ಕಾರ್ಟೂನೆಂಬ ಎದೆಯ ಗೀರಿನ ಕ್ಷೀಣಧ್ವನಿ!

ತಮ್ಮನ್ನು ಕುರೂಪವಾಗಿ ಚಿತ್ರಿಸಿದ ವ್ಯಂಗ್ಯಚಿತ್ರಗಳನ್ನೂ ನಸುನಗೆಯೊಂದಿಗೆ ಸ್ವೀಕರಿಸಿದ ಹಾಗೂ ಕಲೆಯನ್ನು ಗ್ರಹಿಸುವುದು ಹೇಗೆ, ಆಸ್ವಾದಿಸುವುದು ಹೇಗೆ ಎನ್ನುವುದಕ್ಕೆ ಮಾದರಿಯಂತಿದ್ದ ದೇಶ ಭಾರತ. ಆದರೆ, ಕಳೆದೆರೆಡು ದಶಕಗಳಲ್ಲಿ ವ್ಯಂಗ್ಯಚಿತ್ರಕಾರನ ಲೇಖನಿಯನ್ನೇ ಮುಕ್ಕಾಗಿಸುವ ಪ್ರಯತ್ನಗಳು ದೇಶದಲ್ಲಿ ಸಾಕಷ್ಟು ನಡೆದಿವೆ.

2015ರ ಜನವರಿ 7ರಂದು ಫ್ರಾನ್ಸ್ ದೇಶದ ಪ್ಯಾರಿಸ್‍ನಲ್ಲಿರುವ ವಿಡಂಬನಾ ವಾರಪತ್ರಿಕೆ ‘ಚಾರ್ಲಿ ಹೆಬ್ಡೋ’ದ ಕಚೇರಿಯ ಮೇಲೆ ಭಯೋತ್ಪಾದಕ ದಾಳಿ ನಡೆದು, ಪತ್ರಿಕೆಯ ಸಂಪಾದಕ ಸ್ಟಿಫಾನಿ ಚರ್ಬೋನಿಯರ್ ಹಾಗೂ ನಾಲ್ವರು ವ್ಯಂಗ್ಯಚಿತ್ರಕಾರರೂ ಸೇರಿದಂತೆ ಒಟ್ಟು ಹನ್ನೆರಡು ಮಂದಿಯನ್ನು ಕೊಂದುಹಾಕಲಾಯಿತು. ಈಚಿನ ವರ್ಷಗಳಲ್ಲಿ ಜಾಗತಿಕ ಮಟ್ಟದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಮೂಲಭೂತವಾದಿಗಳು ನಡೆಸಿದ ಅತ್ಯಂತ ಘೋರ ಹಾಗೂ ಬರ್ಬರ ದಾಳಿಯದು. ಈ ಹಿಂದೆಯೂ ಹಲವಾರು ಇಸ್ಲಾಮಿಕ್ ದೇಶಗಳಲ್ಲಿ ಪ್ರವಾದಿ ಮಹಮ್ಮದ್‍ರ ಕುರಿತಾದ ವ್ಯಂಗ್ಯಚಿತ್ರಗಳ ಕಾರಣಕ್ಕಾಗಿ ವ್ಯಂಗ್ಯಚಿತ್ರಕಾರರ ಹಾಗೂ ಸಂಪಾದಕರುಗಳ ಮೇಲೆ ಹಲವು ದಾಳಿಗಳು ನಡೆದು ಹಲ್ಲೆ-ಕೊಲೆಗಳಾಗಿವೆ. ಅವೆಲ್ಲವೂ ಧರ್ಮಾಧಾರಿತ ಅಸಹಿಷ್ಣುತೆಯ ಪರಿಣಾಮಗಳು.

