ಎಚ್.ಆರ್. ರಮೇಶ್ ಕಥೆ : ಲಚ್ಟಿಯೆಂಬ ಪಾರಿಜಾತ

ನಿತ್ಯದಂತೆ ಅವೊತ್ತು ಅವನ ಅಮ್ಮನ ಪಕ್ಕದಲ್ಲಿ ಮಲಗಿದ್ದ ಅವನ ತಲೆಯ ತುಂಬೆಲ್ಲಾ ಮತ್ತೆ ನಾಳೆ ಸಿಕ್ತಾಳೆ, ಕೇಳಿಯೇ ಬಿಡಬೇಕು ಎನ್ನುವುದು ತುಂಬಿಹೋಗಿತ್ತು. ಮತ್ತಷ್ಟು ಹುಮ್ಮಸ್ಸುಗೊಂಡ. ‘ಲಚ್ಚಿ ಅದನ್ನು ತೋರ್ಸೆ’ ಎಂದು ಹೇಳಿಕೊಂಡ ತನಗೆ ತಾನೆ. ‘ಯಾತಲ ಹುಡುಗ ತೋರ್ಸಲ ಅಂತೀದಿಯ’ ಎಂದು ಬೈದು, ‘ಸುಮ್ಮನೆ ಮಲಕ್ಕಳ ಪಾಪ’ ಎಂದು ಅವನ ಕೂದಲಲ್ಲಿ ತನ್ನ ಬೆರಳುಗಳನ್ನು ಆಡಿಸತೊಡಗಿದಳು. ಒಂದು ಸ್ವಲ್ಪಹೊತ್ತಾದ ಮೇಲೆ ‘ಅಮ್ಮೋ ಅಮ್ಮೋ’ ಎಂದ…

ತನ್ನ ಸ್ನೇಹಿತನೊಬ್ಬನನ್ನು ತನ್ನ ಕಾರಿನಲ್ಲಿ ಟೀಚರ್ಸ್ ಕಾಲನಿಯಲ್ಲಿರುವ ಆತನ ಮನೆಗೆ ಡ್ರಾಪ್ ಮಾಡಿ ತಿಪ್ಪಿನಘಟ್ಟಮ್ಮನ ದೇವಸ್ಥಾನದ ಸಮೀಪವಿರುವ ಒಂದು ಅಂಗಡಿಯ ಹತ್ತಿರ ನಿಲ್ಲಿಸಿ, ತನ್ನ ಕೆಂಪು ಬಣ್ಣದ ಕಾರಿನಿಂದ ಇಳಿದು ಹೋಗಿ ಒಂದು ಪ್ಯಾಕ್ ಸಿಗರೇಟ್ ಕೊಡಿ ಎಂದ ಜಯಂತ. ಜೀನ್ಸ್ ಮತ್ತು ಕಪ್ಪು ಕುರ್ತಾವನ್ನು ಧರಿಸಿದ್ದನು. ಎತ್ತರವಾಗಿದ್ದ ಅವನು ಮುಖದಲ್ಲಿ ಕುರುಚಲು ಗಡ್ಡವನ್ನು ಬಿಟ್ಟಿದ್ದ. ಸೈಡಿಗೆ ಕ್ರಾಪ್ ತೆಗಿದಿದ್ದ. ಕಾಲಿಗೆ ಸೊಲಾಪುರ ಚಪ್ಪಲಿ ಧರಿಸಿದ್ದ. ‘ಸರ್ ಪ್ಯಾಕಿಲ್ಲ ಲಾಸ್ಟ್ ಒಂದೇ ಒಂದು ಇದೆ’ ಎಂದ ಅಂಗಡಿಯ ಮಾಲಿಕ. ‘ಸರಿ ಕೊಡಿ’ ಎಂದು ಇಸಕೊಂಡು ಸಿಗರೇಟನ್ನು ಬಾಯಿಗೆ ಇಟ್ಟು ಲೈಟರ್ ಹೊತ್ತಿಸಿ ಅಂಗಡಿಯ ಮೆಟ್ಟಿಲನ್ನು ಇಳಿಯುತ್ತಿದ್ದ. ಅದೇ ಸಮಯದಲ್ಲಿ ತೆಳುಗುಲಾಬಿ ಬಣ್ಣದ ಲಿನೆನ್ ಸೀರೆ, ಆಕಾಶ ನೀಲಿಯ ರವಿಕೆಯನ್ನು ತೊಟ್ಟ ಸುಮಾರು ಮುವತ್ತೆರಡು ಮುವತ್ತಮೂರು ವರ್ಷದ ಹೆಂಗಸು ಅಂಗಡಿಯ ಮೆಟ್ಟಿಲನ್ನು ಹತ್ತಿ, ‘ವಿಸ್ಪರ್ ಕೊಡಿ’ ಎಂದಳು. ಅವನು ಅಂಗಡಿಯ ಮೆಟ್ಟಿಲನ್ನು ಇಳಿಯುವಾಗ ಅವಳ ಕಣ್ಣನ್ನು ದಿಟ್ಟಿಸಿದ ತನ್ನ ತುದಿಯಂಚಿನ ನೋಟದಲ್ಲಿ. ಕ್ಷಣ ತನ್ನ ತಲೆಯನ್ನು ಕೊಡವಿಕೊಂಡ. ‘ಅರೆ ಈ ಕಣ್ಣುಗಳನ್ನು ಎಲ್ಲೋ ನೋಡಿದ ಹಾಗೆ ಅನ್ನಿಸುತ್ತಲ್ಲ, ಎಲ್ಲಿ?! ತುಂಬಾ ಪರಚಿತ ಅನ್ನಿಸುತ್ತಿದೆ!’ ಎಂದು ಅವನ ಮನಸ್ಸಿಗೆ ಅನ್ನಿಸಿತು. ಕಣ್ಣುಗಳು ಹೊಳೆಯುತ್ತಿದ್ದವು. ಅವನಿಗೆ ಆ ಜೋಡಿ ಕಣ್ಣುಗಳು-ನೋಡಿದ್ದು ಅರೆ ಕ್ಷಣವಾಗಿದ್ದರೂ-ಮನಸ್ಸಿನ ಆಕಾಶದ ಮೂಲೆಯಲ್ಲಿ ಎಲ್ಲೋ ಸದಾ ಮಿನುಗುತ್ತಿದ್ದವೆನೋ ಆದರೆ ಈ ಕ್ಷಣದಲ್ಲಿ ಧಗ್ಗೆನೆ ಮಿಂಚುತ್ತಿವೆ ಎಂದು ಅನ್ನಿಸುವಂತೆ ಮಾಡಿದವು. ‘ನೋಟದಲ್ಲಿ ಏನೋ ಒಂಥರ ಅಲೌಕಿಕ ಆಕರ್ಷಣೆ. ನಡಿಗೆಯಲ್ಲಿ ಎಂಥ ಆತ್ಮವಿಶ್ವಾಸ’ ಎಂದುಕೊಂಡ. ತಿರುಗಿದ. ಅವಳ ಮುಖ ಕಾಣಲಿಲ್ಲ. ಆ ಕಡೆ ತಿರುಗಿ, ಅಂಗಡಿಯವನಿಗೆ ತನ್ನ ಬ್ಯಾಗಿನಿಂದ ಹಣವನ್ನು ಕೊಡುತ್ತಿದ್ದಳು. ರವಿಕೆಯಲ್ಲಿ ಚಿಟ್ಟೆಗಳು. ಅವು ನಡುಬೆನ್ನಿನಿಂದ ಬಲಭಾಗದ ತೋಳಿನ ತನಕ ಒಂದರ ಹಿಂದೆ ಒಂದು ಒಂಬತ್ತು ಬಿಳಿ ಚಿಟ್ಟೆಗಳು. ಹೆಣೆಯಲ್ಪಟ್ಟಿದ್ದರೂ ಹಾರುತ್ತಿವೆಯೇನೋ ಎಂಬಂತೆ ಕಾಣುತ್ತಿದ್ದವು. ಕಾಲಲ್ಲಿ ಚರ್ಮದ ಚಪ್ಪಲಿಗಳು. ಮೇಲಿನಿಂದ ಕೆಳಗಿನ ತನಕ ಮೈಯಿ ನೇರವಾಗಿತ್ತು. ಅವಳ ಹಾವ-ಭಾವದಲ್ಲಿ ಆತ್ಮವಿಶ್ವಾಸ, ಧೈರ್ಯ ಹಾಗೂ ಮುಕ್ತತೆ ವ್ಯಕ್ತವಾಗುತ್ತಿತ್ತು. ಇದನ್ನು ಜಯಂತ ಕ್ಷಣಾರ್ಧದಲ್ಲಿ ಗುರುತಿಸಿದ್ದ ಅವಳು ಅಂಗಡಿಯ ಮೆಟ್ಟಿಲುಗಳನ್ನು ಹತ್ತಿ ಬರುವಾಗ. ‘ಯಾರಪ್ಪ ಇದು ಇಷ್ಟೊಂದು ಯೌವ್ವನವನ್ನು ಚಿಮ್ಮುತ್ತಿದ್ದಾಳೆ’ ಎಂದು ಕೊಂಡ. ಕೂದಲನ್ನು ಇಡೀಯಾಗಿ ಸುತ್ತಿ, ಅದನ್ನು ತುದಿಮೊದಲಿಲ್ಲವೆಂಬಂತೆ ಕಟ್ಟಿ, ಅದಕ್ಕೆ ಪೆನ್ನಿನಾಕಾರದ ಮರದ ಕಡ್ಡಿಯನ್ನು ಅಡ್ಡ ಸಿಕ್ಕಿಸಿಕೊಂಡಿದ್ದಳು. ಮಧ್ಯಾಹ್ನ ಮೂರರ ಬಿಸಿಲು ತನ್ನ ಖದರನ್ನು ಕಳೆದು ಕೊಂಡಿದ್ದರೂ ಅವಳ ರೇಷ್ಮೆಯಂತಹ ಕೂದಲಲ್ಲಿ ಜಾರುಬಂಡಿಯಾಡುತ್ತಿದ್ದವು. ಕಡ್ಡಿಯ ತುದಿಯಲ್ಲಿ ಬೆಳ್ಳಿಕಟ್ಟು ಇದ್ದು, ಅದರಲ್ಲಿ ಒಂದು ಮರದ ಬಣ್ಣಬಣ್ಣದ ಸಣ್ಣ ನವಿಲು ಜೋಕಾಲಿ ಆಡುವಂತೆ ನೇತಾಡುತ್ತಿತ್ತು. ಹಿಂಭಾಗದ ಕತ್ತಿನ ನಡುವೆ ಸೂರ್ಯ ಚಂದ್ರರ ಸಂಕೇತಿಸುವ ವರ್ತುಲದ ಅಚ್ಚೆ. ಒಮ್ಮೊಮ್ಮೆ ಮನುಷ್ಯನ ಹೊರಗಿನ ರೂಪಗಳು, ಹಾವಭಾವಗಳು ಆಂತರ್ಯದ ಪ್ರತಿಬಿಂಬಗಳು; ಒಳಗಿನದನ್ನು ಹೊರಗಿನದು ಯಾವುದಾದರೂ ರೀತಿಯಲ್ಲಿ ವ್ಯಕ್ತಮಾಡುತ್ತದೆ ಎನ್ನುವಂತಹ ಲೋಕದ ಮಾತುಗಳು ಅವನ ಯೋಚನೆಗೆ ಸಿಕ್ಕಿ ಹರಿದಾಡುತ್ತಿದ್ದವು. ಯಾಂಗ್ ಯಿನ್ ವರ್ತುಲದ ಅರ್ಥಗಳು ಅವನ ಮನಸ್ಸಿನಲ್ಲಿ ಬೆಟ್ಟದ ತುದಿಯಿಂದ ಸೋಸಿಕೊಂಡು ಹರಿವ ತಣ್ಣೀರದೋಣಿಯ ನೀರಿನಂತೆ ಹರಿದು ಹೋದವು- ಚಂದಿರನ ತಂಪು, ಹೊಳಪು; ಸೂರ್ಯನ ಬೆಂಕಿ, ಪ್ರಖರತೆ; ರಾತ್ರಿಯ ಮೌನ; ಹಗಲಿನ ಮಾತು. ಆ ಅರ್ಧ ಕಪ್ಪು; ಅರ್ಧ ಬಿಳಿ ವರ್ತುಲ ಅವಳ ಸೌಂದರ್ಯಕ್ಕೆ ಇನ್ನಷ್ಟು ಮೆರಗನ್ನು ಕೊಡುತ್ತಿತ್ತು. ವಿಸ್ಪರ್‍ಅನ್ನು ತನ್ನ ಬ್ಯಾಗಲ್ಲಿಇಟ್ಟುಕೊಂಡು, ತಿರುಗಿ, ಮೆಟ್ಟಿಲನ್ನು ಇಳಿಯ ತೊಡಗಿದಳು. ‘ಅರೆ! ಲಚ್ಚಿ! ಇವಳು. ಇಲ್ಲಿ ಅದು ಹೇಗೆ. ಎಂತಹ ಕಾಕತಾಳೀಯ!’ ಎಂದುಕೊಂಡವನು ಅವಳ ಮುಖವನ್ನು ನೋಡಿದ. ಅವಳ ಕಣ್ಣರೆಪ್ಪೆಗಳು ನೆನಪುಗಳನ್ನು ಎಕ್ಕದ ಕಾಯಿ ಬಿರಿದು ಬೀಜಗಳು ಗಾಳಿಗೆ ಹಾರುವಂತೆ ಸಡನ್ನಾಗಿ ಚಿಮ್ಮಿದವು.

