ಕೊರೋನ ಹಿನ್ನಲೆಯಲ್ಲಿ ಭಾರತದ ಮುಂದಿರುವ ಅತಿದೊಡ್ಡ ಸವಾಲು

ಕೊರೋನಕ್ಕೆ ಮುಂಚೆಯೇ ಭಾರತದ ಆರ್ಥಿಕ ಸ್ಥಿತಿ ನಿರಂತರವಾಗಿ ಕುಸಿಯುತ್ತಿತ್ತು ಮತ್ತು ಸಾಮಾಜಿಕ-ರಾಜಕೀಯ ಪರಿಸರ ಹಾಳಾಗುತ್ತಿತ್ತು. ಮತ್ತೆ ಅದೇ ಹಿಂದಿನ ಸ್ಥಿತಿಗೆ ಹಿಂತಿರುಗಿದರೆ ಪ್ರಯೋಜನವಿಲ್ಲ. ಯಾರೂ ಅದನ್ನು ಬಯಸುತ್ತಿಲ್ಲ. ಬಿಕ್ಕಟ್ಟು ಬಂದಾಗ ಭಾರತ ಸುಧಾರಿಸುತ್ತದೆ ಎಂದು ಹೇಳಲಾಗುತ್ತದೆ. ಈ ದುರಂತದಿಂದ ನಾವು ಒಂದು ಸಮಾಜವಾಗಿ ಎಷ್ಟು ದುರ್ಬಲವಾಗಿದ್ದೇವೆ ಎಂಬುದು ನಮಗೆ ಅರ್ಥವಾಗಬಹುದು ಎಂದು ನಿರೀಕ್ಷಿಸೋಣ. ನಮಗೆ ಇಂದು ಮುಖ್ಯವಾಗಿ ಬೇಕಿರುವ ಆರ್ಥಿಕ ಮತ್ತು ಆರೋಗ್ಯದ ಸುಧಾರಣೆಯತ್ತ ನಮ್ಮ ರಾಜಕೀಯವನ್ನು ಕೇಂದ್ರಿಕರಿಸೋಣ.

ಆರ್ಥಿಕತೆಯ ದೃಷ್ಟಿಯಿಂದ ಮಾತನಾಡುವುದಾದರೆ, ಸ್ವಾತಂತ್ರ್ಯದ ನಂತರ ಇಂದು ಭಾರತ, ಅತಿದೊಡ್ಡ ತುರ್ತುಪರಿಸ್ಥಿಯನ್ನು ಎದುರಿಸುತ್ತಿದೆ. 2008-09ರ ಜಗತ್ತನ್ನು ಕಾಡಿದ ಹಣಕಾಸು ಬಿಕ್ಕಟ್ಟು ಬೇಡಿಕೆಗೆ ಒಂದು ಬಲವಾದ ಹೊಡೆತವಾಗಿತ್ತು. ಆದರೂ ಕೆಲಸಗಾರರು ಕೆಲಸಕ್ಕೆ ಹೋಗುತ್ತಿದ್ದರು. ಬಿಕ್ಕಟ್ಟು ಕಳೆದ ಕೆಲವೇ ವರ್ಷಗಳಲ್ಲಿ ನಮ್ಮ ಉದ್ದಿಮೆಗಳು ಚೇತರಿಸಿಕೊಂಡವು. ನಮ್ಮ ಹಣಕಾಸು ವ್ಯವಸ್ಥೆ ಸುಮಾರಾಗಿ ಸುಸ್ಥಿತಿಯಲ್ಲೇ ಇತ್ತು. ಸರ್ಕಾರದ ಹಣಕಾಸು ಸ್ಥಿತಿಯೂ ಆರೋಗ್ಯವಾಗಿಯೇ ಇತ್ತು. ಆದರೆ ಇಂದು ಪರಿಸ್ಥಿತಿ ಅದಕ್ಕೆ ಸಂಪೂರ್ಣವಾಗಿ ವ್ಯತಿರಿಕ್ತವಾಗಿದೆ. ಕೊರೋನ ಮಹಾಮಾರಿ ನಮ್ಮನ್ನು ದೊಡ್ಡ ಬಿಕ್ಕಟ್ಟಿದೆ. ಆದರೂ ನಿರಾಶರಾಗುವುದಕ್ಕೆ ಕಾರಣವಿಲ್ಲ. ನಮ್ಮ ನಿರ್ಧಾರಗಳು ಹಾಗೂ ಆದ್ಯತೆಗಳು ಸರಿಯಾಗಿದ್ದರೆ, ನಮ್ಮಲ್ಲಿರುವ ನಿಜವಾದ ಸಾಮಥ್ರ್ಯವನ್ನು ಬಳಸಿಕೊಂಡು ವೈರಾಣುವನ್ನು ಹಿಮ್ಮೆಟ್ಟಿಸಬಹುದು. ಅಷ್ಟೇ ಅಲ್ಲ ಹೆಚ್ಚು ಭರವಸೆಯ ನಾಳೆಗಾಗಿ ಸೂಕ್ತ ವೇದಿಕೆಯನ್ನು ಸೃಷ್ಟಿಸಬಹುದು. ನಮ್ಮ ತಕ್ಷಣದ ಆದ್ಯತೆಯೆಂದರೆ ವ್ಯಾಪಕವಾಗಿ ಪರೀಕ್ಷಿಸುವುದು, ಸೋಂಕಿತರನ್ನು ಪ್ರತ್ಯೇಕವಾಗಿಡುವುದು ಹಾಗೂ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದರ ಮೂಲಕ ಮಹಾಮಾರಿ ಹರಡದಂತೆ ತಡೆಯುವುದು. 21 ದಿನಗಳ ಲಾಕ್ ಡೌನ್‍ನಿಂದ ಇನ್ನೂ ಹೆಚ್ಚು ಸಿದ್ಧರಾಗುವುದಕ್ಕೆ ನಮಗೆ ಸಮಯಾವಕಾಶ ಸಿಕ್ಕಿದೆ. ದೇಶದ ಅತ್ಯಂತ ಧೈರ್ಯಶಾಲಿಗಳಾದ ವೈದ್ಯಕೀಯ ಸಿಬ್ಬಂದಿಗಳ ನೆರವನ್ನು ಸರ್ಕಾರ ಪಡೆದುಕೊಳ್ಳುತ್ತಿದೆ. ಸರ್ಕಾರಿ, ಖಾಸಗಿ, ರಕ್ಷಣೆ, ನಿವೃತ್ತ ಹೀಗೆ ಸಾಧ್ಯವಾಗುವ ಎಲ್ಲಾ ಮೂಲದಿಂದಲೂ ನೆರವನ್ನು ತೆಗೆದುಕೊಳ್ಳುತ್ತಿದೆ.

