ಕತ್ತಲು ಮತ್ತು ಗುಲಾಬಿ ಪಕಳೆಗಳು

ಎರಡೂ ಪಕ್ಕೆಗಳು ನೋಯುತ್ತಿದ್ದವು. ದೆಹಲಿಯ ಆ ಚಳಿ, ಕೇಡುಗಾಳಿ, ಮೈಯ್ಯೊಳಗೆ ಹೊಕ್ಕು ದೊಮ್ಮೆಗಳನ್ನು ಹಿಂಡಿ ಬಿಟ್ಟಿದ್ದವು. ಕೆಮ್ಮಿದರೂ, ನಕ್ಕರೂ,ಉಸಿರು ಎಳೆದುಕೊಂಡರೂ ಪಕ್ಕೆಗಳು ಅಯ್ಯೋ ಅನ್ನುತ್ತಿದ್ದವು. ಇಡೀ ದಿನ ರೋಗಿಯಂತೆ ರಗ್ಗಿನೊಳಗೆ ಕಣ್ಣು ಮುಚ್ಚಿ ಉಸಿರಾಡಿಕೊಂಡಿದ್ದವನು ಅದನ್ನು ಕಿತ್ತೆಸೆದು ಬೀದಿಗೆ ಬಿದ್ದೆ. ಮುಂಜಂಜೆ. ಒಂದೊಂದೆ ದೀಪಗಳು ಒತ್ತಿಕೊಳ್ಳುತ್ತಿದ್ದವು. ಒಮ್ಮೊಮ್ಮೆ ರೋಗಿಯಾಗಿದ್ದಾಗ, ಒಂಟಿಯಾಗಿದ್ದಾಗ, ರಾತ್ರಿ ಹಬ್ಬಲು ಶುರುವಿಟ್ಟರೆ ಸಾಕು ಕತ್ತಲು ಕೊಲ್ಲಲು ಮಚ್ಚು ಮಸೆಯುತ್ತಿದೆ ಅನಿಸುತ್ತದೆ. ಕತ್ತಲಿನ ಜತೆಗಿನ ಜೂಜಿನಿಂದ ಮುಟ್ಟಿದರೆ ಸಾಕು ಇನ್ನೇನು ಅತ್ತೇ ಬಿಡುತ್ತೇನೆ ಅನ್ನುವಷ್ಟು ಮೆತ್ತಗಾಗಿರುತ್ತೇನೆ. ಆದರೂ ಈ ದೀಪದ ಬೆಳಕಿಗಿಂತ ಮೆತ್ತಗಾಗಿಸುವ ಕತ್ತಲೆಂದರೆ ನನಗೆ ಹೆಚ್ಚು ಪ್ರೀತಿ . ಈ ಬೀದಿ ದೀಪಗಳು ಮತ್ತು ಬೆಳಕು ಇದನ್ನು ಕೇಳಿಸಿಕೊಳ್ಳದ್ದಿದ್ದರೆ ಸಾಕು ! ನಾನೀಗ ಯಾರೊಂದಿಗೂ ಜಗಳವಾಡುವ ಸ್ಥಿತಿಯಲ್ಲಿ ಇಲ್ಲ.
ಇಂದು ಗುರುವಾರ!

ನಿಝಾಮುದ್ದಿನ್ ದರ್ಗದಲ್ಲಿ ಕವ್ವಾಲಿ ಹಾಡುತ್ತಾರೆ. ನಶೆ ಏರಿದವರಂತೆ ಕೆಲವರು , ತಿಕ್ಕಲು ಹಿಡಿದವರಂತೆ ಕೆಲವರು ಕುಣಿಯುತ್ತಾರೆ, ಕಿರಿಚುತ್ತಾರೆ, ಅಳುತ್ತಾರೆ ಹಲ್ಲು ಮಸೆಯುತ್ತಾರೆ ನಟಿಕೆ ಮುರಿಯುತ್ತಾರೆ ಧೂಳೆತ್ತಿ ಸಾಪಣಿ ಹಾಕುತ್ತಾರೆ.!ಖುದಾನ ಪೇಮಕ್ಕಾಗಿ ಬೇಡಿ ಮೈ ಮನಸ್ಸನ್ನು ಅಲ್ಲೆಲ್ಲ ಗುಲಾಬಿ ಪಕಳೆಗಳಂತೆ ಕಿತ್ತು ಚೆಲ್ಲಾಡಿಬಿಡುತ್ತಾರೆ!
ನನ್ನಂತ ರೋಗಗ್ರಸ್ತರಿಗೆ ಅದು ಹೇಳಿ ಮಾಡಿಸಿದ ಜಾಗ ! ಗಾಲಿಬ್ನ ಗೋರಿಯೂ ಅಲ್ಲೇ ಇದೆ.
ನನಗೆ ಈ ಗಾಲಿಬನ ನಂಟು ಅಂಟಿಸಿದ್ದು ಅವಳೇ, ಅಪ್ಪಟ ನಶೆಯ ಹುಡುಗಿ.ಅದು ಎಷ್ಟು ಸೊಗಸಾಗಿ ಮಾತಾಡುತ್ತಿದ್ದಳು,ಕೆಣಕುತ್ತಿದ್ದಳು.

ಅಂದು ರಾತ್ರಿ ಇಬ್ಬರು ಒಬ್ಬರನ್ನೊಬ್ಬರು ಮುದ್ದಾಡಿ ಬೆವರಾದ ಮೇಲೆ ಅವಳು ಗಾಲಿಬ್ನ ಗೋರಿಯ ಮಾತಿಗಿಳಿದಳು ಎಲ್ಲೋ ಕಣ್ಣಿಟ್ಟು ಅಂದಳು “ನಶೆ ಮನುಷ್ಯರಿಗೆ ಎಷ್ಟು ಮುಖ್ಯ ಅಲ್ಲವೇನೋ’?ಆದರೆ ನಿನ್ನ ಆ ಪದ್ಯದ ಸಾಲು ನನಗೆ ಇಷ್ಟವಿಲ್ಲ ‘ಸಾವು ನಶೆ ಏರಿಸುವಂತಿದ್ದರೆ ಹಗಲು ಇರುಳೆನ್ನದೆ ಕುಡಿಯುತ್ತಿದ್ದೆ’ ಅಂತೆ ಯಪ್ಪಾ ನಿಂಗೆ ಖಾಯಿಲೆ ಇದೆ ಕಣೋ ಯಾರಾದರೂ ಡಾಕ್ಟರ್ ಹತ್ರ ತೊರುಸ್ಕೋ”. ಮತ್ತೆ ಮುತ್ತಿಟ್ಟಳು.
ನಾನು: ನೀನೆ ನನಗೆ ಡಾಕ್ಟ್ರು(ಅವಳ ಮೈಮೇಲೆ ಬಿದ್ದೆ)
ಅವಳು: ಇದಕ್ಕೇನು ಕಮ್ಮಿ ಇಲ್ಲ ..
ನಾನು: ಹೊಸ ಸಾಲು ಹುಟ್ಟುತ್ತಿದೆ ಹೇಳ್ಲಾ..
ಅವಳು: ಹಿಂಗೆ ಮುಂದುವರಿದರೆ ಮಕ್ಳು ಹುಟ್ಟುತ್ತಾವೆ ಅಷ್ಟೇ.. ಪದ್ಯ ಅಲ್ಲ ..
ನಾನು : ಕೇಳೇ ಇಲ್ಲಿ ..
ಅವಳು: ಯಪ್ಪಾ ರೋಧನೆ ನಿಂದು .. ಹೇಳಿ ಸಾಯಿ ..
ನಾನು : ಜೀವಸಂಪಿಗೆ ನೀನು
ನಿನ್ನ ಘಮಲಿಗೆ ಮರುಳಾದ
ಮಾಯಕಾರ ನಾನು !
ಹೆಂಗೆ?
ಅವಳು, ನಾನು : (ಮೌನ)
ಅವಳ ಕನ್ನೆ ಕೆಂಪಡರಿತು ನನ್ನ ಎದೆಯೂ ಮುತ್ತು ನಮ್ಮ ಮೌನ ಮುರಿಯಿತು. ಅದಾದ ಕೆಲವು ದಿನದಲ್ಲಿ ನಮ್ಮ ಸಂಬಂಧವೂ ಮುರಿಯಿತು ಅದು ಮುತ್ತಿನಷ್ಟು ಮಧುರವಾಗಿರಲಿಲ್ಲ.

ಮೊದಲ ಬಾರಿ ನಿಝಾಮ್ಮುದ್ದಿನ್ ದರ್ಗಾದ ದಾರಿ ಹುಡುಕಿಕೊಂಡು ಅಲ್ಲಿಗೆ ಹೋದಾಗ ಮಳೆ ಬಂದಿತ್ತು. ನೆಲ ಕೆಸರು ರಾಡಿಯಾಗಿತ್ತು . ನಾನು ನೆನೆದು ತೆಪ್ಪೆಯಾಗಿದ್ದೆ. ಗಾಲಿಬ್ನ ಗೋರಿಯನ್ನು ಹುಡುಕಿಕೊಂಡು ಹೋಗಿದ್ದೆ. ಗಾಲಿಬ್ನನ್ನು ಗೋರಿಯಲ್ಲಿ ಹಿಡಿದಿಡಬಹುದೆ. ಸಾವು ಎಲ್ಲರನ್ನು ಗೋರಿಯಲ್ಲಿ ಹಿಡಿದುಬಿಡುತ್ತೆ. ಕವಿಯೋ, ಪೆಟ್ಟಿ ಅಂಗಡಿಯಲ್ಲಿ ಕೂತು ಸೀಮೆಎಣ್ಣೆ ಸ್ಟೋವ್ನಲ್ಲಿ ಬೋಂಡಾ ಕರಿಯುವ ತಿಮ್ಮಕ್ಕನೋ ಎಲ್ಲರನ್ನು ಗೋರಿ ತನ್ನೊಳಗೆ ಹಿಡಿದಿಡುತ್ತದೆ.
