ಭರತವರ್ಷದ ಸಮೂಹ ಮಾಧ್ಯಮಗಳು ಮತ್ತು ಬಹುತ್ವದ ಸಾವು

ಭಾರತದಂತಹ ಅನನ್ಯವೂ, ವೈವಿಧ್ಯಮಯವೂ ಆದ ದೇಶದಲ್ಲಿ ಇರುವ ದನಿಗಳ ಕೂಗು ಅನೇಕ ಬಗೆಯವು. ಜನರ ಅಗತ್ಯಗಳು ಸಾವಿರ. ಆಶೋತ್ತರಗಳು ಅಸಂಖ್ಯ. ಆಶೆಗಳು ಅನೂಹ್ಯ. ಆದರೆ, ಅವೆಲ್ಲಕ್ಕೂ ಮಾತು ನೀಡಬಲ್ಲ ಮಾಧ್ಯಮವೇ ಧ್ವನಿ-ಎಸೆತಗಾರನ ಕೈನಲ್ಲಿನ ಬೊಂಬೆಯಂತೆ ಸುಮ್ಮನೇ ಬಾಯಾಡಿಸುತ್ತ ಜೊಳ್ಳು ಮಾತುಗಳಲ್ಲಿ ಮುಳುಗಿಹೋಗಿದೆ. ಇದರ ಕುರಿತು ಉಮಾಪತಿ ದಾಸಪ್ಪನವರು ವಿಸ್ತಾರವಾಗಿ ಬರೆದಿದ್ದಾರೆ. 

ಕೃಪೆ: The Conversation.com

ಕೃಪೆ: The Conversation.com

ನಾವು ಬದುಕುತ್ತಿರುವ ಈ ವಿಶ್ವ 1,300 ಕೋಟಿ ವರ್ಷಗಳಷ್ಟು ಹಳೆಯದು. ಮಾನವನೂ ಸೇರಿದಂತೆ 87 ಲಕ್ಷ ಜೀವ ಪ್ರಭೇದಗಳು ಈವರೆಗೆ ಇಳೆಯ ಮೇಲೆ ಪತ್ತೆಯಾಗಿವೆ. ಮನುಷ್ಯ ಇನ್ನೂ ಪತ್ತೆ ಮಾಡದಿರುವ ಜೀವಕೋಟಿಯ ಸಂಖ್ಯೆ ಸುಮಾರು ಹತ್ತು ಕೋಟಿ ಇದ್ದೀತೆಂದು ಅಂದಾಜು ಮಾಡಲಾಗಿದೆ. ಕಂಡು ಹಿಡಿಯುವ ಮುನ್ನವೇ ಅಳಿದು ಹೋಗುತ್ತಿರುವ ಜೀವಪ್ರಭೇದಗಳಿಗೆ ಲೆಕ್ಕವಿಲ್ಲ ಎನ್ನುತ್ತಾರೆ ಜೀವ ವಿಜ್ಞಾನಿಗಳು. ವಿಜ್ಞಾನಕ್ಕೆ ಈವರೆಗೆ ತಿಳಿದು ಬಂದಿರುವ ಪ್ರಕಾರ ಜಗತ್ತಿನಲ್ಲಿರುವ ಸಸ್ಯ ಪ್ರಭೇದಗಳ ಸಂಖ್ಯೆ 3.91 ಲಕ್ಷ. ಈ ಪೈಕಿ ಶೇ.94ರಷ್ಟು ಮರಗಿಡಗಳು ಹೂ ಬಿಡುತ್ತವೆ. ಅರ್ಥಾತ್ 3.69 ಲಕ್ಷ ಬಗೆಯ ಹೂವುಗಳು ಅರಳುತ್ತಿವೆ. ಹಣ್ಣುಗಳೂ ಲಕ್ಷಾಂತರವೇ. ಕೇವಲ ಬಾಳೆ ಹಣ್ಣಿನಲ್ಲೇ 1,600 ಬಗೆಯ ತಳಿಗಳಿವೆ. 1,500 ಬಗೆಯ ಮಾವು. ಒಂದೊಂದಕ್ಕೂ ಒಂದೊಂದು ಸ್ವಾದ. ನಾವು ಸೇವಿಸುವ ದವಸ ಧಾನ್ಯಗಳ ವೈವಿಧ್ಯವನ್ನೇ ಒಮ್ಮೆ ಕಣ್ಣ ಮುಂದೆ ತಂದುಕೊಳ್ಳಬೇಕಿದೆ. ‘ಜೀವ ವೈವಿಧ್ಯ’ ಅಥವಾ ‘ಬಯೋ ಡೈವರ್ಸಿಟಿ’ ಎಂಬ ಪದಗುಚ್ಛದ ಬಳಕೆಗೆ ಬಂದ ತಳಪಾಯವಿದು.

ವಿಶ್ವದ ವಿಚಾರ ಒತ್ತಟ್ಟಿಗಿರಲಿ, ಭಾರತಕ್ಕೆಲ್ಲ ಒಂದೇ ಹೂವು, ಒಂದೇ ಏಕದಳ ಮತ್ತು ಏಕಮಾತ್ರ ದ್ವಿದಳ ಧಾನ್ಯ, ಒಂದೇ ಸೊಪ್ಪು ಸದೆ, ಒಂದೇ ಸಾಂಬಾರ, ಸೃಷ್ಟಿಯಲ್ಲಿನ ಬಣ್ಣಗಳು, ಹಣ್ಣುಗಳು, ಪ್ರಾಣಿಗಳು ಗಿಡ ಮರಗಳು ಯಾಕೆ ಇಲ್ಲ? ಇದ್ದರೆ ಬದುಕು ನಿಸ್ಸಾರ ಆಗುತ್ತಿತ್ತೋ ಇಲ್ಲವೋ?ನಮ್ಮ ಹಳೆಗನ್ನಡ ನಡುಗನ್ನಡ ಹೊಸಗನ್ನಡದ ಸೃಜನಶೀಲರೆಲ್ಲರ ಬುದ್ಧಿ ಭಾವಗಳನ್ನು ಒಂದೇ ಮೂಸೆಗೆ ಹಾಕಿ ಎರಕ ಹೊಯ್ದಿದ್ದರೆ?. ಬೇಂದ್ರೆ, ಕುವೆಂಪು, ಮಾಸ್ತಿ, ತೇಜಸ್ವಿ, ಕಾರಂತ, ಅನಂತಮೂರ್ತಿ, ಲಂಕೇಶ್ ಏಕರೂಪದ ಭಾಷೆ, ಏಕರೂಪದ ವಿಚಾರಗಳನ್ನು ಬರೆದಿದ್ದರೆ?!! ಜಗತ್ತಿನ ವಿಜ್ಞಾನಿಗಳು ಸಂಶೋಧಕರು, ಶಿಲ್ಪಿಗಳು, ಕಲಾವಿದರೆಲ್ಲ ಒಂದೇ ವಸ್ತು ವಿಷಯ ಕುರಿತು ಆಲೋಚಿಸಬೇಕೆಂದು ಕಟ್ಟಳೆ ವಿಧಿಸಿದ್ದರೆ…ನಮ್ಮ ಸಾಕುಪ್ರಾಣಿಗಳು ಜಾನುವಾರುಗಳಲ್ಲಿ ಕೇವಲ ಆಕಳನ್ನು ಮಾತ್ರವೇ ಉಳಿಸಿ ಬೆಳೆಸಬೇಕು ಎಂದು ನೂರಾರು ವರ್ಷಗಳ ಹಿಂದೆಯೇ ಕಟ್ಟಪ್ಪಣೆ ಮಾಡಿದ್ದಿದ್ದರೆ?..