ಆದರೆ ಸರ್ಕಾರ ಇನ್ನೂ ಹಲವು ಪಟ್ಟು ವೇಗವಾಗಿ ಕೆಲಸಮಾಡಬೇಕಾಗಿದೆ.

ಸೋಂಕಿತರಿಗಾಗಿ ಇನ್ನೂ ಹೆಚ್ಚು ವ್ಯಾಪಕವಾಗಿ ಪರೀಕ್ಷಿಸಬೇಕು. ಆಗ ನಿಜವಾಗಿ ಹಾಟ್‍ಸ್ಪಾಟ್ ಎಲ್ಲಿದೆ ಎಂಬುವುದು ಸ್ಪಷ್ಟವಾಗುತ್ತದೆ. ಸದಾ ಚಲಿಸುವುದಕ್ಕೆ ಸಿದ್ಧರಿರುವ ಜನರ ಹಾಗೂ ಸಂಪನ್ಮೂಲದ ತಂಡವನ್ನು ಸಿದ್ಧಗೊಳಿಸಬೇಕು. ಆಗ ಕೊರತೆ ಬಿದ್ದ ಕಡೆಗೆ ಅಥವಾ ಪರಿಸ್ಥಿತಿ ಗಂಭೀರವಾದ ಕಡೆಗೆ ತಕ್ಷಣ ಅವರನ್ನು ಕಳುಹಿಸಬಹುದು. ಸೋಂಕು ನಿಲ್ಲದೇ ಹೋದರೆ ಲಾಕ್‍ಡೌನ್ ನಂತರ ಏನು ಮಾಡಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಯೋಜನೆಗಳನ್ನು ಈಗಲೇ ರೂಪಿಸಿಕೊಳ್ಳಬೇಕು. ಇಡೀ ದೇಶವನ್ನು ಬಹುಕಾಲ ಲಾಕ್ ಡೌನಿನಲ್ಲಿಡುವುದು ನಿಜವಾಗಿ ಕಷ್ಟದ ಕೆಲಸ. ಸೋಂಕು ಹೆಚ್ಚಾಗಿಲ್ಲದ ಕೆಲವು ಪ್ರದೇಶಗಳಲ್ಲಿ ಸ್ವಲ್ಪಮಟ್ಟಿನ ಚಟುವಟಿಕೆಗಳನ್ನು ಹೇಗೆ ಆರಂಭಿಸಬಹುದು ಎಂದು ಯೋಚಿಸುವುದು ಒಳ್ಳೆಯದು. ಅಂತಹ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಎಚ್ಚರಿಕೆಯ ಕ್ರಮಗಳ ಬಗ್ಗೆ ಚಿಂತಿಸಬೇಕು. ಆರ್ಥಿಕ ಚಟುವಟಿಕೆಯನ್ನು ಮತ್ತೆ ಪ್ರಾರಂಭಿಸಬೇಕಾದರೆ ಸೋಂಕು ಯಾವ ಮಟ್ಟದಲ್ಲಿ ಹರಡಿದೆ ಎನ್ನುವುದರ ಬಗ್ಗೆ ನಿಖರವಾದ ಮಾಹಿತಿ ಇರಬೇಕು. ಹಾಗೆ ಕೆಲಸಕ್ಕೆ ಹಿಂತಿರುಗಿದ ಕೆಲಸಗಾರರಿಗೆ ರಕ್ಷಣೆ ಒದಗಿಸುವುದಕ್ಕೆ ಕ್ರಮ ತೆಗೆದುಕೊಳ್ಳಬೇಕು. ಉದಾಹರಣೆಗೆ ಕೆಲಸಗಾರರ ತಾಪಮಾನವನ್ನು ಗಮನಿಸುವುದು ಜನಜಂಗುಳಿ ಇಲ್ಲದ ಸಾರಿಗೆ, ವೈಯಕ್ತಿಕ ರಕ್ಷಣೆಗೆ ಸಾಮಗ್ರಿಗಳು, ಕೆಲಸದ ಸ್ಥಳದಲ್ಲಿ ಅಂತರವನ್ನು ಕಾಪಾಡಿಕೊಳ್ಳುವುದಕ್ಕೆ ವ್ಯವಸ್ಥೆ, ಹೊಸ ಸೋಂಕಿತರನ್ನು ಪತ್ತೆಹಚ್ಚುವುದಕ್ಕೆ ಹಾಗೂ ಹೊಸಬರಿಗೆ ಹರಡದಂತೆ ನೋಡಿಕೊಳ್ಳುವುದಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಕೆಲಸದ ಸ್ಥಳಕ್ಕೆ ಹತ್ತಿರದಲ್ಲಿರುವ ಹಾಸ್ಟೆಲ್ಲುಗಳಲ್ಲಿ ಸೂಕ್ತ ಅಂತರವನ್ನು ಕಾಪಾಡಿಕೊಳ್ಳುವುದಕ್ಕೆ ವ್ಯವಸ್ಥೆಯಿರುವ ಸ್ಥಳದಲ್ಲಿರುವ ಆರೋಗ್ಯವಂತ ಯುವಕರು ಮತ್ತೆ ಕೆಲಸ ಪ್ರಾರಂಭಿಸುವುದಕ್ಕೆ ಸೂಕ್ತರಾಗಬಹುದು. ಪ್ರಾರಂಭದಲ್ಲಿ ಬೆರೆಳೆಣಿಕೆಯ ಕೆಲವು ಉದ್ದಿಮೆದಾರರಿಗಷ್ಟೇ ಕಾರ್ಮಿಕರಿಗೆ ಅವಶ್ಯಕವಾದ ರಕ್ಷಣೆಯನ್ನು ಕೊಡುವುದಕ್ಕೆ ಸಾಧ್ಯವಾಗಬಹುದು. ಆದರೆ ಅಂತಹ ಉದ್ದಿಮೆಗಳಲ್ಲೇ ಅತಿ ಹೆಚ್ಚು ಕಾರ್ಮಿಕರರಿರುವ ಸಾಧ್ಯತೆ ಇದೆ. ಹಾಗೆ ಉತ್ಪಾದನೆಯನ್ನು ಪ್ರಾರಂಭಿಸುವುದಕ್ಕೆ ಉತ್ಪಾದನೆಗೆ ಬೇಕಾದ ವಸ್ತುಗಳನ್ನು ಒದಗಿಸುವ, ಹಾಗೂ ಇವರಿಂದ ಕೊಳ್ಳುವ, ಹೀಗೆ ಒಂದು ದೊಡ್ಡ ಪೂರೈಕೆಯ ಸರಪಳಿಯೇ ಸಕ್ರಿಯವಾಗಬೇಕು. ಹಾಗೇ ಇಡೀ ವ್ಯವಸ್ಥೆ ಪ್ರಾರಂಭವಾಗುವುದಕ್ಕೆ ಬೇಕಾದ ಯೋಜನೆಯನ್ನು ಮಾಡಿಕೊಳ್ಳುವುದಕ್ಕೆ ಅವರನ್ನು ಪ್ರೋತ್ಸಾಹಿಸಬೇಕು. ಆಡಳಿತ ವ್ಯವಸ್ಥೆ ತಡಮಾಡದೆ ಇಂತಹ ಯೋಜನೆಗಳಿಗೆ ಒಪ್ಪಿಗೆ ಕೊಡಬೇಕು. ಅಷ್ಟೇ ಅಲ್ಲ ಅಂತಹ ಯೋಜನೆಗಳು ತಕ್ಷಣ ಜಾರಿಯಾಗುವುದಕ್ಕೆ ಉತ್ತೇಜಿಸಬೇಕು. ಅದಕ್ಕೆ ಈಗಿನಿಂದಲೇ ಯೋಚಿಸಿಬೇಕು.

