ಪದ್ಯದ ಮಾತು ಬೇರೆ ~ ೩

‘ಶಬರಿ’ : ಸು.ರಂ.ಎಕ್ಕುಂಡಿ
ಚಿತ್ರ : ಸ್ನೇಹಜಯಾ ಕಾರಂತ


ಶಬರಿ
–ಸು. ರಂ. ಎಕ್ಕುಂಡಿ
ಚಿನ್ನದ ಬಿಂದಿಗೆ ಬೆಳಕನು ಸುರಿಯಿತು ಮೂಡಲ ದೆಸೆಯಿಂದ
ಮಂಜಿನ ಹನಿಗಳನೆಸೆಯುತ ಬಂದಿತು ಗಾಳಿ ಬೊಗಸೆಯಿಂದ
ಮೊಗ್ಗೆಯ ಬಾಯನು ಬಿಡಿಸುತ ಬಂದವು ದುಂಬಿಯ ಪರಿವಾರ
ಸೇರಲು ಮೋಡವು ತೊಡಿಸುತ ಇಳಿದವು ಕಣಿವೆಗೆ ಹೂಹಾರ
ಹೂಬಿಸಿಲಿನ ವನಕೋಡುತ ಬಂದವು ಚಿಗರೆಯ ಹಿಂಡುಗಳು
ಮಧುವಿನ ಕೊಡಗಳ ತುಂಬಿಕೊಂಡವು ದುಂಬಿಯ ದಂಡುಗಳು
ಹಕ್ಕಿಗಳೆದ್ದವು ಮುಗಿಲಿಗೆ ಹಾರುತ, ಚಿಲಿಪಿಲಿ ಹಾಡುಗಳು
ಮೆಲ್ಲಗೆ ಶಬರಿಯ ಕಾಡಿಗೆ ನಡೆದವು ಕುಂಕುಮ ಮೋಡಗಳು
ಗಿಳಿಗಳ ಬಳಗವು ರಾಮನ ಹುಡುಕುತ ಮುಗಿಲೊಳಗೋಡಿದವು
ಗಿಡಮರಗಳ ತಂಬೂರಿಯ ನುಡಿಸುತ ಬನಗಳು ಹಾಡಿದವು
ರಾಮನ ಹಂಬಲ ಹೃದಯವ ತುಂಬಲು ಬುಟ್ಟಿಯ ಹಿಡಕೊಂಡು
ಶಬರಿಯು ಬಂದಳು ಬುಗರಿಯ ಕಾಡಿಗೆ ಮೆಲ್ಲನೆ ನಡಕೊಂಡು
ರಾಮ ರಾಮ ಶ್ರೀರಾಮನ ಕರೆಯುತ ರಾಮನ ನೆನೆಸಿದಳು
ರಾಮ ರಾಮ ಶ್ರೀರಾಮನ ಧ್ಯಾನವ ಕಾಡಿಗೆ ಕಲಿಸಿದಳು
ರಾಮ ರಾಮ ಶ್ರೀರಾಮ ಸ್ಮರಣೆಯಲಿ ಕಾಡನೆ ನಿಲಿಸಿದಳು
ರಾಮ ರಾಮ ಶ್ರೀರಾಮಗೆ ಹಲುಬುತ ಗಿಡಗಿಡ ನಡೆದಿಹಳು
ರಾಮ ರಾಮ ಶ್ರೀರಾಮನ ನೆನೆಯುತ ಬುಟ್ಟಿಯ ಹಿಡಿದಿಹಳು
ಕಾಡಿನ ಗಿಡಗಳ ಎಲೆ ಕೊಂಬೆಗಳು ರಾಮನ ಸ್ಮರಿಸಿದವು
ರಾಮ ರಾಮ ಶ್ರೀರಾಮನ ನೆನೆಯುತ ಹೂವನುದುರಿಸಿದವು
ರಾಮ ರಾಮ ಶ್ರೀರಾಮನಿಗಾಗಿಯೆ ಹಣ್ಣನು ಸುರಿಸಿದವು
ಹಣ್ಣಿನ ರುಚಿಯನು ನೋಡುತ ನಡೆದಳು ‘ರಾಮ ರಾಮ’ ಎಂದು
ಹುಳಿಹುಣ್ಣುಗಳನು ಎಸೆಯುತ ನಡೆದಳು ‘ರಾಮ ರಾಮ’ ಎಂದು
