ಜೋಗಿಯವರ “L” ಕಾದಂಬರಿಗೆ ಅಮ್ಮ ಪ್ರಶಸ್ತಿ ದೊರಕಿರುವ ಈ ಸಮಯದಲ್ಲಿ ಅವರ ಈ ಬಹುಚರ್ಚಿತ ಕಾದಂಬರಿಯ ಬಗ್ಗೆ ಒಂದು ಬರಹ. ಇಲ್ಲಿಯವರೆಗೆ ಪ್ರಕಟವಾದ “ವಿಮರ್ಷೆ” ಅಥವಾ ಪರಿಚಯಾತ್ಮಕ ಹೊಗಳಿಕೆಗಳಿಗಿಂಥ ಈ ಲೇಖಕರು ಸ್ವಲ್ಪ ಆಬ್ಜೆಕ್ಟೀವ್ ಆಗಿ ಕಾದಂಬರಿಯನ್ನು ನೋಡಲು ಪ್ರಯತ್ನಿಸಿದ್ದಾರೆ.
ಜೋಗಿ ಅವರ ಇತ್ತೀಚೆಗಿನ ಕಾದಂಬರಿ ‘ಎಲ್’ ಓದಿ ಮುಗಿಸಿದೆ.
ಇನ್ನೇನು ಮುಸ್ಸಂಜೆ ತಿಟ್ಹತ್ತಿ ತಿರುಗಿ ನೋಡುತ್ತಿರುವ ಹೊತ್ತಿಗೆ ಓದಲು ಕೂತವನು, ಕಾದಂಬರಿ ಮುಗಿಸಿ ತಲೆ ಎತ್ತಿದಾಗ ಹೊರಗೆ, ಬೀದಿ ದೀಪಗಳು ಬೆಳಕ ಕಾರುತ್ತ ನಿಂತಿದ್ದವು. ಹದವಾಗಿ ಚಲಿಸುತ್ತಿದ್ದ ರೈಲು ಸುರಂಗ ಹೊಕ್ಕಿದಾಗ ಒಮ್ಮೆಲೇ ವೇಗ ಜಾಸ್ತಿಯಾದಂತೆ, ಮತ್ತೊಂದೇ ಲೋಕಕ್ಕೆ ಬಂದಂತೇ ಕಾಣಿಸುತ್ತದಲ್ಲ, ಅಂಥ ಅನುಭವವನ್ನು ಹಾದು ಬಂದಿದ್ದೆ. ಸರಿಯಾಗಿ ನಿಟ್ಟಿಸಿ ನೋಡುವ ಮೊದಲೇ ಮುಗಿದು ಹೋದ ಆ ಅನುಭವದ ಬಗ್ಗೆ ಆ ಕ್ಷಣ ನನ್ನ ಮನಸಲ್ಲಿ ಬೆರಗಿತ್ತು. ಹಾಗೆಯೇ ಒಂದಿಷ್ಟು ಅನುಮಾನಗಳೂ ಇದ್ದವು. ಆ ಅನುಭವ ನನಗೆ ಕೊಟ್ಟಿದ್ದೇನು? ನನ್ನೊಳಗೆ ಬೆಳೆಸಿದ್ದೇನು? ಅದು ನಿಜಕ್ಕೂ ನನ್ನನ್ನು ತಟ್ಟಿತಾ ಅಥವಾ ರಪ್ಪೆಂದು ಮುಗಿದು ಹೋಗಿದ್ದೇ ಅದರಲ್ಲೇನೋ ಇದೆ ಎಂಬ ಭ್ರಮೆ ಹುಟ್ಟಿಸಿತಾ? ಈ ಎಲ್ಲ ಪ್ರಶ್ನೆಗಳೊಟ್ಟಿಗೆ ಇಡೀ ಪುಸ್ತಕವನ್ನು ಮನಸಲ್ಲೂ ಕೈಯಲ್ಲೂ ಮತ್ತೊಮ್ಮೆ ತಿರುವಿ ಹಾಕಿದೆ.
ಈಗ ‘ಎಲ್’ ಬೇರೆಯದೇ ಆಗಿ ಕಾಣಿಸತೊಡಗಿದೆ. ಮನಸಲ್ಲಿ ಇನ್ನಷ್ಟು ಅಸಮಧಾನ– ಅತೃಪ್ತಿ ಹುಟ್ಟಿ ಹಾಕಿದ. ಈ ಅತೃಪ್ತಿಯ ಮೂಲಗಳನ್ನು ನನ್ನ ಮನಸೊಳಗೇ ತಡವಿ ನೋಡಿದೆ. ಆಗ ಹುಟ್ಟಿದ್ದು ಈ ಕೆಳಗಿನ ಅನಿಸಿಕೆಗಳು. ಇದು ಜೋಗಿ ಅವರ ಕುರಿತಾಗಲೀ, ಅವರ ಸಂಪೂರ್ಣ ಸಾಹಿತ್ಯದ ದೃಷ್ಟಿಕೋನದ ಕುರಿತಾಗಲಿ ಆಡಿದ ಮಾತುಗಳಲ್ಲ. ಅವರ ಎಲ್ಲ ಕೃತಿಗಳನ್ನು ನಾನು ಓದಿಯೂ ಇಲ್ಲ. ಇದು ಈ ಕಾದಂಬರಿಯ ಚೌಕಟ್ಟಿನೊಳಗೇ ಹುಟ್ಟಿಕೊಂಡ ಪ್ರಶ್ನೆಗಳು; ನನ್ನ ವೈಯಕ್ತಿಕ ಅರಿಕೆಗಳು. ಇದು ಈ ಬರಹದ ಮಿತಿ.
ಭಾಷೆ ಕಥೆಯನ್ನು ಒರೆಯಲು ಇರುವ ದಾರಿ; ತುಂಬಾ ಪ್ರಭಾವಶಾಲಿಯಾದ ದಾರಿ. ಆದರೆ ಅದೇ ಕಥೆಯಲ್ಲ. ಅದು ಏನನ್ನೋ ಹೇಳುವುದಕ್ಕೆ – ಪರಿಣಾಮಕಾರಿಯಾಗಿ ಹೇಳುವುದಕ್ಕೆ ಇರುವ ಸಾಧನ. ಆದರೆ ಈ ಸಾಧನವನ್ನೇ ಪ್ರಧಾನವಾಗಿಸಿಕೊಂಡು ಕಥನವನ್ನು ಒರೆಯುವ ಒಂದು ರೀತಿಯೂ ನಮ್ಮಲ್ಲಿ, ಬಹುಶಃ ಜಗತ್ತಿನ ಎಲ್ಲ ಭಾಷೆಗಳಲ್ಲಿಯೂ ಇದೆ. ಮೋಹಕ ಭಾಷೆಯೇ ಇವುಗಳ ಶಕ್ತಿಯಾಗಿರುತ್ತದೆ.
