ಕೋವಿಡ್-19 ನ ಅಪಾಯಗಳನ್ನು ತಿಳಿಯುವುದು ಮತ್ತು ತಪ್ಪಿಸುವುದು ಹೇಗೆ ?

ಕೋವಿಡ್-19 ತಡೆಗಟ್ಟುವಿಕೆಯ ನಿಯಮಗಳನ್ನು ಈಗಾಗಲೇ ಎಲ್ಲೆಡೆ ಹೇಳಲಾಗಿದೆ. ಸಾಧ್ಯವಾದಷ್ಟು ಮನೆಯಲ್ಲಿಯೇ ಇರಿ; ನೀವು ಸಾರ್ವಜನಿಕವಾಗಿ ಹೊರಗಿರುವಾಗ ಮುಖವಾಡ ಧರಿಸಿ ಮತ್ತು ಇತರರಿಂದ ಆರು ಅಡಿ ದೂರದಲ್ಲಿರಿ. ಆದರೆ ಈಗ ಅಲ್ಲಲ್ಲಿ ವ್ಯವಹಾರಗಳು ಮತ್ತು ಸಾರ್ವಜನಿಕ ಸ್ಥಳಗಳ ಮೇಲಿನ ನಿರ್ಬಂಧಗಳನ್ನು ತೆರವುಗೊಳಿಸಲಾಗುತ್ತಿದೆ. ಆದರೆ ನೀವು ಹೊರಗೆ ಹೋಗುವುದು ಎಷ್ಟು ಸುರಕ್ಷಿತ ?

ಮಸ್ಸಚುಸೆಟ್ಸ್ ದಾರ್ಮೌತ್ ವಿಶ್ವವಿದ್ಯಾಲಯದ ರೋಗನಿರೋಧಕ ಮತ್ತು ಜೀವಶಾಸ್ತ್ರಜ್ಞ ಎರಿನ್ ಬ್ರೊಮೇಜ್ ಅವರು ಇತ್ತೀಚಿನ ತಮ್ಮ ಬ್ಲಾಗ್ ಪೋಸ್ಟ್ನಲ್ಲಿ  “The Risks – Know Them – Avoid Them.”  ಈ ಕುರಿತು ಬರೆದಿದ್ದಾರೆ . ಓದಿ ..

ಅದ್ಯಾಕೋ ನನಗಂತೂ ಗೊತ್ತಿಲ್ಲ, ಬಹಳಷ್ಟು ಜನ ಈಗ ನಿರಾಳವಾಗಿ ಉಸಿರಾಡುತ್ತಿದ್ದಾರೆ. ಒಂದು ಸೋಂಕಿನ ಮೇಲೇರಿಕೆಯ ವಕ್ರ ಪಥವನ್ನು ನಾವು ಸಾಧಾರಣವಾಗಿ ಊಹಿಸಿ ಮುಂಗಾಣಬಹುದು. ಹಾಗೂ ಅದು ತನ್ನ ಎತ್ತರದ ತುದಿಯನ್ನು ತಲುಪಿದ ಮೇಲೆ ಅದರ ಇಳಿಜಾರನ್ನು ಕೂಡಾ ಊಹಿಸಿ ಮುಂಗಾಣಬಹುದು.

ನಮ್ಮಲೀಗ ಚೈನಾ ಮತ್ತು ಇಟಲಿಯಲ್ಲಾದ ಸೋಂಕುಸ್ಪೋಟಳಿಂದ ಬಂದಿರುವ ಬಲವಾದ ಡೇಟಾ ಇದೆ. ಈ ಡೇಟಾದಿಂದ ನಮಗೆ ತಿಳಿಯುವುದೇನೆಂದರೆ, ಈ ಸೋಂಕು ಪಥದ ವಕ್ರರೇಖೆಯ ಮರಣಪ್ರಮಾಣದ ಇಳಿಜಾರು ನಿಧಾನವಾಗಿ ಕ್ಷೀಣಿಸುತ್ತದೆ. ಸಾವು ಮುಂದೆ ಬಹು ಕಾಲ ಸಂಭವಿಸುತ್ತಲೇ ಇರುತ್ತದೆ. ಈಗ ನಾವು 70,000 ಜನರ ಸಾವಿನ ಮಟ್ಟದಲ್ಲಿದ್ದೇವೆಂದು ಇಟ್ಟುಕೊಳ್ಳೋಣ. ಆ ಎತ್ತರದ ಮಟ್ಟದಿಂದ ಸೋಂಕುಪಥ ಕೆಳಗಿಳಿಯುವಾಗ ಮುಂದಿನ ಆರು ವಾರಗಳಲ್ಲಿ ಮತ್ತೆ ಇನ್ನೂ 70,000 ದಷ್ಟು ಹೆಚ್ಚಿನ ಮಂದಿಯ ಸಾವಾಗುವ ಸಾಧ್ಯತೆಯಿದೆ. ಲಾಕ್‍ಡೌನಿನಿಂದ ಆಗಲಿರುವುದು, ಅದೇ.ರಾಜ್ಯಗಳು ತೆರೆದುಕೊಳ್ಳಲು ಪ್ರಾರಂಭಿಸುತ್ತಿದ್ದಂತೆಯೇ ವೈರಸ್ಸೆಂಬ ಉರಿಗೆ ನಾವು ಹೆಚ್ಚುಹೆಚ್ಚು ತುಪ್ಪ ಸುರಿಯತೊಡಗುತ್ತೇವೆ. ಎಲ್ಲಾ ಕಟ್ಟಳೆಗಳೂ ಮುರಿದುಬೀಳುತ್ತವೆ. ಆರ್ಥಿಕತೆಯನ್ನು ಮರುಚ್ಚೇತನಗೊಳಿಸ ಬೇಕೆನ್ನುವ ಕಾರಣಗಳನ್ನು ನಾನು ಅರ್ಥ ಮಾಡಿಕೊಳ್ಳುತ್ತೇನೆ. ಆದರೆ ನಾನು ಮುಂಚೆಯೂ ಹೇಳಿದ್ದಂತೆ, ನೀವು ಜೀವಶಾಸ್ತ್ರದ ಸಮಸ್ಯೆಯನ್ನು ಪರಿಹಾರ ಮಾಡದಿದ್ದರೆ, ಆರ್ಥಿಕತೆ ಸುಧಾರಿಸಿಕೊಳ್ಳುವುದಿಲ್ಲ.

ಕೆಲವೇ ಕೆಲವು ರಾಜ್ಯಗಳಲ್ಲಿ ಹೊಸ ಸೋಂಕುಗಳ ಸಂಖ್ಯೆಯಲ್ಲಿನ ಸುಸ್ಥಿರವಾದ ಇಳಿತ ಕಾಣಿಸುತ್ತಿದೆ. ಹೆಚ್ಚಿನವುಗಳಲ್ಲಿ ಇನ್ನೂ ಆ ಸಂಖ್ಯೆ ಹೆಚ್ಚುತ್ತಲೇ ಇದೆ; ಮತ್ತೆ ಮತ್ತೆ ತೆರೆದುಕೊಳ್ಳುತ್ತಲೇ ಇದೆ. ಯು.ಎಸ್.ಏ. ಯಲ್ಲಿನ ರೋಗದ ಗತಿಯನ್ನು ಗಮನಿಸಿದರೆ, ಅದರಲ್ಲೂ ನೀವು ನ್ಯೂಯಾರ್ಕನ್ನು ಬದಿಗಿರಿಸಿ ಅಮೆರಿಕದ ಮಿಕ್ಕ ಭಾಗಗಳನ್ನು ನೋಡಿದರೆ, ಪ್ರತಿದಿನದ ಸೋಂಕಿನ ಸಂಖ್ಯೆ ಹೆಚ್ಚುತ್ತಲೇ ಇದೆ. ಅಂದರೆ ಇದರ ಒಟ್ಟಿನ ಅರ್ಥ; ಈಗ ಅಮೆರಿಕದ ಹೊಸ ಸೋಂಕುಗಳ ಸಂಖ್ಯೆಗಳ ಒಟ್ಟು ಮೊತ್ತದ ರೇಖೆ ಮಟ್ಟಸವಾಗಿರುವಂತೆ ಕಾಣುತ್ತಿರುವುದರ ಕಾರಣವೇನೆಂದರೆ ನ್ಯೂಯಾರ್ಕಿನಲ್ಲಿ ಸೋಂಕಿನ ಗಾತ್ರ ಬಹಳ ದೊಡ್ಡದಾಗಿತ್ತು ಆದರೆ, ಅದೀಗ ಸ್ವಲ್ಪ ಮಟ್ಟಿಗೆ ತಹಬಂದಿಗೆ ತರಿಸಲ್ಪಟ್ಟಿದೆ.

ಆದ್ದರಿಂದ ದೇಶದ ಹೆಚ್ಚಿನ ಭಾಗಗಳಲ್ಲಿ ನಾವು ಕಟ್ಟಳೆಗಳನ್ನು ಸಡಿಲಿಸಿ ದೇಶವನ್ನು ಮರುತೆರೆಯುವುದರಿಂದ ವೈರಸ್ ಎಂಬ ಉರಿಗೆ ನಾವು ತುಪ್ಪ ಸುರಿದಂತಾಗುತ್ತದೆ. ನನಗೆ ಇಷ್ಟವಿರಲಿ ಬಿಡಲಿ ಅದು ಆಗಿಯೇ ಆಗುತ್ತದೆ. ಆದ್ದರಿಂದ ಇಲ್ಲಿ ನನ್ನ ಉದ್ದೇಶ ಇಷ್ಟೇ; ಅತಿ ಅಪಾಯದ ಪರಿಸ್ಥಿತಿಗಳಿಂದ ನಿಮ್ಮನ್ನು ದೂರವಿರಿಸಲು ಸಲಹೆಗಳನ್ನು ಕೊಡುವ ಒಂದು ಪ್ರಯತ್ನ ಮಾಡುವುದು.

ಜನರು ಯಾವ ಸ್ಥಳಗಳಲ್ಲಿ ಸೋಂಕಿತರಾಗುತ್ತಿದ್ದಾರೆ?

ನಮಗೆ ತಿಳಿದಂತೆ ಮುಕ್ಕಾಲು ಪಾಲು ಜನ ತಮ್ಮ ತಮ್ಮ ಮನೆಗಳಲ್ಲಿಯೇ ಸೋಂಕಿತರಾಗುತ್ತಾರೆ. ಕುಟುಂಬದ ಒಬ್ಬ ವ್ಯಕ್ತಿ ಹೊರಗಡೆ ಸಮುದಾಯದಿಂದ ಸೋಂಕಿತನಾಗಿ ಮನೆಯೊಳಗೆ ಬಂದು ನಂತರ ತನ್ನ ಕುಟುಂಬದವರೊಂದಿಗೆ ಬೆರೆಯುತ್ತಾ ಕಾಲಕಳೆಯುತ್ತಾನೆ. ಅಂತಹ ಸಂಪರ್ಕದಿಂದ ಸೋಂಕು ಆ ಕುಟುಂಬದ ಸದಸ್ಯರುಗಳಿಗೆ ಹರಡುತ್ತದೆ. ಹಾಗಾದರೆ ಸಮುದಾಯದಲ್ಲಿ ಯಾವ ಸ್ಥಳಗಳಲ್ಲಿ ಜನರು ಸೋಂಕಿತರಾಗುತ್ತಿದ್ದಾರೆ? ಜನರು ಕೆಲವು ಸ್ಥಳಗಳ ಬಗೆಗೆ ಹೆಚ್ಚು ಹೆಚ್ಚು ಚಿಂತಿತರಾಗಿ ಮಾತನಾಡುವುದನ್ನು ನಾನು ಕೇಳಿದ್ದೇನೆ. ಉದಾಹರಣೆಗೆ, ದಿನಸಿ ಅಂಗಡಿಗಳು, ಸೈಕಲ್ ಸವಾರಿ, ಮುಖ ಕವಚ ಧರಿಸದೆ ಉಡಾಫೆಯಿಂದ ಕಸರತ್ತಿಗಾಗಿ ಓಡುವ ಇತರರು…ಇತ್ಯಾದಿ. ಈ ಸ್ಥಳಗಳು ಕಾಳಜಿಗೆ ತಕ್ಕುದಾದವುಗಳೇ? ಹಾಗೇನೂ ಇಲ್ಲ. ತಡೆಯಿರಿ, ವಿವರಿಸುತ್ತೇನೆ.

