ಪೌರತ್ವ ತಿದ್ದುಪಡಿ ಕಾಯ್ದೆ – ಏನು, ಎತ್ತ ?

ವಿವಾದಿತ ಪೌರತ್ವ ತಿದ್ದುಪಡಿ ಮಸೂದೆ-2019 (Citizenship Amendment Bill – CAB), ಇದೆ ಡಿಸೆಂಬರ್‍ 10ಕ್ಕೆ ಮಂಡನೆಯಾಗಿ ರಾಷ್ಟ್ರಪತಿಯವರ ಅಂಕಿತವನ್ನೂ ಪಡೆದು ಕಾನೂನಿನ ಕಾಯ್ದೆಯಾಗಿದೆ (Citizenship Amendment Act – CAA). ಇದೇ ಸಂದರ್ಭದಲ್ಲಿ ದೇಶದ ತುಂಬ ಪ್ರತಿಭಟನೆಗಳು ಶುರುವಾಗಿವೆ, ಈಶಾನ್ಯ ರಾಜ್ಯಗಳು ಮತ್ತು ಅಸ್ಸಾಂ ಅಂತೂ ಹೊತ್ತಿ ಉರಿಯುತ್ತಿದೆ. ಏನು ಈ ವಿವಾದ? ದೇಶದಲ್ಲಿ ಪ್ರತಿಭಟನೆಯಾಗುತ್ತಿರುವುದೇಕೆ?

ಮೊದಲಿಗೆ ಪೌರತ್ವ ತಿದ್ದುಪಡಿ ಕಾಯ್ದೆ ಎಂದರೆ ಏನು?

ಡಿಸೆಂಬರ್ 31, 2014ರವರೆಗೂ ಅಫ್ಘಾನಿಸ್ತಾನ, ಬಂಗ್ಲಾದೇಶ ಮತ್ತು ಪಾಕಿಸ್ತಾನಗಳಿಂದ ಧಾರ್ಮಿಕ ಕಿರುಕುಳಗಳ ಕಾರಣವಾಗಿ ಭಾರತದೊಳಗೆ ಪ್ರವೇಶಿಸಿರುವ ಅಕ್ರಮ ವಲಸಿಗರಿಗೆ ಸರಳವಾದ ಪ್ರಕ್ರಿಯೆಗಳ ಮೂಲಕ 6 ವರ್ಷಗಳೊಳಗೆ ಪೌರತ್ವವನ್ನು ನೀಡುವುದು. ಇದರಲ್ಲಿ ಒಂದು ಒಳಸುಳಿಯಿದೆ, ಏನದು? ಧರ್ಮಗಳ ಆಧಾರದ ಮೇಲೆ ಅಂದರೆ ಹಿಂದೂಗಳು, ಜೈನರು, ಪಾರ್ಸಿಗಳು, ಸಿಖ್ಖರು, ಬೌದ್ಧರು ಮತ್ತು ಕ್ರಿಶ್ಚಿಯನ್ನರು ಈ ಮಸೂದೆಯೊಳಗೆ ಪೌರತ್ವ ಹೊಂದಲು ಅರ್ಹರು. ಮುಸಲ್ಮಾನರನ್ನು ಈ ಮಸೂದೆಯ ಹೊರಗಿಡಲಾಗಿದೆ. ಮೇಲ್ಕಂಡ ಮೂರೂ ದೇಶಗಳಲ್ಲಿ ಮುಸಲ್ಮಾನರು ಬಹುಸಂಖ್ಯಾತರಾಗಿರುವ ಕಾರಣ ಅವರ ಮೇಲೆ ಧಾರ್ಮಿಕ ಕಿರುಕುಳಗಳಾಗುವ ಸಾಧ್ಯತೆ ಇಲ್ಲ ಎಂಬುದು ಸರ್ಕಾರದ ಅಭಿಪ್ರಾಯ.

ಈ ಮಸೂದೆಯಿಂದ ಎಷ್ಟು ಜನರಿಗೆ ಅನುಕೂಲವಾಗಲಿದೆ?

ಭಾರತಕ್ಕೆ ವಲಸೆಬಂದ 31,313 ಅಕ್ರಮ ವಲಸಿಗರಿಗೆ ಅನುಕೂಲವಾಗಲಿದೆ, ಇದರ ಬಗ್ಗೆ 2016ರಲ್ಲಿ ಗುಪ್ತಚರ ಇಲಾಖೆ(IB) ಜಂಟಿ ಸಂಸದೀಯ ಸಮಿತಿಯ ಮುಂದೆ ಮಾಹಿತಿ ನೀಡಿದೆ.

ಆದರೆ ಈ ಮಸೂದೆ ಭಾರತೀಯ ಕಾನೂನು ಕಾಯ್ದೆ, ಆರ್ಟಿಕಲ್ 14ರ ಉಲ್ಲಂಘನೆಯಾಗಿದೆ ಎಂಬ ಮಾತಿದೆ. ಆರ್ಟಿಕಲ್ 14ರ ಪ್ರಕಾರ – ಸರ್ಕಾರ ಯಾವುದೆ ಕಾರಣಕ್ಕೂ ಧರ್ಮ, ಜನಾಂಗ, ಜಾತಿ, ಲಿಂಗ ಅಥವಾ ಜನ್ಮಸ್ಥಳದ ಆಧಾರದ ಮೇಲೆ ಕಾನೂನಿನಲ್ಲಿ ತಾರತಮ್ಯ ಮಾಡುವಂತಿಲ್ಲ. ಮುಸಲ್ಮಾನರನ್ನು ಈ ಕಾಯ್ದೆಯ ಹೊರಗಿಟ್ಟಿರುವುದರಿಂದ ಇದು ಅವರ ಮೇಲೆ ಮಾಡುತ್ತಿರುವ ತಾರತಮ್ಯ ಎಂದು ಕೆಲವರು ವಾದಿಸಿದ್ದಾರೆ. 

