ಕನ್ನಡಿಯ ಪಾದರಸದಾಚೆ ನಕ್ಕ ಮುಖ – ಭಾಗ ೩

ರಾಮಾನುಜನ್ ಇಂಡಿಯಾನ ವಿಶ್ವವಿದ್ಯಾಲಯದಲ್ಲಿ ಬರೆದ ಪಿಎಚ್.ಡಿ. ಥೀಸಿಸ್,‘A Generative Grammar of Kannada’ ಎಂಬ ಹೆಸರಿನಲ್ಲಿ  1963ರಲ್ಲಿ ಪ್ರಕಟವಾಯಿತು. ಪಿಎಚ್.ಡಿ. ಪಡೆದ ಕೆಲಕಾಲದಲ್ಲಿಯೇ ಅವರಿಗೆ ಚಿಕಾಗೋ ವಿಶ್ವವಿದ್ಯಾಲಯದಲ್ಲಿ ಉದ್ಯೋಗ ದೊರಕಿತು. ಅಲ್ಲಿ ಎಡ್ವರ್ಡ್ ಸಿ. ಡಿಮೊಕ್ ಹಾಗೂ ಮಿಲನ್ ಸಿಂಗರ್ ರಂತಹ ಘನ ವಿದ್ವಾಂಸರು  ದಕ್ಷಿಣ ಏಶಿಯಾ ಅಧ್ಯಯನವನ್ನು ಆರಂಭಿಸುವುದರಲ್ಲಿದ್ದರು. ಆಗ ಆರ್ಕಟಿಕ್ ಚಳಿಗಾಲ ಹಾಗೂ ಗ್ಯಾಂಗ್ ಹಿಂಸಾಚಾರ ಚಿಕಾಗೋ ಕ್ಯಾಂಪಸ್ಸನ್ನು ಆವರಿಸಿತ್ತು. ಅದಲ್ಲದೆ, ಅನೇಕ ವಿಶ್ವವಿದ್ಯಾಲಯಗಳು ಅವರನ್ನು ಸೆಳೆಯುವ ಪ್ರಯತ್ನ ಮಾಡಿದ್ದವು. ಅಷ್ಟಾದರೂ, ರಾಮಾನುಜನ್ ಮಾತ್ರ ತಮ್ಮ ಇಡೀ ಜೀವನವನ್ನು ಅಲ್ಲಿಯೇ ಕಳೆದರು.

