ತಮಿಳು ನಿರ್ದೇಶಕ ಪ. ರಂಜಿತ್ ಸಂದರ್ಶನ – ಭಾಗ ೧

ಪ್ರಸ್ತುತ ಭಾರತೀಯ ಚಿತ್ರರಂಗದಲ್ಲಿ ದಲಿತ ಕೇಂದ್ರಿತ ವಿಷಯವನ್ನು Mainstream ಚಿತ್ರಗಳಲ್ಲಿ ಪರಿಣಾಮಕಾರಿಯಾಗಿ ಚಿತ್ರಿಸಿದ ತಮಿಳಿನ ಪ್ರತಿಭಾವಂತ ಯುವ ನಿರ್ದೇಶಕ ಪ. ರಂಜಿತ್ ಅವರ ಸಂದರ್ಶನದ ಮೊದಲ ಭಾಗ ಇಲ್ಲಿದೆ. Film Companion South ಗಾಗಿ ಭಾರದ್ವಾಜ್ ರಂಗನ್  ಅವರು ರಂಜಿತ್ ರನ್ನು ಮಾತನಾಡಿಸಿದ್ದರು. ರಂಜಿತ್ ಬೆಳೆದುಬಂದ ಪರಿಸರ, ಅವರ ಮೇಲಿನ ಮೊದಲ ಪರಿಣಾಮಗಳು, ಅವರ ಒಲವುಗಳು ಮತ್ತು ನೋಟ ಎಲ್ಲದರ ಕುರಿತು ಈ ಮಾತುಕತೆಯಿದೆ. ಇದು ಎರಡು ಕಂತುಗಳಲ್ಲಿ “ಋತುಮಾನ”ದಲ್ಲಿ ಪ್ರಕಟವಾಗಲಿದೆ.

Photo Credit: Viditi Ajeet Saxena

ಭರದ್ವಾಜ್ ರಂಗನ್: ಹಲೋ. ಫಿಲ್ಮ್ ಕಂಪನಿ ಹೌಸಿಗೆ ಸ್ವಾಗತ. ಮೊದಲು ವಂದನೆಗಳೊಂದಿಗೆ ಪ್ರಾರಂಭಿಸಲು ಬಯಸುತ್ತೇನೆ. ನೀವು ಸಿನಿಮಾ ಮಾಡಲು ತೊಡಗಿದಮೇಲೆಯೇ ನನ್ನ ವಲಯದಲ್ಲಿರುವ ಅನೇಕರಿಗೆ ಈ ರೀತಿಯಾದಂತಹ ಸಂವಾದಗಳಿವೆ, ಓದುಗಳಿವೆ, ಸಮಸ್ಯೆಗಳಿವೆ ಮತ್ತು ಕೆಲವು ಕೋಡಿಂಗ್‍ಗಳಿವೆ ಎಂಬುದೆಲ್ಲವೂ ಸ್ವಲ್ಪ ಬಹಿರಂಗವಾಗಿ ಹೊರಬಂದಿವೆ. ಅನೇಕರು ಸಿನಿಮಾದಿಂದ ಎಜುಕೇಟ್ ಮಾಡುತ್ತೇವೆ ಎನ್ನುತ್ತಾರೆ, ಆದ್ದರಿಂದ ಮೊದಲು ನಿಮ್ಮ ಕಾರ್ಯಾಲಯದ ಬಗ್ಗೆ ಕೇಳಬೇಕು. ಒಬ್ಬ ಸಿನಿಮಾ ನಿರ್ದೇಶಕರ ಕಾರ್ಯಾಲಯ ಹೀಗೆ ಪೋಸ್ಟರ್‍ಗಳಿಲ್ಲದೇ, ಅಥವಾ ರಿಲೀಸ್ ಆಗುವ ಚಿತ್ರಗಳ ಬಗ್ಗೆ ಯಾವ ಪೋಸ್ಟರುಗಳು ಇಲ್ಲದೆ ನೋಡುವುದು ಇದೇ ಮೊದಲ ಬಾರಿ, ಇದರಿಂದ ನೀವೇನಾದರೂ ಸ್ಟೇಟ್ಮೆಂಟ್ ಮಾಡಲು ಬಯಸುತ್ತೀರೇನು?

ಪ.ರಂಜಿತ್: ಸ್ಟೇಟ್ಮೆಂಟ್ ಮಾಡ್ತಿಲ್ಲ. ಹಾಗೆ ಮಾಡಬೇಕಂತಲೂ ಅನಿಸುತ್ತಿಲ್ಲ. ಸಿನಿಮಾದವರ ಕಾರ್ಯಾಲಯದಂತೆ  ಇರಬಾರದು ಅಂತ  ನಾನು ಮೊದಲೇ ನಿರ್ಧಾರಮಾಡಿದ್ದು. ಅದಕ್ಕೆ ಕೆಳಗೆ ರಿಸೆಪ್ಷನ್ ಹಾಲಿನಲ್ಲಿ ಲೈಬ್ರರಿ ಮಾಡಿದ್ದೇನೆ.  ಬರುವವರು ಇಲ್ಲಿ ಹತ್ತು ನಿಮಿಷ ಕೂತರು ಅಲ್ಲಿರುವ ಪುಸ್ತಕಗಳನ್ನು ನೋಡಬೇಕು. ಅವರಿಗೆ ಆ ಪುಸ್ತಕಗಳೊಂದಿಗೆ ಏನಾದರೂ ಒಂದು ಸಂಬಂಧ ಇರಬೇಕು. ಅದೇ ನನ್ನ ಮೊದಲ intention. ನನ್ನನ್ನು ಪ್ರೊಜೆಕ್ಟ್ ಮಾಡಿಕೊಳ್ಳುವಂತಹದ್ದು ಏನೂ ಬೇಡ ಅಂತನಿಸಿತು. ಅದು ಅವಶ್ಯಕತೆಯೇ ಅಂತಲೂ ಅನಿಸಿತು. ನನ್ನ ಸಿನಿಮಾಗಳು ನನ್ನನ್ನು ಪ್ರೊಜೆಕ್ಟ್ ಮಾಡಿದರೆ ಸಾಕು.

ಭ.ರಂ: ಒಂದು ಸಣ್ಣ ಫ್ಲಾಶ್ ಬೇಕಿಗೆ ಹೋಗೋಣಾ, ಮೊಟ್ಟಮೊದಲು ಜಾತಿಗಳು ಇವೆ ಎಂದು ನಿಮಗೆ ಯಾವಾಗ, ಯಾವ ವಯಸ್ಸಿನಲ್ಲಿ, ಹೇಗೆ ತಿಳಿಯಬಂದಿತು.

ಪ.ರಂ: ಅದು ಬಹಳವೇ ಕಷ್ಟ. ಅದು ಎಲ್ಲಿಂದ ಪ್ರಾರಂಭವಾಗುತ್ತದೆ, ನನ್ನ ಹುಟ್ಟಿನಿಂದಲೇ. ಜಾತಿಯನ್ನು study ಮಾಡಲಿಕ್ಕೆ ನನಗೆ ನನ್ನ ಊರು ಬಹಳ ಮುಖ್ಯ. ನನ್ನ ಊರು ಕರ್ಲಪಾಕ್ಕಂ. ಅಲ್ಲಿ ಊರು, ಕಾಲನಿ ಎಂದು ಎರಡೂ ಬೇರೆಬೇರೆಯಾಗಿವೆ. ಹಾಗೆ ಊರು ಕಾಲನಿ ಯಾಕಿದೆ ಎಂಬುದು ನಾನು ಬೆಳೆಯುತ್ತಾ ತಿಳಿಯಿತೇ ಹೊರತು, ನಾನು ಹುಟ್ಟಿದಾಗ ತಿಳಿದಿರಲು ಸಾಧ್ಯವಿಲ್ಲ. ನಾನು ಹುಟ್ಟಿದ್ದು ಕರ್ಲಪಾಕ್ಕಂ, ಅಲ್ಲಿ ನಾನು ಯಾರು ಅಂತ ಕೇಳಿದರೆ ಕಾಲೋನಿ ಅಥವಾ ಕೊಳಚೆ ಪ್ರದೇಶದವನು ಎನ್ನುತ್ತಾರೆ. ಈ ಊರು, ಕಾಲನಿ ಎರಡೂ ಜನ.  ಈ ಊರಲ್ಲಿ ಯಾರಿದ್ದಾರೆ ಎಂದರೆ ಮೇಲು ಜಾತಿಯವರೆಲ್ಲರೂ ಇದ್ದಾರೆ, ಅದು ಬ್ರಾಹ್ಮಣರಿಂದ ಶುರುವಾಗುತ್ತೆ. ಕಾಲೋನಿಯಲ್ಲಿ ಯಾರಿದ್ದಾರೆ ಎಂದರೆ ಕೀಳುಜಾತಿಯವರೂ, ಮಂಗಳಮುಖಿಯರೂ ಇದ್ದಾರೆ. ಹೀಗೇಕೆ ಈ ಎರಡೂ ಭಿನ್ನವಾಗಿದೆ ಎಂಬುದನ್ನು ತಿಳಿದುಕೊಳ್ಳಲು ನನಗೆ ಒಂದು ಅಧ್ಯಯನದ ಅವಶ್ಯಕತೆಯಿದೆ. ಒಂದು ಇಶ್ಯೂ ನಡೆದಕೂಡಲೇ ಇವೆಲ್ಲಾ ನನಗೆ ಅರ್ಥವಾಗುತ್ತಾ ಎಂದರೆ ಇಲ್ಲ. ಮೊದಲು ಇದು ಒಂದು ಸಿದ್ಧಾಂತವಾಗಿ ನನಗೆ ಅರ್ಥವಾಗಲಿಲ್ಲ , ಬದುಕುವ ಬದುಕಾಗಿ ಮಾತ್ರವೇ ಅರ್ಥವಾಯಿತು. ಇಬ್ಬರೂ ಬೇರೆ ಬೇರೆಯಾಗಿ ಬದುಕುತ್ತಿದ್ದೇವೆ, ಇಬ್ಬರಿಗೂ ಬೇರೆ ಬೇರೆ ಗುಡಿಗಳಿವೆ, ರಸ್ತೆಗಳಿವೆ. ಆದರೆ ಕಾಲನಿಯಲ್ಲಿರುವಾಗ ನನಗೆ ಸಿಗುವ ಸಂತೋಷ, ಇದು ನನ್ನದೆಂಬ ಆ ಭಾವನೆ, ಈ ಮರ ನನ್ನದೆಂಬ ಸ್ವಂತಿಕೆಯ ಸಂಭ್ರಮ, ಅಲ್ಲಿರುವ ನಲ್ಲಿಯಲ್ಲಿ ನಾನು ಬಾಯಿಟ್ಟು ನೀರು ಕುಡಿಯುವುದು ಇವೆಲ್ಲವೂ ನನಗೆ ಒಂದು ಸ್ವತಂತ್ರವನ್ನು ಕೊಡುತ್ತದೆ. ಅದೇ ನಾನು ಊರೊಳಗೇ ಹೋಗುವಾಗ ಅದು ನನಗೆ ದೊರಕುವುದಿಲ್ಲ. ಅಲ್ಲಿರುವ ಮರ ನನಗೆ ಭೀತಿಯನ್ನುಂಟುಮಾಡುತ್ತದೆ, ರಸ್ತೆ ನನ್ನದಾಗಿಲ್ಲ. ಅಂಗಡಿಯಲ್ಲಿ ನಾನೊಂದು ಪದಾರ್ಥ ಕೊಂಡುಕೊಳ್ಳುವಾಗ ಉಂಟಾಗುವ ಡಿಸ್ಕ್ರಿಮಿನೇಶನ್ , ಶಾಲೆಯಲ್ಲಿ ದಾಹವಾದಾಗ ನೀರು ಕೇಳಿದರೆ ನಡೆಯುವ ಸಂಗತಿ. ಇವೆಲ್ಲವೂ ನನ್ನ ಸಣ್ಣ ವಯಸ್ಸಿನಲ್ಲಿ ನನಗೆ ಒಂದು ಬಗೆಯ ದಿಫರೆನ್ಶಿಯೇಶನ್  ಇದೆ ಎಂಬುದನ್ನು ಕಲಿಸಿಕೊಟ್ಟಿತು.

ಭಾ.ರಂ:  ಆ ದಾಹವಾದಾಗ ನೀರು ಕೇಳಿದ ವಿಷಯ ಏನು?

ಪ.ರಂ: ನಿರ್ಧಿಷ್ಟವಾದದ್ದು ಅಂತ ಏನಿಲ್ಲ. ಇಂತಹ ಸಂಗತಿಗಳು. ಹೀಗೆ ಎಲ್ಲೆಂದರಲ್ಲಿ ಜಾತಿ ಇತ್ತು. ಸ್ಮಶಾನದಲ್ಲಿ ಎರಡು ಕಡೆ ನೀರಿಟ್ಟಿರುತ್ತಾರೆ. ಅಲ್ಲಿಯ ಪೋಸ್ಟ್ ಆಫೀಸುಗಳಲ್ಲಿ ಹಾಗಿರುವಾಗ ಅವು ನನ್ನ ಮೇಲೆ ಹೇಗೆ ಪ್ರಭಾವ ಬೀರಿತು. ಹೀಗೆ ನನ್ನ ಪರಿಸರದಲ್ಲಿಯೇ ಜಾತಿ ಇದೆ. ನಾನು ಬದುಕುವ ಬದುಕೇ ನನಗೆ ಜಾತಿಯನ್ನು ತಿಳಿಸಿಕೊಡುತ್ತದೆ. ನನಗೆ ಸಾಮಾಜಿಕ, ರಾಜಕೀಯ ಅರಿವು ಮೂಡುವಾಗ ನಾನು ಇವೆಲ್ಲವನ್ನೂ ರೀ-ಕಲ್ಲೆಕ್ಟ್ ಮಾಡಬೇಕಾದ ಅವಶ್ಯಕತೆ ಇದೆ. ಹಾಗೆ ನಾನು ಅಧ್ಯಯನ ಮಾಡುವಾಗ ಪ್ರತಿಯೊಂದು ವಿಷಯವೂ ಇದರಿಂದಲೇ ನಡೆದಿದೆ ಎಂದು ನನಗೆ ತಿಳಿಯುತ್ತದೆ.

ಭ.ರ: ನೀವು ಶಾಲೆಯಲ್ಲಿರುವಾಗ, ಬೆಳೆಯುತ್ತಿರುವಾಗ ಇದು ಬೇರೆ ಅದು ಬೇರೆ ಎಂದು ಅರ್ಥವಾಗುವುದನ್ನು ಯಾಕೆ ಇವೆಲ್ಲವೂ ಹೀಗೆ ಎಂದು, ಯಾರ ಬಳಿಯಾದರೂ ಹೋಗಿ ಕೇಳಿದ್ದೀರಾ?

