ಹಾಗೂ ಉಂಟು ಹೀಗೂ ಉಂಟು ವಿಧಿಯು ಹೊಸೆದ ಹಗ್ಗದ ಕಗ್ಗಂಟು

ಕವಿ ದಿನದ ವಿಶೇಷ . ಈ ಲೇಖನ ಬರೆದಿರುವ ಮಾಧವ್ ಅಜ್ಜಂಪುರ್ ಸದಾ ಬೇಂದ್ರೆ ಯನ್ನು ಧ್ಯಾನಿಸುವ ಅವರ ಕಾವ್ಯದ ರಸಿಕ . ಬೇಂದ್ರೆ ಕಾವ್ಯದ ಹುಚ್ಚಿಗೆ ಬಿದ್ದು , ಕವನಗಳನ್ನು ಇಂಗ್ಲೀಷಿಗೆ ಅನುವಾದ ಮಾಡಿ ಅದಕ್ಕಾಗಿಯೇ darabendreinenglish.com ಎಂಬ ಮಿಂದಾಣ ಕೂಡ ರಚಿಸಿದ್ದಾರೆ . ಈ ಲೇಖನದಲ್ಲಿ ಮಾಧವ್ ಬೇಂದ್ರೆ ತನಗೆ ಆತ್ಮೀಯವಾದ ಬಗೆ , ಅನುವಾದದ ಅನುಭವಗಳನ್ನು ಬರೆದಿದ್ದಾರೆ .

“ತ್ರೇತಾಯುಗ ರಾಮನ್ನ, ದ್ವಾಪರದ ಕೃಷ್ಣನ್ನ

ಕಲಿಯುಗದ ಕಲ್ಕೀನ ಕಂಡಾನ”

(“ಕರಡಿ ಕುಣಿತ” ಕವನ; “ಸೂರ್ಯಪಾನ” ಸಂಗ್ರಹ; ಪ್ರ: 1956)

ಸುಮಾರು ಹತ್ತು ವರ್ಷದ ಹಿಂದಿನ ಮಾತು. ನಾನು ಬಿ.ಏ ಡಿಗ್ರಿಗೆ ಓದುತ್ತಿದ್ದ ಕಾಲ. ಒಮ್ಮೆ ಕೋಣೆಯಲ್ಲಿ ಸಂಗೀತ ಹಚ್ಚಿ ಏನೊ ಕೆಲಸ ಮಾಡುತ್ತಿರುವಾಗ ಒಂದು ಭಾವಗೀತೆ ಬಂತು. ಅದರ ತಾಳ ನನ್ನನ್ನು ಸೆಳೆಯಿತು. ಕಿವಿಗೊಟ್ಟು ಕೇಳಿದೆ. ಪದ್ಯ ಕ್ಲಿಷ್ಟವೆನಿಸಿತು, ಪದಗಳನ್ನು ಸರಿಯಾಗಿ ಗ್ರಹಿಸಲಿಕ್ಕಾಗಲಿಲ್ಲ. ಆದರೂ ಹಾಡಿನ ತಾಳಕ್ಕೆ ಮನಸೋತು ಕೇಳತ್ತಾ ಹೋದೆ. ಆವಾಗ ಸ್ಪಷ್ಟವಾಗಿ ಗ್ರಹಿಸಿದ್ದು ಮೇಲಿನ ಎರಡು ಸಾಲು ಮಾತ್ರ. ಅವುಗಳನ್ನು ಕೇಳಿ ಯಾಕೋ ಮೈ ಜುಮ್ಮಂತು. ಕೇಳುತ್ತಾ ಕೇಳುತ್ತಾ ಆ ಸಾಲುಗಳು ನನ್ನೊಳಗೆ ಮನೆ ಮಾಡಿದವು.

ಹೀಗಿತ್ತು ನನ್ನ ಮತ್ತು ವರಕವಿ ಬೇಂದ್ರೆಯವರ (ಕಾವ್ಯದ) ಮೊದಲನೆ ಭೇಟಿ.

ಸುಮಾರು 2013ನೆ ಇಸ್ವಿಯ ಮಧ್ಯ ಭಾಗ. ನನ್ನ ತಂದೆಯ ಸ್ನೇಹಿತರರೊಬ್ಬರು ನನಗೆ ‘ಬೇಂದ್ರೆ ಅಂದ್ರೆ…’ ಪುಸ್ತಕ ಕಳಿಸಿಕೊಟ್ಟರು. ನಾನಾದರೊ ಆಗತಾನೇ ಕನ್ನಡ ತಕ್ಕಮಟ್ಟಿಗೆ ಓದಲು ಕಲಿತ್ತಿದ್ದೆ. (ಚಿಕ್ಕಂದಿನಿಂದ ಮಾತಾಡುತ್ತ ಬಂದಿದ್ದೆ.)ಬೇಂದ್ರೆ ಅಂದ್ರೆ…’ ಓದುತ್ತ ಹೋದಂತೆ ಬೇಂದ್ರೆಯವರ ವ್ಯಕ್ತಿಪರಿಚಯ ಮತ್ತು ಕಾವ್ಯಪರಿಚಯ ಎರಡೂ ಆದವು. ಬೇಂದ್ರೆಯವರ ಬಗ್ಗೆ ಅಭಿಮಾನ ಹುಟ್ಟಿತು. ಅಲ್ಲಲ್ಲಿ ಪ್ರಸ್ತಾಪಿಸಿದ ಅವರ ಕಾವ್ಯದ ಸಾಲುಗಳ ಮೆಚ್ಚಿದೆನು. ಕೆಲವು ಹೊಗಳಿಕೆ ರೋಮಾಂಚನ ಉಂಟು ಮಾಡಿದವು. ಬೇಂದ್ರೆಯವರ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಬೇಕು ಎನ್ನುವ ಕುತೂಹಲ ಮೂಡಿತು.

ಸುಮಾರು 2015ರ ಹೊತ್ತಿಗೆ ನನ್ನ ಕನ್ನಡ ಓದು ಸಾಕಷ್ಟು ಮುಂದೆ ಸಾಗಿತ್ತು. ಇದರಲ್ಲಿ ಮುಕ್ಕಾಲುಪಾಲು ಓದು ಬೇಂದ್ರೆಯವರಿಗೆ ಸಂಬಂಧಪಟ್ಟದ್ದು. ಆ ಕಾಲದಲ್ಲಿ ನಾನು ಬೇಂದ್ರೆ ಕಾವ್ಯಕ್ಕಿಂತ ಅವರ ಕಾವ್ಯದ ಬಗ್ಗೆ ಲೇಖನಗಳು ಮತ್ತು ವಿಮರ್ಶೆ ಹೆಚ್ಚಾಗಿ ಓದುತ್ತಿದೆ. ಇದಕ್ಕೆ ಕಾರಣ: ನನಗೆ ಕನ್ನಡ ಕಾವ್ಯ ಹಾಗೂ ಧಾರವಾಡ ಮಾತಿನ ಶೈಲಿ ಬಗ್ಗೆ ಇದ್ದ ಬಹಳ ಸೀಮಿತ ತಿಳುವಳಿಕೆ.

ಓದುತ್ತಿದ್ದ ಪುಸ್ತಕಗಳಲ್ಲಿ ‘ಬೇಂದ್ರೆ ಅಂದ್ರೆ…’ ಪುಸ್ತಕದ ಪ್ರಸ್ತಾಪ ಆಗಲೇ ಆಗಿದೆ. ಅಲ್ಲದೆ, ಮನೆಯಲ್ಲಿದ್ದ ಬೇಂದ್ರೆಯವರ ‘ಗಂಗಾವತರಣ’ ಸಂಗ್ರಹ ಕೈಗೆ ಸಿಕ್ಕಿತ್ತು. ಸುನಾಥ ಕಾಕಾರವರ ಬ್ಲಾಗ್ ಕೂಡ ಗಮನಕ್ಕೆ ಬಂದಿತ್ತು. ಸಪ್ನ ಬುಕ್ ಹೌಸ್ ಗೆ ಹೋದಾಗ ಅದೃಷ್ಟದಿಂದ ‘ಕರಡಿ ಕುಣಿತ’ ಒಳಗೊಂಡಿರುವ ‘ಸೂರ್ಯಪಾನ’ ಸಂಕಲನವೂ ದೊರಕಿತ್ತು. ಜೊತೆಗೆ, ಅಂತರ್ಜಾಲದಲ್ಲಿ ಬೇಂದ್ರೆ ಮತ್ತು ಬೇಂದ್ರೆಕಾವ್ಯದ ಕುರಿತು ಲೇಖನಗಳನ್ನು ಹುಡುಕಿ ಓದುತ್ತಿದ್ದೆ. ಒಟ್ಟಿನಲ್ಲಿ, ನನ್ನ ಮಟ್ಟಿಗೆ ಬೇಂದ್ರೆಯವರು ಬಹಳ ಬೇಕಾದವರು ಆಗಿಬಿಟ್ಟಿದ್ದರು.

