ಗೂಗಲ್ ಗೆ ಪದಗಳ ಹಂಗಿಲ್ಲ: ಭವಿಷ್ಯದ ಭೂತ

ಮುಂದಿನ ದಿನಗಳ ಬಗ್ಗೆ ಆತಂಕಿತರಾಗಬೇಕೆ ಅಥವಾ ನಿರಾಳವಾಗಿರಬಹುದೇ ಎಂಬ ಪ್ರಶ್ನೆಯೇ ಒಂದು ಬಗೆಯಲ್ಲಿ ರಿಡಂಡಂಟ್ ಆದ ಪ್ರಶ್ನೆ. ಕಾರಣ, ಈಗಿನ ಜಗತ್ತು- ಭಾರತದ ಸರ್ಕಾರೀ ಆಟದ ಮೈದಾನಗಳಂತಿದೆ. ಒಂದೇ ಮೈದಾನದಲ್ಲಿ ಒಂದು ಕಡೆ ವಿಜ್ಞಾನಿಗಳು ಫುಟ್‌ಬಾಲ್ ಆಡುತ್ತಿದ್ದರೆ, ಮೂಲೆಯಲ್ಲಿ ವಿಕೆಟ್ಟು ಹುಗಿದುಕೊಂಡು ಕಾರ್ಪೊರೇಟ್‌ಗಳು ಕ್ರಿಕೆಟ್ ಆಡುತ್ತಿರುತ್ತವೆ. ಉಳಿದ ಜಾಗದಲ್ಲಿ ಇಂಜಿನೀಯರುಗಳು ವಾಲಿಬಾಲ್ ಆಡುತ್ತಿರುತ್ತಾರೆ. ಇವರ ಕೈಯಿಂದ ಯಾವ ಚೆಂಡು ಜಾರಿಬಂದರೂ ಅದರ ಜೊತೆಗೆ ರಾಜಕರಣಿಗಳು ನಿಮಿಷಕ್ಕೊಂದು ಆಟ ಆಡಲು ಆರಂಭಿಸುತ್ತಾರೆ…

ಟರ್ಕಿಯ ಹುಡುಗಿ ಸೆನೆ ಜಗಳಗಂಟಿಯಲ್ಲ. ಆದರೆ ಅವಳ ಹಠ ನೋಡಿದ್ದು ಒಂದು ವಿಚಿತ್ರ ಘಳಿಗೆಯಲ್ಲಿ. ಟ್ರೋಲಿಂಗ್ ಮತ್ತು ದ್ವೇಷಭಾಷೆಗಳ ಕುರಿತು ಯೂನಿವರ್ಸಿಟಿಯಲ್ಲಿ ಒಂದು ಪ್ರೆಸೆಂಟೇಷನ್ ಮಾಡಬೇಕಿತ್ತು. ಈ ವಿಷಯದ ಬಗ್ಗೆ ನಮಗೆ ಆಯ್ದುಕೊಳ್ಳಲು ಇದ್ದದ್ದು ಎರಡು ವಿಧ್ವತ್-ಪ್ರಬಂಧಗಳು ಮಾತ್ರ. ಆದರೆ ಈ ವಿಷಯದ ಬಗ್ಗೆ ಅತ್ಯಾಸಕ್ತಿ ತೋರಿಸಿ, ಮೇಲೆಬಿದ್ದು “ನಾನು ಮಾಡುತ್ತೇನೆ, ನಾನು!” ಎಂದು ಹೊಡೆದಾಟ ಶುರುಮಾಡಿದವರು ನಾವು ನಾಲ್ವರಿದ್ದೆವು. ಒಬ್ಬಳು ಟರ್ಕಿಯಿಂದ ಬಂದ ಸೆನೆ. ಎರಡನೆಯವಳು ರಷ್ಯಾದ ಮಾರ್ಥಾ ಗ್ರಿಸೋಲ್ವಾ. ಮೂರನೇಯವಳು ಉತ್ತರ ಕೊರಿಯಾದಿಂದ ಹೇಗೋ ಪಾರಾಗಿ ಜರ್ಮನಿ ತಲುಪಿಕೊಂಡು ನಮ್ಮ ಜೊತೆಗೆ ಕಲಿಯುತ್ತಿದ್ದ  ಸೂಜಿ ಲೀ. ಎರ್ಡೋಗಾನ್ ನ ಟರ್ಕಿ, ಪುಟಿನ್ ನ ರಷ್ಯಾ, ಕಿಮ್ ನ ಕೊರಿಯಾ ಹಾಗೂ ನಮ್ಮ ಮೋದಿಯ ಭಾರತದಿಂದ ಬಂದ ನಮಗೆ ಈ ವಿಷಯದ ಕುರಿತು ಅಮಿತಾಸಕ್ತಿ ಮೂಡಿದ್ದು ಆಕಸ್ಮಿಕವೇನಲ್ಲ. ಅಮೇರಿಕಾದ ಹೆಲೆನ್ ಗೂ ಇದೇ ವಿಷಯವೇ ಬೇಕಿತ್ತಾದರೂ, ಫ್ರೀ ಸ್ಪೀಚ್ ಗೆ ಇನ್ನೂ ಅಂಥ ಕೊರತೆ ಬಂದಿರದ ದೇಶದವಳಾದ ಅವಳು ನಮ್ಮ ಮೇಲೆ ಕರುಣೆ ತೋರಿಸಿ, ಟ್ರಂಪ್ ಬಾಲಭಾಷಾ ವಿಶ್ಲೇಷಣೆಯ ಪ್ರಬಂಧವನ್ನು ಆಯ್ದುಕೊಂಡಳು. ಈಗಿನ ಅಮೇರಿಕದ ಪರಿಸ್ಥಿತಿ ಆಗಿದ್ದಿದ್ದರೆ, ಅವಳೂ ಅದೇ ಪ್ರಬಂಧಕ್ಕೆ ರಚ್ಚೆ ಹಿಡಿಯುತ್ತಿದ್ದಳೇನೋ.

