ಮಾಧ್ಯಮಗಳ ಮಿದುಳು-ಹೃದಯಕ್ಕೆ ಆಗಿರುವುದೇನು?

“ಜಗತ್ತಿನಾದ್ಯಂತ ಬಲಪಂತೀಯ ಒಲವುಳ್ಳ ರಾಜಕೀಯ ಈಗ ಸವಾರಿ ಮಾಡುತ್ತಿದೆ. ಈ ರಾಜಕೀಯಕ್ಕೆ ಮಾಧ್ಯಮವೂ ಸೇರಿದಂತೆ ಯಾವುದೇ ಸಾಂವಿಧಾನಿಕ ಮತ್ತು ಪ್ರಜಾಸತ್ತಾತ್ಮಕ ಸಂಸ್ಥೆಗಳ ಮೇಲೆ ವಿಶ್ವಾಸ ಇರುವುದಿಲ್ಲ. ಭಾರತದಲ್ಲೂ ಇದುವೇ ಆಗುತ್ತಿದೆ ಎನ್ನೋಣವೇ? ಇಲ್ಲ.” – ಹಾಗಿದ್ದರೆ, ಭಾರತೀಯ ಮಾಧ್ಯಮರಂಗ ವರ್ತಿಸುವ ರೀತಿಯನ್ನು ನಿರ್ದೇಶಿಸುತ್ತಿರುವ ಅಂಶಗಳ್ಯಾವುವು? ಇದನ್ನು ವಿವರಿಸಲು ಎ. ನಾರಾಯಣ ಯತ್ನಿಸಿದ್ದಾರೆ.

ವಾಹ್ ಮಾಧ್ಯಮ ರಂಗ ಅಂದರೆ ಹೀಗಿರಬೇಕು ನೋಡಿ ಅಂತ ಉದ್ಗರಿಸಬಹುದಾಗಿದ್ಧ ಕಾಲವೊಂದು ಭಾರತದಲ್ಲಿ ಸ್ವಾತಂತ್ರ್ಯಾನಂತರ ಯಾವತ್ತೂ ಇರಲಿಲ್ಲ. ಅಧಿಕಾರಸ್ಥರ ಜತೆ ಒಂಥಾರಾ ನೆಂಟಸ್ಥನ ಹೊಂದುವುದರ ಮೂಲಕವೇ ತಮ್ಮ ಅಸ್ತಿತ್ವವನ್ನು ಭಾರತೀಯ ಮಾಧ್ಯಮಗಳು ಉಳಿಸಿಕೊಂಡದ್ದು. ಅಲ್ಲೊಂದು ಇಲ್ಲೊಂದು ಪತ್ರಿಕೆ ಅಥವಾ ಮಾಧ್ಯಮ ಸಂಸ್ಥೆ, ಆಗೊಮ್ಮೆ ಈಗೊಮ್ಮೆ ಆಳುವ ಸರಕಾರಗಳ ಬಗ್ಗೆ ದಿಟ್ಟ ನಿಷ್ಠುರ ನಿಲುವುಗಳನ್ನು ತಳೆದದ್ದಿರಬಹುದು. ತುರ್ತುಪರಿಸ್ಥಿತಿಯ ಕಾಲದಲ್ಲಿ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಸಂಪಾದಕೀಯ ಬರೆಯದೆ ಪ್ರತಿಭಟಿಸಿದ್ದನ್ನು ಬಿಟ್ಟರೆ ಉಳಿದಂತೆ ಅಂದಿನ ಮಾಧ್ಯಮರಂಗ ನೀ ಇಟ್ಟಂಗೆ ಇರುವವೇನೋ ಅಂತ ತೆಪ್ಪಗೆ ಇದ್ದವು ಅಂತೆಲ್ಲಾ ಚರಿತ್ರೆಯಲ್ಲಿ ಓದಿದ್ದೆವಲ್ಲ. ಹಾಗೇನೇ ಯಾವುದೇ ಕಾಲದಲ್ಲೂ ಮಾಧ್ಯಮ ಸ್ನೇಹೀ ಅಥವಾ ಅಭಿವ್ಯಕ್ತಿ ಸ್ವಾತಂತ್ರ್ಯ ಸ್ನೇಹಿ ಎನ್ನುವ ಸರಕಾರಗಳು ಸ್ವಾತಂತ್ರ್ಯಾನಂತರ ಇರಲೇ ಇಲ್ಲ, ಇರುವುದಕ್ಕೆ ಸಾಧ್ಯವೂ ಇಲ್ಲ. “ಸರಕಾರ ಮತ್ತು ಪತ್ರಿಕಾ ಸ್ವಾತಂತ್ರ್ಯ ಇವೆರಡರಲ್ಲಿ ಯಾವುದು ಉಳಿಯಬೇಕು ಅಂತ ಕೇಳಿದರೆ ಪತ್ರಿಕಾ ಸ್ವಾತಂತ್ರ್ಯ ಅಂತ ನಾನು ಹೇಳಬಯಸುತ್ತೇನೆ” ಎನ್ನುವ ಥಾಮಸ್ ಜಾಫ್ಏರ್ಸನ್ ಅವರ ನುಡಿಗಳನ್ನು ಸದಾ ಉದ್ಧರಿಸುತಿದ್ದ ಜವಾಹರ್ಲಾಲ್ ನೆಹರು ಅವರೇ ಪತ್ರಿಕಾಸ್ವಾತಂತ್ರ್ಯಕ್ಕೆ ಭಾರೀ ಧಕ್ಕೆ ತಂದ ಸಂವಿಧಾನದ ಮೊದಲ ತಿದ್ದುಪಡಿಯ ರೂವಾರಿಗಳೂ ಆಗಿದ್ದಾರೆ. ಬಿಜೆಪಿಯ ಉದಾರೀ ಮುಖ ಅಂತ ಭಾವಿಸಲಾಗಿದ್ದ ಅಟಲ್ ಬಿಹಾರಿ ವಾಜಪೇಯೀ ಅವರ ಕಾಲದಲ್ಲಿ ಸರಕಾರಕ್ಕೆ ಬಿಸಿಮುಟ್ಟಿಸುವ ಪತ್ರಿಕೋದ್ಯಮ ಮಾಡಹೊರಟ ತೆಹಲ್ಕಾ ಸಂಸ್ಥೆಯನ್ನು ಸರಕಾರೀ ಸಂಸ್ಥೆಗಳನ್ನು ಛೂ ಬಿಟ್ಟು ಯಾವ ಪರಿ ಕಾಡಲಾಗಿತ್ತು ಅಂತ ಕೆಲವರಾದರೂ ಬಲ್ಲರು. 2014ರಲ್ಲಿ ಶಿವಸೇನೆಯ ಸ್ಥಾಪಕ ಬಾಳ್ ಠಾಕ್ರೆ ಯ ಮರಣದ ಸಂಧರ್ಭ ಇಡೀ ಮಹಾರಾಷ್ಟ್ರದಲ್ಲಿ ಬಂಧ್ ಆಚರಿಸುವ ಅಗತ್ಯವನ್ನು ಪ್ರಶ್ನಿಸಿದ್ದ ಈರ್ವರು ಯುವತಿಯರನ್ನು ಮಾಹಿತಿ ತಂತ್ರಜ್ಞಾನ ಕಾಯ್ದೆ -2000 ರ ಅಡಿಯಲ್ಲಿ ಪೊಲೀಸರು ಬಂಧಿಸಿದಾಗ ಕೇಂದ್ರ ಮತ್ತು ಮಹಾರಾಷ್ಟ್ರ ಎರಡೂ ಕಡೆ ಇದ್ದದ್ದು ಕಾಂಗ್ರೆಸ್ ಸರಕಾರ.

