ಶ್ರೀ ರಾಮಾಯಣ ದರ್ಶನಂ : ಅಯೋಧ್ಯಾ ಸಂಪುಟಂ ಸಂಚಿಕೆ ೪ – ‘ಊರ್ಮಿಳಾ’ ಆಯ್ದ ಭಾಗ

ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ, ಕುಪ್ಪಳ್ಳಿ ಮತ್ತು ಅವಿರತ ಪ್ರತಿಷ್ಠಾನ, ಬೆಂಗಳೂರು ಇವರ ಸಹಯೋಗದಲ್ಲಿಸೆಪ್ಟೆಂಬರ್ 23-24 2018 ರಂದು ಕುಪ್ಪಳ್ಳಿಯಲ್ಲಿ ನಡೆದ “ಶ್ರೀ ರಾಮಾಯಣ ದರ್ಶನಂ” ( ವಾಚನ – ವಾಖ್ಯಾನ – ಉಪನ್ಯಾಸ ) ಕಾರ್ಯಕ್ರಮದ ದಾಖಲೀಕರಣ.

ಗಮಕ : ಗಂಗಮ್ಮ ಕೇಶವಮೂರ್ತಿ


ಪ್ರಿಯನ ಪಟ್ಟಾಭಿಷೇಕೋತ್ಸವದ ಸಂಭ್ರಮಕೆ, ೨೨೦
ಸುರಚಾಪಲತೆಗಳಂ ತಿರಿತಂದು ವೃಂದಮಂ
ರಚಿಸಿದೊಲೆಸೆವ ವಿವಿಧ ವರ್ಣಗಂಧಂಗಳಿಂ
ಶೋಭಿಪ ಕುಸುಮರಾಶಿಗಳ್ ಬಳಸೆ, ತಾನೊಂದು
ಗುರುತಿಸಲ್ಕಸದಳಂ ಸುಮರಾಶಿಯೆಂಬಂತೆ
ಮೆರೆದಿರ್ದು, ಸೀತಾಳಿದಂಡೆವೂ ಮಾಲೆಯಂ
ಕಟ್ಟುತಿರ್ದಾಕೆ, ಚರರಿಲ್ಲದೊರ್ವನೆ ಬಂದ
ಪ್ರಾಣೇಶನಂ ಕಂಡು, ಬಿಲ್ಲುಂ ಬೆರಗುಮಾಗಿ,
ರಿಕ್ತಾಗಮನ ಖಿನ್ನತೆಗೆ ಕಾರಣಂ ಕೇಳೆ,
ಪೇಳ್ದನಿನಕುಲ ಸೂನು ಜಾನಕಿಗೆ : “ಪ್ರಿಯೆ, ನನಗೆ ೨೩೦
ಸಂಪ್ರಾಪ್ತಮಾಗಿದೆ ವನವ್ರತಂ. ಬೆದರದಿರ್
ಧೀರ ರಾಜರ್ಷಿಸುತೆ. ಸದ್ವಂತ ಸಂಜಾತೆ,
ಸೀತೆ, ನೀನಾಕ್ರೋಶಗೊಳ್ಳದಿರ್. ಶಾಂತಿಯಂ
ತಳೆದು ಧೈರ್ಯಂಗೆಡದೆ ಪತಿಗೆ ನೆರವಾಗಿ, ಸತಿ,
ಪೊರೆ ಧರ್ಮಮಂ.

…….

ತುಟಿನಡುಗೆ
ನುಡಿದಳಾ ಕ್ಷಮೆಯ ಸುತೆ, ನಲ್ಲನಿನಿಗಂಗಳಿಗೆ ೨೪೦
ಜೇನಿಳಿವ ಕಂಗಳಿಂದಾಲಿಂಗನಂ ಗೆಯ್ದು :
“ನಿನ್ನನಲ್ಲದೆ, ನಲ್ಲ, ಕೋಸಲ ನೆಲವನಲ್ಲ
ನಾನೊಲ್ದುದಂದು. ಮೇಣಿಂದಿಗುಂ ಮನೆಯೆನಗೆ
ರಮಣನೆರ್ದೆಯಲ್ಲದೆಯೆ ಮಾವನರಮನೆಯಲ್ತು.
ನೀನಿರಲ್ಕೆನ್ನೊಡನೆ ನಾಡಾದರೆಂತಂತೆ
ಕಾಡಾದೊಡಂ ಸುಖಿಯೆ ನಾಂ.