ಓದಿನ ಸುಖ ಸಿಗುವ ಹಾಗೆ ಬರೆಯುವುದು ಖಂಡಿತ ಸುಲಭ ಅಲ್ಲ. ಅದು ಅಷ್ಟು ಹಗುರವೂ ಅಲ್ಲ. ಓದಿನ ಸುಖ ಸಿಗುವಂಥ ಮೋಹಕ ಭಾಷೆಯೊಟ್ಟಿಗೆ ಬದುಕಿನ ಹಲವು ಮಗ್ಗಲುಗಳನ್ನು, ಒಳಸುಳಿಗಳ ಬಳಿಗೆ ನಮ್ಮನ್ನು ಕೊಂಡೊಯ್ಯುವ ಜೀವನದರ್ಶನವೂ ಸೇರಿಕೊಂಡಾಗ ಅದಕ್ಕೆ ಸಿಗುವ ಮೆರುಗೇ ಬೇರೆ.
ಆದರೆ ಭಾಷೆಯನ್ನು ನೆಚ್ಚಿಕೊಂಡು, ಭಾಷೆಯನ್ನಷ್ಟೇ ಪ್ರಧಾನವಾಗಿ ನೆಚ್ಚಿಕೊಂಡು ಬರೆಯುವ ಒಂದು ಸಾಹಿತ್ಯಕ್ರಮವೂ ಹಿಂದಿನಿಂದಲೂ ಇದೆ. ಇದಕ್ಕೆ ಭಾವುಕತೆಯ ಗುರಾಣಿಯೂ ಸೇರಿಕೊಂಡರೆ ಬಹುಬೇಗ ಜನಪ್ರಿಯಗೊಳ್ಳುತ್ತದೆ. ಅದರಷ್ಟಕ್ಕೆ ಅದು ತನ್ನ ಉದ್ದೇಶದಲ್ಲಿ, ಚಲನೆಯ ಗತಿಯಲ್ಲಿ ಪ್ರಾಮಾಣಿಕವೂ ಆಗಿರುತ್ತವೆ.
ಜೋಗಿ ಅವರ ‘ಎಲ್’ ಕಾದಂಬರಿ ಕುರಿತು ಬರೆಯುವಾಗ ಇವನ್ನೆಲ್ಲ ಹೇಳಲು ಕಾರಣವಿದೆ. ‘ಎಲ್’ ಕೂಡ ಭಾಷೆಯನ್ನೇ ನೆಚ್ಚಿಕೊಂಡು ಬರೆದ ಕಾದಂಬರಿ. ಆದರೆ ಮೇಲೆ ಹೇಳಿದ ಎರಡೂ ಕ್ರಮಗಳಿಗಿಂತ ಭಿನ್ನವಾದದ್ದು. ಮೊದಲನೇ ಕ್ರಮಕ್ಕಿಂತ ಪೂರ್ತಿ ಭಿನ್ನವಾಗಿದ್ದು, ಎರಡನೇ ಕ್ರಮದ ಸಮೀಪವಿದ್ದೂ ಪ್ರತ್ಯೇಕವಾಗಿಯೇ ಉಳಿಯುವಂಥದ್ದು.
ಕಾದಂಬರಿಯ ಉದಾಹರಣೆಗಳನ್ನೇ ಇಟ್ಟುಕೊಂಡು ಈ ಚರ್ಚೆಯನ್ನು ಇನ್ನಷ್ಟು ಮುಂದುವರಿಸಬಹುದು. ಕಾದಂಬರಿ ಆರಂಭವಾಗುವುದು ಹೀಗೆ:
‘ನನ್ನ ಹೆಸರು ಲಕ್ಷ್ಮಣ ನೀಲಂಗಿ.
ನಾನೊಬ್ಬ ಕವಿ.
ನನ್ನ ಕವಿತೆಗಳಿಗೆ ಬೇಡಿಕೆಯಿದೆ. ಐದು ಕವನ ಸಂಕಲನಗಳು ಪ್ರಕಟವಾಗಿವೆ. ಚೆನ್ನಾಗಿ ಮಾರಾಟವಾಗಿವೆ.
ಪ್ರಶಸ್ತಿಗೂ ಬಂದಿವೆ. ನನಗೆ ಅದರಲ್ಲಿ ಆಸಕ್ತಿಯಿಲ್ಲ.
ವಿಮರ್ಶಕರಿಗೆ ನನ್ನ ಬಗ್ಗೆ ಪ್ರೀತಿ ಇದೆ. ನನ್ನ ಕವನಗಳನ್ನು ಮೆಚ್ಚಿಕೊಂಡು ಬರೆದಿದ್ದಾರೆ.
ನನಗೆ ಅವರ ಬಗ್ಗೆ ಗೌರವ ಇಲ್ಲ.’
ಈ ಕಾದಂಬರಿಯ ನಾಯಕ ಲಕ್ಷ್ಮಣ ನೀಲಂಗಿ ತನ್ನನ್ನು ಪರಿಚಯಿಸಿಕೊಳ್ಳುವಾಗಲೇ ತನಗೆ ವಿಮರ್ಶಕರ ಮೇಲೆ ಗೌರವವಿಲ್ಲ, ತಾನು ಪ್ರಶಸ್ತಿ, ಹಣ, ಖ್ಯಾತಿ ಯಾವುದಕ್ಕಾಗಿಯೂ ಪದ್ಯ ಬರೆಯುವುದಿಲ್ಲ ಎಂದೆಲ್ಲ ಹೇಳಿಕೊಳ್ಳುತ್ತಾನೆ. ಅದಕ್ಕೆ ಅವನು ನೀಡುವ ಕಾರಣಗಳು ಎಷ್ಟು ಮೋಹಕವಾಗಿವೆ ಎಂದರೆ ನಿಜಕ್ಕೂ ಅವನೊಬ್ಬ ವಿಕ್ಷಿಪ್ತ ಮನುಷ್ಯ ಅನಿಸುತ್ತದೆ. ಆದರೆ ಇದೇ ವಿಕ್ಷಿಪ್ತತೆ ಇನ್ನೊಂದು ರೀತಿಯಲ್ಲಿ ನಮ್ಮನ್ನು ವಂಚಿಸಿ, ಕಣ್ಕಟ್ಟುತ್ತಲೂ ಇರುತ್ತದೆ; ಆ ವಿಕ್ಷಿಪ್ತತೆಯ ಮುಖವಾಡದ ಹಿಂದಿರುವ ಡೋಂಗಿತನವನ್ನು ಬೇಕಂತಲೇ ಮರೆಮಾಚುತ್ತಿರುತ್ತದೆ. ಯಾಕೆಂದರೆ ಆ ಡೋಂಗಿತನ ಒಮ್ಮೆ ಮನಸಿಗೆ ಬಂದುಬಿಟ್ಟರೆ ಇಡೀ ಕಾದಂಬರಿಯ ಹಂದರವೇ ಮುರಿದುಬೀಳುತ್ತದೆ.