ಹೀಗೆ ಒಂದೆಡೆ ಮಾಧ್ಯಮಗಳ ದಾಸ್ಯ, ಇನ್ನೊಂದೆಡೆ ಮಾಧ್ಯಮಗಳ ಧಮನ, ಇವೆರಡೂ ಭಾರತದ ಚರಿತ್ರೆಯುದ್ಧಕ್ಕೂ ಇದ್ದ ವಿದ್ಯಾಮಾನಗಳೇ. ಹಾಗಾದರೆ ಪ್ರಸ್ತುತ ಸನ್ನಿವೇಶ ಹೇಗೆ ಭಿನ್ನ ಮತ್ತು ಇದನ್ನು ಹೇಗೆ ಅರ್ಥ ಮಾಡಿಕೊಳ್ಳುವುದು? ಈಗ ಮಾಧ್ಯಮದ ದಾಸ್ಯದ ಜತೆಗೆ ಭಕ್ತಿಯೂ ಸೇರಿಕೊಂಡಿದೆ. ಹಾಗೆಯೇ ಈಗ ಮಾಧ್ಯಮದ ಧಮನ ಆಳುವ ಪಕ್ಷದ ರಾಜಕೀಯ ತಂತ್ರದ ಭಾಗವಾಗಿ ಬಿಟ್ಟಿದೆ. ತುರ್ತುಪರಿಸ್ಥಿತಿಯ ಕಾಲ ಮಾಧ್ಯಮ ರಂಗದ ಬಗ್ಗೆ ಹಿರಿಯ ಬಿಜೆಪಿ ನಾಯಕ ಎಲ್.ಕೆ. ಅದ್ವಾಣಿ ಅವರು ಹೇಳಿದ್ದಾರೆ ಎನ್ನಲಾದ ಒಂದು ಮಾತು ಬಹಳ ಚಿರಪರಿಚಿತ. “ಮಾಧ್ಯಮಗಳನ್ನು ಸರಕಾರ ಬಗ್ಗುವಂತೆ ಸೂಚಿಸಿತ್ತು. ಆದರೆ ಮಾಧ್ಯಮಗಳು ಅಕ್ಷರಶ ನೆಲಕ್ಕೆ ಒರಗಿ ತೆವಳಿದವು” ಅಂತ. ಈಗ ಅವರ ಮಾತು ಅವರೇ ಕಟ್ಟಿರುವ ಪಕ್ಷ ಅಧಿಕಾರದಲ್ಲಿರುವಾಗ ಇನ್ನೂ ಹೆಚ್ಚು ಅರ್ಥಪೂರ್ಣವಾಗಿ ದಾಸ್ಯದ ಜತೆ ಸಮರ್ಪಣಾ ಪೂರ್ಣವಾದ ಭಕ್ತಿಯೂ ಸೇರಿಕೊಂಡದ್ದು, ಮಾಧ್ಯಮದ ಕ್ರಿಯಾತ್ಮಕ ಧಮನ ಪಕ್ಷಕ್ಕೆ ಜನಪ್ರಿಯತೆ ಗಿಟ್ಟಿಸುವ ಭಾಗವಾಗಿ ಹೋದದ್ದು ಇತಿಹಾಸದ ಕ್ರೂರ ವ್ಯಂಗ್ಯ. ದಾಸ್ಯ ಭಕ್ತಿಯಾದ ಬಗೆಯನ್ನು ಮತ್ತು ಆಡಳಿತದ ಅಂಗವಾಗಿ ನಡೆಯುತಿದ್ದ ಮಾಧ್ಯಮಗಳ ಧಮನ ರಾಜಕೀಯ ತಂತ್ರಗಾರಿಕೆಯ ಭಾಗವಾಗಿ ನಡೆಯುತ್ತಿರುವ ವಿದ್ಯಮಾನಗಳನ್ನು ಸ್ವಲ್ಪ ವಿಶದವಾಗಿ ಅರ್ಥಮಾಡಿಕೊಳ್ಳಬೇಕಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಾಧ್ಯಮ ಸರಕಾರಕ್ಕೆ ದಾಸ್ಯವನ್ನು ಒಪ್ಪಿಕೊಳ್ಳಲು ಒಂದು ಕಾರಣವಿದೆ. ಮಾಧ್ಯಮ ರಂಗ ಈ ದೇಶದಲ್ಲಿ ಸರಕಾರವನ್ನು ವಿಧವಿಧವಾಗಿ ಅವಲಂಬಿಸಿದೆ. ಈ ಅವಲಂಬನೆಯಿಂದ ಮುಕ್ತವಾಗಿ ಬದುಕುವ ಮಾರ್ಗವನ್ನು ಮಾಧ್ಯಮಗಳು ಕಂಡುಕೊಳ್ಳದೆ ಹೋದದ್ದು ದಾಸ್ಯಕ್ಕೆ ಕಾರಣ. ಭಾರತದ ಮಾಧ್ಯಮ ಒಂದು ಉದ್ಯಮವಾಗಿ ಸದಾ ಸರಕಾರದ ಮರ್ಜಿಯಲ್ಲೇ ಇರಬೇಕಾದ ಅನಿವಾರ್ಯತೆ ಇದೆ. ಸರಕಾರದ ಜತೆ ನಿಷ್ಠುರವಾಗಿ ನಡೆದುಕೊಂಡರೆ ಮಾಧ್ಯಮಗಳನ್ನು ಸರಕಾರ ವಿವಿಧ ರೀತಿಯಲ್ಲಿ ಬಗ್ಗುಬಡಿಯಬಹುದು. ಸರಕಾರೀ ಜಾಹೀರಾತುಗಳನ್ನು ನಿಲ್ಲಿಸಬಹುದು, ಖಾಸಗಿ ಜಾಹೀರಾತುಗಳೂ ಸಿಗದೇ ಹೋಗುವಂತೆ ತಂತ್ರ ಹೂಡಬಹುದು. ಪತ್ರಿಕೆಯ ಮಾಲೀಕರ, ಅದರ ಹಿರಿಯ ಪತ್ರಕರ್ತರ ಮೇಲೆ ತನಿಖಾ ಸಂಸ್ಥೆಗಳನ್ನು ಛೂ ಬಿಡಬಹುದು. ಇದೆಲ್ಲಾ ಈ ದೇಶದಲ್ಲಿ ಹಿಂದೆ ಆಗಿ ಹೋಗಿದೆ. ಆದುದರಿಂದ ಯಾರು ತಾನೇ ಸರಕಾರದ ದ್ವೇಷ ಕಟ್ಟಿಕೊಳ್ಳಲು ತಯಾರಿದ್ದಾರೆ? ಸಹಜವಾಗಿಯೇ ಮಾಧ್ಯಮಗಳು ಸರಕಾರವನ್ನು ಪ್ರಶ್ನಿಸುವುದನ್ನು ಬಿಟ್ಟು ಆದರೆ ತಮ್ಮ ಸ್ವಾತಂತ್ರ್ಯ ಮತ್ತು ಈ ದಾಸ್ಯವನ್ನು ಒಪ್ಪಿಕೊಳ್ಳಬೇಕಾದ ಅನಿವಾರ್ಯತೆಗಳ ನಡುವೆ ಒಂದು ಹಂತದ ಸಮತೋಲನ ದೇಶದ ಮಾಧ್ಯರಂಗದಲ್ಲಿ ಇತ್ತು. ತಾವು ಬದುಕಲು ಯಾವ ರೀತಿಯ ಹೊಂದಾಣಿಕೆ ಮಾಡಿಕೊಳ್ಳಬೇಕೋ ಅದನ್ನು ಮಾಡಿಕೊಂಡಿದ್ದವು. ಆದರೆ ಅಲ್ಲೊಂದು ಸಮತೋಲನವಿತ್ತು. ಒಂದಷ್ಟು ಸಾಮಾಜಿಕ ಹಿತ ಒಂದಷ್ಟು ಸರಕಾರದ ಮತ್ತು ಉದ್ಯಮಗಳ ಜತೆ ಹೊಂದಾಣಿಕೆ ಮಾಡಿಕೊಂಡು ಭಾರತೀಯ ಮಾಧ್ಯಮಗಳು ದೇಶದ ಪ್ರಜಾತಂತ್ರ ವ್ಯವಸ್ಥೆಗೆ ತಮ್ಮದೇ ಆದ ದೇಣಿಗೆ ನೀಡುತ್ತಿದ್ದವು. ಮಾಧ್ಯಮದ ಸ್ವಾತಂತ್ರ್ಯದ ಲೆಕ್ಕಾಚಾರದಲ್ಲಿ ಭಾರತದ ಸ್ಥಾನ ಬಹಳ ಕೆಳಗೆ ಉಳಿದಿದ್ದರೂ, ಇಲ್ಲೊಂದು ಜೀವಂತ ಮಾಧ್ಯಮ ರಂಗ ಇದೆ ಮತ್ತು ಎಲ್ಲಾ ಮಿತಿಗಳ ಒಳಗೆ ಅದು ತನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತಿದೆ ಎಂಬ ಮೆಚ್ಚುಗೆಯೂ ಭಾರತದ ಮಾಧ್ಯಮ ರಂಗದ ಬಗ್ಗೆ ಇತ್ತು. ದಾಸ್ಯ ಭಕ್ತಿಯಾಗಿ ಪರಿವರ್ತನೆಯಾಗುವಲ್ಲಿ ಈ ಸಮತೋಲನ ಕುಸಿದಿದೆ. ಇದು 2014 ರಿಂದೀಚೆಗಿನ ಬೆಳವಣಿಗೆ. ಬಹುಕಾಲ ಸಮ್ಮಿಶ್ರ ಸರಕಾರಗಳ ತೆಕ್ಕೆಯಲ್ಲಿದ್ದ ಭಾರತ ಮತ್ತೆ ಒಂದೇ ಪಕ್ಷದ (ಹೆಸರಿಗೆ ಈಗಲೂ ಸಮ್ಮಿಶ್ರ ಸರಕಾರವೇ ಇದೆ) ಅಧಿಕಾರದ ಅಡಿಯಲ್ಲಿ ಬಂಡ ನಂತರ ಆಗಿರುವ ಬೆಳವಣಿಗೆ. ಇದು ಮಾಧ್ಯಮ ಸಂಪೂರ್ಣವಾಗಿ ತನ್ನ ಆತ್ಮವನ್ನು ಅಧಿಕಾರಸ್ಥರ ಪದತಲದಲ್ಲಿ ಇಟ್ಟು ಧ್ಯಾನಸ್ಥ ಸ್ಥಿತಿಯನ್ನು ತಲುಪಿದ ಸನ್ನಿವೇಶ.

