ಗಾಂಧಿ ಕುಲುಮೆ : ಗಾಂಧಿ ರಾಮರಾಜ್ಯದಲ್ಲಿ ರಾಮನನ್ನು ಹುಡುಕುತ್ತಾ..

ಗಾಂಧಿ 150 ಜನ್ಮಶತಾಬ್ಧಿಯ ಈ ಸಂದರ್ಭದಲ್ಲಿ ಅವರ ಪ್ರಭುತ್ವದ ಪರಿಕಲ್ಪನೆ , ನಾಗರಿಕ ರಾಷ್ಟ್ರೀಯತೆ ಮತ್ತು ರಾಮರಾಜ್ಯದ, ಸ್ವರಾಜ್ಯದ ಕಲ್ಪನೆಗಳನ್ನು ಒಟ್ಟಿಗೆ ಇಟ್ಟು ಅದನ್ನು ಆಧುನಿಕ ಜಾತ್ಯಾತೀತ ಪ್ರಜಾಪ್ರಭುತ್ವದ ರಾಷ್ಟ್ರ ಕಲ್ಪನೆಯೊಂದಿಗೆ ನೋಡುವ ಪ್ರಯತ್ನ ಈ ಬರಹದಲ್ಲಿದೆ .

ಕೆಲವು ದಿನಗಳ ಹಿಂದೆ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರು ಗಾಂಧಿ ರಾಮರಾಜ್ಯದ ಕನಸ್ಸು ಕಂಡಿದ್ದರು ಅದನ್ನು ಇಂದಿನ ಕೇಂದ್ರ ಸರ್ಕಾರ ನನಸು ಮಾಡುತ್ತಿದೆ ಎಂಬ ಹೇಳಿಕೆಯನ್ನು ನೀಡಿದ್ದರು. (ಗಾಂಧೀಜಿ ಹೇಳಿದ್ದು ರಾಮರಾಜ್ಯ, ಜಾತ್ಯಾತೀತ ರಾಷ್ಟ್ರವನ್ನಲ್ಲ ಎಂದು ನಳಿನ್ ಕುಮಾರ್ ಕಟೀಲ್ ಅವರು ಹೇಳಿಕೆ ಡೆಕ್ಕನ್ ನ್ಯೂಸ್ ನ ಒಂದು ವರದಿಯಲ್ಲಿ ಪ್ರಕಟವಾಗಿತ್ತು 16.09.19). ಪ್ರಜಾವಾಣಿಯಲ್ಲಿ ಅರವಿಂದ ಚೊಕ್ಕಾಡಿಯವರು ತಮ್ಮ ಲೇಖನದಲ್ಲಿ (ಪ್ರ.ವಾ 16:10:19) ಗಾಂಧಿ ರಾಮರಾಜ್ಯದ ಬಗ್ಗೆ ಬಹಳ ಚುಟುಕಾಗಿ ಪ್ರಸ್ತಾಪಿಸಿ ಅದು ಆದರ್ಶಾತ್ಮಕ ರಾಜ್ಯವಾಗಿತ್ತು ಎಂದಿದ್ದಾರೆ. ಗಾಂಧಿ ರಾಮರಾಜ್ಯದ ರಾಮ ದೈವ ಕಲ್ಪನೆಯ ರಾಮನಲ್ಲ ಎಂಬ ಅಭಿಮತವನ್ನು ವ್ಯಕ್ತಪಡಿಸಿದ್ದಾರಾದರೂ, ಆ ರಾಮರಾಜ್ಯದ ಸ್ವರೂಪ ಏನಾಗಿತ್ತು ಎಂಬುದರ ಬಗ್ಗೆ ಬಳಸಿರುವ ‘ಆದರ್ಶಾತ್ಮಕ’ ವಿಶೇಷಣ ಅಷ್ಟು ಸ್ಪಷ್ಟತೆಯನ್ನು ನೀಡುವುದಿಲ್ಲ. ಪ್ರಭುತ್ವದ (ಸ್ಟೇಟ್) ಕಲ್ಪನೆಯ ಬಗ್ಗೆ ಗಾಂಧಿ ಚಿಂತನೆಯನ್ನು ಅಭ್ಯಾಸ ಮಾಡುತ್ತಾ ಹೋದಂತೆ ಗಾಂಧಿ ಕಲ್ಪನೆಯ ರಾಮರಾಜ್ಯ ಮತ್ತು ಸ್ವರಾಜ್ಯಗಳು, ಆಧುನಿಕ ಜಾತ್ಯಾತೀತ ಪ್ರಜಾಪ್ರಭುತ್ವ ರಾಷ್ಟ್ರದ (ಮಾಡರ್ನ್ ಸೆಕ್ಯುಲರ್ ಡೆಮಾಕ್ರಟಿಕ್ ಸ್ಟೇಟ್) ಚಿಂತನೆಗಳಿಗೆ ಬಹಳ ಹತ್ತಿರವಾಗಿದ್ದವು ಎಂಬುದು ಮನವರಿಕೆಯಾಗುತ್ತದೆ.

