ಕ್ಷಮಿಸಿ, ಪುರುಷ ಜೀನಿಯಸ್‍ಗಳ ಸ್ಥಾನ ಭರಿಸಲಾಗದ್ದೇನಲ್ಲ.

ವಿಜ್ಞಾನ ಒಂದು ಪ್ರಕ್ರಿಯೆ, ಹಾಗೂ ಒಬ್ಬರೇ ವ್ಯಕ್ತಿಯ ವೈಯಕ್ತಿಕ ಕೊಡುಗೆಗಳನ್ನು ಉತ್ಪ್ರೇಕ್ಷೆ ಮಾಡುವುದು ಪ್ರಗತಿಗೆ ವಿರುದ್ಧವಾದದು — ಅದರಲ್ಲೂ ಆ ವ್ಯಕ್ತಿ ಮಹಿಳೆಯರ ವೃತ್ತಿಜೀವನಗಳನ್ನು ಹಳಿತಪ್ಪಿಸುತ್ತಿರುವಾಗ.

ಇವಾನ್ ಲೀ ಅವರು ತೆಗೆದಿರುವ ಚಿತ್ರ unsplashನಿಂದ

ಒಂಟಿ ಪುರುಷ ಜೀನಿಯಸ್ ಎನ್ನುವ ಮೂಲಮಾದರಿ ಯಾವತ್ತಿನಿಂದಲೂ ಇದೆ.

ಶತಮಾನಗಳ ಕಾಲದುದ್ದಕ್ಕೂ ವಿಜ್ಞಾನಿ ಎನ್ನುವ ಚಿತ್ರಣ ಸ್ಥಿರವಾದದ್ದು: ಒಬ್ಬ ವಿಲಕ್ಷಣ ಮತ್ತು ಬುದ್ಧಿವಂತ ಪುರುಷ, ತನ್ನ ಪ್ರಯೋಗಾಲಯ ಅಥವಾ ನೆಲಮಾಳಿಗೆಯಲ್ಲಿ ಆವಿಷ್ಕಾರಗಳನ್ನು ರೂಪಿಸುತ್ತಿರುವುದು. ನಾವು ಒಂಟಿ ಜೀನಿಯಸ್ ವಿಜ್ಞಾನಿಯ ಪರಿಕಲ್ಪನೆಯನ್ನು ಮೆಚ್ಚುತ್ತೇವೆ. ಏಕೆಂದರೆ ಇತಿಹಾಸ, ಸಾಹಿತ್ಯ ಮತ್ತು ಸಂಸ್ಕೃತಿಯಲ್ಲಿ ಸಂಭ್ರಮಿಸಲಾಗಿರುವ ಆದರ್ಶ ಪುರುಷ ಕಲ್ಪನೆಯನ್ನು ಆತ ಪ್ರತಿನಿಧಿಸುತ್ತಾನೆ. ಆತ ಚೂಪಾದ ಹಾಸ್ಯದ ಶೆರ್ಲಾಕ್ ಹೋಮ್ಸ್. ಆತ ಒಂಟಿ ಮತ್ತು ತೀಕ್ಷ್ಣಮತಿ ನಿಕೋಲಾ ಟೆಸ್ಲಾ. ಆತ ರಿಕ್ ಆಂಡ್ ಮಾರ್ಟಿಯ ಅತಿಬುದ್ಧಿಯ ತಾತ ರಿಕ್. ನೀವು ಇನ್ನೂ ಪುರಾತನ ಇತಿಹಾಸದವರೆಗೆ ಹೋದಲ್ಲಿ, ಆತ ಗಿಲ್ಗಾಮೆಶ್.

ಒಂಟಿ ಪುರುಷ ಜೀನಿಯಸ್ ಎಂಬ ಮಾದರಿ, ಪುರುಷರಲ್ಲಿ ಮಹತ್ವಾಕಾಂಕ್ಷೆ ಮತ್ತು ಬುದ್ಧಿವಂತಿಕೆಯನ್ನು ಕಾಣಬಯಸುವ  ಪುರುಷಪ್ರಧಾನ ಸಂಸ್ಕೃತಿಗಳಲ್ಲಿ ಇರುತ್ತದೆ. ಈ ಮೂಲಮಾದರಿಯನ್ನು ಮೈಗೂಡಿಸಿಕೊಂಡವರನ್ನು ಪೀಠಗಳ ಮೇಲೆ ಕೂರಿಸಲಾಗುತ್ತದೆ. ಬಹುತೇಕ ಸಲ, ತಮ್ಮ ಆವಿಷ್ಕಾರಗಳಿಗೆ ಮತ್ತು ಸಾಧನೆಗಳಿಗೆಂದು ಮೆಚ್ಚುಗೆಗೆ ಪಾತ್ರರಾಗುವ ಇವರು ಪುರುಷತ್ವಕ್ಕೆ ಸಂಬಂಧಿಸಿದ ವಿಷಕಾರಿ ಗುಣಗಳನ್ನು ಪ್ರದರ್ಶಿಸುತ್ತಾರೆ. ವಿಷಕಾರಿ ಪುರುಷತ್ವ ಮಹಿಳೆಯರಿಗೆ ಅಥವಾ ಲಿಂಗ ಪಾತ್ರಗಳನ್ನೊಪ್ಪದ ವ್ಯಕ್ತಿಗಳಿಗೆ ಮಾತ್ರ ಅಪಾಯಕಾರಿ ಅಲ್ಲ. ಇದು ಪುರುಷತ್ವಕ್ಕೆ ಸಂಬಂಧಿಸಿದ ಕ್ರೂರವಾದ ತಣ್ಣಗಿನ ಅಂತಃಕರಣ ಹೊಂದುವಂತೆ  ಪುರುಷರಿಗೆ ಕಲಿಸುವ ಮೂಲಕ, ಅವರಿಗೂ ಅಪಾಯಕಾರಿಯಾಗಿದೆ. ಇದರಲ್ಲಿ ಕೆಲವರು ತಮ್ಮ ಬಲಿಷ್ಠತೆಯನ್ನು ಆಸ್ವಾದಿಸುತ್ತಾ ಆಕರ್ಷಕ ವ್ಯಕ್ತಿತ್ವ ಹೊಂದಿದ್ದು, ಚಾಣಾಕ್ಷರಾಗಿರಬಹುದು.