ಈಗ ಸರಕಾರಕ್ಕೂ ಬಹುತೇಕ ಮಾಧ್ಯಮಗಳಿಗೂ ಒಂದೇ ಮಿದುಳು, ಒಂದೇ ಹೃದಯ. ಅವೆರಡರ ಮಿದುಳುಗಳು ಒಂದೇ ತರಂಗಾಂತರಗಳಲ್ಲಿ ಪ್ರತಿಸ್ಪಂದಿಸುತ್ತಿವೆ, ಅವೆರಡರ ಹೃದಯಗಳು ಒಂದೇ ವೇಗದಲ್ಲಿ ಮಿಡಿಯುತ್ತಿವೆ. ಮಾಧ್ಯಮಗಳಿಗೆ ಸರಕಾರ ಮಾಡಿದ್ದೆಲ್ಲಾ ಸರಿ ಅಂತ ಅನ್ನಿಸುತ್ತಿದೆ. ಸರಕಾರ ಮಾಡದೆ ಇದ್ದದ್ದನ್ನು ಮಾಡುವ ಅಗತ್ಯವೇ ಇಲ್ಲ ಅಂತ ಮಾಧ್ಯಮಗಳಿಗೆ ಅನ್ನಿಸುತ್ತದೆ.

ಈಗ ಎರಡನೆಯ ವಿಚಾರಕ್ಕೆ ಬರೋಣ. ಇದು ಮಾಧ್ಯಮಗಳನ್ನು ನಿಸ್ತೇಜಗೊಳಿಸುವುದು ಈಗ ರಾಜಕೀಯ ತಂತ್ರಗಾರಿಕೆ ಆಗಿರುವ ವಿದ್ಯಮಾನದ ವಿಚಾರ. ಈ ಹಿಂದಿನ ಸರಕಾರಗಳು ಮಾಧ್ಯಮಗಳ ಜತೆ ಸೆಣಸುತ್ತಿದ್ದದ್ದು ಆಡಳಿತದ ವಿಚಾರದಲ್ಲಿ. ಆಡಳಿತದಲ್ಲಿ ತಮ್ಮ ನಿರ್ಧಾರಗಳನ್ನು, ತಮ್ಮ ವೈಫಲ್ಯಗಳನ್ನು ಮತ್ತು ತಮ್ಮ ಭ್ರಷ್ಟತೆಯನ್ನು ಮಾಧ್ಯಮಗಳು ಪ್ರಶ್ನಿಸದಂತೆ ಮಾಧ್ಯಮಗಳನ್ನು ನಿಯಂತ್ರಿಸಲು ಸಾಮ, ದಾನ, ಭೇದ ಮತ್ತು ದಂಡಗಳನ್ನು ಎಲ್ಲಾ ಸರಕಾರಲು ಪ್ರಯೋಗಿಸಿದ್ದಿದೆ. ಇದಕ್ಕೆ ಪ್ರತಿಯಾಗಿ, ಒಂದು ಹಂತದ ವರೆಗೆ, ಅಂದರೆ ಮೇಲೆ ವಿವರಿಸಿದ ದಾಸ್ಯದ ಚೌಕಟ್ಟಿನೊಳಗೆ ಮಾಧ್ಯಮಗಳು ಇವೆಲ್ಲವನ್ನೂ ಮೆಟ್ಟಿನಿಂತು ತಮ್ಮ ಅಸ್ತಿತ್ವ ಉಳಿಸಿಕೊಳ್ಳುವ ಕೆಲಸವೂ ನಡೆದು ಅಲ್ಲೂ ಒಂದು ರೀತಿಯ ಸಮತೋಲನ ಸೃಷ್ಟಿಯಾಗಿತ್ತು. ಈ ಸಮತೋಲನವನ್ನು ಈಗಿನ ಅಧಿಕಾರಸ್ಥ ಪಕ್ಷ ಮತ್ತು ವ್ಯವಸ್ಥೆ ಮುರಿದು ಮೆಟ್ಟಿನಿಂತ ಪರಿ ಅನನ್ಯವಾದದ್ದು. ಈಗಿನ ಅಧಿಕಾರಸ್ಥ ಮಂದಿ ಲಗ್ಗೆ ಇಟ್ಟಿರುವುದು ಮಾಧ್ಯಮಗಳ ಅತ್ಯಂತ ಸೂಕ್ಷ್ಮವಾದ ಜೀವನಾಡಿಯ ಮೇಲೆ.

