ಅನುವಾದಕ್ಕೆ ಹೊಸ ಅರ್ಥ ನೀಡಿದ ಗಿರೀಶ್ ಕಾರ್ನಾಡರನ್ನು ನೆನೆಯುತ್ತಾ

ಕಾರ್ನಾಡ್ ಪುರಾಣಕ್ಕೆ ಮತ್ತು ಇತಿಹಾಸಕ್ಕೆ ಮತ್ತೆ ಮತ್ತೆ ಹೊರಳಿಕೊಳ್ಳುತ್ತಾರೆ. ಆ ಕಾಲದಲ್ಲೇ ಉಳಿದುಬಿಡಲು ಅಲ್ಲ. ಆ ಕಾಲದ ಮತ್ತು ಈ ಕಾಲದ ನಡುವಿನ ಸಮರ್ಥ ಅನುವಾದಕರಾಗಿ.

ಕಾರ್ನಾಡರನ್ನು ಅವರ ನಾಟಕ, ಸಿನೆಮಾ ಮತ್ತು ಆತ್ಮಚರಿತ್ರೆಯ ಮೂಲಕವೇ ಗೊತ್ತಿರುವ ಸಾಮಾನ್ಯರಲ್ಲಿ ನಾನೂ ಒಬ್ಬಳು. ಕೆಲವು ವರ್ಷಗಳ ಹಿಂದೆ ನನ್ನ ದೆಹಲಿಯ ಜವಾಹರ್ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ನಾನು ಮಾಡಬೇಕೆಂದಿದ್ದ ಡಾಕ್ಟೋರಲ್ ಸಂಶೋಧನೆಗೆ ಕಾರ್ನಾಡ್-ಕಾಸರವಳ್ಳಿ-ಕವಿತಾ ಲಂಕೇಶರ ಸಿನಿಮಾವನ್ನ ಆಯ್ಕೆ ಮಾಡಿಕೊಳ್ಳಬೇಕೇ  ಅಂತ ಯೋಚಿಸುತ್ತಿದ್ದ ಸಮಯದಲ್ಲಿ ಅವರನ್ನ ಇ-ಮೇಲ್ ಮೂಲಕ ಸಂಪರ್ಕಿಸಿದ್ದೆ. ಅವಸರದಲ್ಲಿ ಬರೆದಿದ್ದ  ಸಂಶೋಧನೆಯ ಒಂದು ಸಂಕ್ಷಿಪ್ತ ಟಿಪ್ಪಣಿಯನ್ನ ಸಹ ಅವರಿಗೆ ಕಳುಹಿಸಿದ್ದೆ. ಅವರಿಂದ ಎರಡೇ ದಿನದಲ್ಲಿ ಉತ್ತರವೂ ಬಂದಿತ್ತು. ‘I don’t find your synopsis sufficiently inspiring, sorry’.

ಕಾರ್ನಾಡ್ ತುಂಬ ಖಡಕ್ ಮನುಷ್ಯ ಅಂತ ಕೇಳಿದ್ದೆ. ಅದರ ಪರಿಚಯ ಹೀಗೆ ವೈಯುಕ್ತಿಕವಾಗಿ ಆಗಿತ್ತು. ಅವರ ಉತ್ತರದಿಂದ ನನ್ನ ಅಹಂಗೆ ಪೆಟ್ಟು ಬಿದ್ದಿತ್ತು ಅನ್ನೋದು ನಿಜ. ಆದರೆ ಕೆಲವೇ ದಿನದಲ್ಲಿ ಪಟ್ಟಾಗಿ ಕೂತು ಬೇರೆ ಸಿನಾಪ್ಸಿಸ್ ಬರೆದೆನೇನೋ ಹೌದು. ಆದರೆ ಅವರಿಗೆ ಕಳುಹಿಸುವ ಪ್ರಮೇಯವೇ ಬರದ ಹಾಗೆ ಬರೀ ಕಾಸರವಳ್ಳಿ ಅವರ ಸಿನೆಮಾವನ್ನ ಮಾತ್ರ ಆಯ್ದುಕೊಂಡಿದ್ದೆ.