ಹತ್ತೊಂಬತ್ತನೇ ಶತಮಾನದಲ್ಲಿ ಥಾಮಸ್ ನ್ಯಾಸ್ಟ್ ಎಂಬ ಅಮೆರಿಕನ್ ವ್ಯಂಗ್ಯಚಿತ್ರಕಾರ ರಚಿಸಿದ್ದ ‘ಹೂ ಸ್ಟೋಲ್ ಪೀಪಲ್ಸ್ ಮನಿ?’ ಎಂಬ ಕೃತಿಯು ಅಮೆರಿಕಾದ ರಾಜಕೀಯ ವ್ಯಂಗ್ಯಚಿತ್ರಗಳಲ್ಲೇ ಅತೀ ಹೆಚ್ಚು ಮರುಮುದ್ರಿತಗೊಂಡು ಪ್ರಸಿದ್ಧಿಯಾದ ವ್ಯಂಗ್ಯಚಿತ್ರ. 1871ರ ಜುಲೈನಲ್ಲಿ ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆ ಬಯಲಿಗೆಳೆದಿದ್ದ ಡೆಮಾಕ್ರೆಟಿಕ್ ಪಕ್ಷದ ನಾಯಕ ವಿಲಿಯಂ ಟ್ವೀಡ್ ಎಂಬಾತನ ಬೃಹತ್ ಭ್ರಷ್ಟಾಚಾರದ ಕುರಿತಾಗಿ ನ್ಯಾಸ್ಟ್ ರಚಿಸಿದ ವ್ಯಂಗ್ಯಚಿತ್ರವದು. ಪತ್ರಕರ್ತರು ಆ ಕುರಿತು ಕೇಳಿದಾಗ ‘ನೀವು ವರದಿಗಾರರು ಏನಾದರೂ ಬರೆದುಕೊಳ್ಳಿ. ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಏಕೆಂದರೆ ನನ್ನ ಕ್ಷೇತ್ರದ ಮತದಾರರಲ್ಲಿ ಬಹುತೇಕ ಮಂದಿಗೆ ಓದಲು ಬರುವುದಿಲ್ಲ. ಆದರೆ ಆ ಹಾಳು ಕಾರ್ಟೂನ್ ಅನ್ನು ನೋಡಿ ನಗುತ್ತಾರಲ್ಲ?’ ಎಂದು ಉತ್ತರಿಸಿದ ಟ್ವೀಡ್ ನುಡಿದಿದ್ದನಂತೆ. ಬಳಿಕ ನ್ಯಾಸ್ಟ್‍ಗೆ ಯುರೋಪ್ ಪ್ರವಾಸದ ಆಮಿಷ ತೋರಿಸಿ ವ್ಯಂಗ್ಯಚಿತ್ರ ಬರೆಯದಂತೆ ಆಮಿಷ ಒಡ್ಡಿದರೂ, ಯಾವುದಕ್ಕೂ ಮಣಿಯದ ಆ ಕಲಾವಿದ ತನ್ನ ಕಾರ್ಯ ಮುಂದುವರಿಸಿದ್ದನಂತೆ. ಮುಂದೆ ನಡೆದ ಅಧ್ಯಕ್ಷೀಯ ಚುನಾವಣೆಗಳಲ್ಲಿ ನ್ಯಾಸ್ಟ್‍ನ ಚಿತ್ರಗಳು ವಿಶೇಷ ಪರಿಣಾಮ ಬೀರಿದ್ದವೆಂದು ಅಲ್ಲಿನ ಕಲಾಇತಿಹಾಸದ ದಾಖಲೆಗಳು ಹೇಳುತ್ತವೆ. ನ್ಯಾಸ್ಟ್‍ನ ಡೊಂಕುರೇಖೆಗಳ ಪರಿಣಾಮದ ಹಿನ್ನೆಲೆಯಲ್ಲಿ, ವ್ಯಂಗ್ಯಚಿತ್ರ ಅಥವಾ ಕಾರ್ಟೂನ್ ಎನ್ನುವ ಕಲಾವಿದನ ಈ ಸೃಜನಶೀಲ ಅಭಿವ್ಯಕ್ತಿಯ ಶಕ್ತಿ ಮತ್ತು ಮುಂದುವರಿದ ದೇಶಗಳಲ್ಲಿನ ಸಾಂಸ್ಕøತಿಕ ಸಾಕ್ಷರತೆಯ ವೈಶಿಷ್ಟ್ಯತೆ ಎಷ್ಟೊಂದು ಉನ್ನತ ಮಟ್ಟದಲ್ಲಿ ಇತ್ತೆಂಬುದನ್ನು ಸ್ಪಷ್ಟವಾಗಿ ಹೇಳಬಹುದು.

"Who stole people's money?" - ಥಾಮಸ್ ನ್ಯಾಸ್ಟ್

“Who stole people’s money?” – ಥಾಮಸ್ ನ್ಯಾಸ್ಟ್

ಹಲವಾರು ದೇಶಗಳ ಪ್ರಭುತ್ವಗಳ ಅರೆಕೊರೆಗಳನ್ನು ಎತ್ತಿ ಅಣಕಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬಂದಿರುವ ಕಾರ್ಟೂನ್ ಎಂಬ ಕಲೆಗೆ ಮಾನವೀಯವಾಗಿ ಜನಾಭಿಪ್ರಾಯ ಮೂಡಿಸುವ ವಿಶೇಷ ಶಕ್ತಿ ಇದೆ. ಈ ವಿಶೇಷ ಶಕ್ತಿಯೇ ಜಗತ್ತಿನಾದ್ಯಂತ ಈ ಕಲೆಯ ಶ್ರೀಮಂತ ಅಭಿವ್ಯಕ್ತಿಯನ್ನು ಸಾರಿ ಹೇಳುತ್ತದೆ. ಈ ಹೆಮ್ಮೆಯ ಜೊತೆಗೇ, ಹಲವು ಕಡೆಗಳಲ್ಲಿ ಧರ್ಮಾಧಾರಿತ ವಿಡಂಬನೆಗಳ ಕಾರಣಕ್ಕಾಗಿ ಕಾರ್ಟೂನ್ ಹಾಗೂ ಅದರ ಕಲಾವಿದರು ಅಗ್ನಿಪರೀಕ್ಷೆಗೆ ಒಳಗಾದ ಉದಾಹರಣೆಗಳೂ ಸಾಕಷ್ಟಿವೆ.