ಧಾರ್ಮಿಕ ಕಿರುಕುಳಗಳಿಂದಾಗಿ ಭಾರತಕ್ಕೆ ವಲಸೆ ಬಂದವರು ಎಂದ ಮೇಲೆ ಮುಸಲ್ಮಾನರನ್ನಷ್ಟೆ ಏಕೆ ಈ ಮಸೂದೆಯಿಂದ ಹೊರಗಿಡಬೇಕು? ಮುಸಲ್ಮಾನರೂ ಧಾರ್ಮಿಕ ಕಿರುಕುಳಕ್ಕೊಳಗಾಗಿರಬಹುದು ಅಲ್ಲವೆ? ಉದಾಹರಣೆಗೆ ತಸ್ಲೀಮಾ ನಸ್ರೀನ್ ರವರ ಪ್ರಕರಣವನ್ನು ನೋಡಬಹುದು. ಆಕೆ ಮುಸಲ್ಮಾನರಾಗಿದ್ದು, ಬಹುಶಃ ಬಂಗ್ಲಾದೇಶದ ಹಿಂದೂಗಳಿಗಿಂತಲೂ ಹೆಚ್ಚಿನ ಧಾರ್ಮಿಕ ಕಿರುಕುಳಕ್ಕೊಳಗಾಗಿದ್ದಾರೆ. ಪಾಕಿಸ್ತಾನದಲ್ಲಿ ಶಿಯಾ ಮತ್ತು ಅಹಮದೀಯರ ಮೇಲೂ ಧಾರ್ಮಿಕ ದೌರ್ಜನ್ಯವಾಗುತ್ತಿವೆ. ಅಹಮದೀಯರನ್ನು ಅವರು ಮುಸಲ್ಮಾನರು ಎಂದೇ ಭಾವಿಸುವುದಿಲ್ಲ. ಅವರಲ್ಲನೇಕರು ಭಾರತಕ್ಕೆ ವಲಸೆ ಬಂದಿದ್ದಾರೆ. ಅಂತಹ ಮುಸಲ್ಮಾನರ ಮೇಲೆ ಈ ಮಸೂದೆ ತಾರತಮ್ಯ ಮಾಡಿದಂತಾಗುವುದಿಲ್ಲವೆ?

ಮೊನ್ನೆ ಲೋಕಸಭೆಯ ಚರ್ಚೆಯಲ್ಲಿ ದಯಾನಿಧಿ ಮಾರನ್ ಇನ್ನೊಂದು ಪ್ರಶ್ನೆಯನ್ನು ಎತ್ತುತ್ತಾರೆ, ಯಾವುದೆ ಧಾರ್ಮಿಕತೆಯನ್ನು ಹೊಂದಿರದ ನಾಸ್ತಿಕರನ್ನು ಈ ಮಸೂದೆಯಲ್ಲಿ ಯಾಕೆ ಸೇರಿಸಿಲ್ಲ? ಅವರೆ ಹೆಚ್ಚಿನಂಶ ಧಾರ್ಮಿಕ ಕಿರುಕುಳಕ್ಕೊಳಗಾಗುವುದು ಎಂದು ಕೇಳಿದ್ದಾರೆ. ಆದರೆ ಈ ಪ್ರಶ್ನೆಗೆ ಸರ್ಕಾರದ ವತಿಯಿಂದ ಯಾವುದೆ ಉತ್ತರ ಸಿಗಲಿಲ್ಲ.

ಹಾಗಾದರೆ ಈ ಮೂರು ದೇಶಗಳನ್ನು ಹೊರತುಪಡಿಸಿ ಉಳಿದ ದೇಶಗಳನ್ನು ಯಾಕೆ ಈ ಮಸೂದೆಯಿಂದ ಹೊರಗಿಡಲಾಗಿದೆ?

ಮೊನ್ನೆ ಸಂಸತ್ತಿನಲ್ಲಿ ಈ ಮಸೂದೆಯ ಸಲುವಾಗಿ ಚರ್ಚೆಗಳಾದಾಗ ಕೆಲವು ಸಂಸದರು ಈ ಮೇಲಿನ ಪ್ರಶ್ನೆಯನ್ನು ಎತ್ತಿದರು. ಮುಖ್ಯವಾಗಿ ಈ ಮಸೂದೆಯಲ್ಲಿ ಶ್ರೀಲಂಕಾದಿಂದ ಕಿರುಕುಳಕ್ಕೊಳಗಾಗಿ ದೇಶಕ್ಕೆ ವಲಸೆ ಬಂದ ತಮಿಳರು, ಮಯನ್ಮಾರ್, ನೇಪಾಳ, ಭೂತಾನ್, ಚೀನಾ ಮತ್ತು ಮಾಲ್ಡೀವ್ಸ್ ನಿಂದ ಬಂದ ವಲಸಿಗರ ಬಗ್ಗೆ ಯಾವುದೆ ಮಾತಿಲ್ಲವೇಕೆ ಎಂಬ ಪ್ರಶ್ನೆಗಳು ಮುನ್ನಲೆಗೆ ಬಂದವು. ಅದಕ್ಕೆ ಉತ್ತರಿಸುತ್ತಾ ಗೃಹ ಸಚಿವರಾದ ಅಮಿತ್ ಶಾ, ‘ಸದ್ಯಕ್ಕೆ ಇಸ್ಲಾಂ ಅನ್ನು ತಮ್ಮ ದೇಶದ ಧರ್ಮವಾಗಿ ಹೊಂದಿರುವ ದೇಶಗಳನ್ನಷ್ಟೆ ಗಣನೆಗೆ ತೆಗೆದುಕೊಳ್ಳಲಾಗಿದೆ, ಯಾಕೆಂದರೆ ಈ ಮೂರು ದೇಶಗಳಲ್ಲಿ ಅಲ್ಪ ಸಂಖ್ಯಾತರ ಸಂಖ್ಯೆ ಗಣನೀಯವಾಗಿ ಕಮ್ಮಿಯಾಗುತ್ತಿದೆ. ಅಲ್ಲಿರುವ ಅಲ್ಪ ಸಂಖ್ಯಾತರಿಗೆ ಏನಾಗುತ್ತಿದೆ?’ ಎಂದು ಪ್ರಶ್ನಿಸಿದರು. ನಂತರ ಪಾಕಿಸ್ತಾನವನ್ನು ಉಲ್ಲೇಖಿಸುತ್ತಾ, ‘ಅಲ್ಪಸಂಖ್ಯಾತರ ಧರ್ಮ ಪರಿವರ್ತಿಸುತ್ತಿದ್ದಾರೆ, ಅವರು ದೇಶ ಬಿಟ್ಟು ಓಡಿ ಹೋಗುತ್ತಿದ್ದಾರೆ, ಭಾರತಕ್ಕೆ ವಲಸೆ ಬರುತ್ತಿದ್ದಾರೆ ಇಲ್ಲವೆ ಅವರನ್ನು ಕೊಲ್ಲಲಾಗುತ್ತಿದೆ’ ಎಂದು ಹೇಳಿ   ಪಾಕಿಸ್ತಾನದ ಮೊದಲ ಜನಗಣತಿಯ ಅಂಕಿ ಅಂಶಗಳನ್ನು ಕೊಟ್ಟರು. ನಂತರ ಪೂರ್ವ ಪಾಕಿಸ್ತಾನ, ಬಾಂಗ್ಲಾದೇಶವಾಗಿದ್ದು ಮತ್ತು 1971ರ ಅಂಕಿ ಅಂಶಗಳನ್ನು, ಆ ಸಮಯದ ಗಣತಿಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲ.

