ಅಪಸ್ವರದಲ್ಲೂ ಲಯವನ್ನು ಅರಸಿದ ಇರ್ಫಾನ್

ಎಂದೂ ನೇರವಾಗಿ ನೋಡದ, ಮಾತನಾಡಿಸದ ಇರ್ಫ಼ಾನ್ ತರದವರು ’ಇನ್ನಿಲ್ಲ’ ಎಂದಾಗ ಆಗುವ ಆಘಾತ,ಅಚ್ಚರಿ ಅನಿರ್ವಚನೀಯ.

ಕೊಂಕು-ಕುಚೋದ್ಯರಹಿತ ವ್ಯಕ್ತಿತ್ವದ ಇರ್ಫ಼ಾನ್, ಧ್ವನಿಯ ಏರಿಳಿತ, ಕಣ್ಣ ಚಲನೆಗಳು, ಸ್ಪಷ್ಟ ಮುಖಭಾವ, ಸಂದರ್ಭ-ದೃಶ್ಯಕ್ಕೆ ಪೂರಕವಾದ ಸಂಭಾಷಣೆಗಳನ್ನು ಉಚ್ಛರಿಸುವಾಗ ಹಣೆಯ ಮೇಲೆ ಏರಿಳಿಯುವ ಗೆರೆಗಳು, ತಾನು ಮೂಲತಃ ಒಬ್ಬ ಇರ್ಫ಼ಾನ್ ಎಂಬುದನ್ನು ಮರೆತು ಪಾತ್ರದ ಕದ ತಟ್ಟಿ ಒಳಹೊಕ್ಕು ಆ ಪಾತ್ರವೇ ಆಗಿಬಿಡುವ ಪರಿ…ಕಲಾವಿದನಾಗಿ ನಮ್ಮ ಮನದಂತರಾಳಕ್ಕಿಳಿದು ನಮ್ಮವನೇ ಆದ ಇರ್ಫ಼ಾನ್, ನಾವು ನೇರವಾಗಿ ನೋಡದವ ಎಂದು ಅನಿಸಿದ್ದೇ ಇಲ್ಲ.

 

ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಕಲಿತ ಇರ್ಫ಼ಾನ್, ಅದಕ್ಕೂ ಮೊದಲು ಕ್ರಿಕೆಟ್ ನ ಪಟ್ಟುಗಳನ್ನು ಕಲಿತಿದ್ದ. ಹಣದ ಅಡಚಣೆ ಇಲ್ಲವಾದಲ್ಲಿ ಕ್ರಿಕೆಟ್ ಕಲಿಯಾಗಿ, ಆ ಕ್ರೀಡೆಯ ಗಜ-ಗೊಂಡಾಂತರಗಳಲ್ಲಿ ಕಳೆದುಹೋದ ಒಬ್ಬ ಮದನ್ ಲಾಲನೋ, ಕೀರ್ತಿ ಆಜ಼ಾದನೋ, ಮನೋಜ್ ಪ್ರಭಾಕರನೋ ಆಗಿಬಿಡುಬಹುದಾಗಿದ್ದ ಸಂಭಾವ್ಯವೊಂದು ತಪ್ಪಿಹೋಯಿತು. ಚಿತ್ರರಂಗಕ್ಕೆ ಅದು ದಕ್ಕಿತು. 

ಟೈರ್ ವ್ಯಾಪಾರ ಮಾಡುತ್ತಿದ್ದ ರಾಜಾಸ್ಥಾನದ ಮಧ್ಯಮವರ್ಗದ ಕುಟುಂಬದಿಂದ ಬಂದ ಇರ್ಫ಼ಾನ್, ೧೮ರ ಏರುಯೌವನದಲ್ಲಿ ತಂದೆಯನ್ನು ಕಳೆದುಕೊಂಡ. ತಾಯಿ ಸಂಸಾರದ ನೊಗ ಹೊತ್ತರು. ಜಯಪುರದ ವಿಶ್ವವಿದ್ಯಾಲಯದಿಂದ ಎಂ.ಎ. ಪಡೆದ ಇರ್ಫ಼ಾನ್, ನಂತರ ನೇರ ಎಡತಾಕಿದ್ದು ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯನ್ನು (NSD) . ಅತಿರಥ-ಮಹಾರಥರ ಒಡನಾಟ. ವಿದ್ಯಾರ್ಥಿ ದೆಸೆಯಲ್ಲಿ ಹಲವು ’ಪ್ರಾಜೆಕ್ಟ್’ಗಳಲ್ಲಿ ಭಾಗಿಯಾಗಿದ್ದ ಇರ್ಫ಼ಾನ್, ಶ್ರದ್ಧೆ, ಶ್ರಮಗಳಿಂದ ಅಭಿನಯವನ್ನು ಒಲಿಸಿಕೊಂಡ. ಮ್ಯಾಕ್ಸಿಂಗಾರ್ಕಿಯ ’The Lower Depths’ ನ ರೂಪಾಂತರವಾದ ’ತಲ್ ಘರ್’ ನಲ್ಲಿ ಬೀಗ ರಿಪೇರಿಮಾಡುವ ಶೋಷಿತನೊಬ್ಬನ ಪಾತ್ರ. ಜೀವನದಲ್ಲಿ ಕಹಿಯನ್ನೇ ಉಂಡವ. ತನ್ನ ಸತ್ತ ಮಡದಿಯ ಸಂಸ್ಕಾರಕ್ಕೆ ಹಣ ಕೂಡಿಸಲು, ಬೀಗರಿಪೇರಿಯ ಪರಿಕರಗಳನ್ನು ಮಾರುವ ಅನಿವಾರ್ಯತೆಗೆ ಸಿಲುಕುತ್ತಾನೆ. ಹೆಚ್ಚು ಸಂಭಾಷಣೆಗಳಿಲ್ಲದ ನಾಟಕದಲ್ಲಿ ಇರ್ಫ಼ಾನ್ ಭಾವನೆಗಳನ್ನು ಹೊರಹೊಮ್ಮಿಸಿದ ರೀತಿ, ಗಾಢಮೌನವೊಂದನ್ನು ಸೃಷ್ಟಿಸಿತ್ತು.

The Ascent of Mount Fuji’ ಮೂಲನಾಟಕದ ಭಾರತೀಯ ರೂಪಾಂತರವಾದ, ಪ್ರಸನ್ನರ ಕೊಡುಗೆಯಾದ ’ಫುಜಿಯಾಮಾ’, ಇರ್ಫ಼ಾನ್ ತನ್ನ ಕಲೆಯಬೇರುಗಳನ್ನು ಮತ್ತಷ್ಟು ಆಳವಾಗಿ ಅನ್ವೇಷಿಸಲು ಪ್ರೇರೇಪಿಸಿತು. ಈ ನಾಟಕ ಎಷ್ಟು ಪರಿಣಾಮಕಾರಿಯಾಗಿತ್ತೆಂದರೆ, ಪ್ರೇಕ್ಷಕರಲ್ಲಿ ಒಬ್ಬರಾಗಿದ್ದ ತಿಗ್ಮಾನ್ಷು ಧುಲಿಯಾರನ್ನು ಎನ್.ಎಸ್.ಡಿ ಗೆ ಸೇರಲು ಪ್ರೇರೇಪಿಸಿತು. ಇದೇ ತಿಗ್ಮಾನ್ಷು ಮುಂದೆ ಇರ್ಫ಼ಾನ್ ಗೆ ’ಹಾಸಿಲ್’ ಮತ್ತು ’ಪಾನ್ ಸಿಂಗ್ ತೊಮರ್’ ಚಿತ್ರಗಳನ್ನು ನಿರ್ದೇಶಿಸಿದರು.