ನಾನು ಅವಳು ತಿಮ್ಮಕ್ಕನ ಬೋಂಡ ತಿನ್ನಲು ಹೋಗುತ್ತಿದ್ದೆವು. ಒಮ್ಮೆ ವಾಪಾಸು ಮನೆಗೆ ಬರುವಾಗ ಅಂದಿದ್ದಳು ”ಈ ಸ್ವರ್ಗ ಗಿರ್ಗ ನರ್ಕ ಪರ್ಕ ಅಂತ ಏನಾರ ಇದ್ರೆ ತಿಮ್ಮಕ್ಕ ಪಕ್ಕಾ ಸ್ವರ್ಗಕ್ಕೆ ಹೋಗ್ತಾಳೆ ಕಣೋ ಮತ್ತೆ ಅಲ್ಲೂ ಬೋಂಡ ಅಂಗಡಿ ಹಾಕ್ತಾಳೇ. ಮತ್ತೆ ಈ ದೇವರುಗಳೆಲ್ಲ ಸ್ವರ್ಗದಲ್ಲಿ ಇರೋ ಬಗ್ಗೆ ನಂಗೆ ಡೌಟಿದೆ ಅಕಸ್ಮಾತ್ ಅವ್ರು ಅಲ್ಲೆ ಇದ್ದರೆ ಬ್ರಹ್ಮಾ ವಿಷ್ಣು ಈಶ್ವರನಾದಿಯಾಗಿ ಎಲ್ಲರೂ ತಿಮ್ಮಕ್ಕನ ಬೋಂಡಾ ಅಂಗಡಿ ಮುಂದೆ ಎಕ್ಸ್ಟ್ರಾ ಚಟ್ನಿ ಅಜ್ಜೀ.. ಎಕ್ಟ್ರಾ ಚಟ್ನಿ ಅಜ್ಜೀ’ ಅಂತ ಬಿಕ್ಷೆ ಬೇಡ್ತಾ ನಿಂತಿರ್ತಾರೆ”
ತ್ತಿಮ್ಮಕ್ಕನ ಬೋಂಡದ ಘಮಲನ್ನು, ಗಾಲಿಬ್ನ ಕಾವ್ಯದ ಅಮಲನ್ನು ಗೋರಿಯಲ್ಲಿ ಹಿಡಿದಿಡಬಹುದೇ!
ಈ ಸೋಜಿಗವೆ ನ್ನನ್ನ ಇಲ್ಲಿಗೆ ಎಳೆದು ತಂದಿದ್ದು.
ಕಬಾಬು ವಾಸನೆ ಮೂಗಿಗೆ ಬಡಿಯಿತ್ತಿತ್ತು! ಬೆಂಕಿಯು ತನ್ನ ಪಾಡಿಗೆ ತಾನು ಉರಿಯುತ್ತಿತ್ತು. ಅಲ್ಲೆ ಹೊಗೆಯು ಮಳೆಯೂ ಮಬ್ಬು ಮುಸುಕಿನ ಆಟ ಕಟ್ಟುತ್ತಿದ್ದವು. ಕಬಾಬು ಪ್ಲೇಟು ಕೈಗಿತ್ತ ಅವನ ಕೈಯ್ಯು ಒದ್ದೆಯಾಗಿತ್ತು. ಪೀಸಿನ ಬಿಸಿ ನಾಲಿಗೆ ಸುಟ್ಟಿತು! ಹಬೆಯನ್ನು ಹೊರ ಉರುವಿ ತಿಂದೆ! ಎಕ್ಟ್ರಾ ನಿಂಬೇ ಪೀಸು ,ಕೊಚ್ಚಿದ ಈರುಳ್ಳಿ, ಪುದಿನಾ ಚಟ್ನಿಯನ್ನೂ ಹಾಕಿಸಿಕೊಂಡೆ. ಅವನು ಬೇಜಾರಾದಂತೆ ಕಾಣಲ್ಲಿಲ್ಲ.

ಅಲ್ಲಾ ಓ ಅಕ್ಬರ್ ಅಲ್ಲಾ.. ಅಲ್ಲಾ ಓ ಅಕ್ಬರ್ ಅಲ್ಲಾ,.. ನಮಾಜು ಶುರುವಾಯಿತು , ಜೋರಾಗಿ. ನಾನು ಮುಸುಡಿ ಮುರಿದೆ.
ಅಲ್ಲೊಬ್ಬ ಸಾಬಿತಾತಾ ಕುಕ್ಕುರುಗಾಲಲ್ಲಿ ಕೂತು ನವಿಲುಗರಿ ಹಿಡಿದು, ಬೀಡಿ ಸೇದುತ್ತಿದ್ದಾನೆ ! ಗಾಳಿಯಲಿ ಜಾದುವಿನಂತ ಹೊಗೆ ಬಿಟ್ಟು ಕರೆದ!
“ಅವೋ ಬೇಟಾ.. ಅವೋ…”
ನಾನು ಇವನಿಗ್ಯಾವಾಗ ಮಗನಾದೆ.?
ಬೇಟಾ ಅವೋ.. ಝಾದಾ ನಹಿ ಬೀಸ್ ರುಪಿಯ್ಯಾ.. ಬಸ್.. ಅವೋ.. ಅವೋ ಬೇಟ…
ಕರೆಯುತ್ತಲೇ ಇದ್ದಾನಲ್ಲಾ..
ಹೋಗಲೇ?
ಕಾಸು ಕೊಡಬೇಕಲ್ಲಾ .
ಅವನು ಹಿಡಿದ ನವಿಲಗರಿಯ ಕಂತೆಯು ಅವನ ಕಣ್ಣಗುಳಿಯು ಯಾವ ಮಾಯದಲ್ಲೊ ನ್ನನ್ನ ಸೆಳೆದಿವೆ. ಬಲೆಗೆ ಬಿದ್ದೆ.