ಕೊನೆಗೆ ನಮ್ಮ ಪ್ರಧಾನಿ ಮತ್ತು ಅವಳ ಅಧ್ಯಕ್ಷರ ನಡುವೆ ಯಾರು ಭಾಷೆಯ ವಿಚಾರದಲ್ಲಿ ಹೆಚ್ಚು ಡಿಕ್ಟೆಟರ್ ಎಂದು ನನ್ನ ಮತ್ತು ಸೆನೆಯ ನಡುವೆ ಚರ್ಚೆ ನಡೆದು ಅವಳು ನನಗೆ ಪ್ರೆಸೆಂಟೇಷನ್ ಬಿಟ್ಟುಕೊಟ್ಟಳು. ನಮ್ಮ ದೇಶದ ಕಳ್ಳ ಸರ್ವಾಧಿಕಾರತ್ವ ಮತ್ತು ಟರ್ಕಿಯ ನೇರ ಡಿಕ್ಟೇಟರ್ ಸಮಾಜದ ನಡುವಿನ ವ್ಯತ್ಯಾಸಗಳ ಕುರಿತು ನಾನೂ ಅವಳೂ ಮಾತಾಡಿದೆವು. “ಭಾಷೆಯ ರೆಟರಿಕ್ ನಲ್ಲಿಯೇ ಪ್ರಜೆಗಳನ್ನು ನಮ್ಮ ದೇಶದಲ್ಲಿ ಆಟವಾಡಿಸಬಹುದು ಮಾರಾಯ್ತಿ; ಅದಕ್ಕೆ ನಿನ್ನ ಟರ್ಕಿಯ ಎರ್ಡೊಗಾನ್ ನಂತೆ ರಸ್ತೆಯಲ್ಲಿ ಭಯ ಹುಟ್ಟಿಸುವ ಅವಶ್ಯಕತೆಯೇ ಇಲ್ಲ.” ಎಂಬ ಮಾತಿನ ನಂತರ ಅವಳು ಒಪ್ಪಿಕೊಂಡಳು. ಅವೆರಡರ ನಡುವಿನ ವ್ಯತ್ಯಾಸ ನಿಮಗೆ ಈ ಬರಹದ ಕಡೆಯಲ್ಲಿ ಕಾಣುತ್ತದೆ.

                                                       *    *    *

ಕೃತಕ ಬುದ್ಧಿಮತ್ತೆಯ ಒಂದು ಅಂಗವಾದ ಕಂಪ್ಯೂಟೇಷನಲ್ ಲಿಂಗ್ವಿಸ್ಟಿಕ್ಸ್ ಪ್ರಕಾರದ ಅಪ್ಲಿಕೇಷನ್ ಗಳು ಬೆಳೆಯುತ್ತಿರುವ ಜೊತೆಗೇ, ಅದರ ಆಟೋಟಾಪಗಳು ಹೆಚ್ಚದಂತೆ ಕಣ್ಣಿಡಲು “ಸಹಜ ಭಾಷಾ ವಿಶ್ಲೇಷಣೆ ಮತ್ತು ನೈತಿಕತೆ” ಎಂಬ ಶಾಖೆಯೊಂದಿದೆ. ಅದರ ಅಡಿಯಲ್ಲಿ ನಡೆಸಲಾದ ಅನೇಕ ಅಧ್ಯಯನಗಳು ಆನ್-ಲೈನ್ ನ ಭಾಷೆಯು ರಸ್ತೆಯ ಹೊಟೆದಾಟವನ್ನು ಹೇಗೆ ಉದ್ದೀಪಿಸುತ್ತದೆ ಎಂಬುದರ ಕುರಿತು ಅವಲೋಕಿಸಲು ಪ್ರಯತ್ನಿಸಿವೆ.  ಭಾಷಾಶಾಸ್ತ್ರದ ಪ್ರಥಮ ಪಾಠವೆಂದರೆ “ಭಾಷೆ ಕ್ಷಣಕ್ಷಣಕ್ಕೂ ಬದಲಾಗುತ್ತಲೇ ಇರುತ್ತದೆ” ಎಂಬುದು. ಹಾಗಾಗಿ ಅದರ ಜೊತೆಗೇ ಭಾಷೆಯನ್ನು ಒಡೆದು, ಪದ, ಧ್ವನಿ, ಸದ್ದು, ಅಕ್ಷರಗಳನ್ನು ಕಂಪ್ಯೂಟ್ ಮಾಡುವ ಉಪಕರಣಗಳು, ತರ್ಕಗಳು ಸಹ ಏದುಸಿರು ಬಿಡುತ್ತ ಬದಲಾಗುತ್ತಲೇ ಇರಬೇಕಾಗುತ್ತದೆ. ದಿನವೂ ಹೊಸಬಗೆಯ ಕುತಂತ್ರಗಳನ್ನು ಮನುಷ್ಯರು ಕಂಡುಹಿಡಿದು ದ್ವೇಷಕಾರುವ ಪದಪುಂಜಗಳನ್ನು ಠಂಕಿಸುತ್ತಿದ್ದರೆ, ಅಷ್ಟೇ ವೇಗವಾಗಿ ಅವುಗಳನ್ನು ಪತ್ತೆಹಚ್ಚಿ ಸಂಸ್ಕರಿಸುವುದು ಅತ್ಯಂತ ಕಷ್ಟ ಮತ್ತು ದುಬಾರಿ ವೆಚ್ಚದ ಕೆಲಸ. ಅದಕ್ಕಿಂತ ಹೆಚ್ಚಾಗಿ, ಈ ಪತ್ತೆದಾರಿಕೆಯ ಆಲ್ಗಾರಿದಂಗಳ ದಕ್ಷತೆ ಅವುಗಳನ್ನು ರೂಪಿಸುವ ಎಂಜಿನಿಯರ್ ನ ಅಥವಾ ಸಂಸ್ಥೆಯ ನೈತಿಕ ಮಟ್ಟದ್ದಷ್ಟೇ ಆಗಿರಲು ಸಾಧ್ಯ. ಶಿವರಾಮ ಕಾರಂತರ ಭಾಷೆಯಲ್ಲಿ ಹೇಳುವುದಾದರೆ, ನಮ್ಮ ದೇವರುಗಳು ನಮ್ಮ ಕಲ್ಪನೆಯ ಮಟ್ಟದಲ್ಲಷ್ಟೇ ಇರಲು ಸಾಧ್ಯ. ಹಾಗಾಗಿ ಯಥಾ ಇಂಜಿನೀಯರು ತಥಾ ಆಲ್ಗಾರಿದಂ.

ಜಗತ್ತಿನ ಬಹುತೇಕ ಭಾಷೆಗಳನ್ನು ಎಡದಿಂದ ಬಲಕ್ಕೆ ಬರೆಯಲಾಗುತ್ತದೆ. ಅವುಗಳ ವ್ಯಾಕರಣದ ನಿಯಮಗಳಿಗೆ ತಕ್ಕಂತೆ ಕಂಪ್ಯುಟೇಷನ್ ನ ನಿಯಮಗಳನ್ನು ರೂಪಿಸುವ ಹೊತ್ತಿಗೆ ಯಾರೋ ಒಬ್ಬ ಹನುಮಕ್ಕ ಅಥವಾ ಹನುಮಣ್ಣ ಉಲ್ಟಾ ಭಾಷೆಯ ಉರ್ದುವನ್ನು ಬಳಸಿ ದ್ವೇಷ ತುರುಕುತ್ತಿರುತ್ತಾನೆ. ಅದಕ್ಕೂ ಕೋಡ್ ನ ಔಷಧ ತಯಾರಾಗುವುದರ ಒಳಗೆ, ಇನ್ಯಾರೋ “ಆಲ್ ರೈಟ್” ಎಂದು ಇನ್ನೂ ಮುಂದೆ ಹೋಗಿ-

“Hate سے م س لمان ہم یں “ ಎಂಬಂಥ ವಾಕ್ಯ ರೂಪಿಸಿ ಅಂತರ್ಜಾಲಕ್ಕೆ ಹರಿಬಿಟ್ಟು ಕಂಗಾಲು ಮಾಡುತ್ತಾನೆ.

