ಏನಾಗಬಹುದೆಂದು ಯಾರಿಗೂ ಗೊತ್ತಿಲ್ಲ

ಮಹಾನ್ ಪ್ರವಾದಿಗಳು ಅಂದರೆ ಸೊಗಸಾಗಿ ಊಹಿಸಬಲ್ಲವರು, ಅಷ್ಟೆ ಅಂತ ಒಮ್ಮೆ ಥಾಮಸ್ ಹಾಬ್ಸ್ ಬರೆದಿದ್ದರು. ಭವಿಷ್ಯವನ್ನು ಹೇಳಬಲ್ಲ ನಮ್ಮ ಸಾಮರ್ಥ್ಯವನ್ನು ಕುರಿತು ಇದಕ್ಕಿಂತ ಚೆನ್ನಾಗಿ ಹೇಳುವುದಕ್ಕೆ ಆಗುವುದಿಲ್ಲ. ಭವಿಷ್ಯ ಹೇಳುವುದು ಮನುಷ್ಯನಿಗೆ ನಿಜವಾಗಿ ಸಾಧ್ಯವಿಲ್ಲ. ಆದರೆ ಮನುಷ್ಯ ಇದನ್ನು ಒಪ್ಪಿಕೊಳ್ಳೋಕೆ ತಯಾರಿಲ್ಲ ಅನ್ನೋದು ಅಷ್ಟೇ ಸತ್ಯ. ಅಪಾಯದ ಸಂದರ್ಭದಲ್ಲಿ ಜನರಿಗೆ ಆಸರೆ ಬೇಕು, ಭರವಸೆ ಕೊಡುವ ಒಂದು ಅಧಿಕಾರಯುತ ದನಿ ಬೇಕು. ನಮಗೆ ಮುಂದೆ ಏನಾಗುತ್ತದೆ, ನಾವು ಅದಕ್ಕೆ ಹೇಗೆ ಸಿದ್ಧರಾಗಬೇಕು ಅಂತ ಆ ದನಿ ಹೇಳಬೇಕು. ಕೊನೆಗೆ ಎಲ್ಲಾ ಒಳ್ಳೆಯದಾಗುತ್ತದೆ ಅಂತ ಹೇಳಲಿ ಅಂತ ನಮ್ಮೆಲ್ಲರ ಆಸೆ. ಅದನ್ನೇ ರೋಸೊ ತುಂಬ ಮುಖ್ಯವಾದ ಮತ್ತು ಗಂಭೀರವಾದ ಸನ್ನಿವೇಶಗಳಲ್ಲಿ ಅನಿಶ್ಚಿತತೆಯಲ್ಲಿ ಬದುಕುವುದಕ್ಕಿಂತ, ಏನಾದರೂ ಒಂದನ್ನು – ಅದು ತಪ್ಪೇ ಇರಲಿ – ನಂಬಿಕೊಳ್ಳಲು ನಾವು ಬಯಸುತ್ತೇವೆ. ಅಂತ ಹೇಳಿದ್ದ. ಅನಿಶ್ಚಿತತೆಯಲ್ಲಿ ಬದುಕುವುದಕ್ಕೆ ಮನುಷ್ಯನಿಗೆ ಸಾಧ್ಯವಿಲ್ಲ. ಅವನ ಮಾತುಗಳು ಸ್ವಲ್ಪ ಉತ್ಪ್ರೇಕ್ಷೆ ಇರಬಹುದು. ಆದರೆ ನಿಜ.

ಮನುಕುಲದ ಇತಿಹಾಸ ಎಂದರೆ ಅದು ಅಸಹನೆ, ತಾಳ್ಮೆಗೇಡಿತನದ ಇತಿಹಾಸ. ನಮಗೆ ನಾಳೆ ಏನಾಗುತ್ತದೇ ಅಂತ ತಿಳಿದುಕೊಳ್ಳುವ ಆಸೆ. ಅಷ್ಟೇ ಅಲ್ಲ ನಾವು ಬೇಕು ಅಂದುಕೊಂಡ ತಕ್ಷಣ ನಮಗೆ ಗೊತ್ತಾಗಿಬಿಡಬೇಕು. ಹೀಗೆ ನಮಗೆ ಬೇಕೆಂದ ಕೂಡಲೇ ನಮ್ಮ ಕಡೆ ಗಮನ ಹರಿಸಬೇಕು ಎಂಬ ಮನುಷ್ಯನ ಅಹಂಕಾರವನ್ನು ಬೈಬಲ್ಲಿನ ಬುಕ್ ಆಫ್ ಜೋಬ್ ಖಂಡಿಸುತ್ತದೆ. ಬುಕ್ ಆಫ್ ಜೋಬ್ಸ್‌ನಲ್ಲಿ ಬಿರುಸಾಗಿ ಸುತ್ತುತ್ತಿರುವ ಒಂದು ಸುಂಟರಗಾಳಿಯ ಒಳಗಿನಿಂದ ದೇವರ ಧ್ವನಿ ಕೇಳಿಸುತ್ತದೆ. ಕೇಳಿದ್ದನ್ನು ಕೇಳಿದ ಕೂಡಲೆ ಮನುಷ್ಯನಿಗೆ ಕೊಟ್ಟುಬಿಡಲು ತಾನೊಂದು ಮಾರುವ ಯಂತ್ರವಲ್ಲ ಎಂದು ದೇವರು ಹೇಳುತ್ತಾನೆ. ಸರಿಯಾದ ಕಾಲ ಬಂದಾಗ ದೇವರು ಕಾಣಿಸಿಕೊಂಡು, ತನ್ನ ಯೋಜನೆಗಳನ್ನು ಪ್ರಕಟಿಸುತ್ತಾನೆಯೇ ಹೊರತು, ನಾವು ಬೇಕೆಂದು ಬಯಸಿದಾಗ ಬರುವುದಿಲ್ಲ. ದೇವರ ಕೃಪೆಗಾಗಿ ಕಾಯುವುದನ್ನು ನಾವು ಕಲಿಯಬೇಕು ಎನ್ನುತ್ತದೆ ಬೈಬಲ್.

