ಭಾರತದ ಪ್ರಮುಖ ಚಿಂತಕ, ಬರಹಗಾರ ಆಶೀಸ್ ನಂದಿ ಮತ್ತು ಅನನ್ಯಾ ವಾಜಪೈ ನಡುವಿನ ಮಾತುಕತೆ, ಚರ್ಚೆಯ ಅನುವಾದ ಇಲ್ಲಿದೆ. ಸ್ವತಂತ್ರ ಭಾರತವನ್ನು ರೂಪಿಸಿದ ಐಡಿಯಾಲಜಿಗಳು, ನಾಯಕರ ನಿಲುವುಗಳು, ಪ್ರಜೆಗಳು ಅವುಗಳನ್ನು ಎದುರಿಸಿ, ಒದಗಿ, ಒಗ್ಗಿ, ಪ್ರತಿಭಟಿಸಿ ಮುನ್ನಡೆಯುತ್ತ ಬಂದ ಕ್ರಮಗಳನ್ನು ಈ ಸಂದರ್ಶನ ಅವಲೋಕಿಸುತ್ತದೆ. ಯಾವುದೇ ಬರಹವನ್ನು ಕನ್ನಡದ್ದೇ ಆಗುವಂತೆ ಅನುವಾದಿಸುವ ಪ್ರಜ್ಞಾ ಶಾಸ್ತ್ರಿ ಈ ಬರಹವನ್ನು ಋತುಮಾನಕ್ಕಾಗಿ ತರ್ಜುಮೆಗೊಳಿಸಿದ್ದಾರೆ.
ಅನನ್ಯಾ:
ಭಾರತೀಯ ಮನೋಭಾವಕ್ಕೆ ನಿರ್ವಸಾಹತೀಕರಣ ಅವಶ್ಯ ಅಂತಾದರೆ ಯುರೋಪಿಯನ್ ಮನೋಭಾವಕ್ಕೆ ಏನು ಮಾಡಬೇಕು? “ಪಶ್ಚಿಮ” ಮತ್ತು “ಇನ್ನುಳಿದಂಥವುಗಳ” ನಡುವೆ “ಇನ್ನುಳಿದಂಥವು” ತಮ್ಮ ಪ್ರಜ್ಞಾಪೂರ್ವಕ ಮತ್ತು ಸುಪ್ತ ಅಧೀನತೆಯಿಂದ ಬಿಡಿಸಿಕೊಳ್ಳಬೇಕು ಅಂತ ಹೇಳುವುದಾದರೆ ಪಶ್ಚಿಮವೂ ವಿಷಮುಕ್ತವಾಗಬೇಕಲ್ಲವೆ? ಅದು ಹೇಗೆ ಆಗಬೇಕು? ಯುರೋಪಿಯನ್ ಮನೋಭಾವದಲ್ಲಿ ಯಾವ ರೀತಿ ಬದಲಾವಣೆಗಳು ಆಗಬಹುದು? ಈ ಪ್ರಕ್ರಿಯೆಯನ್ನು ನೀವು ಏನಂತ ಕರೆಯುತ್ತೀರಿ? ಸ್ವಕೇಂದ್ರಿತ ಮನೋವಿಕಾರಗಳನ್ನು ತೆಗೆದು ಹಾಕುವುದು ಅಂತಲೋ? ಅಥವಾ ಕೆನಡಾದ ವಿಶ್ಲೇಷಕ ಚಾರ್ಲ್ಸ್ ಟೇಲರ್ ಮತ್ತು ನಿಮ್ಮದೇ ದೇಶದವರಾದ ದೀಪೇಶ್ ಚಕ್ರವರ್ತಿಯವರೂ ಹೇಳುವ ಹಾಗೆ ಅದು ಪ್ರಾಂತೀಯಗೊಳ್ಳುವ (“ಪ್ರೊವಿನ್ಶಿಯಲೈಸೇಶನ್”) ಪ್ರಕ್ರಿಯೆಯೆ?
ನಂದಿ:
ಟೇಲರ್ ಮತ್ತು ಚಕ್ರವರ್ತಿಯವರು ಹೇಳಿದ್ದನ್ನು ಒಪ್ಪಿಕೊಳ್ತೇನೆ. ಆ ಮಟ್ಟಿಗೆ ನನ್ನ ವಿಚಾರಗಳೂ ಬಹಳ ಭಿನ್ನವೇನಲ್ಲ. ಆದರೆ ವಸಾಹತುಶಾಹಿ ಅನುಭವ ಇರುವದರಿಂದ ಯುರೋಪ್ ಮತ್ತು ಉತ್ತರ ಅಮೇರಿಕಾಕ್ಕೆ ಒಂದು ತರಹ ಎಲ್ಲ ಗೆದ್ದವರ ಹಮ್ಮಿದೆ. ಜಗತ್ತಿನ ಉಳಿದ ಭಾಗಗಳಿಗಿಂತ ತಾವು ಶ್ರೇಷ್ಠರು ಎನ್ನುವ ಭಾವನೆ ಇದೆ. ನಾನು ನಂಬುವ ಹಾಗೆ ಜಗತ್ತಿನ ಬಳಿ ಒಂದು ಅರ್ಧ ಡಜನ್ ಅಮೇರಿಕಾಗಳನ್ನಾದರೂ ಹುಟ್ಟು ಹಾಕುವಷ್ಟು ಸಂಪನ್ಮೂಲಗಳು ಖಂಡಿತ ಇಲ್ಲ. ಆ ರೀತಿಯ ಒಂದು ಆತ್ಮವಿಶ್ವಾಸ, ಆ ರೀತಿಯ ಐಶಾರಾಮಿ ಜೀವನ ಶೈಲಿಯಿಂದ ಜಗತ್ತಿಗೂ ಏನಂತಹ ಒಳ್ಳೆಯದಾಗಲಿಲ್ಲ ಮತ್ತು ಪರಿಸರಕ್ಕೂ ಅದು ಮಾರಕ. ಜಗತ್ತನ್ನ ಬಿಡಿ, ಅಮೇರಿಕದ ಸಂಸ್ಕೃತಿಗೆ ಕೂಡಾ ಅದರಿಂದ ಒಳ್ಳೆಯದಾಗಲಿಲ್ಲ. ಯುರೋಪಿನ ಸ್ಥಿತಿ ಅಮೇರಿಕಕ್ಕಿಂತ ಉತ್ತಮ ಅನ್ನಬಹುದು. ಆದರೆ ಅಲ್ಲಿ ಕೂಡಾ ಹೊರಗಿನವರಿಂದಾಗಿ ಯುರೋಪಿನ ಏಳಿಗೆ ದುರ್ಬಲವಾಗುತ್ತದೆ ಎನ್ನುವ ಕಾರಣದಿಂದ ಹೊರದೇಶದಿಂದ ಬಂದವರನ್ನು ಶತ್ರುವಿನಂತೆ ಕಾಣುವುದು ಇದೆ. ಹೊರಗಿನವರು ಇರುವುದರಿಂದ ಯುರೋಪಿಯನ್ನರಿಗೆ ಅಷ್ಟು ಸಮಾಧಾನವಿಲ್ಲ. ಇಲ್ಲಿರುವ ವ್ಯಂಗ್ಯವನ್ನು ನೀವು ಗಮನಿಸಬಹುದು. ಎಲ್ಲ ದಿಕ್ಕಿನಿಂದಲೂ ಹೊಸ ಕಲಿಕೆ ಆಗಬೇಕಾಗಿದೆ.
ಅನನ್ಯಾ: ಏನದು ?
ಯುರೋಪಿಗೆ ಅನ್ವಯಿಸುವಂಥದ್ದು ಭಾರತ ಮತ್ತು ಮತ್ತಿತರ ದೇಶಗಳಿಗೂ ಅನ್ವಯವಾಗುತ್ತದೆ. ಇತರರ ಜೀವನಕ್ರಮಗಳಿಗೆ ಮತ್ತು ವಿಚಾರಗಳಿಗೆ ಸಂಬಂಧಿಸಿದಂತೆ ಒಂದು ಪ್ರಮಾಣದ ತೆರೆದ ಮನಸ್ಸು ಬೇಕು ಮತ್ತು ಕೆಲವು ಸಂದರ್ಭಗಳಲ್ಲಿ ಬಳಕೆಯ ಪಾತಳಿಗಳು ಏರುವುದಕ್ಕೆ ಬದಲು ಇಳಿಯಬೇಕು. ಈ ಸಾಧ್ಯತೆಯನ್ನು ಎದುರಿಸುವ ಮಟ್ಟಿಗೆ ಯುರೋಪ್ ಮತ್ತು ಅಮೇರಿಕಾ ಅನುಭವಿಸುವ ಸಮಸ್ಯೆಗಳಲ್ಲಿ ಏನೋ ಗಂಭೀರವಾದ ಒಂದು ಗೋಜಲು ಇದೆ. ಅಭಿವೃದ್ಧಿಯ ಬಗೆಗಿನ ನಮ್ಮ ವಿಚಾರಗಳು ಅಭಿವೃದ್ಧಿಯೆಂಬುದು ಶಾಶ್ವತವಾಗಿ ನಡೆಯುತ್ತ ಇರಬೇಕಾದದ್ದು ಎಂಬ ಪರಿಕಲ್ಪನೆಯೊಂದಿಗೆ ತಳಕು ಹಾಕಿಕೊಂಡಿರುವುದು ದುರದೃಷ್ಟಕರ. ಈ ರೀತಿಯ ವಿಚಾರಕ್ಕೆ ಮಿತಿಗಳಿವೆ. ಅಂದರೆ, ಬಹಳ ವರ್ಷಗಳ ಹಿಂದೆ, ’ಕ್ಲಬ್ ಆಫ್ ರೋಮ್’ (1968 ರಲ್ಲಿ ಇಟಲಿಯಲ್ಲಿ ಸ್ಥಾಪಿತವಾದ ಒಂದು ಸರ್ಕಾರೇತರ ಸಂಸ್ಥೆ) ಇದರ ಬಗೆಗೆ ಒಂದು ಪ್ರಣಾಳಿಕೆಯನ್ನು ಹೊರಡಿಸಿತ್ತು. ಅದನ್ನು ನಮ್ಮ ಸಾರ್ವಜನಿಕರು ಒಪ್ಪುವಂತೆ ಮಾಡಲಾಗದಿದ್ದರೆ ಸರಿ, ಕೊನೆ ಪಕ್ಷ ’ಸಾಕಷ್ಟಾಯಿತು, ನಿಲ್ಲಿಸೋಣ. ಸಾಕು ಇಷ್ಟು ಅಭಿವೃದ್ಧಿ’ ಎನ್ನುವಂತಹ ಒಂದು ಸ್ಥಿತಿಗಾದರೂ ಅವರನ್ನು ತರಬೇಕಲ್ಲ.
