ಎ.ಕೆ. ರಾಮಾನುಜನ್‍ರ `ಮುನ್ನೂರು ರಾಮಾಯಣಗಳು’ ಒಂದು ವಿದ್ವತ್‍ಪೂರ್ಣ ಬರಹ. ಪಂಡಿತ ಪಾಮರರೆಲ್ಲರಿಗೂ ಶಿಫಾರಸು ಮಾಡಬಹುದಾದ ಈ ಪ್ರಬಂಧವನ್ನು ದೆಹಲಿ ವಿಶ್ವವಿದ್ಯಾಲಯದ ಪದವಿ ವಿದ್ಯಾರ್ಥಿಗಳ ಸಿಲೆಬಸ್‍ನಲ್ಲಿ ಒಂದು ಪಠ್ಯವನ್ನಾಗಿ ಮಾಡಲಾಗಿತ್ತು. ಆದರೆ 2006ರಲ್ಲಿಎ.ಬಿ.ವಿ.ಪಿ. ವಿದ್ಯಾರ್ಥಿ ಸಂಘಟನೆ ವಿಶ್ವವಿದ್ಯಾಲಯದ ಈ ನಿರ್ಧಾರವನ್ನು ಪ್ರತಿಭಟಿಸಿತು. ಎ.ಬಿ.ವಿ.ಪಿಯ ಸದಸ್ಯರು ಪಾಠ ನಡೆಯುತ್ತಿರುವಾಗಲೇ ತರಗತಿಗಳಿಗೆ ನುಗ್ಗಿ ಗದ್ದಲ ಮಾಡಿದರು. ನಮ್ಮ ಪರಂಪರೆಯನ್ನು ಅವಹೇಳನ ಮಾಡುವ ಪ್ರಬಂಧವೊಂದನ್ನು ಪಠ್ಯವನ್ನಾಗಿ ಅಳವಡಿಸಿಕೊಂಡ ವಿಶ್ವವಿದ್ಯಾಲಯದ ಕ್ರಮ ಜನರನ್ನು ನೋಯಿಸಿದೆ ಎಂದು ಕೋರ್ಟುನಲ್ಲಿ ಕೇಸು ದಾಖಲಾಯಿತು. ನ್ಯಾಯಾಲಯದ ತೀರ್ಪು, ರಾಮಾನುಜನ್‍ರ ಪ್ರಬಂಧವನ್ನು ಸಿಲೆಬಸ್‍ನಲ್ಲಿ ಅಳವಡಿಸಿಕೊಂಡ ವಿಶ್ವವಿದ್ಯಾಲಯದ ನಿರ್ಧಾರವನ್ನು ಎತ್ತಿಹಿಡಿಯಿತು. ಆದಾಗ್ಯೂ 2011ರಲ್ಲಿ ದೆಹಲಿ ವಿಶ್ವವಿದ್ಯಾಲಯ, ಬಿಜೆಪಿ ಹಾಗೂ ಎ.ಬಿ.ವಿ.ಪಿಗಳ ಒತ್ತಡಕ್ಕೆ ಮಣಿದು, `ಮುನ್ನೂರು ರಾಮಾಯಣಗಳು’ – ಪ್ರಬಂಧವನ್ನು ಸಿಲೆಬಸ್‍ನಿಂದ ಹೊರಗೆ ಇಟ್ಟಿತು. ಜನಪದ ಸಾವಿರಾರು ವರ್ಷಗಳಿಂದ ಏನನ್ನು ಹೇಳುತ್ತಾ ಬಂದಿದೆಯೋ ಅದನ್ನೇ ರಾಮಾನುಜನ್ ಪ್ರಬಂಧ ವಿಸ್ತಾರವಾಗಿ ಮಂಡಿಸುತ್ತದೆ. ರಾಮಾನುಜನ್ನರ ಪ್ರಬಂಧದ ಹಿನ್ನಲೆಯಲ್ಲಿ ರಾಮಾಯಣದ ಬಹುವಚನೀಯತೆಯ ಕುರಿತಾಗಿ ಮಹಾಬಲೇಶ್ವರ ರಾವ್ ಅವರು ಪುತ್ತೂರಿನ ” ಬಹುವಚನಮ್ ” ನಲ್ಲಿ ನಡೆಸಿಕೊಟ್ಟ ಉಪನ್ಯಾಸ ಇಲ್ಲಿದೆ .