ಮ್ಯಾಕ್ ಬೆತ್ – ಎಂದೂ ತುಂಬದ ಪಾಪದ ಕೊಡ

ಮ್ಯಾಕ್ ಬೆತ್ ನ ರೂಪಾಂತರಗಳನ್ನು ವರ್ಷಾಂತರದಲ್ಲಿ ಅಳವಡಿಸಿಕೊಳ್ಳುತ್ತ ಬಂದ ಬರಹಗಾರರು ಮತ್ತು ಸಿನೆಮಾ ನಿರ್ದೇಶಕರ ಕುರಿತ ಕ್ಷಿಪ್ರ ಚಿತ್ರಣ ಇಲ್ಲಿದೆ. ಇತಿಹಾಸ ಮತ್ತು ಸಾಹಿತ್ಯಗಳು ಹೊಸೆದುಕೊಂಡ ಬಗೆಗಳು ಹಾಗೂ ಕಳೆದ ಐನೂರು ವರ್ಷಗಳ ಈ ನಾಟಕದ ಪಯಣದಲ್ಲಿ ಮೇಲ್ವರ್ಗದ ರಕ್ತದ ತೊಡಕನ್ನು ಕಳೆದು, ಮೀನು ಮಾರುವ ಸುಗಂಧಿಗೂ ತನ್ನದಲ್ಲದ ಹೊಸ ಪರಿಮಳದ ವಾಸನೆ ಹತ್ತುವುದನ್ನು ಕಾಣಿಸುವ ಪಡ್ಡಾಯಿಯ ಬಗ್ಗೆ ಒಂದು ಕ್ವಿಕ್ ನೋಟ್.

ಅರವತ್ತರ ಅಮೇರಿಕ ಅಧ್ಬುತ ಭೀಕರ. ಮಾರ್ಡನ್ನಿಸಮ್ಮಿನಿಂದ ಕಳಚಿಕೊಳ್ಳುತ್ತಾ, Post ಮಾರ್ಡನ್ನಿಸಮ್ಮಿನತ್ತ ಸರಿಯುವ ಈ ಕಾಲ ಘಟ್ಟದಲ್ಲಿ ಅಮೇರಿಕಾದಲ್ಲಿ ಆದ ಘಟನೆಗಳು ಮನುಷ್ಯನ ಒಡಲಾಳದಲ್ಲಿ ಹೊಂಚು ಹಾಕುತ್ತಿರುವ ಕೇಡಿನ ಪಿಶಾಚಿಗಳಿಗೆ ದೊಂದಿ ಹಿಡಿಯುತ್ತದೆ, ಹಾಗೇ ಅದೇ ಮನುಷ್ಯನ ಆಂತರ್ಯದಲ್ಲಿ, ಅಮೃತವಾಹಿನಿಯಂತೆ ಎಂದೂ ಬತ್ತದೆ ಚೂರೇ ಚೂರು ಒಸರಿನಂತೆ ಉಳಿದಿರುವ ಜೀವಜಲಕ್ಕೂ ಸಾಕ್ಷಿಯಾಗುತ್ತದೆ. ಕಮ್ಯುನಿಷ್ಟರಿದ್ದಾರೆ ಎಚ್ಚರಿಕೆ, ಇನ್ನೇನು ಹೈಡ್ರೋಜನ್ನ್ ಬಾಂಬು ಬಿದ್ದೇ ಬಿಡ್ತು, ಆಮೇಲೆ ಅಮೇರಿಕ ನಾಮಶೇಷವಾಗುತ್ತದೆ, ಅನ್ನೋ ಅಂತಹ ತಲ್ಲಣದ ವಾತವಾರಣದಲ್ಲಿ ಬದುಕುತ್ತಿದ್ದ ಜನರನ್ನು ಹೊಸಜಗತ್ತಿನಿತ್ತ ಎಳೆಯುವ ಯತ್ನ ಮಾಡುತ್ತಿದ್ದ ಅಧ್ಯಕ್ಷ ಕೆನಡಿಯನ್ನು ಅಷ್ಟು ಅಚ್ಚುಕಟ್ಟಾಗಿ ಶೂಟ್ ಮಾಡಿ ಮುಗಿಸಿದ್ದು, ಇನ್ನೇನು ಮುಗಿಯುವ ಹಾಗಿದ್ದ ವೀಯೇಟ್ನಾಂ ಯುದ್ಧ ಆ ನಂತರ ಗರೆಗೆದರಿ ರಕ್ತದ ಬಣ್ಣದಲ್ಲಿ ದಹಿಸಿದ್ದು, ಸಿ.ಐ.ಎ ಗುಪ್ತವಾಗಿ ನಡೆಸುತ್ತಿದ ಅಪಾಯಕಾರಿ ಮಿಲಿಟರಿ ಆಪರೇಷನ್ನುಗಳು, ಮನುಷ್ಯರ ಮೇಲೆ ಬಲವಂತವಾಗಿ ಮಾಡುತ್ತಿದ್ದ ಬಿಹೇವಿರಿಯಲ್ ಎಕ್ಸ್‍ಪರಿಮೆಂಟುಗಳು, ಎಡ್ಗರ್ ಹೂವರ್ರನ ಕಮ್ಯುನಿಶ್ಟ್ phobia, ಮತ್ತೊಬ್ಬ ಅಧ್ಯಕ್ಶ ಲಿಂಡನ್ನ್ ಜಾನ್ಸನಿಗೆ ಮಿಸೈಲುಗಳ ಮೇಲಿದ್ದ ವಿಪರೀತ ಮಮತೆ, ಈ ತಳಮಳಗಳಿಂದ ಭಯಂಕರವಾಗಿ ಕದಲಿದ್ದ ಯುವಪರಂಪರೆ ಬಂಡೆದದ್ದು… ಪ್ರೆಸಿಡೆಂಟ್ ನಿಕ್ಸನ್ನಿನ ಹುಚ್ಚು ಹುಚ್ಚು ವೀಯೇಟ್ನಾಂ ಯುದ್ಧ ಪ್ರೇಮವನ್ನು ಉಗ್ರವಾಗಿ ಉಗಿಯಲು, ರೊಚ್ಚಿಗೆದ್ದು ಬೀದಿ-ಬೀದಿಗಿಳಿದು ಪ್ರತಿಭಟಿಸಿದ್ದು, ಅರಿವನ್ನು ಹುಡುಕುತ್ತಾ ಎಲ್.ಎಸ್.ಡಿ, ಮರ್ಯುವಾನ, ಹೆರಾಯಿನ್, ಆಸಿಡ್‍ಗಳಂತಹ ಮತಿಭ್ರಾಂತಿಗೊಳಿಸೋ ಡ್ರಗ್ಗುಗಳಿಗೆ ಅಡಿಕ್ಟ್ ಆದದ್ದು… ಹಿಪ್ಪಿ ಮೂವ್ಮೆಂಟಿನ ಆಗಮನ… ಈ ಯುಗವೇ ಭಾರಿ ರುದ್ರಮಜದ ದಿನಗಳು… ಈ ಸೈಕ್ಲೆಡಿಕ್ ಸಿಕ್ಸ್ಟಿಗೆ ರಕ್ತರಂಗಲ್ಲಿ ಮುಕ್ತಾಯ ಹಾಡಿದ ಪುಣ್ಯಾತ್ಮ, ‘ಈಗ… ಈ ಟೈಮಲ್ಲಿ ಜೀಸಸ್ ಕ್ರೈಶ್ಟ್ ಅಂದ್ರೇ ನಾನೇ …” ಎಂದು ಸ್ವಯಂ ಘೋಷಿಸಿ, ಅನಾಥರಾಗಿ, ಬೀದಿಬೀದಿ ಅಲೆಯುತ್ತಾ ಪ್ರೀತಿ ಹುಡುಕುತ್ತಿದ್ದ ಡ್ರಗ್ಗಿ ಎಳೆ ಹುಡುಗಿಯರನ್ನು ಸಮ್ಮೋಹನಗೊಳಿಸಿ, ಭಾವನಹೀನ ಕಡು ಕೊಲೆಗಡುಕರ ವಿಚಿತ್ರ ಪಂಥವನ್ನು ಸೃಷ್ಟಿಸಿದ ಚಾರ್ಲ್ಸ್ ಮ್ಯಾನ್‍ಸನ್.