ಅನನ್ಯ:
ನೀವು ಬಂಗಾಲಿ. ದೇಶ ವಿಭಜನೆ, ಮುಸ್ಲಿಂ ಮತ್ತು ಹಿಂದೂಗಳ ನಡುವಿನ ಸಂಘರ್ಷ, ಪಾಕಿಸ್ತಾನದ ಹುಟ್ಟು (1947) ಈ ಎಲ್ಲವನ್ನೂ ಕಂಡಿದ್ದೀರಿ. ಆಮೇಲೆ ಬಾಂಗ್ಲಾದೇಶ ಹುಟ್ಟಿಕೊಂಡಿತು. (೧೯೭೧). ಬ್ರಿಟೀಶ್ ಭಾರತದ ವಿಭಜನೆಯು ಒಂದು ಮಹಾವಲಸೆ ಮತ್ತು ಚರಿತ್ರೆಯ ಒಂದು ಬೃಹತ್ ಸ್ಥಾನಪಲ್ಲಟದ ಘಟನೆ ಎಂಬುದಂತೂ ನಿಜ. ಭಾರತೀಯರಿಗೆ ಯುರೋಪಿಯನ್ನರ ಅಂಜಿಕೆಯಿಂದ ಆಘಾತವೇನೂ ಆಗಿಲ್ಲ. ಆದರೆ ಕೊಂಚ ಆಶ್ಚರ್ಯಜನಕ ಸಂಗತಿಯಾಗಿದೆ. ಹೊಸತಾಗಿ ಪ್ರವೇಶಿಸಿದವರ ಮೇಲಿನ ದ್ವೇಷವು ಭಾರತೀಯರಿಗೆ ಚೆನ್ನಾಗೇ ಗೊತ್ತಿರುವ ಒಂದು ಭಾವನೆ.
ನಂದಿ:
ನಾನು ಬಂಗಾಲಕ್ಕೇ ಸೇರಿದವನು ಎಂಬುದು ನಿಜ. ಆದರೂ ನಾನಲ್ಲಿ ಬಾಲ್ಯದಿಂದಲೂ ಇದ್ದವನಲ್ಲ. ನೀವೀಗ ಯುರೋಪಿನಲ್ಲಿ ಏನು ಕಾಣುತ್ತಿದ್ದೀರೋ ಅಂತಹುದೇ ಬಗೆಯ ದ್ವೇಷವನ್ನು ಬಂಗಾಳದಲ್ಲೂ ಕಂಡಿದ್ದೇನೆ. ಭಾರತ ವಿಭಜನೆಯಾದ ನಂತರ ವಲಸೆ ಬಂದವರ ಮೇಲಿನ ಅಸಹನೆಯನ್ನು ಅಲ್ಲಿ ನಾನು ಕಂಡಿದ್ದೇನೆ. ಭಾರತದ ಬದಿಯ ಪಶ್ಚಿಮ ಬಂಗಾಳಕ್ಕೆ ದೊಡ್ಡ ಪ್ರಮಾಣದಲ್ಲಿ ನಿರಾಶ್ರಿತರು ಬಂದರು. ಒಮ್ಮೆಲೆ ಸುಮಾರು ಹತ್ತು ಮಿಲಿಯನ್ ಜನ ಬಂದರು. ನಂತರ ಬರುತ್ತಲೇ ಉಳಿದರು. ಅದೊಂದು ದೊಡ್ಡ ದುರಂತ. ಬಂದವರು ಬಂಗಾಳೀ ಜನವೇ ಆದರೂ ಬಂಗಾಳೀಯರಿಗೆ ಅಸಹನೆ. ಅದೇ ರೀತಿ ಪಂಜಾಬಿನಲ್ಲೂ ಆಯಿತು. ಪಶ್ಚಿಮ ಪಾಕಿಸ್ತಾನದಿಂದ ಬಂದ ನಿರಾಶ್ರಿತರು ಅವರೂ ಪಂಜಾಬಿಗಳೇ ಆಗಿದ್ದರು.
ಹಾಗೆ ನೋಡಿದರೆ ಭಾರತ ಮತ್ತು ಪಾಕಿಸ್ತಾನದ ಸರಕಾರಗಳು ನಿರಾಶ್ರಿತರು ಮತ್ತು ವಲಸೆ ಬಂದವರನ್ನು ಚೆನ್ನಾಗಿಯೇ ನೋಡಿಕೊಂಡವು. ಸರಕಾರಗಳು ತಾತ್ವಿಕವಾಗಿ ಅವರ ಮಟ್ಟಿಗೆ ಸಾಕಷ್ಟು ಉದಾರವಾಗಿಯೇ ಇದ್ದವು. ಆದರೆ ಸ್ವತಃ ಅವರ ಸಂಬಂಧಿಕರು, ಅವರವರ ಸಮುದಾಯಗಳಲ್ಲಿಯೇ ಹೆಚ್ಚು ಅಸಹನೆಯ ಮತ್ತು ದ್ವೇಷದ ವಾತಾವರಣವಿತ್ತು. ಸ್ಥಳೀಯರಲ್ಲಿ ವಲಸೆಗಾರರ ಬಗೆಗೆ ಒಂದು ರೀತಿಯ ಅಂಜಿಕೆ ಇತ್ತು. ವಲಸೆ ಬಂದವರು ಸ್ಥಳೀಯ ಸಂಸ್ಕೃತಿಗಳನ್ನು ಆಕ್ರಮಿಸಿ ಸಮುದಾಯಗಳ ಚೆಹರೆಗಳನ್ನು ಬುಡಮೇಲು ಮಾಡಬಹುದೆಂಬ ಅಂಜಿಕೆ. ಅದು ಹಾಗೆಯೇ ಆಯಿತು ಕೂಡಾ. ಮತ್ತೆ ಬದಲಾಯಿಸಲು ಬಾರದ ಹಾಗೆ. ದೇಶವಿಭಜನೆಯಿಂದ ಇಡೀ ಉಪಖಂಡದೊಳಗೆ ಒಂದಾಗಿ ಇದ್ದ ಮಿಶ್ರ ಸಮುದಾಯಗಳ ಸಂಬಂಧಗಳ ಸ್ವರೂಪವು ವಿಕೃತಗೊಂಡಿದ್ದರ ಹೊಣೆಯನ್ನು ನಿರಾಶ್ರಿತರು ಹೊರಬೇಕಾಯಿತು. ಮುಖ್ಯವಾಗಿ ಪೂರ್ವ ಬಂಗಾಳದಲ್ಲಿ ಮತ್ತು ಪಶ್ಚಿಮ ಪಂಜಾಬಿನಲ್ಲಿ.
ಅನನ್ಯಾ:
ಇವತ್ತು ಭಾರತೀಯರಿಗೆ ಯುರೋಪಿಯನ್ನರು ನಿರಾಶ್ರಿತರ ಸಮಸ್ಯೆಯಿಂದ ಕಂಗಾಲಾಗಿರುವ ಸುದ್ದಿಯಿಂದ ಹಳೆಯ ವಸಾಹತು ಶಕ್ತಿಗಳು ದುರ್ಬಲವಾಗುತ್ತಿವೆ ಎಂಬ ಭಾವನೆ ಏನಾದರೂ ಬಂದಿದೆಯೆ?
ನಂದಿ:
ಇಲ್ಲ. ಬ್ರಿಟನ್ ಬಗೆಗೆ ಭಾರತೀಯರು ಹಾಗೆಲ್ಲ ಅಂದುಕೊಳ್ಳುತ್ತಾರೆಂದು ನನಗೆ ಹಾಗನ್ನಿಸುವುದಿಲ್ಲ. ಬ್ರೆಕ್ಸಿಟ್ ಬ್ರಿಟನ್ ದುರ್ಬಲವಾಗುತ್ತಿರುವುದರ ಸಂಕೇತ ಎಂದೇನೂ ಭಾರತೀಯರಿಗೆ ಅನಿಸಲಿಕ್ಕಿಲ್ಲ ಯಾಕೆಂದರೆ ಅವರಿಗೆ ಬ್ರಿಟನ್ ಇವತ್ತಿಗೂ ಆಂಗ್ಲೋ ಸ್ಯಾಕ್ಸನ್ ಸತ್ತೆಯ ಪ್ರತಿರೂಪವಾಗಿದೆ. ಏನೇ ಆಗಲಿ ಅದು ಜಗತ್ತನ್ನು ಆಳುತ್ತದೆ ಎಂಬ ಭಾವನೆ. ಅಮೇರಿಕಕ್ಕೆ ಬ್ರಿಟನ್ ಇವತ್ತಿಗೂ ’ತಾಯಿ ನಾಡು’. ಹೀಗಾಗಿ ಅವೆರಡೂ ಒಟ್ಟಿಗೆ ಬಲಾಢ್ಯ ಶಕ್ತಿಗಳು ಎಂಬುದೊಂದು ಅಂಜಿಕೆ ಭಾರತೀಯರ ಮನಸ್ಸಿನಲ್ಲಿ ಇವತ್ತಿಗೂ ಇದೆ. ಆ ಭಾವನೆ ಎಷ್ಟರಮಟ್ಟಿಗೆ ಸಮರ್ಥನೀಯ, ಅದನ್ನ ಎಷ್ಟರ ಮಟ್ಟಿಗೆ ನಂಬಬಹುದು ಅದೆಲ್ಲ ಒಂದೆಡೆ ಇರಲಿ. ಅದೊಂದು ದೊಡ್ಡ ರಮ್ಯ ಕತೆಯಾಗಿರಬಹುದು, ಅದು ನಮಗೆ ಗೊತ್ತಿದ್ದದ್ದೆ. ಆದರೆ ಭಾರತೀಯರು ಅದನ್ನು ನೋಡುವುದು ಹಾಗೆ. ಅಷ್ಟೆ ಅಲ್ಲ ಭೂಮಿಯ ಆ ಅರ್ಧ ಭಾಗದ ಬಗೆಗೆ ತಮಗೆ ಚೆನ್ನಾಗಿ ಗೊತ್ತು, ಪೂರ್ವ ಯುರೋಪಿನ ಬಗೆಗೆ ತಮಗೆಷ್ಟು ಗೊತ್ತೋ ಅದಕ್ಕಿಂತ ಚೆನ್ನಾಗಿ ಅಂತ ಅಂದುಕೊಂಡಿದ್ದಾರೆ. ಅಥವಾ ಚೈನಾ ಮತ್ತು ಜಪಾನಿಗಿಂತ ಹೆಚ್ಚು. ಇವು ಏಶಿಯಾದ ಭಾಗಗಳಾದರೂ ಇವುಗಳಿಗಿಂತ ಹೆಚ್ಚು ಬ್ರಿಟನ್ ಮತ್ತು ಅಮೇರಿಕವನ್ನು ತಾವು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇವೆ ಎಂಬ ರೀತಿಯಲ್ಲಿ ಭಾರತೀಯರು ಯೋಚಿಸುತ್ತಾರೆ. ಅದೇ ನಮೂನೆಯ ಆತಂಕವನ್ನು, ತಮ್ಮ ಮೇಲೆ ಸವಾರಿಯಾಗುತ್ತಿದೆ ಎಂಬ ತಳಮಳವನ್ನು, ಜಾಗತಿಕವಾಗಿ ತಮ್ಮನ್ನು ಅಂಚಿಗೆ ಸರಿಸಲಾಗುತ್ತಿದೆ ಎಂಬ ಭಾವನೆಯನ್ನು ನಾನು ಚೀನೀಯರಲ್ಲೂ ಕಂಡಿದ್ದೇನೆ.