ಇದೇ ಹೊತ್ತಿಗೆ, ನನ್ನದೇ “ಕವಿ ಸಮಯ” ಮೂಡಿತ್ತು. ಎಂದರೆ — ಬಹಳ ದಿನದ ಆಸೆ ಫಲಿಸಿ ನನ್ನದೇ ಕಾವ್ಯಧಾರೆ ಹರಿಯಲಿಕ್ಕೆ ತೊಡಗಿತ್ತು. ನನ್ನ ಕಾವ್ಯಭಾಷೆ ಮಾತ್ರ ಇಂಗ್ಲಿಷ್. (ಇದಕ್ಕೆ ಕಾರಣ ನನ್ನ ತಾಯಿ ನನಗೆ ಬಳುವಳಿಯಾಗಿ ಕೊಟ್ಟ ಇಂಗ್ಲಿಷ್ ಭಾಷೆ.) ಆದರೆ, ಅಲ್ಲಿಯವರೆಗೆ ಸುಪ್ತವಾಗಿದ್ದ ಕಾವ್ಯಧಾರೆ ಯಾಕೆ ಆವಾಗ ಪುಟಿಯಿತು? ನನ್ನ ಊಹೆ: ಆ ಹೊತ್ತಿನಲ್ಲಿ, ನನ್ನ ಓದಿನ ನುಡಿ (ಕನ್ನಡ) ಮತ್ತು ಬರಹದ ನುಡಿ (ಇಂಗ್ಲಿಷ್) ಬೇರೆ ಬೇರೆ ಆಗಿದ್ದು. ಎಂದರೆ, ಯಾವುದೊ ವಿಚಿತ್ರ ರೀತಿಯಲ್ಲಿ ನನಗೆ ಹತ್ತಿರವಾದ ಎರಡು ಭಾಷೆ ಒಟ್ಟುಗೂಡಿ, ನನ್ನಲ್ಲಿ ಸ್ಫೂರ್ತಿ ತುಂಬಿ, ಎಷ್ಟೋ ದಿನಗಳಿಂದ ಇದ್ದ ಕಾವ್ಯವನ್ನು ಹೊರಗೆ ತಂದವು. ಆಷ್ಟೇ ಅಲ್ಲದೆ, ನಾನು ಆವಾಗ ಬರೆದ ಇಂಗ್ಲಿಷ್ ಕಾವ್ಯಕ್ಕೆ ಕನ್ನಡದ ಗಂಧ ಒಂದು ವಿಶೇಷ ಮೆರಗು ತಂದುಕೊಟ್ಟಿತು.

“ಎನ್ನ ಪಾಡೆನಗಿರಲಿ ಅದರ ಹಾಡನಷ್ಟೆ

ನೀಡುವೆನು ರಸಿಕ! ನಿನಗೆ

ಕಲ್ಲುಸಕ್ಕರೆಯಂಥ ನಿನ್ನೆದೆಯು ಕರಗಿದರೆ

ಆ ಸವಿಯ ಹಣಿಸು ನನಗೆ!”

(“ಸಖೀಗೀತ” ಸಂಗ್ರಹ; ಪ್ರ: 1937)

ಬೇಂದ್ರೆಯವರಿಗೆ ರಸಿಕರು (ಸಹೃದಯರು) ಬಹಳ ಬೇಕಾದವರು. ಮೇಲಿನ ಸಾಲುಗಳು ತಿಳಿಸುವಂತೆ, ಅವರು ಎಷ್ಟೋ ಕವನಗಳಲ್ಲಿ ನೇರವಾಗಿ ರಸಿಕನ ಜೊತೆಗೆ ಮಾತಾಡುತ್ತ ಅವರ ಕಾವ್ಯೋದ್ಯೋಗ (ಕಾವ್ಯ + ಉತ್ + ಯೋಗ) ದಲ್ಲಿ ಸಹೃದಯನಿಗೆ ಪಾಲುಗೊಳ್ಳಲು ಕರೆದಿದ್ದಾರೆ.

ಸಾಹಿತ್ಯಾಸಕ್ತರನ್ನು ಸ್ಥೂಲವಾಗಿ ಎರಡು ಗುಂಪಾಗಿ ಮಾಡಬಹುದು: ವಿಮರ್ಶಕರು ಮತ್ತು ರಸಿಕರು. ‘ರಸಿಕ-ಜಾತಿ’ಯವರಿಗೆ ಸಾಹಿತ್ಯದ ಭಾವ ಬೇಕು, ಅದು ಕೊಡುವ ಸಂತೋಷ ಮುಖ್ಯ; ಅದರ ಮೂಲ, ಕಾರಣ, ಅಂಕುಡೊಂಕುಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಒಂದೇ ಮಾತಲ್ಲಿ ಹೇಳಬೇಕೆಂದರೆ: ಅವರ ದೃಷ್ಟಿ ಮುಗ್ಧವಾದುದು. ‘ವಿಮರ್ಶಕ-ಜಾತಿ’ಯವರ ದೃಷ್ಟಿಯೊ ಹೆಚ್ಚು ಚೂಪಾದುದು. ಅವರಿಗೆ ಸಾಹಿತ್ಯ ಸಂತೋಷ ಕೊಟ್ಟರೆ ಸಾಲದು; ಅದರ ಧ್ಯೇಯ, ಭಾವ, ವ್ಯಾಪ್ತಿ, ಹೊಸತನ, ಉದ್ದೇಶ – ಈ ಎಲ್ಲವೂ ಮುಖ್ಯ. ಅವುಗಳ ಪರಿಶೀಲನೆಯಿಂದಲೇ ಕೃತಿಯ ಮೌಲ್ಯ ತಿಳಿಯುಬಹುದೆಂದು ಅವರ ನಂಬಿಕೆ.

ಈ ಎರಡು ಗುಂಪು ಪೂರ್ತಿ ಬೇರೆಬೇರೆ ಎಂದೇನಲ್ಲ. ರಸಿಕನಾದವನು ವಿಮರ್ಶಕನಾಗಬಲ್ಲ ಹಾಗೂ ವಿಮರ್ಶಕನಾದವನು ರಸಿಕನೂ ಇರಬಹುದು. ಆದರೆ, ಎರಡನ್ನೂ ಒಂದೇ ಹದದಲ್ಲಿ ಸರಿದೂಗಿಸುತ್ತ ಕಾಪಾಡಿಕೊಳ್ಳುವವರ ಸಂಖ್ಯೆ ಕಡಿಮೆ.

ನನ್ನ ಮನೋಧರ್ಮವಾದರೊ ಮೊದಲಿಂದಲೂ ಹೆಚ್ಚು ‘ಸಹೃದಯ’ನದ್ದು ಎಂದು ಹೇಳಬಹುದು. (ಈ ಮಾತು ಹೆಚ್ಚು ಕಾವ್ಯಕ್ಕೆ ಅನ್ವಯಿಸುತ್ತದೆ.) ಹಾಗಾಗಿ, ನನಗೆ ಯಾವತ್ತೂ ಕವನದ ಚೆಲುವು, ಪದಲಾಲಿತ್ಯ, ಪ್ರಾಸ, ನಾದ, ಭಾವ ಬೇಕಾಗುತ್ತಿದ್ದವೇ ಹೊರತು ಕವನವನ್ನು ಬಿಡಿಸಿ ಪರಿಶೀಲಿಸುವ ಆಸೆ ಇದ್ದಿದ್ದಿಲ್ಲ.