ಸೋಂಕಿತರಾಗಲು ನಿಮಗೆ ಸೋಂಕು ತಗುಲಿಸಬಲ್ಲ ಅಳತೆಯ ಮಟ್ಟಕ್ಕೆ ಆ ವೈರಸ್ಸಿನ ಸಂಪರ್ಕಕ್ಕೆ ನಿಮ್ಮನ್ನು ನೀವು ಒಡ್ಡಿಕೊಂಡಿರಬೇಕು. ಮೆರ್ಸ್ ಮತ್ತು ಸಾರ್ಸ್ ವೈರಸ್ಸುಗಳ ಸೋಂಕು ಮಾಡಬಲ್ಲ ಅಳತೆಯ ಮಟ್ಟದ ಅಧ್ಯಯನಗಳ ಆಧಾರದ ಮೇಲೆ ಸೋಂಕು ತಗುಲಲು 1000 ಸಾರ್ಸ್-ಕೋವಿಡ್19 ರಶ್ಟು ಕಡಿಮೆ ವೈರಾಣು ಕಣಗಳೇ ಸಾಕು ಎಂದು ಅಂದಾಜು ಮಾಡಲಾಗಿದೆ. ಅರಿವಿರಲಿ, ಇದನ್ನಿನ್ನೂ ಪ್ರಯೋಗಗಳ ಮೂಲಕ ಖಾತ್ರಿಪಡಿಸಬೇಕಾಗಿದೆ. ಆದರೂ ಸೋಂಕು ಹೇಗೆ ತಗಲುತ್ತದೆ ಎಂದು ನಿರೂಪಿಸಲು ಈ ಸಂಖ್ಯೆಯನ್ನು ಉಪಯೋಗಿಸಬಹುದು. ಅಂದರೆ ನಿಮಗೆ, ಒಂದು ಉಸಿರಿನಲ್ಲಿ ಅಥವಾ ಒಂದು ಕಣ್ಣುಜ್ಜುವಿಕೆಯಿಂದ 1000 ವೈರಾಣು ಕಣಗಳು ಸಿಗಬಹುದು,ಅಥವಾ 100 ವೈರಾಣು ಕಣಗಳ 10 ಉಚ್ಚ್ವಾಸವಾಗಿರಬಹುದು ಅಥವಾ 10 ವೈರಾಣು ಕಣಗಳ 100 ಉಚ್ಚ್ವಾಸವಾಗಿರಬಹುದು. ಇಂತಹ ಪ್ರತಿ ಪರಿಸ್ಥಿತಿಯಿಂದಲೂ ನಿಮಗೆ ಸೋಂಕು ತಗುಲಬಹುದು.

ಪರಿಸರಕ್ಕೆ ಎಷ್ಟು ವೈರಸ್ಸುಗಳನ್ನು ಹೊರಬಿಡಲಾಗುತ್ತದೆ?

1. ಬಾತ್‍ರೂಮುಗಳು : ಬಾತ್ರೂಮುಗಳಲ್ಲಿ ನಾವು ಹೆಚ್ಚು ಹೆಚ್ಚಾಗಿ ಮುಟ್ಟುವ ಮೇಲ್ಮೈಗಳಿರುತ್ತವೆ; ಬಾಗಿಲಿನ ಚಿಲಕ, ತಿರುವು ಗೂಟಗಳು, ಪಾಯಿಖಾನೆಗಳು, ತಳ್ಳುವ ಬಾಗಿಲುಗಳು. ಆದ್ದರಿಂದ ಇಲ್ಲಿ ವೈರಾಣು ಕಣಗಳು ನಮ್ಮ ಒಳಹೊಗುವ ಅವಕಾಶಗಳು ಬಹಳ. ಸೋಂಕಿತರು ತಮ್ಮ ಕಕ್ಕಸ್ಸಿನಲ್ಲಿ ವೈರಸ್ಸುಗಳನ್ನು ಹೊರಹಾಕುತ್ತರೋ ಅಥವಾ ಬರಿಯ ತುಂಡುತುಂಡಾದ ವೈರಸ್ಸುಗಳು ಆಚೆ ಹೋಗುತ್ತವೆಯೋ ಇನ್ನೂ ನಮಗೆ ಸರಿಯಾಗಿ ತಿಳಿದಿಲ್ಲ.ಆದರೆ ಕಮೋಡುಗಳಲ್ಲಿ ನೀರನ್ನು ಚಿಲ್ಲೆಂದು ಹರಿಸಿದಾಗ ಅದು ಕಣಗಳ ತುಂತುರನ್ನು ಗಾಳಿಯಲ್ಲಿ ಹರಡುವುದೆಂದು ನಮಗೆ ತಿಳಿದಿದೆ. ಆದ್ದರಿಂದ, ನಮಗೆ ಈ ಅಪಾಯಗಳ ಬಗ್ಗೆ ಹೆಚ್ಚು ತಿಳುವಳಿಕೆ ಬರುವವರೆಗೂ ಸಾರ್ವಜನಿಕ ಬಾತ್ರೂಮುಗಳಲ್ಲಿ ಬಹಳ ಎಚ್ಚರಿಕೆಯಿಂದಿರಿ. ( ಮೇಲ್ಮೈಗಳು ಮತ್ತು ಅಲ್ಲಿನ ಗಾಳಿಯಲ್ಲೂ ಸಹ)

2. ಕೆಮ್ಮು : ಒಂದು ಕೆಮ್ಮು ಸುಮಾರು 3000 ಹನಿಗಳನ್ನು ಹೊರಹಾಕುತ್ತದೆ; ಒಂದೊಂದು ಹನಿಯೂ ಘಂಟೆಗೆ 50 ಮೈಲಿ ವೇಗದಲ್ಲಿ ಚಲಿಸುತ್ತದೆ. ಹೆಚ್ಚಿನ ಹನಿಗಳು ಗಾತ್ರದಲ್ಲಿ ದಪ್ಪಕ್ಕಿದ್ದು ಗುರುತ್ವಾಕರ್ಷಣೆಯಿಂದ ಬೇಗ ಕೆಳಗೆ ಬಿದ್ದುಬಿಡುತ್ತವೆ. ಆದರೆ ಕೆಲವು ಗಾಳಿಯಲ್ಲಿ ಉಳಿದುಕೊಂಡು ಕೋಣೆಯ ಇನ್ನೊಂದು ಭಾಗಕ್ಕೆ ಕೆಲವೇ ಸೆಕೆಂಡುಗಳಲ್ಲಿ ಚಲಿಸಬಲ್ಲದು.

3. ಸೀನು: ಒಂದು ಸೀನು 30,000 ಹನಿಗಳನ್ನು ಹೊರಹಾಕುತ್ತದೆ. ಆ ಹನಿಗಳು ಘಂಟೆಗೆ 200 ಮೈಲಿ ವೇಗದಲ್ಲಿ ಚಲಿಸಬಲ್ಲವು. ಸೀನಿನಲ್ಲಿ ಹೆಚ್ಚಿನ ಹನಿಗಳ ಗಾತ್ರ ಕಿರಿದು ಹಾಗೂ ಅವು ದೂರ ಚಲಿಸಬಲ್ಲವು. ( ಕೊಠಡಿಯ ಆ ಬದಿಗೆ ಸುಲಭವಾಗಿ ಚಲಿಸಬಲ್ಲವು)

ಒಬ್ಬ ಸೋಂಕು ಪೀಡಿತ ವ್ಯಕ್ತಿಯ ಒಂದು ಕೆಮ್ಮು ಅಥವಾ ಸೀನಿನ ಹನಿಗಳಲ್ಲಿ 200,000,000( 200 ಮಿಲ್ಲಿಯನ್) ರಷ್ಟು ವೈರಾಣು ಕಣಗಳಿರಬಹುದು. ಅಷ್ಟೂ ಕಣಗಳು ಅವನ ಸುತ್ತಿನ ಪರಿಸರದ ಗಾಳಿಯಲ್ಲಿ ಪಸರಿಸಬಹುದು.

4. ಉಸಿರು : ಒಂದು ಉಸಿರು 50 ರಿಂದ 5000 ಹನಿಗಳನ್ನು ಹೊರಹಾಕಬಲ್ಲದು. ಹೆಚ್ಚಿನ ಈ ಕಣಗಳ ವೇಗ ತುಂಬಾ ಕಡಿಮೆಯಿರುವುದರಿಂದ ಹೆಚ್ಚಿನಂಶ ಅವುಗಳು ಕೆಳಗೆ ನೆಲಕ್ಕೆ ಬಿದ್ದು ಹೋಗುತ್ತವೆ. ಮೂಗಿನ ಉಸಿರಾಟದಿಂದ ಇನ್ನೂ ಕಡಿಮೆ ಕಣಗಳು ಹೊರಬರುತ್ತವೆ. ಮುಖ್ಯವಾಗಿ ಶ್ವಾಸಕೋಶದ ಒಳಗಿನಿಂದ ನಿಡಿದಾಗಿ ಉಸಿರನ್ನು ನಾವು ಸಹಜವಾಗಿ ಎಳೆದು ಹೊರಹಾಕುವುದಿಲ್ಲವಾದ್ದರಿಂದ ಅದರ ಬಲವಿಲ್ಲದೆ ಶ್ವಾಸಕೋಶದ ಕೆಳಗಿನ ಭಾಗದಿಂದ ವೈರಾಣು ಕಣಗಳನ್ನು ಈ ಉಸಿರಿನೊಡನೆ ನಾವು ಹೊರಹಾಕುವುದಿಲ್ಲ.

