ಗಾಯದ ಮೇಲೆ ಬರೆ: ಕೊರೋನಾ ಕಾಲದಲ್ಲಿ ಗ್ರಾಮೀಣ ಬದುಕು

ಕೊರೊನಾ ಕಾಲದಲ್ಲಿನ ಗ್ರಾಮಿಣ ಬದುಕಿನ ಚಿತ್ರಗಳನ್ನ ಋತುಮಾನಕ್ಕಾಗಿ ಎ.ಆರ್.ವಾಸವಿ ಮತ್ತು ಕೆ.ಪಿ ಸುರೇಶ ಸಂಪಾದಿಸಿ ಕೊಟ್ಟಿದ್ದಾರೆ.ಇಂತಹ ನಾಡಿನ ಹತ್ತು ವಿವಿಧ ಹಳ್ಳಿಯ ಚಿತ್ರಗಳು ದಿನಕ್ಕೊಂದರಂತೆ ಕೊರೊನಾ ಕಾಲದಲ್ಲಿ ಗ್ರಾಮಿಣ ಬದುಕು ಅನ್ನುವ ಶೀರ್ಷಿಕೆಯಲ್ಲಿ ಋತುಮಾನದಲ್ಲಿ ಪ್ರಕಟವಾಗಲಿದೆ

                                                              ಗಾಯದ ಮೇಲೆ ಗಾಯ..  ಇದು ಗ್ರಾಮಭಾರತ ಮತ್ತು ಅದರ ನಾಗರಿಕರ ಮೇಲೆ ನಡೆಯುತ್ತಿರುವ ಸತತ ದಾಳಿ. ಮೊದಲು ನೋಟು ಅಮಾನ್ಯೀಕರಣ  ಮೂಲ ಆದಾಯ ಮತ್ತು ಉಳಿತಾಯಗಳನ್ನು ಚಿಂದಿ ಮಾಡಿ, ಹೆಚ್ಚಿನವರನ್ನು ದಾರಿದ್ರ್ಯ ಮತ್ತು ಅವಮಾನಕ್ಕೆ ತಳ್ಳಿತು. ಆಮೇಲೆ ದೋಷಪೂರ್ಣವಾಗಿ ಚಾಲೂಗೊಂಡ ಜಿ.ಎಸ್. ಟಿ. ಕೆಲವು ಗ್ರಾಮೀಣ  ವೃತ್ತಿಗಳು ಹೇಗೋ ಬದುಕು ಕಂಡುಕೊಳ್ಳಬಹುದಾದ ಸಾಧ್ಯತೆಯನ್ನು ಕತ್ತರಿಸಿ ಹಾಕಿತು.

ಈಗ ಅರೆ ಬರೆ ಯೋಜಿತ ಲಾಕ್ ಡೌನ್ !. ಜನತಾ ಕರ್ಫ್ಯೂ ಎಂದು ಡಂಗುರ ಹೊಡೆದರೂ ಅದು ಮೂಲತಃ ಮಧ್ಯಮ ವರ್ಗ ಮತ್ತು ಮೇಲ್ವರ್ಗವನ್ನು ಸುರಕ್ಷವಾಗಿಟ್ಟು ಬಡ ಕಾರ್ಮಿಕರ ಮೇಲೆ ವಿಧಿಸಿದ ಕರ್ಫ್ಯೂ ಆಗಿತ್ತು. ಅದರ ಘೋಷಣೆ ಮತ್ತು ಅನುಷ್ಠಾನದಲ್ಲಿ ಈ ಲಾಕ್ ಡೌನ್ ಎಂಬ ಕ್ರಮ ಗ್ರಾಮ ಭಾರತ ಬದುಕು ಹೇಗೆ   ವ್ಯವಹರಿಸುತ್ತಿದೆ, ಬದುಕುತ್ತಿದೆ ಎಂಬುದನ್ನು ನಿರ್ಲಕ್ಷಿಸಿದ್ದಷ್ಟೇ ಅಲ್ಲ; ರಾಷ್ಟ್ರೀಯ ಸುರಕ್ಷೆಯ ಹೆಸರಿನಲ್ಲಿ ಸಂಕಷ್ಟಕ್ಕೀಡಾಗುವವರನ್ನು ಹೇಗೆ ಬಲಿಕೊಡಲಾಗುತ್ತಿದೆ  ಎಂಬುದನ್ನೂ ಗಮನಿಸಲಿಲ್ಲ. ತಮ್ಮ ತಮ್ಮ ಹಳ್ಳಿಗಳಿಗೆ ದಿಕ್ಕೆಟ್ಟು ಮರಳುತ್ತಿರುವ ವಲಸೆ ಕಾರ್ಮಿಕರ ಚಿತ್ರಗಳು ಈ ಮಂದಿ ತಮ್ಮ ಸೌಖ್ಯವನ್ನೂ ಒತ್ತೆ ಇಟ್ಟು   ಹೇಗೆ ನಗರ ಮತ್ತು ಕೈಗಾರಿಕಾ ಆರ್ಥಿಕತೆಯ ಸೇವೆ ಮಾಡುತ್ತಿದ್ದಾರೆ ಎಂಬುದನ್ನು ತೋರಿಸಿಕೊಟ್ಟಿತು.

ಈ ಲಾಕ್ ಡೌನ್ ಬಲಿಕ ಕರ್ನಾಟಕದ ಗ್ರಾಮಾಂತರದ ಸಂಕಷ್ಟ, ತಲ್ಲಣಗಳೇನು ಎಂಬುದನ್ನು ಅರಿಯಲು ಕೆಲವು ಗೆಳೆಯರಲ್ಲಿ ಸ್ಥಳೀಯ ವರದಿಗಳನ್ನುಕಳಿಸಲು ಕೋರಿದೆವು.ಅವರು ಶ್ರಮ ವಹಿಸಿ ವರದಿಗಳನ್ನು ಕಳಿಸಿದ್ದಾರೆ.

ಕರ್ನಾಟಕದ ವಿವಿಧ ಭಾಗಗಳ ಹತ್ತು ಹಳ್ಳಿಗಳ ಈ ಚಿತ್ರಗಳು  ಕೋವಿಡ್-19ರ ಕಾಲದಲ್ಲಿ ಗ್ರಾಮೀಣ ಬದುಕು ಹೇಗಿದೆ ಎಂಬುದನ್ನು ಮುಂದಿಡುತ್ತವೆ.. ಲಾಕ್ ಡೌನ್ ಹೇಗೆ ಗ್ರಾಮೀಣ ಬದುಕುಮತ್ತು ಜೀವನೋಪಾಯಗಳನ್ನು ಚದುರಿಸಿದೆ ಎಂಬುದನ್ನು ಈ ವರದಿಗಳು ಸ್ಪಷ್ಠವಾಗಿ ತೋರಿಸಿಕೊಡುತ್ತವೆ.  ಸರಕಾರದ ಆಡಳಿತ ಯಂತ್ರವು ದಕ್ಷ ಆಡಳಿತಾತ್ಮಕ ಪ್ರಯತ್ನಗಳ ಮೂಲಕ  ಸಮುದಾಯವು ಉಪವಾಸ ಬೀಳುವುದನ್ನು ತಪ್ಪಿಸಿದೆ. ಹೊಸ ಕೊರೋನಾ ಯೋಧರು ಗ್ರಾಮೀಣ ಸಮುದಾಯಕ್ಕೆ ಮಾಹಿತಿಯನ್ನೂ ಬೆಂಬಲವನ್ನೂ ನೀಡುತ್ತಿದ್ದಾರೆ; ನಿಜ.  ಆದರೆ ಈ ಚಿತ್ರಗಳು ದಶಕಗಳ ನಿರ್ಲಕ್ಷ್ಯವನ್ನೂ ತೋರಿಸುತ್ತವೆ.

