ಋತುಮಾನಕ್ಕೆ ೩ ವರುಷದ ಸಂಭ್ರಮ

ಆತ್ಮೀಯ ಓದುಗ ವಲಯದ ಸಹಕಾರದಿಂದ ಋತುಮಾನ ಮೂರು ವರುಷಗಳನ್ನ ಪೂರೈಸಿದೆ. ಸಾಕಷ್ಟು ಸಂಖ್ಯೆಯ ಸ್ನೇಹಿತರು ನಮ್ಮ ಈ ಪಯಣದಲ್ಲಿ ಜೊತೆಯಾಗಿ ನಮ್ಮನ್ನ ಮುನ್ನಡೆಸಿದ್ದಾರೆ. ಇವರೆಲ್ಲರನ್ನೂ ಈ ಕ್ಷಣ ಮನಃಪೂರ್ವಕವಾಗಿ ನೆನೆಯುತ್ತೇವೆ.

ಕಳೆದೆರಡು ವರುಷಗಳಿಗೆ ಹೋಲಿಸಿದರೆ ಮೂರನೆಯ ವರುಷ ಮಿಂದಾಣ ಹೆಚ್ಚು ಸಕ್ರಿಯವಾಗಿರಲಿಲ್ಲ. ಅಂದುಕೊಂಡಷ್ಟು ಕೆಲಸ ಮಾಡಲಾಗಿಲ್ಲ. ಆದರೆ ಹಿನ್ನೆಲೆಯಲ್ಲಿ ಸಾಕಷ್ಟು ಯೋಜನೆಗಳು, ಆಲೋಚನೆಗಳು ಮೊಳೆಯುತ್ತಲೇ ಇದ್ದವು. ಅವೆಲ್ಲ ಈ ವರುಷ ಕಾರ್ಯರೂಪಕ್ಕೆ ಬರಲಿದೆ.

ಮೂರು ವರುಷದ ಖುಷಿಗೆ ಅಂತಹ ಮೂರು ವಿಚಾರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಇದು ಸೂಕ್ತ ಸಮಯ.

ಸಮಗ್ರ ಸಮೃದ್ಧ ಆಪ್: ಮೊಬೈಲ್ ನಲ್ಲಿ ಋತುಮಾನವನ್ನು ಓದುವ ಓದುಗರು ಹೆಚ್ಚಿರುವುದರಿಂದ , ಅವರ ಅನುಕೂಲಕ್ಕೆ ಓದುಗ ಸ್ನೇಹಿ ಆಪ್ ಹೆಚ್ಚು ಕಡಿಮೆ ತಯಾರಾಗಿ ಅಂತಿಮ ಹಂತದಲ್ಲಿದೆ. ಇಲ್ಲಿ ಋತುಮಾನವನ್ನು ಓದುವುದರ ಜೊತೆಗೆ ಹೊಸ ಪುಸ್ತಕ ಖರೀದಿ, ಈ-ಪುಸ್ತಕಗಳ ಓದು, ಸಹ ಓದುಗರೊಂದಿಗೆ ಸಂವಾದ ಮುಂತಾದ ವೈವಿಧ್ಯಮಯ ಸೌಲಭ್ಯಗಳು ಲಭ್ಯವಾಗಲಿದೆ.

ಪುಸ್ತಕ ಪ್ರಕಟಣೆ: ಇದುವರೆಗೂ ಡಿಜಿಟಲ್ ಲೋಕಕ್ಕೆ ಸೀಮಿತವಾಗಿದ್ದ ಋತುಮಾನ ಈ ವರುಷದಿಂದ ಸದಭಿರುಚಿಯ ಪುಸ್ತಕಗಳನ್ನು ಪ್ರಕಟಿಸುವ ಅಭಿಲಾಷೆ ಹೊಂದಿದೆ.. ಋತುಮಾನ ಪುಸ್ತಕ ಹೆಸರಿನಲ್ಲಿ ಮೊದಲ ಪುಸ್ತಕ ಸದ್ಯದಲ್ಲೇ ಪ್ರಕಟಗೊಳ್ಳಲಿದೆ. ಪೇಪರ್ ಮತ್ತು ಈ ಬುಕ್ ಈಬುಕ್ ನ ಎರಡೂ ಪ್ರಕಾರಗಳಲ್ಲಿ ನಮ್ಮ ಪ್ರಕಟಣೆಗಳು ದೊರೆಯಲಿವೆ.

ವೈವಿಧ್ಯಮಯ ಸಾಹಿತ್ಯ ಗುಚ್ಛ: ಕಳೆದ ವರುಷದ ಬರ ನೀಗುವಂತೆ ಈ ವರುಷ ಸಾಹಿತ್ಯದ ಎಲ್ಲ ಪ್ರಕಾರಗಳ ಬರಹಗಳನ್ನು ನಿರೀಕ್ಷಿಸಬಹುದು. ಓದುಗರು ಋತುಮಾನದಲ್ಲಿ ಹೆಚ್ಚು ಹೆಚ್ಚು ಬರಹಗಳನ್ನು ನಿರೀಕ್ಷಿಸುತ್ತಿದ್ದಾರೆ. ನಿಮ್ಮ ನಿರೀಕ್ಷೆಯ ಮಟ್ಟಕ್ಕೆ ತಲುಪುವ ಪ್ರಾಮಾಣಿಕ ಪ್ರಯತ್ನ ಜಾರಿಯಲ್ಲಿದೆ. ಇದರ ಜೊತೆಗೆ ಇನ್ನಷ್ಟು ಹೊಸ ಹೊಸ ಸಾಹಸಗಳನ್ನ ಮುಂದಿನ ದಿನಗಳಲ್ಲಿ ಹಂಚಿಕೊಳ್ಳುತ್ತೇವೆ.

ಮೂರು ವರುಷಗಳ ಈ ದಾರಿಯಲ್ಲಿ ಋತುಮಾನ ಕಟ್ಟುವಲ್ಲಿ ಹಲವು ಜನ ನಿಸ್ವಾರ್ಥ ಮನೋಭಾವ ದಿಂದ ದುಡಿದಿದ್ದಾರೆ . ವಿಡಿಯೋ ಶೂಟಿಂಗ್ , ಚಿತ್ರ ಕಲೆ , ಎಡಿಟಿಂಗ್ , ಪ್ರೂಫ್ ಓದುವುದು , ತಿದ್ದುವುದು , ಧ್ವನಿ ಸಂಸ್ಕರಣೆ , ಅನುವಾದ ಇನ್ನಿತರ ಕೆಲಸ ಮಾಡಿಕೊಟ್ಟ ಹಲವರಿದ್ದಾರೆ . ಅವರೆಲ್ಲರನ್ನೂ ಋತುಮಾನ ಸ್ಮರಿಸಿಕೊಳ್ಳುತ್ತದೆ . ಹಾಗೆಯೇ ಕೆಲವು ದಾನಿಗಳು ಮಾಡಿರುವ ಧನಸಹಾಯವನ್ನೂ ಕೂಡ .

ಋತುಮಾನ ಕುರಿತ ಯಾವುದೇ ಟೀಕೆ ಟಿಪ್ಪಣಿಗಳಿಗೆ ನಮ್ಮದು ತೆರೆದ ಬಾಗಿಲು. ನಿಮ್ಮ ಪ್ರತಿಸ್ಪಂದನೆಯೇ ನಮಗೆ ಚಾಲಕ ಶಕ್ತಿ.

ನಮಸ್ಕಾರ


ಪ್ರತಿಕ್ರಿಯಿಸಿ