ಕುಮ್ಮು ಸೀನಿನಲ್ಲಿ ಅತಿ ದೊಡ್ಡ ಮೊತ್ತದ ವೈರಾಣು ಕಣಗಳನ್ನು ಹೊರಹಾಕುತ್ತೇವೆ ಆದರೆ ಉಸಿರಾಟದಲ್ಲಿ ಕಡಿಮೆ ಮಟ್ಟದ ವೈರಾಣುಗಳು ಮಾತ್ರ ಹೊರಬರುತ್ತವೆ. ನಮಗೆ ಸಾರ್ಸ್-ಕೊವಿ19 ಗೆ ಇನೂ ನಿರ್ಧಿಷ್ಟ ಸಂಖ್ಯೆಯೊಂದಿಲ್ಲ, ಆದರೆ ನಾವು ಇನ್ಫ್ಲುಯೆನ್ಸಾವನ್ನು ದಿಕ್ಸೂಚಿಯಾಗಿ ಇಟ್ಟುಕೊಳ್ಳಬಹುದು. ಇನ್ಫ್ಲುಯೆನ್ಸಾದಲ್ಲಿ ಸೋಂಕಿತರು ತಮ್ಮ ಉಸಿರಾಟದಲ್ಲಿ ಒಂದು ನಿಮಿಶಕ್ಕೆ 3-20 ವೈರಸ್ಸಿನ ಆರ್.ಎನ್.ಎ. ಪ್ರತಿಗಳನ್ನು ಹೊರಹಾಕುತ್ತಾರೆ ಎಂದು ನಮಗೆ ತಿಳಿದಿದೆ.

ಈ ಫಾರ್ಮುಲಾವನ್ನು ನೆನಪಿಡಿ.

ಸೋಂಕಿನ ವಿಜಯ = ಎಕ್ಸ್ ಬಾರಿ ಸೋಂಕಿಗೆ ಒಡ್ಡಿಕೊಳ್ಳುವುದು.

ಒಬ್ಬ ಸೋಂಕಿತ ವ್ಯಕ್ತಿ ಕೆಮ್ಮಿದರೆ ಅಥವಾ ಸೀನಿದರೆ ಆ 200,000,000 ವೈರಾಣು ಕಣಗಳು ಎಲ್ಲಾ ಕಡೆಗೂ ಹರಡುತ್ತವೆ. ಕೆಲವು ಗಾಳಿಯಲ್ಲಿ ತೇಲಾಡುತ್ತವೆ; ಕೆಲವು ವಸ್ತುಗಳ ಮೇಲ್ಮೈಗಳಿಗೆ ಅಂಟಿಕೊಳ್ಳುತ್ತವೆ; ಹೆಚ್ಚಾದವುಗಳು ನೆಲಕ್ಕೆ ಬಿದ್ದು ಹೋಗುತ್ತವೆ. ನೀವು ಮಾತಾನಾಡುತ್ತಿರುವ ವ್ಯಕ್ತಿ ನಿಮ್ಮ ಎದುರಿಗೆ ಕುಳಿತು ನಿಮ್ಮ ಕಡೆಗೆ ನೇರವಾಗಿ ಸೀನಿದರೆ ಅಥವಾ ಕೆಮ್ಮಿದರೆ, ನಿಮಗೆ ಹೇಗೆ 1000 ವೈರಾಣು ಕಣಗಳು ತಲುಪಿ ಅದನ್ನು ನೀವು ಉಸಿರಲ್ಲಿ ಒಳಗೆಳೆದುಕೊಂಡು ನೀವೂ ಸೋಂಕಿತರಾಗಬಹುದು ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಸುಲಭ. ಆ ಕೆಮ್ಮು ಅಥವಾ ಸೀನನ್ನು ನೀವು ನೇರವಾಗಿ ಎದುರಿಸದಿದ್ದರೂ ಕೆಲವು ಅತಿ ಸಣ್ಣ ಹನಿಗಳು ಕೆಲವು ನಿಮಿಶಗಳವರೆಗೆ ಗಾಳಿಯಲ್ಲಿ ತೇಲುತ್ತಿರುವ ಸಾಧ್ಯತೆಗಳಿವೆ. ಅದರಿಂದ ಒಂದು ಸಾಧಾರಣ ಕೊಠಡಿಯ ಮೂಲೆಮೂಲೆಗೂ ಸೋಂಕು ಹರಡುವ ವೈರಾಣು ಕಣಗಳು ಹರಡುವ ಸಾಧ್ಯತೆಯಿದೆ. ನೀವು ಅಂತಹ ಕೊಠಡಿಗೆ ಸೋಂಕಿತರು ಕೆಮ್ಮಿದ ಅಥವಾ ಸೀನಿದ ಕೆಲವು ನಿಮಿಶಗಳ ನಂತರ ಒಳಹೊಕ್ಕು, ಕೆಲವು ಉಚ್ಚ್ವಾಸಗಳನ್ನು ಸಹಜ ಉಸಿರಾಟದ ಭಾಗವಾಗಿ ಎಳೆದುಕೊಂಡರಷ್ಟೇ ಸಾಕು, ಆ ಉಸಿರಾಟದಿಂದ ನೀವು ಸೋಂಕಿತರಾಗಬಹುದಾದಷ್ಟು ವೈರಾಣು ಕಣಗಳು ನಿಮ್ಮ ಒಳಸೇರಿರುತ್ತವೆ.

ಆದರೆ ಸಹಜ ಉಸಿರಾಟದಲ್ಲಿ, ಅಂದರೆ ಪರಿಸರಕ್ಕೆ ಒಂದು ನಿಮಿಶಕ್ಕೆ 20 ಪ್ರತಿಗಳಂತೆ, ಎಲ್ಲಾ ವೈರಾಣುಗಳೂ ನಿಮ್ಮ ಶ್ವಾಸಕೋಶವನ್ನು ಸೇರಿದರೂ ನಿಮಗೆ ಸೋಂಕಿತರಾಗಲು 1000 ಪ್ರತಿಗಳು ಬೇಕು. ಅಂದರೆ 1000 ವನ್ನು 20 ರಿಂದ ಭಾಗಿಸಿದರೆ 50 ನಿಮಿಶಗಳಾದರೂ ನೀವು ಅಲ್ಲಿ ಉಸಿರಾಡಬೇಕು.

5. ಮಾತನಾಡುವುದು : ಮಾತನಾಡುವುದರಿಂದ ಉಸಿರಾಟದಿಂದ ಹೊರಬರುವ ಕಣಗಳ ಮಟ್ಟ ಹತ್ತರಷ್ಟು ಹೆಚ್ಚುತ್ತದೆ. ಪ್ರತಿ ನಿಮಿಶಕ್ಕೆ 200 ಪ್ರತಿಗಳು. ಎಲ್ಲಾ ವೈರಾಣು ಕಣಗಳನ್ನೂ ನಾವು ಒಳಗೆಳೆದುಕೊಳ್ಳುತ್ತೇವೆಂದು ಇಟ್ಟುಕೊಂಡರೂ ಸೋಂಕಾಗಲು ಬೇಕಾದ ಮಟ್ಟದ ವೈರಾಣುಗಳನ್ನು ಒಳಗೆಳೆದುಕೊಳ್ಳಲು ಮುಖಕ್ಕೆ ಮುಖ ಮಾಡಿ 5 ನಿಮಿಶವಾದರೂ ಮಾತನಾಡಬೇಕು.

ವೈರಾಣುವಿಗೆ ಎಕ್ಸ್ ಬಾರಿ ಒಡ್ಡಿಕೊಳ್ಳುವ ಫಾರ್ಮುಲಾ ದ ಆಧಾರದ ಮೇಲೆ ಸಂಪರ್ಕಕ್ಕೆ ಬಂದವರ ಜಾಡಿಹಿಡಿಯುತ್ತೇವೆ. ನೀವು 10 ನಿಮಿಶಕ್ಕಿಂತ ಹೆಚ್ಚು ಮುಖಾಮುಖಿಯಾಗಿ ಯಾರ್ಯಾರೊಂದಿಗೆ ಕಾಲಕಳೆದಿರುತ್ತೀರೋ ಅವರೆಲ್ಲಾ ಸೋಂಕಾಗಬಲ್ಲ ಸಾಧ್ಯತೆಯವರು. ನಿಮ್ಮೊಂದಿಗೆ ಯಾರ್ಯಾರು ಒಂದೇ ಸ್ಥಳಗಳಲ್ಲಿ ಹೆಚ್ಚು ಕಾಲ ಇರುತ್ತಾರೋ ( ಕಚೇರಿಗಳಲ್ಲಿ) ಅವರೆಲ್ಲಾ ಸೋಂಕಾಗಬಲ್ಲ ಸಾಧ್ಯತೆಯವರು. ಇದರಿಂದಾಗಿಯೇ ಸೋಂಕಿನ ಲಕ್ಷಣಗಳಿರುವ ಎಲ್ಲಾರೂ ಮನೆಯೊಳಗಿರಬೇಕಾದದ್ದು ಅತ್ಯಂತ ಮುಖ್ಯ. ನಿಮ್ಮ ಕೆಮ್ಮು ಮತ್ತು ಸೀನು ಎಷ್ಟರ ಮಟ್ಟಿಗೆ ವೈರಾಣು ಕಣಗಳನ್ನು ಹೊರಹಾಕುತ್ತದೆಯೆಂದರೆ, ಅವು ಒಂದು ಕೊಠಡಿಯ ತುಂಬಾ ಇರುವ ಎಲ್ಲಾ ಜನರನ್ನೂ ಸೋಂಕಿಗೆ ಒಳಪಡಿಸಬಲ್ಲದು.

ಸೋಂಕನ್ನು ಹರಡುವಲ್ಲಿ ಸೋಂಕಿನ ಲಕ್ಷಣಗಳಿಲ್ಲದ ಜನರ ಪಾತ್ರವೇನು?

ವೈರಾಣು ಹೊರಬೀಳುವುದು ಸೋಂಕು ಲಕ್ಷಣಗಳಿರುವ ವ್ಯಕ್ತಿಗಳಿಂದ ಮಾತ್ರವಲ್ಲ. ನಮಗೆ ಗೊತ್ತಿರುವಂತೆ ಸುಮಾರು 44 % ಜನರು – ಮತ್ತು ಸಮುದಾಯದಿಂದ ಸೋಂಕು ಪಡೆದ ಬಹುಸಂಖ್ಯಾತರು –ಯಾವುದೇ ಸೋಂಕಿನ ಲಕ್ಷಣವನ್ನು ತೋರ್ಪಡಿಸದ ಜನರಿಂದ ಸೋಂಕಾಗಿರುತ್ತಾರೆ.
( ಸೋಂಕಿನ ಲಕ್ಷಣರಹಿತ ಜನರು ಮತ್ತು ಸೋಂಕು-ಪೂರ್ವ ಸ್ಥಿತಿಯ ಜನರು) ನೀವು ಸೋಂಕಿನ ರಕ್ಷಣಗಳು ಕಾಣುವ 5 ದಿನಗಳ ಮೊದಲೇ ಪರಿಸರಕ್ಕೆ ವೈರಾಣುಗಳನ್ನು ಉದುರಿಸಿ ಪಸರಿಸುತ್ತಿರಬಹುದು.