ಪ್ರಸನ್ನರೊಂದಿಗೆ ಇರ್ಫ಼ಾನ್, ಬದನವಾಳಿನಲ್ಲಿ

ಹಾಗೆಂದು ನಟನೆ ಕಲಿತೊಡನೆಯೇ ಅವಕಾಶಗಳು ಹುಡುಕಿಕೊಂಡು ಬರಲಿಲ್ಲ. ಮುಂಬೈ ಕದ ತಟ್ಟಿದ ಇರ್ಫ಼ಾನ್, ಹೊಟ್ಟೆಪಾಡಿಗೆ ಏ.ಸಿ. ಮೆಕ್ಯಾನಿಕ್ ಆದ. ೧೯೮೭ ರ ವರೆಗೂ ಕಾದ. ಮಿರಾ ನಾಯರ್ ತಮ್ಮ ’ಸಲಾಮ್ ಬಾಂಬೆ’ ಯಲ್ಲಿ ಒಂದು ಗಮನಾರ್ಹವೆನಿಸದ ಪಾತ್ರವೊಂಡನ್ನು ನೀಡಿದರು. ಇರ್ಫ಼ಾನ್ ನ ದುರಾದೃಷ್ಟ…ಅವನು ಅಭಿನಯಿಸಿದ ದೃಶ್ಯಗಳನ್ನು ಕಟ್ ಮಾಡಿ ಎಸೆಯಲಾಯಿತು. ಎದೆಗುಂದದ ಇರ್ಫ಼ಾನ್ ಮತ್ತೆ ಕಾದ. ಮಿಖಾಯಿಲ್ ಶಕ್ರೋವ್ ನ ಕೃತಿ ಅಧರಿಸಿದ್ದ ’ಲಾಲ್ ಘಾಸ್ ಪರ್ ನೀಲೆ ಗೋಡೆ’ ಎಂಬ ಟೆಲಿ-ನಾಟಕದಲ್ಲಿ ಲೆನಿನ್ ಪಾತ್ರವನ್ನು ಹುಬ್ಬೇರಿಸುವಂತೆ ಅಭಿನಯಿಸಿದ್ದ. ಪುಣೆ ಶಾಲೆಯಲ್ಲಿ ಸಿನಿಮಾ ಪಟ್ಟು ಕಲಿತಿದ್ದ ಜಲಾಲ್ ಆಘಾ, ದೂರದರ್ಶನಕ್ಕಾಗಿ ’ಕಹ್ ಕಶಾನ್’ ಸರಣಿಗೆ ತಯಾರಾಗುತ್ತಿದ್ದರು.  ಉರ್ದು ಕವಿ ಅಲಿ ಸರ್ದಾರ್ ಜಾಫ್ರಿ, ಖ್ಯಾತ ಉರ್ದು ಕವಿಗಳ ಜೀವನ-ಸಾಹಿತ್ಯವನ್ನು ಸಾಮಾನ್ಯ ಪ್ರೇಕ್ಷಕನಿಗೆ ತಲುಪಿಸುವ ಇರಾದೆ ಹೊಂದಿದ್ದರು. ಅವರು ಆಳವಾಗಿ ಸಂಶೋಧಿಸಿ ಬರೆದ ’ಕಹ್ ಕಶಾನ್’ ನಲ್ಲಿನ ಮಾರ್ಕ್ಸ್ ವಾದಿ ಉರ್ದು ಕವಿ ಮಖ್ದೂಮ್ ಮೋಹಿಯುದ್ದೀನ್ ಪಾತ್ರ ಇರ್ಫ಼ಾನ್ ಪಾಲಾಯಿತು. ಆಘಾ-ಸರ್ದಾರ್ ಜಾಫ್ರೀ ಇಬ್ಬರಿಂದಲೂ ಇರ್ಫ಼ಾನ್ ಗೆ ’ಭೇಷ್’ಗಿರಿ ಸಿಕ್ಕಿತು.

ಕಹ್ ಕಶಾನ್ ನ ಒಂದು ದೃಶ್ಯ

 

ಸ್ಟಾರ್ ಪ್ಲಸ್ ನ ಕೆಲವು ಸರಣಿಗಳಲ್ಲಿ ಅಭಿನಯಿಸಿದ ಇರ್ಫ಼ಾನ್ ಗೆ ಅಪಾರ ಜನಪ್ರಿಯತೆ ತಂದುಕೊಟ್ಟಿದ್ದು ದೂರದರ್ಶನದಲ್ಲಿ ಪ್ರಸಾರವಾದ, ’ಚಾಣಕ್ಯ’, ’ಚಂದ್ರಕಾಂತಾ’, ’ಭಾರತ್ ಏಕ್ ಖೋಜ್’, ’ಬನೇಗಿ ಅಪ್ನಿ ಬಾತ್’ ಟೆಲಿ ಸರಣಿಗಳು. 

ಆದರೆ ಇರ್ಫ಼ಾನ್ ಸಿನಿಮಾದಲ್ಲಿನ ಅವಕಾಶಕ್ಕಾಗಿ ಹಾತೊರೆಯುತ್ತಿದ್ದ. ಚಿತ್ರರಂಗದಲ್ಲಿ ಏನಾದರೂ ಸಾಧಿಸಬೇಕೆಂಬ ಅಚಲ ಆಕಾಂಕ್ಷೆಯೊಂದು ಅವನಲ್ಲಿ ಸದಾ ಜಾಗೃತವಾಗಿತ್ತು.  ಅವಕಾಶ ಬರಲಾರಂಭಿಸಿತು. ಸುಭಾಷ್ ಮುಖೋಪಾಧ್ಯಾಯ್ ಎಂಬ ಮಹಾನ್ ಪ್ರತಿಭಾವಂತ ವೈದ್ಯನ ದುರಂತ ಜೀವನ ಆಧರಿಸಿದ, ತಪನ್ ಸಿನ್ಹಾ ನಿರ್ದೇಶಿಸಿದ ’ಏಕ್ ಡಾಕ್ಟರ್ ಕಿ ಮೌತ್’ ಹಾಗೂ ಬಸು ಚಟರ್ಜೀ ನಿರ್ದೇಶನದ ’ಕಮಲಾ ಕಿ ಮೌತ್’ ಚಿತ್ರಗಳು ಒಂದರ ಹಿಂದೆ ಒಂದು ಬಂದವು. ಇರ್ಫ಼ಾನ್ ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡ. ಮುಂಬರುವ ದಿನಗಳಿಗಾಗಿ ವಿಶ್ವಾಸದಿಂದ ಎದುರುನೋಡುತ್ತಿದಂತೆಯೇ, ಬ್ರಿಟಿಷ್ ಸಂಜಾತ ಭಾರತೀಯ ಅಸಿಫ್ ಕಪಾಡಿಯಾ ನಿರ್ದೇಶಿಸಿದ ’ದ ವಾರಿಯರ್’ ನಲ್ಲಿ ಗಮನಾರ್ಹ ಪಾತ್ರವೊಂದು ಸಿಕ್ಕಿತು. ಬ್ರಿಟನ್-ಫ಼್ರಾನ್ಸ್-ಜರ್ಮನಿಯ ಪ್ರತಿಷ್ಟಿತ ನಿರ್ಮಾಪಕರು ಹಣ ಹೂಡಿದ್ದ ’ದ ವಾರಿಯರ್’ ನಲ್ಲಿ ಇರ್ಫ಼ಾನ್ ರಾಜಾಸ್ಥಾನದ ಫ್ಯೂಡಲ್ ಸೈನ್ಯದ ಯೋಧನ ಪಾತ್ರದಲ್ಲಿ ಪರಕಾಯಪ್ರವೇಶ ಮಾಡಿದ್ದ. ಯುದ್ಧ-ರಕ್ತಪಾತಗಳಿಂದ ಬೇಸೆತ್ತು, ಕತ್ತಿ ಕೆಳಗಿಟ್ಟು ಶಾಂತಿ ಅರಸುವ ಯೋಧ, ತನ್ನ ಮಗನ ಹತ್ಯೆಯಾಗುವುದನ್ನು ಕಾಣಬೇಕಾಗುತ್ತದೆ. ಯೋಧನ ಹಳೆಯ ಸಹಚರರು ದ್ವೇಷ ಸಾಧಿಸಿರುತ್ತಾರೆ. ಆದರೆ ಯೋಧ ತನ್ನ ಕತ್ತಿ ಮುಟ್ಟದ ನಿರ್ಧಾರಕ್ಕೆ ಬದ್ಧ. ಆ ದುರಂತ ಸನ್ನಿವೇಶದಲ್ಲಿ ಯೋಧನ ಸ್ಪಂದನೆ ಮಾರ್ಮಿಕವಾಗಿರುತ್ತದೆ. ’ದ ವಾರಿಯರ್’ ಇರ್ಫ಼ಾನ್ ಗೆ ರಾಷ್ಟ್ರ-ಅಂತರರಾಷ್ಟ್ರೀಯ ಖ್ಯಾತಿ ತಂದಿತ್ತಿತು.