ತಮ್ಮ ಆರಂಭದ ವರ್ಷಗಳಲ್ಲಿ ರಾಮಾನುಜನ್, ಆಧುನಿಕ ಅಮೆರಿಕನ್ ಕಾವ್ಯವನ್ನ, ಅದರಲ್ಲೂ ವಿಶೇಷವಾಗಿ ವ್ಯಾಲೆಸ್ ಸ್ಟೀವನ್ಸ್ ಹಾಗೂ ವಿಲಿಯಮ್ ಕಾರ್ಲೋಸ್ ವಿಲಿಯಮ್ಸ್ ರನ್ನು ಹೆಚ್ಚು ಓದುತ್ತಿದ್ದರು. ತಮ್ಮ ಇಪ್ಪತ್ತರ ವಯಸ್ಸಿನಲ್ಲಿ ಬರೆದಂತಹ ಪದ್ಯಗಳ ಜೊತೆಗೆ, ಅಮೆರಿಕದಲ್ಲಿ ಗಣನೀಯ ಪ್ರಮಾಣದ ಪದ್ಯಗಳನ್ನು ಒಟ್ಟುಗೂಡಿಸಿದ್ದರು. ಅಮೆರಿಕದ ಮೈನರ್ ಜರ್ನಲ್ ಗಳಲ್ಲಿ ಆಗಾಗ್ಗೆ ಅವುಗಳನ್ನು ಪ್ರಕಟಿಸುತ್ತಿದ್ದರು. ಆಕ್ಸ್ ಫರ್ಡ್ ನಲ್ಲಿ ರೋಡ್ಸ್ ವಿದ್ವಾಂಸರಾಗಿದ್ದ ಗಿರೀಶ್ ಕಾರ್ನಾಡ್, 1960ರ ಮಧ್ಯ ಭಾಗದಲ್ಲಿ ಮದ್ರಾಸ್ ನ ಆಕ್ಸ್ ಫರ್ಡ್ ಯೂನಿವರ್ಸಿಟಿ ಪ್ರೆಸ್(ಓಯುಪಿ)ನಲ್ಲಿ ಕೆಲಸ ಮಾಡುತ್ತಿದ್ದರು. ಇಂಗ್ಲಿಶ್ ಕವಿ ಜೋನ್ ಸ್ಟಾಲ್ ವರ್ದಿ ಸಂಪಾದಿಸುತ್ತಿದ್ದ Oxford Poets(ಆಕ್ಸ್ ಫರ್ಡ್ ಕವಿಗಳು) ಸರಣಿಗೆ ರಾಮಾನುಜನ್ ರ ಪದ್ಯಗಳನ್ನು ಪರಿಗಣಿಸಲು ಸಾಧ್ಯವೇ ಎಂದು ವಿಚಾರಿಸಿದರು. ಇಂಡಿಯಾದಲ್ಲಿ ಓಯುಪಿಯ ಜನರಲ್ ಮ್ಯಾನೇಜರ್ ಆಗಿದ್ದ ರೋಯ್ ಹಾಕಿನ್ಸ್, ಸಾಂಪ್ರದಾಯಿಕ ಅಭಿರುಚಿಯನ್ನು ಹೊಂದಿದ್ದವರಾಗಿದ್ದರಿಂದಾಗಿ ಹಸ್ತಪ್ರತಿಗೆ ಅಧಿಕೃತ ಅನುಮೋದನೆ ನೀಡಿ, ವೈಯುಕ್ತಿಕ ಶಿಫಾರಸ್ಸಿಸ ಮೇಲೆ ಲಂಡನ್ ಗೆ ಕಳಿಸಿಕೊಡುವಂತೆ ಮಾಡಲು ಕಾರ್ನಾಡರಿಗೆ ಅವರ ಮನವೊಲಿಸಲಾಗಲಿಲ್ಲ. ಅವರು, “ಇದನ್ನು ಪೊಯೆಟ್ರಿ ಅಂತ ಯಾಕೆ ಕರೆಯುತ್ತಿದ್ದೀರೋ ತಿಳಿಯುತ್ತಿಲ್ಲ. ಗದ್ಯವನ್ನೇ ತುಂಡು ತುಂಡು ಮಾಡಿ ಪದ್ಯದಂತೆ ಮಾಡಿರುವ ಹಾಗೆ ನನಗೆ ಅನ್ನಿಸುತ್ತಿದೆ” ಎಂದಿದ್ದರು. ಆದರೆ, ಸ್ಟಾಲ್ ವರ್ದಿ ಪದ್ಯಗಳನ್ನು ಇಷ್ಟಪಟ್ಟಿದ್ದರು. 1964ನೇ ಇಸವಿಯ ಆಗಸ್ಟ್ ಐದರಂದು ಕಾರ್ನಾಡರು ಚಿಕಾಗೋದಲ್ಲಿದ್ದ ರಾಮಾನುಜನ್ ಗೆ ಹೀಗೆ ಪತ್ರ ಬರೆದರು:

ಪ್ರಿಯ ರಾಮಾನುಜನ್,

ಇಂದು ಕೆಲಸ ಶುರುಮಾಡುವ ಮುನ್ನ ನಿಮಗೆ ಅವಸರದಲ್ಲೊಂದು ಪತ್ರ ಬರೆಯುತ್ತಿದ್ದೇನೆ. ಈಗಲೇ ಖಚಿತವಾಗಿ ಏನನ್ನೂ ಹೇಳಲಾಗದಿದ್ದರೂ, ‘The Striders’ ಗೆ ಸಂಬಂಧಿಸಿದಂತೆ ಕೆಲಸ ಚುರುಕು ಪಡೆದಿದೆ.