‘ಲಚ್ಚಿ ಅದನ್ನ ತೋರ್ಸೆ’ ಎಂದು ರೀಸಸ್‍ನ ಬಿಡುವಿನ ಅವಧಿಯಲ್ಲಿ ಜಯಂತ ಕೇಳಿದ್ದ ಪ್ರಶ್ನೆಗೆ ಭಯದ ಜೊತೆಗೆ ನಾಚಿಕೆ ಪಟ್ಟುಕೊಂಡು ಹುಡುಗಿಯರ ನಡುವೆ ಕುಳಿತಿದ್ದ ಲಕ್ಷ್ಮಿ, ಮೇಷ್ಟ್ರು ನದಿಗಳ ಹೆಸರುಗಳ ಉಕ್ತಲೇಖನ ಬರೆಸುವಾಗ ಒಂದು ಕ್ಷಣ ಜಯಂತನ ಕಡೆ ನೋಡಿದಳು. ಅವಳು ಹಾಗೆ ನೋಡಿದಾಗ ಅವಳ ಎದೆ ಈಗಾಗಲೇ ಜೋರಾಗಿ ಬಡಿದುಕೊಳ್ಳುತ್ತಿದ್ದು ಮತ್ತಷ್ಟು ತನ್ನ ವೇಗವನ್ನು ಹೆಚ್ಚಿಸಿಕೊಂಡಿತು. ಮೇಷ್ಟ್ರು ನದಿಗಳ ಹೆಸರುಗಳ ಉಕ್ತಲೇಖನ ಬರೆಸುವ ನಡುವೆಯೇ ಒಮ್ಮೆ ಇವಳ ಕಡೆ ಕಣ್ಣನ್ನು ಹಾಯಿಸಿದರು. ಅವಳು ಕಸಿವಿಸಿಯನ್ನು ಅನುಭವಿಸುತ್ತಿದ್ದುದು ಗೊತ್ತಾಗುವಂತಿತ್ತು. ಹಣೆಯಲ್ಲಿ ಬೆವರು. ವಿಚಿತ್ರ ವರ್ತನೆ. ‘ಲಕ್ಷ್ಮಿ ಯಾಕೆ ಒಂಥರ ಇದೀಯಾ, ಜ್ವರಬಂದಿದಾವಾ , ಹೊಟ್ಟೆ ನೋವಾ , ಮನೆಗೆ ಹೋಗ್ತೀಯಾ?’ ಎಂದು ಕೇಳಿದರು. ‘ಹ್ಞೂ ಸಾ’ ಅಂದಳು. ‘ಯಾಕೋ ಒಂಥರಾ ಆಗ್ತೈತೆ ಸಾ’ ಎಂದಳು. ಮೇಷ್ಟ್ರು, ಅವಳ ಪಕ್ಕ ಕುಳಿತುಕೊಂಡಿದ್ದ ರಾಧಳನ್ನು ಎಬ್ಬಿಸಿ, ಅವಳನ್ನು ಅವಳ ಜೊತೆ ಮನೆಗೆ ಕಳುಹಿಸಿದರು. ಉಳಿದ ಹುಡುಗರು ಹುಡುಗಿಯರು ಅರ್ಥವಾಗದೆ ಅವರು ಹೊರಗಡೆ ಹೋಗುತ್ತಿದ್ದುದನ್ನೇ ನೋಡುತ್ತ ಕುಳಿತರು. ಜಯಂತನು ಹೆದರಿಕೊಂಡಿದ್ದ. ಅವನ ಎದೆ ಬಡಿದು ಕೊಳ್ಳುತ್ತಿತ್ತು. ಆದರೆ ಅವನ ಹಣೆಯ ಮೇಲೆ ಬೆವರು ಇರಲಿಲ್ಲ. ಅವಳು ಸೀದ ಮನೆಗೆ ಹೋದವಳು ಅವಳ ಅಪ್ಪ ಅಮ್ಮನಿಗೆ ಹೇಳಿದ್ರೆ ಏನಪ್ಪ ಮಾಡೋದು ಎಂದು ಒಳಗೊಳಗೇ ದಿಗಿಲುಗೊಂಡ. ಅವರು ಬಂದು ಈ ಮೇಷ್ಟ್ರಿಗೆ ಹೇಳಿದರೆ ಏನಪ್ಪ ಮಾಡೋದು ನನ್ನ ಕತೆ ಮುಗಿತು ಎಂದು ಮತ್ತಷ್ಟು ಭಯಭೀತನಾದ. ತನ್ನ ಆತಂಕವನ್ನೆಲ್ಲ ಹೊರಗಡೆ ತೋರಿಸಿಕೊಳ್ಳದೆ ಕ್ಲಾಸು ಮುಗಿಯುವ ತನಕ ಒಳಗಡೆಗೇ ಅದುಮಿಕೊಂಡು ಸಂಜೆ ನಾಲಕ್ಕು ಗಂಟೆಗೆ ಕೊನೆಯ ಬೆಲ್ಲ್ ಹೊಡೆಯುವ ತನಕ ಕಾದು ಆಮೇಲೆ ಮನೆಯ ಕಡೆ ಕ್ಲಾಸು ಬಿಟ್ಟ ತಕ್ಷಣಕ್ಕೆ ಓಡಿದ. ಅವನ ಸ್ನೇಹಿತರು ‘ಲೋ ಜಯ ಜಯ ತಡಿಯೋ ನಾವು ಬತ್ತೀವಿ’ ಎಂದು ಕೂಗಿದರೂ ಅವರ ಮಾತುಗಳನ್ನು ಕೇಳಿಸಿಕೊಳ್ಳದೆ ಓಡಿದ. ಅವೊತ್ತು ಕಾರ್ತೀಕ ಶನಿವಾರವಾಗಿದ್ದುದರಿಂದ ಊರಿನ ಮಕ್ಕಳು ರಾತ್ರಿ ಹನುಮಂತರಾಯನ ದೇವಸ್ಥಾನದ ಬಳಿ ಸೇರಿ ಕಾರ್ತೀಕದ ಬೆಳಕಲ್ಲಿ ಗುಲ್ಟರಿ, ಜೂಟಾಟ, ಮತ್ತಿತರೆ ಆಟಗಳನ್ನು ಆಡುವವರಿದ್ದರು. ಮನೆಯಲ್ಲಿ ಅವನ ಅಮ್ಮ ದುಂಡನೇ ಬದನೇಕಾಯಿಗಳನ್ನು ಒಂದು ಪುಟ್ಟ ಬೇಸಿನ್‍ನಲ್ಲಿ ನೀರು ಹಾಕಿಕೊಂಡು ಅದರಲ್ಲಿ ಇವುಗಳನ್ನು ಮುಳುಗಿಸಿಕೊಂಡು ಒಂದೊಂದನ್ನೇ ಹುಳವಿದೆಯೋ ಇಲ್ಲವೋ ಎನ್ನುವುದನ್ನು ಪರೀಕ್ಷಿಸಿ ರಾತ್ರಿ ಗೋಧಿ ರೊಟ್ಟಿಗೆ ಎಣ್ಣೆಗಾಯಿಮಾಡಲು ಕೊಯ್ಯುತ್ತಿದ್ದಳು. ಸೂರ್ಯ ಮುಳುಗಲು ತಯಾರಿನಡೆಸುತ್ತಿದ್ದು, ಜಯಂತನ ಅಮ್ಮ ಕಾಂತಮ್ಮ ಎಲೆಅಡಿಕೆ ಮೆಲ್ಲುತ್ತಿದ್ದುದರಿಂದ ಅವಳ ತುಟಿಗಂಟಿದ್ದ ಕೆಂಪು ಮತ್ತು ನೆತ್ತಿಯ ಮೇಲೆ ತನ್ನದೇ ಝಳಕ್ಕೆ ಕರಗಿದರೂ ಅಲ್ಲೇ ಅಲ್ಪಸ್ವಲ್ಪ ಅಂಟಕೊಂಡಿದ್ದ ಅವಳ ಹಣೆಯ ಕುಂಕುಮದ ರಂಗನ್ನು ಮೆಲ್ಲಗೆ ಎಳೆದುಕೊಳ್ಳುತ್ತಿತ್ತು. ‘ಯಾಕಲ ನಿಧಾನಕ್ಕೆ ಬರೋಕೆ ಆಗಲ್ಲೇ, ಎಲ್ಲನ ಎಡವಿ ಬಿದ್ದರಾತೆ ಮಾಡಿದರಾತೆ’ ಎಂದು ಏರು ಧ್ವನಿಯಲ್ಲಿ ಹೇಳಿದವಳು ಸಡನ್ನಾಗಿ ಧ್ವನಿಯನ್ನು ಇಳಿಸಿ, ‘ಲೇ ಮಗ ಕೈ ಕಾಲು ಮಕ ತೊಳೆದುಕೊಂಡು ಶಾಸ್ತ್ರಿಗುಂಡಪ್ಪರ ಮಂಥಕ್ಕೆ ಹೋಗಬತ್ತೀಯೇನ? ಸಂಜಿಗೆ ಮಗುನ್ನ ಕಳ್ಸು ರೇಷ್ಮೆ ಕಳೆಯ ಕೂಲಿಯನ್ನು ಕೊಡುತೀನಿ’ ಅಂಥ ಹೇಳಿದ್ದರು ಎಂದು ಹೇಳಿದಳು. ಇದನ್ನು ಕೇಳಿದ್ದೇ ತಡ ಸ್ಕೂಲಲ್ಲಿ ಬಡಿದುಕೊಳ್ಳುತ್ತಿದ್ದ ಎದೆ ಅದಕ್ಕಿಂತಲೂ ಜಾಸ್ತಿ ಜೋರಾಗಿ ಬಡಿದುಕೊಳ್ಳೋಕೆ ಸ್ಟಾರ್ಟಾಯಿತು. ಮನಸ್ಸಿನಲ್ಲಿ ಇದೊಳ್ಳೇ ಪೀಕಲಾಟಕ್ಕೆ ಬಂತಲ್ಲಪ ಎಂದುಕೊಂಡ. ಅವನಿಗೆ ನಿನ್ನೆ ರಾತ್ರಿ ನಿದ್ರೆಯಲ್ಲಿ ಬಿದ್ದ ಕನಸು ತಟ್ಟನೆ ಬಿಚ್ಚಿಕೊಂಡಿತು: ಆಕಾಶ. ಅದು ಒಂದುಗೋಡೆಯಾಗಿದೆ. ಅದರ ಮೇಲೆಲ್ಲ ಹಾವಿನ ರೂಪದ ಹಾವಲ್ಲದ ವಿಚತ್ರ ಜೀವಿಗಳು ನೇತುಬಿದ್ದಿದ್ದಾವೆ. ಅವುಗಳ ನಡುವೆ ಉದ್ದನೆಯ ಮನುಷ್ಯರು. ಅವರು ದೈತ್ಯಾಕಾರದಲ್ಲಿದ್ದಾರೆ. ಜಿರಾಫೆಗಳಷ್ಟು ಎತ್ತರದ ಸಿಂಹಗಳ ಮೇಲೆ ಕುಳಿತುಕೊಂಡು ಕೈಯಲ್ಲಿ ಆಯುಧಗಳನ್ನು ಹಿಡಿದುಕೊಂಡು ಒಂದೇ ಸಮನೆ ಓಡುತ್ತಿದ್ದಾರೆ. ಅವರು ಓಡುವಾಗ ಅವರಿಗೆ ರಬ್ಬರಿನಂತೆ ನೇತಾಡುತ್ತಿದ್ದ ಹಾವಿನಂತಹ ವಿಚಿತ್ರ ಜೀವಿಗಳು ಅವರಿಗೆ ತಗುಲಿ ಆಚೆ ಈಚೆ ಬೆಂಡಿನ ಥರ ಅಲುಗಾಡುತ್ತಿವೆ. ಹಗಲೂ ಅಲ್ಲದ ರಾತ್ರಿಯೂ ಅಲ್ಲದ ಸಮಯ. ಒಂಥರ ಮಂದ ಬೆಳಕು. ಬೆಳದಿಂಗಳ ಚಂದ್ರ ಸೂರ್ಯನನ್ನು ನುಂಗಿ ಒಂದು ಕಡೆಯಿಂದ ಸುಟ್ಟು ಬೂದಿಯಾಗಿ ಬೀಳುತ್ತಿದೆ. ಬೂದಿ ಕೆಳೆಗೆ ನೆಲವೇ ಇಲ್ಲದ ಸರೋವರದ ಮೇಲೆ ಉದುರುತ್ತಿದೆ. ಸರೋವರದಲ್ಲಿ ಎರಡು ಬಾತುಕೋಳಿಗಳು. ಅಚ್ಚ ಬಿಳಿ ಮತ್ತು ಕಡುಗೆಂಪು ಬಣ್ಣದವು. ಬಿಳಿಯ ಬಣ್ಣದ ಬಾತುಕೋಳಿ ಹಾಲಾಗಿ ಕರಗುತ್ತಿದೆ. ಕೆಂಪುಬಣ್ಣದ ಬಾತುಕೋಳಿ ರಕ್ತವಾಗಿ ಕರಗುತ್ತಿದೆ. ಇವುಗಳನ್ನು ಒಂದು ಪುಟ್ಟ ಬಾಲಕ ನೋಡುತ್ತ ಕುಳಿತಿದ್ದಾನೆ ದಡದಲ್ಲಿ. ದಡಕ್ಕೂ ನೆಲವಿಲ್ಲ. ಹಾವಿನಂತಹ ಜೀವಿಗಳು ಆಕಾಶದಿಂದ ಇಳಿಬಿದ್ದು ಅವನನ್ನು ತಮ್ಮ ಸೊಂಡಿಲಂತಹ ಬಾಯಿಯಿಂದ ಎತ್ತಿಕೊಳ್ಳುತ್ತಿವೆ. ‘ಅಮ್ಮ ಅಮ್ಮ ಹಿಡ್ಕೋ ಹಿಡ್ಕೋ ನೀರು ನೀರು’ ಎಂದು ಕೂಗುತ್ತಿದ್ದಾನೆ. ಈ ಕನಸು ಅವನನ್ನು ಬೆಚ್ಚಿ ಬೀಳಿಸಿ ನಿದ್ರೆಯಿಂದ ಎಬ್ಬಿಸಿತು. ಶಾಸ್ತ್ರಿಗುಂಡಪ್ಪ ಕನಸಿನಲ್ಲಿ ಕಂಡ ಆ ಜೀವಿಗಳ ಥರ ಕಾಣತೊಡಗಿದ. ಇಷ್ಟೊತ್ತಿಗೆ ಲಕ್ಷ್ಮಿ ಅವಳ ತಾತ ಶಾಸ್ತ್ರಗುಂಡಪ್ಪನಿಗೆ ಹೇಳಿರ್ತಾಳೆ. ಅವಳ ಅಪ್ಪ ಮಲ್ಲಿಕಣ್ಣನಿಗೆ ಹೇಳಿರ್ತಾಳೆ. ಆಮೇಲೆ ಇದು ಅವರ ಮನೆಯವರಿಗೆಲ್ಲ ಗೊತ್ತಾಗಿರುತ್ತೆ. ಶಾಸ್ತ್ರಿಗುಂಡಪ್ಪ ಇದನ್ನೆಲ್ಲ ಕೇಳಿ ನನ್ನನ್ನು ಕಟ್ಟಿಹಾಕಲು ಹಗ್ಗವನ್ನು ಹಿಡಿದುಕೊಂಡು ಬರುವನು ಎಂದು ಹೆದರಿಕೊಂಡ. ‘ಹೋಗಮ್ಮ ನಾನು ಹೋಗಲ್ಲ’ ಎಂದ. ‘ಹೇಳಿದ ಕೆಲಸ ಒಂದಾದ್ರು ಮಾಡ್ತೀಯೇನಲ!’ ಎಂದು ಒಂದು ಬಿರುಸಾದ ಮಾತನ್ನು ಹೊಗೆದು ಮತ್ತೊಂದಿಷ್ಟು ಬೈಗುಳದ ಮಾತುಗಳನ್ನು ಹುಡುಕಾಡುತ್ತಿರುವಾಗ, ‘ಕಾಂತಮ್ಮ ಕಾಂತಮ್ಮ ತಗೋ ಕೂಲಿ ದುಡ್ಡ, ಕಣದ ಕಡೆ ಹೋಗ್ತಿದ್ನಾ, ಹಂಗೆ ಕೊಟ್ಟೋಗಣ ಅಂತ ಬಂದೆ’ ಎಂದು ಹಣೆಯಲ್ಲಿ ವಿಭೂತಿ ಕಟ್ಟು, ಕಿವಿಯಲ್ಲಿ ಹೂವು, ಅಗಲವಾದ ಮುಖದ, ಅಗಲವಾದ ಕಣ್ಣುಗಳ ಮೊರದಗಲದ ಕಿವಿಗಳ ಎತ್ತರದ ಆಳಾದ ಶಾಸ್ತ್ರಿಗುಂಡಪ್ಪ ಎಂದ. ಬಿಳಿ ಪಂಚೆ ಬಿಳಿ ಅಂಗಿ ತೊಟ್ಟಿದ್ದ ಅವರಿಗೆ ಸುಮಾರು ಎಪ್ಪತ್ತು ಎಪ್ಪತ್ತೈದು ವರ್ಷಗಳಾಗಿದ್ದವು. ಆ ಮನುಷ್ಯ ಮಾತಾಡಲು ಬಾಯಿ ತೆರೆದಾಗ ಅವನ ಮೇಲ್ಭಾಗದ ಮುಂದಿನ ಎರಡು ಅಗಲ ಹಲ್ಲುಗಳ ಮೇಲೆ ಒಂದು ರೆವೆ ಕಾಳಿನಷ್ಟಿನ ಎರಡು ಬಂಗಾರದ ಚುಕ್ಕಿಗಳು ಮಿಂಚುತ್ತಿದ್ದವು. ಚಿಕ್ಕದಾಗಿ ಹಲ್ಲುಗಳನ್ನು ಕೊರೆಯಿಸಿಕೊಂಡು ಕೊರೆದ ಜಾಗಕ್ಕೆ ಬಂಗಾರವನ್ನು ತುಂಬಿಸಿಕೊಂಡಿದ್ದುದರಿಂದ ಮಿಂಚಿನ ಹೊಳಪು ಅವನು ಮಾತಾಡುವಾಗೆಲ್ಲ ಕಾಣುತ್ತಿತ್ತು. ಅಷ್ಟೊಂದು ವಯಸ್ಸಾಗಿದ್ದರೂ ಆ ಮುದುಕನಿಗೆ ಹಲ್ಲುಗಳು ಗಟ್ಟಿಮುಟ್ಟಾಗಿದ್ದವು. ‘ಲೋ ಪಾಪ ರಾತ್ರಿ ಮನೆತಾಕೆ ಬಾರೋ ಲಕ್ಷ್ಮಿಜೊತೆಗೆ ನಿನಗೂ ಓದಿಕೊಡ್ತೀನಿ’ ಎಂದ ಆತನ ಮಾತುಗಳು ಅವನ ಎದೆಯ ಡಬಡಬ ಸದ್ದನ್ನು ನಾರ್ಮಲ್ ಸ್ಥಿತಿಗೆ ತಂದವು. ಇವನ ಮನಸ್ಸಿನಲ್ಲಿ ಏನೇನೋ ಓಡುತ್ತಿದ್ದುದೆಲ್ಲ ಮಾಯವಾಯಿತು. ಹಂಗಂದ್ರೆ ಅವಳು ಮನೇಲಿ ಹೇಳಿಲ್ಲ. ಸದ್ಯ ಬಚಾವ್ ಅಂದುಕೊಂಡ. ‘ಇವೊತ್ತು ಆಗಲ್ಲ ಹೋಗಜ್ಜ ಬರಲ್ಲ, ಹನುಮಂತರಾಯನ ಗುಡಿತಕೆ ಹೋಗಬೇಕು ಕಾರ್ತೀಕ ಶನಿವಾರ’ ಎಂದ. ‘ಹುಡುಗ್ರು ಜೊತೆಗೆ ಕುಣಿಯಾಕೆ ಇವನು’ ಎಂದಳು ಕಾಂತಮ್ಮ. ಅವನ ಸ್ಕೂಲು ಬ್ಯಾಗು ಮೂಲೆಯಲ್ಲಿ ಬಿದ್ದು ಕಸಪೊರಕೆಯನ್ನು ಅಪ್ಪಿಕೊಂಡಿತ್ತು. ಒಳಗಡೆ ಹೋದವನು ಕೈಕಾಲು ಮುಖವನ್ನು ತೊಳೆದುಕೊಂಡವನೇ ಸೀದ ನಡ ಊರಿನ ದಾರಿಯನ್ನ ಹಿಡಿದು ಓಡಿದ. ಓಡುವಾಗ ಶೆಟ್ಟರ ಅಂಗಡಿಯ ಹತ್ತಿರ ನಿಂತ. ನಿಂತುಕೊಂಡು, ಯಪ್ಪಾ ಸದ್ಯ ಗೆದ್ದೆ, ಅವಳು ಹೇಳಿಲ್ಲ. ಎಂದುಕೊಂಡ.