ಹಿಂದಿನವರು ಕಾನೂನಿನ ಮೂಲಕ, ಹಣಕಾಸು ವಿಚಾರದಲ್ಲಿ ಅಡೆ-ತಡೆ ಒಡ್ಡುವುದರ ಮೂಲಕ ಮಾಧ್ಯಮಗಳ ಧಮನದಲ್ಲಿ ತೊಡಗಿದರೆ ಈಗಿನ ಅಧಿಕಾರಸ್ಥ ಮಂದಿ ಇವೆಲ್ಲವನ್ನೂ ಮಾಡುವುದರ ಜತೆಗೆ ತಮ್ಮನ್ನು ಪ್ರಶ್ನಿಸುವ ಮಾಧ್ಯಮಗಳ ವಿಶ್ವಾಸಾರ್ಹತೆಯನ್ನೇ ಕೆಡಿಸುವ ಮೂಲಕ ಜನ ಮಾಧ್ಯಮಗಳಿಗಿಂತ ಹೆಚ್ಚಾಗಿ ಸರ್ಕಾರವನ್ನೇ ನಂಬುವಂತೆ ಆಗಬೇಕು ಎಂದು ಬಯಸಿದ್ದಾರೆ. ಸರಕಾರದ ವಿರುದ್ಧ, ನಾಯಕತ್ವದ ವಿರುಧ್ದ ಬರೆಯುವವರ ಚಾರಿತ್ರ್ಯ ಹರಣ ಮಾಡುವುದು, ತಮ್ಮೊಂದಿಗೆ ಸಹಕರಿಸದ ಮಾಧ್ಯಮ ಸಂಸ್ಥೆಗಳು ಕೂಡಾ ಭ್ರಷ್ಟವಾಗಿವೆ ಎನ್ನುವಂತ ಅಭಿಪ್ರಾಯ ಹುಟ್ಟಿಸಲು ಅಂತಹ ಸಂಸ್ಥೆಗಳ ಮೇಲೆ ತನಿಖಾ ದಳಗಳನ್ನು ಛೂ ಬಿಡುವ ಕೆಲಸ ಮಾಡುತ್ತಿವೆ. ಜನರ ದೃಷ್ಟಿಯಲ್ಲಿ ಮಾಧ್ಯಮಗಳು ಕೂಡಾ ಭ್ರಷ್ಟವಾಗಿವೆ ಎನ್ನುವ ಅಭಿಪ್ರಾಯ ಬಂದು ಬಿಟ್ಟರೆ ಮತ್ತೆ ಅಂತಹ ಮಾಧ್ಯಮಗಳು ಸರಕಾರವನ್ನು ಟೀಕಿಸಿದರೆ ಜನ ಅದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎನ್ನುವ ಲೆಕ್ಕಾಚಾರ ಇಲ್ಲಿಯದ್ದು. ಈ ಉದ್ದೇಶಕ್ಕಾಗಿಯೇ “ಪ್ರೆಸ್ಸ್ಟಿಟ್ಯೂಟ್” “ಇಟಾಲಿಯನ್ ಮೀಡಿಯಾ”, “ಕಾಂಗಿ ಮೀಡಿಯಾ” ಇತ್ಯಾದಿ ಬೈಗುಳದ ಪದಗಳನ್ನು ಆವಿಷ್ಕರಿಸಿ ಅವುಗಳನ್ನು ದಿಟ್ಟ ಪತ್ರಕರ್ತರ ಮೇಲೆ ಪ್ರಯೋಗಿಸಲಾಗುತ್ತದೆ. ಮುದ್ರಣ ಮಾಧ್ಯಮ ಅಥವಾ ದೃಶ್ಯ ಮಾದ್ಯಮದಲ್ಲಿ ಅಧಿಕಾರಸ್ತರನ್ನು ಟೀಕಿಸಿ ಬರುವ ವರದಿಗಳನ್ನು ಮತ್ತು ಅವುಗಳನ್ನು ಬರೆದವರನ್ನು ಕೀಳು ಪದಗಳಿಂದ ಜರೆಯಲು, ಅಂತಹ ಪತ್ರಿಕಾ ವರದಿಗಾರರ ಮತ್ತು ಸಂಪಾದಕರ ವೈಯ್ಯಕ್ತಿಕ ವಿವರಗಳನ್ನು ಜಾಲಾಡಿ, ಸತ್ಯವನ್ನುತಿರುಚಿ ಕಥೆಕಟ್ಟಿ ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಸಾರ ನಡೆಸಲು ಮಾಧ್ಯಮ-ಧಾಳಿ ತಂಡಗಳನ್ನು ರಚಿಸಿ ಅವುಗಳನ್ನು ದೊಡ್ಡ ದೊಡ್ಡ ನಗರಗಳಲ್ಲಿ ಪ್ರತಿಷ್ಠಾಪಿಸಲಾಗಿದೆ. ಆಳುವ ಪಕ್ಷ ಅಥವಾ ಅದನ್ನು ಬೆಂಬಲಿಸುವ ಸಂಘ-ಸಂಸ್ಥೆಗಳಿಂದ ಸಂಬಳ ಪಡೆಯುವ ಈ ಮಂದಿಯ ಏಕಮೇವ ಕಾಯಕ ಎಂದರೆ ಮುಖ್ಯವಾಹಿನಿ ಮಾಧ್ಯಮಗಳ ವಿಶ್ವಾಸಾರ್ಹತೆಯನ್ನು ಕೆಡಿಸುವುದು. ಇದು ಹೊಸ ಮಾಧ್ಯಮ ಪರಿಸರ. ಇದು ಮಾಧ್ಯಮ ಧಮನದ ಹೊಸ ಅವತಾರ. ಒಂದೆಡೆ ಭಕ್ತಿ ಪಂಥವನ್ನು ಆಯ್ದುಕೊಂಡ ಮಾಧ್ಯಮ ಸಂಸ್ಥೆಗಳು, ಇನ್ನೊಂದೆಡೆ ಅಳಿದುಳಿದ ಮಾಧ್ಯಮ ಸಂಸ್ಥೆಗಳ ಮತ್ತು ಮಾಧ್ಯಮದ ಮಂದಿಯ ನೈತಿಕ ಸ್ಥೈರ್ಯವನ್ನು ಕೆಡಿಸಿರುವುದು.