ಬೇಂದ್ರೆಯವರ ಕಾವ್ಯದ ಓದಲ್ಲಿ, ನನ್ನೀ ಮನೋಧರ್ಮಕ್ಕೆ ಶಂಕರ ಮೊಕಾಶಿ ಪುಣೇಕರವರ ವಿಚಾರಗಳು ಬೆಂಬಲ ನೀಡಿವೆ. ಅವರ ಬರಹದ ಸಂಪರ್ಕ ಮೊದಲು ಆಗಿದ್ದು ‘ಬೇಂದ್ರೆ ಅಂದ್ರೆ…’ ಪುಸ್ತಕದಲ್ಲಿದ್ದ ಲೇಖನದಿಂದ. ಆ ಲೇಖನವು – ‘ಬೇಂದ್ರೆಯವರ ಕಾವ್ಯಾಭ್ಯಾಸ’ – ನನಗೆ ತುಂಬ ಹಿಡಿಸಿತು. ಮೊಕಾಶಿಯವರಿಗೆ ಬೇಂದ್ರೆಕಾವ್ಯದ ಜೊತೆ ಇದ್ದ ಆತ್ಮೀಯ ಸಂಬಂಧ ತಿಳಿಸಿಕೊಟ್ಟಿತು. ಅವರಿಗೆ ಬೇಂದ್ರೆ ಮತ್ತು ಬೇಂದ್ರೆಕಾವ್ಯದ ಮೇಲಿದ್ದ ಪ್ರೀತಿ-ವಿಶ್ವಾಸ ನನ್ನಲ್ಲೂ ಹುಟ್ಟಿತು. ಮುಂದೆ, ಅವರು ಬೇಂದ್ರೆ ಬಗ್ಗೆ ಬರೆದ ಬೇರೆಬೇರೆ ಲೇಖನಗಳನ್ನು ಓದಿದೆ. ಎಲ್ಲದರಲ್ಲೂ ಅದೇ ಆಸ್ಥೆ, ಅದೇ ಆತ್ಮೀಯತೆ, ಅದೇ ಪ್ರೀತಿ-ವಿಶ್ವಾಸ, ಅದೇ ಸಹೃದಯತೆ.

ಹೀಗೆಂದ ಮಾತ್ರಕ್ಕೆ, ನಾನು ಬೇಂದ್ರೆ ಕುರಿತು ಮೊಕಾಶಿಯವರನ್ನು ಬಿಟ್ಟು ಬೇರೆಯವರು ಬರೆದುದ್ದನ್ನು ಓದಲಿಲ್ಲವೆಂದಲ್ಲ. ಕುರ್ತಕೋಟಿ, ಆಮೂರ, ಪು.ತಿ.ನ, ಅಡಿಗ, ಕಿರಂ, ಜಿ.ಎಸ್.ಎಸ್ ಮುಂತಾದವರ ಲೇಖನಗಳನ್ನೂ ಓದಿದೆ. ಕೆಲವನ್ನು ಮೆಚ್ಚಿದೆ, ಅವುಗಳಿಂದ ಸಾಕಷ್ಟು ಕಲಿತೆ ಕೂಡ. ಆದರೆ, ಶಂಕರ ಮೊಕಾಶಿ ಅವರ ಬರಹಗಳಲ್ಲಿರುವ ಸಲಿಗೆ, ರಸಿಕ ದೃಷ್ಟಿ ಮತ್ತು ಮಿಂಚಿನ ಮಾತು ನನಗೆ ಇನ್ನೆಲ್ಲೂ ಕಾಣಿಸಲಿಲ್ಲ. ನನ್ನ ಮಟ್ಟಿಗೆ ಹೇಳಬೇಕೆಂದರೆ, ಮೊಕಾಶಿಯವರು ನನಗೆ ‘ಬೇಂದ್ರೆಕಾವ್ಯ’ವನ್ನು ಕಾಣಿಕೆಯಾಗಿ ಕೊಟ್ಟ ಹಿರಿಯರು. ನನ್ನ ಸಹಜ ರಸಿಕತೆಯನ್ನು ಪೋಷಿಸಿದ ರಸಿಕವರ್ಯರು.

“ಕೃತಿಯ ರಚಿಸದೆ ಕೃತಾರ್ಥವೆ ಜೀವ? ರಸ ವಿಮ-

ರ್ಶೆಯು ರಸದ ಯೋಗ ಕೊಡಬಲ್ಲುದೇ?”

(“ಕೃತಿ” ಕವನ; “ಉಯ್ಯಾಲೆ” ಸಂಗ್ರಹ; ಪ್ರ: 1938)

ನನಗೆ ಬೇಂದ್ರೆವಯರ ಕಾವ್ಯ ನಿಜವಾಗಿಯೂ ಆತ್ಮೀಯವಾಗಲಿಕ್ಕೆ ಶುರುವಾದುದು ನಾನು ಅವರ ಕವನಗಳನ್ನು ಇಂಗ್ಲಿಷ್-ಗೆ ಅನುವಾದ (ಭಾವಾನುವಾದ) ಮಾಡಲು ತೊಡಗಿದಾಗ. ಈ ಕೆಲಸ ಶುರುವಾಗಲು ದೈವವೇ ಕಾರಣ. ಸುಮಾರು ೨೦೧೫ನೆ ಜೂನ್-ಜುಲೈ ಕಾಲಕ್ಕೆ, ನಾನು ಇಂಗ್ಲಿಷ್-ನಲ್ಲಿ ವಾರಕ್ಕೊಂದು ಕವನ ಬರೆಯುವ ಹಂತಕ್ಕೆ ಬಂದಿದ್ದೆ. ಬೇಂದ್ರೆಯವರ ಮೇಲಿನ ಸಾಲಿನಂತೆ, ನಾನು ಹಲವಾರು ಇಂಗ್ಲಿಷ್ ಕವನಗಳನ್ನು ರಚಿಸಿ ಒಂದು ಬಗೆಯಲ್ಲಿ ಕೃತಾರ್ಥನಾಗಿದ್ದೆ.

ಇದೇ ಹೊತ್ತಿಗೆ, ನನ್ನ ಕನ್ನಡ ಲಿಪಿಯ ಕಲಿಕೆ ಮತ್ತು ಬೇಂದ್ರೆ ಬಗೆಗಿನ ಓದು ಕೂಡ ಒಂದು ಹದಕ್ಕೆ ಬಂದಿತ್ತು. ‘ಮುಂದೇನು?’ ಎಂಬ ಪ್ರಶ್ನೆ ಕೇಳುತ್ತಿರುವಾಗಲೇ ನನಗೆ ಬೇಂದ್ರೆಯವರ ಕವನವೊಂದನ್ನು ಯಾಕೆ ಇಂಗಿಷ್-ಗೆ ಅನುವಾದ ಮಾಡಬಾರದೆನಿಸಿತು, ಪ್ರಯತ್ನ ಮಾಡಿಯೇ ಬಿಟ್ಟೆ! ಆದರೆ, ಆ ಕೆಲಸ ಏನಿದ್ದರೂ ಅಕಸ್ಮಾತ್ತಿನ ಕೆಲಸ, “ಸುಮ್ಮನೆ ಹಾಗೆ” ಕೈಗೆತ್ತಿಕೊಂಡ ಕೆಲಸ. (ಖಂಡಿತ ಯಾವ ರೀತಿಯಲ್ಲೂ “ಸೀರಿಯಸ್” ಆಗಿ ಶುರು ಮಾಡಿದ ಕೆಲಸವಲ್ಲ). ಬಹುಶಃ ನಾನು ಆವಾಗ ಬೇಂದ್ರೆಕಾವ್ಯದೊಡನೆ ಒಂದು ಸೃಜನಶೀಲವಾದ ಒಡನಾಟ (creative engagement) ಹುಡುಕುತ್ತಿದ್ದನೊ ಏನೊ – ನೆನಪಿರಲಿ, ಅಲ್ಲಿಯವರೆಗೆ ನಾನು ಅವರ ಕಾವ್ಯದ ಬಗ್ಗೆ ಹೆಚ್ಚು ಓದಿದ್ದೆ ಹೊರತು ಅದರೊಡನೆ ನೇರವಾಗಿ “ಎಂಗೇಜ್” ಮಾಡಿರಲಿಲ್ಲ. ಆ ಕೊರತೆಯನ್ನು ತುಂಬಲಿಕ್ಕೆ ಈ ಸಾಹಸ ಮಾಡಿದೆನೆಂದರೂ ಆದೀತು.

