಿಂದ ೨೫೦೦೦ಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು ತಮ್ಮ ತರಗತಿಳಲ್ಲಿ  ದಾಖಲಾತಿ ಮಾಡಿಕೊಳ್ಳುತ್ತವೆ. ಅವುಗಳು ಅತ್ಯುನ್ನತ ಮಟ್ಟದ ಸಂಶೊಧನಾ ಸಂಸ್ಥೆಗಳಾಗಿ ಪ್ರಪಂಚದ ಇನ್ನಿತರ ಸಂಸ್ಥೆಗಳೊಂದಿಗೆ ಪೈಪೋಟಿ ನಡೆಸುತ್ತವೆ.

ಎರಡನೇ ವರ್ಗ: ಕಲಿಕಾ ಮಹಾವಿದ್ಯಾಲಯಗಳು. ಇವುಗಳು ಮುಖ್ಯವಾಗಿ ಪದವಿಪೂರ್ವ, ಮಾಸ್ಟರ್ಸ್, ಡಾಕ್ಟರೇಟ್, ವೃತ್ತಿಪರ ಮತ್ತು ಡಿಪ್ಲೊಮಾದಂತಹ ವಿವಿಧ ಶೈಕ್ಷಣಿಕ ವಿಭಾಗಗಳಲ್ಲಿ ಉನ್ನತ ಗುಣಮಟ್ಟದ ಕಲಿಕೆಯ ಬಗ್ಗೆ ಕೇಂದ್ರೀಕರಿಸುವುದಲ್ಲದೇ, ಅತ್ಯುನ್ನತ ಸಂಶೋಧನೆಯಲ್ಲಿಯೂ ತೊಡಗಿಕೊಳ್ಳುತ್ತವೆ. ಅಂತಹ ಸಂಸ್ಥೆಗಳು ೫೦೦೦ ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯ ದಾಖಲಾತಿಯನ್ನು ಪಡೆಯಲು ಪ್ರಯತ್ನಿಸುತ್ತವೆ. ಎರಡು ದಶಕಗಳ ಅವಧಿಯಲ್ಲಿ ಅಂತಹ ಸರಿಸುಮಾರು ೧೦೦೦ ರಿಂದ ೨೦೦೦ ಸಂಸ್ಥೆಗಳು ಹುಟ್ಟಿಕೊಳ್ಳುತ್ತವೆಂದು ನಿರೀಕ್ಷಿಸಲಾಗಿದೆ. ಕಾಲಕ್ರಮೇಣ, ಇವುಗಳು ಸಂಶೋಧನೆ ಮತ್ತು ವಿವಿಧ ವಿಭಾಗಗಳಲ್ಲಿ ಅತ್ಯುನ್ನತ ಗುಣಮಟ್ಟವನ್ನು ತಲುಪುವ ಮೂಲಕ ಮೊದಲನೇ ವರ್ಗಕ್ಕೆ(Type 1 category) ಸೇರಲು ಪ್ರಯತ್ನಿಸುತ್ತವೆ.

 

ಮೂರನೇ ವರ್ಗ: ಕಾಲೇಜುಗಳು. ಇವುಗಳು ವಿಶೇಷವಾಗಿ ಉನ್ನತ ಗುಣಮಟ್ಟದ ಬೋಧನೆಯ ಮೇಲೆ ಕೇಂದ್ರೀಕರಿಸುತ್ತವೆ. ಈ ಸಂಸ್ಥೆಗಳು ಮುಖ್ಯವಾಗಿ ಪದವಿಪೂರ್ವ ಕಾರ್ಯಕ್ರಮಗಳನ್ನು ಹಾಗೂ ವಿವಿಧ ವಿಭಾಗ/ಕ್ಷೇತ್ರಗಳಲ್ಲಿ ಡಿಪ್ಲೋಮಾ, ಔದ್ಯೋಗಿಕ ಮತ್ತು ವೃತ್ತಿಪರ ಕಾರ್ಯಕ್ರಮಗಳನ್ನು ನಡೆಸುತ್ತವೆ. ಅಂತಹ, ಸರಿಸುಮಾರು ೫೦೦೦ ರಿಂದ ೧೦೦೦೦ ಸ್ವಾಯತ್ತ ಕಾಲೇಜುಗಳು, ೨೦೦೦ ರಿಂದ ೫೦೦೦ ಅಥವಾ ಹೆಚ್ಚಿನ ಕ್ಯಾಂಪಸ್ ದಾಖಲಾತಿಗಳ ಗುರಿಯೊಂದಿಗೆ, ಉನ್ನತ ಗುಣಮಟ್ಟದ ಪದವಿಪೂರ್ವ ಶಿಕ್ಷಣವನ್ನು ಒದಗಿಸುತ್ತವೆ. ಈ ಕಾಲೇಜುಗಳು ಡಿಪ್ಲೋಮಾ, ಔದ್ಯೋಗಿಕ ಮತ್ತು ಕೆಲ ವೃತ್ತಿಪರ ಕಾರ್ಯಕ್ರಮಗಳನ್ನೂ ಒದಗಿಸುವ ನಿರೀಕ್ಷೆಯಿದೆ. ಸಂಶೋಧನೆಯಿಂದಾಗಿ ಶಿಕ್ಷಣ, ಅಂತೆಯೇ ಶಿಕ್ಷಣದಿಂದಾಗಿ ಸಂಶೋಧನೆ, ಉತ್ತಮಗೊಳ್ಳುವುದರಿಂದ  ಈ ಕಾಲೇಜುಗಳಲ್ಲಿನ ಬೋಧಕವರ್ಗಕ್ಕೆ ಸಂಶೊಧನೆಗೆ ಅರ್ಜಿ ಸಲ್ಲಿಸಿ, ಪದವಿಪೂರ್ವ ವಿದ್ಯಾರ್ಥಿಗಳಿಗೆ ಸಂಶೋಧನೆಯ ರುಚಿ ಮತ್ತು ಮಹತ್ವವನ್ನು ತಿಳಿಸಲು ಪ್ರೇರೇಪಿಸುತ್ತದೆ. ಕಾಲಕ್ರಮೇಣ, ಅಂಥ ಸ್ವಾಯತ್ತ ಕಾಲೇಜುಗಳು ಗುಣಮಟ್ಟದ ಸಂಶೋಧನೆ ನಡೆಸುತ್ತಾ, ಪದವಿ ಕಾರ್ಯಕ್ರಮಗಳನ್ನು ಆರಂಭಿಸಿ, ಮೊದಲ ಅಥವ ಎರಡನೇ ವರ್ಗದ ಸಂಸ್ಥೆಗಳಾಗುವೆಡೆಗೆ ಗಮನ ಹರಿಸಬಹುದು.

ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳಂತೆ ಖಾಸಗಿ ಉನ್ನತ ಶಿಕ್ಷಣ ಸಂಸ್ಥೆಗಳೂ ಕೂಡಾ ಸಂಶೋಧನಾ ನೆರವಿಗಾಗಿ ಎನ್‍‍ಆರ್‍‍ಎಫ್‍ ನಿಧಿಯನ್ನು ಬಳಸಿಕೊಳ್ಳಬಹುದು.

‘ಡೀಮ್ಡ್ ಟು ಬಿ ಯುನಿವರ್ಸಿಟಿ’, ‘ಅಫ್ಲಿಯೇಟಿಂಗ್ ಯುನಿವರ್ಸಿಟಿ’, ‘ಯುನಿಟರಿ ಯುನಿವರ್ಸಿಟಿ’ – ಹೀಗೆ ಪ್ರಸ್ತುತ ದೇಶದ ಉನ್ನತ ಶಿಕ್ಷಣ ಸಂಸ್ಥೆಗಳ ಹೆಸರಿನ ವಿಚಾರದ ಗೊಂದಲ ಮುಗಿಯಲಿದೆ. ಇನ್ನು ಮುಂದೆ ವಿಶ್ವವಿದ್ಯಾಲಯಗಳು ಸರ್ಕಾರಿ, ಖಾಸಗಿ ಅಥವಾ ಖಾಸಗಿ-ಅನುದಾನಿತ ಮತ್ತು ಬಹುಶಿಸ್ತಿನ ಸಂಶೋಧನಾ ವಿಶ್ವವಿದ್ಯಾಲಯಗಳು (ಟೈಪ್ 1) ಅಥವಾ ಸಮಗ್ರ ಬೋಧನಾ ವಿಶ್ವವಿದ್ಯಾಲಯಗಳು (ಟೈಪ್ 2) ಎಂದು ವರ್ಗೀಕರಣಗೊಳ್ಳಲಿವೆ.

2032ರಿಂದ ಪದವಿಗಳು ಹಾಗೂ ಡಿಪ್ಲೊಮಾಗಳು ಸೇರಿದಂತೆ ಎಲ್ಲಾ ಉನ್ನತ ಶಿಕ್ಷಣ ಪದವಿಗಳನ್ನೂ ಮಾನ್ಯತೆ ಪಡೆದ 1, 2 ಅಥವಾ 3 ನೇ ವರ್ಗದ ಶಿಕ್ಷಣ ಸಂಸ್ಥೆಗಳು ಮಾತ್ರವೇ ನೀಡಬೇಕಾಗುತ್ತದೆ.

ಎಲ್ಲಾ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳೂ ಒಂದು ಅಥವಾ ಅದಕ್ಕಿಂತ ಹೆಚ್ಚಿನ ಕ್ಯಾಂಪಸ್‍ ಜತೆಗೆ ವರ್ಗ 1 ಅಥವಾ ವರ್ಗ 2 ಸಂಸ್ಥೆಗಳಾಗಿ ಪರಿವರ್ತನೆಯಾಗಲಿವೆ. ವಿಶ್ವವಿದ್ಯಾಲಯಗಳು ಮಾನ್ಯತೆ ಪಡೆದ (affiliated) ಕಾಲೇಜುಗಳನ್ನು ಹೊಂದಿರುವುದಿಲ್ಲ.

ಈಗ ಕಾರ್ಯನಿರ್ವಹಿಸುತ್ತಿರುವ ಮಾನ್ಯತೆ ಪಡೆದ ಕಾಲೇಜುಗಳು2032ರಿಂದ ಪದವಿ ನೀಡುವ ಸ್ವಾಯತ್ತ ಶಿಕ್ಷಣ ಸಂಸ್ಥೆಗಳಾಗಿ (ಟೈಪ್ 3)ಅಭಿವೃದ್ಧಿಯಾಗಬೇಕು ಅಥವಾ ಮಾನ್ಯತೆ ಪಡೆದ ವಿಶ್ವವಿದ್ಯಾಲಯದೊಂದಿಗೆ ಸಂಪೂರ್ಣವಾಗಿ ವಿಲೀನವಾಗಬೇಕು ಅಥವಾ 1 ಅಥವಾ 2ನೇ ವರ್ಗದ ವಿಶ್ವವಿದ್ಯಾಲಯಗಳಾಗಿ ಅಭಿವೃದ್ಧಿ ಹೊಂದಬೇಕು. ಈ ಪರಿವರ್ತನೆಯು ರಾಜ್ಯಮಟ್ಟದ ಹೊಸ ಉನ್ನತ ಶಿಕ್ಷಣ ಸಂಸ್ಥೆಗಳ ಉನ್ನತೀಕರಣದ ಭಾಗವಾಗಿರಲಿದೆ.