ಊಹಿಸಿಕೊಂಡರೂ ಬೆಚ್ಚಿ ಬೀಳಿಸುವ ಸಂಗತಿಗಳಿವು. ಹುಟ್ಟಿನಿಂದ ಸಾವಿನ ತನಕ ನಮ್ಮ ನಿತ್ಯದ ಬದುಕನ್ನು ಆವರಿಸಿ ಅರಳಿರುವ ಈ ವೈವಿಧ್ಯತೆ ಅಥವಾ ಬೆಸೆದಿರುವ ಬಹುತ್ವಕ್ಕೆ ಕುರುಡಾಗುವ ಅಪಾಯಕರ ಆತ್ಮಘಾತಕ ಪ್ರವೃತ್ತಿ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಒಂದು ಆಲೋಚನಾ ಕ್ರಮ, ಒಂದು ಆಹಾರಪದ್ಧತಿ, ಒಂದೇ ಬಗೆಯ ವೇಷಭೂಷಣ, ಒಂದೇ ಬಗೆಯ ಸಾಮಾಜಿಕ ಧಾರ್ಮಿಕ ರಾಜಕೀಯ ಕಟ್ಟು ಕಟ್ಟಳೆಗಳನ್ನು ಹೇರುವ ವ್ಯಾಧಿಯಿದು. ಬಹುತ್ವ ಎಂಬುದು ನೈಸರ್ಗಿಕ. ಜೀವ ವೈವಿಧ್ಯತೆ ಕೂಡ ಒಂದನ್ನೊಂದು ಅವಲಂಬಿಸಿಯೇ ಅಸ್ತಿತ್ವದಲ್ಲಿದೆ. ಅದರ ಕೊಂಡಿಗಳು ಇಡಿಯಾಗ ಕಳಚಿದ ದಿನ ಪ್ರಳಯದ ದಿನ, ವಿನಾಶದ ದಿನ.

ಅಸಂಖ್ಯ ಜೀವಪ್ರಭೇದಗಳು ಎಲ್ಲ ಕಾಲಕ್ಕೂ ಕಾಣೆಯಾಗಿದ್ದರೆ, ಅಷ್ಟೇ ಸಂಖ್ಯೆಯ ಜೀವಪ್ರಭೇದಗಳು ಅಳಿವಿನ ಅಂಚಿನಲ್ಲಿವೆ. ಜೈವಿಕ ವ್ಯವಸ್ಥೆಯ ವಿನಾಶ ಮತ್ತು ಅದನ್ನು ತನ್ನ ಉಪಯೋಗಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳುವ ಮಾನವ ಪ್ರಯತ್ನವು ಜೀವ ವೈವಿಧ್ಯವನ್ನು ನಾಶಗೊಳಿಸತೊಡಗಿದೆ. ಆತ್ಮನಾಶದ ಈ ಪ್ರವೃತ್ತಿಯನ್ನು ಸಾಮಾಜಿಕ ಆವರಣಕ್ಕೆ ವಿಸ್ತರಿಸಿಕೊಳ್ಳೋಣ. ಜಗತ್ತಿನ ಕೆಲ ಸಂಕುಚಿತ ವಿಚಾರಗಳು, ನಂಬಿಕೆ ನಡವಳಿಕೆಗಳು, ಮೇಲು ಕೀಳು, ಶ್ರೇಷ್ಠ ಕನಿಷ್ಠ ಎಂಬ ವ್ಯಸನಗಳು ಸಾಮಾಜಿಕ ಬದುಕನ್ನೂ ನಾಶದತ್ತ ಒಯ್ಯುತ್ತದೆ. ಈ ಸತ್ಯದ ಪಾಠಗಳನ್ನು ಇತಿಹಾಸ ಹಲವು ಬಾರಿ ಕಲಿಸಿದೆ. ಆದರೆ ಈ ಪಾಠಗಳಿಂದ ಕಲಿಯಲು ತಯಾರಿಲ್ಲದ ಒಂದು ವರ್ಗವಿದೆ. ಅದು ಶ್ರೇಷ್ಠತೆಯ ವ್ಯಾಧಿ ಬಡಿದಿರುವ ವರ್ಗ. ಜನಸಮೂಹಗಳು ನಾಗರಿಕತೆಯ ಉಗಮದ ಕಾಲದಿಂದ ತಿದ್ದಿ ತೀಡಿ ರೂಪಿಸಿಕೊಂಡು ಬಂದಿರುವ ಸಹಿಷ್ಣುತೆ, ಸಹಜೀವನ, ಸಭ್ಯ ನಡವಳಿಕೆಗಳ ಕವಚವನ್ನು ಹರಿದೊಗೆದು ಆಳದಲ್ಲಿ ಅಡಗಿ ಮಲಗಿರುವ ಮಾನವಸಹಜ ದ್ವೇಷ, ಅಸಹನೆ, ಮೇಲು ಕೀಳು ಭೇದ ಭಾವದ ನೀಚಪ್ರವೃತ್ತಿಗಳನ್ನು ಈ ವರ್ಗ ಮತ್ತು ಅದರ ವಿಚಾರಧಾರೆಯು ಕೆದಕಿ, ಕೆಣಕಿ, ಕೆರಳಿಸಿ ಬಡಿದೆಬ್ಬಿಸುತ್ತವೆ. ಒಂದೆಡೆಗೆ ‘ನಾವು’, ಮತ್ತೊಂದೆಡೆಗೆ ನಮ್ಮ ಶತ್ರುಗಳಾಗಿ ‘ಅವರು’ ಎಂಬ ಅಮಾನವೀಯ ಕಥನವನ್ನು ಕಟೆದು ನಿಲ್ಲಿಸುತ್ತದೆ. ದ್ವೇಷದ ಬೀಜಗಳನ್ನು ಬಿತ್ತಿ ನೀರೆರೆದು ಬೆಳೆಸುತ್ತದೆ. ಒಂದು ನಂಬಿಕೆ, ಒಂದು ಧರ್ಮ, ಒಂದು ಜನಾಂಗ, ಮತ್ತೊಂದು ಬಹುಸಂಖ್ಯಾತ ನಂಬಿಕೆ, ಮತ್ತೊಂದು ಬಹುಸಂಖ್ಯಾತ ಧರ್ಮ, ಮತ್ತೊಂದು ಬಹುಸಂಖ್ಯಾತ ಜನಾಂಗದ ಜೀತ ಮಾಡಿಕೊಂಡು ಬದುಕಬೇಕೆಂದು ಆಗ್ರಹಿಸುತ್ತದೆ. ಒಂದು ವರ್ಣಕ್ಕೆ ಉಳಿದ ವರ್ಣಗಳು ನಿರಂತರ ಅಡಿಯಾಳುಗಳು ಎಂಬ ತತ್ವವನ್ನು ಎತ್ತರದಲ್ಲಿ ಇರಿಸುತ್ತದೆ. ಹೆಣ್ಣು ಗಂಡಿನ ನಡುವೆ ಮೇಲು ಕೀಳಿನ ಅಂತರವನ್ನು ಕಾಪಾಡುತ್ತದೆ. ಬಡತನ ಮತ್ತು ಕೀಳುಜಾತಿಗಳೆಂಬ ಅಸಮಾನತೆಗಳು, ಅನ್ಯಾಯಗಳನ್ನು ಕರ್ಮಸಿದ್ಧಾಂತದ ಮಂಕುಬೂದಿಯಲ್ಲಿ ಹೂತಿಡುತ್ತದೆ.

