ಸ್ವಂತ ಕವಿತೆಯ ಓದು : ಕೆ. ಎಸ್. ನಿಸಾರ್ ಅಹಮದ್

ಕೆ. ಎಸ್. ನಿಸಾರ್ ಅಹಮದ್ ತಾವೇ ಓದಿರುವ ಅವರ ಐದು ಪ್ರಮುಖ ಕವಿತೆಗಳು ಇಲ್ಲಿವೆ . ಇದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ‘ಸ್ವಂತ ಕವಿತೆಯ ಓದು’ ಯೋಜನೆಯಲ್ಲಿ ಪ್ರಕಟವಾಯಿತು. ಅಗಲಿದ ಹಿರಿಯರಿಗೆ ಗೌರವಪೂರ್ವಕ ಅಂತಿಮ ನಮನಗಳು.

೧. ನಿಮ್ಮೊಡನಿದ್ದೂ ನಿಮ್ಮಂತಾಗದೆ ( ಸಂಕಲನ : ಸಂಜೆ ಐದರ ಮಳೆ )

ಪ್ರಸ್ತುತ ಭಾರತದ ರಾಜಕೀಯ ವಾತಾವರಣ ಹಾಗೂ ಸಾಮಾಜಿಕ ಪರಿಸ್ಥಿತಿಗಳು ತಮ್ಮ ಸುತ್ತ ಅನುಮಾನದ ಹುತ್ತಗಳನ್ನು ಕಟ್ಟಿಕೊಡುತ್ತಿವೆ. ಎರಡು ವಿಭಿನ್ನ ಧಾರ್ಮಿಕ ಸಂಸ್ಕೃತಿಗಳು ಅನೈಚ್ಛಿಕವಾಗಿ ಪ್ರತ್ಯೇಕಗೊಳ್ಳುತ್ತಿರುವಂತೆ ಮೇಲ್ನೋಟಕ್ಕೆ ಕಾಣಿಸುತ್ತವೆ. ಈ ವಿಚಾರವನ್ನು ಕವಿ ನಿಸಾರ್ ಅಹಮದ್ ದಶಕಗಳ ಹಿಂದೆಯೇ ತಮ್ಮ ನಿಮ್ಮೊಡನಿದ್ದು ನಿಮ್ಮಂತಾಗದೆ ಎಂಬ ಕವಿತೆಯಲ್ಲಿ ಸ್ಪಷ್ಟವಾಗಿ ದಾಖಲಿಸಿದ್ದಾರೆ. ನೂರಾರು ವರ್ಷಗಳಿಂದ ಈ ನೆಲದಲ್ಲಿ ಹುಟ್ಟಿ ಬೆಳೆದು ತನ್ನ ಜೀವನದ ಬೇರುಗಳನ್ನು ಆಳವಾಗಿ ಬಿತ್ತಿ ಬೆಳೆದುಕೊಂಡಿದ್ದರೂ, ಪರಕೀಯನಂತೆ ಬದುಕುವ ಅತ್ಯಂತ ಕಷ್ಟದ ಕೆಲಸವನ್ನು ನೋವಿನಿಂದ ಕವಿ ಹೇಳಿಕೊಂಡಿದ್ದಾರೆ. ಮೇಲ್ನೋಟಕ್ಕೆ ಭಾರತೀಯರೆಲ್ಲರೂ ಒಂದೇ ಎಂದು ಹೇಳುವ ಜನಗಳೇ ಒಳಗೊಳಗೆ ಅಲ್ಪಸಂಖ್ಯಾತರ ಬೇರುಗಳನ್ನು ಕತ್ತರಿಸುವ ಕಪಟಿಗಳಾಗುತ್ತಾರೆ. ಈ ಕಪಟ ಗೊತ್ತಿದ್ದರೂ ಗೊತ್ತಿಲ್ಲದಂತೆ ನಟಿಸುವ, ಅವರೊಂದಿಗೆ ಹೊಂದಿಕೊಂಡಿದ್ದೇವೆಂದು ತೋರಿಕೆಯ ಬಾಳು ತಳ್ಳುವ, ಇಕ್ಕಟ್ಟಿನ ಕೆಲಸ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ವ್ಯಕ್ತಿಗಿರುತ್ತದೆ. ದೇಶಪ್ರೇಮ, ರಾಷ್ಟ್ರೀಯತೆ, ನಾಡುನುಡಿಗಳ ಬಗೆಗಿನ ನಂಬಿಕೆ ನಿಯತ್ತುಗಳನ್ನು ಅಗಾಧವಾಗಿ ರೂಢಿಸಿಕೊಂಡಿದ್ದರೂ, ಆಗಾಗ ಇತರರ ಸಂಶಯಕ್ಕೆ ಪಾತ್ರನಾಗಬೇಕಾದ ದುರಂತ ಅನ್ಯಧರ್ಮೀಯನಿಗೆ ಇರುತ್ತದೆ. ಇಂಥ ದುರಂತಮಯ ಜೀವನದ ಚಕ್ರಗತಿಯಲ್ಲಿ ಸುತ್ತುವರಿದಿದ್ದರೂ ಅದರ ಪರಿವೆಯಿಲ್ಲದೆ ಹಾಗೇ ಹುಸಿನಗೆಯನ್ನು ಅವಾಹಿಸಿಕೊಂಡು ಬದುಕಬೇಕಾದ ಅನಿವಾರ್ಯತೆಯನ್ನು ಕವಿ ಈ ಕವಿತೆಯಲ್ಲಿ ಬಿಡಿಸಿಟ್ಟಿದ್ದಾರೆ. ಮಾನವೀಯ ಅಂತಃಕರಣವುಳ್ಳ; ಸಮುದಾಯ ಬದುಕಿನಲ್ಲಿ ನಂಬಿಕೆಯುಳ್ಳ, ಜಾತ್ಯತೀತ ಹಾಗೂ ಧರ್ಮಾತೀತ ನಡವಳಿಕೆಗಳನ್ನು ರೂಪಿಸಿಕೊಂಡ ಮನುಷ್ಯರ ಮನಸ್ಸನ್ನು ಈ ಕವಿತೆ ಆಳವಾಗಿ ಕಲಕುತ್ತದೆ.


೨. ಕುರಿಗಳು ಸಾರ್ ಕುರಿಗಳು ( ಸಂಕಲನ : ನಿತ್ಯೋತ್ಸವ )

ಕುರಿಗಳು ಸಾರ್ ಕುರಿಗಳು, ಒಂದು ಜನಪ್ರಿಯ ಕವಿತೆ. ಆಧುನಿಕ ಭಾರತದ ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಶ್ರೀಸಾಮಾನ್ಯನ ಅಸಹಾಯಕ ಸ್ಥಿತಿಯನ್ನು ಈ ಕವಿತೆಯಲ್ಲಿ ನಿಸಾರ್ ಮನಮುಟ್ಟುವಂತೆ ಚಿತ್ರಿಸಿದ್ದಾರೆ. ಮುಂದಿನ ಸರತಿಯಲ್ಲಿ ಹೋಗಿರುವವರನ್ನು ಅನುಸರಿಸಿ ಮಂದೆಯಲ್ಲಿ ಒಂದಾಗಿ ಕುರಿ ಸಾಗುತ್ತದೆ. ವ್ಯವಸ್ಥೆಯ ಅಡಕತ್ತರಿಗೆ ಸಿಕ್ಕಿದ ನಾವೆಲ್ಲ ಕುರಿಗಳಂತೆ ಧನಿ ಕುಗ್ಗಿಸಿ ತಲೆತಗ್ಗಿಸಿ ನಡೆಯುತ್ತೇವೆ. ಪ್ರತಿಭಟಿಸುವ ಆಂತರಿಕ ಚೈತನ್ಯವನ್ನು ಕಳೆದುಕೊಡಿರುವ ನಮ್ಮ ಮಾತುಗಳು ಕೇವಲ ಕಿರುಚಾಟ ರೇಗಾಟದ ಮಟ್ಟಕ್ಕೆ ನಿಂತುಬಿಡುತ್ತವೆ. ನಮಗೆ ದೀಪದ ದೌಲತ್ತು ಇಲ್ಲ, ಗಾಳಿಯ ಗಮ್ಮತ್ತು ಇಲ್ಲ. ನಮ್ಮನ್ನಾಳುವವರು ಕಟುಕರಾಗಿದ್ದಾರೆ. ಅವರ ಸುಖಕ್ಕಾಗಿ ಸಾಮಾನ್ಯಜನ ಉಗುಳು ನುಂಗಿ ಬದುಕನ್ನು ನಿಭಾಯಿಸುವ ದಯನೀಯತೆ ಒದಗಿರುವುದನ್ನು ಕವಿ ಹೇಳುತ್ತಾರೆ. ಇಂತಹ ದಯನೀಯತೆ ನಮಗೆ ಸಾವಿರಾರು ವರ್ಷಗಳಿಂದ ಹೇರಲ್ಪಟ್ಟ ರೂಢಿಗತ ದಿಗ್ಬಂಧನ ಗಳಿಗೆ ಒಳಗಾಗಿರುವುದನ್ನು ಕವಿ ಸೂಕ್ಷ್ಮವಾಗಿ ನಿರೂಪಿಸುತ್ತಾರೆ. ನಮ್ಮ ಪಂಥದ ಮುಕ್ತ ಶೈಲಿಯಲ್ಲಿದ್ದರೂ ಈ ಕವಿತೆ ತನ್ನ ಆಂತರಿಕ ಬಂಧಗಳ ಕಾರಣದಿಂದಾಗಿ ಓದುಗರ ಗಮನ ಸೆಳೆಯುತ್ತವೆ.


೩. ರಾಮನ್ ಸತ್ತ ಸುದ್ದಿ ( ಸಂಕಲನ : ನಾನೆಂಬ ಪರಕೀಯ )

ನಮ್ಮ ಸುತ್ತಲಿನ ಲೌಕಿಕ ಜಗತ್ತು ಅತ್ಯಂತ ಜಡವಾಗಿದೆ. ಸೂಕ್ಷ್ಮತೆಯ ಗ್ರಹಿಕೆಗಳ ಚೈತನ್ಯವನ್ನು ಕಳೆದುಕೊಂಡ ಈ ಜಡ ಜಗತ್ತಿಗೆ ತನ್ನ ಸುತ್ತ ಏನು ನಡೆಯುತ್ತಿದೆ ಎಂಬ ಪ್ರಜ್ಞೆ ಇಲ್ಲ. ಅದರಲ್ಲೂ ಭಾರತದ ಸಾಮಾಜಿಕ ಪರಿಸ್ಥಿತಿ ಹೀನಾಯವಾಗಿ ಜಡಗೊಂಡಿರುವುದನ್ನು ರಾಮನ್ ಸತ್ತ ಸುದ್ದಿ ಕವಿತೆಯಲ್ಲಿ ಕವಿ ನಿಸಾರ್ ಅಹಮದ್ ಪ್ರತಿಪಾದಿಸುತ್ತಾರೆ. ಸಾಮಾನ್ಯ ಜನ ತಮ್ಮ ಸುತ್ತ ನಡೆಯುವ ಯಾವ ವಿದ್ಯಮಾನಗಳ ಬಗ್ಗೆಯೂ ಅಷ್ಟಾಗಿ ತಲೆಕೆಡಿಸಿಕೊಳ್ಳಲಾರರು ಎಂಬುದಕ್ಕೆ ಈ ಕವಿತೆಯಲ್ಲಿ ಬರುವ ಹನುಮ ಸಾಕ್ಷಿಯಾಗುತ್ತಾನೆ. ಹನುಮ ಭಾರತದ ಅನಕ್ಷರಸ್ತ, ಶ್ರಮಿಕ ವರ್ಗಕ್ಕೆ ಸೇರಿದ ಶ್ರೀಸಾಮಾನ್ಯ ವ್ಯಕ್ತಿಯ ಪ್ರತಿನಿಧಿಯಾಗಿದ್ದಾನೆ. ಕವಿತೆಯ ನಿರೂಪಕನಿಗೆ ರಾಮನ್ ಸತ್ತ ಸುದ್ದಿ ಒಂದು ಆಘಾತಕಾರಿ ಸಂಗತಿ. ಹಳ್ಳಿಯ ಹಾಡುಗಳ ಅಶಾಸ್ತ್ರೀಯ ಗೀತದ ಮಟ್ಟುಗಳಲ್ಲಿ ಕಳೆದುಹೋದ ಹಾಗೂ ತನ್ನದೇ ರೀತಿಯ ದೈನಂದಿನ ಜೀವನದ ಕಟ್ಟುಪಾಡುಗಳಲ್ಲಿ ಮುಳುಗಿಹೋದ ಹನುಮನ ಅಶಿಕ್ಷಿತ ಅರಿವಿಗೆ ನಿರೂಪಕನ ತಳಮಳ ಅರ್ಥವಾಗುವುದಿಲ್ಲ. ಅವನಿಗೆ ಬಾಳುವ ಪ್ರಶ್ನೆ ದೊಡ್ಡದು. ಗದ್ದೆ, ಧಣಿ, ಹೆಂಡರು ಮಕ್ಕಳು, ದೇವರ ಗ್ರಾಮ್ಯ ಕಲ್ಪನೆ, ಊರಿನ ಪುಡಾರಿ ಇವಿಷ್ಟೇ ಅವನ ಜಗತ್ತು. ಇಷ್ಟರಲ್ಲೇ ಹನುಮ ಅಲ್ಪತೃಪ್ತನಾಗಿದ್ದಾನೆ. ಅವನಿಗೆ ರಾಮನ್ ಸತ್ತರು ಅಷ್ಟೇ, ರಸೆಲ್ ಸತ್ತರು ಅಷ್ಟೇ. ತನ್ನದಲ್ಲದ ಹೊರಜಗತ್ತಿನ ಸಾವು ನೋವು ಸಂಕಟಗಳು ಅವನನ್ನು ಬಾಧಿಸಲಾರವು. ಆಧುನಿಕ ವಿದ್ಯಾಭ್ಯಾಸದ ಪ್ರಭಾವದಲ್ಲಿರುವ ಮನುಷ್ಯನಲ್ಲಿ ಮೂಡುವ ನಿಜವಾದ ಆತಂಕಗಳನ್ನು ಈ ಕವಿತೆ ನಿರೂಪಿಸುತ್ತದೆ. ಅವಿದ್ಯೆ ಅಜ್ಞಾನಗಳ ಪರಂಪರಾಗತ ಮೌಢ್ಯಗಳಲ್ಲಿ ಸಿಲುಕಿದ ಅಸಂಖ್ಯ ಜನರ ಸೀಮಿತ ನಿಲುವುಗಳನ್ನು, ಜೀವನ ಕ್ರಮವನ್ನು ಕವಿ ಇಲ್ಲಿ ಪರಾಮರ್ಶನೆಗೆ ಒಳಗು ಮಾಡಿದ್ದಾರೆ. ಲೋಕಜ್ಞಾನ ಪಡೆದುಕೊಂಡವನ ಕಾಳಜಿ ಹಾಗೂ ತಲ್ಲಣಗಳಿಗಿಂತ ಲೋಕಜ್ಞಾನ ಪಡೆಯದವನ ಕಾಳಜಿ ಹಾಗೂ ತಲ್ಲಣಗಳು ವಿಭಿನ್ನವಾಗಿರುತ್ತವೆ ಎಂಬುದು ಈ ಕವಿತೆಯ ಮುಖ್ಯವಾದ ಗ್ರಹಿಕೆಯಾಗಿದೆ.