ಭಾರತದ ಮಟ್ಟಿಗೆ ಕಳೆದ ಶತಮಾನದ ಘಟನೆಗಳನ್ನು ನೆನಪಿಸಿಕೊಂಡು ಹೇಳುವುದಾದರೆ, ಬ್ರಿಟಿಷ್ ಆಳ್ವಿಕೆಯಿದ್ದಾಗಲೂ ಸೃಜನಶೀಲ ಅಭಿವ್ಯಕ್ತಿಯ ಮೇಲೆ ದಾಳಿ ನಡೆದುದು ಇಲ್ಲವೇ ಇಲ್ಲ ಎನ್ನುವಷ್ಟರಮಟ್ಟಿಗೆ ವಿರಳವೆನ್ನಬೇಕು. ಹೆಸರಾಂತ ವ್ಯಂಗ್ಯಚಿತ್ರಕಾರ ಅಬು ಅಬ್ರಹಾಂ ಅಂದಿನ ವೈಸರಾಯ್ ಅವರನ್ನು ಟೀಕಿಸಿ ಬರೆದ ಕಾರ್ಟೂನೊಂದನ್ನು ರಚಿಸಿದ್ದರು. ಆ ವ್ಯಂಗ್ಯಚಿತ್ರವನ್ನು ಮೆಚ್ಚಿದ ಆ ಅಧಿಕಾರಿ ಮರುದಿನ ವ್ಯಕ್ತಿಯೋರ್ವನನ್ನು ಕಳಿಸಿ ಅದರ ಮೂಲಪ್ರತಿಯನ್ನು ತರಿಸಿಕೊಂಡು ಸಂಗ್ರಹಿಸಿಟ್ಟುಕೊಂಡರಂತೆ. ಆ ಮಟ್ಟಿಗಿನ ಕಲಾಸಹಿಷ್ಣುತೆಯನ್ನು ತೋರಿದವರು ಬ್ರಿಟಿಷರು. ಸ್ವಾತಂತ್ರ್ಯಾನಂತರದ ಭಾರತದಲ್ಲೂ ಈ ಶತಮಾನದ ಆದಿಯವರೆಗೂ ಕಾರ್ಟೂನು ಹಾಗೂ ಕಾರ್ಟೂನಿಸ್ಟರಿಗೆ ದೊರೆಯುತ್ತಿದ್ದ ಸಾರ್ವತ್ರಿಕ ಮನ್ನಣೆ-ಗೌರವ, ಸ್ವಾತಂತ್ರ್ಯಗಳು ಅಪರಿಮಿತವಾದುದು ಎನ್ನಬೇಕು. ಪ್ರಸಿದ್ಧ ವ್ಯಂಗ್ಯಚಿತ್ರಕಾರ ಶಂಕರನ್ ಪಿಳ್ಳೈ ಬರೆಯುತ್ತಿದ್ದ ವ್ಯಂಗ್ಯಚಿತ್ರಗಳನ್ನು ಬಹಳವೇ ಮೆಚ್ಚುತ್ತಿದ್ದ ಪ್ರಧಾನಿ ನೆಹರೂರವರು ‘ಶಂಕರ್, ಡೋಂಟ್ ಸ್ಪೇರ್ ಮೀ’ (ನನ್ನನ್ನೂ ಬಿಡಬೇಡಿ) ಎಂದಿದ್ದರಂತೆ! ಆ ಬಳಿಕ ಅದೇ ಹೆಸರಿನಲ್ಲಿ (‘ಡೋಂಟ್ ಸ್ಪೇರ್ ಮೀ’) ಶಂಕರ್ ಪಿಳ್ಳೈ ವ್ಯಂಗ್ಯಚಿತ್ರಗಳ ಸಂಕಲನವೂ ಪ್ರಕಟವಾಗಿತ್ತೆನ್ನುವುದು, ಆ ಹೇಳಿಕೆಯ ಹಿಂದಿನ ಸಾಂಸ್ಕøತಿಕ ಮಹತ್ವವು ಎಂತಹದ್ದೆಂಬುದನ್ನು ಸದ್ಯದ ಭಾರತದ ಸಂದರ್ಭದಲ್ಲಂತೂ ಯೋಚಿಸಲೇಬೇಕಾಗಿದೆ.

Manjul ಅವರು ರಚಿಸಿದ ವ್ಯಂಗ್ಯಚಿತ್ರ

Manjul ಅವರು ರಚಿಸಿದ ವ್ಯಂಗ್ಯಚಿತ್ರ

ಕನ್ನಡಿಗರೇ ಆದ ಮೇರು ವ್ಯಂಗ್ಯಚಿತ್ರ ಕಲಾವಿದ ಆರ್.ಕೆ. ಲಕ್ಷ್ಮಣ್ ಅವರನ್ನು ಕಾರ್ಯಕ್ರಮದ ವೇದಿಕೆಯೊಂದರಲ್ಲಿ ಭೇಟಿಯಾಗಿದ್ದ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು, ‘ನಿಮ್ಮ ಚಿತ್ರಗಳನ್ನು ಬಹಳವೇ ಇಷ್ಟಪಡುತ್ತೇನೆ’ ಎಂದು ಮೆಚ್ಚುಗೆಯ ಮಾತನಾಡಿದ್ದರಂತೆ. ‘ಪ್ರಪಂಚದ ಅತ್ಯಂತ ಹೆಚ್ಚು ಸ್ವಾತಂತ್ರ್ಯವಿರುವ ತಾಣವೆಂದರೆ ಮುಂಬಯಿಯಲ್ಲಿರುವ ಟೈಮ್ಸ್ ಆಫ್ ಇಂಡಿಯಾ ಕಚೇರಿಯ ನಾಲ್ಕು ಗೋಡೆಗಳ ನಡುವಿನ ನನ್ನ ಉದ್ಯೋಗದ ಸ್ಥಳ’ ಎಂದು ಲಕ್ಷ್ಮಣ್ ಅವರು ಒಮ್ಮೆ ಉದ್ಗರಿಸಿದ್ದು, ಕಾರ್ಟೂನಿಸ್ಟರಿಗೆ ದೇಶದಲ್ಲಿದ್ದ ಮನ್ನಣೆ ಹಾಗೂ ಕಲೆಯ ಸ್ವೀಕಾರದ ಬಗ್ಗೆ ಸಮಾಜದಲ್ಲಿದ್ದ ಆರೋಗ್ಯಕರ ಸ್ಥಿತಿಗೆ ಉದಾಹರಣೆಯಂತಿದೆ. ಭಾರತದ ಕಾರ್ಟೂನ್ ಇತಿಹಾಸದ ಮಟ್ಟಿಗೆ ಆ ಕಾಲ ಅದೆಂಥ ಸುವರ್ಣಯುಗವಾಗಿದ್ದಿರಬೇಕು! ತೀರಾ ಇತ್ತೀಚಿನ ಉದಾಹರಣೆ ಹೇಳುವುದಾದರೆ, ಜಸ್ವಂತ್ ಸಿಂಗ್ ಅವರು ವಿದೇಶಾಂಗ ಸಚಿವರಾಗಿದ್ದಾಗ ಕಲಾವಿದ ಸುಧೀರ್ ತೈಲಾಂಗ್ ಅವರು ಸಚಿವರನ್ನು ಟೀಕಿಸಿ ವ್ಯಂಗ್ಯಚಿತ್ರವೊಂದರನ್ನು ರಚಿಸಿದ್ದರು; ಅದರ ಮೂಲಪ್ರತಿಯನ್ನು ಸಂಗ್ರಹಿಸಿದ್ದ ಜಸ್ವಂತ್ ಅವರು ಅದನ್ನು ಕಟ್ಟು ಹಾಕಿಸಿ ಸ್ವತಃ ತಮ್ಮ ಕಚೇರಿಯಲ್ಲಿ ಹಾಕಿಸಿಕೊಂಡಿದ್ದರಂತೆ!