ನಿತ್ಯದಂತೆ ಅವೊತ್ತು ಅವನ ಅಮ್ಮನ ಪಕ್ಕದಲ್ಲಿ ಮಲಗಿದ್ದ ಅವನ ತಲೆಯ ತುಂಬೆಲ್ಲಾ ಮತ್ತೆ ನಾಳೆ ಸಿಕ್ತಾಳೆ, ಕೇಳಿಯೇ ಬಿಡಬೇಕು ಎನ್ನುವುದು ತುಂಬಿಹೋಗಿತ್ತು. ಮತ್ತಷ್ಟು ಹುಮ್ಮಸ್ಸುಗೊಂಡ. ‘ಲಚ್ಚಿ ಅದನ್ನು ತೋರ್ಸೆ’ ಎಂದು ಹೇಳಿಕೊಂಡ ತನಗೆ ತಾನೆ. ‘ಯಾತಲ ಹುಡುಗ ತೋರ್ಸಲ ಅಂತೀದಿಯ’ ಎಂದು ಬೈದು, ‘ಸುಮ್ಮನೆ ಮಲಕ್ಕಳ ಪಾಪ’ ಎಂದು ಅವನ ಕೂದಲಲ್ಲಿ ತನ್ನ ಬೆರಳುಗಳನ್ನು ಆಡಿಸತೊಡಗಿದಳು. ಒಂದು ಸ್ವಲ್ಪಹೊತ್ತಾದ ಮೇಲೆ ‘ಅಮ್ಮೋ ಅಮ್ಮೋ’ ಎಂದ. ಇದಕ್ಕೆ ಅವನ ಅಮ್ಮನ ಬದಲಿಗೆ ಅವನ ಅಪ್ಪ ‘ಯಾಕ್ಲ ಹೊರಗಡೆ ಹೋಗಬೇಕೇನೋ?’ ಎಂದು ಕೇಳಿದ ಮತ್ತೊಂದು ಬದಿಯಲ್ಲಿ ಮಲಗಿದ್ದವನು ಎಚ್ಚರಗೊಂಡು. ‘ಹೊರಕೋಗಬೇಕೇನ್ಲ ಉಚ್ಚಿ ಹೊಯ್ಯಕೆ?’ ಎಂದು ಮತ್ತೊಂದು ಸಲ ಕೇಳಿದ. ‘ಹ್ಞೂ’ ಎಂದ. ಅವನು ನಿಜಕ್ಕೂ ಹೊರಗಡೆ ಹೋಗಬೇಕೆಂದು ಬಯಸಿರಲಿಲ್ಲ. ಬದಲಿಗೆ ಅವನ ಅಮ್ಮನ ಹತ್ತಿರ ಅಮ್ಮ ನಾನು ಹೆಂಗೆ ಬಂದೆ, ನಾಕನೇ ಕ್ಲಾಸಿನ ಶ್ರೀಧರ ಹೇಳ್ತಿದ್ದ ನಮ್ಮನ್ನು ಮಣ್ಣಗೆ ಮಾಡ್ತಾರಂಥೆ ಹೌದೇನಮ್ಮ ಎಂದು ಕೇಳಬೇಕೆಂದಿದ್ದ. ಮನುಷ್ಯರನ್ನ ಮೊದಲು ಮಣ್ಣಾಗೆ ಮಾಡಿ ಆಮ್ಯಾಕೆ ಅವುಕ್ಕೆ ಮಾತ ಬರುಸ್ತಾರೇನು ಎಂದು ಕೇಳಬೇಕೆಂದಿದ್ದ. ಈಗ ಅಪ್ಪನಿಗೆ ಹ್ಞೂ ಎಂದು ಹೇಳಿದ್ದುದರಿಂದ ಬೈಗುಳವನ್ನು ತಪ್ಪಿಸಿಕೊಳ್ಳುವ ಸಲುವಾಗಿ ಅಪ್ಪನ ಜೊತೆ ಹೊರಗಡೆ ಹೋದ. ಮನೆಯ ಮುಂದಿನ ರಸ್ತೆಗೆ ಹೊಂದಿಕೊಂಡಿದ್ದಂತಹ ಹರಿಯುವ ಚರಂಡಿಯ ಬಳಿ ಹೋಗಿ ನಿಂತುಕೊಂಡ. ಎಷ್ಟೊತ್ತಾದರೂ ಮೂತ್ರ ಬರಲಿಲ್ಲ. ತಿಣುಕುತ್ತಿದ್ದ. ‘ಯಾಕ್ಲ ಏನ್ಮಾಡ್ತಿದಿಯಾ? ಮಾಡ್ದೇನೋ?’ ಎಂದು ಅವನ ಅಪ್ಪ ಕೇಳಿದ್ದಕ್ಕೆ, ‘ಯಾಕ ಬತ್ತಿಲ್ಲ’ ಅಂದ. ‘ಏನು ಆಟ ಆಡ್ತಾ ಇದೀಯೇನು ನಿದ್ದೆಯೆಲ್ಲ ಕೆಡಿಸಿ?’ ಅಂತ ಬೈದ. ‘ಯಾಕ ಬತ್ತಿಲ್ಲ ನಾನೇನು ಮಾಡನ’ ಎಂದವನು ತಿಣುಕಿದ್ದಕ್ಕೆ ಬಂದ ಒಂದೇ ಒಂದು ಹನಿ ಮೂತ್ರವನ್ನು ಭೂಮಿತಾಯಿಗೆ ಚೆಲ್ಲಿ, ತನ್ನ ಅಮ್ಮನಿಗೆ ಕೇಳಬೇಕೆಂದಿದ್ದ ಪ್ರಶ್ನೆಯನ್ನು ಅಪ್ಪನಿಗೆ ಕೇಳಬೇಕೆಂದು ಕೊಂಡ. ಅಂದುಕೊಂಡವನು ‘ಅಪ್ಪ ಮಕ್ಕಳನ್ನ ಹೆಂಗೆ ಮಾಡ್ತಾರೆ’ ಎಂದ. ‘ಅಸಿಸಿ ಯಾಕ್ಲ? ಅದ್ಯಾಕ್ಲ ನಿನಗೆ ಈಗ? ಮುಚ್ಚಿಕೊಂಡು ನಡೆ’ ಎಂದ. ‘ಮಣ್ಣಾಗೆ ಮಾಡ್ತಾರಂತೆ ನಿಜನಾ? ಮತ್ತೆ ನಾನು ಮಾಡಿದರೆ ಆಗಲ್ಲ ನೀವೆಂಗೆ ಮಾಡಿದಿರಿ?’ ಎಂದು ಕೇಳಿದ ಮುಂದಿನ ಪ್ರಶ್ನೆಗೆ ಜಯಂತನ ಅಪ್ಪ ತಬ್ಬಿಬ್ಬಾದ. ‘ಈಗ ನಡೀಲ ಮಲಿಕ. ನಾಳಿಕ್ಕೆ ಹೇಳ್ತೀನಿ’ ಎಂದ. ಜಯಂತÀ ಮರುದಿನ ಬೆಳಗ್ಗೆ ಎದ್ದವನೇ ಈಚಲ ಮರದ ಕಡೆ ಹೊರಟ. ಅವನಿಗೆ ಆಶ್ಚರ್ಯವೆಂಬಂತೆ ಅಲ್ಲಿಗೆ ಆಗಲೇ ಲಕ್ಷ್ಮಿ ತನ್ನ ಸ್ನೇಹಿತೆಯರ ಜೊತೆ ಬಂದಿದ್ದಳು. ಅವರೆಲ್ಲರೂ ಸಾಲಾಗಿ ಕುಳಿತುಕೊಂಡಿದ್ದರು. ಇವನು ಬರುತ್ತಿದ್ದ ತಕ್ಷಣಕ್ಕೆ, ಲಂಗಗಳನ್ನು ಮುಚ್ಚಿಕೊಂಡರು. ಇವನು ಏರಿಯನ್ನು ಹತ್ತಿ ಕೆಳಗೆ ಇಳಿದು ಬಹಿರ್ದೆಸೆಯನ್ನು ಮುಗಿಸಿಕೊಂಡು ಮತ್ತೆ ಏರಿಯನ್ನು ಹತ್ತಿ ರಸ್ತೆಕಡೆ ಬಂದ. ಅಲ್ಲಿದ್ದ ಹುಡುಗಿಯರಲ್ಲಿ ಒಬ್ಬಳು, ‘ಇವೊತ್ತು ಎರಡನೇ ಕ್ಲಾಸಿನವರಿಗೆ ರಜ ಅಂತೆ. ಮೇಷ್ಟ್ರು ಮೀಟಿಂಗಿಗೆ ಹಿರಿಯೂರಿಗೆ ಹೋಗ್ತಾರಂತೆ ಎಂದಳು’. ‘ಹೇ ಹಂಗಾದ್ರೆ ಇವೊತ್ತು ಮರಕೋತಿ ಆಡೋನವ? ಹಂಗೆ ತೋಟದವರ ಹೊಲದಾಗೆ ದಾಳಿಂಬೆ ಕಿತ್ತಕಂಡು ಬರಕೆ ಹೋಗನ’ ಎಂದ. ‘ವೆಂಕಟೇಶ, ಸೀನ, ಗೋಪಿಯರನ್ನು ಕರಕಂಡು ಬತ್ತೀನಿ’ ಎಂದ. ಲಕ್ಷ್ಮಿ, ‘ಆಯ್ತುಕಣ್ರೆ ಹೋಗಣ’ ಎಂದು ತನ್ನ ಸ್ನೇಹಿತೆಯರಿಗೆ ಹೇಳಿದಳು. ‘ಹತ್ತು ಗಂಟೆ ಆರ್ ಪಿ ಜಿ ಟಿ ಬಸ್ಸು ಹೋಗುತ್ತಲ್ಲ ಅದು ಹೋದಮೇಲೆ ಎಲ್ಲರು ತೋಪಿನತಾಕೆ ಬಂದಿರಬೇಕು’ ಎಂದ ಜಯಂತ. ನೇರ ಮನೆಗೆ ಬಂದವನು ಬಹಿರ್ದೆಸೆ ಮಾಡಿದ್ದ ಅಂಡನ್ನು ತೊಳೆದುಕೊಂಡು, ಕೋಲ್ಗೇಟ್ ಡಬ್ಬಿಯನ್ನು ತೆಗೆದುಕೊಂಡು ಒಂದಿಷ್ಟು ಎಡಗೈಯಿಯ ಅಂಗೈಗೆ ಸುರುವಿಕೊಂಡು ಹಲ್ಲುಗಳನ್ನು ತಿಕ್ಕಿಕೊಂಡು, ಲೈಫ್ ಬಾಯಿ ಸೋಪನ್ನು ಹಾಕಿಕೊಂಡು ಮುಖವನ್ನು ಕೈ ಕಾಲುಗಳನ್ನು ತೊಳೆದುಕೊಂಡು ಬಂದ. ನಂತರ ಒಳ ಮನೆಯ ತುಂಬ ತನ್ನ ಒದ್ದೆಕಾಲುಗಳ ಹೆಜ್ಜೆಗಳನ್ನು ಮೂಡಿಸಿಕೊಂಡು ನೇರ ಅಡುಗೆ ಮನೆಗೆ ಹೋದ. ಒಲೆಯಲ್ಲಿ ಬೆಂಕಿ ಧಗಧಗ ಹುರಿಯುತ್ತಿತ್ತು. ಅದರ ಮೇಲೆ ಒಂದು ಪಾತ್ರೆ. ಕಾಂತಮ್ಮ, ‘ಪಾಪ ಕಾಲೆಲ್ಲ ಹೊರಗಡೆ ಹೊರೆಸಿಕೊಂಡು ಬರಕಿಲ್ಲೆನ್ಲ, ನೋಡು ನೆಲನೆಲ್ಲ ತೇವಮಾಡಿಕೊಂಡು ಬಂದಿದಿಯಾ’ ಅಂದಳು ಕಾಫಿಯನ್ನು ಸೋಸುತ್ತ. ‘ಅಮ್ಮ ಇವೊತ್ತು ಎರಡನೇ ಕ್ಲಾಸಿನವರಿಗೆ ಸ್ಕೂಲಿಲ್ವಂತೆ, ಜೋಸೆಫ್ ಮೇಷ್ಟ್ರು ಹಿರಿಯೂರಿಗೆ ಮೀಟಿಂಗಿಗೆ ಹೋಗ್ತಾರಂತೆ’ ಎಂದ. ಒಂದು ಕಪ್ಪಿನಲ್ಲಿ ಕಾಫಿಯನ್ನು ಹುಯ್ದು, ‘ಬೀರ್ನಾಗೆ ಒಂದು ಪೀಸ್ ಬ್ರೆಡ್ಡೈತೆ ಎದ್ಕೆಂಡು ತಿನ್ನು’ ಎಂದು ಹೇಳಿ, ‘ಮಧ್ಯಾಹ್ನಕ್ಕೆ ಎಲ್ಲಿಗೂ ಹೋಗಬ್ಯಾಡ. ಒಂದು ವಾರ ಆತು ಮೈಕೈ ತಿಕ್ಕಿ ತಲೆಗೆ ಸ್ನಾನ ಮಾಡಿಸಿ, ಇವೊತ್ತು ಮಾಡುಸ್ತೀನಿ. ಅಮ್ಯಾಕೆ ಕುಣಿಯಾಕೆ ಹೋಗಬೇಡ’ ಎಂದು ಬೈದಳು. ಕಾಫಿ, ಬ್ರೆಡ್ಡನ್ನು ಮುಗಿಸಿದವನೇ ಹೊರಗಡೆ ಓಡಿದ. ಅವನು ಹೊರಗಡೆ ಓಡುವಾಗ ಅವನ ಅಪ್ಪ ಎದುರಿಗೆ ಬಂದು ‘ನಿಧಾನಕ್ಕಲೆ ಪಾಪ’ ಎಂದ. ಒಂದು ಕ್ಷಣವೊತ್ತು ಮನೆಲಿ ಇರಲ್ಲ ಕುಣಿ ಕುಣಿ ಯಾವಾಗ್ಲು ಎಂದು ಗುನುಗಿಕೊಂಡು ಒಳ ನಡೆದ. ಜಯಂತ ತನ್ನ ಸ್ನೇಹಿತರನ್ನು ಕಂಡು ಅವರಿಗೆಲ್ಲ ಮರಕೋತಿ ಆಟವನ್ನು ಆಡಲು ಬರುವುದಕ್ಕೆ ಹೇಳಿದ. ಊಟ ಮಾಡಿದವನೇ ಆರ್ ಪಿ ಜಿ ಟಿ ಬಸ್ಸು ಹಾರನ್ನು ಆಗುವುದನ್ನೇ ಕಾಯುತ್ತಿದ್ದು, ಅದು ಹಾರನ್ನು ಮಾಡುತ್ತಿದ್ದ ಹಾಗೇನೆ ತನ್ನ ಸ್ನೇಹಿತರನ್ನೆಲ್ಲ ಒಟ್ಟುಗೂಡಿಸಿಕೊಂಡು ಮಾವಿನ ತೋಪಿನ ಕಡೆ ನಡೆದ. ಅಲ್ಲಿ ಲಕ್ಷ್ಮಿ ಮಾತ್ರ ಇದ್ದಳು. ಇವನ ಸ್ನೇಹಿತರು ‘ಲೋ ಜಯಂತು ನಾವೇ ಆಡೋದಾ ಅವರು ಯಾರೂ ಬಂದಿಲ್ಲ’ ಅಂದರು. ‘ಅಗಳ ಅಲ್ಲಿ ಲಕ್ಷ್ಮಿ ಕಾಣ್ತಾ ಇದಾಳೆ’ ಎಂದು, ಒಂದು ತುಂಬಾ ದೊಡ್ಡದಲ್ಲದ ಮಾವಿನಮರದ ಅಡಿಯಲ್ಲಿ ಇದ್ದ ಲಕ್ಷ್ಮಿಯ ಬಳಿ ಅವರನ್ನು ಕರೆದುಕೊಂಡು ಹೋದ. ‘ಯಾಕೆ? ಅವರ್ಯಾರು ಬರಲ್ಲವಾ?’ ಎಂದು ಕೇಳಿದ. ‘ಹೇ ಬರ್ತಾರೆ ಅಗೋ ಸದ್ದಾಗೈತೆ, ಬಂದರು’ ಎಂದಳು. ಮಾವಿನತೋಪಿಗೆ ಬಂದ ಖುಷಿಯಲ್ಲಿ ಇವನ ಸ್ನೇಹಿತರೆಲ್ಲ ಒಂದೊಂದು ಮರವನ್ನು ಒಬ್ಬೊಬ್ಬರು ಹೋಗಿ ಹತ್ತತೊಡಗಿದರು. ಇವರಿಬ್ಬರು ರೋಜ ಹೂವನ್ನು ಕಿತ್ತುಕೊಂಡು ಒಂದೊಂದೇ ದಳಗಳ ಕೀಳುವ ಆಟವಾಡತೊಡಗಿದರು. ‘ಇದರ ಹಣ್ಣು ಒಂಥರ ಚೆನ್ನಾಗಿರುತ್ತಲ’ ಎಂದು ಒಂದೆರಡು ಮೆಣಸಿನಕಾಳಿನಾಕಾರದ ಕಪ್ಪನೆಯ ರೋಜ ಹಣ್ಣುಗಳನ್ನು ಕಿತ್ತು ಕೊಟ್ಟ. ‘ಬಾಯೆಲ್ಲ ಕರಗಾಗುತ್ತಲ? ಮತ್ತೊಂದು ಇದೇ ಥರ ಹಣ್ಣಿದೆಯಲ್ಲ ಕಾಕಿಹಣ್ಣು ಅದನ್ನು ತಿಂದರೆ ಇದಕ್ಕಿಂತ ಕರ್ರಗಾಗುತ್ತೆ ಬಾಯೆಲ್ಲ,್ರ ಗಾಂಜೇರ ಕಪ್ಲೆಗೆ ಮಸ್ತಿದಾವೆ’ ಅಂದಳು. ‘ಅಯ್ಯೀ ಇಲ್ಲೋಡು ನಾಲಗೆಯೆಲ್ಲ ಕರ್ರಗೆ ಆತು’ ಎಂದು ತನ್ನ ಪುಟ್ಟ ನಾಲಗೆಯನ್ನು ಹೊರ ಚಾಚಿ ತೋರಿಸಿದಳು. ‘ನನ್ನದೂ ಕರ್ರಗೆ ಆಗೆತೆ ನೋಡಿಲ್ಲಿ’ ಎಂದು ತೋರಿಸಿದ ತನ್ನ ನಾಲಗೆಯನ್ನು. ‘ಯಾಕೆ ನಿನ್ನೆ ಕ್ಲಾಸಿಂದನೆ ಎದ್ದು ಹೋದೆ. ನಿಜವಾಗಲೂ ಹೊಟ್ಟೆ ನೋಯ್ತಿತ್ತೇನೆ?’ ಎಂದು ಕೇಳಿದ. ‘ಇಲ್ಲಪ’ ಎಂದಳು. ‘ಮತ್ತೆ ಫುಲ್ಲು ಬೆವೆತಿದ್ದೆ. ‘ಮತ್ತಿನ್ನೇನು ನೀನು ಏನೇನೋ ಕೇಳಿದರೆ’ ಎಂದಳು. ‘ನೀನೆ ಅಲ್ಲೇನೆ ಹೇಳೆದ್ದು ಅದನ್ನು ಯಾರಿಗೂ ತೋರಿಸಬಾರದು ಹುಡುಗ್ರು ನೋಡಲೇ ಬಾರದಂತೆ ನಮ್ಮ ಅಮ್ಮ ಹೇಳ್ತಿದ್ದರು’ ಅಂದಿದ್ದೆ. ‘ಅದಕ್ಕೆ ಕೇಳಿದೆ ಅದ್ಯಾಕೆ ನೋಡಬಾರದು. ನೋಡಿದರೆ ಏನಾಗುತ್ತೆ ಅಂತ. ‘ಬೇಡ ಬಿಡು ನೋಡಲ್ಲ. ನೀನೇನು ತೋರಿಸಬೇಡ’ ಎಂದವನು, ‘ಅಲ್ಲೇ ನಿಜ ಮಕ್ಕಳುನಾ ಮಣ್ಣಿಂದಾನ ಮಾಡೋದು?’ ಎಂದು ಕೇಳಿದ. ‘ನಾನು ಮೊದ್ಲು ಹಂಗೆ ಅಂದ್ಕಂಡಿದ್ದೆ’. ರಶ್ಮಕ್ಕ ಅವೊತ್ತು ಕೆಳಗಳ ಕೇರಿಯ ಹುಡುಗಿಯರ ಜೊತೆ ಆಟ ಆಡ್ತಾ ಇದ್ದಳು ಏಳುಮಂದಕ್ಕನ ಗುಡಿತಾಗೆ. ನಾನು ಹೋಗಿದ್ದೆ. ‘ಗಂಡಸು ಹೆಂಗಸು ಪಕ್ಕದಾಗೆ ಮನಿಕಂಡರೆ ಮಕ್ಕಳಾಗ್ತವೆ’ ಅಂತ ಏನೇನೋ ಹೇಳ್ತಾ ಇದ್ದಳು. ‘ಹೆಂಗಾಗ್ತವಕ್ಕ ಅಂತ ನಾನು ಕೇಳಿದ್ದೆ ಅದಕ್ಕೆ ಅದನ್ನು ಮುಟ್ಟಿ ಅಲ್ಲಿಂದ ಕಣೆ ಎಂದು’ ಹೇಳಿದಳು. ‘ನಿಜನೇನೆ. ಹಂಗಾದರೆ ಮಣ್ಣಿಂದ ಅಲ್ಲ. ಅಲ್ಲಿಂದಾನ. ಹಂಗಾದರೆ ನಿನಗೂ ಅಲ್ಲಿಂದ ಮಕ್ಕಳು ಹೊರಗಡೆ ಬತ್ತವೇನೆ?’ ಕೇಳಿದ. ಅಷ್ಟರಲ್ಲಿ ಅಲ್ಲಿಗೆ ಅವಳ ಸ್ನೇಹಿತೆಯರೆಲ್ಲ ಬಂದು ಅವರನ್ನು ಸೇರಿಕೊಂಡರು.

