ಕೊರೋನಾ ವೈರಸ್ : ಎಲ್ಲರೂ ತಪ್ಪಾದದ್ದು ಏಕೆ?

ಮೂಲ ಬರಹವು ಜೂನ್ 10ರಂದು ಸ್ವಿಜರ್ಲ್ಯಾಂಡಿನ ವೆಲ್ತ್ವೋಶ್ ವಾರಪತ್ರಿಕೆಯಲ್ಲಿ (ವಲ್ರ್ಡ್ ವೀಕ್)ಪ್ರಕಟಿತವಾಗಿತ್ತು. ಇದರ ಲೇಖಕರಾದ ಬೇಡಾ. ಎಮ್.ಸ್ಟ್ಯಾಡ್ಲರ್ರವರು ಒಬ್ಬ ಜೀವಶಾಸ್ತ್ರಜ್ಞರೂ ಗೌರವ ಪ್ರಾಧ್ಯಾಪಕರೂ ಆಗಿದ್ದು, ಬರ್ನ್ ವಿಶ್ವವಿದ್ಯಾಲಯದ ಇನ್‍ಸ್ಟಿಟ್ಯೂಟ್ ಆಫ್ ಇಮ್ಮ್ಯುನಾಲಜಿಯ ಹಿಂದಿನ ನಿರ್ದೇಶಕರೂ ಆಗಿದ್ದಾರೆ. ಸ್ಟ್ಯಾಡ್ಲರ್ ಅವರು ಸ್ವಿಟ್ಜಲ್ರ್ಯಾಂಡಿನ ಪ್ರಮುಖ ವೈದ್ಯಕೀಯ ವೃತ್ತಿಗರಾಗಿದ್ದಾರೆ. ಅವರು ಪ್ರಚೋದನಕಾರೀ ಭಾಷೆಯನ್ನು ಉಪಯೋಗಿಸಲು ಬಯಸುತ್ತಾರಾದರೂ, ಅವರು ಬಳಾಸುವ ಭಾಷೆಯ ಶೈಲಿಯು, ನಾವು ಅವರು ಮುಂದಿಡುವ ಅತ್ಯಂತ ಮುಖ್ಯವಾದ ಅಂಶಗಳಿಂದ ವಿಮುಖರಾಗುವಂತೇನೂ  ಮಾಡಬೇಕಾಗಿಲ್ಲ.

ಬೇಡಾ. ಎಮ್.ಸ್ಟ್ಯಾಡ್ಲರ್

ಡಾ. ಬೇಡಾ. ಎಮ್.ಸ್ಟ್ಯಾಡ್ಲರ್

ಸ್ವಿಟ್ಜಲ್ರ್ಯಾಂಡಿನ ಬಗ್ಗೆ ಬರೆದ ಈ ಬರಹ, ಜಗತ್ತಿನಾದ್ಯಂತ ಯಥಾವತ್ ಇದೇ ರೀತಿಯ ಪರಿಸ್ಥಿತಿಯಿದೆ ಎಂದೇನೂ ಸೂಚಿಸುತ್ತಿಲ್ಲ. ಸ್ಥಳೀಯ ಪರಿಸ್ಥಿತಿಗಳಿಗೆ ಅನುಗುಣವಾಗಿ ಸ್ಥಳೀಯ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ನಾನು ಬೆಂಬಲಿಸುತ್ತೇನೆ. ಹಾಗೂ ನನ್ನ ಪ್ರಕಾರ ಎಲ್ಲಾರೂ ನಿಜವಾದ ಡೇಟಾಗಳನ್ನು ಹುಡುಕಿ ಪಡೆದುಕೊಳ್ಳಬೇಕೇ ಹೊರತು ಅಸ್ಪಷ್ಟವಾದ ಮಾದರಿಗಳನ್ನಲ್ಲ. ಹಾಗೂ ನಾನು ಈ ಬರಹದ ಕೊನೆಯವರೆಗೂ ಓದಿ ಎಂದು ಸೂಚಿಸುತ್ತೇನೆ ಏಕೆಂದರೆ ಬರಹ ಕೊನೆಯಲ್ಲಿ ಸ್ಟ್ಯಾಡ್ಲರ್, ಸಾರ್ಸ್-ಕೋವ್-2 ರ ತಪಾಸಣೆಯ ಬಗ್ಗೆ ಮಹತ್ವದ ಅಂಶಗಳನ್ನು ತಿಳಿಸುತ್ತಾನೆ.

 

ಎಲ್ಲಾರೂ ತಪ್ಪಾದರೇಕೆ?

ಕೊರೋನಾ ವೈರಸ್ ನಿಧಾನವಾಗಿ ಹಿಮ್ಮೆಟ್ಟುತ್ತಿದೆ. ಈ ಹಿಂದಿನ ಹಲವು ವಾರಗಳಲ್ಲಿ ನಡೆದುದಾರೂ ಏನು? ಇದಕ್ಕೆ ಸಂಬಂಧಿಸಿದ ಮೂಲಭೂತ ಕೊಂಡಿಗಳು ತಜ್ಞರ ಎಣಿಕೆಯಿಂದ ತಪ್ಪಿಸಿಕೊಂಡಿವೆ. ಈ ವೈರಸ್ಸನ್ನು ಎದುರಿಸುವ ರೋಗ ಪ್ರತಿರಕ್ಷಕ ಪ್ರತಿಕ್ರಿಯೆಗಳು ನಾವು ಎಣಿಸಿದುದಕ್ಕಿಂತಾ ಬಹಳ ಶಕ್ತಿಯುತವಾಗಿವೆ.

ಇದು ಯಾರನ್ನೂ ದೂಷಿಸುತ್ತಿರುವುದಲ್ಲ. ನಿರ್ದಾಕ್ಷಿಣ್ಯವಾಗಿ ಸಧ್ಯದ ಪರಿಸ್ಥಿತಿಯನ್ನು ಪರಿಗಣಿಸುವುದು. ನಾನು  ಸಾರ್ಸ್-ಕೋವ್-2ವನ್ನು ಬಹಳ ಕಾಲದವರೆಗೆ ಆತಂಕದಿಂದ ಅವಲೋಕಿಸಿದೆ ಎಂಬುದಕ್ಕಾಗಿ ನನ್ನ ತಲೆಯ ಮೇಲೆ ನಾನೇ ಮೊಟಕಿಸಿಕೊಳ್ಳಬೇಕು. ಇಲ್ಲಿಯವರೆಗೂ Œಕೋವಿಡ್-19 ರ ಚರ್ಚೆಯನ್ನು ವೈರಾಣು ತಜ್ಞರಿಗೂ ಮತ್ತು ಸೋಂಕುರೋಗ ತಜ್ಞರಿಗೂ ಬಿಟ್ಟುಕೊಟ್ಟುಬಿಟ್ಟಿದ್ದಕ್ಕಾಗಿ ರೋಗಪ್ರತಿರಕ್ಷಕಶಾಸ್ತ್ರಜ್ಞರಾದ ನನ್ನ ಸಹೋದ್ಯೋಗಿಗಳ ಬಗ್ಗೆಯೂ ನನಗೆ ಅಸಮಧಾನವಿದೆ. ಈ ರೋಗದ ಬಗೆಗಿನ ಕೆಲವು  ಮುಖ್ಯವಾದ ಹಾಗೂ ಪೂರ್ತಿಯಾಗಿ ತಪ್ಪಾದ ಕೆಲವು ಸಾರ್ವಜನಿಕ ಹೇಳಿಕೆಗಳನ್ನು ಟೀಕಿಸಲು ಇದು ಸರಿಯಾದ ಸಮಯವೆಂದು ನಾನು ಭಾವಿಸುತ್ತೇನೆ.

ಮೊದಲನೆಯದಾಗಿ ಈ ವೈರಸ್ಸನ್ನು ನವೀನವಾದ ವೈರಸ್ ಎಂದು ಕರೆದಿರುವುದೇ ತಪ್ಪು. ಎರಡನೆಯದಾಗಿ ಜನಗಳಲ್ಲಿ ಈ ವೈರಸ್ಸಿಗೆ ಪ್ರತಿಯಾಗಿ ಸ್ವಲ್ಪ ಮಟ್ಟಿಗಿನ ರೋಗಪ್ರತಿರಕ್ಷಕ ಶಕ್ತಿ ಕೂಡಾ ಇರುವುದಿಲ್ಲವೆಂದು ಸಾಧಿಸಿದ್ದು ಅದಕ್ಕಿಂತಾ ದೊಡ್ಡ ತಪ್ಪು. ಮೂರನೆಯದಾಗಿ ಇದೆಲ್ಲದಕ್ಕಿಂತಾ ಮಕುಟಪ್ರಾಯವಾದ ಮೂರ್ಖತನದ ತಪ್ಪೆಂದರೆ ಕೋವಿಡ್-19 ಇದ್ದೂ ಯಾವುದೇ ರೋಗ ಲಕ್ಷಣಗಳಿರುವುದಿಲ್ಲವೆಂದೂ ಅಥವಾ ರೋಗಲಕ್ಷಣಗಳೇ ಇಲ್ಲದೆ ಈ ರೋಗವನ್ನು ಇತರರಿಗೆ ಹರಡಬಹುದೆಂದೂ ಸಾಧಿಸಿದ್ದು.

ಇವುಗಳನ್ನು ಒಂದೊಂದಾಗಿ ನೋಡೋಣ.

೧. ಹೊಸ ವೈರಾಣುವೇ?

2019ರ ಕೊನೆಗೆ ನೂತನವೆಂದು ಪರಿಗಣಿಸಲ್ಪಟ್ಟ ಒಂದು ವೈರಾಣುವನ್ನು ಚೀನಾದಲ್ಲಿ ಗುರುತಿಸಲಾಯಿತು. ಈ ವೈರಾಣುವಿನ ನೀಲಿನಕ್ಷೆಯಾದ ಅದರ ವಂಶವಾಹೀ ಸರಣಿಯನ್ನು ಗುರುತಿಸಿ, ಅದಕ್ಕೆ 2002ರಲ್ಲಿ ಗುರುತಿಸಿದ ಸಾರ್ಸ್ ವೈರಾಣುವಿನ ಹೆಸರನ್ನೇ ಅಂದರೆ ಸಾರ್ಸ್-ಕೋವ್-2 ಕೊಟ್ಟಾಗಲೇ ನಾವು ಈ ವೈರಾಣು, ಮಾನವನಿಗೆ ರೋಗವುಂಟುಮಾಡಬಲ್ಲ ಇತರ ಕೋರೋನಾವೈರಾಣುಗಳಿಗೆ ಎಷ್ಟರ ಮಟ್ಟಿಗೆ ಸಂಬಂಧಪಟ್ಟಿದೆ ಎಂದು ಕೇಳಿಕೊಳ್ಳಬೇಕಾಗಿತ್ತು. ನಾವು ಆ ಕೆಲಸ ಮಾಡಲಿಲ್ಲ. ಬದಲಿಗೆ ಚೀನಾದವರ ಊಟದ ಭಾಗವಾದ ಯಾವ ಪ್ರಾಣಿಯ ಖಾದ್ಯದಿಂದ ಈ ವೈರಾಣು ಜಿಗಿದು ಬಂದಿದೆ ಎಂದು ಚರ್ಚಿಸಿದೆವು. ಇದಲ್ಲದೆ ಬಹಳಷ್ಟು ಜನರು ಚೀನಾದವರು ತಮ್ಮ ದೇಶದ ಒಳಗೇ ತಮ್ಮ ಮೇಲೇ ಈ ವೈರಾಣುವನ್ನು ತಾವೇ ಹರಡಿಕೊಂಡು ಬಿಡಬಲ್ಲಂಥ ಮೂರ್ಖರು ಎಂದೂ ನಂಬುತ್ತಾರೆ. ಈಗ ಈ ವೈರಾಣುವಿನ ವಿರುದ್ಧ ಲಸಿಕೆಯನ್ನು ಕಂಡುಹಿಡಿಯುತ್ತಿರುವಾಗ, ಈ ವೈರಾಣು ಸಾರ್ಸ್-1 ವೈರಾಣುವಿಗೆ ಬಲವಾದ ನಂಟುಳ್ಳದ್ದೆಂದೂ, ಅಷ್ಟೇ ಅಲ್ಲ ಈ ವೈರಾಣು ನಮಗೆ ಪ್ರತಿ ವರ್ಷ ನೆಗಡಿಯನ್ನುಂಟುಮಾಡಿ ಕಾಡುವ ಬೀಟಾಕೋರೋನಾ ವೈರಾಣುಗಳಿಗೂ ಪ್ರಬಲವಾಗಿ ಸಂಬಂಧಪಟ್ಟಿದ್ದೆಂದೂ ವಿವರಿಸುವ ಅಧ್ಯಯನಗಳು ಒಮ್ಮಿಂದೊಮ್ಮೆಗೇ ಗೋಚರವಾಗಿ ಬಿಡುತ್ತದೆ.

