ಫ್ರಾನ್ಸ್ ಕಾಫ್ಕಾ ನ “ರೂಪಾಂತರ” : ಗಿರಿ ಮುನ್ನುಡಿ

೪೩ ವರ್ಷಗಳ ಹಿಂದೆ ಇದೇ ಆಗಸ್ಟ್ ತಿಂಗಳಿನಲ್ಲಿ ಕಾಫ್ಕಾನ ಮೆಟಮಾರ್ಫಸಿಸ್ “ರೂಪಾಂತರ” ವಾಗಿ ಅನುವಾದಗೊಂಡು ಪ್ರಕಟವಾಗಿತ್ತು. ಈಗ ಋತುಮಾನ ಅದನ್ನು ಈ-ಬುಕ್ ನ ರೂಪದಲ್ಲಿ ಹೊರತಂದಿದೆ.  ಅದಕ್ಕೆ ಗಿರಿಯವರು ಬರೆದ ಪರಿಚಯಾತ್ಮಕ ಮುನ್ನುಡಿಯ ಪರಿಷ್ಕೃತ ರೂಪ ಇಲ್ಲಿದೆ. ಬಿಹೇವಿಯರಿಸಂ ನ ಸಿದ್ಧಾಂತಗಳ ಮೂಲಕ ಕನ್ನಡ ಸಾಹಿತ್ಯದ ಅನೇಕ ಪಠ್ಯಗಳನ್ನು ಮರು ಓದಿಗೆ ಒಡ್ಡಿ “ಸಾಹಿತ್ಯದ ವೈಜ್ಞಾನಿಕ ಮೀಮಾಂಸೆ” ಎಂಬ ಗ್ರಂಥವನ್ನು ಗಿರಿ ಇತ್ತೀಚೆಗೆ ಪ್ರಕಟಿಸಿದ್ದರು. ಈ ಕೆಳಗಿನ ಬರಹದಲ್ಲಿ, ಕಾಫ್ಕಾನನ್ನು ಅರ್ಥೈಸಿಕೊಳ್ಳಲು ಯೂರೋಪಿನ ವಿಮರ್ಷಕರು ಬಳಸಿದ ಮಾರ್ಗಗಳ ಬಗ್ಗೆ ಮಾತನಾಡುತ್ತಲೇ ಗಿರಿ, ೨೦ ನೇ ಶತಮಾನದ ಈ ಮಹಾಲೇಖಕನನ್ನು, ಆತ ಬದುಕಿದ ಪರಿಸರದ ಮೂಲಕವೇ ನಿರ್ವಚಿಸುವುದು ಹೇಗೆ ಎಂದು ಚರ್ಚಿಸಿದ್ದಾರೆ.

ಋತುಮಾನ ಆ್ಯಪ್ ನಲ್ಲಿ ‘E Book’ ವಿಭಾಗದಲ್ಲಿ ನೀವಿದನ್ನು ಕೊಳ್ಳಬಹುದು. ಆ್ಯಪ್ ಡೌನ್ಲೋಡ್ ಮಾಡಲು ಗೂಗಲ್ ಪ್ಲೇ ಸ್ಟೋರ್ / ಆಪಲ್ ಆ್ಯಪ್ ಸ್ಟೋರ್ ನಲ್ಲಿ “ruthumana” ಎಂದು ಹುಡುಕಿ.

ಪರಿಚಯ

ವಿಶ್ವ ಸಾಹಿತ್ಯದ ಸುಪ್ರಸಿದ್ದ ಹೆಸರುಗಳಲ್ಲಿ ಒಂದು  ಫ್ರಾನ್ಸ್  ಕಾಫ಼್ಕ. ೧೮೮೩ರಲ್ಲಿ ಪ್ರಾಗ್‌ ನಗರದಲ್ಲಿ ಹುಟ್ಟಿದ  ಕಾಫ಼್ಕ ೧೯೨೪ರಲ್ಲಿ ತೀರಿಕೊಂಡಾಗ ಅವನಿಗೆ ಕೇವಲ ೪೧ ವರ್ಷ ವಯಸ್ಸಾಗಿತ್ತು ಎಲ್ಲಕ್ಕಿಂತ ಹೆಚ್ಚಾಗಿ ಅವನ ಜೀವಮಾನದ ಅವಧಿಯಲ್ಲಿ ಈಗ ಸುಪ್ರಸಿದ್ದವಾಗಿರುವ ಅವನ ಕಾದಂಬರಿಗಳೊಂದೂ ಪ್ರಕಟವಾಗಿರಲೇ ಇಲ್ಲ. ಕೆಲವು ಸಣ್ಣ, ದೊಡ್ಡ ಕತೆಗಳು ಮಾತ್ರ ಪ್ರಕಟವಾಗಿದ್ದವು. ಇಂದು ಅವನು ಬರೆದದ್ದೆಲ್ಲ ವಿಶ್ವದ ಅನೇಕ ಭಾಷೆಗಳಲ್ಲಿ ಪ್ರಕಟವಾಗಿವೆ. ತಾನು ತೀರಿಕೊಂಡ ಮೇಲೆ ತನ್ನ ಅಪ್ರಕಟಿತ ಬರಹಗಳೊಂದನ್ನೂ ಪ್ರಕಟಿಸದೆ ಸುಟ್ಟುಹಾಕಬೇಕೆಂದು ಉಯಿಲಿನಲ್ಲಿ ಬರೆದು ಸ್ನೇಹಿತ ಮ್ಯಾಕ್ಸ್ ಬ್ರಾಡ್ ಅವರಿಗೆ ಕೊಟ್ಟಿದ್ದನು. ಆದರೆ  ತನ್ನ ಸ್ನೇಹಿತನ ಅಪೇಕ್ಷೆಯನ್ನು  ಕಡೆಗಣಿಸಿ ಕಾಫ಼್ಕನ ಕೃತಿಗಗಳನ್ನು ಪ್ರಕಟಿಸಿದ ಮ್ಯಾಕ್ಸ್‌ ಬ್ರಾಡನಿಗೆ ವಿಶ್ವ ಸಾಹಿತ್ಯ ಇಂದು ಚಿರಋಣಿಯಾಗಿದೆ.

ಕಾಫ಼್ಕ ಯಹೂದಿ ಜನಾಂಗದ ಛೆಕ್ ಮನೆತನದವನು. ಅವನ ತಂದೆ ಮಧ್ಯಮ ವರ್ಗದ ವರ್ತಕನಾಗಿದ್ದನು. ಸಾಹಿತ್ಯ ಅಥವ ವೈದ್ಯಕೀಯವನ್ನು ಅಭ್ಯಾಸಮಾಡುವ ಯೋಚನೆ ಇಟ್ಟುಕೊಂಡಿದ್ದ  ಕಾಫ಼್ಕ ಕೊನೆಗೆ ಕಾನೂನಿನ ವ್ಯಾಸಂಗವನ್ನು ಮಾಡಿ ಛಾರ್ಲ್ಸ್ ಫ಼ರ್ಡಿನೆಂಡ್  (ಪ್ರಾಗ್‌) ವಿಶ್ವವಿದ್ಯಾಲಯದಿಂದ ಕಾನೂನಿನಲ್ಲಿ ಡಾಕ್ಟರೇಟ್‌ ಪದವಿಯನ್ನು ಪಡೆದಮೇಲೆ ಸುಮಾರು ಒಂದು ವರ್ಷಕಾಲ ಖಾಸಗಿ ಲಾಯರಾಗಿ ಕೆಲಸ ಮಾಡಿದನು. ಆಮೇಲೆ ಕೆಲವು ತಿಂಗಳು ಒಂದು ಖಾಸಗಿ  ಇನ್‌ಶ್ರೆನ್ಸ್‌ ಕಂಪನಿಯಲ್ಲಿ ಕೆಲಸ ಮಾಡಿದವನು ಕೊನೆಗೆ ಛೆಕ್ ಸರ್ಕಾರದ ಕಾರ್ಮಿಕರ ಇನ್‌ಶುರೆನ್ಸ್‌ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿಕೊಂಡನು. ಬದುಕಿನ ಕೊನೆಯ ಕೆಲವು ವರ್ಷಗಳವರೆಗೂ ಇದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಕಾಫ಼್ಕನಿಗೆ ಆಫೀಸೊಂದರಲ್ಲಿ ಕುಳಿತು ಬದುಕಿಗಾಗಿ ದುಡಿಯಬೇಕಾದ ಕಛೇರಿಯ ಕೆಲಸವೊಂದರ ರೂಢಿ ಜಾಡ್ಯ ಅಸಹನೀಯವಾಗಿತ್ತು. ಹಾಗಾಗಿ ತನ್ನ ಕೊನೆಯ ಕೆಲವು ವರ್ಷಗಳಲ್ಲಿ ಕೆಲಸವನ್ನು ಪೂರ್ತಿಯಾಗಿ ಬಿಟ್ಟುಕೊಟ್ಟು ಜರ್ಮನಿಯ ಬರ್ಲೀನ್ ನಗರದ ಬಡಾವಣೆಯೊಂದರಲ್ಲಿ ವಾಸಿಸತೊಡಗಿದನು.