ಈ ಮಧ್ಯೆ ಕೆಲಸಕ್ಕೆ ಹೋಗಲಾರದ ಬಡವರು ಹಾಗೂ ಸಂಬಳವಿಲ್ಲದ ಕೆಳ ಮಧ್ಯಮವರ್ಗದ ಜನರು ಜೀವನ ನಡೆಸುವುದಕ್ಕೆ ಬೇಕಾದ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕು. ನೊಂದ ಕುಟುಂಬಗಳಿಗೆ ನೇರವಾಗಿ ಹಣವನ್ನು ವರ್ಗಾಯಿಸಬೇಕು. ಇದರಿಂದ ಹಲವರಿಗೆ ಅನುಕೂಲವಾಗಬಹುದು. ಆದರೆ ಈ ಮೂಲಕ ಎಲ್ಲರನ್ನೂ ತಲುಪುವುದಕ್ಕೆ ಸಾಧ್ಯವಿಲ್ಲ. ಹಲವು ಪರಿಣತರು ಈಗಾಗಲೇ ಈ ಅಂಶದ ಬಗ್ಗೆ ಗಮನ ಸೆಳೆದಿದ್ದಾರೆ. ಅಷ್ಟೇ ಅಲ್ಲ್ಲ ಈಗ ಕೊಡುತ್ತಿರುವ ಹಣ ಒಂದು ತಿಂಗಳಿಗೆ ಸಾಲುವುದಿಲ್ಲ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಒಟ್ಟಾಗಿ ಈ ಬಗ್ಗೆ ಯೋಜನೆಗಳನ್ನು ರೂಪಿಸಬೇಕು. ಅವಶ್ಯಕತೆಯಿರುವ ಕುಟುಂಬಗಳಿಗೆ ಮುಂದಿನ ಕೆಲವು ತಿಂಗಳ ಜೀವನಕ್ಕೆ ವ್ಯವಸ್ಥೆ ಮಾಡಬೇಕು. ಆಹಾರ, ವೈದ್ಯಕೀಯ ಸೌಲಭ್ಯ ಹಾಗೂ ಕೆಲವೊಮ್ಮೆ ವಸತಿಗಾಗಿ ವ್ಯವಸ್ಥೆ ಮಾಡಬೇಕು. ಇದಕ್ಕಾಗಿ ಸರ್ಕಾರಿ ಮತ್ತು ಸರ್ಕಾರೇತರ ಸಂಘಟನೆಗಳು ಒಟ್ಟಾಗಿ ಒಂದು ವ್ಯವಸ್ಥೆಯನ್ನು ತಕ್ಷಣದಲ್ಲಿ ಮಾಡಬೇಕು. ಸಾಲದ ಪಾವತಿಯ ಗಡುವನ್ನು ಒಂದೆರಡು ತಿಂಗಳು ವಿಸ್ತರಿಸುವುದು ಮತ್ತು ಅವರನ್ನು ಕೆಲಸದಿಂದ ತೆಗೆಯದಂತೆ ಖಾಸಗೀ ಕ್ಷೇತ್ರದವರನ್ನು ನಿರ್ದೇಶಿಸಬೇಕು. ಸಂಕಟದಲ್ಲಿರುವ ಕುಟುಂಬಗಳ ಖಾತೆಗೆ ಹಣವನ್ನು ನೇರವಾಗಿ ವರ್ಗಾಯಿಸಬೇಕು. ಇವೆಲ್ಲಾ ಮಾಡದೇ ಹೋದರೆ ಆಗುವ ಪರಿಣಾಮವನ್ನು ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ವಲಸೆ ಹೊರಟಿರುವುದರಲ್ಲಿ ನೋಡುತ್ತದ್ದೇವೆ. ಅಷ್ಟೇ ಅಲ್ಲ ಜನರಿಗೆ ಬದುಕುವುದಕ್ಕೆ ಬೇರೆ ಮಾರ್ಗವೇ ಇಲ್ಲದೇ ಹೋದಾಗ ಅವರು ಲಾಕ್ ಡೌನ್ ಉಲ್ಲಂಘಿಸಿ ಕೆಲಸಕ್ಕೆ ಹೋಗುವುದಕ್ಕೆ ತಯಾರಾಗಬಹುದು.