೪. ರಂಗೋಲಿ ಮತ್ತು ಮಗ ( ಸಂಕಲನ : ಅನಾಮಿಕ ಆಂಗ್ಲರು )

ಇಂಡಿಯಾದಲ್ಲಿ ಹಲವು ಸಂಸ್ಕೃತಿಗಳು ಇವೆ ಎಂದು ತಾತ್ವಿಕವಾಗಿ ನಂಬುವುದಾದರೂ ಕೂಡ, ಅವು ಒಂದು ಸೂರಿನ ಹಲವು ಕಂಬಗಳಂತೆ, ಒಂದರ ಪಕ್ಕ ಮತ್ತೊಂದು ಇವೆ ಎಂದು ತಿಳಿದಿರುವುದೇ ಹೆಚ್ಚು. ಆದರೆ ಈ ಹಲವು ಸಂಕೃತಿಗಳು ಒಂದು ಮರಕ್ಕೆ ಸುತ್ತಿಕೊಂಡು ಹಬ್ಬಿರುವ ಬಳ್ಳಿಗಳಂತೆ ಬೆರೆತಿವೆ. ಇಂಥ ಸಹಜ ಬೆರೆಯುವಿಕೆಯನ್ನು ಜಿಗುಟಾದ ಮತೀಯ ನಂಬಿಕೆಗಳು ತಡೆಯುತ್ತಿರುತ್ತವೆ. ಆದರೆ ತಡೆಯಲು ಆಗುವುದಿಲ್ಲ. ಈ ಪದ್ದಯ ಮಹತ್ವವೆಂದರೆ, ಹೀಗೆ ತಡೆಯಲಾಗದೆ ಬೆರೆಯಲು ತುಡಿಯುವ ಸಾಂಸ್ಕೃತಿಕ ಆಚರಣೆಗಳ ಮುಖಾಮುಖಿಯನ್ನು ಕಾಣಿಸುವುದು. ಅಂದರೆ `ಇದು ನಮ್ಮ ಧರ್ಮದ್ದು’ ಎಂದು ಸಂಪ್ರದಾಯಗಳನ್ನು, ಆಚರಣೆಗಳನ್ನು ಬಾಚಿ ಗಂಟು ಕಟ್ಟಿಕೊಂಡಂತೆಲ್ಲಾ, ಗಂಟು ಸಡಿಲವಾಗಿ, ಅದರೊಳಗಿನ ಕೈ ಮತ್ತೊಂದು ಗಂಟಿನೊಳಗಿನ ಕೈಯನ್ನು ಮುಟ್ಟಲು ಚಾಚುತ್ತಿರುತ್ತದೆ, ನಮ್ಮ ಹಿತ್ತಿಲ ಬಳ್ಳಿಗೆ ಎಷ್ಟು ಹೇಳಿಕೊಟ್ಟರೂ ಅದು ನೆರೆಮನೆಯ ಹಿತ್ತಲ ಬೇಲಿಯ ಮೇಲೆ ಹಬ್ಬಿ ಹೂಬಿಡಲು ತವಕಿಸುತ್ತದೆ. ಭಾರತದ ಸಂಕರಸಂಸ್ಕೃತಿಯ ವಿಶೇಷ ಶಕ್ತಿುದು. ಇದಕ್ಕೆ ಸಾಕ್ಷಿ ಸ್ವತಃ ಕವನದ ಭಾಷೆಯೇ! ಅಂದರೆ ಹಲವು ದಿಕ್ಕುಗಳಿಂದ ಬಂದ ಕ್ಯೂ, ದೌಲತ್ತು, ರಾಗ, ಚಿತ್ತಾರ, ಸೋನೆ-ಮೊದಲಾದ ಶಬ್ದಗಳು ಕೈಕೈ ಮಿಲಾುಸಿ, ಕವನದ ಅರ್ಥಕಟ್ಟುವ ಒಂದು ಕೆಲಸದಲ್ಲಿ ತೊಡಗಿರುವುದು. ಧಾರ್ಮಿಕ ಎಂದುಕೊಂಡ ಆಚರಣೆಗಳು ಕಲೆಯ ರೂಪ ತಾಳಿದಾಗ, ಧರ್ಮದ ಎಲ್ಲೆಯನ್ನು ದಾಟಿ ಅವು ಎಲ್ಲ ಜನರ ಮನಸ್ಸನ್ನು ಪ್ರವೇಶಿಸಿಬಿಡುತ್ತವೆ. ಮೊಹರಂ ಹಬ್ಬದ ಆಚರಣೆಗಳಂತೆ, ಇಲ್ಲಿ ರಂಗೋಲಿ. ಹಾಗಾಗಿ ಅದು ಖಾಲಿ ಮನಸ್ಸಿನ ಖೋಲಿಗಳ ಬೀಗ ತೆರೆದು ಭಾವಾವೇಗವನ್ನು ತುಂಬುತ್ತದೆ. ಕಲೆುಂದ ಸಾಧ್ಯವಾಗುವ ಮಾನವೀಯ ಪರಿಣಾಮವಿದು. ನಮ್ಮ ಜತೆ ಬಾಳುವ `ಅನ್ಯ’ ಸಂಸ್ಕøತಿಯ ಆಚರಣೆಗಳಿಗೆ ಪ್ರತಿಸ್ಪಂದಿಸುವಾಗ, ಬೇರೆ ಬೇರೆ ತಲೆಮಾರುಗಳ ವಿಭಿನ್ನ ವರ್ತನೆಗಳನ್ನು ದಾಖಲಿಸುವುದು ಕವಿತೆಯ ಮತ್ತೊಂದು ಅಯಾಮವಾಗಿದೆ `ಅನ್ಯ’ಕ್ಕೆಳಸದೆ ಮುಖದಿರುಹಿದ ಹಳೇ ತಲೆಮಾರಿನಿಂದ ಹಿಡಿದು, `ಅನ್ಯ’ದ್ದನ್ನು ಪ್ರೀತಿಸುವ ಅಥವಾ ಎಲ್ಲವನ್ನು ತನ್ನ ಕುತೂಹಲದಿಂದ ಪ್ರಶ್ನಿಸುವ ತಲೆಮಾರಿನ ತನಕ, ಈ ಪ್ರತಿಕ್ರಿಯೆಗಳ ಹರವು ಇದೆ. ಔಟ್‍ಹೌಸಿನ ಜನ ರಂಗೋಲಿ ಬಿಡಿಸಿದರೆ ಬಿರುನುಡಿಯ ದೌಲತ್ತು ತೋರುವ ಅಜ್ಜಿ; ಮಗ ಮನೆಯಲ್ಲಿ ರಂಗೋಲಿ ಬಿಡಿಸಿದರೆ ಕಾಫಿರನೆಂದು ಝಂಕಿಸುವ ತಾು; ರಂಗವಲ್ಲಿಗೆ ಬೆರಗಾಗಿ ಮನಸ್ಸನ್ನು ತೆತ್ತಿರುವ ನಿರೂಪಕ; `ನಮ್ಮಲ್ಲೇಕೆ ರಂಗೋಲಿ ಬಿಡಿಸುವುದಿಲ್ಲ? ಧರ್ಮಗ್ರಂಥಗಳಲ್ಲಿ ಹೇಳಿದಂತೆ ಆಚರಿಸಬೇಕೇ? ಆಚರಿಸುತ್ತಿದ್ದೇವೆಯೇ?’ ಎಂದೆಲ್ಲಾ ಪ್ರಶ್ನೆಗಳನ್ನೆಸೆಯುವ ನಿರೂಪಕನ ಮಗ-ಹೀಗೆ. ಎಳೆಯ ಮನಸ್ಸಿನ ಮುಗ್ಧತೆ ಎಲ್ಲ ಚೆಲುವಿಗೂ ಮಿಡಿಯುತ್ತದೆ; ಸಮಾಜವೇ ಮಾಡಿ ಹೂಡಿಕೊಂಡಿರುವ ಎಲ್ಲ ತೊಡಕಿನ ಗೋಡೆಗಳಾಚೆಗೆ ದಿಟ್ಟಿಹಾುಸಿ, ದಿಗಂತಗಳನ್ನು ನಿಟ್ಟಿಸುತ್ತದೆ. ಈ ಸಮಾಜವು ಜಟಿಲ ಎಂದು ತಿಳಿಯುವ ಸಮಸ್ಯೆಗಳನ್ನು ಶಿಶುಮುಗ್ಧತೆ ನೇರವಾಗಿ ಸರಳವಾಗಿ ನೋಡಬಲ್ಲುದು. ಜಾತಿ-ಧರ್ಮಗಳೆಂದು ಗೀಚಾಗದ ಗಾಜಿನಂಥ ಅದರ ಕಣ್ಣಿಗೆ ಕಾಣುವ ಸತ್ಯವು, ಶಾಸ್ತ್ರಗಳ ಕೃತಕ ನಿಯಮಗಳನ್ನು ಒಪ್ಪಿಕೊಂಡು ದ್ಟೃಯ ಪಾರದರ್ಶಕತೆ ಕಳೆದುಕೊಂಡಂಥ ಬೆಳೆದವರಿಗೆ ನಿಲುಕಲಾರದ ದರ್ಶನವಾಗಿ ಬಿಡುತ್ತದೆ. ಅಚ್ಚರಿಯ ಈ ಒಂದು ಮುಖವೇ ಪದ್ಯದಲ್ಲಿ ವಿಷಾದದ ಮತ್ತೊಂದು ಮುಖವಾಗಿದೆ. ಎಳೆಯ ತಲೆಮಾರಿನ ಕುತೂಹಲಗಳಿಗೆ ಹಿರಿಯ ತಲೆಮಾರು ಉತ್ತರಿಸಲಾಗದೆ ರೇಗುತ್ತದೆ; ಉತ್ತರಿಸಿದರೆ ಆ ಉತ್ತರದಲ್ಲಿ ವಿವರಣೆಯ ಗೆಣ್ಣು ಗಂಟುಗಳನ್ನೆಲ್ಲ ಹೆರೆದು ಸಾಪುಗೊಳಿಸುತ್ತಿದೆ. ಮಕ್ಕಳ ಸರಳ ಪ್ರಶ್ನೆಗಳು ಹಿರಿಯರ ಆತ್ಮಸಾಕ್ಷಿಯ ಕತ್ತು ಬೆಳೆದ ತಲೆಮಾರಿಗೆ ಅಮರಿಕೊಂಡಿದ್ದು ಹೇಗೆ? ಏಕೆ? . ಈ ತಲೆಮಾರು ಸೃಜನಶೀಲತೆಯ ಕುತೂಹಲವನ್ನು, ಮಾನವೀಯ ಮುಗ್ಧತೆಯನ್ನು ಪಡೆದುಕೊಳ್ಳುವುದು ಯಾವಾಗ? ಸಣ್ನ ವಿಷಯಗಳಿಗೆಲ್ಲ ರೇಗಿ ರಣರಂಗ ಮಾಡುವ, ಅನ್ಯದ್ದನ್ನು ಸಹಿಸದ ಈ ಬೆಳೆದ ತಲೆಮಾರು ಬಹುಸಂಸ್ಕೃತಿ ಗಳಿರುವ ನಾಡಿನಲ್ಲಿ ಸ್ಟೃಸಿರುವ ತಡೆಗಳು ಯಾವುವು? ಕಡೆಗೆ ಆ ತಡೆಗಳು ಕೊರಳ ಉರುಳಾಗುತ್ತಿವೆಯೇನು? ಈ ಬಗೆಯ ಸಾಂಸ್ಕೃತಿಕ ಪ್ರಶ್ನೆಗಳನ್ನು ಹುಟ್ಟುಹಾಕುವುದರಿಂದ ಕೂಡ ಕವಿತೆ ಮಹತ್ವದ್ದಾಗಿದೆ.