ಹುಚ್ಚು ಇಳಿಸುವವನಂತೆ ನವಿಲುಗರಿ ಕಂತೆಯನ್ನು ಎರಡು ಸಾರಿ ಮೈ ಮೇಲೆ ಸೋಕಿಸಿದ. ಹುಚ್ಚು ಹಿಡಿಸಿದನೋ ಬಿಡಿಸಿದನೋ ಗೊತ್ತಿಲ್ಲಾ.. ಅವನು ಕೈ ಹಿಡಿದು ಹಿಂದಿಯಲ್ಲಿ ಏನೇನೊ ಒದರುತ್ತಾ ಹೋದ ನಾನು ನ್ನನ್ನ ಕನ್ನಡಕ್ಕೆ ಅನುವಾದಿಸಿಕೊಂಡೆ. ‘ನೀನು ತಲೆತಿರುಕ ಹುಡುಗಾ.. ಊರೂರು ಅಲೀತೀ.. ಹುಡುಗಿ ಬೆಡಗಿ ಕಂಡ್ರ ಮೈ ಮರೀತೀ: ಚೆಲುವಾ, ಆದರಾ ಖುಧಾಗ ನಿನ್ನ ಮೇಲೆ ಬಾರೀ ಪ್ರೀತಿ ಅಯ್ತಿ. ದುನಿಯಾ ದೊಡ್ಡದದಾ.. ಕಾಲಿಟ್ಟಲ್ಲಿ ದಾರಿ ತೆರಿತದ! ಒಟ್ಟಾ ಸೊಕ್ಕು ಮಾಡಬ್ಯಾಡ ಮುಂದೊಂದು ದಿನ ನಿನ್ನ ಮುಂದಾ ಕೈಲಾಸ ತೆರ್ಕೋತೈತಿ’ ಅಂತ ಏನೋ ಗುಳುಗುಳು ಗಿಳಿಗಿಳಿ ಗಳಗಳ ಅಂದು ನ್ನನ್ನ ದಾಡಿ ಹಿಡಿದು ಅಲುಗಾಡಿಸಿದಾ. ನಾನು ನಕ್ಕೆ ಅವನು ನಕ್ಕಾ. ಅವನ ಕೈಗೆ ಇಪ್ಪತ್ತು ರುಪಾಯಿ ಕಾಸು ಕುಕ್ಕಿದೆ. ಅವನು ಮತ್ತೆ ಬೀಡಿ ಹಚ್ಚಿದ
ನಿಂತ ನಾನು ‘ತಾತಾ ಗಾಲಿಬ್ನ ಗೋರಿಯೆಲ್ಲಿ’?
ನವಿಲುಗರಿಯಲ್ಲಿ ದಿಕ್ಕು ತೋರಿಸುವ ಅವನು ‘ ಈ ದಾರಿಲಿ ಹೋಗಿ ಆ ಓಣಿಯಲ್ಲಿ ಎಡಕ್ಕೆ ತಿರುಗು.ಅಲ್ಲೆ.ಪಕ್ಕದ ದುಖಾನ್ದಾಗ ಚಾ ಚಲೋ ಇರ್ತತಿ ಕುಡಿ; ಹಂಗಾ ಗಾಲಿಬನಿಗಾ ಗುಲಾಬಿ ಮತ್ತು ಕಲ್ಲು ಸಕ್ಕರೆ ಹಿಡಿದು ಹೋಗು’
ಗಾಲಿಬ್ನ ಗೋರಿಯ ದಾರಿ ಹಿಡಿದೆ. ಅವತ್ತು ಗಾಲಿಬ್ನ ಗೋರಿಯ ಮೇಲೆ ಗುಲಾಬಿಯನ್ನು ಕಲ್ಲು ಸಕ್ಕರೆಯನ್ನು ಇಟ್ಟೆ. ಧೂಪಕ್ಕೆ ಸಾಮ್ರಾಣಿಯನ್ನು ಉದುರಿಸಿದೆ. ವಿಶೇಷವಾಗಿ ಏನೂ ಅನಿಸಲಿಲ್ಲ. ಏನೋ ಅನಿಸಬೇಕೆಂದು ನನಗೆ ಅನಿಸಿದ್ದೆ ತಪ್ಪಿರಬೇಕು. ನ್ನನ್ನ ಹೊರತು ಬೇರೆ ಯಾರೂ ಅಲ್ಲಿ ಇರಲಿಲ್ಲ. ಸಿಮೆಂಟಿನ ಗೋರಿ ಮೇಲೆ ಹಸಿರು ಚಾದರ ಅದರ ಮೇಲೆ ಹೆಪ್ಪಗಟ್ಟಿದ ರಕ್ತದಂತೆ ಕಾಣುವ ಕಳಚಿಬಿದ್ದ ಗುಲಾಬಿ ಪಕಳೆಗಳು ನೂರಾರು ಸಾಂಬ್ರಾಣಿಗಳು ಮಿಕ್ನ್ ಆಗಿ ನಾತ ಹೊಡೆಯುವ ಧೂಪ. ಇಷ್ಟೇ. ಇದಕ್ಕಾಗಿ ಇಲ್ಲಿವರೆಗು ಬಂದೆನೆ ಅಥವಾ ನಾನು ನೋಡುತ್ತಿರುವುದರಲ್ಲಿ ನಾನು ಕಾಣಲಾರದ್ದು ಏನಾದರು ಇದೆಯೇ? ನನ್ನ ಕಣ್ಣುಗಳ ಬಡತನದ ಬಗೆಗೆ ನೋವೆನಿಸಿತು. ಯಾಕೊ ಈ ಗಳಿಗೆಯನ್ನು ದಿವ್ಯವಾಗಿಸಲೇ ಬೇಕು ಅನಿಸಿಬಿಟ್ಟಿತು. ಹಠಕ್ಕೆಬಿದ್ದೆ. ನಾನು ಗಾಲಿಬ್ನ ಗೋರಿ ಹುಡುಕಿಕೊಂಡು ಹೋಗಿದ್ದೆ, ನನಗೆ ಹಾಗೆ ಅನಿಸಿತು ಹೀಗೆ ಅನಿಸಿತು ಅಂತ ಹೇಳಿಕೊಳ್ಳಲಾದರು ಏನಾದರು ಅನಿಸಬೇಕಲ್ಲಾ? ಕಡೆಯ ಪಕ್ಷ ನಾನು ಬರೆವ ಪ್ರವಾಸ ಕಥನದಲ್ಲಾದರು ಇದು ವಿಶೇಷ ಗಳಿಗೆ ಅನಿಸಬಾರದೆ. ಏನು ಮಾಡಲಿ? ಬ್ಯಾಗಿನಿಂದ ಬುಕ್ಕು ತೆಗೆದು ಗೋರಿಯ ಮುಂದೆ ಅವನ ಪದ್ಯಗಳನ್ನು ಓದಿಬಿಡೋಣ. ಯಾವುದನ್ನು ಓದಲಿ ? ಮಸೀದಿಯನ್ನು ನಡುಗಿಸುವ ಪದ್ಯ ಓದುತ್ತೇನೆ. ಕಾಶಿ ಪದ್ಯ ಓದಿತ್ತೇನೆ. ಇಲ್ಲ. ಅದೂ ಆಗಲಿಲ್ಲ. ಅದ್ಯಾಕಿಷ್ಟು ದುಗುಡ! ಹಾಳಾಗಿ ಹೋಗಲಿ ಹೋಗಿ ನೈಂಟಿ ಕಡಿದು ಬರೋಣ. ಬೇಡ. ನಿನ್ನೆಯಷ್ಟೇ ಕುಡಿದ್ದಿದ್ದೇನೆ. ಮತ್ಯಾರೋ ಗುಲಾಬಿ ಹಿಡಿದು ಬಂದರು ನ್ನನ್ನ ಸ್ವಗತಕ್ಕೆ ಬೆಂಕಿ ಬಿತ್ತು. ಕಾಲುಕಿತ್ತೆ.

ಸಾಬೀತಾತ ಹೇಳಿದ ದುಖಾನ್ದಾಲ್ಲಿ ಟೀ ಗುಟುಕಿಸಿದೆ. ನಾಲಿಗೆ ತೇವವಾಯಿತು. ಜೀವಬಂತು. ಯಾರೋ ನೂಕಿದರರೇನೋ ಅನ್ನುವಂತೆ ರೂಮಿಗೆ ಬಂದು ಬಿದ್ದೆ.
ಅವತ್ತು ನಾನು ಇಷ್ಟೊಂದು ರೋಗಗ್ರಸ್ತನಾಗಿರಲಿಲ್ಲ. ಸರಿಯಾಗಿ ಉಸಿರಾಡುತ್ತಿದ್ದೆ.
ಇವತ್ತು ಈ ಮಬ್ಬುಗತ್ತಲು ಗಾಢ ಕತ್ತಲೆಗೆ ತಿರುಗುವ ಹೊತ್ತಿನಲ್ಲಿ ಆಟೋ ತಡೆದು ಹತ್ತಿದೆ . ನಿಝಾಮುದ್ದಿನ್ ದರ್ಗಾ.?
ಹೊರಟೆವು.

ಆಟೋ ಭಾಯ್ ಮುಂದೆ ಹೋಗುತ್ತಿದ್ದಂತೆ ತಡೆಯಲಾಗದವನಂತೆ ಒಂದೇ ಸಮನೆ ಕೆಮ್ಮಿದ. ಆಟೋ ಸೈಡಿಗೆ ಹಾಕಿ ಸುತ್ತಿದ ವiಪ್ಲಾರ್ ತೆಗೆದು ಅಮುರ್ತಾಂಜನ್ ಕುತ್ತಿಗೆ ಸುತ್ತ ತೀಡಿದಾ. ನಾನೂ ದೋಸ್ತಿ ಬೆಳೆಸಿ ಹಣೆಗೆ ಆಗುವಷ್ಟು ಅಮ್ರುತಾಂಜನ್ ಕಿತ್ತುಕೊಂಡೆ. ಆಟೊ ತುಂಬ ಅಮ್ರುತಾಂಜನ್ ಘಮ್ಮೆಂದಿತು! ನಾವಿಬ್ಬರು ಇಡೀ ದೆಹಲಿ ಖಾಯಿಲೆ ಬಿದ್ದಿರುವದರ ಕುರಿತು ಮಾತಾಡಿದೆವು! ನಾವಿಬ್ಬರು ಪಾರ್ಟನರ್‍ಶಿಪ್ನಲ್ಲಿ ಅಮ್ರುತಾಂಜನ್ ಬುಸಿನೆಸ್ ಮಾಡುಬಹುದು ಅದರಿಂದ ಲಾಭ ಮಾಡಿಕೊಳ್ಳಬಹುದು ಅಂದುಕೊಂಡೆವು. ಒಟ್ಟಾಗಿ ಕೆಮ್ಮಿದೆವು. ಅಮ್ರುತಾಂಜನ್ ದೋಸ್ತಿ ದಾರಿ ದರ್ಗಾ ತಲುಪಿತು. ಪಾರ್ಟನರ್ ರೋಗಿಯನ್ನು ಬೀಳ್ಕೊಟ್ಟೆ.