ದ ವಾರಿಯರ್

ಇರ್ಫ಼ಾನ್ ನಲ್ಲಿದ್ದ ದೈತ್ಯ ಕಲಾವಿದನನ್ನು ಹೊರಹೊಮ್ಮಿಸಿದ ಮತ್ತೊಂದು ಪ್ರಮುಖ ಚಿತ್ರ ’ಮಕ್ಬೂಲ್’. ಷೇಕ್ಸ್ ಪಿಯರನ ’ಮ್ಯಾಕ್ ಬೆತ್’ ಆಧರಿಸಿ ವಿಶಾಲ್ ಭಾರದ್ವಾಜ್ ಚಿತ್ರಿಸಿದ ಈ ಚಿತ್ರದಲ್ಲಿ, ಪಂಕಜ್ ಕಪೂರ್, ನಾಸಿರುದ್ದೀನ್, ಓಮ್ ಪುರಿ ಯಂತಹ ದೈತ್ಯರ ನಡುವೆಯೂ ಇರ್ಫ಼ಾನ್ ತನ್ನ ತನ ಸಾಧಿಸಿದ್ದ. ಟಬು ಅಭಿನಯವೂ ಸ್ಮರಣೀಯ. ಕತ್ತಲಲೋಕದಲ್ಲಿನ ಸ್ವೇಚ್ಚೆಯ ಸುತ್ತಾಟ, ಈರ್ಷ್ಯೆ, ಕಾಮ, ದ್ವೇಷ, ನಿಷ್ಟೆ, ವಿಶ್ವಾಸಘಾತತನ, ಅಪರಾಧೀ ಪ್ರಜ್ಞೆಗಳ ಮಿಳಿತವಿದ್ದ ’ಮಕ್ಬೂಲ್’, ಮೂಲ ಮ್ಯಾಕ್ ಬೆತ್ ಗೆ ಸರಿಸಮವಲ್ಲದಿರಬಹುದು..ಆದರೆ ಸಿನಿಮಾ ಭಾಷೆಗೆ ಮ್ಯಾಕ್ ಬೆತ್ ನನ್ನು ಪರಿಣಾಮಕಾರಿಯಾಗಿ ಅಳವಡಿಸಿದ ಉತ್ತಮ ಪ್ರಯತ್ನಗಳಲ್ಲೊಂದು. ನಿಮ್ಮಿ (ಟಬು) ಮಕ್ಬೂಲ್ (ಇರ್ಫ಼ಾನ್) ನನ್ನು, ಅಬ್ಬಾಜಿಯ (ಪಂಕಜ್ ಕಪೂರ್) ವಿರುದ್ಧ ಹೆಣೆಯುವ ಸಂಚು ಆರಂಭಿಸಿದಾಗ ಉಂಟಾಗುವ ಮಾನಸಿಕ ಅಭದ್ರತೆಯನ್ನು ವ್ಯಕ್ತಪಡಿಸುವ ಪರಿ, ವಿಶ್ವಾಸಘಾತಕನಾಗಬೇಕಾದ ತೀವ್ರ ಒತ್ತಡ, ಆದರೆ ಅನಿವಾರ್ಯತೆ, ಅಬ್ಬಾಜಿಯ ಕೊಲೆಯ ನಂತರ ಭೂತದಂತೆ ಸುತ್ತಿಕೊಳ್ಳುವ ಪಾಪಪ್ರಜ್ಞೆಯ ಆ ಕ್ಷಣಗಳನ್ನು ಇರ್ಫ಼ಾನ್ ಅನುಭವಿಸಿ ಅಭಿನಯಿಸಿದ್ದ. ಕಮಲ ಹಾಸನ್ ಪಾಲಾಗಬೇಕಿದ್ದ ಆ ಪಾತ್ರವನ್ನು ನಾಸಿರುದ್ದೀನ್, ಇರ್ಫ಼ಾನ್ ಪಾಲಾಗಿಸಿದರು. ’ಕಮಲ್ ಬಂದರೆ ನಾನಿಲ್ಲ. ನಿನ್ನಿಷ್ಟ’ ಎಂದು ನಾಸಿರುದ್ದೀನ್, ವಿಶಾಲ್ ರನ್ನು ಬೆದರಿಸಿದ್ದರು. ಪಂಕಜ್, ಓಮ್ ಪುರಿ, ನಾಸಿರುದ್ದೀನ್, ಪೀಯೂಶ್ ಮಿಶ್ರಾ, ಇರ್ಫ಼ಾನ್ ಎಲ್ಲರೂ ದೆಹಲಿಯ ಎನ್ ಎಸ್ ಡಿಯ ಕೊಡುಗೆಗಳೇ. ಆ ಗುಂಪಿನಲ್ಲೇ ಅತ್ಯಂತ ಕಿರಿಯವ ಇರ್ಫ಼ಾನ್.  