ಪ್ರಣೋಯ್ ರಾಯ್ ಅವರ ಮೇಲೆ ಸಿಬಿಐ ತನಿಖೆ ಆದ ನಂತರದ ಪತ್ರಿಕಾಗೋಷ್ಟಿ

ಪ್ರಣೋಯ್ ರಾಯ್ ಅವರ ಮೇಲೆ ಸಿಬಿಐ ತನಿಖೆ ಆದ ನಂತರದ ಪತ್ರಿಕಾಗೋಷ್ಟಿ

ಇವೆರಡರ ಪರಿಣಾಮವಾಗಿ ಬಹುತೇಕ ಪತ್ರಿಕೆಗಳು ಪತ್ರಿಕೆಗಳಾಗಿ ಉಳಿದಿಲ್ಲ ಅವು ಆಳುವ ಪಕ್ಷದ ಮುಖವಾಣಿಗಳಾಗಿ ಬಿಟ್ಟಿವೆ, ಬಹುತೇಕ ಟಿವಿ ಚಾನೆಲ್ ಗಳು ಆಳುವ ಪಕ್ಷಕ್ಕೆ ಬಹುಪರಾಕ್ ಹೇಳುವ ವಂದಿ ಮಾಗದರ ಕೆಲಸ ಮಾಡುತ್ತಿವೆ. ರಾಷ್ಟ್ರೀಯ ವಾಹಿನಿಯಲ್ಲಿ ನಡೆಯುವ ಚರ್ಚೆಗಳು ಇಂದು ಸರಕಾರದ ನೀತಿ ನಿಲುವುಗಳನ್ನು ಗುರಿಯಾಗಿಸಿಕೊಂಡು ನಡೆಯುವದಕ್ಕಿಂತ ಹೆಚ್ಚಾಗಿ ವಿರೋಧ ಪಕ್ಷಗಳನ್ನು ಕೇಂದ್ರೀಕರಿಸಿಕೊಂಡು ನಡೆಯುತ್ತಿವೆ. ಸ್ವತಂತ್ರ ಭಾರತದಲ್ಲಿ ಹೀಗಾಗುವುದು ಇದೇ ಮೊದಲಿರಬೇಕು. ನೇರವಾಗಿ ಹೇಳಬೇಕು ಎಂದಾದರೆ ಆಳುವ ಪಕ್ಷದ ಪರವಾಗಿ ಕೂಗುಮಾರಿಯಂತೆ ವರ್ತಿಸುವ ‘ರಿಪಬ್ಲಿಕ್ ಟಿವಿ’ ಯಂತಹ ಒಂದು ಮಾಧ್ಯಮ ಸಂಸ್ಥೆಯನ್ನು ಮತ್ತು ಸರಕಾರವನ್ನು ಟೀಕಿಸುವವರ ವಿರುದ್ದ ವಿಕಾರವಾಗಿ ಹರಿಯಾಯುವ ಅರ್ನಾಬ್ ಗೋಸ್ವಾಮಿ ಪತ್ರಕರ್ತರು ಸೃಷ್ಠಿಯಾದದ್ದು ಮಾತ್ರವಲ್ಲ ಯಶಸ್ವಿಯಾದ ಕತೆ ಭಾರತದಲ್ಲಿ ನಿರ್ಮಾಣವಾಗಿರುವ ಹೊಸ ಮಾಧ್ಯಮ ಪರಿಸರ ಮತ್ತು ಪರಿಸ್ಥಿತಿಯ ಬಗ್ಗೆ ಅದರದ್ದೇ ಆದ ಕತೆ ಹೇಳುತ್ತಿದೆ.

ಭಾರತೀಯ ಮಾಧ್ಯಮಗಳು ತಮ್ಮ ಅಂತಸ್ಸತ್ವ ಕಳೆದುಕೊಂಡಿರುವುದಕ್ಕೆ ತೀರಾ ಇತ್ತೀಚೆಗಿನ ಉದಾಹರಣೆ ಕಾಶ್ಮೀರದ ವಿಚಾರದಲ್ಲಿ ಅವು ಅನುಸರಿಸುತ್ತಿರುವ ನೀತಿ. ಕೇಂದ್ರ ಸರಕಾರ ಕಾಶ್ಮೀರಕ್ಕೆ ಸಂಬಂಧಿಸಿದ ಸಂವಿಧಾನದ 370ನೆಯ ವಿಧಿಯನ್ನು ಅಸಿಂಧುಗೊಳಿಸಿದ ಬಳಿಕ ಆ ರಾಜ್ಯದ ಜನಜೀವನದ ಮೇಲೆ ಹೇರಿರುವ ಭೀಕರ ನಿರ್ಬಂಧಗಳ ಕುರಿತು ಭಾರತೀಯ ಮಾಧ್ಯಮಗಳು ಸಂಪೂರ್ಣ ಕುರುಡಾಗಿ ವರ್ತಿಸುತ್ತಿವೆ. ಅಲ್ಲಿ ಜನಜೀವನ ಸಹಜ ಸ್ಥಿತಿಯಲ್ಲಿದೆ ಎಂದೂ, ನಿರ್ಬಂಧಗಳು ಅನಿವಾರ್ಯ ಎಂದೂ ಸರಕಾರ ಹೇಳುತ್ತಿರುವುದನ್ನು ಮುಖ್ಯವಾಹಿನಿ ಮಾಧ್ಯಮಗಳು ಏನೊಂದೂ ಚಿಕಿತ್ಸಕ ದೃಷ್ಟಿಯನ್ನು ಇಟ್ಟುಕೊಳ್ಳದೆ ಗಿಳಿಪಾಠ ಒಪ್ಪಿಸುತ್ತಿವೆ. ಅಂತಾರಾಷ್ಟ್ರೀಯ ಮಾಧ್ಯಮಗಳು ಮಾತ್ರ ಮಾಧ್ಯಮಗಳಿಗೆ ವಿಧಿಸಲಾದ ಎಲ್ಲಾ ನಿರ್ಬಂಧಗಳನ್ನು ಮೀರಿ ಆ ರಾಜ್ಯದಲ್ಲಿ ಆಗುತ್ತಿರುವ ದೈನಂಧಿನ ಅನಾಹುತಗಳನ್ನು ಜಗತ್ತಿನ ಮುಂದಿಡುತ್ತಿವೆ.

ಯಾರ ಹಿಡಿತದಲ್ಲಿವೆ ಮಾಧ್ಯಮಗಳು?