ದೇಶದ ವಿತ್ತೀಯ ಸ್ಥಿತಿ ನಿಜಕ್ಕೂ ಕಳವಳಕಾರಿಯಾಗಿದೆ. ಆದರೆ ಅವಶ್ಯಕತೆಯಿರುವವರಿಗೆ ನೆರವು ನೀಡುವುದು ಇಂದಿನ ನಮ್ಮ ಆದ್ಯ ಕರ್ತವ್ಯ. ಅದಕ್ಕೆ ನಮ್ಮ ಸಂಪನ್ಮೂಲವನ್ನು ಬಳಸುವುದು ನಮ್ಮ ಪ್ರಮುಖ ಆದ್ಯತೆಯಾಗಬೇಕು. ಒಂದು ಮಾನವೀಯ ದೇಶವಾಗಿ, ವೈರಾಣು ವಿರುದ್ಧದ ಹೋರಾಟದಲ್ಲಿ ಪಾಲ್ಗೊಳ್ಳುತ್ತಿರುವ ನಾವು ಮಾಡಬೇಕಾದ ನಿಜವಾದ ಕೆಲಸ ಇದು. ನಮಗಿರುವ ಆಯವ್ಯಯದ ಮಿತಿಗಳನ್ನು ಕಡೆಗಣಿಸಬೇಕು ಎಂಬುದು ಇದರರ್ಥವಲ್ಲ. ಅದರಲ್ಲೂ ವಿಶೇಷವಾಗಿ ನಮ್ಮ ಕಂದಾಯ ಸಂಗ್ರಹಣೆ ತೀವ್ರ ಕುಸಿದಿರುವ ಈ ಸಮಯದಲ್ಲಿ ಇದು ನಮ್ಮ ಕಾಳಜಿಯಾಗುತ್ತದೆ. ಅಮೇರಿಕ ಅಥವಾ ಯುರೋಪ್ ಅಂತಹ ದೇಶಗಳಿಗೆ ತಮ್ಮ ಜಿಡಿಪಿಯ ಶೇಕಡ 10ರಷ್ಟು ಖರ್ಚು ಮಾಡಲು ಸಾಧ್ಯವಿದೆ. ಅವರಿಗೆ ತಮ್ಮ ದೇಶದ ರೇಟಿಂಗ್ ಕಡಿಮೆಯಾಗಿಬಿಡಬಹುದೆಂಬ ಗಾಬರಿಯಿಲ್ಲ. ಆದರೆ ಭಾರತದ ವಿತ್ತೀಯ ಕೊರತೆ ಈಗಾಗಲೇ ತೀವ್ರವಾಗಿದೆ. ಈಗ ಈ ಕೊರೋನ ಬಿಕ್ಕಟ್ಟು ಎದುರಾಗಿದೆ. ಮತ್ತು ನಾವು ಇನ್ನೂ ಹೆಚ್ಚು ಖರ್ಚು ಮಾಡಬೇಕಾಗಿದೆ. ರೇಟಿಂಗ್ ಇಳಿಮುಖವಾದರೆ ಮತ್ತು ಹೂಡಿಕೆದಾರರು ವಿಶ್ವಾಸ ಕಳೆದುಕೊಂಡರೆ ವಿನಿಮಯದರ ನೆಲ ಕಚ್ಚಬಹುದು. ಮತ್ತು ಈ ಪರಿಸ್ಥಿತಿಯಲ್ಲಿ ದೀರ್ಘಕಾಲೀನ ಬಡ್ಡಿದರ ತುಂಬಾ ಹೆಚ್ಚಾಗಿ ಬಿಡಬಹುದು. ನಮ್ಮ ಹಣಕಾಸು ಸಂಸ್ಥೆಗಳಿಗೆ ಗಣನೀಯವಾದ ನಷ್ಟವಾಗಬಹುದು.