ಈ ಕಥನ ಕಾದಂಬರಿ ನಿಂತಿರುವುದು ಕಥೆಯ ಮೇಲಲ್ಲ; ಅದು ಕಾಣಿಸುವ ದರ್ಶನದ ಮೇಲಲ್ಲ; ರೋಚಕತೆಯ ಮೇಲಲ್ಲ; ಬದಲಿಗೆ ಅವೆಲ್ಲವೂ ಇದೆ ಎಂಬಂತೆ ಕಾಣಿಸುವ ಭಾಷೆಯ ಡೋಂಗಿತನದ ಮೇಲೆ.
ಹಾಗಾಗಿಯೇ ‘ಹಾಗೆ ಯಾವುದರ ಮೇಲೂ ಆಸಕ್ತಿ ಇಲ್ಲದ ಅವನು ತನ್ನನ್ನು ತಾನು ಯಾಕೆ ಕವಿ ಎಂದು ಪರಿಚಯಿಸಿಕೊಳ್ಳುತ್ತಾನೆ?, ’ತನಗೆ ಪ್ರಶಸ್ತಿ ಬಂದಿತ್ತು, ಕ್ಯಾಶ್ ಮಾಡಿಸಿಕೊಳ್ಳಲಿಲ್ಲ.’ ‘ಕವಿತೆ ಪುಸ್ತಕ ರದ್ದಿಗೆ ಹಾಕಿದೆ.’ ‘ವಿಮರ್ಶಕರ ಮೇಲೆ ಗೌರವವಿಲ್ಲ.’ ‘ನಾಯಿಯನ್ನು ಕವಿತೆಯಲ್ಲಿ ಹೂಳಲು ಮನಸಿಲ್ಲ..’ ಈ ಎಲ್ಲವನ್ನೂ ಅವನು ಯಾರಿಗೆ ಹೇಳುತ್ತಿದ್ದಾನೆ? ಯಾಕಾಗಿ ಹೇಳುತ್ತಿದ್ದಾನೆ? ಇದು ಸ್ವಗತದ ಧಾಟಿಯಂತೂ ಇಲ್ಲ. ಒಂದಿಷ್ಟು ಜನರನ್ನು ಎದುರಿಗೆ ಕೂಡಿಸಿಕೊಂಡು ತನ್ನ ಬಗ್ಗೆ ಹೇಳಿಕೊಳ್ಳಲು ಶುರುಮಾಡಿದಾಗ ಮಾತಿನ ಚಪಲ ಹುಟ್ಟಿಕೊಳ್ಳುತ್ತದಲ್ಲ, ಆ ಧಾಟಿಯಲ್ಲಯೇ ಇದೆ. ನಾಯಿಯ ಬಗ್ಗೆ ಪದ್ಯ ಬರೆಯಲೇ ಇಷ್ಟವಿಲ್ಲದವನು, ಇಷ್ಟವಿಲ್ಲ ಎಂದು ಯಾಕಾದರೂ ಹೇಳಿಯಾನು? ಸುಮ್ಮನಿದ್ದುಬಿಡಬಹುದಲ್ಲ… ನಾಯಿಯ ಬಗ್ಗೆ ಪದ್ಯ ಬರೆಯಬಾರದು; ಹಾಗೆಯೇ ತಾನು ಬರೆಯುವುದಿಲ್ಲ ಎಂದೂ ಜನರಿಗೆ ಗೊತ್ತಾಗಬೇಕು ಎಂಬ ತೋರಿಕೆಯ ಚಪಲವೂ ಇದ್ದೀತೆ? ಈ ಎಲ್ಲ ಪ್ರಶ್ನೆಗಳು ಈ ಕಾದಂಬರಿಯ ಮೊದಲ ಓದಿನಲ್ಲಿ ಮೂಡುವುದೇ ಇಲ್ಲ. ಯಾಕೆಂದರೆ ಪ್ರಶ್ನೆ ಮೂಡದ ಹಾಗೆ ಕಣ್ಕಟ್ಟುವ ಜಾಣತನ ಈ ಭಾಷೆಗಿದೆ. ಇದನ್ನೇ ನಾನು ಡೋಂಗಿತನ ಎಂದಿದ್ದು.
ಇದು ಭಾಷೆಯ ಬಳಕೆಯಲ್ಲಿ ಮಾತ್ರವಿರುವ ಡೋಂಗಿತನವಲ್ಲ. ಅದರ ಚಲನೆಯಲ್ಲಿಯೂ ಇರುವ ಡೋಂಗಿತನ… ಒಂದು ವಾಕ್ಯದಲ್ಲಿ ಏನೋ ಹೇಳಿ, ಮುಂದಿನ ವಾಕ್ಯದಲ್ಲಿ ಅದರ ವಿರುದ್ಧ ಏನೋ ಹೇಳಿ, ರೀಲು ಹಾಕಿಕೊಳ್ಳದೆ ಬರಿದೇ ಕ್ಲಿಕ್ ಎಂದು ಶಬ್ದ ಹುಟ್ಟಿಸಿ ಫೋಟೊ ತೆಗೆದಿದ್ದೇನೆಂಬ ಭ್ರಮೆ ಹುಟ್ಟಿಸುವ ಕ್ರಮ ಅದು. ಆ ಕ್ಷಣ ಈಚೆ ಬದಿಗೆ ವಾವ್ ಅನ್ನಿಸುವಂತೆ ಮಾಡಿ, ಏನು ಮಾಡಿರಬಹುದು ಎಂಬುದನ್ನು ಯೋಚಿಸಲೂ ಬಿಡದೇ ಮತ್ತೊಂದು ಬದಿಗೆ ಚಕ್ಕನೆ ಎಗರಿ ಅಲ್ಲಿ ವಾವ್ ಅನ್ನಿಸುವ ಹಾಗೆ ಮಾಡುವ ಕ್ರಮ.