ಮಕ್ಬೂಲ್ ಚಿತ್ರದ ದೃಶ್ಯ

ಷೇಕ್ಸ್ ಪಿಯರ್ ನ ’ಹ್ಯಾಮ್ಲೆಟ್’ ಕೃತಿಯನ್ನು ತೆರೆಗೆ ಅಳವಡಿಸಿದ್ದೂ ಇದೇ ವಿಶಾಲ್ ಭಾರದ್ವಾಜ್. ’ಮಕ್ಬೂಲ್’ ಗಿಂತ ಇದು ಹೆಚ್ಚು ಸವಾಲು ಒಡ್ಡಿತು. ೧೯೯೫ರ ಸಮಯದಲ್ಲಿನ ಕಾಶ್ಮೀರದಲ್ಲಿನ ತೀವ್ರ ಪ್ರತಿಭಟನೆ, ಅಶಾಂತಿ, ನಾಗರಿಕರ ಕಣ್ಮರೆ ಅಥವಾ ಅಪಹರಣ , ನಿಯಂತ್ರಣಕ್ಕೆ ಸಿಕ್ಕದ ಉಗ್ರಚಟುವಟಿಕೆಗಳ ಹಿನ್ನಲೆಯಲ್ಲಿ ’ಹ್ಯಾಮ್ಲೆಟ್’ ಮತ್ತು ನ್ಯೂಯಾರ್ಕ್ ಟೈಮ್ಸ್ ನ ರಾಜಕೀಯ ವಿಶ್ಲೇಷಕ ಬಷರತ್ ಪೀರ್ ಬರೆದ “Curfewed Night” ಕೃತಿಗಳನ್ನು ಆಧರಿಸಿ ವಿಶಾಲ್, ಕಾಶ್ಮೀರ ಸಮಸ್ಯೆಗೆ ಹೊಂದುವಂತೆ ’ಹ್ಯಾಮ್ಲೆಟ್’ ಬೆಸೆದರು. ಬಷರತ್ ಕೂಡಾ ಈ ಚಿತ್ರಕ್ಕೆ ಸ್ಕ್ರಿಪ್ಟ್ ಬರೆದರು. ವಿಶಾಲ್ ರ ಚಿತ್ರಗಳಲ್ಲೇ ’ಹೈದರ್’ ಗೆ ವಿಶಿಷ್ಟ ಸ್ಥಾನವಿದೆ.  ಮೂಲ ಹ್ಯಾಮ್ಲೆಟ್ ನಲ್ಲಿ ರಾಜಾ ಹ್ಯಾಮ್ಲೆಟ್ ನ ಪ್ರೇತವೊಂದರ ಪಾತ್ರ ಬರುತ್ತದೆ. ಅದರ ತದ್ರೂಪು ಪಾತ್ರ ’ರೂಹ್ ದಾರ್’ ಆಗಿ ಇರ್ಫ಼ಾನ್ ಅಭಿನಯ ಸ್ಮರಣೀಯವಾಗಿದೆ. ಈ ಚಿತ್ರದಲ್ಲಿ ಕೆ.ಕೆ.ಮೆನನ್ (ಖುರ್ರಮ್ ಮೀರ್, ಮೂಲ ಹ್ಯಾಮ್ಲೆಟ್ ನ ’ಕ್ಲಾಡಿಯಸ್’) ರಷ್ಟು ಇರ್ಫ಼ಾನ್ ಪಾತ್ರ ಕಾಣಿಸುವುದಿಲ್ಲ. ಆ ಪಾತ್ರವೇ ಅಂತಹದ್ದು. ಕಣ್ಮರೆಯಾದ ತನ್ನ ತಂದೆಯನ್ನು ಹುಡುಕುತ್ತಾ ಹೈರಾಣಾಗುವ ಹೈದರ್ ಗೆ ಮರುಭೂಮಿಯ ಓಯಸಿಸ್ ನಂತೆ ರೂಹ್ ದಾರ್ ಸಿಗುತ್ತಾನೆ. ರೂಹ್ ದಾರ್, ಹೈದರ್ ನ ತಂದೆ ಹಿಲಾಲ್ ಮಿರ್ ನನ್ನು ಸೆರೆಮನೆಯೊಂದರಲ್ಲಿ ಭೇಟಿಯಾಗಿ, ನಂತರ ಆಪ್ತನಾಗಿರುತ್ತಾನೆ.. ಹೈದರ್ ಚಿಕ್ಕಪ್ಪ (ಖುರ್ರಮ್)ನ ಷಡ್ಯಂತ್ರವೊಂದಕ್ಕೆ ಸಿಲುಕಿ ’ಉಗ್ರ’ನ ಪಟ್ಟ ಹೊತ್ತು ಬಂಧಿತನಾಗುವ ಹಿಲಾಲ್, ಕೊನೆಗೆ ಭೀಕರವಾಗಿ ಕೊಲೆಯಾಗಿರುತ್ತಾನೆ. ರೂಹ್ ದಾರ್ ಅದೃಷ್ಟವಶಾತ್ ಬದುಕುಳಿದಿರುತ್ತಾನೆ. ಈಗ ರೂಹ್ ದಾರ್ ಪ್ರತ್ಯೇಕತಾವಾದಿಗಳ ಗುಂಪೊಂದರ ಸದಸ್ಯ. ಆಕ್ರೋಶಕ್ಕೊಳಗಾಗದೇ, ತಣ್ಣನೆಯ ಪ್ರತಿಕ್ರಿಯೆಗಳಿಂದಲೇ ಹೈದರ್ ನನ್ನು ಸೇಡಿಗೆ ಹುರಿದುಂಬಿಸುವ, ಸೇಡು ತೀರುವವರೆಗೂ ಹೈದರ್ ನ ಬೆನ್ನತ್ತುವ ’ರೂಹ್ ದಾರ್’, ಇರ್ಫ಼ಾನ್ ನಿರ್ವಹಿಸಿದ ಸ್ಮರಣೀಯ ಪಾತ್ರಗಳಲ್ಲೊಂದು.

ಹೈದರ್ ನ ರೂಹ್ದಾರ್

 

ಇರ್ಫ಼ಾನ್ ನಲ್ಲಿನ ಅಪ್ರತಿಮ ಹಾಸ್ಯಪ್ರಜ್ಞೆಗೆ ದ್ಯೋತಕವಾಗಿ ನಿಲ್ಲುವುದು , ’ಪಿಕು’ವಿನ ಟ್ಯಾಕ್ಸೀ ಮಾಲೀಕ ’ರಾಣಾ ಸರ್ಕಾರ್’ ಪಾತ್ರ. ಮಲಬದ್ಧತೆಯಿಂದ ನರಳುತ್ತಿರುವ ಭಾಶ್ಕೋರ್ (ಭಾಸ್ಕರ್) ಬ್ಯಾನರ್ಜೀ (ಅಮಿತಾಭ್ ಬಚ್ಚನ್), ಮುಂಗೋಪಿ ಮಗಳು ಪಿಕು (ದೀಪಿಕಾ ಪಡುಕೋಣೆ) ನಡುವೆ ಸಿಕ್ಕು ನಲುಗುವ ರಾಣಾ, ಭಾಶ್ಕೋರ್ ಗೆ ಜೀವನ ಪ್ರೀತಿ ಕಲಿಸುತ್ತಾನೆ.  ದೆಹಲಿಯಿಂದ ಕೊಲ್ಕೊತ್ತೆಗೆ ರಸ್ತೆಯ ಮೇಲಿನ ಪಯಣವೇ ಒಂದು ರೂಪಕವಾಗಿ ಮೂಡಿಬಂದಿದೆ. ಆ ಪಯಣದ ಸಾರಥಿ, ಟ್ಯಾಕ್ಸಿಯ ಡ್ರೈವರ್ ರಾಣಾನ ಪಾತ್ರವನ್ನು ಕಟ್ಟಿಕೊಟ್ಟ ಲೇಖಕಿ ಜೂಹಿ ಚತುರ್ವೇದಿ ಹಾಗೂ ನಿರ್ದೇಶಕ ಷೂಜಿತ್ (ಸುಜಿತ್) ಸರ್ಕಾರ್ ಕೂಡಾ ಪ್ರಶಂಸಾರ್ಹರು.