ಜನರನ್ನು ರೋಗಕ್ಕೀಡು ಮಾಡುವ ವಿವಿಧ ಕೊರೋನಾ ವೈರಾಣುಗಳ ವಂಶವಾಹೀ ಸರಣಿಗಳ ಸ್ವಾಮ್ಯತೆಯ ಬಗ್ಗೆಯಷ್ಟೇ ಅಲ್ಲ , ಮಾನವ ರೋಗಪ್ರತಿರಕ್ಷಕ ಜೀವಾಣುಗಳು ಗುರುತಿಸುವ ರೀತಿಯಲ್ಲಿಯೇ ಈ ವೈರಾಣುಗಳ ಮೇಲ್ಪದರದ ಜಾಗಗಳನ್ನು ಗುರುತಿಸುವುದರ ಬಗ್ಗೆಯೂ ವಿಜ್ಞಾನಿಗಳು ಸಧ್ಯದಲ್ಲಿ ಕಾರ್ಯನಿರತರಾಗಿದ್ದಾರೆ. ಇದು ಇನ್ನು ಮುಂದೆ ವೈರಾಣುಗಳ ವಂಶವಾಹೀ ಸಂಬಂಧದ ಬಗ್ಗೆ ಮಾತ್ರವಲ್ಲ, ಬದಲಿಗೆ ನಮ್ಮ ರೋಗಪ್ರತಿರಕ್ಷಕ ಜೀವಾಣುಗಳು ಈ ವೈರಾಣುವನ್ನು ಹೇಗೆ ನೋಡುತ್ತವೆ ಎಂಬುದರ ಬಗ್ಗೆ. ಅಂದರೆ ಬೇರೆ ವೈರಾಣುಗಳ ಯಾವ ಭಾಗಗಳನ್ನು ನಾವು ಈ ವೈರಾಣಿವಿನ ವಿರುದ್ಧದ ಲಸಿಕೆಯಲ್ಲಿ ಬಳಸಲು ಸಾಧ್ಯವಾಗಬಹುದು ಎಂಬುದರ ಬಗ್ಗೆ.

ಆದ್ದರಿಂದ : ಸಾರ್ಸ್ -ಕೋವ್-2 ವೈರಾಣು ಅಂಥಾದ್ದೇನೂ ನೂತನ ವೈರಾಣುವಲ್ಲ. ಎಲ್ಲಾ ನೆಗಡಿಯ ವೈರಾಣುಗಳಂತೇ ಬರಿಯ ಒಂದು ಋತುಮಾನಕ್ಕೆ ಆಗಮಿಸುವ ಮತ್ತು ಈಗ ನಡೆಯುತ್ತಿರುವಂತೆ ಬೇಸಿಗೆಯಲ್ಲಿ ರೂಪಾಂತರ ಹೊಂದಿ ನಿರ್ಗಮಿಸಿ ಬಿಡುವ ಒಂದು ಬಗೆಯ ನೆಗಡಿ ವೈರಾಣು –ಇದನ್ನೇ ನಾವೀಗ ಜಗತ್ತಿನಾದ್ಯಂತ ನೋಡುತ್ತಿದ್ದೇವೆ. ಅಂದಹಾಗೆ ಫ್ಲೂದಲ್ಲೂ ವೈರಾಣು ಇದಕ್ಕೂ ಹೆಚ್ಚಾಗಿ ಮಾರ್ಮಿಕವಾಗಿ ರೂಪಾಂತರ ಹೊಂದುತ್ತದೆ. ಹಾಗಿದ್ದರೂ ಹೊಸ ತಳಿಯ ಫ್ಲೂದಲ್ಲೂ ವೈರಾಣುವನ್ನು ಸಂಪೂರ್ಣವಾಗಿ ನೂತನವಾದುದೆಂದು ಯಾರೂ ಕರೆದುಬಿಡುವುದಿಲ್ಲ. ಅದ್ದರಿಂದಲೇ ಬಹಳ ಪಶುವೈದ್ಯರಿಗೆ ಈ ವೈರಾಣು ನೂತನವಾದದ್ದು ಎಂಬ ಹೇಳಿಕೆಯಿಂದ ಬಹಳ ಕಿರಿಕಿರಿಯಾಗಿತ್ತು. ಅವರು ಎಷ್ಟೋ ವರ್ಷಗಳಿಂದ ಬೆಕ್ಕು, ನಾಯಿ, ಹಂದಿ ಮತ್ತು ದನಗಳಿಗೆ ಕೊರೋನಾ ವೈರಾಣುವಿನ ವಿರುದ್ಧ ಕಸಿಕೆಯನ್ನು ನೀಡುತ್ತಲೇ ಬಂದಿದ್ದಾರೆ.

೨. ರೋಗಪ್ರತಿರಕ್ಷಕ ಶಕ್ತಿ ಇಲ್ಲವೆಂಬ ಕಾಗಕ್ಕಗುಬ್ಬಕ್ಕನ ಕತೆ :

ಡಾ. ಆಂಟನಿ ಫೌಚಿ

ಡಾ. ಆಂಟನಿ ಫೌಚಿ

ವಿಶ್ವ ಆರೋಗ್ಯ ಸಂಸ್ಥೆಯಿಂದ ( ಡಬಲ್ಯೂ.ಎಚ್.ಒ) ಹಿಡಿದು ಫೇಸ್ಬುಕ್ಕಿನ ವೈರಾಣು ಶಾಸ್ತ್ರಜ್ಞರವರೆಗೆ ಎಲ್ಲಾರೂ, ಈ ರೋಗ ನೂತನ ವೈರಾಣುವಿನ ಕಾರಣದಿಂದ ಬರುತ್ತದೆ ಹಾಗೂ ಈ ರೋಗಕ್ಕೆ ರೋಗಪ್ರತಿರೋಧಕಶಕ್ತಿ ಇಲ್ಲದಿರುವ ಕಾರಣ ಈ ರೋಗವು ಅತ್ಯಂತ ಅಪಾಯಕಾರೀ ಎಂದು ಹೇಳತೊಡಗಿದರು. ಟ್ರಂಪ್ ಆಡಳಿತದಲ್ಲಿ ಅತ್ಯಂತ ಮುಖ್ಯ ಸಲಹಾದಾರರಾಗಿರುವ ಆಂಥೊನಿ ಫೌಚಿ ಕೂಡಾ ಮೊದಮೊದಲಲ್ಲಿ ತಾನು ಮಾತನಾಡಿದ ಎಲ್ಲಾ ಸಾರ್ವಜನಿಕ ಸಮಾರಂಭಗಳಲ್ಲಿ, ಈ ವೈರಾಣುವಿನಿಂದಾಗುವ ಅಪಾಯಕ್ಕೆ ಕಾರಣ ಇದರ ವಿರುದ್ಧ ರೋಗಪ್ರತಿರಕ್ಷಕ ಶಕ್ತಿಯಿಲ್ಲದಿರುವುದು ಎಂದೇ ಹೇಳುತ್ತಿದ್ದರು. ಹಿಂದೆ ನಾವಿಬ್ಬರೂ ಒಂದೇ ಕ್ಷೇತ್ರದಲ್ಲಿ ಕಾರ್ಯನಿರತಗಾರಿದ್ದ ಕಾರಣ ಈ ಟೋನೀ ಮತ್ತು ನಾನು, ಅಮೆರಿಕದ ಬೆತಿಸ್ದಾದ ನ್ಯಾಶನಲ್ ಇಂಸ್ಟಿಟ್ಯೂಟ್ ಆಫ್ ಹೆಲ್ತಿನ ರೋಗರಕ್ಷಕಶಾಸ್ತ್ರದ ಸೆಮಿನಾರುಗಳಲ್ಲಿ ಆಗಾಗ್ಗೆ ಅಕ್ಕಪಕ್ಕ ಕೂರುತ್ತಿದ್ದೆವು. ಅದರಿಂದಾಗಿ ಹಾಗೂ ಅವನು ನನ್ನ ಒಬ್ಬ ಗೌರವಾನ್ವಿತ ಸಹೋದ್ಯೋಗಿಯಾಗಿದ್ದುದರಿಂದ ಸ್ವಲ್ಪ ಕಾಲದವರೆಗೆ ಅವನ ಹೇಳಿಕೆಗಳನ್ನು ನಾನು ಟೀಕಿಸಲಿಲ್ಲ. ಆದರೆ ಯಾವಾಗ ಹಳೆಯ ಲಭ್ಯವಿದ್ದ ಸಾರ್ಸ್-1ಅನ್ನು ಕಂಡುಹಿಡಿಯುವ ತಪಾಸಣೆಯನ್ನು ಒಟ್ಟುಗೂಡಿಸುವ ಮೂಲಕ ಸಾರ್ಸ್-ಕೋವ್-2ರ ಆಂಟಿಬಾಡಿ (ರೋಗನಿರೋಧಕ) ತಪಾಸಣೆಯನ್ನು ವ್ಯಾಪಾರಕ್ಕಾಗಿ ತಯಾರಿಸಿದರೋ ಆಗ ನನ್ನ ಕಣ್ತೆರೆಯಿತು. ಈ ರೀತಿಯ ತಪಾಸಣೆಯು ಜನರ ರಕ್ತದಲ್ಲಿ ರೋಗನಿರೋಧಕ ಆಂಟಿಬಾಡಿಗಳಿವೆಯೇ ಎಂದೂ ಮತ್ತು ಅವು ವೈರಾಣುವಿನೊಂದಿಗಿನ ದೇಹದ ಮೊದಮೊದಲ ಕಾದಾಟದಲ್ಲಿ ಬಂದವುಗಳೇ ಎಂದು ಪರೀಕ್ಷಿಸುತ್ತದೆ.