ಭಾವಾನುವಾದ ಮಾಡಲು ಎತ್ತಿಕೊಂಡ ಆ ಮೊದಲ ಕವನ ‘ನಾನು’. ಇದು ‘ಗಂಗಾವತರಣ’ ಸಂಕಲನದಲ್ಲಿದ್ದು, ಬೇಂದ್ರೆಯವರ ಕುರಿತು ೧೯೭೨ರಲ್ಲಿ ಮಾಡಿದ ಸಾಕ್ಷ್ಯಚಿತ್ರದಲ್ಲಿ ಹಾವಭಾವದೊಂದಿಗೆ ಅವರೇ ವಾಚಿಸುವದನ್ನು ನೋಡಬಹುದು. (ನನಗೆ ತಿಳಿದ ಮಟ್ಟಿಗೆ, ಇದು ಬೇಂದ್ರೆಯವರ ಹೆಸರಾಂತ ಕಾವ್ಯವಾಚನದ ಏಕೈಕ ವೀಡಿಯೊ ರೆಕಾರ್ಡಿಂಗ್.) ಮುಕ್ಕಾಲುಪಾಲು, ಆ ಕವನವನ್ನು ಆರಿಸಿಕೊಳ್ಳಲು ಇದೇ ಮುಖ್ಯವಾದ ಕಾರಣ. ಒಟ್ಟಿನಲ್ಲಿ, ಬೇಂದ್ರೆಯವರ ಓದಿನ ಧಾಟಿಯನ್ನು ಒರೆಗಲ್ಲಾಗಿ ಇಟ್ಟುಕೊಂಡು ಆ ಅನುವಾದ ಮಾಡಲು ಪ್ರಯತ್ನಿಸಿದ ನೆನಪು.

ಇಂಗ್ಲಿಷ್ ಮತ್ತು ಕನ್ನಡ ನುಡಿಗಳ ನಡುವಿನ ಅತಿದೊಡ್ಡ ವ್ಯತ್ಯಾಸವೆಂದರೆ – ಫೊನೆಟಿಸಿಸಮ್ (phoneticism). ಭಾರತೀಯ ಭಾಷೆಗಳ ರಚನಾಕ್ರಮದಲ್ಲಿ ನಾಲಗೆ ಒಂದು ಸ್ವರದ ಉಚ್ಚಾರವನ್ನು ಒಂದೇ ಮಾತ್ರ (syllable) ಬರೆದು ಗುರುತಿಸಬಹುದು: ಈ ಜಾತಿಯ ಭಾಷೆಗೆ ಫೊನೆಟಿಕ್ (phonetic) ಭಾಷೆ ಎಂಬ ಹೆಸರು. ತದ್ವಿರುದ್ಧ, ಇಂಗ್ಲಿಷ್ ಭಾಷೆಯಲ್ಲಿ ಒಂದು ಸ್ವರದ ಉಚ್ಚಾರವನ್ನು ಬರೆಯಲು ಒಂದಕ್ಕಿಂತ ಹೆಚ್ಚು ಮಾತ್ರ ಬೇಕಾದೀತು: ಈ ರೀತಿಯ ಭಾಷೆಗೆ ನಾನ್-ಫೊನೆಟಿಕ್ (non-phonetic) ಭಾಷೆ ಎಂಬ ಹೆಸರು. ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಕನ್ನಡ ಮಾತು ಇಂಗ್ಲಿಷ್ ನುಡಿಗಳ ಜಾಯಮಾನ ಸಂಪೂರ್ಣ ಬೇರೆ ಬೇರೆ.

ಮೊದಲಿಂದಲೂ, ನನ್ನ ಎದ್ದೇಶ – ಮಾಡಿದ ಭಾವಾನುವಾದವು ಕನ್ನಡದಲ್ಲಿದ್ದ ಕಾವ್ಯಗುಣ ಇಂಗ್ಲಿಷ್-ನಲ್ಲಿ ಸ್ಫುಟವಾಗಿ ಹಿಡಿಯಬೇಕು. “ನಾನು” ಕವನದ ಅನುವಾದದಲ್ಲಿ, ಬೇಂದ್ರೆಯವರದೇ ವಾಚನ ನೆರವಿಗೆ ಬಂತು. ಆ ವಾಚನದ ಲಯಕ್ಕೆ ವಿಶಿಷ್ಟ ಗೌರವ ಕೊಡುತ್ತ ಅದನ್ನು ಇಂಗ್ಲಿಷ್-ಗೆ ಅನುವಾದಿಸಲು ಪ್ರಯತ್ನ ಮಾಡಿದೆ.

ಮುಂದೆ ಹೋಗುತ್ತ, ಇಂಗ್ಲಿಷ್ ಅನುವಾದಕ್ಕೆ ‘ಒತ್ತು’ ಮತ್ತು ‘ಎಳೆತ’ ಸೇರಿಸಿದರೆ ಏನಾಗುವುದರ ಬಗ್ಗೆ ಚಿಂತನೆ ನಡೆಸಿದೆ. (ಆಗಲೇ, ನನ್ನದೇ ಇಂಗ್ಲಿಷ್ ಕವನಗಳಲ್ಲಿ ಕನ್ನಡದ ಫೊನೆಟಿಕ್ ಗುಣ ಸೇರಿಸಲು ಪ್ರಯೋಗ ಮಾಡಿದ್ದೆ.) ಭಾವಾನುವಾದ ಮಾಡುತ್ತ ಮಾಡುತ್ತ, ನನಗೆ ಎದುರಿಸಬೇಕಾದ ಸವಾಲುಗಳು, ಮಾಡಬಹುದಾದ ಪ್ರಯೋಗಗಳು, ಅನುವಾದಕ್ಕೆ ಎಟುಕದ ಅಂಶಗಳು – ಇವುಗಳ ಪರಿಚಯ ಸಿಕ್ಕಿತು.

 

“ಕವನ ಕೋಶದೀ ಕಮಲ ಗರ್ಭದಲಿ

ಪರಾಗವೊರಗಿಹುದು.

ನಿನ್ನ ಮುಖಸ್ಪರ್ಶವೂ ಸಾಕು; ಹೊಸ

ಸೃಷ್ಟಿಯೆ ಬರಬಹುದು. || ಬಾ, ಭೃಂಗವೆ, ಬಾ … ||”

(“ಪರಾಗ” ಕವನ; “ಸಖೀಗೀತ” ಸಂಗ್ರಹ; ಪ್ರ: 1937)

ಈ ಸಾಲುಗಳು ಏನನ್ನು ಹೇಳಲು ಹೊರಟಿವೆ? ತುಂಬಿಯು ಹೂನೀರನು ಹೀರುತ್ತ ಒಂದು ಹೂವಿಂದ ಇನ್ನೊಂದು ಹೂವಿಗೆ ಹೋಗುವುದು ಸಹಜವಾದ ಪ್ರಾಕೃತಿಕ ಕ್ರಿಯೆ. ಆ ಕ್ರಿಯೆಯನ್ನೇ ಕವಿ ಇಲ್ಲಿ ರೂಪಕವಾಗಿ ಬಳಸಿದ್ದಾನೆ. ಕವಿಯ ಕಲ್ಪನೆಯಲ್ಲಿ ಕವನವು ಮಕರಂದವುಳ್ಳ ‘ಹೂ’ ಆಗಿ ರಸಿಕ ‘ದುಂಬಿ’ಯನ್ನು ತನ್ನತ್ತ ಕರೆಯುತ್ತಿದೆ. ದುಂಬಿಯ ರಸ ಹೀರುವಿಕೆಯಿಂದ ಆಗುವ ಹೊಸ ಸೃಷ್ಟಿಯ ಬಗ್ಗೆ ಹೂವಿಗೂ ಉತ್ಸಾಹ ಮತ್ತು ಕುತೂಹಲ ಇದ್ದಂತಿದೆ.