 ಇರ್ಫ಼ಾನ್ ನ ಪ್ರತಿಭೆಗೆ ಕಳಸವಿಟ್ಟ ಅವಿಸ್ಮರಣೀಯ ಪಾತ್ರ ’ಪಾನ್ ಸಿಂಗ್ ತೊಮರ್’. ಭಾರತೀಯ ಸೈನ್ಯದಲ್ಲಿದ್ದ  ಇದೇ ಹೆಸರಿನ ಸೈನಿಕನೊಬ್ಬನ ನಿಜಜೀವನ ಆಧರಿಸಿದ ಈ ಚಿತ್ರದ ನಿರ್ದೇಶಕ ತಿಗ್ಮಾಂಶು ಧೂಲಿಯಾ. ಈತ ಕೂಡಾ ಇರ್ಫ಼ಾನ್ ನಂತೆ ದೆಹಲಿಯ ಎನ್.ಎಸ್.ಡಿ ಯ ಕೊಡುಗೆಯೇ. ಸೈನಿಕ ಪಾನ್ ಸಿಂಗ್, ಒಬ್ಬ ಶ್ರೇಷ್ಟ ಅಥ್ಲೀಟ್. ರಾಷ್ಟ್ರೀಯ ಕ್ರೀಡಾ ಕೂಟದಲ್ಲಿ ಚಿನ್ನದ ಪದಕ ಪಡೆದ ಪಾನ್ ಸಿಂಗ್, ವ್ಯವಸ್ಥೆಯ ವಿರುದ್ಧ ತಿರುಗಿಬೀಳುವುದೇ ಒಂದು ಅಪರಾಧವಾಗಿಬಿಡುತ್ತದೆ. ಏಳು ವರ್ಷಗಳ ಕಾಲ ೩೦೦೦ ಮೀಟರ್ ’ಸ್ಟೀಪಲ್ ಚೇಸ್’ (ಹಳ್ಳಿಗಾಲೋಟ) ಎಂಬ ಕ್ಲಿಷ್ಟಕರ ಅಥ್ಲೆಟಿಕ್ ಕ್ರೀಡೆಯಲ್ಲಿ ಚಿನ್ನದ ಪದಕ ಗೆದ್ದು, ಸೈನ್ಯದ ಹೆಮ್ಮೆ ಎನಿಸುವ ಪಾನ್ ಸಿಂಗ್, ಸೈನ್ಯದಲ್ಲಿ ಸುಬೇದಾರ್ ಮಟ್ಟದವರೆಗೂ ಬೆಳೆಯುತ್ತಾನೆ.

ಆದರೆ ೧೯೬೨ರಲ್ಲಿ ನಡೆಯುವ ಯುದ್ಧದಲ್ಲಿ ಪಾಲ್ಗೊಳ್ಳಲು ಆಗುವುದಿಲ್ಲ. ಕಾರಣ, ’ಕ್ರೀಡಾಪಟುಗಳು ಯುದ್ಧದಲ್ಲಿ ಪಾಲ್ಗೊಳ್ಳುವಂತಿಲ್ಲ’ ಎಂಬ ನಿಯಮದ ಹೇರಿಕೆ. ಮೊದಲ ಬಾರಿ, ಪಾನ್ ಸಿಂಗ್ ಗೆ ವ್ಯವಸ್ಥೆಯ ಮೇಲೆ ಜಿಗುಪ್ಸೆ ಏರ್ಪಡುತ್ತದೆ. ದುರದೃಷ್ಟ ಪಾನ್ ಸಿಂಗ್ ಗಾಗಿ ಹೊಂಚುತ್ತಿರುತ್ತದೆ. ಗ್ರಾಮದಲ್ಲಿ ತನ್ನ ದುಷ್ಟ ಬಂಧುವೊಬ್ಬ ಪಾನ್ ಸಿಂಗ್ ಗೆ ಸೇರಿದ ಜಮೀನನ್ನು ಕಬಳಿಸಿರುತ್ತಾನೆ. ಸೈನ್ಯದಿಂದ ನಿವೃತ್ತಿ ಪಡೆದು ಪಾನ್ ಸಿಂಗ್, ಹಿರಿಯ ಅಧಿಕಾರಿಗಳು ಎಷ್ಟೇ ವಿನಂತಿಸಿಕೊಂಡರೂ ಕೇಳದೇ ಗ್ರಾಮಕ್ಕೆ ಬಂದು ಸೇರುತ್ತಾನೆ.

 ಗ್ರಾಮದಲ್ಲಿ ಯಾರ ಸಹಾಯವೂ ಅವನಿಗೆ ಸಿಗುವುದಿಲ್ಲ. ಸರ್ಕಾರಿ ಅಧಿಕಾರಿಗಳು ಕೈಚೆಲ್ಲಿ ಕುಳಿತುಕೊಳ್ಳುತ್ತಾರೆ. ಪೊಲೀಸರು ತಾವೇನೂ ಮಾಡಲು ಸಾಧ್ಯವಿಲ್ಲ ಎಂದುಬಿಡುತ್ತಾರೆ. ಪಾನ್ ಸಿಂಗ್ ಮಗನ ಮೇಲೆ ಭೀಕರ ಹಲ್ಲೆ ನಡೆಯುತ್ತದೆ. ಪಾನ್ ಸಿಂಗ್ ಮೇಲೂ ಹಲ್ಲೆಗಳಾಗುತ್ತವೆ. ದುಷ್ಟ ಬಂಧು, ಪಾನ್ ಸಿಂಗ್ ನ ಸಂಸಾರವನ್ನೇ ನಾಮಾವಶೇಷ ಮಾಡಲು ಯೋಜನೆ ರೂಪಿಸುತ್ತಾನೆ.  ಪಾನ್ ಸಿಂಗ್ ಮತ್ತು ಬಂಧುಗಳು ಹೇಗೋ ತಪ್ಪಿಸಿಕೊಂಡರೂ, ಅವನ ತಾಯಿ ಭೀಕರವಾಗಿ ಕೊಲೆಗೀಡಾಗುತ್ತಾಳೆ.

 ಪಾನ್ ಸಿಂಗ್ ಸಂಯಮ ಕಳೆದುಕೊಳ್ಳುತ್ತಾನೆ. ದುಷ್ಟ ಬಂಧುವಿನ ವಿರುದ್ಧ ತನ್ನದೇ ಪಡೆ ಕಟ್ಟಿಕೊಂಡು, ಸೇಡಿನ ಛಲಹೊತ್ತು ಚಂಬಲ್ ಕಣಿವೆಯಲ್ಲಿ ಅದೃಶ್ಯನಾಗುತ್ತಾನೆ. ಶ್ರೀಮಂತರ ಸುಲಿಗೆ, ಅಪಹರಣ, ಮದ್ದು-ಗುಂಡು-ಬಂದೂಕಗಳ ಶೇಖರಣೆಯೇ ಮೊದಲಾದ ಹಿಂಸಾತ್ಮಕ ಕೃತ್ಯಗಳು ಆರಂಭವಾಗುತ್ತದೆ. ಸಾಕಷ್ಟು ಶಸ್ತ್ರಾಸ್ತ್ರ ಶೇಖರಣೆಯಾದಮೇಲೆ, ತನ್ನ ಆ ದುಷ್ಟಬಂಧುವನ್ನು ಪಾನ್ ಸಿಂಗ್ ಕೊಲ್ಲುತ್ತಾನೆ. ಏಳು ಜನ ಗ್ರಾಮಸ್ಥರೂ ಪೊಲೀಸ್ ಬೇಹುಗಾರಿಕೆ ಮಾಡಿದ ತಪ್ಪಿಗಾಗಿ ಪಾನ್ ಸಿಂಗ್ ಪಡೆಯ ಗುಂಡಿಗೆ ಬಲಿಯಾಗುತ್ತಾರೆ. ಇಡೀ ದೇಶದಲ್ಲಿ ಈ ಘಟನೆಗಳ ಸರಮಾಲೆ ಅಲ್ಲೋಲ-ಕಲ್ಲೋಲ ಸೃಷ್ಟಿಸುತ್ತದೆ. ಈ ನಡುವೆ ಪತ್ರಕರ್ತನೊಬ್ಬ ಪಾನ್ ಸಿಂಗ್ ನನ್ನು ಸಂದರ್ಶಿಸಿ, ಅದರ ವರದಿಯನ್ನು ಪ್ರಕಟಿಸುತ್ತಾನೆ..ಕೆಲದಿನಗಳ ನಂತರ ಪೊಲೀಸರೊಂದಿಗೆ ಕೈ ಜೋಡಿಸುವ ಪಾನ್ ಸಿಂಗ್ ನ ಆಪ್ತ ಗೋಪಿ (ನವಾಜ಼ುದ್ದೀನ್ ಸಿದ್ದಿಕಿ), ಪಾನ್ ಸಿಂಗ್ ನ ಬಗ್ಗೆ ಎಲ್ಲಾ ಮಾಹಿತಿಗಳನ್ನೂ ತಿಳಿಸಿಬಿಡುತ್ತಾನೆ.