ವ್ಯಂಗ್ಯಚಿತ್ರಗಳ ಮಹತ್ವ ಹಾಗೂ ಅವುಗಳನ್ನು ಪ್ರಭುತ್ವ-ಸಮಾಜ ಸ್ವೀಕರಿಸುತ್ತಿದ್ದ ಮೇಲಿನ ಘಟನೆಗಳೆಲ್ಲ ಯಾವುದೋ ಕಾಲದ ಪುರಾಣ ಪುಣ್ಯಕತೆಗಳಂತೆ ನಮಗಿಂದು ಭಾಸವಾಗುತ್ತಿರುವುದು ಸದ್ಯೋಭಾರತದ ಸಾಂಸ್ಕೃತಿಕ ದುರಂತಗಳಲ್ಲೊಂದು ಎನ್ನಬೇಕು. ರಾಜಕೀಯವಾಗಿ ದಿನೇದಿನೇ ಹೆಚ್ಚುತ್ತಿರುವ ಅಸಹಿಷ್ಣುತೆಯು ಈ ಶತಮಾನದ ಭಾರತವನ್ನು ಸಾಂಸ್ಕøತಿಕವಾಗಿಯೂ ಸಾಮಾಜಿಕವಾಗಿಯೂ ಕಿತ್ತುಮುಕ್ಕುತ್ತಿರುವುದನ್ನು ಮುಂದೊಂದು ದಿನ ಇತಿಹಾಸಕಾರರು ಐತಿಹಾಸಿಕ ಕರಾಳತೆಯೆಂದೇ ಗುರ್ತಿಸುವರೆನ್ನುವುದನ್ನು ನಾನಂತೂ ಈಗಲೇ ಗುರುತಿಸಿದ್ದೇನೆ!

ಕಾರ್ಟೂನಿನಲ್ಲಿ ವ್ಯಕ್ತಿಯನ್ನು ಬೆತ್ತಲಾಗಿ ಚಿತ್ರಿಸುವುದರ ಬಗ್ಗೆ ಅನೇಕರಲ್ಲಿ ಪೂರ್ವಗ್ರಹ ಹಾಗೂ ವಿಚಾರಶೂನ್ಯತೆಯಿರುವುದು ವೈಚಾರಿಕ ಅಭಿವ್ಯಕ್ತಿಗೆ ಎದುರಾಗಿರುವ ಒಂದು ಭಾರೀ ಸವಾಲು. ನಗ್ನತೆ ಎನ್ನುವುದೊಂದು ರೂಪಕ. ವ್ಯಕ್ತಿಯ ಭೌತಿಕ ಅಂಗ ವಿವರಣೆಗಳಿಂದ ಕಲಾವಿದ ಸಾಧಿಸುವುದಾದರೂ ಏನನ್ನು? ಉದ್ದ ನಾಲಿಗೆ ಹೇಗೆ ವಾಚಾಳಿತನವನ್ನು ಪ್ರತಿಬಿಂಬಿಸುವುದೋ ಹಾಗೆಯೇ ನಗ್ನತೆ ವ್ಯಕ್ತಿಗತ ಕುರೂಪ ಬಯಲುಗೊಂಡಿರುವುದರ ದ್ಯೋತಕ. ಈ ಸರಳಸತ್ಯ ಅರಿಯಲಾರದ ಸಾಂಸ್ಕೃತಿಕ ವೈಕಲ್ಯದ ಮನೋಭೂಮಿಕೆ ನಮ್ಮ ವೈಚಾರಿಕ ಭವಿಷ್ಯವನ್ನೆತ್ತ ನಿರ್ದೇಶಿಸೀತು? ಇಂದಿರಾ ಅವರು ಪ್ರಧಾನಿಯಾಗಿದ್ದಾಗ ತುರ್ತುಪರಿಸ್ಥಿತಿ ಹೇರಿದ್ದರಷ್ಟೆ; ಆಗ ಕಾರ್ಟೂನಿಸ್ಟ್ ಅಬೂ ಅವರು ರಾಷ್ಟ್ರಪತಿಗಳಾದ ಫಕ್ರುದ್ದೀನ್ ಅಲಿ ಅಹಮದ್ ಅವರ ಬೆತ್ತಲೆಚಿತ್ರವನ್ನು ರಚಿಸಿ, ಬಾಗಿಲ ಮರೆಯಿಂದ ಪ್ರಧಾನಿಯ ಪತ್ರಗಳಿಗೆ ಸರಣಿ ಸಹಿಗಳನ್ನು ಮಾಡುತ್ತಿರುವಂತೆ ಚಿತ್ರಿಸಿದ್ದರು. ಭಾರತದ ರಾಷ್ಟ್ರಪತಿಗಳ ದೌರ್ಬಲ್ಯ ಹಾಗೂ ಅಸಾಮಥ್ರ್ಯವನ್ನು ಸಶಕ್ತವಾಗಿ ಬಿಂಬಿಸಿದ್ದ ಚಿತ್ರವದು. ತುರ್ತುಪರಿಸ್ಥಿತಿಯಂಥ ತುರ್ತುಪರಿಸ್ಥಿತಿಯೇ ಆ ಕೃತಿಯನ್ನು ಹದವಾಗಿಯೇ ಅರಗಿಸಿಕೊಂಡಿತ್ತು.