ಆದರ್ಶಾತ್ಮಕ ಎಂಬ ಕನ್ನಡ ಪದವನ್ನು ಇಂಗ್ಲಿಷಿನ ಯುಟೋಪಿಯನ್ ಅಥವಾ ಐಡಿಯಲ್ ಎಂಬುದಕ್ಕೆ ಸಂವಾದಿಯಾಗಿ ಬಳಸಲಾಗುತ್ತದೆ. ಇವತ್ತು ವಿಶ್ವವದಾದ್ಯಂತ ಪ್ರಭುತ್ವಗಳು ತಮ್ಮ ಎಲ್ಲೆಯನ್ನು ಮೀರಿ ಅಧಿಕಾರವನ್ನು ಕೇಂದ್ರೀಕೃತಗೊಳಿಸಿಕೊಳ್ಳುತ್ತಿರುವ ಈ ಸಮಯದಲ್ಲಿ ಯುಟೋಪಿಯಾ ಮತ್ತು ಐಡಿಯಲ್ ಪದಗಳು ಬಹುತೇಕ ಒಂದೇ ಅರ್ಥವನ್ನು ಹೊಮ್ಮಿಸುತ್ತವೆ ಅಂದರೆ ಆದರ್ಶಪ್ರಾಯವಾದ, ಕಾಲ್ಪನಿಕವಾದ, ಸದ್ಯಕ್ಕೆ ವಾಸ್ತವಕ್ಕೆ ದೂರವಾಗಿ, ಬಹುತೇಕ ಅಸಂಭವನೀಯ ಸಂಗತಿ ಎಂಬ ಅರ್ಥವನ್ನೇ ಸೂಚಿಸುತ್ತವೆ. ಆದರೆ ಮಹಾತ್ಮ ಗಾಂಧಿಯವರ ಕಲ್ಪನೆಯ ರಾಮರಾಜ್ಯ ಇಂತಹ ಬರೀ ಕಾಲ್ಪನಿಕ ಆದರ್ಶ ರಾಜ್ಯವಾಗಿರದೆ ಇಡೀ ರಾಷ್ಟ್ರ ಮತ್ತು ಜನಸಮುದಾಯ ಅದರತ್ತ ಎಚ್ಚರಿಕೆಯ ಹೆಜ್ಜೆ ಇಟ್ಟಿದ್ದರೆ, ಪ್ರಭುತ್ವವನ್ನು ಕಟ್ಟುವಲ್ಲಿ ಎಲ್ಲರೂ ತೊಡಗಿಸಿಕೊಂಡಿದ್ದರೆ, ನಮ್ಮ ರಾಷ್ಟ್ರ ಆದರ್ಶಪ್ರಾಯವಾದ ಆದರೆ ಸಂಭವನೀಯ ವಾಸ್ತವದ ಉತ್ತಮ ಪ್ರಜಾಪ್ರಬುತ್ವ ವ್ಯವಸ್ಥೆಯಾಗಿ ರೂಪುಗೊಳ್ಳುತ್ತಿತ್ತೇನೋ. ಈಗಲಾದರೂ ದೇಶದ ನಾಗರಿಕರು ಅದರೆಡೆಗೆ ಚಿಂತಿಸಬಹುದೇ?

