ಕೂತಲ್ಲೇ ನಿಮ್ಮನ್ನು ನಿಯಂತ್ರಿಸಲಾಗುತ್ತಿದೆ – ಭಾಗ ೧

ಬೇಹುಗಾರಿಕಾ ಬಂಡವಾಳಶಾಹಿಗಳು (Surveillance capitalists)  ಹೇಗೆ ವಿಜ್ಞಾನ , ವಿಜ್ಞಾನಿಗಳು, ರಹಸ್ಯಗಳು ಮತ್ತು ನಿಜವನ್ನು ನಿಯಂತ್ರಿಸುತ್ತಾರೆ ಎಂಬುದರ ಕುರಿತು ಈ ಲೇಖನ ಬೆಳಕು ಚೆಲ್ಲುತ್ತದೆ.


ಆದಿನ ಫೆಡರಲ್ ವಾಣಿಜ್ಯ ಆಯೋಗದ ಸಭೆಯಲ್ಲಿ, ಗೌಪ್ಯತೆ ಮತ್ತು ಕಾನೂನಿನ ಮೇಲಿನ ಚರ್ಚೆ ಬಹಳ ಬಿಸಿಯೇರಿತ್ತು. ತಂತ್ರಜ್ಞಾನ ಆಧಾರಿತ ಉದ್ಯಮಗಳ ಮುಖ್ಯಸ್ಥರು “ತಮ್ಮನ್ನು ತಾವೇ ಸ್ವ ನಿಯಂತ್ರಣಕ್ಕೆ ಒಳಪಡಿಸಿಕೊಳ್ಳಲು ನಮಗೆ ತಿಳಿದಿದೆ, ಹಾಗೂ ಸರಕಾರಗಳ ಹಸ್ತಕ್ಷೇಪವಾದರೆ ಬಹಳ ದುಬಾರಿಯೂ ಹಾಗೂ ಉತ್ಪಾದನೆಯ ಮೇಲೆ ಋಣಾತ್ಮಕ ಪರಿಣಾಮಗಳು ಬೀರುತ್ತದೆ ” ಎಂದು ವಾದಿಸುತ್ತಿದ್ದರು. ಅದೇ ಸಭೆಯಲ್ಲಿದ್ದ ವ್ಯಕ್ತಿ ಸ್ವಾತಂತ್ರ್ಯದ ಹೋರಾಟಗಾರರು ಈ ಸಂಸ್ಥೆಗಳ ಸೇರಲಿರುವ ಅಂಕಿ ಅಂಶಗಳು “ವ್ಯಕ್ತಿ ಸ್ವಾತಂತ್ರ್ಯದ ಮೇಲೆ ಹಿಂದೆಂದೂ ಕಂಡರಿಯದಷ್ಟು ಪರಿಣಾಮ ಬೀರಲಿದೆ ” ಎಂದು ಎಚ್ಚರಿಸಿದ್ದರು . ಒಬ್ಬರ ಅಭಿಪ್ರಾಯದ ಪ್ರಕಾರ “ನಾವೆಲ್ಲರೂ ಈಗ ವಿದ್ಯುನ್ಮಾನ ಯುಗದಲ್ಲಿ ಮನುಷ್ಯರನ್ನು ಹೇಗೆ ಕಾಣಲಿದ್ದೇವೆ ಎಂದು ತೀರ್ಮಾನಿಸ ಬೇಕಾಗಿದೆ . ನಮ್ಮನ್ನು ನಾವೇ ವ್ಯವಾಹರಿಕಾ ಚರಾಸ್ತಿಗಳಾಗಿ ಪರಿಗಣಿಸಲಿದ್ದೇವೆಯೇ ?” . “ನಾವು ಎಲ್ಲಿ ಈ ಎರಡರ ನಡುವಿನ ಗೆರೆ ಎಳೆಯಬೇಕು ?” ಎಂದು ಒಬ್ಬ ಆಯುಕ್ತರು ಪ್ರಶ್ನಿಸಿದ್ದರು . ಇದಾಗಿದ್ದು ೧೯೯೭ ನೇ ಇಸವಿಯಲ್ಲಿ.

ಆ ಗೆರೆಯನ್ನು ಇಂದಿಗೂ ನಾವು ಎಳೆದೆ ಇಲ್ಲ ಹಾಗೂ ಆ ಸಂಸ್ಥೆಗಳ ಅಧಿಕಾರಿಗಳು ತಮ್ಮಿಷ್ಟದ ಹಾಗೆ ಕಾನೂನು ರಚನೆ ಯಾಗುವ ಹಾಗೆ ನೋಡಿಕೊಂಡರು . ೨೩ ವರ್ಷಗಳ ನಂತರ ಅದರ ಪರಿಣಾಮ ನಮ್ಮ ಕಣ್ಣ ಮುಂದಿದೆ. ಆ ವಿಜಯದ ಫಲವೇ ಇಂದು ನಮ್ಮೆದುರಿಗಿರುವ ಹೊಸ ವ್ಯವಸ್ಥೆ – “ಬೇಹುಗಾರಿಕಾ ಬಂಡವಾಳ ಶಾಹಿ ಅರ್ಥ ವ್ಯವಸ್ಥೆ”. ಈ ವ್ಯವಸ್ಥೆಯ ಯಶಸ್ಸು ಅವಲಂಬಿತವಾಗಿರುವುದು , ನಮ್ಮ ಅಜ್ಞಾನ ಮತ್ತು ದಾರಿತಪ್ಪಿಸುವ ಹಾಗೆ ಕವಿದಿರುವ , ಸುತ್ತು ಬಳಸಿನ ಕಾನೂನು ಮತ್ತು ಅಸತ್ಯಗಳಿಂದಲೇ ನಿರ್ಮಿತವಾಗಿರುವ ಒಂದು ಬದಿಯಲ್ಲಿ ಪಾರದರ್ಶಕವಾಗಿರುವ ಕನ್ನಡಿಯಂತಹ ವ್ಯವಸ್ಥೆಯ ಮೇಲೆ . ಅದರ ಬೇರುಗಳು ನೆಲೆಯೂರಿರುವುದು ಒಂದು ಕಾಲದಲ್ಲಿ ಬೇಹುಗಾರಿಕಾ ಬಂಡವಾಳಶಾಹಿಗಳಿಂದ “ಪ್ರಪಂಚದ ಅತಿ ದೊಡ್ಡ ಸರಕಾರೀ ನಿಯಂತ್ರಣವಿಲ್ಲದ ಜಾಗ ” ಎಂದು ಕರೆಸಿಕೊಳ್ಳುತ್ತಿದ್ದ ಹೊಸ ಅಂತರ್ಜಾಲ ತಾಣಗಳಲ್ಲಿ. ಆದರೆ ಅಧಿಕಾರ ಎಲ್ಲ ಖಾಲಿ ಜಾಗಗಳನ್ನು ಒಂದಲ್ಲ ಒಂದು ದಿನ ಆಕ್ರಮಿಸಿಕೊಳ್ಳುತ್ತದೆ , ಹಾಗು ಈ ಅನಿಯಂತ್ರಿತ ಜಾಲತಾಣಗಳು ಈಗ ಸರ್ಕಾರದ ಕಣ್ಣಿಗೆ ಬಿದ್ದಿವೆ . ಹಾಗೂ ಅವುಗಳು ಖಾಸಗೀ ಬೇಹುಗಾರಿಕಾ ಬಂಡವಾಳ ಶಾಹಿಗಳ ಮಾಲೀಕತ್ವದಲ್ಲಿ ಕಬ್ಬಿಣದ ಸರಪಣಿಯಲ್ಲಿ ಸಿಕ್ಕಿಹಾಕಿಕೊಂಡಿವೆ.