ಆದುದರಿಂದ ನಮ್ಮ ಆದ್ಯತೆಗಳನ್ನು ಸರಿಪಡಿಸಿಕೊಳ್ಳಬೇಕು. ಅಷ್ಟೊಂದು ಮುಖ್ಯವಲ್ಲದ ಖರ್ಚುಗಳಲ್ಲಿ ಕಡಿತ ಮಾಡಬೇಕು. ಅಥವಾ ಅದನ್ನು ಮುಂದಕ್ಕೆ ಹಾಕಬೇಕು. ತಕ್ಷಣದ ಅವಶ್ಯಕತೆಯ ಕಡೆ ಗಮನ ಕೊಡಬೇಕು. ಮತ್ತೆ ವಿತ್ತೀಯ ಶಿಸ್ತನ್ನು ಕಾಪಾಡಿಕೊಳ್ಳುತ್ತೇವೆ ಎಂದು ಹೂಡಿಕೆದಾರರಿಗೆ ಭರವಸೆ ಕೊಡಬೇಕು. ಭರವಸೆಗೆ ಪೂರಕವಾಗಿ ಎನ್ ಕೆ ಸಿಂಗ್ ಸಮಿತಿ ಸೂಚಿಸಿದಂತೆ ಮಧ್ಯಮಾವಧಿಯ ಸಾಲದ ಮಿತಿಯನ್ನು ನಿರ್ಧರಿಸುವುದಕ್ಕೆ ಮತ್ತು ಸ್ವತಂತ್ರ ವಿತ್ತೀಯ ಕೌನ್ಸಿಲ್ಲನ್ನು ಸ್ಥಾಪಿಸುವುದಕ್ಕೆ ಒಪ್ಪಿಕೊಳ್ಳಬೇಕು.

ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು ಈಗಾಗಲೇ ದುರ್ಬಲವಾಗಿವೆ. ಅವುಗಳಿಗೆ ಉಳಿದುಕೊಳ್ಳುವುದಕ್ಕೆ ಬೇಕಾದ ಸಂಪನ್ಮೂಲದ ಕೊರತೆ ಇರಬಹುದು. ನಮಗಿರುವ ವಿತ್ತೀಯ ಮಿತಿಯಲ್ಲಿ ಎಲ್ಲರನ್ನೂ ಉಳಿಸುವುದಕ್ಕೆ ಸಾಧ್ಯವೂ ಇಲ್ಲ. ಅಥವಾ ಉಳಿಸಲೂಬಾರದು. ಸಣ್ಣ ಕೌಟಂಬಿಕ ಉದ್ದಿಮೆಗಳಿಗೆ ನೆರವು ಬೇಡದೇ ಇರಬಹುದು. ಯಾಕೆಂದರೆ ಸರ್ಕಾರ ಕಷ್ಟದಲ್ಲಿರುವ ಕುಟುಂಬಗಳಿಗೆ ನೇರವಾಗಿ ಹಣವನ್ನು ವರ್ಗಾಯಿಸಿದಾಗ ಉದ್ದಿಮೆ ನಡೆಸುತ್ತಿರುವ ಕುಟುಂಬಗಳಿಗೂ ಹಣ ಸಿಗುತ್ತದೆ. ಇನ್ನು ದೊಡ್ಡ ಉದ್ದಿಮಗಳ ವಿಷಯದಲ್ಲಿ ಭವಿಷ್ಯವುಳ್ಳ ದೊಡ್ಡ್ಡ ಉದ್ದಿಮೆಗಳಿಗೆ ನೆರವು ನೀಡಬೇಕು. ಹಾಗೆ ನೆರವು ನೀಡುವುದಕ್ಕೆ ಹೊಸ ನವೀನ ದಾರಿಗಳನ್ನು ಕಂಡುಕೊಳ್ಳಬೇಕು. ಅದರಲ್ಲೂ ವಿಶೇಷವಾಗಿ ಹೆಚ್ಚು ಮಾನವ ಹಾಗೂ ಭೌತಿಕ ಬಂಡವಾಳ ಇರುವಂತಹ ಉದ್ದಿಮೆಗಳನ್ನು ಬೆಂಬಲಿಸುವುದಕ್ಕೆ ದಾರಿಗಳನ್ನು ಹುಡುಕಬೇಕು. ಭಾರತದ ಸಣ್ಣ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್ (SIಆಃI) ಸಣ್ಣ ಹಾಗೂ ಮಧ್ಯಮ ಉದ್ದಿಮೆಗಳಿಗೆ ನೀಡುವ ಬ್ಯಾಂಕ್ ಸಾಲದ ಖಾತ್ರಿಗೆ ಷರತ್ತುಗಳನ್ನು ಇನ್ನಷ್ಟು ಮಾರ್ಪಡಿಸಿ ಅವರಿಗೆ ಅನುಕೂಲ ಮಾಡಿಕೊಡಬಹುದು. ಆದರೆ ಈ ಹಂತದಲ್ಲಿ ಬ್ಯಾಂಕುಗಳು ಸಾಲಕ್ಕೆ ಸಂಬಂಧಿಸಿದಂತೆ ಇನ್ನೂ ಹೆಚ್ಚಿನ ರಿಸ್ಕ್ ತೆಗೆದುಕೊಳ್ಳುವ ಸಾಧ್ಯತೆ ಕಡಿಮೆ. ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ ಬ್ಯಾಂಕ್ ಹಂತಹಂತವಾಗಿ ನೀಡುವ ಸಾಲದ ಮೊದಲ ನಷ್ಟದ ಹೊಣೆಯನ್ನು ಒಂದು ಮಿತಿಯಲ್ಲಿ ಸರ್ಕಾರ ವಹಿಸಿಕೊಳ್ಳಬಹುದು. ಕಳೆದ ವರ್ಷ ಈ ಉದ್ದಿಮೆಗಳು ಪಾವತಿಸಿದ ಆದಾಯ ತೆರಿಗೆ ಪ್ರಮಾಣದವರೆಗೆ ಈ ಹೊರೆಯನ್ನು ಸರ್ಕಾರ ಹೊರಬಹುದು. ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಂದ ಸರ್ಕಾರದ ಭಂಡಾರಕ್ಕೆ ಮುಂದೆ ಹಣ ಬರುತ್ತದೆ. ಈಗ ಅವರಿಗೆ ಬಂಡವಾಳವನ್ನು ಸುಲಭವಾಗಿ ದೊರಕುವಂತೆ ಮಾಡಿದರೆ ಅಂತಹ ಉದ್ದಿಮೆಗಳ ಭವಿಷ್ಯದ ಕೊಡುಗೆಯನ್ನು ಗುರುತಿಸಿ ಇಂದು ಅವರಿಗೆ ನೆರವಾದಂತೆ ಆಗುತ್ತದೆ.

ಆದರೆ ಹೀಗೆ ಕೊಡುವ ಹಣದಿಂದ ತಮಗೆ ಈ ಹಿಂದೆ ಕೊಡಬೇಕಾದ ಸಾಲವನ್ನು ತೀರಿಸಿ ಎಂದು ಬ್ಯಾಂಕುಗಳು ಒತ್ತಾಯಿಸಿದರೆ ಆಗ ಅದರಿಂದ ಈ ಉದ್ದಿಮೆಗಳಿಗೆ ಯಾವು ಅನುಕೂಲವೂ ಆಗುವುದಿಲ್ಲ. ಹಾಗೆ ಮಾಡದಂತೆ ಬ್ಯಾಂಕುಗಳಿಗೆ ಸೂಚಿಸಬೇಕು. ಆಗಷ್ಟೆ ಅವರಿಗೆ ಅನುಕೂಲವಾಗುವುದು. ದೊಡ್ಡ ಉದ್ದಿಮೆಗಳ ಮೂಲಕವೂ ಸಣ್ಣ ಪೂರೈಕೆದಾರರಿಗೆ ಬಂಡವಾಳ ದೊರೆಯುವಂತೆ ಮಾಡಬಹುದು. ಅವರು ಬಾಂಡ್ ಮಾರುಕಟ್ಟೆಯಿಂದ ಬಂಡವಾಳ ಸಂಗ್ರಹಿಸಿ ಸಣ್ಣ ಉದ್ದಿಮೆದಾರರಿಗೆ ವರ್ಗಾಯಿಸಬಹುದು. ಆದರೆ ಇಂದು ಕಾರ್ಪೋರೇಟ್ ಬಾಂಡ್ ಮಾರುಕಟ್ಟೆ ಬಾಂಡುಗಳನ್ನು ಬಿಡುಗಡೆ ಮಾಡಲು ಅಷ್ಟೊಂದು ಉತ್ಸುಕರಾಗಿಲ್ಲ. ಬ್ಯಾಂಕುಗಳು, ವಿಮಾ ಕಂಪೆನಿಗಳು, ಹಾಗೂ ಬ್ಯಾಂಕ್ ಮ್ಯೂಚುಯಲ್ ಫಂಡ್‍ಗಳನ್ನು ಹೊಸ, ಒಳ್ಳೆಯ ಕ್ರೆಡಿಟ್ ರೇಟಿಂಗ್ ಹೊಂದಿರುವ ಕಂಪೆನಿಗಳು ಬಿಡುಗಡೆ ಮಾಡುವ ಹೊಸ ಬಾಂಡುಗಳನ್ನು ಕೊಳ್ಳಲು ಉತ್ತೇಜಿಸಬೇಕು. ಈ ಪ್ರಕ್ರಿಯೆ ಸುಗಮವಾಗಬೇಕಾದರೆ ಅವುಗಳ ಬಳಿ ಇರುವ ಉತ್ತಮ ಗುಣಮಟ್ಟದ ಬಾಂಡುಗಳನ್ನು ಆಧರಿಸಿ ರೆಪೊ ವ್ಯವಹಾರದ ಮೂಲಕ ಸಾಲಕೊಡುವುದಕ್ಕೆ ಆರ್‍ಬಿಐ ಮುಂದೆ ಬರಬೇಕು. ರಿಸರ್ವ್ ಬ್ಯಾಂಕ್ ಇಂತಹ ವ್ಯವಹಾರಗಳನ್ನು ನಡೆಸಲು ಸಾಧ್ಯವಾಗುವಂತೆ ಆರ್‍ಬಿಐ ಕಾಯ್ದೆಯಲ್ಲಿ ಬದಲಾವಣೆ ತರಬೇಕು. ಈ ಪೋರ್ಟ್‍ಫೋಲಿಯೋಗಳಲ್ಲಿ ಸಾಲದ ರಿಸ್ಕನ್ನು ಕಡಿಮೆ ಮಾಡಲು ಬೇಕಾದ ರಿಯಾಯಿತಿ ತೋರಬೇಕು. ಈ ರೀತಿಯ ಬೆಂಬಲ ಕಾರ್ಪೋರೇಟುಗಳು ಸಾಲಪಡೆಯುವುದಕ್ಕೆ ತುಂಬಾ ಅವಶ್ಯಕವಾಗಿ ಬೇಕು. ರಾಜ್ಯಸರ್ಕಾರವೂ ಸೇರಿದಂತೆ ಸರ್ಕಾರದ ಪ್ರತಿಯೊಂದು ಏಜೆನ್ಸಿಗಳು ಮತ್ತು ಸಾರ್ವಜನಿಕ ಕ್ಷೇತ್ರದ ಘಟಕಗಳು ತಾವು ಪಾವತಿಸಬೇಕಾದ ಬಿಲ್ಲುಗಳನ್ನು ತಕ್ಷಣ ಪಾವತಿಸಬೇಕು. ಆಗ ಖಾಸಗೀ ಉದ್ದಿಮೆಗಳಿಗೆ ಬೇಕಾದ ಅಮೂಲ್ಯವಾದ ದ್ರವ್ಯತೆ ಸಿಕ್ಕಂತಾಗುತ್ತದೆ. ಅಂತಿಮವಾಗಿ ಕೌಟಂಬಿಕ ಹಾಗೂ ಕಾರ್ಪೋರೇಟ್ ವಲಯದ ಸಮಸ್ಯೆಗಳು ಹಣಕಾಸು ಕ್ಷೇತ್ರದಲ್ಲೂ ಕಾಣಿಸಿಕೊಳ್ಳುತ್ತದೆ ಅನ್ನುವುದರಲ್ಲಿ ಅನುಮಾನವಿಲ್ಲ. ಬ್ಯಾಂಕಿಂಗ್ ವ್ಯವಸ್ಥೆಗೆ ಅಪಾರವಾದ ದ್ರವ್ಯತೆಯನ್ನು ರಿಸರ್ವ್ ಬ್ಯಾಂಕ್ ಹರಿಸಿದೆ. ಬಹುಶಃ ಅದು ಅದರ ಆಚೆಗೆ ಯೋಚಿಸಬೇಕು. ಉದಾಹರಣೆಗೆ ಚೆನ್ನಾಗಿ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ಒಳ್ಳೆಯ ಗುಣಮಟ್ಟದ ಜಾಮೀನಿಗೆ ಎದುರಾಗಿ ಸಾಲವನ್ನು ಕೊಡುವುದು. ಹೆಚ್ಚಿನ ದ್ರವ್ಯತೆಯಿಂದ ಸಾಲದಿಂದ ಆಗುವ ನಷ್ಟವನ್ನು ಭರಿಸಿಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ನಿರುದ್ಯೋಗ ಹೆಚ್ಚಾದಂತೆ ಚಿಲ್ಲರೆ ಸಾಲವೂ ಸೇರಿದಂತೆ ಹಿಂತಿರುಗಿಸಲಾಗದ ಸಾಲಗಳು (NPAs ) ಹೆಚ್ಚಾಗುತ್ತವೆ. ಹಣಕಾಸು ಸಂಸ್ಥೆಗಳ ಡಿವಿಡೆಂಡ್ ಪಾವತಿಗೆ ಸಂಬಂಧಿಸಿದಂತೆ ಸಾಲದ ಅವಧಿಯನ್ನು ವಿಸ್ತರಿಸುವುದಕ್ಕೆ ರಿಸರ್ವ ಬ್ಯಾಂಕ್ ಯೋಚಿಸಬೇಕು.