ಅನನ್ಯಾ:
ಹಾಗಾದರೆ ಭಾರತದಲ್ಲಿ ರಾಷ್ಟ್ರವಾದಕ್ಕೆ (ನ್ಯಾಶನಲಿಸಮ್) ಏನು ಅರ್ಥ? ಸಮೀಕ್ಷೆಗಳ ಪ್ರಕಾರ ಜಗತ್ತಿನಲ್ಲಿ ಹೆಚ್ಚಿನ ಪ್ರಮಾಣದ ರಾಷ್ಟ್ರವಾದಿ ದೇಶಗಳಲ್ಲಿ ಭಾರತವೂ ಒಂದಂತೆ.
ನಂದಿ:
ಈ ದತ್ತಾಂಶ ಅದೇನೇ ಹೇಳಿದರೂ, ಭಾರತದ ಮಟ್ಟಿಗೆ ಈ ರಾಷ್ಟ್ರವಾದದಿಂದ ಹೆಚ್ಚಿನದನ್ನೇನೂ ಸಾಧಿಸಲಾಗುವುದಿಲ್ಲ. ಮುಖ್ಯವಾದ ಕಾರಣ ಅಂದರೆ, ಅದು ಎಲ್ಲಾ ಭಾರತೀಯರನ್ನೂ ಒಳಗೊಳ್ಳಲಾರದಷ್ಟು, ಎಲ್ಲಾ ಭಾರತೀಯರ ಅವಶ್ಯಕತೆಗಳನ್ನು ಪರಿಗಣಿಸಲಾರದಷ್ಟು ಸೀಮಿತ ಪರಿಧಿಯುಳ್ಳದ್ದು. ಭಾರತೀಯರ ಭೌಗೋಳಿಕ ಪ್ರಜ್ಞೆ ಭಿನ್ನವಾದದ್ದು. ತಮ್ಮ ನೆಲೆಯ ಪ್ರಶ್ನೆಗೆ ಬಂದಾಗ ಭಾರತೀಯರ ಆಲೋಚನೆ ಹೆಚ್ಚಿನದಾಗಿ ಹಳೆಯ ಶೈಲಿಯ ದೇಶಭಕ್ತಿಯ (Patriotism) ಪರಿಕಲ್ಪನೆಯನ್ನು ಆಧರಿಸಿ ಹೊರಡುತ್ತದೆ. ಒಂದು ದೃಷ್ಟಿಯಲ್ಲಿ ರಾಷ್ಟ್ರವಾದವು ಒಂದು ಹೊಸ ಪರಿಕಲ್ಪನೆ. ಹತ್ತೊಂಬತ್ತನೆಯ ಶತಮಾನದಿಂದ ಈಚೆಗೆ ಜನಪ್ರಿಯವಾದದ್ದು. ಯುರೋಪಿನಲ್ಲಿ ಕೂಡಾ ಹತ್ತೊಂಬತ್ತನೆ ಶತಮಾನಕ್ಕಿಂತ ಮೊದಲು ರಾಷ್ಟ್ರವಾದವೆಂಬ ಪರಿಕಲ್ಪನೆ ಇರಲಿಲ್ಲ. ಅಲ್ಲಿಯೂ ದೇಶಭಕ್ತಿಯ ಕಲ್ಪನೆ ಇತ್ತು. ಜನ ತಮ್ಮ ತಮ್ಮ ರಾಜರು ಮತ್ತು ದೇಶಗಳ ಸಲುವಾಗಿ ಹೋರಾಡುತ್ತಿದ್ದರು, ಸಾಯುತ್ತಿದ್ದರು. ರಾಷ್ಟ್ರದ ಸಲುವಾಗಿ ಅಲ್ಲ. ಈಗ ಅವರೆಲ್ಲ ರಾಷ್ಟ್ರದ ಬಗೆಗೆ ಮಾತಾಡುತ್ತಾರೆ. ಆದರೆ ಖಚಿತವಾಗಿ ಹೇಳುವುದಾದರೆ ಭಾರತಕ್ಕೊಂದು ರಾಷ್ಟ್ರ ಎಂಬುದು ಇಲ್ಲ. ಏಶಿಯಾದ ಬಹಳಷ್ಟು ಸಮಾಜಗಳಲ್ಲಿಯೂ ಹಾಗೆ ಎಂದು ನನಗೆ ಅನಿಸುತ್ತದೆ. ಯಾಕೆಂದರೆ ಆಧುನಿಕ ಯುರೋಪಿನಲ್ಲಿ ಹದಿನೇಳನೆ ಶತಮಾನದಲ್ಲಿ ಆದ ’Treaty of Westphalia’ ವನ್ನು ಆಧರಿಸಿ ಬೆಳೆದು ಬಂದ ರಾಷ್ಟ್ರದ ಪರಿಕಲ್ಪನೆಯು ನಮ್ಮ ಮನೋಭಾವಕ್ಕೆ ಸರಿಹೊಂದುವುದಿಲ್ಲ.
ಭಾರತವನ್ನು ಅವಲೋಕಿಸಿದರೆ ಇಲ್ಲಿನ ಸಮುದಾಯಗಳು ಒಂದರೊಳಗೊಂದು ಸಮಾನಕೇಂದ್ರವುಳ್ಳ ವರ್ತುಲಗಳಲ್ಲಿ (concentric rings) ಸಂರಚಿತವಾಗಿವೆ. ಓರ್ವ ವ್ಯಕ್ತಿಯು ಪ್ರತ್ಯೇಕವಾಗಿ ನೋಡಿದರೆ ಯಾವ ಒಂದು ನಿರ್ದಿಷ್ಟ ಸಮುದಾಯಕ್ಕೂ ಸೇರಿದವನಲ್ಲ. ಆದರೆ ಏಕಕಾಲಕ್ಕೆ ಹಲವಾರು ಸಮುದಾಯಗಳಿಗೆ ಸೇರಿರುತ್ತಾನೆ. ದೇಶ, ಪ್ರಾಂತ್ಯ, ಭಾಷೆ, ಬೇರೆ ಬೇರೆ ಒಳಪಂಗಡಗಳು, ಮತಧರ್ಮಗಳು, ನಂತರ ಜಾತಿಗಳು ಹೀಗೆ ಸಮುದಾಯಗಳ ಸಮಾನ ಕೇಂದ್ರಿತ ವರ್ತುಲಗಳಲ್ಲಿ ವ್ಯಕ್ತಿಯೊಬ್ಬನು ಗುರುತಿಸಲ್ಪಡುತ್ತಾನೆ. ಇದೊಂದು ಸಂಕೀರ್ಣವಾದ ವ್ಯವಸ್ಥೆ. ವ್ಯಕ್ತಿಯೊಬ್ಬನಿಗೆ ಹಲವು ಗುರುತುಗಳಿರುತ್ತವೆ. ನಿಷ್ಠೆಗಳೂ ಹಲವು. ಒಬ್ಬ ಸಾಮಾನ್ಯ ಭಾರತೀಯ ಹೀಗೆ ಹೋಳು ಹೋಳಾಗಿ ಬದುಕುತ್ತಿರುತ್ತಾನೆ. ಮತ್ತದು ಅವನಿಗೆ ಸಹಜವೇ. ಅವನಿಗೆ ಅದರಿಂದ ತೊಂದರೆಯೇನೂ ಆಗುತ್ತಿರುವುದಿಲ್ಲ. ಅದುವೇ ವೈವಿಧ್ಯತೆ ಮತ್ತು ಅದವನಿಗೆ ಒಗ್ಗಿ ಹೋಗಿರುತ್ತದೆ. ಇದು ಶತಮಾನಗಳಿಂದಲೂ ಹೀಗೆಯೇ ಇತ್ತು.
ಅನನ್ಯ:
ನಿಮ್ಮ ಪ್ರಕಾರ ರಾಷ್ಟ್ರವಾದವು ಭಾರತಕ್ಕೆ ಒಗ್ಗುವಂಥದ್ದಲ್ಲ. ಹೀಗಿದ್ದರೂ ನರೇಂದ್ರ ಮೋದಿಯವರು ಹಿಂದೂ ರಾಷ್ಟ್ರವಾದವನ್ನು ಎತ್ತಿಹಿಡಿಯುವ ಪಕ್ಷವೊಂದರ ನಾಯಕನಾಗಿದ್ದುಕೊಂಡು ಗೆದ್ದು ಬಂದರಲ್ಲ.