ಗಾಂಧಿ ಚಿಂತನೆಯ ರಾಷ್ಟ್ರೀಯತೆ ಇಂದು ಬಹುತೇಕ ರಾಜಕೀಯ ಪಕ್ಷಗಳು ಪ್ರಚಾರ ಮಾಡುತ್ತಿರುವ ಭಾವುಕತೆಯ, ಧಾರ್ಮಿಕತೆಯ, ಶತ್ರುಗಳನ್ನು ಸೃಷ್ಟಿಸಿಕೊಂಡು ಅದಕ್ಕೆ ಎದುರಾಗಿ ಕಟ್ಟಿಕೊಳ್ಳುವ ರಾಷ್ಟ್ರೀಯತೆಯ ಸ್ವರೂಪದ್ದಾಗಿರಲಿಲ್ಲ. ಗಾಂಧಿ ಬಗ್ಗೆ ಸುದೀರ್ಘ ಅಧ್ಯಯನ ನಡೆಸಿರುವ ರಾಜಕೀಯ ಶಾಸ್ತ್ರಜ್ಞ ಅಂಥನಿ ಜೆ ಪ್ಯಾರೆಲ್ ಅವರು ದಾಖಲಿಸಿರುವಂತೆ ಗಾಂಧಿಯವರ ರಾಷ್ಟ್ರೀಯತೆ ‘ನಾಗರಿಕ ರಾಷ್ಟ್ರೀಯತೆ’ಯಾಗಿತ್ತು. ಗಾಂಧಿ ಅಂತಹ ನಾಗರಿಕ ರಾಷ್ಟ್ರೀಯತೆಯನ್ನು ಮಣ್ಣಿನ ಮಡಿಕೆಗೆ ಹೋಲಿಸುತ್ತಾರೆ. “ಮಣ್ಣಿನ ಮಡಿಕೆ ಒಂದೇ ಏಟಿಗೆ ಹೊಡೆದುಹೋಗುತ್ತದೆ; ಒಂದಲ್ಲದಿದ್ದರೆ ಎರಡನೆ ಏಟಿಗೆ. ಆ ಮಡಿಕೆಯನ್ನು ರಕ್ಷಿಸಿಕೊಳ್ಳುವ ಮಾರ್ಗ ಅಪಾಯದಿಂದ ದೂರ ಇದುವುದಲ್ಲ, ಬದಲಾಗಿ ಆ ಮಡಿಕೆಯನ್ನು ಚೆನ್ನಾಗಿ ಸುಟ್ಟು, ಕಲ್ಲಿನಿಂದಲೂ ಒಡೆಯದಂತೆ ಮಾಡುವುದು, ನಮ್ಮ ಹೃದಯಗಳನ್ನು ಅಂತಹ ನಿಖರವಾಗಿ ಸುಟ್ಟ ಮಣ್ಣಿನ ಮಡಿಕೆಗಳಾಗಿ ಮಾಡಿಕೊಳ್ಳಬೇಕು” ಎನ್ನುತ್ತಾರೆ. ನಾವು ಕಟ್ಟಿಕೊಳ್ಳಬೇಕಾದ ರಾಷ್ಟ್ರೀಯತೆಯನ್ನು ಇಂತಹ ಮಡಿಕೆಗೆ ಹೋಲಿಸಿ ದಿನವೂ ಅದನ್ನು ಪ್ರಶ್ನಿಸಿಕೊಳ್ಳಬೇಕು ಮತ್ತು ದಿನವೂ ಅದಕ್ಕೆ ಹೊಸ ಉತ್ತರಗಳನ್ನು ಕಂಡುಕೊಳ್ಳಬೇಕು ಎನ್ನುತ್ತಾರೆ. ಇಂತಹ ರಾಷ್ಟ್ರೀಯತೆ ಸ್ಥಾವರದ ಮಾದರಿಯದ್ದಲ್ಲ. ಎಲ್ಲ ನಾಗರಿಕರು ಕೆಲವು ಸಾಮಾನ್ಯ ಸಾಂಸ್ಕೃತಿಕ ಸಂಗತಿಗಳನ್ನು ಹಂಚಿಕೊಳ್ಳುವ ನೆಪವನ್ನು ಒಡ್ಡಿ ಎಲ್ಲರ ಮೇಲೆಯೂ ಒತ್ತಾಯಪೂರ್ವಕವಾಗಿ ಹೇರುವಂತಹ ರಾಷ್ಟ್ರೀಯತೆ ಅದಲ್ಲ. ಪ್ರತಿಯೊಬ್ಬರ ಧಾರ್ಮಿಕ, ಸಾಂಸ್ಕೃತಿಕ  ಭಾಷಾ ಅಸ್ಮಿತೆಯನ್ನು ಸಮಾನವಾಗಿ ಕಾಣುವ ಮತ್ತು ಗೌರವಿಸುವ ಎಲ್ಲವನ್ನು ಒಂದೇ ಅಸ್ಮಿತೆಯ ಅಡಿಯಲ್ಲಿ ನೆಲಸಮ ಮಾಡದೆ ಇರುವ ರೀತಿಯ ರಾಷ್ಟ್ರೀಯತೆಯಾಗಿತ್ತು ಅದು.