ಇರಲಿ, ಕಾರ್ನಾಡರ ಬಗ್ಗೆ ನಾನು ವಿಶೇಷವಾಗಿ ಕೇಳಿದ್ದು, ಎಪ್ಪತ್ತರ ದಶಕದಲ್ಲಿ ಬೆಂಗಳೂರಿನ ಕಲಾಕ್ಷೇತ್ರದಲ್ಲಿ ನಡೆದ ನಾಟಕೋತ್ಸವದ ದಂತಕತೆಯಿಂದ. ಆಗ ಕಾರ್ನಾಡರೇ ಮುಖ್ಯಪಾತ್ರ ವಹಿಸಿದ್ದ ಕಂಬಾರರ ಜೋಕುಮಾರಸ್ವಾಮಿ, ದೊರೆ ಈಡಿಪಸ್ ಮತ್ತು ಇನ್ನೊಂದು ನಾಟಕದ ಬಗ್ಗೆ. ಜನ ಟಿಕೇಟಿಗೆ ಹೇಗೆ ಕಲಾಕ್ಷೇತ್ರವನ್ನೂ ದಾಟಿ ಸುಮಾರು ಒಂದು ಮೈಲಿ ಸಾಲುಗಟ್ಟಿ ನಿಂತಿದ್ದರು ಅಂತ ನನ್ನ ಹಿರಿಯ ಸಹೋದ್ಯೋಗಿಗಳು ಕಣ್ಣಿಗೆ ಕಟ್ಟೋ ಹಾಗೆ ವಿವರಿಸುತ್ತಿದ್ದಾಗ. ಹಲವಾರು ವಿಷಯಗಳಿಗೆ ನಾನು ಇನ್ನೂ ಮುಂಚೆಯೇ ಹುಟ್ಟಬೇಕಿತ್ತು ಅಂತ ತುಂಬ ಸಲ ಅಂದುಕೊಳ್ತೀನಲ್ಲ, ಅವುಗಳಲ್ಲಿ ಇದೂ ಒಂದು ಕಾರಣವಾಗಿತ್ತು.

ನಾನೊಬ್ಬ  ಸಾಹಿತ್ಯದ ವಿದ್ಯಾರ್ಥಿ.  ಮಹಿಳಾ ಅಧ್ಯಯನ ಮತ್ತು ಭಾಷಾಂತರದಲ್ಲಿ  ನನಗೆ ವಿಶೇಷ ಆಸಕ್ತಿ ಇದೆ. ಕಾರ್ನಾಡರ ನಾಟಕಗಳನ್ನ ನಾನು ಇಷ್ಟಪಡೋದು ಈ ದೃಷ್ಟಿಯಿಂದಲೇ. ಇಲ್ಲಿ ಅನುವಾದ ಅನ್ನೋದನ್ನ ನಾನು ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಅನ್ನೋ ಅರ್ಥದಲ್ಲಿ ಬಳಸ್ತಾ ಇಲ್ಲ. ಆದರೆ ಪುರಾಣಗಳನ್ನ ಆಧುನಿಕಕ್ಕೆ ಅನುವಾದಿಸಬೇಕಾದಾಗ ಅಲ್ಲಿ ಒಂದು ಪ್ರಚಂಡ ವಿಮರ್ಶಾ ದೃಷ್ಟಿ ಕೆಲಸ ಮಾಡಬೇಕಾಗುತ್ತೆ. ಯಾಕೆಂದ್ರೆ ಪುರಾಣ ಬರೀ ಗತಕ್ಕೆ ಸಂಬಂಧಪಟ್ಟಿರೋಲ್ಲ. ಅದು ನಾವು ವರ್ತಮಾನದಲ್ಲಿ ಬದುಕುವ ಸಂಬಂಧಗಳನ್ನ, ಅದರ ಮೌಲ್ಯಗಳನ್ನ ತುಂಬ ಆಳವಾಗಿ ನಿರ್ದೇಶಿಸುತ್ತಿರುತ್ತೆ. ಕಾರ್ನಾಡರೇ ತಮ್ಮ ಒಂದು ಭಾಷಣದಲ್ಲಿ ಹೇಳಿದ ಹಾಗೆ ಭಾರತೀಯ ಪುರಾಣಗಳಲ್ಲಿ ಪಿತೃಭಕ್ತಿ ಮತ್ತು ತ್ಯಾಗವನ್ನ ಡಿಮಾಂಡ್ ಮಾಡೋ ಅಂಥ ಅಧಿಕಾರಯುಕ್ತ ತಂದೆ ಅನ್ನೋ ಒಂದು ಪರಿಕಲ್ಪನೆ ತುಂಬ ಬಲವಾಗಿಯೇ ಇದೆ. ಅದು ದಶರಥ ಇರಬಹುದು, ಯಯಾತಿ ಇರಬಹುದು ಅಥವಾ ಕೋಪದಲ್ಲಿ ಗಣೇಶನನ್ನ ಕೊಲ್ಲೋ ಶಿವನೇ ಇರಬಹುದು. ಪಾಶ್ಚಿಮಾತ್ಯ ಸಾಹಿತ್ಯದಲ್ಲಿ ಅದು ಉಲ್ಟಾ ಆಗಿರುತ್ತೆ. ಈಡಿಪಸ್ ತಂದೆಯ ಜೊತೆ ಮುಖಾಮುಖಿಯಾದಾಗ ನಡೆಯೋ ಜಗಳದಲ್ಲಿ ತಂದೆಯನ್ನೇ ಕೊಲ್ತಾನೆ. ರೂಪಕಾರ್ಥವಾಗಿ ಪಿತೃಹತ್ಯೆ ಅಲ್ಲಿ ಒಂದು ಮೌಲ್ಯವಾಗುತ್ತೆ. ಡಿ ಆರ್ ನಾಗರಾಜ್ ಸೃಜನಶೀಲ ಸಾಹಿತ್ಯದ ಬಗ್ಗೆ ಮಾತಾಡೋವಾಗ ಪಿತೃಹತ್ಯೆಯಿಂದಲೇ ಹೊಸ ಸಾಹಿತ್ಯ ಹುಟ್ಟೋದಕ್ಕೆ ಸಾಧ್ಯ ಎಂದು ಹೇಳಿದಾಗ ತುಂಬ ಜನ ಹುಬ್ಬೇರಿಸಿದ್ದಿದೆ. ಆ ಮುನಿಸು ಪಿತೃಭಕ್ತಿಯನ್ನ ಅಕ್ಷರಶಃ ಒಂದು ಮೌಲ್ಯವನ್ನಾಗಿ ಮಾಡಿರೋ  ನಮ್ಮ ಪೌರಾಣಿಕ ಮತ್ತು ಸಾಂಸ್ಕೃತಿಕ ಪ್ರಜ್ಞೆಯಿಂದ ಬಂದಿದ್ದು. ಸೃಜನಶೀಲ ವಾಗ್ವಾದ ನಮಗೆ ಸ್ವಲ್ಪ ಕಷ್ಟವೇ.  ಒಬ್ಬ ನಾಟಕಕಾರನಿಗೂ ಕೂಡ ಕೂಡ ಅದೇ ತಂದೆ ಅಥವಾ  ಸೃಷ್ಟಿಕರ್ತನ ಸ್ಥಾನವನ್ನ ಕೊಡೋದ್ರಿಂದ ಭಾರತೀಯ ವಿದ್ಯಾರ್ಥಿಗಳು ನಾಟಕದಲ್ಲಿನ ಯಾವ ಸಾಲಿನ ಬಗ್ಗೆಯೂ ತಗಾದೆಯನ್ನೇ ತೆಗೆಯೋಲ್ಲ. ಅದೇ ಅಮೆರಿಕಾದ ವಿದ್ಯಾರ್ಥಿಗಳು ‘ಈ ಸಾಲು ನನ್ನ ಸ್ತ್ರೀಪರ ನಿಲುವಿಗೆ ವಿರುದ್ಧವಾದದ್ದು, ಅದನ್ನ ನಾನು ಹೇಗೆ ರಂಗದ ಮೇಲೆ ಪ್ರತಿಪಾದಿಸಲಿ’ ಅನ್ನೋ ಅಂಥ ತಕರಾರುಗಳನ್ನ ಸಹ ತೆಗೀತಾರೆ ಅನ್ನೋದನ್ನ ನೆನಪಿಸಿಕೊಳ್ಳುತ್ತಾರೆ.