ನಂದಿ:
ಅವರ ಗೆಲುವಿಗೆ ನಮ್ಮ ಭಾರತದ ಚುನಾವಣೆಗಳು ವೆಸ್ಟ್‌ಮಿನ್ಸ್ಟರ್ (Westminster) ಮಾದರಿಯನ್ನು ಅನುಸರಿಸುತ್ತವೆ ಎನ್ನುವುದೂ ಒಂದು ಕಾರಣವಾಗಿದೆ. ಅದು first-past-the-post ಮಾದರಿ. ಅವರು ಕೇವಲ 31 ಪ್ರತಿಶತ ಮತಗಳನ್ನು ಮಾತ್ರ ಪಡೆದಿದ್ದಾರೆ. ಭಾಜಪದೊಂದಿಗೆ ಮೈತ್ರಿ ಮಾಡಿಕೊಂಡ ಇತರ ಪಕ್ಷಗಳಿಗೆ ದೊರೆತಿರುವ ಮತಗಳನ್ನೂ ಪರಿಗಣಿಸಿದಾಗ ಇಲ್ಲಿ ಯಾರಿಗೂ ಬಹುಮತವಿಲ್ಲ. ಪ್ರತಿಯೊಬ್ಬರೂ ಅಲ್ಪಸಂಖ್ಯಾತರೇ. ಇಲ್ಲಿಯ ತನಕದ ಚರಿತ್ರೆಯನ್ನು ಗಮನಿಸಿದರೆ 35 ವರ್ಷಗಳ ಹಿಂದೆ (1984) ರಾಜೀವ ಗಾಂಧಿಯವರ ಸರಕಾರಕ್ಕೊಂದು ಬಹುಮತ ಸಿಕ್ಕಿತ್ತು. ನಿಮಗೆ ಗೊತ್ತಿರುವ ಹಾಗೆ ರಾಜೀವ ಗಾಂಧಿಯವರು ಇಂದಿರಾ ಗಾಂಧಿಯವರ ಮಗ. 1984 ರಲ್ಲಿ ಇಂದಿರಾ ಗಾಂಧಿಯವರ ಹತ್ಯೆಯಾಯಿತು. 51 ಪ್ರತಿಶತ ಬಹುಮತದೊಂದಿಗೆ ಆರಿಸಿ ಬಂದರು. ಆಗ ಚಿಕ್ಕ ಚಿಕ್ಕ ಪಕ್ಷಗಳಿದ್ದವು ಮತ್ತು ಅವುಗಳನ್ನು ಪ್ರತ್ಯೇಕಿಸಿ ನೋಡಲಾಗುತ್ತಿರಲಿಲ್ಲ. ಹಾಗಿಲ್ಲದಿದ್ದರೆ ರಾಜೀವ್ ಗಾಂಧಿಯವರಿಗೆ ಅಷ್ಟು ಬಹುಮತ ಸಿಗುತ್ತಿರಲಿಲ್ಲ. ಆದರೆ ಅದೊಂದೇ ಸಲ ಭಾರತದಲ್ಲಿ ಬಹುಮತದಿಂದ ಒಬ್ಬರು ವಿಜಯ ಸಾಧಿಸಿದ್ದು. ಅಂಥಾ ಬಹುಮತ ಪಡೆದು ಸರಕಾರ ಮಾಡಿದವರು ಮೂರುವರೆ ವರ್ಷ ಅಷ್ಟೇ ಇದ್ದರು. 1991 ರಲ್ಲಿ ಅವರನ್ನೂ ಹತ್ಯೆಗಯ್ಯಲಾಯಿತು.
1971 ರಲ್ಲಿ ಶ್ರೀಮತಿ ಗಾಂಧಿಯವರೂ ದೊಡ್ಡ ಬಹುಮತದೊಂದಿಗೆ ಆಯ್ಕೆಯಾದರು. ಅದು ಆಗಷ್ಟೇ ಪಾಕಿಸ್ತಾನದೊಂದಿಗೆ ಯುದ್ಧ ಮಾಡಿ ಗೆದ್ದ ಮೇಲೆ ಸಂದ ವಿಜಯ. ಪೂರ್ವ ಪಾಕಿಸ್ತಾನ ಹೋಗಿ ಬಾಂಗ್ಲಾದೇಶ ಆಯಿತು. 1974 ರಲ್ಲಿ ಅವರ ಅವಧಿಯಲ್ಲಿಯೇ ಅಣ್ವಸ್ತ್ರದ ಪರೀಕ್ಷೆ ನಡೆಸಲಾಯಿತು. ಅದಾದ ಮೇಲೆ ಮೂರು ವರ್ಷ ಅವರ ವಿರುದ್ಧ ಪ್ರತಿಭಟನೆಗಳು ನಡೆದವು. ತುರ್ತು ಪರಿಸ್ಥಿತಿ ಬಂತು. ಇಪ್ಪತ್ತೊಂದು ತಿಂಗಳು (1975-77) ನಾಗರಿಕ ಹಕ್ಕುಗಳನ್ನು ಸ್ಥಗಿತಗೊಳಿಸಲಾಯಿತು. 1977 ರ ಚುನಾವಣೆಯಲ್ಲಿ ಶ್ರೀಮತಿ ಗಾಂಧಿಯವರು ಹೀನಾಯವಾಗಿ ಸೋತರು. ಇತರರ ಪ್ರಕರಣಗಳಲ್ಲಿಯೂ ಹಾಗೆಯೇ ಆಗಿದೆ. ಅದು ಕೆಟ್ಟದ್ದಕ್ಕೊ ಒಳ್ಳೆದಕ್ಕೋ ಗೊತ್ತಿಲ್ಲ, ಯಾಕೆಂದರೆ ನಮ್ಮ ಭಾರತೀಯ ಮತದಾರ ಆಳುವ ಸತ್ತೆಗಳ ಮಟ್ಟಿಗೆ ಅತಿಯಾಗಿಯೇ ವಿವೇಚಿಸುತ್ತಾನೆ, ಹೆಚ್ಚುಕಮ್ಮಿ ಸಿನಿಕನಾಗಿಬಿಡುತ್ತಾನೆ ಎಂದು ನನಗೆ ಅನಿಸುತ್ತದೆ. ಭಾರತೀಯ ಮತದಾರರು ಯಾರನ್ನೂ ಲಘುವಾಗಿ ಸ್ವೀಕರಿಸುವುದಿಲ್ಲ ಮತ್ತು ಎಲ್ಲ ಸತ್ತೆಗಳನ್ನೂ ತುದಿಗಾಲಿನಲ್ಲಿ ನಿಲ್ಲಿಸುತ್ತಾರೆ.
ಅನನ್ಯ:
ಮೋದಿಯವರ ಬಗೆಗೆ ನಿಮ್ಮದು ನಿಷ್ಠುರ ವಿಮರ್ಶೆ. ಆದರೆ ಅಂತರರಾಷ್ಟ್ರೀಯ ಚರ್ಚೆಗಳಲ್ಲಿ ನೀವು ಕೇವಲ ರಾಷ್ಟ್ರವಾದದ ಬಗೆಗೆ ಮಾತ್ರವಲ್ಲ ನೆಹರು ಮಾದರಿಯ ಸೆಕ್ಯುಲರಿಸಂ ಬಗೆಗೂ ಅಸಮಾಧಾನವನ್ನು ವ್ಯಕ್ತಪಡಿಸಿದ್ದೀರಿ ಎಂಬ ಕಾರಣಕ್ಕೆ ಹೆಸರಾಗಿದ್ದೀರಿ. “ನಾನು ಸೆಕ್ಯುಲರಿಸಂ ನ ವಿರೋಧಿ” ಎಂದು ಕೂಡ ನೀವು ಒಮ್ಮೆ ಹೇಳಿದ್ದಿರಿ. ಹಾಬರ್‌ಮಾಸ್ ಮತ್ತು ಮೈಕಲ್ ವಾಲ್ಝರ್ ರವರ ಪೋಸ್ಟ್-ಸೆಕ್ಯುಲರ್ (ಸೆಕ್ಯುಲರ್ ಸಿದ್ಧಾಂತಗಳ ಮಿತಿಗಳನ್ನು ಗುರುತಿಸಿ ಅದಕ್ಕೊಂದು ಪರ್ಯಾಯ ಹುಡುಕುವ ವಿಚಾರಧಾರೆಗಳು-ಅನುವಾದಕಿ) ತಾತ್ವಿಕ ವಿಚಾರಗಳನ್ನು ನೀವು ಒಪ್ಪಿಕೊಳ್ಳುತ್ತೀರಿ ಎಂದು ಓದಿದ್ದೇನೆ. ವಾಲ್ಝರ್ ಪ್ರಕಾರ ಸೆಕ್ಯುಲರ್ ಸ್ವಾತಂತ್ರ್ಯ ಸಂಗ್ರಾಮದ ಮತ್ತು ನಿರ್ವಸಾಹತೀಕರಣದ ಧುರೀಣರು ಮತ್ತು ನಾಯಕರು –ಉದಾಹರಣೆಗೆ ಭಾರತದಲ್ಲಿ ನೆಹರು, ಇಸ್ರೇಲಿನ ಬೆನ್ ಗುರಿಯನ್ ಮತ್ತು ಇತರ ಸಂಸ್ಥಾಪಕರು, ಅರಬ್ ದೇಶಗಳ ಬೆನ್ ಬೆಲ್ಲಾ, ನಾಸೆರ್ ಮತ್ತಿತರರು ತಮ್ಮ ತಮ್ಮ ಸಮಾಜಗಳಲ್ಲಿ ರಿಲಿಜನ್ನಿನ ಪಾತ್ರವನ್ನು ಕಡಿಮೆ ಅಂದಾಜು ಮಾಡಿದ ಅಥವಾ ಅದನ್ನು ಉದಾಸೀನ ಮಾಡಿ ತಪ್ಪೆಸಗಿದ್ದಾರೆ. ಅದು ಹಿಂದೂಯಿಸಂ ಇರಬಹುದು ಅಥವಾ ಇಸ್ಲಾಂ, ಜುದಾಯಿಸಂ, ಕ್ರಿಶ್ಚಿಯಾನಿಟಿ ಇರಬಹುದು. ನಾವೀಗ ಧಾರ್ಮಿಕ ತೀವ್ರಗಾಮಿ ಸಿದ್ಧಾಂತಗಳು ಉದಯಿಸುತ್ತಿರುವುದನ್ನು ಕಾಣುತ್ತಿದ್ದೇವೆ. ಒಂಥರಾ ಪ್ರತಿ ಕ್ರಾಂತಿ. ವಾಲ್ಝೇರ್ ಇದನ್ನು “ವಿಮೋಚನೆಯ ವಿರೋಧಾಭಾಸ” ಎಂದು ಕರೆಯುತ್ತಾರೆ.