ಅರವತ್ತೊಂಬತ್ತನೆಯ ಇಸವಿಯಲ್ಲಿ ಆಡಿದರೆ ನಾಲಗೆಯೇ ಹೆದರುವ ಹಾಗೇ, ಲಾಸ್ ಏಂಜಲೀಸ್‍ನ ವಿಲ್ಲಾದಲ್ಲಿದ್ದ ಆ ಕಾಲದ ಮಿನುಗುತಾರೆ ಶರನ್ ಟೇಟ್ ಹಾಗೂ ಆಕೆಯ ಗೆಳೆಯರಬಳಗವನ್ನು ಇಷ್ಟಬಂದ ಹಾಗೆ ಚಚ್ಚಿ, ಚುಚ್ಚಿ, ಗುಂಡು ಹೊಡೆದು ಅಂದು ಅಕ್ಷರಶಃ ರಕ್ತರಾತ್ರಿಯನ್ನು ಕೆತ್ತಿದ ಈ ಪಂಥದ ಹುಡುಗ ಹುಡುಗಿಯರು ಶೇಕ್ಸ್ಪಿಯರ್ರನ ರುದ್ರ ನಾಟಕದಲ್ಲಿ ತಮ್ಮ ದೊರೆ ಹೆಕೆಟನ್ನು ಓಲೈಸಲು ಮ್ಯಾಕ್‍ಬತ್ನಂತಹ ದಿವ್ಯ ಆತ್ಮವನ್ನೇ ಕಲುಷಿತಗೊಳಿಸಿ ರಕ್ತದ ಹಾದರಕ್ಕಿಳುವಂತೆ ಪ್ರೇರೆಪಿಸಿದ ಮಾಟಗಾತಿಯರಂತೆ. ಅತ್ಯಂತ ಕ್ರೂರವಾಗಿ ಹತಳಾದ ಶರನ್ ಟೇಟ್ ಎಂಟೂವರೆ ತಿಂಗಳ ತುಂಬು ಗರ್ಭಿಣಿ ಎನ್ನುವುದು ಇನ್ನೊಂದು ದುರಂತ.