…….

“ನಿಲ್ ನಿಲ್, ಮಂಗಳಾಂಗಿ,
ರಾಮಂಗೆ ವನವಾಸಮಿನ್ನುಳಿದವರ್ಗಲ್ತು.”
“ರಾಮನರ್ಧಾಂಗಿ ಸೀತೆಗೆ ಬೇರೆತನವಿಲ್ಲ. ೨೫೦
ಪತಿಯ ಸುಖದುಃಖದರ್ಧಂ ಸತಿಗೆ.”
“ಕೇಳ್, ಜಾನಕಿ,
ನೀನತ್ತೆ ಮಾವಂದಿರಂ ಸೇವಿಸುತ್ತೀಯೆಡೆಯೆ
ಧರ್ಮಮಾಚರಿಸುತಿರ್ಪುದೆ ಪರಮ ಕರ್ತವ್ಯಂ.”
“ಪತಿಸೇವೆಗಿಂ ಮಿಗಿಲ್ ಸೇವೆಯಿಲ್ಲಂಗನೆಗೆ.
ರಾಜರ್ಷಿ ತಂದೆಯುಂ, ಗುರುಗಳುಂ, ಧರ್ಮಮಂ
ಬೋಧಿಸಿಹರೆನಗೆ.”
“ಮೈಥಿಲಿ, ನೀನಡವಿಗೆನ್ನೊಡನೆ
ಹಿಂಬಾಲಿಪೊಡೆ ಕಠಿನವಹುದೆನ್ನ ಜೀವನಂ
ನಿನ್ನ ರಕ್ಷೆಯ ಭಾರದುದ್ವೇಗದಿಂ. ಸುಕುಮಾರಿ,
ನೀನರಿಯೆ ವಿಪಿನವಾಸದ ಭಯಂಕರತೆಯಂ,
ಘೋರಮಂ, ಕ್ಲಿಷ್ಟಕಷ್ಟಂಗಳಂ ಮೇಣ್ ನಷ್ಟಮಂ.” ೨೬೦

…….

ಹೆದರದಿರು ಹೆಣ್ಣೆಂದು : ನಿನ್ನ ಕಣ್,
ಬಗೆಗೆ ನಾಲಗೆಯಾಗಿ, ಸೂಚಿಸುತ್ತಿಹುದೆನಗೆ
ನಿನ್ನೆದೆಯ ಶಂಕೆಯಂ. ಪತಿವ್ರತಾಧರ್ಮಮಂ
ಕೈಕೊಂಡು, ನಿಯಮ ವಜ್ರದೊಳಿಂದ್ರಿಯಂಗಳಂ
ಬಿಗಿದು ದೃಢಮನದಿ, ಸೇವಿಪೆ ನಿನ್ನನ್, ಅವಚತ್ತು
ರಾಜೋಪಭೋಗ ಸರ್ವಸ್ವಮಂ! ಬದುಕುವೆನ್
ಹಣ್ಣುಹಂಪಲು ಕಂದಮೂಲಂಗಳನೆ ತಿಂದು;
ಮತ್ತಾವ ತೆರದೊಳುಂ ನಿನಗಡಚಣೆಯನೀಯೆನ್.
ನಿನ್ನೊಡನೆ ಬಾಳ್ವ, ನಿನ್ನೊಡನಲೆವ, ಮೇಣಂತೆ ೨೮೦
ನಿನ್ನಯ ಸರಂಗೇಳ್ವ ಸೌಭಾಗ್ಯವೊಂದದುವೆ
ಸಾಲ್ಗೆನಗೆ !”

…….