ಈ ಹೊಸ ಬೇಹುಗಾರಿಕಾ ಬಂಡವಾಳಶಾಹಿ ವ್ಯವಸ್ಥೆ ಕಳೆದೆರಡು ದಶಕಗಳಲ್ಲಿ ಯಾವುದೇ ಅಡೆತಡೆಗಳಿಲ್ಲದೆ ಸಾಗಿದೆ . “ಡಿಜಿಟಲ್ ” ಯುಗ ಬಹಳ ವೇಗದ ಯುಗ , ಮತ್ತು ಇದರಿಂದ ಹೊರಗುಳಿದವರು ಬಹಳ ಬೇಗ ಹಿಂದೆ ಸರಿಯುತ್ತಾರೆ ಎಂದು ನಮಗೆ ಹೇಳಲಾಗಿತ್ತು . ನಾವೆಲ್ಲರೂ ಈ ಬಿಳಿ ಮೊಲದ ಹಿಂದೆ ಓಡುತ್ತಾ ಅದರ ಬಿಲಗಳಿಗೆ , ಒಂದು ಮಾಯಾ ಲೋಕದ ನಿರೀಕ್ಷೆಯಲ್ಲಿ ಹಿಂಬಾಲಕರಾಗಿ ಸೇರಿಕೊಂಡು , ಬಹಳ ಬೇಗನೆ ಭ್ರಮನಿರಸನರಾದೆವು . ಈ ಮಾಯಾಲೋಕದಲ್ಲಿ , ಮೊದ ಮೊದಲು ಎಲ್ಲ ಸೇವೆಗಳು ಉಚಿತ ಎಂದು ಸಂಭ್ರಮಿಸದೆವು , ಆದರೆ ಬಹುಬೇಗ ಈ ಎಲ್ಲದರ ಹಿಂದೆ ಇರುವ ಬೇಹುಗಾರಿಕಾ ಬಂಡವಾಳಶಾಹಿಗಳು ನಮ್ಮನ್ನು ಉಚಿತವಾದ ಸರಕಾಗಿ ನೋಡುತ್ತಿವೆ ಎಂದು ಅರಿತುಕೊಂಡೆವು . ಗೂಗಲ್ ನಲ್ಲಿ ‘ಸರ್ಚ್’ ಮಾಡುವುದು ‘ನಾವು’ ಅಂದುಕೊಂಡಿದ್ದೆವು , ಆದರೆ ಈಗ ನಮಗೆ ಅರಿವಾಗಿದೆ ‘ಗೂಗಲ್’ ನಮ್ಮನ್ನು ‘ಸರ್ಚ್ ‘ ಮಾಡುತ್ತಿದೆ ಎಂದು. ನಾವಂದುಕೊಂಡೆವು “ಸಾಮಾಜಿಕ ಮಾಧ್ಯಮ’ಗಳನ್ನು ನಾವು ಸಂಪರ್ಕಕ್ಕೆ ಬಳಸುತ್ತಿದ್ದೇವೆ ಎಂದು , ಆದರೆ ಈ ಸಂಪರ್ಕಗಳೆಯಿಂದಲೇ ಸಾಮಾಜಿಕ ಮಾಧ್ಯಮಗಳು ನಮ್ಮನ್ನು ಬಳಸಿಕೊಳ್ಳುತ್ತವೆ ಎಂದು , ನಾವುಗಳು ನಮ ಟಿವಿಗಾಗಲಿ ಮತ್ತೊಂದಕ್ಕಾಗಲಿ ಖಾಸಗೀ ನಿಯಮಾವಳಿಗಳು ಯಾಕಿವೆ ಎಂದು ಪ್ರಶ್ನಿಸಿಕೊಂಡಿರಲಿಲ್ಲ , ಆದರೆ ನಿಧಾನವಾಗಿ ನಮಗೆ ಅರಿವಾಗುತ್ತಿದೆ ಈ ಖಾಸಗಿ “ನಿಯಮಾವಳಿಗಳು ” ವಾಸ್ತವದಲ್ಲಿ ಬೇಹುಗಾರಿಕಾ ನಿಯಮಾವಳಿಗಳು ಎಂದು

ಮತ್ತು ನಮ್ಮ ಪೂರ್ವಿಕರು ಮೋಟಾರು ವಾಹನಗಳನ್ನು “ಕುದುರೆಯಿಲ್ಲದ ಸವಾರಿ” ಎಂದುಕೊಂಡ ಹಾಗೆ , ನಾವು ಅಂತರ್ಜಾಲ ತಾಣಗಳನ್ನು ಯಾರು ಬೇಕಾದರೂ ತಮ್ಮ ಇಷ್ಟದ ಹಾಗೆ ಲಗತ್ತಿಸಬಹುದಾದ ” ನೋಟೀಸ್ ಬೋರ್ಡ್ ” ಎಂದು ಪರಿಗಣಿಸಿದೆವು . ಹಾಗೂ ನಮ್ಮ ಕಾನೂನು ನಿರ್ಮಾಣ ಮಾಡುವವರು , ೧೯೯೬ರ ಸಮಾಜಾಕಾ ನಡಾವಳಿ ಕಾಯ್ದೆ ಮ್ ಸೆಕ್ಷನ್ ೨೩೦ ರ ಪ್ರಕಾರ , ಈ ಸಂಸ್ಥೆಗಳನ್ನು “ಪ್ರಕಾಶಕರು ” ಮತ್ತು ” ಭಾಷಣಕಾರ”ರ ಹಾಗೆ ಪರಿಗಣಿಸಿದರು.

ಆದರೆ ಪದೇ ಪದೇ ಎದುರಾದ ಬಿಕ್ಕಟ್ಟುಗಳ ಮೂಲಕ ನಾವರಿತು ಕೊಂಡಿದ್ದೇನೆಂದರೆ , ಈ ಜಾಲತಾಣಗಳು “ನೋಟೀಸ್ ಬೋರ್ಡ್ “ಗಳಲ್ಲದೆ , ಹೊಸ ಅಪಾಯಕಾರಿ ವೈರಸ್ ಗಳನ್ನೂ ಯಾರುಬೇಕಾದರು ತಂದು ಬಿಟ್ಟು ಎಲ್ಲೆಡೆ ತಲುಪಬಹುದಾದ ರಕ್ತನಾಳಗಳು ಎಂದು . ಮಾರ್ಕ್ ಝುಕೆರ್ಬೆರ್ಗ್ , ಕಾನೂನಿನ ಪ್ರಕಾರವೇ , ಒಂದು “ಸುಳ್ಳು ” ವಿಡಿಯೋ ವನ್ನು ತೆಗೆದು ಹಾಕದೆ ಫೇಸ್ಬುಕ್ ನಲ್ಲಿ ಉಳಿಸಿಕೊಂಡ , ಮತ್ತು , ರಾಜಕೀಯ ಜಾಹಿರಾತುಗಳನ್ನು ಯಾವುದೇ ಸತ್ಯಾಂಶ ಪರಿಶೀಲಿಸದೆ ಫೇಸ್ಬುಕ್ ನಲ್ಲಿ ಪ್ರಕಟಿಸಬಹುದು ಎಂದು ಘೋಷಿಸಿದ.