ಲಂಡನ್ ಆಫೀಸಿನಿಂದ ಬಂದ ವರದಿ ಹೀಗೆ ಹೇಳುತ್ತದೆ:

“ನಮಗೆ ಇದರಲ್ಲಿ ನಿಜಕ್ಕೂ ಆಸಕ್ತಿ ಇದೆ. ರಾಮಾನುಜನ್ ಈಗಾಗಲೇ ಒಳ್ಳೆಯ ಕವಿಯಾಗಿದ್ದಾರೆ. ಮುಂದೆ ಕೂಡ ಒಳ್ಳೆಯ ಕವಿಯಾಗಬಲ್ಲ ಸಾಮರ್ಥ್ಯ ಹೊಂದಿದ್ದಾರೆ… ಅವರ ಲಯ ಖಚಿತವಾಗಿದ್ದರೂ ಅಮೆರಿಕದ ಇಂದಿನ ಒಪ್ಪಿತ ಶೈಲಿಯಂತೆ ಸಾಂತ್ವನದ ಗುಣ ಹೊಂದಿದೆ. ಆದರೆ, ದನಿ ಮಾತ್ರ, ಅವರದ್ದೇ, ಇಂಡಿಯಾದ್ದು…”

ಪದ್ಯಗಳನ್ನು ಮೆಚ್ಚಿಕೊಂಡ ಸ್ಟಾಲ್ ವರ್ದಿ, ಖುದ್ದಾಗಿ ತಾವೇ “ಚೈತನ್ಯ ಹಾಗೂ ಖಚಿತತೆಯ ಅಪರೂಪದ ಹದಬೆರಕೆ” ಎಂದು ಬರೆದರು. ಹಾಗೆಯೇ, ಕೆಲವು ಅನುಮಾನಗಳನ್ನ ವ್ಯಕ್ತಪಡಿಸಿ, ಬದಲಾವಣೆಗಳನ್ನು ಮಾಡಲು ಸೂಚಿಸಿದರು. ಸ್ಟಾಲ್ ವರ್ದಿಯವರಲ್ಲಿ ಸಮರ್ಥ  ವಿಮರ್ಶಕರನ್ನು ಕಂಡ ರಾಮಾನುಜನ್, ವಿಮರ್ಶೆಯನ್ನು ಮುಕ್ತವಾಗಿ ಸ್ವೀಕರಿಸಿದರು. ರಾಮಾನುಜನ್, ವೈಚಾರಿಕತೆಗೆ ಒತ್ತು ನೀಡುತ್ತಿದ್ದದ್ದದ್ದು ಮಾತ್ರವಲ್ಲ, “ಯಾರೇ ಆಧರೂ ತಮ್ಮ ಕೃತಿಗಳ ಕುರಿತ ವಿಮರ್ಶೆಯನ್ನು ನಿರ್ಮಮಕಾರದಿಂದ ಸ್ವೀಕರಿಸಬೇಕೆಂದು ಒತ್ತಿಹೇಳುತ್ತಿದ್ದರು. ಅವರು ಕಾವ್ಯದಲ್ಲಿ ಬಿರುಸುತನಕ್ಕೆ ಒತ್ತುನೀಡುತ್ತಿದ್ದರು: ‘ಮೊದಲ ಕರಡು ಅನ್ನುವುದು ಒಂದು ಶುರುವಿನ ಬಿಂದು. ಅಲ್ಲಿಂದ ತಪ್ಪಿಸಿಕೊಳ್ಳಬೇಕು’” ಎಂದು ಹೇಳುತ್ತಿದ್ದರು. ಅಲ್ಲಿಂದ ಮುಂದಕ್ಕೆ ಸ್ಟಾಲ್ ವರ್ದಿ ಮತ್ತು ರಾಮಾನುಜನ್ ಬಹುಕಾಲ ಸ್ನೇಹಮಯ ಪತ್ರವ್ಯವಹಾರವನ್ನು ಇರಿಸಿಕೊಂಡಿದ್ದರು.

 1956ರಲ್ಲಿ ಪ್ರಕಟವಾದ The Striders ನಲ್ಲಿನ ಅನೇಕ ಪದ್ಯಗಳು ರಾಮಾನುಜನ್ ರ ಪದ್ಯಗಳಲ್ಲೇ ಅತಿ ಹೆಚ್ಚು ಸಂಕಲನಗಳಲ್ಲಿ ಕಾಣಿಸಿಕೊಂಡಿರುವಂಹವು. ಅವುಗಳಲ್ಲಿ ಶೀರ್ಷಿಕಾ ಪದ್ಯ ತನ್ನ ವಿಶಿಷ್ಟ, ಸ್ಮರಣೀಯ in medias res ಶುರುವಾತಿನೊಂದಿಗೆ:

And search

for certain thin-stemmed, bubble-eyed water bugs.