ದೇವರು ಮೌನವಾಗಿದ್ದಾಗ ಮನುಷ್ಯರು ಸ್ವತಂತ್ರವಾಗಿ ತೋಚಿದ್ದೆಲ್ಲಾ ಮಾಡಲು ಪ್ರಯತ್ನಿಸುತ್ತಾರೆ. ಕೆಲವು ಧರ್ಮಗಳ ಪ್ರಕಾರ, ದೇವರು ತನ್ನ ಸಂದೇಶವನ್ನು ಪ್ರಕೃತಿಯ ಮೂಲಕ ವ್ಯಕ್ತಪಡಿಸುತ್ತಾನೆ. ಅಂತಹ ಧರ್ಮಗಳಲ್ಲಿ ಆಕಾಶದಲ್ಲಿ ನಕ್ಷತ್ರಗಳ ಸ್ಥಾನ, ಕಾರ್ಡುಗಳ ಜೋಡಣೆ, ದಾಳ ಬೀಸುವುದು, ಕಡ್ಡಿಗಳ ಕಟ್ಟು, ಮೋಂಬತ್ತಿಯ ಉರಿ, ಅಥವಾ ಯಾವುದೋ ಅದೃಷ್ಟಹೀನ ಕುರಿಯ ಯಕೃತ್ತು ಇಂತಹ ಮಾಧ್ಯಮಗಳ ಮೂಲಕ ಭವಿಷ್ಯವನ್ನು ಹೇಳುವುದನ್ನು ಪರಿಣತರಿಗೆ ಕಲಿಸಲಾಗುತ್ತಿತ್ತು. ಆ ಕ್ರಮಗಳನ್ನೇ ಬಳಸಿಕೊಂಡು ಅವರು ಯುದ್ಧವನ್ನು ಯೋಜಿಸುತ್ತಿದ್ದರು. ಪ್ಲೇಗಿನಂತಹ ಪಿಡುಗುಗಳನ್ನು ಮುಂದಾಗಿಯೇ ಸೂಚಿಸುತ್ತಿದ್ದರು. ಮದುವೆಗಳು ತಾಳೆಯಾಗುವುದಿಲ್ಲ ಅನ್ನಿಸಿದರೆ ಅವು ಆಗದಂತೆ ನೋಡಿಕೊಳ್ಳುತ್ತಿದ್ದರು.

ಎಲ್ಲೆಲ್ಲಿ ದೇವರು ಮನುಷ್ಯರ ಮೂಲಕ ಮಾತನಾಡುತ್ತಾನೆ ಎಂದು ನಂಬಲಾಗಿತ್ತೋ, ಅಲ್ಲೆಲ್ಲಾ ದೈವಪೀಠದಲ್ಲಿ ಒಬ್ಬ ಪಾತ್ರಿ/ಕಣಿ ಹೇಳುವವರ ಮೂಲಕ ಜನರು ಕೇಳುತ್ತಿದ್ದ ಪ್ರಶ್ನೆಗಳಿಗೆ ಉತ್ತರಿಸುವ ವ್ಯವಸ್ಥೆ ಇರುತ್ತಿತ್ತು. ಪ್ರಾಚೀನ ಗ್ರೀಸಿನ ಡೆಲ್ಫಿ ನಗರದ ಅಪೋಲೋ ದೇವತೆಯ ಮಂದಿರ ಅಂಥದ್ದೊಂದು ಸ್ಥಳ. ಅದರ ಮುಖ್ಯ ಪೂಜಾರಿಣಿಯ ಬಗ್ಗೆ ಎಲ್ಲರಿಗೂ ಅಪಾರ ಗೌರವ. ಕಣಿ ಹೇಳುವವರಲ್ಲೇ ಅವಳು ತುಂಬಾ ಹೆಸರುವಾಸಿ. ಜನರು ಕೇಳುವ ಪ್ರಶ್ನೆಗೆ ಉತ್ತರಿಸೋ ಮೊದಲು ಅವಳು ಗರ್ಭಗುಡಿಯ ಒಳಕ್ಕೆ ಹೋಗುತ್ತಿದ್ದಳು. ಅಲ್ಲಿ ನೆಲದಲ್ಲಿ ಒಂದು ಸಂದಿ ಇರುತ್ತಿತ್ತು. ಅದರ ಮೇಲೆ ಮೂರುಕಾಲಿನ ಒಂದು ಮೇಜು ಇರುತ್ತಿತ್ತು. ಅದರ ಮೇಲೆ ಅವಳು ಕೂರುತ್ತಿದ್ದಳು. ಅದರೊಳಗಿನಿಂದ ಅಮಲೇರಿಸುವಂತಹ ಅನಿಲಗಳು ಹೊರಹೊಮ್ಮುತ್ತವೆ ಎಂದು ಭಾವಿಸಲಾಗಿತ್ತು. ಆ ಹೊಗೆಯಿಂದ ಅವಳೊಂದು ಬಗೆಯ ಸಮಾಧಿಸ್ಥಿತಿಗೆ ಹೋಗುತ್ತಿದ್ದಳು. ಆಗ ಅವಳಿಗೆ ವಿಚಾರಮಾಡುವ ಶಕ್ತಿ ಇರುತ್ತಿರಲಿಲ್ಲ. ಅವಳ ಮೂಲಕ ಅಪೋಲೋ ದೇವತೆ ಅತ್ಯಂತ ಚುಟುಕಾದ ಹೇಳಿಕೆಗಳು ಮತ್ತು ಒಗಟುಗಳ ರೂಪದಲ್ಲಿ ಮಾತನಾಡುತ್ತಿದ್ದ. ಒಬ್ಬ ದೈವಜ್ಞ ಈ ಮಾತುಗಳನ್ನು ಪದ್ಯ ಅಥವಾ ಗದ್ಯ ರೂಪದಲ್ಲಿ ವ್ಯಾಖ್ಯಾನಿಸಿ, ವಿವರಿಸುತ್ತಿದ್ದ. ಇದು ಬಹಳ ಯಶಸ್ವಿಯಾಯಿತು. ಕ್ರಮೇಣ ಡೆಲ್ಫಿ ಅತ್ಯಂತ ಶ್ರೀಮಂತ ನಗರವಾಗಿ ಬೆಳೆಯಿತು.