ಅದಕ್ಕೇ ಯಯಾತಿಯನ್ನ ಕಾರ್ನಾಡರು ತುಂಬ radical ಆಗಿ ಅನುವಾದಿಸ್ತಾರೆ. ನಾಟಕದಲ್ಲಿ ಎಲ್ಲ ಪಾತ್ರಗಳೂ ಎಲ್ಲ ತರದ ಪ್ರಶ್ನೆಗಳನ್ನೂ ಕೇಳ್ತಾ ಇರ್ತಾವೆ, ಯಯಾತಿ ಒಬ್ಬನನ್ನ ಬಿಟ್ಟು. ಈ ತರದ ಸಾಂಸ್ಕೃತಿಕ ಅನುವಾದ ಸಾಧ್ಯ ಆಗೋದು ಹೆಚ್ಚಾಗಿ ಹೆಣ್ಣುಪಾತ್ರಗಳ ಮೂಲಕ. ಅದರಲ್ಲೂ ಕಾರ್ನಾಡರೇ ಸೃಷ್ಟಿಸಿದ ಚಿತ್ರಲೇಖೆಯ ಪಾತ್ರದಿಂದ. ಯಯಾತಿ ಪುರುಷಸ್ವಾರ್ಥದ ಮಹಾ ಪ್ರತೀಕ. ಅವನಿಗೆ ಶುಕ್ರಚಾರ್ಯರ ಸಂಜೀವನಿ ಬೇಕಾಗಿರೋದರಿಂದ ದೇವಯಾನಿ ಬೇಕು. ತನ್ನ ಜೀವನೋತ್ಸಾಹಕ್ಕೆ ಶರ್ಮಿಷ್ಠೆಯ ಬುದ್ಧಿಶಕ್ತಿ ಬೇಕು, ಯೌವ್ವನ ಕೊಡೋದಕ್ಕೆ ಪುರು ಬೇಕು, ಅದನ್ನ ಒಪ್ಪಿಕೊಳ್ಳೊದಕ್ಕೆ ಚಿತ್ರಲೇಖೆ ಬೇಕು. ಎಲ್ಲ ಸಂಬಂಧಗಳೂ ಅವನ ಅನುಕೂಲಕ್ಕೆ ಒದಗಿಬರೋ ಸಲಕರಣೆಗಳು. ಆ ಮುಖವಾಡನ ಅತ್ಯಂತ ಶಕ್ತಿಯುತವಾಗಿ ಕಿತ್ತೊಗೆಯೋದು ಚಿತ್ರಲೇಖೆಯೇ. ‘ನಿಮ್ಮ ಸೊಸೆ ವಿದ್ಯಾಭ್ಯಾಸ ಮಾಡಿರಬೇಕು, ಗೃಹಕೃತ್ಯದಲ್ಲಿ ನುರಿತವಳೂ ಆಗಿರಬೇಕು ಅಲ್ಲವೆ? ನಾನು ಅಸ್ತ್ರವಿದ್ಯೆ ಬೇರೆ ಕಲಿತಿದ್ದೆ. ಇಂಥ ವಿದ್ಯೆಯ ಪುತ್ಥಳಿಯನ್ನ ಮನೆಗೆ ತಂದು ಅವಳ ಕಾಲಿಗೆ ಸನಾತನ ಶೃಂಖಲೆಗಳನ್ನ ತೊಡಿಸುವ ಹವ್ಯಾಸವೆ’? ಅಂಥ ಕೇಳೋ ಚಿತ್ರಲೇಖೆ ಈಗಿನ ಕಾಲದ ಮದುವೆ ಜಾಹೀರಾತುಗಳನ್ನ ನೆನಪಿಸುತ್ತಾಳೆ. Bride wanted- should be educated, earning, and home-loving too! ಚಿತ್ರಲೇಖೆ ಅಷ್ಟಕ್ಕೇ ಸುಮ್ಮನಾಗೋಲ್ಲ. ತಾನು ಪುರುನ ಮದುವೆಯಾಗಿದ್ದು ಅವನ ತಾರುಣ್ಯಕ್ಕೆ. ಈಗ ಅದು ಅವನ ಹತ್ತಿರ ಇಲ್ಲ, ಯಯಾತಿಯ ಹತ್ತಿರ ಇದೆ, ಅವನೇ ತನ್ನನ್ನು ವರಿಸಬಹುದಲ್ಲ ಅಂಥ ದಿಟ್ಟತನದಿಂದ ತನ್ನ ಲೈಂಗಿಕತೆಯ ಆಯ್ಕೆಯನ್ನೂ ಮಾಡುತ್ತಾಳೆ. ಪುರುವನ್ನೇ ಒಪ್ಪಿಕೊಳ್ಳಬೇಕೆಂದರೆ ಅವನು ತಿರುಗಿ ತರುಣನಾಗುವವರೆಗೂ ತನ್ನ ಅಂತಃಪುರಕ್ಕೆ ಕಾಲಿಡುವ ಹಾಗಿಲ್ಲ ಅಂತ ಸಹ ಹೇಳ್ತಾಳೆ. ಕೊನೆಗೆ ಅದೇ ದಿಟ್ಟತನದಿಂದ ಸಾವನ್ನೂ ಬರಮಾಡಿಕೊಳ್ತಾಳೆ. ಯಯಾತಿ ಬದಲಾಯಿಸೋದು ಅವಳ ಸಾವಿನಿಂದ. ತಕ್ಷಣವೇ ಯೌವ್ವನವನ್ನ ಮರಳಿಕೊಡೋದು ಕಾರ್ನಾಡರೇ ಸೃಷ್ಟಿ ಮಾಡಿದ ಈ ಚಿತ್ರಲೇಖೆಯಿಂದ. ಈ ತುಂಬ ಶಕ್ತಿಯುತವಾದ ಪುರಾಣದ ಅನುವಾದ ಸಾಧ್ಯ ಆಗೋದು ಬಲವಾದ ಸ್ತ್ರೀಪಾತ್ರಗಳಿಂದ. ‘ವೇದನೆಯೂ ಒಂದು ವ್ಯಸನ’ ಅಂತ ನೆನಪಿಸೋ ಸ್ವರ್ಣಲತೆ, ‘ಕಾರಣವಿಲ್ಲದೆ ಬಲಿದಾನ ಮಾಡುವುದು ವಿಕ್ರುತಿಯ ಲಕ್ಷಣ, ತ್ಯಾಗದ ಅಭಿಮಾನವೂ ಒಂದು ವೈಕಲ್ಯ, ನೆನಪಿರಲಿ’ ಎನ್ನುವ ಶರ್ಮಿಷ್ಠೆ, ‘ಹಿಂದಿನವರ ನೀತಿಯ ಸರಪಳಿಯನ್ನ ನಾವೇಕೆ ಧರಿಸಬೇಕು?’ ಎಂದು ಕೇಳುವ ಚಿತ್ರಲೇಖೆ ಅಂಥ ಪ್ರಚಂಡ ಅನುವಾದದ ಮುಖ್ಯ ಪಾತ್ರಗಳು.

ಈ ತರಹದ ಸಾಂಸ್ಕೃತಿಕ ಅನುವಾದಕ್ಕೆ ‘ನಾಗಮಂಡಲ’ ಇನ್ನೊಂದು ಉದಾಹರಣೆ. ನಾಟಕದ ಕೊನೆಗೆ ಮೂರು ರೀತಿಯ ಸಮಾರೋಪಗಳನ್ನ ನಾಟಕಕಾರ ಸೂಚಿಸಿದರೂ ಸಹ ಪ್ರತಿಯೊಂದರಲ್ಲೂ ಅಪ್ಪಣ್ಣ ಮತ್ತು ರಾಣಿ ಇಬ್ಬರಲ್ಲಿ ಒಬ್ಬರಿಗಾದರೂ sense of agency  ಇದೆ.  ಮೊದಲನೆಯದರಲ್ಲಿ ಅಪ್ಪಣ್ಣನ ಸ್ವಗತ ಹೀಗಿದೆ: ‘ನಾನು ಆಕೆಯನ್ನ ಮುಟ್ಟಿಲ್ಲ! ಇದು ನನಗೆ ಗೊತ್ತಿದೆ ಅಂಥಾ ನನ್ನ ಹೆಂಡತಿ ಗರ್ಭಿಣಿಯಾದರೆ ಆಕೆ ಪತಿವ್ರತೆ ಹೇಗೆ? ಬೇಕಾದಂಥ ಪವಾಡಗಳಾಗಲಿ, ನನಗೆ ಗೊತ್ತಿದೆ. ನನಗೆ ಹೀಗೆ ನಿಚ್ಚಳವಾಗಿ ಗೊತ್ತಿರೋ ಮಾತಿಗೆ ಬೆಲೇನೇ ಇಲ್ಲ ಅಂತಾದರೆ ಎಲ್ಲಿಯ ಸುಖ? ಎಲ್ಲಿಯ ಸಂತೋಷ? ಯಾವುದನ್ನ ನಂಬಿ ಬದುಕಿ ಉಳೀಬೇಕು ನಾನು? ಯಾಕೆ ಬದುಕಿ ಉಳೀಬೇಕು?’