ಸೋಂಕು ಅಂಟಿದ ಜನರು ಯಾವ ವಯಸ್ಸಿನವರಾದರೂ ಆಗಿರಬಹುದು. ಅವರೆಲ್ಲರೂ ಬೇರೆಬೇರೆ ಪ್ರಮಾಣದಲ್ಲಿ ವೈರಾಣುಗಳನ್ನು ಹರಡುತ್ತಾರೆ. ಕೆಳಗಿನ ಚಿತ್ರದಲ್ಲಿ ತೋರಿಸಿರುವಂತೆ, ನಿಮ್ಮ ವಯಸ್ಸು ಎಷ್ಟೇ ಆಗಿರಲಿ (x-axis ), ನಿಮ್ಮಲ್ಲಿ ಸ್ವಲ್ಪ ಪ್ರಮಾಣದಲ್ಲಿ ವೈರಾಣು ಇರಬಹುದು ಅಥವಾ ದೊಡ್ಡ ಪ್ರಮಾಣದಲ್ಲಿ ವೈರಾಣು ಇರಬಹುದು. (y-axis). (ref)

ಸೋಂಕು ತಗುಲಿದ ವ್ಯಕ್ತಿಯಿಂದ ಹೊರಬೀಳುವ ವೈರಾಣುಗಳ ಪ್ರಮಾಣ ಸೋಂಕಿನ ಅವಧಿಯಲ್ಲಿ ಮಾರ್ಪಾಡಾಗುತ್ತದೆ. ಅದು ವ್ಯಕ್ತಿಯಿಂದ ವ್ಯಕ್ತಿಗೂ ಬದಲಾಗುತ್ತದೆ. ಸಾಧಾರಣವಾಗಿ ವೈರಾಣುಗಳ ಹೊರೆ ಒಂದು ಹಂತದವರೆಗೆ ರೋಗಿಯಲ್ಲಿ ಏರಿದಾಗ ಆ ವ್ಯಕ್ತಿ ಸೋಂಕುಲಕ್ಷಣಗಳನ್ನು ತೋರಿಸಲು ತೊಡಗುತ್ತಾನೆ. ಆದ್ದರಿಂದ ನಿಮ್ಮ ಸೋಂಕು ಲಕ್ಷಣಗಳು ತೋರುವುದಕ್ಕೆ ಸ್ವಲ್ಪ ಮುಂಚಿತವಾಗಿ ನೀವು ಅತ್ಯಂತ ಹೆಚ್ಚು ಪ್ರಮಾಣದಲ್ಲಿ ವೈರಾಣುಗಳನ್ನು ಪರಿಸರಕ್ಕೆ ಹೊರಹಾಕುತ್ತಿರುತ್ತೀರಿ. ಆಸಕ್ತಿಕರವಾದ ವಿಷಯವೆಂದರೆ, ಡೇಟಾಗಳ ಪ್ರಕಾರ, ಬರೇ 20% ಸೋಂಕಿತ ವ್ಯಕ್ತಿಗಳು, ಪರಿಸರಕ್ಕೆ ಹೊರಚೆಲ್ಲಲಾಗುವ 99% ವೈರಾಣುಗಳ ಹೊರೆಗೆ ಜವಾಬುದಾರರು.

ಈಗ ವಿಷಯದ ಕೇಂದ್ರಕ್ಕೆ ಬರೋಣ. ಕಟ್ಟಳೆಗಳನ್ನು ನಿಲ್ಲಿಸಿ ಮತ್ತೆ ಮರುತೆರೆಯುವುದರಿಂದ ವೈಯಕ್ತಿಕವಾಗಿ ಆಗುವ ಅಪಾಯಗಳೇನು?

ನೀವು ಸೋಂಕುಸ್ಫೋಟದ ಗೊಂಚಲುಗಳನ್ನು ಗಮನಿಸಿದಾಗ, ಎಲ್ಲೆಲ್ಲಿ ದೊಡ್ಡ ಗೊಂಚಲುಗಳು ತಲೆಯೆತ್ತಬಹುದೆಂದು ನಿಮ್ಮ ಮನಸ್ಸಿಗೆ ಅನ್ನಿಸುತ್ತದೆ? ಬಹಳಷ್ಟು ಜನ ಉಲ್ಲಾಸದ ಹಡಗು ಯಾತ್ರೆಗಳ ಬಗ್ಗೆ ಆಲೋಚಿಸಿರಬಹುದು. ಆದರೆ ಅದು ತಪ್ಪು. ಹಡಗು ಯಾತ್ರೆಗಳಲ್ಲಿ ಆಗಿರುವ ಸೋಂಕುಗಳು ಈ ತನಕ ಹರಡಿರುವ ಸೋಂಕಿನಲ್ಲಿ ಮೊದಲ 50 ಅಂಕೆಗಳಲ್ಲಿ ಕೂಡ ಹೆಸರಿಸಲ್ಪಡುವುದಿಲ್ಲ. ನಾವು ಆಸ್ಪತ್ರೆಗಳಲ್ಲಿ ನಡೆದಿರುವ ಸೋಂಕುಗಳನ್ನು ಅತ್ತ ಬದಿಗಿಟ್ಟರೆ, ಅದನ್ನು ಬಿಟ್ಟು ಹೆಚ್ಚುಹೆಚ್ಚು ಸೋಂಕು ಹರಡಿದ ಸ್ಥಳಗಳೆಂದರೆ ಜೈಲುಗಳು, ಧಾರ್ಮಿಕ ಸಮಾರಂಭಗಳು, ಮತ್ತು ಕೆಲವು ಕೆಲಸ ಮಾಡುವ ಸ್ಥಳಗಲು; ಅಂದರೆ ಮಾಂಸ ಪ್ಯಾಕ್ ಮಾಡುವ ಕಾರ್ಯಾಗಾರಗಳು ಮತ್ತು ಕಾಲ್ ಸೆಂಟರುಗಳು. ಒಂದು ಜನ ಸಾಂದ್ರತೆ ಹೆಚ್ಚಾಗಿರುವ, ಗವಾಕ್ಷಿಗಳಿಲ್ಲದ ಗಾಳಿ ಸಲೀಸಾಗಿ ಸುಳಿದಾಡದ ಆವೃತವಾದ ಸ್ಥಳದಲ್ಲಿ ಸೋಂಕಿನ ಅಪಾಯ ಬಹಳ ಹೆಚ್ಚು.

ಕೆಲವು ಅತಿ ಹೆಚ್ಚು ಸೋಂಕು ಹರಡುವಿಕೆಯ ಘಟನೆಗಳು ಇಂತಿವೆ:

* ಮಾಂಸ ಪ್ಯಾಕ್ ಮಾಡುವುದು.

ಮಾಂಸ ಪರಿಷ್ಕರಿಸುವ ಕಾರ್ಯಾಗಾರಗಳಲ್ಲಿ ಕಾರ್ಮಿಕರು ಕಿವಿಗಡಚಿಕ್ಕುವ ಮಶೀನುಗಳ ಶಬ್ದಮಾಲಿನ್ಯದಲ್ಲಿ ದನಿಯೇರಿಸಿ ಒಬ್ಬರೊಂದಿಗೊಬ್ಬರು ಮಾತನಾಡಬೇಕು. ಅದರಲ್ಲೂ ಅವರು ಕೆಲಸ ಮಾಡುವ ಸ್ಥಳ ವೈರಾಣುಗಳನ್ನು ಸಂರಕ್ಷಿಸುವ ತಂಪಾದ ಕೊಠಡಿಗಳು. ಇದೀಗ 23 ರಾಜ್ಯಗಳಲ್ಲಿ ಅಂಥಾ 115 ಕೇಂದ್ರಗಳಲ್ಲಿ ಸೋಂಕುಸ್ಫೋಟವಾಗಿದ್ದು 5000 ಕ್ಕೂ ಹೆಚ್ಚು ಸೋಂಕಿತರಾಗಿದ್ದು ಅವರಲ್ಲಿ 20 ಜನ ಮೃತಪಟ್ಟಿದ್ದಾರೆ. (ref)

* ಮದುವೆಗಳು, ಅಂತ್ಯಕ್ರಿಯೆಗಳು ಮತ್ತು ಹುಟ್ಟಿದ ಹಬ್ಬಗಳು : ಮೊದಮೊದಲ ಹರಡುವಿಕೆಯ 10% ಇವುಗಳಲ್ಲಿ ನಡೆದಿತ್ತು.

*ವ್ಯಾಪಾರಕ್ಕಾಗಿ ನಡೆಯುವ ಸಂಪರ್ಕಜಾಲಗಳು. ಮುಖಾಮುಖಿ ವ್ಯಾಪಾರೀ ಸಂಪರ್ಕಜಾಲಗಳು. ಉದಾಹರಣೆಗೆ ಬಾಸ್ಟನ್ನಿನಲ್ಲಿ ಮಾರ್ಚಿಯಲ್ಲಿ ನಡೆದ ಬಯೋಜೆನ್ ಸಮಾವೇಶ.

ಈಗ ಮತ್ತೆ ನಾವು ಕೆಲಸಕ್ಕೆ ಹೊರಡುವ ಮೊದಲು ಅಥವಾ ಉಪಹಾರ ಗೃಹಗಳಿಗೆ ಹೋಗುವ ಮೊದಲು ಅಂಥಹ ಪರಿಸರಗಳಲ್ಲಿ ಏನಾಗುತ್ತದೆ ಎಂದು ಗಮನಿಸೋಣ.

ಉಪಹಾರ ಗೃಹಗಳು : ಕೆಲವು ಶೂ-ಲೆದರ್ ಎಪಿಡಿಮೊಲಜಿಯಿಂದ ( ಇದೊಂದು ರೀತಿಯ ಅತಿ ವಿವರವಾಗಿ ಕಷ್ಟಪಟ್ಟು ಮನೆಮನೆಗೆ ಅಲೆದು ಸೋಂಕುಗಳ ಬಗ್ಗೆ ಡೇಟಾ ಸಂಗ್ರಹಿಸುವ ವಿಧಾನ) ಒಂದು ಏಕ ಸೋಂಕುಲಕ್ಷಣರಹಿತ ವ್ಯಕ್ತಿಯಿಂದ ಉಪಹಾರಗೃದ ಮೇಲೆ ಆದ ಪರಿಣಾಮವನ್ನು ಸಾಬೀತುಪಡಿಸಲಾಯಿತು. ( ಕೆಳಗಿನ ಚಿತ್ರ ನೋಡಿ). ಸೋಂಕು ತಗುಲಿದ ವ್ಯಕ್ತಿ ( A 1) ಒಂದು ಟೇಬಲ್ಲಿನಲ್ಲಿ 9 ಮಂದಿಗಳೊಂದಿಗೆ ಕುಳಿತು ಊಟ ಮಾಡಿದ. ಊಟ ಸುಮಾರು ಒಂದರಿಂದ ಒಂದೂವರೆ ಘಂಟೆಗಳಷ್ಟು ಕಾಲ ಜರುಗಿತು. ಊಟ ನಡೆಯುವಾಗ ಸೋಂಕುಲಕ್ಷಣಗಳಿಲ್ಲದ ಆ ವ್ಯಕ್ತಿ ನಿಧಾನವಾಗಿ ವೈರಾಣುಗಳನ್ನು ತನ್ನ ಉಸಿರಾಟದ ಮೂಲಕ ಪರಿಸರಕ್ಕೆ ಹೊರಬಿಡುತ್ತಿದ್ದ. ಉಪಹಾರ ಗೃಹದ ಗಾಳಿ ಚಲಿಸಲು ಇದ್ದ ಗವಾಕ್ಷಿಗಳಿಂದ ಗಾಳಿ ಬಲದಿಂದ ಎಡಕ್ಕೆ ಚಲಿಸುತ್ತಿತ್ತು. ಮುಂದಿನ 7 ದಿನಗಳಲ್ಲಿ ಆ ಟೇಬಲ್ಲಿನಲ್ಲಿದ್ದ ಸುಮಾರು 50% ಜನರು ಸೋಂಕುಪೀಡಿತರಾದರು. ಗಾಳಿ ಚಲಿಸುವ ದಿಕ್ಕಿನಲ್ಲಿದ್ದ ಮತ್ತೊಂದು ಟೇಬಲ್ಲಿನಲ್ಲಿದ್ದ ಸುಮಾರು 75% ಜನರು ಸೋಂಕು ಪೀಡಿತರಾದರು. ಗಾಳಿಯ ದಿಕ್ಕಿನ ಎದುರು ದಿಕ್ಕಿನಲ್ಲಿದ್ದ 7 ಜನರಲ್ಲಿ ಕೂಡಾ ಇಬ್ಬರು ಸೋಂಕಿತರಾದರು. ಅದನ್ನು ಗಾಳಿಯ ಚಡಪಡಿಸುವ ಬೀಸುವಿಕೆಯಿಂದೆನ್ನಲಾಗಿದೆ. E ಮತ್ತು F ಟೇಬಲ್ಲಿನಲ್ಲಿ ಯಾರಿಗೂ ಸೋಂಕು ತಗುಲಲಿಲ್ಲ. ಅವರು ವಾತಾನುಕೂಲಿಯ ಗಾಳಿ ಚಲಿಸುವ ಮುಖ್ಯವಾಹಿನಿಯ ಹೊರಗೆ, ಮತ್ತು ಗಾಳಿಯನ್ನು ಕೊಠಡಿಯಿಂದ ಹೊರಸೆಳೆಯುವ ಪಂಖದ ಬಲಬದಿಯಲ್ಲಿ, ಅಂದರೆ ಕೋಣೆಯ ಎಡಬದಿಯಲ್ಲಿದ್ದರು. (Ref)