ನನಗೆ, ‘ತುಂಬಿ-ಪರಾಗ-ಹೂವ’ ರೂಪಕಕ್ಕಿಂತ ಇಲ್ಲಿನ ಹೊಸ ಸೃಷ್ಟಿ ಹೆಚ್ಚು ಪ್ರಸ್ತುತ. ಆಗಲೇ ವಿವರಿಸಿದ ಹಾಗೆ, “ನಾನು” ಕವನದ ಅನುವಾದ ನನ್ನ ಮೊದಲನೆಯದ್ದು. ಹಾಗಾಗಿ, ಅದು ಪ್ರಾಯೋಗಿಕ (experimental) ಎಂದರೂ ನಡೆಯುವುದು. ಆದರೆ, ಅದಾದ ಮೇಲೆ ಮತ್ತೆ ‘ಮುಂದೇನು?’ ಎಂಬ ಪ್ರಶ್ನೆ ಎದ್ದಿತುನನಗೆ ಈಗ ನಿಖರವಾಗಿ ಯಾವಾಗಂತ ನೆನಪಿಲ್ಲದಿದ್ದರೂ, ನನ್ನ ಕಾವ್ಯಾನುವಾದ ಕಾರ್ಯದಲ್ಲಿ ನನ್ನ ಪ್ರಥಮ ದೊಡ್ಡ ಸಾಹಸ ಎಂದರೆ ‘ಗಂಗಾವತರಣ’ದ ಭಾವಾನುವಾದ.

ನೀವು ಹಿಂದಿನ ವಾಕ್ಯವನ್ನು ಓದಿ ಹುಬ್ಬೇರಿಸಿದಿರಬಹುದು. ” ‘ಗಂಗಾವರತಣ’ (‘ಇಳಿದು ಬಾ ತಾಯಿ’ ಎಂದು ಹೆಚ್ಚು ಪ್ರಖ್ಯಾತವಾಗಿರುವ) ಕವನದ ಅನುವಾದವೇ? ರೀ ಸ್ವಾಮಿ, ಮೊದ್ಲು ಕನ್ನಡ ಕವನ ಸರ್ಯಾಗ್ ಅರ್ಥ ಮಾಡ್ಕೊಂಡ್ರಾ? ಅದಾದ್ಮೇಲೆ ಈ ಅನುವಾದ-ಗಿನುವಾದ ನೋಡ್ಕೊಬೋದು!” ಎಂದು ತಮ್ಮೊಳಗೆ ತಾವು ನಕ್ಕಿರಬಹುದು.

ನಾನು ಏನು ಹೇಳಲಿ ಈಗ? ಬಹುಶಃ ಈ ಸಾಹಸದ ಅಳತೆ ಬಗ್ಗೆ ಹೆಚ್ಚು ಯೋಚನೆಮಾಡಲಿಲ್ಲ. ನನ್ನ ಭಂಡ ಧೈರ್ಯ ನನ್ನನ್ನು ಮುನ್ನುಗ್ಗಿಸಿತು. ಮೊದಲನೆ ಎರಡು ಸಾಲು ಮಾಡಿ ನೋಡೋಣ ಅಂತ ಹೊರಟೆ. ಏನೋ ಬರೆದೆ, ಮುಂದುವರೆದೆ. ಮೊದಲನೆ ನುಡಿ ಮುಗಿಸಿದೆ. ಅಷ್ಟು ಹೊತ್ತಿಗೆ, ಇಂಗ್ಲಿಷ್-ನಲ್ಲೇ ಒಂದು ಲಯ ಹದಕ್ಕೆ ಬಂದಂತಿತ್ತು. ಆದರೆ, ಎರಡನೆ ನುಡಿ ನನ್ನನ್ನು ನಿಲ್ಲಿಸಿತು – ಅಪರಿಚಿತ ಪದಗಳು, ಧ್ವನಿಸುವ ಸಾಲುಗಳು. ಮುಂದೆ ಕಣ್ಹಾಯಿಸಿದಾಗ ಇನ್ನೊಂದಿಷ್ಟು ಕ್ಲಿಷ್ಟತೆ ಕಂಡಿತು.

ಆವಾಗ, ನನ್ನ ನೆರವಿಗೆ ಬಂದವರು ಸುನಾಥ ಕಾಕಾ ಮತ್ತು ಅವರ ವಿಶಿಷ್ಟ ಹಾಗೂ ಸೊಗಸಾದ ವ್ಯಾಖ್ಯಾನ! ಅದನ್ನು ಓದುತ್ತ ಹೋದಂತೆ ಕವನದಲ್ಲಿರುವ ಎಷ್ಟೋ ಹೊಸ ವಿಚಾರ ತಿಳಿದವು. ಅನುವಾದಕ್ಕೆ ಮರಳಿದೆ. ಪ್ರತಿ ಸಾಲಿಗೂ ಅವರು ನೀಡಿದ ವಿವರಣೆ ನಾನು ತುಳಿಯಬೇಕಾದ ದಾರಿಯಲಿಟ್ಟ ದಾರಿದೀಪದಂತಿತ್ತು! ಅನುವಾದವನ್ನು ಮುಂದುವರೆಸಿದೆ. ಬೇಂದ್ರೆಯವರ ಕವನದ ಹೆಜ್ಜೆಗೆ ಹೆಜ್ಜೆಯಿಡುತ್ತ, ಪ್ರಾಸಕ್ಕೆ ಪ್ರಾಸ ಕಂಡುಹಿಡಿಯುತ್ತ ಅನುವಾದ ಸರಾಗವಾಗಿ ಸಾಗಿತು.

ಹೀಗೆ ಸಾಗುತ್ತ, ಕವನದ ನಾದ-ಲಯ-ಪ್ರಾಸ-ಭಾಷೆಗಳ ವಿಲಕ್ಷಣವಾಗಿ ಮೇಳೈಸುವ ಭಾಗಕ್ಕೆ ಬಂದೆ. ನನ್ನ ಕಿವಿಯಲ್ಲಿ ಕಾಳಿಂಗ ರಾಯರ ಹಾಡಿನ ಧಾಟಿ ಅನುರಣಿಸುತಿತ್ತು, ನನ್ನ ಕಣ್ಣ ಮುಂದೆ ಕಾಕಾರ ವಿಶ್ಲೇಷಣೆಯಿತ್ತು, ನನ್ನ ಬೆರಳುಗಳು ತಂತಾನೆ ಪದಗಳನ್ನು ಹೊರಡಿಸುತ್ತಿದ್ದವು. ಇವತ್ತಿಗೂ, ನಾನು ಆ ಭಾಗವನ್ನು ಹೇಗೆ ಅನುವಾದಿಸಿದೆ ಎಂದು ಹೇಳಲಾರೆನು. ಕಷ್ಟವೆನಿಸಬೇಕಾದ ಸಾಲುಗಳ ಅನುವಾದ ಗಂಗೆಯ ಹರಿಯುವಿಕೆಯಂತ ‘ಸುಯ್ಯ್’ ಎಂಬಂತೆ ಮುಗಿದೇ ಹೋದವು!

(ನಾನು ಅನುವಾದ ಮಾಡಿದ ಸುಮಾರು ಒಂದುವರೆ ವರ್ಷದ ನಂತರ ನಾನು ಕಾಕಾರಿಗೆ ಅದನ್ನು ಕಳಿಸಿದೆ. ಆ ವೇಳೆಯಲ್ಲಿ ಇನ್ನು ಕೆಲವು ಕವನಗಳನ್ನು ಅವರ ವ್ಯಾಖ್ಯಾನದ ನೆರವಿನಿಂದ ಭಾವಾನುವಾದ ಮಾಡಿದ್ದೆ. ನನ್ನ ಪತ್ರಕ್ಕೆ ಅವರು ಬಹಳ (ಸ)ಹೃದ್ಯವಾದ ಉತ್ತರ ಕೊಟ್ಟರು. ಅದರಲ್ಲಿ ಅವರ ಮೆಚ್ಚುಗೆಯನ್ನು ಧಾರಾಳವಾಗಿ ಸೂಚಿಸಿದರು. ಅದು ನನಗೆ ಬಹಳ ಸಂತಸ ತಂದುಕೊಟ್ಟಿತು. ನಮ್ಮ ನಡುವೆ ಒಂದು ಆತ್ಮೀಯವಾದ ಈ-ಮೇಲ್ (email) ಸಂಪರ್ಕ ಕೂಡ ಬೆಳೆಯಿತು. ಕಾಕಾ ನನ್ನ ಮೊದಲ ಗಂಭೀರ ಓದುಗರಾದರು. ನನಗೆ ಪ್ರೋತ್ಸಾಹ ಇತ್ತರು. ಈ ಸಂದರ್ಭದಲ್ಲಿ, ಅವರಿಗೆ ನನ್ನ ಕಡೆಯಿಂದ ಒಂದು ಆತ್ಮೀಯವಾದ ಅಪ್ಪುಗೆ.)