ಯಾರ ಹಿಡಿತದಲ್ಲಿವೆ ಮಾಧ್ಯಮಗಳು?

ಭಾರತೀಯ ಮಾಧ್ಯಮಗಳು ಇದನ್ನು ಮಾಡುತ್ತಿಲ್ಲ ಎನ್ನುವುದಕ್ಕಿಂತ ಹೆಚ್ಚಾಗಿ ಈ ವಿಚಾರದಲ್ಲಿ ಅವುಗಳು ಸರ್ಕಾರದ ಮುಖವಾಣಿಗಳಾಗಿ ಹೋಗಿರುವುದು ದುರಂತದ ಸಂಗತಿ. ಆಳುವ ಪಕ್ಷಗಳ ಅಥವಾ ಅಧಿಕಾರಸ್ಥ ರಾಜಕಾರಣಿಗಳ ಸ್ವಂತ ಬಂಡಾವಾಳದಲ್ಲಿ ನಡೆಯುವ ಅಥವಾ ಅವರನ್ನು ಓಲೈಸಲೆಂದೇ ಹುಟ್ಟಿಕೊಂಡಿರುವ ಮಾದ್ಯಮಗಳು ಮಾತ್ರವೇ ಹೀಗೆ ನಡೆದುಕೊಳ್ಳುತ್ತವೆ ಎಂದಾಗಿದ್ದರೆ ಅದರಲ್ಲಿ ವಿಶೇಷ ವೇನಿರಲಿಲ್ಲ. ಆದರೆ ಇಂದು ಈ ಪ್ರವೃತ್ತಿ ಇಂತಹ ಮಾಧ್ಯಮಗಳಿಗೆ ಮಾತ್ರ ಸೀಮಿತವಾಗಿಲ್ಲ. ಅದು ಇಡೀ ಮುಖ್ಯವಾಹಿನಿ ಮಾಧ್ಯಮ ರಂಗವನ್ನು ಬಹುತೇಕ ಆವರಿಸಿಬಿಟ್ಟಿದೆ. ಕಾಶ್ಮೀರದ ವಿಚಾರದಲ್ಲೇನೋ ‘ದೇಶಭಕ್ತಿ’ ಮಾಧ್ಯಮಗಳ ಕೈಕಟ್ಟಿಹಾಕಿತು ಎನ್ನೋಣ. ಆದರೆ ಗುಂಪು ಹತ್ಯೆಗಳ ವಿಚಾರದಲ್ಲಿ ಮಾಧ್ಯಮಗಳು ಎತ್ತಬೇಕಾದ ಪ್ರಶ್ನೆಗಳನ್ನು ಎತ್ತದಿರುವುದನ್ನು ಏನೆಂದು ಕರೆಯೋಣ? ಬರಬರುತ್ತಾ ಗುಂಪು ಹತ್ಯೆಗಳ ಕುರಿತಾದ ಸುದ್ದಿಗಳು ಏನೋ ಮಾಮೂಲಿ ಘಟನೆಗಳ ವರದಿ ಎನ್ನುವಂತೆ ಒಳಪುಟಗಳಲ್ಲಿ ಕಾಣಿಸಿಕೊಳ್ಳಲಾರಂಭಿಸಿವೆ. ಸುಪ್ರೀಂ ಕೋರ್ಟ್ ಆದೇಶದ ಬಳಿಕವೂ ಸರಕಾರ ಈ ವಿಚಾರದಲ್ಲಿ ತೋರುತ್ತಿರುವ ಉದಾಸೀನ ಪ್ರವೃತ್ತಿಯನ್ನು ದೊಡ್ಡ ಧ್ವನಿಯಲ್ಲಿ ಪ್ರಶ್ನಿಸದೆ ಇರುವ ಮಾಧ್ಯಮಗಳು ಅಭಿವ್ಯಕ್ತಿ ಸ್ವಾತಂತ್ರವನ್ನು ಎಷ್ಟರ ಮಟ್ಟಿಗೆ ಬಳಸಿಕೊಳ್ಳುತ್ತಿವೆ ಎನ್ನುವ ಪ್ರಶ್ನೆ ಮೂಡುದಿಲ್ಲವೇ? ಸುಪ್ರೀಂ ಕೋರ್ಟ್ ರಾಮ ಜನ್ಮ ಭೂಮಿ ವಿವಾದದಲ್ಲಿ ಪಂಚಾಯತ್ ಕಟ್ಟೆ ನೀಡುವಂತಹ ಒಂದು ತೀರ್ಪನ್ನು ನೀಡಿದಾಗಲೂ ಬಹುತೇಕ ಮುಖ್ಯವಾಹಿನಿ ಮಾಧ್ಯಮಗಳು ಸಣ್ಣದೊಂದು ಪ್ರಶ್ನೆಯನ್ನೂ ಎತ್ತದೆ ತೀರ್ಪನ್ನು ಸ್ವಾಗತಿಸಿದವು. ಇಂತಹ ನೂರಾರು ಉದಾಹರಣೆಗಳನ್ನು ನೀಡುತ್ತಾ ಹೋಗಬಹುದು.

ಜಗತ್ತಿನಾದ್ಯಂತ ಬಲಪಂತೀಯ ಒಲವುಳ್ಳ ರಾಜಕೀಯ ಈಗ ಸವಾರಿ ಮಾಡುತ್ತಿದೆ. ಈ ರಾಜಕೀಯಕ್ಕೆ ಮಾಧ್ಯಮವೂ ಸೇರಿದಂತೆ ಯಾವುದೇ ಸಾಂವಿಧಾನಿಕ ಮತ್ತು ಪ್ರಜಾಸತ್ತಾತ್ಮಕ ಸಂಸ್ಥೆಗಳ ಮೇಲೆ ವಿಶ್ವಾಸ ಇರುವುದಿಲ್ಲ. ಭಾರತದಲ್ಲೂ ಇದುವೇ ಆಗುತ್ತಿದೆ ಎನ್ನೋಣವೇ? ಇಲ್ಲ. ಒಂದು ವ್ಯತ್ಯಾಸವಿದೆ. ಅಮೇರಿಕಾದಲ್ಲಿ ಬಲಪಂತೀಯ ನಿಲುವಿನ ರಾಜಕಾರಣ, ಉದ್ಯಮ ಮತ್ತು ಹಾಸ್ಯನಟನೆಯ ಸಮ್ಮಿಶ್ರ ರೂಪದಂತಿರುವ ಡೊನಾಲ್ಡ್ ಟ್ರಂಪ್ ಎಂಬ ಅಧ್ಯಕ್ಷ ಆಯ್ಕೆಯಾಗಿದ್ದು ಮಾತ್ರವಲ್ಲ ಆತ ಭಾರಿ ಜನಬೆಂಬಲ ಗಳಿಸಿ ಇದೀಗ ಎರಡನೆಯ ನಿರೀಕ್ಷೆ ಹುಟ್ಟಿಸಿದ್ದಾನೆ. ಆದರೆ ಅಲ್ಲಿನ ಮಾಧ್ಯಮಗಳು ಮಾತ್ರ ಇದರಿಂದ ದೃತಿಗೆಡಲಿಲ್ಲ. ಅವು ತಮ್ಮ ಕೆಲಸವನ್ನು ಎಗ್ಗಿಲ್ಲದೆ ಮಾಡುತ್ತಿವೆ. ಟ್ರಂಪ್ ನ ನಾಟಕೀಯ ಹಾವ-ಭಾವ, ಅಜ್ಞಾನ, ಮಾನವದ್ವೇಷದ ಭಾಷೆ ಎಲ್ಲವನ್ನು ಎತ್ತಿಹಿಡಿದು ಉಗ್ರವಾಗಿ ಟೀಕಿಸುತ್ತಲೂ, ವಿಮರ್ಶಿಸುತ್ತಲೂ ಇವೆ. ಭಾರತದಲ್ಲಿ ಮಾತ್ರ ಕೆಲವು ನಾಯಕರು ಮಾಧ್ಯಮಗಳ ಪಾಲಿಗೆ ಪವಿತ್ರ ಹಸುಗಳು. ಸರಕಾರವನ್ನು ಟೀಕಿಸಿದರೆ ದೇಶ ದ್ರೋಹ ಎನ್ನುವ ಆಳುವವರ ತತ್ವವನ್ನು ಮಾಧ್ಯಮಗಳು ಕೂಡಾ ಬಹುತೇಕ ಒಪ್ಪಿಕೊಂಡಿರುವಂತೆ ಕಾಣುತ್ತದೆ.