ಕೆಲಸ ಮಾಡುವ ಸ್ಥಳಗಳು :

ಮತ್ತೊಂದು ಒಳ್ಳೆಯ ಉದಾಹರಣೆ ಎಂದರೆ ಅದು ಒಂದು ಕಾಲ್ ಸೆಂಟರಿನಲ್ಲಿ ನಡೆದದ್ದು. (ಕೆಳಗೆ ನೋಡಿ). ಒಬ್ಬ ಸೋಂಕಿತ ವ್ಯಕ್ತಿ ಒಂಟಿಯಾಗಿ ಒಂದು ಕಟ್ಟಡದ 11 ನೇ ಮಹಡಿಗೆ ಕೆಲಸ ಮಾಡಲು ಬಂದನು. ಆ ಮಹಡಿಯಲ್ಲಿ 216 ಮಂದಿ ಕೆಲಸಗಾರರಿದ್ದರು. ಮುಂದಿನ ಒಂದು ವಾರದಲ್ಲಿ ಅವರಲ್ಲಿ 94 ಜನ ಸೋಂಕಿಗೆ ಒಳಗಾದರು. (43.5% = ನೀಲಿ ಕುರ್ಚಿಗಳು). ಆ 94 ಜನರಲ್ಲಿ 92 ರೋಗಗ್ರಸ್ಥರಾದರು. ( ಇಬ್ಬರು ಮಾತ್ರ ಯಾವ ರೋಗಲಕ್ಷಣಗಳನ್ನೂ ತೋರ್ಪಡಿಸಲಿಲ್ಲ. ಗಮನಿಸಿ. ಕಚೇರಿಯ ಒಂದು ಬದಿಯಲ್ಲಿ ಕೆಲಸ ಮಾಡುವವರು ಹೆಚ್ಚಾಗಿ ಸೋಂಕಿತರಾಗಿದ್ದಾರೆ ಮತ್ತು ಇನ್ನೊಂದು ಬದಿಯಲ್ಲಿ ಕುಳಿತು ಕೆಲಸ ಮಾಡುವವರಲ್ಲಿ ಕೆಲವೇ ಕೆಲವು ಮಂದಿಗೆ ಸೋಂಕು ತಗುಲಿದೆ.

ಸೋಂಕು ತಗುಲಿದವರಲ್ಲಿ ಎಷ್ಟು ಜನರಿಗೆ ಮೂಲತಃ ಉಸಿರಾಟದ ಹನಿಗಳಿಂದ ಅಥವಾ ಉಸಿರಾಟಕ್ಕೆ ಒಡ್ಡಿಕೊಂಡಿರುವುದರಿಂದ ಸೋಂಕು ತಗುಲಿತು ಮತ್ತು ಇನ್ನೆಷ್ಟು ಮಂದಿಗೆ ಸೋಂಕಿನ ಕಣಗಳು ಮೇಲ್ಮೈಗಳಲ್ಲಿ( ಬಾಗಿಲಿನ ತಿರುಗು-ಕೈಹಿಡಿಗಳು, ತಂಪಾದ ಕುಡಿಯುವ ನೀರು ಸಿಗುವ ಉಪಕರಣವನ್ನು ಎಲ್ಲಾರೂ ಬಳಸಿಕೊಳ್ಳುವುದರಿಂದ ಅಥವಾ ಲಿಫ್ಟ್ ನಲ್ಲಿನ ಬಟನ್ ಗಳು ) , ಇದ್ದು ಅವುಗಳ ಸಂಪರ್ಕದಿಂದ ಸೋಂಕುತಗುಲಿತು ಎಂದು ನಿರ್ಧರಿಸುವುದು ಕಷ್ಟ. ಆದರೆ ಇಷ್ಟನ್ನು ಮಾತ್ರಾ ಖಚಿತವಾಗಿ ಒತ್ತುಕೊಟ್ಟು ಹೇಳಬಹುದು ; ಒಂದು ಆವೃತ ಸ್ಥಳದಲ್ಲಿ, ಹೆಚ್ಚು ಸಮಯದವರೆಗೆ ಅಲ್ಲಿರುವ ಗಾಳಿಯನ್ನು ಹಂಚಿಕೊಳ್ಳುತ್ತಾ ಕಾಳಕಳೆಯುವುದರಿಂದ ನಿಮಗೆ ಸೋಂಕಿಗೆ ನಿಮ್ಮನ್ನು ಒಡ್ಡಿಕೊಳ್ಳುವ ಮತ್ತು ಸೋಂಕನ್ನು ತಗುಲಿಸಿಕೊಳ್ಳುವ ಅವಕಾಶಗಳು ಹೆಚ್ಚಾಗುತ್ತವೆ. ಆ ಕಟ್ಟಡದ ಬೇರೆ ಮಜಲುಗಳಲ್ಲಿ 3 ಮಂದಿ ಸೋಂಕಿಗೆ ಒಳಗಾದರು, ಆದರೆ ಅವರನ್ನು ಮೊದಲಿನ 11 ನೇ ಮಹಡಿಯ ಸೋಂಕಿನ ಗೊಂಚಲಿಗೆ ಕೊಂಡಿಹಾಕಲಾಗಲಿಲ್ಲ. ಆಸಕ್ತಿಕರ ವಿಷಯವೆಂದರೆ ಆ ಕಟ್ಟಡದಲ್ಲಿ ಬೇರೆ ಎಲ್ಲಾ ಮಜಲುಗಳಲ್ಲಿ ಕೆಲಸ ಮಾಡುವ ಎಲ್ಲಾ ಕೆಲಸಗಾರರಿಗೂ ಲಿಫ್ಟ್ ಗಳಲ್ಲಿ, ಪ್ರವೇಶದ ಹತ್ತಿರದ ಆಹ್ವಾನ ಕೊಠಡಿಯಲ್ಲಿ ಬೇಕಾದಷ್ಟು ಒಬ್ಬರೊಡನೊಬ್ಬರಿಗೆ ಸಂಪರ್ಕಗಳಿದ್ದರೂ ಸೋಂಕಿನ ಸ್ಫೋಟ ಹೆಚ್ಚುಕಡಿಮೆ 11 ನೇ ಮಹಡಿಗೆ ಮಾತ್ರ ಮೀಸಲಾಗಿತ್ತು. (ref). ಇದು ಸಾರ್ಸ್-ಕೋವಿ19ನಿನ ಹರಡುವಿಕೆಗೆ ಒಡ್ಡಿಕೊಳ್ಳುವಿಕೆ ಮತ್ತು ಹಾಗೆ ಒಡ್ಡಿಕೊಳ್ಳುವುದರ ಕಾಲಾವಧಿ ಎಷ್ಟು ಮುಖ್ಯ ಎಂಬುದನ್ನು ಎತ್ತಿ ತೋರಿಸುತ್ತದೆ.

ಖ್ವಾಯಿರ್ ( ವಾಶಿಂಗ್ಟನ್ ರಾಜ್ಯದ ಚರ್ಚುಗಳಲ್ಲಿ ನಡೆಯುವ ಸಮೂಹಗಾನ ತಂಡಗಳು) : ಈ ವೈರಾಣುವಿನ ಬಗ್ಗೆ ಜನರಿಗೆ ಗೊತ್ತಿದ್ದೂ ಮತ್ತು ಅವರು ಅದರ ವರ್ಗಾವಣೆಯನ್ನು ಅತಿ ಕಡಿಮೆ ಮಾಡಲು ಕ್ರಮಗಳನ್ನು ತೆಗೆದುಕೊಂಡಿದ್ದಾಗ್ಯೂ ಸಹ — ಉದಾಹರಣೆಗೆ ಸಾಧಾರಣವಾಗಿ ನಡೆಯುತ್ತಿದ್ದ ಕೈಕುಲುಕುವಿಕೆ ಅಥವಾ ಮೈತ್ರಿಯ ಅಪ್ಪುಗೆ ಹಲೋಗಳನ್ನು ತ್ಯಜಿಸಿದ್ದು, ತಂಡದ ಜನರು ತಮ್ಮತಮ್ಮ ಸಂಗೀತ ಬರೆದ ಪುಸ್ತಕಗಳನ್ನು ತಾವೇ ತಂದುಕೊಂಡು ಅವನ್ನು ಹಂಚಿಕೊಳ್ಳುವುದನ್ನು ಕಡಿಮೆ ಮಾಡಿಕೊಂಡಿದ್ದು, ಮತ್ತು ಅಭ್ಯಾಸದ ಸಮಯದಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡಿದ್ದು —-ಇಷ್ಟೆಲ್ಲಾ ಮಾಡಿದಾಗ್ಯೂ, ರೋಗಲಕ್ಷಣರಹಿತ ಸೋಂಕು ಹೊಂದಿದ್ದ ಏಕ ವ್ಯಕ್ತಿಯೊಬ್ಬನಿಂದ ಅಭ್ಯಾಸಕ್ಕೆ ಹಾಜರಿದ್ದ ಹೆಚ್ಚಿನ ವ್ಯಕ್ತಿಗಳಿಗೆ ಸೋಂಕು ತಗುಲಿತು. ಸಮೂಹಗಾನ ತಂಡ, ಒಂದು ವಾಲೀಬಾಲ್ ಆಟದ ಮೈದಾನದಷ್ಟು ದೊಡ್ಡದಿದ್ದ ಒಂದು ಆವೃತವಾದ ಕೊಠಡಿಯಲ್ಲಿ ಸೇರಿ ಒಟ್ಟಾಗಿ 2 ರಿಂದ ಎರಡೂವರೆ ಘಂಟೆಗಳ ಕಾಲ ಹಾಡಿದರು.
ಮಾತನಾಡುವುದಕ್ಕಿಂತ ಹೆಚ್ಚಾಗಿ ಹಾಡುವುದರಿಂದ ಉಸಿರಾಟದಲ್ಲಿ ಹೊರ ಬೀಳುವ ಹನಿಗಳು ಅಸಾಧಾರಣ ಮಟ್ಟದಲ್ಲಿ ಚೆನ್ನಾಗಿ ಗಾಳಿಯಲ್ಲಿ ಹರಡಿ, ಮೋಡದ ಆವಿಯ ನೀರ ಕಣಗಳಂತೆ ಪರಿಸರದಲ್ಲಿ ತೇಲುತ್ತವೆ. ಹಾಡುವಾಗ ತೆಗೆದುಕೊಳ್ಳುವ ನಿಡಿದಾದ ಉಸಿರು ಆ ಹನಿಗಳು ಶ್ವಾಸಕೋಶದ ಆಳದವರೆಗೂ ಹೋಗಿ ಸೇರಲು ಅನುಕೂಲ ಮಾಡಿಕೊಡುತ್ತವೆ. ಎರಡೂವರೆ ಘಂಟೆಗಳ ಕಾಲಾವಧಿಯಲ್ಲಿ ಆ ಜನರು ಸೋಂಕು ತಗುಲಲು ಅನುಕೂಲಕರವಾದ ಮಟ್ಟದಲ್ಲಿ ಮತ್ತು ಅವಧಿಯಲ್ಲಿ ಸೋಂಕಿಗೆ ತಮ್ಮನ್ನು ತಾವು ಒಡ್ಡಿಕೊಂಡರು. ಮುಂದಿನ 4 ದಿನದಲ್ಲಿ 60 ಜನರ ಆ ತಂಡದ 45 ಮಂದಿ ರೋಗಲಕ್ಷಣಗಳನ್ನು ತೋರ್ಪಡಿಸಿದರು. ಇಬ್ಬರು ಮೃತಪಟ್ಟರು. ಸೋಂಕು ತಗುಲಿದ ಅತಿ ಸಣ್ಣ ಪ್ರಾಯದ ವ್ಯಕ್ತಿಗೆ 31 ವರ್ಷ ವಯಸ್ಸಾಗಿತ್ತು. ಆ ಸೋಂಕು ತಗುಲಿದ ಗುಂಪಿನ ಸರಾಸರಿ ವಯಸ್ಸು 67.

ಒಳಾಂಗಣ ಕ್ರೀಡೆಗಳು : ಈ ಘಟನೆ ಕೆನಡಾ ದೇಶಕ್ಕೆ ಮಾತ್ರ ವಿಶಿಷ್ಟವಾಗಿರಬಹುದು. ಕೆನಡಾದ ಒಂದು ಕರ್ಲಿಂಗ್ ಆಟದ ( ನುಣುಪಾದ ಹಿಮದ ನೆಲದ ಮೇಲೆ ಬಿಲ್ಲೆಗಳನ್ನು ತಮ್ಮ ಕೈಯಲ್ಲಿ ಹಿಡಿದ ಕೋಲುಗಳಿಂದ ಹೊಡೆದು ಸರಿಸುತ್ತಾ ನಾಲ್ಕೂ ತುದಿಗಳಲ್ಲಿರುವ ಬುಟ್ಟಿಗಳೊಳಗೆ ಬೀಳಿಸುವ ಒಂದು ಆಟ)ಸಂದರ್ಭವು ಸೋಂಕಿನ ಮಹಾ-ಹರಡುವಿಕೆಯ ಘಟನೆಯಾಯಿತು. ಈ ಆಟದಲ್ಲಿ ಅಂದು 72 ಭಾಗವಹಿಸುವವರಿದ್ದರು. ಅಲ್ಲಿ ರೋಗ ಸಂಪರ್ಕದ ಅಪಾಯದ ಕೇಂದ್ರ ಏರ್ಪಟ್ಟಿತು. ಕರ್ಲಿಂಗ್ ಆಟವಾಡುವಾಗ ಸ್ಪರ್ದಿಗಳು ಒಂದು ತಂಪಾದ ಒಳಾಂಗಣ ಪರಿಸರದಲ್ಲಿ ಒಬ್ಬರಿಗೊಬ್ಬರು ಹತ್ತಿರದ ಸಂಪರ್ಕದಲ್ಲಿರುತ್ತಾರೆ. ಅವರು ದೀರ್ಘಾವಧಿಯಲ್ಲಿ ಆಳವಾದ ಉಸಿರಾಟ ಮಾಡುತ್ತಿರುತ್ತಾರೆ. ಈ ಆಟದ ಸ್ಪರ್ದೆಯಲ್ಲಿ ಭಾಗವಹಿಸಿದ 72 ಜನರಲ್ಲಿ 24 ಜನರಿಗೆ ಸೋಂಕು ತಗುಲಿತು.

ಹುಟ್ಟುಹಬ್ಬದ ಸಮಾರಂಭಗಳು ಮತ್ತು ಅಂತ್ಯಕ್ರಿಯೆಯ ಸಂದರ್ಭಗಳು :
ಒಂದು ಸೋಂಕಿನ ಸರಪಳಿ ಎಷ್ಟು ಸರಳವಾಗಿರುತ್ತದೆ ಎಂದು ಅರಿಯಲು ಶಿಕಾಗೋ ನಗರದ ಈ ನೈಜ ಘಟನೆಯನ್ನು ನೋಡೋಣ. ಇಲ್ಲಿ ಹೆಸರುಗಳನ್ನು ಬದಲಾಯಿಸಲಾಗಿದೆ. ಬಾಬ್‍ಗೆ ಸೋಂಕು ತಗುಲಿತ್ತು, ಆದರೆ ಅವನಿಗೆ ಅದರ ಅರಿವಿರಲಿಲ್ಲ. ಅವನು ಒಂದು ಉಪಹಾರ ಗೃಹದಿಂದ ಮನೆಗೆ ತರಿಸಿದ ಊಟವನ್ನು ಇಬ್ಬರು ತನ್ನ ಕುಟುಂಬದ ಸದಸ್ಯರೊಂದಿಗೆ ಮನೆಯ ಬಡಿಸುವ ಪಾತ್ರೆಗಳಲ್ಲಿ ಹಾಕಿಕೊಂಡು ಎಲ್ಲರೊಂದಿಗೆ ಕುಳಿತು ಊಟ ಮಾಡಿದ. ಊಟ 3 ಘಂಟೆಗಳವರೆಗೆ ಸಾಗಿತು. ಮಾರುದಿನ ಬಾಬ್ ಒಂದು ಅಂತ್ಯಕ್ರಿಯೆಗೆ ಹೋದ. ಅಲ್ಲಿ ಅವನು ತನ್ನ ಕುಟುಂಬದವರು ಮತ್ತಿತರ ನೆರೆದವರನ್ನು ಸಂತಾಪಸೂಚಕವಾಗಿ ಅಪ್ಪಿಕೊಂಡ. 4 ದಿನಗಳ ಒಳಗೆ ಅವನೊಂದಿಗೆ ಊಟ ಮಾಡಿದ ಅವನ ಕುಟುಂಬದ ಇಬ್ಬರೂ ಸೋಂಕಿಗೊಳಗಾಗಿದ್ದರು. ಮೂರನೆಯವನೊಬ್ಬ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಬಾಬ್‍ನಿಂದ ಅಪ್ಪುಗೆ ಪಡೆದವನು ಕೂಡ ಸೋಂಕಿತನಾದ. ಅಷ್ಟಕ್ಕೇ ಬಾಬ್ ನಿಲ್ಲಿಸಲಿಲ್ಲ. ಅವನು ಅಲ್ಲಿಂದ 9 ಜನರಿದ್ದ ಒಂದು ಹುಟ್ಟುಹಬ್ಬದ ಸಮಾರಂಭದಲ್ಲೂ ಭಾಗವಹಿಸಿದ. 3 ಘಂಟೆ ನಡೆದ ಆ ಸಮಾರಂಭದಲ್ಲಿ ಅವರೆಲ್ಲರೂ ಒಬ್ಬರನ್ನೊಬ್ಬರು ಅಪ್ಪಿದರು ಮತ್ತು ಒಟ್ಟಿಗೆ ಊಟ ಮಾಡಿದರು. ಅವರಲ್ಲಿ 7 ಜನಕ್ಕೆ ಸೋಂಕು ತಗುಲಿತು. ಮುಂದಿನ ಕೆಲವೇ ದಿನಗಳಲ್ಲಿ ಬಾಬ್ ಹುಷಾರು ತಪ್ಪಿದ. ಆಸ್ಪತ್ರೆಗೆ ಸೇರಿಸಲ್ಪಟ್ಟ. ಅವನನ್ನು ವೆಂಟಿಲೇಟರಿನಲ್ಲಿ ಹಾಕಿದ್ದರು. ಅವನು ಮೃತನಾದ.

ಆದರೆ ಅವನ ಪರಿಣಾಮ ಅಲ್ಲಿಗೇ ನಿಲ್ಲಲಿಲ್ಲ. ಹುಟ್ಟುಹಬ್ಬದಲ್ಲಿ ಸೋಂಕಿತರಾದ ಮೂವರು ಮಂದಿ ಚರ್ಚ್‍ಗೆ ಹೋದರು. ಅಲ್ಲಿ ಅವರು ಹಾಡಿದರು ಅಲ್ಲದೆ, ದಕ್ಷಿಣೆ ಹಾಕುವ ತಟ್ಟೆಯನ್ನು ಒಬ್ಬರಿಂದೊಬ್ಬರಿಗೆ ಪಾಸ್ ಮಾಡಿದರು. ಆ ಚರ್ಚಿನ ಸದಸ್ಯರುಗಳು ರೋಗಿಷ್ಟರಾದರು. ಒಟ್ಟಿನಲ್ಲಿ ಬಾಬ್ 5ರಿಂದ 86 ವರ್ಷ ವಯಸ್ಸಿನ 16 ಮಂದಿಗೆ ನೇರವಾಗಿ ಸೋಂಕು ಹರಡುವುದಕ್ಕೆ ಕಾರಣನಾದ.ಆ 16 ಮಂದಿಯಲ್ಲಿ ಮೂರು ಜನ ಮೃತ ಪಟ್ಟರು. ಮನೆಯ ಒಳಗಿನ ಸೋಂಕು ಹರಡುವಿಕೆ ಅಲ್ಲಿಂದ ಹೊರಹೋಗಿ ಅಂತ್ಯಕ್ರಿಯೆ, ಹುಟ್ಟುಹಬ್ಬ ಮತ್ತು ಚರ್ಚಿನ ಗುಂಪುಗಳ ಮೂಲಕ ಸಮುದಾಯಕ್ಕೆ ಬಂದಿರುವುದು ಶಿಕಾಗೋದಲ್ಲಿ ಕೋವಿಡ್-19ನಿನ ಹರಡುವಿಕೆಯ ವಿಸ್ತಾರಕ್ಕೆ ಜವಾಬುದಾರಿಯೆಂದು ಪರಿಗಳಿಸಲಾಗುತ್ತದೆ.

