ವನಿತಾ ಅವರ ಕವನ: ಚಿನ್ನದ ಬಾತುಕೋಳಿ

ಮೋಟು ಲಂಗ ಉದ್ದಜಡೆ
ಆಕಾಶಕ್ಕೆ ಅಂಬು ಹಾಸಿದ
ಏಳುಸುತ್ತಿನ ಮಲ್ಲಿಗೆ
ಕೈಗೆಟುಕು.. ಎಟುಕು ಕುಣಿದಾಗೆಲ್ಲಾ!
ಬಾಯ್ತುಂಬ ನಕ್ಕಳು ಅಜ್ಜಿ
ಅವಳ ಎಲೆ ಅಡಿಕೆ ಚೀಲಕ್ಕೆ
ಹೊಲಿಯಲಾರದ ತೂತು ಮುಗ್ಗಲು.
 
ಪುಟ್ಟ ಬಾಲೆಯ
ಪುಸ್ತಕದ ಬ್ಯಾಗಿನ ತಳದ ಚಿಲ್ಲರೆ
ಕ್ಯಾಂಡಿ ಚಾಕಲೇಟು ನಿಂಬೆ ಹುಳಿ
ಖಾಲಿ ಖಾಲಿ. 
ತಿಂಗಳು,
ಬೇಗ ಮುಗಿಯದ ಜುಲುಮೆ.
ಅಪ್ಪಕೊಟ್ಟ ದೊಡ್ಡ ನೋಟು
ನವಿಲು ಗರಿಗಳ ನಡುವೆ
ದಶಕಗಳೇ ಕಳೆದ ನೆನಪು!
 
ಹಳೇ ಆಲ್ಬಮ್ನ ಪುಟತಿರುವಿದಾಗೆಲ್ಲಾ
ಅರೆ ಸಂಕೋಚದ ಮುದ್ದೆ ಅಮ್ಮ.
ಅವಳ ಟ್ರಂಕಿನಲ್ಲಿ ಮಡಿಕೆಯ ನಡುವಿನ
ಬಾತುಕೋಳಿಯ ಓಲೆ ಮಾಯವಾದ್ದು
ಈಕೆ ಬಿಡಿಸೇ ಇರದ ಒಗಟು!
ಒಗಟು ಅಂದಾಗೆಲ್ಲಾ
ಅಜ್ಜಿ ಕತೆ ಸುರುವಿಡುತ್ತಾಳೆ..
 
ಏಳು ಸಾಗರದಾಚೆ.. ಕಾಡು ದಾಟಿ,
ಮಾಮರದ ನಡುವೊಬ್ಬಳು
ಕನವರಿಕೆಯಾಕೆ.
ಅಜ್ಜಿ, ಅಮ್ಮ, ಅತ್ತೆಯರು ಸರದಿಯಲ್ಲಿ ಹೊತ್ತು
ದಾಟಿಸಿದ ಸರಗಳು ತೊನೆದು
ಕುತ್ತಿಗೆ ಭಾರದ
ಕಿಸೆ ಇಲ್ಲದ ರಾಜಕುಮಾರಿ!
ಈಕೆಗೆ ಪ್ರಾಯವೆಂದರೆ ಕೇಳಬೇಕೆ?
ಪರಧಾರೆಯ ಗೌಜು ಗದ್ದಲ..
ಈಗಲು ಅದು ಸುದೀರ್ಘದೆ
ಕಳೆದು ಹೊಗುವ ಕನಸ್ಸು… ಹಂಗಿನ ಪ್ರಯಾಣ!
ಮೌನದ ತೊಡಿಗೆಯ ಬಾಲೆ
ಮನೆಯಿಂದ ಮನೆಹೊಕ್ಕು
ಗುಸುಗುಡುವ ಕತೆಯಾಗುತ್ತಾಳೆ.
 
ಹೂಗಣ್ಣು ತಿಳಿವ ಸುರುವಿಕೊಂಡಲ್ಲಿ
ಅವನ ತೋಳಾದರು
ಕಿಸೆಯ ಅಂತರ್ಪಟ ಹಾರಾಡುತ್ತದೆ.
ಮಣಿಯದ ಬದುಕು…
ಕಿಸೆಗಳು ಮೂಡಹತ್ತುತ್ತವೆ ಬ್ಯಾಗಿಗೆ.
ಹರವಿಕೊಂಡ ಆಕಾಶ
ಅಗಣಿತ ತಾರೆ ಜತನ ಮಾಡಿದ ಬೆಳಕು
ಏಳುಸುತ್ತಿನ ಮಲ್ಲಿಗೆಗೆ ಸುರುವಿ
ಮುಡಿಯುತ್ತಾಳೆ.
 
ಗೆಜ್ಜೆಗಳೋ ಅಮಲ ಹುರುಡು
ಉರಿಯ ಹೆಜ್ಜೆ ಉಸಿರಾಡುತ್ತವೆ
ಉದ್ದುದ್ದ ದಾರಿ , ದಿಕ್ಕಿಗೂ ಮಿಕ್ಕು ಶೂನ್ಯ.
ಕುಬುಸಕ್ಕಲ್ಲೇ ಸೀರೆಗೊಂದು ಕಿಸೆ ಇರಬೇಕಿತ್ತು
ಅವಳ ಗೆಳತಿ ಛೇಡಿಸುತ್ತಾಳೆ.
ಅವಳ ನಗು ಸಾವಿರದ ಎಲೆ ಹೊತ್ತ
ಅರಳೀ ಮರದ ತೂಗು..
 
ಸಿಟಿಯ ಮಾಲಿನಲ್ಲಿ ಮಿಸ್
ಶಾಪಿಂಗ್ ಗಡಿಬಿಡಿಯಲ್ಲಿ
ಜೀನ್ಸ್‌ ಕಿಸೆಯಿಂದ
ನೋಟು ಉದುರಿ ಆಯುತ್ತಾಳೆ
ಚಿನ್ನದ ಬಾತುಕೋಳಿಯ ಸೋಜಿಗ!
ಈ ಜಗದ ರೂಢಿಗತ ಕುರುಡು…
ಎಣಿಸಲು ಇಚ್ಛೆ ಇರದಷ್ಟು.

 


                                     
One comment to “ವನಿತಾ ಅವರ ಕವನ: ಚಿನ್ನದ ಬಾತುಕೋಳಿ”
  1. ಕಾಲೇಜ್ ನಲ್ಲಿ m..a ಕಲಿಯುತ್ತಿದ್ದಾಗ ಕವನ ಬರೆಯುತ್ತಿದ್ದ ನೀವು ಈಗ ಬಹಳ ಒಳ್ಳೆಯ ಕವಿತೆ ಬರೆದಿದ್ದೀರಿ
    ನಿಮ್ಮ ಕಾವ್ಯ ಕೃಷಿ ಹೀಗೆಯೇ ಮುಂದುವರೆದರೆ ಸಾಹಿತ್ಯ ಕೆಕೆ ಲಾಭ

ಪ್ರತಿಕ್ರಿಯಿಸಿ