ಯಾವ ವಿಶೇಷ ಘಟನೆಗಳೂ ಕಾಫ಼್ಕನ ಜೀವನದಲ್ಲಿ ನಡೆದದ್ದಿಲ್ಲ. ಹಾಗಿದ್ದರೂ ಅವನ ಬದುಕನ್ನು ಪರಿಸರದ ಕೆಲವು ವಿಚಿತ್ರ ಸೆಳೆತಗಳು ವಿಕೃತಗೊಳಿಸಿದ್ದವು. ಆದರೆ ವಿಚಿತ್ರವೆಂದರೆ ಅಂತಹ ಸೆಳೆತಗಳಲ್ಲಿ ಕೆಲವು ತೀರ ಸಾಮಾನ್ಯ ಘಟನೆಗಳೂ ಸೇರಿದ್ದವು. ಈ ಸೆಳೆತ-ಸಂಗತಿಗಳು ಒಂದು ಸಂಕೀರ್ಣವಾದ ಬದುಕಿನ ಸನ್ನಿವೇಶವನ್ನು, ಪರಿಸರವನ್ನು ಸೃಷ್ಟಿಸಿದ್ದವು. ಕಾಫ಼್ಕನ ಬದುಕಿನ ಪರಿಸರದ ಕೆಲವೊಂದು ಅಂಶಗಳಲ್ಲಿ ಅತಿ ಮುಖ್ಯವಾದವೆಂದರೆ ಅವನ ಸಂಸಾರ, ವಿಶೇಷವಾಗಿ ತಂದೆ ಮಗನ ಸಂಬಂಧ; ಯೆಹೂದಿ ಜನಾಂಗದ ಮಧ್ಯಮವರ್ಗದ ಈ ಸಂಸಾರ ಪ್ರಾಗ್‌ ನಗರದಲ್ಲಿ ವಾಸಿಸಿದ್ದು; ಅವನ ಸಾಹಿತ್ಯಾಸಕ್ತಿ, ಮತ್ತು ಇದರೊಡನೆ ಸದಾ ತಿಕ್ಕಾಡಿದ ಬದುಕಿನ ದೈನಂದಿನ ಕೆಲಸದ ಹೊರೆ; ಕೊನೆಯದಾಗಿ, ಬಹುಶಃ ಇವೆಲ್ಲಕ್ಕಿಂತ ಹೆಚ್ಚಾಗಿ, ಕಾಫ಼್ಕನಲ್ಲಿ ಕಂಡು ಬರುವ ವಿಚಿತ್ರವೂ ತೀಕ್ಷ್ಣವೂ ಆದ ಸಂವೇದನಶೀಲತೆ. ಆದರೆ ಈ ಸಂವೇದನಶೀಲತೆ ಅವನ ಒಟ್ಟು ಪರಿಸರದ ಪರಿಣಾಮವೇ ಇರಬಹುದು.

Courtacey : Thebookbindersdaughter.com

Courtacey : Thebookbindersdaughter.com

ಕಾಫ಼್ಕ ತನ್ನ ಮೂವತ್ತಮೂರನೇ ವಯಸ್ಸಿನವರೆಗೂ ತಂದೆ-ತಾಯಿಯ ಮನೆಯಲ್ಲೇ ಬದುಕಿದವನು; ಪಾಶ್ಚಾತ್ಯ ಸಮಾಜದಲ್ಲಿ ಇದು ಅಪರೂಪದ ವಿಷಯ. ಆತನಿಗೆ ತನ್ನದೇ ಆದ ಕೆಲಸವಿದ್ದರೂ ಕೂಡ ಆಗೀಗ ಅಪ್ಪನ ವ್ಯವಹಾರವನ್ನೂ ಅವನ ಫ್ಯಾಕ್ಟರಿಯ ಕೆಲಸವನ್ನೂ ನೋಡಿಕೊಳ್ಳಬೇಕಾಗುತ್ತಿತ್ತು. ತನ್ನದಲ್ಲದ, ತನಗೆ ಇಷ್ಟವಿಲ್ಲದ ಈ ವ್ಯಾವಹಾರಿಕ ಹೊರೆ ತನ್ನ ಸಾಹಿತ್ಯಿಕ ಚಟುವಟಿಕೆಗೆ ಇರುವ ಅಡಚಣೆ ಎಂಬುದು ಕಾಫ಼್ಕನ ಅನುಭವವಾಗಿತ್ತು. ಹಗಲೆಲ್ಲ ಬೇಸರಬರಿಸುವ ಕೆಲಸದಲ್ಲಿ ದುಡಿದು ಸುಸ್ತಾದವನು ರಾತ್ರಿ ಕತೆ ಕಾದಂಬರಿಗಳನ್ನು ಬರೆಯಲು ಹೆಣಗುತ್ತಿದ್ದ. ಆದರೆ ಒಂದು ಬಗೆಯ ಅರ್ಥವಾಗದ ಅಸಹಾಯಕತೆಯಿಂದ ಆತ ತಂದೆಯ ಕೈಗೊಂಬೆಯ ಥರ ವರ್ತಿಸುತ್ತಿದ್ದ ಎಂದು ಅನ್ನಿಸುತ್ತದೆ. ಕಾಫ಼್ಕನಿಗೂ ಅವನ ಮನೆಯವರಿಗೂ-ಅದರಲ್ಲೂ ಅವನ ತಂದೆಗೂ ಅವನಿಗೂ- ಇದ್ದ ಸಂಬಂಧ ಮತ್ತು ಅವನ ಸಾಹಿತ್ಯ ಕೃತಿಗಳ ಮೇಲೆ ಈ ಸಂಬಂಧದಿಂದಾದ ಪರಿಣಾಮ ಇವುಗಳ ಪರಿಚಯ ನಮಗಾಗುವುದು  ಮಖ್ಯವಾಗಿ ಕಾಫ಼್ಕ ತನ್ನ ತಂದೆಗೆ ಬರೆದ ಒಂದು ದೀರ್ಫ ಪತ್ರದಿಂದ. ಈ ಪತ್ರವನ್ನು  ಕಾಫ್ಕ ತನ್ನ ತಂದೆಗೇ ಕೊಡಲಿಲ್ಲ. ತಾಯಿಗೆ ಕೊಟ್ಟು ಆಕೆ ಓದಿದ ಮೇಲೆ ತಂದೆಗೆ ಕೊಡುವುದಾಗಿತ್ತು. ಆದರೆ ತಾಯಿ ಮಾತ್ರ ಅದನ್ನು ತಂದೆಗೆ ಕೊಡದೇ ಮಗನಿಗೇ ವಾಪಸ್ಸು ಕೊಟ್ಟಳಂತೆ. ತಂದೆ-ಮಗನ ಸಂಬಂಧ ಒಂದು ಬಗೆಯ ವಿಚಿತ್ರ ನಿಕಟತನದಲ್ಲಿ ರೂಪುಗೊಂಡರೂ ಹೇಗೆ ಅದು ಕೊನೆಗೆ ಸಂಪೂರ್ಣ ಹತಾಶೆಯಲ್ಲಿ ಕೊನೆಗೊಂಡಿತು ಎಂಬುದು ಆ ಪತ್ರದಿಂದ ತಿಳಿದು ಬರುತ್ತದೆ.

ಫ್ರಾನ್ಸ್ ಕಾಫ಼್ಕನೇ ವಿವರಿಸಿದಂತೆ, ಅವನ ತಂದೆ ಹರ್ಮನ್ ಕಾಫ಼್ಕ ತೀರ ಭಿನ್ನ ಬಗೆಯ ವ್ಯಕ್ತಿಯಾಗಿದ್ದನು. ಮಗ ಕಾಫ಼್ಕನಲ್ಲಿ ವ್ಯಾವಹಾರಿಕ ದೃಷ್ಟಿಯಿಂದ ಜೀವನದಲ್ಲಿ ಯಶಸ್ವಿಯಾಗಬೇಕೆಂಬ ತರಾತುರಿ ಇರಲಿಲ್ಲ. ಅಪ್ಪನ ಬದುಕಿನಲ್ಲಿ ಆ ತರಾತುರಿಯ ರಭಸ ಬಲು ಜೋರಾಗಿತ್ತು. ಬದುಕಿನಲ್ಲಿ ಸಾಮಾನ್ಯ ಅರ್ಥದಲ್ಲಿ ಯಶಸ್ವಿಯಾಗಬೇಕೆಂಬ ಹಂಬಲ ಅಪ್ಪನಲ್ಲಿ ತೀವ್ರವಾಗಿದ್ದರೆ ಮಗನ ಬದುಕಿನಲ್ಲಿ ದೈನಂದಿನ ಬದುಕಿನ ಸಾಮಾಜಿಕ – ಆರ್ಥಿಕ ಹಣಾಹಣಿಯ ನಿರರ್ಥಕತೆಯ ಭಾವನೆ ಅಷ್ಟೇ ಪ್ರಮುಖವಾಗಿತ್ತು. ದಾಂಡಿಗನಾಗಿ ಬೆಳೆದುಕೊಂಡಿದ್ದ ಅವನ ತಂದೆಯಲ್ಲಿ ಅಸಾಧಾರಣ ಶಕ್ತಿ, ಆರೋಗ್ಯ, ಆತ್ಮವಿಶ್ವಾಸ, ವ್ಯಾವಹಾರಿಕ ಜ್ಞಾನ-ಜಾಣ್ಮೆ, ಮತ್ತು ತಾಳ್ಮೆ ಕೂಡಿದ್ದರೆ, ಮಗನಲ್ಲಿ ದೌರ್ಬಲ್ಯ, ಅಸಹನೆ, ಅನಾರೋಗ್ಯ, ತನ್ನ ಶಕ್ತಿ-ಸಾಮರ್ಥ್ಯಗಳಲ್ಲಿ ಅಪನಂಬಿಕೆ, ಸೋಲಿನ ಪ್ರವೃತ್ತಿ, ಕುಂದಿದ ಮನಸ್ಸು, ಭೀತಿಗ್ರಸ್ತನಡಿಗೆ, ಹತಾಶೆ, ಅತಿಸಂವೇದನಶೀಲತೆ ತುಂಬಿಕೊಂಡಿದ್ದವು. ಇದೆಲ್ಲಕ್ಕಿಂತ ಹೆಚ್ಚಾಗಿ ಮಗನ ದೃಷ್ಟಿಯಲ್ಲಿ ತಂದೆ ಸೂಕ್ಷ್ಮ  ತಿಳಿವಳಿಕೆಯಿಲ್ಲದ, ಸಾಹಿತ್ಯದಲ್ಲಿ ಆಸಕ್ತಿ ಇಲ್ಲದ, ದೊಡ್ಡಗಂಟಲಿನ, ಒರಟು ಸ್ವಭಾವದ, ಮಗನ ಬಗ್ಗೆ ಅಸಹನೆ ತುಂಬಿದ, ಮಗನನ್ನೆಂದೂ ಅರ್ಥಮಾಡಿಕೊಳ್ಳದ ಅನುಕಂಪರಹಿತ ವ್ಯಕ್ತಿ; ಮಗನಲ್ಲಿ ಒಂದೂ ಒಳ್ಳೆಯ ಗುಣವನ್ನು ಕಾಣದವನು; ಮಗ ನಿಷ್ಪ್ರಯೋಜಕನೆಂದು ನಂಬಿದವನು. ಒಟ್ಟಿನಲ್ಲಿ ತಂದೆ-ಮಗ ಭಿನ್ನ ಸ್ಪಭಾವ-ವರ್ತನೆಯವರು, ಭಿನ್ನ ಮೌಲ್ಯಾನ್ವೇಷಣೆಯಲ್ಲಿ ತೊಡಗಿದ ವ್ಯಕ್ತಿಗಳು. ಈ ತಂದೆ-ಮಗನ ಸಂಬಂಧ ಕಾಫ಼್ಕನ ಸಾಹಿತ್ಯದ ಮೇಲೆ ಮಾಡಿರಬಹುದಾದ ಪರಿಣಾಮವನ್ನು ಅಲಕ್ಷಿಸಲಾಗದು. ಕಾಫ಼್ಕನೇ ತಂದೆಗೆ ಬರೆದ ಆ ದೀರ್ಪ ಪತ್ರದಲ್ಲಿ ಹೀಗೆ ಹೇಳಿದ್ದಾನೆ:

“ನನ್ನ ಬರಹಗಳೆಲ್ಲ ನಿನ್ನ ಕುರಿತಾದದ್ದೇ; ನನ್ನ ಬರಹಗಳಲ್ಲಿ ನಾನು ಮಾಡಿದ್ದಾದರೂ ಏನು? ನಿನ್ನ ಮುಂದೆ ತೋಡಿಕೊಳ್ಳಬೇಕಾದ್ದನ್ನು ನನ್ನ ಬರವಣಿಗೆಯಲ್ಲಿ ತೋಡಿಕೊಂಡಿದ್ದೇನೆ, ಅಷ್ಟೆ. ಉದ್ದೇಶಪೂರ್ವಕವಾಗಿಯೇ ನಿನ್ನಿಂದ ಬಿಡುಗಡೆ ಪಡೆಯುವ ಪ್ರಯತ್ನವದು; ನನ್ನನ್ನು ಇಂತಹ ಪ್ರಯತ್ನದಲ್ಲಿ ತೊಡಗಿಸಲು ನೀನೇ ಕಾರಣ; ಆದರೆ ನನ್ನ ಬರವಣಿಗೆ ಬೆಳೆದು ಬಂದ ರೀತಿ ಮಾತ್ರ ನಾನೇ ರೂಪಿಸಿದ್ದು.”

ತಂದೆ-ಮಗನ ಸಂಬಂಧ ಇಷ್ಟೊಂದು ಕಹಿಯಾಗಿದ್ದರೂ ಕಾಫ಼್ಕ ತಂದೆಯ ಮನೆಯಲ್ಲೇ ತನ್ನ ಬದುಕಿನ ಬಹುಪಾಲನ್ನು ಕಳೆದದ್ದು ಅವನ ಬದುಕಿನ ವಿಪರ್ಯಾಸಗಳಲ್ಲಿ ಒಂದಾಗಿದೆ. ತಾನು ಮದುವೆಯಾಗದೆ ಒಂಟಿಯಾಗಿ, ನಿಜವಾಗಿಯೂ ಏಕಾಂಗಿಯಾಗಿ ಉಳಿದದ್ದಕ್ಕೂ ತನ್ನ ತಂದೆಯೇ ಪರೋಕ್ಷವಾಗಿ ಕಾರಣ ಎಂದು  ಕಾಫ಼್ಕ ಪತ್ರದಲ್ಲಿ ವ್ಯಕ್ತಪಡಿಸಿದ್ದಾನೆ. ತಂದೆ ತನ್ನನ್ನು ಬೆಳೆಸಿದ ಅನಿಷ್ಟ ರೀತಿಯ ಪರಿಣಾಮದಿಂದಾಗಿ ಮದುವೆಯಂತಹ ಜವಾಬ್ದಾರಿಯನ್ನು ಹೊರಲು ತಾನು ಸಿದ್ಧನಾಗಲೇ ಇಲ್ಲ- ಎಂದು ಕಾಫ಼್ಕ ನಂಬಿದ್ದನು. ಮದುವೆಯಾಗಲು ಆತ ಎರಡು ಸಾರಿ ಪ್ರಯತ್ನಿಸಿದ್ದುಂಟು; ಮದುವೆ-ಸಂಸಾರವಿಲ್ಲದೆ ಬದುಕು ಸಂಪೂರ್ಣ ಬರಡೆಂದು ಆತ ನಂಬಿದ್ದರಿಂದ ಅವನ ಆ ಎರಡೂ ಪ್ರಯತ್ನಗಳು ನಿಷ್ಫಲವಾದದ್ದು ಮಹತ್ವದ ಸಂಗತಿಗಳಾಗಿವೆ. ಪ್ರತಿ ಬಾರಿ ಮದುವೆ ಮಾಡಿಕೊಳ್ಳಲು ನಿರ್ಧರಿಸಿದಾಗಲೂ ಅವನಲ್ಲುಂಟಾಗುತ್ತಿದ್ದ ಉದ್ವಿಗ್ನತೆ, ಕಳವಳ, ನಿದ್ದೆಗೇಡು, ಅಸ್ಪಷ್ಟ ಭೀತಿ, ಹತಾಶೆಯಿಂದಾಗಿ ಅವನು ತಾನು ಮದುವೆಯಾಗಬೇಕೆಂದಿದ್ದ ಇಬ್ಬರು ಹೆಂಗಸರಿಂದಲೂ ದೂರ ಸರಿದನು. ದುರದೃಷ್ಟದಿಂದ, ಈ ಸೋಲು ಗೀಳಿನಂತೆ ಅಂಟಿಕೊಂಡು ಕಾಫ಼್ಕನನ್ನು ಕೊರೆದುಕೊರೆದು ಕ್ಷೀಣಿಸುತ್ತಿತ್ತು.  ಕಾಫ಼್ಕ ಮದುವೆ ಮತ್ತು ಸಾಂಸಾರಿಕ ಜೀವನದಿಂದ ಆಕರ್ಷಿತನಾಗದೇ ಒಂಟಿ ಜೀವನವನ್ನೇ ಇಷ್ಟಪಟ್ಟಿದ್ದರೆ ಆ ವಿಷಯವೇ ಬೇರೆಯಾಗಿರುತ್ತಿತ್ತು. ಆದರೆ, ಮದುವೆಯಾಗಿ, ಸಾಂಸಾರಿಕ ಜೀವನ ನಡೆಸಿ, ಮಕ್ಕಳನ್ನು ಪಡೆದು, ಅವರನ್ನು ಬೆಳೆಸಿ ಮುಂದೆ ತರುವುದು ಮನುಷ್ಯರ ಅತ್ಯುತ್ತಮ ಸಾಧನೆಗಳಲ್ಲೊಂದು ಎಂದು   ಕಾಫ಼್ಕ ನಂಬಿದ್ದನು. ಈ ಕಾರಣದಿಂದ ಅವನ  ಆ ವೈಯಕ್ತಿಕ ಸೋಲು ಅವನ ಜೀವನದಲ್ಲಿ ಅಷ್ಟೊಂದು ಪರಿಣಾಮಕಾರಿಯಾದ ಘಟನೆಯಾಗಿ ಉಳಿಯಿತು.