ವಿಜ್ಞಾನಿಗಳು ಒಂದು ಲಾಮಾ ಪ್ರಾಣಿಯ ರಕ್ತದ ಪ್ಲಾಸ್ಮಾದಿಂದ ಸಾರ್ಸ್-1, ಸಾರ್ಸ್-ಕೋವ್-2 ಅಷ್ಟೇ ಅಲ್ಲದೆ ಮೆರ್ಸ್ ವೈರಾಣುವನ್ನು ಕೂಡಾ ಗುರುತಿಸಬಲ್ಲ ಆಂಟಿಬಾಡೀಗಳನ್ನು (ರೋಗನಿರೋಧಕ ಕಣಗಳನ್ನು) ಹೊರತೆಗೆದಿದ್ದಾರೆ. ಸಾರ್ಸ್-1 ತನ್ನ ಕ್ರೋಧದ ಆಟಾಟೋಪ ಮೆರೆದ ಚೀನಾದ ಪ್ರದೇಶಗಳಲ್ಲಿ ಸಾರ್ಸ್-ಕೋವ್-2 ವೈರಾಣು, ಕಡಿಮೆ ಮಾರ್ಮಿಕ ಪರಿಣಾಮ ಬೀರಿದೆ ಎಂದು ತಿಳಿದುಬಂದಿದೆ. ಹೀಗಾಗಿ,  ‘ನಮ್ಮ ದೇಹವು ಸಾರ್ಸ್-1 ಮತ್ತು ಸಾರ್ಸ್-ಕೋವ್-2 ವೈರಾಣುಗಳನ್ನು ಭಾಗಶಃ ಒಂದೇ ರೀತಿಯಲ್ಲಿ ನೋಡುತ್ತದೆ ಮತ್ತು ಹಾಗೂ ಇವುಗಳಲ್ಲಿ ಒಂದು ವೈರಾಣು ಇನ್ನೊಂದು ವೈರಾಣುವಿನ ವಿರುದ್ಧ ಪ್ರಾಯಶಃ ನಮ್ಮನ್ನು ರಕ್ಷಿಸುತ್ತದೆ’, ಎನ್ನುವುದನ್ನು ತುರ್ತಾಗಿ ಸೂಚಿಸುವುದಕ್ಕೆ ಇದೊಂದು ಪುರಾವೆ.

ಆ ಸಮಯದಲ್ಲಿ ನಾನು ಹೀಗೆ ಅರ್ಥ ಮಾಡಿಕೊಂಡೆ. ಈ ಪ್ರಪಂಚ ಈ ವೈರಾಣುವಿನ ವಿರುದ್ಧ ನಮಗೆ ಯಾವುದೇ ರೋಗಪ್ರತಿರಕ್ಷಕ ಶಕ್ತಿಯಿಲ್ಲ ಎಂದು ಸುಮ್ಮಸುಮ್ಮನೆ ಹೇಳಿಕೊಂಡಿದೆಯಾದರೂ ನಿಜದಲ್ಲಿ ಅದನ್ನು ಪರೀಕ್ಷಿಸಿ ಸಾಧಿಸಲು ಯಾರ ಬಳಿಯೂ ಒಂದು ತಪಾಸಣಾ ಕ್ರಮ ಸಿದ್ಧವಿರಲಿಲ್ಲ. ಅದು ವಿಜ್ಞಾನವೇ ಆಗಿರಲಿಲ್ಲ. ಬದಲಿಗೆ ಮನಸ್ಸಿಗೆ ಅನ್ನಿಸಿದ ಅದೊಂದು ಊಹಾಪೋಹವಾಗಿತ್ತು. ಮತ್ತದನ್ನೇ ಎಲ್ಲಾರೂ ಗಿಳಿಪಾಠದಂತೆ ಪುನರುಚ್ಚಿಸಲಾರಂಭಿಸಿದರು. ಸಂಭವಿಸಬಹುದಾದ ಎಲ್ಲಾ ರೋಗಪ್ರತಿರಕ್ಷಕ ಪರಿಸ್ಥಿತಿಗಳನ್ನೂ ವಿವರಿಸಬಲ್ಲ ಒಂದೇ ಒಂದು ಆಂಟಿಬಾಡೀ ತಪಾಸಣೆ ಈವತ್ತಿನವರೆಗೂ ಇಲ್ಲವೇ ಇಲ್ಲ. : ಅಂದರೆ ಯಾರಿಗಾದರೂ ರೋಗಪ್ರತಿರಕ್ಷಕ ಶಕ್ತಿ ಇದೆಯಾ, ಹಾಗಿದ್ದಲ್ಲಿ ಅದು ಎಂದಿನಿಂದ ಇದೆ, ಹಾಗಿರುವ ವ್ಯಕ್ತಿಯಲ್ಲಿ ಆ ರೋಗಾಣುವನ್ನು ನಿರರ್ಥಕಗೊಳಿಸಬಲ್ಲ ಆಂಟಿಬಾಡೀಗಳು ಏನನ್ನು/ವೈರಾಣುವಿನ ಯಾವ ರಚನೆಯನ್ನು ಗುರಿಮಾಡಿ ಅದರ ಮೇಲೆ ದಾಳಿ ಮಾಡುತ್ತಿವೆ ಹಾಗೂ ಬೇರೆ ಕೊರೋನಾ ವೈರಾಣುಗಳ ಮೇಲ್ಪದರದಲ್ಲಿ ಆ ರೀತಿಯ , ದಾಳಿಗೊಳಗಾಗಿ ವ್ಯಕ್ತಿಗೆ ರೋಗಪ್ರತಿರಕ್ಷಕ ಶಕ್ತಿಯನ್ನು ಗಳಿಸಿಕೊಡಬಲ್ಲ ಎಷ್ಟು ರಚನೆಗಳಿವೆ.  ಈ ಎಲ್ಲವುಗಳನ್ನೂ ವಿವರಿಸುವ ತಪಾಸಣಾ ಕ್ರಮವಿಲ್ಲ.

ಏಪ್ರಿಲ್ ತಿಂಗಳ ಮಧ್ಯದಲ್ಲಿ “ಚಾರಿಟೆ ಬರ್ಲಿನ್”ನಲ್ಲಿ ಆಂಡ್ರಿಯಾಸ್ ಥೀಲ್ ತಂಡದಿಂದ ಒಂದು ಪ್ರಕಟನೆ ಬಂದಿತು. ಆ ಬರಹವನ್ನು ವೈರಾಣು ಶಾಸ್ತ್ರಜ್ಞ ಕ್ರಿಸ್ಚಿಯನ್ ಡ್ರೋಸ್ಟೆನ್ ಅವರೂ ಸೇರಿದಂತೆ 30 ಜನ ಲೇಖಕರು ಸೇರಿ ಪ್ರಕಟಿಸಿದ್ದರು. ಅದರ ಪ್ರಕಾರ, ಬರ್ಲಿನ್ನಿನ 34% ಸಾರ್ಸ್-ಕೋವ್-2 ವೈರಾಣುವಿನ ಸಂಪರ್ಕಕ್ಕೇ ಬರದ ವ್ಯಕ್ತಿಗಳು , ಆ ವೈರಾಣುವಿನ ಸಂಪರ್ಕಕ್ಕೆ ಬರದಿದ್ದರೂ ತಮ್ಮಲ್ಲಿ ಅದರ ವಿರುದ್ಧ ಟಿ-ಜೀವಾಣು ರೋಗಪ್ರತಿರಕ್ಷಕ ಶಕ್ತಿಯನ್ನು ಹೊಂದಿದ್ದರು.( ಟಿ-ಜೀವಾಣು ರೋಗಪ್ರತಿರಕ್ಷಕ ಶಕ್ತಿಯೆಂದರೆ ಅದೊಂದು ಬೇರೆ ವಿಧದ ರೋಗಪ್ರತಿರಕ್ಷಕ ಪ್ರತಿಕ್ರಿಯೆ. ಕೆಳಗೆ ನೋಡಿ) ಅಂದರೆ ನಮ್ಮ ಟಿ-ಜೀವಾಣುಗಳು, ಅಂದರೆ ನಮ್ಮ ಬಿಳಿಯ ರಕ್ತಕಣಗಳು ಸಾಮಾನ್ಯ ನೆಗಡಿ ಮತ್ತು ಸಾರ್ಸ್-ಕೋವ್-2 ವೈರಾಣುಗಳ ಮೇಲಿರುವ ಒಂದೇ ಥರದ ರಚನೆಗಳನ್ನು ಗುರುತಿಸುತ್ತವೆ ಹಾಗೂ ಅವೆರಡರ ಮೇಲೆಯೂ ದಾಳಿಮಾಡುತ್ತವೆ.

ಬರ್ಲಿನ್ನಿನಲ್ಲಿರುವ ಐನ್ಸ್ಟೀನ್ ಫೌಂಡೇಷನ್ನಿನ ಪ್ರಕಾರ ಜಗತ್ತಿನ ಹತ್ತು ಅತಿ ಹೆಚ್ಚು ಉಲ್ಲೇಖಿಸಲ್ಪಟ್ಟ ವಿಜ್ಞಾನಿಗಳಲ್ಲಿ ಒಬ್ಬರಾದ, ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದ ಪಿ.ಎ.ಇಯ್ಯೊನಾಡಿಸ್ರವರು ಮಾಡಿದ ಅಧ್ಯಯನವು, ಆಂಟಿಬಾಡೀ ಮಾದರಿಯಲ್ಲಿ ಅಳತೆಮಾಡಲ್ಪಟ್ಟ ಸಾರ್ಸ್-ಕೋವ್-2ನ ವಿರುದ್ಧದ ರೋಗಪ್ರತಿರಕ್ಷಕ ಶಕ್ತಿ ನಾವು ಹಿಂದೆ ಅರಿತುಕೊಂಡಿದ್ದಕ್ಕಿಂತ ಬಹಳ ಹೆಚ್ಚಿದೆ ಎಂದು ತೋರಿಸಿತು. ಇಯ್ಯೊನಾಡಿಸ್ ರವರಂತೂ ಖಂಡಿತವಾಗಿ ಸುಮ್ಮಸುಮ್ಮನೆ ಹೊಳೆಯ ಹರಿವಿನೆದುರು ಈಜ ಬಯಸುವ ಪಿತೂರಿ ಸಿದ್ಧಾಂತಿಗರೇನೂ ಅಲ್ಲ: ಆದರೂ ಅವರನ್ನೀಗ ಟೀಕಿಸಲಾಗುತ್ತಿದೆ, ಏಕೆಂದರೆ ,ಅವರು ಉಪಯೋಗಿಸಿದ ಆಂಟೀಬಾಡೀ ತಪಾಸಣೆಗಳು ಅತ್ಯಂತ ನಿಖರವಾಗಿರಲಿಲ್ಲ. ಅವರನ್ನು ಟೀಕಿಸುವವರೂ ಸಹ ತಮ್ಮಲ್ಲಿ ಆ ಬಗೆಯ ತಪಾಸಣೆಗಳು ಇಲ್ಲ ಎಂಬುದನ್ನೂ ಒಪ್ಪಿಕೊಳ್ಳುತ್ತಾರೆ. ಅದೇನೇ ಇರಲಿ ಜಾನ್.ಪಿ.ಎ. ಇಯ್ಯೋನಾಡಿಸ್ರವರು ಎಷ್ಟರ ಮಟ್ಟಿಗಿನ ಭೂಮಿತೂಕದ ವಿಜ್ಞಾನಿಯಾಗಿದ್ದಾರೆಂದರೆ ಅವರೆದುರು  ಜರ್ಮನಿಯ ಎಲ್ಲಾ ವೈರಾಣುಶಾಸ್ತ್ರಜ್ಞರುಗಳನ್ನೂ ಒಟ್ಟುಗೂಡಿಸಿದರೂ ಅದು ತುಲನೆಯಲ್ಲಿ ಹಗುರವಾಗುತ್ತದಷ್ಟೆ.