ಈ ಮೂರು ದೇಶಗಳನ್ನು ಹೊರತು ಪಡಿಸಿ ಉಳಿದ ದೇಶಗಳಿಂದ ಬಂದ ಅಕ್ರಮ ವಲಸಿಗರಿಗೆ ದೀರ್ಘಾವಧಿ ವೀಸಾಗಳನ್ನು ಹೊಂದಲು 2011ರಲ್ಲಿ ರೂಪಿಸಿದ ಕಾರ್ಯ ವಿಧಾನಗಳಿವೆ ಎಂದು ಸಮರ್ಥಿಸಿಕೊಂಡರು.

ರಾಜ್ಯಸಭೆಯಲ್ಲಿ ಅಸ್ಸಾಂನ ವಿಪುನ್ ಬೋರಾರವರು ಎತ್ತಿದ ಕೆಲವು ಪ್ರಶ್ನೆಗಳಿಗೆ ಸರ್ಕಾರ ನೀಡಿದ ಉತ್ತರಗಳು ಈ ಕೆಳಗಿನಂತಿವೆ:

ಧಾರ್ಮಿಕ ಕಿರುಕುಳದ ಸಲುವಾಗಿ ದೇಶಕ್ಕೆ ವಲಸೆ ಬಂದವರ ಬಗ್ಗೆ ಸರ್ಕಾರದ ಬಳಿ ಯಾವುದೆ ದಾಖಲೆಗಳಿಲ್ಲ.

1947ರ ನಂತರ ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನ, 1971ರ ನಂತರ ಬಾಂಗ್ಲಾದೇಶಗಳಿಂದ ಧಾರ್ಮಿಕ ಕಿರುಕುಳಗಳಿಗಾಗಿ ವಲಸೆ ಬಂದವರ ಬಗ್ಗೆಯೂ ಸರ್ಕಾರದ ಬಳಿ 2016ರ ಹೇಳಿಕೆಯ ಪ್ರಕಾರ ಯಾವುದೆ ಅಧಿಕೃತ  ದಾಖಲೆಗಳಿಲ್ಲ.

2016ರಲ್ಲಿ ಮೊದಲು ಈ ಮಸೂದೆ ಮಂಡನೆಯಾದಾಗ, ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತಾ ಆಗಿನ ಗೃಹ ಮಂತ್ರಿಗಳಾದ ರಾಜನಾಥ್ ಸಿಂಗರು, 31ರ ಡಿಸೆಂಬರ್ 2014ರವರೆಗೂ ಪಾಕಿಸ್ತಾನ ಮತ್ತು ಬಾಂಗ್ಲದೇಶಗಳಿಂದ ಧಾರ್ಮಿಕ ಕಿರುಕುಳಕ್ಕೊಳಗಾಗಿ ದೇಶದೊಳಗೆ ಬಂದ ಹಿಂದೂ ವಲಸಿಗರ ಸಂಖ್ಯೆಯ ಬಗ್ಗೆಯೂ ಸರ್ಕಾರದ ಬಳಿ ಯಾವುದೆ ದಾಖಲೆಗಳಿಲ್ಲ ಎಂದು ಹೇಳಿದ್ದಾರೆ.

2019, ಡಿಸೆಂಬರ್ 11ರಂದು ರಾಜ್ಯಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಗುಪ್ತಚರ ಇಲಾಖೆಯ ಮಾಹಿತಿಯಂತೆ ಧಾರ್ಮಿಕ ಕಾರಣಗಳಿಗಾಗಿ ಭಾರತಕ್ಕೆ ವಲಸೆಬಂದ ಮತ್ತು ಭಾರತೀಯ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿರುವ ನಿರಾಶ್ರಿತರ ಒಟ್ಟು ಸಂಖ್ಯೆ – 4044

ಆಫ್ಘಾನಿಸ್ತಾನ – 687

ಬಾಂಗ್ಲಾದೇಶ – 84

ಪಾಕಿಸ್ತಾನ – 2508

ಯಾವ ಧರ್ಮದ ಎಷ್ಟು ಜನ ಅರ್ಜಿ ಸಲ್ಲಿಸಿದ್ದಾರೆ ಎಂಬ ಧರ್ಮಾಧಾರಿತ ಅಂಕಿ ಅಂಶಗಳ ಬಗ್ಗೆ ಸರ್ಕಾರದ ಬಳಿ ದಾಖಲೆ ಇಲ್ಲ.

ಹಾಗಿದ್ದರೆ ಈ ಕಾಯ್ದೆಯ ನಿಜವಾದ ಫಲಾನುಭವಿಗಳ ಸಂಖ್ಯೆ ಎಷ್ಟು? 31,313 ಅಥವಾ ಕೇವಲ 4044? ಮತ್ತು ಯಾವ ಆಧಾರದ ಮೇಲೆ ಅಮಿತ್ ಶಾ ದೇಶದಲ್ಲಿ ಕೊಟ್ಯಂತರ ಫಲಾನುಭವಿಗಳಿದ್ದಾರೆ ಎಂದು ಹೇಳಿದರು? ನಾವು ಏನನ್ನಾದರೂ ಮರೆಯುತ್ತದ್ದೇವೆಯೆ ಅಥವಾ ಸರ್ಕಾರ ನಮ್ಮ ಬಳಿ ಏನನ್ನಾದರೂ ಮುಚ್ಚಿಡುತ್ತಿದೆಯೆ? 

ಹಾಗೆ ನೋಡುವುದಾದರೆ ಪೌರತ್ವ ತಿದ್ದುಪಡಿ ಮಸೂದೆಯನ್ನು ಮೊದಲು 2016ರಲ್ಲಿ ಮಂಡಿಸಲಾಗಿತ್ತು. ಲೋಕಸಭೆಯಲ್ಲಿ ಒಪ್ಪಿತವಾಗಿ, ರಾಜ್ಯಸಭೆಯಲ್ಲಿ ಮಸೂದೆಗೆ ಸೋಲಾಯ್ತು ಮತ್ತು ಪುನರ್ಪರಿಶೀಲನೆಗೆ ಅದನ್ನು ಜಂಟಿ ಸಂಸದೀಯ ಸಮಿತಿಗೆ ಕಳಿಸಲಾಯ್ತು.

2016ರಲ್ಲಿ, ಜಂಟಿ ಸಂಸದೀಯ ಸಮಿತಿಯ ಮುಂದೆ ಈ ಕೆಳಗಿನ ಅಂಶಗಳು ಹೊರಬಂದವು – 

1) ಗುಪ್ತಚರ ಇಲಾಖೆಯ ಪ್ರಕಾರ ಸರ್ಕಾರಕ್ಕೆ ಮತ್ತು ಅದರ ಯಾವುದೆ ಇಲಾಖೆಗೆ ಯಾರ್ಯಾರು ಅಫ್ಘಾನಿಸ್ತಾನ, ಬಂಗ್ಲಾದೇಶ ಮತ್ತು ಪಾಕಿಸ್ತಾನಗಳಿಂದ ಧಾರ್ಮಿಕ ಕಾರಣಗಳಿಗಾಗಿ ವಲಸೆ ಬಂದಿದ್ದಾರೆ ಎಂಬ ಬಗ್ಗೆ ಪತ್ತೆ ಹಚ್ಚುವುದು ಸಾಧ್ಯವಿಲ್ಲ.

2) ಯಾರು ಈಗಾಗಲೆ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದಾರೋ ಅಥವಾ ಸಲ್ಲಿಸುತ್ತಾರೋ ಅವರು, ತಾವು ಮೇಲ್ಕಂಡ ದೇಶಗಳಿಂದ ಬಂದವರೆಂದು ದಾಖಲೆಗಳನ್ನು ಒದಗಿಸಿದರೂ ಫಾರಿನ್ ರೀಜನಲ್ ಲೆಜಿಸ್ಲೇಷನ್ ಆಫೀಸಿನಿಂದ ತನಿಖೆಯಾಗಿ ದೃಢಪಡಬೇಕು. ಇದು ಅನಿಶ್ಚಿತ ಕಾಲಾವದಿಯವರೆಗೂ ಮುಂದುವರೆಯುವ ಪ್ರಕ್ರಿಯೆ.

3) ಅಕಸ್ಮಾತ್ ಅವರು ಯಾವುದೆ ದಾಖಲೆಗಳನ್ನು ಒದಗಿಸಲು ಅಸಮರ್ಥರಾದರೆ ಅವರನ್ನು ಅಕ್ರಮ ವಲಸಿಗರು ಎಂದು ಘೋಷಿಸಿ, ವಿದೇಶೀಯ ನ್ಯಾಯಾಧಿಕರಣಕ್ಕೆ ಅವರ ಕೇಸುಗಳನ್ನು ಕಳಿಸಲಾಗುತ್ತದೆ. ಅಲ್ಲಿ ಪ್ರತಿ ನ್ಯಾಯ ವಿಚಾರಣೆಗೂ ಹಾಜರಾಗುವುದು, ದಾಖಲೆಗಳಿಗೆ ಒಬ್ಬ ಅಧಿಕಾರಿಯ ಬಳಿಯಿಂದ ಮತ್ತೊಬ್ಬ ಅಧಿಕಾರಿಯ ಬಳಿಗೆ ಓಡುವುದು ಸಾಮಾನ್ಯವಾಗಲಿದೆ. ಅವುಗಳನ್ನು ಎದುರಿಸುವ ಶಕ್ತಿ ಮತ್ತು ಸಂಪನ್ಮೂಲ ಸಾಮನ್ಯರಿಗೆ ಸಾಧ್ಯವೆ ಎಂಬುದು ಇಲ್ಲಿಯ ಪ್ರಶ್ನೆ.