ಇವತ್ತು ವಿಜ್ಞಾನ ತಂತ್ರಜ್ಞಾನದ ಕ್ಷೇತ್ರಗಳು ಓಂದು ಲೆಕ್ಕಕ್ಕೆ ಒಳಗಾಗುತ್ತಿವೆ.

ವಿಜ್ಞಾನದ ಪಿತೃರೂಪಗಳ ಕೆಟ್ಟ ನಡವಳಿಕೆಯನ್ನು ತಡೆಯಲಾಗದೇ, ವಿಜ್ಞಾನ ತಂತ್ರಜ್ಞಾನ ಕ್ಷೇತ್ರದ ಹಲವರು ಹಿಂದಿನ ಮತ್ತು ಇಂದಿನ ಪುರುಷರನ್ನು ತಮ್ಮ ಶಕ್ತಿಯುತ ಸ್ಥಾನಗಳನ್ನು ದುರುಪಯೋಗ ಮಾಡಿದ್ದಕ್ಕಾಗಿ ಹೆಸರಿಸಿ ದೂರುತ್ತಿದ್ದಾರೆ.  ಡಾರ್ವಿನ್ ಮಹಿಳೆಯರ ಅಧೀನ ಸ್ಥಿತಿಯನ್ನು ಸಮರ್ಥಿಸಿದರು. ವ್ಯಾಟ್ಸನ್ ಲಿಂಗ ಹಾಗೂ ಜನಾಂಗೀಯ ಭೇದಭಾವ ಹೊಂದಿದ್ದರು ಮತ್ತು ನೊಬೆಲ್ ಪುರಸ್ಕೃತ ಬಹಳ ಮಂದಿ ಮಹಿಳೆಯರಿಂದ ತಮ್ಮ ಕಾರ್ಯವನ್ನು ಕದ್ದಿದ್ದಾರೆ. ಕೇವಲ ಪುರುಷರನ್ನು ಅಟ್ಟಕ್ಕೇರಿಸುವ ಕಾರಣಕ್ಕಾಗಿ ಅವರ ಹುಳುಕುಗಳನ್ನು ಕಡೆಗಣಿಸುವುದು ಹಾನಿಕಾರಕ ಹಾಗೂ ವಿಜ್ಞಾನ ತಂತ್ರಜ್ಣಾನ ಸಮುದಾಯದಲ್ಲಿ ಬಹಳ ಜನ ಸುಮ್ಮನೆ ಕುಳಿತು ಇದನ್ನು ಮುಂದುವರಿಯ ಬಿಡಲು ಸಿದ್ಧರಿಲ್ಲ. MeeTooSTEM (ಮೀ ಟೂ ಸ್ಟೆಮ್)ನಂತಹ ಗುಂಪುಗಳನ್ನು ವಿಜ್ಞಾನ ಕ್ಷೇತ್ರದಲ್ಲಿಯ ಶೋಷಣೆಯ ವಿರುದ್ಧ ಹೋರಾಡಲು ರಚಿಸಲಾಗಿದೆ.

ಆದರೆ ವಿಜ್ಞಾನ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಲೈಂಗಿಕ ದೌರ್ಜನ್ಯದ ವಿರುದ್ಧ ಪ್ರತಿಪಾದಿಸುವವರು ಎದುರಿಸುವ ಪ್ರತಿರೋಧದ ಭಾಗವೆಂದರೆ, ಯಶಸ್ವೀ ಪುರುಷ ವಿಜ್ಞಾನಿಗಳ ಸಂಶೋಧನಾ ಕಾರ್ಯ ಈ ಲೆಕ್ಕಾಚಾರದಲ್ಲಿ ಛೇದಿಸಲ್ಪಡುತ್ತದೆ ಎನ್ನುವುದು. ಇತ್ತೀಚಿಗೆ ನಾನು ವಿಜ್ಞಾನ ತಂತ್ರಜ್ಞಾನ ಕ್ಷೇತ್ರಗಳಲ್ಲಿ ವೈವಿಧ್ಯತೆಯ ಕುರಿತ ವಿಚಾರ ಸಂಕಿರಣದಲ್ಲಿ ಭಾಗಿಯಾಗಿದ್ದೆ. ಅಲ್ಲಿ ಈ ವಿಚಾರದ ಬಗ್ಗೆ ಡಾ. ಶರೋನಾ ಗೋರ್ಡನ್ ಅವರೊಂದಿಗೆ ಮಾತನಾಡುವ ಅವಕಾಶ ಸಿಕ್ಕಿತು. ಡಾ. ಗೋರ್ಡನ್ ಅವರು ನ್ಯಾಶನಲ್ ಅಕಾಡೆಮಿ ಆಫ್ ಸೈನ್ಸಸ್‍ನಲ್ಲಿ, ಅಜೀವ ಸದಸ್ಯರನ್ನು ಲೈಂಗಿಕ ಕಿರುಕುಳದ ಆರೋಪ ಸಾಬೀತಾದಲ್ಲಿ ಹೊರಹಾಕಬಹುದೇ ಎಂಬುದರ ಕುರಿತು ನಡೆದ ವೋಟಿಂಗ್ ಬಗ್ಗೆ ಹೇಳಿದರು.