See them perch

on dry capillary legs

weightless

on the ripple skin

of a stream.

ಗುಣವಿಶೇಷಣಗಳ “ನಿರ್ದಿಷ್ಟ ಲಯ”(“thin-/stemmed, bubble-eyed”) ಹಾಗೂ “ಪ್ರತಿಮೆಗಳ ನಿಖರತೆ”(“dry capillary legs”)—ಇದು ನಿಜಕ್ಕೂ ಆರಂಭಿಕನೊಬ್ಬನ ಕಾವ್ಯಕುಸುರಿಯಲ್ಲ. ಮತ್ತೊಂದು ಪದ್ಯ ‘Conventions of Despair’ ನಲ್ಲಿ ನಿರೂಪಣಾ ಧ್ವನಿಯ ನಿರ್ಲಿಪ್ತತೆಯು ವಿಭಿನ್ನವಾದ ಪರಿಣಾಮವನ್ನು ಸಾಧಿಸುತ್ತದೆ. “Yes, I know all that. I should be modern”— ಎಂದು ವಿಡಂಬನಾತ್ಮಕವಾಗಿ ಶುರುವಾಗುವ ಈ ಸಾಲು ಆನಂತರದಲ್ಲಿ ಆತ್ಮಜ್ಞಾನದ ವಾಹನವಾಗಿ ಬದಲಾಗಿಬಿಡುತ್ತದೆ.

But, sorry, I cannot unlearn

conventions of despair.

They have their pride.

I must seek and will find

ದಿ ನ್ಯೂಯಾರ್ಕ್ ಟೈಮ್ಸ್ ಬುಕ್ ರಿವ್ಯೂ ರಾಮಾನುಜನ್ “ಪಾಶ್ಚಿಮಾತ್ಯ ಜೀವನದೊಂದಿಗೆ ಜಾಗರೂಕವಾಗಿ ಬೆರೆತುಹೋಗಿರುವುದರ” ಬಗ್ಗೆ ಹೇಳಿತ್ತು. ಹಾಗೆಯೇ, “ಮರಿಯಾನ್ ಮೂರ್, ವಿಲಿಯಮ್ ಕಾರ್ಲೋಸ್ ವಿಲಿಯಮ್ಸ್ ಹಾಗೂ ಮತ್ತಿತರ ಅಮೆರಿಕನ್ ಶ್ರೇಷ್ಟರಿಂದ” ಪಡೆದುಕೊಂಡಿದ್ದ ವಿಧಾನಗಳ ಎದ್ದುಕಾಣುವ ಪ್ರಭಾವದ ಬಗ್ಗೆಯೂ ಉಲ್ಲೇಖಿಸಿತ್ತು. ಅದು ಪದ್ಯಗಳ “ಪ್ರವಹಿಸುವ ಪ್ರತಿಮಾತ್ಮಕ,” ಹಾಗೂ ನಾಜೂಕಿನ ತಾಜಾತನದ, ಗಟ್ಟಿಯಾದ, ಕರಾರುವಾಕ್ಕಾದ, ತುಂಟತನದ ಹಾಗೂ ಗಂಭೀರ ಗುಣವನ್ನು ಮೆಚ್ಚಿಕೊಂಡು… ಭಾರತೀಯ ಬದುಕು ಹಾಗೂ ಅದರ ಅರ್ಥಗಳನ್ನೊಳಗೊಂಡ “ಕೊಂಚ ದೇಶಾಂತರಿಯ ಗುಣ ಹೊಂದಿದ, ಆದರೂ ಭಾರತೀಯ ಬದುಕಿನಲ್ಲಿ ಹಾಗೂ ಅದರ ಅರ್ಥಗಳಲ್ಲಿ ತೊಡಗಿಸಿಕೊಂಡ ಮನಸ್ಸಿನ ದೃಷ್ಟಿಕೋನವನ್ನು ಹೊರಸೂಸುತ್ತವೆ” ಎಂದು ಬರೆದಿತ್ತು.