ಆದರೆ ವಿಧಿಯ ಆಟ ನೋಡಿ, ಆಮೇಲೆ ಈಕೆಯ ಗಂಡ, ವಿಶ್ವ ಕಂಡ ಅದ್ಭುತ ನಿರ್ದೇಶಕ ರೊಮಾನ್ ಪೊಲಾನ್ಸ್ಕಿ ಈ ಮಾರಣಹೋಮದಿಂದ ಹೇಗೆ ತತ್ತರಿಸಿ ಹೋದನೆಂದರೆ, ಸಮಾಧನಾಕ್ಕಾದರೂ ಸಿನಿಮಾ ಮಾಡಲೇ ಬೇಕೆಂದು, ಮತ್ತೆ ಮ್ಯಾಕ್ಬೆತ್ಗೆ ಮೊರೆ ಹೋಗುತ್ತಾನೆ. 71ನೆಯ ಇಸವಿಯಲ್ಲಿ ಪೊಲಾನ್ಸ್ಕಿಯ ಮ್ಯಾಕ್‍ಬೆತ್ ರಿಲೀಸ್ ಆಗುತ್ತದೆ. ಆದರೆ ತನ್ನ ಆತ್ಮದಲ್ಲಿ ಸ್ರಾವವಾಗುತ್ತಲೇ ಇರುವ ನೋವಿನಿಂದಲೂ, ಈ ಕೊಲೆಗಡುಕರ ಪಂಥವನ್ನು ಸೃಷ್ಟಿಯಾಗಿಸಿದಂತಹ ವಾತಾವರಣ ಎಂತಹುದು ಅನ್ನುವಂತಹ ಗೊಂದಲದಿಂದಲೂ, ಇಡೀ ಅರವತ್ತರ ದಶಕದ ನೈತಿಕ ಅಧಃಪತನಗಳಿಂದಲೂ ಮತ್ತು ರಾಜಕೀಯ ಹಾದರಗಳಿಂದಲೂ, ತನ್ನದೇ ಆದ ಗುಪ್ತ ಖಯಾಲಿಗಳಿಂದಲೂ ಮತ್ತು ಶಕ್ತಿಯಿಂದ ಸಮ್ಮೋಹಿತರಾಗಿ ಅದರ ಬೆಂಬತ್ತಿದ್ದ ಮಹಾ ಮಿಲಿಟರಿ ಮತ್ತು ಪೊಲಿಟಿಕಲ್ ಮಹಾಕುಳಗಳನ್ನು, ಒಂದು ಸ್ವಪ್ನತರ್ಕದ ಇಡಿಯಲ್ಲಿ ಎರಕವ ಹೊಯ್ಯಲು ಪೊಲಾನ್ಸ್ಕಿ ಶರಣಾದದ್ದು ಮ್ಯಾಕ್‍ಬೆತ್ ನಾಟಕಕ್ಕೆ ಕಡೆಗೆ.

ಶರಣಾಗಲೇ ಬೇಕು, ಈ ನಾಟಕ ಬರೆದ ಶೇಕ್ಸ್ಪಿಯರ್ ಎಲ್ಲ ಐಲುಗಳ, ಎಲ್ಲ ನೋವುಗಳ, ಎಲ್ಲ ದುರಂತಗಳ, ಎಲ್ಲ ಜರ್ಜರಿತ ಜೀವಗಳ ಗುರು. ಈ ಮ್ಯಾಕ್‍ಬೆತ್ತೂ ಮ್ಯಾನ್‍ಸನ್ನೂ, ಈ ಹಿಪ್ಪಿ ಹೆದರಿಕೆಯೂ ಶೇಕ್ಸ್ಪಿಯರ್ ಕೂಡಾ, ಪೊಲಾನ್ಸ್ಕಿಯ ದುರಂತವೂ ಮತ್ತು ಸ್ಕ್ರೀನಿನ ಮೇಲೆ ಈ ಶತಮಾನದ ಧಿಗ್ಬ್ರಾಂತಗೊಳಿಸುವ ಘಟನಾವಳಿಗಳು ನೋಡಿ ಹೇಗೆ ಮಹರ್ಶಿ ಶೇಕ್ಸ್ಪಿಯರ್ನ ಮನಸ್ಸಿನ ಕಣ್ಣಿನಲ್ಲಿ, ಕಾವ್ಯದ ರೂಪ ತಾಳೀ ಸುಮಾರು ನಾನೂರು ವರುಷಗಳ ಹಿಂದೆಯೇ ಪ್ರತಿಧ್ವನಿಸಿತ್ತು! ಈ ಟೆರರ್ ಮತ್ತು ಕ್ಲಾಸಿಕ್ ಕಾವ್ಯಗಳ ಮಧ್ಯೆ ಆಗಾಗ ಆಗುವ ವಕ್ರ ರೊಮಾನ್ಸೇ ಒಂದು ಶುದ್ಧ ಅದ್ಭುತ!

****

ಈಗ ಅಭಯ ಸಿಂಹ ಪಡ್ಡಾಯಿ ನಿರ್ದೇಶಿಸಿದ್ದಾರೆ. ಪಡ್ಡಾಯಿ, ಟ್ಟೈಟಲ್ಲ್ ಬಿಳಿ ಬಣ್ಣದಲ್ಲಿ ಮೂಡುತ್ತಾ ಇದ್ದ ಹಾಗೇ ಕೆಂಪು ರಕ್ತದಂತಾ ರಂಗು ಚಿಮ್ಮಿ ಎಲ್ಲ ಕೆಂಪಾಗುತ್ತದೆ. ಕೆಂಪಾದ ಪಶ್ಚಿಮ! ಅಮೇರಿಕದ ಕವಿ ಜಿಮ್ಮ್ ಮಾರಿಸ್ಸನ್ನ ‘ದಿ ಎಂಡ್’ ಅನ್ನೋ ಪದ್ಯದಲ್ಲಿ “ಪಶ್ಚಿಮ ಎಲ್ಲದಕ್ಕಿಂದ ಉತ್ತಮ. ಅದಕ್ಕೇ ಕೇಳ್ರಪ್ಪಾ ಎಲ್ಲಾ, ಮಿಕ್ಕೆಲ್ಲಾನೂ ನಾವೇ ಮಾಡಿ ಮುಗಿಸೋಣ…” ಅಂತಾನೆ. ಈ ಸಾಲುಗಳಿರೋ ಈ ಹಾಡು ಮುಗಿಯೋದು ಗ್ರೀಕ್ ರುದ್ರ ನಾಟಕ ಈಡಿಪಸ್ ರೆಕ್ಸ್ ನ ನೆನಪು ತರಿಸೋ ಸಂಕೇತದ ಜತೆ.

“ಅಪ್ಪಾ… ಹೇಳೋ ಮಗನೇ… ಅಪ್ಪಾ ನಿನ್ನ ಸಾಯ್ಸೋ ಆಸೆ ಅಪ್ಪಾ… ಅಮ್ಮಾ… ನಿನ್ನಾ ನಾನು…”

ಅಷ್ಟೇ ಆ ಸಾಲನ್ನು ಅಪೂರ್ಣವಾಗಿ ಇಟ್ಟು, ಮಾಂತ್ರಿಕನಂತೆ ಗಹಗಹಿಸುತ್ತಾನೆ ಮಾರಿಸನ್ನ್. ಅಪ್ಪನನ್ನು ಕೊಂದು, ಅಮ್ಮನನ್ನು ಕಟ್ಟಿ ಕೊಂಡು, ಮತ್ತೆ ಪಶ್ಚಾತಾಪದಲ್ಲಿ ಬೆಂದು ಎಲ್ಲ ಕೆಟ್ಟ ದುರಂತದಲ್ಲಿ, ಗ್ರೀಕ್ ಸಾಮ್ರಾಜ್ಯವೇ ಉರಿದು ಹೋದಂತೆ ಪಶ್ಚಿಮ ಉರಿದು ಹೋಗುತ್ತದೇ ಅಂತ ಹೇಳೂ ಆಸೆ ಮಾರಿಸನ್ನಿಗೆ. ಈ ಪಶ್ಚಿಮ ಅನ್ನೋ ಹೆಸರಿಟ್ಟು ಸಿಂಹ, ಇದ್ದಕ್ಕಿದ್ದಂತೆ ಕೊನೆಯಾಗೋ ತಲ್ಲಣ, ಮಿತಿ ಮೀರಿ ಕತ್ತು ಹರಿಯೋ ಅಷ್ಟು ಆಳವಾಗಿ ಕಾಡೋ ಆಸೆಗಳು, ಬಿಟ್ಟು ಬಿಡದೆ ಚಿತ್ರ ಹಿಂಸೆ ಕೊಡೋ ಪಾಪಪ್ರಜ್ಞೆ ಅನ್ನೋ ಬೆಂಬತ್ತಿದ್ದ ಭೂತ… ಇವಿಷ್ಟನ್ನೂ ಇಡಿಯಾಗು ಒಂದು ಶಬ್ಧದಲ್ಲಿ ಬಚ್ಚಿಟ್ಟಿದ್ದಾರೆ.