ನಂದಿ:
ಅದು ಭಾಗಶಃ ಹೌದು. ಯಾಕೆಂದರೆ ಸೆಕ್ಯುಲರ್ ಯೋಜನೆ ಬುಡದಲ್ಲೆ ಎಡವಿತ್ತು. ಯುರೋಪಿನಲ್ಲಾದಂತೆ ಇಲ್ಲೂ ಅದು ಯಶಸ್ವಿಯಾಗುತ್ತದೆ ಎಂದುಕೊಂಡುಬಿಟ್ಟರು. ಅಲ್ಲಾದರೆ ರಿಲಿಜನ್ ನ ಶಕ್ತಿ ಕುಂದಿತು, ಫೇತ್ ದುರ್ಬಲವಾಯಿತು, ಜನ ತಾವು ಅಥೀಇಸ್ಟ್ (ದೇವರು ಅಸ್ತಿತ್ವದಲ್ಲಿ ಇಲ್ಲ ಎಂಬುವವರು) ಅಗ್ನಾಸ್ಟಿಕ್ (ದೇವರು ಇದ್ದಾನೆಯೆ ಇಲ್ಲವೆ ಎಂಬ ಬಗೆಗೆ ಅನುಮಾನವಿದ್ದವರು ) ಅಂತೆಲ್ಲ ಹೇಳಲು ಶುರು ಮಾಡಿದರು. ಬಹಳ ಕಡೆ ರಿಲಿಜನ್ನಿನ ಜಾಗವನ್ನು ಐಡಿಯಾಲಜಿ ತುಂಬತೊಡಗಿತು. ಜಾಗತಿಕವಾಗಿ ದಕ್ಷಿಣ ಭಾಗದ ದೇಶಗಳಲ್ಲಿ ಸಾರ್ವಜನಿಕ ಬದುಕಿಗೆ ಸೆಕ್ಯುಲರಿಸಂ ಒಂದು ನೈತಿಕ ಚೌಕಟ್ಟನ್ನು ಒದಗಿಸುತ್ತದೆ ಎಂದು ಜನ ನಿರೀಕ್ಷಿಸಿದರು.
ಭಾರತದಲ್ಲಿಯೂ ಅದೇ ಆಯಿತು. ಮೊದಮೊದಲಿಗೆ ಬಹಳ ಜನ ಹೇಳಿದರು ಭಾರತದಲ್ಲಿ ಸೆಕ್ಯುಲರಿಸಂ ಎನ್ನುವುದು ಎಲ್ಲ ರಿಲಿಜನ್ನುಗಳನ್ನೂ ಸಮಭಾವದಿಂದ ಕಾಣುವ ಒಂದು ಸಂಕಲ್ಪವನ್ನು ಹೊತ್ತುಕೊಂಡಿದೆ ಎಂದು. ಅದು ಮನುಷ್ಯರಿಂದ ಸಾಧ್ಯವಿಲ್ಲ. ನೀವು ಯಾವುದೋ ಒಂದು ರಿಲಿಜನ್ ಅನ್ನು ಶ್ರದ್ಧೆಯಿಂದ ಆಚರಿಸುತ್ತಿದ್ದೀರೆಂದರೆ ನೀವು ಇತರ ರಿಲಿಜನ್ ಗಳಂತೆ ನಿಮ್ಮ ರಿಲಿಜನ್ ಎಂದು ಭಾವಿಸಲಾಗುವುದಿಲ್ಲ. ಬೇರೆಯವರ ಧರ್ಮಶ್ರದ್ಧೆಯ ಬಗೆಗೆ ನಿಮಗೆ ಗೌರವವಿದ್ದರೂ ನಿಮ್ಮ ಧರ್ಮಶ್ರದ್ಧೆಯ (ಫೇತ್) ಬಗೆಗೆ ನಿಮಗೆ ಅದರೊಳಗಿನ ಸೂಕ್ಷ್ಮ ವ್ಯತ್ಯಾಸಗಳ ಅರಿವನ್ನು ಹೊಂದಿದ (nuanced) ಖಾಯಿಶ್ ಇದ್ದಿರುತ್ತದೆ. ಭಾರತದಲ್ಲಿ ನೋಡಿದರೆ ಇಲ್ಲಿ ಇತರ ರಿಲಿಜನ್ನುಗಳ ಪೂಜಾ ಸ್ಥಳಗಳಿಗೆಲ್ಲ ಜನ ಹೋಗಿ ಬರುವುದು ರೂಢಿಯಲ್ಲಿದೆ. ಅದನ್ನು ಇತರರ ನಂಬಿಕೆಗಳ ಬಗೆಗೆ ಒಂದು ರೀತಿಯ ಮನೋವೈಶಾಲ್ಯ (catholicity) ಎನ್ನಿ ಅಥವಾ ಅದು ಒಂದು ರೀತಿಯಲ್ಲಿ ವಿಶ್ವದ ಸಮಸ್ತ ಮತಧರ್ಮಗಳೂ ಒಂದೇ ಎಂಬ ಭಾವನೆ ಇಟ್ಟುಕೊಂಡವರ (ecumenical) ದೃಷ್ಟಿ ಎನ್ನಿ. ಅದು ಏನೇ ಇದ್ದರೂ ಅವರಿಗೆಲ್ಲ ತಮ್ಮ ತಮ್ಮ ಫೇತ್ ಗಳಿವೆ. ಸೆಕ್ಯುಲರಿಸಂ ಈ ಫೇತ್ ಗಳಿಗೆ ಸವಾಲೊಡ್ಡಿತು. ಅಥವಾ ಅದು ಈ ಫೇತ್ ಗಳಿಗೆ ಸವಾಲೊಡ್ಡುವ ಥರ ಕಂಡಿತು. ಈ ಸೆಕ್ಯುಲರಿಸಂ ನ ಒಂದು ಪರಿಣಾಮ ಏನಾಯಿತು ಎಂದರೆ ನಿಧಾನವಾಗಿ ಸಾರ್ವಜನಿಕ ಕ್ಷೇತ್ರದಲ್ಲಿ ಫೇತ್ ಗಳ ಜಾಗವನ್ನು ಈ ಸೆಕ್ಯುರಿಸಂ ನ ಸಿದ್ಧಾಂತಗಳು ಆಕ್ರಮಿಸಿಕೊಂಡಿವೆ ಎನ್ನುವಂತಹ ಒಂದು ಸಂದರ್ಭವನ್ನು ಅದು ಸೃಷ್ಟಿಸಿತು. ಸೆಕ್ಯುಲರಿಸಂ ಈ ಎಲ್ಲ ಫೇತ್ ಗಳಿಗೆ ಪರ್ಯಾಯ ಎನ್ನುವಂತಹ ಒಂದು ಸಂದರ್ಭವನ್ನು ಸೃಷ್ಟಿಸಿತು.
ಅನನ್ಯ:
ಆದರೆ ಸೆಕ್ಯುಲರಿಸ್ಟರು ಯಾವುದೇ ರಿಲಿಜಿಯಸ್ ಫೇತ್ ನ ಚೌಕಟ್ಟಿನಾಚೆ ಅದಕ್ಕಿಂತಲೂ ಮಿಗಿಲಾದ ನೈತಿಕ ನಿಲುವುಗಳನ್ನು ಬಲವಾಗಿ ಪ್ರತಿಪಾದಿಸುತ್ತಾರಲ್ಲ?
ನಂದಿ:
ಭಾರತದ ಮಟ್ಟಿಗೆ ಏನಾಯಿತು ಎಂದರೆ ಸೆಕ್ಯುಲರಿಸಂನ ಐಡಿಯಾಲಜಿಯ ನೈತಿಕ ಹಂದರಕ್ಕೆ ಈ ಭಾಗದ ಜಗತ್ತಿನ ಧರ್ಮಶ್ರದ್ಧೆಗಳಲ್ಲಿ ಬೇರಿರದೇ ಇದ್ದುದರಿಂದ ಸೆಕ್ಯುಲರಿಸ್ಟರು ಇಲ್ಲಿನ ಸಾರ್ವಜನಿಕ ಕ್ಷೇತ್ರದಲ್ಲಿ ನೈತಿಕ ಅರಾಜಕತೆ ಇದೆ ಎಂದು ಅಂದುಕೊಂಡುಬಿಟ್ಟರು. ಇಲ್ಲಿ ಕಾಡುಗಳ ನ್ಯಾಯ ವ್ಯವಸ್ಥೆ ಇದ್ದಿರುವ ಹಾಗೆ ಅವರಿಗೆ ಅನ್ನಿಸಿತು. ಆ ಒಂದು ಕಾರಣದಿಂದಲೇ ಈಗ ಇಲ್ಲಿನ ಸಾರ್ವಜನಿಕ ಕ್ಷೇತ್ರವು ನೈತಿಕ ಕಟ್ಟುಪಾಡುಗಳಿಲ್ಲದ ಬಂಜರು ಭೂಮಿ, ಇವು ನೀತಿಗೆಟ್ಟ ಸಮಾಜಗಳು ಎಂದುಕೊಳ್ಳುವ ಸಂದರ್ಭ ಹುಟ್ಟಿಕೊಂಡದ್ದು. ಸಾರ್ವಜನಿಕ ಬದುಕಿನ ನೀತಿಶಾಸ್ತ್ರವೊಂದನ್ನು ರೂಪಿಸಲು ಸಾಧ್ಯವಾಗದೇ ಇರುವುದು ಮತ್ತು ಅಂತಹ ಒಂದು ನೀತಿನಿಯಮಗಳ
ಚೌಕಟ್ಟಿಗೆ ಬೇಕಾದ ಮೌಲ್ಯಗಳ ಕೊರತೆಯು ನಾವು ಈಗ ನೋಡುತ್ತಿರುವ ಅನೇಕ ಸಮಸ್ಯೆಗಳಿಗೆ ಕಾರಣವಾಗಿದೆ. ಇದು ಭಾರತದಲ್ಲೊಂದೇ ಅಲ್ಲ, ಚೀನಾ, ಪಾಕಿಸ್ತಾನ, ಸ್ವಲ್ಪ ಮಟ್ಟಿಗೆ ಬಾಂಗ್ಲಾದೇಶ, ಮಯನ್ಮಾರ್ ಮತ್ತಿತರ ದಕ್ಷಿಣ ಏಶಿಯಾದ ರಾಷ್ಟ್ರಗಳಲ್ಲಿ ಕಂಡುಬರುತ್ತದೆ.