 

ಚಿತ್ರದ ಅಂತ್ಯ ಎಣೆಸಿದಂತೆಯೇ ಆಗುತ್ತದೆ. ಪಾನ್ ಸಿಂಗ್ ದುಗುಡ, ಹತಾಶೆ, ಗಾಡ ವಿಷಾದಗಳನ್ನು ಬಿಟ್ಟು ಹೋಗುತ್ತಾನೆ. ’ಸಿಪಾಯಿ ರಾಮು’ವಿನ ಛಾಯೆ ಕಂಡು ಬಂದರೂ, ಈ ಚಿತ್ರಕ್ಕಾಗಿ ತಿಗ್ಮಾನ್ಷು ಅವರ ಸತತ ೧೦ ವರ್ಷಗಳ ಸಂಶೋಧನೆ-ಪರಿಶ್ರಮಗಳ ಫಲವಿದೆ. ಪಾನ್ ಸಿಂಗ್ ಪಾತ್ರಕ್ಕೆ ಅಪಾರ ದೇಹದಂಡಿಸಿದ ಇರ್ಫ಼ಾನ್, ರಾಷ್ಟ್ರಮಟ್ಟದ ಹಾಗೂ ಸೈನ್ಯದ ’ಸ್ಟೀಪಲ್ ಚೇಸ್’ ತರಬೇತುದಾರರ ಬಳಿ ಪಳಗಿದ. ತನಗೆ ತೃಪ್ತಿಯಾಗುವವರೆಗೂ ’ಷಾಟ್ ಓಕೆ’ ಮಾಡದಿರುವಂತೆ ತಿಗ್ಮಾನ್ಷುಗೆ ತಾಕೀತು ಕೂಡಾ ಮಾಡಿದ್ದ. ಈ ಪಾತ್ರವನ್ನು ಇರ್ಫ಼ಾನ್ ಎಷ್ಟು ಪ್ರೀತಿಸಿದ ಎಂದು ತಿಗ್ಮಾನ್ಷು ಹಲವು ಸಂದರ್ಶನಗಳಲ್ಲಿ ಹೇಳಿದ್ದಾರೆ. ಹಳ್ಳಿಗಾಲೋಟದಂತಹ ಗ್ರಾಮೀಣ ಕ್ರೀಡೆಯೊಂದು ಹೇಳಹೆಸರಿಲ್ಲದೇ ತೆರೆಮರೆ ಸರಿಯುತ್ತಿರುವುದರ ಬಗ್ಗೆ ಕಳಕಳಿಯೂ ಇದೆ. ಶೇಖರ್ ಕಪೂರ್ ರ ’ಬ್ಯಾಂಡಿಟ್ (ಬಂದಿತ್) ಕ್ವೀನ್’ ನಲ್ಲಿ ಸಹಾಯಕರಾಗಿ ದುಡಿದಿದ್ದ ತಿಗ್ಮಾನ್ಷುಗೆ, ಚಂಬಲ್ ಸುತ್ತಮುತ್ತಲಿನ ಕಣಿವೆ ಪ್ರದೇಶಗಳ ಆಳ ಪರಿಚಯವಿತ್ತು. ಮಾಜಿ ಡಕಾಯಿತರ ಪರಿಚಯವೂ ಇತ್ತು. ಹೀಗಾಗಿ ಅವರ ಕೆಲಸ ಸುಗಮವಾಯಿತು.

 ಪಾನ್ ಸಿಂಗ್ ತೊಮರ್ ನ ಒಂದು ದೃಶ್ಯ ಹೀಗೆ ಸಾಗುತ್ತದೆ. ಪಾನ್ ಸಿಂಗ್ ನನ್ನು ಪತ್ರಕರ್ತನೊಬ್ಬ ಸಂದರ್ಶಿಸುತ್ತಿದ್ದಾನೆ:

ಪತಕರ್ತ: ಮೂರು ರಾಜ್ಯಗಳ ಪೊಲೀಸರಿಗೆ ನೀನು ಚಳ್ಳೆಹಣ್ಣು ತಿನ್ನಿಸಿದ್ದೀಯಾ..ಇದು ನಿನಗೆ ಕಳಂಕವಲ್ಲವಾ? ನೀನು ಮಾಡಿದ್ದು ದೊಡ್ಡ ಹಗರಣ..

 ಪಾನ್ ಸಿಂಗ್: ಅದು ದುರಾದೃಷ್ಟ..ನಾನು ೨೮ ತಡೆಗೋಡೆಗಳನ್ನು, ೭ ನೀರಿನ ಹೊಂಡಗಳನ್ನು ಹಾರಿ ರಾಷ್ಟ್ರಮಟ್ಟದಲ್ಲಿ ಚಾಂಪಿಯನ್ ಆದೆ. ಆಗ ನೀವು ತಿರುಗಿಯೂ ನೋಡಲಿಲ್ಲ. (ಯಾವ ಸಂದರ್ಶಕರೂ ಬರಲಿಲ್ಲ). ಆದರೆ ನಾನು ಪೊಲೀಸರಿಗೆ ತಲೆನೋವಾದಾಗ, ಅಪಹರಣ(ಕಿಡ್ನ್ಯಾಪ್)ಮಾಡಿದಾಗ ಎಲ್ಲರೂ ’ಪಾನ್ ಸಿಂಗ್, ಪಾನ್ಸಿಂಗ್’ ಅಂತ ಕಿರುಚಾಡಕ್ಕೆ ಶುರುಮಾಡದ್ರು..

 ಪತ್ರಕರ್ತ: ಒಪ್ಪಿಕೊಳ್ತೀನಿ..ಈ ದೇಶದಲ್ಲಿ ಕ್ರೀಡಾಪಟುಗಳು ಬಹಳ ಕೆಟ್ಟ ಪರಿಸ್ಥಿತಿಯಲ್ಲಿದ್ದಾರೆ. 

ಪಾನ್ ಸಿಂಗ್: ಮೊಸಳೆ ಕಣ್ಣೀರು ಸುರಿಸುವುದು ಬೇಡ…ನಾನು ಬರಿಯ ಕ್ರೀಡಾಪಟುವಾಗಿಯೇ ಉಳಿದಿದ್ದರೆ, ನೀನು ಇಷ್ಟೊಂದು ತೊಂದರೆ ತೆಗೆದುಕೊಂಡು ನನ್ನನ್ನು ಕಾಣಲು ಬರುತ್ತಿದ್ದೆಯಾ?