ಇಲ್ಲಿ ಒಂದು ಸಾಲು ಇನ್ನೊಂದು ಸಾಲಿನ ಪಕ್ಕ ನಿಂತು ನಮ್ಮನ್ನು ಹಿಂದಿನ ವಾಕ್ಯದಿಂದ ಬರಸೆಳೆದು ಮುಂದಿನ ವಾಕ್ಯಕ್ಕೆ ದೂಡುತ್ತಿರುತ್ತವೆ. ಎಷ್ಟೋ ಸಲ ಅವೆರಡು ವಾಕ್ಯಗಳಿಗೂ ಪರಸ್ಪರ ಗಟ್ಟಿಯಾದ ಸಂಬಂಧವೂ ಇರುವುದಿಲ್ಲ; ಸಾತತ್ಯವೂ ಇರುವುದಿಲ್ಲ. ಅದರಷ್ಟಕ್ಕೆ ಅದು ಸ್ವತಂತ್ರವಾಗಿ, ತಮ್ಮ ಕೆಲಸವೇ ಓದುಗನ್ನು ತನ್ನ ಅಂಗಳದಲ್ಲಿ ನಿಲ್ಲಗೊಡದ ಹಾಗೆ ಮುಂದೆ ದೂಡುವುದು ಎಂಬಂತೆ ಕೆಲಸ ಮಾಡುತ್ತಿರುತ್ತವೆ. ಇಲ್ಲಿ ತಿರುಗಿ ನೋಡಲಿಕ್ಕಾಗಲಿ, ಕೊಂಚ ನಿಂತು ಯೋಚಿಸಲಿಕ್ಕಾಗಲಿ ಅವು ಸಮಯ ಕೊಡುವುದಿಲ್ಲ.
ಕಾದಂಬರಿಯ 10ನೇ ಅಧ್ಯಾಯ ಹೀಗಿದೆ ನೋಡಿ:
‘ಅವತ್ತು ರಾತ್ರಿ ಅಪ್ಪ ಸಾಯುತ್ತಾನೆ ಅಂದುಕೊಂಡೆ.
ಸಾಯಲಿಲ್ಲ.
ಸುಲಭವಾಗಿ ಯಾರೂ ಇಲ್ಲಿ ಸಾಯುವುದಿಲ್ಲ.
ಕವಿತೆ ಕೂಡ.
ನಾನು ಕೊಲ್ಲಬೇಕು ಅಂದುಕೊಂಡ ಕವಿತೆಯೊಂದು ನನ್ನೊಳಗೆ ಇನ್ನೂ ಜೀವಂತವಾಗಿದೆ.
ಯಾವ ವಿಮರ್ಶಕರಿಗೂ ಅದನ್ನು ಸಾಯಿಸಲು ಸಾಧ್ಯವಾಗಲೇ ಇಲ್ಲ.’
ಈ ಸಾಲುಗಳನ್ನು ಗಮನಿಸಿ. ಇಲ್ಲಿ ಲೇಖಕ, ಅಥವಾ ನಿರೂಪಕ ಏನನ್ನು ಹೇಳಲು ಹೊರಟಿದ್ದಾನೆ? ಅಪ್ಪನ ಬಗ್ಗೆ? ಅವನ ಸಾವಿನ ಬಗ್ಗೆಯೇ? ಕವಿತೆಯ ಬಗ್ಗೆಯೇ? ಕವಿತೆಯ ಹುಟ್ಟಿನ ಬಗ್ಗೆಯೇ? ವಿಮರ್ಶಕರ ಬಗ್ಗೆಯೇ? ಒಂದು ವಾಕ್ಯಕ್ಕೆ ವಿರುದ್ಧ ದಿಕ್ಕಿನಲ್ಲಿ ಇನ್ನೊಂದು ವಾಕ್ಯ ನಿಂತುಕೊಂಡು ಎಲ್ಲಿಂದ ಎಲ್ಲಿಗೋ ಜಿಗಿಯುತ್ತ ನಮ್ಮನ್ನು ದೂಡುತ್ತಲೇ ಹೋಗುತ್ತದೆ. ಸಾವು, ಕವಿತೆ, ಸಂಬಂಧ ಇವೆಲ್ಲವೂ ಒಳಗೊಂಡ ಏನೋ ಘನವಾದದ್ದನ್ನು ಪಡೆದುಕೊಳ್ಳುತ್ತಿದ್ದೇವೆ ಎಂಬ ಭ್ರಮೆಯನ್ನೂ ನಮ್ಮೊಳಗೆ ಹುಟ್ಟಿಸುತ್ತದೆ. ಆದರೆ ನಿಜವಾಗಿಯೂ ಅಂಥದ್ದೇನಾದರೂ ಅಲ್ಲಿ ಇದೆಯೇ? ನಮಗೆ ದಾಟಿಸುತ್ತಿದೆಯೇ?