ಗಂಗಾವತರಣ’ ಕವನದ ಅನುವಾದದ ‘ಯಶಸ್ಸೇ’ ನನ್ನನ್ನು ಬೇಂದ್ರೆಕಾವ್ಯದ ಭಾವಾನುವಾದ ಮಾಡಲು ಹೆಚ್ಚಿತೆನಬಹುದು. ಮೊದಮೊದಲು, ಅಣೆಕಟ್ಟೆಯ ಗೇಟ್ ತೆಗೆದಾಗ ಹೊರಡುವ ನೀರಿನ ರಭಸದಂತೆ ಕಾರ್ಯ ಸಾಗಿತು. ಬರುಬರುತ್ತ ಅದರ ವೇಗ ಕಮ್ಮಿಯಾದರೂ, ಆವೊತ್ತು ಶುರು ಮಾಡಿದ ಕೆಲಸ ಇಲ್ಲಿಯ ತನಕ ನಿರಂತರವಾಗಿ ನಡೆದಿದೆ. ಬೇಂದ್ರೆಯವರ ಎಷ್ಟೋ ಕವನದ (ಮುಖ)ಸ್ಪರ್ಶದಿಂದ ಒಂದು ಇಂಗ್ಲಿಷ್ ಭಾವಾನುವಾದದ ಹೊಸ ಸೃಷ್ಟಿ ಆಗಿದೆ. ಎಲ್ಲ ಸೃಷ್ಟಿಯಂತೆ ಅದರಲ್ಲಿ ಅಂಕುಡೊಂಕುಗಳಿದ್ದರೂ, ಸೃಷ್ಟಿಸುವ ಕ್ರಿಯೆ ಮಾತ್ರ ನನಗೆ ಖುಶಿ ತಂದುಕೊಟ್ಟಿದೆ. ಕೆಲವೊಮ್ಮೆ, ಇನ್ನೇನು ಎದೆ ಬಿರಿದು ಹೋಗುತ್ತದೆ ಎನ್ನೆವಷ್ಟು ಆನಂದ ಕೊಟ್ಟಿದೆ.

ಅಂತೂ, ನನ್ನೀ ‘ಅನುವಾದದ ಪಯಣ’ ನನಗೆ ಕನ್ನಡ ನುಡಿಯನ್ನು ಅತ್ಮೀಯವಾಗಿಸಿದೆ. ಅದರ ಮೇಲೆ ಅಭಿಮಾನ ಹೆಚ್ಚಿಸಿದೆ. ಅಲ್ಲದೆ, ನನಗೆ ಇಂಗ್ಲಿಷ್ ನುಡಿಯಲ್ಲಿ ಹೊಸಹೊಸ ಪ್ರಯೋಗಗಳನ್ನು ಮಾಡಲು ಅವಕಾಶ ಕೊಟ್ಟು ಇಂಗ್ಲಿಷ್ ಭಾಷೆಯನ್ನು ಇನ್ನೂ ಆಪ್ತವಾಗಿಸಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ, ನನ್ನ ಸೃಜನಶಕ್ತಿಗೆ ಸದಾ ಅವಕಾಶ ಕೊಡುತ್ತ ನನ್ನ ಸೃಜನಶೀಲತೆಯನ್ನು ಕಾಪಾಡಿಟ್ಟಿದೆ.

“ಮುಗಿಲ ಬಾಯ ಗಾಳಿಕೊಳಲ ಬೆಳಕಹಾಡ ಬೀರಿ”

(“ನಾದಲೀಲೆ” ಕವನ; “ನಾದಲೀಲೆ” ಸಂಗ್ರಹ; ಪ್ರ: 1938)

“ಬೆಳಕು ನೂಲುತಿದೆ ತುಲಾರಾಶಿಯಲಿ

ಭವ್ಯ ರಾಟಿಯಾಗಿ.”

(“ಕಣ್ಣ ಕದಿರು” ಕವನ; “ಶತಮಾನ” ಸಂಗ್ರಹ; ಪ್ರ: 2004)

“ಬೆಳಕು ನಾಯಿ ಮೈಮೂಸಿ ಬರುತಲಿದೆ

ಶುಕ್ರ ಚಂದ್ರರಂತೆ”

(“ಕಲ್ಪವೃಕ್ಷ ವೃಂದಾವನಂಗಳಲಿ” ಕವನ; “ಕಾಮಕಸ್ತೂರಿ” ಸಂಗ್ರಹ; ಪ್ರ: 1934)

ನವನವೋನ್ಮೇಷಶಾಲಿನಿಹೊಸ ಹೊಸದಾಗಿ ಕಣ್ಣ ತೆರೆಯಿಸುವ ಸಾಮರ್ಥ್ಯ. ಇದೇ ಪುರಾತನರು ಪ್ರತಿಭೆ-ಗೆ ಕೊಟ್ಟ ವಿವರಣೆ. ಒಬ್ಬ ಕವಿ ಈ ಹೊಸತನವನ್ನು ಉಪಮೆ, ರೂಪಕ, ಪ್ರತಿಮೆ (ಇಮೆಜೆಸ್) ಮೂಲಕ ಸಾಧಿಸುವನು. ಬೇಂದ್ರೆಯವರ ಪ್ರತಿಭೆಯಾದರೂ ದೈವ ಕರುಣಿಸಿದ ಪ್ರತಿಭೆ. ವರಕವಿಯ ಪ್ರತಿಭೆ. ಹೇಗೆ ಪ್ರಕೃತಿಯು ನವನವೋನ್ಮೇಷಶಾಲಿನಿಯೋ ಹಾಗೇ ಬೇಂದ್ರೆಯವರ ಕಾವ್ಯವೂ.

ಮೇಲ್ಕೊಟ್ಟಿರುವ ಮೂರು ಅವತರಣಿಕೆಗಳು ನನ್ನೀ ಮಾತನ್ನು ಎತ್ತಿ ತೋರಿಸುತ್ತವೆ. ಮೂರರಲ್ಲೂ ಬೆಳಕಿನ ಬಣ್ಣನೆ ಇದೆ. ಆದರೆ ಅದೆಂಥ ಬೇರೆಬೇರೆಯಾದ ಕಲ್ಪನೆಗಳು! ಒಬ್ಬನೇ ಕವಿ ಮೂರೂ ಬರೆದನೆಂದರೆ ಯಾರಾದರೂ ಆಶ್ಚರ್ಯ ಪಡೆಯುವರು.

ಅಷ್ಟೇ ಮುಖ್ಯವೆಂದರೆ, ಈ ಎಲ್ಲ ಕಲ್ಪನೆಗಳ ನಾವೀನ್ಯ. ಇಲ್ಲಿ ಯಾವುದೂ ಸವೆತ ಕವಿಸಮಯ ಅಲ್ಲ, ಯಾವುದೂ ಕ್ಲೀಷೆ (cliché) ಅಲ್ಲ. ಇದೇ ಬೇಂದ್ರೆಯವರ ವೈಶಿಷ್ಟ್ಯ. ಸಾಕಷ್ಟು ವಿಮರ್ಶಕರು ಬೇಂದ್ರೆಯವರ ಈ ಸ್ಪೋಪಜ್ಞತೆ (ಒರಿಜಿನ್ಯಾಲಿಟಿ) ಬಗ್ಗೆ ಮಾತಾಡಿದ್ದಾರೆ. ಇದೇ ಗುಣ ಬೇಂದ್ರೆಯವರ ಕಾವ್ಯಕ್ಕೆ ಮೆರಗು ತಂದುಕೊಟ್ಟು, ರೂಪಕೋಪಮೆಗಳಿಗೆ ಹೊಸತನದ ಮುದ್ರೆಯೊತ್ತಿ, ಓದುಗರನ್ನು ಮತ್ತು ಕೇಳುಗರನ್ನು ಬೆರಗುಬಟ್ಟಿಸುತ್ತ ಬಂದಿದೆ.