ಅನನ್ಯ:
ಜರ್ಮನಿಯ ವಿದ್ವಾಂಸರಾದ ಎರ್ನ್ಸ್ಟ್ ವೊಲ್ಫ್‌ಗಾಂಗ್ ಬುಕೆನ್‌ಫೋರ್ಡ್ (Ernst-Wolfgang Bockenforde) ರವರೂ ಹೀಗೇ ಹೇಳುತ್ತಾರೆ. “ಮುಕ್ತಚಿಂತನೆಯ ರಾಷ್ಟ್ರ ಪ್ರಭುತ್ವಗಳು (ಅವು ಸೆಕ್ಯುಲರ್ ಪ್ರಭುತ್ವಗಳು ಕೂಡ) ಮರು ಉತ್ಪಾದಿಸಲು ಸಾಧ್ಯವಾಗದ ಆಧಾರವಾಕ್ಯಗಳನ್ನು ಅವಲಂಬಿಸಿವೆ.”
ನಂದಿ:
ಇದು ಮೊದಲೇ, ಅಂದರೆ ಫ್ರೆಂಚ್ ಕ್ರಾಂತಿಯ ಹೊತ್ತಿಗೆ ಹುಟ್ಟಿಕೊಂಡ ಸಮಸ್ಯೆಯಾಗಿದೆ. ರಾಬೆಸ್ಪಿಯರ್ ಸ್ಪಷ್ಟವಾಗಿಯೇ ಹೇಳಿದ್ದರು, ಭಯವನ್ನು ಹುಟ್ಟಿಸದೇ ಏನನ್ನೂ ಸಾಧಿಸಲಾಗುವುದಿಲ್ಲ. ಕಾಲಕ್ರಮೇಣ ಈ ನಂಬಿಕೆಯನ್ನೆ ಎಲ್ಲಾ ಜಾಕೋಬಿಯನ್ ಫೇತ್‌ಗಳು[1] (ಧರ್ಮಶ್ರದ್ಧೆ) ಅಪ್ಪಿಕೊಂಡವು ಮತ್ತು ಒಂದು ಅರ್ಥದಲ್ಲಿ ಈ ನಂಬಿಕೆಯು ಇಡೀ ಸಮಾಜದೊಳಗೇ ಜಿನುಗತೊಡಗಿತೇನೋ ಎಂಬ ಸಂದೇಹ ನನಗೆ. ಜರ್ಮನಿಯಲ್ಲಿ ಮೊದಲನೇ ಮಹಾಯದ್ಧದ ನಂತರ ಜನಕ್ಕೆ ಹಂತಹಂತವಾಗಿ ತಮ್ಮದು ಚುಕ್ಕಾಣಿಯಿಲ್ಲದ ಸಮಾಜ ಎಂದು ಎನಿಸತೊಡಗಿತು. ನಂತರ ಸಾರ್ವಜನಿಕ ಬದುಕಿನ ಈ ಬಿಕ್ಕಟ್ಟಿನೊಂದಿಗೆ ನಾಟ್ಸಿಸಂ ಕೂಡಾ ತಳಕು ಹಾಕಿಕೊಂಡಿತು. ಆದರೆ ದಕ್ಷಿಣ ಏಶಿಯ ಮತ್ತು ದಕ್ಷಿಣಪೂರ್ವ ಏಶಿಯಾದಲ್ಲಿ ಬೇರೆ ರೀತಿಯ ಸನ್ನಿವೇಶವಿದೆ. ಅದನ್ನು ಹೇಗೆ ವಿವರಿಸುವುದು ಅಂತ ತಿಳಿಯುತ್ತಿಲ್ಲ. ಇಲ್ಲಿ ಜನಕ್ಕೆ ತಮ್ಮ ಫೇತ್ ಗಳೊಂದಿಗೆ ಭಿನ್ನ ಭಿನ್ನ ನೆಲೆಗಳ ಸಂಬಂಧಗಳಿವೆ. ಇಲ್ಲಿನವರ ನಿತ್ಯದ ಬದುಕಿನಲ್ಲಿ ಅವರ ಫೇತ್‌ಗಳು ಬಹಳ ಸೂಕ್ಷ್ಮ ರೀತಿಯಲ್ಲಿ ಅವರ ಬದುಕಿನ ಭಾಗಗಳಾಗಿವೆ. ಬಹಳಷ್ಟು ಸಾರಿ ನಾವೇ ನೋಡುವ ಹಾಗೆ ಇಲ್ಲಿ ಒಂದು ಪ್ರಮಾಣದ ವೈವಿಧ್ಯತೆಯನ್ನು ಇಟ್ಟುಕೊಳ್ಳದೇ ಅವರಿಗೆ ತಾವು ನಂಬಿದ ಫೇತ್ ಅನ್ನು ನಿಜವಾದ ಅರ್ಥದಲ್ಲಿ ಆಚರಿಸಲೇ ಸಾಧ್ಯವಿಲ್ಲ. ಉದಾಹರಣೆಗೆ ಹಿಂದೂಯಿಸಂ ನಲ್ಲಿ ಮಿಲಿಯನ್‌ಗಟ್ಟಲೆ ದೇವ ದೇವತೆಗಳು ಇದ್ದಾರೆ. ಸಾವಿರ ದಶ ಸಾವಿರಗಟ್ಟಲೆ ವಿವಿಧ ಮತಪಂಥಗಳಿವೆ, ಒಂದು ಪರಿವೀಕ್ಷಣೆಯ ಪ್ರಕಾರ ಎಪ್ಪತ್ತು ಸಾವಿರ ಜಾತಿಗಳು. ಇಷ್ಟು ಅಗಾಧವಾದ ವೈವಿಧ್ಯತೆಯು ಇಲ್ಲಿ ನಿಮ್ಮ ಬದುಕಿನ ಭಾಗವೇ ಆಗಿದೆ, ಇದೂ ನಿಮ್ಮ ಫೇತ್‌ನ ಭಾಗವೇ ಎಂಬಷ್ಟು ಮಾಮೂಲಾಗಿ ನಾವು ತೆಗೆದುಕೊಳ್ಳಬೇಕಾಗುತ್ತದೆ.
ಅನನ್ಯ:
ಒಂದು ಕಡೆ ಬರೆದುಕೊಂಡಿದ್ದೀರಿ. ಸೆಕ್ಯುಲರಿಸಂ ಜಾಸ್ತಿ ಕಾಲ ಉಳಿಯುವುದಿಲ್ಲ, ನೆಹರೂ ಮಾದರಿಯ ಸೆಕ್ಯುಲರಿಸಂ ಅಸಂಭವ ಎಂದು. ಯಾಕೆ ಅಂತ ಕೇಳಬಹುದೆ?
ನಂದಿ:
ಕಳೆದ ಇನ್ನೂರು ವರ್ಷಗಳಲ್ಲಿ ನಾವು ಗಮನಾರ್ಹವಾಗಿ ಸೋತಿದ್ದೇವೆ. ನೈತಿಕತೆಯ ಪ್ರಶ್ನೆ ಹಾಗಿರಲಿ ಸಮಾಜಕ್ಕೆ ಒಂದು ಯೋಗ್ಯವಾದ ನೀತಿಶಾಸ್ತ್ರವನ್ನು ರೂಪಿಸಲು ನಮಗೆ ಸಾಧ್ಯವಾಗಿಲ್ಲ. ನಮ್ಮ ಸಾರ್ವಜನಿಕ ಬದುಕಿಗೆ ಯೋಗ್ಯವೆನಿಸುವ ಒಂದು ನೀತಿಶಾಸ್ತ್ರವನ್ನು ರೂಪಿಸಲಾಗಿಲ್ಲ. ಇದು ಇಡೀ ಜಗತ್ತಿಗೂ ಅನ್ವಯಿಸುವಂಥದ್ದು.
ಯುರೋಪಿನ ಎನ್‌ಲೈಟನ್ಮೆಂಟ್ ಯುಗ ಈ ಭೂಮಿಯ ಮೇಲೆ ಏನೇನು ಸಾಧ್ಯವೋ ಅದೆಲ್ಲವನ್ನೂ ಉತ್ಪಾದಿಸಿತು. ಮಹಾನ್ ಚಿಂತಕರು, ಮಹಾನ್ ಸಂಶೋಧಕರು, ಮಹಾನ್ ಸಮಾಜ ಸುಧಾರಕರು, ಮಹಾನ್ ವಿಜ್ಞಾನಿಗಳು..ಹೀಗೆ ಸಮಾಜ ವಿಜ್ಞಾನ ಮತ್ತು ಮಾನವಿಕ ಶಾಸ್ತ್ರಗಳ ಮಟ್ಟಿಗೂ ನಡೆಯಿತು. ಆದರೆ ಅಹಿಂಸೆಯನ್ನು ಎತ್ತಿ ಹಿಡಿವ ಒಬ್ಬನೇ ಒಬ್ಬ ಚಿಂತಕನನ್ನೂ ಅದಕ್ಕೆ ಹುಟ್ಟಿಸಲಾಗಲಿಲ್ಲ. ಈ ಸಂದರ್ಭಕ್ಕೆ ಅದು ನಮ್ಮೆಲ್ಲರ ಸಾರ್ವಜನಿಕ ಬದುಕಿಗೆ ಅತ್ಯಗತ್ಯವಾದ ಒಂದು ಅಂಶವಾಗಿತ್ತು.
ಅನನ್ಯ:
ಹಿಂಸೆಯ ಮಟ್ಟಿಗೆ ಈಗ ಭಾರತವು ಯುರೋಪನ್ನೂ ಮೀರಿಸುತ್ತಿದೆ.