ಅಬು ಅವರು ರಚಿಸಿದ ವ್ಯಂಗ್ಯಚಿತ್ರ

ಅಬು ಅವರು ರಚಿಸಿದ ವ್ಯಂಗ್ಯಚಿತ್ರ

ವ್ಯಂಗ್ಯಚಿತ್ರಕಾರ ಮೂಲತಃ ಒಬ್ಬ ಹೋರಾಟಗಾರ. ಕೃತಿಯೊಂದು ಕೃತಿ ಜನ್ಮತಾಳಿದ ಬಳಿಕವೂ ಅವನೊಳಗೆ ಅಶಾಂತಿ, ಅಸಮಾಧಾನ, ಅವಿಶ್ರಾಂತ ಭಾವವಿರುವುದು ಅವನೊಳಗಿನ ‘ಸಂವೇದನೆ’ ಜೀವಂತವಿರುವುದರ ಲಕ್ಷಣ. ಒಂದು ಕಾರ್ಟೂನಿನ ಹಿಂದೆ ಅಪ್ಪಟ ಮಾನವೀಯ ಸೂಕ್ಷ್ಮಗಳು ಕೆಲಸ ಮಾಡುತ್ತವೆ. ಅದು ಬಾಜಾಭಜಂತ್ರಿಯ ವಾದ್ಯಮೇಳದ ಧ್ವನಿಯಲ್ಲ. ಅದೊಂದು ಎದೆಯ ಗೀರು ಮತ್ತು ಆ ಗೀರೊಳಗೆ ಮನುಷ್ಯತ್ವದ ಬೀಜ ಮೊಳೆಯುವಾಗ ಹೊಮ್ಮುವ ಅಸಹಾಯಕ ಸಂಕಟದ ಧ್ವನಿ.

ಸಂವೇದನೆಗಳಿಲ್ಲದ ರೊಬೋಟ್ ಕಲಾವಿದರು ಕಾರ್ಟೂನಿನಂಥ ಗೆರೆನಿರೂಪಣೆಯ ಜವಾಬ್ದಾರಿಯುತ ಆಟಕ್ಕೆ ಎಂದಿಗೂ ಇಳಿಯಬಾರದು. ಕಾರ್ಟೂನಿಸ್ಟನೊಬ್ಬನನ್ನು ಹುಟ್ಟುಹಾಕುವುದು ಕೂಡ ಆಯಾ ಕಾಲದ ಸಾಂಸ್ಕøತಿಕ, ರಾಜಕೀಯ, ಸಾಮಾಜಿಕ ಸನ್ನಿವೇಶಗಳೇ ಹೊರತು ಮತ್ತೇನಲ್ಲ. ಹೀಗೆ ಸಂತ್ರಸ್ತನಾದವನ ಆತ್ಮದ ಜೊತೆ ಸಂವಾದ ಸಾಧ್ಯವಾಗುವ ಕಲಾವಿದ ಮಾತ್ರ ದೇಶದ ಸಂಪತ್ತಾಗಬಲ್ಲ. ಈ ಹಿನ್ನೆಲೆಯಲ್ಲಿ ರಾಜಕೀಯ ವ್ಯಂಗ್ಯಚಿತ್ರಕಾರನೊಬ್ಬನ ರಾಜಕೀಯ ಕಾರ್ಟೂನುಗಳ ಸಂಗ್ರಹವನ್ನೊಮ್ಮೆ ಮಗುಚಿಹಾಕುವುದೆಂದರೆ… ನೀವು ನೆಲದ ನಿಜ ಇತಿಹಾಸದ ಪುಸ್ತಕ ಓದುತ್ತೀರೆಂದೇ ಅರ್ಥ.