ಸದಸ್ಯರು ಈ ಒಳನಿಯಮವನ್ನು ಬದಲಿಸಲು ಸಾಮಾನ್ಯವಾಗಿ ಬೆಂಬಲ ನೀಡಿದರೂ, ಅಲ್ಲಿ ಕೆಲವು ಬಹಿಂಗ ಪ್ರತಿರೋಧಗಳಿದ್ದವು. ಸೈನ್ಸ್ ಜರ್ನಲ್‍ನಲ್ಲಿ ಕಾಣಿಸಿಕೊಂಡಿರುವ ಪ್ರಮುಖ ಎಮ್‍ಐಟಿ ಪ್ರೊಫೆಸರ್ ಒಬ್ಬರು ಹೇಳಿದ ಮಾತುಗಳನ್ನು ಡಾ. ಗೋರ್ಡನ್ ಉಲ್ಲೇಖಿಸಿದರು: “ಈ ರೀತಿ (ಎನ್‍ಎ‍ಎಸ್‍ನಿಂದ) ಹೊರಹಾಕುವ ಹುಚ್ಚು ಅವಸರಕ್ಕೆ ತೊಡಗುವುದಕ್ಕೂ ಮೊದಲು, ಸದಸ್ಯರೊಬ್ಬರು ನಡೆಸಿದ ಲೈಂಗಿಕ ದೌರ್ಜನ್ಯಕ್ಕೂ ಅವರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲು ಮಾನದಂಡವಾಗಿರುವ ಅವರ ವೈಜ್ಞಾನಿಕ ವಿಶ್ವಾಸರ್ಹತೆಗೂ ಏನಾದರೂ ಸಂಬಂಧವಿದೆಯೇ ಎಂದು ಕೇಳುವುದು ಉಪಯೋಗಕಾರಿಯಾಗಿರಬಹುದು”. 

ಈ ನೀತಿಯನ್ನು ಕೊನೆಗೆ ಜಾರಿಗೆ ತರಲಾಯಿತಾದರೂ, ಇದರ ಟೀಕಾಕಾರರು ಲೈಂಗಿಕ ದೌರ್ಜನ್ಯ ನಡೆಸಿದ ವಿಜ್ಣಾನ ತಂತ್ರಜ್ಞಾನ ಕ್ಷೇತ್ರದವರ ಮೇಲಾಗುವ ಪರಿಣಾಮದ ಕುರಿತು ಇಂದಿಗೂ ಕೂಗುತ್ತಿದ್ದಾರೆ. ಇದಕ್ಕೂ ನಮ್ಮ “ಪುರುಷ ಜೀನಿಯಸ್” ಮಾದರಿಗೂ ಏನು ಸಂಬಂಧ? ಹತ್ತಿರದಲ್ಲಿ ನೋಡಿದರೆ, ಬಹಳವೇ ಸಂಬಂಧವಿದೆ. ಇಂತಹ  ಎಲ್ಲೆಡೆ ಮೆಚ್ಚುಗೆ ಹಾಗೂ ಗೌರವಕ್ಕೆ ಪಾತ್ರರಾಗುವ, ಶಕ್ತಿಯುತ ಸ್ಥಾನಗಳಲ್ಲಿರುವ ಪುರುಷರು, ಲೈಂಗಿಕ ದೌರ್ಜನ್ಯ ನಡೆಸಲು ಸುಸಿದ್ಧರಾಗಿಸಿಕೊಂಡಿರಬಹುದು.

ಡಾ. ವಿಲಿಯಮ್ ಫ್ರೆಂ‍ಚ್ ಆಂಡರ್ಸನ್ ಅವರ ಉದಾಹರಣೆಯನ್ನು ತೆಗೆದುಕೊಳ್ಳೋಣ. ಜೀನ್ ಚಿಕಿತ್ಸೆಯ ಪಿತಾಮಹ ಇವರು. ತಮ್ಮ ಸಹೋದ್ಯೋಗಿಯೊಬ್ಬರ ಚಿಕ್ಕ ವಯಸ್ಸಿನ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಕ್ಕಾಗಿ ಇವರು ದೋಷಾರೋಪಿಯೆಂದು ಸಾಬೀತಾಗಿ ಜೈಲಿನಲ್ಲಿ ಸಮಯ ಕಳೆದರು. ಆದರೆ ಅವರು ಇಂದಿಗೂ ತಾನು ನಿರಪರಾಧಿ ಎಂದೇ ಎನ್ನುತ್ತಾರೆ ಹಾಗೂ ವಿಜ್ಞಾನಕ್ಕೆ ಮರಳುವ ಉದ್ದೇಶ ಹೊಂದಿದ್ದಾರೆ. ಎಷ್ಟೋ ನೊಂದ ಕನಿಕರದ ಲೇಖನಗಳು ಅವರನ್ನು ಬಹಳವಾಗಿ ಸಂದರ್ಶಿಸಿವೆ. ಹೇಸಿಗೆ ಹುಟ್ಟದಂತೆ ಅವುಗಳನ್ನು ಓದುವುದು ಕಷ್ಟ. ಪ್ರಶ್ನೆ ಏನೆಂದರೆ, ಡಾ. ಆಂಡರ್ಸನ್ ಅವರನ್ನು ವಿಜ್ಞಾನದ ಅಭ್ಯಾಸಕ್ಕೆ ಮರಳಲು ಅನುಮತಿಸಲಾಗುವುದೇ? ನೆನೆಪಿನಲ್ಲಿಡಬೇಕಾದದ್ದು, ಅವರಿಗೀಗ ೮೨ರ ವಯಸ್ಸು. ಕಾನೂನು ಅವರನ್ನು ಒಂದು ಮಗುವಿಗೆ ಕಿರುಕುಳ ನೀಡಿದ್ದಕ್ಕಾಗಿ ತಪ್ಪಿತಸ್ಥರೆಂದು ಕಂಡುಕೊಂಡಿದೆ. ಅವರು ಇನ್ನೂ ನೀಡುವ ಕೊಡುಗೆ ಇರುವುದಾದರೂ ಏನು?