ಕೃಷಿ ಆದಾಯ ಮತ್ತು ಜೀವನೋಪಾಯಗಳು ಆರ್ಥಿಕವಾಗಿ  ಸೂಕ್ತವಲ್ಲವೆಂದು ಅನ್ನಿಸಿದಂತೆಲ್ಲಾ ಬಲು ದೊಡ್ಡ ಸಂಖ್ಯೆಯ ಗ್ರಾಮೀಣ ನಾಗರಿಕರು ಯಾವ ಭದ್ರತೆಯೂ ಇಲ್ಲದ ನಗರ ಉದ್ಯೊಗ ಅರಸಿ ವಲಸೆ ಹೋಗುತ್ತಿದ್ದಾರೆ. ಈ ಪಿಡುಗಿನ ಕಾಲದಲ್ಲಿ ಮರು ವಲಸೆಗಾರರಾಗಿ ಅವರು ಮರಳುತ್ತಿದ್ದಂತೆ, ಭವಿಷ್ಯದ ಅಸ್ಪಷ್ಠತೆಯನ್ನೂ ಎದುರು ನೋಡುತ್ತಿದ್ದಾರೆ. ಅವರೀಗ  ತಮ್ಮ ಪುಟ್ಟ ಮನೆಗಳಲ್ಲಿ ಬಂಧಿಯಾಗಿ ಅಶಾಂತರಾಗಿದ್ದಾರೆ

ಯಜಮಾನಿಕೆಯ ನಗರ/ಕೈಗಾರಿಕಾ ಆರ್ಥಿಕತೆಯೊಂದಿಗೆ ಐಕ್ಯಗೊಂಡಿರುವ ನಗರದ ಅಂಚಿನ ಗ್ರಾಮಗಳು ಈಗ ಕೈಬಿಟ್ಟ ಬದುಕಿನ ತಾಣಗಳಾಗಿವೆ. ಮುಚ್ಚಿದ ಫ್ಯಾಕ್ಟರಿಗಳು, ವರ್ಕ್ ಶಾಪುಗಳು  ಯಾವ ಆದಾಯವನ್ನೂ ನೀಡುತ್ತಿಲ್ಲ. ಈ ತಾಣಗಳಿಗೆ ಮಾಮೂಲಿ ಹಳ್ಳಿಗಳ ಸಾಮುದಾಯಿಕ ಅಥವಾ ಆಡಳಿತಾತ್ಮಕ ಸಂರಚನೆಗಳೂ ಇಲ್ಲ. ಇನ್ನೊಂದೆಡೆ ಸರ್ಕಾರದ ಪಡಿತರ ವ್ಯವಸ್ಥೆ  ಆದಿವಾಸಿ ಸೋಲಿಗರನ್ನು ಉಪವಾಸ ಬೀಳದಂತೆ ತಡೆದಿದೆಯಾದರೂ ಅವರ ವಾರ್ಷಿಕಹಬ್ಬದ ಆಚರಣೆಗಳು ಸ್ಥಗಿತಗೊಂಡಿರುವುದು ಅವರಲ್ಲಿ ಭವಿಷ್ಯದ ಬಗ್ಗೆಯೇ ಆತಂಕ ಹುಟ್ಟಿಸಿದೆ.

ಕೊರೋನ ಎದುರಿಸಲು ಪ್ರಧಾನ ಮಂತ್ರಿ ಉಪಯೋಗಿಸಿರುವ ಸಾಂಸ್ಕೃತಿಕ ತಂತ್ರೋಪಾಯಗಳು (ಜಾಗಟೆ, ಗಂಟೆ, ದೀಪ) ಕೊನೆಗೂ ಮೌಢ್ಯದ ಆಚರಣೆಯನ್ನಷ್ಟೇ  ಆಳವಾಗಿ ಬೇರೂರಿಸಿ ಹೋಗುವ ಸಂಭಾವ್ಯತೆ ಇದೆ. ನಿಜಾಮುದ್ದೀನ ಸಮಾವೇಶವನ್ನು ಬಳಸಿಕೊಂಡು ಇಸ್ಲಾಮಿನ ಭೀತಿ ಬಿತ್ತುವ ಅಪಪ್ರಚಾರವನ್ನು ತಡೆಯುವ ಯಾವ ಕೆಲಸವನ್ನೂ ಸರಕಾರ ಮಾಡಲಿಲ್ಲ ಎಂಬುದು ಇನ್ನೂ ಆತಂಕದ ಸಂಗತಿ

ಮೂಲೆಮೂಲೆಯ ಹಳ್ಳಿಗಳ ಮುಸ್ಲಿಮರು ಬಹಿಷ್ಕಾರದ ಜೊತೆ ತಮ್ಮ ಜೀವನೋಪಾಯಗಳ ಆದಾಯವನ್ನೂ ಕಳಕೊಳ್ಳುವ ಸಂಗತಿ ನಮ್ಮನ್ನೆಲ್ಲಾ ನಾಚಿಕೆಗೆ ಈಡು ಮಾಡಬೇಕು.  ಇಂಥಾ ಪಿಡುಗುಗಳ ನೆನಪು ನಮ್ಮ ಸಮುದಾಯಗಳಲ್ಲಿ ಇನ್ನೂ ಇದೆ.  ಪ್ಲೇಗಿನಿಂದಾ ಬದುಕುಳಿಯಲು ಊರಿಂದಾಚೆ ವಾಸ್ತವ್ಯ ಹೂಡುವ ಗದಗದ ಲಂಬಾಣಿಗಳ ತಂತ್ರೋಪಾಯಗಳು ಇದಕ್ಕೆ ಉದಾಹರಣೆ.

ಉಳಿದ ಹಳ್ಳಿಗಳಲ್ಲಿ ಕೆಲಸ,ಆಹಾರ,ವೈದ್ಯಕೀಯ ಸಹಾಯ ಮತ್ತು ಒಟ್ಟಾರೆ ಭವಿಷ್ಯದ ಆತಂಕಗಳೇ  ಜನರ ಮಾತುಕತೆಗಳ ಹೂರಣ. ಕೋಟ್ಯಂತರ ಗ್ರಾಮೀಣ ಸಮುದಾಯಗಳನ್ನು   ಇನ್ನಷ್ಟು ಸಂಕಷ್ಟದ ಹಂತಕ್ಕೆ  ತಳ್ಳುವ ಮೂಲಕ ನಮ್ಮ ಪ್ರಜಾಸತ್ತಾತ್ಮಕ ವ್ಯವಸ್ಥೆ ಎಷ್ಟು ನಾಜೂಕು,ನಮ್ಮ ಆರ್ಥಿಕ ನೀತಿಗಳು ಹೇಗೆ ವಿಫಲ ಎಂದೂ ಸಾಬೀತು ಮಾಡಿದೆ.   ತಮ್ಮ ಬಗ್ಗೆ ಕಿಂಚಿತ್ತೂ ಕಾಳಜಿ ತೋರದ ಜನಪ್ರತಿನಿಧಿಗಳನ್ನು ಮತ್ತೆ ಆರಿಸುವ  ಜನರ ಮಂದ ದೃಷ್ಟಿಯೂ ಅನಾವರಣಗೊಂಡಿದೆ.

ಈ ಕೊರೋನಾ ಕಾಲದ ಬದುಕು ನಮ್ಮದೇಶ ಮತ್ತು  ಸಮಾಜದಲ್ಲಿ ಆಳವಾಗಿದ್ದ  ಬಿರುಕುಗಳನ್ನು ಇನ್ನಷ್ಟು ಢಾಳಾಗಿ ತೋರಿಸಿಕೊಟ್ಟಿದೆ.  ಗ್ರಾಮೀಣ ಕಾರ್ಮಿಕ ವರ್ಗ ಈ  ಹೆಚ್ಚುತ್ತಿರುವ ಬಿರುಕಿನ ಬಲಿಪಶುಗಳು.

ಈ ಕೊರೋನಾ ಪಿಡುಗು  ಸುದೀರ್ಘ  ಅವಧಿಯಲ್ಲಿ ನಮ್ಮ ಆರ್ಥಿಕತೆಯನ್ನೂ; ಸಾಮಾಜಿಕ ಬದುಕನ್ನೂ ಅಲ್ಲೋಲಕಲ್ಲೊಲ ಮಾಡುವ ಸಾಧ್ಯತೆ ಸ್ಪಷ್ಠವಾಗಿದೆ.ಕೌಟುಂಬಿಕ ಹಿಂಸೆಯಿಂದ ಹಿಡಿದು ಸಾಮಾಜಿಕ ಸ್ವಾಸ್ಥ್ಯದ ವರೆಗೆ ಇದು ದೂರಗಾಮಿ ಪರಿಣಾಮ ಬೀರಲಿದೆ.