ಕಾಫ಼್ಕ ಮನೆತನ ನೆಲೆಸಿದ್ದು ೧೯೧೯ರಲ್ಲಿ  ವರ್ಸಾಯ್ ಒಪ್ಪಂದದ ಪರಿಣಾಮವಾಗಿ ವಿಭಜನೆಗೊಂಡ ಆಸ್ಟ್ರೋ-ಹಂಗೇರಿಯನ್‌ ಸಾಮ್ರಾಜ್ಯದ ಪ್ರಾಗ್‌ ನಗರದಲ್ಲಿ. ಆ ಮೇಲೆ ಪ್ರಾಗ್‌ ನಗರ  ಕಾಮ್ಯೂನಿಸ್ಟ್ ಛೆಕಸ್ಲವಾಕಿಯದ ರಾಜಧಾನಿಯಾಯಿತು.  ಕಾಫ಼್ಕ ಛೆಕ್ ಮನೆತನದವನೇ ಆಗಿದ್ದರೂ ಅವನ ಭಾಷೆ ಮಾತ್ರ ಜರ್ಮನ್‌ ಆಗಿತ್ತು.  ಕಾಫ಼್ಕ ತನ್ನ ಕೃತಿಗಳನ್ನೆಲ್ಲ ಜರ್ಮನ್‌ ಭಾಷೆಯಲ್ಲೇ ರಚಿಸಿದ್ದರೂ ಆತ ಭಾಷೆಯಲ್ಲಿ ಮಾತ್ರ ಜರ್ಮನ್‌  ಆಗಿದ್ದರಿಂದ ಕೊನೆಯವರೆಗೂ ಜರ್ಮನ್‌ ಜನಾಂಗದಿಂದ ಹೊರಗಾಗಿಯೇ ಉಳಿದಿದ್ದ. ಇದಕ್ಕೆ ಎರಡು ಕಾರಣಗಳಿದ್ದವು; ಒಂದು ಆತ ಯಹೂದಿಯಾಗಿದ್ದುದು; ಇನ್ನೊಂದು ಆತ ಜರ್ಮನಿಯ ಬದಲು ಛೆಕಸ್ಲವಾಕಿಯದಲ್ಲಿ ಬಹುಕಾಲ ಬದುಕಿದ್ದುದು. ಆದರೆ ಪ್ರಾಗ್‌ನ ಛೆಕ್ ಜನಾಂಗದೊಡನೆ  ಬೆರೆಯುವುದೂ ಕಾಫ಼್ಕನಿಗೆ ಕಷ್ಟವಾಗಿತ್ತು.  ಛೆಕ್ ಆದ ಕಾಫ್ಕನಿಗೆ ಛೆಕ್ ಭಾಷೆಯಮೇಲಿನ ಹಿಡಿತ ಸಾಹಿತ್ಯವನ್ನು ರಚಿಸುವ ಮಟ್ಟಕ್ಕಿರಲಿಲ್ಲ. ಹೀಗಾಗಿ ಜರ್ಮನ್‌ನೆಂದೇ ಆತ ಪ್ರಾಗ್‌ ನಗರದಲ್ಲಿ ಪರಿಗಣಿಸಲ್ಪಟ್ಟಿದ್ದ. ರಾನಲ್ಡ್ ಗ್ರೇ ಹೇಳಿದಂತೆ ಅವನ ಬದುಕಿನಲ್ಲಿ ಏನೊಂದೂ  ನಿಶ್ಚಿತವಾಗಿರಲಿಲ್ಲ. ಆತ ಸಾಂಪ್ರದಾಯಿಕ ಯಹೂದಿಯಾಗಿರಲಿಲ್ಲ; ಜರ್ಮನ್‌ ಭಾಷೆ ಕಲಿತರೂ ನಿಜವಾದ ಜರ್ಮನ್‌ ಆಗಿರಲಿಲ್ಲ; ಎಲ್ಲರಂತೆ ಛೆಕಸ್ಲವಾಕಿಯದವನೂ ಆಗಿರಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಮನೆಯಲ್ಲೇ ಹೊರಗಿನವನಂತೆ ಉಳಿದವನು; ತಂದೆಯಿಂದ ದೂರಸರಿದೂ ತಂದೆಯ ಮನೆಯಲ್ಲೇ ಬದುಕಿದವನು. ಇಂತಹ ಪರಿಸ್ಥಿತಿ ಪದೇ ಪದೇ ಅವನನ್ನು ಸಂಪೂರ್ಣ ಹತಾಶೆಗೆ ತಳ್ಳುತ್ತಿದ್ದು ಅನೇಕ ಬಾರಿ  ಕಾಫ಼್ಕ ಆತ್ಮಹತ್ಯೆಯ ಯೋಚನೆಯಲ್ಲಿ ಮುಳುಗಿದ್ದುಂಟು. ಈ ಬಗೆಯ ಹತಾಶೆ, ಉದ್ವಿಗ್ನತೆ, ಮತ್ತು ಅನಿಶ್ಚಯತೆ  ಅವನ ಕೃತಿಗಳಲ್ಲಿ  ಎದ್ದು ಕಾಣುತ್ತವೆ. ತಾನೇ ಆತ್ಮಹತ್ಯೆಯನ್ನು ಮಾಡಿಕೊಳ್ಳದಿದ್ದರೂ ಅವನ ಕತೆಯ ನಾಯಕನೊಬ್ಬ ಮಾಡಿಕೊಂಡಿದ್ದ. ಕಾಫ಼್ಕ ಬರೆದ ತೀರ್ಪು (Judgment) ಕತೆಯಲ್ಲಿ ಗಿಯೋರ್ಕ್ (Georg) ಎಂಬ ನಾಯಕನ ಅಪ್ಪ ಮಗನಿಗಿಂತ ದೊಡ್ಡ ದೇಹದ, ದೊಡ್ಡಗಂಟಲಿನ, ಒರಟು ಸ್ವಭಾವದ ಕ್ರೂರಿ. (ಕಾಫ಼್ಕನ ತಂದೆಯ ಹಾಗೆ.) ಮಗನನ್ನು ಸದಾ ಹಳಿಯುತ್ತಿದ್ದ ಈ ತಂದೆ ಮಗನೊಡನೆ ಒಂದುದಿನ ಕಾಲು ಕೆರೆದುಕೊಂಡು ಬಂದು ಜಗಳವಾಡಿ ಸಿಕ್ಕಾಪಟ್ಟೆ ಬೈದು ಕೊನೆಗೆ, “ನೀನೊಬ್ಬ ಪಿಶಾಚಿಯಂಥ ಮನುಷ್ಯ! ಆದ್ದರಿಂದ ಸರಿಯಾಗಿ ಕೇಳಿಸಿಕೊ: ನಿನಗೆ ನೀರಿನಲ್ಲಿ ಮಳುಗಿ ಸಾಯುವ ಶಿಕ್ಷೆಯನ್ನು ವಿಧಿಸಿದ್ದೇನೆ.” ಎಂದು ಅರಚಿದನು. ಕೂಡಲೆ ಮಗ ಗಿಯೋರ್ಕ್ ಪೈಷಾಚಿಕ ಶಕ್ತಿಯೊಂದು ಮನೆಯಿಂದ ತಳ್ಳಿಹಾಕಿದಂತೆ ಓಡಿಹೋಗಿ ಹತ್ತಿರದಲ್ಲೇ ಇದ್ದ ಸೇತುವೆಯಿಂದ ನದಿಗೆ ಹಾರಿ ಸತ್ತುಹೋಗುತ್ತಾನೆ.