ರಿವ್ಯೂ ಈ ಚಿಂತನಾತ್ಮಕ ನಿರ್ಣಯದೊಂದಿಗೆ ಕೊನೆಗೊಂಡಿತ್ತು. “ಪೂರ್ವ ಪೂರ್ವವೇ. ಪಶ್ಚಿಮ ಪಶ್ಚಿಮವೇ, ಆದರೆ ಅವೆರಡೂ ಸೇರಿರುವುದು ಮಾತ್ರವಲ್ಲ, (ರಾಮಾನುಜನ್ ರಲ್ಲಿ) ಪ್ರಜ್ಞೆ ಹಾಗೂ ಭಾವನೆಯಲ್ಲಿ  ಒಂದಾಗಿ ಬೆರೆತುಹೋಗಿದೆ.” ಇದು ರಾಮಾನುಜನ್ ರ ತಂದೆಯ ಸಾಂಗತ್ಯವಿಲ್ಲದ ದ್ವೈತ—ಒಂದೆಡೆ ಬರ್ಟ್ರಂಡ್ ರಸೆಲ್ ಹಾಗೂ ಮತ್ತೊಂದೆಡೆ ಭಗವದ್ಗೀತೆ—ಆಗಿರಲಿಲ್ಲ. ಬದಲಿಗೆ ಸಂಪೂರ್ಣವಾಗಿ ಭಿನ್ನವಾದುದೇನೋ ಆಗಿತ್ತು. (ನಂತರದ ವರ್ಷಗಳಲ್ಲಿ, ರಾಮಾನುಜನ್ “Indo-American”ನಲ್ಲಿನ ಹೈಫನ್ ನಾನು ಎಂದು ಅಕ್ಕರೆಯಿಂದ ಹೇಳಿಕೊಳ್ಳುತ್ತಿದ್ದರು.)

ಹೆಚ್ಚಿನ ರಿವ್ಯೂಗಳು ಕಾಣಿಸಿಕೊಳ್ಳುತ್ತಿದ್ದ ಹಾಗೆ, ವಿಮರ್ಶಾತ್ಮಕ ಒಮ್ಮತಾಭಿಪ್ರಾಯ ಮೂಡಲಾರಂಭಿಸಿತು. ಇದು ಅವರ ಮುಂದಿನ ಕಾವ್ಯ ಜೀವನದುದ್ದಕ್ಕೂ ಕಾಡಿತು. ಯಾವೊಬ್ಬ ವಿಮರ್ಶಕನೂ ರಾಮಾನುಜನ್ ರ ಭಾಷೆ ಹಾಗೂ ಪ್ರತಿಮೆಯ ಚುರುಕು ನಿಖರತೆಯಿಂದ ಮಾರುಹೋಗಲಿಲ್ಲ ಎಂದು ಹೇಳಲಾಗದಿದ್ದರೂ, ಕೆಲವರು ಮಾತ್ರ ಅವರ ಪದ್ಯಗಳ ನಿರ್ಲಿಪ್ತತೆ ಹಾಗೂ ಕಟು ವ್ಯಂಗ್ಯದಿಂದಾಗಿ ಬೆಲೆ ತೆರಬೇಕಾಯಿತು ಎಂದು ಗುರುತಿಸಿದ್ದರು. ಬರ್ಟನ್ ರಾಫೆಲ್ ಎಂಬ ಅಮೆರಿಕನ್ ವಿಮರ್ಶಕ ಹೇಳಿದ್ದ ಹಾಗೆ, ಯಾರನ್ನೂ ಕಾಡುವಂತಹದ್ದೇನಿಲ್ಲ… ಒಬ್ಬ ಕವಿ ಅದಕ್ಕಿಂತ ಸಾಧಾರಣವಾಗಿ ಸೋಲಲಾರ.” ಆದರೂ, ರಾಫೆಲ್ “ಅವರ ದೌರ್ಬಲ್ಯವಿರುವುದು ಬ್ರಿಟಿಶ್ ಮಾದರಿಗಳೊಂದಿಗೆ ಸ್ವರ್ಧಿಸುವುದನ್ನೇ ದೋಷಗಳನ್ನಾಗಿಸಿಕೊಂಡಿದ್ದ ಅವರ ಸಮಕಾಲೀನರಾದ ಪಿ ಲಾಲ್ ಹಾಗೂ ಡೊಮ್ ಮೊರೇಸ್ ರಂತಹದ್ದರಲ್ಲಲ್ಲ” ಎಂದು ಗುರುತಿಸಿದ್ದರು.