ಪ.ರಂ: ಖಂಡಿತ ಕೇಳಿರುತ್ತೇನೆ. ನನ್ನ ತಂದೆಯ ಬಳಿ ಕೇಳಿರಬಹುದು. ಅವರು `ಅದು ಹಾಗೇನೇ’ ಅಂತಷ್ಟೇ ಹೇಳಿರುತ್ತಾರೆ. ಯಾಕೆಂದರೆ  ಅವೆಲ್ಲವೂ ಇಂತಹ ಕಾರಣಗಳಿಗಾಗಿಯೇ ನಡೆಯುತ್ತಿದೆ ಎಂದು ಯಾರಿಂದಲೂ ಈವರೆಗೆ ಹೇಳಲು ಸಾಧ್ಯವಾಗಿಲ್ಲವಲ್ಲ. ಮಾನವ ಜನಾಂಗ ಉಂಟಾದ ಕಾಲದಿಂದ, ಒಬ್ಬ ಮನುಷ್ಯನನ್ನು ಮತ್ತೊಬ್ಬ ಮನುಷ್ಯನನ್ನು ಶೋಷಣೆ ಮಾಡಿ  ಹೇಗೆ ದಬ್ಬಾಳಿಕೆ ನಡೆಸಬಹುದು, ಅವನ ಮೇಲೆ ನಾವು ಹೇಗೆ ಅಧಿಕಾರ ಚಲಾಯಿಸಬಹುದು ಎಂದು ಯಾವಾಗ ಒಬ್ಬ ಮನುಷ್ಯ ಅಂದುಕೊಂಡನೋ, ಆಗಿಂದ ಅಧಿಕಾರ ಎನ್ನುವುದು ಹಲವು ಸ್ಥಾನಗಳಲ್ಲಿ ಬದಲಾಗುತ್ತಾ ಒಂದು ಕಾಲಘಟ್ಟದಲ್ಲಿ ಜಾತಿಯಾಗಿ ಮಾರ್ಪಟ್ಟಿರಲೂ ಸಾಧ್ಯತೆಗಳಿರಬಹುದು. ಅದು ಒಂದು ಪದ್ಧತಿಯಾಗಿ ಬದಲಾಗಿರಬಹುದು. ಆ ಪದ್ಧತಿಗಳನ್ನು ಅರ್ಥೈಸಿಕೊಳ್ಳುವುದು ಒಬ್ಬ ಸಾಮಾನ್ಯ ಮನುಷ್ಯನಿಂದ ಸಾಧ್ಯವಿಲ್ಲ. ಮತ್ತೊಂದು ವಿಷಯ, ಈ ಪ್ರಾಕ್ಟೀಸನ್ನು ಒಂದು ಮತದ, ದೇವರ, ಸಿದ್ಧಾಂತಗಳ ಬುನಾದಿಯಮೇಲೆ ನಮಗೆ ಹೇಳಿಕೊಡುವಾಗ, ನಮ್ಮ ಹಿಂದಿನ ಜನ್ಮದ ಪಾಪಗಳಿಂದ ನಾವು ಹೀಗೆ ಹುಟ್ಟಿರಬಹುದು, ಅಥವಾ ದೇವರೇ ನಮ್ಮನ್ನು ಹೀಗೆ ಸೃಷ್ಟಿಸಿದ್ದಾನೆ ಎಂಬ ಒಂದು myth ಒಂದನ್ನು follow ಮಾಡುವ ಅವಶ್ಯಕತೆ ಇರುವುದರಿಂದ, ಇದನ್ನು ಅರ್ಥಮಾಡಿಕೊಳ್ಳುವುದರಲ್ಲಿ ಕೆಲವರಿಗೆ ಬಹಳ ಸಮಸ್ಯೆಗಳಿವೆ. ನಮ್ಮ ತಂದೆಯನ್ನು ಕೇಳಿದರೆ, `ಅವರು ಮೇಲೂ ಜಾತಿ, ನಾವು ಕೀಳು ಜಾತಿ’ ಎಂಬ ಒಂದೇ ಮಾತಿನಲ್ಲಿ ಇದನ್ನು ಹಾದುಹೋಗುವ ವಿಷಯವಾಗಿರಬಹುದು. ಅದನ್ನು ಮೀರಿದವರು ಒಬ್ಬರಿದ್ದಾರಲ್ಲ, ಅವರೇ ಅಂಬೇಡ್ಕರ್. ಇಂತಹ myth ಗಳನ್ನು ಒಡೆದು ನಮಗೆ ಬೆಳಕು ಚೆಲ್ಲಿದ ಅಂಬೇಡ್ಕರ್. ನಮ್ಮ ಊರಲ್ಲಿ ಒಂದು ಸಣ್ಣ ಪ್ರತಿಮೆ ಇತ್ತು. ಅವರು ಯಾರೆಂದು ಕೇಳಿದಾಗ ಅವರು ಅಂಬೇಡ್ಕರ್,  ಇಷ್ಟೆಲ್ಲಾ ಓದಿದ್ದಾರೆ, ಇಂತಹದ್ದನ್ನೆಲ್ಲಾ ಮಾಡಿದ್ದಾರೆ ಎಂಬುದು ಪ್ರಜಾಪ್ರಭುತ್ವದ ಹಾದಿಯಲ್ಲಿ, ಕಾನೂನಿನ ಮೂಲಕ ಇವಕ್ಕೆಲ್ಲಾ ಒಂದು ಪರಿಹಾರ ಕಂಡುಕೊಳ್ಳಲು ಪ್ರಯತ್ನ ಮಾಡಿದವರು  ಎಂಬುದು ತಿಳಿಯಿತು. ಆದ್ದರಿಂದ ಒಬ್ಬರು ಎಲ್ಲಿಂದ ಬಂದಿದ್ದರೂ, ಯಾವ ಸ್ಥಿತಿಯಲ್ಲಿದ್ದರೂ ಏನನ್ನಾದರೂ ಸಾಧಿಸಬಹುದೆಂಬುದನ್ನು ತಿಳಿಸಿಕೊಟ್ಟವರು.

ಭ.ರಂ: ಹೀಗೆಲ್ಲಾ ನಡೆಯುವುದು ಜಾತಿಯಿಂದಲೇ ಎಂಬುದು ನಿಮಗೆ ಅಂದಾಜಾಗಿ ಯಾವ ವಯಸ್ಸಲ್ಲಿ ತಿಳಿಯ ಬಂದಿತು?

ಪ.ರಂ: ಅದು ನನ್ನ ಎಳೆಯ ಪರ್ವದಲ್ಲಿ ಎಂದು ಹೇಳಬಹುದು. ಸುಮಾರು 15 ವಯಸ್ಸಿನಲ್ಲಿ ನನಗೆ ಇವೆಲ್ಲಾ ಸರಿಯಾಗಿ ಅರ್ಥವಾಯಿತು. ಊರಲ್ಲಿ ಒಂದು ದೇವಸ್ಥಾನದ ಜಾತ್ರೆ ನಡೆಯುತ್ತದೆ. ದ್ರೌಪತಿ ಅಮ್ಮನ ಜಾತ್ರೆ.  ಅದರಲ್ಲಿ ಎಲ್ಲ ಜಾತಿಯವರು ಭಾಗವಹಿಸುತ್ತಾರೆ. ರೆಡ್ಡಿ, ನಾಡಾರ್, ಈಡಿಗರು ,ಆಗಸರು ಹೀಗೆ ಎಲ್ಲ ಜಾತಿಯವರೂ ಇರುತ್ತಾರೆ. ಎಲ್ಲ ಜಾತಿಯ ಜನಗಳಿಗೂ ಆ ಗುಡಿಯ ಜಾತ್ರೆಯಲ್ಲಿ ಕೈಗೆ ಕಾಪ್ಪು ಕಟ್ಟಿಕೊಳ್ಳುವ, ಹೊಂಡ ಹಾಯುವ ಹಕ್ಕಿದೆ. ಅದರಲ್ಲಿ ಬಹಳಷ್ಟು ತಲೆಕಟ್ಟುಗಳಿರುತ್ತವೆ. ಹಾಗೆ ಒಂದು ತಲೆಕಟ್ಟು ಕಾಲನಿಯಿಂದ ಹೋಗಿದ್ದಾಗಿಯೂ ಹೇಳುತ್ತಾರೆ. ಆದರೆ ಅಲ್ಲಿ ನನಗೆ ಯಾಕೆ ಕಾಪ್ಪು ಕಟ್ಟಿಕೊಳ್ಳುವ ಹಕ್ಕಿಲ್ಲ ಎಂದು ಯೋಚಿಸುವಾಗ, ನಾನು ಕೇವಲ ಪ್ರೇಕ್ಷಕ, ಭಾಗಿಯಲ್ಲ ಎಂಬ ಪ್ರಶ್ನೆ ಏಳುವಾಗ, ಆ ಸಂಭ್ರಮದಿಂದ ಹುಟ್ಟಿಕೊಂಡ ಈ ಪ್ರಶ್ನೆ ನನ್ನನ್ನು ಬಾಧಿಸಿತು. ಆದರೆ ಇದಕ್ಕಾಗಿ ಹೊಡೆದು, ಬಡಿದಾಡಿಕೊಂಡೆವು ಎಂದೇನಿಲ್ಲ. ಆದರೆ ಈ ಪ್ರಶ್ನೆ…..  ಆ ದೇವಸ್ಥಾನದಲ್ಲಿ ಚಿತ್ತಿರೈ ತಿರುವಿಜ್ಹಾ ಅಂತ ಒಂದು ಜಾತ್ರೆ ನಡೆಯುತ್ತದೆ. ಆಗ ಊಟ ಹಾಕುತ್ತಾರೆ, ಅಲ್ಲಿ ನಾನು ಹೋಗಿ ಕುಳಿತು ಊಟ ಮಾಡಿದ್ದೇನೆ. ಅಂತಹದ್ದೆಲ್ಲವೂ ಸಹಾ ನಡೆದಿದೆ. ಆದರೂ ಆ ಹತ್ತು ದಿನದ ಜಾತ್ರೆಯಲ್ಲಿ ಊರಿಗೆ ಊರೇ ಪಾಲುಗೊಳ್ಳುವಾಗ ನಾನೇಕೆ ಭಾಗವಹಿಸಲು ಸಾಧ್ಯವಾಗಿಲ್ಲ ಎಂಬಂತಹ ಪ್ರಶ್ನೆಗಳು ನನ್ನನ್ನೂ ಇಂದಿಗೂ ಕಾಡುತ್ತಿವೆ.

ಭ.ರಂ: ಒಂದು ಭೇಟಿಯಲ್ಲಿ ನಿಮ್ಮ ತಾತ ಅವರ ಭೂಮಿಯನ್ನು ಮಾರಬೇಕಾಗಿ ಬಂತು ಎಂದು ಹೇಳಿದ್ದಿರಿ. ಅದು ನಿಮಗೆ ಹೇಳಲ್ಪಟ್ಟ ವಿಷಯವೆ, ಅಥವಾ ನಿಮಗೆ ತಿಳಿದಿತ್ತೇ?

ಕರ್ಲಪಾಕ್ಕಂ ದ್ರೌಪದಿ ಉತ್ಸವ

ಕರ್ಲಪಾಕ್ಕಂ ದ್ರೌಪದಿ ಉತ್ಸವ

ಪ.ರಂ: ಹೇಳಿ ತಿಳಿದುಕೊಂಡದ್ದೇ. ಅದು ಕತೆಯಾಗಿ ಸಹಾ ಇರಬಹುದು. ಕಿಂಗಿನಿ ಎಂಬ ಜಾಗದಲ್ಲಿ ನಮಗೆ ಭೂಮಿಯಿದ್ದದ್ದಾಗಿಯೂ, ಅದನ್ನು ನಾವು ಉತ್ತು ಬೆಳೆಯಲು ಸಾಧ್ಯವಾಗದ ಪರಿಸ್ಥಿತಿ ಇತ್ತೆಂದೂ, ಅವರು ಧಾವ ಹೂಡಿ ಅಲ್ಲಿಯ ಕೆರೆಯ ನೀರನ್ನು ಬಳಸಿಕೊಳ್ಳಬಹುದೆಂಬ ತೀರ್ಪೂ ಬಂದಮೇಲೂ ಸಹಾ ಅವರಿಂದ ಬೆಳೆ ಬೆಳೆಯಲು ಸಾಧ್ಯಾವಾಗಲಿಲ್ಲ, ಎಂಬುದನ್ನೂ ಒಂದು ಕಥೆಯ ರೂಪದಲ್ಲಿ ನನಗೆ ಹೇಳಲ್ಪಟ್ಟಿತು. ಅದರ ಆಧಾರದ ಮೇಲೆ, ತಿಳುವಳಿಕೆ ಬಂದ ಮೇಲೆ, ನನಗೆ ಒಂದು ಪ್ರಶ್ನೆ ಹುಟ್ಟಿಕೊಳ್ಳುತ್ತದಲ್ಲಾ, `ನನಗೇಕೆ ಭೂಮಿ ಇಲ್ಲ’ ಎಂದು. ಹೀಗೆ ನಮ್ಮ ಕಾಲನಿಯ ಸುತ್ತ ಇರುವ ಭೂಮಿ ಯಾಕೆ ನಮಗೆ ಸ್ವಂತವಲ್ಲ. ನಮಗೆ ಎಂದರೆ ಕೇವಲ ನನಗೆ ಎಂದಲ್ಲ, ಆ ಕಾಲನಿಯ ಜನಗಳಿಗೆ. ಒಂದು ಕಾಲದಲ್ಲಿ ಅವೆಲ್ಲವೂ ಇವರಿಗೆ ಸ್ವಂತವಾಗಿತ್ತು, ನಂತರ ಇಲ್ಲ. ಹೀಗೇಕೆ? ಅಂತಹ ಪ್ರಶ್ನೆಗಳಿಂದ ಹುಟ್ಟಿಕೊಂಡದ್ದೇ ಇವೆಲ್ಲವೂ.

ಭ.ರಂ: ನಿಮ್ಮ ಶಾಲೆ, ಕಾಲೇಜು ಜೀವನ ಹೇಗಿತ್ತು? ನಿಮ್ಮ ಆ ಜೀವನ smooth ಆಗಿತ್ತೇ ಇಲ್ಲ, rough ಆಗಿ, rebel ಆಗಿತ್ತೇ?