ಅಮೇರಿಕಾ ಸರ್ಕಾರದ ಕಡುಟೀಕಾಕಾರ "ತಡರಾತ್ರಿ" ಕಾರ್ಯಕ್ರಮದ ನಿರ್ವಾಹಕರು

ಅಮೇರಿಕಾ ಸರ್ಕಾರದ ಕಡುಟೀಕಾಕಾರ “ತಡರಾತ್ರಿ ಕಾರ್ಯಕ್ರಮಗಳ” ನಿರ್ವಾಹಕರು

ಜಗತ್ತಿನಾಧ್ಯಂತ ಇಂದು ಮುಖ್ಯವಾಹಿನಿ ಮಾಧ್ಯಮಗಳು ಎರಡು ರೀತಿಯ ಮೂಲಭೂತ ಸವಾಲುಗಳನ್ನು ಎದುರಿಸುತ್ತವೆ. ಇವೆರಡೂ ಸವಾಲುಗಳ ಹಿಂದೆ ಇರುವುದು ಬದಲಾದ ತಂತ್ರಜ್ಞಾನ. ಡಿಜಿಟಲ್ ತಂತ್ರಜ್ಞಾನ ಮಾಹಿತಿ ಪ್ರಸರಣಕ್ಕೆ ಬೇರೆ ಬೇರೆ ರೀತಿಯ ನೆಲೆಗಳನ್ನು ಕಲ್ಪಿಸಿದ ನಂತರ ಮುದ್ರಣ ಮತ್ತು ಟಿವಿ ಮಾಧ್ಯಮಗಳೆರಡಕ್ಕೂ ಒಂದೆಡೆ ತಮ್ಮ ಪ್ರಸ್ತುತತೆಯ ಸವಾಲು ಎದುರಾದರೆ ಇನ್ನೊಂದೆಡೆ ತಮ್ಮ ಆದಾಯ ಮೂಲಗಳನ್ನು ಉಳಿಸಿಕೊಳ್ಳಬೇಕಾದ ಸವಾಲು ಎದುರಾಗಿದೆ. ಪ್ರಸ್ತುತತೆಯ ವಿಚಾರದಲ್ಲಿ ಭಾರತದ ಮುಖ್ಯವಾಹಿನಿ ಮಾಧ್ಯಮಗಳು ಉಳಿದ ದೇಶಗಳಲ್ಲಿ ಅಲ್ಲಿನ ಮಾಧ್ಯಮಗಳು ಎದುರಿಸಿದಷ್ಟು ಸವಾಲುಗಳನ್ನು ಎದುರಿಸಬೇಕಿಲ್ಲದೆ ಹೋದರೂ ಮಾಧ್ಯಮಗಳ ಅರ್ಥವ್ಯವಸ್ಥೆ ಭಾರತದಲ್ಲಿ ಕೂಡಾ ದೊಡ್ಡ ಮಟ್ಟಿನ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇದ್ದ ಆದಾಯಮೂಲಗಳು ವಿವಿಧ ಮಾಧ್ಯಮ ಪ್ರಕಾರಗಳಿಗೆ ಹಂಚಿಹೋಗುತ್ತಿರುವುದರಿಂದ ಅದು ಯಾರಿಗೂ ಸಾಕಾಗುತ್ತಿಲ್ಲ. ಮಾಧ್ಯಮಗಳ ಆದಾಯ ಓದುಗರಿಂದ ಅಥವಾ ವೀಕ್ಷಕರಿಂದ ಬರುವುದಿಲ್ಲ. ಅದು ಬರುವುದು ಜಾಹೀರಾತುಗಳಿಂದ. ಮಾಧ್ಯಮಗಳ ಆರ್ಥಿಕ ಸುಭದ್ರತೆಗೂ ಅವುಗಳು ಅಭಿವ್ಯಕ್ತಿ ಸ್ವಾತಂತ್ರ್ಯಾಂತ್ರ್ಯವನ್ನು ಬಳಸಿಕೊಂಡು ಪ್ರಜಾತಂತ್ರದ ಕಾವಲು ಕಾಯುವ ಕೆಲಸ ಮಾಡುವುದಕ್ಕೂ ಏನೇನೂ ಸಂಬಂಧವಿಲ್ಲ. ಮಾಧ್ಯಮೋದ್ಯಮ ಈಗ ಇರುವ ತನ್ನ ಆರ್ಥಿಕ ಮಾದರಿಯನ್ನೇ ಅವಲಂಬಿಸಿಕೊಂಡು ಮುಂದುವರಿದದ್ದೆ ಆದರೆ ಪ್ರಜಾತಂತ್ರದ ನಾಲ್ಕನೆಯ ಸ್ಥ0ಭವಾಗಿ ಕಾರ್ಯನಿರ್ವಹಿಸುವ ಶಕ್ತಿಯನ್ನು ಅದು ಸದ್ಯದಲ್ಲೇ ಇನ್ನಷ್ಟೂ ಕಳೆದುಕೊಳ್ಳಲಿವೆ. ಸರಕಾರದ ಜಾಹೀರಾತುಗಳನ್ನು ಅವಲಂಬಿಸದೆ, ಈಗಾಗಲೇ ಕುಸಿಯುತ್ತಿರುವ ಖಾಸಗಿ ಜಾಹೀರಾತುಗಳ ಮಾರುಕಟ್ಟೆಯನ್ನು ಅವಲಂಬಿಸದೆ ಪರ್ಯಾಯ ಆದಾಯ ಮೂಲವೊಂದನ್ನು ಆವಿಷ್ಕರಿಸಲು ಸಾಧ್ಯವಾದರೆ ಮಾತ್ರ ಮಾಧ್ಯಮಗಳು ಮಾಧ್ಯಮಗಳಾಗಿ ಉಳಿಯುತ್ತವೆ. ಇಂತಹದ್ದೊಂದು ಆವಿಷ್ಕಾರ ಈ ತನಕ ಆಗಿಲ್ಲ ಯಾಕೆ ಎನ್ನುವುದು ನಿಜಕ್ಕೂ ಚೋದ್ಯದ ವಿಚಾರ. ಒಂದು ವೇಳೆ ಮಾಧ್ಯಮ ರಂಗವನ್ನು ಪ್ರಜಾತಂತ್ರದ ನಾಲ್ಕನೆಯ ಅಂಗವಾಗಿ ಉಳಿಸಿಕೊಳ್ಳಬೇಕು ಮತ್ತು ಅದು ಅಧಿಕಾರಸ್ತರನ್ನು ಸದಾ ಪ್ರಶ್ನಿಸುತ್ತಿರಬೇಕು ಎನ್ನುವ ತುಡಿತವೊಂದು ಭಾರತದ ಸಮಾಜದಲ್ಲಿ ಆಳವಾಗಿ ನೆಲೆಸಿದಿದ್ದರೆ ಇಷ್ಟೊತ್ತಿಗೆ ಸರಕಾರೀ ಮತ್ತು ಖಾಸಗೀ ಜಾಹೀರಾತುಗಳ ಹಂಗಿಲ್ಲದೆ ನಡೆಯಬಹುದಾದ ಮಾದ್ಯಮೋದ್ಯಮದ ಮಾದರಿಯೊಂದು ಈ ದೇಶದಲ್ಲಿ ಸೃಷ್ಟಿಯಾಗುತಿತ್ತು. ಒಂದೋ ಸಹಕಾರೀ ತತ್ವದ ಆಧಾರದ ಮೇಲೆ ಅಥವಾ ದೊಡ್ಡ ಮಟ್ಟದ ದತ್ತಿಯೊಂದನ್ನು ಸ್ಥಾಪಿಸಿ ಅದರಿಂದ ಹುಟ್ಟುವ ಆದಾಯದ ಮೇಲೆ ಅವಲಂಬಿಸಿ ಸ್ವತಂತ್ರವಾಗಿ ನಡೆಯುವ ಮಾಧ್ಯಮ ಸಂಸ್ಥೆಯೊಂದು ಹುಟ್ಟಬಹುದಾಗಿತ್ತು. ಅಂತಹದ್ದೊಂದು ಪ್ರಯೋಗ ಸರಿಯಾಗಿ ಆಗಿಲ್ಲ ಅಥವಾ ಆದರೂ ಬಹುಕಾಲ ಉಳಿಯಲಿಲ್ಲ (ಉದಾಹರಣೆಗೆ ತೆಹೆಲ್ಕಾ) ಎಂಬುದು ಏನನ್ನು ಸೂಚಿಸುತ್ತದೆ.