೩. ಮಾದರಿ ರಚಿಸುವವರ ಸೋಲು

ಸೋಂಕುರೋಗ ಶಾಸ್ತ್ರಜ್ಞರುಗಳೂ ಸಹ ಜನಗಳಲ್ಲಿ ರೋಗಪ್ರತಿರಕ್ಷಕ ಶಕ್ತಿಯಿಲ್ಲವೆಂಬ ಗಾಳಿಮಾತನ್ನು ಒಪ್ಪಿಕೊಂಡುಬಿಟ್ಟರು. ಅವರೂ ಸಹ ಈ ಕೊರೋನಾ ವೈರಾಣು ಋತುಮಾನಕ್ಕೆ ತಕ್ಕಂತೆ ಬರುವ ನೆಗಡಿ ವೈರಾಣುವಾಗಿದ್ದು ಅದು ಬೇಸಿಗೆಯಲ್ಲಿ ಕಣ್ಮರೆಯಾಗುವುದೆಂದು ನಂಬಲಾರದೆ ಹೋದರು. ಹಾಗೆ ಅವರು ನಂಬಿದ್ದಿದ್ದರೆ ಅವರ (ಕರ್ವ್ ಮಾಡಲ್) ವಕ್ರ ಮಾದರಿಗಳು ಬೇರೆಯೇ ರೀತಿಯಲ್ಲಿ ಕಾಣುತ್ತಿದ್ದವು. ಯಾವಾಗ ಮೊದಮೊದಲಿನ, ಆಗಬಹುದಾಗಿದ್ದ ಅತ್ಯಂತ ಕೆಟ್ಟದಾದ ಪರಿಣಾಮಗಳು ಎಲ್ಲೂ ನಿಜವಾಗಿ ನಡೆಯಲಿಲ್ಲವೋ ಅಂತಹ ಸ್ಥಿತಿಯಲ್ಲಿ ಇನ್ನೂ ಕೆಲವರು ರೋಗದ ಎರಡನೆಯ ಅಲೆಯು ಬರುವುದೆನ್ನುವ ಮಾದರಿಯನ್ನೇ ನೆಚ್ಚಿಕೊಂಡು ಕುಳಿತಿದ್ದಾರೆ. ಅವರನ್ನು ಅವರ ಆಶಯಗಳ ಜೊತೆ ಬಿಟ್ಟುಬಿಡೋಣ. ನಾನು ಇದುವರೆಗೆ ನೇರ ಮಾರ್ಗದಿಂದ ಅತ್ತ ಬದಿಗೆ ಕುಟಿಲದಿಂದ ತನ್ನನ್ನು ತಾನೇ ಇಷ್ಟರ ಮಟ್ಟಿಗೆ ತಿರುಗಿಸಿಕೊಂಡಂಥ ವಿಜ್ಞಾನ ಶಾಖೆಯನ್ನು ಕಂಡಿಲ್ಲ. ಅಷ್ಟಲ್ಲದೆ ನನಗೆ ಇದುವರೆಗೂ ಸೋಂಕುರೋಗ ಶಾಸ್ತ್ರಜ್ಞರುಗಳು ಯಾತಕ್ಕಾಗಿ ರೋಗದಿಂದ ರಕ್ಷಿಸಬಹುದಾದವರ ಸಂಖ್ಯೆಯ ಬಗ್ಗೆ ಅಲ್ಲದೆ,  ಇಷ್ಟರ ಮಟ್ಟಿಗೆ ಸಾವಿನ ಸಂಖ್ಯೆಯ ಬಗ್ಗೆ ಆಸಕ್ತಿಹೊಂದಿದ್ದಾರೆ ಎಂದೂ ಅರ್ಥವಾಗಿಲ್ಲ.

ಕೃಪೆ: The Indian Express

ಕೃಪೆ: The Indian Express

೪. ರೋಗಪ್ರತಿರಕ್ಷಕ ಶಾಸ್ತ್ರದ ಬಗ್ಗೆ ಸಾಮಾನ್ಯ ತಿಳುವಳಿಕೆ./ ವಿವೇಕ.

ಒಬ್ಬ ರೋಗಪ್ರತಿರಕ್ಷಕ ಶಾಸ್ತ್ರಜ್ಞನಾಗಿ ನಾನು ಜೀವಶಾಸ್ತ್ರದ ಮಾದರಿಯನ್ನು ನೆಚ್ಚಿಕೊಳ್ಳುತ್ತೇನೆ. ಅಂದರೆ ಒಂದು ಕಾಲಕ್ರಮದಲ್ಲಿ ಪರೀಕ್ಷಿಸಲ್ಪಟ್ಟು ರೂಪಗೊಂಡಿರುವ,ಸಂದರ್ಭಗಳಿಗೆ ಹೊಂದಿಕೊಳ್ಳಲು ಸಮರ್ಥವಾಗಿರುವ ರೋಗಪ್ರತಿರಕ್ಷಕ ವ್ಯವಸ್ಥೆಯನ್ನು ರಚಿಸಿಕೊಂಡಿರುವ ಮಾನವ ಜೀವಿಯನ್ನು ನಂಬುತ್ತೇನೆ.

ಫೆಬ್ರುವರೀ ತಿಂಗಳ ಕೊನೆಯಲ್ಲಿ ಒಂದು ರೆಕಾರ್ಡಿಂಗ್ ಕಾರ್ಯಕ್ರಮವನ್ನು ಮುಗಿಸಿಕೊಂಡು ಹಿಂದಿರುಗುತ್ತಿರುವಾಗ, (ಒಂದು ಸ್ವಿಸ್ ದೂರದರ್ಶನದ ರಾಜಕೀಯ ಚರ್ಚಾಕಾರ್ಯಕ್ರಮದ ರೆಕಾರ್ಡಿಂಗ್)ನಾನು ಡೇನಿಯಲ್ ಕೋಚ್ (ಫೆಡೆರಲ್ ಆಫಿಸ್ ಆಫ್ ಪಬ್ಲಿಕ್ ಹೆಲ್ತ್‍ನ ಸ್ವಿಸ್ ಫೆಡೆರಲ್” ಸೋಂಕುಹರಡಬಲ್ಲ ರೋಗಗಳ” ಭಾಗದ ಈ ಹಿಂದಿನ ಮುಖ್ಯಸ್ಥರು)ಅವರಿಗೆ ಹೀಗೆ ಹೇಳಿದೆ, ” ಜನರಲ್ಲಿ ಸಾರ್ಸ್-ಕೋವ್-2ರ ವಿರುದ್ಧ ಸಾಮಾನ್ಯ ರೋಗಪ್ರತಿರಕ್ಷಕ ಶಕ್ತಿ ಇರಬಹುದು, ಎಂದು ನನಗೆ ಸಂಶಯವಿದೆ.” ಅವರು ನನ್ನ ವಾದದ ವಿರುದ್ಧ ಪ್ರತಿವಾದ ಮಾಡಿದರು. ಮುಂದೆ ಯಾವಾಗ ಅವರು ” ಈ ವಿಶ್ವವ್ಯಾಪೀ ಸೋಂಕಿನಲ್ಲಿ ಮಕ್ಕಳು ಆ ಸೋಂಕಿನ ಹರಡುವಿಕೆಯನ್ನು ಮುಂದುವರೆಸುವ ಒಂದು ಪ್ರಬಲ ಶಕ್ತಿಯಲ್ಲ ಎಂದು ನುಡಿದರೋ ಆಗ ನಾನು ಅವರ ವಾದವನ್ನು ಎದುರಿಸಿದೆ. ಅವರು ಮಕ್ಕಳಲ್ಲಿ ಈ ವೈರಾಣುವನ್ನು ಸ್ವೀಕರಿಸುವ ಗ್ರಾಹಕಗಳಿಲ್ಲ ಎಂದು ಅನುಮಾನಿಸುತ್ತಿದ್ದರು. ಆದರೆ ಅದು ಖಂಡಿತವಾಗಿ ಅರ್ಥಹೀನ. ಆದರೂ ಅವರ ಅವಲೋಕನಗಳು ಸರಿಯಾದುದವೆಂದು ನಾವು ಒಪ್ಪಿಕೊಳ್ಳಲೇಬೇಕು. ಆದರೆ ಮುಂದೆ ಪ್ರತಿಯೊಬ್ಬ ವಿಜ್ಞಾನಿಯೂ ಅವರನ್ನು ಖಂಡಿಸಿ ಅವರ ಅಂಶಗಳನ್ನು ಸಾಕ್ಷಿಸಮೇತ ನಿರ್ದೇಶಿಸಲು ಕೇಳಿಕೊಂಡಿದ್ದೊಂದು ವಿಪರ್ಯಾಸ. ಒಂದು ಅಪಾಯದಲ್ಲಿರುವ ವಯಸ್ಸಿನ ಗುಂಪಿನ ಜನರು ಸಾಯುತ್ತಿರುವುದಕ್ಕೇನೂ ಯಾರೂ ಸಾಬೀತು ಪಡಿಸುವ ಅಧ್ಯಯನಗಳನ್ನು ಕೇಳುತ್ತಿರಲಿಲ್ಲ. ಮೊದಮೊದಲು ಚೀನಾದಿಂದ ಬಂದ ಮತ್ತು ಅನಂತರ ಜಗತ್ತಿನಾದ್ಯಂತದಿಂದ ಬಂದ ಡೇಟಾಗಳು ಅದೇ ಪ್ರವೃತ್ತಿಯನ್ನು ತೋರ್ಪಡಿಸಿದವು, ಅಂದರೆ ಹತ್ತು ವರ್ಷಕ್ಕೆ ಕೆಳಪಟ್ಟ ಮಕ್ಕಳಲ್ಲಿ ಮುಕ್ಕಾಲುಮೂರು ಭಾಗ ಯಾರೊಬ್ಬರಿಗೂ ಸೋಂಕು ತಗುಲಿರಲಿಲ್ಲ. ಆಗ ಮಕ್ಕಳಲ್ಲಿ ಈ ರೋಗಪ್ರತಿರಕ್ಷಕ ಶಕ್ತಿಯಿದೆಯೆಂದು ಎಲ್ಲರೂ ವಾದಮಾಡಬೇಕಿತ್ತು. ಬೇರೆ ಯಾವುದೇ ರೋಗಕ್ಕಾದರೂ, ಆ ರೋಗ ಒಂದು ಗುಂಪಿಗೆ ಸೇರಿದವರಿಗೆ ಬರದಿದ್ದರೆ, ನಾವು ಆ ಗುಂಪು ಈ ರೋಗದ ವಿರುದ್ಧ ರೋಗಪ್ರತಿರಕ್ಷಕ ಶಕ್ತಿ ಪಡೆದಿದೆಯೆಂಬ ತೀರ್ಮಾನಕ್ಕೆ ಬರುತ್ತಿದ್ದೆವು. ಒಂದು ವೃದ್ಧಾಶ್ರಮದಲ್ಲಿ ಕೆಲವು ಜನರು ದುಃಖಕರರೀತಿಯಲ್ಲಿ ಸಾಯುತ್ತಿದ್ದರೆ, ಹಾಗೂ ಅದೇ ವೃದ್ಧಾಶ್ರಮದಲ್ಲಿ ಇನ್ನು ಕೆಲವು ಅದೇ ರೀತಿಯ ಅಪಾಯದ ಲಕ್ಷಣಗಳನ್ನು ಹೊಂದಿದವರು ಸಂಪೂರ್ಣವಾಗಿ ಯಾವುದೇ ಹಾನಿಗೊಳಪಡದೆ ಉಳಿದುಕೊಂಡರೆ, ಆಗ ಹಾಗೆ ಉಳಿದುಕೊಂಡವರು ರೋಗಪ್ರತಿರಕ್ಷಕ ಶಕ್ತಿಯನ್ನು ಹೊಂದಿದವರಾಗಿರಬೇಕೆಂದು ಗ್ರಹಿಸುವುದನ್ನು ಒಪ್ಪಿಕೊಳ್ಳಬೇಕಾಗುತ್ತದೆ.