ಪ.ರಂ: ನಾನು ಶಾಲೆಯಲ್ಲಿ ಓದುವಾಗ ಒಳ್ಳೆಯ ಹುಡುಗನೇ ಆಗಿದ್ದೆ. ಚೆನ್ನಾಗಿ ಓದುವುದರಿಂದ ಮೇಷ್ಟ್ರುಗಳಿಗೆ ಅಚ್ಚುಮೆಚ್ಚಗಿದ್ದೆ. ಫಾತಿಮಾ ಟೀಚರ್, ದೇವದಾಸ್ ಹೆಡ್ಮಾಸ್ಟರ್, ರಾಣಿ ಟೀಚರ್ ಇದ್ದರು. ಅವರಿಗೆಲ್ಲ ಪ್ರೀತಿಪಾತ್ರನಾಗಿದ್ದೇ. ಅವರು ಕೆಲವೊಮ್ಮೆ ನನಗೆ ಊಟ ಸಹಾ ತಂದು ಕೊಡುತ್ತಿದ್ದರು. ಐದನೇಯ ತರಗತಿಯಲ್ಲಿದ್ದಾಗ ಶಾಲೆಯನ್ನು ಕಂಟ್ರೋಲ್ ಮಾಡುವ ಹುಡುಗನಾಗಿದ್ದೆ. ದಕ್ಷಿಣ ಜಿಲ್ಲೆಗಳಿಗೂ ಉತ್ತರ ಜಿಲ್ಲೆಗಳಿಗೂ ಬಹಳ ವ್ಯತ್ಯಾಸವಿದೆ. ಉತ್ತರ ಜಿಲ್ಲೆಗಳ ಶಾಲೆಗಳಲ್ಲಿ ಜಾತಿಯ ಸಂಗತಿಗಳನ್ನು ನೇರವಾಗಿ ಮಾಡಲು ಸಾಧ್ಯವಿಲ್ಲ. ನಾನು ಇದ್ದ ತಿರುವಳ್ಳುವರ್ ಜಿಲ್ಲೆಯಲ್ಲಿ ಪೂವೈ ಮೂರ್ತಿ ಅಂತ ಒಬ್ಬರಿದ್ದರು, ಅವರು ಇಲ್ಲಿ ಬಹಳಷ್ಟು ಬದಲಾವಣೆಗಳನ್ನು ತಂದರು. ಜಾತೀಯ ಸಮಸ್ಯೆಗಳು ಬಂದಾಗ ಅದಕ್ಕೆ ಧ್ವನಿ ಕೊಡವಂತಹ, ನಮ್ಮನ್ನು ಅಂತಹವುಗಳ ವಿರುದ್ಧವಾಗಿ ಎದ್ದು ನಿಲ್ಲುವಂತಹ ಧೈರ್ಯವನ್ನು ತುಂಬುತ್ತಿದ್ದರು. ನಾವು ಬದುಕುತ್ತಿದ್ದ ಜಾಗಗಳಲ್ಲಿ ಇಂತಹ ಸಮಸ್ಯೆಗಳನ್ನು ನೋಡಿದ್ದೇನೆ. ಆದರೆ ಶಾಲೆಯಲ್ಲಿ ಅಂತಹವುಗಳನ್ನು ಅನುಭವಿಸಿಲ್ಲ. ಆದ್ದರಿಂದ ಶಾಲೆಯ ಜೀವನ ಜಾಲಿಯಾಗಿತ್ತು. ನಂತರ 7, 8 ನೇ ತರಗತಿಗಳನ್ನು ಆವಡಿ ಕಾಮರಾಜರ್ ಶಾಲೆಯಲ್ಲಿ ಓದಿದೆ.  ಎಲ್ಲವೂ ಸರಕಾರಿ ಶಾಲೆಗಳೇ.  ನಂತರ 10 ವೆಂಗಲ್ನಲ್ಲಿ, 11,12 ಹೊರಗಡೆ ಹೋಗಿ ಓದಿದೆ. 12 ನಂತರ ಒಂದೆರಡು ವರ್ಷ ಊರಲ್ಲಿದ್ದೆ. ನಂತರ ಕಾಲೇಜಿಗೆ ಬಂದೆ. ಫೈನ್ ಆರ್ಟ್ಸ್ ಕಾಲೇಜಿಗೆ ಬಂದು ಸೇರಿದೆ. ಅಲ್ಲಿ ನಾನು ಭೇಟಿಯಾದ ಕೆಲವು ವ್ಯಕ್ತಿಗಳು, ನೋಡಿದ ಸಿನಿಮಾಗಳು, ಅಲ್ಲಿಯ ಕಲೆಕ್ಟಿವ್ ಮನೋಭಾವದಲ್ಲಿದ್ದು ಅನೇಕ ಕಲಿಕೆಗಳು ನೀಡಿದ ಸ್ಥಳವೆಂದರೆ ಕಾಲೇಜು. ಅಲ್ಲೇ ನಾನು ಓದಲು ತೊಡಗಿದ್ದು. ಅಂಬೇಡ್ಕರ್, ಪೆರಿಯಾರ್ ಬಗ್ಗೆ ಸ್ವಲ್ಪ ಓದಿಕೊಂಡಿರಬಹುದು. ಆದರೆ ಕಾಲೇಜಿಗೆ ಬಂದಮೇಲೆಯೇ ಪುಸ್ತಕ ಓದುವುದು ಹೆಚ್ಚಾಯಿತು. ಆಗ psychological ಎಫೆಕ್ಟ್ ಬಗ್ಗೆ ಅರ್ಥ ಮಾಡಿಕೊಳ್ಳಲು ಸಾಧ್ಯವಾಯಿತು. ವಿಶೇಷವಾಗಿ ಸಿಗ್ಮಂಡ್ ಫ್ರಾಯಿಡ್.  ಆಗಲೇ ದೈಹಿಕ, ಮಾನಸಿಕ  ಯೋಚನೆಗಳಿಗೆ, ಬದಲಾವಣೆಗಳಿಗೆ ಒಂದು ಬಗೆಯ ತತ್ವಾರ್ತ ರೀತಿಯಲ್ಲಿ ಉತ್ತರಗಳನ್ನು ಹುಡುಕಲು ತೊಡಗಿದೆ. ಆಗಲೇ ಯೋಚಿಸಿದೆ ಇಲ್ಲಿ ಅಧಿಕಾರ, ಜಾತಿ ಯಾವ ರೀತಿಯಲ್ಲಿದೆ ಎಂಬುದರ ಬಗ್ಗೆ. ಅಂಬೇಡ್ಕರ್ ಒಂದು ಕಡೆ ಹೇಳುತ್ತಾರೆ, `ಜಾತಿ ಎಂಬುದು ಒಂದು ಮನೋಭಾವ’ ಎಂದು. ಆ ಮನೋಭಾವವನ್ನು ಅರ್ಥ ಮಾಡಿಕೊಳ್ಳಲು ನಾನು ಪ್ರಯತ್ನ ಮಾಡಿದೆ. ಇಲ್ಲಿ ಯಾವುದೂ ನೇರವಾಗಿಲ್ಲ, ಎಲ್ಲವೂ abstract ಆಗಿದೆ.  ಮನೋರೀತಿಯಲ್ಲಿ ಭಾದೆಗೊಳಗಾದ ಸಮಾಜವಾಗಿದ್ದೇವೆ. ಅಂತಹ ಸಮಾಜವನ್ನು, ಘಟನೆಗಳನ್ನು, ಪದ್ಧತಿಗಳನ್ನು ಅರ್ಥಮಾಡಿಕೊಳ್ಳಲು ನಮ್ಮನ್ನು ನಾವು ತಯಾರಿಮಾಡಿಕೊಳ್ಳುವ ಅವಶ್ಯಕತೆ ಇದೆ. ಆ ಅವಶ್ಯಕತೆಗಾಗಿ ನನ್ನ ಓದು, ಸಿನಿಮಾ, ಮತ್ತು ಸಂವಾದಗಳಿಂದ  ಅವನ್ನು ನಾನು ಅರ್ಥ ಮಾಡಿಕೊಳ್ಳುತ್ತೇನೆ ಅಂದುಕೊಂಡಿದ್ದೇನೆ. ಈ ಬಗೆಯಲ್ಲಿ ಕಾಲೇಜು ದಿನಗಳೇ ನನ್ನಲ್ಲಿ ಇಂತಹ ಬದಲಾವಣೆಗಳನ್ನು ತಂದಿದ್ದು. ನನ್ನನ್ನು ಕಾಲೇಜಿನಲ್ಲಿ ಎಲ್ಲರೂ `ಸಮೂಗಂ’ ಎಂದೇ ಕರೆಯುತ್ತಿದ್ದರು. ಯಾಕೆಂದರೆ ಸದಾ ನಾನು ಸಾಮಾಜಿಕ ಚಿಂತನೆಯಲ್ಲಿ ಇದ್ದದ್ದರಿಂದ ಹಾಗೆ ಕರೆಯುತ್ತಿದ್ದರು. ನಾನು ಅದರ ಬಗ್ಗೆಯೇ ಹೆಚ್ಚಾಗಿ ಎಲ್ಲರೊಂದಿಗೆ ಮಾತನಾಡುತ್ತಿದ್ದೆ. ನನ್ನ ಪೆಯಿಂಟಿಂಗ್ ಸಹಾ ಆ ರೀತಿಯಲ್ಲಿಯೇ ಇರುತ್ತಿದ್ದವು. ಅಲ್ಲಿ ನಾನೇ ಬರೆದ ಒಂದು ನಾಟಕ ಮಾಡಿದೆ. ಆ ನಾಟಕವೂ ಸಹ ಸಮಾಜದ ಭಾವನೆಗಳ ಬಗ್ಗೆ, ಸಮಸ್ಯೆಗಳ ಬಗ್ಗೆಯೇ ಇತ್ತು. ಆದ್ದರಿಂದ ನನ್ನ ಕಾಲೇಜು ದಿನಗಳೇ ನನಗೆ ಬಹಳ ಮುಖ್ಯವಾದ ಸಮಯ ಎಂದು ಅಂದುಕೊಂಡಿದ್ದೇನೆ.

ಭ.ರಂ: ಈ formative ಕಾಲೇಜಿನ ಸಮಯದಲ್ಲೇ, ಅಲ್ಲವೇ?

ಪ.ರಂ: ಖಂಡಿತ. ಆಗಲೇ ನಾನು ಮೊಟ್ಟಮೊದಲು modern plays ನೋಡಿದ್ದು.. ಇಲ್ಲಿ ಆತ್ಮಗಳ ಬಗ್ಗೆ ಮಾತನಾಡುವ ನಾಟಕಗಳನ್ನು, ಒಳದನಿಯ ನಾಟಕಗಳನ್ನು, body language ಬಳಸಿಕೊಂಡು ಮಾಡಿದ ನಾಟಕಗಳನ್ನು ನೋಡಿದ್ದು.

ಭ.ರಂ: ಎಂತಹ ನಾಟಕಗಳು?

ಪ.ರಂ: ಮುರುಗ ಭೂಪತಿ ಅವರ ನಾಟಕವನ್ನು ನಾನು ಮೊದಲ ಸಲ ನೋಡಿದ್ದು. Modern plays ನಲ್ಲಿ ಬಹಳ ಪ್ರಮುಖವಾದ ವ್ಯಕ್ತಿ. contemporary ನಾಟಕಗಳಲ್ಲಿ ತುಂಬ ಕೆಲಸ ಮಾಡುತ್ತಿದ್ದಾರೆ. ಅವರ ನಾಟಕವನ್ನು ನಮ್ಮ ಕಾಲೇಜಿನ cultural event ನಲ್ಲಿ ನೋಡಿದ್ದು. ಅದರಲ್ಲಿ, ಪುರುಷೋತ್ತಮನ್, ಕರುಣಾಪ್ರಸಾದ್ ನಟಿಸಿದ್ದರು. ಈ ನಾಟಕ ಯಾಕೆ ಎಲ್ಲಕ್ಕಿಂತ ಭಿನ್ನವಾಗಿದೆ, ಇಲ್ಲಿ body language ಯಾಕೆ  ಬಹಳ ವ್ಯತ್ಯಾಸವಾಗಿದೆ.  stage ನಿಂದ ಹಿಡಿದು ಎಲ್ಲವೂ different ಆಗಿದೆ. ಅದನ್ನು ನೋಡಿದ ಮೇಲೆ ನಾನೂ ಯಾಕೆ ಹೀಗೊಂದನ್ನು ಮಾಡಿ ನೋಡಬಾರದು ಎಂದು ನಾಲ್ಕೈದು ನಾಟಕಗಳನ್ನು ಬರೆದೆ. ಅದರಲ್ಲಿ ನಾಲ್ಕನ್ನು stage ಮಾಡಿದ್ದೇನೆ. ಅದೇ ನನ್ನನ್ನು ಕಲೆ ಸಾಹಿತ್ಯದ ಕಡೆಗೆ ಕರೆದೊಯ್ಯಿತು. ನನ್ನ ಭಾವನೆಗಳನ್ನೂ ಪೆಯಿಂಟಿಂಗಾಗಿ ನೋಡುತ್ತಿದ್ದ ಒಂದು format ನಿಂದ ಮತ್ತೊಂದು ರೀತಿಯ format ಕೊಂಡೊಯ್ಯಿತು.

Government College of Fine Arts, Chennai

Government College of Fine Arts, Chennai

ಭ.ರಂ: ಈ Fine Arts ನಲ್ಲಿ painting ಮಾಡ್ತಾರೆ ಅಷ್ಟೇ ಅಲ್ಲವೇ? ನಾಟಕ ಮುಂತಾದವು……?

ಪ.ರಂ:  ಹಾಗೇನೂ ಇಲ್ಲ. Fine Arts ನಲ್ಲಿ ಎಲ್ಲವೂ ಇರುತ್ತೆ. ನಾಟಕ, ಸಿನಿಮಾ ಮುಂತಾದವೂ ಸಹಾ. ಬಹಳ ಜನ ಸಿನಿಮಾಕ್ಕೆ  ಅಲ್ಲಿಂದಲೇ ಬಂದದ್ದು. ಶಿವಕುಮಾರ್, ವಾಲಿ ಮುಂತಾದವರು. ಇವರೆಲ್ಲ ನಮ್ಮ ಕಾಲೇಜಿನಿಂದ ಓದಿ ಹೋದವರು. ಸಿನಿಮಾಗೂ ನಮಗೂ ಒಂದು ಸಣ್ಣ connection ಇದೆ. ಬಹಳ ಸಿನಿಮಾದವರು ಡೈರೆಕ್ಟರ್ ಮುಂತಾದವರು ನಮ್ಮ ಕಾಲೇಜಿಗೆ ಬಂದು ಹೋಗುತ್ತಾರೆ. ಆದ್ದರಿಂದ ನಮ್ಮ ಕಾಲೇಜಿನಿಂದ ಸಿನಿಮಾಗೂ ಹೋಗಬಹುದೇ ಎಂಬ ಆಲೋಚನೆಗಳೂ ಬರುತ್ತವೆ. ಅದಲ್ಲದೆ ಬಹಳ ಆರ್ಟಿಸ್ಟ್, intellectuals ಸಹಾ ಆಗಾಗ ಬಂದು ಹೋಗುತ್ತಾರೆ. ಆದ್ದರಿಂದ ಕೇವಲ painter ಅನ್ನು ಮಾತ್ರವೇ ಸೃಷ್ಟಿಸುವ ಕಾಲೇಜಾಗಿಲ್ಲದೆ, ಒಟ್ಟಾರೆ ಕಾಲಾಕಾರರನ್ನು ಸೃಷ್ಟಿಸುವ ಕಾಲೇಜಾಗಿದೆ.

ಭ.ರಂ: ನೀವು ಉತ್ತರ ಜಿಲ್ಲೆ, ದಕ್ಷಿಣ ಜಿಲ್ಲೆ ಅಂತ ಹೇಳಿದಿರಲ್ಲಾ, ಚೆನ್ನೈ ಅಂತಹ ಜಾಗದಲ್ಲಿ ಜಾತಿ ಅಂತಹದ್ದನ್ನು ನೋಡುವುದು ಅಪರೂಪ, ಈ ಬಗ್ಗೆ ನಿಮ್ಮ ಅನುಭವ ಏನು?