ಸವಿ ಸವಿ ಹಣ್ಣನು ಬುಟ್ಟಿಗಿಳಿಸಿದಳು ‘ರಾಮ ರಾಮ’ ಎಂದು
ನೆಲಮುಗಿಲಿನ ತುಟಿ ಬಿಡಿಸುತ ನುಡಿದಳು ‘ರಾಮ ರಾಮ’ ಎಂದು
ಕಾಡಿಗೆ ಕಾಡೆ ಹರುಷದಿ ಹಾಡಿತು ‘ರಾಮ ರಾಮ’ ಎಂದು     ೧
ಕಾಡಿಗೆ ಕಾಡೆ ‘ರಾಮ’ ಎಂದಿರಲು ಲಕ್ಷ್ಮಣ ಬೆರಗಾದ
ಗಿಡ ಮರ ಎಲೆ ಹೂ ‘ರಾಮ’ ಎಂದಿರಲು ಲಕ್ಷಣ ಬೆರಗಾದ
ಗಿಳಿ ಕೋಗಿಲೆಗಳು ‘ರಾಮ’ ಎಂದಿರಲು ಲಕ್ಷಣ ಬೆರಗಾದ
ಬನದ ಹೃದಯವೆ ‘ರಾಮ’ ಎಂದಿರಲು ಲಕ್ಷಣ ಬೆರಗಾದ
ಕಾಡು ಕಣಿವೆಯ ಸೀಳು ದಾರಿಯಲಿ ಬಂದನು ಶ್ರೀರಾಮ
ಶಬರಿ ಮೊರೆಯನು ಆಲಿಸಿ ಬಂದನು ಕಾಡಿಗೆ ಶ್ರೀರಾಮ
ಕಾಡಿನ ಕರೆಯನು ಲಾಲಿಸಿ ಬಂದನು ಕಾಡಿಗೆ ಶ್ರೀರಾಮ
ನೋಡಿದ ಗಿಳಿಗಳು ಕೂಗಿ ಹೇಳಿದವು ‘ಬಂದನು ಶ್ರೀರಾಮ’
ಗೂಡಿನ ಜೇನುಗಳೆಲ್ಲ ಹಾಡಿದವು ‘ಬಂದನು ಶ್ರೀರಾಮ’
ಕಾಡಿನ ಗಿಡ ಮರ ಹೂವು ಹಾಡಿದವು ‘ಬಂದನು ಶ್ರೀರಾಮ’
ಬೀಸುವ ಗಾಳಿಗಳೆಲ್ಲ ಸಾರಿದವು ‘ಬಂದನು ಶ್ರೀರಾಮ’
ಕೂಡಿದ ಚಿಗರಿಯ ಹಿಂಡು ಕೂಗಿದವು  ‘ಬಂದನು ಶ್ರೀರಾಮ’
ಸೊಂಡಿಲನೆತ್ತಿದ ಆನೆ ಸಾರಿದವು ‘ಬಂದನು ಶ್ರೀರಾಮ’
ಸೀಳು ದಾರಿಯಲಿ ಮೆಲ್ಲನೆ ಬೀಸಿತು ಗಾಳಿಯೋಡಿ ಬಂದು
ದಾರಿಯುದ್ದಕೂ ಹೂವಿನ ಮಳೆಯನು ಸುರಿಸಿತು ಬನವಂದು
ಕಾಮನ ಬಿಲ್ಲು ಕಮಾನು ಕಟ್ಟಿದವು ರಾಮ ಬಂದನೆಂದು
ಮೇಘ ಮಾಲೆ ತೂಗಾಡಿ ಬೆಳಗಿದವು ರಾಮ ಬಂದನೆಂದು
ಬನದ ಹಕ್ಕಿಗಳು ಹಾಡತೊಡಗಿದವು ರಾಮ ಬಂದನೆಂದು
ಬಣ್ಣದ ನವಿಲುಗಳಾಡತೊಡಗಿದವು ರಾಮ ಬಂದನೆಂದು
ಚಿತ್ರವಿಚಿತ್ರ ಪತಂಗ ಹಾರಿದವು ರಾಮ ಬಂದನೆಂದು
ಅಳಿಲು ಟೊಂಗೆಯಲಿ ಕುಳಿತು ಕೈಯ ಜೋಡಿಸಿತು ಸ್ವಾಮಿಗೆಂದು
ಕಾಡಿನೊಲವ ಕೈಕೊಳ್ಳುತ ಬಂದನು ಕಾಡಿಗೆ ಶ್ರೀರಾಮ