ಪ್ರಾಗ್ ನಲ್ಲಿರುವ ಕಾಫ್ಕಾ ಮ್ಯೂಸಿಯಂ : Czech by Jane

ಪ್ರಾಗ್ ನಲ್ಲಿರುವ ಕಾಫ್ಕಾ ಮ್ಯೂಸಿಯಂ : Czech by Jane

ಕಾಫ಼್ಕ ಬರೆದದ್ದು ಅಷ್ಟೇನೂ ಹೆಚ್ಚಿಲ್ಲದಿದ್ದರೂ ಅವನ ಬರವಣಿಗೆಯೇ ಅವನ ಬದುಕನ್ನು ಪೂರ್ತಿ ಕವಿದುಬಿಟ್ಟಿತ್ತು. ಆದರೆ  ಹೊಟ್ಟೆಪಾಡಿಗೆ ಅವನು ಗುಮಾಸ್ತನ ಕೆಲಸವನ್ನು ಮಾಡಲೇಬೇಕಿತ್ತಲ್ಲದೆ ಆಗೀಗ ತಂದೆಯ ವ್ಯವಹಾರದ ಉಸ್ತುವಾರಿಯನ್ನೂ ನೋಡಿಕೊಳ್ಳಬೇಕಾಗಿತ್ತು. ಹೀಗಾಗಿ ತನ್ನ ಬರವಣಿಗೆಗೆ ಸಾಕಷ್ಟು ಸಮಯವಿಲ್ಲವೆಂದು   ಕಾಫ಼್ಕನಿಗೆ ತನ್ನ ಮನೆಯವರ ಬಗ್ಗೆ ಇದ್ದ ಅಸಹನೆ ರೂಪಾಂತರ ಕೃತಿಯಲ್ಲಿ ತುಂಬಿಕೊಂಡಿದೆ. ಆದರೆ ಮನೆಯವರ ಬಗ್ಗೆ, ಅದರಲ್ಲು ವಿಶೇಷವಾಗಿ ತಂದೆಯ ಬಗ್ಗೆ ಕಾಫ಼್ಕನಿಗಿದ್ದ ಅಸಮಾಧಾನಕ್ಕೆ ಮತ್ತು ಆತ ಮದವೆಯಾಗದೇ ಉಳಿದಿರುವುದಕ್ಕೆ ಆತನೂ ಜವಾಬ್ದಾರನೆ, ತಂದೆಯೊಬ್ಬನೇ ಅಲ್ಲ. ಫೆಲೀಸ್ ಬಾವ (Felice Bauer) ಎಂಬವಳನ್ನು ಪ್ರೀತಿಸುತ್ತಿದ್ದು ಅವರಲ್ಲಾಗಿದ್ದ ಮದವೆಯ ನಿಶ್ಚಯವನ್ನು ಮುರಿದು ಹಾಕಿದ್ದು ಕಾಫ಼್ಕನೇ; ಆತ ಫೆಲೀಸಳಿಗೆ ಕೊಟ್ಟ ಕಾರಣ? ಸಾಹಿತ್ಯಕ್ಕೇ ತನ್ನ ಜೀವನವನ್ನು ಮುಡಿಪಾಗಿಟ್ಟ ತನ್ನಂಥವನನ್ನು ಮದುವೆಯಾದ ಯಾವ ಹೆಂಗಸಿಗೂ ಸುಖ ಸಿಗಲಿಕ್ಕಿಲ್ಲ—ಎಂಬುದು. ಆತನೆ ತನ್ನ ಬರವಣಿಗೆಯನ್ನು ಕಾಪಾಡಿಕೊಳ್ಳಲು ತನ್ನನ್ನು ಪ್ರೀತಿಸಿ ಮದವೆಯಾಗಲು ಸಿದ್ಧರಿದ್ದವರನ್ನು ದೂರತಳ್ಳಿದ್ದ. ಅವನ ಕ್ಷಯರೋಗವೂ ಇದಕ್ಕೆ ಸ್ವಲ್ಪಮಟ್ಟಿಗಾದರೂ ಕಾರಣವಾಗಿದ್ದಿರಬಹುದು. ಚಿಕ್ಕ ವಯಸ್ಸಿನಲ್ಲೆ ಅತ ತೀರಿಕೊಂಡಿದ್ದು ಕ್ಷಯರೋಗದಿಂದಲೆ. ತಂದೆ ಮಗನನ್ನು ನಡೆಸಿಕೊಳ್ಳುವ ವಿಧಾನದ ಪರಿಣಾಮದಿಂದ, ತಂದೆಯ ಮುಷ್ಟಿ ಹಿಡಿತದಿಂದ  ಕಾಫ಼್ಕ  ಏಕೆ ತಪ್ಪಿಸಿಕೊಳ್ಳಲಿಲ್ಲ- ಎಂಬ ಪ್ರಶ್ನೆಯನ್ನು ಅನೇಕ ವಿಮರ್ಶಕರು ಎತ್ತುವುದೇ ಇಲ್ಲ. ಕಾಫ಼್ಕ ಕೂಡ ಈ ಪ್ರಶ್ನೆಯನ್ನು ಸರಿಯಾಗಿ ಎದುರಿಸಿದಂತೆ ಕಂಡು ಬರುವುದಿಲ್ಲ. ಆತ  ತಂದೆಗೆ ಬರೆದ ಪತ್ರ, ಅವನ ಮತ್ತು ಅವನ ತಂದೆಯ ಸಂಬಂಧದ ಮೇಲೆ ಮತ್ತು ಅವನ ಸಾಹಿತ್ಯ ಸೃಷ್ಟಿಯ ಪ್ರಕ್ರಿಯೆಯ ಮೇಲೆ ಮಹತ್ವದ ಬೆಳಕನ್ನು ಚೆಲ್ಲುವುದು ನಿಜವಾಗಿದ್ದರೂ ನಾವು ಒಂದು ವಿಷಯವನ್ನು ಮರೆಯಲಾಗದು: ಅದೇ ತಂದೆ ಮಗನಿಗೊಂದು ಪತ್ರವನ್ನು ಅಷ್ಟೇ ವಿಶ್ಲೇಷಕ ಪ್ರವೃತ್ತಿಯಿಂದ ಅಷ್ಟೇ ಪ್ರಾಮಾಣಿಕತೆಯಿಂದ ಅಷ್ಟೇ ಮೊನಚಾದ ನಿರ್ಧಾರದಿಂದ ಬರೆದಿದ್ದರೆ ಅದು ಹೇಗಿರುತ್ತಿತ್ತು? ಅಂದರೆ ನಮಗೆ ತಂದೆಯ ದೃಷ್ಟಿಕೋನ, ತಂದೆಯ ಕಥೆ, ಗೊತ್ತಿಲ್ಲ; ಗೊತ್ತಿರುವುದು ಮಗನದು ಮಾತ್ರ.  ಕಾಫ಼್ಕ ತಂದೆಯ ವರ್ತನೆಯ ವರ್ಚಸ್ಸಿಗೆ ಇಷ್ಟೊಂದು ಒಳಗಾಗಿರಲು ಅಂದಿನ ಸಾಂಸಾರಿಕ-ಸಾಮಾಜಿಕ ಸನ್ನಿವೇಶ ಕಾರಣವಾಗಿರಬಹುದು. ಆದ್ದರಿಂದ ಕಾಫ಼್ಕನ ಬರಹದ ಉಗಮವನ್ನು ಸುಮ್ಮನೇ ಅವನ-ಅವನ ತಂದೆಯ ಸಂಬಂಧದಲ್ಲಿ ಕಾಣಲಾಗದು. ಸಂಕೀರ್ಣವಾದ ವೈಯಕ್ತಿಕ, ಸಾಂಸಾರಿಕ, ಸಾಮಾಜಿಕ, ರಾಜಕೀಯ ಮತ್ತು ಐತಿಹಾಸಿಕ ಅಂಶಗಳ ಹಣಾಹಣಿಯಲ್ಲಿ, ಅವುಗಳ ನಿರಂತರ ಜಟಿಲತೆಯಲ್ಲಿ, ಅವುಗಳ ಕ್ರಿಯೆ-ಪ್ರತಿಕ್ರಿಯೆಗಳಲ್ಲಿ ಆ ಬರಹದ ಉಗಮವಿದೆ.

ಕಾಫ಼್ಕನ ಬರಹದ ಅರ್ಥವನ್ನು ವಿಮರ್ಶಕರು ಅನೇಕ ವಿಧಗಳಲ್ಲಿ ಬೇರೆಬೇರೆ  ದೃಷ್ಟಿಕೋಣಗಳಿಂದ ಶೋಧಿಸಿದ್ದಾರೆ. ಅವನ ಬರಹದ ತಿರುಳು ಪಾಪ ಮತ್ತು ಶಿಕ್ಷೆಯಂಥ ಧಾರ್ಮಿಕ ತತ್ವಗಳೆಂದು ಕೆಲವರು ಬಗೆದರೆ, ಇನ್ನು ಕೆಲವರು ಅದು ಅಸ್ತಿತ್ವವಾದದ ಪರಿಶೋಧನೆಯೆಂದು ಭಾವಿಸಿದ್ದಾರೆ. ಮತ್ತೆ ಕೆಲವರು ಅವನ ಬರಹದಲ್ಲಿ ಅತೀಂದ್ರಿಯ ಜ್ಞಾನದ ಹೊಳವನ್ನು ಕಂಡರೆ ಇನ್ನು ಕೆಲವು ವಿಮರ್ಶಕರು ಮಾನಸಿಕ ಅರ್ಥವನ್ನು ಕಷ್ಟಪಟ್ಟು ಹೊಳೆಯಿಸಲು ಪ್ರಯತ್ನಿಸಿದ್ದಾರೆ. ಈಡಿಪಸ್ ಕಾಂಪ್ಲೆಕ್ಸಿನಿಂದ ಕಾಫ಼್ಕ ನರಳುತ್ತಿದ್ದ ಎಂದು ಫ್ರಾಯ್ಡ್ ಅನುಯಾಯಿಗಳು ಆಧಾರವಿಲ್ಲದೆ ಪತ್ತೆಹಚ್ಚಿದ್ದಾರೆ. ಇಪ್ಪತ್ತನೆ ಶತಮಾನದ ಪ್ರಾರಂಭದ ದಶಕಗಳಲ್ಲಿ ಪಾಶ್ಚಾತ್ಯ ಸಮಾಜದಲ್ಲಿ ಸಾಂಪ್ರದಾಯಿಕ-ಸಾಂಸಾರಿಕ ಜೀವನದ ಪದ್ಧತಿಗಳು ಛಿದ್ರಗೊಂಡು ಔದ್ಯಮೀಕರಣ ಕ್ರಮೇಣ ಮನುಷ್ಯರ ಬದುಕನ್ನು ಆಕ್ರಮಿಸತೊಡಗಿದ್ದರ ಪ್ರಭಾವವನ್ನು ಕೆಲವು ವಿಮರ್ಶಕರು ಗುರುತಿಸಿದ್ದಾರೆ. ಒಟ್ಟಿನಲ್ಲಿ ಮನುಷ್ಯರ ನಿರಂತರವಾದ ಸಂದಿಗ್ಧ ಸ್ಥಿತಿಯನ್ನು, ತಮ್ಮ ಒಡನಾಡಿಗಳಿಂದ ಜನರು ದಿನೇ ದಿನೇ ದೂರಸರಿದು  ಒಂಟಿಯಾಗಿದ್ದರೂ ಎಲ್ಲರ ನಡುವೆ ಬದುಕಬೇಕಾದ ನೈತಿಕ ಅನಿವಾರ್ಯತೆಯ ಮೂಲಸ್ಥಿತಿಯನ್ನು ಕಾಫ಼್ಕನ ಬರಹ ಸೃಷ್ಟಿಸುತ್ತದೆ- ಎಂಬ ವಿಷಯವಾಗಿ ಬಹುಪಾಲು ವಿಮರ್ಶಕರಲ್ಲಿ ಒಮ್ಮತವಿದೆ.