ಇಷ್ಟೆಲ್ಲ ಸೂಕ್ಷ್ಮಗಳಿದ್ದಾಗ್ಯೂ, ಕಾರ್ಟೂನಿಸ್ಟನ ಧ್ವನಿ ಉಡುಗಿಸುವ ಪ್ರಯತ್ನಗಳು ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವುದು ಗುಟ್ಟಾಗಿಯೇನೂ ಉಳಿದಿಲ್ಲ. ಯಾವಾಗ ಫ್ಯಾಸಿಸ್ಟ್ ಮನಸ್ಥಿತಿಯ ಭೂತ ಪ್ರಭುತ್ವದ ತಲೆಹೊಕ್ಕು ಕಾರುಬಾರು ಶುರುವಿಟ್ಟುಕೊಂಡಿತೋ, ಅಲ್ಲಿಂದ ಆರಂಭಗೊಂಡ ಈ ಸಾಂಸ್ಕೃತಿಕ ಅಧಃಪತನ ಇನ್ನೂ ಮುಂದುವರಿದೇ ಇದೆ. ಈಗಿನ ಕಾರ್ಪೊರೇಟ್ ತಿಮಿಂಗಿಲ ವ್ಯವಸ್ಥೆಯಲ್ಲಿ ಕಾರ್ಟೂನಿಸ್ಟನೊಬ್ಬ ತನ್ನ ವೃತ್ತಿಜೀವನದ ಕೊನೆಯವರೆಗೂ ತಲುಪಿ ಬೀಳ್ಕೊಡುಗೆ ಸಮಾರಂಭದಲ್ಲಿ ‘ಸಾರ್ಥಕ ವೃತ್ತಿಬದುಕು ಕಳೆದ ಎಂದೇನಾದರೂ ಹೇಳಿದರೆ ಅದು ಬಲು ಅಚ್ಚರಿ ಹಾಗೂ ತಮಾಷೆಯಾಗೇ ಕಾಣಬಹುದೇನೋ. ಮಾಧ್ಯಮ ರಂಗ ನೈತಿಕ ಬೀಳುದಾರಿಯಲ್ಲಿ ಸಾಗಿ ಉದ್ಯಮವಾಗಿ ಬದಲಾಗಿರುವ ಈ ವಿಷಮ ಸನ್ನಿವೇಶದಲ್ಲಿ, ಪ್ರಭುತ್ವದ ಜೊತೆಗಿನ ಅಪವಿತ್ರ ಮೈತ್ರಿಯ ಭಾಗವಾಗಿ ಸೃಜನಶೀಲ ಸತ್ಯದ ಅಭಿವ್ಯಕ್ತಿಯೆನ್ನಬಹುದಾದ ವಿಡಂಬನಾಕೃತಿಗಳಿಗೆ ಜಾಗ ದೊರಕುವುದಾದರೂ ಎಲ್ಲಿಂದ? ಮೌಲ್ಯಗಳು – ವೇಷದ ಸರಕುಗಳು. ಪ್ರಜಾಸತ್ತೆಯ ಕೃತ್ರಿಮ ರೂಪತೊಟ್ಟ ರಾಜಸತ್ತೆಯ ಮೈದಾಳಿಕೆಯಿಂದ ಹೊಸ ಶತಮಾನದ ನಿಜ ಇತಿಹಾಸ ಕೃತ್ರಿಮವಾಗಿ ಬರೆಸಿಕೊಳ್ಳುವುದರಲ್ಲೇ ಅವರೆಲ್ಲರ ನಿಜ ಆಸಕ್ತಿಯಿದ್ದಂತಿದೆ. ಇಂಥ ಕೃತ್ರಿಮ ಇತಿಹಾಸವಾಗುವ ಅಪಾಯದಿಂದ ತಪ್ಪಿಸಿಕೊಳ್ಳುವ ನಿರಂತರ ಕಾದಾಟದೊಂದಿಗೆ ಕಾರ್ಟೂನು ಸಾಗುತ್ತಿರುವುದು ಈ ಕಾಲದ ದುರಂತಗಳಲ್ಲೊಂದು.

1989ರಲ್ಲಿ ತೆಲುಗುಪತ್ರಿಕೆ ‘ಆಂಧ್ರಭೂಮಿ’ಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಟೂನಿಸ್ಟ್ ಸುರೇಂದ್ರ (ಈಗ ‘ದಿ ಹಿಂದೂ’ ಕಾರ್ಟೂನಿಸ್ಟ್) ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದ ಎನ್.ಟಿ. ರಾಮರಾವ್ ಅವರನ್ನು ಬೆತ್ತಲಾಗಿ ಚಿತ್ರಿಸಿ ಕಾರ್ಟೂನ್ ರಚಿಸಿದ್ದರು. ಆಗ ಸರ್ವಾಧಿಕಾರಿ ಮುಖ್ಯಮಂತ್ರಿಯೆಂದೇ ಖ್ಯಾತರಾಗಿದ್ದ ಎನ್.ಟಿ.ಆರ್. ಕೂಡಾ ಆ ಬಗ್ಗೆ ವಿರೋಧ ವ್ಯಕ್ತಪಡಿಸದೆ ಗೌರವದಿಂದ ನಡೆದುಕೊಂಡಿದ್ದರು ಎಂಬುದನ್ನು ಸ್ವತಃ ಸುರೇಂದ್ರ ಇತ್ತೀಚೆಗೆ ಟ್ವೀಟ್ ಮಾಡಿ ಬಹಿರಂಗಪಡಿಸಿದ್ದರು. ಮುಂದೊಮ್ಮೆ ವ್ಯಂಗ್ಯಚಿತ್ರ ಪ್ರದರ್ಶನವೊಂದಕ್ಕೆ ಬಂದಿದ್ದ ಎನ್.ಟಿ.ಆರ್. ಅವರನ್ನು ಸಂದರ್ಶನಕಾರರು ‘ತಮ್ಮಿಷ್ಟದ ವ್ಯಂಗ್ಯಚಿತ್ರ ಯಾವುದು?’ ಎಂದು ಕೇಳಿದಾಗ, ಸುರೇಂದ್ರನ್ ಅವರು ತಮ್ಮ ಬಗ್ಗೆ ರಚಿಸಿದ್ದ ‘ಶ್ರೀ ಕೃಷ್ಣಾವತಾರಂ’ ಕೃತಿ ತನ್ನ ಅಚ್ಚುಮೆಚ್ಚಿನದು ಎಂದು ನಗುತ್ತಾ ಹೇಳಿದ್ದರಂತೆ!