ಚಂದಿರ ಮೂಡಿದ್ದಾನೆ ! . ಕವ್ವಾಲಿಯ ರಾತ್ರಿ ಅವನಿರದ್ದಿದರೆ ಹೇಗೆ ಚನ್ನಾ. ಕವ್ವಾಲಿ ಶುರುವಾಗಿದೆ.ಚಪ್ಪಾಳೆಗಳು ಕೇಳುತ್ತಿವೆ ಮೆಲ್ಲಗೆ. ದೂರದ ಸದ್ದುಗಳು ಯಾವಾಗಲು ಮಧುರವೇ. ಕಡಲಿನ ಅಬ್ಬರದ ಅಲೆಗಳೂ ದೂರಕ್ಕೆ ಜೋಗುಳ ಹಾಡಿದಂತೆ ಕೇಳುವುದಿಲ್ಲವೆ.

ಅಮ್ರುತಾಂಜನ್ ಕಾರಣಕ್ಕೊ ಸುತ್ತಾ ಗಿಜಿಗಿಜಿಗಿಜಿ ಜನರಿದ್ದ ಕಾರಣಕ್ಕೊ ಏನೋ ಬೆವರಿ ಕೊಂಚ ಹಿತವಾದಂತೆ ಅನಿಸಿತು.
ಕಣ್ಣುಗಳು ಸಾಬೀತಾತನಿಗಾಗಿ ಹುಡುಕಿದವು. ಅವನಲ್ಲಿ ಇರಲಿಲ್ಲ. ಸತ್ತು ಹೋದನೇನೋ. ಅದ್ಯಾಕೆ ಹಾಳು ತಲೆ ಈಚೀಚೆಗೆ ಸಾವಿನ ಕುರಿತು ಅಷ್ಟೊಂದು ಯೋಚಿಸುತ್ತದೆ.
ಅದೆಷ್ಟೊಂದು ಥರಾವರಿ ಚಪ್ಪಲಿಗಳು! ಇವತ್ತು ಜನಜಂಗುಳಿ ಜಾಸ್ತಿಯೇ ಇದೆ. ಐದು ರುಪಾಯಿ ತಾನೆ ಹೋದರೆ ಹೋಗಲಿ. ಹೋಗುವಾಗ ಹುಡುಕುವುದಾದರು ತಪ್ಪುತ್ತದೆ ಎಂದು ಚಪ್ಪಲಿಗಳನ್ನು ರ್ಯಾಕ್‍ನಲ್ಲಿ ಇರಿಸಿದೆ.
ತರೆದಿಟ್ಟ ಗುಲಾಬಿ ಪಕಳೆಗಳು, ಊದುಬತಿ,್ತ ಬತಾಸು ಹಿಡಿದು ಜನಜಂಗುಲಿಯೊಳಗೆ ನುಗ್ಗಿದೆ. ಕವ್ವಾಲಿಯ ಸದ್ದು ಜೋರಾಯಿತು . ಜನರು ಅಳುವುದು ಚೀರುವುದು ಚಪ್ಪಾಳೆ ತಟ್ಟುವುದು ಹಾಡುವುದು ಖುದಾನಿಗೆ ಕೇಳಲೆಂದು ನೆಲಕೆ ಹಣೆ ಹಚ್ಚಿ ಚ್ಚಚ್ಚಿ ಗೊಣಗುವುದು. ಇದರಲ್ಲಿ ಯಾವುದು ಕವ್ವಾಲಿ ಯಾವುದು ಕವ್ವಾಲಿಯಲ್ಲ ? ಎಲ್ಲವು ಹಾರ್ಮೊನಿಯಂ ಶೃತಿ ಸದ್ದಿನೊಳಗೆ ಸೇರಿ ಹೋಗಿದ್ದವು. ತಂದಿದ್ದೆಲ್ಲವನ್ನು ಎಸೆಯಬೇಕಾದಲ್ಲಿಗೆ ಎಸೆದೆ!
ಗಂಟಲು ಕಟ್ಟಿದಂತಾಗುತ್ತಿದೆ .
ಅಳುಬರುತ್ತಿದೆಯೆ ?.
ಇಲ್ಲ.
ಜ್ವರ ಬಂದಂತಾಗುತ್ತಿದೆ
ಧೂಪ ಹೆಚ್ಚಾಗಿದೆ.