ಇವರು ಬಂದಿದ್ದನ್ನು ನೋಡಿ ವೆಂಕಟೇಶ , ಸೀನ ಮತ್ತು ಗೋಪಿ ಬಂದರು. ‘ಲೋ ಸಣ್ಣ ಮರ ಹತ್ತನಪ್ಪ ಆಮೇಕೆ ಬಿದ್ದರೆ ನಮ್ಮ ಅಪ್ಪ ಇನ್ನೆಂದು ಮರಕೋತಿ ಆಡಕೆ ಕಳಸಲ್ಲ’ ಎಂದ ವೆಂಕಟೇಶ. ‘ಹೂ ಕಣೋ’ ಎಂದು ಹೇಳಿದ ಲಕ್ಷ್ಮಿಯ ಮಾತಿಗೆ ಅವಳ ಸ್ನೇಹಿತೆಯರು ತಲೆಯಾಡಿಸಿದರು. ಅರ್ಧಗಂಟೆ ಮರಕೋತಿಯಾಟವನ್ನು ಆಡಿದಮೇಲೆ, ‘ಸಾಕು ಬರ್ರೋ ಇನ್ನೊಂದು ದಿನ ಬರಣ, ಈಗ ತೋಟದವರ ಹೊಲದಾಗೆ ಹೋಗಿ ದಾಳಿಂಬೆ ಕಿತ್ತುಕೊಂಡುಬರಣ’ ಎಂದಳು ಲಕ್ಷ್ಮಿ. ‘ಆಯ್ತು ಬರ್ರಿ’ ಎಂದ ವೆಂಕಟೇಶ. ‘ಹುಷಾರು ಕಣ್ರೋ ಯಾರಾದರು ನೋಡಿದರೆ’ ಎಂದ ಜಯಂತ. ‘ನಾವು ಸಣ್ಣ ಹುಡುಗರು ಯಾರಿಗೂ ಕಾಣಲ್ಲ ನೆಲದಲ್ಲೇ ದೇಕಿಕೊಂಡು ಹೋಗೋನ ಯಾರಿಗೂ ಕಾಣಲ್ಲ’ ಎಂದ ಸೀನ. ‘ಒಳ್ಳೆಯ ಐಡಿಯ’ ಎಂದಳು ಲಕ್ಷ್ಮಿ. ಹೊಲದೊಳಕ್ಕೆ ಕಳ್ಳೆಯ ತೊಟ್ಟೊಂದನ್ನು ಎಲ್ಲರೂ ಸೇರಿ ಎಳೆದು, ಪಕ್ಕಕ್ಕೆ ತಳ್ಳಿಹೋದ ಅವರು ನೆಲದಲ್ಲಿ ಮಲಗಿಕೊಂಡು ನಿಧಾನ ದೇಕುವುದಕ್ಕೆ ಪ್ರಾರಂಭಿಸಿದರು. ‘ನಿಧಾನ ಕಣೆ ಲಚ್ಚಿ ಮೈಯೆಲ್ಲ ತರಕಂಡಾತು’ ಎಂದ ಜಯಂತ. ದೇಕುವಾಗ ಹುಡುಗಿಯರ ಲಂಗಗಳು ಮೇಲಕ್ಕೆ ಅಡರುತ್ತಿದ್ದವು. ಅವುಗಳನ್ನು ಕೆಳಗೆ ಎಳೆದುಕೊಳ್ಳುತ್ತ ದೇಕ ತೊಡಗಿದರು. ‘ಲಚ್ಚಿ’ ಎಂದ ನಿಧಾನಕ್ಕೆ ಜಯಂತ. ‘ಏನೋ’ ಎಂದಳು ಮೆಲ್ಲಗೆ. ‘ನಿನ್ನ ಎಡಗಡೆಯ ತೊಡೆಯ ಹತ್ತಿರ ಎಷ್ಟು ದೊಡ್ಡ ಮಚ್ಚೆ ಇದೆಯಲ್ಲೆ’ ಎಂದ. ‘ಎಲ್ಲರಿಗು ಇರ್ತಾವೆ ನಿನಗೂ ಇರ್ತಾವೆ ಎಲ್ಲೆಲ್ಲೋ, ದಾಳಿಂಬೆ ಬಿಟ್ಟು ಮಚ್ಚೆ ಸುದ್ದಿಯಾಕಪ್ಪ ನಿನಗೆ’ ಎಂದು, ‘ಮೊದ್ಲು ದಾಳಿಂಬೆ ಕೀಳು’ ಎಂದಳು. ‘ಲಚ್ಚಿ’ ಎಂದ ಪಿಸುಧ್ವನಿಯಲ್ಲಿ. ‘ಏನು’ ಎಂದಳು ‘ನಾನು ನೋಡಿದೆ ಮರಕೋತಿ ಆಡುವಾಗ’ ಎಂದ. ‘ಚಡ್ಡಿ ಹಾಕ್ಕಂಡಿದ್ದೆ ಯಾತನೋಡಿದೆ ನೀನು, ಅದೆ ಈ ಮಚ್ಚೆ ನೋಡಿರ್ತೀಯಾ’ ಅಂದಳು ‘ಇಲ್ಲ ಕಣೆ’ ಅಂದ. ‘ಸುಳ್ಳು’. ‘ಈಗ ದಾಳಿಂಬೆ ಕೀಳು’ ಅಂದಳು. ‘ಸಾಕು ಒಂದೊಂದು ಕೀಳಿ, ಮನಿಗೆ ತಾಂಡೋದ್ರೆ ಮನೆಯಲ್ಲಿ ಗತಿಗಂಗಮ್ಮ ನಮಗೆಲ್ಲ. ಇಲ್ಲೆ ತಿಂದುಹೋಗನ ಎಂದ ಜಯಂತ. ‘ಹ್ಞೂ ಕಣ್ರೊ’ ಎಂದ ಗೋಪಿ. ‘ಲಚ್ಚಿ ನಿಜಕ್ಕೂ ಮಲಕ್ಕಂಡರೆ ಮಕ್ಕಳಾಗುತ್ತವೇನೆ?’ ‘ಹೆಂಗೋ ಕಣೋ ರಶ್ಮಕ್ಕ ಹಂಗೆ ಹೇಳಿದಳು. ತಡಿ ಇವೊತ್ತು ರಾತ್ರಿಕೆ ಅಮ್ಮಯ್ಯನ ಕೇಳ್ತೀನಿ’ ಎಂದಳು. ಎಲ್ಲರೂ ಒಂದೊಂದು ದಾಳಿಂಬೆ ಕಿತ್ತುಕೊಂಡು ತಿನ್ನುತ್ತ ಊರಿನ ಕಡೆ ನಡೆದರು. ಅವೊತ್ತು ರಾತ್ರಿ ಲಕ್ಷ್ಮಿ ಅವಳ ಅಮ್ಮನನ್ನು ‘ಅಮ್ಮ ಮಕ್ಕಳು ಮಾಡೋದು ಹೆಂಗೆ? ನಾನು ಮಾಡ್ಕಬಹುದಾ. ಯಾರ್ಬೇಕಾದರೂ ಮಾಡ್ಕಬೋದಾ? ಹುಡುಗರು ಜೊತೆಗೆ ಮಲಕ್ಕೊಂಡರೆ ಮಕ್ಕಳಾಗ್ತಾವೇನಮ್ಮ? ರಶ್ಮಿ ಹೇಳ್ತಾ ಇದ್ದಳು ನೀನು ಅಪ್ಪಯ್ಯನ ಜೊತೆ ಮನಿಕಂಡು ನನ್ನುನ್ನ ಮಾಡ್ದೇನು? ಹಂಗಾದರೆ ದಿನಾ ಮಲಿಕೊತಿಯಾ ದಿನಾ ಆಗಬೇಕಿತ್ತಲ್ಲ?!’ ಮಕ್ಕಳು ಹೆಂಗೆ ಹೊರಗೆ ಬತ್ತಾವೆ. ಥೂ ಏನೇ ಪೋಲಿ. ಅಸಿಸಿಸಿ ಏನು ಕೆಟ್ಟು ಕುತ್ಕಂಡಿದಿಯೇ. ಆ ಕಡೆ ತಿರುಗಿಕೊಂಡು ಮಕ್ಕ. ಹಿಂಗೆಲ್ಲ ಕೇಳಬಾರದು. ನೀನಿನ್ನ ಸಣ್ಣಾಕಿ. ದೊಡ್ಡಕಿ ಆದಮೇಲೆ ಕೇಳವಂತೆ. ‘ಎಷ್ಟು ದೊಡ್ಡಾಕಿ?’ ‘ನನ್ನಷ್ಟು’. ‘ಆಮೇಲೆ ಮಕ್ಕಳು ಬತ್ತಾವ?, ಎಲ್ಲಿಂದ ಬತ್ತಾವೆ?’ ‘ಹೊಟ್ಟೆಗಿಂದ ಬತ್ತಾವೆ’ ‘ಮತ್ತೆ ರಶ್ಮಿ’ ಎಂದು ಏನೇನೋ ಹೇಳುವುದಕ್ಕೆ ಹೋಗಿ ಸುಮ್ಮನಾದಳು. ‘ಯಾವಳೆ ಅವಳು ರಶ್ಮಿ? ಐಯ್ಯನರ ಚಂದ್ರಣ್ಣನ ಮಗಳೆ? ಥೂ ಅವಳ ಜೊತೆ ಇನ್ನೊಂದ್‍ಸಲ ಸೇರಿದರೆ ನೋಡು’ ಎಂದು ಬೈದು, ‘ಅಂತವೆಲ್ಲ ಮಾತಾಡಬಾರದು, ಈಗ ಮಲಿಕೋ ಒಂದು ಕತೆ ಹೇಳ್ತೀನಿ, ನಿಮ್ಮ ಅಪ್ಪಯ್ಯ ಬೆಂಗಳೂರಿಗೆ ಹೋಗವ್ರೆ ಏನಾದರೂ ತತ್ತರೆ’ ಎಂದಳು. ಸ್ವಲ್ಪ ಹೊತ್ತು ಕಳೆದ ಮೇಲೆ ತಾಯಿ ಮಗಳು ಇಬ್ಬರು ನಿದ್ದೆ ಹೋದರು. ಲಕ್ಷ್ಮಿಯ ಅಪ್ಪ ಮಲ್ಲಿಕಣ್ಣ ಬಾಳೆ ಹಾಕಿಕೊಂಡು ಬೆಂಗಳೂರಿಗೆ ಹೋದವನು ಅವೊತ್ತು ರಾತ್ರಿಯ ಹನ್ನೆರಡುಗಂಟೆ ಬಸ್ಸಿಗೆ ಬರುವವನಿದ್ದ. ಅರೆ ನಿದ್ರೆ ಮಾಡಿ ಎಚ್ಚರಗೊಂಡಿದ್ದ ಶಾಸ್ತ್ರಿಗುಂಡಪ್ಪ ನೀರು ಕುಡಿಯಲು ಒಳ ಮನೆಗೆ ಬಂದಿದ್ದ. ಇವೊತ್ತು ಯಾಕೆ ತಂಬಿಗೆಗೆ ನೀರು ತುಂಬಿಸಿಟ್ಟಿಲ್ಲ ಎಂದು ತನಗೆ ತಾನೆ ಮಾತಾಡಿಕೊಳ್ಳುತ್ತ ಒಂದು ಲೋಟವನ್ನು ತೆಗೆದುಕೊಂಡು ಕಂಚಿನ ಕೊಳಗಕ್ಕೆ ಇಳಿಬಿಟ್ಟು ನೀರನ್ನು ತುಂಬಿಕೊಂಡು ಕುಡಿಯತೊಡಗಿದ. ‘ಜಯಂತು ಇಂಥವೆಲ್ಲ ಕೇಳಬಾರದಂತೆ ದೊಡ್ಡವಳಾದ ಮೇಲೆ ಗೊತ್ತಾಗುತ್ತೆ ಅಂತೆ’ ಎಂದು ನಿದ್ದೆಯಲ್ಲಿ ಲಕ್ಷ್ಮಿಮಾತಾಡಿಕೊಳ್ಳುತ್ತಿದ್ದನ್ನು ಕೇಳಿಸಿ ಕ್ಷಣ ಅವಕ್ಕಾದ. ಸ್ವಪ್ನದಲ್ಲಿ ಯಾತ್ತಾತ್ತೋ ಮಾತಾಡಿಕೊಳ್ಳುತೈತೆ ಈ ಹುಡುಗಿ ಎಂದುಕೊಂಡ.

ಒಂದು ದಿನ ಇಬ್ಬರು ಸ್ಕೂಲಿಗೆ ಜೊತೆಗೆ ಹೋಗುವಾಗ ‘ದೊಡ್ಡಾಕಿ ಆದಮೇಕೆ ಗೊತ್ತಾಗುತ್ತೆ ಅಂತೆ ಈಗ ಗೊತ್ತಾಗಲ್ಲ, ದೊಡ್ಡವರಿಗೆ ಮಾತ್ರ ಅಂತೆ ಮಕ್ಕಳಾಗೋದು ಅಂತ ಅಮ್ಮ ಬೈದಳು’ ಎಂದು ಹೇಳಿದಳು. ‘ಹೌದೇನೇ ಹೋಗ್ಲಿ ಬಿಡೆ’ ಎಂದವನು, ‘ಈ ಭಾನುವಾರ ಒಂದು ಮಜ ತೋರಿಸ್ತೀನಿ’ ಎಂದ. ‘ಏನೋ!’ ಎಂದು ಕುತೂಹಲದಿಂದ ಕೇಳಿದಳು ಲಕ್ಷ್ಮಿ. ‘ಅದೇ ಕಣೆ ಬ್ರಾಮುಣ್ರ ಫೋಟೋ ನಾಗರಾಜಣ್ಣ ಹೊಲೇರ ದೇವೀರಮ್ಮ’ ‘ಏನು?’ ‘ನೀನು ಬಾ ಮಜಾ ಸಿಗುತ್ತೆ’ ‘ಭಾನುವಾರನೆ ಏಕೆ ಇವೊತ್ತೆ ತೋರಿಸು’ ‘ದಿನಾ ತೋರ್ಸಕೆ ಆಗಲ್ಲ, ಅವೊತ್ತು ಸ್ಕೂಲಿಗೆ ರಜ ಇರುತ್ತಲ್ಲೆ’ ‘ಲೇ ಬಾರಿ ಕಳ್ಳಕಣನೀನು’.