ಭಾಷೆಯಲ್ಲಿ ದ್ವೇಷ ಕಾರುವುದು ಸುಲಭ. ಅದರೆ ಎಲ್ಲ ಭಾಷೆಯಲ್ಲೂ ಶಾಂತಿ ಉಂಟುಮಾಡುವ ಸಮಾನ ಗಣಿತೀಯ ಪರಿಹಾರಗಳನ್ನು ರೂಪಿಸುವುದು ಕಷ್ಟ. ನುಡಿಯನ್ನು ಎಂದಿಗೂ ಭೌತಶಾಸ್ತಿಯ ನಿಯಮಗಳಂತೆ ಏಕರೂಪದ ಜಾಕೆಟ್ ನಿಂದ ನಿರ್ಧರಿಸುವುದು ಸಾಧ್ಯವೇ ಇಲ್ಲ. ಅಕ್ಷರಗಳು ಕಟ್ಟುವ ಅಕ್ಷರಗಳ ಕಾನೂನುಗಳನ್ನು ಮತ್ತೆ ಮತ್ತೆ ಕೆಡವಿ ಮತ್ತೊಮ್ಮೆ ಹೊಸದಾಗಿ ಕಟ್ಟಿಕೊಳ್ಳುವುದೂ ಅಕ್ಷರಗಳೇ. ಇದು ಭಾಷೆಗಿರುವ ಸಮಸ್ಯೆ. ಈ ಕೆಳಗಿನ ಒಂದು ಚಿತ್ರದಲ್ಲಿಯೇ ಎಷ್ಟು ಸಮಸ್ಯೆಗಳಿವೆ ನೋಡಿ.

ಇದು ಒಂದು ಅರ್ಥಬದ್ಧವಾದ ಪ್ಯಾರಾವೇ ಹೌದಾದರೂ ಸಹ, ಇದರಲ್ಲಿ ಇರುವ ಬೇರೆ ಬೇರೆ ಭಾಷೆಗಳ ಪದ-ಅಂಕಿಗಳ ಬಳಕೆಯಿಂದಾಗಿ, ಇದರ ಭಾವಾರ್ಥವನ್ನು ತ್ವರಿತವಾಗಿ ನಿರ್ವಚಿಸುವುದು ಆಲ್ಗಾರಿದಂಗಳಿಗೆ ಕಷ್ಟವಾಗುತ್ತದೆ. ಕೀಬೋರ್ಡಿನ ಮೇಲೆ ಹುಟ್ಟುವ ಪದಗಳ ಸುಳ್ಳು, ರಸ್ತೆಯ ಮೇಲೆ ಹೇಗೆ ವಾಸ್ತವವಾಗಿ ಪರಿಣಮಿಸುತ್ತವೆ ಎಂಬುದನ್ನು ನಾನು ಯೂನಿವರ್ಸಿಟಿ ಆಫ್ ಸ್ಟುಟ್-ಗಾರ್ಟ್ ನಲ್ಲಿ ನೀಡಿದ ಎರಡು ಪ್ರೆಸೆಂಟೇಷನ್ ಗಳು ಮತ್ತು ಇತರ ಕೆಲವು ಅಧ್ಯಯನಗಳ ಮೂಲಕ ವಿವರಿಸುತ್ತೇನೆ.

ಆನ್‌ಲೈನ್ ರೋಷ – ಆಫ್‌ಲೈನ್ ಆವೇಶ

ಮುಂಬರುವ ದಿನಗಳಲ್ಲಿ ಆನ್‌ಲೈನ್ ನ ಪರಿಣಾಮಗಳು ಹೇಗಿರಲಿವೆ ಎಂಬ ಪ್ರಶ್ನೆಯನ್ನು ಆಫ್‌ಲೈನ್ ಬದುಕನ್ನು ದೃಷ್ಟಿಯಲ್ಲಿಟ್ಟುಕೊಂಡು ಕೇಳಿದರೆ, ಅಪಾಯಕಾರಿಯಾಗಿರಲಿದೆ ಎನ್ನುವುದು ನೇರ ಉತ್ತರ. ಈ ಕೆಳಗಿರುವ ಎರಡು ಗ್ರಾಫ್ ಗಳ ಮೂಲಕ ಇದನ್ನು ಅರ್ಥಮಾಡಿಕೊಳ್ಳೋಣ.