ದೇಶದ ಸಮೂಹ ಮಾಧ್ಯಮ ಕ್ಷೇತ್ರದೊಳಗೆ ಹುದುಗಿರುವ ತರತಮಗಳು, ಆದ್ಯತೆಗಳು, ಅಪಸವ್ಯಗಳು, ವಿಕೃತಿಗಳನ್ನು ಮೇಲೆ ನಮೂದಿಸಿದ ಸಾಮಾಜಿಕ-ರಾಜಕೀಯ ವಿಕೃತಿಗಳ ಹಾಗೂ ವಿಷಮತೆಯ ವರ್ತುಲದಿಂದ ಹೊರಗಿರಿಸಿ ನೋಡಲು ಬರುವುದಿಲ್ಲ. ಸ್ವತಂತ್ರ ಭಾರತದ ಮಾಧ್ಯಮ ಕ್ಷೇತ್ರ ಎಪ್ಪತ್ತು ವರ್ಷಗಳ ನಂತರವೂ ಬಲಿಷ್ಠ ಜಾತಿಗಳ ಹಿಡಿತದಲ್ಲೇ ನರಳಿದೆ. ಟೆಲಿವಿಷನ್ ಮತ್ತು ವೃತ್ತಪತ್ರಿಕೆಗಳ ಸುದ್ದಿಮನೆಗಳಲ್ಲಿ ಆದಿವಾಸಿಗಳು, ದಲಿತರು, ಅಲ್ಪಸಂಖ್ಯಾತರು, ತಳವರ್ಗಗಳನ್ನು ಎಷ್ಟರಮಟ್ಟಿಗೆ ಪ್ರತಿನಿಧಿಸುತ್ತವೆ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಬೇಕಿದೆ. ಸುದ್ದಿಮನೆಗಳಲ್ಲಿ ಇಲ್ಲದ ಬಹುತ್ವ ಸುದ್ದಿಪುಟಗಳಿಗೆ ಇಳಿದು ಬರಲು ಹೇಗೆ ಸಾಧ್ಯ?

ನಮ್ಮ ಸಮೂಹ ಮಾಧ್ಯಮಗಳಲ್ಲಿ ಕಾಣುತ್ತಿದ್ದ ತೋರಿಕೆಯ ಉದಾರವಾದಿ ಜಾತ್ಯತೀತ ಮೌಲ್ಯಗಳು ಕೂಡ ಇತ್ತೀಚಿನ ವರ್ಷಗಳಲ್ಲಿ ಮರೆಯಾಗಿವೆ. ವರ್ಣವ್ಯವಸ್ಥೆಯನ್ನು, ಹುಸಿ ದೇಶಭಕ್ತಿಯ ಕಟ್ಟರ್ ರಾಷ್ಟ್ರವಾದವನ್ನು ಮುಚ್ಚುಮರೆಯಿಲ್ಲದೆ ಎತ್ತಿ ಹಿಡಿದು ಮೆರೆಸಲಾಗುತ್ತಿದೆ.

ಆರ್ಯ ಜನಾಂಗದ ಶ್ರೇಷ್ಠತೆಯ ವ್ಯಸನದಲ್ಲಿ ಯಹೂದಿಗಳ ಮಾರಣ ಹೋಮಗಳನ್ನು ನೆರವೇರಿಸಿದ ನಾಜಿ ಜರ್ಮನಿಯ ಮುಖ್ಯಸ್ಥ ಅಡಾಲ್ಫ್ ಹಿಟ್ಲರ್ ಕಡುದ್ವೇಷದ ಕಾರ್ಯಸೂಚಿಯನ್ನು ಬಿತ್ತಿ ಬೆಳೆಯಲು ಸಮೂಹ ಮಾಧ್ಯಮಗಳನ್ನು ಬಲು ಯಶಸ್ವಿಯಾಗಿ ಬಳಸುತ್ತಾನೆ. ಪ್ರಾಪಗ್ಯಾಂಡದ (ಪ್ರಚಾರ ಎಂಬ ಪದ ಪ್ರಾಪಗ್ಯಾಂಡದ ಬೃಹತ್ತನ್ನು ಕಟ್ಟಿಕೊಡುವುದಿಲ್ಲ) ಮಹತ್ವವನ್ನು ಮನನ ಮಾಡಿಕೊಂಡಿರುವುದು ಅವನ ‘ಯಶಸ್ಸಿನ’ ಕಾರಣಗಳಲ್ಲೊಂದು. ಪ್ರಾಪಗ್ಯಾಂಡ ಎಂಬ ಪದವು ಇಂದಿನ ನಕಾರಾತ್ಮಕ ಅರ್ಥಛಾಯೆಗಳನ್ನು ಮೈಗೂಡಿಸಿಕೊಂಡದ್ದಕ್ಕೆ ನಾಜಿ ಜರ್ಮನಿಯಲ್ಲಿ ಅದರ ವ್ಯಾಪಕ ಬಳಕೆಯೇ ಕಾರಣ.

ತನ್ನ ಮುಖ್ಯ ಕೃತಿ `Mien Kampf’ನ ಎರಡು ಅಧ್ಯಾಯಗಳನ್ನು ಪ್ರಾಪಗ್ಯಾಂಡವನ್ನು ಪರಿಣಾಮಕಾರಿ ಸಾಧನವಾಗಿ ಬಳಸಿಕೊಳ್ಳುವುದು ಹೇಗೆಂದು ವಿವರಿಸುವುದಕ್ಕಾಗಿಯೇ ಮೀಸಲಿಟ್ಟಿದ್ದಾನೆ. ಅವನ ಪ್ರಕಾರ ಪ್ರಾಪಗ್ಯಾಂಡವು ವ್ಯಾಪಕ ಜನಸಮೂಹಗಳನ್ನು ಬೋಧಿಸಬೇಕು. ಅದನ್ನು ಜನಪ್ರಿಯ ರೂಪದಲ್ಲಿ ಮಂಡಿಸಬೇಕೇ ವಿನಾ ಬೌದ್ಧಿಕ ಮಟ್ಟದಲ್ಲಿ ಅಲ್ಲ. ಜನಸಾಮಾನ್ಯರ ತಲೆಗೆ ನಾಟುವಂತಿರಬೇಕು. ಅದು .ರಾಷ್ಟ್ರೀಯ ಜನಸಮೂಹಗಳ ಹೃದಯಕ್ಕೆ ನಾಟುವ ಅವರ ಭಾವನೆಗಳನ್ನು ಗೆಲ್ಲುವ, ಅವರ ಕಲ್ಪನೆಗಳನ್ನು ಗರಿಗೆದರಿಸುವ ಕಲೆ.. ತನಗೆ ಅಗತ್ಯವಿರುವ ಸೂಕ್ತ ಮನಶ್ಯಾಸ್ತ್ರದ ರೂಪವನ್ನು ಪ್ರಾಪಗ್ಯಾಂಡ ಕಂಡುಕೊಳ್ಳಬೇಕು. ವ್ಯಾಪಕ ಜನಸಮೂಹಗಳು ಕೇವಲ ಜನಸಮೂಹಗಳು ಮಾತ್ರವೇ ಆಗಿರುತ್ತವೆ. ನಿರ್ದಿಷ್ಟ ಪ್ರಕರಣಗಳಲ್ಲಿ ತರ್ಕಬದ್ಧವಾಗಿ ಆಲೋಚಿಸಿ ಸಕಾರಣವಾದ ತೀರ್ಮಾನಕ್ಕೆ ಬರುವ ರಾಜದೂತರೋ ಅಥವಾ ಸಾರ್ವಜನಿಕ ನ್ಯಾಯಶಾಸ್ತ್ರದ ಪ್ರೊಫೆಸರುಗಳಂತಹ ಬುದ್ಧಿಜೀವಿಗಳಲ್ಲ ಜನಸಮೂಹಗಳು. . ಬದಲಾಗಿ ಅವು ಒಂದು ವಿಚಾರದಿಂದ ಮತ್ತೊಂದು ವಿಚಾರದೆಡೆಗೆ ತುಯ್ಯುತ್ತಲೇ ಇರುವ ಮಕ್ಕಳಂತೆ. ದೇಶದ ಬಹುಪಾಲು ಜನಸಮೂಹದ ಆಲೋಚನೆ, ನಡವಳಿಕೆ, ದೃಷ್ಟಿಕೋನವು ಹೆಣ್ಣಿನ ಭಾವಾತಿರೇಕದ್ದೇ ವಿನಾ ಗಂಭೀರ ತಾರ್ಕಿಕ ಪ್ರತಿಪಾದನೆಯನ್ನು ಆಧರಿಸಿರುವುದಿಲ್ಲ. ಈ ಭಾವಾವೇಶ ಸರಳವೂ ಸತತವೂ ಆಗಿರುತ್ತದೆಯೇ ವಿನಾ ಜಟಿಲವಲ್ಲ…ಪದರಗಳು ಅಥವಾ ಛಾಯೆಗಳು ಇಲ್ಲದ ಕೇವಲ ಕಪ್ಪು ಬಿಳುಪು ಅದು. ಪ್ರೀತಿ ಮತ್ತು ದ್ವೇಷ, ಸರಿ ಮತ್ತು ತಪ್ಪು, ಸುಳ್ಳು ಮತ್ತು ಸತ್ಯ, ಸಕಾರಾತ್ಮಕ ಮತ್ತು ನಕಾರಾತ್ಮಕ ಭಾವನೆಗಳು- ಅನಿಸಿಕೆಗಳನ್ನು ಮಾತ್ರವೇ ಜನಸಮೂಹಗಳು ಹೊಂದಿರುತ್ತವೆ.