ಈ ಸಾಮಾನ್ಯ ಜ್ಞಾನ ಕೆಲವರಿಂದ ತಪ್ಪಿಸಿಕೊಂಡು ಓಡಿಹೋಗಿದೆ. ಅವರನ್ನು ಹಾಸ್ಯಕ್ಕಾಗಿ “ರೋಗಪ್ರತಿರಕ್ಷಕ ಶಕ್ತಿಯನ್ನು ಅಲ್ಲಗೆಳೆಯುವವರು” ಎಂದು ಕರೆಯೋಣ. ಈ ಅಲ್ಲಗೆಳೆಯುವವರ ಹೊಸ ಗುಂಪಿನವರು ಜನರನ್ನು ಅವಲೋಕಿಸಿದಾಗ ಅವರಿಗೆ ರೋಗದ ತಪಾಸಣೆಯಲ್ಲಿ ರೋಗಕ್ಕೆ ಪಾಸಿಟಿವ್ ಆಗಿ ರೋಗವಿದ್ದ ಬಹುತೇಕ ಮಂದಿ ಅಂದರೆ ಈ ವೈರಾಣುವನ್ನು ಗಂಟಲಲ್ಲಿ ಹೊಂದಿದ್ದ ಮಂದಿ ರೋಗಪೀಡಿತರಾಗಲಿಲ್ಲ ಎಂಬುದು ಕಂಡು ಬಂದಿತು.

ಮಂತ್ರವಾದಿ ಪಾರಿವಾಳವನ್ನು ಟೊಪ್ಪಿಯಿಂದ ತೆಗೆಯುವಂತೆ ಅವರು “ಮೂಕ ರೋಗ-ವಾಹಕರು” ಎಂಬ ನುಡಿಯನ್ನು ಹೊರತಂದು ರೋಗಲಕ್ಷಣಗಳೇ ಇಲ್ಲದವರೂ ಕೂಡ ರೋಗಿಷ್ಟರಾಗಿರಬಹುದು ಎಂದು ಹೇಳಿಕೊಂಡರು. ಅದೊಂದು ವಿಚಿತ್ರವಾಗುತ್ತದಲ್ಲವೇ! ಈ ತತ್ವವೇನಾದರೂ ವೈದ್ಯಕೀಯ ಕ್ಷೇತ್ರದಲ್ಲಿ ತನ್ನನ್ನು ತಾನು ಒಪ್ಪಿಸಿಕೊಂಡು ಸೇರಿಕೊಂಡು ಬಿಟ್ಟರೆ, ವೈದ್ಯಕೀಯ ವಿಮೆ ಮಾಡುವವರಿಗೆ ಬಹಳ ದೊಡ್ಡ ಸಮಸ್ಯೆಯಾಗಿಬಿಡುತ್ತದೆ. ಅಲ್ಲದೆ ಶಾಲೆಯಲ್ಲಿ ವಿದ್ಯಾರ್ಥಿಗಳು ತಮಗೆ ಯಾವುದ್ಯಾವುದೋ ರೋಗವಿದೆಯೆಂದು ಸಾಧಿಸಿ ಶಾಲೆಯನ್ನು ತಪ್ಪಿಸಿಕೊಂಡು ಅಧ್ಯಾಪಕರುಗಳಿಗೆ ತಲೆನೋವು ಕೊಡಬಹುದು. ಅಂದರೆ ರೋಗಿಷ್ಟರಾಗಿರಲು ಇನ್ನು ಮುಂದೆ ರೋಗಲಕ್ಷಣಗಳ ಅವಶ್ಯಕತೆಯಿಲ್ಲ ಎಂದೇನಾದರೂ ಹೇಳಿಬಿಟ್ಟರೆ ಎಲ್ಲವೂ ಕಲಸುಮೇಲೋಗರವಾಗುತ್ತದೆ.

ಮುಂದಿನ ಹಾಸ್ಯಾಸ್ಪದ ಅಂಶವೆಂದರೆ ರೋಗಲಕ್ಷಣಗಳಿಲ್ಲದ ರೋಗಿಷ್ಟರೂ ಸಹ ಇತರರಿಗೆ ರೋಗವನ್ನು ಹರಡಬಹುದು ಎಂಬುದನ್ನು ಕೆಲವು ವೈರಾಣುಶಾಸ್ತ್ರಜ್ಞರು ತಮ್ಮ ಹೇಳಿಕೆಗಳಲ್ಲಿ ಹಂಚಿಕೊಂಡಿದ್ದು. ಈ ರೀತಿಯ ” ಆರೋಗ್ಯವಂತ ರೋಗಿಗಳು’ ತಮ್ಮ ಗಂಟಲಿನಲ್ಲಿ ಎಷ್ಟೊಂದು ವೈರಾಣುಗಳನ್ನು ಇರಿಸಿಕೊಂಡಿರುತ್ತಾರೆಂದರೆ ಈ ರೀತಿಯ ವ್ಯಕ್ತಿ, ಇನ್ನೊಬ್ಬ ವ್ಯಕ್ತಿಯ ಜೊತೆ ಸಾಮಾನ್ಯ ಸಂಭಾಷಣೆಯಲ್ಲಿ ತೊಡಗಿಕೊಂಡಿದ್ದಾಗಲೇ ಈ ” ಆರೋಗ್ಯವಂತ” ವ್ಯಕ್ತಿ ಇನ್ನೊಬ್ಬ ಆರೋಗ್ಯವಂತ ವ್ಯಕ್ತಿಗೆ ಸೋಂಕು ತಗುಲಿಸಿಬಿಡಲು ಅವರ ಗಂಟಲಿನ್ನಲ್ಲಿರುವ ವೈರಾಣುಗಳೇ ಸಾಕಾಗುತ್ತವೆ ಎಂದೂ ಇವರುಗಳು ಹೇಳಿಕೊಂಡರು. ಈ ಘಟ್ಟದಲ್ಲಿ ನಾವು ಇಲ್ಲಿ ನಡೆಯುತ್ತಿರುವುದು ಏನೆಂದು ಬಿಡಿಸಿ ನೋಡಬೇಕಾಗುತ್ತದೆ : ಒಂದು ವೈರಾಣು ದೇಹದ ಯಾವ ಭಾಗದಲ್ಲೇ ಆಗಲಿ, ಗಂಟಲಿನಲ್ಲೂ ಸಹ, ಬೆಳೆಯುತ್ತಿದ್ದರೆ ಮಾನವ ಜೀವಕೋಶಗಳು ರೋಗಗ್ರಸ್ಥವಾಗುತ್ತವೆ ಎಂದು ಅರ್ಥ. ಮಾನವ ಜೀವಕೋಶಗಳು ರೋಗಗ್ರಸ್ಥವಾದಾಗ  ತತ್ಕ್ಷಣವೇ ರೋಗಪ್ರತಿರಕ್ಷಕ ವ್ಯವಸ್ಥೆಯು ಎಚ್ಚೆತ್ತುಕೊಂಡು ಜೀವಿಗೆ ಸೋಂಕು ತಗುಲತ್ತದೆ. ಸೋಂಕಿನ ಐದು ಪ್ರಮುಖ ಲಕ್ಷಣಗಳಲ್ಲಿ ನೋವು ಒಂದು. ಕೋವಿಡ್ -19 ಸೋಂಕಿತರು ಅವರು ಮೊದಮೊದಲು ಅನುಭವಿಸಿದ ಗಂಟಲಿನ ಕಿರಿಕಿರಿಯನ್ನು ಮರೆತು ಈ ಹಿಂದಿನ ಕೆಲವು ದಿನಗಳಲ್ಲಿ ತಮಗೆ ಯಾವುದೇ ರೋಗಲಕ್ಷಣಗಳಿರಲಿಲ್ಲ ಎಂದು ಹೇಳಿಕೊಳ್ಳಬಹುದು, ಎಂದು ಒಪ್ಪಿಕೊಳ್ಳಬಹುದು. ಅಂದರೆ ರೋಗಿಗಳು ಹೀಗೆ ಹೇಳಿಕೊಳ್ಳುವುದನ್ನೇನೋ ಒಪ್ಪಿಕೊಂಡುಬಿಡಬಹುದು. ಆದರೆ ವೈದ್ಯರು ಮತ್ತು ವೈರಾಣು ಶಾಸ್ತ್ರಜ್ಞರು ಇದನ್ನೇ ತಿರುಗಿಸಿ ಒಂದು ಆತಂಕ ಸೃಷ್ಟಿಸುವ ಮತ್ತು ಕಟ್ಟುನಿಟ್ಟಾದ ಲಾಕ್ಡೌನ್ ಕ್ರಮಗಳಿಗೆ ಸಮಜಾಯಿಸಿಕೊಟ್ಟುಬಿಡುವ ಒಂದು “ಆರೋಗ್ಯವಂತ” ರೋಗಿಷ್ಟರ ಕತೆಯನ್ನಾಗಿ ಹೇಳಿಬಿಡುವುದು, ಇದೆಷ್ಟರ ಮಟ್ಟಿಗೆ ಹಾಸ್ಯಾಸ್ಪದವಾಗಿದೆಯೆಂದು ತೋರಿಸುತ್ತದೆ. ಸಧ್ಯಕ್ಕೆ ವಿಶ್ವ ಆರೋಗ್ಯಸಂಸ್ಥೆ ಈ ರೋಗಲಕ್ಷಣಗಳಿಲ್ಲದ ಸೋಂಕಿನ ಹೇಳಿಕೆಯನ್ನು ಒಪ್ಪಿಕೊಳ್ಳಲಿಲ್ಲ ಹಾಗೂ ತಮ್ಮ ವೆಬ್‍ಸೈಟಿನಲ್ಲಿ ಈ ಹೇಳಿಕೆಗೆ ಸವಾಲೆಸಿದಿದ್ದಾರೆ.