4) ಈ ಕಾಯ್ದೆಯ ನಡಾವಳಿಗಳ ಪ್ರಕಾರವೆ ಪಾಕಿಸ್ತಾನ, ಅಫ್ಗಾನಿಸ್ತಾನ ಮತ್ತು ಬಾಂಗ್ಲಾದೇಶಗಳಿಂದ ಜನರನ್ನು ನುಸುಳುವಂತೆ ಮಾಡಿ ದೇಶದ ಭದ್ರತೆಗೆ ಧಕ್ಕೆ ತರುವ ಎಲ್ಲಾ ಸಾಧ್ಯತೆಗಳೂ ಇವೆ ಎಂದು ಜಂಟಿ ಕಾನೂನು ಕಾರ್ಯದರ್ಶಿ (RAW) ಗಳು ಸಮಿತಿಯ ಮುಂದೆ ಅಭಿಪ್ರಾಯಪಟ್ಟಿದ್ದಾರೆ.

ಬೇರೆ ದೇಶಗಳಿಂದ ಕಿರುಕುಳಕ್ಕೆ ಒಳಗಾಗಿ ದೇಶಕ್ಕೆ ವಲಸೆ ಬಂದವರು ಎಂದ ಮೇಲೆ, ‘ಧಾರ್ಮಿಕ ಕಾರಣ’ಗಳಿಗಾಗಿಯೆ ಎಂದು ಉಲ್ಲೇಖಿಸುವ ಅಗತ್ಯವೇನಿತ್ತು? ಇಸ್ಲಾಮಿಕ್ ದೇಶಗಳಾದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅ‍ಫ್ಘಾನಿಸ್ತಾನಗಳನ್ನು ಗುರಿಯಾಗಿಸಿಕೊಳ್ಳುವ ಅಗತ್ಯವಿತ್ತೆ? ಎಂಬ ಪ್ರಶ್ನೆಗಳಿಗೆ ಬಿಜೆಪಿ ಮತ್ತು ಅದರ ರಾಜಕೀಯಗಳು ಉತ್ತರ ಬಿಟ್ಟುಕೊಡುತ್ತವೆ. ಭಾರತವನ್ನು ಹಿಂದೂ ಧರ್ಮಾಧಾರಿತ ದೇಶವಾಗಿ ಕಟ್ಟಲು ಮತ್ತು ಆರೆಸ್ಸೆಸ್ಸನ್ನು ಓಲೈಸುವ ಕಾರಣಕ್ಕಾಗಿ ಈ ಮಸೂದೆಗಳನ್ನು ಮಂಡಿಸಿ ಮುಸಲ್ಮಾನರನ್ನು ಗುರಿಯಾಗಿಸಲಾಗುತ್ತಿದೆ ಎಂಬ ಆರೋಪಗಳಿವೆ.

ಈ ಮಸೂದೆಯನ್ನು ಸಮರ್ಥಿಸುವ ಪ್ರಯತ್ನ ಮಾಡಿದ  ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ರಾಮ್ ಮಾಧವ್, 1950 ರ ಪೌರತ್ವ ಕಾಯ್ದೆಗೂ ಈ ಕಾಯ್ದೆಗೂ ಸಾಮ್ಯತೆಯಿದೆ. ಆಗ ತಯಾರಿಸಿದ ನಾಗರೀಕರ ದಾಖಲೆ ಪುಸ್ತಕದಂತೆಯೆ ಈಗಲೂ ತಯಾರಿಸಲಾಗುತ್ತದೆ ಎಂದು ಹೇಳಿದರು.

ಅದರೆ ಆ ಪೌರತ್ವ ಕಾಯ್ದೆಯಲ್ಲಿ ಧರ್ಮ ಎಂಬ ಉಲ್ಲೇಖವೇ ಇರಲಿಲ್ಲ. ‘1950ರ ಕಾಯ್ದೆಯು ದೇಶದ ಸಂವಿಧಾನವನ್ನು, ಜಾತ್ಯಾತೀತ ಸ್ವಭಾವವನ್ನು ಉಲ್ಲಂಘಿಸಿಲ್ಲ. ಅಕ್ರಮ ವಲಸಿಗರೆಲ್ಲರನ್ನೂ ಹೊರ ಹಾಕಲಾಗಿದೆ.’ ಎಂಬುದು ಆಗ ಬಿಹಾರದಿಂದ ಸಂಸತ್ ಸದಸ್ಯರಾಗಿದ್ದ ತಜಾಮುಲ್ ಹುಸೈನ್ ರ ಅಭಿಪ್ರಾಯ. ಇದು ‘ದ ಹಿಂದೂ’ ಪತ್ರಿಕೆಯಲ್ಲಿ ದಾಖಲಾಗಿದೆ.

ಇನ್ನು ಅಸ್ಸಾಂನಲ್ಲಿ ಮತ್ತು ಉಳಿದ ಈಶಾನ್ಯ ರಾಜ್ಯಗಳಲ್ಲಿ ಪ್ರಾರಂಭವಾಗಿರುವ ಉಗ್ರ ಪ್ರತಿಭಟನೆಗಳನ್ನು ಅರ್ಥ ಮಾಡಿಕೊಳ್ಳಲು ಅಸ್ಸಾಂ ಅಕಾರ್ಡ್ ಅಥವಾ ಹೊಂದಾಣಿಕೆಯನ್ನು ಅರ್ಥ ಮಾಡಿಕೊಳ್ಳಬೇಕು. 1979ರಿಂದ – 1985ರವರೆ ಅಸ್ಸಾಂನಲ್ಲಿ ಸಾಂಸ್ಕೃತಿಕ, ಸಾಮಾಜಿಕ ಮತ್ತು ರಾಜಕೀಯ ವೈಶಿಷ್ಟ್ಯಗಳನ್ನು ಕಾಪಾಡಿಕೊಳ್ಳುವ ಕಾರಣಕ್ಕಾಗಿ ಅಸ್ಸಾಂ ಆಂದೋಲನ ನಡೆಯುತ್ತದೆ. ಆಗಸ್ಟ್ 15, 1985ರಲ್ಲಿ ಇದಕ್ಕೊಂದು ತಾರ್ಕಿಕ ಅಂತ್ಯ ಕೊಡುವ ಸಲುವಾಗಿ ಅಸ್ಸಾಂ ಅಕಾರ್ಡ್ ಗೆ ಕೇಂದ್ರ ಸರ್ಕಾರ ಮತ್ತು ಅಸ್ಸಾಂ ವಿದ್ಯಾರ್ಥಿ ಯೂನಿಯನ್ ಮತ್ತು ಅಸ್ಸಾಂ ಗಣ ಸಂಗ್ರಾಮ ಪರಿಷತ್ತುಗಳು ಸಹಿ ಹಾಕುತ್ತವೆ. ಅದರ ಪ್ರಕಾರ, 25 ಮಾರ್ಚ್, 1971ಕ್ಕೂ ಮುಂಚೆ ಅಸ್ಸಾಂ ಅನ್ನು ಪ್ರವೇಶಿಸಿದ ವಲಸಿಗರಿಗೆ ಕೆಲವು ನಿಬಂಧನೆಗಳ ಆಧಾರದ ಮೇಲೆ ಪೌರತ್ವವನ್ನು ಕೊಡುವ ಒಪ್ಪಂದವೇರ್ಪಟ್ಟಿದೆ.