ಈ ಎಲ್ಲ ಭ್ರಮೆಗಳೂ ನಿಂತಿರುವುದು , ಇವೆಲ್ಲಕ್ಕಿಂತ ಪ್ರಚಂಡ ಭ್ರಮೆಯಾದ , “ಗೌಪ್ಯತೆ ಎನ್ನುವುದು ಖಾಸಗಿ” ಎನ್ನುವ ನಂಬಿಕೆಯ ಮೇಲೆ . ನಾವೆಲ್ಲರೂ ನಮ್ಮಖಾಸಗೀತನವನ್ನು , ಕೆಲವೊಂದು ಅನುಕೂಲಕ್ಕಾಗಿ , ಎಷ್ಟರ ಮಟ್ಟಿಗೆ ಬಿಟ್ಟುಕೊಡಬಹುದು ಎಂದು ಲೆಕ್ಕ ಹಾಕಬಹುದು ಎಂದು ನಂಬಿಕೊಂಡಿದ್ದೆವು . “ಒಂದಷ್ಟು ಬಿಟ್ಟು ಕೊಟ್ಟು, ಒಂದಷ್ಟು ಪಡೆ” ಎನ್ನುವ ಹಾಗೆ . ಉದಾಹರಣೆಗೆ ಡೆಲ್ಟಾ ಏರ್ ಲೈನ್ಸ್ ನವರು ಅಟ್ಲಾಂಟ ಏರ್ಪೋರ್ಟ್ ನಲ್ಲಿ “ಬಯೋ ಮೆಟ್ರಿಕ್ ” ಅಂಕಿ ಅಂಶ ಸಂಗ್ರಹ ಮಾಡುವ ವ್ಯವಸ್ಥೆ ಜಾರಿಗೆ ತಂದಾಗ , ಆ ಏರ್ಪೋರ್ಟ್ ಮೂಲಕ ಪ್ರತೀ ವಾರ ಪ್ರಯಾಣ ಮಾಡುವ ೨೫೦೦೦ ಪ್ರಯಾಣಿಕರು , ೯೮% , ಈ ವ್ಯವಸ್ಥೆಗೆ ಯಾವುದೇ ಅಡೆ ತಡೆ ಇಲ್ಲದೆ ಒಪ್ಪಿಗೆ ನೀಡಿದ್ದರು , ಅವರ ಪ್ರಕಾರ ಈ ವ್ಯವಸ್ಥೆಯಿಂದ ಪ್ರತೀ ಪ್ರಯಾಣಿಕರಿಗೂ ೨ ಸೆಕೆಂಡ್ ಸಮಯ ಉಳಿತಾಯವಾಗುತ್ತದೆ , ಹಾಗು ಪ್ರಯಾಣವೊಂದಕ್ಕೆ ಒಟ್ಟು ೯ ನಿಮಿಷಗಳ ಉಳಿತಾಯವಾಗುತ್ತದೆ ಎನ್ನುವುದು ಅವರ ವಾದ

ಈ ಬಗೆಯ ಜೈವಿಕ ದತ್ತಾಂಶಗಳನ್ನು ಅವಲಂಬಿಸಿ ಅಭಿವೃದ್ಧಿಯಾಗುವ ವ್ಯವಸ್ಥೆಗಳು , ‘ಖಾಸಗಿ ವ್ಯಕ್ತಿ’ಗಳ ಒಪ್ಪಿಗೆಯಿಂದಾಗುವ ಸಾಮಾಜಿಕ ಪರಿಣಾಮಗಳ ಬಗ್ಗೆ ಒಳ ನೋಟ ನೀಡುತ್ತವೆ, ಈ ಬೇಹುಗಾರಿಕಾ ಬಂಡವಾಳಶಾಹಿಗಳು , ನಾವು ರಸ್ತೆಯಲ್ಲಿದ್ದಾಗಾಗಲಿ, ಫೇಸ್ಬುಕ್ ನಲ್ಲಾಗಲಿ , ನಮ್ಮ ಮುಖದ ಚಹರೆಗಳನ್ನು ಸಂಗ್ರಹಿಸುವ ಹಕ್ಕನ್ನು ಕೇಳುತ್ತಿದ್ದಾರೆ . “the financial times ” ವರದಿಯ ಪ್ರಕಾರ ಮೈಕ್ರೋಸಾಫ್ಟ್ ನವರ ಮುಖದ ಚಹರೆ ಗುರುತಿಸುವ ವ್ಯವಸ್ಥೆಯ , ಅಂತರ್ಜಾಲ ತಾಣಗಳಿಂದ ೧ ಕೋಟಿ ಜನರ ಭಾವಚಿತ್ರಗಳನ್ನು ಯಾರ ಅರಿವಿಗೂ ಬಾರದ ಹಾಗೆ ಸಂಗ್ರಹಿಸಿದೆ ಮತ್ತು ಈ ಭಾವಚಿತ್ರಗಳನ್ನು ಐಬಿಎಂ ಮತ್ತು ಸರಕಾರೀ ಸಂಸ್ಥೆಗಳಾದ ಅಮೇರಿಕಾ ಮತ್ತು ಚೈನೀಸ್ ಮಿಲಿಟರಿ ಸಂಶೋಧನಾಲಯಗಳಿಗೆ ಒದಗಿಸಿದೆ . ಇವುಗಳಲ್ಲಿ ಎರಡು ಸಂಸ್ಥೆಗಳು ಚೀನಾದ xinjiang ನಲ್ಲಿ Uighur community ಯವರು ಇರುವ ತೆರೆದ ಜೈಲುಗಳಿಗೆ ಉಪಕರಣಗಳನ್ನು ಒದಗಿಸುವವರು, ಹಾಗೂ ಈ ಜೈಲುಗಳು ಮುಖ ಚಹರೆ ಆದರಿಸಿದ ಬೇಹುಗಾರಿಕಾ ವ್ಯವಸ್ಥೆ ಹೊಂದಿವೆ.

ಗೌಪ್ಯತೆ ಖಾಸಗಿಯಲ್ಲ , ಯಾಕೆಂದರೆ ಹೀಗೆ ಖಾಸಗಿ ಹಾಗೂ ಸಾರ್ವಜನಿಕ ಬೇಹುಗಾರಿಕಾ ವ್ಯವಸ್ಥೆಗಳ ಪರಿಣಾಮ ನಿರ್ಧರಿತವಾಗುವುದು , ನಾವು ಹೀಗೆ ಒಬ್ಬೊಬ್ಬರಾಗಿ ಬಿಟ್ಟುಕೊಟ್ಟ , ಅಥವಾ ನಮ್ಮರಿವಿಗೆ ಬಾರದ ಹಾಗೆ ನಮ್ಮಿಂದ ಕದ್ದುಕೊಂಡ , ನಮ್ಮ ಸಣ್ಣ ಸಣ್ಣ ಖಾಸಗಿ ವಿಷಯಗಳ ಮೇಲೆ.