ಆದರೆ ಇಂದು ಭವಿಷ್ಯ ಹೇಳುವವರು ಮತ್ತು ವ್ಯಾಖ್ಯಾನಿಸುವವರಲ್ಲಿ ಈ ಮಟ್ಟದ ಆಡಂಬರ ಕಾಣೊಲ್ಲ. ಇಂದಿನ ಯಾವ ಪ್ರಧಾನ ಮಂತ್ರಿಯೂ ಸಿಎನ್‌ಎನ್ ಛಾನಲ್ಲಿನಲ್ಲಿ ಮಾತನಾಡುವ ಮೊದಲು ಅಮಲೇರಿಸುವ ಮದ್ದು ಸೇವಿಸಿರಲಿಲ್ಲ. ನಮ್ಮ ಬದುಕಿನ ಭವಿಷ್ಯವನ್ನು ಹೇಳಲು ಅವರನ್ನು ವೇದಿಕೆಗೆ ಆಹ್ವಾನಿಸುವ ತನಕ ಅವರು ತುಂಬಾ ಸೌಮ್ಯವಾಗಿ, ಬಾಟ್ಲಿಯಿಂದ ನಿಧಾನವಾಗಿ ಮಿನರಲ್ ನೀರು ಹೀರುತ್ತಾ, ಗ್ರೀನ್ ರೂಮಿನಲ್ಲಿ ಕೂತಿರುತ್ತಾರೆ. ಇಂದು ಭವಿಷ್ಯ ಹೇಳುವವರು ಕುರಿಯ ಯಕೃತ್ತನ್ನು ಬಳಸುತ್ತಿಲ್ಲ. ಅದಕ್ಕೆ ಬದಲು ದೊಡ್ಡ ದತ್ತಾಂಶಗಳನ್ನೂ ಮತ್ತು ಸಂಖ್ಯಾಶಾಸ್ತ್ರದ ಮಾದರಿಗಳನ್ನು ಬಳಸುತ್ತಿದ್ದಾರೆ. ಭವಿಷ್ಯತ್ತು ಅನಿರೀಕ್ಷಿತಗಳು ಮತ್ತು ಅಚ್ಚರಿಗಳಿಂದಲೇ ತುಂಬಿದೆ ಎನ್ನುವುದು ಈಗ ಎಲ್ಲರಿಗೂ ಗೊತ್ತಿದೆ. ಅದರೆ ಹಾಗೆ ಅರಿವಾದ ನಂತರವೂ ನಾವು ಪಾತ್ರಿಗಳು, ದೈವಜ್ಞರ ಸಹಾಯಕ್ಕಾಗಿ ಹಾತೊರೆಯುತ್ತಿದ್ದೇವೆ ಎನ್ನುವುದು ನಿಜವಾಗಿಯೂ ಬೆರಗು ಹುಟ್ಟಿಸುತ್ತದೆ.

ಭವಿಷ್ಯ ಅನ್ನೋದು ಬರಿ ಅಚ್ಚರಿಗಳಿಂದಲೇ ತುಂಬಿದೆ ಅನ್ನೋದು ಭವಿಷ್ಯವನ್ನು ಅಂದಾಜು ಮಾಡುವ ಇಂದಿನ ವೃತ್ತಿಪರರಿಗೆ ಸ್ಪಷ್ಟವಾಗಿ ಗೊತ್ತು. ಅದಕ್ಕೇ ಅವರು ಲೆಕ್ಕಾಚಾರದಲ್ಲಿ ಯಾವ ಊಹೆಗಳನ್ನು ಬಳಸಿಕೊಂಡಿದ್ದೇವೆ, ವಿಶ್ಲೇಷಣಗೆ ಬಳಸಿರುವ ಮಾದರಿ ಎಷ್ಟರಮಟ್ಟಿಗೆ ವಿಶ್ವಾಸಾರ್ಹ ಇತ್ಯಾದಿ ವಿವರಗಳನ್ನು ತಮ್ಮ ವರದಿಗಳಲ್ಲಿ ಸ್ಪಷ್ಟವಾಗಿ ದಾಖಲಿಸಿರುತ್ತಾರೆ. ಆದರೆ ನಮ್ಮ ವರದಿಗಾರರು ಮತ್ತು ಸಾರ್ವಜನಿಕ ಅಧಿಕಾರಿಗಳಿಗೆ ತಾಳ್ಮೆಯಿಲ್ಲ. ತುಂಬಾ ಆತುರ. ಸಾರ್ವಜನಿಕರಿಗೆ ತಕ್ಷಣ ಮಾಹಿತಿಗೆ ಕೊಟ್ಟುಬಿಡಬೇಕು ಅನ್ನುವ ಅತುರ. ಅದಕ್ಕಾಗಿ ಇವರನ್ನು ಕಾಡುತ್ತಿರುತ್ತಾರೆ. ಅಂದಿನ ಮಟ್ಟಿಗೆ ಅವರಿಂದ ತಪ್ಪಿಸಿಕೊಂಡರೆ ಸಾಕು ಅಂತ ಭಾವಿಸುತ್ತಾರೆ. ವರದಿಯಲ್ಲಿರುವ ಅಡಿಟಿಪ್ಪಣಿಗಳನ್ನು ಮತ್ತು ವಿವರಗಳನ್ನು ಓದುವ ತಾಳ್ಮೆ ಅವರಿಗೆ ಇರೋದಿಲ್ಲ. ಹಾಗಾಗಿ ಅಂದಿನ ಕಾಟ ತಪ್ಪಿಸಿಕೊಳ್ಳಲು ಸಾಕಾಗುವಷ್ಟು ಪ್ರಮುಖ ಮಾಹಿತಿಯನ್ನು ವರದಿಯಿಂದ ತೆಗೆದುಕೊಂಡು, ಪ್ರಕಟಿಸಿ, ನಿರಾಳರಾಗುತ್ತಾರೆ. ಆದರೆ ಪಾಪ, ಪ್ರಾಚೀನ ಕಾಲದ ದೈವಜ್ಞರು ಮತ್ತು ಕಣಿಹೇಳುವವರು ಸದಾ ಅಪಾಯದಲ್ಲಿರುತ್ತಿದ್ದರು. ಅವರು ಹೇಳಿದ ಭವಿಷ್ಯ ನಿಜವಾಗದಿದ್ದರೆ ದೊರೆಗಳು ಅವರನ್ನು ಕೊಲ್ಲುತ್ತಿದ್ದರು. ಇಲ್ಲವೇ ಜನರೇ ಅವರನ್ನು ಕಡಿದು ತುಂಡುಮಾಡುತ್ತಿದ್ದರು. ಇಂದು ಅದಕ್ಕೆ ಪ್ರತಿಕ್ರಿಯೆ ಸ್ವಲ್ಪ ಶಾಂತ ಸ್ವರೂಪದಲ್ಲಿ ಕಾಣಿಸಿಕೊಳ್ಳುತ್ತಿದೆ. ಜನ ಸರ್ಕಾರ ಮತ್ತು ಹೊಸ ಮಾಧ್ಯಮ ಎರಡರಲ್ಲೂ ಕ್ರಮೇಣ ನಂಬಿಕೆ ಮತ್ತು ಭರವಸೆ ಕಳೆದುಕೊಳ್ಳುತ್ತಿದ್ದಾರೆ.