1) 2019ರ ಪೌರತ್ವ ಕಾಯ್ದೆಯ ಪ್ರಕಾರ ಮಾನ್ಯಮಾಡುವ ಇಸವಿಯನ್ನು 1971, ಮಾರ್ಚ್ 25ರಿಂದ 2014, ಡಿಸೆಂಬರ್ 31ಕ್ಕೆ ಬದಲಾಯಿಸಲಾಗಿದೆ.

ಅಧಿನಿಯಮ 5ರ ಪ್ರಕಾರ 31.12.1965ಕ್ಕೂ ಮುಂಚೆ ಅಸ್ಸಾಂಗೆ ವಲಸೆ ಬಂದ ಎಲ್ಲರಿಗೂ ತಕ್ಷಣವೆ ಪೌರತ್ವ ನೀಡುವುದು, ಅವರನ್ನು ಮತದಾರರ ಪಟ್ಟಿಗೆ ಸೇರಿಸುವುದು.

1.1.1966 ರಿಂದ 24 ಮಾರ್ಚ್ 1971(ಬಾಂಗ್ಲಾ ದೇಶದ ಉದಯ) ರವರೆಗೆ ಒಳ ಬಂದ ನಿರ್ಗತಿಕರಿಗೆ ಕೆಲವು ನಿಬಂದನೆಗಳೊಂದಿಗೆ ಒಳ ಕರೆದುಕೊಳ್ಳುವುದು ಮತ್ತು ಅವರು ದೇಶದಲ್ಲಿ 10 ವರ್ಷಕ್ಕಿಂತ ಹೆಚ್ಚು ವರ್ಷಗಳವರೆಗೆ ವಾಸವಿದ್ದರೆ ಅವರಿಗೂ ಪೌರತ್ವ ಕೊಡುವುದು ಮತ್ತುಳಿದ ಎಲ್ಲರನ್ನೂ ಪ್ರಾಯೋಗಿಕ ಮಾರ್ಗಗಳ ಮೂಲಕ ಗಡಿಪಾರು ಮಾಡುವುದು.

2) ಅಧಿನಿಯಮ 6ರ ಪ್ರಕಾರ, ಅಸ್ಸಾಮಿನ ಸಾಂಸ್ಕೃತಿಕ, ಸಾಮಾಜಿಕ, ಭಾಷಾ ಅನನ್ಯತೆ ಮತ್ತು ಪರಂಪರೆಯನ್ನು ರಕ್ಷಿಸುವ, ಉಳಿಸುವ ಮತ್ತು ಪ್ರಚಾರ ಮಾಡುವ ಸಲುವಾಗಿ ಕೇಂದ್ರ ಸರ್ಕಾರ ಕಾನೂನಾತ್ಮ, ಅಧಿಕಾರಾತ್ಮಕ ಮತ್ತು ಆಡಳಿತಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು.

ಈ  ಎರಡೂ ಅಧಿನಿಯಮಗಳನ್ನು ಹೊಸ ಪೌರತ್ವ ಕಾಯ್ದೆ ಉಲ್ಲಂಘಿಸಿದೆ ಎಂಬುದು ಅಸ್ಸಾಮಿಗಳ ಆಂಬೋಣ.

ಉಳಿದ ಈಶಾನ್ಯ ರಾಜ್ಯಗಳ ಕತೆಯೂ ಇದಕ್ಕಿಂತ ಭಿನ್ನವಿಲ್ಲ. ಅವುಗಳ ವೈಶಿಷ್ಟ್ಯವನ್ನು ಕಾಪಾಡಿಕೊಳ್ಳುವ ಸಲುವಾಗಿ ಅವರಿಗೆ ವಿಶೇಷ ಅಧಿಕಾರ ಮತ್ತು ಸವಲತ್ತುಗಳನ್ನು, ಆರ್ಟಿಕಲ್ 371ರಂತಹ ವಿಶಿಷ್ಟ ಕಾನೂನಾತ್ಮಕ ಅಧಿಕಾರಗಳನ್ನು ಕೊಡಲಾಗಿದೆ. ಸದ್ಯದ ಮಸೂದೆ ಅವುಗಳಿಗೆ ಸಂಚಕಾರ ತರಬಹುದು ಎಂಬ ಆತಂಕಗಳನ್ನು ವ್ಯಕ್ತಪಡಿಸಿದ ಕಾರಣವಾಗಿ, ಈ ಮಸೂದೆಯಿಂದ ಈಶಾನ್ಯ ರಾಜ್ಯಗಳನ್ನು ಹೊರಗಿಡಲಾಯ್ತು.