ನಮ್ಮ ಈ ಡಿಜಿಟಲ್ ಶತಮಾನ ಪ್ರಜಾಪ್ರಭುತ್ವದ ಸುವರ್ಣ ಯುಗವಾಗಬೇಕಿತ್ತು , ಆದರೆ ಅದರ ಬದಲಾಗಿ ಈ ಮೂರನೇ ದಶಕಕ್ಕೆ ನಾವು ಪ್ರವೇಶಿಯುವಾಗ ನಮ್ಮ ಮುಂದಿರುವ ನಿಜವಾದ ಸವಾಲೆಂದರೆ “ಜ್ಞಾನದ ಅಸಮಾನತೆಯಿಂದ ” ಸೃಷ್ಟಿಯಾದ ಸಾಮಾಜಿಕ ಅಸಮಾನತೆ . ಈ ಜ್ಞಾನದ ಬೃಹತ್ ಅಸಮಾನತೆ pre-Gutenberg ಕಾಲವನ್ನು ನೆನಪಿಗೆ ತರುತ್ತಿದೆ ಮತ್ತು ಈ ಅಸಮಾನತೆಗೆ ಮೂಲ ಕಾರಣವಾಗಿ , ಎಲ್ಲ ಮಾಹಿತಿಗಳನ್ನು ತಮ್ಮ ಬಳಿ ಕ್ರೋಢೀಕರಿಸಿಕೊಂಡಿರುವ ತಂತ್ರಜ್ಞಾನ ದೈತ್ಯ ಸಂಸ್ಥೆಗಳಿವೆ . “ಗೌಪ್ಯತೆ ಎನ್ನುವುದು ಖಾಸಗಿ ” ಎನ್ನುವ ಭ್ರಮೆಯ ಯನ್ನು ಬಳಸಿ ಯಾರೂ ಎದುರು ನೋಡದ ಹೊಸ ಸಾಮಾಜಿಕ ಧ್ರುವೀಕರಣವನ್ನು ಸೃಷ್ಟಿಸಲಾಗಿದೆ . ಈ ಬೇಹುಗಾರಿಕಾ ಬಂಡವಾಳಶಾಹಿಗಳು ಈ ಜ್ಞಾನದ ಅಸಮಾನತೆಯನ್ನು ಬಳಸಿಕೊಂಡು ಲಾಭಗಳಿಸುವ ಹುನ್ನಾರದಲ್ಲಿ ತೊಡಗಿವೆ . ಇವರು ನಮ್ಮ ಅರ್ಥವ್ಯವಸ್ಥೆಯನ್ನು , ಸಮಾಜವನ್ನು ಹಾಗೆಯೇ ನಮ್ಮ ಬದುಕನ್ನೂ ಸಹ ಚಾಣಕ್ಯತನದಿಂದ ತಮ್ಮ ಅಧೀನಕ್ಕೆ ತೆಗೆದುಕೊಂಡು ಕೇವಲ ನಮ್ಮ ಖಾಸಗೀ ಬದುಕನ್ನಷ್ಟೇ ಅಲ್ಲದೆ ಪ್ರಜಾಪ್ರಭುತ್ವವನ್ನೇ ಅಪಾಯಕ್ಕೀಡುಮಾಡುತ್ತಿದ್ದಾರೆ . ನಮ್ಮ ಭ್ರಮೆಗಳಲ್ಲಿ ಮುಳುಗಿಹೋಗಿ , ಈ ರಕ್ತ ರಾಹಿತ್ಯವಾದ ಕ್ರಾಂತಿ ಸದ್ದಿಲದೆ ನಮ್ಮ ಮೇಲೆರಗಿದ್ದನ್ನು ನಾವು ಗಮನಿಸುವಲ್ಲಿ ಸೋತಿದ್ದೇವೆ .

“ಗೌಪ್ಯತೆ ಅನ್ನುವುದು ಖಾಸಗಿ ” ಅನ್ನುವ ನಮ್ಮ ನಂಬಿಕೆ. ನಮ್ಮನ್ನು ನಾವು ಬಯಸದ ಭವಿಷ್ಯಕ್ಕೆ ತಳ್ಳುತ್ತಿದೆ , ಯಾಕೆಂದರೆ , ವ್ಯಕ್ತಿ ಸ್ವಾತಂತ್ರ್ಯವೇ ಸರ್ವೋತ್ತಮ ಎಂದು ನಂಬುವ ಸಮಾಜಕ್ಕೂ , ಒಂದು ಬದಿ ಪಾರದರ್ಶಕವಾಗಿರುವ ಕನ್ನಡಿಯ ಹಾಗೆ ಕಾರ್ಯ ನಿರ್ವಹಿಸುವ, ಅಪಾರದರ್ಶಕ ಸಮಾಜಕ್ಕೂ ಇರುವ ವ್ಯತ್ಯಾಸವನ್ನು ಗುರುತಿಸಲು ಇದು ಸಂಪೂರ್ಣವಾಗಿ ಸೋತಿದೆ ಮತ್ತು ಇದರಿಂದ ನಾವು ಕಲಿಯಬೇಕಾದ ಪಾಠವೇನೆಂದರೆ , ಗೌಪ್ಯತೆ ಅನ್ನುವುದು ಸಾರ್ವಜನಿಕ ಹಾಗೂ ಸಮುದಾಯದ ಒಳಿತು ಯಾವಾಗಲೂ ತಾರ್ಕಿಕವಾಗಿ ಮತ್ತು ನೈತಿಕವಾಗಿ ಒಂದನ್ನೊಂದು ಬೇರ್ಪಡಿಸಲಾಗದ ಹಾಗೆ ಮನುಷ್ಯರ ಸ್ವಾಯತ್ತತೆಯ ಮೌಲ್ಯಗಳ ಮೇಲೆ ಅವಲಂಬಿತವಾಗಿವೆ. ಗೌಪ್ಯತೆ ಎನ್ನುವುದು ನಮ್ಮೆಲ್ಲರ ಆತ್ಮ ಸಂಕಲ್ಪದ ಮೇಲೆ ಅವಲಂಬಿತವಾಗಿದೆ , ಅದಿಲ್ಲದೆ ಪ್ರಜಾ ಪ್ರಭುತ್ವವನ್ನು ಕಲ್ಪಿಸಿಕೊಳ್ಳುವುದೂ ಅಸಾಧ್ಯ.