ಸರಳವಾಗಿ ಇದನ್ನು ವಿವರಿಸುವುದಾದರೆ, ದಿನದ ಯಾವ ಸಮಯದಲ್ಲಿ ಮತ್ತು ವಾರದ ಯಾವ ದಿನದಲ್ಲಿ ದ್ವೇಷಪದಗಳ ಬಳಕೆ ಹೆಚ್ಚಾಗಿದೆ ಎನ್ನುವುದನ್ನು ಸಿಎನ್‌ಎನ್.ಕಾಂ ನ ಸುಮಾರು 1.6 ಕೋಟಿ ಪೋಸ್ಟ್ ಗಳ ಅಧ್ಯಯನದಿಂದ ಕಂಡುಕೊಳ್ಳಲಾಗಿದೆ. ಸಾಮಾನ್ಯವಾಗಿ ಕೆಲಸದಿಂದ ದೂರವಿದ್ದಾಗ, ಸಮಾಜದಿಂದ ದೂರವಾಗಿ ಮನೆಯಲ್ಲಿ ಸ್ವಸ್ಥವಾಗಿದ್ದಾಗಲೇ ಈ ಬಗೆಯ ರೋಷಗಳು ಉಕ್ಕುವುದನ್ನು ಈ ಅಧ್ಯಯನ ಕಂಡುಕೊಂಡಿದೆ. ಇನ್ನೊಂದು ಮುಖ್ಯವಾದ ವಿಚಾರ ಎಂದರೆ ಆನ್‌ಲೈನ್ ನಲ್ಲಿ ನಡೆಯುತ್ತಿರುವ ಚರ್ಚೆಯಲ್ಲಿ ತನಗಿಂತ ಮೊದಲು ವ್ಯಕ್ತಪಡಿಸಲಾದ ವಿಚಾರಗಲು ಬಳಿಕ ಕಾಮೆಂಟ್ ಮಾಡುವವರಿಗೆ ಒಂದು ಬಗೆಯ ಧೈರ್ಯ ಮತ್ತು ಬೆಂಬಲವನ್ನು ಉಂಟುಮಾಡುತ್ತವೆ. ಈ ಅಧ್ಯಯನಕ್ಕೂ ಮೊದಲು, ಇನ್‌ಹಿಬಿಷನ್ ಅಥವಾ ಮುಜುಗರ ಎಂಬ ಅಂಶವಾದರೂ ಹೊಲಸಾದ್ದನ್ನು ನೇರಾನೇರ ಅಭಿವ್ಯಕ್ತಿಸಲು ಅಡ್ಡಿಯಾಗುತ್ತದೆ ಎಂದು ಭಾವಿಸಲಾಗಿತ್ತು. ಕಾರಣ ಆನ್‌ಲೈನ್ ನಲ್ಲಿ ದೊರಕುವ ಅನಾಮಿಕತೆ. ಆದರೆ ಇತ್ತೀಚಿನ ಅಧ್ಯಯನಗಳು ಜನರು ಎಲ್ಲ ಮುಜುಗರಗಳನ್ನು ಗಾಳಿಗೆ ತೂರಿ, ತತ್-ಕ್ಷಣದ ಸುಖಕ್ಕೆ ಪೋಸ್ಟ್ ಗಳನ್ನು ಮಾಡುತ್ತಾರೆ ಎಂದು ತೋರಿಸಿವೆ. ಈ ಕೆಳಗಿನ ಗ್ರಾಫ್ ನಲ್ಲಿ ಹಿಂದಿನ ಪೋಸ್ಟ್ ಗಳು ಮುಂದಿನ ಪೋಸ್ಟ್ ಗಳಿಗೆ ಪ್ರೋತ್ಸಾಹದಾಯಕವಾಗುವ ರೀತಿಯನ್ನು ತೋರಿಸುತ್ತದೆ. ಕೆಂಪು ರೇಖೆ ಮೊದಲು ಪೋಸ್ಟ್ ಮಾಡಿದ ವ್ಯಕ್ತಿಗಳನ್ನು ಪ್ರತಿನಿಧಿಸಿದರೆ, ಅದರ ಹಿಂದೆಯೇ ನೀಲಿ ರೇಖೆ ಸಮಾನಾಂತರವಾಗಿ, ಆ ಬಗೆಯ ಹೇಟ್- ಅಭಿಪ್ರಾಯಗಳನ್ನು ಸಮರ್ಥಿಸುತ್ತ ಮೇಲೆರುವುದನ್ನು ಕಾಣಬಹುದು.

ಸರಿಯಾಗಿ ಒಂದು ವರ್ಷದ ಕೆಳಗೆ, ನ್ಯೂಯಾರ್ಕ್ ಯೂನಿವರ್ಸಿಟಿ ಸುಮಾರು 55 ಕೋಟಿ ಟ್ವೀಟ್ ಗಳನ್ನು ಬಿಗ್-ಡೇಟಾ ಅನಾಲಿಸಿಸ್ ಗೆ ಒಳಪಡಿಸಿದಾಗ, ಯಾವ್ಯಾವ ಪ್ರದೇಶದಲ್ಲಿ ಯಾವ ವರ್ಗ, ಭಾಷೆ, ಜನಾಂಗದ ಜನರ ವಿರುದ್ಧವಾಗಿ ಟ್ವೀಟ್ ಗಳು ಹಾಕಲ್ಪಟ್ಟಿತ್ತೋ ಅದೇ ಭಗೋಳಿಕ ಕಕ್ಷೆಗಳಲ್ಲಿ ಅವರ ವಿರುದ್ಧ ಹಿಂಸೆಗಳು ಸಮಾನಾಂತವಾಗಿ ಏರಿದ್ದನ್ನು ಗುರುತಿಸಿದ್ದಾರೆ. ಇದಕ್ಕಿಂತ ಮಜಾ ಅಥವಾ ಆತಂಕದ ವಿಚಾರವೆಂದರೆ ಈ ಬಗೆಯ ಟ್ವೀಟ್ ಗಳ ಪೈಕಿ ಸುಮಾರು 8% ದಷ್ಟು ಟ್ವೀಟ್ ಗಳನ್ನು ಆಟೋ-ಬಾಟ್ ಗಳು ಮಾಡಿದ್ದು. ಅಂದರೆ ಮನುಷ್ಯರ ಭಾಷೆಯಿಂದ, ಪದಗಳಿಂದಲೇ ತಮ್ಮಷ್ಟಕ್ಕೇ ಕಲಿಯುತ್ತ ಹೋಗುವ ಈ ಬಾಟ್ ಗಳು ಅದೇ ಬಗೆಯ ಪದಪುಂಜಗಳನ್ನು ಬಳಸಿ, ಮನುಷ್ಯರ ವಿರುದ್ಧವೇ ಟ್ವೀಟ್ ಗಳನ್ನು ಕಕ್ಕುತ್ತವೆ. ಇದನ್ನು ಮಷಿನ್ ಲರ್ನಿಂಗ್ ನಲ್ಲಿ ಡೀಪ್-ಲರ್ನಿಂಗ್ ಎಂದೂ ಕರೆಯುತ್ತೇವೆ. ತಮಗೆ ಉಣಿಸಲಾದ ದತ್ತಸಂಚಯವನ್ನು ವಿಶ್ಲೇಷಿಸಿದ ಬಳಿಕ ಅದಕ್ಕೆ ನಾವು ಮನುಷ್ಯರೋ ಅಥವಾ ಮತ್ಯಾವುದೋ ಅದರ ಜೊತೆಗಾರ ಮಷಿನ್ನೋ ನೀಡುವ ಅಭಿಪ್ರಾಯವನ್ನೂ ಕೂಡಿಸಿಕೊಂಡು ನಿರಂತರ ತಾನೇ ಕಲಿಯುತ್ತ ಹೋಗುವ ಸ್ವಾಧ್ಯಾಯಿಗಳು ಇವು. ಸುಲಭವಾದ ಉದಾಹಾರಣೆ ಎಂದರೆ ಇತ್ತೀಚೆಗೆ ಬಿಡುಗಡೆಗೊಳ್ಳುತ್ತಿರುವ ರೋಬಾಟಿಕ್ ವಾಕ್ಯೂಮ್ ಕ್ಲೀನರ್ ಗಳು. ಅವು ನಿಮ್ಮ ಮನೆಯ ಮೂಲೆಮೂಲೆಯನ್ನೂ ತಮ್ಮ ಸೆನ್ಸಾರ್ ಗಳ ಸಹಾಯದಿಂದ ತಡಕಿ ಕ್ಲೀನ್ ಮಾಡುತ್ತವೆ. ಹಾಗೇ ಮಾಡುತ್ತ ಮಾಡುತ್ತಲೇ ಅವು, ಮನೆಯ ಯಾವ ಮೂಲೆಯಲ್ಲಿ ಹೆಚ್ಚು ಕಸ ಕೂರುತ್ತದೆ ಎಂಬ ಮಾಹಿತಿಯನ್ನು ಶೇಖರಿಸಿ ಸಂಸ್ಕರಿಸಿಕೊಂಡು ಆ ಮೂಲೆಗಳಿಗೆ ಹೆಚ್ಚು ಎಡತಾಕುತ್ತವೆ. ಈ ಟ್ವಿಟರ್-ಬಾಟ್ ಗಳು ದ್ವೇಷದ ಟ್ವೀಟ್ ಕಕ್ಕುವುದನ್ನು ಮನುಷ್ಯರಿಂದಲೇ ಕಲಿತರೆ, ವಾಕ್ಯೂಮ್ ಕ್ಲೀನರ್ ಗಳು ಮನುಷ್ಯ ಮಾಡಿದ ಕೊಳೆಯನ್ನು ಕ್ಲೀನ್ ಮಾಡುತ್ತದೆ ಎಂಬುದಷ್ಟೇ ಇವೆರಡರ ವ್ಯತ್ಯಾಸ.