ಉಸಿರು ಕಟ್ಟಿದಂತಾಗುತ್ತಿದೆ. ಈ ಜನಜಂಗುಳಿಯಲ್ಲಿ ಯಾಕಾದರು ಬಂದೆನೊ . ಇಲ್ಲಿಂದ ತಪ್ಪಿಸಿಕೊಂಡರೆ ಸಾಕು.
ಸುಸ್ತಾಯಿತು. ಕವ್ವಾಲಿ ಹಾಡುವ ಬಯಲಿನಲ್ಲಿ ಕುಸಿದು ಕೂತೆ.
‘ಹರ್ ದರ್ದ್ ಕಿ ದವಾ ಹೇ ಮುಹಮ್ಮದ್ ಕಿ ಶಹರ್ ಮೇ’
‘ಕ್ಯೂ ಆಕೆ ರೋ ರಹಾ ಹೇ ಮುಹಮ್ಮದಕಿ ಶಹರ್ ಮೇ’ ಸ್ವರ ಜೋರಾಯಿತು, ಜೊತೆಗೆ ಚಪ್ಪಾಳೆಗಳು!
ಎಲ್ಲರೂ ಮತ್ತಿನಲ್ಲಿರುವವರಂತೆ ಕಂಡರು . ಇಲ್ಯಾರೋ ಗಂಡಸು ನೆಲಕ್ಕೆ ಹಣೆ ಹಣೆ ಚಚ್ಚಿಕೊಳ್ಳುತ್ತಿದ್ದಾನೆ. ಹೆಂಡತಿ ಹಣೆಗೆ ನೀರು ತಟ್ಟುತ್ತಿದ್ದಾಳೆ. ಅಲ್ಲಿ ಹೆಂಗಸಿರಿಗೆಂದೇ ಸೆಪರೇಟಾಗಿ ಇರುವ ಜಾಗದಲ್ಲಿ ಈ ಮೈ ಮುರಿದೇ ಹೋಗಲಿ ಎನ್ನುವಂತೆ ನಾಲ್ಕಾರು ಹೆಂಗಸರು ಆ ಕಡೆಯಿಂದ ಈ ಕಡೆ ಈ ಕಡೆಯಿಂದ ಆ ಕಡೆ ಮೈ ಬೀಸಿ ತೊನೆದು ಎಸೆದಾಡುತ್ತಿದ್ದಾರೆ. ಏನೇನೋ ಶಪಿಸುತ್ತಿದ್ದಾರೆ ಚೀರುತ್ತಿದ್ದಾರೆ.ಇಲ್ಯಾರೋ ಹಾಡುವವರ ಮೇಲೆಲ್ಲ ಗುಲಾಬಿ ಪಕಳೆಗಳನ್ನು ಈಡಾಡುವಂತೆ ಎಸೆದರು.ಕಣ ಕಣದಲ್ಲು ಖುಧಾನ ಗುನುಗು ಸೇರಿಹೋಗಿದೆ. ಭೂಮಿಗೆ ಚಂದಿರ ಈಗ ಮತ್ತಷ್ಟು ಹತ್ತಿರಾಗಿದ್ದಾನೆ.
ಕವ್ವಾಲಿ ಮುಂದುವರೆದಿದೆ. ‘ಕ್ಯೂ ಆಕೆ ರೋರಹಾÀ ಹೇ ಮುಹಮ್ಮದಕಿ ಶಹರ್ ಮೇ’
ಇಲ್ಯಾರೋ ಎಳೆ ಹುಡುಗನ್ನನ್ನು ಅವರವ್ವಾ ಬಿಟ್ಟು ಹೋಗಿದ್ದಾಳೆ.ಅವನು ತನ್ನಷ್ಟಕ್ಕೆ ತಾನು ಪಲ್ಟಿ ಹೊಡೆಯುವುದನ್ನು ಕಲಿಯುತ್ತಿದ್ದಾನೆ.
ನೆಲಕ್ಕೆ ತಲೆ ಇಟ್ಟ
ಮೈ ಎತ್ತಿದ
ಅಯ ತಪ್ಪಿದ
ಬಿದ್ದ
ಮತ್ತೆ ಅದೇ ಆಟ.. ಮತ್ತೆ ಅದೇ ಆಟ.. ನೆಲಕ್ಕೆ ತಲೆ ಇಟ್ಟ
ಮೈ ಎತ್ತಿದ
ಅಯ ತಪ್ಪಿದ
ಬಿದ್ದ. ಮತ್ತೆ ಅದೇ ಆಟ.
ಇಲ.್ಲ
ಎದ್ದು ನಿಂತು ಎರಡು ಗಿರಕಿ ಹೊಡೆದ. ಎಷ್ಟು ಸಲೀಸು ಅವನಿಗೆ. ಕುಪ್ಪಳಿಸಿದ ಕುಣಿದಾಡಿದ. ಅರೆ ಅವನು ಕಾರಣವೇ ಇಲ್ಲದೆ ಕುಪ್ಪಳಿಸುತ್ತಿದ್ದಾನೆ. ಕುಣಿಯುತ್ತಿದ್ದಾನೆ. ಗಿರಿಕಿ ಹೊಡೆಯುತ್ತಿದ್ದಾನೆ.
ಒಂದು .. ಇನ್ನೊಂದು.. ಮತ್ತೊಂದು ..