ಕಾಫ಼್ಕನ ಬರಹದ ಅರ್ಥವನ್ನು—ಹಾಗೆ ನೋಡಿದರೆ ಯಾವುದೇ ಒಂದು ಸಾಹಿತ್ಯ ಕೃತಿಯ ಅರ್ಥವನ್ನು—ಸಂಕುಚಿತವಾದ  ಆಯಾಮದಲ್ಲಿ ಅಥವ ಮಟ್ಟದಲ್ಲಿ ಕಂಡು ಹಿಡಿಯುವ ಪ್ರಯತ್ನಗಳು ನಿಷ್ಫಲವೆನ್ನಬಹುದು. ಸಾಹಿತ್ಯ ಮನುಷ್ಯರ ಒಟ್ಟು ಸ್ಥಿತಿಯನ್ನು—ಅದರ ಸಂಕೀರ್ಣತೆಯನ್ನೆಲ್ಲ ಒಳಗೊಂಡು—ಸೃಷ್ಟಿಸುತ್ತದೆ ಎಂದು ಭಾವಿಸುವುದಾದರೆ ಕೃತಿಯೊಂದರ ಅರ್ಥ ಕೇವಲ ಧಾರ್ಮಿಕ, ಮಾನಸಿಕ, ರಾಜಕೀಯ, ಆಧ್ಯಾತ್ಮಿಕ-ಇತ್ಯಾದಿ ಯಾವುದೇ ಒಂದು ಮಟ್ಟಕ್ಕೇ ಸೀಮಿತವಾಗಿರುವುದು ಸಾಧ್ಯವಿಲ್ಲ. ಅಲ್ಲದೆ, ಮನುಷ್ಯರ ಒಟ್ಟು ಸ್ಥಿತಿಗೆ ಪ್ರಸ್ತುತವಾದ ಸಾಹಿತ್ಯವನ್ನು ದೇವರು-ಆತ್ಮದ ಸಂಬಂಧ ಇಲ್ಲವೆ ಈಡಿಪಸ್‌ ಕಾಂಪ್ಲೆಕ್ಸ್ ಇತ್ಯಾದಿ ಊಹಾಪೋಹದ ಸೂತ್ರಗಳನ್ನಾಧರಿಸಿ ಸೃಷ್ಟಿಸುವುದು ಎಂದಾದರೂ ಸಾಧ್ಯವೇ-ಎಂಬ ಪ್ರಶ್ನೆ ಏಳುತ್ತದೆ. ವೈಜ್ಞಾನಿಕ ದೃಷ್ಟಿಯಿಂದ ನೋಡಿದಾಗ, ಬರವಣಿಗೆಯನ್ನೂ ಸೇರಿ ಮನುಷ್ಯನ ವರ್ತನೆಯನ್ನು ನಿರ್ಧರಿಸುವ ಅಂಶಗಳು ಹಲವು. ಅವು ಹಲವು ಮಟ್ಟಗಳಲ್ಲಿ ಹಲವು ಬಾರಿ ಏಕಕಾಲಕ್ಕೇ ಚುರುಕಾಗಿರುತ್ತವೆ. ಹೀಗೆ ಸಂಕೀರ್ಣತೆ ಮತ್ತೆ ಏಕಕಾಲಿಕತೆ ಸಾಹಿತ್ಯ ಸೃಷ್ಟಿಯನ್ನೂ ಸೇರಿ ಮನುಷ್ಯರ ವರ್ತನೆಯನ್ನು ನಿರ್ಧರಿಸುವ ಅಂಶಗಳ ಸ್ಪರೂಪವಾಗಿರುವಾಗ, ಅತಿ ಸಂಕೀರ್ಣವಾದ ಸಾಹಿತ್ಯ ರಚನೆಗೆ ಎಡೆಗೊಡುವ ಅಂಶಗಳು ಸರಳವೂ, ಭಿನ್ನಕಾಲಿಕವೂ, ಅಮೂರ್ತವೂ, ಒಂದೇ ಬಗೆಯವೂ ಆಗಿರುವುದು ಸಾಧ್ಯವಿಲ್ಲ. ಈ ದೃಷ್ಟಿಯಿಂದ ಕಾಫ಼್ಕನ ಕೃತಿಗಳನ್ನು ದೇವರು-ಮನುಷ್ಯನ ಸಂಬಂಧ, ಈಡಿಪಸ್‌ ಕಾಂಫ್ಲೆಕ್ಸ್‌, ಬಂಡವಾಳಶಾಹಿ ಸಮಾಜ, ಸರ್ವಾಧಿಕಾರೀ ಆಡಳಿತ, ರಾಜಕೀಯ ಅನಿಶ್ಚಯತೆ- ಇತ್ಯಾದಿ ಒಂದೊಂದೇ ಅಂಶಗಳ ಪ್ರಭಾವಕ್ಕೆ ಇಳಿಸುವುದು ಅಸಮರ್ಪಕವಾಗುತ್ತದೆ. ಅಲ್ಲದೆ ಹೀಗೆ ಸೂಚಿಸಲ್ಪಟ್ಟ ಅಂಶಗಳಲ್ಲಿ ಈಡಿಪಸ್ ಕಾಂಪ್ಲೆಕ್ಸ್ ಅಂಥ ಆಧಾರವಿಲ್ಲದ ಕಲ್ಪನೆಗಳೂ ಇವೆ. ಒಂದು ಸಾಹಿತ್ಯ ಕೃತಿಯ ಅರ್ಥವನ್ನು ಪರಿಶೋಧಿಸುವ ಉದ್ದೇಶದಿಂದ ಆ ಕೃತಿಯನ್ನು ರಚಿಸಿದವರ ಮನಸ್ಸಿನ ಅವಸ್ಥೆ ಮತ್ತು ಪದರುಗಳನ್ನು ವಿಶ್ಲೇಷಿಸಹೊರಡುವುದು ಬಹುಪಾಲು ವಿಮರ್ಶಕರ ಸಾಮಾನ್ಯ ರೂಢಿ. ಇದಕ್ಕನುಗುಣವಾಗಿ ಕಾಫ಼್ಕನ (ಯಾರೂ ಕಂಡಿರದ) ಮಾನಸಿಕ ಪದರುಗಳ ಸೂಕ್ಷ್ಮಾತಿಸೂಕ್ಷ್ಮ ವಿಶ್ಲೇಷಣೆಯನ್ನು ವಿಮರ್ಶನ ಸಾಹಿತ್ಯದಲ್ಲಿ ಹೇರಳವಾಗಿ ಕಾಣಬಹುದು. ಸಾಹಿತ್ಯದ ಉಗಮ ಅದನ್ನು ಸೃಷ್ಟಿಸುವ ವ್ಯಕ್ತಿಯ ಮನಸ್ಸಿನಲ್ಲಿದೆ ಎಂಬ ಕಲ್ಪನೆ ಸಾಹಿತಿಗಳಲ್ಲೂ, ಸಾಹಿತ್ಯ ವಿಮರ್ಶಕರಲ್ಲೂ ಬಲವಾಗಿ ಬೇರೂರಿರುವುದೇ ಇದಕ್ಕೆ ಕಾರಣವಿರಬಹುದು. ಸದ್ಯಕ್ಕೆ ಮನಸ್ಸು ಎಂಬುದೊಂದು ಇದೆ ಎಂಬ ಕಲ್ಪನೆಗೆ ವೈಜ್ಞಾನಿಕ ಆಧಾರವಿಲ್ಲ ಎಂಬ ವಾದವನ್ನು ಬದಿಗಿಟ್ಟು ಬೇರೊಂದು ದೃಷ್ಟಿಕೋನವನ್ನು ಪರಿಗಣಿಸಬಹುದು. ಅದೆಂದರೆ, ಸಾಹಿತ್ಯದ ಉಗಮ ಸಾಹಿತಿಗಳ ಮನಸ್ಸಿನಲ್ಲಿ ಇಲ್ಲ; ಅದು ಅವರು ಬದುಕುವ ಪರಿಸ್ಥಿತಿ-ಪರಿಸರದಲ್ಲಿ ಇದೆ ಎಂಬುದು. ಸಾಹಿತ್ಯಿಕ ಕೃತಿಯೊಂದರ ಅರ್ಥವನ್ನು ಕಂಡುಹಿಡಿಯ ಹೊರಟ ವಿಮರ್ಶಕರು ಲೇಖಕರ ಮನಸ್ಸಿನಾಳದಲ್ಲಿ ಹಣಿಕುತ್ತಾ ಹೋದರೆ ಅಲ್ಲಿ ಅವರಿಗೆ ಕಾಣಿಸುವುದು ಶೂನ್ಯ ಇಲ್ಲ ಕಾಲ್ಪನಿಕ. ಅದೇ ವಿಮರ್ಶಕರು ಸಾಹಿತಿಯ ಮನಸ್ಸನ್ನು ಮರೆತು ಸಾಹಿತಿಯ ಜೀವನ ಪರಿಸರದತ್ತ ಕಣ್ಣು ಹರಿಸಿದರೆ ಹೆಚ್ಚು ಮಹತ್ವಪೂರ್ಣವಾದದ್ದನ್ನು ಕಂಡುಹಿಡಿಯಬಹುದು: ಏನಿಲ್ಲದಿದ್ದರೂ, ಇದರಿಂದ ಸಾಹಿತ್ಯಕ್ಕೂ ವಸ್ತುನಿಷ್ಟ ಪರಿಸರಕ್ಕೂ ಇರುವ ನಿಕಟಸಂಬಂಧ ವ್ಯಕ್ತವಾಗಬಹುದು. ಈ ದೃಷ್ಟಿಯ ಪ್ರಕಾರ ಸಾಹಿತ್ಯ ಬದುಕನ್ನು ಸೃಷ್ಟಿಸುವ, ರೂಪಿಸುವ, ಹೊಳೆಯಿಸುವ, ಕುಂದಿಸುವ, ಅಳಿಸುವ, ಉಳಿಸುವ, ಅಮುಕುವ, ಹಿಗ್ಗಿಸುವ ಸನ್ನಿವೇಶ-ಪರಿಸರದ ಅನ್ವೇಷಣೆ-ವಿಶ್ಲೇಷಣೆಯಾಗಿದೆ. ಸಾಹಿತ್ಯ ಮಾನಸಿಕ ವ್ಯಾಪಾರದ ಅನ್ವೇಷಣೆ ಅಲ್ಲವೇ ಅಲ್ಲ. ಅದು ಬದುಕಿನ ಅನ್ವೇಷಣೆ. ಬದುಕಿನ ಪುನರ್ರಚನೆ.  ಸಾಹಿತ್ಯದ ಹುಟ್ಟು ಮನಸ್ಸಾದರೆ, ಮನಸ್ಸಿನ ಉಗಮವೇನು? ಅಂತಹ ಮಾನಸಿಕ ವ್ಯಾಪಾರ ಹೇಗೆ ಹುಟ್ಟಿಕೊಂಡಿತು? ಎಂಬ ಪ್ರಶ್ನೆಗಳನ್ನು ಸಹಜವಾಗಿ ಕೇಳಬೇಕಾಗುತ್ತದೆ; ಅವುಗಳಿಗೆ ಮನೋವಿಜ್ಞಾನದಲ್ಲೂ ಉತ್ತರವಿಲ್ಲ. ಸಾಂಪ್ರದಾಯಿಕ ದೃಷ್ಟಿಕೋನ ಏನನ್ನು ಮಾನಸಿಕ ವ್ಯಾಪಾರವೆಂದು ಪರಿಗಣಿಸುತ್ತದೆಯೊ ಅದು ಪರಿಸರದಿಂದ ಪ್ರಚೋದಿಸಲ್ಪಟ್ಟ ಮನುಷ್ಯ ವರ್ತನೆಯಾಗುತ್ತದೆ.