ಆಟದ ಮೈದಾನದಲ್ಲಿ ಅನೇಕ ಚೆಂಡುಗಳು

ಮುಂದಿನ ದಿನಗಳ ಬಗ್ಗೆ ಆತಂಕಿತರಾಗಬೇಕೆ ಅಥವಾ ನಿರಾಳವಾಗಿರಬಹುದೇ ಎಂಬ ಪ್ರಶ್ನೆಯೇ ಒಂದು ಬಗೆಯಲ್ಲಿ ರಿಡಂಡಂಟ್ ಆದ ಪ್ರಶ್ನೆ. ಕಾರಣ, ಈಗಿನ ಜಗತ್ತು- ಭಾರತದ ಸರ್ಕಾರೀ ಆಟದ ಮೈದಾನಗಳಂತಿದೆ. ಒಂದೇ ಮೈದಾನದಲ್ಲಿ ಒಂದು ಕಡೆ ವಿಜ್ಞಾನಿಗಳು ಫುಟ್‌ಬಾಲ್ ಆಡುತ್ತಿದ್ದರೆ, ಮೂಲೆಯಲ್ಲಿ ವಿಕೆಟ್ಟು ಹುಗಿದುಕೊಂಡು ಕಾರ್ಪೊರೇಟ್‌ಗಳು ಕ್ರಿಕೆಟ್ ಆಡುತ್ತಿರುತ್ತವೆ. ಉಳಿದ ಜಾಗದಲ್ಲಿ ಇಂಜಿನೀಯರುಗಳು ವಾಲಿಬಾಲ್ ಆಡುತ್ತಿರುತ್ತಾರೆ. ಇವರ ಕೈಯಿಂದ ಯಾವ ಚೆಂಡು ಜಾರಿಬಂದರೂ ಅದರ ಜೊತೆಗೆ ರಾಜಕರಣಿಗಳು ನಿಮಿಷಕ್ಕೊಂದು ಆಟ ಆಡಲು ಆರಂಭಿಸುತ್ತಾರೆ. ರೋಜರ್ ಪೆನ್ರೋಸ್ ಥರದ ಗಣಿತಜ್ಞರು ಎಂದಿಗೂ ಕಂಪ್ಯೂಟೇಷನ್ ಎನ್ನುವುದು ಮಾನವ ಪ್ರಜ್ಞೆಯನ್ನು ಸರಿಗಟ್ಟಲಾರದು ಎಂದು ನುಡಿದರೆ, ಸ್ವಲ್ಪ ಓವರ್-ರೇಟೆಡ್ಡೇ ಆದ ಚಿಂತಕ, ಇತಿಹಾಸಕಾರ ನೊಆ ಹರಾರಿ ಜೀವವಿಜ್ಞಾನ ಮತ್ತು ಕಂಪ್ಯುಟೇಷನ್ ಮುಂಬರುವ ಜಗತ್ತಿಗೆ ಅತ್ಯಂತ ಅಪಾಯಕಾರಿ ಎನ್ನುತ್ತಾನೆ. ಈ ಅನೇಕ ಚಿಂತಕರ ದ್ರಷ್ಟಾರತ್ವದಲ್ಲಿಯೂ ಅನೇಕ ಸಮಸ್ಯೆಗಳಿವೆ. ಉದಾಹಾರಣೆಗೆ ಹರಾರಿಯ ಮೂರು ಪುಸ್ತಕಗಳಲಿಯೇ ಅನೇಕ ಇನ್-ಕೋಹೆರೆಂಟ್ ಆದ ಮಂಡನೆಗಳಿವೆ. ಇತಿಹಾಸಪೂರ್ವ ಕಾಲದ ಮನುಷ್ಯನೇ ಸುಖಿಯಾಗಿದ್ದ ಎಂದು ಒಂದು ಕಡೆ ಪ್ರತಿಪಾದಿಸಿದರೆ, ಆತನಷ್ಟು ಕಷ್ಟ ಉಂಡ ಮನುಷ್ಯನೇ ಇರಲಿಲ್ಲ ಎಂದು ಇನ್ನೊಂದು ಆಯಾಮದಲ್ಲಿ ಆತನೇ ಒಪ್ಪಿಕೊಳ್ಳುವ ಪರಿಸ್ಥಿತಿ ಉಂಟಾಗುತ್ತದೆ. ವಾಸ್ತವದಲ್ಲಿ ಆವೇಗದಲ್ಲಿ ನುಗ್ಗುತ್ತಿರುವ ಈ ವರ್ಚುಯಲ್ ಪ್ರಪಂಚಕ್ಕೆ ದೊಡ್ಡ ಬಲಿಯಾಗುವವರು ನಾವು ಭಾರತ, ಇಂಡೋನೇಷ್ಯಾದಂಥ ಬಹುಭಾಷಾ ದೇಶಗಳು. ಕಾರಣ, ಭಾಷಾಶಾಸ್ತ್ರಾಧಾರಿತ ತಂತ್ರಜ್ಞಾನಗಳನ್ನು ಒಗ್ಗಿಸಿಕೊಳ್ಳುವುದು ಸಾಯಲಿ, ಅದಕ್ಕೆ ಒಳಗಾಗುವಷ್ಟೂ ಮೂಲ ಭಾಷಾಶಾಸ್ತ್ರೀಯ ಕೆಲಸಗಳೇ ನಮ್ಮಲ್ಲಿ ಆಗಿಲ್ಲ. ಫಿನ್ನಿಶ್ ಭಾಷೆಯಲ್ಲಿ ಇಂಗ್ಲಿಶ್ ಗಿಂತಲೂ ಹೆಚ್ಚಿನ ಪದಸಂಚಯ ಭಾಷಾವಿಜ್ಞಾನದ ಅಧ್ಯಯನಕ್ಕಾಗಿ ಇದೆ. “ಮಾಸ್ಟರ್-ಸ್ಟ್ರೋಕ್ ಕೊಟ್ಟು ಹಲ್‌ಚಲ್ ಮಾಡಿದ…” ಎಂಬಂಥ ವಾಕ್ಯಗಳಿಗೆ ಸಹಜ ಭಾಷಾ ವ್ಯಾಕರಣ ರೂಪಿಸುವುದಕ್ಕೆ ಚಾಮ್‌ಸ್ಕಿ ಮತ್ತೆ ಹುಟ್ಟಿ ಬರಬೇಕಾಗುತ್ತದೆ.