ನಾಲ್ಕು ವರ್ಷಗಳ ಬಿಎಲ್ಎ ಅಥವಾ ಬಿಎಲ್ಇ ಕಾರ್ಯಕ್ರಮಗಳು ಪ್ರಗತಿಪರ ಕಲಾ ಶಿಕ್ಷಣದ ಸಂಪೂರ್ಣ ಅನುಭವ ಪಡೆಯಲು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಬೇಕು. ಮೂರು ವರ್ಷಗಳ ಕಾರ್ಯಕ್ರಮಗಳು ಬ್ಯಾಚಲರ್ ಪದವಿಗಳಾಗಲಿವೆ. ಉನ್ನತ ಶಿಕ್ಷಣ ಸಂಸ್ಥೆಗಳು ನಿಗದಿಪಡಿಸಿದ ಕಠಿಣ/ಮಹತ್ವದ ಸಂಶೋಧನಾ ಯೋಜನೆಯನ್ನು ವಿದ್ಯಾರ್ಥಿಗಳು ಪೂರ್ಣಗೊಳಿಸಿದ್ದರೆ ಈ ಎರಡೂ ಕಾರ್ಯಕ್ರಮಗಳು ‘ಸಂಶೋಧನೆ’ಯ ಹೆಸರಿನೊಂದಿಗೆ ಪದವಿ ನೀಡಬಹುದು. ಉನ್ನತ ಶಿಕ್ಷಣ ಸಂಸ್ಥೆಗಳು ತಮ್ಮ ಮೂರು ವರ್ಷದ ಸ್ನಾತಕ ಪದವಿ ಕಾರ್ಯಕ್ರಮಗಳನ್ನು ಬ್ಯಾಚಲರ್ ಆಫ್ ಆರ್ಟ್ಸ್ ಅಥವಾ ಸೈನ್ಸ್ ಅಥವಾ ವೊಕೇಷನ್ ಅಥವಾ ಆಯಾ ವೃತ್ತಿಕ್ಷೇತ್ರಕ್ಕೆ ಸೂಕ್ತವಾದ ಹೆಸರಿನೊಂದಿಗೆ ಕರೆಯಬಹುದು. ನಿರ್ದಿಷ್ಟ ವೃತ್ತಿಪರ ಕಾರ್ಯಕ್ರಮಗಳಾದ ಶಿಕ್ಷಕರ ತರಬೇತಿ, ಎಂಜಿನಿಯರಿಂಗ್,ವೈದ್ಯಕೀಯ, ಕಾನೂನು ಮೊದಲಾದ ಸ್ನಾತಕ ಪದವಿಗಳು ನಾಲ್ಕು ವರ್ಷಗಳ ಅವಧಿಯನ್ನು ಹೊಂದಿರಲಿವೆ.

ಪಿಎಚ್‍.ಡಿ ಪಡೆಯಲು ಸ್ನಾತಕೋತ್ತರ ಪದವಿ ಅಥವಾ’ಸಂಶೋಧನೆ’ಯೊಂದಿಗೆ ನಾಲ್ಕು ವರ್ಷಗಳ ಪದವಿ ಅಗತ್ಯವಾಗಲಿದೆ.

ಎಂಫಿಲ್ ಕಾರ್ಯಕ್ರಮವನ್ನು ನಿಲ್ಲಿಸಲಾಗುತ್ತದೆ.

ಖಾಸಗಿ ಉನ್ನತ ಶಿಕ್ಷಣ ಸಂಸ್ಥೆಗಳು ತಮ್ಮ ವಿದ್ಯಾರ್ಥಿಗಳಲ್ಲಿ ಕನಿಷ್ಠ ಅರ್ಧದಷ್ಟು ವಿದ್ಯಾರ್ಥಿಗಳಿಗೆ ಶೇಕಡ100ರಿಂದ ಶೇಕಡ50ರ ಪ್ರಮಾಣದಲ್ಲಿ ವಿದ್ಯಾರ್ಥಿವೇತನ ನೀಡಲು ಮುಂದಾಗಬೇಕು.

ಉನ್ನತ ಶಿಕ್ಷಣ ಸಂಸ್ಥೆಗಳು ಸಾಂಪ್ರದಾಯಿಕ, ಮುಕ್ತ ಹಾಗೂ ದೂರ ಶಿಕ್ಷಣ (ಒಡಿಎಲ್) ಕಲಿಕೆಯ ಅವಕಾಶಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಬೇಕು. ಎಲ್ಲಾ 1 ಮತ್ತು 2ನೇ ವರ್ಗದ ಶಿಕ್ಷಣ ಸಂಸ್ಥೆಗಳು ತಮ್ಮಲ್ಲಿರುವ ಗುಣಮಟ್ಟದ ಬೋಧಕರ ನೆರವಿನೊಂದಿಗೆ ಹೊಸರೀತಿಯ ಒಡಿಎಲ್ ಕಾರ್ಯಕ್ರಮಗಳನ್ನು ನಡೆಸಲು ಉತ್ತೇಜನ ನೀಡಬೇಕು. ಈಗಾಗಲೇ ಜಾರಿಯಲ್ಲಿರುವ ಶೈಕ್ಷಣಿಕ ಕಾರ್ಯಕ್ರಮಗಳನ್ನು ಬಳಸಿಕೊಂಡು ಒಡಿಎಲ್ ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸಬೇಕು. ಸಾಂಪ್ರದಾಯಿಕ ತರಗತಿ ಕಲಿಕೆಯ ಕಾರ್ಯಕ್ರಮದ ಗುಣಮಟ್ಟದಲ್ಲೇ ವಿಶೇಷವಾದ ಒಡಿಎಲ್ ಕಾರ್ಯಕ್ರಮಗಳನ್ನು ನೀಡಲು ಈ ಸಂಸ್ಥೆಗಳು ಮುಂದಾಗಬೇಕು. ಟೈಪ್ 3 ಸಂಸ್ಥೆಗಳು ಸೂಕ್ತ ಮಾನ್ಯತೆ ಪಡೆದಿರುವ ಆಧಾರದ ಮೇಲೆ ಒಡಿಎಲ್ ಕಾರ್ಯಕ್ರಮಗಳನ್ನು ನಡೆಸಬಹುದು.

ಮಾಸಿವ್ ಒಪನ್ ಆನ್‍‍ಲೈನ್‍‍ ಕೋರ್ಸ್‍‍ಗಳಿಂದ (MOOC) ಗಳಿಸಿರುವ ಕ್ರೆಡಿಟ್‍‍ಗಳನ್ನು ಗುರುತಿಸಿ ಸಂಗ್ರಹಿಸಬೇಕು. ರಾಷ್ಟ್ರೀಯ ಉನ್ನತ ಶಿಕ್ಷಣ ಅರ್ಹತಾ ನೀಲನಕ್ಷೆಯ (NHEQF) ಭಾಗವಾಗಿ ಜನರಲ್ ಎಜುಕೇಷನ್ ಕೌನ್ಸಿಲ್‍‍ (GEC) ಎಂಒಒಸಿ ಮೂಲಕ ಗಳಿಸಿರುವ ಕ್ರೆಡಿಟ್‍‍ಗಳನ್ನು ಗುರುತಿಸಿ ಸಂಗ್ರಹಿಸುವ ವ್ಯವಸ್ಥೆ ಜಾರಿಗೆ ಬರಬೇಕು. ಕೋರ್ಸ್‍‍ ನಡೆಸುವ ವಿಧಾನ, ವಿದ್ಯಾರ್ಥಿಗಳಿಗೆ ಕಲಿಸುವ ವ್ಯವಸ್ಥೆ, ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸುವ ವಿಧಾನ,ವಿದ್ಯಾರ್ಥಿಗಳ ಕಲಿಕೆ ಗುಣಮಟ್ಟ ಅಳೆಯುವ ವಿಧಾನಗಳನ್ನು ಪರಿಶೀಲಿಸಿ, NHEQF ಜತೆಗೆ ಆಯಾ ಕಾರ್ಯಕ್ರಮದ ವಿಷಯ ಖಚಿತಪಡಿಸಿಕೊಂಡು ಜಗತ್ತಿನ ಯಾವುದೇ ವಿಶ್ವವಿದ್ಯಾಲಯ ನಡೆಸುವ ಎಂಒಒಸಿ(MOOC)ಗಳಿಗೆ ಸೂಕ್ತ ಮಾನ್ಯತೆ ನೀಡಬಹುದು.ವಿದ್ಯಾರ್ಥಿಗಳ ಕಲಿಕೆಗೆ ಅಗತ್ಯವೆನಿಸುವ ಆದರೆ, ತಮ್ಮ ಸಂಸ್ಥೆಯಲ್ಲಿ ಇಲ್ಲದ ವಿಷಯಗಳನ್ನು ಮಾನ್ಯತೆ ಪಡೆದ MOOC ಮೂಲಕ ಪಡೆಯಲು ವಿದ್ಯಾರ್ಥಿಗಳು ಬಯಸಿದರೆ ಶಿಕ್ಷಣ ಸಂಸ್ಥೆಗಳು ಅಂತಹ ವಿದ್ಯಾರ್ಥಿಗಳಿಗೆ ಅನುಮತಿ ನೀಡಬೇಕು.

ವಿಶ್ವವಿದ್ಯಾನಿಲಯಗಳ  ಸಂಸ್ಥೆಗಳಿಗೆ  ಪ್ರತ್ಯೇಕವಾಗಿ ನೇಮಕಾತಿಗಳನ್ನು ಮಾಡಲಾಗುವುದು ಮತ್ತು ಸಿಬ್ಬಂದಿಗಳನ್ನು ಎರಡು ಪ್ರತ್ಯೇಕ ಸಂಸ್ಥೆಗಳ ನಡುವೆ ವರ್ಗಾವಣೆ ಸಾಧ್ಯವಿರುವುದಿಲ್ಲ.

 

HRDCಯನ್ನು ಈಗಾಗಲೇ   ಆತಿಥ್ಯ ವಹಿಸಿರುವ  ವಿಶ್ವವಿದ್ಯಾನಿಲಯಗಳ ಬಾಹ್ಯ ಅಂಗವಾಗಿರಿಸದೆ , ವಿಶ್ವವಿದ್ಯಾನಿಲಯದ ಆಂತರಿಕ ಭಾಗವಾಗಿಸುವುದು.

 

ಮಾನವ ಸಂಪನ್ಮೂಲ ಇಲಾಖೆಯ ಸಚಿವಾಲಯವು , HRDCಯ ಖರ್ಚು ವೆಚ್ಚವನ್ನು ಎರಡು ವಿಧವಾಗಿ ಭರಿಸುವುದು i)ವಿಶ್ವವಿದ್ಯಾಲಯದ ಆಯವ್ಯದಲ್ಲಿ ನಮೂದಾಗಿರುವ ಸಿಬ್ಬಂದಿ  ಮತ್ತು ಸಚಿವಾಲಯದ ಕೇಂದ್ರದ ಖರ್ಚು ii)ವೃತ್ತಿಪರ ತರಬೇತಿ ಕಾರ್ಯಕ್ರಮಗಳ ವೆಚ್ಚ

HRDCಗೆ ಖಾಸಗಿ ಉನ್ನತ ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಗೆ ತರಬೇತಿ ನೀಡಲು ಅನುಮತಿ ನೀಡಲಾಗುವುದು ಮತ್ತು ತರಬೇತಿ ಕಾರ್ಯಕ್ರಮಗಳಿಗೆ ಶುಲ್ಕ ವಿಧಿಸುವುದು

HRDCಯ ಕಾರ್ಯಾಲಯಗಳ ಸಂಖ್ಯೆಯನ್ನು ಬಹುಶಿಸ್ತೀಯ ವಿಶ್ವವಿದ್ಯಾನಿಲಯಗಳಲ್ಲೇ ಹೊಸ HRDCಗಳಿಗೆ ಹಣಕಾಸಿನ ನೆರವು ನೀಡುವುದರ ಮೂಲಕ ಹೆಚ್ಚಿಸುವುದು