ಕಾಫ್ಕಾ ಮ್ಯೂಸಿಯಂ ನ ಒಳಗೆ : Atlas Obscura

ಕಾಫ್ಕಾ ಮ್ಯೂಸಿಯಂ ನ ಒಳಗೆ : Atlas Obscura

ಸಾಹಿತ್ಯರಚನೆ ಮಾನಸಿಕ ವ್ಯಾಪಾರದ ಅಭಿವ್ಯಕ್ತಿ ಎಂಬುದನ್ನು ಅಲ್ಲಗಳೆದು ಅದು ವ್ಯಕ್ತಿಯ ಪರಿಸರದ ಪ್ರಭಾವದಿಂದ ಹುಟ್ಟಿಕೊಂಡ ವರ್ತನೆ ಎಂದು ಭಾವಿಸಿದಾಗ ಸಾಹಿತ್ಯದ ಮಹತ್ವ ಮತ್ತು ಬದುಕಿಗೆ ಅದರ ಪ್ರಸ್ತುತತೆ ಹೆಚ್ಚಾಗುತ್ತದೆ. ಜೊತೆಗೆ ಸಾಹಿತ್ಯಕ್ಕೂ ಮತ್ತು  ಮನುಷ್ಯರ ವರ್ತನೆ, ಸಮಾಜ, ಸಾಮಾಜಿಕ ಸನ್ನಿವೇಶ, ವೈಯಕ್ತಿಕ ಬದುಕಿನ ಪರಿಸ್ಥಿತಿ- ಪರಿಸರಗಳನ್ನು ವಿಶ್ಲೇಷಿಸುವ ಅನೇಕ ಬಗೆಯ ವಿಜ್ಞಾನಗಳಿಗೂ ಇರುವ ಸಂಬಂಧ ಸ್ಪಷ್ಟವಾಗುತ್ತದೆ. ಈ ಬಗೆಯ ಕೆಲವು ವಿಜ್ಞಾನಗಳೂ ಸಾಹಿತ್ಯವೂ ಸಾಧಿಸಹೊರಟಿರುವುದು ಒಂದೇ ಆಗಿದೆ: ಮನುಷ್ಯರಿಗೂ ಅವರ ಪರಿಸರ-ಪರಿಸ್ಥಿತಿಗೂ ಇರುವ ಸಂಬಂಧದ ವಿಶ್ಲೇಷಣೆ. ಉತ್ತಮ ಮಟ್ಟದ ಸೃಜನಶೀಲ ಸಾಹಿತ್ಯ ಮನುಷ್ಯರ ಪರಿಸ್ಥಿತಿಯನ್ನು, ಅವರ ಬದುಕನ್ನು ರೂಪಿಸುವ ಸೆಳೆತಗಳನ್ನು ಪರೀಕ್ಷಿಸುತ್ತಲೇ ಬಂದಿದೆ.

ಸಾಹಿತ್ಯ ಮತ್ತು ಮಾನವಿಕ ವಿಜ್ಞಾನಗಳು ತಮ್ಮ ಗುರಿಯನ್ನು ಸಾಧಿಸುವ ವಿಧಾನಗಳು ಮಾತ್ರ ಬೇರೆ. ವಿಜ್ಞಾನಗಳು ಮೂಲತಃ ವಸ್ತುನಿಷ್ಠ ವಿಧಾನವನ್ನು ಬಳಸಿದರೆ ಸಾಹಿತ್ಯ ವೈಯಕ್ತಿಕ ಅನುಭವವನ್ನು ಆಧರಿಸುತ್ತದೆ. ಈ ಭಿನ್ನ ವಿಧಾನಗಳ ಚೌಕಟ್ಟಿನಲ್ಲಿ ಸಾಹಿತ್ಯ ಕೃತಿ ಮತ್ತು ವೈಜ್ಞಾನಿಕ ಸಿದ್ಧಾಂತಗಳೆರಡೂ ಒರೆಗಲ್ಲಿಗೆ ಹಚ್ಚಲ್ಪಡುತ್ತವೆ. ಸಾಹಿತ್ಯ ಕೃತಿಯೊಂದರ “ಮೌಲ್ಯನಿರ್ಧಾರ” ಎಂಬುದು, ಒಂದು ಮಟ್ಟದಲ್ಲಿ, ಆ ಸಾಹಿತ್ಯ ಕೃತಿ ಕಲ್ಪಿಸಿದ ಬದುಕಿಗೂ, ಆ ಬದುಕು ರೂಪುಗೊಂಡಿರಬಹುದಾದ ಪರಿಸರಕ್ಕೂ ಇರುವ ಸಂಬಂಧ ಮತ್ತು ಸಾಂಗತ್ಯದ ವಿಶ್ಲೇಷಣೆ ಎನ್ನಬಹುದು. ಯಥಾರ್ತ (authentic) ಎನ್ನಬಹುದಾದ ಸಾಹಿತ್ಯ ಕೃತಿಯಲ್ಲಿ (ಅಥವ ಇನ್ನಾವುದೇ ಕಲಾಕೃತಿಯಲ್ಲಿ) ಈ ಸಂಬಂಧ ಮತ್ತು ಸಾಂಗತ್ಯ ತಿಳಿಯಾಗಿರುತ್ತದೆ; ಅಥವ ವಿಶ್ಲೇಷಣೆಯಲ್ಲಿ ಸ್ಪಷ್ಟವಾಗುತ್ತದೆ. ಆದರೆ ಮೌಲ್ಯ ನಿರ್ಧಾರ ಈ ಸಂಬಂಧ ಮತ್ತು ಸಾಂಗತ್ಯದ ವಿಶ್ಲೇಷಣೆಯನ್ನು ಮೀರಿ ಹೋಗಬೇಕಾಗುತ್ತದೆ. ಏಕೆಂದರೆ ಸೃಜನಶೀಲ ಸಾಹಿತ್ಯ ಸೃಷ್ಟಿಸಿದ ಬದುಕಿನ ಚಿತ್ರಕ್ಕೂ ಆ ಬದುಕನ್ನು ರೂಪಿಸಿದ ಪರಿಸರಕ್ಕೂ ನಿಶ್ಚಿತ ಸಂಬಂಧ ಇರುವುದಷ್ಟೇ ಅಲ್ಲದೆ ಅಂತಹ ಸಾಹಿತ್ಯದಲ್ಲಿ ಇನ್ನೆರಡು ಬಗೆಯ ಸಾಧನೆಗಳನ್ನು ಕಾಣಬಹುದು. ಮೊದಲನೆಯದಾಗಿ ಸಾಹಿತ್ಯ ಕಲ್ಪಿಸಿದ ಬದುಕಿನ, ವಾಸ್ತವವಾಗಿ ವರ್ತನೆಯ, ಸ್ವರೂಪ ಹೊಸದಾಗಿರಬಹುದು; ಇಲ್ಲವೆ ಆ ಸ್ಪರೂಪ ಹಳೆಯದಾಗಿದ್ದು ಅದು ಇದುವರೆಗೆ ಸೃಷ್ಟಿಶೀಲ ಸಾಹಿತ್ಯದಲ್ಲಿ ದಾಖಲಾಗದೆ ಹೋಗಿರಬಹುದು. ಎರಡನೆಯದಾಗಿ, ಸಾಹಿತ್ಯ ಸೃಷ್ಟಿಸಿದ ವರ್ತನೆಯನ್ನು ರೂಪಿಸಿದ ಪರಿಸರದ ಅಂಶಗಳು ಹೊಸದಾಗಿದ್ದು, ಕೃತಿ ಆ ಅಂಶಗಳತ್ತ ಗಮನಸೆಳೆಯಬಹುದು. ಸಾಹಿತ್ಯದಲ್ಲಿ ಯಾವುದನ್ನು ನಾವು “ಹೊಸ ಸಂವೇದನೆ,” “ಹೊಸ ಅನುಭವ” ಎಂದು ಕರೆಯುತ್ತೇವೆಯೋ ಅವೆಲ್ಲಾ ನಿಜವಾಗಿ ಸೂಚಿಸುವುದು ಹೊಸ ಪರಿಸರದಿಂದ ಪ್ರಚೋದನೆಗೊಂಡ ಹೊಸ ವರ್ತನೆಗಳನ್ನು ಮತ್ತು ಹೊಸ ವರ್ತನೆಗಳ ಸಾಧ್ಯತೆಗಳನ್ನು. ಸೂಕ್ಷ್ಮವಾಗಿ ವ್ಯತ್ಯಾಸಗೊಂಡ ಪರಿಸರದ ಅಂಶಗಳು ಜನಸಾಮಾನ್ಯರನ್ನು ತಟ್ಟುವ ಮೊದಲೇ ಅವು ಸೃಜನಶೀಲ ಸಾಹಿತಿಗಳನ್ನು ಮತ್ತಿತರ ಕಲಾವಿದರನ್ನೂ ತಟ್ಟಿ ಮುಟ್ಟಿ ಅವರ ವರ್ತನೆಯನ್ನು ಅದುರಿಸಿ ಬದಲಾಯಿಸುತ್ತವೆ.  ಒಂದು ಸಾಮಾಜಿಕ-ವೈಯಕ್ತಿಕ ಪರಿಸರದಲ್ಲಾಗುತ್ತಿರುವ ಸೂಕ್ಷ್ಮ(ಕೆಲವೊಮ್ಮೆ ಸ್ಥೂಲ) ಬದಲಾವಣೆಗಳು ಈ ಹೊಸ ವರ್ತನೆಯ ಮೂಲವಾಗಿರುತ್ತವೆ. ಪರಿಸ್ಥಿತಿಗಳಲ್ಲಾಗುವ ಆ ಬಗೆಯ ಬದಲಾವಣೆಗಳನ್ನು, ಪರಿಣಾಮವಾಗಿ ಬದುಕಿನಲ್ಲಿ—ಅಂದರೆ ವರ್ತನೆಯಲ್ಲಿ—ಆಗುತ್ತಿರುವ ಬದಲಾವಣೆಗಳನ್ನು ನಮ್ಮ ನಡುವೆ ಬದುಕುವ ಸೃಜನಶೀಲ ಸಾಹಿತಿಗಳು ನಮ್ಮೆಲ್ಲರಿಗಿಂತ ಮೊದಲೆ ಪತ್ತೆಹಚ್ಚಿ ಅವೆಲ್ಲವನ್ನೂ ಶಬ್ದಗಳಲ್ಲಿ ತಮ್ಮದೇ ಆದ ಶೈಲಿಗಳಲ್ಲಿ (ಕಾಫ಼್ಕನಂತೆ ಬೇಗುದಿಯಲ್ಲೆ) ಹೊಸದಾಗಿ ಸೃಷ್ಟಿಸುವುದನ್ನು ಕಲಿತಿರುತ್ತಾರೆ. ಈ ದೃಷ್ಟಿಯಲ್ಲಿ ಸೃಜನಶೀಲ ಸಾಹಿತಿಗಳು ತಮ್ಮ ಒಡನಾಡಿಗಳಿಗಿಂತ ಸದಾ ಒಂದು ಹೆಜ್ಜೆ ಮುಂದಿರುತ್ತಾರೆ. ಜನಸಾಮಾನ್ಯರು ಇನ್ನೂ ಗ್ರಹಿಸಿರದ ಪರಿಸರದ ಬದಲಾವಣೆಗಳಿಗೆ ಹಲವೊಮ್ಮೆ ಬಲು ಬಿರುಸಾಗಿ ಪ್ರತಿಕ್ರಿಯಿಸುವುದು ಸೃಜನಶೀಲ ಸಾಹಿತಿಗಳ ಅದೃಷ್ಟವೂ ಹೌದು, ದುರದೃಷ್ಟವೂ ಹೌದು. ಇದೀಗ ಅವರ ಸೃಜನಶೀಲತೆಯ, ವೈಶಿಷ್ಟ್ಯತೆಯ ಮೂಲವಾದರೆ ಅದು ಅವರ ವಿಶೇಷ ವೇದನೆಯ, ತೊಳಲಾಟದ, ನೈತಿಕ ಸಂದಿಗ್ದತೆಯ, ಒಂಟಿತನದ ಮೂಲವೂ ಆಗುತ್ತದೆ. ಒಂದು ಜನಾಂಗ ನರಕಕ್ಕೆ ಹೋಗುವುದಾದರೆ ಆ ಜನಾಂಗದ ಸಾಹಿತಿಗಳು ಅಡ್ವಾನ್ಸ್ ಪಾರ್ಟಿಯಾಗಿ ಮೊದಲೆ ಅಲ್ಲಿಗೆ ಹೋಗಿ ಸೇರಿಕೊಂಡು ತಮ್ಮವರನ್ನು ಸ್ವಾಗತಿಸಲು ತಯಾರಾಗಿ ನಿಂತಿರುತ್ತಾರೆ!