ಈ ಪ್ರಕ್ರಿಯೆಗೆ ಅತಿ ಸಾಮಾನ್ಯ ಉದಾಹರಣೆಯೆಂದರೆ ಹಿಮಮಾರುತ ಮತ್ತು ಆ ಹೊತ್ತಿನಲ್ಲಿ ಶಾಲೆಗಳನ್ನು ಮುಚ್ಚುವುದು. ಅರ್ಧ ಶತಮಾನದ ಹಿಂದೆ, ಹವಾ ಮುನ್ಸೂಚನೆ ಇಂದಿನಷ್ಟು ಮುಂದುವರಿದಿರಲಿಲ್ಲ. ಹಿಮಮಾರುತ ಪ್ರಾರಂಭವಾಗುವ ತನಕ ಪೋಷಕರು ಮತ್ತು ಮಕ್ಕಳಿಗೆ ಶಾಲೆ ಬಂದಾಗುತ್ತವೆ ಎಂದು ತಿಳಿದಿರುತ್ತಿರಲಿಲ್ಲ. ಹಿಮಮಾರುತ ಪ್ರಾರಂಭವಾದ ನಂತರ ರೇಡಿಯೋ ಮತ್ತು ದೂರದರ್ಶನದಲ್ಲಿ ಅಂದು, ತರಗತಿಗಳು ರದ್ದಾಗಿವೆ ಎಂಬ ಸುದ್ದಿ ಪ್ರಸಾರವಾಗುತ್ತಿತ್ತು. ನಾವೆಲ್ಲಾ ಅಪಾಯಕಾರಿಯಲ್ಲದ ಅನಿಶ್ಚಿತತೆಯಲ್ಲಿ ಬದುಕುತ್ತಿದ್ದೆವು. ಆ ದಿನ ಮಕ್ಕಳ ಪಾಲಿಗೆ ರೋಮಾಂಚಕಾರಿಯಾಗಿ ಇರುತ್ತಿತ್ತು. ಹಿಮದ ಹಳುಕುಗಳು ಬಿದ್ದಾಗ ಅವು ಸ್ವರ್ಗದಿಂದ ಒಸರುತ್ತಿರುವ ಅಮೃತದಂತೆ ಮಕ್ಕಳಿಗೆ ಭಾಸವಾಗುತ್ತಿತ್ತು.