ಎರಡನೆಯದರಲ್ಲಿ ರಾಣಿ ಸತ್ತ ಹಾವಿಗೆ ತನ್ನ ಮಗನೇ ಪ್ರತಿವರ್ಷ ಪಿಂಡದಾನ ಮಾಡಬೇಕು ಎನ್ನುವ ಕೋರಿಕೆಯಲ್ಲಿ ನಾಗಪ್ಪನೇ ತನ್ನ ಮಗನ ಅಪ್ಪ ಎಂಬ ಅರಿವಿದೆ.  ಮೂರನೆಯದರಲ್ಲಿ ಹಾವನ್ನು ತನ್ನ ಮುಡಿಯೊಳಗೆ ಸೆಳೆದುಕೊಳ್ಳುವ ರಾಣಿ ನಾಗಪ್ಪನಿಗೆ ‘ಇಲ್ಲೇ ಇರು, ನನ್ನ ಮುಡಿ ನನ್ನ ಮಾಂಗಲ್ಯದ ಲಕ್ಷಣ. ಅದರೊಳಗೇ ಎಂದೆಂದಿಗೂ ಸುಖಸಂತೋಷದಿಂದ ಬಾಳು,’ ಎನ್ನುತ್ತಾಳೆ. ಆಯ್ಕೆಯ ಮತ್ತು ನಿರ್ಧಾರದ ಬಲವನ್ನು ರಾಣಿಗೆ ನೀಡುವ ಈ ನಾಟಕವನ್ನು ನಾಗಮಂಡಲ ಚಲನಚಿತ್ರಕ್ಕೆ ಹೋಲಿಸಿದರೆ ಈ ಅನುವಾದದ ಪರಿಕಲ್ಪನೆ ಸ್ಪಷ್ಟವಾಗುತ್ತದೆ. ನಾಗಾಭರಣರ ನಾಗಮಂಡಲ ರಾಣಿಗೆ  ಶಾಶ್ವತವಾದ ಆದರೆ ಆಯ್ಕೆಗಳೇ ಇಲ್ಲದ ಪ್ರಚಂಡ ಮುಗ್ಧತನವನ್ನ ದಯಪಾಲಿಸಿಬಿಟ್ಟಿದೆ. ಅದು ಸಿನೆಮಾ ಎಂಬ ಪ್ರಕಾರದ ಮಿತಿಯಲ್ಲ. ಬಹುಶಃ ಜನಪ್ರಿಯ ಸಿನೆಮಾ ಎಂಬ ಪ್ರಕಾರದ ಮಿತಿಯಿರಬಹುದು.

ರಾಣಿ ಒಂದು ಸಲ ಅಪ್ಪಣ್ಣನ ರೂಪದ ನಾಗಪ್ಪನಿಗೆ ಹೇಳ್ತಾಳೆ, ‘ಯಾಕೆ ಅಂತ ಕೇಳಬೇಡ, ಹೇಳಿದಷ್ಟು ಮಾಡು ಅಂತೀರಲ್ಲ? ಆಗಲಿ ಮಾಡ್ತೇನೆ. ಮುಂಜಾನೆ ಸಿಟ್ಟು ಸಿಡುಕು, ರಾತ್ರಿ ಮುದ್ದು. ಹಗಲು ಹೊತ್ತಿನ ಹಣೆಗಂಟು ಬೇರೆ, ರಾತ್ರಿಯ ನೇವರಿಕೆ ಬೇರೆ. ಒಂದಕ್ಕೊಂದು ಸಂಬಂಧ ಇಲ್ಲ. ಆದರೆ ಎರಡೂ ಹೊತ್ತಿನ ಸೂತ್ರ ಮಾತ್ರ ಒಂದೇನೆ: ಯಾಕೆ ಅಂತ ಕೇಳಬೇಡ, ಹೇಳಿದಷ್ಟು ಮಾಡು.’ ನಾಗಮಂಡಲ ನೋಡಿರದಿದ್ದ ನನ್ನ ಗೆಳತಿಯೊಬ್ಬಳು ಒಮ್ಮೆ ಗೊಣಗಿದ್ದು ನೆನಪಿಗೆ ಬರುತ್ತೆ: ಏನು ಎತ್ತ ಎಲ್ಲ ಯಾಕೆ? ಹೇಳಿದಷ್ಟು ಮಾಡು ಅಂತಾನೇ ಹೇಳೋದಾದ್ರೆ ಒಳ್ಳೆ ಗಂಡ ಏನು ಕೆಟ್ಟ ಗೆಂಡ ಏನು ಮಣ್ಣಾಂಗಟ್ಟಿ!’