ಮಾನವರು ಹೇಗೆ ಸೋಂಕು ರೋಗಾಣುಗಳಿಂದ ದಾಳಿಗೊಳಗಾಗುತ್ತಾರೆ ಮತ್ತು ಅವರು ಅದನ್ನು ಹೇಗೆ ಎದುರಿಸುತ್ತಾರೆ ಎಂಬುದರ ಬಗ್ಗೆ ರೋಗಪ್ರತಿರಕ್ಷಕ ಶಕ್ತಿಯನ್ನು ಅಲ್ಲಗೆಳೆಯವವರಿಗಾಗಿ ಒಂದು ಚಿಕ್ಕದಾದ ಚೊಕ್ಕದಾದ ಸಾರಾಂಶವನ್ನು ಇಲ್ಲಿ ಕೊಡುತ್ತೇನೆ. ನಮ್ಮ ಪರಿಸರದಲ್ಲಿ ರೋಗಕಾರಕ ವೈರಾಣುಗಳು ಇದ್ದಲ್ಲಿ ನಾವೆಲ್ಲಾರೂ ಅಂದರೆ, ರೋಗಪ್ರತಿರಕ್ಷಕ ಶಕ್ತಿ ಉಳ್ಳವರೂ ಹಾಗೂ ಅದಿಲ್ಲದವರೂ, ಎಲ್ಲಾರೂ ಈ ವೈರಾಣುಗಳ ದಾಳಿಗೆ ಒಳಗಾಗುತ್ತಾರೆ. ನಮ್ಮಲ್ಲಿ ಯಾರಿಗಾದರೂ ರೋಗಪ್ರತಿರಕ್ಷಕ ಶಕ್ತಿಯಿದ್ದರೆ ವೈರಾಣುವಿನೊಂದಿಗೆ ಅವರ ಕಾದಾಟ ಪ್ರಾರಂಭವಾಗುತ್ತದೆ. ಮೊದಲಿಗೆ ನಾವು ಆ ವೈರಾಣು ನಮ್ಮ ದೇಹದ ಜೀವಕೋಶಗಳಿಗೆ ಕಚ್ಚಿಕೊಳ್ಳುವುದನ್ನು ನಾವು ನಮ್ಮ ಆಂಟೀಬಾಡೀಗಳ ಸಹಾಯದಿಂದ ತಡೆಯಲು ಪ್ರಯತ್ನಿಸುತ್ತೇವೆ. ಸಾಮಾನ್ಯವಾಗಿ ಈ ಪ್ರಯತ್ನ ಸ್ವಲ್ಪ ಮಟ್ಟಿಗೆ ಮಾತ್ರಾ ಯಶಸ್ವಿಯಾಗುತ್ತದೆ. ಹಲವಾರು ವೈರಾಣುಗಳು ತಡೆಯಲ್ಪಡುತ್ತವೆ. ಆದಾಗ್ಯೂ ಇನ್ನು ಕೆಲವು ವೈರಾಣುಗಳು ಸರಿಯಾದ ಜೀವಕೋಶಗಳಿಗೆ ತಗುಲಿಹಾಕಿಕೊಳ್ಳುತ್ತವೆ. ಅಷ್ಟರಿಂದಲೇ ರೋಗಲಕ್ಷಣಗಳು ತಲೆದೋರಬೇಕೆಂದೇನಿಲ್ಲ, ಆದರೆ ಅದು ರೋಗಸ್ಥಿತಿಯೂ ಅಲ್ಲ. ಏಕೆಂದರೆ ಈಗ ನಮ್ಮ ದೇಹವು ತನ್ನ  ರೋಗಪ್ರತಿರಕ್ಷಕ ವ್ಯವಸ್ಥೆಯ ಎರಡನೇ ಸಾಲಿನ ರಕ್ಷಕರನ್ನು ಕರೆಯುತ್ತದೆ. ಮೇಲೆ ಹೇಳಿದ ಟಿ-ಜೀವಕೋಶಗಳು ಅಂದರೆ ಬಿಳಿಯ ರಕ್ತಕಣಗಳೇ ಆ ರಕ್ಷಕಗಳು. ಈ ಬಿಳಿಯ ರಕ್ತಕಣಗಳು ಹೊರಗಿನಿಂದಲೇ ಮತ್ತಿನ್ಯಾವ ಯಾವ ಜೀವಕೋಶಗಳ ಒಳಗೆ ವೈರಾಣುಗಳು ಅಡಗಿ ಕುಳಿತು ಅಲ್ಲೇ ಒಂದೆರಡಾಗಿ ಎರಡು ನಾಲ್ಕಾಗಿ, ಹೀಗೆ  ಹೆಚ್ಚು ಹೆಚ್ಚಾಗುತ್ತಿರುವುದೆಂದು ಪತ್ತೆ ಮಾಡುತ್ತವೆ. ಹೀಗೆ ವೈರಾಣುಗಳು ತಮ್ಮ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಯಾವಯಾವ ಜೀವಕೋಶಗಳು ತಮ್ಮೊಳಗೆ ಅವನ್ನು ಇರಿಸಿಕೊಂಡು ಕಾವು ಕೊಡುತ್ತಿವೆಯೋ ಆ ಎಲ್ಲಾ ಜೀವಕೋಶಗಳನ್ನೂ ನಮ್ಮ ದೇಹದಲ್ಲೆಲ್ಲಾ ಹುಡುಕಿ ಜಾಲಾಡಿ ಅವೆಲ್ಲವನ್ನೂ , ಕಡೆಯ ವೈರಾಣುವಿನವರೆಗೂ ಪತ್ತೆ ಮಾಡಿ ಅವನ್ನು ಸಾಯಿಸಿ, ನಮ್ಮ ಬಿಳಿಯ ರಕ್ತಕಣಗಳು ಮುಗಿಸಿಬಿಡುತ್ತವೆ.

ಆದ್ದರಿಂದ ನಾವು ಒಬ್ಬ ರೋಗಪ್ರತಿರಕ್ಷಕ ಶಕ್ತಿಯಿರುವ ವ್ಯಕ್ತಿಗೆ ಪಿ.ಸಿ.ಆರ್. ಕೊರೋನಾ ತಪಾಸಣೆ ಮಾಡಿದರೆ, ಅವನಲ್ಲಿ ನಮಗೆ ಕಾಣಸಿಗುವುದು ವೈರಾಣುವಲ್ಲ, ಬದಲಿಗೆ ನಮಗೆ ಅವನಲ್ಲಿ ಒಡೆದುಹೋದ ವೈರಾಣುವಿನ ಒಂದು ಚಿಕ್ಕ ಜೀನೋಮು( ಅದರ ವಂಶವಾಹಿಯ ಒಂದು ತುಂಡು) ಸಿಗಬಹುದು. ಆ ರೀತಿಯ ಚಿಕ್ಕಚಿಕ್ಕ ಒಡೆದ ವೈರಾಣುವಿನ ತುಂಡುಗಳು ಅವನ ದೇಹದಲ್ಲಿರುವವರೆಗೆ ಅವನಿಗೆ ನಡೆಸಿದ ತಪಾಸಣೆಯಲ್ಲಿ ಅವನ ಪರಿಣಾಮ ಪಾಸಿಟಿವ್ ಆಗಿ ಬರುತ್ತಲೇ ಇರಬಹುದು. ಸೋಂಕು ತರಬಲ್ಲ ವೈರಾಣು ನಾಶವಾಗಿ ಹೆಚ್ಚು ಕಾಲ ಕಳೆದೇ ಹೋಗಿದ್ದರೂ ಈ ಕೊರೋನಾ ತಪಾಸಣೆ ಪಾಸಿಟಿವ್ ಆಗಿ ಬರಬಹುದು. ಏಕೆಂದರೆ ಈ ಪಿ.ಸಿ.ಆರ್. ಮಾದರಿಯ ತಪಾಸಣೆಯು ಒಂದು ಅತಿ ಚಿಕ್ಕ ವೈರಾಣುವಿನ ಜೀನೋಮಿನ ತುಂಡು ಸಿಕ್ಕಿದರೂ ಸಾಕು ಅದನ್ನು ಗುಣಿಸಿ ಕಂಡುಹಿಡಿದುಬಿಡುತ್ತದೆ. 200 ಮಂದಿ ಕೊರಿಯಾದವರಿಗೆ ಹೀಗೇ ಆಗಿತ್ತು. ಆ ವರದಿಯು ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿತ್ತು. ವಿಶ್ವ ಆರೋಗ್ಯ ಸಂಸ್ಥೆ ಕೂಡಾ ಅದನ್ನು ಹಂಚಿಕೊಂಡಿತ್ತು. ಆ 200 ಮಂದಿ ಕೊರಿಯಾದ ಜನರು ಆಗಲೇ ಕೊರೋನಾ ಬಂದು ಗುಣಮುಖರಾಗಿದ್ದರು, ಆದರೂ ಅವರಿಗೆ ಎರಡನೆಯ ಬಾರಿ ತಪಾಸಣೆಯ ಫಲಿತಾಂಶ ಪಾಸಿಟಿವ್ ಆಗಿ ಬಂದಿತ್ತು. ಆದ್ದರಿಂದ ಪ್ರಾಯಶಃ ಈ ರೋಗದ ವಿರುದ್ಧ ಪ್ರತಿರಕ್ಷಕ ಶಕ್ತಿಯೇ ಇಲ್ಲವೇನೋ ಎಂದು ವರದಿಯಾಗಿತ್ತು. ನಿಜವಾಗಿ ಏನಾಗಿತ್ತು ಎಂಬುದರ ವಿವರಣೆಯೂ ಮತ್ತು ಕ್ಷಮಾಯಾಚನೆಯೂ ಬಂದಿದ್ದು, ಆ ಕೊರಿಯನ್ನರು ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆಂದೂ ಮತ್ತು ವೈರಾಣುವಿಂದಿಗಿನ ಅವರ ಹೋರಾಟ ಅತಿ ಚಿಕ್ಕ ಸಮಯದ್ದಾಗಿತ್ತೆಂದೂ ತಿಳಿದ ನಂತರ.

ವಿಷಯ ಏನೆಂದರೆ ಅತಿಸೂಕ್ಷ್ಮ ಮಟ್ಟದಲ್ಲಿ ವೈರಾಣುಗಳನ್ನು ಗುರುತಿಸಬಲ್ಲ ತಪಾಸಣೆಯು ತುಂಡಾದ ವೈರಾಣುವಿನ ಅಳಿದುಳಿದ ಚೂರುಗಳನ್ನೇ ಗುರುತಿಸಿದುದರಿಂದ ಫಲಿತಾಂಶ ಪಾಸಿಟಿವ್ ಎಂದು ತೋರಿಸಿತು. ಹಾಗಾಗಿ ಪ್ರತಿದಿನ ವರದಿಯಾಗುತ್ತಿರುವ ಸೋಂಕಿನ ಸಂಖ್ಯೆಯಲ್ಲಿ ಬಹಳ ದೊಡ್ಡ ಸಂಖ್ಯೆಯು ಈ ರೀತಿ ಅಳಿದುಳಿದ ವೈರಾಣು ತುಂಡುಗಳನ್ನು ಗುರುತಿಸಿರುವ ತಪಾಸಣೆಯಿಂದಲೇ ಆಗಿರಬೇಕು.