ಪ್ರಾಪಗ್ಯಾಂಡ ಎಂಬುದು ಸತ್ಯವನ್ನು ವಸ್ತುನಿಷ್ಠವಾಗಿ ತನಿಖೆ ಮಾಡಕೂಡದು. ಆಳುವವರಿಗೆ ಅನುಕೂಲಕರವಾದ ಸತ್ಯದ ಮುಖವನ್ನು ಮಾತ್ರವೇ ಜನಸಮೂಹಗಳ ಎದುರಿಗೆ ಇರಿಸಬೇಕು. ಜನಸಮೂಹಗಳ ಗ್ರಹಿಕೆಯ ಸಾಮಥ್ರ್ಯಗಳು ಬಹಳ ಸೀಮಿತ. ಅವುಗಳ ತಿಳಿವಳಿಕೆ ಶಕ್ತಿಯೂ ಬಲು ಕ್ಷೀಣ. ಅಷ್ಟೇ ಅಲ್ಲ, ..ತಡವಿಲ್ಲದೆ ಮರೆತುಬಿಡುವುದು ಅವುಗಳ ಗುಣಲಕ್ಷಣ. ಹೀಗಿರುವಾಗ ಎಲ್ಲ ಪರಿಣಾಮಕಾರಿ ಪ್ರಾಪಗ್ಯಾಂಡ ಸರಳವೂ ನೇರವೂ .ಸಂಕ್ಷಿಪ್ತವೂ ಆಗಿರಬೇಕು. ಅದನ್ನು ಈಗಾಗಲೆ ಹಳತಾಗಿರುವ ಏಕರೂಪ ಮಾದರಿಯ ಸೂತ್ರಗಳಲ್ಲೇ ಇಟ್ಟು ದಾಟಿಸಬೇಕು. ನಮ್ಮ ವಿಚಾರ ಕಟ್ಟಕಡೆಯ ಮನುಷ್ಯನ ತಲೆಯೊಳಗೆ ಹೋಗುವ ತನಕ ಈ ಘೋಷಣೆಗಳನ್ನು ಮತ್ತೆ ಮತ್ತೆ ನಿರಂತರವಾಗಿ ಅಪ್ಪಳಿಸುತ್ತಲೇ ಇರಬೇಕು. ಪ್ರಾಪಗ್ಯಾಂಡದ ಸಂದೇಶದಲ್ಲಿ ಬದಲಾವಣೆಗಳನ್ನು ಮಾಡಲಾದರೂ, ಆದರ ತೀರ್ಮಾನ ಒಂದೇ ಆಗಿರಬೇಕು. ಮುಖ್ಯ ಘೋಷಣೆಯನ್ನು ಹಲವು ಬಗೆಗಳಲ್ಲಿ, ಬಹು ಕೋನಗಳಲ್ಲಿ ಚಿತ್ರಿಸಬಹುದಾದರೂ, ಅಂತ್ಯದಲ್ಲಿ ಅದೇ ಸೂತ್ರವನ್ನು ಅದು ಪ್ರತಿಪಾದಿಸಬೇಕು.ಎಂದು ಹಿಟ್ಲರ್ ಹೇಳಿದ್ದಾನೆ.

ಭಾರತವನ್ನು ಆಳುತ್ತಿರುವವರ ಮನಸ್ಥಿತಿಯೂ ಇದೇ ಆಗಿರುತ್ತದೆ. ತನ್ನದೇ ಪ್ರಾಪಗ್ಯಾಂಡದ ವ್ಯವಸ್ಥೆಯನ್ನು ಬೃಹತ್ತಾಗಿ, ಅಚ್ಚುಕಟ್ಟಾಗಿ ಮಾಡಿಕೊಂಡಿದ್ದಾರೆ. ಅದಕ್ಕೊಂದು ಅನೌಪಚಾರಿಕ ಸಾಂಸ್ಥಿಕ ರೂಪವನ್ನೂ ಕೊಟ್ಟಿದ್ದಾರೆ. ಅದು ಆಳುವವರ ಪರವಾಗಿ ಮತ್ತು ಆಳುವವರ ವಿರೋಧಿಗಳ ವಿರೋಧಿಯಾಗಿ, ಸುಸಜ್ಜಿತ ಬೃಹತ್ ಯಂತ್ರದಂತೆ ದಿನನಿತ್ಯ ಕೆಲಸ ಮಾಡುತ್ತದೆ. ಮಿಥ್ಯೆಗಳನ್ನು ಸೃಷ್ಟಿಸುತ್ತದೆ. ಆಳುವವರ ಎಲ್ಲ ಕೆಲಸ ಕಾರ್ಯಗಳು, ನಡೆ ನುಡಿಗಳು, ನೀತಿ ನಿರ್ಧಾರಗಳಿಗೆ ಜನರ ಒಪ್ಪಿಗೆಯನ್ನು ತಯಾರಿಸುವ ಕಾರ್ಖಾನೆ ಅದು. ಮಿಥ್ಯೆಗಳನ್ನು ಸೃಷ್ಟಿಸಲು, ಜನಸಮ್ಮತಿಯನ್ನು ತಯಾರಿಸಲು ಅದು ಯಾವ ಹಂತಕ್ಕೂ ಹೋಗಬಲ್ಲದು. ನೈತಿಕ-ಅನೈತಿಕ, ನ್ಯಾಯ-ಅನ್ಯಾಯ, ಸರಿ-ತಪ್ಪುಗಳ ಗೋಜಿಗೆ ಅದು ಹೋಗುವುದಿಲ್ಲ. ಈ ಪ್ರಾಪಗ್ಯಾಂಡಕ್ಕೆ, ಫೇಸ್ಬುಕ್, ವಾಟ್ಸ್ಯಾಪ್ ಮುಂತಾದ ನವಮಾಧ್ಯಮಗಳನ್ನು ಯಶಸ್ವಿಯಾಗಿ ದುಡಿಸಿಕೊಳ್ಳಲಾಗುತ್ತಿದೆ.