2016ರಲ್ಲಿ ಜೆ.ಎಮ್ ಬೆರ್ಗರ್ ಒಂದು ಅಧ್ಯಯನ ಕೈಗೊಂಡರು. ಟ್ವಿಟರ್ ನಲ್ಲಿ “ಬಿಳಿಯ-ಶ್ರೇಷ್ಟತಾವಾದಿಗಳು”, “ನಾಝೀ-ಸಿಂಪಥೈಸರ್”ಗಳು ಹಾಗೂ “ಐಎಸ್‌ಐಎಸ್” ಗಳ ಟ್ವಿಟರ್ ಪೋಸ್ಟ್ ಗಳು ಮತ್ತು ಹ್ಯಾಂಡಲ್ ಗಳನ್ನು ಆಧರಿಸಿ ನಡೆಸಿದ ಈ ಅಧ್ಯಯನದಲ್ಲಿ ಅನೇಕ ಕುತೂಹಲಕಾರೀ ವಿಚಾರಗಳಿವೆ. 2012ರಿಂದ ಆರಂಭಿಸಿ ಈ ಗುಂಪುಗಳ ಪ್ರಭಾವ ಮತ್ತು ಪರಿಭಾಷೆಗಳು ಬೆಳೆಯುತ್ತ ಬಂದ ರೀತಿಯನ್ನು ನಾವು ಅರ್ಥಮಾಡಿಕೊಳ್ಳುವುದರ ಮೂಲಕ ಆನ್‌ಲೈನ್ ನ ಪ್ರಭಾವ ಭವಿಷ್ಯದ ಮೇಲೆ ಹೇಗಿರಬಹುದು ಎಂಬುದರ ಅಂದಾಜು ದೊರಕುವ ಸಾಧ್ಯತೆಗಳಿವೆ. ಭಾರತೀಯ ಬಲಪಂಥೀಯ ರಾಜಕಾರಣದ ನೆಲೆಗಳನ್ನೂ, ತಂತ್ರಗಳನ್ನೂ ನಾವಿದರಿಂದ ಅರ್ಥೈಸಿಕೊಳ್ಳಬಹುದು. ಈ ಕೆಳಗಿನ ಗ್ರಾಫ್ ಗಮನಿಸಿ.

ಕಳೆದ ಎಂಟು ವರ್ಷಗಳಲ್ಲಿ ಜಗತ್ತಿನಾದ್ಯಂತ ಏಳುತ್ತ ಬಂದ ಪದಗಳ ಟ್ರೆಂಡ್ ಇದು. ಅಧ್ಯಯನದಲ್ಲಿ ಕಂಡುಬಂದ ಒಂದು ಮುಖ್ಯವಾದ ಅಂಶವೆಂದರೆ ಐಎಸ್‌ಐಎಸ್ ಥರದ ಸಂಘಟನೆಗಳ ಪ್ರಭಾವ ಒಕ್ಕಟ್ಟಾಗಿದ್ದರೆ, ಬಿಳಿಯ ಶ್ರೇಷ್ಟತಾವಾದಿಗಳು ಸ್ವಲ್ಪ ಮಟ್ಟಿಗೆ ಹರಿದುಹಂಚಿಕೊಂಡಿದ್ದಾರೆ. ಕಾರಣ, ಅವುಗಳು ರೂಪಿಸಿಕೊಂಡಿರುವ ಅನೇಕ ಸಂಘಟನೆಗಳು/ಹ್ಯಾಂಡಲ್ ಗಳು. ಅವರೆಲ್ಲರ ಗುರಿ ಒಂದೇ ಆದರೂ ಸಹ, ಅದನ್ನು ತಲುಪಲು ಹಾಕಿಕೊಂಡಿರುವ ದಾರಿಗಳು ಅನೇಕ ಕವಲಾಗಿ ಟಿಸಿಲೊಡೆದಿವೆ. ಭಾರತದ ಬಲಪಂಥೀಯ ರಾಜಕಾರಣ ಒಂದು ಬಗೆಯಲ್ಲಿ ಈ ಎರಡರ ಮಿಶ್ರಣವನ್ನು ಸಾಧಿಸಿ ಇನ್ನೂ ಹೆಚ್ಚು ದುಷ್ಟವಾಗಿದೆ ಎನ್ನಬಹುದು. ಇಲ್ಲಿ, ಐಎಸ್‌ಐಎಸ್ ಮಾದರಿಯ ಏಕಶಿಲಾ ಪ್ರತಿಮೆಯೂ ಇದೆ; ಜೊತೆಗೆ, ದಾರಿಗಳು ಹಂಚಿಹೋಗದಂತೆ ಆರ್ಗ್ಯಾನಿಕ್ ಆಗಿ ಸಾಮಾಜಿಕ ಜಾಲತಾಣಗಳನ್ನು ನಿರ್ವಹಿಸುವ ಸಂಘಟನಾ ಚಾತುರ್ಯವೂ ಇದೆ. ಕನ್ನಡ ಸಾಮಾಜಿಕ ಜಾಲತಾಣಗಳನ್ನು ಮ್ಯಾನುಯೆಲ್ ಆಗಿ ಅಧ್ಯಯನಕ್ಕೆ ಒಳಪಡಿಸಿ ನೋಡಿದರೆ, “ಕುವೆಂಪು ಫ್ಯಾನ್ಸ್” ಪೇಜಿನ ವ್ಯಕ್ತಿಯೇ “ಗೌಡಾಸ್ ರಾಕ್ಸ್” ಪೇಜಿನ ಜೊತೆಗೆ ಇನ್ನೊಂದು ಅದೇ ಜಾತಿ ಸಂಬಂಧೀ ಮಠದ ಫಾಲೋವರ್ ಕೂಡಾ ಆಗಿರುತ್ತಾನೆ. ಬಿಳಿಯ-ಶ್ರೇಷ್ಟತಾವಾದಿಗಳ ಹ್ಯಾಂಡಲ್ ಗಳಲ್ಲೂ ಇರುವುದು ಈ ಬಗೆಯ ಪ್ಯಾಟರ್ನ್. ಬೆರ್ಗರ್ ತಮ್ಮ ಅಧ್ಯಯನದಲ್ಲಿ ಈ ಶ್ವೇತಶ್ರೇಷ್ಟರ ಹ್ಯಾಂಡಲ್ ಗಳು ಯೂರೋಪಿನ ಪೋರ್ನ್ ಹ್ಯಾಂಡಲ್ ಗಳ ಜೊತೆ ಒಂದಲ್ಲಾ ಒಂದು ಬಗೆಯಲ್ಲಿ ಸಂಪರ್ಕದಲ್ಲಿರುವುದನ್ನು ತೋರಿಸುತ್ತಾರೆ. ಭಾರತದ ಸಾಮಾಜಿಕ ಜಾಲತಾಣಗಳಲ್ಲಿ ಆಗುವ ಮಹಿಳಾ ಬ್ಯಾಶಿಂಗ್ ಗೂ ಇದಕ್ಕೂ ಮತ್ತೆ ಸಂಬಂಧ ತೋರಿಸುವುದು ನಿರುಪಯುಕ್ತವೆನ್ನುವಷ್ಟರ ಮಟ್ಟಿಗೆ ಸ್ವವೇಧ್ಯ.