ಸಂಶೋಧನೆಗಳ ಮೂಲ್ಯನಿರ್ಣಯದಿಂದ ಕೆಲಸದ ಗುಣಮಟ್ಟವನ್ನು ಆಳವಾಗಿ ಅಳೆಯುವುದು ಹಾಗೂ ಮೂಲ್ಯವನ್ನು ಕೇವಲ ಪ್ರಕಟಣೆಗಳ ಸಂಖ್ಯೆಯ ಮೇಲೆ ನಿರ್ಣಯಿಸದಿರುವುದು; ಪ್ರಕಾಶಿಸಿದ ಸಂಸ್ಥೆಯ (ಜರ್ನಲ್ ಇತ್ಯಾದಿ) ವಿಶ್ವಾಸಾರ್ಹತೆ ಮತ್ತು ಖ್ಯಾತಿಯನ್ನು ಗಮನದಲ್ಲಿ ಇಟ್ಟುಕೊಳ್ಳಲಾಗುವುದು ಮತ್ತು ಕಳಪೆಮಟ್ಟದ  (ಕೆಲವು ನಕಲಿ ಕೂಡ) ಪ್ರಕಾಶನಗಳನ್ನು  ನಂಬುವುದನ್ನು ತಪ್ಪಿಸಲಾಗುವುದು

ಮೂರು ಬಗೆಯ ಶೈಕ್ಷಣಿಕ ಸಿಬ್ಬಂದಿಗಳನ್ನು ನೇಮಿಸಲಾಗುವುದು : ಸಹಾಯಕ ಪ್ರಾಧ್ಯಾಪಕರು , ಸಹ ಪ್ರಾಧ್ಯಾಪಕರು ಮತ್ತು ಪ್ರಾಧ್ಯಾಪಕರು ಹಾಗೂ ಸಿಬ್ಬಂದಿಗಳ ಬಡ್ತಿಯನ್ನು ಮೇಲೆ ಹೇಳಿದ ಮಾನದಂಡಗಳ ಮೂಲಕ ನಿರ್ಧರಿಸಲಾಗುವುದು. ಮೇಲೆ ಹೇಳಿದ ಮೂರು ಬಗೆಯ ಪ್ರಾಧ್ಯಾಪಕರಲ್ಲೂ  ವಿವಿಧ ವೇತನ ಶ್ರೇಣಿಗಳು ಇರುವುವು ಮತ್ತು ಕೆಲವೊಮ್ಮೆ  ಶ್ರೇಣಿಗಳ  ನಡುವೆಯೇ ವೇತನ ಹಂಚಿಕೆ ಭಿನ್ನವಾಗಿರಬಹುದು. ಉನ್ನತ ಶಿಕ್ಷಣ ಸಂಸ್ಥೆಯು  ಸಿಬ್ಬಂದಿ ವರ್ಗದ ರಚನೆ ಮತ್ತು ಶ್ರೇಣಿಗಳನ್ನು  ನಿರ್ಧರಿಸುವ ಹಕ್ಕನ್ನು ಹೊಂದಿರುತ್ತದೆ.

ಸಂಸತ್ತಿನ ಅನುಮೋದನೆಯ ಮೂಲಕ ರಾಷ್ಟ್ರೀಯ ಸಂಶೋಧನ ಸಂಸ್ಥೆಯನ್ನು ರಚಿಸುವುದು. ಈ ಸಂಸ್ಥೆಯು ಸ್ವಾಯತ್ತ ಸಂಸ್ಥೆಯಾಗಿದ್ದು ದೇಶಾದ್ಯಂತ ಕಾಲೇಜು ಮತ್ತು ವಿಶ್ವ ವಿದ್ಯಾಲಯಗಳಲ್ಲಿ (ಸರ್ಕಾರಿ ಮತ್ತು ಖಾಸಗಿ) ಗುಣಮಟ್ಟದ ಸಂಶೋಧನೆಗಳನ್ನು ಕೈಗೊಳ್ಳಲು ಹಣ ಒದಗಿಸುವುದು, ಮೇಲ್ವಿಚಾರಣೆ ಮಾಡುವುದು, ಸಂಶೋಧಕರಿಗೆ ತರಬೇತಿ ನೀಡುವುದರ ಮೂಲಕ ಅವರ ಕೌಶಲಗಳನ್ನು ಅಭಿವೃಧ್ಧಿ ಮಾಡುವಂತಹ ಕೆಲಸಗಳನ್ನು ನಿರ್ವಹಿಸಬೇಕು. ಈ ಸಂಶೋಧನಾ ಸಂಸ್ಥೆಯು ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವಂತೆ ಉತ್ತಮ ಕಛೇರಿ ವ್ಯವಸ್ಥೆ ಮತ್ತು ತರಬೇತುಗೊಂಡ ಸಿಬ್ಬಂದಿಗಳನ್ನು ಪೂರೈಸಬೇಕು

ರಾಷ್ಟ್ರೀಯ ಸಂಶೋಧನಾ ಸಂಸ್ಥೆಗೆ ಅನುದಾನ – ಪ್ರತಿವರ್ಷ 20000 ಕೋಟಿ ಅನುದಾನವನ್ನು ನೀಡಬೇಕು

ರಾಷ್ಟ್ರೀಯ ಸಂಶೋಧನಾ ಸಂಸ್ಥೆಯಿಂದ ಅನುದಾನವನ್ನು ಪಡೆಯಲು ಬೇಕಾಗುವ ಅರ್ಹತೆಗಳು- ಯಾವುದೇ ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳು, ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳ  ಸಂಶೋಧಕರು ಅನುದಾನಕ್ಕಾಗಿ ಬೇಡಿಕೆ ಸಲ್ಲಿಸಬಹುದು. ಅದೇ ರೀತಿ ಇತರೆ ಸಂಶೋಧಕರು ಕೂಡ ಇಚ್ಛಿಸಿದಲ್ಲಿ ಅನುದಾನ ಪಡೆಯಬಹುದಾಗಿದೆ.

ಸಂಶೋಧನೆಗಾಗಿ ಅನುದಾನ ನೀಡುತ್ತಿರುವ ಇತರೆ ಸಂಸ್ಥೆಗಳು- ಈಗಾಗಲೇ DST, DAE, DBT, ICAR, ICMR, UGC ಮತ್ತು ಇತರೆ  ಖಾಸಗಿ ಮತ್ತು ಲೋಕೋಪಯೋಗಿ ಸಂಸ್ಥೆಗಳು ಸಂಶೋಧನೆಗಾಗಿ ಅನುದಾನವನ್ನು ನೀಡುತ್ತಿದ್ದು, ಅವು ತಮ್ಮ ನಿಯಮಗಳಿಗನುಗುಣವಾಗಿ ತಮ್ಮ ಅನುದಾನವನ್ನು ಮುಂದುವರಿಸುತ್ತವೆ.

ರಾಷ್ಟ್ರೀಯ ಸಂಶೋಧನ ಸಂಸ್ಥೆಯು ಎಲ್ಲಾ ಸ್ಪರ್ಧಾತ್ಮಕ, ಸಹ-ಸಂಶೋಧಕರ ಅವಲೋಕನಕ್ಕೊಳಪಟ್ಟ ಎಲ್ಲಾ ಕ್ಷೇತ್ರಗಳಿಗೆ ಸಂಬಂಧಿಸಿದ ಹಾಗೂ ಎಲ್ಲಾ ರೀತಿಯ ಸಂಶೋಧನಾ ಪ್ರಸ್ತಾವನೆಗಳಿಗೆ ಅನುದಾನವನ್ನು ಒದಗಿಸುತ್ತದೆ. ಸಂಶೋಧನಾ ಪ್ರಸ್ತಾವನೆಗಳ ವಿಧಗಳು: ಕೆಳಕಂಡಥವನ್ನೂ ಸೇರಿಸಿ, ವಿವಿಧ ರೀತಿಯ ಪ್ರಸ್ತಾವನೆಗಳನ್ನು ಅನುವದಿಸಲಾಗುತ್ತದೆ

೧) ಒಬ್ಬನೇ ಮುಖ್ಯ ಸಂಶೋಧಕ ಒಳಗೊಂಡ ಸಂಶೋಧನೆ

೨) ಒಂದೇ ಸಂಸ್ಥೆಯೊಳಗೇ ನಡೆಯುವ ಅಥವಾ ಹಲವು ಸಂಸ್ಥೆಗಳ ಸಹಯೋಗದಲ್ಲಿ ಪ್ರಾಯೋಜಿಸಲ್ಪಡುವ ಸಂಶೋಧನೆಗಳು

೩) ಸಂಶೋಧನಾ ಕೌಶಲ್ಯಕ್ಕೆ ತಳಪಾಯ ಹಾಕುವ ನಿಟ್ಟಿನಲ್ಲಿ , ಮಾರ್ಗದರ್ಶಕ-ಸಂಶೋಧಕ ಹಾಗೂ ಅನುಚರ ಸಂಸ್ಥೆಯೂ ಒಳಗೊಂಡಿರುವ ಸಂಶೋಧನೆ

೪) ಈಗಾಗಲೇ ಸಂಶೋಧನೆ ಮಾಡುತ್ತಿರುವ ಸಂಸ್ಥೆಗಳ ಕೌಶಲ್ಯ ಅಭಿವೃಧ್ಧಿಯಿಂದ ಸದರಿ ಸಂಸ್ಥೆಗಳನ್ನು ಇನ್ನೂ ಉತ್ತಮ ದರ್ಜೆಗೆ ಕೊಂಡೊಯ್ಯುವ ಸಂಶೋಧನೆ

೫) ದೇಶದಲ್ಲಿ ಉತ್ತಮ ಸಂಶೋಧನೆಗೆ ಇಂಬು ನೀಡುವಂತಹ ಸಂಶೋಧನಾ ಒಕ್ಕೂಟ ಹಾಗೂ ಸಮ್ಮೇಳನಗಳು

೬) ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಾಮುಖ್ಯತೆಯ ಸಂಶೋಧನಾ ಸವಲತ್ತುಗಳು

ಸಂಶೋಧನಾ ಪ್ರಸ್ತಾವನೆಗಳು ಸಾಮಾನ್ಯವಾಗಿ 3 ವರ್ಷದ ಅವಧಿಯ ಸಂಶೋಧನಾ ಯೋಜನೆಗಳದ್ದಾಗಿರುತ್ತವೆ, ಆದಾಗಿಯೂ ಅಧಿಕ ಪ್ರಭಾವ ಬೀರುವಂತಹ ಅತ್ಯುತ್ತಮ ಸಂಶೋಧನಾ ಪ್ರಸ್ತಾವನೆಗೆ 5 ಅಥವಾ ಅತಿ ವಿಶೇಷ ಸಂಧರ್ಭಗಳಲ್ಲಿ ಅದಕ್ಕಿಂತ ಹೆಚ್ಚಿನ ಅವಧಿಯ ಯೋಜನೆಗಳನ್ನೂ  ಪರಿಗಣಿಸಲಾಗುವುದು.

ಯೋಜನೆ (ಪ್ರಾಜೆಕ್ಟ್) ಗಳಿಗೆ ಒಬ್ಬ ಮಾರ್ಗದರ್ಶಿಯನ್ನು ಒದಗಿಸಲಾಗುವುದು (ನಿವೃತ್ತಿ ಹೊಂದಿದ ಯಾವುದೇ ವಯೋಮಾನದ ವ್ಯಕ್ತಿಗಳು, ವಯಸ್ಸಿನ ಮಿತಿಯಿಲ್ಲ), ಅವರುಗಳು ಅವರ ಪಿಂಚಣಿಯ ಜೊತೆಗೆ ವೇತನವನ್ನೂ ಪಡೆಯುತ್ತಾರೆ.

ಪ್ರಾಜೆಕ್ಟ್ ಕಾರ್ಯದ ಜೊತೆಗೆ ಅವರು ಕನಿಷ್ಟ ಒಂದು ವಿಷಯದ ಬೋಧನೆಯನ್ನು ಮಾಡಬೇಕಾಗುತ್ತದೆ.

ಉದ್ಯಮಗಳಿಂದ ದೇಣಿಗೆ ಸಹಾಯ:  ಸಾರ್ವಜನಿಕ ಹಾಗು ಖಾಸಗಿ ಉದ್ಯಮಗಳು ತಮ್ಮ ವಾರ್ಷಿಕ ಲಾಭಾಂಶದಿಂದ ಒಂದು ಸಣ್ಣ ಭಾಗವನ್ನು, ಕನಿಷ್ಟ1% ಆದರೂ, ಸಂಶೋಧನಾ ಯೋಜನೆಗಳಿಗೆ ( ಉದಾ: ಎನ್.ಆರ್,ಎಫ್ ನ ಸಂಶೋಧನೆಗಳಿಗೆ ದೇಣಿಗೆಯ ರೂಪದಲ್ಲಿ) ವಿನಿಯೋಗಿಸಬೇಕೆಂದು ಶಿಫಾರಸ್ಸು ಮಾಡಲಾಗಿದೆ. ಇದು ಉದ್ಯಮಗಳ ಸಿ.ಎಸ್.ಆರ್ ನಿಧಿಯ ವ್ಯಾಪ್ತಿಯಲ್ಲಿ ಇರಬಹುದು ಅಥವಾ ಅದನ್ನು ಹೊರತುಪಡಿಸಿ ಬೇರೆ ರೀತಿಯ ದೇಣಿಗೆ ಆಗಿರಬಹುದು, ಈ ದೇಣಿಗೆಗಳಿಗೆ ಸೂಕ್ತವಾದ ತೆರಿಗೆ ವಿನಾಯಿತಿಯು ಲಭ್ಯವಾಗುತ್ತದೆ.

ಪ್ರಶಸ್ತಿಗಳು ಮತ್ತು ರಾಷ್ಟ್ರೀಯ ಸೆಮಿನಾರುಗಳ ಮೂಲಕ ನಿಜವಾದ ಅರ್ಥದಲ್ಲಿ ಅತ್ತ್ಯುತ್ತಮವಾದ ಸಂಶೋಧನೆಗಳನ್ನು ಗುರುತಿಸುವಿಕೆ:  ದೇಶದಲ್ಲಿ ಅತ್ಯಂತ ಯಶಸ್ವಿಯಾದ ಸಂಶೋಧನೆಗಳಿಗೆ ಮತ್ತು ನಿರ್ದಿಷ್ಟವಾಗಿ ಎನ್.ಆರ್,ಎಫ್ ನಿಂದ ಅನುದಾನ ಪಡೆದ ಸಂಶೋಧನೆಗಳಿಗೆ ಪ್ರಶಸ್ತಿಗಳನ್ನು  ನೀಡುವ ಒಂದು ವ್ಯವಸ್ಥೆಯನ್ನು ಎನ್.ಆರ್.ಎಫ್ ಸ್ಥಾಪಿಸುತ್ತದೆ. ಈಪ್ರಶಸ್ತಿಗಳನ್ನು ವಿವಿಧ ವಿಷಯ ಹಾಗು ಶಾಖೆಗಳ ವಿವಿಧ ವಿಭಾಗಗಳಿಗೆ ನೀಡಲಾಗುತ್ತದೆ, ಉದಾ: ಈ ಹಿಂದೆ ಸಂಶೋಧನೆಗಳು  ಮಿತವಾಗಿದ್ದ ಜಾಗದಲ್ಲಿ ಸೋಶೋಧನೆಯ ಬೀಜ ಬಿತ್ತಿ ಅದನ್ನು ಬೆಳೆಸಲು ಶ್ರಮಿಸುತ್ತಿರುವ  ಪೋಸ್ಟ್ ಡಾಕ್ಟೋರಲ್ ಸದಸ್ಯರುಗಳು, ಮತ್ತು  ಯುವ ಸ್ಥಿರಾವಧಿ ರಹಿತ ಸಂಶೋಧಕ ಸಿಬ್ಬಂದಿ, ಮತ್ತು ಸಂಸ್ಥೆಗಳಿಗೆ ( ಹಾಗು ಇದರಲ್ಲಿ ಭಾಗಿಯಾಗಿರುವ ವ್ಯಕ್ತಿಗಳಿಗೆ). ಅತ್ತ್ಯುತ್ತಮ ಸಂಶೋಧನೆಗಳು ಪ್ರತಿಪಾದಿಸುತ್ತಿರುವ ಸಮಸ್ಯೆಗಳ ಪರಿಹಾರೋಪಾಯದಲ್ಲಿ ಪ್ರಶಸ್ತಿ ವಿಜೇತ ಸಂಶೋಧಕರು, ಇತರ ವಿದ್ವಾಂಸರು, ಮತ್ತು ಸಾರ್ವಜನಿಕರುಗಳು ಒಳಗೊಳ್ಳುವುದನ್ನು ಪ್ರೋತ್ಸಾಹಿಸಲು ಎನ್.ಆರ್,ಎಫ್ ರಾಷ್ಟ್ರೀಯ ಮಟ್ಟದ ವಿಚಾರ ಗೋಷ್ಠಿಗಳನ್ನು ಮತ್ತು ಸಾರ್ವಜನಿಕ ಉಪನ್ಯಾಸಗಳನ್ನು ಕೂಡ ಆಯೋಜಿಸುತ್ತದೆ.

ಕಳಪೆ ಗುಣಮಟ್ಟ ಹಾಗು ನಿಷ್ಕ್ರಿಯವಾದ ಶಿಕ್ಷಕ ತರಬೇತಿ ಸಂಸ್ಥೆಗಳನ್ನು  ಮುಚ್ಚುವುದು:

ಕನಿಷ್ಟ ಮಟ್ಟದ ವಿದ್ಯಾಭ್ಯಾಸದ ಮಾನದಂಡವನ್ನು ಪೂರೈಸದ ಕಳಪೆ ಗುಣಮಟ್ಟ ಹಾಗು ನಿಷ್ಕ್ರಿಯವಾದ ಶಿಕ್ಷಕ ತರಬೇತಿ ಸಂಸ್ಥೆಗಳನ್ನು ಮುಚ್ಚಲಾಗುತ್ತದೆ. ಗಟ್ಟಿಯಾದ ರಾಜಕೀಯ ಇಚ್ಛಾಶಕ್ತಿ, ಗುಣಾತ್ಮಕ ಆಡಳಿತದ ಉದ್ದೇಶ ಮತ್ತು  ಪರಿಣಾಮಕಾರಿ ಅನುಷ್ಠಾನ ತಂತ್ರಗಳೊಂದಿಗೆ ಎಮ್.ಎಚ್.ಆರ್.ಡಿ ಯು ಈ ಪ್ರಯತ್ನವನ್ನು ಜಾರಿಗೊಳಿಸುವ ಗುರಿಯನ್ನು ಹೊಂದಿದೆ.

ಈ ಪ್ರಯತ್ನವನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯವು, ಯೋಜಿತ ಕ್ರಮದಲ್ಲಿ, ಗಟ್ಟಿಯಾದ ರಾಜಕೀಯ ಇಚ್ಛಾಶಕ್ತಿ, ಧನಾತ್ಮಕ ಆಡಳಿತ ಉದ್ದೇಶ ಹಾಗೂ ಪ್ರಭಾವಶಾಲಿ ಅನುಷ್ಠಾನ ತಂತ್ರದೊಂದಿಗೆ ಪ್ರಾರಂಭಿಸಲಿದೆ.

ಎಲ್ಲಾ TEI ಗಳನ್ನು, ಅವರ ಕಾರ್ಯಕ್ರಮಗಳು ಅನುಮೋದನೆಗೆ ಅಗತ್ಯವಾದ ಮೂಲಭೂತ ಮಾನದಂಡಗಳನ್ನು ಪಾಲಿಸಲು ಜವಾಬ್ದಾರರನ್ನಾಗಿಸಲಾಗುತ್ತದೆ. ಅದರ ನಂತರ ಪರಿಹಾರಕ್ಕಾಗಿ ಒಂದು ವರ್ಷದ ಕಾಲಾವಕಾಶವನ್ನು ನೀಡಿ, ಯಾವುದೇ ನಿಯೋಮೋಲ್ಲಂಘನೆಗಳು ಕಂಡುಬಂದು ಯಾವುದೇ ಪರಿಹಾರಗಳನ್ನು ಅಳವಡಿಸದೆ ಹೋದಲ್ಲಿ ಅವನ್ನು ಮುಚ್ಚಲಾಗುತ್ತದೆ. ಈ ಜಾರಿಗೊಳಿಸುವಿಕೆಯನ್ನು ಪರಿಣಾಮಕಾರಿಯಾಗಿ ಕೈಗೊಳ್ಳಲಾಗಿದೆಯೆಂದು ಖಚಿತಪಡಿಸಿಕೊಳ್ಳಲು ಒಂದು ಉತ್ತಮ ಕಾನೂನು ವಿಧಾನವನ್ನು ಅಭಿವೃದ್ಧಿಪಡಿಸಿರಬೇಕು. 2023 ರ ಹೊತ್ತಿಗೆ ಭಾರತವು ಶೈಕ್ಷಣಿಕವಾಗಿ ಉತ್ತಮ ಶಿಕ್ಷಕ ತಯಾರಿ ಕಾರ್ಯಕ್ರಮಗಳ ಕಾರ್ಯಾಚರಣೆಯನ್ನು ಹೊಂದಿರಬೇಕು  ಹಾಗೂ ತನ್ಮೂಲಕ ವೃತ್ತಿಪರವಾಗಿ ಸಮರ್ಥ ಶಿಕ್ಷಕರನ್ನು ತಯಾರಿಸುವಂತಾಗಬೇಕು – ಉಳಿದೆಲ್ಲ ಸಂಸ್ಥೆಗಳನ್ನು ಮುಚ್ಚಬೇಕು.

✓ ಎಲ್ಲಾ ಶಿಕ್ಷಕರ ಸಿದ್ಧತೆ ಕಾರ್ಯಕ್ರಮಗಳನ್ನು ಬಹು ಶಿಸ್ತಿನ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸರಿಸುವುದು; ಶಿಕ್ಷಣ ಇಲಾಖೆಗಳನ್ನು ನಿರ್ಮಿಸುವುದು ಹಾಗೂ HEIs ಮತ್ತು ಶಾಲೆಗಳು / ಶಾಲಾ ಸಂಕೀರ್ಣಗಳ ನಡುವೆ ಸಂಪರ್ಕಗಳನ್ನು ಏರ್ಪಡಿಸುವುದು: P5.5.1 ರಲ್ಲಿ ವಿವರಿಸಿದಂತೆ, ನಾಲ್ಕು ವರ್ಷಗಳ ಸಂಯೋಜಿತEd. ಪದವಿಯು  2030 ರ ಹೊತ್ತಿಗೆ, ಶಾಲಾ ಶಿಕ್ಷಕರಿಗೆ ಕನಿಷ್ಠ ಶೈಕ್ಷಣಿಕ ಅರ್ಹತೆಯಾಗಲಿದೆ.

ಶಿಕ್ಷಕ ವೃತ್ತಿಯ ಆಧುನಿಕ ಅವಶ್ಯಕತೆಗಳನ್ನು ಪೂರೈಸಲು ಮತ್ತು ಶಿಕ್ಷಕರಿಗೆ ಬಹುಶಿಸ್ತೀಯ ವ್ಯವಸ್ಥೆಯ ಅರಿವು ಮೂಡಿಸಿ,  ಅತ್ಯುತ್ತಮ ಶಿಕ್ಷಕರಾಗಲು ಅಗತ್ಯವಾದ ಶಿಕ್ಷಣವನ್ನು ನೀಡಲು, ಇನ್ನು ಮುಂದೆ ಎಲ್ಲ ಸೇವಾಪೂರ್ವ ಬೋಧಕ ಶಿಕ್ಷಣ ಕಾರ್ಯಕ್ರಮಗಳು ಕೇವಲ ಬಹುಶಿಸ್ತೀಯ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ನೀಡಲಾಗುವುದು.