ಮಾಧವನಿಗೆ ದೈವ ಅನ್ನುತ್ತಲ್ಲಾ, “ನೀನೇ ಏನೇನೋ ಬಯಸಿದ್ದನ್ನೇ ಊಹಿಸಿಕೊಂಡು, ನನ್ನ ಮೇಲೆ ಎಲ್ಲ ಗೂಬೆ ಕೂರಿಸ್ಬೇಡ…” ಆಗ ಆತ ನಿರುಮ್ಮಳವಾಗುತ್ತಾನೆ. ಒಂದು ರೀತಿಯ ಅಂತಿಮ ಸಮಾಧಾನ. ಮನುಷ್ಯನಿಗೆ ಶಾಶ್ವತವಾಗಿ ನೆಮ್ಮದಿ ಸಿಗೋದು ದೈವ ಕೂಡ ಆತನ ಕೈ ಬಿಟ್ಟಾಗ ಮಾತ್ರ. ಏಕೆಂದರೆ ಆಗ ಮತ್ತೆ ಎಲ್ಲವೂ ಸರಿ ಆಗುತ್ತೇ ಅನ್ನೋ ಆಶವಾದ ಆತನಿಂದ ಶಾಶ್ವತವಾಗಿ ನಿರ್ಗಮಿಸಿ ಬಿಡುತ್ತದೆ. ಎಲ್ಲಾ ಸರಿ ಆಗಿ ಬಿಡೋದು ಅಂದರೆ ಏನು? ಮತ್ತೆ ಎಲ್ಲರೊಳಗಾಗಿ, ಹೊಂದಿಕೊಂಡು ಕೂಡಿ ಬಾಳೋದು. ಮ್ಯಾಕ್ಬೆತ್ ಆ ಲೆಕ್ಕದಲ್ಲಿ ಓರ್ವ ಅನ್ಯ. ಅವನು ಮಾತ್ರ ಅಲ್ಲ ನಾವೆಲ್ಲರೂ ಕೂಡ. ಏನಂದರೆ ಬಂಡೇಳಲು ಹೆದರೆ ಕೂಡಿ ಬಾಳುತ್ತೇವೆ. ಎಲ್ಲೋ ಚೂರು ಕಾಮನೆಗಳ ಮೋಹಕ್ಕೆ ಸಿಕ್ಕಿ ನೀತಿ ನಿಯಮಗಳ ಚಚ್ಚೋ ಪ್ರಯತ್ನ ಮಾಡಿ ಒದೆ ತಿಂದಾಗ, “ಇನ್ಯಾವತ್ತೂ ಹೀಗೆಲ್ಲ ತಿಕ್ಕ್-ತಿಕ್ಲಾಗಿ ಆಡಲ್ಲ, ಒಮ್ಮೆ ನನ್ನ ಹಳೇ ಜೀವನನ ಮತ್ತೆ ಕೊಡು. ಹರುಷಕ್ಕಿದೇ ದಾರಿ ಅಂತಾ ನೆಮ್ಮದಿ ಗಿಟ್ಟಿಸಿಕೊಳ್ತೀನೀ…” ಅಂತಾ ಬೇಡಿ, ತಗ್ಗಿ ಬಗ್ಗೀ ನಡೆಯೋ ಪಾಪದ ಜೀವಿಗಳು. ಆದರೆ ದಂಗೆದ್ದ ಮ್ಯಾಕ್ಬೆತ್ ಎಷ್ಟು ದೂರ ಹೋಗುತ್ತಾನೆ ಅಂದರೆ, ಮತ್ತೆ ಹಿಂತಿರುಗಿ ರೀತಿರಿವಾಜುಗಳಿಗೆ ಸಾಷ್ಟಾಂಗ ನಮಸ್ಕರಿಸಿ ಬದುಕೋದು ಆತನಿಗೆ ಅಸಂಭವ ಅಂತ ಗೊತ್ತಾಗುತ್ತೆ. ಈ ಅಸಂಭವಕ್ಕಿಂತ ನನ್ನ ಅಸಂಗತ ರೆಬೆಲ್ಲೇಯಿನ್ನ್ ಅಲ್ಲೇ ನಾಶ ಆಗೋದು- ಹಾತೆ ಬೆಂಕಿಯಲ್ಲಿ ಭಸ್ಮ ಆದಂತೆ- ಎಷ್ಟೋ ಉತ್ತಮ ಅನ್ನಿಸಿ ಮತ್ತೆ ಮಾಟಗಾತಿಯರನ್ನು ನೋಡಲು ಹೋಗುತ್ತಾನೆ. ಅವುಗಳ ಸುಡುಗಾಡು ಶಕುನದಲ್ಲಿ ನಂಬಿಕೆ ಇ‹ಟ್ಟೇನಲ್ಲ, ಬರೋದೆಲ್ಲ ಬರಲಿ, ನಾನಂತೂ ಹಿಂದೆ ಹೋಗಲ್ಲ ಅಂತ. ಮತ್ತೆ ಮನುಷ್ಯನಾಗಲ್ಲ ಅಂತ.

“ ರಕ್ತದಲ್ಲೇ ಇರುವೆ ನಾನು. ಈ ನೆತ್ತರ ಹೊಳೆಯಾಳಕ್ಕೆ ಹೇಗೆ ಬಿದ್ದಿರುವೆನೆಂದರೆ, ಇಲ್ಲಿಂದ ವಾಪಾಸ್ಸು ಬರೋ ಮನಸ್ಸು ಮಾಡುವುದೂ, ಈ ನೆತ್ತರಲ್ಲೇ ದೂರ ಸಾಗುವಷ್ಟೇ ಬೇಸರ, ದುಸ್ಸಾಹಸ” ಅಂತಾ ಮ್ಯಾಕ್‍ಬೆತ್ತ್ ಆಡೋ ಮಾತನ್ನ ಮೂರುವರೆ ಶತಮಾನಗಳ ನಂತರ, ಬ್ರಿಟಿಷ್ ಅಮೇರಿಕನ್ ಫಿûಸಿಶ್ಟ್ ಫಿû್ರೀಮನ್ ಡೈಸನ್ ನೆನೆಪಿಸಿಕೊಳ್ತಾನೆ. “ ಯಾವ ರೀತಿಯ ರಕ್ಷಣೆಯೂ ಇಲ್ಲದೇ, ಹೋರಾಡುತ್ತಿರುವ ಜಪಾನಿಗಳನ್ನು ನಾವು ಕತ್ತರಿಸೋದಿ ನನಗೆ ವಾಕರಿಕೆ ತರಿಸುತ್ತಿದ್ದೆ. ಆದರೆ ನಾನು ಮಾತ್ರ ಈ ಯುದ್ಧದಿಂದ ದೂರ ಸರಿಯಲೇ ಇಲ್ಲ. ಏಕೆಂದರೆ ಯುದ್ಧದಲ್ಲಿ ನಾವೆಷ್ಟು ಹೂತು ಹೋಗಿದ್ದೆವೆಂದರೆ, ಪೀಸ್ ಅನ್ನೋದನ್ನ ನಾವು ನೆನೆಪಿಸಿಕೊಳ್ಳುವುದೇ ಅಸಂಭವಾಗಿದೆ. ಹೀಗೆ ಆತ್ಮ ಬರಿದಾಗೋ ಸ್ಥಿತಿಯನ್ನು, ಆ ಸ್ಥಿತಿಯಿಂದಾಗಿ ಯಾವ ಪಶ್ಚತಾಪವೂ ಇಲ್ಲದೇ, ಯಾವ ತಳಮಳವೂ ಇಲ್ಲದೇ, ಯಾವ ದ್ವೇಷವೂ ಇಲ್ಲದೇ ಕೊಲ್ಲುತ್ತಿದ್ದ ನನ್ನಂತಹವರ ದಾರುಣ ಗತಿಯನ್ನು, ಎಂಥಾ ಮಹಾಕವಿಯೂ ಬರೆದಿಲ್ಲವೇನೋ, ಆದರೆ ಶೇಕ್ಸ್‍ಪಿಯರ್ರೆಗೆ ಈ ಗತಿ ಅರ್ಥವಾಗಿತ್ತು. ಅದಕ್ಕೇ ಮ್ಯಾಕ್‍ಬೆತ್ ಆತ ಈ ಪದಗಳನ್ನು ಕೊಟ್ಟ…”