ಪ.ರಂ: ಅಂತಹ discrimination ಇಲ್ಲಾಂತಲ್ಲ. ಅವು ಇಲ್ಲಿ ಬೇರೆ format ನಲ್ಲಿರುತ್ತೆ. ಮಾನವ ಸಮಾಜ ಸೃಷ್ಟಿಯಾದಾಗಿನಿಂದ ಅಂತಹ discrimination  ಬೇರೆಬೇರೆ format ಗಳಲ್ಲಿ ಪ್ರಕಟವಾಗುತ್ತೆ. ಉತ್ತರ ಜಿಲ್ಲೆಗಳ  modernity ಇಲ್ಲಿಯ ಪ್ರಾಕ್ಟೀಸ್ ಗಳನ್ನು modern ಆಗಿ ಬದಲಾಯಿಸುತ್ತದೆ. ಬೇರೆಬೇರೆ language ಅನ್ನು, ನೋಟಗಳನ್ನು ಪುನರ್ಸೃಷ್ಟಿ ಮಾಡುತ್ತದೆ. ಇಂತಹ modernityನ್ನು ಅವನು ಬೇರೆ ರೀತಿಯಲ್ಲಿ impose ಮಾಡ್ತಾನೆ. ಆದ್ದರಿಂದ ಗ್ರಾಮ, ನಗರ ಬೇರೆಬೇರೆಯೆಂದು ವಿಂಗಡಿಸಲು ಸಾಧ್ಯವಿಲ್ಲ. ನಗರಗಳಲ್ಲಿ ಪ್ರಮುಖವಾಗಿ ಕಾಣುವುದು class, ಗ್ರಾಮಗಳಲ್ಲಿ caste. ಇಲ್ಲಿ ಆ ಕ್ಲಾಸನ್ನು ಅರ್ಥಮಾಡಿಕೊಳ್ಳಬಹುದೇ? ಅವು ಒಳೊಳಗೆ ಕೆಲಸ ಮಾಡುತ್ತಿರುತ್ತವೆ. ಉದಾಹರಣೆಗೆ ಮುಸ್ಲೀಂಗಳಿಗೆ ಮನೆ ಬಾಡಿಗೆಗೆ  ಕೊಡದಿರುವುದು. non-vegನವರಿಗೆ ಮನೆ ಬಾಡಿಗೆಗೆ ಕೊಡದಿರುವುದು. non-veg ಆದರೆ ನೀವು beef ಅಡುಗೆ ಮಾಡುತ್ತೀರೊ ಇಲ್ಲವೋ ಎಂಬ ಪ್ರಶ್ನೆ ಕೇಳುವುದು. ಗ್ರಾಮಗಳಲ್ಲಿ open ಆಗಿ beef ಅಡುಗೆ ಮಾಡುತ್ತಾರೆ. ಇಲ್ಲಿ ಮರೆಮಾಚಿ ಮಾಡುತ್ತಾರೆ. ಹೀಗೆ ಮರೆಮಾಚುವುದೇ modernity. ಇಲ್ಲಿ ನನ್ನ ಮೊದಲು ನೋಡುವವರು ನೀನು ಬೆಳ್ಳಗಿದ್ದೀಯಾ, ಕಪ್ಪಗಿದ್ದೀಯಾ ಎಂದು ನೋಡುವುದಿಲ್ಲ. ಮೊದಲು ಮಾತನಾಡುವಾಗ `ನೀನು ಯಾರಪ್ಪಾ?” ಎಂದು ಕೇಳುತ್ತಾರೆ. ಆದರೆ ಹಳ್ಳಿಗಳಲ್ಲಿ ತಕ್ಷಣ ಗೊತ್ತಾಗುತ್ತದೆ. ಇವನು ಇಂತಹವನು, ಇಂತಹವರ ಮಗ ಎಂಬ ವಿವರಗಳೆಲ್ಲವೂ ತಿಳಿದುಹೋಗುತ್ತೆ.  ಇಲ್ಲಿ ಅದನ್ನು ತಿಳಿದುಕೊಳ್ಳುವುದಕ್ಕೆ ಒಂದು ಬಗೆಯಾಗಿ  ಮಾತನಾಡುವ method ಇದೆ. ಅದರಿಂದ ಅವರು ಸುಲಭವಾಗಿ ತಿಳಿದುಕೊಳ್ಳುತ್ತಾರೆ. ಈ ರೀತಿ ಅದನ್ನು ಕಂಡುಹಿಡಿಯಬಹುದು. ಆದರೆ ಅವೆಲ್ಲವನ್ನೂ ದಾಟಿ ಇಲ್ಲಿ ತಮ್ಮ identity ಬಿಟ್ಟುಕೊಡದೆ, ಮರೆಮಾಚಿ ಬಹಳಷ್ಟು ಜನ ವಾಸಿಸುತ್ತಾರೆ. ಆದ್ದರಿಂದ ಈ ಜಾತಿ ಎಲ್ಲಾ ಇಲ್ಲವೇ ಇಲ್ಲ, ಅಳಿಸಿಹೋಗಿವೆ ಎಂದೆಲ್ಲಾ ಹೇಳಲು ಸಾಧ್ಯವಿಲ್ಲ. ನನ್ನ ಅನಿಸಿಕೆ, ನಾನು ಯಾರೂ ಅಂತ ತಿಳಿದುಕೊಂಡು, ನನ್ನನ್ನು ನೀನು accept ಮಾಡಿಕೊಳ್ಳುತ್ತೀಯಲ್ಲಾ ಆಗಲೇ ಇದು ಅಳಿಸಿಹೋಗುವುದು ಎಂದು ಅಂದುಕೊಂಡಿರುವೆ. ಹಾಗೆ ನಾನು ಯಾರೆಂದು ತಿಳಿದ ಕೂಡಲೇ ನಮ್ಮ ನಡುವೆ ಸಣ್ಣ ಅಂತರ ಉಂಟಾದರೂ, ಗ್ರಾಮ, ನಗರ ಬೇರೆಬೇರೆ ಅಲ್ಲಎಂದು ಹೇಳಲಾಗದು.

ಭ.ರಂ: ಈಗ ನಿಮಗೆ accept ಮಾಡುವಹಾಗೆ ಒಂದು ಭಾವನೆ ಉಂಟಾಗುತ್ತಿದೆಯೇ? ಈಗ ನಿಮ್ಮ ಸಿನಿಮಾಗಳನ್ನು ಉತ್ತರ ಮತ್ತು ದಕ್ಷಿಣ ಭಾರತಗಳಲ್ಲಿ ನೋಡುತ್ತಿದ್ದಾರೆ.

ಪ.ರಂ: ಖಂಡಿತ. ವಿರೋಧಿಸುವಂತೆಯೇ, ಒಪ್ಪಿಕೊಳ್ಳುವ ಮನೋಧರ್ಮವೂ ಇಲ್ಲಿದೆ. ಒಟ್ಟಾರೆ ಮೂರು ತರಹದ ಮನೋಭಾವಗಳಿದೆ. ಒಂದು ವಿರೋಧಿಸುವುದು, ಮತ್ತೊಂದು ಯಾಕೆ ಇದರ ಬಗ್ಗೆ ಇನ್ನೂ ಮಾತನಾಡುತ್ತಿದ್ದೇವೆ ಎಂಬಂತಹದ್ದು, ಇನ್ನೊಂದು ಹೌದು ನೀನು ಮಾತನಾಡು ಎಂಬುದು.  ಈ ಮೂರು ಕಡೆಗಳಲ್ಲಿ ನನ್ನನ್ನು  discuss ಮಾಡುವಾಗಲೇ ನನ್ನನ್ನು accept ಮಾಡಿಕೊಂಡಂತೆ.  ನನ್ನ ಬಗ್ಗೆ ಮಾತನಾಡದೇ ಹೋದರೇನೇ ಸಮಸ್ಯೆ. ಮೊದಲು ನನ್ನನ್ನು ಬೈಯ ಬೇಕೆಂದೆನಿಸುತ್ತದೆ , ನಂತರ ನನ್ನನ್ನು ವಿಮರ್ಶಿಸಬೇಕೆನಿಸುತ್ತದೆ ಮೂರನೆಯದಾಗಿ ನನ್ನನ್ನು ಬೆಂಬಲಿಸಬೇಕೆನಿಸುತ್ತದೆ. ಈ ಮೂರು ಒಂದೇ ಸಮಯದಲ್ಲಿರುವಾಗ ಇದು ನನಗೊಂದು ಗೆಲುವು ಅಂದುಕೊಂಡಿರುವೆ.

ಭ.ರಂ: ನೀವು ಅಂಬೇಡ್ಕರ್, ಪೆರಿಯಾರ್ ಬಗ್ಗೆ ಮಾತನಾಡಿದಿರಿ. ನಂತರ ಅಮೇರಿಕಾದಲ್ಲಿ ನಡೆದ ಬ್ಲಾಕ್ ಮೂವ್ಮೆಂಟ್ ಬಗ್ಗೆ ಮಾತನಾಡಿದಿರಿ. ಆ exposure ನಿಮಗೆ ಯಾವಾಗ ದೊರಕಿತು?

ಪೆರಿಯಾರ್

ಪೆರಿಯಾರ್

ಪ.ರಂ: ಎಲ್ಲವೂ ಸಿನಿಮಾದಿಂದಲೇ. ನಾನು ನೋಡಿದ ಸ್ಪೈಕ್ ಲೀ(Spike Lee) ಅವರ  Malcom X  ಮತ್ತೆ ಪುಸ್ತಕಗಳನ್ನು  ಓದುವುದು, ನಾನು ನಿರಂತರವಾಗಿ  ಕಿರು ಪತ್ರಿಕೆಗಳನ್ನು ಬಹಳ ಓದುತ್ತಿದ್ದೆ. ಕಾಲಚ್ಚುವಡು, ತೀರಾನದಿ, ನಿಜ್ಹಲ್ ಮುಂತಾದವುಗಳನ್ನು. ಇಂತಹ ಪತ್ರಿಕೆಗಳು ಅನೇಕ ಸಾಹಿತ್ಯ, ರಾಜಕೀಯಕ್ಕೆ ಸಂಬಂಧಪಟ್ಟ ಮತ್ತು ದಲಿತ್ ಮೂವ್ಮೆಂಟ್ ಗಳಿಗೆ ಸಂಭಂದಪಟ್ಟ ವಿಷಯಗಳ ಬಗ್ಗೆ ಬರೆಯುತ್ತಿದ್ದವು ಮತ್ತು ಸಿನಿಮಾ ಸಂಬಂಧಪಟ್ಟ  ಪತ್ರಿಕೆಗಳು. ಆಗ ಸೆಂದಿಲ್ ನಾದನ್  ಸಹ ಒಂದು ಪತ್ರಿಕೆ ತರುತ್ತಿದ್ದರು. ಆಗಲೇ ವಿದೇಶದ ಚಿತ್ರಗಳನ್ನು ಅರ್ಥಮಾಡಿಕೊಳ್ಳುವ ಒಂದು ತಳಪಾಯ ಉಂಟಾಯಿತು. ವಿಶೇಷವಾಗಿ Alex Haley ಅವರ Roots ಪುಸ್ತಕ ಓದಿದಮೇಲೆ ನನ್ನ ಮನಸ್ಸಿನ ಮೇಲೆ ದೊಡ್ಡ ಪ್ರಭಾವ ಬೀರಿತು. ಈ ಖಂಡ ಬೇರೆ ಆ ಖಂಡ ಬೇರೆಯಾದರೂ ಅಲ್ಲೊಬ್ಬ ಇಲ್ಲಿ ನಾನು  ಬದುಕುವ ಬದುಕನ್ನು ಬದುಕಿದ್ದಾನೆ, ಅವನೂ ನನ್ನಂತೆಯೇ oppression ಗೆ ಒಳಗಾಗಿದ್ದಾನೆ. ಆದ್ದರಿಂದ ನನಗೆ ಬಹಳ ಸುಲಭವಾಗಿ black ನೊಂದಿಗೆ  connect ಮಾಡಿಕೊಳ್ಳಲು ಸಾಧ್ಯವಾಯಿತು. ಅವನು ಆ ಕಥೆಯಲ್ಲಿ ಪ್ರತಿ ಸಲ ಸಿಕ್ಕಿಹಾಕಿಕೊಳ್ಳುವುದು, ತಪ್ಪಸಿಕೊಳ್ಳುವುದು ಇವೆಲ್ಲ ನನಗೆ ಇಲ್ಲಿ ಭಾರತದ ಸ್ವಾತಂತ್ರ ಸಮರಕ್ಕೆ ಮುನ್ನ ಬ್ರಿಟೀಷ್ ಕಂಪನಿ  ಭಾರತೀಯರನ್ನು de-allocate ಮಾಡುತ್ತಾರೆ. ಇಲ್ಲಿಯ ಜನಗಳನ್ನು ಮಲೇಷಿಯಾ, ಫ್ಯುಜಿ, ಸಿಂಗಪೂರ್ ಮತ್ತು `ಮರಣ ರೈಲು ಹಾದಿ’ ಎಂದು ಹೇಳುತ್ತಾರಲ್ಲ ಅಲ್ಲಿಗೆ ಕಾರ್ಮಿಕರನ್ನು ಕರೆದೊಯ್ದದ್ದು. ಶ್ರೀಲಂಕಾಕ್ಕೆ ಬಹು ಸಂಖ್ಯೆಯಲ್ಲಿ ಜನಗಳನ್ನು Re-allocate ಮಾಡಿದ್ದು, ಇಂತಹ ಸಂಗತಿಗಳು ಮೊದಲೇ ನಡೆದಿವೆ. ಬಿಳಿಯರು ಕಪ್ಪು ಜನಗಳನ್ನು ಕರೆದುಕೊಂಡು ಬಂದು ದಬ್ಬಾಳಿಕೆಯಿಂದ ಅವರಿಂದ ಕೆಲಸ ಮಾಡಿಸಿಕೊಳ್ಳುವುದು ಎಲ್ಲವನ್ನೂ ಇಲ್ಲಿ ಹಾಗೆಯೇ apply ಮಾಡಿದ್ದಾರೆ. ಇದನ್ನು ಯೋಚಿಸುವಾಗ ಎರಡೂ ಒಂದೇ ತರಹ ಕಾಣಿಸಿತು. ನಂತರ blacks ನ ಗೆಲುವಿಗೆ ಮುಖ್ಯ ಕಾರಣವೇನು, ಅವರು ಜಗತ್ತಿನ ಪೂರ್ತಿ ಈಗ ಹರಡಿಕೊಂಡಿರಲು ಕಾರಣವೇನು ಎಂದು ಯೋಚಿಸಿದಾಗ, ಅವರು ಕಲೆಯನ್ನು ಬಲಿಷ್ಟವಾಗಿ ಬಳಸಿಕೊಂಡಿದ್ದಾರೆ. ಮಾವೋ ಆರ್ಟ್ ಅನ್ನು ಒಂದು ಪ್ರಮುಖವಾದ political weapon ಎಂದು ಹೇಳುತ್ತಾರೆ. ಅದನ್ನು ಸರಿಯಾಗಿ ಬಳಸಿಕೊಂಡವರು blacks. ಹಾಗೆ ನೋಡಿದರೆ ದ್ರಾವಿಡಿಯನ್ movement ಸಮಯದಲ್ಲೂ ಆರ್ಟ್ ಅನ್ನು ಬಹಳವಾಗಿ ಬಳಸಿಕೊಂಡಿದ್ದಾರೆ. ಸಮೀಪದಲ್ಲಿ ನಾನು ನ್ಯೂಯಾರ್ಕ್ ಹೋದಾಗ ಅಲ್ಲಿ blacks ಗೆಂದು ಮ್ಯೂಸಿಯಂಗಳಿದೆ. ಈ 400 ವರ್ಷದಲ್ಲಿ ಏನೇನು ನಡೆದಿದೆ, blacks ಏನೆಲ್ಲಾ ಮಾಡಿದ್ದಾರೆ ಎಂಬುದಕ್ಕೆ ದಾಖಲೆಗಳಿವೆ. ಅವುಗಳನ್ನು ಓದುವಾಗ ಆ visualsಗಳನ್ನು ನೋಡುವಾಗ ನಮ್ಮೊಳಗೊಂದು vibrations ಉಂಟಾಗುತ್ತದೆ. ಅಂತಹದ್ದನ್ನು ನಾವೇಕೆ ಇಲ್ಲಿ ಮಾಡಲು ಸಾಧ್ಯವಾಗಲಿಲ್ಲ, ಅಂತಹ ಆರ್ಟ್ ಅಥವಾ ಸಿನಿಮಾ ಇಲ್ಲೇಕೆ ಬರಲಿಲ್ಲ ಎಂಬ ಪ್ರಶ್ನೆ ನನ್ನೊಳಗೆ ಹುಟ್ಟಿಕೊಂಡಿತು. ಮತ್ತೆ ನಾನು ನೋಡಿದ ಮಹಮದಲಿ ಜೀವನಾಧರಿತ ಮೈಖೆಲ್ ಮನ್ನ್ (Maichel Mann)  ಅವರ ‘ಅಲಿ’ ಎಂಬ ಚಿತ್ರ, ಅದನ್ನು ಮುಂದುವರೆಸಿ ಅನೇಕ black ಚಿತ್ರಗಳನ್ನು ನೋಡುವಾಗ ಅವರು ಅವರ culture ಅನ್ನು ಒಂದು art weapon ಆಗಿ ಬಳಸಿಕೊಂಡದ್ದು ನನಗೆ ಬಹಳ ಹಿಡಿಸಿತು. ವಿಶೇಷವಾಗಿ ಮ್ಯೂಸಿಕ್. ಅದರಲ್ಲಿ ಅವರು ಮಾಡದ experiment ಗಳೇ ಇಲ್ಲ. jazz, rock, Pop ಮುಂತಾದವು. ಈಗ ಜಗತ್ತಲ್ಲಿ ಮ್ಯೂಸಿಕ್ ಎಂದರೆ blacks ಎಂದೇ ಹೇಳುವಂತಹ ಸ್ಥಿತಿಗೆ ಹೋಗಿದ್ದಾರೆ.  ಅವರಿಗಿಂತ ಮೊದಲು ಅಂತಹದಿತ್ತೇ ಎಂದರೆ, ಇರಲಿಲ್ಲ. ಅವರು ಆ ರೀತಿಯಲ್ಲಿ mainstream ಅನ್ನು capture ಮಾಡಲು ಸಾಧ್ಯವಾದಂತೆ ನಮ್ಮಿಂದ ಇಲ್ಲೇಕೆ ಆಗಲಿಲ್ಲ, ಮಾಡಬಾರದು ಎಂಬ ಆಲೋಚನೆಯೇ. Malcom Max ಗೂ Martin Luther King ಗೂ ಬಹಳ ವ್ಯತ್ಯಾಸವಿದೆ. ಆದರೆ ಇಬ್ಬರಿಗೂ ಒಂದೇ ರೀತಿಯ ಅಂತ್ಯ ದೊರಕುತ್ತದೆ. ಅದಕ್ಕೆ ನಾನು ಅನೇಕ ಸಲ ಯೋಚಿಸುತ್ತೇನೆ ನಾನೇಕೆ ಇಲ್ಲಿ black ಆಗಿಲ್ಲ, ಬಹುಶಃ ದಲಿತರು blacks ತರಹ ಆಗಿದ್ದರೆ, ಅವರಿಗೆ ಅಂತಹ ಗೆಲುವು ಸಿಗುತ್ತಿತ್ತೇನೋ. ಅಲ್ಲಿ ಒಂದು ಕೆಲಸಕ್ಕೆ ಹೋಗುವಾಗ ಒಬ್ಬ black ತಾನು  black ಎಂಬ ತಡೆಯನ್ನು ಒಡೆದು interview ಗೆ ಹೋಗಿ ಕೆಲಸಕ್ಕೆ ಸೇರಬಹುದು. ಇಲ್ಲಿ ಹಾಗಲ್ಲ ನಿನ್ನನ್ನು ನೀನು hide ಮಾಡಿಕೊಂಡು , ನೀನು ಇಲ್ಲಿ ಬದುಕಲು ಸಾಧ್ಯ. ಈ ದಬ್ಬಾಳಿಕೆಯನ್ನು ಅನುಭವಿಸಿಕೊಂಡೆ ನೀನು sophesticated ಆಗಿ ಬದುಕಲು ಸಾಧ್ಯ.  ಹೀಗೆ ಮರೆಮಾಚಿ ಬದುಕುವುದೇ ಈ opression ಅನ್ನು accept ಮಾಡಿಕೊಂಡು ಬದುಕಲೂಬಹುದು ಎಂಬುದೇ ದುರಂತ.