ಪತ್ರಕರ್ತ: ಒಪ್ಪಿಕೊಳ್ತೀನಿ…

 ಪಾನ್ ಸಿಂಗ್ ತರದವರ ಬಗ್ಗೆ ಸಮಾಜದ, ವ್ಯವಸ್ಥೆಯ ಧೋರಣೆಯನ್ನು ಎತ್ತಿಹಿಡಿಯುವಂತೆ ಈ ದೃಶ್ಯ ಮೂಡಿಬಂದಿದೆ. ಫ್ಯೂಡಲ್ ಮನಃಸ್ಥಿತಿಯವರಿಂದ ನೋವು-ಸಂಕಷ್ಟಕ್ಕೊಳಗಾಗಾಗಿ, ತನ್ನದೇ ಸಮಾಜ ವಿರೋಧಿ ಪಡೆ ಕಟ್ಟಿಕೊಂಡು, ತನಗರಿವಿಲ್ಲದಂತೆಯೇ ಅದೇ ಫ್ಯೂಡಲ್ ಮನಃಸ್ಥಿತಿಗೆ ತುತ್ತಾಗುವ ಪಾನ್ ಸಿಂಗ್ ಹಲವು ಪ್ರಶ್ನೆಗಳನ್ನೂ ಉಳಿಸುತ್ತಾನೆ. ಒಂದಷ್ಟು ರನ್ ಗಳನ್ನು ಪೇರಿಸುತ್ತಿದ್ದಂತೆಯೇ, ಜಾಹೀರಾತುಗಳಿಗೆ ತಮ್ಮನ್ನು ಅರ್ಪಿಸಿಕೊಂಡು, ಕೂತಲ್ಲೇ ಕೋಟಿಗಳೆಣಿಸಿವ, ಕೋಟ್ಯಾಂತರಕ್ಕೆ ಹರಾಜಾಗುವ ಕ್ರಿಕೆಟರುಗಳಿರುವ ದೇಶದಲ್ಲಿ, ಹಳ್ಳಿಗಾಲೋಟದಂತಹ ಕ್ಲಿಷ್ಟಕ್ರೀಡೆಗಳನ್ನು ಒಲಿಸಿಕೊಂಡ ಪಾನ್ ಸಿಂಗ್ ತರದವರು ಪ್ರಶ್ನಾರ್ಥಕ ಚಿಹ್ನೆಯಾಗುತ್ತಾರೆ. ಆದರೆ, ಸ್ಪೂರ್ತಿಯಾಗುತ್ತಿಲ್ಲ. ಗ್ರಾಮೀಣ ಕ್ರೀಡೆಗಳನ್ನು ಅಲಕ್ಷಿಸುವ ಸರ್ಕಾರ, ಹತಾಶರಾಗುವ ಪಾನ್ ಸಿಂಗ್ ತರದವರ ತಪ್ಪು ಹೆಜ್ಜೆಗಳೂ ಇದಕ್ಕೆ ಕಾರಣವಾಗುತ್ತದೆ.

 

===

ಹೀಗೆಲ್ಲಾ ನಮ್ಮ ಮನಸ್ಸಿನ ಮೇಲೆ ಅಚ್ಚೊತ್ತಿದ ಇರ್ಫ಼ಾನ್ ಏಕೆ ಇಷ್ಟು ಬೇಗ ಹೊರಟುಬಿಟ್ಟ? ತನ್ನೆಲ್ಲಾ ಚಿತ್ರಗಳಲ್ಲೂ, ತಾನು ಅಭಿನಯಿಸಿದ ಎಲ್ಲಾ ಪಾತ್ರಗಳನ್ನೂ ಮನದಾಳಕ್ಕಿಳಿಸಿದ ಇರ್ಫ಼ಾನ್ ನ ಎಲ್ಲಾ ಚಿತ್ರಗಳನ್ನೂ ಇಲ್ಲಿ ವಿಮರ್ಶಿಸಲಾಗುವುದಿಲ್ಲ. ತನ್ನ ಅಸ್ಮಿತೆಗಾಗಿ ನಿರಂತರ ಹೋರಾಟ ನಡೆಸುತ್ತಲೇ, ತಮ್ಮ ಕಾರ್ಯಕ್ಷೇತ್ರದ ಅಸ್ಮಿತೆಯೇ ಆಗಿಬಿಡುವ ಇರ್ಫ಼ಾನ್ ತರದವರು, ಥಳುಕು-ಬಳುಕಿನ ಬಾಲಿವುಡ್ ನಲ್ಲಿ ಒಂದು ಅಪವಾದ. ಇಂಥವರು ತಮ್ಮ ಒಂದೆರೆಡು ಸಶಕ್ತ ಚಿತ್ರಗಳಿಂದಲೇ, ಬಾಲಿವುಡ್ ನ ದೊರೆಗಳಾದ ಶಾರುಕ್-ಅಮೀರ್-ಸಲ್ಮಾನ್ ಖಾನ್ ತ್ರಯರು ಎಷ್ಟು ಕೃತಕ, ಎಷ್ಟು ಟೊಳ್ಳು ಎಂಬುದನ್ನು ನಿರೂಪಿಸಬಿಡಬಲ್ಲರು. (’ಹೈದರ್’ ನಲ್ಲಿ ಶಹೀದ್ ಕಪೂರ್ ನ ಅಭಿನಯ ಕಂಡಾಗಲೂ ಹೀಗೆಯೇ ಅನಿಸಿತ್ತು). ಇರ್ಫ಼ಾನ್ ನ ’ಹಿಂದಿ ಮೀಡಿಯಂ’ ಚಿತ್ರ ಚೀನಾದಲ್ಲಿಯೂ ಹಿಟ್ ಆಗಿ ಸುಮಾರು ೨೫೦ ಕೋಟಿ ಗಳಿಸಿಕೊಟ್ಟಿತು. ಇರ್ಫ಼ಾನ್ ಎಲ್ಲಾ ಕಡೆ ಸಲ್ಲಲಾರಂಭಿಸಿದ್ದ. ಆದರೆ ಜೀವನ ತನ್ನ ಕ್ರೌರ್ಯದ ಅನಾವರಣ ಮಾಡಲಾರಂಭಿಸಿತು. ಎರಡೇ ವರ್ಷಗಳ ಹಿಂದೆ ತನಗೆ ನ್ಯೂರೋಎಂಡೊಕ್ರೈನ್ ಟ್ಯೂಮರ್ ಎಂಬ ಅಪರೂಪದ ಕ್ಯಾನ್ಸರ್ ಇರುವುದನ್ನು ಇರ್ಫ಼ಾನ್, ತನ್ನ ಅಭಿನಯದಷ್ಟೇ ಸಹಜವಾಗಿ, ಯಾವುದೇ ಉದ್ವೇಗ-ದೈನ್ಯಗಳಿಲ್ಲದೇ ವ್ಯಕ್ತಪಡಿಸಿದ್ದ. ಒಂದು ವರ್ಷ ಲಂಡನ್ ವಾಸಿಯಾಗಿ ತಪಾಸಣೆ-ಶುಶ್ರೂಷೆಗಳಿಗೆ ಒಳಗಾದ. ೨೦೧೯ ರ ಫೆಬ್ರವರಿಯಲ್ಲಿ ಭಾರತಕ್ಕೆ ಮರಳಿದ ಇರ್ಫ಼ಾನ್ ಮತ್ತದೇ ಹುಮ್ಮಸ್ಸಿನಿಂದ ಸಿನಿಮಾದಲ್ಲಿ ತೊಡಗಿಕೊಂಡ. ವಿಧಿಯಾಟ ಬೇರೆ ಇತ್ತು. ಕರುಳಿನ ಸೋಂಕಿಗೆ ಒಳಗಾದ ಇರ್ಫ಼ಾನ್, ಕೊನೆಯ ಹೋರಾಟದಲ್ಲಿ ಸೋತ. 