ಕೆಲವು ಸಂಸ್ಥೆಗಳಿಗೆ ಹೆಚ್ಚಿನ ಬಂಡವಾಳದ ಅವಶ್ಯಕತೆಯಿರುತ್ತದೆ. ನಿಯಂತ್ರಕರು ಅದಕ್ಕೆ ಯೋಚಿಸಬೇಕು. ಮಾಡುವುದಕ್ಕೆ ತುಂಬಾ ಇದೆ. ಪರಿಸ್ಥಿತಿಯನ್ನು ನಿಭಾಯಿಸುವುದಕ್ಕೆ ನಿಜವಾಗಿ ಪರಿಣತಿ ಹಾಗೂ ಸಾಮಥ್ರ್ಯ ಇರುವ ಜನರ ನೆರವನ್ನು ಪಡೆದುಕೊಳ್ಳಬೇಕು. ಅಂತಹವರು ಭಾರತದಲ್ಲಿ ಸಾಕಷ್ಟು ಇದ್ದಾರೆ. ಸರ್ಕಾರ ರಾಜಕೀಯ ಮೊಗಸಾಲೆಯ ಇನ್ನೊಂದು ಮಗ್ಗಲಿಗೂ ಹೋಗಿ ಜಾಗತಿಕ ಹಣಕಾಸು ಬಿಕ್ಕಟ್ಟಿನಂತಹ ತೀವ್ರ ಒತ್ತಡಗಳ ಅನುಭವ ಇರುವ ವಿರೋಧ ಪಕ್ಷದ ಸದಸ್ಯರ ಸಲಹೆಯನ್ನು ತೆಗೆದುಕೊಳ್ಳಬಹುದು.

ಆದರೆ ಸರ್ಕಾರ ಸಲಹೆಗಳಿಗಾಗಿ ಪ್ರಧಾನ ಮಂತ್ರಿಗಳ ಕಛೇರಿಯಲ್ಲಿರುವ ಜನರನ್ನೇ ಅವಲಂಬಿಸುವ ಹಟಕ್ಕೆ ಬಿದ್ದರೆ ಸರ್ಕಾರ ಏನುನ್ನೂ ಮಾಡುವುದಕ್ಕೆ ಸಾಧ್ಯವಿಲ್ಲ. ಸಮಯಕ್ಕೆ ಸರಿಯಾಗಿ ಮಾಡುವುದಕ್ಕೂ ಸಾಧ್ಯವಿಲ್ಲ. ಈಗಾಗಲೇ ಅವರ ಮೇಲೆ ತುಂಬಾ ಕೆಲಸದ ಒತ್ತಡ ಇದೆ. ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ಮೇಲೆ ಸರ್ಕಾರ ಮತ್ತೆ ಭರವಸೆಯನ್ನು ಮೂಡಿಸುವುದಕ್ಕೆ ಪ್ರಯತ್ನಿಸಬೇಕು. ಭಾರತದ ಬಿಸಿಲು ಮತ್ತು ತೇವಾಂಶದಿಂದ ವೈರಾಣು ದುರ್ಬಗೊಳ್ಳುತ್ತದೆ ಎಂದು ಆಶಿಸೋಣ. ಕೊರೋನಕ್ಕೆ ಮುಂಚೆಯೇ ಭಾರತದ ಆರ್ಥಿಕ ಸ್ಥಿತಿ ನಿರಂತರವಾಗಿ ಕುಸಿಯುತ್ತಿತ್ತು ಮತ್ತು ಸಾಮಾಜಿಕ-ರಾಜಕೀಯ ಪರಿಸರ ಹಾಳಾಗುತ್ತಿತ್ತು. ಮತ್ತೆ ಅದೇ ಹಿಂದಿನ ಸ್ಥಿತಿಗೆ ಹಿಂತಿರುಗಿದರೆ ಪ್ರಯೋಜನವಿಲ್ಲ. ಯಾರೂ ಅದನ್ನು ಬಯಸುತ್ತಿಲ್ಲ. ಬಿಕ್ಕಟ್ಟು ಬಂದಾಗ ಭಾರತ ಸುಧಾರಿಸುತ್ತದೆ ಎಂದು ಹೇಳಲಾಗುತ್ತದೆ. ಈ ದುರಂತದಿಂದ ನಾವು ಒಂದು ಸಮಾಜವಾಗಿ ಎಷ್ಟು ದುರ್ಬಲವಾಗಿದ್ದೇವೆ ಎಂಬುದು ನಮಗೆ ಅರ್ಥವಾಗಬಹುದು ಎಂದು ನಿರೀಕ್ಷಿಸೋಣ. ನಮಗೆ ಇಂದು ಮುಖ್ಯವಾಗಿ ಬೇಕಿರುವ ಆರ್ಥಿಕ ಮತ್ತು ಆರೋಗ್ಯದ ಸುಧಾರಣೆಯತ್ತ ನಮ್ಮ ರಾಜಕೀಯವನ್ನು ಕೇಂದ್ರಿಕರಿಸೋಣ.

ಅನುವಾದ: ಟಿ. ಎಸ್. ವೇಣುಗೋಪಾಲ್

ಪ್ರತಿಕ್ರಿಯಿಸಿ