ಈ ಕಾದಂಬರಿಯಲ್ಲಿ ನಾನು ಗುರ್ತಿಸಿದ ಇನ್ನೊಂದು ಮುಖ್ಯ ಲಕ್ಷಣ, ಇದು ಓದುಗನೊಂದಿಗೆ ಸಂವಾದ ಮಾಡುವುದಿಲ್ಲ. ಬರಿದೆ ಹೇಳುತ್ತಲೇ ಹೋಗುತ್ತದೆ. ಯಾವುದೇ ಒಳ್ಳೆಯ ಕಲಾಕೃತಿಯ ಸಾರ್ಥಕತೆ ಇರುವುದು ಅದು ಸಹೃದಯನೊಟ್ಟಿಗೆ ಎಷ್ಟು ಆಳವಾಗಿ ಸಂವಾದಿಸಬಲ್ಲದು ಎಂಬುದರ ಮೇಲೆ. ಹಾಗೆ ಸಂವಾದಿಸುವ ಸಾಧ್ಯತೆಯನ್ನು ಅದು ಎಷ್ಟು ಉಳಿಸಿಕೊಂಡಿದೆ ಎನ್ನುವುದರ ಮೇಲೆ. ಆದರೆ ಈ ಕಾದಂಬರಿಯ ಜಾಯಮಾನ ಅದಕ್ಕೆ ಪೂರ್ತಿ ವಿರುದ್ಧವಾದದ್ದು. ‘ನೀವು ಯೋಚಿಸುವ, ಚಿಂತಿಸುವ ತ್ರಾಸೇನೂ ತಗೋಬೇಡಿ.. ನಾನು ಕೊಟ್ಟಿದ್ದನ್ನು ಚಪ್ಪರಿಸಿಕೊಂಡು ತೆಪ್ಪಗಿರಿ’ ಅನ್ನುವ ಧಾರ್ಷ್ಯ ಈ ಕಾದಂಬರಿಯ ನಿರೂಪಣೆಯಲ್ಲಿಯೇ ಇದೆ. ಈ ಕಾದಂಬರಿಯ ಓದು ಎಲ್ಲಿಯೂ ಬೋರ್ ಹೊಡೆಸುವುದಿಲ್ಲ ಎಂಬುದಕ್ಕೂ ಇದೆ ಕಾರಣ… ಈ ಕಾದಂಬರಿಯ ವಿನ್ಯಾಸವೂ ಭಾಷೆಯ– ನಿರೂಪಣೆಯ ಉದ್ದೇಶಕ್ಕೆ ಹೊಂದಿಕೊಳ್ಳುವ ಹಾಗೆಯೇ ಇದೆ. ಯಾವುದನ್ನಾದರೂ ನಾವು ನಮಗೆ ಬೇಕಾದ ಹಾಗೆ ಹೇಳಲು ಅವಕಾಶ ಇರುವುದು, ಸುಳ್ಳು ಹೇಳಿಯೂ ಹುತಾತ್ಮನಾಗುವ ಸಾಧ್ಯತೆ ಇರುವುದು ಆತ್ಮಚರಿತ್ರೆಗಳಲ್ಲಿ. ಅಂದರೆ ಭೂತಕಾಲದ ಕಥೆಗಳನ್ನು ಹೇಳುಲು ಹೊರಟಾಗ. ಕಥೆಯೊಳಗೆ ವರ್ತಮಾನದ ನಿರೂಪಣೆ ಬಂದಾಗ ಅದಕ್ಕೆ ಕೆಲವು ತೊಡಕುಗಳು ಬಂದುಬಿಡುತ್ತವೆ. ಮೈಮರೆಸುವುದು ಕಷ್ಟವಾಗುತ್ತದೆ. ‘ಎಲ್’ ಇಡೀ ಕಾದಂಬರಿ ಇರುವುದು ಭೂತಕಾಲದ ನಿರೂಪಣೆಯಲ್ಲಿ!
ಇಲ್ಲಿನ ಕಾದಂಬರಿಯ ನಾಯಕ ವಿಕ್ಷಿಪ್ತನಂತೆ ಕಾಣುತ್ತಾನೆ ಎಂದು ಆರಂಭದಲ್ಲಿ ಹೇಳಿದೆ. ಆದರೆ ಆ ವಿಕ್ಷಿಪ್ತತೆ ವಿಶಿಷ್ಟತೆ ಅಲ್ಲ ಎಂದು ಉಳಿದ ಪಾತ್ರಗಳನ್ನು ಗಮನಿಸಿದಾಗ ತಿಳಿಯುತ್ತದೆ. ಇಲ್ಲಿನ ಯಾವ ಪಾತ್ರಗಳಿಗೂ ತಮಗೇ ವಿಶಿಷ್ಟವಾದ ವ್ಯಕ್ತಿತ್ವಗಳಿಲ್ಲ – ಅಸ್ತಿತ್ವವಿಲ್ಲ. ಎಲ್ಲ ಪಾತ್ರಗಳೂ ಅಷ್ಟೇ ವಿಕ್ಷಿಪ್ತವಾಗಿ ವರ್ತಿಸುತ್ತವೆ; ಮಾತಾಡುತ್ತವೆ. ಅವು ಕಾದಂಬರಿಕಾರನ ಮಾತುಗಳಿಗೆ ಒದಗಿಬರುವ ಟೂಲುಗಳಷ್ಟೇ. ಸೇತುರಾಮ ಅವರ ನಾಟಕಗಳನ್ನು ನೆನಪಿಸಿಕೊಂಡರೆ ಈ ಮಾತು ಇನ್ನಷ್ಟು ಸ್ಪಷ್ಟವಾಗಬಹುದು. ಅಷ್ಟೇ ಅಲ್ಲ, ಲೇಖಕರು ಈ ಕಾದಂಬರಿ ಹುಟ್ಟಿಕೊಂಡ ಬಗೆಯನ್ನು ವಿವರಿಸಿರುವ ಆರಂಭದ ಲೇಖನವನ್ನೂ ಗಮನಿಸಬಹುದು. ಮಲೇಷ್ಯಾದಲ್ಲಿ ಲೇಖಕರಿಗೆ ಸಿಗುವ ವ್ಯಕ್ತಿಯೂ ಲೇಖಕರ ಹಾಗೆಯೇ, ಅಥವಾ ಅವರ ಅಗತ್ಯಕ್ಕೆ ತಕ್ಕ ಹಾಗೆಯೇ ಮಾತಾಡುತ್ತಾನೆ. ಅದೇ ಕಾದಂಬರಿಯಲ್ಲಿಯೂ ಮುಂದುವರಿದಿದೆ. ಇಲ್ಲಿನ ನಾಯಕ ಲಕ್ಷ್ಮಣ ನೀಲಂಗಿ ವಿಕ್ಷಿಪ್ತ. ಅವನ ಅಮ್ಮ ವಿಕ್ಷಿಪ್ತ. ಅಪ್ಪ ವಿಕ್ಷಿಪ್ತ. ಲೀಲಾವತಿ ವಿಕ್ಷಿಪ್ತ. ಗೆಳೆಯ ಮಂಜುನಾಥ ವಿಕ್ಷಿಪ್ತ. ಎಲ್ಲರೂ ಸಹಜವಾಗಿ ಹೇಗೆ ರಿಯಾಕ್ಟ್ ಮಾಡಬಹುದೋ ಹಾಗೆ ಮಾಡುವುದಿಲ್ಲ. ಹಾಗೆ ನೋಡಿದರೆ ಅವರ ವರ್ತನೆಗಳು, ಅವರು ಜಗತ್ತನ್ನು ನೋಡುವ ಕ್ರಮಗಳು ತುಂಬ ಬೇರೆಯಾಗಿಯೇನೂ ಇರುವುದಿಲ್ಲ. ಆದರೆ ‘ನಾವು ಈ ಜಗತ್ತಿಗಿಂತ ಡಿಫರೆಂಟು’ ಎಂದು ತೋರಿಸಿಕೊಳ್ಳಲು ಹೆಣಗುತ್ತ ಸಹಜತೆಯನ್ನೇ ಕಳೆದುಕೊಂಡು ಒಂದೇ ಅಚ್ಚಿನಲ್ಲಿ ಹೊಕ್ಕಿ ಹೊರಬಿದ್ದವರ ಹಾಗೆ ಕಾಣಿಸುತ್ತಾರೆ. ಹಾಗಾಗಿಯೇ ಅವರು ಆಡುವ ಮಾತಿನಲ್ಲಿ ಇರುವ ಕಾಂಟ್ರಾಸ್ಟ್ ಅವರ ವ್ಯಕ್ತಿತ್ವದಲ್ಲಿ ಇರುವುದಿಲ್ಲ. ಅವರಿಗೆ ಒಂದು ಗಟ್ಟಿಯಾದ ವ್ಯಕ್ತಿತ್ವವೇ ಇರುವುದಿಲ್ಲ.