ಬಹುಶಃ ಇದೊಂದು ಕ್ರೂರ ದೃಷ್ಟಿ – ನಾವು ವಿಜ್ಞಾನಕ್ಕೋಸ್ಕರ ಈ ಜೀನಿಯಸ್ ಎನ್ನಲಾಗುವ ಜೀನ್ ಪ್ರವರ್ತಕರನ್ನು ತನ್ನ ಕೆಲಸಕ್ಕೆ ಮರಳಲು ಬಿಡಬಾರದೇ? ಡಾ. ಗೋರ್ಡನ್ ವಿಚಾರ ಸಂಕಿರಣದ ತಮ್ಮ ಸೆಮಿನಾರಿನಲ್ಲಿ, ಡಾ. ಆಂಡರ್ಸನ್ ಅವರನ್ನು ಪ್ರಸ್ತಾಪಿಸದಿದ್ದರೂ, ನನಗೆ ಪ್ರಸ್ತುತವೆನಿಸಿದ ಈ ಅಂಶವನ್ನು ಹೇಳಿದರು: ನಮ್ಮೆಲ್ಲರ ಸ್ಥಾನವನ್ನೂ ಭರಿಸಬಹುದು. ಈ ಪುರುಷ ಜೀನಿಯಸ್‍ಗಳು ನೀಡುವ ಕೊಡುಗೆ ಏನಿದೆಯೆಂದು ನಾವು ಅಂದುಕೊಂಡರೂ, ವಾಸ್ತವದಲ್ಲಿ, ವಿಜ್ಞಾನದಲ್ಲಿ ಏನಾದರೂ ಸತ್ಯವಿದ್ದರೆ ಅದನ್ನು ಒಂದಲ್ಲ ಒಮ್ಮೆ ಯಾರಾದರೂ ಆವಿಷ್ಕರಿಸಿಯೇ ತೀರುತ್ತಾರೆ. ೮೨ವರ್ಷದ, ಮಕ್ಕಳನ್ನು ಲೈಂಗಿಕವಾಗಿ ಹಿಂಸಿಸುವ ಒಬ್ಬರನ್ನು ವಿಜ್ಞಾನಕ್ಕೆ ಮರಳಿಸುವುದು ವಿಜ್ಞಾನದ ಹಿತಾಸಕ್ತಿಯಲ್ಲಿ ಒಳಿತಲ್ಲ.

ವ್ಯಾಟ್ಸನ್ ಮತ್ತು ಕ್ರಿಕ್ ಅವರು ರೋಸಾಲಿಂಡ್ ಫ್ರಾಂಕ್‍ಲಿನ್ ಅವರನ್ನು ನಡೆಸಿಕೊಂಡ ರೀತಿಗೆ ಹಾಗೂ ಡಿಎನ್‍ಎ ರಚನೆಯನ್ನು ಕಂಡುಹಿಡಿದ ಶ್ರೇಯಸ್ಸು ತಮಗೇ ಬರಲೆಂದು ಮಹಿಳಾ ವಿಜ್ಞಾನಿಗಳ ವೃತ್ತಿಜೀವನವನ್ನು  ಹಳಿತಪ್ಪಿಸಿದ ಮತ್ತು ಹೀಗಳಿಸಿದ್ದಕ್ಕೆ ನಾವು ಸಮರ್ಥನೆಗಳನ್ನು ಹುಡುಕುತ್ತೇವೆ. ಅವರು ಅದನ್ನು ಕಂಡುಹಿಡಿಯದಿದ್ದರೆ ಅವರಿಂದ ವೃತ್ತಿ ಜೀವನಕ್ಕೆ ಹಾನಿಗೊಳಗಾದ ಮಹಿಳೆಯಲ್ಲೊಬ್ಬರು ಈ ಆವಿಷ್ಕಾರವನ್ನು ಮಾಡಿರುತ್ತಿದ್ದರು. ಬಹುಶಃ ಅವರು ಅಷ್ಟೇನೂ ವಿಶೇಷ ವ್ಯಕ್ತಿಗಳಾಗಿರಲಿಲ್ಲ. ಅವರು ಸವಲಿತ್ತನ ಜಾಗದಲ್ಲಿದ್ದರು ಮತ್ತು ಸರಿಯಾದ ಸಮಕ್ಕೆ ಶಕ್ತಿಯುತ ಸ್ಥಾನಗಳದಲ್ಲಿದ್ದರು.