ಆದರೆ ಇಂದು, ಮೇಯರ್‌ಗಳು ಮತ್ತು ಶಾಲೆಯ ಸೂಪರಿಂಟೆಂಡೆಂಟರು ಹವಾಮಾನ ವರದಿಯನ್ನು ನಂಬಿ ಒಂದು ದಿನ ಮೊದಲೇ ಶಾಲೆಗಳಿಗೆ ರಜೆ ಘೋಷಿಸಿಬಿಡುತ್ತಾರೆ. ಆದರೆ ಮುನ್ಸೂಚನೆಯಂತೆ ಹಿಮಮಾರುತ ಬಾರದೇ ಹೋದರೆ ಪೋಷಕರು ಸಿಟ್ಟಾಗುತ್ತಾರೆ, ಕಟುವಾಗಿ ಟೀಕಿಸುತ್ತಾರೆ. ಒಂದು ದಿನದ ಕೆಲಸ ಕಳೆದುಕೊಂಡಿರುತ್ತಾರೆ ಅಥವಾ ಹಗಲು ವೇಳೆ ಮಕ್ಕಳನ್ನು ನೋಡಿಕೊಳ್ಳಲು ಡೇಕೇರ್ ಹುಡುಕಲು ಪಾಡುಪಟ್ಟಿರುತ್ತಾರೆ. ಇದಕ್ಕೆ ವ್ಯತಿರಿಕ್ತವಾಗಿ ಅನಿರೀಕ್ಷಿತವಾಗಿ ಹಿಮಮಾರುತ ಬಂದು ಇಡೀ ಊರು ಬಂದಾಗಿ, ಮಕ್ಕಳು ಶಾಲೆಗಳಲ್ಲಿ ಸಿಕ್ಕಿಹಾಕಿಕೊಂಡಾಗ ಪ್ರತಿಕ್ರಿಯೆಗಳು ಇನ್ನೂ ಖಾರವಾಗಿರುತ್ತವೆ. ಮುನ್ಸೂಚನೆಗಳು ವಿಫಲವಾಗಿದ್ದ ಕೆಲವು ಪ್ರಾಂತ್ಯಗಳಲ್ಲಿ ಜನ ಮರುಚುನಾವಣೆಗಳಲ್ಲಿ ಮೇಯರುಗಳನ್ನು ಸೋಲಿಸಿದ ಪ್ರಕರಣಗಳೂ ಇವೆ. ಮನುಷ್ಯನಿಗೆ ಭವಿಷ್ಯ ಹೇಳುವ ಶಕ್ತಿ ಅಗಾಧವಾಗಿದೆ ಎಂದು ಜನ ನಂಬಿಕೊಂಡಿದ್ದಾರೆ. ಪಾಪ ಅವರ ನಂಬಿಕೆಗೆ ಮೇಯರುಗಳು ಬಲಿಯಾಗಿದ್ದಾರೆ.

ಇನ್ನು ಆರ್ಥಿಕ ಮನ್ಸೂಚನೆಗೆ ಜೋತುಬೀಳುವ ಚಟ ಇದಕ್ಕಿಂತ ಅಪಾಯಕಾರಿ. ಆರ್ಥಿಕತೆಗೆ ಸಂಬಂಧಿಸಿದ ಅಂದಾಜುಗಳಲ್ಲಿ ಅಡಿಟಿಪ್ಪಣಿಗಳು ತುಂಬಾ ಮುಖ್ಯ. ಆದರೆ ರಾಜಕಾರಣಿಗಳು ಮತ್ತು ಮಾಧ್ಯಮದವರಿಗೆ ಪವಾಡಗಳು ನಡೆದು ಹೋಗಬೇಕು. ನನ್ನ ಯೋಜನೆಯಿಂದ ೨,೦೫,೦೦೦ ಕೆಲಸಗಳನ್ನು ಸೃಷ್ಟಿಯಾಗುತ್ತವೆ, ಡೋವ್ ಸೂಚಿ ೩೧೭ ಪಾಯಿಂಟುಗಳಷ್ಟು ಏರುತ್ತದೆ, ಮತ್ತು ಗ್ಯಾಸೋಲಿನ್ ದರ ೧೫ ಸೆಂಟುಗಳಷ್ಟು ಇಳಿಯುತ್ತದೆ ಎಂದು ಒಬ್ಬ ರಾಜಕೀಯ ಅಭ್ಯರ್ಥಿ ಹೇಳಿಕೊಳ್ಳುತ್ತಾನೆ. ಎರಡು ವರ್ಷಗಳ ನಂತರ ಪತ್ರಿಕೆಯ ಮುಖಪುಟದ ತಲೆಬರಹದಲ್ಲಿ ದೊಡ್ಡದಾಗಿ ಮುದ್ರಿತವಾಗಿರುತ್ತದೆ. ಅಧ್ಯಕ್ಷರ ಈಡೇರದ ಭರವಸೆಗಳು: ಬೆಳವಣಿಗೆ ಸ್ಥಗಿತವಾಗಿದೆ, ಸ್ಟಾಕ್ ಮಾರುಕಟ್ಟೆ ಕುಸಿದಿದೆ, ಮಧ್ಯಪ್ರಾಚ್ಯದಲ್ಲಿ ಯುದ್ಧದಿಂದಾಗಿ ಮರು ಚುನಾವಣೆಯ ಸಾಧ್ಯತೆಗಳಿಲ್ಲ.

ಜಾಗತಿಕವಾಗಿ ಬೇಡಿಕೆ ಕುಸಿಯುತ್ತಿರುವುದರಿಂದ ಬೆಳವಣಿಗೆ ಕುಂಠಿತಗೊಂಡಿದೆ, ವಾಲ್ ಸ್ಟ್ರೀಟ್ ಎನ್ನುವುದು ಮಹಾನ್ ನಟಿ. ಯುದ್ಧ ಪ್ರಾರಂಭವಾಗುವುದಕ್ಕೆ ಒಂದು ತಲೆಕೆಟ್ಟ ಟ್ಯಾಂಕರ್ ಬಂದು ಡಿಕ್ಕಿ ಹೊಡೆಯುವಂಥ ಸಣ್ಣ ನೆವ ಸಾಕು ಇತ್ಯಾದಿ ಸಂಗತಿಗಳು ಯಾರಿಗೂ ಬೇಡ. ಅಧ್ಯಕ್ಷರು ವಿಫಲರಾಗಿದ್ದಾರೆ ಎಂದು ಘೋಷಿಸಿಯಾಯಿತು. ತಕ್ಷಣ ಮಾಧ್ಯಮಗಳು ಮತ್ತು ಸಾರ್ವಜನಿಕರು ಹೊಸ ಮುಖಗಳ ಹುಡುಕಾಟದಲ್ಲಿ ಮಗ್ನರಾಗುತ್ತಾರೆ. ಇನ್ನು ಆ ಹೊಸಮುಖಗಳು ನುಡಿಯುವುದು ಇಷ್ಟೇ ಅಸಂಗತ ಭವಿಷ್ಯವನ್ನು. ಅದರಿಂದಾಗಿಯೇ ಖ್ಯಾತ ಲೇಖಕ ಗೋರ್ ವೈಡಾಲ್ ನಮ್ಮದು ಯುನೈಟೆಡ್ ಸ್ಟೇಟ್ಸ್ ಆಫ್ ಅಮ್ನೀಸಿಯಾ ಅಂತ ಹೇಳಿದ್ದು.