ಆಭಯ ಸಿಂಹ ಮಾಟಗಾತಿಯರನ್ನು ಬಿಟ್ಟು ದೈವದತ್ತ ಮಾಧವನನ್ನು ನೂಕುತ್ತಾರೆ. ಇಲ್ಲೂ ಮಾಧವ ಸುಪ್ತವಾಗಿ ಅರಿತಿದ್ದಾನೆ, ಖಂಡಿತ ದೈವ ಕೂಡ ನನ್ನ ಕೈ ಹಿಡಿಯೋದಿಲ್ಲ ಎಂದು. ಯಾವಾಗ ಅವನ ಮನಸ್ಸಲ್ಲಿರೋ ಈ ಆಲೋಚನೆಯನ್ನೇ ತಾನು ನಂಬಿದ್ದ ಭೂತವೂ ಒತ್ತಿ ಹೇಳುತ್ತದೇ ಆತ ಪೈಶಿಯಾಚಿಕ ಶಾಂತಿಯ ವಶವಾಗುತ್ತಾನೆ. ಖಳನಿಗೆ ನಾನು ಖಳನೆಂದೇ ಖಾತ್ರಿಯಾಗೋ ವೇಳೆಯದು. “ಇನ್ನೇನಾದರೂ ಆಗಲಿ, ನನಗಂತೂ ಮುಕ್ತಿಯಿಲ್ಲ. ಆದರೂ ಪರ್ವಾಗಿಲ್ಲ… ಅದರ ಅರಿವಾದರೂ ದಕ್ಕಿತ್ತಲ್ಲ… ಸುಮ್ಮನೇ ನನ್ನ ನಾನೇ ಉಳಿಸೋ ಪ್ರಯತ್ನ ಮಾಡೋ ಹಿಂಸೆ ತಪ್ಪಿತಲ್ಲ…” ಹಾಯೆನ್ನಿಸೋ ಭಾವ.

ಇನ್ನೂ ಇವನ ಹೆಂಡತಿ ಸುಗಂಧಿಗೆ ಹತ್ತಿಕೊಳ್ಳೂ Perfume ಬಯಕೆ ಮತ್ತೆ ಘೋರ ದುರಂತವಿಕ್ಕೋ ಪಶ್ಚಿಮದ ವಾಸನೆಯನ್ನು ಸಮುದ್ರದ ಅಜ್ಞಾತ ಮೂಲೆಗಳಿಂದ ಹೊತ್ತು ತರೋ ಮಾರುತಗಳಂತೆ. ಅಲ್ಲಿ ಲೇಡಿ ಮ್ಯಾಕ್ಬೆತ್ ಪರ್ಶಿಯಾದಿಂದ ತಂದ ದ್ರವ್ಯದಿಂದ ರಕ್ತದ ವಾಸನೆಯನ್ನು ಮರೆಸಲು ಕಷ್ಟಪಟ್ಟರೆ, ಇಲ್ಲಿ ಈ ಸುಗಂಧಿ ವಿದೇಶದ ಸೆಂಟಿನಿಂದ ಗಂಡನನ್ನು ಕ್ರುತ್ರಿಮ ಮೋಹದ ಬಲಿಪಶುವನ್ನಾಗಿಸುತ್ತಾಳೆ. ಈ ಕಾಮಕ್ರೀಡೆ ಹೋಗುತ್ತಾ ಹೋಗುತ್ತಾ ಮಾಧವನಿಗೆ ಅದೆಷ್ಟು ಪ್ರಿಯವಾಗುತ್ತದೆ ಎಂದರೆ, ಆತ ತನ್ನ ಧಣಿ ದಿನೇಶಣ್ಣನನ್ನೇ ಕೊಂದು ಹಾಕಲು ತಯ್ಯಾರಾಗುತ್ತಾನೆ. ಹೀಗೆ ಸಹಜವಾದ ಗಂಡ-ಹೆಂಡಿರ ಪ್ರೀತಿಯನ್ನೇ ಮರೆಸುವಷ್ಟು ಭೀಕರವಾಗಿ ಮತ್ತು ಬರಿಸೋ ಕೃತ್ರಿಮ ಕಾಮ ಪಶ್ಚಿಮದಿಂದ ತೇಲಿ ಬಂದ ಬಳುವಳಿ, ದೇಶಿ ಮರದ ಬೋಟುಗಳನ್ನು ಬಿಟ್ಟು, ದೆವ್ವದಂತೆ ಅರುಚಿ, ಸಮುದ್ರವನ್ನು ಕದಡುವ ಮೋಟಾರು ಬೋಟಿನಂತೆ. ಈ ವಾಸ್ತವನ್ನೇ ಸಪ್ಪೆ ಅನ್ನಿಸುವಂತೆ ಮಾಡೋ ಮಾಯೆ ಸೃಷ್ಟಿಸೋ ಕಾಮದಿಂದಲೇ ಮಾಧವ ಕೊಲೆಗಡುಕನಾಗುವುದು, ಅದಕ್ಕೇ ಈತನ ಮುದ್ದಿನ ಹೆಂಡತಿಯೇ ಕಾರಣವಾಗುವುದು, ಪ್ರೇಮ ಮತ್ತು ಸಾವಿನ ಬಗ್ಗೆ ಶಾಸ್ರ್ತ ಬರೆದ ಪಶ್ಚಿಮದ Freudನನ್ನು ನೆನಪಿಸುತ್ತದೆ. ಇದೂ ಕೂಡ ದೊಡ್ಡ ದುರಂತವೇ. Freud ಸೈಕೋ ಅನಾಲಿಸಿಸ್ ಸೃಷ್ಟಿಯಾಗಿದ್ದೇ ಪಾಶ್ಚಿಮಾತ್ಯರ ಮನಸ್ಸನ್ನು ಅರೆದ ಮೇಲೆ. ಆದರೆ ನಾವಂತೂ ಖಂಡಿತ ಆ ಬಳಗಕ್ಕೇ ಸೇರಿದವರಲ್ಲ. ನಮ್ಮ ದೇಸಿ ಮನಸ್ಸುಗಳನ್ನು ಅಲ್ಲಿನ ಸೈಕಾಲಿಜಿಗೆ ಅನುಗುಣವಾಗಿ ನಿರೂಪಿಸುವುದೂ,Polar ಬೇರ್ರನ್ನು ನರಸೀಪುರಕ್ಕ ತರೋ ಅಷ್ಟೇ ಹಾಸ್ಯಾಸ್ಪದ.