ಅತ್ಯಂತ ಸೂಕ್ಷ್ಮ ಗ್ರಹಿಕೆಯ ಪಿ.ಸಿ.ಆರ್. ತಪಾಸಣೆಯು ಮೊದಮೊದಲು ವೈರಾಣು ಎಲ್ಲಿದೆ ಎಂದು ಗುರುತಿಸುವುದಕ್ಕೆ ಅತಿ ಸೂಕ್ತವಾಗಿತ್ತು. ಆದರೆ ಈ ತಪಾಸಣೆಯು ವೈರಾಣು ಇನ್ನೂ ಜೀವದಿಂದಿವೆಯೇ, ಅಂದರೆ ಅದು ಸೋಂಕುಂಟುಮಾಡುವ ಶಕ್ತಿಯುಳ್ಳದ್ದೇ ಎಂದು ಗುರುತಿಸಲು ತಕ್ಕುದಲ್ಲ.

ದುರಾದೃಷ್ಟವಶಾತ್ ಇದರಿಂದಾಗಿ ಕೆಲವು ವೈರಾಣು ತಜ್ಞರು ಈ ತಪಾಸಣೆಯ ಫಲಿತಾಂಶದ ಬಲದೊಂದಿಗೆ ‘ವೈರಾಣುವಿನ ಹೊರೆಯನ್ನೂ’ ಒಂದಾಗಿಸಿ, ಎರಡನ್ನೂ ಸಮವಾಗಿ ಗಣಿಸತೊಡಗಿದರು. ವೈರಾಣುವಿನ ಹೊರೆ ಎಂದರೆ ಒಬ್ಬ ವ್ಯಕ್ತಿಯು ತನ್ನ ಉಸಿರಾಟದಲ್ಲಿ ಹೊರಹಾಕಬಹುದಾದ ವೈರಾಣುವಿನ ಒಟ್ಟು ಮೊತ್ತ. ಇಷ್ಟ್ಯಾಗ್ಯೂ ಅದೃಷ್ಟವಶಾತ್ ನಮ್ಮ ದಿನ-ಕಾಳಜಿ ವಹಿಸುವ ಕೇಂದ್ರಗಳು ತೆರೆದೇ ಇದ್ದವು. ಜರ್ಮನಿಯ ವೈರಾಣು ತಜ್ಞರುಗಳಿಗೆ ಇದು ಕಾಣಿಸಲಿಲ್ಲ. ಏಕೆಂದರೆ ಅವರು ತಮ್ಮ ತತ್ವದ ಪ್ರಕಾರ , ಬೇರೆ ದೇಶಗಳಲ್ಲಿ ರೋಗಗ್ರಸ್ಥರ ಸಂಖ್ಯೆ ಹೆಚ್ಚು ವೇಗದಿಂದ ಕುಸಿಯುತ್ತಿದ್ದರೂ ಸಹ ಬೇರೆ ದೇಶದವರು ಏನು ಮಾಡುತ್ತಿದ್ದರೆಂಬುದನ್ನು ಗಮನಿಸುವುದಿಲ್ಲ.

೫. ಕೊರೋನ ರೋಗಪ್ರತಿರಕ್ಷಕ ಶಕ್ತಿಯಲ್ಲಿ ತೋರುವ ಸಮಸ್ಯೆಗಳು.

ನಿಜ ಜೀವನದಲ್ಲಿ ಇವೆಲ್ಲದರ ಅರ್ಥ ಏನು? ಅತ್ಯಂತ ಉದ್ದದ (ವೈರಾಣು ಕಾವು ಕೊಟ್ಟುಕೊಳ್ಳುವ ಕಾಲ) “ರೋಗಾಣು ಪಸರಿಸುವ ಶಕ್ತಿ ಗಳಿಸುವ ಕಾಲ” 2 ರಿಂದ 14 ದಿನಗಳು –22 ರಿಂದ 27 ದಿನಗಳ ವರದಿಯೂ ಇದೆ—ಇದು ಯಾವುದೇ ರೋಗಪ್ರತಿರಕ್ಷಕ ಶಾಸ್ತ್ರಜ್ಞರನ್ನು ಎಚ್ಚರಿಸಬೇಕಾಗಿತ್ತು. ಇದರೊಟ್ಟಿಗೆ ಬಂದ “ರೋಗಿಗಳು 5 ದಿನಗಳ ನಂತರ ವೈರಾಣುಗಳನ್ನು ಸ್ರವಿಸುವುದಿಲ್ಲ’ ಎಂಬ ಹೇಳಿಕೆಯೂ ಅವರನ್ನು ಎಚ್ಚರಿಸಬೇಕಾಗಿತ್ತು. ಈ ಎರಡೂ ಹೇಳಿಕೆಗಳ ಹಿನ್ನೆಲೆಯಾಗಿ, ಘಟನೆಗಳನ್ನು ನಿರೀಕ್ಷಿತ ವೈರಾಣು ಸೋಂಕಿನ ಜೀವಚಕ್ರದ ಪಥದಿಂದ ತಿರುಚಬಲ್ಲ,  ಒಂದು ಆಧಾರ-ರೋಗಪ್ರತಿರಕ್ಷಕಶಕ್ತಿಯ ಅಸ್ಥಿತ್ವವಿರುವ ನಿರ್ಣಯದೆಡೆಗೆ ನಮ್ಮನ್ನು ಕರೆದೊಯ್ಯುತ್ತದೆ. ಅಂದರೆ ಒಂದು ಬಹಳ ಉದ್ದದ ಸೋಂಕು ಹರಡಲು ಸಾಮಥ್ರ್ಯ ಗಳಿಸುವ ಕಾಲ ( ವೈರಾಣು ಕಾವು ಕೊಟ್ಟು ಕೊಳ್ಳುವ ಕಾಲ ) ಮತ್ತು ವೇಗವಾಗಿ ಗಳಿಸುವ ರೋಗಪ್ರತಿರಕ್ಷಕ ಶಕ್ತಿ. ಈ ರೋಗಪ್ರತಿರಕ್ಷಕ ಶಕ್ತಿಯೂ ರೋಗವು  ತೀವ್ರತರವಾಗಿ ಬಾಧಿಸುತ್ತಿರುವವರಿಗೆ ಒಂದು ಸಮಸ್ಯೆಯಾಗುವ ಹಾಗೆ ತೋರುತ್ತಿದೆ.

ನಮ್ಮ ದೇಹದಲ್ಲಿರುವ ಆಂಟೀಬಾಡೀಗಳ ಸಾರ, ಅಂದರೆ ನಮ್ಮ ದೇಹವು ತನ್ನನ್ನು ತಾನು ರಕ್ಷಿಸಿಕೊಳ್ಳುವ ಸಾಮರ್ಥ್ಯ ಮತ್ತು ಆ ವ್ಯವಸ್ಥೆಯ ಚುರುಕುತನ, ನಾವು ವಯಸ್ಸಾದಂತೆ ಕಡಿಮೆಯಾಗುತ್ತದೆ. ಮತ್ತು ಸರಿಯಾದ ಆಹಾರ ಸೇವಿಸದ ಜನರು ಹಾಗೂ ಅಪೌಷ್ಟಿಕತೆಯಿಂದ ಬಳಲುವವರಲ್ಲಿ ರೋಗಪ್ರತಿರಕ್ಷಕ ವ್ಯವಸ್ಥೆ ಬಲಹೀನವಾಗಬಹುದು. ಆದ್ದರಿಂದಲೇ ಈ ರೋಗ ಒಂದು ದೇಶದ ವೈದ್ಯಕೀಯ ಸಮಸ್ಯೆಗಳನ್ನು ತೆರೆದು ತೋರಿಸುವುದಷ್ಟೇ ಅಲ್ಲ, ಆ ದೇಶದ ಸಾಮಾಜಿಕ ಸಮಸ್ಯೆಗಳನ್ನೂ ಬಯಲಿಗೆಳೆಯುತ್ತದೆ.

ಒಬ್ಬ ವ್ಯಕ್ತಿಯಲ್ಲಿ ಆಂಟೀಬಾಡೀಗಳು ಸಾಕಾದಷ್ಟು ಇಲ್ಲದಿದ್ದಲ್ಲಿ, ಅಂದರೆ ಆತನ ರೋಗಪ್ರತಿರಕ್ಷಕ ಶಕ್ತಿ ದುರ್ಬಲವಾಗಿದ್ದಲ್ಲಿ, ಈ ವೈರಾಣು ಆತನ ದೇಹದಲ್ಲಿ ನಿಧಾನವಾಗಿ ಎಲ್ಲೆಡೆ ಪಸರಿಸಲಾರಂಭಿಸುತ್ತದೆ. ಆಗ ಸಾಕಷ್ಟು ಆಂಟೀಬಾಡಿಗಳು ಇಲ್ಲದ ಕಾರಣ ಆತನ ಎರಡನೆಯ ರಕ್ಷಣಾ ವ್ಯವಸ್ಥೆಯು ಮಾತ್ರ ಲಭ್ಯವಿರುತ್ತದೆ. ಆಗ ಟಿ. ಜೀವಕೋಶಗಳು ದೇಹದಲ್ಲಿ ಎಲ್ಲಾ ಕಡೆಗಳಲ್ಲೂ ವೈರಾಣು ಸೋಕು ಆಗಿರುವ ಎಲ್ಲಾ ಜೀವಕೋಶಗಳ ಮೇಲೂ ದಾಳಿ ಮಾಡಲು ಆರಂಭಿಸುತ್ತದೆ. ಇದು ಒಂದು ಉತ್ಪ್ರೇಕ್ಷೆಗೊಳಗಾದ ರೋಗಪ್ರತಿರಕ್ಷಕ ಪ್ರತಿಕ್ರಿಯೆಯಾಗಿದ್ದು ಅದರಿಂದ ಒಂದು ಬೃಹತ್ ಪ್ರಮಾಣದ ಕಗ್ಗೊಲೆಗಳಾಗುತ್ತವೆ. ಇದನ್ನು ” ಸೈಟೋಕೀನ್ ಪ್ರವಾಹ” ಎನ್ನುತ್ತಾರೆ. ಇದು ಬಹಳ ಅಪರೂಪವಾಗಿ ಮಕ್ಕಳಲ್ಲೂ ಆಗುತ್ತದೆ ಆಗ ಅದನ್ನು “ಕಾವಸಾಕಿ ಪ್ರವಾಹ” ಎನ್ನುತ್ತಾರೆ. ಈ ಅತಿ ಅಪರೂಪದ ಮಕ್ಕಳಲ್ಲಾಗುವ ಘಟನೆಯನ್ನೂ ಸಹ ನಮ್ಮ ದೇಶದಲ್ಲಿ ಆತಂಕದ ಬೆಂಕಿಗೆ ತುಪ್ಪಸುರಿಯಲು ಉಪಯೋಗಿಸಿಕೊಂಡರು. ಆದರೆ ಈ ಸಿಂಡ್ರೋಮನ್ನು ಅತಿ ಸುಲಭವಾಗಿ ವಾಸಿ ಮಾಡಬಹುದೆಂಬುದು ಬಹಳ ಆಸಕ್ತಿಕರವಾದ ಸಂಗತಿ. ಯಾವ ಮಕ್ಕಳಿಗೆ ಈ ಸ್ಥಿತಿಯಿದೆಯೋ ಅವರಿಗೆ ಯಾರು ಆರೋಗ್ಯವಾಗಿದ್ದಾರೋ ಯಾರು ಈಗಾಗಲೇ ಕೊರೊನಾ ನೆಗಡಿಗಳನ್ನು ಅನುಭವಿಸಿದ್ದಾರೋ ಅಂತಹವರಿಂದ ರಕ್ತದಾನ ಕೊಡಿಸಿ ಅದರಿಂದ ಅವರಿಗೆ ಆಂಟೀಬಾಡೀಗಳು ದೊರಕುವಂತೆ ಮಾಡಬೇಕು. ಇದರ ಅರ್ಥ ಏನೆಂದರೆ ಇದುವರೆಗೂ ಮುಚ್ಚಿಟ್ಟಿದ್ದ ( ಇಲ್ಲವೇ ಇಲ್ಲ ಎಂದು ನಂಬಿಕೊಂಡ) ಜನರಲ್ಲಿರುವ ರೋಗಪ್ರತಿರಕ್ಷಕ ಶಕ್ತಿಯನ್ನೇ ಚಿಕಿತ್ಸಕವಾಗಿ ಉಪಯೋಗಿಸುವುದು.