ಇಷ್ಟೆಲ್ಲದರ ನಡುವೆಯೂ, ಕೊನೆಗೂ ಗಾಳಿ ತನ್ನ ದಿಕ್ಕನ್ನು ಬದಲಿಸಿದ ಹಾಗೆ ತೋರುತ್ತಿದೆ . ಒಂದು ಸಣ್ಣ ಅರಿವು ನಿಧಾನವಾಗಿ , ಆ ಮೊಲದ ಬಿಲದಿಂದ ಮರಳಿ ತೆವಳುತ್ತಿರುವಾಗ,ನಮ್ಮಲ್ಲಿ ಮೂಡುತ್ತಿದೆ. ಬೇಹುಗಾರಿಕಾ ಬಂಡವಾಳಶಾಹಿಗಳು ಬಹಳ ತ್ವರಿತಗತಿಯಲ್ಲಿದ್ದಾರೆ, ಯಾಕೆಂದರೆ ಅವರಿಗೆ ನಮ್ಮ ನಿಜವಾದ ಅನುಮತಿಯಾಗಲಿ ಅಥವಾ ಒಪ್ಪಂದವಾಗಲಿ ಬೇಕಾಗಿಲ್ಲ . ಅವರು ಅವಲಂಬಿತರಾಗುವುದು ಮಾನಸಿಕ ಒತ್ತಡಗಳ ಮೇಲೆ ಮತ್ತು ಬೇರೊಂದು ದಾರಿಯೇ ಸಾಧ್ಯವಿಲ್ಲ ಎನ್ನುವ ಅಸಾಹಾಯಕ ಭಾವನೆಗಳ ಮೇಲೆ , ಶರಣಾಗತಿ ಮತ್ತು ಗೊಂದಲಗಳ ಮೂಲಕ ತಮ್ಮ ಬೇಟೆಯನ್ನು ನಿಶ್ಚಲಗೊಳಿಸುತ್ತಾರೆ . ಪ್ರಜಾಪ್ರಭುತ್ವ ಕಾರ್ಯ ನಿರ್ವಹಿಸುವುದು ನಿಧಾನ , ಮತ್ತು ಅದು ಒಂದು ರೀತಿಯಲ್ಲಿ ಒಳ್ಳೆಯದೇ . ಕೋಟ್ಯಂತರ ಜನರ ಕೌಟುಂಬಿಕ ಮಾತುಕತೆಗಳ ಮೇಲೆ , ಸಮುದಾಯಗಳ ಮಾತುಕತೆ , ಸಹೋದ್ಯೋಗಿಗಳ , ಸ್ನೇಹಿತರ ನಡುವಿನ ಮಾತುಕತೆ , ನಗರಗಳು ಮತ್ತು ರಾಜ್ಯಗಳ ಮಾತುಕತೆ , ನಿಧಾನವಾಗಿಯಾದರೂ ಪ್ರಜಾಪ್ರಭುತ್ವ ವನ್ನು ಎಬ್ಬಿಸಿ ಕೆಲಸ ಮಾಡುವಂತೆ ಪ್ರೇರೇಪಿಸುತ್ತದೆ.

ಇಂತಹ ಮಾತುಕತೆಗಳು ಎಲ್ಲೆಡೆ ಜರುಗುತ್ತಿವೆ , ಮತ್ತು ರಾಜಕಾರಣಿಗಳು ಈಗಲಾದರೂ ಈ ಚರ್ಚೆಗಳಲ್ಲಿ ಪಾಲುಗೊಂಡು ಮುಂಚೂಣಿ ವಹಿಸುವ ಲಕ್ಷಣಗಳು ಕಾಣಿಸುತ್ತಿವೆ , ಈ ಮೂರನೇ ದಶಕ ನಮ್ಮ ಭವಿಷ್ಯವನ್ನು ನಿರ್ಧರಿಸುವ ದಶಕವಾಗಲಿದೆ . ನಾವು ಈ ಡಿಜಿಟಲ್ ಪ್ರಪಂಚವನ್ನು ಉತ್ತಮ ಗೊಳಿಸುತ್ತೇವೆಯೇ ಅಥವಾ ಇನ್ನಿಯಷ್ಟು ಹಾಳುಗೆಡವುತ್ತೇವೆಯೇ ? ನಮ್ಮೆಲ್ಲರಿಗೂ ಸೇರಿದ ಅಜಾಗ ಇದು ಎನ್ನುವ ಹಾಗೆ ಮಾಡುತ್ತೇವೆಯೇ ?

ಈ ಜ್ಞಾನದ ಅಸಮಾನತೆ ಅವಲಂಬಿತವಾಗಿರುವುದು ನಾವೆಷ್ಟು ಸಂಪಾದಿಸುತ್ತೇವೆ ಎನ್ನುವುದರ ಮೇಲಲ್ಲದೆ ನಾವೆಷ್ಟು ಕಲಿಯುತ್ತೇವೆ ಎನ್ನುವುದರ ಮೇಲೆ . ಖಾಸಗೀ ವಾಣಿಜ್ಯ ಸಂಸ್ಥೆಗಳು ತಮ್ಮ ಸ್ವಾಧೀನದಲ್ಲಿರಿಸಿಕೊಂಡಿರುವ , ಉತ್ಪಾದನೆ , ಮಾರಾಟ ಮತ್ತು ಲಾಭದ ಅಂಕಿಅಂಶಗಳ ಮೇಲಿನ ಅಸಾಮಾನ ಹಿಡಿತದ ಮೇಲೆ ಅವಲಂಬಿತವಾಗಿದೆ . ಇದಕ್ಕೆ ಅತ್ಯುತ್ತಮ ನಿದರ್ಶನ ಎಂದರೆ , ನಮಗೆಷ್ಟು ಗೊತ್ತು ಮತ್ತು ನಮ್ಮ ಬಗ್ಗೆ ಅವರಿಗೆಷ್ಟು ಗೊತ್ತು ಎನ್ನುವುದರ ನಡುವಿನ ಕಂದರ ದಿನದಿಂದ ದಿನಕ್ಕೆ ಹಿರಿದಾಗುತ್ತಿರುವುದು

೨೦ನೇ ಶತಮಾನದ ಕೈಗಾರಿಕಾ ಸಮಾಜ “ದುಡಿಮೆಯ ಹಂಚಿಕೆ” ಮೇಲೆ ಅವಲಂಬಿತವಾಗಿತ್ತು ಮತ್ತು ಆರ್ಥಿಕ ಸಮಾನತೆ ರಾಜಕೀಯದ ದಿಕ್ಕನ್ನು ನಿರ್ಧರಿಸುತ್ತದೆ ಎಂದು ನಂಬಲಾಗಿತ್ತು. ನಮ್ಮ ಡಿಜಿಟಲ್ ಶತಮಾನ, ಸಮಾಜದ ಅಳತೆಗೋಲನ್ನು ದುಡಿಮೆಯ ಹಂಚಿಕೆಯಿಂದ “ಕಲಿಕೆಯ ಹಂಚಿಕೆ”ಯ ಕಡೆಗೆ ಕೊಂಡೊಯ್ಯುತ್ತಿದೆ ಮತ್ತು ಈ ಜ್ಞಾನಕ್ಕಾಗಿನ ಹೋರಾಟದಲ್ಲಿ , ಜ್ಞಾನದ ಕ್ರೋಢೀಕರಣ ಮಾಡಿಕೊಂಡಿರುವ ಸಂಸ್ಥೆಗಳು ರಾಜಕೀಯವನ್ನು ನಿರ್ಧರಿಸುತ್ತವೆ

ಈ ಜ್ಞಾನದ ಅಸಮಾನತೆಯ ಹೊಸ ಕೇಂದ್ರಗಳು, ಅಧಿಕಾರ ಕೇಂದ್ರಗಳು ಬದಲಾಗುತ್ತಿರುವುದನ್ನು ಸೂಚಿಸುತ್ತವೆ ಮತ್ತು ೨೦ನೇ ಶತಮಾನದ ರಾಜಕೀಯವನ್ನು ನಿರ್ಧರಿಸಿದ ಉತ್ಪಾದನಾ ವಿಧಾನಗಳ ಮೇಲಿನ ನಿಯಂತ್ರಣ ಬದಲಾಗುತ್ತಿರುವುದನ್ನು ಸೂಚಿಸುತ್ತವೆ . ಈ ಜ್ಞಾನದ ಸಮಾನತೆ ಮತ್ತು ಜ್ಞಾನದ ಹಕ್ಕುಗಳನ್ನು ಈ ಹೊಸ ಜಗತ್ತಿನಲ್ಲಿ ನಿರ್ಧರಿಸುವ ಮೂರು ಅಂಶಗಳನ್ನು ಸಂಕ್ಷೀಪ್ತವಾಗಿ ಹೇಳಬೇಕೆಂದರೆ : ಯಾರಿಗೆ ತಿಳಿದಿದೆ ? ಯಾರಿಗೆ ತಿಳಿದಿರಬೇಕು ಎಂದು ಯಾರು ನಿರ್ಧರಿಸುತ್ತಾರೆ ? ಯಾರಿಗೆ ತಿಳಿದಿರಬೇಕು ಎಂದು ನಿರ್ಧರಿಸುವವರನ್ನು ಯಾರು ನಿರ್ಧರಿಸುತ್ತಾರೆ ?