ಶಕ್ತಿ ಮತ್ತು ಸವಲತ್ತಿನ ಕುರಿತು ಮಾತನಾಡುವುದಾದರೆ, ಸೈದ್ಧಾಂತಿಕ ಭೌತಶಾಸ್ತ್ರಜ್ಞ ಲಾರೆನ್ಸ್ ಕ್ರಾಸ್ ಕೂಡ ಲೈಂಗಿಕ ದುರ್ನಡತೆಯ ಆರೋಪವನ್ನು ಎದುರಿಸುತ್ತಿದ್ದಾರೆ. ಈ ದುರ್ನಡತೆಗಳು – ಸಮಂಜಸವಲ್ಲದ ಲೈಂಗಿಕ ವರ್ತನೆಗಳು, ಡಾ. ಗೋರ್ಡನ್ ಅವರು “ನೀರಿನ ಮಟ್ಟಕ್ಕಿಂತ ಕೆಳಗಿನ” ಎಂದು ಕರೆಯುವಂತಹವು – ಮಹಿಳಾ ವಿಜ್ಞಾನಿಗಳಿಗೆ ವಿಷಕಾರಿ ವಾತಾವರಣವನ್ನು ಹುಟ್ಟಿಸುತ್ತವೆ. ಶಕ್ತಿಯುತ ಸ್ಥಾನಗಳಲ್ಲಿರುವ ಗಂಡಸರ ಈ ರೀತಿಯ ಭೀಕರ ವರ್ತನೆಗಳಿಂದ ಅದೆಷ್ಟು ಮಹಿಳೆಯರು ವಿಜ್ಞಾನ ತಂತ್ರಜ್ಞಾನದ ಕ್ಷೇತ್ರವನ್ನು ಬಿಟ್ಟಿದ್ದಾರೆ? 

ದುರಾದೃಷ್ಟವೆಂದರೆ, ದ ಅಟ್ಲಾಂಟಿಕ್ ಹೇಳುವಂತೆ ವಿಜ್ಞಾನಿಗಳು ಬಹುತೇಕ ಸಲ “ತಮ್ಮ ಕಣ್ಣಿಗೆ ಕಾಣಬಹುದಾದ ಪುರಾವೆಗಳನ್ನು ಕೇಳುತ್ತಾರೆ ಮತ್ತು ಕ್ರಾಸ್‍ನ ವಿಚಾರದಲ್ಲಿ ಅವರು ಲೈಂಗಿಕ ದುರ್ನಡತೆಗಳನ್ನು ಪರಿಶೀಲಿಸಿ, ಭೇದಿಸಿ, ಸಾಬೀತುಪಡಿಸಬೇಕಾದ ಊಹೆಯಂತೆ ಪರಿಗಣಿಸಬಹುದು”. ಪುರಾವೆ ಇಲ್ಲದಿದ್ದಲ್ಲಿ, ದೌರ್ಜನ್ಯ ನಡೆಸಿದವದಿಂದ ದೂರವಿರುವ ಅಥವಾ ಸ್ಥಳಾಂತರಿಸುವ ಭಾರ ದೌರ್ಜನ್ಯಕ್ಕೊಳಗಾದವರ ಮೇಲೆ ಹೇರಲಾಗುತ್ತದೆ. ಆದರೆ ನಾವು ಆಂಡರ್ಸನ್ ಅವರ ಉದಾಹರಣೆಯಲ್ಲಿ ನೋಡಿದಂತೆ ಪುರಾವೆಗಳಿದ್ದಾಗಲೂ ಜನ, ಕೆಲವು ಪುರುಷರು ಇಂತಹ ನೈತಿಕವಾಗಿ ಹೇಯವಾದ ಕೃತ್ಯಗಳನ್ನು ಎಸಗುವ ಸಾಧ್ಯತೆಯನ್ನು ನಂಬಲು ಸಿದ್ಧರಿರುವುದಿಲ್ಲ. 

ಭೌತಶಾಸ್ತ್ರಜ್ಞ ರಿಚರ್ಡ್ ಫೆಯ್ನ್ಮನ್ ಕೂಡ ತಪ್ಪಿಲ್ಲದವರೇನಲ್ಲ. ವಿಜ್ಞಾನವನ್ನು ವಿಜ್ಞಾನಿಯಿಂದ ಬೇರೆಯಾಗಿ ನೋಡಬಹುದೇ ಎನ್ನುವ ಚರ್ಚೆಗಳ ಕೇಂದ್ರ ಬಿಂದುವಾಗಿದ್ದಾರೆ. ಬಹಳ ಜನ ತಮ್ಮ ಹೀರೋವ(ಗಳ)ನ್ನು ರಕ್ಷಿಸಲು ಅವರ ಕಾರ್ಯವಷ್ಟೇ ಮುಖ್ಯವಾದದ್ದು ಎಂದು ಪ್ರಮಾಣ ಮಾಡುತ್ತಾರೆ. ಆದರೆ ಒಬ್ಬ ಮನುಷ್ಯರ ಕ್ರಿಯೆಗಳನ್ನು ಅಚ್ಚುಕಟ್ಟಾದ ಗುಂಪುಗಳಲ್ಲಿ ಬೇರೆಯಾಗಿಸಲು ನಿಜಕ್ಕೂ ಸಾಧ್ಯವಿದೆಯೇ, ಯಾವುದು ಒಪ್ಪಬಹುದಾದದ್ದು ಯಾವುದು ಒಪ್ಪಬಾರದ್ದು ಎಂದು ವಿವಿಧ ಬಾಕ್ಸ್ ಗಳಲ್ಲಿ ವಿಭಜಿಸುತ್ತ? ಲೀಲಾ ಮೆಕ್ ನೀಲ್ ಬರೆದಿರುವ “Surely You’re A Creep, Mr. Feynman” (ನಿಜಕ್ಕೂ ನೀವೊಬ್ಬ ಕ್ರೀಪ್ ಫೆಯ್ನ್ಮನ್) ಎನ್ನುವ ಲೇಖನದ ಈ ಆಯ್ದಭಾಗವನ್ನು ನೋಡಿ:

“Surely You’re Joking Mr. Feynman” (ನಿಜಕ್ಕೂ ನೀವು ತಮಾಷೆ ಮಾಡುತ್ತಿದ್ದೀರಿ ಮಿ. ಫೆಯ್ನ್ಮನ್) ಪುಸ್ತಕದಲ್ಲಿ ಫೆಯ್ನ್ಮನ್ ಹೆಂಗಸರನ್ನು ಅವರು ಬೆಲೆಯಿಲ್ಲದವರಂತೆ ನೋಡಿ, ತಮ್ಮ ಮುಂದುವರಿಕೆಗಳಿಗೆ ಅವರು ಪ್ರತಿಸ್ಪಂದಿಸದಿದ್ದಾಗ ಅವರ ಮೇಲೆ ಕ್ರೂರವಾಗಿ ಮಾತುಗಳನ್ನಾಡಿ, pick-up artist (ಎತ್ತಿಕೊಳ್ಳುವ ಕಲಾವಿದರ) ಮನಸ್ಥಿತಿಯನ್ನು ಒಡಗೂಡಿಸಿಕೊಂಡ ಕುರಿತು ಬರೆದಿದ್ದಾರೆ ( ಮನಸ್ಥಿತಿಯನ್ನು ತಾವು ತದನಂತರ ಬಿಟ್ಟಿರುವುದಾಗಿ ಹೇಳಿಕೊಂಡಿದ್ದಾರೆ).  ಸ್ಟ್ರಿಪ್ ಕ್ಲಬ್‍ಗಳಲ್ಲಿ ಅವರು ಮೀಟಿಂಗ್‍ಗಳನ್ನು ನಡೆಸುತ್ತಿದ್ದರು ಮತ್ತೆ ಕಾಲ್ಟೆಕ್‍ನಲ್ಲಿ ಪ್ರೊಫೆಸರ್ ಆಗಿರುವ ಸಮಯದಲ್ಲೇ ತಮ್ಮ ಮಹಿಳಾ ವಿದ್ಯಾರ್ಥಿಗಳ ನಗ್ನ ಚಿತ್ರಗಳನ್ನು ರಚಿಸಿದರು. ಇದಕ್ಕೂ ಕೆಟ್ಟದ್ದೆಂದರೆ, ಅವರು ತಮಗಿಂತ ಚಿಕ್ಕವಯಸ್ಸಿನ ಮಹಿಳೆಯರು ತಮ್ಮೊಡನೆ ಮಲಗುವಂತೆ ಮಾಡಲು ಪದವಿಯ ವಿದ್ಯಾರ್ಥಿಯಂತೆ ನಟಿಸುತ್ತಿದ್ದರು. ಅವರು ಕೆಲಸ ಮಾಡುತ್ತಿದ್ದಾಗ ಅಥವಾ ಬಾಂಗೋಸ್ ನುಡಿಸುತ್ತಿದ್ದಾಗ ಅವರ ಏಕಾಗ್ರತೆ ಕದಲಿಸಿದರೆ ಅವರು ಅತೀವ ಸಿಟ್ಟನ್ನು ತೋರಿಸುತ್ತಿದ್ದರು ಎಂದು, ಹಲವು ಘಟನೆಗಳ ಮೂಲಕ ಅವರ ಎರಡನೇ ಹೆಂಡತಿ ಅವರ ಮೇಲೆ ಕಿರುಕುಳದ ಆರೋಪ ಮಾಡಿದ್ದರು.

ಇದನ್ನು ಓದಿದ ನಂತರ, ಫೆಯ್ನ್ಮನ್ ಅವರನ್ನು ಶ್ರೇಷ್ಠ ವಿಜ್ಞಾನಿ ಹಾಗೂ ಭೀಕರ ಸ್ತ್ರೀದ್ವೇಷಿ ಎಂದು ಬೇರೆಬೇರೆಯಾಗಿ ಹೇಳುವುದು ಇನ್ನಷ್ಟು ಕಷ್ಟವಾಗಬಹುದು. ಆದರೆ ಭೌತಶಾಸ್ತ್ರ ಓದುವ ನನ್ನ ಸಂಗಾತಿ ಇಂದಿಗೂ ಫೆಯ್ನ್ಮನ್ ಲೆಕ್ಚರ್ಸ್ ಆನ್ ಫಿಸಿಕ್ಸ್ ಮೂರು ಸಂಪುಟಗಳನ್ನು ಬಹುವಾಗಿ ಪ್ರೀತಿಸುತ್ತಾರೆ. ಬಹುಶಃ ನೀವು ಸ್ತ್ರೀದ್ವೇಷ ಹಾಗೂ ಲಿಂಗತಾರತಮ್ಯಕ್ಕೆ ಎಂದೂ ಒಳಗಾಗದಿದ್ದಲ್ಲಿ ವಿಜ್ಞಾನಿಯನ್ನು ಅವರ ವಿಜ್ಞಾನದಿಂದ ಬೇರ್ಪಡಿಸುವುದು ಸುಲಭವಾಗಬಹುದೇನೋ.