ಈಗ ಮುಂದೇನು?

ಈಗ ವೈರಾಣು ಹೊರಟುಹೋಗಿದೆ. ಅದು ಪ್ರಾಯಶಃ ಮತ್ತೆ ಚಳಿಗಾಲದಲ್ಲಿ ವಾಪಸ್ ಬರುತ್ತದೆ. ಆದರೆ ಅದು ಎರಡನೆಯ ಅಲೆಯಾಗಿರುವುದಿಲ್ಲ. ಒಂದು ಸಾಮಾನ್ಯ ನೆಗಡಿಯಾಗಿರುತ್ತದೆ. ಈಗ ಮುಖರಕ್ಷಕಗಳನ್ನು ಧರಿಸಿ ಓಡಾದುತ್ತಿರುವ ಈ ಚಿಕ್ಕ ವಯಸ್ಸಿನ ಆರೋಗ್ಯವಂತ ಜನರು ಅದರ ಬದಲು ಶಿರಸ್ತ್ರಾಣಗಳನ್ನು ಧರಿಸಿ ಓಡಾಡಿದರೆ ಉತ್ತಮ. ಏಕೆಂದರೆ ಗಂಭೀರವಾದ ಕೋವಿದ್19 ಖಾಯಿಲೆ ಅವರಿಗೆ ಬರುವುದಕ್ಕಿಂತ ಅವರ ತಲೆಯ ಮೇಲೆ ಏನಾದರೂ ಬಂದು ಬೀಳುವ ಅಪಾಯವೇ ಹೆಚ್ಚು.

ಸ್ವಿಟ್ಜಲ್ರ್ಯಾಂಡ್ ತನ್ನ ಕಟುವಾದ ಲಾಕ್‍ಡೌನ್‍ಅನ್ನು ಸಡಲಿಸಿದ ನಂತರ 14 ದಿನಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸೋಂಕಿನ ಸಂಖ್ಯೆ ಹೆಚ್ಚಿದರೆ ಆಗ ನಮಗೆ ದೇಶವು ಪಾಲಿಸಿದ ಕಟ್ಟುನಿಟ್ಟಿನ ನಿಯಮಗಳಲ್ಲಿ ಒಂದಾದರೂ ಉಪಯೋಗಕ್ಕೆ ಬಂದಿತೆಂದು ತಿಳಿಯುತ್ತದೆ. ಅದನ್ನುಳಿದು, ನಾನು ನಿಮ್ಮೆಲ್ಲರಿಗೂ ಜಾನ್. ಪಿ.ಎ.ಐಯ್ಯನೋಡಿಸ್ರವರ ಇತ್ತೀಚಿನ ಬರಹಗಳನ್ನು ಓದಲು ಶಿಫಾರಸು ಮಾಡುತ್ತೇನೆ. ಅದರಲ್ಲಿ ಅವರು ಮೇ 1- 2020ರ, ಡೇಟಾವನ್ನು ಆಧರಿಸಿದ ಜಾಗತಿಕ ಸ್ಥಿತಿಯನ್ನು ವಿವರಿಸುತ್ತಾರೆ : 65 ವರ್ಷ ವಯಸ್ಸಿಗಿಂತ ಕೆಳಗಿನ ಜನರು ಪ್ರಾಣಾಂತಿಕ ಕೋವಿಡ್19 ಕೇಸುಗಳ 0.6 ರಿಂದ 2.6% ಮಾತ್ರಾ ಭಾಗವಾಗಿದ್ದಾರೆ. ಈ ವಿಶ್ವವ್ಯಾಪೀ ರೋಗವನ್ನು ಹತೋಟಿಗೆ ತರಲು ನಾವು ಅಪಾಯದಲ್ಲಿರುವ 65 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನವರನ್ನು ರಕ್ಷಿಸುವುದಕ್ಕೆ ನಮ್ಮ ಕಾರ್ಯಾಚರಣೆಗಳನ್ನು ಕೇಂದ್ರೀಕರಿಸಬೇಕು. ಒಬ್ಬ ಉನ್ನತ ಮಟ್ಟದ ತಜ್ಞರ ಅಭಿಪ್ರಾಯ ಹಾಗಿದ್ದಲ್ಲಿ, ಎರಡನೇ ಲಾಕ್ಡೌನ್ ಖಂಡಿತಾ ಸಲ್ಲದು.

ನಾವು ಮತ್ತೆ ಸಾಮಾನ್ಯ ಸ್ಥಿತಿಗೆ ತಲುಪುವ ಹಾದಿಯಲ್ಲಿ ಕೆಲವು ಭಯ ಹುಟ್ಟಿಸಿದ ಜನರು ಕ್ಷಮಾಪಣೆ ಕೇಳಿಕೊಂಡಲ್ಲಿ ನಂಮ್ಮಂಥ ನಾಗರೀಕರಿಗೆ ಅದು ಸೂಕ್ತವಾಗುತ್ತದೆ. ಉದಾಹರಣೆಗೆ ಯಾವ ವೈದ್ಯರುಗಳು 80 ವರ್ಷಕ್ಕಿಂತ ಮೇಲ್ಪಟ್ಟ ರೋಗಿಗಳಿಗೆ ವೆಂಟಿಲೇಟರುಗಳನ್ನು ಹಾಕುವುದನ್ನು ನಿಲ್ಲಿಸುವಂಥಾ ಒಂದು ಅವಸರದ ಚಿತಿತ್ಸಾ ಸರದಿಯನ್ನು ಬೆಂಬಲಿಸುತ್ತಿದ್ದರೋ ಅವರು. ಹಾಗೂ ಮಾಧ್ಯಮದವರೂ ಸಹ ಕ್ಷಮೆ ಯಾಚಿಸಬೇಕು. ಅಂದರೆ ಇಟಲಿಯ ಆಸ್ಪತ್ರೆಗಳಲಿಂದ ನಡುಕ ಹುಟ್ಟಿಸುವಂಥ ವೀಡಿಯೋಗಳನ್ನು ನಿರಂತರವಾಗಿ ವರದಿ ಮಾಡುತ್ತಿದ್ದ ಮಾಧ್ಯಮಗಳು. ಅಂತಹ ಸ್ಥಿತಿ ಅಲ್ಲಿ ಇರಲೇ ಇಲ್ಲ. ಹಾಗೂ “ತಪಾಸಣೆ, ತಪಾಸಣೆ, ತಪಾಸಣೆ’ ಎಂದು ಆ ತಪಾಸಣೆ ಏನನ್ನು ಅಳತೆ ಮಾಡುತ್ತದೆ ಎಂಬ ಯಾವ ತಿಳುವಳಿಕೆಯೂ ಇಲ್ಲದೆ ಯಾವ ರಾಜಕಾರಣಿಗಳು ಕೂಗಾಡುತ್ತಿದ್ದರೋ ಅವರೂ ಸಹ ಕ್ಷಮಾಯಾಚನೆ ಮಾಡಬೇಕು. ಕೇಂದ್ರ ಸರಕಾರವೂ ಆ ಯಾಪ್‍ಗಾಗಿ ಕ್ಷಮೆ ಯಾಚಿಸಬೇಕು : ಯಾವ ಯಾಪ್ ಕೆಲಸವೇ ಮಾಡುವುದಿಲ್ಲವೋ ಮತ್ತು ನನ್ನ ಹತ್ತಿರದಲ್ಲಿ ಯಾರಾದರೂ ಪಾಸಿಟಿವ್ ಆಗಿದ್ದರೆ, ಅವರು ಸೋಂಕು ಹರಡುವವರೇ ಆಗಿಲ್ಲದಿದ್ದರೂ ಅದು ನನಗೆ ತಿಳಿಸುತ್ತದೆಯೋ ಆ ಯಾಪಿಗಾಗಿ ಕೇಂದ್ರ ಸರಕಾರ ಕ್ಷಮೆ ಯಾಚಿಸಬೇಕು.

ಮತ್ತೆ ಚಳಿಗಾಲದಲ್ಲಿ ಫ್ಲೂ ಮತ್ತು ನೆಗಡಿ ಹೆಚ್ಚಾದಾಗ ನಾವು ಒಬ್ಬರಿಗೊಬ್ಬರು ಚುಂಬಿಸಿವುದನ್ನು ಮತ್ತೆ ಕಡಿಮೆ ಮಾಡಬಹುದು. ಮತ್ತು ವೈರಾಣು ಇಲ್ಲದಿದ್ದರೂ ನಮ್ಮ ನಮ್ಮ ಕೈಗಳನ್ನು ಬಾರಿಬಾರಿ ತೊಳೆದುಕೊಳ್ಳುತ್ತಿರಬೇಕು. ಅಲ್ಲದೆ ಹುಷಾರು ತಪ್ಪಿದ ವ್ಯಕ್ತಿಗಳು ಈ ವಿಶ್ವವ್ಯಾಪೀ ರೋಗದ ದೆಸೆಯಿಂದ ಕಲಿತ ಪಾಠವನ್ನು ಇತರರಿಗೆ ತೋರಿಸಲು ಯಾತಕ್ಕೂ ಇರಲಿ,  ಎಂದು ಮುಖರಕ್ಷಕವನ್ನು ಧರಿಸಿ ಓಡಾಡಬಹುದು.  ಇಷ್ಟೆಲ್ಲಾ ಮಾಡಿಯಾದ ಮೇಲೂ ನಾವು ನಮ್ಮ ಅಪಾಯದಲ್ಲಿರುವ ಗುಂಪಿಗೆ ಸೇರಿದವರನ್ನು ರಕ್ಷಿಸಲು ಕಲಿತುಕೊಂಡಿಲ್ಲದಿದ್ದರೆ ನಾವು ಒಂದು ಲಸಿಕೆಗಾಗಿ ಕಾಯಬೇಕಾಗಬಹುದು. ಆ ಲಸಿಕೆ ಅಪಾಯದಲ್ಲಿರುವವ ಜನರ ಮೇಲೂ ಸಹ ಪರಿಣಾಮಕಾರಿಯಾಗುವುದೆಂದು ಆಶಿಸೋಣ.

ಅನುವಾದ: ಜಯಶ್ರೀ ಜಗನ್ನಾಥ

 

ಪ್ರತಿಕ್ರಿಯಿಸಿ