“ಮಾತು ಮಾತು ಮಥಿಸಿ ಬಂದ ನಾದದ ನವನೀತಾ

ಹಿಗ್ಗ ಬೀರಿ ಹಿಗ್ಗಲಿತ್ತು ತನ್ನ ತಾನೇ ಪ್ರೀತಾ

ಅರ್ಥವಿಲ್ಲ ಸ್ವಾರ್ಥವಿಲ್ಲ ಬರಿಯ ಭಾವಗೀತಾ”

(“ಭಾವಗೀತ” ಕವನ; “ನಾದಲೀಲೆ” ಸಂಗ್ರಹ; ಪ್ರ: 1938)

“ನಾದ ಬೇಕು ನಾದ ಬೇಕು | ನಾದಾನ ನಾದ ಬೇಕು | ನಾದಕ್ಕೆ ಪ್ರತಿನಾದ ಬೇಕು” – ಬೇಂದ್ರೆ ಕನ್ನಡ ಕಾವ್ಯ ಪರಂಪರೆ ಕಂಡ ವಿಲಕ್ಷಣ ನಾದಲೋಲರು. ನಮಗೆ ಎಷ್ಟು “ನಾದ ಬೇಕು” ಅದಕ್ಕೂ ಹೆಚ್ಚು ನಾದ ದಾನ ಮಾಡಿ ಹೋದರು. ಈ ನಾದ ಒಮ್ಮೆ ತುಂಬಿಯ ಗುಂಗುಂ ಅಂತಾಗಿ, ಮತ್ತೊಮ್ಮೆ ಕೋಗಿಲೆಯ ಕುಹುಕ್ಕುಹೂ ಅಂತಾಗಿ, ಮಗದೊಮ್ಮೆ (ಅಂತರಂಗದ) ಮೃದಂಗದ ತೋಂತನಾನಾ ಅಂತಾಗಿ, ಇನ್ನೊಮ್ಮೆ ಜುಮ್ ಜುಮು ರುಮುಜುಮು ಗುಂಗುಣು ದುಮುದುಮು ಅಂತಾಗಿ ಹರಿದಿದೆ. ನಾದದ ಜೊತೆಜೊತೆಗೆ ಅವರ ಕವನಗಳಲ್ಲಿ (ಅಂತ್ಯ)ಪ್ರಾಸದ ಮೆರೆತ ನೋಡಬಹುದು. ಎಲ್ಲ ಪರಿಯ ಲಯಗಳನ್ನು ನೋಡಬಹುದು. (ಲಯದ ಪ್ರಯೋಗದಲ್ಲಂತೂ ಬೇಂದ್ರೆಯವರಿಗೆ ಬೇಂದ್ರೆಯವರೇ ಸಾಟಿ). ಇದೇ ಕಾರಣಕ್ಕೆ, ಶಂಕರ ಮೊಕಾಶಿ ಪುಣೇಕರ ಹೇಳಿದ “[ಬೇಂದ್ರೆಯಂಥ] ವರಕವಿಯಲ್ಲಿ ಭಾವ-ನಾದ-ಭಾಷೆಗಳು ಸಂಪೂರ್ಣ ಸಹಕಾರದಿಂದ ಅವತರಿಸಿ, ಅವಳಿ-ಜವಳಿ-ತ್ರಿವಳಿಯಾಗಿ ಜನ್ಮ ಪಡೆಯುತ್ತವೆ” ಮಾತಿಗೆ ತಲೆದೂಗಿಸಬೇಕು.

ಭಾವಗೀತ. ಇದು ಬೇಂದ್ರೆಯವರು ನೆಚ್ಚಿದ ಕಾವ್ಯಪ್ರಕಾರ. ಇಂಗ್ಲಿಷ್-ನಲ್ಲಿ ಇದಕ್ಕೇ ‘ಲಿರಿಕ್ ಪೊಎಟ್ರಿ’ ಎನ್ನುವರು. ಭಾವಗೀತದಲ್ಲಿ ಶಬ್ದಾರ್ಥಕ್ಕಿಂತ ಭಾವಕ್ಕೆ ಹೆಚ್ಚು ಪ್ರಾಮುಖ್ಯತೆ ಇರುತ್ತದೆ. ಇಂಥ ಕಾವ್ಯದಲ್ಲಿ, ಕವಿ ಬೇಕಾದ ಭಾವ ಉಕ್ಕಿಸಲು ನಾದ, ಲಯ, ಪ್ರಾಸ, ತಾಳ ಇತ್ಯಾದಿ ಬಳಸುತ್ತಾನೆ.

ಬೇಂದ್ರೆಯವರು ಹುಟ್ಟಾ ಕವಿ. ಶಂಕರ ಮೊಕಾಶಿ ಹೇಳಿದಂತೆ ‘ನಿಜವಾದ ಭಾವಗೀತಾಕಾರರು’. ಯಾವ ಕಾಲದಲ್ಲಿ ಪಾಶ್ಚಾತ್ಯ ಪ್ರಭಾವದಿಂದ ಕನ್ನಡ (ಮತ್ತು ಇತರ ಭಾರತೀಯ ಭಾಷೆಗಳ) ಕಾವ್ಯ ಹಾಡುಗಬ್ಬದ ಪದ್ಧತಿಯನ್ನು ತೊರೆದು ಓದುಗಬ್ಬದ ಕಡೆ ಹೊರಳುತಿತ್ತೋ, ಆ ಕಾಲದಲ್ಲಿ ಅವರು ತಮ್ಮ ಅಸಾಮಾನ್ಯ ಪ್ರತಿಭೆಯಿಂದ ಆಧುನಿಕ ಎನಿಸುವ ನೂರಾರು ಹಾಡುಗಬ್ಬ ರಚಿಸಿದರು. ಅವರ ರಚನಾಕ್ರಮವಾದರೊ ಸೆಲೆಯಷ್ಟೆ ಸಾಜವಾದುದು. ನಿರಾಯಾಸವಾಗಿ ಇಳಿದು ಬಂದ ನಾದ, ಲಯ, ಪ್ರಾಸ, ಶಬ್ದ ಜೊಡಿಸುತ್ತ ಅವರು ಹೆಣೆದ ಕವನಗಳಲ್ಲಿ ಸಂಕೀರ್ಣತೆ, ದ್ವನ್ಯರ್ಥ, ಗೇಯತೆ, ಆತ್ಮೀಯತೆ, ಸರಳತೆ, ಶ್ಲೇಷಾರ್ಥಗಳನ್ನು ವಿಧವಿಧವಾಗಿ ತುಂಬಿದರು.

ಆದರೆ, ಕೊನೆಗೂ ಭಾವಗೀತೆಗೆ ಅರ್ಥವೂ ಇಲ್ಲ, ಸ್ವಾರ್ಥವೂ ಇಲ್ಲ. ಎಂದರೆ, ಪ್ರತಿಯೊಂದು ಭಾವಗೀತ ಸ್ವಚ್ಛಂದ – ಯಾವುದರ ಹಂಗೂ ಇಲ್ಲದ ಒಂದು ಸೃಷ್ಟಿ. “ಎಲ್ಲೆಕಟ್ಟು ಇಲ್ಲದಾ ಬಾನಬಟ್ಟೆಯಲ್ಲಿ” ಹಾರುತ್ತಿರುವ ಹಕ್ಕಿಯ ಮೈಯಿಂದ ಉದುರಿದ ಗರಿ. ಅದಕ್ಕಿರುವ ಒಂದೇ ಒಂದು ಗುರಿ: ಹಿಗ್ಗನ್ನು ಬೀರುವದು.