ಆದರೆ ಈ ಮಹಾ ಟ್ರಾನ್ಸಿಷನ್ನ್ ನಮಗೇ ಗೊತ್ತೇ ಇಲ್ಲದೇ ಆಗೇ ಬಿಟ್ಟಿದೆ. ಘನಂಧಾರಿ ಎಲೈಟುಗಳಷ್ಟಲ್ಲೇ ಅಲ್ಲ, ಮಾರ್ಕೆಟ್ಟಿನಲ್ಲಿ ಕನಸು ಕಾಣುತ್ತಾ ಮೀನು ಮಾರೋ ಸುಗಂಧಿಯಂತ ಹೆಣ್ಣು ಮಕ್ಕಳಲ್ಲೂ ಈ ಘೋರ ಬದಲಾವಣೆ ಆಗಿ ಬಿಟ್ಟಿದೆ. ನಮ್ಮ ಕಡಲಿನ ಮೀನಿನ ವಾಸನೆಯನ್ನೇ ದ್ವೇಷಿಸೋದು, ಡೋರಿಯನ್ನ್ ಗ್ರೇ ತನ್ನ ಕೊಳೆಯತ್ತಿರೋ ಆತ್ಮವನ್ನು ನೋಡಿ, ಮತ್ತೆ ವಯಸ್ಸೇ ಆಗದೆ ಚಿರಂತನವಾಗಿ ಸುಂದರವಾಗಿರೋ ಚಿತ್ರದಂತಹ ತನ್ನ ಮೊಗದ ಹಿಂದೆ ಬಚ್ಚಿಟ್ಟುಕೊಂಡ ಹಾಗೆಯೇ. ಡೋರಿಯನ್ನ್ ಒಬ್ಬ ಎಲೈಟ್; ಮ್ಯಾಕ್ಬೆತ್ತ್ ರಾಜರ ಮನೆಗೆ ಸೇರಿದವನು. ವೈಲ್ಡ್ ಇರಲಿ, ಶೇಕ್ಸ್‍ಪಿಯರ್ರ್ ಇರಲಿ, ಹೆಣೆಯಲು ಹೆಣಗಾಡಿದ್ದು ದೊಡ್ಡವರ ಪತನದ ಕಥೆಗಳನ್ನು. ಅಭಯ ಸಿಂಹ ಆಧುನಿಕ ಕಾಲದಲ್ಲಿ, ಕಷ್ಟಪಟ್ಟು, ಮಣ್ಣಿಗೆ, ಕಡಲಿಗೆ ಹತ್ತಿರವಾಗಿ ಬದುಕತ್ತಾ ಇರೋ ಸಾಮಾನ್ಯ ಶ್ರಮಿಕ ವರ್ಗದವರೂ ಈ ಪಶ್ಚಿಮ ಹೊತ್ತು ತರೋ ಭ್ರಮೆಗಳ ಬೆಂಬತ್ತಿ, ನಮ್ಮ ಮೂಲವನ್ನೇ ಬಲಿ ಕೊಟ್ಟು ಉದುರಿ ಹೋಗೋ ಕಥೆ ಹೇಳುತ್ತಿದ್ದಾರೆ. ಇದು ರಾಜರಾಜರ ಪತನಕ್ಕಿಂತ ದಿಗ್ಭ್ರಾಂತಗೊಳಿಸೋ ಸನ್ನಿವೇಶ, ಏಕೆಂದರೆ ಈ ವರ್ಗದವರು ನಮ್ಮ ಸುತ್ತಮುತ್ತಲೂ ಇರೋ ಬಹುಸಂಖ್ಯಾತರು.