ಜರ್ಮನಿ ಹಿಟ್ಲರ್ ವಶವಾದಾಗ ಆ ದೇಶದ 4,700 ಪತ್ರಿಕೆಗಳ ಶೇ. ಮೂರರಷ್ಟನ್ನು ಮಾತ್ರವೇ ನಾಜಿಗಳು ನಿಯಂತ್ರಿಸುತ್ತಿದ್ದರು. ಅಲ್ಲಿನ ಬಹುಪಕ್ಷೀಯ ರಾಜಕೀಯ ವ್ಯವಸ್ಥೆಯನ್ನು ನಾಜಿ ಆಡಳಿತ ಕಳಚಿ ಹಾಕಿದ ತರುವಾಯ ನೂರಾರು ಪತ್ರಿಕೆಗಳು ಕಣ್ಣುಮುಚ್ಚಿದವು.

ರೇಡಿಯೋ, ಪತ್ರಿಕೆಗಳು, ನ್ಯೂಸ್ ರೀಲ್ ಗಳನ್ನು ಬಳಸಿ ಕಮ್ಯೂನಿಸ್ಟ್ ದಂಗೆಯ ಹುಸಿ ಭೀತಿ ಆತಂಕಗಳನ್ನು ಬಿತ್ತಿದ ಆಡಳಿತ ಅದರ ಮರೆಯಲ್ಲಿ ನಾಗರಿಕ ಹಕ್ಕುಗಳು ಮತ್ತು ಜನತಂತ್ರವನ್ನು ತುಳಿಯಿತು. ರಾಜಕೀಯ ವಿರೋಧಿಗಳನ್ನು, ಭಿನ್ನಾಭಿಪ್ರಾಯ ವ್ಯಕ್ತಪಡಿಸುವವರನ್ನು ಬಂಧಿಸಿ ಶ್ರಮಶಿಬಿರಗಳಿಗೆ ತಳ್ಳಲಾಯಿತು.

ವ್ಯಾಪಾರ ವಹಿವಾಟನ್ನು ಆರ್ಯ ಜನಾಂಗೀಯ ಶುದ್ಧೀಕರಣಕ್ಕೆ ಒಳಪಡಿಸಿದ ಸರ್ಕಾರ ಯಹೂದಿಗಳು ನಡೆಸುತ್ತಿದ್ದ ಭಾರೀ ಸಮೂಹ ಮಾಧ್ಯಮ ಸಂಸ್ಥೆಗಳನ್ನು ವಶಕ್ಕೆ ತೆಗೆದುಕೊಂಡಿತು. ಹಲವಾರು ಪತ್ರಿಕೆಗಳನ್ನು ಮಾರುಕಟ್ಟೆ ದರಗಳಿಗಿಂತ ಕಡಿಮೆ ದರದಲ್ಲಿ ಖರೀದಿಸಿತು. ಬೃಹತ್ ಪ್ರಕಾಶನ ಸಂಸ್ಥೆಗಳ ಒಡೆತನ ಹೊಂದಿತು. ಜೈಲುಶಿಕ್ಷೆ ಮತ್ತು ಮರಣದಂಡನೆಗೆ ಹೆದರಿ ದೊಡ್ಡ ಸಂಖ್ಯೆಯ ಪತ್ರಕರ್ತರು ದೇಶಬಿಟ್ಟು ಪರಾರಿಯಾದರು. ರಾಜಿ ಮಾಡಿಕೊಳ್ಳುವ ‘ನೈತಿಕ’ ಶಕ್ತಿಯಿದ್ದ ಪತ್ರಕರ್ತರು ನಾಜೀ ಪಾರ್ಟಿಯ ಹಸಿಬಿಸಿ ಹವ್ಯಾಸಿ ಪಡ್ಡೆಗಳೊಂದಿಗೆ ಸೇರಿ ಪತ್ರಿಕೆಗಳನ್ನು ನಡೆಸಿದರು. ಉತ್ತಮ ವೇತನ, ಬಡ್ತಿ, ಸುಖದ ಬದುಕನ್ನು ಕಂಡುಕೊಂಡರು. ನಾಜೀ ವಿಚಾರದ ಕಹಳೆಗಳನ್ನು ಊದಿದರು.

ಜರ್ಮನ್ ಪತ್ರಿಕಾ ಕ್ಷೇತ್ರವನ್ನು ನಿಯಂತ್ರಣಕ್ಕೆ ತೆಗೆದುಕೊಂಡ ನಾಜಿ ಆಡಳಿತ 1933ರ ಹೊಸ ಸಂಪಾದಕರ ಕಾಯಿದೆಯಡಿ ‘ಪರಿಶುದ್ಧ ಜನಾಂಗ’ದ ಸಂಪಾದಕರು ಮತ್ತು ಪತ್ರಕರ್ತರನ್ನು ಪಟ್ಟಿ ಮಾಡಿದ ರಿಜಿಸ್ಟ್ರಿಗಳನ್ನು ಇರಿಸಿತು. ಈ ರಿಜಿಸ್ಟ್ರಿಯಲ್ಲಿ ನೋಂದಾಯಿಸಿಕೊಂಡಿದ್ದ ಪತ್ರಕರ್ತರು ಸರ್ಕಾರದ ಆದೇಶಗಳು ಸೂಚನೆಗಳನ್ನು ಪಾಲಿಸಬೇಕಿತ್ತು. ದೇಶದ ಒಳಗೆ ಅಥವಾ ಹೊರಗೆ ನಾಜಿ ಸರ್ಕಾರದ ಬಲವನ್ನು ಯಾವುದೇ ರೀತಿಯಲ್ಲಿ ಕುಂದಿಸಬಹುದಾದ ಸುದ್ದಿ ಸಾಮಗ್ರಿಯನ್ನು ಅಚ್ಚು ಮಾಡಬಾರದೆಂಬ ಕಟ್ಟಳೆ ವಿಧಿಸಲಾಯಿತು. ಯಹೂದಿಗಳು ಮತ್ತು ಅವರೊಂದಿಗೆ ವೈವಾಹಿಕ ಸಂಬಂಧ ಹೊಂದಿದ ಪತ್ರಕರ್ತರನ್ನು ವೃತ್ತಿಯಿಂದ ಹೊರದಬ್ಬಲಾಯಿತು.

ದಿನನಿತ್ಯ ಪತ್ರಿಕೆಗಳಲ್ಲಿ ಪ್ರಕಟಿಸುವ ಸುದ್ದಿ ಮತ್ತು ಸಂಪಾದಕೀಯ ಪುಟಗಳನ್ನು ನಾಜಿ ಸರ್ಕಾರದ ಪ್ರಾಪಗ್ಯಾಂಡ ಸಚಿವಾಲಯ ನಿಯಂತ್ರಿಸುತ್ತಿತ್ತು. ಬರ್ಲಿನ್ ನಲ್ಲಿ ನಡೆಯುತ್ತಿದ್ದ ದೈನಿಕ ಸಮಾಲೋಚನೆಗಳಲ್ಲಿ ನಿರ್ದೇಶನಗಳನ್ನು ರೂಪಿಸಲಾಗುತ್ತಿತ್ತು. ಅವುಗಳನ್ನು ನಾಜಿ ಪಾರ್ಟಿ ಪ್ರಾಪಗ್ಯಾಂಡ ಕಚೇರಿಗಳ ಮೂಲಕ ಪ್ರಾದೇಶಿಕ ಇಲ್ಲವೇ ಸ್ಥಳೀಯ ಪತ್ರಿಕೆಗಳಿಗೆ ತಲುಪಿಸಲಾಗುತ್ತಿತ್ತು. ಯಾವ ಸುದ್ದಿಗಳನ್ನು ಅಚ್ಚು ಮಾಡಬೇಕು, ಯಾವ ಸುದ್ದಿಗಳನ್ನು ಅಚ್ಚು ಮಾಡಕೂಡದು ಹಾಗೂ ಸುದ್ದಿಯನ್ನು ಹೇಗೆ ವರದಿ ಮಾಡಬೇಕು ಎಂಬ ಕುರಿತು ವಿವರವಾದ ಮಾರ್ಗಸೂಚಿಗಳನ್ನು ನೀಡಲಾಯಿತು. ಈ ಸೂಚನೆಗಳನ್ನು ಪಾಲಿಸದಿದ್ದ ಪತ್ರಕರ್ತರು ಮತ್ತು ಸಂಪಾದಕರು ಕೆಲಸ ಕಳೆದುಕೊಳ್ಳುತ್ತಿದ್ದರು ಇಲ್ಲವೇ ಶ್ರಮ ಶಿಬಿರಗಳ ಪಾಲಾಗುತ್ತಿದ್ದರು. ನಾಜೀ ಪ್ರಾಪಗ್ಯಾಂಡ ಯಂತ್ರವು ಸುದ್ದಿಯನ್ನು ಹತ್ತಿಕ್ಕುವ ಬದಲು ಅದರ ಹರಿವನ್ನು ಮತ್ತು ವ್ಯಾಖ್ಯಾನವನ್ನು ಬಿಗಿಯಾಗಿ ನಿಯಂತ್ರಿಸುತ್ತಿತ್ತು. ಪರ್ಯಾಯ ಸುದ್ದಿಮೂಲಗಳನ್ನು ಮುಚ್ಚಿ ಹಾಕುತ್ತಿತ್ತು.