ಕಳೆದೆರಡು ದಶಕಗಳಲ್ಲಿ , ಮುಂಚೂಣಿಯಲ್ಲಿದ್ದ ಬೇಹುಗಾರಿಕಾ ಬಂಡವಾಳಶಾಯಿಗಳಾದ ಗೂಗಲ್ , ನಂತರ ಹಿಂದೆಯೇ ಬಂದ ಫೇಸ್ ಬುಕ್ , ಅಮೆಜಾನ್ ಮತ್ತು ಮೈಕ್ರೋಸಾಫ್ಟ್ ಈ ಸಮಾಜ ದ ಬದಲಾವಣೆಯ ಮುಂಚೂಣಿಯಲ್ಲಿದ್ದ ಹಾಗೆಯೇ ಜ್ಞಾನದ ಹೊಸ ಶ್ರೇಣೀಕೃತ ವ್ಯವಸ್ಥೆಯ ಉತ್ತುಂಗವನ್ನು ತಲುಪವಲ್ಲಿ ಸಹ ಯಶಸ್ವೀ ಯಾಗಿವೆ . ಬಹಳ ನಿಗೂಢವಾಗಿ ಕಾರ್ಯ ನಿರ್ವಹಿಸುತ್ತಾ , ನಮ್ಮ ಒಪ್ಪಿಗೆಯನ್ನೂ ಕೇಳದೆ , ಯಾವ ಮಗುವಿಗೂ ಕಳ್ಳತನ ಎಂದು ಅರಿವಾಗುವ ಹಾಗೆ , ಅಸಾಧ್ಯ ಪ್ರಮಾಣದ ಮಾಹಿತಿಯನ್ನು ತಮ್ಮ ಬಳಿ ಶೇಖರಿಸಿಕೊಂಡಿದ್ದಾರೆ , ಈ ಬೇಹುಗಾರಿಕಾ ಬಂಡವಾಳಶಾಹಿ ವ್ಯವಸ್ಥೆ ಏಕಪಕ್ಷೀಯವಾಗಿ ಮನುಷ್ಯನ ಖಾಸಗಿ ಅನುಭವಗಳನ್ನು ತಮ್ಮದಾಗಿಸಿಕೊಂಡು , ಮನುಷ್ಯನ ನಡಾವಳಿಯ ರೇಖಾಚಿತ್ರ ರಚಿಸಲು ಬೇಕಾಗುವ ಕಚ್ಚಾ ವಸ್ತುಗಳ ಹಾಗೆ ಬಳಸಿಕೊಂಡಿವೆ , ನಮ್ಮ ಬದುಕುಗಳನ್ನು ಅಂಕಿ ಅಂಶಗಳಾಗಿ ನೋಡಲಾಗುತ್ತಿದೆ

ಮೊದಲಿಗೆ ನಮ್ಮ ಅರಿವಿಗೆ ಬಂದಿದ್ದು ಅಂದರೆ , ಬಳಕೆದಾರರಿಗೆ ತಿಳಿಯದ ಹಾಗೆ ಸಂಗ್ರಹಿಸಿದ ಅಂಕಿಅಂಶಗಳಿಂದ , ಸಾಕಷ್ಟು ಮುಖ್ಯವಾದ ಮುನ್ಸೂಚನೆಗಳನ್ನು ನೀಡಿ , ಬಳಕೆದಾರರ ಸೇವೆಯನ್ನು ಉತ್ತಮಗೊಳಿಸಲು ಬಳಸ ಬಹುದು ಎಂದು . ನೀವು ಏನನ್ನು ಪೋಸ್ಟ್ ಮಾಡುತ್ತೀರಿ ಎನ್ನುವುದಷ್ಟೆ ಅಲ್ಲದೇ , ನೀವು ನಿಮ್ಮ ಪೋಸ್ಟ್ನಲ್ಲಿ ಆಶ್ಚರ್ಯಕಾರಕ ಚಿಹ್ನೆಗಳನ್ನು ಬಳಸುತ್ತೀರಾ , ನಿಮ್ಮ ಫೋಟೋಗಳ ಬಣ್ಣದ ಪ್ರಮಾಣವೆಷ್ಟು ; ನೀವೆಲ್ಲಿ ನಡೆದಾಡಿದ್ದೀರಿ ಎನ್ನುವುದಷ್ಟೆ ಅಲ್ಲ, ನಿಮ್ಮ ಭುಜ ಯಾವ ಕಡೆ ವಾಲಿತ್ತು ; ನಿಮ್ಮ ಮುಖದ ಚಹರೆಯಷ್ಟೇ ಅಲ್ಲ, ನಿಮ್ಮ ಚಹರೆಯಲ್ಲಿನ ಸೂಕ್ಷ್ಮ ಭಾವನೆಗಳೇನು ; ಇಂತಹ ಎಷ್ಟೋ ಅಂಶಗಳನ್ನು ನಿಗೂಢವಾಗಿ ಸಂಗ್ರಹಿಸಿ , ನಿಮ್ಮ ಅಂಕಿಅಂಶಗಳ ಮಾಲೀಕತ್ವದ ಹಕ್ಕನ್ನು ಪಡೆದುಕೊಂಡವು

ಈ ಸಂಗ್ರಹವಾದ ಅಂಕಿಅಂಶಗಳು ಸಂಕೀರ್ಣವಾದ ಸರಬರಾಜು ಸರಪಣಿ ಉಪಕರಣಗಳು , ಮಾನಿಟರಿಂಗ್ ಸಾಫ್ಟ್ವೇರ್ ಮತ್ತು ಸಾಕಷ್ಟು ಬಳಕೆದಾರ ಸಾಫ್ಟ್ವೇರ್ ಮೂಲಕ ಹಾದು ಹೋಗಿ , ಅಂಕಿ ಅಂಶಗಳನ್ನು ವಿಶ್ಲೇಷಿಸಿ ಹೊಸ ಮಾಹಿತಿಗಳನ್ನು ನೀಡುತ್ತವೆ . ಉದಾಹರಣೆಗೆ , The Wall Street Journal ನವರು ನಡೆಸಿದ ಒಂದು ಪ್ರಯೋಗದ ಪ್ರಕಾರ , ಫೇಸ್ ಬುಕ್ ನಿಮ್ಮ ಹೃದಯ ಬಡಿತದ ಅಂಕಿಅಂಶವನ್ನು HR monitor ಸಾಫ್ಟ್ವೇರ್ ಮೂಲಕ , ಋತುಮತಿಯ ಅಂಕಿ ಅಂಶಗಳನ್ನು Flo Period & Ovulation Tracker ನ ಮೂಲಕ , ಮತ್ತು ನಿಮ್ಮ ರಿಯಲ್ ಎಸ್ಟೇಟ್ ಆಸಕ್ತಿಗಳನ್ನು Realtor.com ಮೂಲಕ – ಬಳಕೆದಾರರ ಅರಿವೆಗೆ ಬಾರದ ಹಾಗೆ ಸಂಗ್ರಹಿಸುತ್ತವೆ.