ಅನಂತ ಮೂರ್ತಿ ಎಲ್ಲೋ ಹೇಳಿದ್ದರು, ಗೀತೆಯನ್ನು ಮಹಭಾರತದ ಹಿನ್ನಲೆಯ ಮರೆತು ಓದಿದರೆ ಅದು ಯುದ್ಧವೇ ಶ್ರೇಷ್ಟ ಅನ್ನಿಸೋ ಅಪಾಯಕಾರಿ ಮಾತು ಅಂದಂತ ಭ್ರಮೆಯಾಗುತ್ತದೇ ಅನ್ನುವಂತೆ. ಇಲ್ಲಿ ಮಾಧವ ದಿನೇಶಣ್ಣನ್ನ ಕೊಲೆಗೆ ಸಿದ್ಧನಾಗುತ್ತಿದ್ದ ಹಾಗೇ, ಇನ್ನೊಂದು ಕಡೆ ಕೃಷ್ಣಾರ್ಜುನರ ಯಕ್ಷಗಾನ ಪ್ರಸಂಗದಲ್ಲಿ ಗೀತೆಯ ಸಂಧರ್ಭ. ಕೃಷ್ಣ ಅಂದಂತೆ ನಿನ್ನ ಕರ್ಮ ನೀನು ಮಾಡು ಮಿಕ್ಕಿದ್ದನ್ನು ನನ್ನ ಮೇಲೆ ಬಿಡು, ಅನ್ನೋ ಮಾತನ್ನು ಚಾಚು ತಪ್ಪದೆ ಪಾಲಿಸುವಂತೆ ಮಾಧವ ತನ್ನ ಧಣಿಯನ್ನೇ ಇರಿದು ಕೊಂದು ಹಾಕುತ್ತಾನೆ. ಆದರೆ ಕೃಷ್ಣನ ಮಾತು ಅಷ್ಟಕ್ಕೇ ಗೀತೆಯಲ್ಲಿ ನಿಲ್ಲೋದಿಲ್ಲ. ಆತನು ಹೇಳುವುದು ನಿಶ್ಕಾಮ ಯೋಗದ ಬಗ್ಗೆ. ಇಹ-ಪರ ಇವೆರೆಡರ ಹಂಗು ತೊರೆದು ಪ್ರಾಮಾಣಿಕವಾಗಿ, ಆಸೆ ಅನ್ನೋ ಧಾತುವನ್ನೇ ಕಿತ್ತು ಹಾಕಿ ಕರ್ಮಯೋಗಿ ಆಗೋ ಬಗ್ಗೆ. ಆದರೆ ಮಾಧವ ಸೋಲುವುದು ತಮ್ಮ ತಮ್ಮ ಆಸೆಗಳಿಗೆ ಅನುಗುಣವಾಗಿ, ದೈವವನ್ನೂ, ಗೀತೆಯನ್ನೂ ತಿರುಚಿದ್ದರಿಂದ. ಈ ಸತ್ಯ-ಅಸತ್ಯಗಳಿಗಿಂತ ಹೆಚ್ಚು ಅಪಾಯಕಾರಿಯಾಗಿರುವುದು ಅರ್ಧಸತ್ಯ. ಈ ಶತಮಾನದ ಅತಿ ಕೆಟ್ಟ ದುರಂತವೇ ಈ ಅರ್ಧಸತ್ಯಕ್ಕೆ ಬಲಿಯಾಗೋ ಲೆಕ್ಕವಿಲ್ಲದಷ್ಟು ಯುವಕರು, ಅವರಲ್ಲಿ ಈ ಮಾಧವನೋ ಒಬ್ಬ. ಡೋರಿಯನ್ನ್ ಗ್ರೇನ ಟ್ರಾಜಿಡಿ ಇದದ್ದು ಆತನ ಕುಲಗೆಡುತ್ತಾ ಇರೋ ಆತ್ಮ ಅವಿತಿದ್ಧ ಚಿತ್ರಪಟದಲ್ಲಿ ಅಲ್ಲ, ಬದಲಾಗಿ, ಚಿರಯೌವನ್ನವನ್ನು ಗೆದ್ದು ಸುಖವಾಗಿ ಇರಲು ಎಲ್ಲ ಅನುಕೂಲಗಳಿದ್ದರೂ, ನೀತಿ, ಅನೀತಿಗಳ ಬಲೆಗೆ ಬಿದ್ದು, ಒಳ್ಳೆಯವನಾಗಿದ್ದರಿಂದ ಪಾಪಪ್ರಜ್ಞೆಯಲ್ಲಿ ಬೆಂದಿದ್ದರಿಂದ. ಮ್ಯಾಕ್ಬೆತ್ತೂ ಅಷ್ಟೇ ನಮ್ಮ ಮಾಧವನೂ ಅಷ್ಟೇ. ಇವರೆಲ್ಲ ಒಳ್ಳೆಯವರು. ಇದೇ ಇವರಿಗೆ ಅಂಟಿಕೊಂಡು ಬಂದ ದೊಡ್ಡ ಶಾಪ.

ಪ್ರತಿಕ್ರಿಯಿಸಿ