“ಆಡುತಾಡುತ ಬಂದು ಸಿಂಗಾರಸೊಳ್ಳೀ ಹಾಂಗ

ಹಾಡಿಲೆ ಕಿವಿಗಲ್ಲ ಕಡಿದ್ಯೇನ”

(“ಮಾಯಾಕಿನ್ನರಿ” ಕವನ; “ಸಖೀಗೀತ” ಸಂಗ್ರಹ; ಪ್ರ: 1937)

“ಅಕ್ಕರ ಛಂದವು ಸಾಂಗತ್ಯ-ಸಂಸ್ಕಾರ

ಹೊಂದಿಲ್ಲಿ ಬಂದಿದೆ ಹೊಸಹೊಸದು

ಅಕ್ಕರೆಯದಾಯಿತು ಅಕ್ಕರಿಗರಿಗೆಲ್ಲ

ಅಕ್ಕುಮಿಕ್ಕೆನುವಂತೆ ಕೊನೆವರೆಗು

(“ಸಖೀಗೀತ” ಕವನ; “ಸಖೀಗೀತ” ಸಂಗ್ರಹ; ಪ್ರ: 1937)

“ಸ್ವಾದದ ನಾದದ ಮೋದದ ಒಳಬಸಿರನೆ ಬಗೆದು

ಹುಂಕಾರದ ಒಳನೂಲನು ಮೆಲ್ಲನೆ ಹೊರದೆಗೆದು

ಶಬ್ದಕೆ ಹಾಸಿಗೆಯಾಗಿಹ ತನಿಮೌನದಿ ಮುಗಿದು | ಏಲಾವನ…”

(“ಏಲಾಗೀತ” ಕವನ; “ಗಂಗಾವತರಣ” ಸಂಗ್ರಹ; ಪ್ರ: 1951)

ಕವಿ ಕುಶಲಕರ್ಮಿ. ಅವನು ಕಲೆಗಾರ. ಅವನ ಕೈಯಲ್ಲಿ ನುಡಿ ಹಿಗ್ಗಬಹುದು, ಹೊಸ ರೂಪುರೇಷೆ ಕಂಡುಕೊಳ್ಳಬಹುದು, ಹೊಸ ಚೈತನ್ಯ ಪಡೆಯಬಹುದು. ಕವಿಯು ಬಳಸುವ ಭಾಷೆ ಜನರ ಭಾಷೆ ಆಗಿಯೂ ಅದನ್ನು ಮೀರಿರುತ್ತದೆ. ಸಾಮನ್ಯ ಮಾತಿನಲ್ಲಿರದ ದ್ವನಿ, ರೂಪಕ, ಉಪಮೆಗಳನ್ನು ಕಾವ್ಯದಲ್ಲಿ ನೋಡಬಹುದು. ಗದ್ಯದಲ್ಲಿರದ ಲಯ, ಪ್ರಾಸ, ನಾದ ಕಾವ್ಯದಲ್ಲಿ ಕಾಣಬಹುದು. ಭಾಷಾಬಳಕೆಯ ವಿಚಾರದಲ್ಲಿ ಒಬ್ಬ ಕವಿಗಿರುವಷ್ಟು ಸ್ವಾತಂತ್ರ್ಯ ಬೇರೆಯವರಿಗೆ ಇರುವುದಿಲ್ಲ.

ಕನ್ನಡ ನುಡಿಗೆ “ವಿಶ್ವದೊಳನುಡಿಯಾಗಿ ಕನ್ನಡಿಸಿದ ಅಂಬಿಕಾತನಯ“ರು ದಿವ್ಯಸ್ಪರ್ಶ ನೀಡಿದರು ಎಂದು ನನ್ನ ಭಾವನೆ. ವರಕವಿ – ಎಂದರೆ ವರ ಪಡೆದುಕೊಂಡು ಬಂದ ಕವಿ – ಮುಕುಟ ಬೇಂದ್ರೆಯವರ ತಲೆ ಮೇಲೆ ಕೂರುವಂತೆ ಇನ್ನಾರ ತಲೆ ಮೇಲೂ ಕೂರುವುದಿಲ್ಲ. ಅವರು ಕನ್ನಡ ನುಡಿಯನ್ನು ಬಳಸಿದ ರೀತಿ ಅಪ್ರತಿಮ. ಅದರ ಒಳಬಸಿರನೆ ಬಗೆದು ಒಳನೂಲನು ಹೊರದೆಗೆದರು. ನನ್ನ ಪ್ರಕಾರ, ಅವರ ಕಾವ್ಯಭಾಂಡಾರ ಒಂದು ಜಗದ್ಸೋಜಿಗ. ಹಾಗೂ, ಕವಿಯಾಗಿ ಅವರು ನ ಭೂತೋ ನ ಭವಿಷ್ಯತಿ’.

ಕೆಲವೊಮ್ಮೆ ಬೇಂದ್ರೆಯವರ ಕಾವ್ಯ ಓದುವಾಗ, ನಾನೊಂದು ಆಟ ಆಡುತ್ತೇನೆ. ಅದೇನೆಂದರೆ, ನಾನು ಓದುತ್ತಿರುವ ಕವನದಲ್ಲಿ ಎಷ್ಟು ತತ್ಸಮ (ಸಂಸ್ಕೃತದಿಂದ ಎರವಲು ತೆಗೆದುಕೊಂಡ ಪದ) ಇವೆ ಅಂತ ಎಣಿಸುವುದು. ಹೀಗೆ ಮಾಡಿದಾಗಲೆಲ್ಲ, ನನಗೆ ಅಚ್ಚರಿಯಾಗುವುದು. ’ಏನಿದು! ಜನಪದದಲ್ಲಿ – ಎಂದರೆ ಧಾರವಾಡದ ಆಡುನುಡಿಯಲ್ಲಿ – ಈ ಪರಿಯ ಶ್ರೇಷ್ಠ ಕವನವ ಹೇಗಾದರೂ ಬರೆದರೊ! ಪ್ರಪಂಚದ ಎಲ್ಲ ಭಾಷಾ ಪರಂಪರೆಗಳಂತೆ ಗ್ರಾಂಥಿಕ ಹಾದಿ ಹಿಡಿದು ಬಂದ ಕನ್ನಡ ಕಾವ್ಯವನ್ನು ಉಪಭಾಷೆ (ಡಾಯಲೆಕ್ಟ್) ಎನಿಸಿಕೊಂಡ “ಧಾರವಾಡ ಕನ್ನಡ”ದಲ್ಲಿ ಏನೇನು ಜಾದೂ ಮಾಡಿದರೊ! ಈ ರೀತಿಯ ಕಾವ್ಯವು ಬೇರೆಲ್ಲಾದರೂ ಉದ್ಭವಿಸಿದೆಯಾ?’ ಎಂದು ನನ್ನನ್ನೇ ನಾನು ಕೇಳಿಕೊಳ್ಳುವುದುಂಟು.

(ಉದಾಹರಣೆಗಾಗಿ, ‘ಶತಮಾನದ ಕವಿತ’ ಎನಿಸಿಕೊಂಡ ‘ಜೋಗಿ’ ಕವನದಲ್ಲಿ ಬರಿ ಹತ್ತೇ ಹತ್ತು ಸಂಸ್ಕೃತ ತತ್ಸಮಗಳಿವೆ! ಮಿಕ್ಕೆಲ್ಲವೂ ಅಚ್ಚಗನ್ನಡ ಪದಗಳು. ಇದು ಎಷ್ಟು ದೊಡ್ಡ ವಿಷಯ ಅಂತ ಅರ್ಥ ಮಾಡಿಕೊಳ್ಳಲು ಅದೇ ಕಾಲದಲ್ಲಿ ಬರೆದ ಬೇರೆ ಕವನಗಳನ್ನು ಓದಬೇಕಲ್ಲದೆ ಪಂಪನ ಕಾಲದಿಂದ ಶುರುವಾದ ಸಾಹಿತ್ಯಿಕ ಸಂಪ್ರದಾಯದಲ್ಲಿ ಸಂಸ್ಕೃತಕ್ಕೆ ಎಷ್ಟು ಒತ್ತು ಕೊಡುತ್ತ ಬಂದಿದ್ದರು ಎಂದು ನೋಡಬೇಕು. ಹೀಗಂದ ಮಾತ್ರಕ್ಕೆ, ಬೇಂದ್ರೆ ಸಂಸ್ಕೃತ ಬಳಸಲಿಲ್ಲೆಂತಲ್ಲ. ವೈದಿಕ ಸಂಪ್ರದಾಯದಿಂದ ಬಂದ ಬೇಂದ್ರೆ ತಮ್ಮನ್ನೇ ‘ವೇದವಿತ್ ಕವಿ’ ಕರೆದುಕೊಳ್ಳುತ ಸಾಮವೇದ ಛಂದಸ್ಸಿನಲ್ಲಿ ‘ನೋss’ ಕವನದಂಥ ಅನೇಕ ಕವನಗಳನ್ನು ಬರೆದದ್ದುಂಟು.)

ಬೇಂದ್ರೆಯವರ ಮಾತಿನ ಜೊತೆ ಶುರುವಾದ ಬರಹ ಅವರ ಮಾತಿನ ಜೊತೆ ಮುಗಿಸುವೆ.

ಕನ್ನಡವು ಕನ್ನಡವ ಕನ್ನಡಿಸುತಿರಬೇಕು.

ಪ್ರತಿಕ್ರಿಯಿಸಿ