ಬರುವ ಭಾನುವಾರ ಅವರಿಬ್ಬರು ಮಾತಾಡಿಕೊಂಡಂತೆ ತಮ್ಮ ಮನೆಗಳಲ್ಲಿ ಏಳುಮಂದಕ್ಕನ ಗುಡಿತಾಕೆ ಆಟವಾಡುವುದಕ್ಕೆ ಹೋಗ್ತೀವಿ’ ಎಂದು ಹೇಳಿ ಯಾರಿಗೂ ಕಾಣದೆ ನಾಯಕರ ಹೊಲದಲ್ಲಿ ಇರುವ ಹುಣಸೆ ಮರವನ್ನು ಹತ್ತಿ ಅಲ್ಲಿಂದ ಒಂದು ಮನೆಯ ಮಾಳಿಗೆ ಮೇಲಕ್ಕೆ ದಪ್ಪೆಂದು ಜಿಗಿದರು. ‘ಇದೇನೋ ದಬ್ಬೆಂತು! ನಮ್ಮೂರೇ ಕಾಣುತ್ತೆ ಮಾಳಿಗೆ ಹತ್ತಿದರೆ. ಅದ್ಯಾರ ಮನೆನೋ ಎತ್ತರವಾಗೈಯ್ತಲ್ಲ, ಚಿಕ್ಕೇ ಗೌಡ್ರು ಮನೇಯಲ್ಲವಾ’ ಎಂದು ಜೋರಾಗಿ ಹೇಳುತ್ತಾ ಕುಣಿಯತೊಡಗಿದಳು. ಅವನು ಬಾಯಿಯ ಮೇಲೆ ಬೆರಳಿಟ್ಟು ‘ಶ್’ ಎಂದ. ಅವಳು ಸುಮ್ಮನಾದಳು. ನಿಧಾನಕ್ಕೆ ಬೆಕ್ಕಿನ ಥರ ಹೆಜ್ಜೆಯನ್ನು ಇಟ್ಟುಕೊಂಡು ಏಳು ಮಾಳಿಗೆಗಳನ್ನು ದಾಟಿ ಎಂಟನೇ ಮನೆಯ ಮಾಳಿಗೆ ಮಾಲೆ ನಿಂತರು. ‘ಮಾತಾಡಬೇಡ ಎಂದು ಪಿಸುಗುಟ್ಟಿದ. ಅಲ್ಲಿ ಒಂದು ಗವಾಕ್ಷಿ ಇತ್ತು. ಅಲ್ಲಿ ಎರಡು ಕಿಂಡಿಗಳಿದ್ದವು. ನಿಧಾನ ಬಗ್ಗಿ ಕಿಂಡಿಯೊಳಗಡೆ ನೋಡಿದ. ‘ಲೇ ಬಾಯಿಲ್ಲಿ’. ನಿಧಾನಕ್ಕೆ ಮುಂಗಾಲಲ್ಲೆ ಬಂದ ಅವಳು ಇಣುಕಿದಳು. ‘ನೋಡು ಹೆಂಗೆ ಮನಿಕಂಡಿದಾರೆ ಅಲ. ‘ಹೌದು ಕಣೋ!’ ‘ಯಪ್ಪಾ ಮಕ್ಕಳು ಮಾಡ್ತಾರೇನೋ ಯಾರಿಗೊತ್ತು’ ಎಂದ. ‘ಅಯೀ ಅವಯ್ಯನ ಹೊಟ್ಟೆನೋಡು ಎಷ್ಟು ಡುಬ್ಬ. ಇದೇನ ಒಬ್ಬರಿಗೊಬ್ಬರು ಸಿಂಬೆ ಸುತ್ತಿಕೊಂಡಿದ್ದಾರೆ. ದೇವೀರಮ್ಮ ಮೈಮೇಲೆ ಬಟ್ಟೆನೇ ಹಾಕ್ಕೆಂಡಿಲ್ಲ’ ಎಂದಳು. ‘ಲೇ ಹೊಲೇರ್ನ ಬಾಂಬ್ರು ಮನೆಯೊಳಕೆ ಬಿಟ್ಕಳಲ್ಲ. ಇಲ್ಲೋಡಿದರೆ ನಡಮನೆಯಲ್ಲಿ ಮಲಿಕಂಡಿದಾರೆ’. ‘ನಾಗರಾಜಣ್ಣನ ಹೆಂಡಿತಿ ಸರಸ್ವತಮ್ಮ ಇಲ್ಲೇನೋ ಒಳಗೆ?’ ‘ಇಲ್ಲಾ ಅನ್ನಿಸುತ್ತೆ, ಯಾರಿಗೊತ್ತು ಎಲ್ಲಿಗೊಗಿದ್ದಾಳೋ. ‘ಯಾರು ಯಾರಜೊತೆಗಾದರೂ ಮಲಗಬಹುದಾ?!’ ‘ಒಂದು ಮಜ ತಗಣನ’ ‘ಏನು?’ ‘ನಿಧಾನಕ್ಕೆ ಈ ಕಿಂಡಿಗಳಿಂದ ಮಣ್ಣು ಸುರಿಯೋಣವಾ?’ ‘ಸಿಕ್ಕಿ ಬಿದ್ದರೆ ಚಮ್ಡ ಸುಲಿತಾರೆ’. ‘ಜಲ್ದು ಇಳಿದು ಹೋಗನ ಬಾ, ಯಾರಾದರು ಬಂದರೆ’ ‘ನಡಿ, ನಡಿ’ ‘ಹೆಂಗಿತ್ತು ಮಜ?’ ‘ಲೋ ಇದನ್ನು ಯಾವಾಗ ನೋಡಿದ್ದೋ?’ ‘ಏ ಅವೊತ್ತು ಒಂದು ದಿನ ಸೊಂಡಿಗೆ ಒಯ್ಯೊಕೆ ನಮ್ಮಮ್ಮ ನಾನು ಮಾಳಿಗೆ ಮೇಲಕ್ಕೆ ಬಂದಿದ್ದವಾ ಅವೊತ್ತು ಸುಮ್ಮನೆ ಎಲ್ಲರ ಮನೆ ಗವಾಕ್ಷಿಗಳನ್ನು ತಗೀತ ಹೋದ್ನ ಅವಾಗ ನೋಡಿದ್ದೆ’ ಎಂದು, ಲಚ್ಚಿ ನಮ್ಮ ಅಪ್ಪ ಅಮ್ಮನೂ ಹಿಂಗೆ ಮಲಿಕತರೇನೆ?’ ಎಂದು ಕೇಳಿದ. ‘ನನಗೊತ್ತಿಲ್ಲಪ್ಪ. ನಮ್ಮ ಅಪ್ಪ ಅಮ್ಮ ಮನಿಕತಾರೆ ಆದರೆ ಹಿಂಗಲ್ಲ. ದಿನಾ ನಾವು ಮುವಾರು ಸಾಲಾಗೆ ಮಲಿಕೊಳೋದು. ನಮ್ಮ ತಾತ ಹಜಾರದಾಗೆ ಮಲಿಕತಾರೆ’ ಎಂದಳು.