ಈ ಅಂಕಿ ಅಂಶಗಳು ಬೇಹುಗಾರಿಕಾ ಬಂಡವಾಳಶಾಹಿಗಳ ಸಂಶ್ಲೇಷಣಾ ಕಾರ್ಖಾನೆಗಳಾದ “ಕೃತಕ ಬುದ್ಧಿಶಕ್ತಿ ” ಯ ಕಡೆಗೆ ಹರಿಯುತ್ತವೆ . ಹಾಗೂ ಈ ಕಾರ್ಖಾನೆಗಳಲ್ಲಿ ನಮ್ಮ ನಡಾವಳಿಗಳ ಮುನ್ಸೂಚಕಗಳಾಗಿ ಬದಲಾಗುತ್ತವೆ , ಅವು ನಮ್ಮ ಬಗ್ಗೆಯಾದರೂ ನಮಗಾಗಿ ಅಲ್ಲ . ಬದಲಾಗಿ , ಈ ಅಂಕಿಅಂಶಗಳು ಹೊಸ ಬಗೆಯ ಮಾರುಕಟ್ಟೆಗೆ ಉತ್ಪಾದಕರಾಗಿರುವ ವ್ಯಾಪಾರಿಗಳಿಗೆ ಮಾರಾಟವಾಗುತ್ತವೆ . ಮನುಷನ ಸ್ವಭಾವಗಳ ಸರಿಯಾದ ಮುನ್ಸೂಚಕಗಳು ಇಂತಹ ಹೊಸ ಮಾರುಕ್ಕಟ್ಟೆಗೆ ಅತ್ಯಂತ ಅವಶ್ಯಕವಾದ್ದರಿಂದ , ಬೇಹುಗಾರಿಕಾ ಬಂಡವಾಳಶಾಹಿಗಳು ತಮ್ಮ ಭವಿಷ್ಯದ ಮುನ್ಸೂಚಕಗಳ ಗುಣಮಟ್ಟಕ್ಕಾಗಿ ಶ್ರಮ ಪಡುತ್ತವೆ. ಇದು ಈ ಹೊಸ ಜಗತ್ತಿನ ಅತ್ಯಂತ ಶ್ರೀಮಂತ ಮತ್ತು ಬಲಶಾಲಿ ಕಂಪನಿಗಳ ಇತಿಹಾಸ.

ತಮ್ಮ ಈ ಗುರಿ ಮುಟ್ಟಲು , ಮುಂಚೂಣಿಯಲ್ಲಿರುವ ಬೇಹುಗಾರಿಕಾ ಬಂಡವಾಳಶಾಹಿಗಳು ಜಗತ್ತಿನ ಡಿಜಿಟಲ್ ಮಾಹಿತಿ ಪ್ರಪಂಚದ ೯೯. ೯ ಪ್ರತಿಶತ ಅಂಕಿಅಂಶಗಳ ಮೇಲೆ ಪ್ರಾಬಲ್ಯ ತೋರಿಸಬೇಕಾಗಿದೆ . ಬೇಹುಗಾರಿಕಾ ಬಂಡವಾಳಶಾಹಿಗಳು ಪ್ರಪಂಚದ ಅತ್ಯಂತ ಶಕ್ತಿಶಾಲಿ ಕಂಪ್ಯೂಟರ್ ಜಾಲವನ್ನು , ಅಂಕಿ ಅಂಶಗಳ ಕೇಂದ್ರಗಳನ್ನು , ದೊಡ್ಡ ಸಂಖ್ಯೆಯ ಸರ್ವರ್ ಗಳನ್ನು , ಸಮುದ್ರದಾಳದ ಸಂವಹನ ಕೇಬಲ್ ಗಳನ್ನೂ , ಅತ್ಯಂತ ಅಭಿವೃದ್ದಿ ಹೊಂದಿದ ಮೈಕ್ರೋಚಿಪ್ ಅನ್ನು , ಅಗಾಧ ಸಂಖ್ಯೆಯ ಸಂಶೋಧಕರ ಸೈನ್ಯವನ್ನು ಪ್ರಪಂಚದ ಎಲ್ಲ ಮೂಲೆಗಳಿಂದ ಹುಡುಕಿ ಸಿದ್ಧಮಾಡಿ , ಈ ಒಟ್ಟು ಮಾಡಿದ ಅಂಕಿಅಂಶಗಳನ್ನು ಹೇಗೆ ಉಪಯುಕ್ತ ಮಾಹಿತಿಯನ್ನಾಗಿ ಮಾಡಬಹುದು ಎಂದು ಅನ್ವೇಷಿಸುತ್ತಿದ್ದಾರೆ .

ಗೂಗಲ್ ಮುಂಚೂಣಿಯಲ್ಲಿರುವ ಈ ಸ್ಪರ್ಧೆಯಲ್ಲಿ , ಪ್ರಮುಖ ಬೇಹುಗಾರಿಕಾ ಬಂಡವಾಳಶಾಹಿಗಳು ನಿರ್ಧಿಷ್ಟ ಪರಿಣಿತಿಯಿರುವ, ಅಂಕಿ ಅಂಶ ಸಂಶೋಧಕರು , ಪ್ರಾಣಿ ನಡಾವಳಿ ಸಂಶೋಧಕರನ್ನು ತಮ್ಮ ಸಂಸ್ಥೆಗಳಿಗೆ ಉದ್ಯೋಗಿಗಳನ್ನಾಗಿಸಿಕೊಳ್ಳಲು , ಸಣ್ಣ ಪುಟ್ಟ ಸಂಶೋಧನಾ ಸಂಸ್ಥೆಗಳನ್ನು, ವಿಶ್ವವಿದ್ಯಾನಿಲಯಗಳನ್ನು , ಶಾಲೆಗಳನ್ನು , ಮುನ್ಸಿಪಾಲಿಟಿಗಳನ್ನ , ಸಣ್ಣ ಮತ್ತು ಬಡ ರಾಷ್ಟ್ರಗಳ ಸಂಶೋಧಕರನ್ನು ಮೂಲೆಗುಂಪಾಗಿಸುತ್ತಿವೆ . ೨೦೧೬ನೇ ಇಸವಿಯಲ್ಲಿ, ಅಮೇರಿಕಾದ ೫೭ ಪ್ರತಿಶತ ಕಂಪ್ಯೂಟರ್ phd ವಿದ್ಯಾರ್ಥಿಗಳು ಈ ಸಂಸ್ಥೆಗಳಿಗೆ ಸೇರಿಕೊಂಡಿದ್ದಾರೆ , ಕೇವಲ ೧೧ ಪ್ರತಿಶತ ವಿದ್ಯಾರ್ಥಿಗಳು ಅಕಾಡೆಮಿಕ್ ವೃತ್ತಿಗೆ ಸೇರಿಕೊಂಡಿದ್ದಾರೆ . ಇದು ಕೇವಲ ಅಮೇರಿಕಾ ದ ಸಮಸ್ಯೆಯಲ್ಲ, ಬ್ರಿಟನ್ ನ್ನ ವಿಶ್ವವಿದ್ಯಾನಿಲಯಗಳಲ್ಲಿ “ಕಾಣೆಯಾಗಿರುವ ” ಅಂಕಿ ಅಂಶ ವಿಜ್ಞಾನಿಗಳನ್ನು ಹುಡುಕುತ್ತಿದ್ದಾರೆ . ಒಬ್ಬ ಕೆನಡಾದ ವಿಜ್ಞಾನಿ “ಅಧಿಕಾರ , ಪರಿಣಿತಿ , ಅಂಕಿ ಅಂಶ ಎಲ್ಲವೂ ಕೆಲವೇ ಕೆಲವು ಸಂಸ್ಥೆಗಳಲ್ಲಿ ಸೇರಿಕೊಂಡಿದೆ” ಎಂದು ಗೊಣಗಾಡುತ್ತಾನೆ !