ಪುರಾಣದಲ್ಲಿ ಗತವನ್ನು ವರ್ತಮಾನಕ್ಕೆ ಅನುವಾದಿಸುವ ಕಾಳಜಿ ಕಾರ್ನಾಡರಿಗಿದ್ದರೆ, ಇತಿಹಾಸದಲ್ಲಿ ಅದು ವಿರುದ್ಧವಾದ ದಿಕ್ಕನ್ನು ತೋರಿಸುತ್ತೆ. ಟಿಪ್ಪುವಿನ ಕನಸುಗಳು ಉದಾಹರಣೆಯಾಗಿ ತೆಗೆದುಕೊಳ್ಳಬಹುದು. 1996 ರಲ್ಲಿ ಬಿಬಿಸಿ ರೇಡಿಯೋ ಭಾರತದ ಸ್ವಾತಂತ್ರ್ಯದ ಸುವರ್ಣ ಮಹೋತ್ಸವದ ಸಂದರ್ಭಕ್ಕೆ ಭಾರತದ ಅತ್ಯಂತ ಶ್ರೇಷ್ಠ ಭಾರತೀಯ ಯಾರು ಎಂಬ ಪ್ರಶ್ನೆಯೊಂದಿಗೆ ಕಾರ್ನಾಡರಿಗೆ ನಾಟಕವೊಂದನ್ನು ಬರೆಯಲು ಸೂಚಿಸಿದಾಗ ಹೊಮ್ಮಿದ ನಾಟಕ ‘ಟಿಪ್ಪುವಿನ ಕನಸುಗಳು’. ಅವರ ಆಯ್ಕೆಗೆ ಎರಡು ಮಗ್ಗಲುಗಳಿದ್ದವು ಅಂತ ಅನ್ನಿಸುತ್ತೆ. ಬ್ರಿಟಿಷರ ಕಡುವೈರಿಯಾಗಿದ್ದವನೇ ಈ ದೇಶ ಕಂಡ ಅತ್ಯುತ್ತಮ ಭಾರತೀಯ ಎಂಬ ಸಂದೇಶವನ್ನು ಅವರಿಗೆ ಕೊಡುವುದು, ಎರಡನೆಯದು ಯಾವ್ಯಾವುದೋ ರಾಜಕೀಯ ತೆವಲುಗಳಿಗೆ ಟಿಪ್ಪು ವರ್ತಮಾನದಲ್ಲಿ ಹೇಗೆ ಹೇಗೋ ಅನುವಾದಿಸಲ್ಪಟ್ಟಿದ್ದಾನಲ್ಲ, ಅದನ್ನು ಸರಿಪಡಿಸಲು ಮೂಲಕ್ಕೇ ಹೋಗುವುದು. ಇತಿಹಾಸವನ್ನು ನಿರೂಪಿಸುವಾಗ ಕಲ್ಪನೆಯನ್ನಷ್ಟೇ ಬಳಸುವುದು ಸಲ್ಲ. ಅದಕ್ಕೇ ಕಾರ್ನಾಡರು ಟಿಪ್ಪು ತನ್ನ ನೆನಪುಗಳನ್ನು ಕನಸುಗಳನ್ನು ಬರೆದಿಡುತ್ತಿದ್ದ ದಿನಚರಿಯನ್ನೇ ಬಳಸಿಕೊಳ್ಳುವುದರಿಂದ ಅಲ್ಲಿ ವೈಭವೀಕರಣವಿಲ್ಲ. ಟಿಪ್ಪು ನಾಡಿನ ಸ್ವಾತಂತ್ರ್ಯಕ್ಕೆ ತನ್ನ ಮಕ್ಕಳನ್ನೇ ಒತ್ತೆಯಿಡುವ ಅಖಂಡ ಸ್ವಾಭಿಮಾನಿ, ಅರಮನೆಗಿಂತ ಯುದ್ಧಭೂಮಿಯಲ್ಲೇ ತನ್ನ ಹೆಚ್ಚಿನ ದಿನಗಳನ್ನು ಕಳೆದ ಹುಲಿ, ಮಹಾ ಚಾಣಾಕ್ಷ ಮುತ್ಸದ್ದಿ, ಬೆನ್ನಿಗೆ ಇರಿಯುವವರ ನಡುವೆಯೇ ಬದುಕುಳಿಯಬೇಕಾದ ಅನಿವಾರ್ಯಕ್ಕೆ ಒಳಗಾದವನು. ಅಷ್ಟೇ ಅಲ್ಲ, ಅವನೊಬ್ಬ ಕನಸುಗಾರ ಸಹ. ಅದಕ್ಕೇ ಅವನ ಕನಸುಗಳಿಗೆ ಕಾವ್ಯಗುಣ ಬಂದಿದೆ. ನಾನು ಕೊಡಗಿನವಳು, ಮೈಸೂರಲ್ಲಿ ಓದಿದವಳು. ಟಿಪ್ಪುವಿನ ಬಗ್ಗೆ ಎಷ್ಟೋ ಓದಿಕೊಂಡಿದ್ದರೂ ಸಹ ಈ ನಾಟಕವನ್ನು ನೋಡಿದ ಮೇಲಂತೂ ಶ್ರೀರಂಗಪಟ್ಟಣ ಒಂದು ರೀತಿಯ personal pilgrimage ತರಹ ಆಗಿಬಿಟ್ಟಿದೆ.