ಕೈಯಲ್ಲಿದ್ದ ಸಿಗರೇಟಿನಿಂದ ಎರಡು ಪಫ್ ಮಾತ್ರ ಎಳೆದಿದ್ದ. ಉಳಿದದ್ದು ಬೂದಿಯಾಗಿ ಉದುರಿ ಹೋಗುತ್ತಿತ್ತು. ಅವನ ಚಿತ್ತವೆಲ್ಲ ಅವಳ ಕಡೆಯೇ ಇತ್ತು. ಅರೆ! ಈ ಕಣ್ಣುಗಳನ್ನು ಮರೆಯೋಕೆ ಛಾನ್ಸೇ ಇಲ್ಲ. ಇದು ಅವಳೇ. ಯೆಸ್. ಇವಳು ಲಚ್ಚಿಯೇ ಇರಬೇಕು ಕೇಳಿಯೇ ಬಿಡೋಣ ಎಂದುಕೊಂಡ. ಒಂದು ಪಫ್ ಎಳೆದ. ಸಿಗರೇಟಿನ ತುದಿಯಲ್ಲಿ ಕೆಂಡದಂತ ಕೆಂಪು. ಬೂದಿ ಉದುರುತ್ತಿದೆ. ಬೇಡ. ಅದು ಹೇಗೆ ಸಾಧ್ಯ?! ಎಷ್ಟು ವರ್ಷಗಳಾದವು. ಇಂಪಾಸಿಬಲ್. ಅಷ್ಟಕ್ಕೂ ಅವಳೇ ಆಗಿದ್ದರೂ ಏನೀಗ? ಹೋಗಿ ಪರಿಚಯಮಾಡಿಕೊಂಡು ಹೀಗೀಗೆ ಅಂಥ ಹೇಳಿಕೊಂಡು, ಬೇಡ. ಅಷ್ಟಕ್ಕೂ ಎಲ್ಲ ಕೇಳಿಸಿಕೊಂಡ ನಂತರ, ಹೌದಾ? ಓ.ಕೆ ಏನ್ಮಾಡ್ತಾ ಇದೀರಾ? ಅಂಥ ಸೌಜನ್ಯಕ್ಕೆ ಎರಡು ಮಾತು ಕೇಳಿ, ಆಮೇಲೇ ಹೊರಟು ಹೋಗುವಳು ಎಂದುಕೊಂಡ. ಮತ್ತೊಂದು ಪಫ್ ಎಳೆದ. ಅವಳ ಕಣ್ಣುಗಳು ಪಳಪಳ ಹೊಳೆದವು. ಅವನ ಎದೆ ಕೇಳು ಕೇಳು ಅಂತ ಒಂದೇ ಸಮ ಬಡಿದುಕೊಳ್ಳತೊಡಗಿತು. ಯಾವೂದೇ ಮುಜುಗರ, ಸಂಕೋಚ, ಅಂಜಿಕೆಗಳಿಲ್ಲದೆ ಕೇಳಿಯೇ ಬಿಟ್ಟ ‘ಯು ಆರ್ ಲಚ್ಚಿ?!’ ಎಂದು ತನ್ನ ವಿಶಿಷ್ಟ ಶೈಲಿಯಲ್ಲಿ ಬಲಗೈಯಿಯ ತೋರು ಬೆರಳನ್ನು ಮುಂದಕ್ಕೆ ನೇರ ಚಾಚಿ ಉಳಿದವುಗಳನ್ನು ಹಿಂದಕ್ಕೆ ಮಡಿಚಿಕೊಂಡು. ಇವನ ಧ್ವನಿಯಲ್ಲಿ ಸಂತೋಷ, ಆಶ್ಚರ್ಯಗಳು ಇದ್ದುದನ್ನು ಸ್ಪಷ್ಟವಾಗಿ ಯಾರಾದರೂ ಕಾಣಬಹುದಿತ್ತು. ‘ನೀವು?!’ ಅಂದಳು. ‘ನೀವು ಅಲ್ಲ “ನೀನು” ಅನ್ನು’ ಎಂದು, ‘ನಾನು ಕಣೆ ಜಯಂತು’ ಅಂದ. ಆ ಹೆಸರನ್ನು ಕೇಳಿದ ತಕ್ಷಣಕ್ಕೆ ಮರುಯೋಚಿಸದೆ ಮತ್ತು ಜಯಂತು ಯಾವ ಜಯಂತ್ ಎಂದು ಖಾತ್ರಿಯನ್ನು ಮಾಡಿಕೊಳ್ಳದೆ ‘ಓ ಮೈ ಗುಡ್ ನೆಸ್ ವಾಟ್ ಎ ಸರ್ ಪ್ರೈಸ್! ಏನಾಶ್ಚರ್ಯ! ಮತ್ತೆ ನಾನೆಂದು ನಿನ್ನನ್ನು ನೋಡಲ್ಲ ಅಂದುಕೊಂಡಿದ್ದೆನಲ್ಲೋ. ಸುಮಾರು ಇಪ್ಪತ್ತೈದು ವರ್ಷಗಳ ನಂತರ ಸಂಭವಿಸುತ್ತಿರುವ ಮಿರಾಕಲ್. ನಂಬುವುದಕ್ಕೆ ಆಗ್ತಾ ಇಲ್ಲ’ ಎಂದಳು. ಅವಳ ಆಂಗಿಕ ವರ್ತನೆಯಲ್ಲಿ ಪುಳಕ ಎದ್ದು ಕಾಣುತ್ತಿತ್ತು. ‘ಏನಿಲ್ಲಿ? ಅದು ಜೋಗಿಮಟ್ಟಿ ರಸ್ತೆಯಲ್ಲಿ?’ ಎಂದ. ‘ಇಲ್ಲೇ ನನ್ನ ಫ್ರೆಂಡ್ ಒಬ್ಬಳದು ಮನೆ ಇದೆ. ಅಮೇರಿಕಾದಿಂದ ಹೋದವಾರ ಬಂದಿದ್ದಳು. ಅವಳನ್ನು ಭೇಟಿ ಮಾಡಿ ನಾಲಕ್ಕು ವರ್ಷಗಳಾಗಿದ್ದವು. ಮುಂಬೈಯಲ್ಲಿ ಇದ್ದಾಗ ನೋಡಿದ್ದು. ಫೋನ್ ಮಾಡಿದ್ದಳಾ, ಅದಕ್ಕೆ ನೋಡಿಕೊಂಡು ಹೋಗೋಣ ಅಂತ ಬಂದಿದ್ದೆ. ಅಲ್ಲದೆ ಅಗ್ರಿಕಲ್ಚರ್ ಆಫೀಸಲ್ಲೂ ಸ್ವಲ್ಪ ಕೆಲಸ ಇತ್ತು, ಕಾರಿಂದು ಎರಡು ಕೆಲಸ ಬಾಕಿ ಇತ್ತು. ಹೊಸ ಬ್ಯಾಟರಿ ಹಾಕಿಸೋದು ಮತ್ತು ಸರ್ವೀಸ್ ಮಾಡಿಸೋದು, ಅದಕ್ಕೆ ಬಂದಿದ್ದೆ’ ಎಂದಳು. ‘ಮನೆಗೆ ಹೋಗೋಣವಾ, ಕೂತುಕೊಂಡು ಅರಾಮಾಗಿ ಮಾತಾಡೋಣ’. ಇವೊತ್ತು ಬೇಡ ಮತ್ತೆಂದಾದರೂ ಬರುತ್ತೀನಿ. ಇವೊತ್ತು ಬೇಡ, ಕಾರ್ ಸರ್ವೀಸ್ ಸ್ಟೇಷನ್ನಿನಿಂದ ಫೋನ್ ಬಂದಿತ್ತು, ಲೇಟಾಗುತ್ತೆ ಊರಿಗೆಹೋಗಬೇಕು’ ಎಂದಳು. ‘ ಸರಿ, ಅಗ್ರಿಕಲ್ಚರ್ ಆಫೀಸ್ ಅಂತ ಹೇಳ್ತಾ ಇದಿಯಲ್ಲ, ಯಾಕೆ ಅಗ್ರಿಕಲ್ಚರ್ ಆಫೀಸಿಗೆ? ಕಬ್ಬಿಣದ ಅಂಗಡಿಯಲ್ಲಿ ನೊಣಕ್ಕೇನು ಕೆಲಸ ಎಂಬಂತೆ ಅಗ್ರಿಕಲ್ಚರ್ ಆಫೀಸಲ್ಲಿ ನಿನಗೇನು ಕೆಲಸನೆ, ರೈತರಿಗೆ ಕೆಲಸ ಅಲ್ಲಿ, ನಿನಗೇನೇ ಅಲ್ಲಿ ಕೆಲಸ’ ಅಂದ. ಊರಲ್ಲಿದ್ದೇನೆ ಕಣೋ ನಾನೀಗ, ಕೃಷಿ ಮಾಡ್ತಾ ಇದೀನಿ. ಮಣ್ಣು ಪರೀಕ್ಷೆ ಮಾಡಿಸಬೇಕಿತ್ತು ಅದಕ್ಕೆ ಬಂದಿದ್ದೆ.’ ‘ಯಾಕೆ ಅಲ್ಲೆ ಬಬ್ಬೂರು ಫಾರಮ್‍ಗೆ ಹೋಗಬಹುದಿತ್ತಲ್ಲ?’ ‘ಇವರು ಅದೆ ನನ್ನ ಫ್ರೆಂಡ್ ಮನೆಗೆ ಹೋಗಿದ್ದೆ ಅಂದೆನಲ್ಲ ಅಮೇರಿಕಾದಿಂದ ಬಂದಿರುವ ಫ್ರೆಂಡ್ ಅವಳ ಕಸಿನ್‍ಗೆ ಫ್ರೆಂಡ್ ಅಂತೆ. ಹೊಸ ಥರಹದ ಕೃಷಿ ಪದ್ಧತಿ ಅಳವಡಿಕೆ ಬಗ್ಗೆ ತುಂಬಾ ಇನ್ನೋವೇಟಿವ್ ಆಗಿ ಯೋಚಿಸ್ತಾರಂತೆ. ಅದಕ್ಕೆ ಅವರನ್ನು ಪರಿಚಯಮಾಡಿಕೊಂಡು ಸಾಧ್ಯವಾದರೆ ಒಂದು ಸಲ ನಮ್ಮ ಹೊಲಕ್ಕೆ ಭೇಟಿಕೊಡಿ ಎಂದು ಪರ್ಸನಲಿ ಇನ್ವೈಟ್ ಮಾಡಿ ಹೋಗೋಣ ಅಂಥ ಬಂದಿದ್ದೆ ದುರ್ಗಕ್ಕೆ. ಹಾಗಾಗಿ ಕಾರನ್ನು ಸರ್ವೀಸ್ ಸೆಂಟರ್‍ನಲ್ಲಿ ಬಿಟ್ಟು, ನನ್ನ ಫ್ರೆಂಡ್‍ಗೆ ಅಲ್ಲಿಗೆ ಬರುವುದಕ್ಕೆ ಹೇಳಿದ್ದೆ. ಅವಳು ಅಲ್ಲಿಗೆ ಬಂದಮೇಲೆ ಇಬ್ಬರೂ ಅಗ್ರಿಕಲ್ಚರ್ ಆಫೀಸಿಗೆ ಹೋಗಿದ್ದೆವು. ಅಲ್ಲಿಂದ ಅವಳ ಮನೆಗೆ ಹೋದೆವು. ಬೆಳಗ್ಗೆ ಬಂದವಳು ನಾನು. ಇಷ್ಟೊತ್ತು ಅಲ್ಲೆಯೇ ಇದ್ದೆ. ಸರ್ವೀಸ್ ಸೆಂಟರ್‍ನಿಂದ ಫೋನ್ ಬಂತಾ ಈಗ ಆ ಕಡೆ ಹೊರಟೆ. ಎಂದಳು. ‘ಓಕೆ ಓಕೆ’ ಎಂದು ನಿನ್ನನ್ನು ನೋಡಿದ ತಕ್ಷಣಕ್ಕೆ ಅಂದು ಕೊಂಡೆ ನಿನ್ನ ಬಾಡಿ ಲಾಂಗ್ವೇಜಲ್ಲೇ ಏನೋ ಒಂಥರ ಆತ್ಮವಿಶ್ವಾಸ, ಬೋಲ್ಡ್‍ನೆಸ್ ಇದೆ ಅಂಥ’ ಎಂದ. ‘ಥ್ಯಾಂಕ್ಸ್ ಫಾರ್ ಗುಡ್ ವಡ್ರ್ಸ್’. ‘ಸರಿ ತಿಪ್ಪಿನಘಟ್ಟಮನ ದೇವಸ್ಥಾನದ ಒಳಗೆ ಹೋಗಿ ಒಂದುಸ್ವಲ್ಪ ಹೊತ್ತು ಮರದ ಅಡಿಯಲ್ಲಿ ಕೂತು ಮಾತಾಡೋಣ’ ಎಂದ. ‘ಬೈ ಅಲ್ ಮೀನ್ಸ್’ ಎಂದಳು. ಜಯಂತ ಮತ್ತೆ ಅಂಗಡಿಗೆ ಹೋಗಿ, ‘ಸರ್ ಇಲ್ಲಿ ಕುಡಿಯುವುದಕ್ಕೆ ತಣ್ಣನೆಯದು ಏನು ಸಿಗುತ್ತೆ?’ ಎಂದು ಕೇಳಿದ. ‘ಫ್ರೆಶ್ ಮಜ್ಜಿಗೆ ಸಿಗುತ್ತೆ. ಬಾಟಲಲ್ಲಿ ಇರುವ ಡ್ರಿಂಕ್ಸ್ ಇದೆ ಸಾರ್ ಮಾಝಾ, ಮಿರಿಂಡಾ ಸೆವೆನ್ ಅಪ್ ಕೊಡ್ಲಾ?’ ಅಂದ. ‘ಬೇಡ ಮಜ್ಜಿಗೆ ಸಾಕು’ ಎಂದು ಎರಡು ಗ್ಲಾಸುಗಳಲ್ಲಿ ಪಾರ್ಸಲ್ ಈಸಕೊಂಡ. ‘ಸ್ಟ್ರಾ ಇಟ್ಟಿದ್ದೀರಾ?’ ‘ಹೌದು ಸಾರ್ ಇಟ್ಟಿದ್ದೀನಿ’. ಹಣವನ್ನು ಕೊಟ್ಟು ‘ಥ್ಯಾಂಕ್ಸ್ ಕಣ್ರಿ’ ಎಂದು ಲಕ್ಷ್ಮಿಯನ್ನು ತನ್ನಕಾರಿನಲ್ಲಿ ಕೂರಿಸಿಕೊಂಡು ಮೆಲ್ಲನೆ ತಿಪ್ಪಿನಘಟ್ಟಮ್ಮನ ದೇವಸ್ಥಾನದ ಒಳಗಡೆ ದಟ್ಟವಾಗಿ ಬೆಳೆದಿರುವ ಮರಗಳ ಕಡೆ ಚಲಾಯಿಸಿದ. ಕಾರುನ್ನು ಒಂದು ಮರದಡಿಯಲ್ಲಿ ಪಾರ್ಕ್‍ಮಾಡಿದ. ಇಬ್ಬರು ಅಲ್ಲೆಯೇ ಹತ್ತಿರಲ್ಲಿದ್ದ ಒಂದು ಕಲ್ಲಬೆಂಚಿನ ಮೇಲೆ ಕೂತರು. ‘ಓ ತಡೆ ಅವಸರದಲ್ಲಿ ಮಜ್ಜಿಗೆಯನ್ನು ತರುವುದನ್ನೇ ಮರೆತೆ’ ಎಂದು ಮತ್ತೆ ಕಾರಿನ ಬಾಗಿಲನ್ನು ತೆರೆದು ಎರಡೂ ಕೈಗಳಲ್ಲಿಮಜ್ಜಿಗೆಯ ಕಪ್ಪುಗಳನ್ನು ಹಿಡಿದುತಂದು ಅವಳಿಗೆ ಒಂದು ಕಪ್ಪುಕೊಟ್ಟು ತಾನುಒಂದನ್ನು ಹಿಡಿದು ನಿಧಾನ ಮುಚ್ಚಳವನ್ನು ತೆರೆದು ಸ್ಟ್ರಾವನ್ನು ಜೊತೆಗೆ ಕೊಟ್ಟ. ನಿಧಾನ ಕುಡಿಯ ತೊಡಗಿದ. ‘ಚಿಯರ್ಸ್’ಅನ್ನಲಿಲ್ಲವಲ್ಲೋ ಎಂದಳು. ಅವಳು ಒಂದು ಸಿಪ್ಪನ್ನು ಹೀರಿ ಮಜ್ಜಿಗೆ ಫ್ರೆಶ್ ಆಗಿದೆ ಎಂದಳು. ‘ಎಷ್ಟು ದಿನವಾಯ್ತೆ ನಿನ್ನನೋಡಿ?!’ ‘ಎಂತಹ ಅಮೇಜಿಂಗ್ ಅಲ್ಲವಾ ಈ ಕ್ಷಣ?’ ಅಂದಳು. ಕ್ಷಣ ಸುಮ್ಮನಾಗಿ ಇವನನ್ನೇ ನೋಡುತ್ತ ಕುಳಿತು, ನಕ್ಕಳು. ಇವರ ಮುಂಭಾಗದಲ್ಲಿ ತನ್ನ ಎಲೆಗಳನ್ನೆಲ್ಲ ಕಳಚಿಕೊಂಡು ತನ್ನ ಮೈಯತುಂಬಾ ಹಳದಿ ಹೂವುಗಳನ್ನು ಹೊದ್ದು ಕೊಂಡ್ಡಿದ್ದಂತಹ ಒಂದು ಮರ ಹಿಂಗೆ ಬಂದು ಹಂಗೆ ಹೋದ ಗಾಳಿಗೆ ನಗಾಡಿತು. ‘ಯಾಕೆ?’ ಅಂದ. ಏನೇನೋ ಹಳೆಯ ನೆನಪುಗಳು ಅಂದಳು. ಅವಳು ಎಷ್ಟು ತಡೆದುಕೊಂಡರೂ ನಗು ತಡೆದುಕೊಳ್ಳಲು ಅವಳಿಂದ ಆಗಲಿಲ್ಲ. ಮಕ್ಕಳನ್ನು ಮಾಡೋದು ಹೇಗೆ? ಮಣ್ಣಲ್ಲಿ ಮಾಡ್ತಾರಂತೆ! ಮತ್ತೆ ನಾವು ಮಾಡಿದರೆ ಆಗಲ್ಲ. ಹೊಟ್ಟೆಯಲ್ಲಿ ಇರುತ್ತವಾ ಮಕ್ಕಳು? ಅಲ್ಲಿಂದ ಹೆಂಗೆ ಬರ್ತಾವೆ?’ ಮಾತುಗಳು ಸುಳಿದು ಮತ್ತಷ್ಟು ನಕ್ಕಳು. ‘ಲೇ ಮೆಲ್ಲಗೆ ಕಣೆ ಮೈಮೇಲೆಲ್ಲಾ ಚೆಲ್ಲಿಕೊಂಡಿಯಾ’ ಎಂದ. ಅವಳು ಕೇಳದೇ ಇದ್ದರೂನು ಜಯಂತ, ‘ಎಂ. ಎ ಮುಗಿಸಿ ಅರ್ಧ ಪಿ ಎಚ್. ಡಿಯನ್ನು ಪಚಡಿ ಮಾಡಿ ಸದ್ಯ ದುರ್ಗದಲ್ಲೇ ಇದೀನಿ. ಪ್ರೈಮರಿ ಶಾಲೆಗಳಲ್ಲಿನ ಪಠ್ಯಕ್ರಮ ಮತ್ತು ಭೋಧನ ಕ್ರಮಗಳ ಕುರಿತು ಅಧ್ಯಯನ ಮಾಡುವ ಒಂದು ಎನ್ ಜಿ ಓ ದಲ್ಲಿ ಕೆಲಸ ಮಾಡುತ್ತಿದ್ದೇನೆ. ಇಷ್ಟ ಪಟ್ಟೋಳು ಸಿಗಲಿಲ್ಲ. ಅತ್ತೆ ಮಗಳನ್ನ ಮದುವೆಯಾಗಿ ಇದೇ ರೋಡಿನ ಡೆಡ್ ಎಂಡ್ ನಲ್ಲಿ ಒಂದು ಮನೆಯಲ್ಲಿ ಬಾಡಿಗೆಗೆ ಇದ್ದೇನೆ. ಮಗಳಿದ್ದಾಳೆ. ಹೆಸರು ಸಾಂಚಿ ಎಂದು. ಮೂರುವರೆ ವರ್ಷ ಅವಳಿಗೆ. ಚಿಕ್ಕಪ್ಪ ಚಿಕ್ಕಮ್ಮ ಹೌಸಿಂಗ್ ಬೋರ್ಡ್‍ಕಾಲೋನಿಯಲ್ಲಿ ಸ್ವಂತ ಮನೆಯನ್ನು ಕಟ್ಟಿಕೊಂಡು ಇದ್ದಾರೆ. ಅಮ್ಮ ಅಪ್ಪ ಊರಲ್ಲಿ. ನಮ್ಮ ಚಿಕ್ಕಪ್ಪನಿಗೆ ಕೆಲಸ ಸಿಕ್ಕಾಗ ನಾನು ಊರು ಬಿಟ್ಟಿದ್ದು ನಂತರ ಊರಿನ ಸಂಪರ್ಕ ಅಷ್ಟಕ್ಕಷ್ಟೆ. ಹೋಗ್ತಾ ಬರ್ತಾ ಇರುತ್ತೇನೆ. ಈ ಸಿಟಿ ಲೈಪ್ ಬೋರ್ ಅನ್ನಿಸುತ್ತಿದೆ. ಒಂದಿನ ಇದು ಸಾಕು ಅನ್ನಿಸುತ್ತೆ. ಸೋ ವಾಪಸ್ಸು ಹೋಗ್ತೇನೆ ಊರಿಗೆ. ಸದ್ಯಕ್ಕೆ ಇಷ್ಟು. ಮತ್ತೆ ಸಿಗು ಇನ್ನೂ ಏನೇನೋ ಇದೆ ಮಾತಾಡೋಕೆ’. ‘ಅಂದಹಾಗೆ ಒಬ್ಬಳೇ ಬಂದಿದಿಯಾ? ಮದುವೆ ಮಕ್ಕಳು?’ ಸದ್ಯ ಊರಲ್ಲೇ ಇದೇನೆ. ಎರಡು ವರ್ಷಗಳಾದವು’. ‘ಮತ್ತೆ ಯಾರೂ ಹೇಳಲಿಲ!’ ‘ನೀನು ಊರಿಗೆ ಬಂದರೆ ತಾನೆ, ಅದು ಯಾವಾಗ ಬರುತ್ತೀಯೋ ಯಾವಾಗ ಹೋಗುತ್ತೀಯೋ? ಮೇಲಾಗಿ ಊರಲ್ಲಿ ಇದ್ದರೂ ನಾನು ಇಲ್ಲವೇನೋ ಅನ್ನುವ ಥರ ನಾನು ಇದ್ದೇನೆ. ತೋಟದಲ್ಲಿ ಒಬ್ಬಳೇ ಇದ್ದೇನೆ. ಮುಂಬೈಯಿಯಲ್ಲಿ ಇದ್ದೆ. ವಾಪಸ್ಸು ಬಂದಮೇಲೆ ಮನೆಕಟ್ಟಿಸಿಕೊಂಡು ಅಲ್ಲೆ ಇದೇನೆ’. ‘ಮುಂಬೈಯಲ್ಲಿ ಏನು ಮಾಡ್ತಿದ್ದೆ? ಇಫ್ ಯು ಡೋಂಟ್ ಮೈಂಡ್’ ‘ಪರವಾಗಿಲ್ಲ, ಜಾಹಿರಾತುಗಳಿಗೆ ಚಿತ್ರಕತೆ ಬರೆಯುತ್ತಿದ್ದೆ. ಗಂಡ ಒಂದು ಸಾಫ್ಟ್‍ವೇರ್ ಕಂಪನಿಯೊಂದರಲ್ಲಿ ವೆಬ್ ಡಿಸೈನರ್‍ಆಗಿ ಕೆಲಸ ಮಾಡುತ್ತಿದ್ದ’. ‘ವೋ ನೈಸ್! ವಂಡರ್ ಫುಲ್!’ ಎಂದ. ಅವನು ಅವಳ ಮದುವೆ ಮಕ್ಕಳು ಬಗ್ಗೆ ಕೇಳಿದ್ದಕ್ಕೆ ಸ್ಪಷ್ಟವಾದ ಉತ್ತರ ಕೊಡದಿದ್ದುದನ್ನು ಗಮನಸಿ ಆ ವಿಷಯವನ್ನು ಮುಂದುವರೆಸದೆ ಸುಮ್ಮನಾದ. ಆದರೆ ಅವನಿಗೆ ಅವಳ ಜೊತೆಗಿನ ಕ್ಷಣಗಳು ಸಂತೋಷವನ್ನು ಮೊಗೆದು ಅವನ ಮುಖಕ್ಕೆ ಎರಚುತ್ತಿದ್ದುದು ಅವನ ಉಲ್ಲಸಿತ ವರ್ತನೆಯಲ್ಲಿ ಕಾಣುತ್ತಿತ್ತು. ‘ಜಯಂತ್ ಒಂದು ಕನಸು ಪದೇ ಪದೇ ಬೀಳುತ್ತಿರುತ್ತೆ ನಿದ್ರೆಯಲ್ಲಿ. ಎಷ್ಟು ಸಲ ಅಂದರೆ ಓ ಮೈ ಗಾಡ್ ಲೆಕ್ಕನೇ ಇಲ್ಲ ಅಷ್ಟು ಸಲ’ ಅಂದು, ಅದು- ಮರುಭೂಮಿ. ಕಣ್ಣುಹಾಯಿಸಿದಷ್ಟು. ಗಾಳಿ ಇದೆಯೋ ಇಲ್ಲವೋ ಗೊತ್ತಾಗುತ್ತಿಲ್ಲ. ಇಬ್ಬರು. ಒಂದು ಹುಡುಗ. ಒಂದು ಹುಡುಗಿ. ಕೆಂಪುಕಾರು. ಅದು ಡಾಲ್ಫಿನಥರ ಇದೆ. ಅದಕ್ಕೆ ರೆಕ್ಕೆಗಳು. ಅಗಲ. ಅವರು ಉಸಿರಾಡುವಾಗ ಅಲ್ಲಿ ಗಾಳಿ ಇರುವುದು ಗೊತ್ತಾಗುತ್ತಿತ್ತು. ಕಾರು ಸ್ಪೀಡಲ್ಲಿ ಚಲಿಸಿ ಥಟ್ಟನೆ ನಿಂತಿತು. ಕಾರೂ ಮರಳಗುಡ್ಡೆಯಾಗಿದೆ. ಅದರ ಮುಂದಿನ ಒಂದು ಫರ್ಲಾಂಗು ದೂರದಲ್ಲಿ ಕೆಂಪುಬಣ್ಣದ ಹೂವುಗಳು ಅಲ್ಲಾಡುತ್ತಿವೆ ಮನುಷ್ಯರ ತಲೆಗಳ ಥರ. ಗಾಳಿ ಅಲ್ಲಿಯೂ ಇದೆ. ಗಾಳಿಯ ರೂಪ ಹೂವುಗಳ ಅಲುಗಾಟದಲ್ಲಿ ಕಾಣುತ್ತಿದೆ. ಕಾರು ಅವುಗಳ ದಿಕ್ಕಿನತ್ತ ಚಲಿಸತೊಡಗಿತು. ಅದರಲ್ಲಿ ಅವರಿಬ್ಬರು ಸುಮ್ಮನೇ ಕುಳಿತುಕೊಂಡಿದ್ದಾರೆ. ಒಂದು ಫರ್ಲಾಂಗ್ ಚಲಿಸಿದ ನಂತರ ಮತ್ತೆ ನಿಂತಿತು. ಕಾರು ತನ್ನಷ್ಟಕ್ಕೆ ತಾನೇ ಚಲಿಸುತ್ತಿದೆ. ಸ್ವಯಂ ಚಾಲಿತ. ಒಂದು ಫರ್ಲಾಂಗ್ ಚಲಿಸಿದ ನಂತರ ಒಂದು ಫರ್ಲಾಂಗು ಹಿಂದೆ ನಿಂತಾಗ ಹೇಗೆ ಕಾಣುತ್ತಿತ್ತೋ ಮತ್ತೆ ಅದೇ ಥರ ಒಂದು ಫರ್ಲಾಂಗು ಕಾಣುತ್ತಿದೆ. ಕಾರು ಇದ್ದಕ್ಕಿದ್ದ ಹಾಗೆ ಮರಳಿನ ಕಾರೆ ಆಗಿದೆ. ಆಗಿ ಹಾರ ತೊಡಗಿತು ಅಂತರಿಕ್ಷದಲ್ಲಿ. ರೆಕ್ಕೆಗಳು ಬಡಿದುಕೊಳ್ಳತೊಡಗಿದವು. ಅವು ಬಡಿದುಕೊಂಡಹಾಗೆಲ್ಲ ಅವುಗಳ ಉದ್ದ ಅಗಲ ಬೆಳೆಯುತ್ತಿದೆ. ಹಾರಿ, ಹಾರಿ ಅದೃಶ್ಯವಾಯಿತು. ಅವರಿಬ್ಬರು ಮರಳು ಭೂಮಿಯಲ್ಲಿ. ಅವನು ಅವಳ ಕಣ್ಣುಗಳನ್ನೇ ನೋಡುತ್ತ ನಿಂತ. ಒಂದು ಕಣ್ಣಲ್ಲಿ ಅವನು ಕಾರಿನಲ್ಲಿ ನೋಡಿದ್ದ ಹೂವುಗಳು. ಮತ್ತೊಂದು ಕಣ್ಣಲ್ಲಿ ರಕ್ತಬಣ್ಣದ ಮಂಜುಗಡ್ಡೆ. ಸೂರ್ಯ ಆಕಾಶದಿಂದ ಧುಮುಕಿ ಮಂಜುಗಡ್ಡೆಯನ್ನು ಕರಗಿಸಿಕೊಂಡು ಗಟಗಟ ಕುಡಿಯ ತೊಡಗಿತು. ಒಂದು ಫರ್ಲಾಂಗು ದೂರದಿಂದ ಕಾಣುತ್ತಿದ್ದ ಹೂವುಗಳು ಪಕ್ಷಿಗಳಾಗಿ ಹಾರಿ ಹೋದವು. ಅಲ್ಲಿಂದಲೇ. ನಿನಗೆ ಈ ಕನಸನ್ನ ಹೇಳಬೇಕೆಂದು ನಿಮ್ಮ ಮನೆಗೆ ಬಂದಿದ್ದೆ. ರಾತ್ರಿ ಏಳೂವರೆ ಗಂಟೆ. ಎಚ್.ಎಂ.ಎಸ್ ಬಸ್ಸು ಹಾರನ್ನು ಮಾಡಿಕೊಂಡು ಕಮ್ಮಾರಹಟ್ಟಿಯ ಪಕ್ಕದಲ್ಲಿ ಹೋಗುತ್ತಿತ್ತು. ಕೋಡಿಹಳ್ಳದ ಕಡೆಯಿಂದ ಹೊಸಮನೆರ ಉಗಾದಜ್ಜ ಬರುತಾ ಇದ್ದ. ಒಂದು ಕೈಯಲ್ಲಿ ಲಾಟೀನು. ಮತ್ತು ಅದೇ ಕೈಯಲ್ಲಿ ಒಂದು ಚಾಕು. ಹಿತ್ತಾಳೆ ಹಿಡಿ. ರಕ್ತ ಜಿನುಗುತ್ತಿತ್ತು. ಬೀದಿಯಲ್ಲಿದ್ದ ನಾಯಿಗಳು ರಕ್ತ ಜಿನುಗುತ್ತಿದ್ದರೂ ಅದು ರಕ್ತವೇ ಅಲ್ಲವೆಂಬಂತೆ ಸುಮ್ಮನಿದ್ದವು. ಆದರೆ ಅವು ಅದನ್ನು ನೋಡುತ್ತಿದ್ದವು. ಮಿಸುಕಾಡುತ್ತಿರಲಿಲ್ಲ. ಎಲ್ಲೆಲ್ಲಿ ಕೂತುಕೊಂಡಿದ್ದವೋ ಅಲ್ಲೇ ಇದ್ದವು. ಮತ್ತೊಂದು ಕೈಯಲ್ಲಿ ಬಿಳಿ ಓತದ ತಲೆ. ಅದರ ಎರಡು ಕಣ್ಣುಗಳು ನನ್ನನ್ನೇ ನೋಡ್ತಾ ಇವೆ. ಯಪ್ಪ ಭಯವಾಯಿತು. ‘ಅಮ್ಮಿ ಒಳಕೆ ಬಾರೇ’ ಎಂದು ನಿಮ್ಮಮ್ಮ ನನ್ನನ್ನು ಎಳೆದುಕೊಂಡಳು. ಆಗ ನಿಮ್ಮ ಅಮ್ಮ ಅಪ್ಪ ಹೊಸ ರಾಗಿಯ ಶಾವಿಗೆ ಒತ್ತುತ್ತಿದ್ದರು. ಶಾವಿಗೆ ಒತ್ತುತ್ತ ನಿಮ್ಮ ಅಮ್ಮ ಉಗಾದಜ್ಜ ಎಲ್ಲಿಗೋ ಮೇಕೆ ಕಡಿಯಾಕೆ ಹೋಗಿದ್ದ ಅನ್ನಿಸುತ್ತೆ, ತಲೆ ಹಿಡಕೊಂಡು ಹೋಗ್ತಾ ಇದಾನೆ’ ಎಂದು ಹೇಳಿದ್ದಕ್ಕೆ, ನಿಮ್ಮ ಅಪ್ಪ, ‘ಅದೆ ಕಣೆ ಕಾಮರಾಯನ ಮಗನಿಗೆ ಹತ್ತವರ್ಷವಾದರೂ ಮಕ್ಕಳಾಗಿರಲಿಲ್ಲವಲ್ಲ, ಶ್ರವಣಪ್ಪನಿಗೆ ಹರಕೆ ಮಾಡಿಕೊಂಡಿದ್ದರಂಥೆ ಮಗು ಹುಟ್ಟಿದರೆ ಓತುನ್ನ ಬಲಿಕೊಡ್ತೀನಿ ಅಂತ. ಹೋದ ವಾರ ಅವನ ಸೊಸೆ ಹಣ್ಣುಗೂಸ ಹಡೆದಳಲ್ಲ ಅದಕ್ಕೆ ಹರಕೆ ತೀರಿಸಿದರೂ ಅನ್ನಿಸುತ್ತೆ’ ಎಂದು ನಿಮ್ಮ ಅಮ್ಮನಿಗೆ ಹೇಳ್ತಾ ಇದ್ದರು. ಆಮೇಲೆ ನಿಮ್ಮ ಅಪ್ಪ, ‘ಲಕ್ಷ್ಮಿ ಮುಂದಿನ ವರ್ಷ ನಮ್ಮ ಜಯಂತು ದುರ್ಗಕ್ಕೆ ಹೋಗ್ತಾನೆ ಓದಕ್ಕೆ ಅವರ ಸಣಪ್ಪನ ಜೊತೆ’ ಎಂದು ಹೇಳಿದರು. ನನಗೆ ಕ್ಷಣ ಪಿಚ್ಚೆನ್ನಿಸಿತು. ಅಷ್ಟೊತ್ತಿಗೆ ನೀನು ಬಂದೆ. ನಿನ್ನಿಂದೆ ಪೂಜಾರ ಕರಿಯಣ್ಣ ಬೈದುಕೊಂಡು ಬರುವ ಸದ್ದು ಕೇಳಿಸಿತು. ನಿನ್ನ ಮಗ ಹಾಳಾಗೆದನೆ ಕಣ್ಳ ‘ಮಕ್ಕಳು ಎಲ್ಲಿಂದ ಬತ್ತವೆ ಮಕ್ಕಳುನ ಹೆಂಗೆ ಮಾಡೋದು ಅಮ್ತ ಕೇಳ್ತಾನೆ, ಇವನಿಗೆ ಒಸಿ ಒದ್ದು ಬುದ್ಧಿ ಹೇಳ್ಳ’ಎಂದ. ಅದಕ್ಕೆ ನಿಮ್ಮ ಅಪ್ಪ ‘ಲೆ ಜಯಂತು ಅಂಗೆಲ್ಲ ಕೇಳ್ತಾರೆನಾ ಬಿಡ್ತು ಅನ್ನು. ಲಕ್ಷ್ಮ ಜೊತೆಗೆ ಆಟ ಆಡ್ರಿ ಇಲ್ಲೆ ಅಂಗಳದಲ್ಲಿ’ ಅಂದರು. ‘ಅವೊತ್ತು ಈ ಕನಸನ್ನ ಹೇಳುವುದಕ್ಕೆ ಆಗಲಿಲ್ಲ. ಆಮೇಲೂ ಹೇಳಕೆ ಆಗಲಿಲ್ಲ. ಅದೇ ಕನಸು ಮತ್ತೆ ಮತ್ತೆ ಸಾಕಷ್ಟು ಸಲ ಬಂದೈತೆ ನಿದ್ದೆಗೆ. ಮೊನ್ನೆನೂ ಬಿದ್ದಿತ್ತು. ಈಗ ಒಂಥರ ಸಮಾಧಾನ ಆಯುತು ಕಣೋ ಜಯಂತು ನಿನ್ನ ಹತ್ತಿರ ಹೇಳಿಕೊಂಡ ಮೇಲೆ, ಇಷ್ಟು ವರ್ಷಗಳ ಕಾಲ ಏನೋ ಒಂಥರ ಮಂಕು ಕವಿದ ಹಾಗೆ ಆಗಿತ್ತು. ಈಗ ಹಳಾರ ಆಯಿತು’ ಎಂದು, ಮತ್ತೆ ಮುಂದುವರೆದು, ‘ಹೋದವಾರ ಅಂದರೆ ಶನಿವಾರ. ಅವೊತ್ತು ಮಳೆ ಬರುವ ಹಾಗಿತ್ತು. ಬರಲಿಲ್ಲ. ಗಾಳಿ ಬಂದು ಮಳೆ ಮೋಡನ ಛಿದ್ರಿಸಿ ಬಿಟ್ಟಿತು. ಅವೊತ್ತು ರಾತ್ರಿ ಮತ್ತೆ ಕನಸು. ಆದರೆ ಸ್ವಲ್ಪ ಭಿನ್ನವಾಗಿತ್ತು. ಅದೇ ಅವರಿಬ್ಬರು. ಇಬ್ಬರೇ ಇಬ್ಬರು ಇಡೀ ಮರಳ ಗಾಡಿನಲ್ಲಿ. ಸುಮ್ಮನೆ ಎಷ್ಟೋ ಕಾಲದಿಂದ ನಿಂತುಕೊಂಡಿದ್ದಾರೆ. ಕೊನೆಗೆ ಒಂದು ದಿನ ಅವರು ನಿಂತಿರುವ ಜಾಗದಲ್ಲಿ ಅವರ ಕಾಲುಗಳಿಗೆ ತಣ್ಣನೆಯ ಅನುಭವವಾಯಿತು. ಮೂಗಿನ ರಿಂಗಿನಷ್ಟಗಲದ ಮೊಳಕೆ ಮೂಡಿತು. ಮತ್ತೆ ಎಚ್ಚರ’ ಎಂದಳು. ಅವಳು ಇನ್ನೂ ಏನೋ ಹೇಳಲು ಯೋಚಿಸುತ್ತಿದ್ದಳು ಅಷ್ಟರಲ್ಲಿ ಅವಳ ಫೋನ್ ರಿಂಗಾಯಿತು. ‘ಹೌದಾ? ಸರಿ, ಮತ್ತೇನು ಗಾಡಿದು ಕಂಪ್ಲೇಟ್ ಇಲ್ಲವಾ, ಓ ಸರಿ, ಬಂದೆ’ ಎಂದಳು. ಜಯಂತ ಇವಳನ್ನೇ ನೋಡುತ್ತ ಅವಳ ಮಾತಿಗೆ ಧ್ವನಿಗೂಡಿಸದೆ ಸುಮ್ಮನೆ ಕೇಳಿಸಿಕೊಳ್ಳುತ್ತ ಕುಳಿತಿದ್ದನು. ಜಯಂತ್ ಕಾರು ರೆಡಿ ಅಂತೆ , ಹೋಗೋಣವಾ?’ ಎಂದು ಕೇಳಿದ ಅವಳ ಮಾತು ಅವನನ್ನು ಯಾವುದೋ ಲೋಕದಿಂದ ತಂದು ದುಪ್ಪೆಂದು ಬಿಸಾಡಿದಂತೆ ಆಯಿತು ಅವನಿಗೆ. ‘ಸರಿ’ ಎಂದು ಎದ್ದು ಕಾರಿನ ಕಡೆ ಹೆಜ್ಜೆ ಹಾಕಿದ.