ಇಂತಹ ರಾಷ್ಟ್ರೀಯತೆಯ ಕಲ್ಪನೆ ಹೊಂದಿದ್ದ ಮಹಾತ್ಮ ಗಾಂಧಿಯವರ ಪ್ರಭುತ್ವದ ಕಲ್ಪನೆಯೂ ಅನನ್ಯವಾಗಿತ್ತು. ಅದು ತನ್ನ ನಾಗರಿಕರನ್ನು ಹದ್ದುಬಸ್ತಿನಲ್ಲಿ ಇಡುವ, ನಾಗರಿಕರ ಹಕ್ಕುಗಳನ್ನು ಮೊಟಕುಗೊಳಿಸುವ, ಅವರ ಧಾರ್ಮಿಕ – ಅಭಿವ್ಯಕ್ತಿ ಸ್ವಾತಂತ್ರ್ಯಗಳ ಮೇಲೆ ನಿರ್ಬಂಧಗಳನ್ನು ಹೇರುವ ಪ್ರಭುತ್ವದ ಸ್ವರೂಪದ್ದಾಗಿರಲಿಲ್ಲ. ಗಾಂಧಿಜಿಯವರ ರಾಮರಾಜ್ಯದ ಕಲ್ಪನೆಯಲ್ಲಿ ಹಿಂದೂ ದೇವರಾದ ರಾಮ ಏಕಿರಬೇಕು ಎಂದು ಅನ್ಯಕೋಮಿನವರು ಸಂಶಯ ವ್ಯಕ್ತಪಡಿಸಿದಾಗ ೧೯೪೫ರಲ್ಲಿ ಗಾಂಧಿ ಹೀಗೆ ಹೇಳುತ್ತಾರೆ: “ಇದನ್ನು ಧಾರ್ಮಿಕವಾಗಿ ಭೂಮಿಯ ಮೇಲಿನ ದೇವರ ರಾಜ್ಯ ಎಂಬ ಅರ್ಥದಲ್ಲಿ ಅನುವಾದಿಸಬಹುದು. ಇದನ್ನು ರಾಜಕೀಯವಾಗಿ ಅನುವಾದಿಸಿದರೆ ಒಡೆಯರು ಮತ್ತು ಒಡೆತನವಿಲ್ಲದವರ ನಡುವೆ, ಬಣ್ಣ, ಜನಾಂಗ, ಜಾತಿ ಅಥವಾ ಲಿಂಗದ ಆಧಾರದಲ್ಲಿ ಇರುವ ಅಸಮಾನತೆ ಮಾಯವಾದ,  ನಿಖರವಾದ ಪ್ರಜಾಪ್ರಭುತ್ವ ಅದು; ಅಲ್ಲಿ ನೆಲ ಮತ್ತು ರಾಜ್ಯ ಜನರಿಗೆ ಸೇರಿರುತ್ತದೆ ಹಾಗೂ ನ್ಯಾಯ ಪ್ರಾಮಾಣಿಕವಾಗಿ, ನಿಖರವಾಗಿ ಮತ್ತು ಉಚಿತವಾಗಿರುತ್ತದೆ. ಆದುದರಿಂದ ಅಲ್ಲಿ ಪೂಜಿಸುವ, ಅಭಿವ್ಯಕ್ತಿಸುವ ಮತ್ತು ಮಾಧ್ಯಮದ ಪರಮೋಚ್ಛ ಸ್ವಾತಂತ್ರ್ಯ ಇರುತ್ತದೆ – ಇದೆಲ್ಲ ಸಾಧ್ಯವಾಗುವುದು ನಾವೇ ನಮ್ಮ ಮೇಲೆ ಹೇರಿಕೊಳ್ಳುವ ನೈತಿಕ ಕಟ್ಟುನಿಟ್ಟುಗಳಿಂದ. ಅಂತಹ ಪ್ರಭುತ್ವ ಸತ್ಯದ ಮೇಲೆ ಮತ್ತು ಅಹಿಂಸೆಯ ತಳಹದಿಯ ಮೇಲೆ ನಿಂತಿರತ್ತಲ್ಲದೆ, ಸಮೃದ್ಧಿಯ, ಸಂತೋಷದ ಮತ್ತು ಆತ್ಮ ಸಂತೃಪ್ತಿಯ ಗ್ರಾಮಗಳನ್ನು ಮತ್ತು ಗ್ರಾಮ ಸಮಾಜಗಳನ್ನು ಹೊಂದಿರುತ್ತದೆ “ ಎಂದು ಸ್ಪಷ್ಟೀಕರಣ ನೀಡಿರುವುದನ್ನು ಓದಿದರೆ ಮಹಾತ್ಮರ ರಾಮರಾಜ್ಯದ ಕಲ್ಪನೆ ಆಧುನಿಕ ಪ್ರಜಾಪ್ರಭುತ್ವ ರಾಷ್ಟ್ರದ ರಾಜಕೀಯ ಪರಿಕಲ್ಪನೆಗೆ ಬಹಳ ಹತ್ತಿರವಾದದ್ದು ಎಂದು ಮನವರಿಕೆಯಾಗುತ್ತದೆ. ೧೯೪೬ ರಲ್ಲಿ ಗಾಂಧಿ ಅವರು ಹೇಳಿರುವ ಮಾತು ಇಂತಿದೆ. “ನಾನು ಸರ್ವಾಧಿಕಾರಿಯಾದರೆ, ಧರ್ಮ ಮತ್ತು ಪ್ರಭುತ್ವ ಬೇರೆಬೇರೆಯಾಗಿ ಇರುತ್ತವೆ. ನಾನು ಧರ್ಮದ ಮೇಲೆ ನಂಬಿಕೆ ಇಟ್ಟು ಬದುಕುತ್ತೇನೆ. ಆದರೆ ಅದು ನನ್ನ ವೈಯಕ್ತಿಕ ಸಂಗತಿ. ಪ್ರಭುತ್ವಕ್ಕೆ ಧರ್ಮದ ಜೊತೆಗೆ ಯಾವುದೇ ನಂಟಿಲ್ಲ” ಎನ್ನುತ್ತಾರೆ. ಹೀಗೆ ಗಾಂಧಿಯವರ ರಾಮರಾಜ್ಯ ಜಾತ್ಯಾತೀತ ಪರಿಕಲ್ಪನೆಯನ್ನೂ ತನ್ನೊಳಗೆ ಪೋಷಿಸಿಕೊಂಡಿದ್ದನ್ನು ಕಾಣಬಹುದಾಗಿದೆ.

ಪ್ರಭುತ್ವ ಆತ್ಮವಿಲ್ಲದ ಕೇವಲ ಯಂತ್ರವಾಗಿ ಬೆಳೆಯಬಾರದು ಬದಲಾಗಿ ನೈತಿಕ ಮೌಲ್ಯಗಳನ್ನು ಹೊಂದಿರಬೇಕು, ಅತಿ ಕೇಂದ್ರೀಕೃತವಾಗಬಾರದು ಎಂದು  ವಾದಿಸುತ್ತಿದ್ದ ಗಾಂಧಿಯವರಿಗೆ ಸರ್ವಾಧಿಕಾರದ ಬಗ್ಗೆ ಎಷ್ಟು ತಿರಸ್ಕಾರವಿದ್ದಿರಬಹುದು ಎಂಬುದನ್ನು ಕೂಡ ಊಹಿಸಬಹುದು.  ಅವರು ೧೯೪೦ರಲ್ಲಿ ಹಿಟ್ಲರ್ ಗೆ ಬರೆಯುವ ಪತ್ರದಲ್ಲಿ ಯುದ್ಧವನ್ನು ನಿಲ್ಲಿಸುವಂತೆ ಕೋರುತ್ತಾರೆ. ಹಿಟ್ಲರ್ ಯುದ್ಧದಲ್ಲಿ ಗೆದ್ದರೂ ಅದು ಹಿಟ್ಲರ್ ಸರಿಯಾದ ಮಾರ್ಗ ಅನುಸರಿಸಿದ ಎಂದಾಗುವುದಿಲ್ಲ, ಅದು ಸಾಬೀತುಪಡಿಸುವುದು ಇಷ್ಟೇ, ನಾಶಪಡಿಸುವ ಶಕ್ತಿ ಹಿಟ್ಲರ್ ಗೆ ಹೆಚ್ಚು ಇತ್ತೆಂಬುದು ಎನ್ನುತ್ತಾರೆ. ಇನ್ನೂ ಹಲವು ಬಾರಿ ಹೇಗೆ ಪ್ರಜಾಪ್ರಭುತ್ವ ರಾಷ್ಟ್ರ ವ್ಯಕ್ತಿಯ ಸ್ವಾತಂತ್ರ್ಯವನ್ನು ಗೌರವಿಸದೆ ಹೋದರೆ ಅದು ಕೂಡ ಸರ್ವಾಧಿಕಾರಕ್ಕೆ ಜಾರಬಹುದೆಂಬ ಎಕ್ಚರಿಕೆಯನ್ನೂ ನೀಡುತ್ತಾರೆ. ಆದುದರಿಂದ ಅಧಿಕಾರ ವಿಕೇಂದ್ರೀಕರಣಗೊಂಡ, ಕಟ್ಟಕಡೆಯ ವ್ಯಕ್ತಿಯೂ ಪ್ರಭುತ್ವವನ್ನು ಕಟ್ಟುವಲ್ಲಿ ತನ್ನನ್ನು ತೊಡಗಿಸಿಕೊಳ್ಳುವ, ಪ್ರಭುತ್ವದ ದೌರ್ಜನ್ಯಗಳನ್ನು ಅಹಿಂಸೆಯ ಮಾರ್ಗದಲ್ಲಿ ಪ್ರಶ್ನಿಸುವ, ತಡೆಯುವ ನಾಗರಿಕ ಸಮಾಜದ ಕನಸನ್ನು ಸಾಕಾರಗೊಳಿಸುವುದಕ್ಕೆ ಗಾಂಧಿ ಪ್ರಯತ್ನ ಮಾಡಿದ್ದರು.

ಹೀಗೆ ಗಾಂಧಿಯವರ ಪ್ರಭುತ್ವದ ಪರಿಕಲ್ಪನೆ ಕಾಲಕಾಲಕ್ಕೆ ಹೇಗೆ ಪಕ್ವವಾಗುತ್ತಾ ಹೋಯಿತು, ಅವರ ನಾಗರಿಕ ರಾಷ್ಟ್ರೀಯತೆ ಮತ್ತು ರಾಮರಾಜ್ಯದ, ಸ್ವರಾಜ್ಯದ ಕಲ್ಪನೆಗಳನ್ನು ಒಟ್ಟಿಗೆ ಇಟ್ಟು ನೋಡಿದಾಗ ಅದು ಸುಧಾರಿತ ಮತ್ತು ಸದಾ ಎಚ್ಚರಿಕೆಯ ಆಧುನಿಕ ಜಾತ್ಯಾತೀತ ಪ್ರಜಾಪ್ರಭುತ್ವದ ರಾಷ್ಟ್ರ ಕಲ್ಪನೆಗೆ ಬಹಳ ಹತ್ತಿರವಾಗಿತ್ತು ಎಂದು ನಮಗೆ ತಿಳಿಯುತ್ತದೆ. ಇಂತಹ ನಿಖರವಾದ ಪ್ರಜಾಪ್ರಭುತ್ವ ರಾಷ್ಟ್ರದ ಮರುನಿರ್ಮಾಣ, ಪ್ರಭುತ್ವಕ್ಕೆ ನೈತಿಕ ಮೌಲ್ಯಗಳನ್ನು ತುಂಬುವ ಅಗತ್ಯ ಮತ್ತು ತುರ್ತು ಭಾರತ ದೇಶವೂ ಸೇರಿದಂತೆ ವಿಶ್ವದಾದ್ಯಂತ ಕಾಣಿಸಿಕೊಂಡಿದೆ. ಗಾಂಧಿ ಮಾರ್ಗ ಇದಕ್ಕೆ ದಾರಿ ತೋರಬಲ್ಲದೇನೋ. ಗಾಂಧಿ 150 ಜನ್ಮಶತಾಬ್ಧಿಯ ಈ ವರ್ಷ ಇದಕ್ಕಾಗಿ ನಾಗರಿಕ ಸಮಾಜ ತೊಡಗಿಸಿಕೊಳ್ಳುವುದು ಸೂಕ್ತವಾಗಿದೆ.

ಪ್ರತಿಕ್ರಿಯಿಸಿ