ನೆಹರು ಕಳ್ಳಮೋದಿ ಸುಳ್ಳ

ಈ ಲೇಖನದ ಶೀರ್ಷಿಕೆ “ಗೂಗಲ್ ಗೆ ಪದಗಳ ಹಂಗಿಲ್ಲ” ಎನ್ನುವುದಕ್ಕೆ ಕಾರಣವಿದೆ. ಭಾಷೆಯ ಸಿಮ್ಯಾಂಟಿಕ್ಸ್ ಅನ್ನು ಅದ್ಭುತವಾಗಿ ಅರ್ಥೈಸಿಕೊಳ್ಳುವ ಅನೇಕ ಆಲ್ಗಾರಿದಂಗಳು ಈಗ ಚಾಲ್ತಿಯಲ್ಲಿವೆಯಾದರೂ, ಲ್ಯಾಂಗ್ವೆಜ್ ಮಾಡೆಲ್ ಗಳ ಕೆಲವೇ ಕೆಲವು ವೇರಿಯಬಲ್ ಗಳನ್ನು ಬದಲಾಯಿಸುವ ಮೂಲಕ ನಮಗೆ ಬೇಕಾದಂತಹ ಉತ್ತರಗಳೇ ನಮ್ಮ ಕಣ್ಣಿಗೆ ಹೆಚ್ಚು ಬೀಳುವಂತೆ ಮಾಡಿಕೊಳ್ಳಬಹುದು. ಗೂಗಲ್ ಗೇನೂ ನಮ್ಮ ಮೊದಲ ಪ್ರಧಾನಿ ಕಳ್ಳನೋ, ಈಗಿನ ಪ್ರಧಾನಿ ಸುಳ್ಳನೋ ಗೊತ್ತಾಗುವುದಿಲ್ಲ. ಆದರೆ ನೀವು “ನೆಹರು ಕಳ್ಳ” ಎಂಬ ಜೋಡಿಪದವನ್ನೇ ಸಿಸ್ಟಮ್ ಗೆ ಹೆಚ್ಚು ಉಣಿಸುತ್ತಾ ಹೋದಷ್ಟೂ N-Gram Language Model ಗಳು ಅದನ್ನೇ ಸತ್ಯವೆಂದು ನಂಬಿ ನಮಗೆ ಅದೇ ಕತೆ ಹೇಳುತ್ತವೆ. “ದಲಿತ” ಪದ ಸರ್ಕಾರೀ ದಫ್ತರುಗಳಿಂದ ಮಾಯವಾದರೆ ಸಹಜವಾಗಿ ಅದು ಆನ್‌ಲೈನ್ ನಿಂದ ಕಣ್ಮರೆಯಾಗುತ್ತದೆ. ಅಂದರೆ ನಾವು ವರ್ತಮಾನದಲ್ಲಿ ಸೃಷ್ಟಿಸುತ್ತಿರುವ ಈ ಪದಪುಂಜಗಳೇ ಭೂತಗಳಾಗಿ ನಮ್ಮ ಭವಿಷ್ಯತ್ತನ್ನು ರೂಪಿಸುತ್ತವೆ. ಪಶ್ಚಿಮದಲ್ಲಿ ಈ ಆನ್‌ಲೈನ್ ಅನ್ನುವುದು ಜನರಿಗೆ ನೇರವಾಗಿ ತಲುಪುವ ಹಾದಿಯಾದರೆ ಭಾರತದ ಪರಿಸ್ಥಿತಿ ಸ್ವಲ್ಪ ಭಿನ್ನ. ಇಲ್ಲಿ ಆಧುನಿಕ ಡಿಜಿಟಲ್ ಮಾಧ್ಯಮ + ಮಧ್ಯಕಾಲೀನ ಜನಸಂಘಟನೆ ಸೇರಿ “ಮಧ್ಯಮಾಧುನಿಕ” ಕಾಲದ ಸಮಾಜವನ್ನೇ ಸ್ಥಿತೀಕರಿಸುವ ಪ್ರಯತ್ನ ಚಾಲ್ತಿಯಲ್ಲಿದೆ.

ಇದೇ ಭವಿಷ್ಯದ ಭಾರತದ ಮುಂದಿರುವ ಭೂತ; ಭೂತವೇ ಮತ್ತೆದ್ದು ಬರುವ ಭವಿಷ್ಯ.