ಸ್ವಲ್ಪ ಸಮಾಧಾನಕರ, ಅಲ್ಲವೇ?

ಸೋಂಕು ಸ್ಫೋಟದ ಸಾಮಾನ್ಯತೆಗಳು
ಈ ಮೇಲಿನ ಸೋಂಕುಸ್ಫೋಟಗಳನ್ನು ಒತ್ತು ಕೊಟ್ಟು ನಿದರ್ಶಿಸಿರುವ ಕಾರಣ ಏನೆಂದರೆ, ಕೋವಿಡ್-19 ರ ಸಾಮಾನ್ಯತೆಗಳನ್ನು ನಿಮಗೆ ತೋರಿಸಿಕೊಡುವುದು. ಈ ಮೇಲಿನ ಎಲ್ಲಾ ಸೋಂಕು ನಡೆದ ಘಟನೆಗಳೂ ಒಳಾಂಗಣದಲ್ಲಿ ನಡೆದವುಗಳು. ಇವುಗಳಲ್ಲಿ ಜನರು ಒಬ್ಬ ಹತ್ತಿರ ಇನ್ನೊಬ್ಬರಿದ್ದುಕೊಂದು ಬಹಳ ಜೋರಾದ ಮಾತುಕತೆ, ಹಾಡುವುದು ಮತ್ತು ಕೂಗಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಇವುಗಳಲ್ಲಿ ಸೋಂಕಿನ ಪ್ರಮುಖ ಮೂಲಗಳು ಎಂದರೆ ಅವು, ಮನೆಗಳು,ಕೆಲಸ ಮಾಡುವ ಸ್ಥಳಗಳು, ಸಾರ್ವಜನಿಕ ಸಂಚಾರ ವಾಹನಗಳು, ಸಮಾಜಿಕ ಕೂಟಗಳು ಮತ್ತು ಉಪಹಾರ ಗೃಹಗಳು. ಸೋಂಕು ಹರಡುವ ಪ್ರಕ್ರಿಯೆಗಳಲ್ಲಿ 90% ಇಂಥ ಸ್ಥಳಗಳಲ್ಲಿಯೇ ಆಗುತ್ತವೆ. ನಾವು ಹಿಂಬಾಲಿಸಿದ ಸೋಂಕಿನ ಜಾಡುಗಳಲ್ಲಿ ಅಂಗಡಿಮುಂಗಟ್ಟುಗಳಿಂದ ಹರಡಿದ ಸೋಂಕುಸ್ಫೋಟ, ಈ ಸೋಂಕುಗಳ ಒಟ್ಟು ಮೊತ್ತದ ಒಂದು ಅತಿ ಸಣ್ಣ ಶತಾಂಶವಾಗಿದೆ.
ಮುಖ್ಯವಾಗಿ, ಸರಿಯಾಗಿ ಸಂಪರ್ಕ ಜಾಡನ್ನು ಪರಿಪಾಲಿಸುತ್ತಿರುವ ದೇಶಗಳಲ್ಲಿ, ಹೊರಾಂಗಣದ ಪರಿಸರದಲ್ಲಿ ಒಂದೇ ಒಂದು ಸೋಂಕುಸ್ಫೋಟ ವರದಿಯಾಗಿದೆ.( ಜಾಡು ಹಿಡಿದ ಸೋಂಕುಗಳ 0.3%ಗಿಂತಾ ಕಡಿಮೆ)

ನನ್ನ ಬರಹದ ಮೊದಲ ಆಲೋಚನೆಯೆಡೆಗೆ ಮತ್ತೆ ಹಿಂದಿರುಗೋಣ.

ಸೋಂಕು ಹರಡಿವಿಕೆ ದೃಷ್ಟಿಯಿಂದ ಬಹಳ ಹೆಚ್ಚು ಜನರಿರುವ ಗಾಳಿ ಸರಿಯಾಗಿ ಆಡದಿರುವ, ಮರುಬಳಕೆಯಾದ ಗಾಳಿಯನ್ನು ಉಪಯೋಗಿಸುತ್ತಿರುವ, ಒಳಾಂಗಣ ಸ್ಥಳಗಳು ಕಾಳಜಿ ವಹಿಸಬೇಕಾದ ಸ್ಥಳಗಳು. ನಮಗೆ ಈಗಾಗಲೇ ತಿಳಿದಂತೆ 60 ಜನ ಒಂದು ವಾಲಿವಾಲ್ ಮೈದಾನದಷ್ಟು ದೊಡ್ಡದಾದ ರೂಮಿನಲ್ಲಿರುವುದರಿಂದ ಸೋಂಕು ಬೃಹತ್ತಾದ ಗಾತ್ರದಲ್ಲಿ ಹರಡುತ್ತದೆ. ( ಖ್ವಾಯಿರ್). ಕಾಲ್ ಸೆಂಟರ್ ಮತ್ತು ಉಪಹಾರ ಗೃಹಗಳಲ್ಲೂ ಅದೇ ಪರಿಸ್ಥಿತಿಯಿರುತ್ತದೆ. ಸಾಮಾಜಿಕ ದೂರವನ್ನು ಕಾಯ್ದುಕೊಳ್ಳುವ ಮಾರ್ಗದರ್ಶೀ ಸಲಹೆಗಳು ಒಳಾಂಗಣದಲ್ಲಿ ನಡೆಯಲಾರವು, ಏಕೆಂದರೆ ನೀವು ಅಲ್ಲಿ ಬಹಳಷ್ಟು ಸಮಯವನ್ನು ಕಳೆಯುತ್ತೀರಿ.ಹಾಗಾಗಿ ಅಂಥ ಸ್ಥಳಗಳಲ್ಲಿ ಕೋಣೆಯ ಇನ್ನೊಂದು ಬದಿಗಿದ್ದ ಜನರಿಗೂ ಸಹ ಸೋಂಕು ತಗುಲಿತ್ತು.
ಇದರ ಮುಖ್ಯ ಅಂಶ ಅಥವಾ ಸಿದ್ಧಾಂತ ಎಂದರೆ ಅದು ವೈರಾಣುಗಳಿಗೆ ಒಂದು ದೀರ್ಘಕಾಲಾವಧಿಯಲ್ಲಿ ಒಡ್ಡಿಕೊಳ್ಳುವುದು.
ಈ ಎಲ್ಲಾ ಸಂದರ್ಭಗಳಲ್ಲೂ ಜನರು ಗಾಳಿಯಲ್ಲಿರುವ ವೈರಾಣುವಿಗೆ ದೀರ್ಘಕಾಲದವರೆಗೆ ( ಘಂಟೆಗಳ ಸಮಯ) ತಮ್ಮನ್ನು ತಾವು ಒಡ್ಡಿಕೊಂಡಿದ್ದರು. ಅವರು 50 ಅಡಿಗಳಷ್ಟು ದೂರದಲ್ಲಿದ್ದರೂ( ಖ್ವಾಯಿರ್ ಮತ್ತು ಕಾಲ್ ಸೆಂಟರ್), ಸ್ವಲ್ಪವೇ ಪ್ರಮಾಣದಲ್ಲಿ ವೈರಾಣು ಅವರನ್ನು ತಲುಪುತ್ತಿದ್ದರೂ ಸಹ ಅವರು ಆ ಸ್ಥಿತಿಯಲ್ಲಿ ದೀರ್ಘಕಾಲದವರೆಗೆ ತಮ್ಮನ್ನು ತಾವು ಒಡ್ಡಿಕೊಳ್ಳುತ್ತಾ ಇದ್ದರೆ, ಸೋಂಕು ತಗುಲಲು ಅಷ್ಟೇ ಸಾಕು; ಕೆಲವು ಸಂದರ್ಭಗಳಲ್ಲಿ ಅದು ಸಾವಿಗೂ ಕಾರಣವಾಗಬಹುದು.
ಸಾಮಾಜಿಕ ದೂರಗಳ ಉದ್ದೇಶ ನಿಮ್ಮನ್ನು ಹೊರಾಂಗಣದಲ್ಲಿ ಅಥವಾ ಕ್ಶಿಪ್ರಕಾಲದವರೆಗೆ ಮಾತ್ರಾ ವೈರಾಣುವಿನ ಸಂಪರ್ಕ ಬರುವಂತೆ ನೋಡಿಕೊಳ್ಳುವುದು. ಅಂತಹ ಸಂದರ್ಭಗಳಲ್ಲಿ ನೀವು ಸೋಂಕು ತಗುಲಲು ಬೇಕಾದ ವೈರಾಣು ಪ್ರಮಾಣದ ಹೊರೆಯನ್ನು ತಲುಪಲು ಸಾಧ್ಯವಾಗುವುದಿಲ್ಲ. ಅಂದರೆ ನೀವು 6 ಅಡಿಗಳಷ್ಟು ದೂರದಲ್ಲಿರುತ್ತೀರಿ , ಅಥವಾ ಗಾಳಿ ಮತ್ತು ಹೊರಾಂಗಣದ ವಿಸ್ತಾರ ವಾತಾವರಣ ಹರಹು ವೈರಾಣುಗಳ ಹೊರೆಯನ್ನು ತಿಳಿಮಾಡಿ ದುರ್ಬಲಗೊಳಿಸುತ್ತದೆ. ಸೂರ್ಯನ ಬೆಳಕು, ಶಾಖ ಮತ್ತು ಗಾಳಿಯಲ್ಲಿರುವ ತೇವಾಂಶಗಳ ವೈರಾಣುವಿನ ಮೇಲಿನ ಪರಿಣಾಮಗಳೆಲ್ಲಾ ಒಟ್ಟಾಗಿ ಸೇರಿ ಹೊರಾಂಗಣದಲ್ಲಿ ಎಲ್ಲರಿಗೂ ವೈರಾಣುಗಳಿಂದಾಗುವ ಅಪಾಯವನ್ನು ಅತಿ ಕಡಿಮೆಮಾಡುತ್ತದೆ.