ರಾಮಾನುಜನ್, ಬೇರೆಯ ಭಾಷೆಯನ್ನಾಡುವ ಜಾಗಕ್ಕೆ ಹೋಗಿದ್ದರು: ಅವರಿಗೆ ಚುರುಕಾದ ಕಿವಿಯಿತ್ತು(ವೃತ್ತಿಪರ ಭಾಷಾಶಾಸ್ತ್ರಜ್ಞನಿಗೆ ಅಚ್ಚರಿಯೆನಿಸುವಂತದ್ದೇನಲ್ಲ), ಅವರು ಧೈರ್ಯ ಮಾಡಿ, ಅವರೊಳಗಿನ ಪ್ರಾಮಾಣಿಕ ತಳಮಳಗಳಿಂದ ಬಿಡಿಸಿಕೊಂಡು ಹೊರಬರುವುದಕ್ಕೆ ಎಡೆಮಾಡಿಕೊಟ್ಟಿದ್ದರೆ, ಅವರು ನನಗೆ ತಿಳಿದ ಬೇರಾವ ಭಾರತೀಯ ಕವಿಯಿಂದಲೂ ಸಾಧ್ಯವಾಗದಿದ್ದಂತಹ ಮೊದಲ ಅಥವಾ ಬಹುಶಃ ಎರಡನೇ ದರ್ಜೆಯ ಇಂಗ್ಲಿಶ್ ಕಾವ್ಯವನ್ನು ಬರೆಯುವಷ್ಟು ಸಾಮರ್ಥ್ಯವನ್ನಂತೂ ಹೊಂದಿದ್ದರು.


ಭಾಗ ೧ : https://ruthumana.com/2018/03/19/ak-ramanujan-the-literary-legacy-of-an-indian-modernist-part1/

ಭಾಗ ೨ : https://ruthumana.com/2018/03/26/ak-ramanujan-the-literary-legacy-of-an-indian-modernist-part2/


ಅನುವಾದ : ಶಶಿಕುಮಾರ್
ಕೆನಡಾದ ಯೂನಿವರ್ಸಿಟಿ ಆಫ್ ಆಲ್ಬರ್ಟಾದಲ್ಲಿ ಸಂಶೋಧಕರು. ಹುಟ್ಟಿದ್ದು, ಬೆಳೆದಿದ್ದು, ಓದಿದ್ದು ಮೈಸೂರಿನಲ್ಲಿ. ಹೊಸದೆಹಲಿಯ ಆಕ್ಸ್ ಫರ್ಡ್ ಯೂನಿವರ್ಸಿಟಿ ಪ್ರೆಸ್ ನಲ್ಲಿ ಕೆಲಕಾಲ ಇಂಗ್ಲಿಶ್ ಅನುವಾದಗಳ ಸಂಪಾದಕರಾಗಿದ್ದರು. ಸದ್ಯ ಕನ್ನಡ ಕಾದಂಬರಿಗಳ ಇಂಗ್ಲಿಶ್ ಅನುವಾದ ಹಾಗೂ ಕನ್ನಡ ವಿಮರ್ಶಾತ್ಮಕ ಸಂಕಥನದ ಸಂಪಾದನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಾಹಿತ್ಯ ಸಂಸ್ಕೃತಿಗಳ ಅಧ್ಯಯನ ಇವರ ಆಸಕ್ತಿಯ ಕ್ಷೇತ್ರ.

2 comments to “ಕನ್ನಡಿಯ ಪಾದರಸದಾಚೆ ನಕ್ಕ ಮುಖ – ಭಾಗ ೩”
  1. ಪ್ರಿಯ ಶಶಿ ಕುಮಾರ್ ಲೇಖನವನ್ನು ರೂಪಾತ್ಮಕ ವಾಗಿ ಅನುವಾದ ಮಾಡಿದ್ದೀರಿ, ಅಭಿನಂದನೆಗಳು ನಿಮಗೂ ಮತ್ತು ಋತು maanakku, ಮೂಲ ಲೇಖಕರಿಗೂ.

    • ಪ್ರಿಯ ಸುರೇಶ್, ಓದಿ ನಿಮ್ಮ ಅನಿಸಿಕೆ ತಿಳಿಸಿದ್ದಕ್ಕೆ ಆಭಾರಿ.

ಪ್ರತಿಕ್ರಿಯಿಸಿ