ಸಿನಿಮಾ ನಟನೆ, ಅಭಿನಯದಲ್ಲಿನ ತಾದಾತ್ಮ್ಯತೆಗಳಿಗೆ ಹೊಸ ಭಾಷ್ಯಬರೆದ, ಮರುವ್ಯಾಖ್ಯೆಗಳಿಗೆ ಒಳಪಡಿಸಿದ ಗುರುದತ್, ಬಲರಾಜ್ ಸಾಹ್ನಿ, ಅಮಿತಾಭ್, ಓಮ್ ಪುರಿ, ನಾಸಿರುದ್ದೀನ್, ಸ್ಮಿತಾ ಪಾಟೀಲ್, ಶಬಾನಾ, ಪಂಕಜ್ ಕಪೂರ್, ನವಾಜ಼ುದ್ದೀನ್ ಸಿದ್ದಿಕಿ, ಮೊದಲಾದವರ ಯಾದಿಯಲ್ಲಿ ಇರ್ಫ಼ಾನ್ ಗೆ ವಿಶಿಷ್ಟ ಸ್ಥಾನವಿದೆ. ಇವರಲ್ಲಿ ಬಹುತೇಕ ಮಂದಿ ರಂಗಭೂಮಿಯ ಹಿನ್ನಲೆಯವರೇ. ಕಲಾವಿದನಿಂದ ’ವಿನಯ’, ’ಗುರುಭಕ್ತಿ’ ಬಯಸುವ ಧೋರಣೆಯ ನಿರ್ದೇಶಕರಿಗೆ ಇರ್ಫ಼ಾನ್ ತರದವರು ಒಗ್ಗಲಾರರು. ಹಾಗೆಂದು ನಿರ್ದೇಶಕರ ಕೆಲಸದಲ್ಲಿ ವಿಪರೀತ ಮೂಗು ತೂರಿಸುವ ವ್ಯಕ್ತಿಯೂ ಅಲ್ಲ. ’ಪಾನ್ ಸಿಂಗ್ ತೊಮರ್’ ನಂತಹ ಅಪರೂಪ ಬಯೋಪಿಕ್ (ತೆರೆಯ ಮೇಲೆ ಹೇಳುವ ಜೀವನಕಥೆ) ಚಿತ್ರಿಸಬೇಕಾದರೆ, ನಿರ್ದೇಶಕ-ನಾಯಕನಟ ಹಾಗೂ ಇಡೀ ಚಿತ್ರತಂಡ ಕಾದುಕೊಂಡ ಸಾಮರಸ್ಯ-ಸಮತೋಲನಗಳು ಪ್ರಶಂಸಾರ್ಹ. 

ಥಳುಕು-ಬಳುಕು, ಉನ್ಮಾದ-ಪ್ರದರ್ಶನಗಳ ಕೂಪವಾದ ಬಾಲಿವುಡ್ ನಲ್ಲಿ ಇರ್ಫ಼ಾನ್ ಒಮ್ಮೊಮ್ಮೆ ಪ್ರಶ್ನಾರ್ಥಕ ಚಿಹ್ನೆಯಾಗಿ, ಮಗದೊಮ್ಮೆ ಬಾಲಿವುಡ್ ಬಯಸದ ಗುಣಗಳ ರೂಪಕವಾಗಿ ಕಾಣುತ್ತಿದ್ದ. ಯಾವುದೇ ಪ್ರಚಾರ, ಪ್ರಭಾವ, ವಶೀಲಿಗಳಿಂದ ದೂರವಿರುತ್ತಾ, ಸಿನಿಮಾವನ್ನೇ ಉಸುರುತ್ತಿದ್ದ ಇರ್ಫ಼ಾನ್, ಚಿಂತಾಜನಕ ಅನಾರೋಗ್ಯದ ನಡುವೆಯೂ ಜೀವನವನ್ನು ಉತ್ಸಾಹದಿಂದ ಪ್ರೀತಿಸಿದ. 

’ಗರಂ ಹವಾ’ ದ ’ಸಲೀಂ ಮಿರ್ಜ಼ಾ’(ಬಲರಾಜ್ ಸಾಹ್ನಿ), ’ತಮಸ್” ನ ’ನಾಥೂ’ (ಓಂ ಪುರಿ) ರನ್ನು ಕಂಡಾಗಲೆಲ್ಲಾ, ಈ ಪಾತ್ರಗಳನ್ನು ಇರ್ಫ಼ಾನ್ ಮಾಡಿದ್ದರೆ ಹೇಗಿದ್ದಿರಬಹುದು ಅನಿಸಿದೆ. ಬೇರೆ ಯಾವ ಕಲಾವಿದರೂ ಈ ರೀತಿಯ ಕುತೂಹಲ ಹುಟ್ಟಿಸಿದ್ದಿಲ್ಲ. ರಂಗಕರ್ಮಿ ಪ್ರಸನ್ನರ ಆತ್ಮೀಯ ಶಿಷ್ಯನಾಗಿದ್ದ ಇರ್ಫ಼ಾನ್, ಹಾಲಿವುಡ್ ನಲ್ಲೂ ತನ್ನ ಛಾಪು ಮೂಡಿಸಿದ. 

ಪತ್ನಿ ಸುತಾಪ ಸಿಕ್ದರ್, ಮಕ್ಕಳಾದ ಬಬಿಲ್, ಅಯಾನ್ ರಲ್ಲದೇ ಅಸಂಖ್ಯಾತ ಸ್ನೇಹಿತರನ್ನು, ಅಭಿಮಾನಗಳನ್ನು ಮೂಕವಾಗಿಸಿ ಹೊರಟ ಇರ್ಫ಼ಾನ್ ನಮ್ಮ ಮನಗಳಲ್ಲಿ ಸದಾ ಜೀವಂತ. ಸುತಾಪ ಬರೆದ ಈ ಸಾಲುಗಳು ಮನೋಜ್ಞವಾಗಿದೆ:

The only thing I have a grudge against him is: he has spoiled me for life. His strive for perfection doesnt let me settle for ordinary in any thing. There was a rhythm which he always saw in everything, even in cacophony and chaos” 

ತನ್ನ ಪ್ರತಿಯೊಂದು ಕೆಲಸದಲ್ಲೂ ಪರಿಪೂರ್ಣತೆಗಾಗಿ ತುಡಿಯುತ್ತಿದ್ದ, ಕರ್ಕಶತೆ-ಅಪಸ್ವರಗಳಲ್ಲೂ,, ಅವ್ಯವಸ್ಥೆ-ಗೊಂದಲ ವಾತಾವರಣದಲ್ಲೂ ಲಯವೊಂದನ್ನು ಕಾಣುತ್ತಿದ್ದ ಇರ್ಫ಼ಾನ್ ಗೆ, ನೋವಿನ ವಿದಾಯ. 

One comment to “ಅಪಸ್ವರದಲ್ಲೂ ಲಯವನ್ನು ಅರಸಿದ ಇರ್ಫಾನ್”

ಪ್ರತಿಕ್ರಿಯಿಸಿ