ಶಬರಿ ಬಳಗದ ಕರೆಯನು ಲಾಲಿಸಿ ಬಂದನು ಶ್ರೀರಾಮ
ವಿಸ್ಮಿತಗತಿಯಲಿ ಲಕ್ಷ್ಮಣ ನುಡಿದನು, ‘ಅದ್ಭುತವೀ ಪ್ರೇಮ’      ೨
ಶಬರಿಯ ಗುಡಿಸಲಿನಂಗಳದಲಿ ಶ್ರೀರಾಮಚಂದ್ರ ಬಂದ
ಚಂದ್ರಬಿಂಬ ಮುಖ ತುಂಬಿ ಮುಗುಳು ನಗೆ ನೀಲವರ್ಣದಿಂದ
ಕಟ್ಟಿಕೊಂಡ ಜಡೆಯಲ್ಲಿ ಇಟ್ಟ ಮುಡಿಯಲ್ಲಿ ಹೂವನೊಂದ
ತೂಗುತ್ತಿತ್ತು ಬತ್ತಳಿಕೆ ಬಿಲ್ಲು ಹೆಗಲಲ್ಲಿ ಠೀವಿಯಿಂದ.
ಉಟ್ಟ ವಲ್ಕಲದ ಬಟ್ಟೆ ಮಿಂಚಿದವು ಚಂದಚಂದದಿಂದ,
ನೀಲವಜ್ರವಿಸ್ತಾರವಕ್ಷದಲಿ ಹಾರವಿಳಿಯುತಿತ್ತು
ಚಾಚಿದಂಥ ನಿಡಿದೋಳು ತಳಿರು ಕೈಕಮಲ ಹೊಳೆಯುತಿತ್ತು.
ಶಬರಿ ನೋಡಿದಳು ರಾಮರೂಪ ಶ್ರೀರಾಮ ರಾಮ ಎಂದು
ಅರ್ಘ್ಯಪಾದ್ಯ ಸತ್ಕಾರ ನೀಡಿದಳು ರಾಮ ರಾಮ ಎಂದು
ಕುಳ್ಳಿರೆಂದು ಜಗಲಿಯಲಿ ಹಾಸಿದಳು ಹರಕು ಚಾಪೆ ತಂದು
ಕುಳಿತು ರಾಮ ಲಕ್ಷ್ಮಣರ ನೋಡಿ ಕಣ್ತುಂಬ ನೀರ ತಂದು
ಹಣ್ಣು ಕೂದಲಿನ ಹಣ್ಣು ಜೀವ ಕೈ ಮುಗಿದು ನುಡಿದಳಂದು
‘ಇಷ್ಟು ದಿವಸವೂ ಕಾದುಕುಳಿತೆವು ನೀವು ಬರುವಿರೆಂದು’
‘ಇಷ್ಟು ದಿವಸ ಹಾರೈಸುತ್ತಿದ್ದೆವು ನೀವು ಬರುವಿರೆಂದು’
‘ಕಿವಿಯ ತುಂಬಿ ಬಂದವರು ಬಂದಿರೊ ಕಣ್ಣ ತುಂಬಿ ಇಂದು’
‘ಮನವ ತುಂಬಿ ಬಂದವರು ಬಂದಿರೊ ವನವ ತುಂಬಿ ಇಂದು’
‘ಹೃದಯತುಂಬಿ ಬಂದವರು ಬಂದಿರೋ ಎದುರಿನಲ್ಲಿ ಇಂದು’
‘ತಿಳಿದ ಕಣ್ಣಿನಲಿ ಹೊಳೆದ ಬೆಳಕು ಮೈತಳೆದು ಬಂದಿರಿಂದು’
‘ಋಷಿಯ ಹರುಷರಸ ಮಂತ್ರರೂಪ ಮೈತಳೆದು ಬಂದಿರಿಂದು’
‘ನಿಮ್ಮ ಕರುಣೆಗಿಲ್ಲಂತಪಾರಗಳು ಸ್ವಾಮಿ ದೀನಬಂಧು’
‘ರಾಮ ರಾಮ ರಘುರಾಮ ರಾಮ ಶ್ರೀರಾಮ ರಾಮ’ ಎಂದು
ಹಾಡಿ ಹೂಗಳ ನೀಡಿದಳು ಹಣ್ಣುಗಳ ತಂದು ತಿನ್ನಿರೆಂದು.