ಕೊನೆಯದಾಗಿ ಕಾರ್ನಾಡರ ಸಿನಿಮಾದ ಬಗ್ಗೆ. ನನ್ನ ಅತ್ಯಂತ ಇಷ್ಟದ ಕಾರ್ನಾಡರ ಸಿನಿಮಾ: ಒಂದಾನೊಂದು ಕಾಲದಲ್ಲಿ. ಅದರಲ್ಲಿ ಬರುವ ಕತ್ತಿಕಾಳಗದಂಥ ದ್ರುಶ್ಯಕಾವ್ಯವನ್ನ  ಜಾಗತಿಕ ಸಿನೆಮಾದಲ್ಲಿ ಆಸಕ್ತಿಯುಳ್ಳ ನಾನು ನೋಡಿರೋದು ಕೆಲವೇ ಬಾರಿ. ನಾನು ಕಾರ್ನಾಡರನ್ನು ನೆನಪಿಸಿಕೊಳ್ಳುವಾಗೆಲ್ಲಾ ಈ ‘ಒಂದಾನೊಂದು ಕಾಲದಲ್ಲಿ’ ಎಂಬ ಶೀರ್ಷಿಕೆ ಅವರ ಎಲ್ಲ ಕಾಳಜಿಗಳನ್ನು ಸಾರಾಂಶೀಕರಿಸುತ್ತದೆ ಅಂತಲೇ ಅನ್ನಿಸುತ್ತದೆ. ಅದಕ್ಕೇ ಅವರು ಪುರಾಣಕ್ಕೆ ಮತ್ತು ಇತಿಹಾಸಕ್ಕೆ ಮತ್ತೆ ಮತ್ತೆ ಹೊರಳಿಕೊಳ್ಳುತ್ತಾರೆ. ಆ ಕಾಲದಲ್ಲೇ ಉಳಿದುಬಿಡಲು ಅಲ್ಲ. ಆ ಕಾಲದ ಮತ್ತು ಈ ಕಾಲದ ನಡುವಿನ ಸಮರ್ಥ ಅನುವಾದಕರಾಗಿ.

5 comments to “ಅನುವಾದಕ್ಕೆ ಹೊಸ ಅರ್ಥ ನೀಡಿದ ಗಿರೀಶ್ ಕಾರ್ನಾಡರನ್ನು ನೆನೆಯುತ್ತಾ”
  1. ಈ ಬರೆಹ ಈಗ ತಾನೇ ನನ್ನ ಕಣ್ಣಿಗೆ ಬಿತ್ತು. ಇಂತಹದೊಂದು ಬರೆಹವನ್ನು ನಾನು ಕನ್ನಡದಲ್ಲಿಯಾಗಲಿ, ಇಂಗ್ಲಿಶ್ ನಲ್ಲಾಗಲಿ ಓದಿದ್ದಿಲ್ಲ. ನಮ್ಮ ನಡುವೆ ಇರುವ ಅತ್ಯುತ್ತಮ ಅನುವಾದಕಿಯಾದ ಸುಕನ್ಯಾರಿಗೆ ಅಭಿನಂದನೆಗಳು. ನಿಮ್ಮಿಂದ ಇಂತಹ ಲೇಖನಗಳು ಮತ್ತಷ್ಟು ಬರಲಿ.

    • ಕಾರ್ನಾಡ್ ಅವರ ಬಗ್ಗೆ ಚೆನ್ನಾಗಿ ನಿರೂಪಿಸಿದ್ದೀರಿ.
      ತ್ಯಾಂಕ್ಯೂ ಸುಕನ್ಯಾ ಮೇಡಂ.

Leave a Reply to SUDHA SHIVARAMA HEGDE Cancel reply