ದುರಾದೃಷ್ಟವೆಂದರೆ ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಹಲವು ಮಹಿಳೆಯರು ಸ್ತ್ರೀದ್ವೇಷಿಗಳಿಂದ ಮತ್ತು ಲಿಂಗ ತಾರತಾಮ್ಯ ಮಾಡುವವರಿಂದ ಕೆಟ್ಟ ಪರಿಣಾಮಗಳನ್ನೆದುರಿಸಿದ್ದಾರೆ, ಆದರೆ ಇದೇ ಸಮಯದಲ್ಲಿ ಪುರುಷರನ್ನು ವೈಜ್ಞಾನಿಕ ಸಮುದಾಯದಲ್ಲಿ ಗೌರವದಿಂದ ಕಾಣಲಾಗುತ್ತದೆ. ಇಷ್ಟಕ್ಕೂ ಲೈಂಗಿಕ ದೌರ್ಜನ್ಯ ಸಂಭೋಗದ ಕುರಿತದ್ದಲ್ಲಬದಲಾಗಿ ಪ್ರಾಬಲ್ಯದ ಕುರಿತದ್ದು. ಡಾ. ಗೋರ್ಡನ್ ಅವರು ತಮ್ಮ ಪ್ರಸ್ತುತಿಯಲ್ಲಿ ವಿವರಿಸಿದಂತೆ, ಪ್ರಾಬಲ್ಯದ ಸ್ಥಾನಗಳನ್ನು ಹೊಂದುವುದುಲಿಂಗ ರೂಢಿಗಳನ್ನು ಉಲ್ಲಂಘಿಸುವವರನ್ನು ಶಿಕ್ಷಿಸಲುಸಾಧ್ಯವಾಗಿಸುತ್ತದೆ. ಪದಗಳಿಂದ ಹೀಗಳೆಯುವುದು, ಪೀಡಿಸುವುದು ಅಥವಾ ದೊಡ್ಡಸ್ತಿಕೆ ತೋರುವುದಿರಬಹುದು, ಅಥವಾ ತಮ್ಮ ದೇಹಗಳನ್ನುಪಯೋಗಿಸಿ ಮಹಿಳೆಯರನ್ನು ಲೈಂಗಿಕವಾಗಿ ಹಿಂಸಿಸುವುದು ಅಥವಾ ಹೀನರನ್ನಾಗಿ ಮಾಡುವುದಿರಬಹುದು, ಅವರ ಶಕ್ತಿಯುತ ಸ್ಥಾನ ಮತ್ತು ಪ್ರತಿಷ್ಠೆಯೇ ಇದಕ್ಕೆ ಅನುವು ಮಾಡಿಕೊಡುತ್ತದೆ.

ಗಂಡಸರು ತಮ್ಮ ಶಕ್ತಿಯುತ ಸ್ಥಾನಗಳು ತಮ್ಮನ್ನು ರಕ್ಷಿಸುತ್ತವೆ ಎಂದು ನಂಬುತ್ತಾರೆ. ಸಮಸ್ಯೆಯೆಂದರೆ, ಇದು ಬಹುತೇಕ ಬಾರಿ ಸತ್ಯ ಕೂಡ.

ಆದರೆ ಲೈಂಗಿಕ ದೌರ್ಜನ್ಯಕಾರರ ಪ್ರತಿಷ್ಠೆಯ ಸ್ಥಾನಗಳನ್ನು ತೆಗೆದು ಅವರನ್ನು ಶಕ್ತಿಯುತ ಸ್ಥಾನಗಳಿಂದ ಕೆಳಗಿಳಿಸಿದರೆ, ಆಗ ಪುರುಷ ಜೀನಿಯಸ್‍ಗಳು ತಮ್ಮ ತಪ್ಪಿಗೆ ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ. ಅವರು ತಮ್ಮ ದುರ್ನಡತೆಯಿಂದ ಹಳಿತಪ್ಪಿಸಿದ ವೃತ್ತಿ ಜೀವನಗಳ ಮೂಲಕ, ಅಷ್ಟೇ ಅಲ್ಲ ದೌರ್ಜನ್ಯಕ್ಕೊಳಗಾದವರ ಮಾನಸಿಕ ಹಾನಿಯನ್ನು ನೋಡುವ ಮೂಲಕ, ಅವರ ವೈಜ್ಞಾನಿಕ ಕೊಡುಗೆಗಳು ಮೌಲ್ಯವನ್ನು ಕಳೆದುಕೊಳ್ಳುತ್ತವೆ. ಇನ್ನೊಂದು ಕಾರಣವೆಂದರೆ ಸಮಂಜಸವಲ್ಲದ ಲೈಂಗಿಕ ನಡತೆಗಳ ಅರಿವಿದ್ದೂ ಸುಮ್ಮನಿರುವುದು, ವಿಜ್ಞಾನದ ಗೌರವವನ್ನು ಕಡಿಮೆಯಾಗಿಸುತ್ತದೆ, ನಾವೀಗ ಜೆಫ್ರಿ ಎಪ್‍ಸ್ಟೀನ್ ಅವಾಂತರದಲ್ಲಿ ನೋಡುವಂತೆ. ಭೌತಶಾಸ್ತ್ರಜ್ಞರಲ್ಲದಿದ್ದರೂಭೌತಶಾಸ್ತ್ರಜ್ಞರ ಮನಸ್ಸನ್ನು ಹೊಂದಿದ್ದುಜೆಫ್ರಿ ಎಪ್‍ಸ್ಟೀನ್ ಅವರ ದುರುಳ ಲೈಂಗಿಕ ನಡವಳಿಕೆಗಳನ್ನು ವಿಜ್ಞಾನಿಗಳು ಸಮರ್ಥಿಸಿಕೊಳ್ಳುವಂತೆ ಮಾಡಿತು.