ಸದ್ಯಕ್ಕೆ ಈ ಮಸೂದೆಗೆ ರಾಷ್ಟ್ರಪತಿಗಳ ಅಂಕಿತ ಸಿಕ್ಕಿರುವುದರಿಂದ ಇದು ಕಾನೂನಾಗಿದೆ ಮತ್ತು ಸುಪ್ರೀಮ್ ಕೋರ್ಟ್ ನಲ್ಲಿ ಇದರ ವಿರುದ್ಧ ಮನವಿಗಳು ಸಲ್ಲಿಕೆಯಾಗಿರುವುದರಿಂದು, ಇದರ ಕಾನೂನು ಬದ್ಧತೆ ಮತ್ತು ನಿಜಕ್ಕೂ ತಾರತಮ್ಯ ಇದೆಯಾ ಎಂಬ ಬಗ್ಗೆ ನ್ಯಾಯಾಲಯವೆ ತೀರ್ಮಾನಿಸಬೇಕು.

ಈ ಮಸೂದೆಯ ಬಗ್ಗೆ ಭಾರತೀಯ ಮುಸಲ್ಮಾನರು ಭಯಗೊಂಡಿರಲು ಕಾರಣವೇನು? ಅವರ ಆತಂಕಗಳು ಮತ್ತು ಜಾತ್ಯಾತೀತ ಕಲ್ಪನೆಯ ಮೇಲೆ ನಂಬಿಕೆ ಇಟ್ಟುಕೊಂಡಿರುವ ಭಾರತೀಯ ಪ್ರಜೆಗಳ ಆತಂಕಗಳು ಸಹಜವೆ? ಅವರ ಪ್ರತಿಭಟನೆಗಳು ಸಮರ್ಥನೀಯವೆ?

ಮುಸಲ್ಮಾನರ ಆತಂಕಗಳು ಸಹಜವೆ ಆಗಿವೆ. ಅದಕ್ಕೆ ಕಾರಣ, ಮುಸಲ್ಮಾನರನ್ನು ಹೊರಗಿಟ್ಟು ಒಂದು ಮಸೂದೆಯನ್ನು ರೂಪಿಸಬಹುದಾದರೆ ಇದರಂತೆಯೆ ಇನ್ನಷ್ಟು ಮಸೂದೆಗಳನ್ನು ರೂಪಿಸಬಹುದು. ಅವರು ಮತ್ತು ಜಾತ್ಯಾತೀತ ತತ್ವಗಳ ಮೇಲೆ ನಂಬಿಕೆ ಇಟ್ಟವರ ಆತಂಕಕ್ಕೆ ಮತ್ತೊಂದು ಕಾರಣವಿದೆ. ಗೃಹ ಸಚಿವರಾದ ಅಮಿತ್ ಶಾರ, ದೇಶಾದ್ಯಂತ ರಾಷ್ಟ್ರೀಯ ನಾಗರಿಕಾ ನೋಂದಣಿ (National Register of Citizens (NRC)) ಯನ್ನು ಕಾರ್ಯಗತ ಮಾಡಲಾಗುವುದು ಎಂಬ ಮಾತು. ಅದರ ಕರಡು ಯೋಜನೆಯಂತಹ ಯೋಜನೆ ಅಸ್ಸಾಂನಲ್ಲಿ ಕಾರ್ಯಗತವಾಗಿತ್ತು. ಅದರ ಉದಾಹರಣೆಯನ್ನು ತೆಗೆದುಕೊಂಡು NRCಯನ್ನು ಅರ್ಥ ಮಾಡಿಕೊಳ್ಳಬಹುದು.

ಹೀಗೆ NRCಯು ಮಾನವ ನೌಕರರು ಸಂಗ್ರಹಿಸು ದತ್ತಾಂಶ ದಾಖಲೆಗಳ ಮೇಲೆ ನಿರ್ಧಾರವಾಗುವ ಕಾರಣದಿಂದ ತಪ್ಪುಗಳಾಗುವುದು ಸಹಜ. ಅಂತಹ ಸಣ್ಣ ಸಣ್ಣ ತಪ್ಪುಗಳ ಕಾರಣವಾಗಿ ಅಸ್ಸಾಂನಲ್ಲಿ ಹೆಚ್ಚಿನ ಜನ ನಾಗರಿಕ ನೋಂದಣಿಯಿಂದ ಹೊರಗುಳಿದರು. ಹೀಗೆ ಅಸ್ಸಾಂ ಒಂದರಲ್ಲೆ 19.6 ಲಕ್ಷ ಮಂದಿ NRCಯಿಂದ ಹೊರಗುಳಿದಿದ್ದಾರೆ. ಅವರು NRCಯ ಪೂರ್ಣ ಪ್ರಕ್ರಿಯೆಯಲ್ಲಿ ತಮ್ಮನ್ನು ತಾವು ಭಾರತೀಯರು ಎಂದೇ ದಾಖಲೆಗಳನ್ನು ಒದಗಿಸಿ ವಾದಿಸುತ್ತಾ ಬಂದಿದ್ದಾರೆ.