ನಂದಿ:
ಭಾರತಕ್ಕೆ ಹಿಂಸೆಯ ಒಂದು ಸುದೀರ್ಘವಾದ ಚರಿತ್ರೆಯಿದೆ. ಇಲ್ಲಿನ ಸಮಾಜಕ್ಕೆ ಹಿಂಸೆ ಹೊಸತಲ್ಲ. ಬಹುಶಃ ಅದಕ್ಕೇ ಇರಬೇಕು, ಕಳೆದ ಮೂರು ಸಾವಿರ ವರ್ಷಗಳಲ್ಲಿ ಗೌತಮ ಬುದ್ಧನಿಂದ ಹಿಡಿದು ಮಹಾತ್ಮ ಗಾಂಧಿಯವರೆಗೆ ನಾವು ಅನೇಕ ಚಿಂತಕರನ್ನು ಕಂಡಿದ್ದೇವೆ. ಅವರೆಲ್ಲ ಅಹಿಂಸೆಯು ಹೇಗೆ ಉತ್ತಮ ಸಮಾಜವೊಂದರ ಮತ್ತು ಒಂದು ಉತ್ತಮ ಸಾರ್ವಜನಿಕ ಬದುಕಿನ ಅಂಗವಾಗಿದೆ ಎಂಬುದನ್ನು ಒತ್ತಿ ಹೇಳಿದ್ದಾರೆ. ಹಿಂಸೆಯೆಂಬ ಪರಿಕಲ್ಪನೆ ಸಾರ್ವಜನಿಕ ಬದುಕಿನಲ್ಲಿ ಅಸಂಗತ ಎಂದು ಅವರ್ಯಾರಿಗೂ ಅನಿಸಲಿಲ್ಲ. ಅಥವಾ ಈ ಬಗೆಯ ವಿಚಾರಗಳು ರಾಜಕಾರಣದಲ್ಲಿ ಕೆಲಸಕ್ಕೆ ಬರುವುದಿಲ್ಲ ಎಂದೂ ಅವರು ಅಂದುಕೊಳ್ಳಲಿಲ್ಲ. ಗಾಂಧಿಯವರದ್ದು ಆ ಬಗೆಯ ಆಲೋಚನೆ. ಅವರು ಇಂಥದೊಂದು ನಿಲುವಿನೊಂದಿಗೆ ಹೊರಟರು. ತಾವೊಂದೇ ಅಲ್ಲ ತಮ್ಮೊಂದಿಗೆ ಲಕ್ಷಗಟ್ಟಲೆ ಜನರನ್ನೂ ಹೊರಡಿಸಿದರು. ಆ ಕಾಲದ ವಿದ್ಯಾವಂತ ಗಣ್ಯರು ಮಾತ್ರ ಅವರೊಬ್ಬ ಹುಸಿ ಆದರ್ಶಗಳನ್ನು ಬಿಕರಿಗಿಟ್ಟ ಭಾವುಕ ಎಂದು ಕರೆದರು. ಅಸಲಿಗೆ ಗಾಂಧಿಯವರನ್ನು ನಂಬಿ ಅನುಸರಿಸಿದವರ್ಯಾರಿಗೂ ಅವರು ಹಾಗನಿಸಲಿಲ್ಲ. ಗಾಂಧಿಯವರ ಅನುಯಾಯಿಗಳು ಅವರಿಗಾಗಿ ತಮ್ಮ ಜೀವವನ್ನು ಕೊಡಲೂ ತಯಾರಿದ್ದರು.
ಅನನ್ಯ:
ಸೆಕ್ಯುಲರಿಸಮ್ಮಿಗೆ ಒಂದು ಪರ್ಯಾಯ ಬೇಕು ಎಂದು ನೀವು ಪ್ರತಿಪಾದಿಸುತ್ತೀರಿ. ನಿಮ್ಮ ದೃಷ್ಟಿಯಲ್ಲಿ ಯಾವುದು ಆ ಪರ್ಯಾಯ?
ನಂದಿ:
ನನ್ನ ಪ್ರಕಾರ “ಸಾಂಸ್ಕೃತಿಕ ಬಹುತ್ವವಾದ” ಚೆನ್ನಾಗಿ ಕೆಲಸ ಮಾಡಬಹುದು. ಪ್ರಪಂಚದ ಈ ಬದಿಯಲ್ಲಿರುವ ಪ್ರತಿ ಮತಧರ್ಮವೂ ಆ ತತ್ವವನ್ನು ತಮ್ಮದಾಗಿಸಿಕೊಂಡಂತಹ ವ್ಯಕ್ತಿಗಳನ್ನು ಹೊಂದಿದೆ ಎಂದು ನನಗನಿಸುತ್ತದೆ. ಹಾಗೆ ನೋಡಿದರೆ ಕ್ರಿಶ್ಚಿಯಾನಿಟಿಯಲ್ಲಿಯೂ ಅಸೀಸಿಯ ಸೇಂಟ್ ಫ್ರಾನ್ಸಿಸ್ ಇದ್ದರು. ನಮ್ಮ ಭಾಗದ ಜಗತ್ತಿನಲ್ಲಿ ಚರ್ಚ್ ಮತ್ತು ಪ್ರಭುತ್ವ ಗಳು ಪಶ್ಚಿಮದಲ್ಲಿ ಆದ ಹಾಗೆ ಬೇರ್ಪಟ್ಟಿಲ್ಲ, ಯಾಕೆಂದರೆ ಇಲ್ಲಿ ’ಚರ್ಚ್’ ಗಳೇ ಇಲ್ಲ ಒಂದರ್ಥದಲ್ಲಿ. ಖಂಡಿತ ಈ ಮಾತು ಇನ್ನಷ್ಟು ಗೊಂದಲಗಳನ್ನು ಸೃಷ್ಟಿಸುತ್ತದೆ ಎಂದು ಗೊತ್ತು. ಆದರೆ ವಿಷಯವನ್ನು ಅದು ಹಲವು ಆಯಾಮಗಳಲ್ಲಿ ತೆರೆದಿಡುತ್ತದೆ ಮತ್ತು ಅದರಿಂದ ಈ ವಿಷಯದ ಬಗೆಗಿನ ಸಂವಾದಗಳು ಸ್ವಲ್ಪ ಬೇರೆ ಸ್ವರೂಪದವನ್ನು ಪಡೆದುಕೊಳ್ಳಲು ಅನುಕೂಲವಾಗುತ್ತದೆ.
ಅನನ್ಯ:
2002 ರಲ್ಲಿ ಗುಜರಾತಿನಲ್ಲಿ ಆದ ಮಾತಿನಲ್ಲಿ ವ್ಯಕ್ತಪಡಿಸಲು ಅಶಕ್ಯವಾದ ಹಿಂಸಾಚಾರದ ಬಗೆಗೆ ಏನು ಹೇಳುತ್ತೀರಿ? ಆಮೇಲೆ ಆ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ನೀವು ಮೋದಿಯವರನ್ನು ಕಟುವಾಗಿ ಟೀಕಿಸಿದ್ದಿರಿ.
ನಂದಿ:
ಗುಜರಾತಿನ ಹಿಂಸೆಯ ಮೂಲ ರಿಲಿಜನ್ ಅಲ್ಲ. ನಾನು ಈ ಹಿಂದೆ ಭಾರತ-ಪಾಕಿಸ್ತಾನ ವಿಭಜನೆಯ ಹೊತ್ತಿನ ನರಮೇಧವನ್ನು ಕುರಿತು ಅಧ್ಯಯನ ಮಾಡಿದ್ದೇನೆ. ಅವು ಬಹಳ ಉಗ್ರ ರೂಪದ ಹಿಂದೂ-ಮುಸ್ಲೀಮ್ ಹತ್ಯಾಕಾಂಡಗಳಾಗಿದ್ದವು. ಹಿಂಸಾಚಾರವನ್ನು ಅನೇಕರು ವಿರೋಧಿಸಿದ್ದರು ಮತ್ತು ಅವರೆಲ್ಲ ತಮ್ಮ ತಮ್ಮ ರಿಲಿಜನ್ ಗಳನ್ನು ಸಾಕ್ಷ್ಯವಾಗಿಟ್ಟುಕೊಂಡೇ ವಿರೋಧಿಸಿದ್ದರು. ಅವರಲ್ಲಿ ಹಿಂದೂಗಳೂ ಇದ್ದರು ಮುಸ್ಲೀಮರೂ ಇದ್ದರು. ಆ ಸಂದರ್ಭದಲ್ಲಿ ಕೊಲೆ ಸುಲಿಗೆ ಮಾಡುತ್ತ ಹಿಂಸೆಗೆ ಕುಮ್ಮಕ್ಕು ಕೊಟ್ಟರೆ ಅದು ಅವರವರ ರಿಲಿಜನ್ನುಗಳಿಗೆ ಅಗೌರವ ಸಲ್ಲಿಸಿದಂತೆ ಎಂದು ಅವರಿಗೆಲ್ಲ ಅನಿಸಿತ್ತು. ಒಬ್ಬ ಶ್ರದ್ಧಾವಂತ ಹಿಂದೂ ಅಥವಾ ಮುಸ್ಲೀಮ್ ಆಗಿ ಅವರೆಲ್ಲ ಇತರೆ ರಿಲಿಜನ್ನುಗಳಿಗೆ ಸೇರಿದ ತಮ್ಮ ನೆರೆಹೊರೆಯವರನ್ನು ಕಾಪಾಡಲು ಪ್ರಯತ್ನಪಟ್ಟರು.
ಅನನ್ಯ:
ಈಗ ಇಲ್ಲಿ ಆಗುತ್ತಿರುವುದು ಏನೆಂದರೆ ಹಿಂದೂ ರಾಷ್ಟ್ರವಾದದ ಹೊಸ ಅಲೆ ಎದ್ದಿದೆ. ಮತ್ತು ಅದು ಸೆಕ್ಯುಲರಿಸಂ ನ ಯೋಜನೆಗಳನ್ನು ತಿರಸ್ಕರಿಸುತ್ತಿದೆ. ಮೋದಿಯವರ ಸರಕಾರವು ರಿಲಿಜನ್ ಅನ್ನು ಅವಲಂಬಿಸಿದ ರಾಜಕೀಯ ಸಿದ್ಧಾಂತವನ್ನು ಬೆಂಬಲಿಸುತ್ತಿದೆ.