ಇಂದಿನ ಅಮೆರಿಕೆಯ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವರದಿಗಾರರನ್ನು ಕಸ, ಕೊಳೆ, ಲೋಳೆ, ರೋಗಗ್ರಸ್ತರು, ದೇಶಭಕ್ತಿ ಇಲ್ಲದವರು, ನಮ್ಮ ದೇಶವನ್ನು ಇಷ್ಟಪಡದವರು, ನಮ್ಮ ಇತಿಹಾಸ ಮತ್ತು ಪರಂಪರೆಯ ಕುರಿತು ಗೌರವ ಇಲ್ಲದವರು ಎಂದು ಬಹುತೇಕ ದಿನ ಬೆಳಗಾದರೆ ಜರೆಯುತ್ತಾರೆ. ಅಮೆರಿಕೆಯ ಮುಂಚೂಣಿ ಸುದ್ದಿ ಸಂಸ್ಥೆಗಳಿಗೆ ”ಫೇಕ್ ನ್ಯೂಸ್” (ನಕಲಿ ಸುದ್ದಿ) ಎಂದು ಮಸಿ ಬಳಿದಿದ್ದಾರೆ. ಮಾನಹಾನಿ ಕೇಸುಗಳನ್ನು ಜಡಿಯುವ, ಪ್ರಸಾರ ಪರವಾನಿಗೆಗಳನ್ನು ರದ್ದು ಮಾಡುವ, ಅಪನಿಂದೆ-ಮಾನಹಾನಿ ಕಾನೂನುಗಳನ್ನು ಬದಲಾಯಿಸುವ ಬೆದರಿಕೆಗಳನ್ನು ಹಾಕುತ್ತಿರುತ್ತಾರೆ. ಅವರ ದಾಳಿ ಕೇವಲ ಪತ್ರಿಕಾ ಮಾಧ್ಯಮಗಳಿಗೆ ಸೀಮಿತ ಅಲ್ಲ. ವಲಸೆ ಬಂದವರು, ಆಫ್ರಿಕನ್-ಅಮೆರಿಕನ್ನರು, ಲ್ಯಾಟಿನೋಗಳು, ಮಹಿಳೆಯರು, ಮುಸಲ್ಮಾನರು, ನ್ಯಾಯಾಧೀಶರು, ಪರಿಸರವಾದಿಗಳು ಹೀಗೆ ತಮ್ಮನ್ನು ಪ್ರಶ್ನಿಸುವ ಯಾರೇ ಆದರೂ ಅವರ ಮೇಲೆ ಎರಗಿದ್ದಾರೆ. ಸಮೂಹ ಮಾಧ್ಯಮಗಳ ಶತ್ರುಗಳನ್ನು ದ್ವೇಷಿಸುತ್ತೇನೆ ಎಂದು ಸಾರ್ವಜನಿಕ ಸಭೆಗಳಲ್ಲಿ ಅಬ್ಬರಿಸುತ್ತಾರೆ. ಅವರ ಅಂಧ ಬೆಂಬಲಿಗರು ಅದೇ ಸಾರ್ವಜನಿಕ ಸಭೆಗಳಲ್ಲಿ ಪತ್ರಕರ್ತರ ವಿರುದ್ಧ ಕ್ರೋಧತಪ್ತರಾಗಿ ಮುಷ್ಠಿ ಬಿಗಿಯುತ್ತಾರೆ, ಬೈಗಳನ್ನು ಕಿರುಚುತ್ತಾರೆ, ಬೆದರಿಕೆ ಹಾಕುತ್ತಾರೆ.

ಕೃಪೆ: The New York Times

ಕೃಪೆ: The New York Times

ಇತ್ತ ಭಾರತದಲ್ಲಿ ಜರುಗಿರುವುದಾದರೂ ಏನು? ಟ್ರಂಪ್ ಅವರ ಅಮೆರಿಕೆಗಿಂತ ಭಾರತದಲ್ಲಿನ ಸ್ಥಿತಿಗತಿಗಳು ಭಿನ್ನವಾಗಿವೆಯೇ?

ಖಚಿತವಾಗಿಯೂ ಒಂದು ವ್ಯತ್ಯಾಸವಿದೆ. ಅದೆಂದರೆ ತಮ್ಮನ್ನು ಪ್ರಶ್ನಿಸುವ ಸಿ.ಎನ್.ಎನ್. ವರದಿಗಾರ ಜಿಮ್ ಅಕೋಸ್ಟನ ಶ್ವೇತಭವನದ ಮಾಧ್ಯಮ ಮಾನ್ಯತಾ ಪತ್ರವನ್ನು ಟ್ರಂಪ್ ಸರ್ಕಾರ ರದ್ದುಪಡಿಸುತ್ತದೆ. ವಿಶ್ವದ ಅತ್ಯಂತ ಶಕ್ತಿಶಾಲಿ ಎಂದು ಬಗೆಯಲಾಗುವ ಅಮೆರಿಕೆಯ ಅಧ್ಯಕ್ಷನ ಈ ಸರ್ವಾಧಿಕಾರಿ ನಡವಳಿಕೆಯ ಮುಂದೆ ಸಿ.ಎನ್.ಎನ್. ಆಡಳಿತವರ್ಗ ಮಂಡಿ ಊರುವುದಿರಲಿ, ತಲೆಯನ್ನೂ ಬಾಗಿಸುವುದಿಲ್ಲ. ಬದಲಾಗಿ ನ್ಯಾಯಾಲಯದ ಮೆಟ್ಟಿಲೇರುತ್ತದೆ. ಟ್ರಂಪ್ ಅವರನ್ನು ಬಲವಾಗಿ ಬೆಂಬಲಿಸುವ ಫಾಕ್ಸ್ ನ್ಯೂಸ್ ಸುದ್ದಿವಾಹಿನಿಯೂ ಸೇರಿದಂತೆ ಬಹುಸಂಖ್ಯೆಯ ಸುದ್ದಿವಾಹಿನಿಗಳು ಜಿಮ್ ಜೊತೆ ನಿಲ್ಲುತ್ತವೆ. ಮಾನ್ಯತಾ ಪತ್ರವನ್ನು ರದ್ದು ಪಡಿಸಿದ ಕ್ರಮವು ಜನತಂತ್ರ ವಿರೋಧಿ ಎಂದು 300ಕ್ಕೂ ಹೆಚ್ಚು ಅಮೆರಿಕನ್ ಪತ್ರಿಕೆಗಳು ಸಂಪಾದಕೀಯ ಬರೆದು ಖಂಡಿಸುತ್ತವೆ. ಟ್ರಂಪ್ ಸರ್ಕಾರದಿಂದಲೇ ನೇಮಕಗೊಂಡ ಜಿಲ್ಲಾ ನ್ಯಾಯಾಧೀಶರೊಬ್ಬರು ಜಿಮ್ ಅಕೋಸ್ಟ ಅವರ ಮಾನ್ಯತಾ ಪತ್ರ ರದ್ದನ್ನು ತಕ್ಷಣವೇ ಹಿಂದಕ್ಕೆ ಪಡೆಯುವಂತೆ ಹಂಗಾಮಿ ತೀರ್ಪು ನೀಡುತ್ತಾರೆ.