 

ಕೃಪೆ: ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ೭೦ರ ಸಂಭ್ರಮದ ಸ್ಮರಣ ಸಂಚಿಕೆ


2 comments to “ಮಾಧ್ಯಮಗಳ ಮಿದುಳು-ಹೃದಯಕ್ಕೆ ಆಗಿರುವುದೇನು?”
 1. ಮಾಧ್ಯಮ, ಸರ್ಕಾರ, ನಾಯಕ, ಉದ್ಯಮಿ ಯಾವ ಹೆಸರಲ್ಲಿ ಕರೆದರೂ ಅವರು ಒಬ್ಬ ನಿಲುವು ಉಳ್ಳ ವ್ಯಕ್ತಿ.
  ಆ ನಿಲುವು ಮಾನವೀಯತೆ ಬಗ್ಗೆ , ಸಮಾಜದ ಒಳಿತಿನ ಬಗ್ಗೆ ಇದ್ದರೆ ಚೆಂದ. ಆಗ ಸಮಾಜ ಕೂಡ balanced ಆಗುತ್ತದೆ.
  ಆದರೆ ವ್ಯಕ್ತಿ ಇಂದ ಗುಂಪು, ಗುಂಪಿನಿಂದ ಸ್ಪರ್ಧೆ , ಗೆಲುವಿಗಾಗಿ ದಾಸ್ಯ ಮತ್ತು ಭಕ್ತಿ. ಇದಕ್ಕೆ ಎಡ ಪಂಥ ಭಕ್ತಿ , ಬಲಪಂಥ ಭಕ್ತಿ ಎಂಬ ವಿಶ್ಲೇಷಣೆ ಇಲ್ಲ.
  ಒಬ್ಬ ಕೃಷ್ಣಭಕ್ತ. ಮತ್ತೊಬ್ಬ ಕ್ರೈಸ್ತ ಭಕ್ತ.
  ಮೂಲಭೂತ ನಿಯಮ ಬದ್ಧತೆ ಕೊಲೆ ಯಾಗಿರುವ ಸಂದರ್ಭದಲ್ಲಿ .. ಭಕ್ತಿ ,ದಾಸ್ಯ ಪ್ರಶ್ನೆ ಅಸಂಜಸ.
  ಅವರವರು ಆಯಾ ದೇವರ ಭಕ್ತಿ ಪ್ರದರ್ಶನ ಮಾಡುತ್ತಾರೆ.
  ಪ್ರಸ್ತುತ ಲೇಖನ ಕೂಡ ಲೇಖಕರ ಭಕ್ತಿ ತೋರಿಸುವುದಿಲ್ಲವೇ..
  ಹಸಿವಿಗೆ ಅನ್ನ, corona ಗೆ treatment ಕೊಡಬೇಕು ಎನ್ನೋದು ಸತ್ಯ. Food kit, ಹಾಸಿಗೆ ಕೊಡುವಾಗಲೂ ದಾಂಧಲೆ ಗದ್ದಲ ಎಬ್ಬಿಸುವುದು ಭಕ್ತಿ ದಾಸ್ಯ.
  LTTE ಇಂದ ವೀರಪ್ಪನ್, ಚೀನಾ ದಿಂದ ಪಾಕಿಸ್ತಾನ ದ ವರೆಗೂ ಜೈಕಾರ ಹಾಕುವ ಭಕ್ತರಿದ್ದಾರೆ.
  ಅವರವರ ಭಕ್ತಿ ಅವರವರನ್ನು ಪೋಷಿಸುತ್ತದೆ.
  ಬಡಪಾಯಿ ಬಡವ ದುಡಿಯುತ್ತ ಸಾಯುತ್ತಾನೆ.

 2. ಪತ್ರಿಕರ್ತರು ಪತ್ರಿಕೋದ್ಯಮದ ಘನತೆಯನ್ನು ಎತ್ತಿ ಹಿಡಿಯಬೇಕಾದ ಸಂದರ್ಭ ಇವತ್ತಿನದಾಗಿದೆ.ಎಡ ಮತ್ತು ಬಲದ ಪ್ರಶ್ನೆಯೇ ಅರ್ಥವಿಲ್ಲದ್ದು.ಠಕ್ಕರು ಎಲ್ಲಾ ಕಾಲದಲ್ಲೂ ಇರುತ್ತಾರೆ.

ಪ್ರತಿಕ್ರಿಯಿಸಿ