ಆದರೆ ಬಹುಶಃ ನೀವು ಒಪ್ಪಲಾರಿರಿ. ಬಹುಶಃ ನಿಮಗೆ ಲೈಂಗಿಕ ದೌರ್ಜನ್ಯ ನಡೆಸುವವರ ಪ್ರತಿಷ್ಠೆಯನ್ನು ಇಲ್ಲವಾಗಿಸಿ ಅದರ ವಿರುದ್ಧ ಹೋರಾಡುವುದು ತುಂಬಾ ತೀವ್ರವಾದ ನಡೆ ಎನಿಸುತ್ತದೆ. ಹಾಗಿದ್ದಲ್ಲಿ ನಾನು ನಿಮಗೆ ಕೇಳುವುದಿಷ್ಟು: ಯಾವುದು ಹೆಚ್ಚು ಮೌಲ್ಯವುಳ್ಳದ್ದು? ಮಹಿಳೆಯರ ಮೇಲೆ ಹಲ್ಲೆ, ದೌರ್ಜನ್ಯ ಎಸಗುವ, ಲಿಂಗತಾರತಮ್ಯ ಮಾಡುವ ಒಂಟಿ ಪುರುಷ ಜೀನಿಯಸ್‍ರ ಕೊಡುಗೆಗಳು ಹೆಚ್ಚು ಮುಖ್ಯವೋ ಅಥವಾ ಸ್ತ್ರೀದ್ವೇಷವಿಲ್ಲದ ಮತ್ತು ಆಪತ್ತಿನ ವಾತಾವರಣದ ಅಡ್ಡಗೋಡೆಗಳಿರದ ದೊಡ್ಡ ವೈಜ್ಞಾನಿಕ ಸಮುದಾಯದ ಕೊಡುಗೆಗಳು ಹೆಚ್ಚು ಮುಖ್ಯವೋ?

ವಿಜ್ಞಾನದ ಪ್ರತಿಪಾದಕರಾಗಿ ನಮ್ಮ ಉತ್ತರ ರಿಂಗಣಿಸುವಂತೆ ಎರಡನೆಯದ್ದಾಗಿರಬೇಕು. ನಿಜದಲ್ಲಿ ಮಹಿಳಾ ವಿಜ್ಞಾನಿಗಳಿಗೆ ಒಪ್ಪಲಾಗದ ಕಾರ್ಯಸ್ಥಳಗಳನ್ನು ದೌರ್ಜನ್ಯವೆಸಗುವವರು ರಚಿಸಲು ಅನುವು ಮಾಡಿಕೊಟ್ಟು, ನಾವು ವಿಜ್ಞಾನದ ಸತ್ಯ ಮತ್ತು ಮೌಲ್ಯವನ್ನು ರಾಜಿ ಮಾಡಿಕೊಳ್ಳುತ್ತಿದ್ದೇವೆ. ನಾವೆಲ್ಲರೂ ವೈಜ್ಞಾನಿಕ ಪ್ರಗತಿಗೆ ಕೊಡುಗೆಗಳನ್ನು ನೀಡುತ್ತಿದ್ದೇವೆ. ಒಂದು ವಿಷಕಾರಿ ಮಾದರಿಯನ್ನು ಎತ್ತಿ ಹಿಡಿಯಲು ಒಬ್ಬ ಪುರುಷಜೀನಿಯಸ್ಗೆ ಪ್ರಗತಿಯನ್ನು ಹಳಿತಪ್ಪಿಸುವ ಅವಕಾಶ ಕೊಡುವುದು ಅಸಂಗತ ವಿಚಾರವೇ ಸರಿ.

ಅಷ್ಟಕ್ಕೂ ಜೀನಿಯಸ್‍ಗಳು ಅಷ್ಟೊಂದು ವಿಶೇಷವಾದವರೇನಲ್ಲ. ವಿಜ್ಞಾನ ಒಂದು ಮಹಾನ್ ಸಮಗೊಳಿಸುವ ಅಂಶನಮ್ಮೆಲ್ಲರ ಸ್ಥಾನಗಳನ್ನೂ ಭರಿಸಬಹುದು. ಒಬ್ಬರು ವಿಜ್ಞಾನಿ ಒಂದು ವಿಶೇಷ ಆವಿಷ್ಕಾರ ಮಾಡದಿದ್ದಲ್ಲಿ ಒಂದಿಲ್ಲೊಂದು ದಿನ ಇನ್ನೊಬ್ಬರು ಅದೇ ಆವಿಷ್ಕಾರನ್ನು ಮಾಡಿಯೇ ಮಾಡುತ್ತಾರೆ. ಇದಕ್ಕಾಗಿಯೇ ನನಗೆ ಇಂದು ಲೈಂಗಿಕ ದೌರ್ಜನ್ಯದ ಕುರಿತು ಯಾವುದೇ ಸಹಿಸಿಕೊಳ್ಳುವಿಕೆ ಇರಬಾರದೆಂದೆನಿಸುತ್ತದೆ. ಪುರುಷಪ್ರಧಾನತೆ, ಲಿಂಗ ತಾರತಮ್ಯ, ಶಕ್ತಿಯುತ ಸ್ಥಾನಗಳ ದುರ್ಬಳಕೆಗಳ ಅಡೆತಡೆಗಳಿಲ್ಲದಿದ್ದರೆ ವಿಜ್ಞಾನ ಹಸನಾಗಿ ಬೆಳೆಯುತ್ತದೆ ಮತ್ತು ಪ್ರಗತಿ ಅಷ್ಟೇ ಬೇಗ ಬರುತ್ತದೆ.

ಅನುವಾದ: ಸುಬ್ರಹ್ಮಣ್ಯ ಹೆಗಡೆ ಅಲಹಾಬಾದ್‍ನ ಹರೀಶ್-ಚಂದ್ರ ಸಂಶೋಧನಾ ಸಂಸ್ಥೆಯಲ್ಲಿ ಸೈದ್ಧಾಂತಿಕ ಭೌತಶಾಸ್ತ್ರದ ಡಾಕ್ಟರೇಟ್ಟೋತ್ತರ ಸಂಶೋಧಕರು.

ಇಂಗ್ಲೀಷ್ ಮೂಲ ಲೇಖನ ಮೀಡಿಯಂ ಜಾಲತಾಣದಲ್ಲಿ ಲಭ್ಯವಿದೆ.

ಪ್ರತಿಕ್ರಿಯಿಸಿ