ಹಾಗಾದರೆ ಈ ಕಾದಂಬರಿಯಲ್ಲಿ ಓಟದ ಓದಿನ ಆಚೆಗೂ ಇಳಿದು ಕಾಡಬಲ್ಲ ಸ್ಪಾರ್ಕುಗಳಿಲ್ಲವಾ? ಖಂಡಿತ ಇವೆ. ಅಪ್ಪನ ಮಲದ ವಾಸನೆಯ ಕೋಣೆಯಲ್ಲಿ ಮೋಹಿನಿಯನ್ನೂ ಕೂಡಿಹಾಕಿದ್ದು, ಲಕ್ಷ್ಮಣ ಮಂಜುನಾಥನ ಮನೆಗೆ ಹೋಗಿದ್ದು, ಲೀಲಾವತಿ ಆಸ್ಪತ್ರೆಯಲ್ಲಿ ಭೇಟಿಯಾಗಲು ಬಂದಿದ್ದು ಹೀಗೆ ಹಲವು ‘ಜಾಗ’ಗಳು ಒಳಗಿಳಿದು ಕಾಡುವಷ್ಟು ಸಾಂದ್ರತೆಯ ಸಾಧ್ಯತೆಗಳನ್ನು ಹೊಂದಿವೆ. ಆದರೆ ಇಡೀ ಕಾದಂಬರಿಯ ಹಂದರವಾಗಿ ಪ್ಲಸ್ ಪಾಯಿಂಟ್ ಆಗಿರುವ ಮೋಹಕ ಭಾಷೆಯೇ ಈ ಜಾಗಗಳಿಗೆ ಶತ್ರುವಾಗಿವೆ. ಕಾದಂಬರಿಯುದ್ದಕ್ಕೂ ನಮ್ಮನ್ನು ಓಡಿಸಿಕೊಂಡೇ ಹೋಗುವ ಭಾಷೆ-ನಿರೂಪಣೆಯಲ್ಲಿನ ಬಿಡುಬೀಸುತವೇ ಈ ಜಾಗೃತ ಜಾಗೆಗಳಲ್ಲಿಯೂ ನಿಲ್ಲಗೊಡದೇ ಜಿಗಿದೋಡಿಸುತ್ತವೆ. ಇಂಥ ಜಾಗಗಳು ತುಸು ಸಾವಧಾನವನ್ನು ಬೇಡುತ್ತವೆ; ಭಾಷೆಯ ಸೂಕ್ಷ್ಮ ವಿವರಗಳನ್ನು ಬೇಡುತ್ತದೆ. ಆದರೆ ಈ ಕಾದಂಬರಿಯ ನಿರೂಪಣೆಯ ಜಾಯಮಾನದಲ್ಲೇ ಆ ಗುಣಗಳಿಲ್ಲ. ಹಾಗಾಗಿ ಈ ಜಾಗೃತ ಜಾಗೆಗಳೂ ಶಾಪಗ್ರಸ್ಥ ಶಿಲೆಗಳಂತೆ ದಾರಿ ಮಧ್ಯ ಸರಿದುಹೋಗುತ್ತದೆ.
ಇಷ್ಟೇ ಹೇಳಿಬಿಟ್ಟರೆ ಅಪ್ರಾಮಾಣಿಕತೆಯಾದೀತು… ಪಾತ್ರಗಳಲ್ಲಿನ ವಿಚಿತ್ರ ಉಡಾಫೆ, ನಿರೂಪಣೆಯಲ್ಲಿ ಬಿಡುಬೀಸುತನ ಮತ್ತು ಪ್ರವಚನದ ಗುಣ, ಇಲ್ಲದ ಏನನ್ನೋ ಇದೆ ಎಂದು ಬಿಂಬಿಸುವ ಡ್ರಾಮಾ… ಹೀಗೆ ಈ ಕಾದಂಬರಿಯ ದೋಷಗಳೆಂದು ನನಗೆ ಅನ್ನಿಸಿದ ಎಲ್ಲವೂ ಒಂದು ಹದದಲ್ಲಿ ಒಂದಕ್ಕೊಂದು ಸೇರಿಕೊಂಡು, ವಿಚಿತ್ರ ಮಾಯೆಯಲ್ಲಿ ಶಕ್ತಿಯಾಗಿ, ಒಂದರ ಬೆನ್ನಮೇಲೆ ಇನ್ನೊಂದು ಏರಿ ಏರಿ ಬಂದು ಅಪ್ಪಳಿಸಿ ಕಾಲಡಿಯ ಮರಳ ಕತ್ತರಿಸಿ ಇಡೀ ಜಗತ್ತೇ ಕುಸಿಯುತ್ತಿದೆಯೇನೋ ಅನ್ನಿಸುವ ಹಾಗೆ ಮಾಡುವ ಸುಳಿಗಳೂ ಇದರ ಹರಿವಿನಲ್ಲಿ ಅಲ್ಲಲ್ಲಿ ಸಿಗುತ್ತವೆ.