ಆದರೆ ಭಾರತದ ಬಹುತೇಕ ಮಾಧ್ಯಮಗಳು ತಮ್ಮ ಬೆನ್ನುಮೂಳೆಯನ್ನು ಕಳಚಿ ಆಳುವವರ ಪದತಲಕ್ಕೆ ಅರ್ಪಿಸಿ ಶಿರಬಾಗಿ ಕೈಕಟ್ಟಿ ನಿಂತಿವೆ.

ಕೃಪೆ: Cafe Dissensus Everyday

ಕೃಪೆ: Cafe Dissensus Everyday

ಉದಾರವಾದಿ ಮತ್ತು ಜಾತ್ಯತೀತವಾದೀ ಮೌಲ್ಯಗಳ ಮೇಲೆ ಕಳೆದ ಐದಾರು ವರ್ಷಗಳಲ್ಲಿ ನಡೆದ ಸತತ ದಾಳಿ ನಡೆದಿದೆ. ಮುಕ್ತವಿಚಾರಗಳ, ಬಹುತ್ವವಾದಿ, ಸೆಕ್ಯೂಲರ್ ದೇಶವೊಂದನ್ನು ಬಹುಸಂಖ್ಯಾತವಾದಿ ಉಗ್ರರಾಷ್ಟ್ರವಾದದ ದೇಶವನ್ನಾಗಿ ಪರಿವರ್ತಿಸುವ ಶಕ್ತಿಗಳ ಕೈ ಮೇಲಾಗಿದೆ. ಸರ್ಕಾರಿ ಸಂಸ್ಥೆಗಳು, ಸ್ವಾಯತ್ತ ಸಾಂವಿಧಾನಿಕ ಸಂಸ್ಥೆಗಳ ಮೇಲೆ ಪ್ರತ್ಯಕ್ಷ ಪರೋಕ್ಷ ನಿಯಂತ್ರಣ ಸಾಧಿಸಲಾಗಿದೆ. ಉನ್ನತ ಶಿಕ್ಷಣ ಮತ್ತು ವಿಶ್ವವಿದ್ಯಾಲಯಗಳು ಆಳುವವರಿಗೆ ತಾಳ ಹಾಕುವ ಅಸಹಾಯಕ ಪರಿಸ್ಥಿತಿಗೆ ನೂಕಲ್ಪಟ್ಟಿವೆ. ದೇಶಭಕ್ತಿ- ದೇಶದ್ರೋಹದ ಹೊಸ ವ್ಯಾಖ್ಯಾನಗಳು, ಹಿಂದು-ಮುಸ್ಲಿಂ, ಭಾರತ-ಪಾಕಿಸ್ತಾನ ಎಂಬುದಾಗಿ ಕಡೆದು ನಿಲ್ಲಿಸಿರುವ ಕೋಮುವಾದಿ ಧೃವೀಕರಣವು ಜನಸಮೂಹಗಳ ಆಲೋಚನಾ ಸಾಮಥ್ರ್ಯವನ್ನೇ ಅಪಹರಿಸಿದೆ. ಅವುಗಳು ಧ್ವನಿಗಾರುಡಿಗನ (ವೆಂಟ್ರಿಲಾಕಿಸ್ಟ್) ಕೈಯಲ್ಲಿನ ಗೊಂಬೆಗಳಾಗಿ ಬದಲಾಗಿವೆ. ತಾನು ಹೇಳಿದ್ದನ್ನೇ ಜನಸಮೂಹಗಳೂ ಹೇಳುತ್ತಿವೆ ಎಂದು ಧ್ವನಿಗಾರುಡಿಗ ನಂಬಿಸುತ್ತಿದ್ದಾನೆ. ಅಭಿವೃದ್ಧಿ ಎಂಬುದು ಕಟ್ಟರ್ ಹಿಂದುತ್ವಕ್ಕೆ ಹಾಕಿದ ಮುಖವಾಡ ಎಂಬುದು ದಿನಗಳೆದಂತೆ ನಿಚ್ಚಳವಾಗತೊಡಗಿದೆ. ಆಳುವವರ ನೀತಿ ನಿರ್ಧಾರಗಳು, ನಡೆ ನುಡಿಗಳನ್ನು ಪ್ರಶ್ನಿಸುವುದು ದೇಶದ್ರೋಹವಾಗಿ ಪರಿಣಮಿಸಿದೆ.

ಜನತಂತ್ರದ ನಾಲ್ಕನೆಯ ಕಂಬ ಮತ್ತು ಜನತಂತ್ರವನ್ನು ಕಾಯುವ ನಾಯಿ ಎಂದು ಪತ್ರಿಕಾ ಕ್ಷೇತ್ರವನ್ನು ಬಣ್ಣಿಸುವುದುಂಟು. ಆಳುವವರನ್ನು ಪ್ರಶ್ನಿಸಬೇಕಾದ ಈ ಕಾಯುವ ನಾಯಿ, ಇಂದಿನ ಭಾರತದಲ್ಲಿ ತ ಅಳುವವರ ಮಡಿಲಿನಲ್ಲಿ ಮುದ್ದಿನ ನಾಯಿಯಾಗಿ ಆಡುತ್ತಿರುವ ಸೋಜಿಗವನ್ನು ಯಾರಾದರೂ ಅಲ್ಲಗಳೆಯಲು ಬಂದೀತೇ?

ಅಧಿಕಾರಸ್ಥ ನಾಯಕರು ಮತ್ತು ಪಕ್ಷವನ್ನು ಬಲಿಪಶುವಿನಂತೆಯೂ, ಸೋತು ಸುಣ್ಣವಾಗಿರುವ ಪ್ರತಿಪಕ್ಷಗಳನ್ನು ಬೇಟೆಗಾರ ಖಳನಾಯಕರಂತೆಯೂ ಚಿತ್ರಿಸತೊಡಗಿರುವ ವಿಪರ್ಯಾಸ ಭಾರತೀಯ ಮಾಧ್ಯಮ ಕ್ಷೇತ್ರದಲ್ಲಿ ಜರುಗಿದೆ. ಈ ಆಘಾತಕಾರಿ ಬೆಳವಣಿಗೆಗಳು ದಿನನಿತ್ಯದ ಮಾಮೂಲು ವ್ಯವಹಾರ ಎಂಬಂತೆ ಆಗಿರುವುದು ವಿಪರೀತ ಅಪಾಯಕಾರಿ.