ಆದರೆ ಅದೇ ತಮಿಳುನಾಡಿನಲ್ಲಿ ಇತ್ತೀಚೆಗೆ ಜಿ. ಬಾಲಕೃಷ್ಣನ್ (ಬಾಲ) ಎಂಬ ಕಾರ್ಟೂನ್ ಕಲಾವಿದನೊಬ್ಬನನ್ನು ಪಳನಿಸ್ವಾಮಿ ಸರಕಾರ ಬಂಧಿಸಿತು. ಲೇವಾದೇವಿಗಾರನೊಬ್ಬನ ಬಡ್ಡಿ ಮಾಫಿಯಾದ ಕಿರುಕುಳದಿಂದ ಬೇಸತ್ತು ವ್ಯಕ್ತಿಯೋರ್ವ ತನ್ನ ಪತ್ನಿ ಹಾಗೂ ಮಗುವಿನ ಸಮೇತ ಕಲೆಕ್ಟರ್ ಕಚೇರಿಯೆದುರೇ ಬೆಂಕಿ ಹಚ್ಚಿಕೊಂಡು ಮೃತನಾದರೂ ಬಡ್ಡಿ ಮಾಫಿಯಾದ ವಿರುದ್ಧ ಕ್ರಮ ಕೈಕೊಳ್ಳದ ಮಖ್ಯಮಂತ್ರಿ, ಕಲೆಕ್ಟರ್ ಹಾಗೂ ಪೊಲೀಸರನ್ನು ಬೆತ್ತಲಾಗಿ ಚಿತ್ರಿಸಿದ ಕಾರ್ಟೂನಿಸ್ಟನ ವಿರುದ್ಧ, ಭಾರತೀಯ ದಂಡಸಂಹಿತೆಯ ಕಲಂ 501ರಡಿ ಮಾನನಷ್ಟ ಹಾಗೂ ಐಟಿ ಕಾಯ್ದೆಯ ಕಲಂ 67ರಡಿ ಅಶ್ಲೀಲ ಚಿತ್ರ ರಚಿಸಿದ ಪ್ರಕರಣಗಳನ್ನು ದಾಖಲಿಸಿ ಬಂಧಿಸಲಾಯಿತು. ಕಲಾವಿದನ ಬಂಧನದ ವಿರುದ್ಧ ದೇಶದಾದ್ಯಂತ ಪ್ರತಿಭಟನೆಗಳು ನಡೆದು, ಕೊನೆಗೆ ಸ್ಥಳೀಯ ನ್ಯಾಯಾಲಯದಲ್ಲಿ ಜಾಮೀನು ದೊರೆತು ಆ ವ್ಯಂಗ್ಯಚಿತ್ರಕಾರನ ಬಿಡುಗಡೆಯಾಯಿತೆನ್ನಿ. ವ್ಯಂಗ್ಯಚಿತ್ರವೊಂದಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಸರಕಾರ ಶಿಕ್ಷಕರೋರ್ವರನ್ನು ಬಂಧಿಸಿದ ಘಟನೆಯೂ ತೀರಾ ಇತ್ತೀಚಿನದು. ಖ್ಯಾತ ವರ್ಣಚಿತ್ರ ಕಲಾವಿದ ಎಂ.ಎಫ್. ಹುಸೇನ್ ಅವರು ಜೀವಭಯದಲ್ಲಿ ದೇಶ ಬಿಟ್ಟು ಬದುಕುವಂತಾದದ್ದು ಸೇರಿದಂತೆ ಕಲೆಗೆ ಸಂಬಂಧಿಸಿದ ಅಸಹಿಷ್ಣುತೆಯ ಹಲವು ಘಟನೆಗಳು ವಿಘಟನೆಗೊಂಡ ಅಪಕ್ವ ಸಮಾಜವೊಂದರ ದ್ಯೋತಕವಾಗಿ ಈ ನೆಲದ ಎದೆಯ ಗೀರುಗಳಾಗಿಯೇ ಉಳಿದಿವೆ. ಕೇವಲ ಎರಡೇ ಎರಡು ದಶಕಗಳಲ್ಲಿ ಈ ದೇಶದ ಹಲವು ಮಗ್ಗುಲುಗಳಲ್ಲಿ ಉಂಟಾದ ವೈಚಾರಿಕ ಸಹಿಷ್ಣುತೆಯ ಪಲ್ಲಟವು ಆಧುನಿಕ ಭಾರತದ  ಕಲಾಪ್ರಜ್ಞೆಯ ಕುರೂಪಿ ಪ್ರತಿಬಿಂಬವೇ ಅಲ್ಲದೆ ಮತ್ತೇನೆನ್ನಬೇಕು?