ಕಿರಾಣಿ ಅಂಗಡಿಗಳಲ್ಲಿ ಅಥವಾ ಮಾಲುಗಳಲ್ಲಿ ಉಸಿರಾಟದ ಮೂಲಕ ಸೋಂಕಿನ ಅಪಾಯವನ್ನು ಅಳೆದು ಪರೀಕ್ಷಿಸುತ್ತಿರುವಾಗ ನೀವು ಗಾಳಿಯ ಗಾತ್ರ (ಅತಿ ದೊಡ್ಡದು), ಜನಸಂಖ್ಯೆ (ಸೀಮಿತಗೊಳಿಸಿದ್ದು) ಮತ್ತು ಜನರು ಅಂಗಡಿಯಲ್ಲಿ ಎಷ್ಟು ಕಾಲದವರೆಗೆ ಇರುತ್ತಾರೆ (ಕೆಲಸಮಾಡುವವರು -ದಿನವೆಲ್ಲಾ, ಗಿರಾಕಿಗಳು-ಒಂದು ಘಂಟೆ)ಎಂಬ ಎಲ್ಲಾ ಅಂಶಗಳನ್ನೂ ಲೆಕ್ಕಕ್ಕೆ ತೆಗೆದುಕೊಳ್ಳಬೇಕು. ಒಟ್ಟಾಗಿ ತೆಗೆದುಕೊಂಡಾಗ, ಒಬ್ಬ ಗಿರಾಕಿಗೆ :- ಕಡಿಮೆ ಸಾಂದ್ರತೆ, ಅಂಗಡಿಯಲ್ಲಿನ ಗಾಳಿಯ ದೊಡ್ಡ ಗಾತ್ರ ಅದರ ಜೊತೆ ನೀವು ಅಲ್ಲಿ ಕಳೆಯುವ ಸೀಮಿತ ಸಮಯ. ಇದೆಲ್ಲಾ ಸೇರಿ ನೀವು ಸೋಂಕನ್ನು ತಗುಲಿಸಿಕೊಳ್ಳಲು ಬೇಕಾಗುವಷ್ಟು ವೈರಾಣುಗಳ ಪ್ರಮಾಣವನ್ನು ಅಲ್ಲಿ ಸ್ವೀಕರಿಸುವ ಅವಕಾಶ ಬಹಳ ಕಡಿಮೆ. ಅದೇ ಅಂಗಡಿಯಲ್ಲಿ ಕೆಲಸ ಮಾಡುವ ಒಬ್ಬ ವ್ಯಕ್ತಿಗೆ ಅವನು ದೀರ್ಘಕಾಲದವರೆಗೆ ಅಂಗಡಿಯಲ್ಲಿ ಕಾಲಕಳೆಯುವುದರಿಂದ ಸೋಂಕಾಗುವಷ್ಟು ಪ್ರಮಾಣದಲ್ಲಿ ವೈರಾಣುಗಳನ್ನು ಅವನು ಒಳತೆಗೆದುಕೊಳ್ಳುವ ಅವಕಾಶಗಳು ಹೆಚ್ಚು. ಆದ್ದರಿಂದ ಅವನ ಕೆಲಸದಲ್ಲಿ ಅಪಾಯ ಹೆಚ್ಚು.

ಒಟ್ಟಿನಲ್ಲಿ ಕೆಲಸ ಮಾಡಲು ಮಿತಿಗಳನ್ನು ಸಡಲಿಸುತ್ತಾ ಬರುತ್ತಿದ್ದಂತೆ, ನಾವು ಹೆಚ್ಚು ಹೆಚ್ಚು ಹೊರಗಡೆ ಹೊರಡಲು ಪ್ರಾರಂಭಿಸುತ್ತೇವೆ. ಕಚೇರಿಗಳ ಚಟುವಟಿಕೆಗಳನ್ನೂ ಬಹುಶಃ ಪುನರಾರಂಭಿಸುತ್ತೇವೆ. ನೀವು ನಿಮ್ಮ ಪರಿಸರವನ್ನು ಅವಲೋಕಿಸಿ, ಆಲೋಚಿಸಿ ನಿರ್ಧರಿಸಬೇಕಾಗುತ್ತದೆ. ಅಂದರೆ, ” ಈ ಜಾಗದಲ್ಲಿ ಎಷ್ಟು ಜನರಿದ್ದಾರೆ ಮತ್ತು ಎಷ್ಟು ಗಾಳಿಯಾಡುತ್ತದೆ; ಹಾಗೂ ಈ ಪರಿಸರದಲ್ಲಿ ನಾನು ಎಷ್ಟು ಕಾಲ ಕಳೆಯಬೇಕು”. ನೀವು ಕೆಲಸ ಮಾಡುವ ಕಚೇರಿ ಒಂದು “ಮುಕ್ತ ನೆಲನಕ್ಷೆಯ” ಕಚೇರಿಯಾಗಿದ್ದರೆ, ನೀವು ಅಲ್ಲಿ ಇರಬಹುದಾದ ಸೋಂಕಿನ ಅಪಾಯವನ್ನು ವಿಮರ್ಶಾತ್ಮಕವಾಗಿ ಅಳೆಯಬೇಕು. ( ಗಾತ್ರ, ಜನಸಂಖ್ಯೆ, ಗಾಳಿಬೀಸುವಿಕೆ ). ನೀಮ್ಮ ಕೆಲಸದಲ್ಲಿ ನೀವು ಮುಖಾಮುಖಿ ಸಂಪರ್ಕಗಳನ್ನಿಟ್ಟುಕೊಳ್ಳಬೇಕಾಗಿದ್ದರೆ ಅಥವಾ ಕೂಗಬೇಕಾಗಿದ್ದರೆ ಅದನ್ನು ಗಮನದಲ್ಲಿಟ್ಟುಕೊಂಡು ಅಪಾಯದ ಮಟ್ಟವನ್ನು ಊಹಿಸಿ ಅಳೆಯ ಬೇಕು.

ನೀವು ಒಂದು ಚೆನ್ನಾಗಿ ಗಾಳಿಯಾಡುವ ಸ್ಥಳದಲ್ಲಿ ಕಡಿಮೆ ಜನರ ಜೊತೆ ಕುಳಿತಿದ್ದರೆ, ಅಪಾಯ ಕಡಿಮೆ. ನೀವು ಮನೆಯ ಹೊರಗಿದ್ದರೆ ಹಾಗೂ ಮತ್ತೊಬ್ಬರ ಪಕ್ಕದಲ್ಲಿ ಹಾದು ಹೋದರೆ, ಸೋಂಕು ತಗುಲಲು ಬೇಕಾಗುವ ” ಪ್ರಮಾಣ ಮತ್ತು ಕಾಲಾವಧಿ” ಗಳನ್ನು ನೆನಪಿನಲ್ಲಿಡಿ. ಅವರಿಂದ ನಿಮಗೆ ಸೋಂಕು ತಗುಲಲು ನೀವು ಅವರಿಂದ ಬೀಸಿ ಬರುವ ಗಾಳಿಯಲ್ಲಿ 5 ನಿಮಿಶಕ್ಕಿಂತಾ ಹೆಚ್ಚು ಕಾಲ ಉಪಸ್ಥಿತರಿರಬೇಕು. ಜಾಗ್ಗಿಂಗ್ ಮಾಡುವ ಜನರು ಆಳವಾದ ಉಸಿರಾಟದಿಂದಾಗಿ ಹೆಚ್ಚು ವೈರಾಣುಗಳನ್ನು ಹೊರಹಾಕುತ್ತಿರುತ್ತಾರೆ; ಆದರೆ ಅವರ ವೇಗದಿಂದಾಗಿ ನೀವು ಆ ವೈರಾಣುಗಳಿಗೆ ಒಡ್ಡಿಕೊಳ್ಳಬಹುದಾದ ಸಮಯವೂ ಅತಿ ಕಡಿಮೆ ಎಂಬುದನ್ನು ನೆನಪಿಡಿ.

ನಾನು ಇಲ್ಲ ಉಸಿರಾಟದಿಂದ ನೀವು ನಿಮ್ಮನ್ನು ಸೋಂಕಿಗೆ ಒಡ್ಡಿಕೊಳ್ಳಬಹುದಾದ ಸಂದರ್ಭಗಳ ಬಗ್ಗೆ ಮಾತನಾಡಿರುವೆ. ಮೇಲ್ಮೈಗಳನ್ನು ಮರೆತು ಬಿಡಬೇಡಿ. ಆ ಸೋಂಕು ತರುವ ಹನಿಗಳು ಎಲ್ಲೋ ಒಂದು ಕಡೆ ಬೀಳುತ್ತವೆ. ಆದ್ದರಿಂದ ನಿಮ್ಮ ಕೈಗಳನ್ನು ಬಾರಿಬಾರಿ ತೊಳೆಯುತ್ತಿರಿ ಮತ್ತು ಕಣ್ಣು ಮೂಗು ಬಾಯಿಗಳನ್ನು ಮುಟ್ಟಿಕೊಳ್ಳಬೇಡಿ.

ನಾವು ನಮ್ಮ ಸಮುದಾಯದ ನಡುವೆ ಹೆಚ್ಚು ಸ್ವತಂತ್ರವಾಗಿ ಓಡಾಡಿ ಕೊಂಡಿರಲು ಮತ್ತು ಹೆಚ್ಚು ಜನರ ಜೊತೆ, ಹೆಚ್ಚು ಸ್ಥಳಗಳಲ್ಲಿ, ಹೆಚ್ಚು ಹೆಚ್ಚು ನಿಯಮಿತವಾಗಿ ಬೆರೆಯಲು ನಮಗೆ ಅನುಮತಿ ಸಿಗುತ್ತಿದ್ದಂತೆಯೇ ನಾವು ಮತ್ತು ನಮ್ಮ ಕುಟುಂಬದವರು ಹೆಚ್ಚು ಹೆಚ್ಚು ಅಪಾಯದ ಸಾಧ್ಯತೆಯಲ್ಲಿರುತ್ತೇವೆ. ನೀವು ನಿಮ್ಮ ವ್ಯಾಪಾರ ವಹಿವಾಟುಗಳನ್ನು ಪುನಃ ತೆರೆಯಲು ಮತ್ತು ಪುನಃ ಕಾರ್ಯಪ್ರವೃತ್ತರಾಗಲು ಕಾಳಜಿಯಿಲ್ಲದೆ, ಹೆದರಿಕೆಯಿಲ್ಲದೆ ಕಾತುರರಾಗಿರಬಹುದು. ಆದರೂ ನೀವು ಈ ವಿಷಯದಲ್ಲಿ ನಿಮ್ಮ ಪಾತ್ರ ವಹಿಸಿ. ಒಂದು ಮುಖ ಕವಚವನ್ನು ಧರಿಸಿ ಹಾಗೂ ಪರಿಸರಕ್ಕೆ ನೀವು ಏನನ್ನೂ ಹೊರಗೆಡಹದಿರಿ. ಹಾಗೆ ಮಾಡುವುದರಿಂದ ಬೇರೆ ಜನರೆಲ್ಲರಿಗೂ ಅಷ್ಟೇ ಅಲ್ಲ, ನಿಮ್ಮ ವ್ಯಾಪಾರಕ್ಕೂ ಉಪಯೋಗವಾಗುತ್ತದೆ.


ಅನುವಾದ : ಜಯಶ್ರೀ ಜಗನ್ನಾಥ
ಫ಼್ರೆಂಚ್ ಭಾಷೆಯ ಉಪನ್ಯಾಸಕಿ . ಬರೆಯುವುದು, ಭಾಷಾಂತರ ಮಾಡುವುದು ಇವು ನನ್ನ ಕೆಲಸಗಳು. ಪ್ರವಾಸ ಮಾಡುವುದು, ಓದುವುದು, ಸಹೃದಯರೊಂದಿಗೆ ಸಂಭಾಷಣೆ ಹವ್ಯಾಸಗಳು. ತನ್ನ ಸುತ್ತಮುತ್ತಿನ ಪರಿಸರಕ್ಕೆ ಪ್ರತಿಕ್ರಿಯಿಸಿವುದು ಮತ್ತು ಅಭಿವ್ಯಕ್ತಿಸುವುದು ತನಗೆ ಅನಿವಾರ್ಯ, ಅಗತ್ಯ ಎಂದುಕೊಂಡು ಬರೆತ್ತಿರುವ ಜಯಶ್ರೀ ಪ್ರಸ್ತುತ ಮೈಸೂರಿನಲ್ಲಿ ನೆಲೆಸಿದ್ದಾರೆ .

ಪ್ರತಿಕ್ರಿಯಿಸಿ