ಹೃತ್ಕಮಲ ಕರುಣರವಿ,
ನಿನ್ನ ಬಣ್ಣನೆಗೇಳ್ದು ಕಾತರಿಸುತಿದೆ ಮನಂ
ಕಾಂತಾರ ರಸಕ್ಕೆಳಸಿ ! ಮನದನ್ನ, ನನ್ನುಸಿರ್
ನಿನ್ನುಸಿರೊಳೊಂದಾದುದೆಂದು ನಿನ್ನಂಗಮಂ
ಕಂಡೆನಾ ಮೊದಲ್‌ಗೊಂಡು, ಬೆಚ್ಚೆರಡು ಬಾಳ್ಗಳಂ
ಬೆಸುಗೆಗೆಡಿಸೇಕೆ ಬೇಳುವೆಯೆನ್ನ ಬರ್ದುಕಿದನ್?
ತಂದೆತಾಯ್ಗಳನಗಲುತೆಲ್ಲವೂ ನೀನೆಂದು
ಕೈವಿಡಿದು ನಂಬಿದೀ ದೀನಾರ್ತೆಯಂ, ಕರುಣೆ, ೩೨೦
ತೊರೆಯದಿರ್.”

…….

“ದುಗುಡಮಂ
ಬಿಡು, ನಲ್ಲೆ, ನೀನೆನ್ನುಸಿರ್‌ಗುಸಿರ್ ! ಬರ್ದುಕುವೆನೆ ಪೇಳ್
ಬಿಟ್ಟೊಡುಸಿರಂ?

…….

“ದುಗುಡಮಂ
ಬಿಡು, ನಲ್ಲೆ, ನೀನೆನ್ನುಸಿರ್‌ಗುಸಿರ್ ! ಬರ್ದುಕುವೆನೆ ಪೇಳ್
ಬಿಟ್ಟೊಡುಸಿರಂ? ಜೀವಮೆನ್ನದು, ಜನಕಜಾತೆ,
ನಿನ್ನ ರೂಪದ ತಾವರೆಯ ನಿತ್ಯಲೋಕದಲಿ
ವಿಹರಿಸುತ್ತಿದೆ ಮಧುಕರ ಪತಂಗದೋಲಂತೆ.
ಮಧು ಮಧುರ ಸೌಂದರ್ಯಮಕರಂದ ಸುಧೆಯೀಂಟಿ
ಸವಿಯುತಮೃತತ್ವಮಂ, ನಿನ್ನನುಳಿದೆನಗಾವ
ಸಗ್ಗಮುಂ ರುಚಿಸದೆಲೆ ತನ್ವಂಗಿ. ದಿವಮಲ್ತೆ, ೩೩೦
ನೀನಿರಲ್ಕೆನ್ನ ಬಳಿ ವನವಾಸ ನರಕಮುಂ ?
ಲೋಕಮೋಹಕ ನೇತ್ರೆ, ಬಿಸುಗಂಬನಿಯ ಸೂಸಿ
ಬೇಯಿಸದಿರೆನ್ನಾತ್ಮಮಂ : ಸಲ್ಗೆ ನಿನ್ನಿಚ್ಛೆ !
ಬನಕೈದಲನುವಾಗು, ಹೇಮಸುಂದರ ಗಾತ್ರೆ,
ದಾನಗೈದೆಮ್ಮಿರ್ವರೊಡವೆ ಹಾಸಗೆಯುಡುಗೆ
ಸರ್ವಮಂ ದೀನರಿಗೆ, ದೆಸೆಗೆಟ್ಟರಿಗೆ, ಮತ್ತೆ
ಪೂಜ್ಯರಿಗೆ.” ಮೋಹದಿಂ ಮುದ್ದಿಸಿ ಕಳುಹಲಾಕೆ
ಪೆರ್ಚುತೆ ಸೊಗಂಬರಿದು ತಮ್ಮಿರ್ವರನಿತುಮಂ
ಕರೆ ಕರೆದು ಪಸುಗೆ ತೊಡಗಿದಳಮಿತ ಸಂಭ್ರಮದಿ !
ಕೇಳ್ದದಂ ಸೌಮಿತ್ರಿ ಪಿರಿಯಣ್ಣನಡಿಗೈದಿ, ೩೪೦

ಪ್ರತಿಕ್ರಿಯಿಸಿ