ಒಂದು ಕ್ರೂರ ತಮಾಷೆ

ಇದೆಲ್ಲಾ ಏನೇ ಇದ್ದರೂ, ಭಾಷಾಶಾಸ್ತದ ವಿದ್ಯಾರ್ಥಿಯಾಗುವ ಮೊದಲು ಸಾಹಿತ್ಯದ ಮುಖ್ಯ ವಿದ್ಯಾರ್ಥಿಯಾದ ನನಗೆ ಒಂದು ವಿಷಯ ವಿಕೃತಾನಂದ ಕೊಡುತ್ತಿದೆ. ಅದೇನೆಂದು ಹೇಳಿ ಮುಗಿಸುತ್ತೇನೆ. ಕಂಪ್ಯೂಟೇಷನಲ್ ಲಿಂಗ್ವಿಸ್ಟಿಕ್ಸ್ ಗೆ ಒಂದು ಸೋದರಿ ಶಾಖೆಯಿದೆ. ಕಂಪ್ಯೂಟೇಷನಲ್ ಏಸ್ಥಟಿಕ್ಸ್ ಎಂದು ಅದರ ಹೆಸರು. ಚಿತ್ರಕಲೆ, ಸಂಗೀತ ಇನ್ನೂ ಅನೇಕ ಕಲಾಪ್ರಕಾರಗಳನ್ನು ಇದರ ಮೂಲಕ ನೋಡುವ, ಕಟ್ಟುವ ಪ್ರಯತ್ನ ನಡೆದಿದೆ. ಷೇಕ್ಸ್-ಪಿಯರ್ ನ ಕೃತಿಗಳ, ಪಾತ್ರಗಳ ಅಧ್ಯಯನಗಳನ್ನು ಕಂಪ್ಯುಟೇಷನ್ ವಿಧಾನಗಳಿಗೆ ಅಳವಡಿಸಿ ಅವುಗಳ ಅರ್ಥಾರ್ಥವನ್ನು ಬಿಡಿಸುವುದನ್ನೂ ಆರಂಭಿಸಿ ಕಾಲವಾಯಿತು. ನಮ್ಮ ಕನ್ನಡದ ಗೊಡ್ಡು ವಿಮರ್ಶಕರಿಗೆ ಇದೊಂದು ಮಜಬೂತಾದ ಛಾಲೆಂಜಾಗುವ ಭವಿಷ್ಯವನ್ನೂ ನಾವು ಕಾಣಲಿದ್ದೇವೆ. ಉದ್ದಾನುದ್ದ ಕಾವ್ಯವನ್ನು ದಿನಾ ಫೇಸ್-ಬುಕ್ಕಿನಲ್ಲಿ ಸುರಿದು, ತಮ್ಮದೇ ಕಾವ್ಯವೆಂದು ಘಂಟಾಗೋಷವಾಗಿ ಚೀರಿಕೊಳ್ಳುವ ಕವಿಗಳಿಗೆ ಜಪಾನಿನ ಹಾಯ್ಕು ಜನರೇಟರ್ ಆಲ್ಗಾರಿದಂ ಗಳು ತಲ್ಲಣಿಸುವಂತೆ ಮಾಡಲಿವೆ. FACE ಎಂಬ ಫಿನ್ನಿಶ್ ಪೊಯೆಟ್ರಿ ಜನರೇಟರ್ -ರೂಪಕ, ಲಯ, ಅರ್ಥಗಳನ್ನು ಅರೆದುಕುಡಿಯುತ್ತ ಕಾವ್ಯ ಹರಿಸಲು ಸಜ್ಜಾಗುತ್ತಿದೆ. ಅಷ್ಟೆಲ್ಲ ದೂರವೇಕೆ? ಅಮಿತವ್ ದಾಸ್ ಎಂಬ ನಾರ್ತ್ ಟೆಕ್ಸಾಸ್ ಯೂನಿವರ್ಸಿಟಿಯ ಸಂಶೊಧಕರು ಬೆಂಗಾಲಿ ಕಾವ್ಯವನ್ನು ಕಂಪ್ಯೂಟರ್ ಸೃಜಿಸುವಂತೆ ಮಾಡುವ ಕುರಿತು ಅಧ್ಯಯನ ಮಾಡಿ ಅರ್ಧ ದಶಕವಾಯಿತು.

ಇನ್ನು ಸ್ವಲ್ಪ ಕಾಲ ಹೋದರೆ ಕನ್ನಡದ ಫೇಸ್-ಬುಕ್ ಕವಿಗಳು ಕಾವ್ಯ ಬರೆಯುವುದಲ್ಲ; ಅಕೌಂಟು ತೆಗೆದರೆ ನಮಗಿಂತ ಮುಂಚೆಯೇ -ಇನ್ನೂ ಉತ್ತಮ ಕಾವ್ಯವನ್ನು- ಅದೇ ನಮಗೆ ಬರೆದುಕೊಡಲಿದೆ. ಕನಿಷ್ಟ ಈಗಲಾದರೂ ಸಾಹಿತ್ಯವನ್ನು ಆತ್ಮಬದ್ಧವಾಗಿ ರಚಿಸದೇ ಹೋದರೆ, ಕಂಪ್ಯೂಟರಿನ ಬಳಿ ಅಲ್ಲೂ ಸೋಲೊಪ್ಪಿಕೊಳ್ಳಬೇಕಾಗಬಹುದು.

ಅಧ್ಯಯನ ಆಕರಗಳು:

1.Anyone Can Become a Troll: Causes of trolling behavior in online discussions (Cheng et all)

2. Detecting Nastiness in Social Media (Samghabadi et al)

3. Nazis V/s ISIS on Twitter: A comparative study of white nationalists and ISIS Online Social Media Networks

ಕೃಪೆ: ಸಮಾಜಮುಖಿ ಮಾಸಪತ್ರಿಕೆ


2 comments to “ಗೂಗಲ್ ಗೆ ಪದಗಳ ಹಂಗಿಲ್ಲ: ಭವಿಷ್ಯದ ಭೂತ”
  1. ಲೇಖನ ಕುತೂಹಲಕಾರಿಯಾಗಿದೆ. ಅವಿನಾಶ್ ಅವರು ಈ ವಿಷಯವನ್ನು ಕುರಿತು ಕನ್ನಡದಲ್ಲಿ ಒಂದು ಇಡೀ ಪುಸ್ತಕವನ್ನೆ ಬರೆಯಬೇಕು. ಈ ವಿದ್ಯಮಾನದ ತಾಂತ್ರಿಕ ಆಯಾಮಗಳ ಜೊತೆಗೆ ಇಂಥದನ್ನು ಕುರಿತಾದ ಫಿಲೊಸಾಫಿಕಲ್ ಜಿಜ್ಞಾಸೆ ನಡೆಸುವುದು ಕೂಡ ನಮಗೆ ಮುಖ್ಯವಾಗಬೇಕು. ಅವಿನಾಶ್ ಅವರು ಆ ಕೆಲಸವನ್ನು ಕೂಡ ಮಾಡುತ್ತಾರೆಂದು ಆಶಿಸುತ್ತೇನೆ.

Leave a Reply to Thejaswi Cancel reply