ಅವಳನ್ನು ಒಮ್ಮೆ, ಮುಂದಿನ ದಾರಿಯನ್ನು ಒಮ್ಮ ನೋಡುತ್ತ ಕಾರನ್ನು ಓಡಿಸತೊಡಗಿದ. ಕಾರು ಮುಂದಕ್ಕೆ ಹೋಗ್ತಾ ಇತ್ತು. ಜೋಗಿಮಟ್ಟಿರಸ್ತೆ ಮಾರಕ್ಕನ ಗುಡಿಯನ್ನು ದಾಟಿಕೊಂಡು ರೆಡ್ಡಿಕಟ್ಟೆಯ ಅಂಚಿಗೆ ಜೋಗಿಮಟ್ಟಿರಸ್ತೆಯ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ನಾಗರಕಟ್ಟೆಯನ್ನು ಹಾದು ಹೋಗುತ್ತಾ ಇತ್ತು. ‘ಮದುವೆ, ಮಕ್ಕಳು ?’ ಎಂದು ಅವನು ಕೇಳಿದ ಪ್ರಶ್ನೆಗೆ ಮಿನುಗುತ್ತಿದ್ದ ಅವಳ ಮುಖ ಇದ್ದಕ್ಕಿದ್ದಂಥೆ ವಿಷಾದದ ಎಳೆ ಮೂಡಿ ಬಾಡಿದಂತಾಗಿದ್ದನ್ನು ಗಮನಿಸಿ ಸುಮ್ಮನಾಗಿದ್ದರೂ, ಯಾಕೆ ಎನ್ನುವ ಪ್ರಶ್ನೆ ಅವನನ್ನು ಕಾಡುತ್ತಲೇ ಇತ್ತು. ಕಾರು ಮುಂದಕ್ಕೆ ಚಲಿಸುತ್ತಲೇ ಇತ್ತು. ಅವಳ ಮನಸ್ಸು ಕ್ಷಣ ಹಿಮ್ಮುಖವಾಗಿ ಚಲಿಸತೊಡಗಿತು. ‘ಬೇಡ ಅದನ್ನು ಸಂಪೂರ್ಣ ಬಿಟ್ಟು ಬಿಟ್ಟಿದ್ದೇನೆ. ಮತ್ತೆ ಅದನ್ನು ಕೆದಕುವುದು ಬೇಡ. ಏನಾದರು ಆಗಲಿ ಮತ್ತೆ ಅದನ್ನು ಹೊರಗಡೆ ಹಾಕುವುದು ಬೇಡ. ಈಗ ಇದರ ಅವಶ್ಯಕತೆ ಇಲ್ಲ. ಕಾಲಗರ್ಭದಲ್ಲಿ ಹುದುಗಿ ಹೋಗಲಿ. ಎಷ್ಟೆಲ್ಲ ಹುದುಗಿ ಹೋಗಿಲ್ಲ. ಎಲ್ಲವನ್ನೂ ಹೇಳಬೇಕು. ಕೆಲವು ಹೇಳದೆ ಇದ್ದರೆ ಚೆನ್ನ. ಅವಶ್ಯಕತೆ ಇಲ್ಲ’. ಎಂದು ಕೊಂಡಳು ತನ್ನೊಳಗೆ. ಆದರೂ ಅವಳ ಮನಸ್ಸಿನ ಪರದೆಯ ಮೇಲೆ ದೃಶ್ಯಗಳು ಒಂದರ ನಂತರ ಬಂದು ಹೋಗತೊಡಗಿದವು. ‘ಗಂಡ ಹೆಂಡತಿ ಸಂಬಂಧ ಅಂದರೆ ಕೇವಲ ಹಾಸಿಗೆ ಹಂಚಿಕೊಳ್ಳುವುದಲ್ಲ. ನಂಬಿಕೆ ಇಲ್ಲ ಅಂದಮೇಲೆ ಸಂಬಂಧಗಳು ಉಳಿಯುವುದಾದರೂ ಹೇಗೆ? ನಾವು ಮಲಗುತ್ತಿದ್ದ ಹಾಸಿಗೆಯಲ್ಲಿ ಇನ್ನೊಬ್ಬಳು!’ ಅವಳ ಬೆತ್ತಲ ಮೈಯಿ ಇವಳಿಗೆ ಬೆಂಕಿಯಲ್ಲಿ ಅದ್ದಿದ ಹಾಗೆ ಆಯಿತು. ‘ಆ ರೂಮಿನ ಪ್ರತಿ ಅಂಗುಲದಲ್ಲು ಕನಸುಗಳನ್ನು ಬೀಳಿಸಿರುವೆ. ಅನೇಕ ಕನಸುಗಳು ಹೂವುಗಳು ಅರಳಿದಂತೆ ಅರಳುತ್ತಿದ್ದವು. ಈಗ ಅಲ್ಲಿ ಛೇ! ಈಗ ಅವುಗಳ ಮೇಲೆ ಅಪರಿಚಿತಳೊಬ್ಬಳ ಹೆಜ್ಜೆಗಳು. ಇದನ್ನು ಕಂಡ ಮೇಲೂ ನನ್ನ ಕಣ್ಣಲ್ಲಿ ನಿನ್ನನ್ನು ನೋಡುವೆಯಾ? ನನ್ನಿಂದ ಸಾಧ್ಯವಿಲ್ಲ. ಮತ್ತೆ ನೀನು ತೋರಿಸಿದ ಕಾಳಜಿ, ಜೊತೆ ಸಾಗಿದ ಕ್ಷಣಗಳು ಅಪ್ಪುಗೆ, ಮಾತು ಮೌನ ಅದೇಗೆ ಸಾಧ್ಯ ಮರೆಯುವುದಕ್ಕೆ ನಿನ್ನಿಂದ. ಅಸಹ್ಯ ಹುಟ್ಟಿಸುವ ಜಾಗದಲ್ಲಿ ಒಂದು ಕ್ಷಣನೂ ಇರಲು ಮನಸ್ಸು ಒಲ್ಲದು. ನನ್ನಿಂದ ಆಗಲ್ಲ. ನಿನ್ನ ಜೊತೆ ಕೈ ಹಿಡಿದು ಎಷ್ಟು ದೂರ ಕ್ರಮಿಸಿಬೇಕೆಂದಿದ್ದೆ ದಾರಿಯನ್ನ! ಇಲ್ಲಿಗೆ ಸಾಕೆನ್ನಿಸುತ್ತೆದೆ. ನಿನ್ನನ್ನೇ ಮಗೂ ಅಂದುಕೊಂಡಿದ್ದೆ. ಡಾಕ್ಟರ್ ಭರವಸೆ ಕೊಟ್ಟಿದ್ದರಲ್ಲ, ಆಗುತ್ತೆ ಅಂಥ. ನಮ್ಮದೇ ಆದಂತಹ ಮಗು ಏನೆಲ್ಲ ಕನಸು ಎಲ್ಲ ನುಚ್ಚು ನೂರು’.