ನಿಲ್ಲಿಸಬೇಡ ಹುಡುಗಾ ಈ ಬುಗುರಿ.. ತಿರುಗು ತಿರುಗು.. ಚಾಟಿ ಬೀಸಿಯಾಗಿದೆ ಹುಡುಗ ನಿಲ್ಲಿಸಬೇಡ.. ಈ ಕವ್ವಾಲಿಯನ್ನು ನಾನು ಕೇಳಲಾರೆ ತಿರುಗು ತಿರುಗು. ಈ ಕಿವಿ ಗೊಯ್ಯನೇ ಗುಯ್ ಗುಡುವಷ್ಟು ತಿರುಗು.. ಮೌನದ ಸೂರಿನೊಳಗೆ ಸೇರಿ ಹೋಗುವಷ್ಟು ತಿರುಗು. ಬೇಕೆನುವಷ್ಟು ಗುಲಾಬಿ ಕಲ್ಲು ಸಕ್ಕರೆ ತಂದು ಸುರಿಯುತ್ತೇನೆ. ಧೂಪ ಹಾಕುತ್ತೇನೆ. ತಿರುಗುವುದ ನಿಲ್ಲಿಸಬೇಡ.. ತಿರುಗು.. ತಿರುಗು.. ತಿರುಗು .. ಈ ನೆಲಕ್ಕು ಆಕಾಶಕ್ಕೂ ನೀನೆ ಸಮುದ್ರದಂತ ಸರದಾರ ಅನುವಂತೆ ಕುಣಿ.. ಕುಣಿ.. ಅಲೆಗಳ ಅಬ್ಬರ ನಿನ್ನೆಜ್ಜೆಯ ಗೆಜ್ಜೆಯಾದಂತೆ ಕುಣಿ..
ಕುಣಿಯಲೇ ಹುಡುಗ
ಕುಣಿಯಲೆ ಚೆಲುವ ಕುಣಿ
ಇಗಾ
ಹೊಡಿಗಿರಕಿ
ಗಿರಗಿರನೆ
ನಿನ್ನ ಕರುಳೊಳಗಿರುವ
ಹೇಲು ಕರಗಿ ಹೂವಾಗಿ ಹೋಗಲಿ.
ಗುಲಾಬಿ ಪಕಳೆಗಳು ಕಳಚಿ ಬೀಳಲಿ.
ಅಯ್ಯೋ ಅವನು ಮುಗ್ಗರಿಸಿದ ಬಿದ್ದ. ಅವ್ವಾ ಎಲ್ಲಿದ್ದಳೋ ಓಡಿ ಬಂದಳು ಅಳುತ್ತಿದ್ದ ಹುಡುಗನಿಗೆ ಕೆನ್ನೆಗೆರಡು ಬಾರಿಸಿದಳು ! ನ್ನನ್ನ ಕೆನ್ನೆಗೆ ಪೆಟ್ಟುಬಿದ್ದಂತಾಯಿತು.. ಅವನು ಮತ್ತೂ ಜೋರಾಗಿ ಅತ್ತ. ಕವ್ವಾಲಿ ಇನ್ನು ನಿಂತಿಲ್ಲ.
‘ಹರ್ ದರ್ದ್ ಕಿ ದವಾ ಹೇ ಮುಹಮ್ಮದ್ ಕಿ ಶಹರ್ ಮೇ’
ಚಂದ್ರ ನೆತ್ತಿಯ ಮೇಲೆ ಕಂಡ. ಯಾರೋ ನ್ನನ್ನನ್ನು ಬೆಂಕಿಯಲ್ಲಿ ಸೀಯಿಸಿದರೇನೋ ಅನುವಂತೆ ಬೆವೆತುಹೋಗಿದ್ದೆ. ಇನ್ನು ಅಲ್ಲೆ ಇದ್ದರೆ ಸತ್ತೆ ಹೋಗುತ್ತೇನೆ ಅನಿಸಿಬಿಟ್ಟಿತು. ಹೊರಟೆ. ಚಪ್ಪಲಿಗಳನ್ನು ರ್ಯಾಕಿನಿಂದ ಎತ್ತಿಕೊಂಡೆ. ಕತ್ತಲೆಗೆ ನುಗ್ಗಿದೆ.ಮತ್ತೆ ಜೂಜು ಶುರುವಾಯಿತು .

2 comments to “ಕತ್ತಲು ಮತ್ತು ಗುಲಾಬಿ ಪಕಳೆಗಳು”
  1. ಮನುಶ್ಯನ ಏಕಾಕಿತನ ಜ್ವರದಂತೆ ಕಾಡುವುದುಂಟು. ಇಡೀ ಬರೆಹದಲ್ಲಿ ಅದು ಎದ್ದು ಕಾಣುತ್ತದೆ. ಆದರೆ, ರೋಗ, ಜ್ವರ ಎರಡನ್ನು ಸಮೀಕರಿಸಲೆಸಗಿರುವುದು ಮಾತ್ರ ಸಮಸ್ಯಾತ್ಮಕವಾಗಿ ಕಾಣುತ್ತದೆ. ಇನ್ನೊಂಚೂರು ತಿದ್ದಿತೀಡಬಹುದಿತ್ತೇನೋ ಅನಿಸುತ್ತೆ. ಒಟ್ಟಾರೆಯಾಗಿ, ಒಳ್ಳೆಯ ಬರೆಹ.

ಪ್ರತಿಕ್ರಿಯಿಸಿ