ಭ.ರಂ: ಹೀಗೆ ಅನೇಕರು ಸಿನಿಮಾದಲ್ಲಿ ತಮ್ಮನ್ನು ಮರೆಮಾಚಿಕೊಂಡು , ತಮಗೆ ಸಿನಿಮಾ ಮಾತ್ರವೇ ಮುಖ್ಯ ಎಂದು ಕೊಂಡಿದ್ದಾರೆ, ಹಾಗೆಯೇ ನೀವೂ ಇರಬಹುದಿತ್ತಲ್ಲಾ?

ಪ.ರಂ.: ಹಾಗಿದ್ದಿದ್ದರೆ ಇಂತಹದ್ದೊಂದು ಹೊರೆಯನ್ನು ಹೊರಬೇಕಾಗಿರಲಿಲ್ಲ ಅಲ್ಲವೇ.

ಭ.ರಂ: ಈಗ ನಿಮಗೆ ದೊರಕಿರುವ ಗೆಲುವು ನಿಮ್ಮ ವೈಯಕ್ತಿಕ ಗೆಲುವೇ ಅಥವಾ ಆ ಕಮ್ಯೂನಿಟಿಗೆ ದೊರಕಿದ ಗೆಲುವೇ?

ಪ.ರಂ.: ಇದು ಒಂದು ಸಮಾಜಕ್ಕೆ ದೊರಕಿದ ಗೆಲುವು. ಇಲ್ಲಿ ನಾನೆಂಬುದು ನಾನಲ್ಲ. ನಾನು ಒಂದು tool. ನಾನಿಲ್ಲದಿದ್ದರೂ ಇನ್ಯಾರೋ ಇದನ್ನು ಮಾತನಾಡಿರುವರು. ಇದು ಒಂದು oppressed ನ ಧ್ವನಿ. ಇಂದಲ್ಲ ನಾಳೆ ಸಿಡಿದೇ ಸಿಡಿಯುತ್ತದೆ.

ಭ.ರಂ: ನೀವು ಬರುವವರೆಗೆ ಯಾಕೆ ಇನ್ಯಾರೂ ಬರಲಿಲ್ಲ ?

ಪ.ರಂ: ಇದೊಂದು method ಅಷ್ಟೇ. ಈ philosophy ನನಗೆ ಹೊಳೆದಿದೆ, ಇನ್ಯಾರಿಗಾದರೂ ಹೊಳೆದಿರಲೂ ಬಹುದು. ಅವರು ಹೇಳದಿರುವುದಕ್ಕೆ ಕಾರಣ ಭಯವಾಗಿರಬಹುದು,  ಅಷ್ಟೇ. ಇಂದಿಗೂ ಅದನ್ನು ಹೇಳದೇ ಇರುವವರಿದ್ದಾರೆ.  ಕಾರಣ ಅವರ ಕೆಲಸ ಮಾಡುವ ಜಾಗದಲ್ಲಿ ಸಮಸ್ಯೆಗಳಿರಬಹುದು, ಒಂದು ಅಪಾರ್ಮೆಂಟ್ನಲ್ಲಿ ಎರಡು ಮನೆಗಳಿದ್ದರೆ ಕೆಲವು ವಿಷಯಗಳನ್ನು ಹೇಳಿಕೊಳ್ಳದಿದ್ದರೆ ಒಳ್ಳೆಯದು ಅಂದಣಿಸುವಂತೆ. ಇಂತಹ ಅವಶ್ಯಕತೆಗಳಿರುವುದರಿಂದಲೇ  ಅವರು ಹೇಳದಿರಲು ಸಾಧ್ಯ ಅಂತ ನನ್ನ ಅನಿಸಿಕೆ.

ಭ.ರಂ: ನೀವು Malcom X ಬಗ್ಗೆ ಮಾತನಾಡಿದಿರಿ. ಮೊದಲ ಸಲ ಕೇಳ್ತಾ ಇರೋದು.  ಸಾಮಾನ್ಯವಾಗಿ ನೀವು ಸಿನಿಮಾ ಬಗ್ಗೆ ಮಾತನಾಡುವಾಗ, The Battle of Algiers ಬಗ್ಗೆ ಮಾತಾಡ್ತಾ ಇದ್ರಿ. ಇವೆಲ್ಲ ಕಾಲೇಜಿನಲ್ಲಿ ನೋಡಿದ್ದಾ?

ಪ.ರಂ: ನಾನು ಸಿನಿಮಾಗಳನ್ನು ಒಂದೇ ಒಂದು ಸಲ ನೋಡೋದು. ಆದರೆ ಇದನ್ನು ಅನೇಕ ಸಲ ನೋಡಿದ್ದು. ನನ್ನ ಸಿನಿಮಾಗಳನ್ನೂ ಸಹ ಸಿನಿಮಾ ಮುಗಿಯುವವರೆಗೆ ಮಾತ್ರ ನೋಡೋದು. ನಂತರ ನೋಡೋದಿಲ್ಲ. ಕಾರಣ ನನಗೆ ನನ್ನ ಸಿನಿಮಾಗಳನ್ನು ನೋಡಲು ಹೆದರಿಕೆಯಾಗುತ್ತದೆ.  ಮತ್ತೆ ಮತ್ತೆ ನೋಡುವಾಗ, ನನ್ನ ತಪ್ಪುಗಳನ್ನು ಎತ್ತಿ ತೋರಿಸುತ್ತದೆ. ಅವುಗಳಿಂದ ಹೊರ ಬರುವುದೇ ನನಗೊಂದು ದೊಡ್ಡ ಸಮಸ್ಯೆಯಾಗುತ್ತದೆ.  ಆದರೆ ಒಂದೆರಡು ವರ್ಷ ಕಳೆದ ಮೇಲೆ  ನೋಡುತ್ತೇನೆ. ಹಾಗೆ ನೋಡುವಾಗ `ಪರವಾಗಿಲ್ಲ ಒಳ್ಳೆಯ ಸಿನಿಮಾವನ್ನೇ ಮಾಡಿದ್ದೀಯಾ” ಎಂಬಂತಹ ಒಂದು ಭರವಸೆಯನ್ನು ನನ್ನ ಸಿನಿಮಾಗಳು ನೀಡಿವೆ.  ನನ್ನ all time favourite ಅಂದರೆ  Gillo Pontecorvo ನಿರ್ದೇಶನದ Battle of Algiers’’. 1963 ರ ಸಮಯದಲ್ಲಿ ಆ ಸಿನಿಮಾ ಮಾಡಲಾಯಿತು. ಆ  ಕಾಲಘಟ್ಟದಲ್ಲಿ colony ಯ ದಬ್ಬಾಳಿಕೆಗೆ ಒಳಗಾದ Algiers ರನ್ನು ಸದೆಬಡಿವಾಗ ನಡೆವ ಹೋರಾಟ. French ದಬ್ಬಾಳಿಕೆಗೆ ಎದುರಾಗಿ Algiers ನಡೆಸಿದ ಹೋರಾಟ ಇದೆಯಲ್ಲ ಅದೇ oppression ಬಗ್ಗೆಯ ಉನ್ನತ ಹೋರಾಟವಾಗಿ ನಾನು ನೋಡುತ್ತೇನೆ. ಆ ಹೊರಾಟವನ್ನು ನೋಡಿದಾಗ ಶ್ರೀಲಂಕಾದ ಹೋರಾಟವನ್ನು ನನ್ನಿಂದ connect ಮಾಡಿಕೊಳ್ಳಲೂ ಸಾಧ್ಯವಾಯಿತು. ಮತ್ತು technically ಬಹಳ strong ಆದ ಸಿನಿಮಾ. ಅದರಲ್ಲಿ ಒಂದು oppressed ಜನಾಂಗದ ನೋವನ್ನು ಬಹಳ ಸೂಕ್ಷ್ಮವಾಗಿ ಹಿಡಿದಿಟ್ಟಿರುವುದು ಬಹಳ ಮುಖ್ಯ. ಕೇವಲ ಅವರ ನೋವುಗಳನ್ನು, suffereing ಗಳನ್ನು ಮಾತ್ರವೇ ತೋರಿಸದೆ ಆ oppressed class ಎದುರು ನಿಂತು ಹೋರಾಡುವುದರಿಂದಲೇ ಆ ಸಿನಿಮಾ ನನಗೆ ಬಹಳ ಇಷ್ಟ.

The Battle of Algiers ಚಿತ್ರದ ದೃಶ್ಯ

The Battle of Algiers ಚಿತ್ರದ ದೃಶ್ಯ

ಭ.ರಂ: ನೀವು ಓದಿದ ಪುಸ್ತಕ, ನೋಡಿದ ಸಿನಿಮಾ ಎಲ್ಲವೂ ಈ ರೀತಿಯಾಗಿ seriouss ಅದದ್ದೇನಾ ಇಲ್ಲ light hearted ಸಹ  ಇತ್ತೇ?

ಪ.ರಂ: ನನಗೆ ವೆನ್ನಿರ ಇರವುಗಲ್ ಬಹಳ ಹಿಡಿಸಿದ ಪುಸ್ತಕ. ಮತ್ತೆ Alchemist ಬಹಳ ಇಷ್ಟವಾದ ಮತ್ತೊಂದು ಪುಸ್ತಕ. ಅದನ್ನು ಓದಿರುವೆ. ನಂತರ ಅವರ  ಇನ್ಯಾವ ಪುಸ್ತಕಗಳು ನನಗೆ ಅಷ್ಟಾಗಿ ಹಿಡಿಸಲಿಲ್ಲ. Marquez Gabriel Garcia ನನಗೆ ಬಹಳ ಇಷ್ಟ. ಅವರ magicl realism ಅನ್ನು ಬಹಳ ಇಷ್ಟಪಡುತ್ತೇನೆ. ರವಿಕುಮಾರ್ ಅನುವಾದ ಮಾಡಿರುವ ವೆಳಿಚ್ಚಮುಮ್ ತಣ್ಣೀರ್ ಮಾದಿರಿತ್ತಾನ್ (ಬೆಳಕೂ ನೀರಿನಂತೆಯೇ) ಎಂಬ ಸಣ್ಣಕಥೆ ಬಹಳ ಇಷ್ಟ. ರಷ್ಯನ್ ಸಾಹಿತ್ಯಗಳು, Anna Karenina, ಪ್ರೇಮಕಥೆಗಳೆಲ್ಲವೂ ನನಗೆ ಬಹಳ ಇಷ್ಟ. ಅಂತಹ ಸಾಹಿತ್ಯಗಳು ಬಹಳ ಹಿಡಿಸಿದವು ಇವೆ. ಅಂತಹ ಸಾಹಿತ್ಯಗಳನ್ನು ಓದಿದ್ದರೂ  ಸಹ ನನಗೆ political ಸಾಹಿತ್ಯ ಬಹಳ ಮುಖ್ಯ ಅನಿಸುತ್ತೆ. ಕಾರಣ ನಾನು ಬದುಕುತ್ತಿರುವ ಪರಿಸರ ನನ್ನನ್ನು ಅದರೊಳಗೊಂದನ್ನು ಹುಡುಕಲು ಪ್ರೇರಿಪಿಸಿತು. ಬಹಳ romantic ಸಿನಿಮಾಗಳೂ ಇಷ್ಟ. Roberto Benigni ನಿರ್ದೇಶನದ Life is Beautiful, Giuseppe Tornatore ನಿರ್ದೇಶನದ Cinema Paradiso, Majid Majidi ನಿರ್ದೇಶನದ Colour of Paradise ಮತ್ತು Baran. Baran ಅದು ಪ್ರೇಮ ಕತೆಯಾದರೂ ಬದುಕೇ ಒಂದು political sense  ಜತೆಯಲ್ಲಿಯೇ ಇರುತ್ತೆ. ಇಷ್ಟೆಲ್ಲಾ ಹಿಡಿಸಿದ ಸಿನಿಮಾಗಳಿದ್ದರೂ, ನಾನೇನು ಮಾಡುತ್ತೇನೆ ಎಂಬುದು ನನಗೆ ಮುಖ್ಯವಾಗುತ್ತದೆ. ನನಗೆಂದು ಒಂದು ಅವಶ್ಯಕತೆ ಇದೆಯಲ್ಲಾ, ಅದನ್ನು ಮಾಡಬೇಕೆಂದೆ ನಾನು ನಿರ್ಧಾರ ಮಾಡಿಕೊಂಡಿರುವುದು. ನಾನು ಮಾಡುವ  ಸಿನಿಮಾಗಳನ್ನು ಬೇರೆ  ಇನ್ಯಾರೂ decide ಮಾಡಬಾರದೆಂಬ ವಿಷಯದಲ್ಲಿ ನಾನು ಬಹಳ ಸ್ಪಷ್ಟವಾಗಿದ್ದೇನೆ.

ಭ.ರಂ: ನೀವು caste less society ಬಗ್ಗೆ ಬಹಳ ambition ಇಟ್ಟುಕೊಂಡಿದ್ದೀರಿ. ಆದರೆ `ದಲಿತ್’ ಎಂಬುದನ್ನು ಒಂದು caste ಆಗಿ ಮಾಡಿಬಿಟ್ಟಿದ್ದಾರೆ, ರಂಜೀತ್ ಅಂದರೆ ದಲಿತ್ ಸಿನಿಮಾಗಳೇ ಅಂತ ಬ್ರಾಂಡ್ ಮಾಡಿದ್ದಾರೆ. ಅದನ್ನು ಹೇಗೆ ನೋಡುತ್ತೀರಿ?