ಮನುಷ್ಯನ ಇತಿಹಾಸದಲ್ಲೇ ಅತ್ಯಂತ ಸುಲಭವಾಗಿ ಲಾಭ ಮಾಡಬಹುದಾದ , ಅಂತರ್ಜಾಲದ ಮೂಲಕ ಜಾಹೀರಾತು ನೀಡುವ , ಬಳಕೆದಾರ ಆಯ್ಕೆ ಮಾಡಿಕೊಳ್ಳಬಹುದಾದ ವಸ್ತುಗಳ ಜಾಹೀರಾತು ಲಿಂಕ್ ಅಂದಾಜುಮಾಡುವ , ವ್ಯಾಪಾರವನ್ನು ಗೂಗಲ್ ಮೊದಲ ಬಾರಿ ಶುರು ಮಾಡಿತು . ೨೦೦೦ನೇ ಇಸವಿ ಯ ಮತ್ತು, ಈ ಹೊಸ ಅರ್ಥ ವ್ಯವಸ್ಥೆಯ ತರ್ಕ ಹೊರ ಹೊಮ್ಮುತ್ತಿದ್ದ ಸಮಯವಾದ ೨೦೦೪ ರ ಮಧ್ಯೆ ಆ ಕಂಪನಿಯ ಲಾಭ ೩೫೯೦ ಪಟ್ಟು ಹೆಚ್ಚಾಯಿತು , ಅದೇ ವರ್ಷ ಆ ಕಂಪನಿ ಸಾರ್ವಜನಿಕ ಅಸ್ತಿತ್ವಕ್ಕೂ ಸಹ ಬಂತು . ಈ ಆಶ್ಚರ್ಯವನ್ನುಂಟುಮಾಡುವ ಹಣದ ಮೊತ್ತ “ಬೇಹುಗಾರಿಕಾ ಲೋಕದ ಡಿವಿಡೆಂಟ್ (ಲಾಭಾಂಶ) ” ಮಾತ್ರ . ಶೀಘ್ರವೇ ಸಣ್ಣ ಸಣ್ಣ ಕಂಪನಿಗಳಿಗೆ ಹಣ ಹೂಡಿಕೆ ಮಾಡಿ , ಸಾಫ್ಟ್ವೇರ್ ಡೆವೆಲಪರ್ ಗಳನ್ನು ಉದ್ಯೋಗಿಗಳನ್ನಾಗಿಸಿ ತನ್ನ ಸಂಸ್ಥೆಯ ಗುರಿಯನ್ನು ಬೇಹುಗಾರಿಕಾ ಬಂಡವಾಳು ಶಾಹಿ ವ್ಯವಸ್ಥೆಯಕಡೆ ತಿರುಗಿಸಿತು . ಮನುಷ್ಯನ ಭವಿಷ್ಯವನ್ನು ಮಾರಿ ಅತಿ ಕಡಿಮೆ ಸಮಯದಲ್ಲಿ ಅಳತೆಮೀರಿದ ಲಾಭ ಮಾಡುವ ಈ ದಾರಿ ಹಿಡಿದು ನಂತರ ಫೇಸ್ ಬುಕ್ ಬಂತು , ನಂತರ ತಂತ್ರಜ್ಞಾನ ವಲಯದ ಮೂಲಕ ಉಳಿದ ಎಲ್ಲ ಆರ್ಥಿಕತೆ , ಮತ್ತು ವಿಮಾ ವಲಯ , ಸರಕು ವ್ಯಾಪಾರ , ಆರೋಗ್ಯ ವಲಯ , ಹಣಕಾಸು , ಮನರಂಜನೆ ಮತ್ತು “smart” ಎಂದು ಶುರುವಾಗುವ , ಅಥವಾ “ವಯಕ್ತೀಕರಿಸಿದ ” ಎಂಬ ಪದಗಳಿರುವ ಎಲ್ಲ ಉದ್ಯಮಕ್ಕೂ ಹರಡಿಕೊಂಡಿತು

೨೦ನೇ ಶತಮಾನದಲ್ಲಿ ಸಮೂಹ ಉತ್ಪಾದನಾ ಅರ್ಥವ್ಯವಸ್ಥೆಯ ರೂವಾರಿಯಾಗಿದ್ದ ಫೋರ್ಡ್ ಕೂಡ , ಈ ಬೇಹುಗಾರಿಕಾ ಲಾಭಾಂಶದ ಹಿಂದೆ ಹೋಗಿ , ತನ್ನ ಕಡಿಮೆಯಾದ ಕಾರು ಮಾರಾಟದ ಸಂಖ್ಯೆಯನ್ನು ಹೆಚ್ಚಿಸಲು “transportation operating system” ಅನ್ನು ಹೊರತರುತ್ತಿದೆ . ಒಬ್ಬ ವಿಶ್ಲೇಷಕ ಹೇಳಿದ ಹಾಗೆ, ಫೋರ್ಡ್ ” ಅಂಕಿ ಅಂಶಗಳನ್ನು ಬಳಸಿ ಅಸಾಧ್ಯ ಹಣ ಗಳಿಸಬಹುದು . ಅದಕ್ಕಾಗಿ ಅವರಿಗೆ ತಂತ್ರಜ್ಞರು ಬೇಡ , ಕಾರ್ಖಾನೆ ಬೇಡ ಅಥವಾ ಡೀಲರ್ ಗಳು ಸಹ ಬೇಡ . ಬರೀ ಲಾಭ ಮಾತ್ರ ಅವರಿಗಾಗಿ ಕಾದಿದೆ”

ಮುಂದುವರೆಯುವುದು ..

ಕನ್ನಡಕ್ಕೆ: ಮಂಜುನಾಥ್‌ ಚಾರ್ವಾಕ

ವೃತ್ತಿಯಲ್ಲಿ ಸಾಫ್ಟ್‌ವೇರ್‌ ಇಂಜಿನಿಯರ್‌. ವಿಶ್ವದ ಒಳ್ಳೆಯ ಕಥೆಗಳನ್ನು, ಬರಹಗಳನ್ನು ಕನ್ನಡಕ್ಕೆ ತರುವ ತವಕ ಹೊಂದಿರುವ ಮಂಜುನಾಥ್ ಒಳ್ಳೆಯ ಫೋಟೋಗ್ರಾಫರ್ ಕೂಡ.

ಮೂಲ : https://www.nytimes.com/2020/01/24/opinion/sunday/surveillance-capitalism.html

One comment to “ಕೂತಲ್ಲೇ ನಿಮ್ಮನ್ನು ನಿಯಂತ್ರಿಸಲಾಗುತ್ತಿದೆ – ಭಾಗ ೧”
  1. Pingback: ಕೂತಲ್ಲೇ ನಿಮ್ಮನ್ನು ನಿಯಂತ್ರಿಸಲಾಗುತ್ತಿದೆ – ಭಾಗ ೨ – ಋತುಮಾನ

ಪ್ರತಿಕ್ರಿಯಿಸಿ