ಲಕ್ಷ್ಮಣ ನೀಲಂಗಿ ಯೇಟ್ಸ್‌ನ ಪದ್ಯದ ಗುಂಗಿನಲ್ಲಿ ಕ್ಲಾಸ್‌ರೂಮಿನಲ್ಲಿ ಲೀಲಾವತಿಯನ್ನು ಮೋಹಿಸುವ ಸನ್ನಿವೇಶವಿದೆಯಲ್ಲ. ಅದು ಈ ಕಾದಂಬರಿಯ ತೀವ್ರವಾದ ಸನ್ನಿವೇಶಗಳಲ್ಲಿ ಒಂದು. ಈ ಕಾದಂಬರಿಯ ದೌರ್ಬಲ್ಯಗಳೆಲ್ಲವೂ ಪ್ರೇಮದ, ವ್ಯಾಮೋಹದ ಅಭಿವ್ಯಕ್ತಿಯ ಒಳಗೇ ಇರುವ ದೌರ್ಬಲ್ಯಗಳೂ ಹೌದು. ಹಾಗಾಗಿಯೇ ವಾಸ್ತವವೋ ಭ್ರಮೆಯೋ, ಕಾಮವೋ ವ್ಯಾಮೋಹವೋ… ಗೊತ್ತಾಗದ ಬಲವಾದ ಸುಳಿಯಂಥ ಈ ಸನ್ನಿವೇಶ ಇಡೀ ಕಾದಂಬರಿಯಲ್ಲಿ ಹೆಚ್ಚು ದಟ್ಟವಾಗಿ ಮೂಡಿದ ನಿಜತ್ವದ ಋಜು ಎಂದೇ ನನಗನಿಸಿದೆ.
ಇಷ್ಟೆಲ್ಲ ಆಗಿಯೂ ಈ ಕಾದಂಬರಿ ಓದಿಸಿಕೊಂಡು ಹೋಗುವ ರೀತಿ ನನ್ನಲ್ಲಿ ಬೆರಗು ಮೂಡಿಸಿದೆ. ಜನಪ್ರಿಯ ಸಾಹಿತ್ಯದ ಬಗ್ಗೆ ಇನ್ನಷ್ಟು ಆಸಕ್ತಿಯನ್ನೂ ಕುತೂಹಲವನ್ನೂ ಮೂಡಿಸಿದೆ. ಆದರೆ ಮುನ್ನುಡಿಯಲ್ಲಿ ಹರೀಶ್ ಕೇರ ಹೇಳಿದ ಹಾಗೆ ಹೊಸ ಬಗೆಯ ‘ಉಕ್ತಿ ಭಂಗಿ’ಯಾಗಲಿ, ಕೊನೆಯಲ್ಲಿ ವಿಕಾಸ್ ನೇಗಿಲೋಣಿ ಹೇಳಿದ ಹಾಗೆ ‘ಹೊಸ ಪಾರ್ಮ್’ನ ಲಕ್ಷಣಗಳಾಗಲಿ ನನಗೆ ಕಾಣಿಸಲಿಲ್ಲ. ಬೆನ್ನುಡಿಯಲ್ಲಿ ನರೇಂದ್ರ ಪೈ ಬರೆದ ‘ಎಕ್ಸಲೆಂಟ್ಲಿ, ಅಬ್ಸಲೂಟ್ಲಿ’ ಎಂಬ ಉದ್ಘಾರವೂ ನನ್ನಿಂದ ಹೊರಡಲಿಲ್ಲ. ಇದು ನನ್ನ ಗ್ರಹಿಕೆಯ ಮಿತಿಯೂ ಇದ್ದೀತು. ಹಾಗೇನಾದರೂ ಹೊಸತವನ್ನು ಈ ಕಾದಂಬರಿಯಲ್ಲಿ ಹುಡುಕಲೇಬೇಕು ಎಂದಿದ್ದರೆ ಅದನ್ನು ಹೀಗೆ ಹೇಳಬಹುದು ಎಂದು ನನಗೆ ಅನಿಸಿತು: ‘ಇದುವರೆಗೆ ಭಾಷೆಯ ಬಲದಿಂದ ಏನೂ ಇಲ್ಲದೆಯೇ ಏನೋ ಇದೆ ಎಂದು ಭ್ರಮೆ ಹುಟ್ಟಿಸುವುದು ಕಾವ್ಯದಲ್ಲಿ ಸಾಧ್ಯವಿತ್ತು; ಸುಲಭವಿತ್ತು. ಅದು ಗದ್ಯದಲ್ಲಿಯೂ ಸಾಧ್ಯ ಎಂಬುದನ್ನು ಸಮರ್ಥವಾಗಿ ‘ಎಲ್’ ಕಾದಂಬರಿ ಸಾಧಿಸಿ ತೋರಿಸಿದೆ’.
ಕಡೆಯದಾಗಿ, ಪೋಸ್ಟ್ ಮಾಡರ್ನಿಸ್ಮ್ ನ ನೆಪವಿಟ್ಟುಕೊಂಡು ಈ ಕಾದಂಬರಿಯನ್ನು ಸಮರ್ಥಿಸಲು ಲೇಖಕನಿಗೂ, ಅದರಿಂದಾಗಿ ಹುಟ್ಟಿಕೊಳ್ಳುವ ಪೋಸ್ಟ್-ಟ್ರೂತ್ ಓದುಗ(?) ಸಮೂಹಕ್ಕೂ ಸಾಧ್ಯವಿದೆ. ಸಾಹಿತ್ಯದ ತಂತ್ರ ಕೇವಲ ಟ್ರಿಕ್ ಆಗುವ, ಮನುಷ್ಯಕುಲದ ಸ್ಟ್ರಾಟಜಿ ಕೇವಲ ಒಬ್ಬನ ಟ್ಯಾಕ್ಟಿಕ್ ಆಗಿ ಬಳಸಲ್ಪಡಬೇಕಾಗಿ ಬರುವ ಅನಿವಾರ್ಯತೆಯಲ್ಲಿ ಇದನ್ನು ಕಾದಂಬರಿಯಾಗಿ ಒಪ್ಪಬೇಕಾಗಿದೆ.
ಹುಟ್ಟಿ ಬೆಳೆದದ್ದು ಬೆಂಗಳೂರು. ಖಾಸಗಿ ಕಂಪೆನಿಯಲ್ಲಿ ಉದ್ಯೋಗಿ . ಚಾರಣ , ಓದು , ಸಿನೆಮಾದಲ್ಲಿ ಆಸಕ್ತಿ .