ಈ ಹಂತದಲ್ಲಿ, ಉನ್ನತ ಮಟ್ಟದ ಶಿಕ್ಷಣ ಸಂಸ್ಥೆಗಳು ಉತ್ತಮ ಗುಣಮಟ್ಟದ ಶಿಕ್ಷಣ ಇಲಾಖೆಗಳನ್ನು ಸ್ಥಾಪಿಸುವ ಮತ್ತು ಶಿಕ್ಷಕ ಶಿಕ್ಷಣ ಕಾರ್ಯಕ್ರಮಗಳನ್ನು ನಡೆಸುವ ಗುರಿಯನ್ನು ಸಾಧಿಸಲು ಅಗತ್ಯವಾದ ಸೌಕರ್ಯಗಳನ್ನು ಸರ್ಕಾರವು ನೀಡುವುದು.

ಅಂತಹ HEIಗಳು ಶಿಕ್ಷಣ ಮತ್ತು ಸಂಬಂಧಿತ ವಿಭಾಗಗಳು ಮತ್ತು ವಿಶೇಷ ವಿಷಯಗಳಲ್ಲಿ ಪರಿಣತರ ಲಭ್ಯತೆಯನ್ನು ಖಾತ್ರಿಪಡಿಸುತ್ತವೆ.

ಪ್ರತಿ ಉನ್ನತ ಶೈಕ್ಷಣಿಕ ಸಂಸ್ಥೆಯು ಸಂಭಾವ್ಯ ಶಿಕ್ಷಕರು ಕಲಿಯತ್ತಲೇ ಕಲಿಸುವ ಸೌಕರ್ಯವೊದಗುವಂತೆ ಸ್ಥಳೀಯ ಸರ್ಕಾರಿ ಮತ್ತು ಖಾಸಗಿ ಶಾಲೆಗಳು ಹಾಗೂ ಶಾಲಾ ಸಂಕೀರ್ಣಗಳ ಜಾಲವನ್ನು ಹಾಗೂ ಹೊಂದಲಿವೆ. (HEIಗಳು ಮತ್ತು ಶಾಲಾ ಸಂಕೀರ್ಣಗಳ ನಡುವೆ ಇತರ ಸಹಕಾರಿ ಚಟುವಟಿಕೆಗಳೊಂದಿಗೆ ಸಮುದಾಯ ಸೇವೆ, ವಯಸ್ಕ ಮತ್ತು ವೃತ್ತಿಪರ ಶಿಕ್ಷಣ ಇತ್ಯಾದಿಗಳೂ ಇರಲಿವೆ).

ಅಂತಹ ಉನ್ನತ ಶಿಕ್ಷಣ ಸಂಸ್ಥೆಗಳು ಶಿಕ್ಷಣ ಮತ್ತಿತರ ವಿಶೇಷ ವಿಷಯಗಳ ಬಗ್ಗೆ, ತಮ್ಮ ಶೈಕ್ಷಣಿಕ ವಿಷಯದ ಸಾಮರ್ಥ್ಯಗಳ ಆಧಾರದ ಮೇರೆಗೆ, ಸಮಗ್ರ ಶಿಕ್ಷಕ ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸುತ್ತದೆ. ಪ್ರಸಕ್ತ ಶಿಕ್ಷಣಶಾಸ್ತ್ರದ ಪರಿಮಿತಿಯನ್ನು ಮೀರಿ ಪಠ್ಯಕ್ರಮದಲ್ಲಿ ಸಮಾಜಶಾಸ್ತ್ರ, ಇತಿಹಾಸ, ವಿಜ್ಞಾನ, ತತ್ವಶಾಸ್ತ್ರ, ಮನೋವಿಜ್ಞಾನ, ಆರಂಭಿಕ ಬಾಲ್ಯಶಿಕ್ಷಣ, ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರ, ಭಾರತದ ಬಗೆಗಿನ ಜ್ಞಾನ, ಭಾರತೀಯ ಮೌಲ್ಯಗಳು/ಧಾರ್ಮಿಕತೆ/ಕಲೆ/ಸಂಪ್ರದಾಯಗಳು ಮತ್ತು ಇನ್ನಷ್ಟು ವಿಷಯಗಳು ಅಡಕವಾಗಿರಬೇಕು.

2030ರ ಹೊತ್ತಿಗೆ, ಶಿಕ್ಷಕ ಶಿಕ್ಷಣ ಕಾರ್ಯಕ್ರಮವನ್ನು ನೀಡುತ್ತಿರುವ ಪ್ರತಿ ಉನ್ನತ ಶಿಕ್ಷಣ ಸಂಸ್ಥೆಯೂ ಬಹು-ಶಿಸ್ತೀಯ ಮತ್ತು ನಾಲ್ಕು ವರ್ಷದ ಸಂಯೋಜಿತEdಕೋರ್ಸನ್ನು ಕೊಡುವಂತಾಗಿರುತ್ತವೆ. ಈ ನಾಲ್ಕು ವರ್ಷಗಳ ಸಂಯೋಜಿತ B.Ed. ಕೋರ್ಸ್ ದ್ವಿ-ಪ್ರಮುಖ ಪ್ರಗತಿಪರ ಸ್ನಾತಕೋತ್ತರ ಪದವಿಯೂ ಮತ್ತು ವಿಶೇಷ ವಿಷಯದ (ಉದಾ: ಭಾಷೆ, ಅಥವಾ ಇತಿಹಾಸ, ಸಂಗೀತ, ಗಣಿತಶಾಸ್ತ್ರ,ಗಣಕ ವಿಜ್ಞಾನ, ರಸಾಯನಶಾಸ್ತ್ರ, ಅರ್ಥಶಾಸ್ತ್ರ ಇತ್ಯಾದಿ)ಪದವಿಯೂ ಆಗಿರುತ್ತದೆ.

ಪ್ರಸ್ತುತ ಡಿಪ್ಲೋಮಾ ಕಾರ್ಯಕ್ರಮಗಳು ಸೇರಿದಂತೆ ಎರಡು ವರ್ಷದEd ಕೋರ್ಸನ್ನು ನೀಡುತ್ತಿರುವ ಉನ್ನತ ಶಿಕ್ಷಣ ಸಂಸ್ಥೆಗಳು, ನಾಲ್ಕು ವರ್ಷಗಳ ಸಮಗ್ರ B.Ed ಕೋರ್ಸನ್ನು ಒದಗಿಸುವ ಬಹು-ಶಿಸ್ತೀಯ ಉನ್ನತ ಶಿಕ್ಷಣ ಸಂಸ್ಥೆಯಾಗಿ ಪರಿವರ್ತನೆ ಹೊಂದಲು ಸಾಧ್ಯವಾಗುತ್ತದೆ. ಈಗಾಗಲೇ ಸ್ನಾತಕೋತ್ತರ ಪದವಿ ಪಡೆದ ಮತ್ತು ಶಿಕ್ಷಕ ವೃತ್ತಿಗೆ ಬರಲು ಬಯಸುವ ಅತ್ಯುತ್ತಮ ವಿದ್ಯಾರ್ಥಿಗಳಿಗೆ, P5.5.2 ರಲ್ಲಿ ವಿವರಿಸಿದಂತೆ, ಈಗಾಗಲೇ ನಾಲ್ಕು ವರ್ಷದ ಸಂಯೋಜಿತ B.Ed ಕೋರ್ಸನ್ನು ನೀಡುತ್ತಿರುವ ಉನ್ನತ ಶಿಕ್ಷಣ ಸಂಸ್ಥೆ ತನ್ನದೇ ಕ್ಯಾಂಪಸ್ನಲ್ಲಿ ಎರಡು ವರ್ಷದ B.Ed ಕೋರ್ಸನ್ನು ವಿನ್ಯಾಸಗೊಳಿಸಬಹುದು. ಹಾಗೆ ಮುಂದುವರೆದು, ಶಿಕ್ಷಕ ವೃತ್ತಿಗೆ ಬರಲು ಬಯಸುವ ಇತರ ಅಸಾಮಾನ್ಯ ಅರ್ಹ ವ್ಯಕ್ತಿಗಳಿಗೆ, ಶಿಕ್ಷಕ ವೃತ್ತಿಗೆ ಅವಶ್ಯಕವಾದ ಅನುಭವವನ್ನು ಹೊಂದಿದದವರಿಗೆ ವಿಶೇಷವಾದ ಮತ್ತು ವ್ಯಕ್ತಿಗತವಾದ B.Ed ಕೋರ್ಸನ್ನು ವಿನ್ಯಾಸಗೊಳಿಸಬಹುದು.

ಅಂತರ್ಜಾಲ ​​ಶಿಕ್ಷಣ: ಸದರಿ ಶಿಕ್ಷಕರಿಗೆ ತಮ್ಮ ಉನ್ನತ ಶಿಕ್ಷಣ ಅಧ್ಯಯನವನ್ನು ಮುಂದುವರೆಸಲು ಮತ್ತು ವೃತ್ತಿಪರ ಚಲನಶೀಲತೆಯಲ್ಲಿ ಆಸಕ್ತಿಯುಂಟುಮಾಡಲು, ಶಿಕ್ಷಣ ಇಲಾಖೆಗಳು ಸಮ್ಮಿಶ್ರ ಹಾಗೂ ಅರೆಕಾಲಿಕ ಕಾರ್ಯಕ್ರಮಗಳನ್ನು ನೀಡಲು ಸಮರ್ಥವಾಗಿರಬೇಕು. ಶಿಕ್ಷಣ ಇಲಾಖೆಗಳು ಸದರಿ ಶಿಕ್ಷಕರಿಗೆ ಶಿಕ್ಷಣ ಚಟುವಟಿಕೆಗಳನ್ನು ಮತ್ತು ಆರಂಭಿಕ ಶಿಕ್ಷಕರಿಗಾಗಿ ಮಾರ್ಗದರ್ಶಕ ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸಬೇಕು. ಎಲ್ಲಾ ಕಾರ್ಯಕ್ರಮಗಳು, ಪಠ್ಯಕ್ರಮಗಳು ಪೂರ್ಣಾವಧಿಕಾರ್ಯಕ್ರಮಗಳ ಜೊತೆಗೆ ಅಲ್ಪಾವಧಿ, ಸಂಜೆ ಕಾಲೇಜು, ಸಮ್ಮಿಶ್ರ, ಅರೆಕಾಲಿಕ ಮತ್ತು ಆನ್ಲೈನ್ ಸ್ವರೂಪಗಳ ವ್ಯಾಪ್ತಿಯಲ್ಲಿ ಲಭ್ಯವಿರಬೇಕು, ಕಾರ್ಯನಿರತ ವೃತ್ತಿಪರ ಶಿಕ್ಷಕರನ್ನು ಶಿಕ್ಷಣ ಇಲಾಖೆಗಳ ಪ್ರಮುಖ ವಿದ್ಯಾಗ್ರಾಹಿಗಳಾಗಿ ನೋಡಬೇಕು ಮತ್ತು ಅವರ ಸಂಶೋಧನೆ ಮತ್ತು ಉನ್ನತ ಶಿಕ್ಷಣದ ಆಸಕ್ತಿಗೆ ಹೊಂದುವಂಥಾ ಕಾರ್ಯಕ್ರಮಗಳು ಮತ್ತು ಶಿಕ್ಷಣ ಚಟುವಟಿಕೆಗಳನ್ನು ಆನ್ಲೈನ್ ​​ಶಿಕ್ಷಣ ಮತ್ತು ಮುಖಾಮುಖಿ ವಿಧಾನಗಳಲ್ಲಿಯೂ ಅಭಿವೃದ್ಧಿಪಡಿಸಬೇಕು.