ಭಾರತದ ಬಹುತೇಕ ಸಮೂಹ ಮಾಧ್ಯಮ ಸಂಸ್ಥೆಗಳು ಲಾಭ ನಷ್ಟವನ್ನು ಮಾತ್ರವೇ ಕಳೆದು ಕೂಡಿ ಭಾಗಿಸುವ ಕಾರ್ಪೊರೇಟ್ ಸಂಸ್ಥೆಗಳಾಗಿ ಬದಲಾಗಿವೆ. ಕಾರ್ಪೊರೇಟ್ ರೂಪ ಧರಿಸಿದ ಮಾಧ್ಯಮ ಸಂಸ್ಥೆಗಳ ಏಕೈಕ ಗುರಿ ಲಾಭ ಗಳಿಕೆ. ಆಳುವವರ ನೀತಿ ನಿರ್ಧಾರಗಳನ್ನು ಹಾಡಿ ಹೊಗಳಿದರೆ ಉಳಿಗಾಲ ಮತ್ತು ಲಾಭದ ಕಾಲ. ಕಾಗೆ ಬೆಳ್ಳಗಿದೆ ಎಂದು ಹೇಳದಿದ್ದರೆ ಆದಾಯತೆರಿಗೆ, ಜಾರಿ ನಿರ್ದೇಶನಾಲಯದ ದಾಳಿಗಳು, ಆರ್ಥಿಕ ಅಪರಾಧಗಳ ಜಾಲಗಳಲ್ಲಿ ಸಿಲುಕಿ ಕದ ಮುಚ್ಚಬೇಕು, ಜೈಲು ವಾಸಕ್ಕೂ ತಯಾರಾಗಬೇಕು. ನಲವತ್ತು ವರ್ಷಗಳ ಹಿಂದೆ ಇಂದಿರಾಗಾಂಧೀ ಹೇರಿದ್ದ ಒಂದೂವರೆ ವರ್ಷಗಳ ತುರ್ತುಪರಿಸ್ಥಿತಿಯಲ್ಲೇ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕರಾಳ ಕೃತ್ಯದ ಒಂದು ಝಲಕ್ ಕಾಣಲು ಸಿಕ್ಕಿತ್ತು. ಇದೀಗ ಮಾಧ್ಯಮಗಳ ಪಾಲಿಗೆ ನಿರಂತರ ಅಘೋಷಿತ ತುರ್ತುಪರಿಸ್ಥಿತಿ. ಮಾಧ್ಯಮಗಳ ಮೇಲೆ ಕಾರ್ಪೊರೇಟ್ ಹಿಡಿತ ಅಂದು ಇಂದಿನಷ್ಟು ಬಿಗಿಯಾಗಿರಲಿಲ್ಲ. ಹೀಗಾಗಿ ಇಂದಿನ ಸ್ಥಿತಿ ತುರ್ತುಪರಿಸ್ಥಿತಿಗಿಂತ ಘೋರ. ತಮ್ಮ ನೆತ್ತಿಯ ಮೇಲೆ ತೂಗಿರುವ ಅವ್ಯಕ್ತ ಕತ್ತಿಯ ಕೆಳಗೆ ಮಾಧ್ಯಮಗಳು ತಾವಾಗಿ ಮಂಡಿಯೂರಿವೆ. ಬಹುತ್ವ, ಸೆಕ್ಯೂಲರಿಸಂ, ಉದಾರವಾದದ ಮೌಲ್ಯಗಳನ್ನು ಬಹುತೇಕ ಮಾಧ್ಯಮ ಸಂಸ್ಥೆಗಳು ಆರ್ಥಿಕ ಸ್ವಾರ್ಥಕ್ಕೆ ಬಲಿಗೊಟ್ಟಿವೆ.

ಕೃಪೆ: ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ೭೦ರ ಸಂಭ್ರಮದ ಸ್ಮರಣ ಸಂಚಿಕೆ


One comment to “ಭರತವರ್ಷದ ಸಮೂಹ ಮಾಧ್ಯಮಗಳು ಮತ್ತು ಬಹುತ್ವದ ಸಾವು”
 1. ಉಮಾಪತಿ ಅವರ ಅವಲೋಕನ, ಮತ್ತು ಸಂಶೋಧನಾ ಕ್ರಮ ಸರಿ. ಅವರ ಬರಹ ಚಿಂತನೆ ಹುಟ್ಟುಹಾಕುತ್ತದೆ. ನಮ್ಮನ್ನು ಪ್ರಶ್ನೆ ಮಾಡಿ convince ಮಾಡುವತ್ತ ಕೂಡ ಸಾಗುತ್ತದೆ.
  ಒಳ್ಳೆಯ ಬರಹಕ್ಕೆ ಧನ್ಯವಾದಗಳು.
  ಆದರೆ.. ಪ್ರಶ್ನೆ ಗಳನ್ನೂ ಮೂಡಿಸುತ್ತದೆ.
  ವೈವಿಧ್ಯದ ದೇಶ ನಮ್ಮದು. ವೈವಿಧ್ಯತೆ ಗೆ ಎಂದೂ ಧಕ್ಕೆ ಬಂದಿಲ್ಲ.
  ಅದರ ಪಾಡಿಗೆ ಅದನ್ನು ಬಿಟ್ಟರೆ ಎಲ್ಲವೂ ಬದುಕುತ್ತವೆ.
  ನನ್ನದನ್ನು ಎಲ್ಲರೂ ಒಪ್ಪಬೇಕು ಎಂಬ ಆಲೋಚನೆ ಬಹಳ ಕೆಟ್ಟದ್ದು.
  ಹಳ್ಳಿಗೆ ಹೋಗಿ. ಜನಪದ ವೈವಿಧ್ಯ ಕಾಣುತ್ತೆ.
  ಆಧ್ಯಾತ್ಮಿಕ ವೈವಿಧ್ಯ ಇದೆ. ಜನಜೀವನ ದಲ್ಲಿ ವೈವಿಧ್ಯ ಇದೆ. ಸಂಪ್ರದಾಯಗಳಲ್ಲಿ , ಸಂಸ್ಕೃತಿಯಲ್ಲಿ ವೈವಿಧ್ಯ ಇದೆ.
  ವ್ಯಕ್ತಿಗೆ ಆಲೋಚನಾ ಮತ್ತು ಆಯ್ಕೆ ಸ್ವಾತಂತ್ರ್ಯ ವೂ ಇದೆ.
  ಚಿಂತನೆಗಳು ಹೇರಲ್ಪಡಬಾರದು.
  ನಾನು ಒಂದು ಸಿದ್ಧಾಂತ ನಂಬಿದ್ದೇನೆ. ಎಲ್ಲರೂ ಹಾಗೆಯೇ ನಂಬಬೇಕು ಎಂದು ಅಪೇಕ್ಷೆಯೇ..
  ಅದಕ್ಕಾಗಿ ಗುಂಪು, ಓಲೈಸುವಿಕೆ, ಆಮಿಷ, ಸ್ವಾರ್ಥ, ಲಾಭ.. ಹೀಗೆ ವಿಷ ವರ್ತುಲ. ಸಾಗುತ್ತದೆ.
  ಇಂದು ಜನ ಮಾಧ್ಯಮ ನಂಬುತ್ತಾರೆ ಎಂದರೆ ನಮ್ಮ ಭ್ರಮೆ.
  ಮಾಧ್ಯಮ ಕೂಡ ಉದ್ಯಮವಾಗಿ ಆಮಿಷಗಳಿಗೆ ಬಲಿಯಾಗಿದೆ ಎಂಬುದೂ ಅಷ್ಟೇ ಸತ್ಯ.
  ಮುಖ್ಯ ವಾಗಿ ನಮ್ಮ ಮನಸ್ಸು ಪರಿಶುದ್ಧವಾಗಬೇಕು.
  ಎಲ್ಲ ಸಾಂಸ್ಕೃತಿಕ ವಾಹಿನಿಗಳನ್ನೂ ಚಿಂತನಾ ಕ್ರಮಗಳನ್ನು ಗೌರವಿಸಬೇಕು.
  ಅಲ್ಲವೇ ಉಮಾಪತಿ sir.?

ಪ್ರತಿಕ್ರಿಯಿಸಿ