ಜಯಂತ ಗೇರ್ ಶಿಫ್ಟ್ ಮಾಡಿದ. ಮುಂದೆ ಹಂಪ್ಸ್. ನಿಧಾನ ಹತ್ತಿಸಿ, ಅಷ್ಟೇ ನಿಧಾನ ಇಳಿಸಿ ಮತ್ತೊಮ್ಮೆ ಗೇರ್ ಶಿಫ್ಟ್ ಮಾಡಿ ಎಡಗಡೆ ನೋಡಿ ತಕ್ಷಣ ಅವಳ ಮುಖಭಾವದಲ್ಲಿ ಆದ ಬದಲಾವಣೆಯನ್ನು ಗಮನಿಸಿ, ‘ಓ ಸಾರಿ’ ಎಂದ. ಮೆಜೆಸ್ಟಿಕ್ ಸರ್ಕಲ್ ಬಳಿ ಕಾರನ್ನು ಬಲಗಡೆ ತಿರುಗಿಸಿಕೊಂಡು ಡಿ.ಸಿ ಓಲ್ಡ್ ವೈರ್‍ಲೆಸ್ ಪೊಲೀಸ್ ಸ್ಟೇಷನ್ನಿನ ದಾರಿಯ ಕಡೆ ಹೊರಟು ಮತ್ತೆ ನೇರ ಡಿ.ಸಿ. ಆಫೀಸ್ ಕಡೆ ಹೋಗಿ ಮತ್ತೆ ಮುಂದಕ್ಕೆ ಡಿ.ಸಿ. ಮನೆಯ ಮುಂಭಾಗದ ಸರ್ಕಲ್ ಬಳಿ ಎಡಗಡೆ ತಿರುಗಿಸಿ ನೇರ ಹೋದವನು ಕಾರಿನ ಸರ್ವೀಸ್ ಸ್ಟೇಷನ್ ಬಳಿ ಕಾರನ್ನು ಪಾರ್ಕ್ ಮಾಡಿದ. ‘ಎಷ್ಟೋ ಶತಮಾನಗಳನ್ನು ಕಳೆದಹಾಗೆ ಆಗಿದೆ ಈ ತರಹದ ಆಪ್ತ ಕ್ಷಣಗಳನ್ನು ಕಳೆದು ಎಂದು ಕಾರಿನಿಂದ ಇಳಿದವಳು ನೇರ ಸರ್ವೀಸ್ ಸ್ಟೇಷನ್ ಒಳಗೆ ಹೋದಳು. ಇವನು ಸಿಗರೇಟನ್ನು ತರಲು ಪಕ್ಕದಲ್ಲಿದ್ದ ಬೀಡಾಸ್ಟಾಲ್‍ಗೆ ಹೋದ. ಹತ್ತು ನಿಮಿಷ ಆದಮೇಲೆ ತನ್ನ ಕಾರನ್ನು ಚಲಾಯಿಸಿಕೊಂಡು ಬಂದು ಜಯಂತ್ ಪಾರ್ಕ್‍ಮಾಡಿದ ಸ್ಥಳದಲ್ಲಿ ನಿಲ್ಲಿಸಿ, ಊರಿಗೆ ಹೋಗುವಷ್ಟರಲ್ಲಿ ಕತ್ತಲಾಗಿರುತ್ತೆ. ಈಗ ಹೊರಡುವೆ, ಮತ್ತೆ ಸಿಗೋಣ ಇಲ್ಲ ಒಂದು ಕೆಲಸ ಮಾಡು ನೆಕ್ಸ್ಟ್ ವೀಕ್ ಊರಿಗೆ ಬಾ , ಮಗಳು ಮತ್ತು ಹೆಂಡತಿನು ಕರೆದುಕೊಂಡು ಬಾ’ ಎಂದಳು. ಅವನ ಪೋನ್ ನಂಬರನ್ನು ಇಸಕೊಂಡು ತನ್ನ ಮೊಬೈಲ್‍ನ ಕಾಂಟ್ಯಾಕ್ಟ್ ಲಿಸ್ಟ್‍ನಲ್ಲಿ ಸೇರಿಕೊಂಡಳು. ‘ಓ.ಕೆ. ನಾನು ಫೀಲ್ಡ್ ವರ್ಕಿನ ಡೇಟಾವನ್ನು ಅನಾಲಿಸಿಸ್ ಮಾಡೋದಿದೆ’ ಎಂದು ಹೇಳಿ ಮುಂದುವರೆದು, ‘ಈ ಸಂಡೆ ಗ್ಯಾರಂಟಿ ಬರುತ್ತೀನಿ ಊರಿಗೆ. ನೋಡು ನಮ್ಮೂರಿಗೆ ನೀನು ನಮ್ಮನ್ನು ನೆಂಟರನ್ನು ಕರೆದಹಾಗೆ ಕರೆಯುತ್ತಿದ್ದೀಯಾ’ ಎಂದ.

ಬರುವ ಭಾನುವಾರ ತನ್ನ ಹೆಂಡತಿ ಮತ್ತು ಮಗಳು ಸಾಂಚಿ ಜೊತೆ ತನ್ನ ಊರಿಗೆ ಹೋದ. ಹೋದವನು ತನ್ನ ಮನೆಗೆ ಹೋಗದೆ ನೇರ ಲಕ್ಷ್ಮಿ ಇರುವ ತೋಟದ ಮನೆಗೆ ಹೋದ. ಲಕ್ಷ್ಮಿಯೇ ಹೊರಬಂದು ಖುದ್ದಾಗಿ ಇವರನ್ನು ಬರಮಾಡಿಕೊಂಡಳು. ಹೊರಗಡೆಯಿಂದ ನೋಡಲು ತುಂಬಾ ವಿಭಿನ್ನವಾದ ವಿನ್ಯಾಸದಲ್ಲಿ ಕಾಣುತ್ತಿತ್ತು. ಕಲ್ಲು ಮತ್ತು ಕೆಂಪು ಹೆಂಚಿನ ಇಟ್ಟಿಗೆಗಳಿಂದ ಕಟ್ಟಲ್ಪಟ್ಟಿತ್ತು. ಕಾಂಪೌಂಡು. ಅದರೊಳಗಡೆ ತರಾವರಿ ಹೂವಿನ ಗಿಡಗಳು ಇದ್ದು ಅವು ಕಂಗೊಳಿಸುತ್ತಿದ್ದವು. ಮನೆಯ ಮುಂಬಾಗಿಲು ಹಳೆ ಕಾಲದ ಕದ ಇದ್ದ ಹಾಗೆ ಕಾಣುತ್ತಿತ್ತು. ನಡುಮನೆಗೆ ಕಾಲಿಡುತ್ತಿದ್ದಹಾಗೆ ಅವರ ಕಣ್ಣಿಗೆ ಬಿದ್ದದ್ದು ಒಂದು ಕಂಭ. ಅದರ ಕೆಳಗೆ ಮುಂಬಾಗಿಲಿಗೆ ಮುಖಮಾಡಿಕೊಂಡಂತೆ ಒಂದು ಗೂಡು. ಅದರೊಳಗೆ ಒಂದು ಪುಟ್ಟ ಹಣತೆ ಉರಿಯುತ್ತಿತ್ತು. ಮನೆಯ ಒಳಗಡೆಯೂ ಕಲ್ಲಿಂದ ಆವೃತ್ತಗೊಂಡಿತ್ತು. ಅವರು ಕುಳಿತಿದ್ದ ಎದುರಿನ ಗೋಡೆಯ ನಡುವೆ ಒಂದಷ್ಟಗಲದ ಸಾದಾ ಮಣ್ಣಿನ ಗೋಡೆ. ಅದಕ್ಕೆ ಉರಿಮಂಜಿನ ಬಣ್ಣವನ್ನು ಬಳಿಯಾಲಾಗಿತ್ತು. ಅದರ ಮೇಲೆ ಅಚ್ಚ ಬಿಳಿ ಬಣ್ಣದಲ್ಲಿ ಹಸೆ ಚಿತ್ತಾರವನ್ನು ಬಿಡಿಸಲಾಗಿತ್ತು. ಮದುವೆ ದಿಬ್ಬಣ, ರಾಗಿ ಬೀಸುತ್ತಿರುವುದು, ಈಜಾಟವಾಡುತ್ತಿರುವುದು, ತೆಂಗಿನಮರ, ಉದಯಿಸುತ್ತಿರುವ ಸೂರ್ಯ, ಬೇಸಾಯ ಮಾಡುತ್ತಿರುವವರು, ಸ್ಕಿಪ್ಪಿಂಗ್ ಆಡುತ್ತಿರುವವರು, ಮಗುವಿಗೆ ಹಾಲುಣಿಸುತ್ತಿರುವ ತಾಯಿ, ಹುಡುಗ ಹುಡುಗಿಯರು, ಹುಲ್ಲಿನ ಮನೆ, ಅದರ ಮುಂಭಾಗದಲ್ಲಿ ಒಂದು ಬಿದಿರಿನ ಬೊಂಬುಗಳಿಂದ ಮಾಡಲ್ಪಟ್ಟಿದ್ದ ಸೇತುವೆ, ಅದರ ಕೆಳಗೆ ಹರಿಯುತ್ತಿರುವ ನೀರು, ಪಕ್ಕದಲ್ಲಿ ಭತ್ತದ ಹೊಲ, ಅದರಲ್ಲಿ ಕುಡುಗೋಲು ಹಿಡಿದಿರುವ ಹೆಂಗಸರು ಹೀಗೆ .. ಸಾಂಚಿ ಸೋಫಾದ ನಡುವೆ ಇಟ್ಟಿದ್ದ ಟೀಪಾಯಿಯ ಗಾಜಿನ ಮೇಲ್ಭಾಗಕ್ಕೆ ಕೆಳಗಿನಿಂದ ಅಕ್ವೇರಿಯಮ್ಮನ್ನು ಜೋಡಿಸಿ ಇಟ್ಟಿದ್ದುದರಿಂದ ಬಣ್ಣದ ಮೀನುಗಳು ಟೀಪಾಯಿಯ ಮೇಲೆ ಹರಿದಾಡುತ್ತಿವೆಯೇನೋ ಎನ್ನುವಂತೆ ಕಾಣುತ್ತಿದ್ದುದರಿಂದ ಬೆರಳುಗಳಲ್ಲಿ ಅವುಗಳನ್ನು ಹಿಡಿಯುತ್ತ ಅಲ್ಲಿ ಆಡುತ್ತಿದ್ದ ಬಣ್ಣಬಣ್ಣದ ಮೀನುಗಳನ್ನು ನೋಡುತ್ತ ನಗಾಡುತ್ತಿದ್ದಳು. ಜಯಂತ ಮುಂಭಾಗಿಲ ಮೇಲೆ ಮನೆಯ ಒಳಗಡೆಯಿಂದ ಹೊರಗಡೆ ಹೋಗುವಾಗ ನಿಚ್ಚಳವಾಗಿ ಕಾಣುವಂತೆ ನೇತುಹಾಕಿರುವ ಬೆತ್ತಲಮೈಯ ಎರಡುಕಾಲುಗಳನ್ನು ಅಗಲಿಸಿಕೊಂಡು ಹೂವಂತೆ ಯೋನಿಯನ್ನು ಅರಳಿಸಿಕೊಂಡಿರುವ ಲಜ್ಜಾಗೌರಿಯ ಚಿತ್ರದ ಫಲಕವನ್ನು ನೋಡಿದ. ಒಂದು ತುಂಟ ನಗು ಬಂದು ನರಗಳಲ್ಲೆಲ್ಲ ಹರಿದಾಡಿತು. ಅಷ್ಟರಲ್ಲಿ ಲಕ್ಷ್ಮಿ ನಾಲಕ್ಕು ಗ್ಲಾಸುಗಳಲ್ಲಿ ಎಳನೀರು ಮತ್ತು ಎಳನೀರಿನ ಎಳೆಗಂಜಿಯನ್ನು ಮಿಶ್ರಣಮಾಡಿ ಮಾಡಲಾಗಿದ್ದ ಪಾನೀಯವನ್ನು ಒಂದು ಟ್ರೇಯಲ್ಲಿ ಇಟ್ಟುಕೊಂಡು ತಂದು ಮೂವರಿಗೂ ಕೊಟ್ಟು ತಾನೊಂದನ್ನು ಹಿಡಿದು ಒಂದು ಸೋಫಾದಲ್ಲಿ ಕುಳಿತಳು. ಔಪಚಾರಿಕಕ್ಕಾಗಿ ತನ್ನ ಹೆಂಡತಿಯನ್ನು ಅವಳಿಗೆ ಪರಿಚಯಿಸಲು ಮುಂದಾದ. ಅವನು ಪರಿಚಯಿಸುವುದಕ್ಕಿಂತಲೂ ಮುಂಚೆ ಅವಳು ‘ಇವರು ನಿನ್ನ ಕಥಾನಾಯಕಿ ಲಚ್ಚಿ’ ಎಂದಳು. ಹೊರಗಡೆಯಿಂದ ತಂಗಾಳಿ ಬೀಸಿ, ಅದು ನಡುಮನೆಯ ತುಂಬೆಲ್ಲ ಆವರಿಸಿಕೊಂಡಿತು. ಹೊರಗಡೆ ನೋಡಿದಳು ಅನೇಕ ಹೂವಿನ ಗಿಡಗಳ ನಡುವೆ ಪಾರಿಜಾತ ಹೂವುಗಳು ಗಿಡದ ತುಂಬಾ ಹೊಳೆಯುತ್ತಿದ್ದವು.

ಚಿತ್ರಗಳು:

ಮೇಘಾ. ಜೆ ಶೆಟ್ಟಿ

ಮಹಂತೇಶ್ ದೊಡ್ಡಮನಿ

 


One comment to “ಎಚ್.ಆರ್. ರಮೇಶ್ ಕಥೆ : ಲಚ್ಟಿಯೆಂಬ ಪಾರಿಜಾತ”
  1. ಬರೆ ಇಸಂ ಗಳ ಬಗ್ಗೆ ಓದಿ ಓದಿ ಸಾಕಾಗಿತ್ತು ಈ ಎಡ ಚಿಂತಕರು ಮೋದಿ ಬಂದ ಮೇಲೆ ನಮ್ಮ ದೇಶಕ್ಕೆ ಏನೋ ಆಗಿಬಿಟ್ಟಿದೆ ಎಂದು ಪುಂಖಾನು ಪುಂಕಾ ಬರೆದಿದ್ದು(ಸಾಮಾನ್ಯರಿಗೆ ಆತರ ಏನು ಅನಿಸಿಲ್ಲ),
    ಇದು ಯಾವುದೇ ಇಲ್ಲದೆ ಚಿಕ್ಕ ವಯಸ್ಸಿನಲ್ಲಿ ಎಲ್ಲರಿಗೂ ಬಂದು ಹೋಗುವ ಸಹಜ ಕುತೂಹಲವನ್ನು ಮುಗುಳುನಗೆ ಮಾಡದಂತೆ ಆಹ್ಲಾದಕರವಾದ ನಿರೂಪಣೆ ನಿಜಕ್ಕೂ e ಕತೆ ತುಂಬಾ ಇಷ್ಟವಾಯ್ತು.

ಪ್ರತಿಕ್ರಿಯಿಸಿ