ಇಂದು ಸಾರ್ವಜನಿಕ ಬದುಕಿನ ತುಂಬಾ ದೈವಜ್ಞರು, ಕಣಿಹೇಳುವವರು ತುಂಬಿ ತುಳುಕುತ್ತಿದ್ದಾರೆ. ಅವರೆಲ್ಲರೂ ಕೋವಿಡ್ ನಂತರದ ಪ್ರಪಂಚವನ್ನು ಕುರಿತು ಭವಿಷ್ಯ ಹೇಳುತ್ತೇವೆಂದು ಹೇಳುತ್ತಿದ್ದಾರೆ. ಆದರೆ ನನಗೆ ಇಡೀ ದಿನ ಒಂದು ಆಶ್ವರ್ಯ ಅನುಭವ ಆಗುತ್ತಿರುತ್ತದೆ. ಅಮೆರಿಕೆಯ ಅಧ್ಯಕ್ಷೀಯ ಚುನಾವಣೆ, ಜನಪ್ರಿಯತೆಯ ಸಿದ್ಧಾಂತ, ಸಮಾಜವಾದದ ಭವಿಷ್ಯ, ಜನಾಂಗೀಯ ಸಂಬಂಧಗಳು, ಆರ್ಥಿಕ ಬೆಳವಣಿಗೆ, ಉನ್ನತ ಶಿಕ್ಷಣ, ನ್ಯೂ ಯಾರ್ಕ್ ನಗರದ ರಾಜಕಾರಣ, ಮುಂತಾದ ವಿಚಾರಗಳ ಮೇಲೆ ಈ ಮಹಾಮಾರಿಯ ಪರಿಣಾಮವೇನು ಎಂದು ವಿದೇಶೀ ಪರ್ತಕರ್ತರು ನನ್ನನ್ನು ಕೇಳುತ್ತಾರೆ. ಈ ಕುರಿತು ನನಗೆ ಯಾವ ಕಲ್ಪನೆಯೂ ಇಲ್ಲ ಎಂದು ಅವರಿಗೆ ಹೇಳಿದರೆ ಅವರು ಸಿಟ್ಟಾಗುತ್ತಾರೆ. ನಿಮಗೆ ಏನು ಹೇಳಬೇಕು ಅನ್ನುವುದು ಗೊತ್ತಿದೆ, ಅದನ್ನು ಹೇಳಿ ಅನ್ನುತ್ತಾರೆ. ನನಗೆ ಅವರ ಪರಿಸ್ಥಿತಿ ಅರ್ಥವಾಗುತ್ತದೆ. ದಿನನಿತ್ಯದ ಬದುಕು ಸಂಪೂರ್ಣ ಸ್ಥಗಿತಗೊಂಡಿದೆ. ವರದಿ ಮಾಡುವುದಕ್ಕೆ ಮತ್ತು ಚರ್ಚಿಸುವುದಕ್ಕೆ ಅಂತಹ ಗಹನವಾದ ವಿಚಾರಗಳ್ಯಾವುದು ಇಲ್ಲ. ಆದರೆ ಕಾಲಂಗಳನ್ನು ಬರೆಯಲೇ ಬೇಕು. ೨೪/೭ ಕೇಬಲ್ ನ್ಯೂಸ್ ಛಾನಲ್ಲುಗಳಿಗೆ ಸಮಾಚಾರದ ಗ್ರಾಸವನ್ನು ನಿರಂತರವಾಗಿ ಒದಗಿಸುತ್ತಿರಬೇಕು. ಸ್ವಲ್ಪ ಹೊತ್ತು ಅಂದಿನ (ರೋಮಾಂಚಕಾರಿ)ಸುದ್ದಿಗೋಷ್ಠಿಗಳು, ಅಥವಾ ಈ ಹಿಂದೆ ಮಾಡಿದ ತೀರ್ಮಾನಗಳನ್ನು ಟೀಕಿಸುವುದು ಅಥವಾ ಜನ ಪಡುತ್ತಿರುವ ಪಾಡನ್ನು ಕುರಿತ ಭಾವುಕ ಘಟನೆಗಳ ಪ್ರಸಾರ ಮಾಡಬಹುದು. ಅಮೇಲೆ ಏನು ಮಾಡುವುದು? ಅದರಿಂದ ಪತ್ರಕರ್ತರು ಭವಿಷ್ಯ ಹೇಳೊಕೆ ಶುರುಮಾಡುತ್ತಾರೆ.