ಪ.ರಂ:  ಇದೊಂದು ದೊಡ್ಡ ವ್ಯಂಗ್ಯ. ಇದನ್ನು ಅರ್ಥ ಮಾಡಿಕೊಳ್ಳಲು ಅಧ್ಯಯನ ಮಾಡಬೇಕಾದ ಅವಶ್ಯಕತೆ ಇದೆ.  ನಾನು ದಲಿತರಿಗೆ ಬೆಂಬಲವಾಗಿ ಮಾತನಾಡುತ್ತೇನೆ ಅಂದರೆ, ನನಗೆ ದಲಿತ ಹಿನ್ನೆಲೆ ಇರುವುದು ಕಾರಣವಾಗಿರಬಹುದು. ಇಲ್ಲಿ ಬರೆಯದ ಕಥೆಗಳ ಬಗ್ಗೆಯೂ, ಹೇಳದ ಮನುಷ್ಯರ ಬಗ್ಗೆಯೂ ಹೇಳಲು ಬಯಸುತ್ತೇನೆ. ಇಲ್ಲಿ representation ಬಹಳ ಪ್ರಮುಖವಾದದ್ದು. ಈ ಸಮಾಜದಲ್ಲಿ ಹಲವಾರು ಜನಾಂಗಗಳು ಬದುಕುತ್ತಿವೆ, ಅಂತಹದ ಸಮಯದಲ್ಲಿ ನಾನು ಸಿನಿಮಾ ಮಾಡುವಾಗ  ನನ್ನ representation ಏನು ಎಂದು ನನ್ನನ್ನೇ ಪ್ರಶ್ನಿಸಿಕೊಳ್ಳುತ್ತೇನೆ. ಒಟ್ಟಾರೆ  ಇವರು ಮನುಷ್ಯರೇ ಅಲ್ಲ ಎಂಬ ನಿಮ್ಮ portrait ಇರುವಾಗ ನಾನು ಅದು ಯಾಕೆ ಹಾಗೆ ಎಂದು ಪ್ರಶ್ನೆ ಕೇಳುತ್ತೇನೆ. ಅದನ್ನು ಎದುರಿಸುವ ಮನೋಭಾವ ನಿನ್ನ ಜಾತಿಯ ಸ್ವಭಾವ ಅಲ್ಲ ಎಂದು ಹೇಳಿದರೆ ಅದನ್ನು ಮರುವಿಚಾರಣೆಗೆ ಒಳಪಡಿಸಬೇಕೆಂಬುದೇ ನನ್ನ ವಾದ. ಮೊದಲು ನಿನಗೆ ಇದರ ಬಗ್ಗೆ understanding ಗೇ ಇಲ್ಲ. ಹಾಗೆ understanding ಇರುವವರ ಬಳಿ ನಾನು ಪ್ರಶ್ನೆ ಕೇಳಬೇಕಾಗುತ್ತದೆ, ಪೆರಿಯಾರ್ ಮತ್ತು ಅಂಬೇಡ್ಕರನ್ನು ನೀವು ಹೇಗೆ ನೋಡುತ್ತೀರಿ ಎಂದು. ಅಂಬೇಡ್ಕರ್ ಒಂದು oppressed class ಛಿಟಚಿss ನಿಂದ ಬಂದವರು ಎಂಬ ಕಾರಣಕ್ಕೆ ನೀವು ಅವರನ್ನು ಜಾತೀಯ ಮನೋಭಾವ ಉಳ್ಳ ವ್ಯಕ್ತಿ ಎಂದು ನೋಡಿದರೆ, ಹಾಗೆಯೇ ಪೆರಿಯಾರ್ ಉನ್ನತ ಜಾತಿಯಿಂದ ಬಂದು, oppressed classಗಾಗಿ ಮಾತನಾಡಿದರೆ, ಅವರು ಒಟ್ಟು ಮೊತ್ತ  ಜನಗಳಿಗಾದ ವ್ಯಕ್ತಿಯಾಗುತ್ತಾರೆ ಅಂದು ನೀವಂದುಕೊಳ್ಳುವಾಗ  , ಆಗ ಸಮಸ್ಯೆ ಎಲ್ಲಿದೆ ಎಂದು ಯೋಚಿಸಿ. ಅಂಬೇಡ್ಕರ್, ಪೆರಿಯಾರ್ ಇಬ್ಬರೂ ಒಟ್ಟು ಮಾನವ ಜನಾಂಗಕ್ಕಾಗಿ ಮಾತನಾಡಿದ್ದಾರೆ. ಮಾನವ ಜನಾಂಗದಲ್ಲಿರುವ ರೋಗವನ್ನು ನಿವಾರಿಸುವ ಬಗ್ಗೆ ಮಾತನಾಡಿದ್ದಾರೆ. ಇದರಲ್ಲಿ ಒಂದು ಕಡೆ ಒಲವು, ಮತ್ತೊಂದು ಕಡೆ ಇಲ್ಲ ಎಂಬುದೆಲ್ಲಾ ಇಲ್ಲವೇ ಇಲ್ಲ. ನೀನು ಒಂದು ಗುಂಪಿನಿಂದ ಬಂದಿದ್ದೀಯಾ ಆದ್ದರಿಂದ ಅದರ ಪರವಾಗಿ ಮಾತನಾಡುತ್ತಿದ್ದೀಯಾ  ಎಂದರೆ ಹೇಗೆ? ಯಾರು ಆ ಗುಂಪಿನ ಬಗ್ಗೆ ಮಾತನಾಡಲೇ ಇಲ್ಲವಲ್ಲಾ. ಹಾಗೆ ಅಂದುಕೊಂಡರೆ ಅದು ನಿನ್ನ ಆಲೋಚನೆಯಲ್ಲಿರುವ ಅಡಚಣೆ ಎಂಬುದು ನನ್ನ ಅನಿಸಿಕೆ. ಅದನ್ನು ಸರಿಮಾಡಿಕೊಳ್ಳಲು ನೀನು ಮೊದಲು ಪ್ರಯತ್ನಪಡಬೇಕು. ಮಾರ್ಕ್ಸ್ ಯಾರು, ಅವರಿಗೂ ಈ ಮಣ್ಣಿಗೂ ಏನು ಸಂಬಂಧ, ಅವರನ್ನು ನಾವು ಹೇಗೆ ಈ ಮಣ್ಣಿನಲ್ಲಿ fix ಮಾಡಲು ಪ್ರಯತ್ನಿಸುತ್ತೇವೆ. ಮಾರ್ಕ್ಸ್ ಒಬ್ಬ ಯಹೂದೀ ಅಂತ ಗೊತ್ತು,. ಆದ್ದರಿಂದ ಅವರು ಯಹೂದಿಗಳ ಪರ ನಿಂತು ಮಾತನಾಡುತ್ತಿದ್ದಾರೆ ಎಂದು ಹೇಳಲು ಸಾಧ್ಯವೇ? ಹಾಗಲ್ಲವಲ್ಲ. ಅವೆಲ್ಲವನ್ನೂ ದಾಟಿ ಇಡೀ ಮಾನವ ಜನಾಂಗಕ್ಕೆ ಬೇಕಾದ ಒಂದು ಸಾಮಾನತೆಯ ತತ್ವವನ್ನು ಮಾತನಾಡುತ್ತಾರೆ. ಅವರು ಒಂದು ಉನ್ನತ ಜನಾಂಗದಿಂದ ಬಂದು ಮಾತನಾಡುವುದರಿಂದಲೇ ಇದು ಒಟ್ಟು ಮೊತ್ತ ಮಾನವ ಜನಾಂಗಕ್ಕೆ ಸೇರಿದ್ದು ಎಂದು ನೀನು ಹೇಳುತ್ತೀಯ, ಅದೇ ಅಂಬೇಡ್ಕರ್ oppressed class ನಿಂದ ಬಂದದ್ದರಿಂದ ಅವರು ಮಾತನಾಡುವ ಎಲ್ಲವೂ ಕೇವಲ ಶೋಷಣೆಗೆ ಒಳಗಾದ ಜನಕ್ಕಾಗಿ ಮಾತ್ರವೇ ಎಂದು ನೀನು ಅಂದುಕೊಳ್ಳುತ್ತೀಯ ಅಂದರೆ ಸಮಸ್ಯೆ ಮಾರ್ಕ್ಸ್ ಅಥವಾ ಪೆರಿಯಾರ್ ಬಳಿಯೋ ಇಲ್ಲ, ಅದನ್ನು ಹಿಂಬಾಲಿಸುವವರ ಬಳಿ ಇದೆ ಎಂದು ಅಂದುಕೊಂಡಿರುವೆ.

ಭ.ರಂ: ತಮಿಳು ಸಿನಿಮಾದಲ್ಲಿ ನಿಮ್ಮನ್ನು ಹೇಗೆ ನೋಡುತ್ತಾರೆ, ಒಬ್ಬ outsider ಆಗಿ ನೋಡುತ್ತಿದ್ದಾರೆಯೇ ಅಥವಾ, ಇವರನ್ನು direct ರಾಗಿ ಮಾಡಿದರೆ ಜನ controversioal ಆಗಿ ನೋಡುತ್ತಾರೆಯೇ , ಏನಾದರೂ ಆಗಲಿ ಸಿನಿಮಾ ಚೆನ್ನಾಗಿ ಹೋದರೆ ಸಾಕು ಅಂತ ಅಷ್ಟರ ಮಟ್ಟಿಗಷ್ಟೇ  ನೋಡುತ್ತಾರೆಯೇ?

ಪ.ರಂ: ಇಲ್ಲಿ ಬಹಳ ಪ್ರಮುಖವಾದದ್ದು , ಗೆಲುವು , ಕಮರ್ಷಿಯಲ್ ಗೆಲುವು. ಅದೇ ಮುಖ್ಯ. ನೀನು ಏನನ್ನಾದರೂ ಮಾತನಾಡಬಹುದು, ಸಿನಿಮಾ ಗೆಲ್ಲಬೇಕು. ಸಿನಿಮಾ ಗೆದ್ದರೆ ಇಲ್ಲಿ ಯಾವ ಸಮಸ್ಯೆಯೂ ಇಲ್ಲ. ಅಟ್ಟ ಕತ್ತಿ ಸಿನಿಮಾದಲ್ಲಿ ನಾನು ಏನು ಮಾಡಿದೆ ಅಂತ ಗೊತ್ತು, ಅದರಿಂದಲೇ ನನಗೆ ಮದ್ರಾಸ್, ಅದರಿಂದ ಕಬಾಲಿ ಸಿನಿಮಾ ದೊರಕಿತು. ಕಬಾಲಿಯಿಂದ ಕಾಲ ದೊರಕಿತು. ಈಗ ಅದರಿಂದ ಹಲವು ಸಿನಿಮಾಗಳು ದೊರಕಿವೆ. Content ಬಗ್ಗೆ Controversy ಖಂಡಿತ ಉಂಟಾಗುತ್ತೆ. ಬಹಳ ಜನ ಇವನೇಕೆ ಇಲ್ಲಿ ಬಂದು ಇದನ್ನೆಲ್ಲಾ ಮಾತನಾಡುತ್ತಿದ್ದಾನೆ, ಅಂತಹದ್ದೇನು ಇಲ್ಲಿಲ್ಲವಲ್ಲ ಎಂದು ಹೇಳುವವರಿದ್ದಾರೆ. ಕೆಲವರು ಹೆದರಿದ್ದಾರೆ. ಸಿನಿಮಾದಲ್ಲಿ ಇವನ್ನೆಲ್ಲಾ ಮಾತನಾಡುವುದರಿಂದ ಏನು ನಡೆಯಲು ಸಾಧ್ಯ, ಏನೂ ಇಲ್ಲ, ಇಂತಹ ಅನೇಕ discussionಗಳು ನಡೆದಿವೆ. ಆದರೆ ನಾನು ಏನಂದುಕೊಂಡಿರುವೆ, ಇದೊಂದು ಸಿನಿಮಾ ಅನ್ನುವುದಕ್ಕಿಂತ ನಾನು ಪ್ರಾಮಾಣಿಕವಾಗಿರಬೇಕೆಂದು ಕೊಂಡಿದ್ದೇನೆ. ಆ ಪ್ರಾಮಾಣಿಕತೆಯನ್ನು ನಾನು ನಿರೂಪಿಸುವಾಗ ಖಂಡಿತ ನನಗೆ ಸಿನಿಮಾ ದೊರಕುತ್ತದೆ. ಮತ್ತೆ ನನ್ನ ಬಗ್ಗೆ ಯಾರು ಏನು ಮಾತನಾಡಿಕೊಳ್ಳುತ್ತಾರೆ ಎಂಬುದರ ಬಗ್ಗೆ ನಾನು ಚಿಂತೆ ಮಾಡುವುದಿಲ್ಲ. ನನ್ನ ಸಿನಿಮಾದಲ್ಲಿ ನಾನು ಹೇಳಬೇಕಾದ ರಾಜಕೀಯವನ್ನು ಹೇಳಬೇಕು ಎಂಬುದರ ಬಗ್ಗೆ ನಾನು ಬಹಳ ಬಹಿರಂಗವಾಗಿದ್ದೇನೆ. ಮರೆಮಾಚಿ ಮಾತಾಡಿದ್ದೋ, ಸುಳ್ಳು ಹೇಳಿ ಒಂದು ಸಿನಿಮಾವನ್ನು ಪಡೆದುಕೊಂಡದ್ದೋ ಇಲ್ಲ. ಆದ್ದರಿಂದ ನೀನು ನನ್ನ ಬಗ್ಗೆ ಏನೆಂದುಕೊಂಡಿರುವೆ ಎಂಬುದರ ಬಗ್ಗೆ ನಾನು ಆಲೋಚಿಸಲಿಲ್ಲ ಅಂದುಕೊಂಡಿರುವೆ. ಆ ಬಗ್ಗೆ ನಾನು ಚಿಂತೆ ಮಾಡುವುದಿಲ್ಲ.

ಭ.ರಂ: ನೀವು ನಿಮ್ಮನ್ನು ಒಬ್ಬ film maker ಆಗಿ ನೋಡುತ್ತೀರೋ ಅಥವಾ ಸಿನಿಮಾವನ್ನು ಒಂದು ಸಾಧನವಾಗಿ ಬಳಸಿಕೊಳ್ಳುವ ಒಬ್ಬ social activist ಆಗಿ ನೋಡುತ್ತೀರೋ?