 

ಶಿಕ್ಷಕ ವರ್ಗದ ಸಂಯೋಜನೆ: ಶಿಕ್ಷಣ ಇಲಾಖೆಗಳಲ್ಲಿ ಬೋಧಕವರ್ಗವು ಅಗತ್ಯವಾಗಿ ವೈವಿಧ್ಯಮಯ ಹಿನ್ನೆಲೆಯದ್ದಾಗಿರಬೇಕು.

ಪ್ರತಿಯೊಬ್ಬರೂ ಪಿಎಚ್ಡಿ ಮಾಡಿರಬೇಕಾದ ಅಗತ್ಯವಿರುವುದಿಲ್ಲವಾದರೂ, ಬೋಧನಾ ಅನುಭವ ಮತ್ತು ಕ್ಷೇತ್ರ ಸಂಶೋಧನಾ ಅನುಭವವನ್ನು ಹೆಚ್ಚುವರಿ ಅರ್ಹತೆಯಾಗಿ ಪರಿಗಣಿಸಲಾಗುತ್ತದೆ.

ಶಾಲಾ ಶಿಕ್ಷಣಕ್ಕೆ ನೇರ ಸಂಪರ್ಕವಿರುವ (ಉದಾ. ಮನೋವಿಜ್ಞಾನ, ಮಕ್ಕಳ ಬೆಳವಣಿಗೆ, ಭಾಷಾಶಾಸ್ತ್ರ, ಸಮಾಜಶಾಸ್ತ್ರ, ತತ್ವಶಾಸ್ತ್ರ / ರಾಜಕೀಯ ವಿಜ್ಞಾನ) ಜೊತೆಗೆ ವಿಜ್ಞಾನ ಶಿಕ್ಷಣ, ಗಣಿತ ಶಿಕ್ಷಣ, ಸಾಮಾಜಿಕ ವಿಜ್ಞಾನ ಶಿಕ್ಷಣ ಮತ್ತು ಭಾಷಾ ಶಿಕ್ಷಣ ಕಾರ್ಯಕ್ರಮಗಳಿಗೆ ನೇರವಾಗಿ ಸಂಬಂಧಿಸಿದ ಸಾಮಾಜಿಕ ವಿಜ್ಞಾನಗಳ ಕ್ಷೇತ್ರಗಳಲ್ಲಿ ತರಬೇತಿ ಹೊಂದಿರುವ ಬೋಧಕವರ್ಗವನ್ನು ಶಿಕ್ಷಕ ಶಿಕ್ಷಣ ಸಂಸ್ಥೆಗಳ ಕಡೆಗೆ ಸೆಳೆದು, ಶಿಕ್ಷಕರ ಬಹುಶಿಸ್ತಿನ ಶಿಕ್ಷಣವನ್ನು ಗಟ್ಟಿಗೊಳಿಸಲು  ಮತ್ತು ಪರಿಕಲ್ಪನೆಗಳ ಅಭಿವೃದ್ಧಿಯಲ್ಲಿ ತೀವ್ರತೆಯನ್ನು ಒದಗಿಸಲು, ಉಳಿಸಿಕೊಳ್ಳಲಾಗುವುದು.

ಮಕ್ಕಳು ಮತ್ತು ಶಿಕ್ಷಕರ ಜೊತೆ ಸಂಶೋಧನೆ / ಕೆಲಸ ಮಾಡಿದ ಬೋಧಕವರ್ಗವನ್ನು ಹೊಂದುವುದು ಅಪೇಕ್ಷಣೀಯವಾದದ್ದಲ್ಲದೆ,  ಕನಿಷ್ಠ 50% ರಷ್ಟು ಸಿಬ್ಬಂದಿ ಅಂತಹ ಅನುಭವದೊಂದಿಗೆ ಬರುವಂತೆ ಖಾತ್ರಿಪಡಿಸಿಕೊಳ್ಳುವುದು ಅಗತ್ಯವಾಗಿದೆ.

 

ಶಿಕ್ಷಣದಲ್ಲಿ ಕನಿಷ್ಟ ಒಂದು ಪದವಿಯನ್ನು (ಎಮ್.ಎಡ್ ಅಥವಾ ಸ್ನಾತಕೋತ್ತರ ಪದವಿ ಅಥವಾ ಶಿಕ್ಷಣದಲ್ಲಿ ಡಾಕ್ಟರೇಟ್) ಬೋಧಕರು ಹೊಂದುವುದೂ ಅಪೇಕ್ಷಣೀಯವಾದರೂ, ಇದು ಬೋಧಕರಿಗೆ ಕಡ್ಡಾಯವಾಗಿರುವುದಿಲ್ಲ. ಪರಿಣತಿ ಮತ್ತು ಅನುಭವದ ವೈವಿಧ್ಯತೆಯನ್ನು ಹೊಂದಿದ ಸುಸಂಗತ ಬೋಧನಾವರ್ಗವನ್ನು ರೂಪಿಸುವುದು ಶಿಕ್ಷಣ ಇಲಾಖೆಯ ಆದ್ಯತೆಯಾಗಿರುತ್ತದೆ.

ಪಿಹೆಚ್ಡಿ ಕಾರ್ಯಕ್ರಮಗಳ ಸಮಯದಲ್ಲಿ ಶಿಕ್ಷಣ ಕಲೆಯ ಅರಿವನ್ನು ತೆರೆದಿಡುವುದು: ಪಿ ಎಚ್ ಡಿಗೆ ಹೊಸದಾಗಿ ಪ್ರವೇಶ ಪಡೆದ ಎಲ್ಲರೂ ತಮ್ಮ ಪಿ ಎಚ್ ಡಿ ವಿಷಯಕ್ಕೆ ಸಂಬಂಧಿಸಿದ ಬೋಧನೆ / ಶಿಕ್ಷಣ / ಶಿಕ್ಷಣಶಾಸ್ತ್ರದಲ್ಲಿ 8-ಕ್ರೆಡಿಟ್ ಕೋರ್ಸುಗಳನ್ನು ತಮ್ಮ ಡಾಕ್ಟೋರಲ್ ತರಬೇತಿಯ ಅವಧಿಯಲ್ಲಿ ತೆಗೆದುಕೊಂಡಿರುವುದು ಅಗತ್ಯವಾಗಿರುತ್ತದೆ.

ಹೆಚ್ಚಿನ ಸಂಶೋಧನಾ ವಿದ್ವಾಂಸರು ಬೋಧನಾವೃತ್ತಿಯನ್ನು ಆಯ್ಕೆಮಾಡಿಕೊಳ್ಳುವುದರಿಂದ ಶೈಕ್ಷಣಿಕ ವಿಧಾನಗಳಿಗೆ, ಪಠ್ಯಕ್ರಮದ ವಿನ್ಯಾಸ ಹಾಗೂ ವಿಶ್ವಾಸಾರ್ಹ ಮೌಲ್ಯಮಾಪನ ವ್ಯವಸ್ಥೆಗಳಿಗೆ ಅವರು ತೆರೆದುಕೊಂಡಿರುವುದು ಅಪೇಕ್ಷಣೀಯವಾಗಿರುತ್ತದೆ.

ಪಿ.ಎಚ್.ಡಿ ಶೈಕ್ಷಣಿಕ ನೋಟ : ಎಲ್ಲಾ ವಿಭಾಗಗಳ ಎಲ್ಲಾ ಪಿ.ಎಚ್.ಡಿ ಪ್ರವೇಶಾರ್ಥಿಗಳು, ಪಿ.ಎಚ್.ಡಿ ತರಬೇತಿ ಅವಧಿಯಲ್ಲಿ ವಿಷಯದ ಜೊತೆ  ಬೋಧನೆ/ ಶಿಕ್ಷಣ/ ಶಿಕ್ಷಣಶಾಸ್ತ್ರ ವಿಷಯಗಳಲ್ಲಿ ಕಡ್ಡಾಯವಾಗಿ  8 ಕ್ರೆಡಿಟ್ ಕೋರ್ಸ್ ಗಳನ್ನು ಆಯ್ದುಕೊಳ್ಳಬೇಕು. ಬೋಧನಾ ವಿಭಾಗಕ್ಕೆ  ಅರ್ಹತೆ ಪಡೆಯಲು ಪಠ್ಯ ಕ್ರಮ ರಚನೆ, ಮೌಲ್ಯ ಮಾಪನ ಕೌಶಲ್ಯಗಳು ಮುಖ್ಯವಾಗಿ ತಿಳಿದಿರಬೇಕಾಗುತ್ತದೆ. ಬೋಧಕ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸಲು, ಸಹಾಯಕ ಉಪನ್ಯಾಸಕರಾಗಿ, ನಿಗದಿ ಪಡಿಸಲಾದ ಕನಿಷ್ಠ ಅವಧಿಯಷ್ಟು ಪಾಠಮಾಡಿದ ಅನುಭವವಾಗಿರಬೇಕು.  ದೇಶದೆಲ್ಲೆಡೆ ಇರುವ ವಿಶ್ವವಿದ್ಯಾಲಯಗಳು ಹೊಸ ಶೈಕ್ಷಣಿಕ ನೀತಿಯ ಮರು ನಿರ್ದೇಶನಕ್ಕೆ ಅನುಗುಣವಾಗಿ ಪಿ.ಎಚ್.ಡಿ ಕಾರ್ಯವನ್ನು ಬದಲಿಸಿಕೊಳ್ಳಬೇಕು. ಪಿ.ಎಚ್.ಡಿ ವಿದ್ಯಾರ್ಥಿಗಳು ಬೋಧಕ ವರ್ಗಕ್ಕೆ ಸಹಾಯಕ ಬೋಧಕರಾಗಿ ಕೆಲಸ ಮಾಡುವ ಅವಕಾಶವನ್ನು ಪಿ.ಎಚ್.ಡಿ ಅವಧಿಯ ಭಾಗವಾಗಿಯೆ ನೀಡಬೇಕು.

ಬೋಧಕ ಸಿಬ್ಬಂದಿವರ್ಗದಲ್ಲಿ ವರತ್ತಿಪರತೆಯನ್ನು ಅಭಿವೃದ್ಧಿಗೊಳಿಸುವುದು – ಬೋಧಕ ಸಿಬ್ಬಂದಿಗಳನ್ನು ವೃತ್ತಿಪರರಾಗಿಸಲು ಆಯಾ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಶೈಕ್ಷಣಿಕ ವಿಭಾಗ ನಿರಂತರ ಶೈಕ್ಷಣಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಸಿಬ್ಬಂದಿಗಳಿಗೆ ತರಬೇತಿ ನೀಡಬೇಕು. ಸಣ್ಣ ಸಮಯಾವಧಿಯಲ್ಲಿ ಸಂಶೋಧನೆ ಕಡ್ಡಾಯವಲ್ಲ, ಬದಲಾಗಿ ಬೋಧನಾ ವಿಧಾನ, ತರಗತಿಯ ನಾವಿನ್ಯತೆ,  ವಿದ್ಯಾರ್ಥಿಗಳು ಶಿಕ್ಷಕರನ್ನು ಮೌಲ್ಯಮಾಪನ ಮಾಡುವಂತೆ ಪ್ರೇರೇಪಿಸುವುದರೆಡೆಗೆ ಗಮನ ನೀಡಬೇಕು. ಪಠ್ಯ ಪುಸ್ತಕ ಬರವಣಿಗೆ, ಬೇರೆ ಬೇರೆ ಭಾಷೆಗಳ ಸಾಹಿತ್ಯ ಅನುವಾದಕ್ಕೆ ಪ್ರೋತ್ಸಾಹ ಮತ್ತು ಒತ್ತು ನೀಡಬೇಕು.