ಆದರೆ ಕೋವಿಡೋತ್ತರ ಭವಿಷ್ಯತ್ತು ಅನ್ನುವುದು ಇಲ್ಲ. ನಾವು ಮಾಡಿಕೊಳ್ಳಬೇಕು. ಭವಿಷ್ಯ ನಮ್ಮ ಕೈಯಲ್ಲಿ ಇಲ್ಲ. ಎಲ್ಲಾ ದೇವರ ಇಚ್ಛೆ. ಹಾಗಾಗಿ ಧಾರ್ಮಿಕ ಭವಿಷ್ಯಗಳು ವೈಚಾರಿಕ ಎನಿಸಿಕೊಳ್ಳುತ್ತವೆ. ಆಸ್ತಿಕರಿಗೆ ದೇವರು ದೈವಜ್ಞರ ಬಾಯಿಂದ ಅಥವಾ ಪ್ರಾಣಿಗಳ ಯಕೃತ್ತಿನ ಮೂಲಕ ಪ್ರಕಟಿಸುವ ಭವಿಷ್ಯದ ಬಗ್ಗೆ ನಂಬಿಕೆ. ಅದರಲ್ಲಿ ಮನುಷ್ಯರ ಕೈವಾಡವಿಲ್ಲ ಅನ್ನುವ ವಿಶ್ವಾಸ ಅವರದ್ದು. ನಮಗೆ ದೇವರ ಬಗ್ಗೆ ನಂಬಿಕೆ ಇಲ್ಲದೇ ಇದ್ದ ಪಕ್ಷದಲ್ಲಿ ಹಾಗೆ ಭವಿಷ್ಯ ಕೇಳುವುದರಲ್ಲಿ ಯಾವುದೇ ಅರ್ಥವೂ ಇಲ್ಲ. ಒಂದು ವೇಳೆ ನಾವು ಅಂತಹ ದೇವತೆಗಳನ್ನು ನಂಬದ ನಾಸ್ತಿಕರಾಗಿದ್ದಲ್ಲಿ, ಮುಂದೆ ನಮಗೇನಾಗುತ್ತದೆ ಎಂದು ಭವಿಷ್ಯವನ್ನು ಕೇಳುವುದಕ್ಕೆ ಅರ್ಥವಿಲ್ಲ. ಆಗ ಸಧ್ಯದ ಮಿತಿಯಲ್ಲಿ ಏನು ಬೇಕು ಅಂತ ಬಯಸುತ್ತೇವೆ. ಅದನ್ನು ಹೇಗೆ ಸಾಧಿಸುವುದು ಅನ್ನುವ ಕಡೆ ಯೋಚಿಸಿಬೇಕು.

ಕೊರೋನಾ ವೈರಾಣುವಿನ ನಿಜವಾದ ಜೀವಶಾಸ್ತ್ರವನ್ನು ಈಗಷ್ಟೇ ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದ್ದೇವೆ. ಅದನ್ನು ಬಿಟ್ಟಂತೆ ಪೂರ್ವನಿರ್ಧಾರಿತವಲ್ಲ. ಎಷ್ಟು ಜನಕ್ಕೆ ರೋಗ ತಗುಲುತ್ತದೆ ಎನ್ನುವುದು ವೈರಸ್ ಹೇಗೆ ವರ್ತಿಸುತ್ತದೆ, ನಾವು ಹೇಗೆ ಪತ್ತೆ ಹಚ್ಚುತ್ತೇವೆ, ಹೇಗೆ ಚಿಕಿತ್ಸೆ ನೀಡುತ್ತೇವೆ ಮತ್ತು ಲಸಿಕೆ ಕಂಡುಹಿಡಿಯುವುದಕ್ಕೆ ಸಾಧ್ಯವಾಗಬಹುದೇ ಇತ್ಯಾದಿ ಹಲವಾರು ಅಂಶಗಳನ್ನು ಅವಲಂಭಿಸಿರುತ್ತದೆ.

ಈ ತೀರ್ಮಾನಗಳ ಪರಿಣಾಮವು ಎರಡು ರೀತಿಯಲ್ಲಿ ಕೆಲಸ ಮಾಡುತ್ತದೆ. ಮೊದಲನೆಯದಾಗಿ ಉದ್ಯಮಗಳ ಮಾಲೀಕರು, ಮೇಯರ್‌ಗಳು, ವಿಶ್ವವಿದ್ಯಾನಿಲಯದ ಮುಖ್ಯಸ್ಥರು, ಸ್ಪೋರ್ಟ್ಸ್ ಕ್ಲಬ್‌ನ ಮಾಲೀಕರು ತಮ್ಮ ಸಂಸ್ಥೆಗಳನ್ನು ಮತ್ತೆ ಆರಂಭಿಸುವುದಕ್ಕೆ ಸಂಬಂಧಿಸಿದಂತೆ ಅವರಿಗೆ ಇರುವ ಆಯ್ಕೆಗಳನ್ನು ನಿರ್ಧರಿಸುತ್ತವೆ. ಅವರ ನಿರ್ಧಾರಗಳನ್ನು ನಮ್ಮ ನಿರ್ಧಾರವನ್ನೂ ಪ್ರಭಾವಿಸುತ್ತದೆ. ನವೆಂಬರಿನ ಅಧ್ಯಕ್ಷೀಯ ಚುನಾವಣೆಗಳಲ್ಲಿ ನಾವು ಯಾರನ್ನು ಅಧ್ಯಕ್ಷರನ್ನಾಗಿ ಚುನಾಯಿಸುತ್ತೇವೆ ಎಂಬ ನಮ್ಮ ತೀರ್ಮಾನವನ್ನೂ ಪ್ರಭಾವಿಸುತ್ತದೆ. ಈ ಚುನಾವಣೆ ಪರಿಣಾಮ ನಮ್ಮ ಮುಂದಿನ ನಾಲ್ಕು ವರ್ಷಗಳ ಭವಿಷ್ಯವನ್ನೂ ಪ್ರಭಾವಿಸುತ್ತದೆ.

ಭವಿಷ್ಯವನ್ನು ಕುರಿತಂತೆ ನಮ್ಮ ಜವಾಬ್ದಾರಿ ಎಷ್ಟು ಗುರುತರವಾದದ್ದು ಎಂಬುದನ್ನು ಈ ಪಿಡುಗು ನಮಗೆ ಮನವರಿಕೆ ಮಾಡಿಕೊಟ್ಟಿದೆ. ಅಷ್ಟೇ ಅಲ್ಲ ಜಾಣ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಮತ್ತು ಅದರ ಪರಿಣಾಮಗಳನ್ನು ಊಹಿಸುವುದಕ್ಕೆ ನಮಗಿರುವ ಜ್ಞಾನ ಏನೇನೂ ಸಾಲದು ಅನ್ನುವುದನ್ನೂ ಸ್ಪಷ್ಟಪಡಿಸಿದೆ. ಬಹುಶಃ ಹಾಗಾಗಿಯೇ ನಮ್ಮ ದೈವಜ್ಞರಿಗೆ, ಕಣಿಹೇಳುವವರಿಗೆ ಭವಿಷ್ಯವನ್ನು ಹೇಳಬೇಕೆಂಬ ಬೇಡಿಕೆಗೆ ಸಮರ್ಥವಾಗಿ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ.