ಪ.ರಂ; ಇದೊಂದು ಪ್ರಮುಖವಾದ ಪ್ರಶ್ನೆ ಅಂದುಕೊಂಡಿದ್ದೇನೆ. Basically ನಾನು ನನ್ನನ್ನು ಒಬ್ಬ Artist ಆಗಿ ನೋಡಲು ಬಯಸುತ್ತೇನೆ. ಅದಕ್ಕೆ ಬಹಳ ಪ್ರಯತ್ನ ಮಾಡುತ್ತಿರುವೆ. ಆದರೆ ನನ್ನ art ಏನು ಮಾಡುತ್ತಿದೆ ಎಂಬುದನ್ನೂ ನಾನು ಮುಖ್ಯವಾಗಿ ಗಮನಿಸುತ್ತಿದ್ದೇನೆ. ಸಿನಿಮಾದ ಬಗ್ಗೆ ಒಂದು passion ಇಲ್ಲದೆ ಈ industry ಗೆ ಬರಲು ಸಾಧ್ಯವಿಲ್ಲ. ನೀನು ಒಬ್ಬ artist ಆಗಿರು ಎಂದು ಮನಸ್ಸು ಹೇಳುತ್ತದೆ, ಆದರೆ ಅದನ್ನೂ ದಾಟಿ ನನ್ನ content ಹೊರಗೆಲ್ಲೋ ಹೋಗಿ reach ಆಗುತ್ತಿದೆ. ನಾನು ಒಂದು ಸಿನಿಮಾವನ್ನು ಹೇಗೆ design ಮಾಡುತ್ತೇನೆ ಅದನ್ನು ಹೇಗೆ present ಮಾಡುತ್ತೇನೆ ಎಂಬುದನ್ನೆಲ್ಲಾ ದಾಟಿ ನನ್ನ ಕೆಲವು ಮಾತುಗಳು pop ಆಗಿ ಬಹಳ ಜನರನ್ನು reach ಆಗುತ್ತಿದೆ. ಆದರೆ ನನ್ನ ಕಲಾತ್ಮಕತೆಯ ಬಗ್ಗೆಯೋ ಸಿನಿಮಾ structure ಬಗ್ಗೆಯೋ ಇಲ್ಲಿ ಮಾತನಾಡುವುದು ಬಹಳ ಕಡಿಮೆ. ಆದರೆ ನನಗನ್ನಿಸಿದಂತೆ ನಾನು ಸರಿಯಾಗಿಯೇ ಇದ್ದೇನೆ. ಂAs a Film maker ನಾನು ನನ್ನ ಸಿನಿಮಾದಲ್ಲಿ ಏನನ್ನು ಹೇಳಬೇಕೆಂಬುದು ನನಗೆ ಚೆನ್ನಾಗಿ ಗೊತ್ತಿದೆ. ಈಗ ನಾವು ಚೈನಾದ ನಿರ್ದೇಶಕ ‘ವಾಂಗ್ ಕಾರ್-ವಾಯ್’(Wong Kar-wai) ಬಗ್ಗೆ ಮಾತನಾಡುವ, ಅವರು ಒಂದು melodrama ಕಥೆ ಹೇಳುವ ವ್ಯಕ್ತಿ. ಅವರ ಕಥೆಗಳಲ್ಲಿ ಬಹಳ ಮಾನವ ಭಾವನೆಗಳ ಬಗ್ಗೆ ಮಾತನಾಡುತ್ತಾರೆ. ಅವರನ್ನು ಹೋಗಿ ನೀವು ಒಬ್ಬ psychologist ಆ ಎಂದು ಕೇಳಿದರೆ ಅವರಿಗೆ ಕೋಪ ಬರಬಹುದು. ನೀವು film maker ಆ ಅಥವಾ psychologist ಆ? ಅಂದರೆ ಸರಿಯಲ್ಲ. ಅವರು ಸಿನಿಮಾದ ಮೂಲಕ ಮಾನವ ಮನೋಜಂಜಾಟಗಳ ಬಗ್ಗೆ ಮಾತನಾಡುತ್ತಾರೆ. ಹಾಗೆಯೇ ನಾನೂ ಸಹ ನನ್ನ ಸಿನಿಮಾಗಳಲ್ಲಿಯೂ ಸಹಾ ಅದೇ ಮಾನವ ಭಾವನೆಗಳ ಬಗ್ಗೆಯೇ ಮಾತನಾಡುತ್ತಿದ್ದೇನೆ. ಆದರೆ ಅದೇ ಭಾವನೆಗಳ ಒಳಗೆ ಇರುವ ಜಾತಿಯ ಭಿನ್ನತೆಗಳ ಬಗ್ಗೆಯೂ ವರ್ಗ ಭಿನ್ನತೆಗಳ ಬಗ್ಗೆಯೂ ಮಹಿಳೆಯರ ಬಗ್ಗೆಯ ಸ್ವಮೌಲ್ಯಗಳ ಬಗ್ಗೆಯೂ ಮಾತನಾಡುವಾಗ ನನ್ನೆದುರು ಇರುವವನು ಮೊದಲು ಕೋಪಿಸಿಕೊಳ್ಳುತ್ತಾನೆ. ಇವನು ಯಾಕೆ ನನ್ನ ಬಗ್ಗೆ ಮಾತನಾಡುತ್ತಾನೆ, discussion ಮಾಡುತ್ತಾನೆ, ಬೈಯುತ್ತಿದ್ದಾನೆ ಎಂದು ಕೋಪಿಸಿಕೊಳ್ಳುವಾಗ ಅದು ಸಿನಿಮಾದಿಂದ ದೂರವಾಗಿ  ವೈಯಕ್ತಿವಾಗುತ್ತದೆ, ಹಾಗೆ ವೈಯಕ್ತಿಕಾವಾಗುವಾಗಲೇ ನನ್ನ ವಿಚಾರವೂ ಅವನ ವಿಚಾರವೂ ಮಾತನಾಡಿಕೊಳ್ಳುತ್ತವೆ. ಆಗ ಅದು ನನ್ನನ್ನು ವಿರೋಧಿಸಲಿಕ್ಕೂ , ಎದುರಿಸಲಿಕ್ಕೂ  ಬಳಸಿಕೊಳ್ಳುತ್ತಾನೆ. ಇದನ್ನು ನಾನು ಒಂದು artistic environment ನೊಳಗೆ ಅವು expand ಆಗುತ್ತಿವೆ ಎಂಬುದು ಸಂತೋಷಕರವಾದ ವಿಷಯವೇ.

Wang Kar Wai

Wang Kar Wai

ಭ.ರಂ: ಇದೇ ಪ್ರಶ್ನೆಯನ್ನು ನಾನು ಬೇರೆ ರೀತಿ ಕೇಳುತ್ತೇನೆ. ನೀವು ಫಿಲ್ಮ್ ಮೇಕರಾ ಸೋಶಿಯಲ್ ಆಕ್ಟಿವಿಸ್ಟಾ ಅನ್ನುವ ಬದಲು ಕೇವಲ ಆರ್ಟಿಸ್ಟಿಕ್ಕಾಗಿ ವೆನ್ನಿರ ಇರವುಗಳ್ ಅಂತಹ ಸಿನಿಮಾ ಮಾಡುವ ಆಸೆ ಇದೆಯೇ? ಕೇವಲ ಒಂದು ಲವ್ ಸ್ಟೋರಿ.

ಪ.ರಂ: ನಾನು ಮಾಡುವುದೇ ಆರ್ಟ್.  ಮತ್ತೊಂದು, ಈ ಜಗತ್ತಲ್ಲಿ ಯಾವ ರಾಜಕೀಯ ಹಿನ್ನೆಲೆಯೂ ಇಲ್ಲದೆ ಯಾವ ಸಂಗತಿಗಳೂ ನಡೆಯುವುದೇ ಇಲ್ಲ. ಬಹಳ ಸಿಂಪಲ್ ಆಗಿ ಹೇಳುವುದಾದರೆ, `ಒಂದು ಊರಲ್ಲಿ ಒಂದು ಮರ ಇದೆ. ಅದು ಏನಾಗಿದೆ ಅಂತ ನಾನು ಯೋಚಿಸುತ್ತೇನೆ. ಸಾಮಾಜಿಕ ನೋಟವನ್ನು ಮರೆತವನಿಂದ ಮಾತ್ರವೇ ಒಂದು ಮರವನ್ನು ಮರವಾಗಿ ಮಾತ್ರವೇ ನೋಡಲು ಸಾಧ್ಯ. ಅವನು ಕುರುಡ. ನಮ್ಮೂರಲ್ಲಿ ಒಂದು ಒಂಟಿ ತಾಳೆ ಮರವಿದೆ. ಅದನ್ನು ಬಾರಿ ಲಾಂಗ್ ಶಾಟ್ನಲ್ಲಿ ತೋರಿಸಿದರೆ ಸಾಲದು. ಅದರ ಹಿಂದೆ ಬಹಳ ಕತೆಗಳಿರುತ್ತವೆ. ಒಂಟಿ ತಾಳೆ ಮರ ಅಂದರೆ ಅಲ್ಲಿ ದೆವ್ವ ಇರುತ್ತೆ. ಆ ಮನುಷ್ಯ ಯಾರು. ಅವನು ಯಾವಾಗ ಸತ್ತ…ಹೀಗೆಲ್ಲಾ ಒಂದು ಕಥೆ ಇರುತ್ತೆ. ಪ್ರತಿ object ನಲ್ಲೂ ಒಂದು ಕಥೆ ಇರುತ್ತೆ. ಆ ಕಥೆಗಳ ಹಿಂದೆ ಒಂದು ಸಾಮಾಜಿಗ ಹೆಣಿಗೆ ಇರುತ್ತೆ.  ಯಾವ ಸಮಸ್ಯೆಯನ್ನೂ ಹೇಳದೇ ಇದೊಂದು ಆರ್ಟ್ ಅಷ್ಟೇ ಅಂತ ಹೇಳುವುದನ್ನು ನನ್ನಿಂದ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಎಲ್ಲದರಲ್ಲೂ ಒಂದು ಸಮಸ್ಯೆ ಇರುತ್ತೆ ಆ ಸಮಸ್ಯೆಯನ್ನು ನಾನು ಹೇಗೆ handle ಮಾಡುತ್ತೆನೆ ಎಂಬುದು ಮುಖ್ಯ.

ಭ.ರಂ: ನಾನು ಒಂದು argument ಗಾಗಿ ಕೇಳುತ್ತಿದ್ದೇನೆ, ವೆನ್ನಿರ ಇರವುಗಳ್ (white nights) ಆ ಹುಡುಗಿ ಅವನನ್ನು ಪ್ರೀತಿಸುತ್ತಾಳೆ, ಅವನು ಅವಳನ್ನು ತೊರೆದು ಹೋಗುತ್ತಾನೆ. ಅವನಿಗಾಗಿ ಅವಳು ಕಾಯುತ್ತಲೇ ಇದ್ದಾಳೆ. ಆಕೆ ಮತ್ತೊಬ್ಬನನ್ನು ಬೇಟಿಯಾಗುತ್ತಾಳೆ, ಆ ರೀತಿಯಾಗಿ ಒಂದು ಕಥೆ. ಆ ಕಥೆಯಲ್ಲಿ ನೀವು social ಆಗಿ ಏನನ್ನು ನೋಡುತ್ತೀರಿ.

ಪ.ರಂ: ಅಲ್ಲಿ feminism ಇದೆ. ತನಗೆ ಬೇಕಾದ ಒಂದು ಸಂಬಂಧವನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಇದೆ.

ಭ.ರ: ಆದರೆ ಬಹಳ feminist ಗಳಿಗೆ  ಆ ಸಿನಿಮಾ ಹಿಡಿಸುವುದಿಲ್ಲ.

ಪ.ರಂ: ಒಂದು ಹೆಣ್ಣಿನ ವಿಚಾರಗಳನ್ನು, ಒಂದು ಹೆಣ್ಣಿನ ಭಾವನೆಗಳನ್ನೂ ಮುಂದಿಡುವುದೇ ಒಂದು ಸಾಮಾಜಿಕ ವಿಚಾರ ಅಲ್ಲವೇ. ಎಲ್ಲ ಕತೆಗಳೂ ಪುರುಷ ಪ್ರಧಾನವಾಗಿರುವಾಗ, ಹೆಣ್ಣನ್ನು ಮುಂದಿಟ್ಟು ಕಥೆ ಮಾಡುವುದೇ ದೊಡ್ಡ ವಿಚಾರ. ಕೆಲವರು ಇದನ್ನು ತಿಳಿಯದಲೇ ಮಾಡುತ್ತಾರೆ, ಕೆಲವರು ತಿಳಿದು ಮಾಡುತ್ತಾರೆ. ತಿಳಿಯದೆ ಮಾಡುವುದಕ್ಕಿಂತ ತಿಳಿದು ಮಾಡುವುದು ಬಹಳ ಮುಖ್ಯ ಅಂದುಕೊಳ್ಳುತ್ತೇನೆ. ಪ್ರತಿಯೊಂದು ದೃಶ್ಯಕ್ಕೂ, ಪ್ರತಿಯೊಂದು ಸಂಭಾಷಣೆಗೂ, ಪ್ರತಿಯೊಂದು ವಿಚಾರಕ್ಕೂ ಇಲ್ಲಿ ಬಹಳ ಪ್ರಾಮುಖ್ಯತೆ ಇದೆ. ಆ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳಬೇಕು. ಹಾಗೆ ಅರ್ಥ ಮಾಡಿಕೊಳ್ಳುವುದೇ social responsibility ಎನ್ನುತ್ತೇನೆ. ಈ ಸಮಾಜವನ್ನು ಅರ್ಥ ಮಾಡಿಕೊಳ್ಳಲು ನೀನು ಪ್ರಯತ್ನಪಟ್ಟರೆ ಖಂಡಿತ ನಿನ್ನ ಕಥೆಗಳಲ್ಲಿ ಬರುವ ಸಮಸ್ಯೆಗಳನ್ನು  ಬಹಳ ಸುಲಭವಾಗಿ ನಿಭಾಯಿಸಬಹುದು ಅಂದುಕೊಳ್ಳುತ್ತೇನೆ. ಎಲ್ಲವೂ ಸಾಮಾಜಿಕ ಮೌಲ್ಯಗಳಿಂದ, ಸಾಮಾಜಿಕ ಬುನಾದಿಯಿಂದಲೇ ಬರುವಂತಹವು. ನಾನು ಒಂದು art ಅನ್ನು ಸೃಷ್ಟಿ ಮಾಡುತ್ತೇನೆ ಎಂದರೆ ನನಗೆ ಅದು ಮೊದಲು ಒಂದು visuಚಿಟ ಆಗಿರುತ್ತದೆ. ಆ visuals ನನ್ನ ದೇಹದೊಳಗೊಂದು ರಾಸಾಯನಿಕ ಬದಲಾವಣೆಗಳನ್ನು ಉಂಟುಮಾಡುತ್ತದೆ. ನಾನು ಓದಿದ್ದು, ನನ್ನ ಅನುಭವ ಎಲ್ಲವೂ ಅದರೊಂದಿಗೆ ಸೇರಿ ಅದು ಬೇರೆ ಮತ್ತೇನಾಗಿಯೋ ಹೊರಗೆ ಪ್ರಕಟವಾಗುವಾಗ, ನೀವು ನಮ್ಮನ್ನು ಏನೆಂದುಕೊಂಡಿರುವಿರೋ ಅದರಿಂದ ಭಿನ್ನವಾಗಿ ತೋರಿಸಲು ನನ್ನ ಮೆದುಳು ಕೆಲಸಮಾಡುತ್ತೆ ಅಂತ ಅಂದುಕೊಂಡಿರುವೆ. ಭರದ್ವಾಜ್ ರಂಗನ್ ಕೇವಲ ಭರದ್ವಾಜ್ ರಂಗನ್ ಮಾತ್ರವಲ್ಲ ಅವರನ್ನು ಅರ್ಥೈಸಿಕೊಳ್ಳಲು ಅವರ ಹಿಂದೆ ಮತ್ತೊಂದು ಕಥೆ ಇದೆ ಎಂಬುದನ್ನು ನನ್ನಿಂದ ಹೇಳಲು ಸಾಧ್ಯ ಅಂದುಕೊಂಡಿರುವೆ. ಇದು ನನ್ನ ದೃಷ್ಟಿಕೋನ.

ಭ.ರಂ; ನೀವು ಹೀಗೆ ಬಹಳಷ್ಟು view ಅನ್ನು ಹೇಳಿದ್ದೀರಿ. ಅವು ಚರ್ಚೆಗೆ  ಒಳಗಾಗಿವೆ. controversy ಸಹಾ ಆಗಿವೆ. ನೀವು ರಾಜರಾಜ ಚೋಳನ ಬಗ್ಗೆ ಹೇಳಿದ್ದೀರಿ, ಅದನ್ನು ಹೇಳುವಾಗಲೇ ನಿಮಗದು ಒಂದು ಚರ್ಚೆಗೆ ಗುರಿಯಾಗುವ ವಿಷಯವೆಂದಣಿಸಿತೆ ಅಥವಾ ಇಲ್ಲಾ…..