ಇನ್ನೊಂದೆಡೆ ಸರಕಾರದ ದೃಷ್ಟಿ ಚೌಕಟ್ಟಿನಿಂದಲೇ ಈ ಗ್ರಾಮೀಣ ಬದುಕಿನ ಸುಧಾರಣೆಯ ಪ್ರಾಮಾಣಿಕ ಉದ್ದಿಶ್ಯ  ಮಾಯವಾಗಿರುವ ಕಾರಣ ನೀತಿನಿರೂಪಣೆಗಳಲ್ಲೂ ಮಹತ್ತರ ಬದಲಾವಣೆ ನಿರೀಕ್ಷಿಸುವುದು ಕಷ್ಟ. ಅರ್ಥಾತ್ ಜರ್ಝರಿತವಾಗಿರುವ ಆರ್ಥಿಕತೆ ಇನ್ನಷ್ಟು ಸಂಕಷ್ಟದ ಹಾದಿಯಲ್ಲಿ ಮುಂದುವರಿಯುತ್ತಿದ್ದಂತೇ ಗ್ರಾಮೀಣ ಜೀವನೋಪಾಯ, ಕೃಷಿ ಮತ್ತು ಒಟ್ಟಾರೆ ಬದುಕು ಇನ್ನಷ್ಟು ದುರ್ಭರವಾಗಲಿದೆ.

 ಕೆ.ಪಿ.ಸುರೇಶ  & ಎ.ಆರ್. ವಾಸವಿ (ಕೊರೊನಾ ಕಾಲದ ಗ್ರಾಮೀಣ ಬದುಕು ಸರಣಿಯ ಸಂಪಾದಕರು)


ಎ.ಆರ್.ವಾಸವಿ : ಸಾಮಾಜಿಕ ಮಾನವಶಾಸ್ತ್ರಜ್ಞೆ. ಇವರು ಡೆಲ್ಲಿ ಸ್ಕೂಲ್ ಆಫ್ ಎಕನಾಮಿಕ್ಸ್‌ನ ಸಮಾಜಶಾಸ್ತ್ರ ವಿಭಾಗದಲ್ಲಿ ಸಮಾಜಶಾಸ್ತ್ರ ವಿಷಯದಲ್ಲಿ ಸ್ನಾತಕೊತ್ತರ ಪದವಿಯನ್ನು ಪಡೆದಿದ್ದಾರೆ. ಅಮೆರಿಕಾದ ಮೆಚಿಗನ್ ಸ್ಟೇಟ್ ಯುನಿರ್ವಸಿಟಿಯಿಂದ ಸಾಮಾಜಿಕ ಮಾನವಶಾಸ್ತ್ರದಲ್ಲಿ ಡಾಕ್ಟರೇಟ್ (ಪಿಎಚ್.ಡಿ) ಪದವಿಯನ್ನು ಪಡೆದಿದ್ದಾರೆ. ಇವರು ಪುನರ್ಚಿತ್ ಸಂಸ್ಥೆಯ ಸ್ಥಾಪಕರಾಗಿದ್ದು, ಪ್ರಸ್ತುತ ಕಾರ್ಯದರ್ಶಿಗಳಾಗಿದ್ದಾರೆ.

ಕೆ.ಪಿ.ಸುರೇಶ: ಮೈಸೂರು ನಿವಾಸಿಯಾದ ಕೆ.ಪಿ ಸುರೇಶ ಲೇಖಕರು, ಕವಿ ಹಾಗೂ ಅನುವಾದಕರು. ಕೃಷಿಯಲ್ಲಿ ಅಪರಿಮಿತ ಆಸಕ್ತಿ.

ಪ್ರತಿಕ್ರಿಯಿಸಿ