ಈಗ ಪೌರತ್ವ ತಿದ್ದುಪಡಿ ಕಾಯ್ದೆಯೊಂದಿಗೆ, ರಾಷ್ಟ್ರೀಯ ನಾಗರೀಕ ನೋಂದಣಿಯನ್ನೂ ಕಾರ್ಯಗತ ಮಾಡುತ್ತಾರೆ ಎಂದುಕೊಂಡರೆ, ನೋಂದಣಿಯಲ್ಲಿ ದತ್ತ ನಮೂದಕ ಮತ್ತು ದಾಖಲೆಗಳಲ್ಲಿನ ತಾಂತ್ರಿಕ ದೋಷಗಳಿಂದ ಲಕ್ಷಾಂತರ ಜನರು ಹೊರಗುಳಿಯುವಂತಾದರೆ, ಪೌರತ್ವ ತಿದ್ದುಪಡಿಯ ಮೂಲಕ ಹಿಂದೂ, ಜೈನ, ಪಾರ್ಸಿ, ಬೌದ್ಧ, ಸಿಖ್ ಮತ್ತು ಕ್ರಿಶ್ಚಿಯನ್ನರು ತಾವು ಮೇಲ್ಕಾಣಿಸಿದ ದೇಶಗಳಿಂದ ಬಂದವರು ಎಂದು ವಾದಿಸಿ, ದಾಖಲೆಗಳನ್ನು ಸಲ್ಲಿಸಿ ಪೌರತ್ವ ಪಡೆಯಲು ಪ್ರಯತ್ನಿಸಬಹುದು. ಆದರೆ ಮುಸಲ್ಮಾನರು, ಮೇಲ್ಕಂಡ 3 ದೇಶಗಳ ಹೊರತಾಗಿ ಉಳಿದ ದೇಶಗಳಿಂದ ಬಂದ ವಲಸಿಗರು, ಯಹೂದಿಗಳು ಮತ್ತು ನಾಸ್ತಿಕರ ಮುಂದಿರುವ ಆಯ್ಕೆಗಳು ಏನು? ಎಂಬುದು ಅವರ ಆತಂಕಕ್ಕೆ ಕಾರಣವಾಗಿದೆ. ಈಗಾಗಲೆ ಅಸ್ಸಾಂನಲ್ಲಿ ಸೆರೆಸಿಕ್ಕವರ ಶಿಬಿರ(Detention Camp)ಗಳು ತಲೆ ಎತ್ತಿವೆ. ಇವುಗಳೆ ಅವರ ಮುಂದಿನ ಆಯ್ಕೆಯೆ? ಹಾಗಾದರೆ ಗೃಹಮಂತ್ರಿಗಳು ಹೇಳಿದ ಕೊಟ್ಯಂತರ ಮಂದಿ ಫಲಾನುಭವಿಗಳು ಹೀಗೆ ಉದ್ಭವಿಸುತ್ತಾರೆಯೆ?

ಅಸ್ಸಾಂನಲ್ಲಿ NRC ಯನ್ನು ಕಾರ್ಯರೂಪಕ್ಕೆ ತರಲು 1,200 ಕೋಟಿಗಳು, 50,000 ನೌಕರರು ಸತತ ನಾಲ್ಕು ವರ್ಷಗಳ ಶ್ರಮವನ್ನು 3.3 ಕೋಟಿ ಜನರ ಮೇಲೆ ವ್ಯಯಿಸಲಾಗಿದೆ. ಹಾಗಾದರೆ ದೇಶದ 87.9 ಕೋಟಿ ಮತದಾರರ NRC ಯನ್ನು ಜಾರಿಗೆ ತರಲು ಕೋಟ್ಯಂತರ ನೌಕರರು, ವರ್ಷಗಟ್ಟಲೆ ಶ್ರಮ ಮತ್ತು ಲಕ್ಷ ಕೋಟಿಗಳಷ್ಟು ಅಂದಾಜು ವೆಚ್ಚವಾಗಬಹುದು. ಇದನ್ನು ಭರಿಸುವವರು ಯಾರು? ಇದಕ್ಕೆ ಹಣ ಎಲ್ಲಿಂದ ಬರುತ್ತದೆ? ಎಲ್ಲಾ ನೌಕರರನ್ನೂ ಇದೇ ಕೆಲಸಕ್ಕೆ ಹಚ್ಚಿದರೆ ಉಳಿದ ಆಡಳಿತ, ಕಾನೂನಾತ್ಮಕ ಮತ್ತು ಶಾಸನದ ಕೆಲಸಗಳನ್ನು ಯಾರು ಮಾಡುತ್ತಾರೆ? ಇದರಿಂದ ದೇಶದ ಅಭಿವೃದ್ಧಿ, ಆರ್ಥಿಕ ವ್ಯವಸ್ಥೆಗಳ ಮೇಲೆ ಆಗುವ ಪರಿಣಾಮಗಳೇನು?

ಈ ಕಾಯ್ದೆಯೊಂದಿಗೆ ಉರುಳುತ್ತಿರುವ ಎರೆಡು ರಾಜಕೀಯ ದಾಳಗಳ ಬಗ್ಗೆ ವಿರೋಧ ಪಕ್ಷಗಳು ಮಾತನಾಡಿವೆ:

1) ನಮ್ಮ ದೇಶದ ಪ್ರಜೆಗಳನ್ನೆ ಪೌರತ್ವರಹಿತವಾಗಿಸುವುದು ಮತ್ತು ಈ ಮಸೂದೆಯಿಂದಾಗಿ ಅವರಿಗೆ ಪೌರತ್ವ ಕೊಡುತ್ತಿದ್ದೇವೆ ಎಂದು ಹೇಳುವ ಮೂಲಕ ಹಿಂದೂ ಭಾವನೆಯನ್ನು ರೂಪಿಸುವುದು.

2) ಮುಸಲ್ಮಾನರಿಗೆ, ಅಕಸ್ಮಾತ್ ನಾಗರಿಕ ನೋಂದಣಿ ಮತ್ತು ಪೌರತ್ವ ಕಾಯ್ದೆಗಳ ಸಂಯೋಜನೆಯಲ್ಲಿ ಪೌರತ್ವ ಕಳೆದುಕೊಂಡರೆ ಎಂಬ ಭಯವನ್ನು ಜೀವಂತವಾಗಿಸಿ, ಅದರಿಂದ ರಾಜಕೀಯ ಅಭಿಪ್ರಾಯಗಳನ್ನು ಮೂಡಿಸುವುದು.

ಈ ಕಾರಣಗಳಿಗಾಗಿಯೆ ಈ ಮಸೂದೆ ಐತಿಹಾಸಿಕ ಮಹತ್ವ ಪಡೆದುಕೊಳ್ಳುತ್ತದೆ. ಈ ಮಸೂದೆಗೆ ವಿರುದ್ಧವಾಗಿ ನಡೆಯುತ್ತಿರುವ ಪ್ರತಿಭಟನೆಗಳೂ ಮಹತ್ವ ಪಡೆದುಕೊಳ್ಳುತ್ತವೆ.

ಪ್ರತಿಕ್ರಿಯಿಸಿ