ನಾನು ಜೋಗಿಯವರ ಎಲ್ ಕಾದ೦ಬರಿಯನ್ನು ಓದಿಲ್ಲವಾದ್ದರಿ೦ದ ನವೀನ್ ಅವರು ಹೇಳಿದ ಪೋಷ್ಟ್ ಟ್ರುತ್ ಓದುಗ ಸಮೂಹಕ್ಕೆ ಸೇರಿದವನಲ್ಲ. ಒ೦ದು ಕಾದ೦ಬರಿಯನ್ನು ಯಾಕೆ ಓದಬೇಕು ಅನ್ನುವುದಕ್ಕೆ ಒಬ್ಬೊಬ್ಬರಿಗೆ ಒ೦ದೊ೦ದು ಕಾರಣಗಳಿರಬಹುದು. ಈ ಲೇಖನ ನನ್ಯಾಕೆ ಎಲ್ ಕಾದ೦ಬರಿಯನ್ನು ಓದಬೇಕು ಅಥವ ಓದದಿದ್ದರೆ ಅಷ್ಟೇನೂ ಲಾಸಿಲ್ಲ ಅನ್ನುವುದನ್ನು ಹೇಳುತ್ತದೇನೋ ಅ೦ದುಕೊ೦ಡಿದ್ದೆ. ಲೇಖಕರ verdict ( ” ಇದುವರೆಗೆ ಭಾಷೆಯ ಬಲದಿಂದ ಏನೂ ಇಲ್ಲದೆಯೇ ಏನೋ ಇದೆ …..”) ಓದಿದ ಮೇಲೆ ಕಾದ೦ಬರಿಯನ್ನು ಮುದ್ದಾಮ್ ಓದಬೇಕು ಅ೦ದುಕೊ೦ಡಿದ್ದೇನೆ, ಏಕೆ೦ದರೆ “ಏನೂ ಇಲ್ಲದೆಯೇ …” ಅನ್ನುವುದಕ್ಕೆ ಇಲ್ಲಿ ಬಲವಾದ ಕಾರಣವನ್ನೇ ಕೊಟ್ಟಿಲ್ಲ. ಭಾಷೆಯ ಬಗ್ಗೆ ಅವರಿಗಿರುವ ತಕರಾರು ನನ್ನ curiosity ಯನ್ನು ಹೆಚ್ಚಿಸಿದೆ. ನನಗೆ ಅವರ ಈ ಲೇಖನವನ್ನು ಅರ್ಥೈಸಿಕೊಳ್ಳಲಿರುವ ಸಮಸ್ಯೆಯನ್ನು ಪ್ರಾಮಾಣಿಕವಾಗಿ ಹೇಳಿದ್ದೇನೆ.
“ಸಾಹಿತ್ಯದ ತಂತ್ರ ಕೇವಲ ಟ್ರಿಕ್ ಆಗುವ, ಮನುಷ್ಯಕುಲದ ಸ್ಟ್ರಾಟಜಿ ಕೇವಲ ಒಬ್ಬನ ಟ್ಯಾಕ್ಟಿಕ್ ಆಗಿ ಬಳಸಲ್ಪಡಬೇಕಾಗಿ….” ಈ ವಾಕ್ಯದ ಅರ್ಥ ಅಥವ ಇದು ಹೇಳ ಹೊರಟಿರುವ ವಿಷಯ ಬಿಡಿ atleast ಇದು ಹುಟ್ಟಿಸಬೇಕೆ೦ದಿರುವ ಭ್ರಮೆ (!) ಯಾವುದು ಮಾರಾಯ್ರೆ.
ಲೇಖನದಲ್ಲಿ ಬಹಳ ಕಡೆ “ಡೋಂಗಿತನ” ದ ಬಳಕೆಯಿದೆ. ಅವುಗಳಲ್ಲಿ ನನಗೆ ಸರಿ ಅನಿಸದ ಪ್ರಯೋಗ ’ಭಾಷೆಯ ಡೋಂಗಿತನ’ ಅನ್ನುವುದು. language is merely a mode of communication and it is simply a skill . ಅದು ಅಪ್ರಮಾಣಿಕವಾಗುವುದು ಅ೦ದರೇನು? ಅಪ್ರಮಾಣಿಕತೆ can be in thoughts, but can’t be in language
“ಆಡುವ ಮಾತಿನಲ್ಲಿ ಇರುವ ಕಾಂಟ್ರಾಸ್ಟ್ ಅವರ ವ್ಯಕ್ತಿತ್ವದಲ್ಲಿ ಇರುವುದಿಲ್ಲ….”. ಏನಿದರ ಅರ್ಥ? ಕಾದ೦ಬರಿಯ ಪಾತ್ರಗಳ ವ್ಯಕ್ತಿತ್ವ ಅರ್ಥವಾಗುವುದು ಅವರು ಏನನ್ನು ಹೇಳುತ್ತಿದ್ದಾರೆ ಅನ್ನುವುದರ ಮೇಲೆ ಮತ್ತು ಅವರು ವಿವಿಧ ಸನ್ನಿವೇಶಗಳಲ್ಲಿ ಹೇಗೆ ವರ್ತಿಸುತ್ತಾರೆ ಅನ್ನುವುದರ ಮೇಲೆ. I am confused in connecting these three in the same paragraph
“ಇಲ್ಲಿನ ನಾಯಕ ಲಕ್ಷ್ಮಣ ನೀಲಂಗಿ ವಿಕ್ಷಿಪ್ತ. ಅವನ ಅಮ್ಮ ವಿಕ್ಷಿಪ್ತ. ಅಪ್ಪ ವಿಕ್ಷಿಪ್ತ. ಲೀಲಾವತಿ ವಿಕ್ಷಿಪ್ತ. ಗೆಳೆಯ ಮಂಜುನಾಥ ವಿಕ್ಷಿಪ್ತ”, “ಒಂದೇ ಅಚ್ಚಿನಲ್ಲಿ ಹೊಕ್ಕಿ ಹೊರಬಿದ್ದವರ ಹಾಗೆ ಕಾಣಿಸುತ್ತಾರೆ” “ಅವರು ಆಡುವ ಮಾತಿನಲ್ಲಿ ಇರುವ ಕಾಂಟ್ರಾಸ್ಟ್ ಅವರ ವ್ಯಕ್ತಿತ್ವದಲ್ಲಿ ಇರುವುದಿಲ್ಲ” ….
ಬಹಳ ಚೆನ್ನಾಗಿ ಬರೆದಿದ್ದೀರಿ. ಸತ್ಯವಾಗಿ ಅನ್ನಿಸಿದ್ದನ್ನು ಬರೆಯಲು ಧಾರ್ಷ್ಠ್ಯ ಬೇಕು. ಯಾರನ್ನೂ ನೋಯಿಸದೆ ಅನ್ನಿಸಿದ್ದನ್ನು ವಿನಯಪೂರ್ವಕ ಹೇಳಿದ್ದೀರಿ.
ಹೀಗೆ ಬರೆಯುವವರ ಸಂಖ್ಯೆ ಹೆಚ್ಚಾಗಲಿ