೫. ಮಾಸ್ತಿ ( ಸಂಕಲನ : ಸಂಜೆ ಐದರ ಮಳೆ )

ತಮ್ಮ ಸಮಕಾಲೀನ ಹಿರಿಯ ಲೇಖಕ ಮಾಸ್ತಿ ವೆಂಕಟೇಶ ಆಯ್ಯಂಗಾರ್ ಅವರನ್ನು ಕುರಿತು ಬರೆದ ಕವಿತೆ “ಮಾಸ್ತಿ”. ವ್ಯಕ್ತಿ ಚಿತ್ರಣ ಕಟ್ಟಿ ಕೂಡುವಲ್ಲಿ ನಿಸಾರ್ ಸಾಧಿಸಿದ ಕೌಶಲ್ಯವನ್ನು ಈ ಕವಿತೆಯಲ್ಲಿ ಕಾಣಬಹುದು. ಇದು ಮಾಸ್ತಿಯವರ ಒಂದುದಿನದ ದಿನಚರಿಯನ್ನು ಹಿನ್ನೆಲೆಯಾಗಿಟ್ಟುಕೊಂಡ ಕವಿತೆ. ಕೇವಲ ದಿನದ ದಿನಚರಿಗೆ ಮಾತ್ರ ಸೀಮಿತಗೊಳ್ಳದೆ ಮಾಸ್ತಿಯವರ ಸಂಪೂರ್ಣ ಬದುಕು, ಸ್ವಭಾವ, ವ್ಯಕ್ತಿತ್ವ, ನಡೆನುಡಿಗಳ ರೂಪ ಸ್ವರೂಪವನ್ನು ವಿವಿಧ ಕೋನಗಳಿಂದ ಅಳೆದು ಕವಿ ನಿಸಾರ್ ಕೊಡುತ್ತಾರೆ. ಈ ಕವಿತೆಯ ನಿರೂಪಕನಿಗೆ ಮಾಸ್ತಿ ಗಾಂಧಿಬಜಾರಿನಲ್ಲಿ ಎದುರಾಗುವ ಪ್ರಕ್ರಿಯೆಯು ಸೋಜಿಗದಂತಿದೆ. ಅವರ ಸಮಯ ಪರಿಪಾಲನೆಯಲ್ಲಿ ತೋರಿಸಿಕೊಡುತ್ತದೆ. ಮಾಸ್ತಿ ಎದುರಾಗಿ ಹಾದು ಹೋದಾಗಲೆಲ್ಲ ಹಳ್ಳಿಗಾಡಿನ ಕಡೆಯ ಸುಪ್ರಸನ್ನತೆ ನಗರಕ್ಕೆ ಸಂದಂತೆ ಭಾಸವಾಗುವುದನ್ನು ಸೂಚಿಸುತ್ತಾರೆ.  ಮಾಸ್ತಿ ವಾಸವಾಗಿದ್ದ ಬೆಂಗಳೂರಿನ ಗವಿಪುರಂ ಹಾಗೂ ಸಂಜೆ ಅವರ ತಮ್ಮ ಗೆಳೆಯರ ಸಂಸರ್ಗಕ್ಕಾಗಿ ನಡೆದು ಬರುತ್ತಿದ್ದ ಗಾಂಧಿಬಜಾರಿನ ಕ್ಲಬ್ಬನ್ನು ಈ ಕಾಲದ ಓದುಗನ ಕಣ್ಣಿಗೆ ಕಟ್ಟುವಂತೆ ಕವಿ ಚಿತ್ರಿಸುತ್ತಾರೆ. ಮಾಸ್ತಿಯವರನ್ನು ನೋಡುವುದೆಂದರೆ ಕಳೆದುಹೋದ ಜೀವನದೊಂದು ರೀತಿಯನ್ನು ಹಾಗೂ ಸರಳ ಸದಭಿರುಚಿಯ ಖ್ಯಾತಿಯನ್ನು ಸ್ಪರ್ಶಿಸಿದಂತೆ ಎಂದು ಹೇಳುವ ಮೂಲಕ ಅವರ ಬಗೆಗಿನ ಗೌರವ ಇಮ್ಮಡಿಗೊಳ್ಳುವಂತೆ ನಿಸಾರ್ ಈ ಕವಿತೆಯನ್ನು ಬರೆದಿದ್ದಾರೆ.


ಟಿಪ್ಪಣಿಗಳು : ಎಲ್.ಎನ್.ಮುಕುಂದರಾಜ್

ಕೃಪೆ : ಕರ್ನಾಟಕ ಸಾಹಿತ್ಯ ಅಕಾಡೆಮಿ


ಪ್ರತಿಕ್ರಿಯಿಸಿ