ಪ.ರಂ:  ನನಗೆ ಹಾಗೇನು ಅನಿಸಲಿಲ್ಲ. ರಾಜರಾಜ ಚೋಳನ ಬಗ್ಗೆ ನಾನು ಮಾತ್ರ ಮಾತನಾಡಲಿಲ್ಲ. ನನಗೆ ಮೊದಲೇ ಬಹಳಷ್ಟು ಜನ ಮಾತನಾಡಿದ್ದಾರೆ. ನಾನು ಮಾತನಾಡಿದ್ದು ಯಾಕೆ ಇಷ್ಟೊಂದು ದೊಡ್ಡ ಚರ್ಚೆಗೆ ಒಳಗಾಯಿತು, ಇದರ ಹಿನ್ನೆಲೆಯ ರಾಜಕೀಯ ಏನು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಅನೇಕರು ಆ ಬಗ್ಗೆ ನಾನೇ ಮೊದಲು ಮಾತನಾಡಿರುವುದಾಗಿಯೂ ಇದಕ್ಕೆ ಹಿಂದೆ ರಾಜರಾಜ ಚೋಳನ ಬಗ್ಗೆ ಯಾರೂ ಮಾತನಾಡಲೇ ಇಲ್ಲ ಎಂಬಂತಹ ಒಂದು ಬಿಂಬವನ್ನು ಸೃಷ್ಟಿ ಮಾಡಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಇದರ `ಬೇಕು’ ಗಳು ಬೇರೆ. ಮೊದಲು ನನ್ನನ್ನು ವಿರೋಧಿಸುವವರು ಯಾರು ಎಂದು ನೋಡಬೇಕು. ನನ್ನನ್ನು ವಿರೋಧಿಸಿ ಬರೆಯುವವರು ಯಾರು. ಇವರು ಯಾವ ಬುನಾದಿಯಮೇಲೆ ಒಟ್ಟಾಗುತ್ತಾರೆ ಎಂಬುದನ್ನು ನೋಡಬೇಕು. ರಾಜ ರಾಜ ಚೋಳನ ಬಗ್ಗೆ ಮಾತನಾಡಲು ನನಗೆ ಎಲ್ಲ ಹಕ್ಕೂ ಇದೆ.  ನಾನು ಮಾತನಾಡುವಾಗ ಹಾಗಲ್ಲಾ ನನಗೆ ಅನಿಸಲಿಲ್ಲ. ಸತ್ಯವನ್ನು ಮಾತನಾಡುವುದಕ್ಕೆ ನಾನು ಎಂದೂ ಹೆದರುವುದಿಲ್ಲ.

ಭ.ರಂ: ನಿಮಗೆ ಹೆಸರು, ಹಿರಿಮೆ ಗರಿಮೆ ಇದೆ.  ಈಗ ಕೂಗೈ ಸಿನಿಮಾ ಸಂಸ್ಥೆ , ಈ caste less ಕಮ್ಯೂನಿಟಿ ಇಂತಹವನ್ನೆಲ್ಲಾ ಹುಟ್ಟುಹಾಕಿದ್ದೀರಿ ನೀವು ಸಮಾಜಕ್ಕೆ ಏನಾದರೂ ಹಿಂತಿರುಗಿಸಬೇಕೆಂಬ ಸಾಮಾಜಿಕ ಜವಾಬ್ಧಾರಿಯಿಂದ  ಸೃಷ್ಟಿಸಿದ್ದೆ.

ಪ.ರಂ: ನಿಜ. ಅಂಬೇಡ್ಕರ್ ಹೇಳಿದ್ದಾರೆ . ನಿನಗೆ ಏನು ಧಕ್ಕಿದೆಯೋ ಅದನ್ನು ನಿನ್ನ ಮುಂದಿನ ಪೀಳಿಗೆಗೆ ಕೊಟ್ಟುಹೋಗಬೇಕಾದದ್ದು ನಿನ್ನ ಜವಾಬ್ಧಾರಿ ಎನ್ನುತ್ತಾರೆ. ಸಮೀಪದಲ್ಲಿ ನಾನು ಕೂಗಿವಾಧ್ಯ ಎಂಬವರ `ಶಿಲುಬೆಯಲ್ಲಿ ನೇತಾಡುವ ತಾತ’  ಕಾದಂಬರಿ ಓದಿದೆ. ಆ ಕಾದಂಬರಿ ಪ್ರಾರಂಭವಾಗುವುದೇ ಬಹಳ ಸ್ವಾರಸ್ಯಕರವಾಗಿದೆ. `ನೀನು ನಡೆದು ಹೋಗುವಾಗ ಅನೇಕ ಹೊಂಡಗಳು ಸಿಗುತ್ತವೆ. ಆ ಹೊಂಡಗಳನ್ನು ಮುಚ್ಚಿ ಹಿಂದೆ ಬರುವವರಿಗೆ ದಾರಿಯನ್ನು ಸುಗಮ ಮಾಡಿಕೊಡಬೇಕು. ಅಥವಾ ಇಲ್ಲಿ ಹೊಂಡ ಇದೆ, ಬಳಸಿಕೊಂಡು ಹೋಗು ಎಂಬ ಎಚ್ಚರಿಕೆಯನ್ನಾದರೂ ನೀಡಬೇಕು. ಅಂತಹ ಕೆಲಸವನ್ನೆ ನನ್ನಿಂದ ಸಾಧ್ಯವಾದಷ್ಟು ಮಾಡುತ್ತಿದ್ದೇನೆ.

ಭ.ರಂ: ನಿಮ್ಮ ಈ ಕೆಲಸವನ್ನು ಮುಂದುವರೆಸಲು ಸಿನಿಮಾ ರಂಗದಲ್ಲೋ ಅಥವಾ ಹೊರಗೆಯೋ ಯಾರಾದರೂ ಒಂದಿಷ್ಟು ಜನರನ್ನೋ ಅಥವಾ ಯಾವ ಒಬ್ಬ ವ್ಯಕ್ತಿಯನ್ನೋ ತಯಾರಿ ಮಾಡುತ್ತಿದ್ದೀರಾ?

ಪ.ರಂ: ಅದು ತನ್ನಷ್ಟಕ್ಕೆ ನಡೆಯುತ್ತಿದೆ. ನಾನು ರಂಜಿತ್ ಎಂಬ ಒಬ್ಬ ಒಂಟಿ ವ್ಯಕ್ತಿಯಾಗಿ ನಿಂತು ಏನನ್ನೋ ಮಾಡುತ್ತಿಲ್ಲ. ನನ್ನನ್ನು ಆಗ್ರ ಸ್ಥಾನದಲ್ಲಿ ನಿಲ್ಲಿಸಿ ನಾನು ಏನನ್ನು ಮಾಡುತ್ತಿಲ್ಲ. ನನ್ನ ಸುತ್ತ ಇರುವವರಿಗೆ  ಜವಾಬ್ದಾರಿಯನ್ನು ಹಂಚಿ ಕೊಡುತ್ತಿದ್ದೇನೆ. ಪ್ರಾರಂಭ ಮಾಡಿರುವುದು ಏನೋ ನಾನಾಗಿರಬಹುದು. ಇವೆಲ್ಲವನ್ನೂ ನಾನು ಈಗ ಆಲೋಚಿಸಿದ್ದಲ್ಲ. ನಾನು ಕಾಲೇಜಿನಲ್ಲಿ ಓದುತ್ತಿರುವಾಗಲೇ ಇವೆಲ್ಲವನ್ನೂ ಯೋಚಿಸಿದ್ದೆ. ಈಗ ಅದಕ್ಕಾದ ಅವಕಾಶ ದೊರಕಿರುವಾಗ ಅದನ್ನು ಮಾಡಬೇಕೆಂದು ಮಾಡುತ್ತಿರುವೆ. ನಾನಿರುವಾಗ ಇದು ನಡೆಯುತ್ತದೆ, ನಾನಿಲ್ಲದ ಕಾಲದಲ್ಲೂ ಇದು ನಡೆಯುತ್ತದೇ ಅಂದುಕೊಂಡಿರುವೆ.  ನನ್ನ ಹಿಂದೆ ಇರುವವರು ಮಾತ್ರ ಇದನ್ನು ಮಾಡುತ್ತಾರೆ ಎಂದೂ ಸಹ ಇಲ್ಲ. ನನ್ನನು ನೋಡಿ, ಮಾತನಾಡಿ ಪ್ರಭಾವಕ್ಕೊಳಗಾಗುವ ಯಾವುದಾದರೂ ಒಂದು ಗುಂಪು, ವ್ಯಕ್ತಿ ಇದನ್ನು ಪ್ರಾರಂಭಿಸಬಹುದು. ಇಲ್ಲಿ ಯಾವಾಗಲೂ ಮೊದಲು ಒಂದು start up ಬೇಕಾಗುತ್ತದೆ. ಯಾರು ಮೊದಲು ಶುರು ಮಾಡುವುದೆಂದು. ನಂತರ ಅದು ನಡೆದುಕೊಂಡು ಹೋಗುತ್ತದೆ. ಈಗ ಧರ್ಮಪ್ರಭು ಎಂಬ ಸಿನಿಮಾ ಬಂದಿದೆ, ಅದರಲ್ಲಿ ಅಂಬೇಡ್ಕರ್ ಬಗ್ಗೆ ಒಂದು ಚರ್ಚೆ ನಡೆಯುತ್ತದೆ. ಆ ಸಿನಿಮಾ ಮಾಡಿದವರು ನನ್ನನ್ನು ನೋಡೂ ಇಲ್ಲ ಮಾತನಾಡಿಸಿಯೂ ಇಲ್ಲ, ಆದರೆ ಅವರಿಗೆ ಹಾಗೆ ತೋಚಿದೆಯಲ್ಲಾ. ಮತ್ತೆ ಈಗ ತಮಿಳು ಸಿನಿಮಾಗಳಲ್ಲಿ ಯಾಕೆ ಹೆಚ್ಚಾಗಿ political ಆಗಿ ಮಾತನಾಡಬೇಕು, ಎಂಬುದರ ಬಗ್ಗೆ ನಾವು ಯೋಚಿಸಬೇಕು. ಹಾಗಾದರೆ ಅವರೆಲ್ಲರೂ ನನ್ನೊಂದಿಗೆ ಮಾತನಾಡುವವರೆ, ಹಾಗೇನೂ ಇಲ್ಲ, ಬಹಳಷ್ಟು ಜನ ನನ್ನೊಂದಿಗೆ ಭಿನ್ನಾಭಿಪ್ರಾಯ ಇರುವವರು ಇದ್ದಾರೆ. ಆದರೆ ಈ ಚರ್ಚೆ ಸಮಾಜದಲ್ಲಿ ಒಂದು wareness create ಮಾಡುತ್ತಿದೆ. ಒಂದು connection ಉಂಟುಮಾಡುತ್ತಿದೆ. ಒಂದು ಆಸಕ್ತಿಯನ್ನೂ ಉಂಟುಮಾಡುತ್ತಿದೆ. ಮೊದಲು ಇಲ್ಲಿ ಅಂಬೇಡ್ಕರ್ ಬಗ್ಗೆ ಮಾತನಾಡುವುದೇ ಒಂದು ಸಮಸ್ಯೆಯಾಗಿತ್ತು. ಆದರೆ ಈಗ ಅಂಬೇಡ್ಕರ್ ಬಗ್ಗೆ ಮಾತನಾಡುವುದು ತಪ್ಪು ಅಂತಲೋ ಅದರಿಂದ ನನಗೆ  ಅವಕಾಶ ಸಿಗದೇ ಹೋಗಬಹುದು ಎಂದೋ

ಭ.ರಂ; ಈಗ ನೀವು ಇರುವ ಸ್ಥಿತಿಯನ್ನು ನೋಡಿ ನಿಮ್ಮ ಊರಲ್ಲಿ, ನಿಮ್ಮ ತಂದೆ ತಾಯಿ, ನಿಮ್ಮ ಸ್ನೇಹಿತರು ಏನಂದುಕೊಂಡಿದ್ದಾರೆ?

ಪ.ರಂ: ಖಂಡಿತ ಈಗ ನಾನು ಮಾಡುತ್ತಿರುವ ಕೆಲಸದ ಬಗ್ಗೆ ಅವರಿಗೆ ಬಹಳ ಸಂತೋಷ ಇದೆ. ಆ ಸಂತೋಷದೊಂದಿಗೆ ಒಂದು ಭಯವೂ ಸಹಾ ಇದೆ. ಉಳಿದವರಂತೆ ನೀನೂ ಸಿನಿಮಾ ಮಾಡಬಹುದಲ್ಲಾ. ಇಂತಹ ಸಿನಿಮಾಗಳೇಕೆ. ಉಳಿದವರಂತೆ ನೀನು ಹಣ ಮಾಡಿಕೊಂಡು ಹೋಗಬಹುದಲ್ಲ ಎಂಬ ಯೋಚನೆಗಳಿವೆ. ಆದರೆ ಅವರಿಗೆ ನನ್ನ ಬದುಕಿನ ಬಗ್ಗೆ ಒಂದು ಭಯವೂ ಇದೆ ಮತ್ತು ಹೆಮ್ಮೆಯೂ ಇದೆ. ಇದಕ್ಕೆ ಬೆಂಬಲವೂ ಇದೆ, ವಿರೋಧವೂ ಇದೆ.

ಭ.ರಂ: ನೀನು ಹೀಗೇಕೆ ಮಾಡುತ್ತೀಯ ಎಂದರೆ ನಿಮ್ಮ ಉತ್ತರ ಏನು?

ಪ.ರಂ:  ನಮ್ಮ ಅಮ್ಮ ಸಮೀಪದಲ್ಲಿ ಇದನ್ನು ಕೇಳಿದರು. ಆಗ ನಾನು ಮಾತನಾಡದಿದ್ದರೆ ಯಾರು ಮಾತನಾಡುತ್ತಾರೆ. ನನಗೊಂದು ಅವಕಾಶ ಸಿಕ್ಕಿದೆ, ಮಾತನಾಡುತ್ತಿದ್ದೇನೆ. ನನ್ನ ಹೆಂಡತಿಯೂ ಅದನ್ನೇ ಹೇಳುವುದು , ನೀವು  ಮಾತನಾಡುವುದು ಸತ್ಯವಾಗಿದ್ದಾರೆ ಯಾಕೆ ಹೆದರಬೇಕು, ಎಂದು.

ಭ.ರಂ:  ಥ್ಯಾಂಕ್ಯೂ ಸರ್.

ಪ.ರಂ: ಥ್ಯಾಂಕ್ಯೂ.

ಮುಂದುವರೆಯುವುದು..

Film Companion South ಗೆ ಭಾರಧ್ವಾಜ್ ರಂಗನ್ ಮಾಡಿದ ಸಂದರ್ಶನ

ಅನುವಾದ: ಕೆ. ನಲ್ಲತಂಬಿ

ಸಹಾಯ: ಯದುನಂದನ್ ಕೀಲಾರ


 

One comment to “ತಮಿಳು ನಿರ್ದೇಶಕ ಪ. ರಂಜಿತ್ ಸಂದರ್ಶನ – ಭಾಗ ೧”
  1. ಉತ್ತಮವಾದ ಸಂದರ್ಶನ, ನಿಜ ಜಾತಿ ಪಿಡುಗು ನಮ್ಮ ಧರ್ಮಕ್ಕೆ ಅಂಟಿದ ಒಂದು ಶಾಪ, ಆದರೆ ಮೇಲರಿಮೆ ಅನ್ನೋದು ಪ್ರತಿ ಜಾತಿಯಲ್ಲಿ ತುಂಬಿಕೊಂಡಿದೆ.

    ಊದಾ: ಬ್ರಾಹ್ಮಣರು ಲಿಂಗಾಯತರಿಗೆ ಹೆಣ್ಣು ಕೊಡೋಲ್ಲ,ಲಿಂಗ್ಯಾಯಿತರು ಒಕ್ಕಲಿಗರಿಗೆ ಹೆಣ್ಣು ಕೊಡೋಲ್ಲ,,ಒಕ್ಕಲಿಗರು ಕುರುಬರಿಗೆ ಹೆಣ್ಣು ಕೊಡೋಲ್ಲ,ಕುರುಬರು ದಲಿತರಿಗೆ ಹೆಣ್ಣು ಕೊಡೋಲ್ಲ, ದಲಿತರು ಹೊಳೆಯರಿಹೆ ಹೆಣ್ಣು ಕೊಡೋಲ್ಲ….
    ಇದರ ಅರ್ಥ ನಾವು ಬಹಳಷ್ಟು ಜನ ಇದರ ಬಗ್ಗೆ ಬಾಶಣ ಮಾಡೋಕ್ಕೆ ಮಾತ್ರ ರೆಡಿ, ಆಚರಣೆಗೆ ಲಕ್ಷಕ್ಕೆ ಒಬ್ಬರು ಮಾತ್ರ.

ಪ್ರತಿಕ್ರಿಯಿಸಿ