ಬಹುಶಃ ಮುಂದೇನಾಗುತ್ತದೆ ಎಂಬುದನ್ನು ತಿಳಿದುಕೊಂಡರೆ ಅವುಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು ಎಂದು ಜನ ಯೋಚಿಸುತ್ತಿದ್ದಾರೆ. ಕೇವಲ ಇದೊಂದು ಭ್ರಮೆ. ಭವಿಷ್ಯದ ಕಡೆಗೆ ಸಲೀಸಾಗಿ ನಡೆದುಕೊಂಡು ಹೋಗಿಬಿಡುವ ಸಾಮರ್ಥ್ಯ ನಮಗಿದೆ ಅಂದುಕೊಂಡಿದ್ದಾರೆ. ಆದರೆ ವಾಸ್ತವ ಅಂದರೆ ನಾವು ಮಂಜು ಮುಸುಕಿದ ಹಾದಿಯಲ್ಲಿ ಕುರುಡರಂತೆ, ಅನಿಶ್ಚಿತತೆಯಲ್ಲಿ ತಡಕಾಡುತ್ತಾ ಸಾಗುತ್ತಿದ್ದೇವೆ.

ಸಧ್ಯದ ಪರಿಸ್ಥಿತಿಯಲ್ಲಿ ನಮಗೆ ಒಂದಿಷ್ಟು ವಿನಯ ಇದ್ದರೆ ಒಳ್ಳೆಯದು. ನಾವು ಯಾವಾಗಲೂ ಅಗಾಧವಾದ ಅನಿಶ್ಚಿತತೆಯಲ್ಲಿ ಬದುಕುತ್ತಿದ್ದೇವೆ. ಆ ಅನಿಶ್ಚಿತತೆಯನ್ನು ಒಪ್ಪಿಕೊಂಡು ಬದುಕಲು ಈ ವಿನಯ ಸಹಾಯ ಮಾಡಬಹುದು. ನಮ್ಮ ದೈವಜ್ಞರಿಗೆ, ಕಣಿಹೇಳುವವರಿಗೆ ನಿವೃತ್ತಿ ನೀಡೋಣ. ನಮ್ಮ ಆರೋಗ್ಯ ತಜ್ಞರನ್ನು ಮತ್ತು ಸಾರ್ವಜನಿಕ ಅಧಿಕಾರಿಗಳನ್ನು ಭವಿಷ್ಯವನ್ನು ನುಡಿಯುವುದಕ್ಕೆ ಒತ್ತಾಯಿಸುವುದನ್ನು ನಿಲ್ಲಿಸೋಣ. ಅದು ಅವರಿಗೆ ಸಾಧ್ಯವಿಲ್ಲ್ಲ. ಅವರ ಮೇಲೆ ಒತ್ತಡ ಹಾಕಿ, ಅವರಿಂದ ಮುನ್ನಂದಾಜುಗಳು ಹೇಳಿಸಿ, ಅದು ತಪ್ಪಾದಾಗ ನಿರಾಶರಾಗುವುದನ್ನು ನಿಲ್ಲಿಸೋಣ. (ಪ್ರತಿ ದಿನ ಸುದ್ದಿ ಗೋಷ್ಠಿಗಳನ್ನು ನಡೆಸುವುದನ್ನು ಮತ್ತು ವರದಿಗಳನ್ನು ತಯಾರಿಸುವುದನ್ನು ಬಿಟ್ಟು ವಾರಕ್ಕೊಮ್ಮೆ ನಡಸೋದು ವಿವೇಕ ಹಾಗೂ ಸಂಯಮದ ಕಡೆಗೆ ಇಡಬಹುದಾದ ಒಂದು ಸಣ್ಣ ಹೆಜ್ಜೆ ಎನಿಸುತ್ತದೆ).
ವಾಸ್ತವವನ್ನು ಒಪ್ಪಿಕೊಳ್ಳಲು ನಿರಾಕರಿಸುವ ಅಧ್ಯಕ್ಷರೊಡನೆ ಇರುವುದು ಕೂಡ ಸಾಕಷ್ಟು ಕೆಟ್ಟದು. ಆಗಿಹೋಗಿರುವುದರ ಬಗ್ಗೆ ವಿವಾದ ಹುಟ್ಟುಹಾಕುವುದರಿಂದ ಮತ್ತು ಭವಿಷ್ಯ ನಿಖರವಾಗಿ ಗೊತ್ತಿರಬೇಕೆಂದು ಬಯಸುವುದರಿಂದ ನಾವು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುತ್ತೇವೆ. ವಸ್ತುಸ್ಥಿತಿಯನ್ನು ಒಪ್ಪಿಕೊಳ್ಳೋಣ. ಮೆಲ್ಲನೆ ತಡಕಾಡು ಮತ್ತು ಮುಂದಡಿ ಇಡು, ಮೆಲ್ಲನೆ ತಡಕಾಡು ಮತ್ತು ಮುಂದಡಿ ಇಡು, ಮೆಲ್ಲನೆ ತಡಕಾಡು ಮತ್ತು ಮುಂದಡಿ ಇಡು . . . . . ಇಡುತ್ತಾ ಬದುಕು ನಡೆಸೋಣ.

ಕೃಪೆ : nytimes

ಅನುವಾದ: ಟಿ. ಎಸ್. ವೇಣುಗೋಪಾಲ್

ಪ್ರತಿಕ್ರಿಯಿಸಿ