ಹಣ್ಣು ಕೂದಲಿನ ಹಣ್ಣು ಜೀವ ಕೈ ಮುಗಿದು ಹೇಳಿದಂದು
ಭಕ್ತವತ್ಸಲನು ತಿಂದನೆಂಜಲನು ಬುಟ್ಟಿತುಂಬ ಹಣ್ಣು
ನೋಡುತಿತ್ತು ಹನಿಗೂಡುತಿತ್ತು ಲಕ್ಷ್ಮಣನ ಬೆರಗುಗಣ್ಣು
ಉಗಿದ ಬೀಜಗಳನ್ನೆತ್ತಿಕೊಂಡವು ಹಕ್ಕಿಹಾರಿ ಬಂದು
‘ಧನ್ಯ ಧನ್ಯ ಶ್ರೀರಾಮಪ್ರಸಾದವು ನಮಗೆ ದೊರಕಿತೆಂದು’
ಶ್ರೀರಾಮಚಂದ್ರ ಕೈತೊಳೆದು ಹೇಳಿದನು ‘ಹೋಗಿಬರುವನೆಂದು’
‘ನೀಡಿದಂಥ ಸವಿಹಣ್ಣು ತಿಂದು ಸಂತೋಷವಾಯಿತೆಂದು’
ವರದ ಹಸ್ತವನು ಚಾಚಿ ಹೇಳಿದನು ಸ್ವಾಮಿ ‘ಸ್ವಸ್ತಿ’ ಎಂದು
ಮರಳಿ ನಡೆದ ಲಕ್ಷ್ಮಣನ ಕೂಡ ಶ್ರೀರಾಮ ದೀನಬಂಧು
ಹಣ್ಣು ಕೂದಲಿನ ಹಣ್ಣು ಜೀವ ನೀಡಿರುವ ಹಣ್ಣು ತಿಂದು
ಕಾಡು ಕಣಿವೆಯಲಿ ಸೀಳು ದಾರಿಯಲಿ ಹೋದ ದೂರದೂರ
ಭಕ್ತವತ್ಸಲನ ಕರುಣೆ ಪ್ರೀತಿಗಳಿಗಿಲ್ಲವಂತಪಾರ.
ಒಲಿದು ಬಂದನಿವ ತಿಂದನೆಂಜಲವ ಒಲುಮೆಗಂಜಲಿಲ್ಲ
ಕರುಣೆದೋರಿ ಕಾಡಿಗೂ ಬಂದನಿವ ಕರುಣೆಗಂಜಲಿಲ್ಲ.
ಕಾಡು ಕಣಿವೆಯಲಿ ಸೀಳು ದಾರಿಯಲಿ ಸ್ವಾಮಿ ಮುಂದೆ ಮುಂದೆ
ಬೆರಗುಗೊಂಡು ಬಂದಿದ್ದ ಲಕ್ಷ್ಮಣನು ನೆರಳಿನಂತೆ ಹಿಂದೆ
ಕಾಡು ದೂರದಲಿ ಹಾಡುತಿತ್ತು ಶ್ರೀರಾಮ ರಾಮ ಎಂದು
ಎಲ್ಲ ಜೀವಗಳ ಕಾಯಬಲ್ಲುದೊ ರಾಮನಾಮವೊಂದು

ಪ್ರತಿಕ್ರಿಯಿಸಿ