ದಿನೇಶ್ ಕುಕ್ಕುಜಡ್ಕ ಅವರ ಒಂದು ವ್ಯಂಗ್ಯಚಿತ್ರ

ದಿನೇಶ್ ಕುಕ್ಕುಜಡ್ಕ ಅವರ ಒಂದು ವ್ಯಂಗ್ಯಚಿತ್ರ

ಇದು ಸಾಮಾಜಿಕ ಜಾಲತಾಣಗಳ ಉಬ್ಬರದ ಕಾಲ. ಇಲ್ಲಿ ವಿಚಾರದ ಅಭಿವ್ಯಕ್ತಿಯೂ ಸುಲಭ, ಅದಕ್ಕೆ ಎದುರಾಗಿ ಗುಂಪು ದಾಳಿಗಳಾಗುವುದೂ ಸುಲಭ. ಇವಿಷ್ಟು ಸಾಲದೆಂಬಂತೆ ಧಾರ್ಮಿಕ ಹಾಗೂ ರಾಜಕೀಯ ಜಂಟಿ ಧ್ರುವೀಕರಣದ ಕಾಲಘಟ್ಟದಲ್ಲಿ ನಿಂತು ಮೊರೆಯುತ್ತಿದೆ ಭಾರತ. ದೇಶ ವಿಪರೀತ ಸೈದ್ಧಾಂತಿಕತೆಯ ರೂಪ ತೊಟ್ಟು ನೀಳವಾಗಿ ಸೀಳುಗೊಂಡಿದೆ.  ಕಾರ್ಟೂನಿನಂಥ ನೆಗೆಟಿವ್ ಶೈಲಿಯ ಅಭಿವ್ಯಕ್ತಿಗೆ ಯಾವುದಾದರೊಂದು ಮಗ್ಗುಲಿನ ಬೆದರಿಕೆ ದಾಳಿಗಳು ನಿತ್ಯನಿರಂತರ ಎಂಬಂತಾಗಿದೆ. ವ್ಯಕ್ತಿ ಆರಾಧನೆಯ ದಾರುಣ ಅಡ್ಡಪರಿಣಾಮಕ್ಕೆ ಸಿಕ್ಕು ಎಲ್ಲಾ ರಂಗಗಳಂತೆ ಕಾರ್ಟೂನೂ ನಲುಗಿದೆ. ಇಲ್ಲಿ ಅನುಭವಗಳನ್ನು ದಾಖಲಿಸುತ್ತಿರುವ ನಾನೇ ಎಂಥೆಂಥದೋ ಕೊಳಕು ದಾಳಿಗಳಿಗೆ ಸಾಕ್ಷಿಯಾಗಿದ್ದೇನೆ. ಬಹು ಸುಲಭದಲ್ಲೇ ವ್ಯಕ್ತಿಗತ ಚಾರಿತ್ರ್ಯಹರಣದಂಥ ಅನುಭವಗಳಿಗೆ ಎದುರುಗೊಂಡಿದ್ದೇನೆ. ಆ ಎಲ್ಲಾ ದಾಳಿಗಳೂ ತಮ್ಮ ತಮ್ಮ ಸೈದ್ಧಾಂತಿಕ ನಾಯಕರನ್ನು ಪ್ರಶ್ನಿಸಲೇಬಾರದೆನ್ನುವಲ್ಲಿಗೆ ಉದ್ದೇಶಿತಗೊಂಡವೆಂದು ಪ್ರತ್ಯೇಕ ಹೇಳಬೇಕಿಲ್ಲವಲ್ಲ.

ಈ ನೆಲದಲ್ಲೇ ನಡೆದಿರುವ ವೈಚಾರಿಕ ಕೊಲೆಗಳ ಹಿಂದೆ ಕೆಲಸಮಾಡಿರುವ ಮನಸ್ಥಿತಿಯೇ ಇಂದು ವಿಶ್ಲೇಷಣಾತ್ಮಕ ಕಾರ್ಟೂನುಗಳನ್ನೂ ಬೆದರಿಸುತ್ತಿರುವುದು. ಸಾಂಸ್ಕøತಿಕ ಸಾಕ್ಷರತೆಯನ್ನು ಯಾರು ಯಾರಿಗೆ ಹೇಳಿ ಕಲಿಸೋಣ? ಕಾರ್ಟೂನು ಮಾಡುವುದು ಹೇಗೆ ಎಂಬ ಸಹಜ ಕುತೂಹಲ ಹೆಚ್ಚಿನ ಜನರಲ್ಲಿದೆ. ಆದರೆ, ನನ್ನ ಆತ್ಮದ ಬೇಡಿಕೆ – ‘ಕಾರ್ಟೂನು ನೋಡುವುದು ಹೇಗೆ?’ ಎಂಬ ಬಗೆಗೇ ಹೆಚ್ಚಿನ ಅರಿವು ಹೊಂದಬೇಕಾದ ತುರ್ತು ಇಡಿಯ ದೇಶಕ್ಕಿದೆ.

‘ಓದುಗ ದೊರೆ’, ‘ಓದುಗ ಪ್ರಭು’, ‘ಅಭಿಮಾನಿ ದೇವರು’ – ಇತ್ಯಾದಿ ಪದಗಳು ಹಾಗೇ ಸುಮ್ಮನೆ ಠಂಕಿಸಿಬಿಟ್ಟವುಗಳಲ್ಲ ಅಂತ ಅನೇಕ ಬಾರಿ ಅನ್ನಿಸಿರುವುದುಂಟು ನನಗೆ. ಓದುಗ ದೇವರಂತಿರುವುದು ಕೃತಿಕಾರನ ಅದೃಷ್ಟದ ಪರಮೋಚ್ಛ ಸ್ಥಿತಿಯೆಂದೇ ನನ್ನ ಗಟ್ಟಿ ನಂಬಿಕೆ.

ಕೃಪೆ: ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ೭೦ರ ಸಂಭ್ರಮದ ಸ್ಮರಣ ಸಂಚಿಕೆ


2 comments to “ಕಾರ್ಟೂನೆಂಬ ಎದೆಯ ಗೀರಿನ ಕ್ಷೀಣಧ್ವನಿ!”
  1. ಕುಕ್ಕುಜಡ್ಕ ಅವರೇ ಸಮಕಾಲೀನ ಭಾರತದ ಫ್ಯಾಸಿಸ್ಟ್ ರಾಜಕಾರಣ ಕುರೂಪತೆಯನ್ನು ತುಂಬಾ ಚೆನ್ನಾಗಿ ನಿರೂಪಿಸಿದ್ದೀರಿ. ಹ್ಯಾಟ್ಸಅಪ್!

ಪ್ರತಿಕ್ರಿಯಿಸಿ