ನಂದಿ:
ಇಲ್ಲಿ ಒಂದು ವಿಚಾರವನ್ನು ಸ್ಪಷ್ಟ ಪಡಿಸುತ್ತೇನೆ. ಹಿಂದೂ ರಾಷ್ಟ್ರವಾದಿ ಸಿದ್ಧಾಂತಗಳೇನಿವೆ ಅವು ಈ ಸೆಕ್ಯುಲರಿಸಂನ ನೇರ ಉತ್ಪನ್ನಗಳು. ಅವು ಪರೋಕ್ಷ ಉತ್ಪನ್ನಗಳಲ್ಲ, ನೇರ ಉತ್ಪನ್ನಗಳೇ. ಯಾಕೆಂದರೆ ಅದನ್ನು ಹುಟ್ಟುಹಾಕಿದ ವ್ಯಕ್ತಿ ಅಥೀಇಸ್ಟ್ ಆಗಿದ್ದರು. ಸಾರ್ವಜನಿಕವಾಗಂತೂ ಅವರು ಹಾಗಿದ್ದರು. ವಿಚಿತ್ರ ಅಂದರೆ ದಕ್ಷಿಣ ಏಶಿಯಾದಲ್ಲಿ ಹಿಂದೂ ನಾಯಕ ಸಾವರ್ಕರ್ ಮತ್ತು ಪ್ರತ್ಯೇಕ ಇಸ್ಲಾಮಿಕ್ ರಾಷ್ಟ್ರವೊಂದರ ರಚನೆಗೆ ಕಾರಣರಾದ ಮುಸ್ಲೀಂ ರಾಷ್ಟ್ರವಾದಿ ನಾಯಕ ಜಿನ್ನಾ –ಇವರಿಬ್ಬರೂ ಧಾರ್ಮಿಕರಾಗಿರಲಿಲ್ಲ. ಅವರಿಬ್ಬರಿಗೂ ಸಾಮಾನ್ಯ ಹಿಂದೂ ಮತ್ತು ಸಾಮಾನ್ಯ ಮುಸ್ಲೀಮರು ಅಂದರೆ ತಾತ್ಸಾರವಾಗಿತ್ತು. ಆದರೆ ಇಬ್ಬರಿಗೂ ಯುರೋಪಿಯನ್ ಮಾದರಿಯ ರಾಷ್ಟ್ರ ಪ್ರಭುತ್ವಗಳು ಒಪ್ಪಿಗೆಯಾದವು. ರಾಷ್ಟ್ರ ಪ್ರಭುತ್ವವೇ ಅಂತಾದರೆ ರಾಷ್ಟ್ರೀಯತೆಯ ಸೀಲು ಬೇಕಲ್ಲ.
ಒಳ್ಳೆಯದೋ ಕೆಟ್ಟದ್ದೋ ಭಾರತದಲ್ಲಿ ಹಿಂದೂಗಳೇ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಭಾರತದ ರಾಷ್ಟ್ರೀಯತೆಯ ಅವರದ್ದಾಗುತ್ತದೆ. ಪಾಕಿಸ್ತಾನದಲ್ಲಿ ಮುಸ್ಲೀಮರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಅಲ್ಲಿ ಮುಸ್ಲೀಮರ ರಾಷ್ಟ್ರೀಯತೆಯಾಗುತ್ತದೆ. ನಾಯಕರ ದುರಾದೃಷ್ಟಕ್ಕೆ ಎರಡೂ ಬದಿಯ ಜನ ನಿಯಮಗಳನ್ನು ಪಾಲಿಸುವುದು ಕಷ್ಟ; ಮೊಂಡರು ಮತ್ತು ಹಠಮಾರಿಗಳು. ಶತಮಾನಗಳವರೆಗೆ ಅವರು ಬೇರೆ ಬೇರೆ ನಿಯಮಾವಳಿಗಳೊಂದಿಗೆ ಬದುಕಿದ್ದಾರೆ ಮತ್ತು ಮೇಲಿನಿಂದ ಉರುಳುತ್ತ ಬಂದ ಯಾವುಯಾವುದೋ ಸಿದ್ಧಾಂತಗಳಿಂದ ಅವರನ್ನು ಸುಲಭಕ್ಕೆ ಅಲುಗಾಡಿಸಲು ಆಗುವುದಿಲ್ಲ.
ಅನನ್ಯ:
ಹಾಗಾದರೆ ಸೆಕ್ಯುಲರಿಸಂ ಮತ್ತು ರಾಷ್ಟ್ರವಾದವೆರಡೂ ಯಾರ ಮೇಲೆ ಹೇರಲ್ಪಟ್ಟಿವೆಯೋ ಆ ಜನಗಳ ಸ್ವಭಾವಕ್ಕೆ ಅವು ಹೊಂದಿಕೆಯಾಗದ ಸಿದ್ಧಾಂತಗಳು.
ನಂದಿ:
ಜಿನ್ನಾ ಮತ್ತು ಸಾವರ್ಕರ್ ರವರ ಬದುಕು ಮತ್ತು ಬರೆಹಗಳಲ್ಲಿ ಹಿಂದೂ ಮತ್ತು ಮಸ್ಲೀಮರೆಡೆಗಿನ ಅಸಡ್ಡೆ ಮತ್ತು ತಾತ್ಸಾರ ಸ್ಪಷ್ಟವಾಗಿ ಕಾಣುತ್ತದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಇದು ಒಂದು ಇಡೀ ರಿಲಿಜಿಯಸ್ ಸಮುದಾಯವನ್ನು ರಾಷ್ಟ್ರೀಯತೆಯನ್ನಾಗಿ ಮಾರ್ಪಡಿಸುವ ಒಂದು ಯತ್ನವಾಗಿತ್ತು. ಆದರೆ ಹಾಗಿದ್ದೇನೂ ಆಗಲಿಲ್ಲ. ಅದರ ಬದಲು ಆ ಎರಡು ಸಮುದಾಯಗಳ ನಡುವೆ ನಿರಂತರ ಸಂಘರ್ಷವನ್ನಂತೂ ಅದು ಹುಟ್ಟಿಸಿತು. ಸ್ವಲ್ಪ ಪ್ಯಾಲಿಸ್ಟಿನ್ ನಲ್ಲಿ ಆದ ಹಾಗೆ. ಒಂದನ್ನು ನೆನಪಿಡಬೇಕು. ಯಹೂದಿಗಳು ಮತ್ತು ಮುಸ್ಲೀಮ್ ಸಮುದಾಯಗಳ ನಡುವಿನ ಸಂಬಂಧ ವಸ್ತುತಃ ಎಲ್ಲೆಡೆ, ಅಂದರೆ ಮಾಗ್ರೆಬ್, ಒಟೋಮನ್ ಸಾಮ್ರಾಜ್ಯ, ಮೂರ್ ಗಳ ಸ್ಪೇನ್ ನಲ್ಲಿ ಯುರೋಪಿನ ಉಳಿದೆಡೆಗಿಂತ ಚೆನ್ನಾಗೇ ಇತ್ತು. ಆದರೆ ಈಗ ಅವೆರಡೂ ಸಮುದಾಯಗಳು ಹುಚ್ಚುರೂಪದಲ್ಲಿ ಬಡಿದಾಡುತ್ತಿವೆ. ಇಸ್ರೇಲ್ ಮತ್ತು ಪ್ಯಾಲಿಸ್ಟೀನ್ ನಡುವೆ ಸುಮಾರು ಅರವತ್ತೈದು ವರ್ಷಗಳಿಂದ ಸತತವಾಗಿ ಅದು ನಡೆಯುತ್ತಿದೆ. ಇನ್ನು ದಕ್ಷಿಣ ಏಶಿಯಾದಲ್ಲಿ (ಭಾರತ-ಪಾಕಿಸ್ತಾನ) ಅರವತ್ತೈದು ವರ್ಷಗಳಿಂದ ಹಗೆತನವನ್ನು ಮುಂದುವರೆಸಿವೆ. ಈ ಎರಡೂ ಕಡೆ ನಡೆಯುತ್ತಿರುವ ರಾಜಕೀಯ ಪ್ರಕ್ರಿಯೆಗಳು ವೈಷಮ್ಯವನ್ನು ಮೈಮೇಲೆಳೆದುಕೊಂಡವು. ಅವು ತಮ್ಮ ತಮ್ಮ ಚುನಾವಣಾಕ್ಷೇತ್ರಗಳನ್ನು ರೂಪಿಸಿಕೊಂಡು ಪ್ರಜಾಸತ್ತಾತ್ಮಕ ಬಲವರ್ಧನೆ ಮಾಡಿಕೊಳ್ಳಲು ಯತ್ನಿಸಿದವು. ಹಾಗಾಗಿ ಈ ತೊಡಕಿಗೆ ಒಂದು ಸುಲಭದ ಪರಿಹಾರವಿದೆ ಎಂದು ನನಗನಿಸುವುದಿಲ್ಲ.
[1] ಫೇತ್ ಎಂದರೆ ಧರ್ಮಶ್ರದ್ಧೆ ಎನ್ನಬಹುದು. ಆದರೆ ಅದು ಕೂಡಾ ರಿಲಿಜನ್ ಮತ್ತು ಸೆಕ್ಯುಲರಿಸಂ ನ ಹಾಗೆ ಸಂಕೀರ್ಣ ಪರಿಕಲ್ಪನೆಗಳನ್ನು ಒಳಗೊಂಡ ಪರಿಭಾಷೆ. ಬೈಬಲ್ಲಿನ ಪರಿಭಾಷೆ. ಪ್ರಮಾಣ ಗ್ರಂಥವೊಂದನ್ನು ಒಪ್ಪಿಕೊಂಡು ಅದರಲ್ಲಿನ ವಾಕ್ಯಗಳು ಸತ್ಯ ಎಂದು ನಂಬಿ ನಡೆಯುವುದು ಫೇತ್ ಎಂದು ಸಾಮಾನ್ಯವಾಗಿ ನಾವು ಅರ್ಥೈಸುತ್ತೇವೆ-ಅನುವಾದಕಿ.
ಮೂಲ: 18th October 2016 ರ ‘Reset Dialogues on’ civilizations, ನಲ್ಲಿ ಪ್ರಕಟಿತ
ಅನುವಾದ: ಪ್ರಜ್ಞಾ ಶಾಸ್ತ್ರಿ