ಎಂ.ಬಿ.ಬಿ.ಎಸ್ ಶಿಕ್ಷಣ ಮುಗಿಸಿ ಹೊರಹೋಗಲು  ಕೆಂದ್ರೀಕೃತ ಪರೀಕ್ಷೆ – ವೈದ್ಯಕೀಯ ಶಿಕ್ಷಣ ಪ್ರವೇಶಾತಿಗೆ NEET ಪರೀಕ್ಷೆಯನ್ನು ಪರಿಚಯಿಸಿದಂತೆ, ವೈದ್ಯಕೀಯ ಶಿಕ್ಷಣ ಮುಗಿಸಿ ಹೊರಹೋಗಲು ಮತ್ತೊಂದು ಪರೀಕ್ಷೆಯನ್ನು ಪರಿಚಯಿಸಲಾಗುವುದು.

ಪ್ರತಿಯೊಂದು ಉನ್ನತ ಶಿಕ್ಷಣ ಸಂಸ್ಥೆಗೆ ಆಡಳಿತ ಸ್ವಾಯತ್ತತೆಗಾಗಿ ಆಡಳಿತ ಮಂಡಳಿ ನೇಮಕ ಮಾಡಲಾಗುವುದು.

ಕಾರ್ಯಗಳ ಬೇರ್ಪಡಣೆ: ನಿಯಂತ್ರಣ ಕಾರ್ಯಗಳು, ಶೈಕ್ಷಣಿಕ ಪೂರ್ವಸಿದ್ಧತೆ, ಹಣಕಾಸು ಹಂಚಿಕೆ, ಗುಣಮಟ್ಟ ಮಾನ್ಯತೆ ಇವುಗಳನ್ನೆಲ್ಲಾ ಬೇರ್ಪಡಿಸಲಾಗುವುದು. ಹಾಗೆಯೆ ಇವುಗಳು ಯಾವುದೇ ಒಂದು ಸಂಸ್ಥೆಯಿಂದ ಅಥವಾ ಸಾಂಸ್ಥಿಕ ಶ್ರೇಣಿ ವ್ಯವಸ್ಥೆಯ ಮೂಲಕ ನಡೆಯುವುದಿಲ್ಲ. ಈ ಕಾರ್ಯಗಳೆಲ್ಲ ಸ್ವತಂತ್ರ ಮತ್ತು ಸಶಕ್ತ ಅಂಗದಿಂದ ನಡೆಯುತ್ತದೆ.

ರಾಷ್ಟ್ರೀಯ ಉನ್ನತ ಶಿಕ್ಷಣ ನಿಯಂತ್ರಣ ಪ್ರಾಧಿಕಾರವು ಎಲ್ಲಾ ಉನ್ನತ ಶಿಕ್ಷಣ ಮತ್ತು ವೃತ್ತಿಪರ ಶಿಕ್ಷಣದ ಏಕೈಕ ನಿಯಂತ್ರಕವಾಗಿರುತ್ತದೆ.

ನಿಯಂತ್ರಣ ಸಂರಚನೆ:  ವೃತ್ತಿಪರ ಶಿಕ್ಷಣ ಸೇರಿ ಉನ್ನತ ಶಿಕ್ಷಣದ ಸಂಪೂರ್ಣ ನಿಯಂತ್ರಣ ರಾಷ್ಟ್ರೀಯ ಉನ್ನತ ಶಿಕ್ಷಣ ನಿಯಂತ್ರಣ ಪ್ರಾಧಿಕಾರ(ಎಂಎಚ್ಇಆರ್ ಎ)ದ್ದಾಗಿರುತ್ತದೆ. ನ್ಯಾಕ್ ಸಮಿತಿ(ಎನ್ಎ ಎ ಸಿ) ಹಲವು ಮಟ್ಟದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ವ್ಯವಸ್ಥೆ ರೂಪಿಸಬೇಕು ಮತ್ತು ಶಿಕ್ಷಣ ಸಂಸ್ಥೆಗಳ ಮಾನ್ಯತೆ ಕುರಿತ ಮೇಲ್ವಿಚಾರಣೆ ವಹಿಸಬೇಕು. ವೃತ್ತಿಪರ ಶಿಕ್ಷಣ ಸೇರಿ ಎಲ್ಲ ಉನ್ನತ ಶಿಕ್ಷಣ ಕೇಂದ್ರಗಳ ಅಭಿವೃದ್ಧಿಗೆ ಧನ ಸಹಾಯ ಮತ್ತು ಫೆಲೋಶಿಪ್ ಹಂಚಿಕೆ ಮಾಡುವ ಜವಾಬ್ದಾರಿಯನ್ನು ಉನ್ನತ ಶಿಕ್ಷಣ ಧನಸಹಾಯ ಸಮಿತಿ(ಎಸ್ ಇಜಿಸಿ)ಹೊಂದಿರುತ್ತದೆ. ಈಗಿನ ಯುಜಿಸಿಯನ್ನು ಎಚ್ಇ ಜಿಸಿ ಎಂದು ಬದಲಾಯಿಸಲಾಗುವುದು.

 

-ಇನ್ನು ಮುಂದಿನ 10 ವರ್ಷಗಳಿಗೆ ಉನ್ನತ ಶಿಕ್ಷಣ ಸಂಸ್ಥೆಗಳ ಸಂಯೋಜಿತ ಸ್ವಾಯತ್ತತೆ ಒಳಗೊಂಡ ಶ್ರೇಣೀಕೃತ ಮಾನ್ಯತೆ ಈಗಿರುವ ವ್ಯವಸ್ಥೆಯಂತೆಯೇ ಮುಂದುವರೆಯುತ್ತದೆ. ಇದರಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ 2020ರಲ್ಲಿ ಪರಿಶೀಲನೆ ನಡೆಸಲಾಗುತ್ತದೆ. 10 ವರ್ಷಗಳ ನಂತರ (2030ರ ಹೊತ್ತಿಗೆ) ಹೌದು (ಮಾನ್ಯ) ಅಥವಾ ಅಲ್ಲ (ಅಮಾನ್ಯ) ಎಂಬ ಕೇವಲ ಎರಡು ಘಟ್ಟದ ಮಾನ್ಯತೆ(ಬೈನರಿ ಎಕ್ರೆಡಿಟೇಶನ್) ಇರುತ್ತವೆ. ಈ ಹಂತದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳು ಸಂಪೂರ್ಣ ಅಧಿಕಾರ ಮತ್ತು ಸ್ವಾಯತ್ತತೆ ಹೊಂದಿರುತ್ತವೆ. ಎರಡು ಘಟ್ಟದ ಮಾನ್ಯತೆ ವ್ಯವಸ್ಥೆಯನ್ನು 2022ರ ವೇಳೆಗೆ ಪರಿಚಯಿಸಬೇಕು. ಆಗ, 2030ರ ಹೊತ್ತಿಗೆ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಶ್ರೇಣೀಕೃತ ಮಾನ್ಯತೆ (ಗ್ರೇಡೆಡ್ ಎಕ್ರೆಡಿಟೇಶನ್) ಅಥವಾ ಎರಡು ಘಟ್ಟದ ಮಾನ್ಯತೆ (ಬೈನರಿ ಎಕ್ರೆಡಿಟೇಶನ್) ಗಳಲ್ಲಿ ಒಂದನ್ನು ಆಯ್ಕೆ ಮಾಡಲು ಸ್ವಾತಂತ್ರ್ಯವಿರುತ್ತದೆ.

-ಸಾಂಸ್ಥಿಕ ಮಾನ್ಯತೆ ನಿಯಮಗಳು ಮುಕ್ತ ಮತ್ತು ದೂರ ಶಿಕ್ಷಣ ಕುರಿತು ನಿರ್ದಿಷ್ಟ ಗಮನ ನೀಡಬೇಕು. ಇದರಿಂದ ಈ ಮೊದಲು ಮುಕ್ತ ಮತ್ತು ದೂರ ಶಿಕ್ಷಣದ ಮೇಲೆ ಉಂಟಾಗುತ್ತಿದ್ದ ಉದ್ದೇಶಪೂರ್ವಕ ಮತ್ತು ಉದ್ದೇಶರಹಿತ ಹಾನಿಯನ್ನು ತಡೆಯಬಹುದಾಗಿದೆ. ಉನ್ನತ ಶಿಕ್ಷಣ ಸಂಸ್ಥೆಗಳು ಉನ್ನತ ಗುಣಮಟ್ಟದ ಮುಕ್ತ ಮತ್ತು ದೂರ ಶಿಕ್ಷಣ ನೀಡುವ ಸಾಮರ್ಥ್ಯ ಹೊಂದಿವೆಯೇ ಎಂದು ಮೌಲ್ಯಮಾಪನ ನಡೆಸಿ ಮಾನ್ಯತೆ(ಎಕ್ರೆಡಿಟೇಶನ್) ನೀಡಬೇಕು.

-ಇತರ ಎಲ್ಲಾ ನಿಯಂತ್ರಣ ಪ್ರಾಧಿಕಾರಗಳಾದ ಎನ್ ಸಿಟಿಇ, ಎಐಸಿಟಿಇ, ಎಂಸಿಐ, ಬಿಸಿಐ ಇತರ ಪ್ರಾಧಿಕಾರಗಳು ಅವುಗಳ ನಿಯಂತ್ರಣ ಕಾರ್ಯವನ್ನು ಎನ್ಎಚ್ಇಆರ್ ಎ ಗೆ ವರ್ಗಾಯಿಸಬೇಕು. ಅದು ಉನ್ನತ ಶಿಕ್ಷಣದ ಏಕೈಕ ನಿಯಂತ್ರಕವಾಗಿ ಕಾರ್ಯನಿರ್ವಹಿಸುತ್ತದೆ. ಈ ಪ್ರಾಧಿಕಾರಗಳು ಪಿಎಸ್ಎಸ್ ಬಿಗಳಾಗಿ ಮಾರ್ಪಾಡಾಗಬಹುದು. ಇದು ಪಠ್ಯಕ್ರಮಗಳ ರೂಪುರೇಷೆ ತಯಾರಿಸುತ್ತದೆ.

-ಉನ್ನತ ಶಿಕ್ಷಣ ಸಂಸ್ಥೆಗಳ ವರ್ಗೀಕರಣ: 2020ರ ನಂತರ ಆರಂಭವಾಗುವ ಎಲ್ಲಾ ಕಾಲೇಜುಗಳು ಕೇವಲ ಸ್ವಾಯತ್ತ ಕಾಲೇಜುಗಳಾಗಿರುತ್ತವೆ.

3) 2020ರ ನಂತರ ಯಾವುದೇ ಹೊಸ ಅಫಿಲಿಯೇಟೆಡ್ ಕಾಲೇಜನ್ನು ಪ್ರಾರಂಭಿಸತಕ್ಕದ್ದಲ್ಲ.  2030ರ ನಂತರ ಯಾವುದೇ ಅಫಿಲಿಯೇಟೆಡ್ ಕಾಲೇಜು ಅಸ್ತಿತ್ವದಲ್ಲಿ ಇರತಕ್ಕದ್ದಲ್ಲ. ಎಲ್ಲ ಕಾಲೇಜುಗಳು ಸ್ವತಂತ್ರ ಪದವಿ ನೀಡುವ ಕಾಲೇಜುಗಳಾಗಿ ಅಥವಾ ವಿಶ್ವವಿದ್ಯಾಲಯಗಳಾಗಿ ಅಭಿವೃದ್ಧಿ ಹೊಂದಬೇಕು.

ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ (MHRD) ಯನ್ನು ಶಿಕ್ಷಣ ಇಲಾಖೆ (MoE: Ministry of Education) ಎಂದು ಮರುನಾಮಕರಣ ಮಾಡಲಾಗುವುದು. (2019)

ಸಂಪೂರ್ಣ ಉನ್ನತ ಶಿಕ್ಷಣ ನಿಯಂತ್ರಣ ವ್ಯವಸ್ಥೆಯನ್ನು ಏಕೈಕ ನಿಯಂತ್ರಣ ಸಂಸ್ಥೆಯನ್ನಾಗಿ ಪರಿವರ್ತಿಸಲಾಗುವುದು ಹಾಗೂ ಈಗ ಅಸ್ತಿತ್ವದಲ್ಲಿರುವ ವಿವಿಧ ನಿಯಂತ್ರಣ ಸಂಸ್ಥೆಗಳನ್ನು ಹೊಸ ಕರ್ತವ್ಯಗಳನ್ನು ನಿರ್ವಹಿಸಲು ವಿಕಸನಗೊಳಿಸಲಾಗುವುದು.  ಸಂಪೂರ್ಣ ಉನ್ನತ ಶಿಕ್ಷಣ ಕ್ಷೇತ್ರವನ್ನು ನಿಯಂತ್ರಿಸಲು ರಾಷ್ಟ್ರೀಯ ಉನ್ನತ ಶಿಕ್ಷಣ ನಿಯಂತ್ರಣ ಪ್ರಾಧಿಕಾರವನ್ನು (NHERA) ಏಕೈಕ ನಿಯಂತ್ರಣ ಸಂಸ್ಥೆಯನ್ನಾಗಿ ಸ್ಥಾಪಿಸಲಾಗುವುದು. ಯುಜಿಸಿ ಮತ್ತು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ನಿಯಂತ್ರಣ ಸಂಸ್ಥೆಗಳನ್ನು ಅನುಕ್ರಮವಾಗಿ ಉನ್ನತ ಶಿಕ್ಷಣ ಅನುದಾನ ಸಮಿತಿ (HEGC) ಮತ್ತು ವೃತ್ತಿಪರತೆ ಗುಣಮಟ್ಟ ನಿರ್ಧರಿಸುವ ಸಂಸ್ಥೆಗಳನ್ನಾಗಿ (PSSBs) ಪರಿವರ್ತಿಸಲಾಗುವುದು.  ಸಾಮಾನ್ಯ ಶಿಕ್ಷಣ ಸಮಿತಿಯನ್ನು (GEC) ಶೈಕ್ಷಣಿಕ ನಾಯಕತ್ವ ಸಂಸ್ಥೆಯನ್ನಾಗಿ ರಚಿಸಲಾಗುವುದು. (2020)

ಸಂಶೋಧನಾ ಸಾಮರ್ಥ್ಯಗಳನ್ನು ಸದೃಢಗೊಳಿಸುವ ಹಾಗೂ ಉನ್ನತ ಶಿಕ್ಷಣ ವ್ಯವಸ್ಥೆಯ ಮೇಲೆ ಪ್ರಮುಖವಾಗಿ ಕೇಂದ್ರೀಕರಿಸಿದ ಚೈತನ್ಯಶೀಲ ಸಂಶೋಧನೆಯನ್ನು ಉತ್ತೇಜಿಸುವ ಉದ್ದೇಶದಿಂದ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನವನ್ನು (NRF) ಸ್ಥಾಪಿಸಲಾಗುವುದು. (2020)

ಅತ್ಯುತ್ತಮ ಕಲಿಕಾ ವಿಧಾನಗಳ ಪ್ರಚಾರ ಹಾಗೂ ಶಿಕ್ಷಣದಲ್ಲಿ ತಂತ್ರಜ್ಞಾನದ ಉಪಯೋಗಕ್ಕೆ ಸಂಬಂಧಿಸಿದಂತೆ ತೆಗೆದುಕೊಂಡ ಕ್ರಮಗಳ ಪರಿಶೀಲನೆಯನ್ನು ಸುಗಮಗೊಳಿಸಲು ಒಂದು ಸ್ವತಂತ್ರ ರಾಷ್ಟ್ರೀಯ ಶೈಕ್ಷಣಿಕ ತಂತ್ರಜ್ಞಾನ ವೇದಿಕೆಯನ್ನು (NETF) ಸ್ಥಾಪಿಸಲಾಗುವುದು. (2020)

ಶಾಲಾ ಪಠ್ಯಕ್ರಮ ಹಾಗೂ ಶಿಕ್ಷಣ ವಿಧಾನವನ್ನು ಆಯಾ ವಯೋಮಾನಕ್ಕೆ ಅನುಗುಣವಾಗಿ ಆಂತರಿಕ ಸುಸಂಬದ್ಧತೆ ಮತ್ತು ಸಮಗ್ರತೆಯೊಂದಿಗೆ ಈ ಕೆಳಗಿನ ಹಂತಗಳಲ್ಲಿ ಪುನರ್ರಚಿಸಲಾಗುವುದು.

5 ವರ್ಷಗಳ ಅಡಿಪಾಯ/ಬುನಾದಿ ಹಂತ: 3 ವರ್ಷದ ಪೂರ್ವಪ್ರಾಥಮಿಕ ಹಾಗೂ 1-2 ತರಗತಿ.

3 ವರ್ಷಗಳ ತಯಾರಿಕಾ (ಅಥವಾ ಪ್ರಾಥಮಿಕೋತ್ತರ) ಹಂತ: 3ರಿಂದ 5ನೇ ತರಗತಿ.

3 ವರ್ಷಗಳ ಮಾಧ್ಯಮಿಕ (ಅಥವಾ ಉನ್ನತ ಪ್ರಾಥಮಿಕ) ಹಂತ: 6ರಿಂದ 8ನೇ ತರಗತಿ.

4 ವರ್ಷಗಳ ಉಚ್ಚ (ಅಥವಾ ಪ್ರೌಢ) ಹಂತ: 9ರಿಂದ 12ನೇ ತರಗತಿ.

ಪ್ರೌಢಶಾಲಾ ಹಂತವು 9ರಿಂದ 12ನೇ ತರಗತಿಯವರೆಗೆ 4 ವರ್ಷಗಳ ಕಲಿಕೆಯನ್ನು ಒಳಗೊಂಡಿದ್ದು, ಪ್ರತಿ ವರ್ಷವನ್ನು 2 ಸೆಮಿಸ್ಟರಗಳಲ್ಲಿ ವಿಭಾಗಿಸಿ ಒಟ್ಟು 8 ಸೆಮಿಸ್ಟರ್‍ಗಳನ್ನು ಹೊಂದಿರುತ್ತದೆ. (2022)

ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಂಸ್ಥೆಗಳ ರಚನೆಯನ್ನು ಮೂರು ವರ್ಗಗಳಾಗಿ ವಿಂಗಡಿಸಲಾಗುವುದು. ಸಂಶೋಧನೆ ಹಾಗೂ ಬೋಧನೆಗೆ ಸಮಾನ ಪ್ರಾಮುಖ್ಯತೆ ನೀಡುವವು ಮೊದಲನೇ ವರ್ಗ. ಬೋಧನೆಯೇ ಪ್ರಮುಖವಾಗಿದ್ದು ಸಂಶೋಧನೆಗೂ ಮಹತ್ವ ಕೊಡುವಂತವು ಎರಡನೇ ವರ್ಗ. ಕೇವಲ ಬೋಧನೆಗೆಂದು ಸೀಮಿತವಾಗಿರುವವು ಮೂರನೇ ವರ್ಗ. ಈಗಿನ ಸ್ಥಿತಿಗತಿಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ಹೊಸ ವಿಂಗಡಣೆಗನುಗುಣವಾಗಿ ಮಾರ್ಪಾಡು ಮಾಡುವ ಯೋಜನೆಗಳನ್ನು ರೂಪಿಸಲಾಗುವುದು. ಈ ಯೋಜನೆಗಳನ್ನು RSAMoE.6. [2020] ಗೆ ಒಪ್ಪಿಸಲಾಗುವುದು.

ಶಿಕ್ಷಕರ ತರಬೇತಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ತಿದ್ದಲಾಗುವುದು. ಎಲ್ಲಾ ಶೈಕ್ಷಣಿಕ ಹಂತದ ಶಿಕ್ಷಕರೂ ಬಹುಶಿಸ್ತೀಯ(multi disciplinary) ವಿಶ್ವವಿದ್ಯಾಲಯಗಳಲ್ಲಿ ನಾಲ್ಕು ವರ್ಷಗಳ ತರಬೇತಿ ಪಡೆಯಬೇಕಾಗುವುದು. ಹಾಗೂ  ಅದಕ್ಕೆ ಅಗತ್ಯವಾದ ಪಠ್ಯ ಮತ್ತು ಪದ್ದತಿಗಳನ್ನು ಈಗಿನ ನ್ಯೂನತೆಗಳನ್ನು ಗಮನದಲ್ಲಿಟ್ಟುಕೊಂಡು ಹೊಸತಾಗಿ ರೂಪಿಸಲಾಗುವುದು. ಈಗ ಚಾಲ್ತಿಯಲ್ಲಿರುವ ಎರಡು ವರ್ಷಗಳ ತರಬೇತಿ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಸಂಸ್ಥೆಗಳು ಹೊಸ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕಾಗುವುದು ಇಲ್ಲವೇ ಮುಚ್ಚಬೇಕಾಗುವುದು. ಎರಡು ವರ್ಷಗಳ ತರಬೇತಿಯ ಮಾನ್ಯತೆ ರದ್ದಾಗುವುದು. MoE ಮತ್ತು ರಾಜ್ಯ ಸರ್ಕಾರದ ಶಿಕ್ಷಣ ವಿಭಾಗಗಳು ಈ ವ್ಯವಸ್ಥೆಯನ್ನ ಚಾಲ್ತಿಗೆ ತರಲು NHERA ಮತ್ತು NCTE ಜೊತೆ PSSBಗಳ ಮೂಲಕ ಸಹಕರಿಸುತ್ತವೆ.

 

_____________________________________________________________

ಕನ್ನಡಕ್ಕೆ ಅನುವಾದ ಸಹಾಯ : ರಾಜೇಶ್ವರಿ ಚೆನ್ನಾಂಗೋಡು | ಕಮಲಾಕರ ಭಟ್ | ಶಂಕರ ಕೆಂಚನೂರು | ಶಿಲ್ಪಾ ಬಿ. ಎಂ | ವೆಂಕಟರಮಣ ಹೆಗಡೆ | ಸೌರಭ ಕರಿಂಜೆ | ಉದಯ ಗಾಂವ್ಕರ್ |  ಜಯಶ್ರೀ ಜಗನ್ನಾಥ | ಹರೀಶ್ ಗಂಗಾಧರ್ | ದೇವ್ ಡಿ |  ದೀಪಾ ಗಿರೀಶ್ | ಅಖಿಲೇಶ್ ಚಿಕ್ಕದೇವನೂರ್ | ದಯಾನಂದ | ಶ್ರುತಿ ಎಚ್ ಎಂ | ಮಂಜುನಾಥ್ ಚಾರ್ವಾಕ | ಅರವಿಂದ್ ಕುಪ್ಳಿಕರ್ |  ರೇಣುಕಾ ಚಿತ್ರದುರ್ಗ | ಸುಮ ಅನಿಲ್ | ರವಿ ಕುಮಾರ್ | ರೋಹಿತ್ ರಾಮಚಂದ್ರಯ್ಯ | ಸುಶೀಲ್ ಸಂದೀಪ್ ಎಂ | ನಟೇಶ್ ಉಲ್ಲಾಳ್ | ಚೈತ್ರ ಹರ್ಗಿ | ಚೇತನಾ ಕಂಬದ | ಶ್ರೀಧರ್ ನಾಯಕ್ | ಪ್ರ ವೀಣ | ಸಹನಾ ರಾಜ್ | ಮಧು ವೈ ಎನ್ | ಅರ್ಪಣಾ ಎನ್

 

ಪ್ರತಿಕ್ರಿಯಿಸಿ