ಕಾಫ಼್ಕನ ಬರಹಗಳನ್ನೆಲ್ಲ ತುಂಬಿಕೊಂಡಿರುವುದು ಅವನ ವೈಯಕ್ತಿಕ, ಸಾಮಾಜಿಕ, ಮತ್ತು ಅವನ ಕಾಲ-ದೇಶದ ತೊಳಲಾಟ. ಆದರೆ ಅದೇ ಅಥವ ಅದೇ ಬಗೆಯ ತೊಳಲಾಟವನ್ನು ಯಾವ ದೇಶದಲ್ಲಾದರೂ ಅಂಥದೇ ಅಥವ ಭಿನ್ನ ಕಾರಣಗಳಿಂದಾಗಿ ಜನರು ಅನುಭವಿಸಹುದು ಎಂಬುದರಿಂದಲೇ ಕಾಫ಼್ಕನ ಬರವಣಿಗೆಗೆ ದೇಶ-ಕಾಲವನ್ನು ಮೀರಿದ ಮೌಲ್ಯವಿದೆ. ಅಂಥ ತೊಳಲಾಟದ ಜೊತೆಗೆ ಅಸಂಗತ ಮತ್ತು ಅಸಂಬದ್ಧ ಘಟನೆಗಳು ಸೇರಿಕೊಂಡು ಒಟ್ಟಿನಲ್ಲಿ ಕಾಫ಼್ಕ ಸೃಷ್ಟಿಸುವ ಬದುಕು ಮತ್ತು ಪ್ರಪಂಚ ದಿಗ್ಭ್ರಮೆ ಹುಟ್ಟಿಸುತ್ತವೆ. ಅವನ The Trial (ವಿಚಾರಣೆ) ಎಂಬ ಕಾದಂಬರಿಯಲ್ಲಿ ಯಾವ ತಪ್ಪನ್ನೂ ಮಾಡದ ವ್ಯಕ್ತಿಯೊಬ್ಬನನ್ನು ಬಂಧಿಸಿ ಒಂದು ವರ್ಷ ಕಾಲ ನಿರಂತರವಾದ, ಅರ್ಥವೇ ಆಗದ, ಹಿಂದು ಮುಂದಿಲ್ಲದ ವಿಚಾರಣೆಗೆ ಗುರಿಪಡಿಸುತ್ತಾರೆ. ಕೊನೆಗೂ ಅವನಿಗೆ ತನ್ನ ಅಪರಾಧವೇನೆಂಬುದು, ತನ್ನನ್ನು ಯಾವ ಕಾನೂನಿನ ಪ್ರಕಾರ ವಿಚಾರಣೆಗೆ ಗುರಿಪಡಿಸಿದ್ದಾರೆಂಬುದು ಅರ್ಥವಾಗದಿದ್ದರೂ ಅವನನ್ನು ಸಾಯಿಸಿಬಿಡುತ್ತಾರೆ. ಅವನ The Castle (ದುರ್ಗದರಮನೆ) ಎಂಬ ಕಾದಂಬರಿಯಲ್ಲಿ ಮೋಜಣಿದಾರನ (surveyor) ಕೆಲಸ ಸಿಕ್ಕಿದ ಎಂಜಿನೀಯರ್ ಒಬ್ಬ ನಿಘೂಡವಾದ ದುರ್ಗದ ಮೇಲಿನ ಅರಮನೆಯಲ್ಲಿದ್ದ, ಆತನಿಗೆ ಕೆಲಸ ಕೊಟ್ಟವರನ್ನು ಕಾಣಲು ಸಾಧ್ಯವೇ ಆಗದಿದ್ದಾಗ ಮಧ್ಯವರ್ತಿಯೊಬ್ಬ ಅವನನ್ನು ಪಾತ್ರತೊಳೆಯುವ ಕೆಲಸಕ್ಕೆ ಹಾಕಿಬಿಡುತ್ತಾನೆ. (ಕಾಫ಼್ಕನ ಪುಸ್ತಕಗಳನ್ನು ಓದಿ ಪ್ರಾಗ್ ನಗರಕ್ಕೆ ಭೇಟಿ ಕೊಟ್ಟವರಲ್ಲಿ ಆ ಸುಂದರ ಶಹರದಮೇಲೆ ಕವಿದುಕೊಂಡು ಎತ್ತರದ ಬೆಟ್ಟದಮೇಲೆ ಚೂಪಾದ ಎರಡು ಕಪ್ಪು ಶಿಖರಗಳಿಂದ ಆಕಾಶವನ್ನು ಚುಚ್ಚುತ್ತ ನಿಂತಿರುವ [ಕಾಫ಼್ಕನ!] Castle ಥಟ್ಟನೆ ಒಂದು ಅರ್ಥವಾಗದ ಅಸ್ವಸ್ಥತೆಯನ್ನು ಕೆರಳಿಸಬಹುದು.) ಕೊನೆಗೂ ಮೋಜಣಿದಾರನಿಗೆ ತನ್ನ ಪಾಡೇನಾಯಿತು, ತನಗೆ ಕೆಲಸ ಕೊಟ್ಟವರು ಯಾರು, ಆ ದುರ್ಗದಲ್ಲಿ ನಡೆಯವುದಾದರೂ ಏನು ಎಂಬುದು ಗೊತ್ತಾಗಲೆ ಇಲ್ಲ. ಊರಿನವರೆಲ್ಲರೂ ಮುಖಹೀನ ಆಡಳಿತಾಧಿಕಾರಿಯ ಅಪ್ಪಣೆಗಳನ್ನು ಮಾತೆತ್ತದೆ ಪರಿಪಾಲಿಸುತ್ತಾರೆ. ಕಾಫ಼್ಕನ ಕತೆ ಕಾದಂಬರಿಗಳಲ್ಲಿ ಬರುವ ನಿರೂಪಣಾ ವಸ್ತುಗಳಲ್ಲಿ ಇದೂ ಒಂದು: ವ್ಯಕ್ತಿಯ ಅಸಹಾಯಕತೆ ಮತ್ತು ಆಳುವವರ ವಿಚಾರಹೀನತೆ ಮತ್ತು ಕ್ರೌರ್ಯ. ಹಾಗಾಗಿ ಕೆಲವು ವಿಮರ್ಶಕರು ಸ್ವಲ್ಪ ಕಾಲದಲ್ಲೆ ಜರ್ಮನಿಯಲ್ಲಿ ತಲೆ ಎತ್ತಿದ ನಾಟ್ಸಿ ಪಕ್ಷದ ಹಿಟ್ಲರ್ ಬಗ್ಗೆ ಮತ್ತು ಇಡೀ ಕೇಂದ್ರ ಯೂರೋಪಿನ ರಾಜ್ಯಗಳನ್ನು ಕಾಮ್ಯುನಿಸಂ ಆಕ್ರಮಿಸಿದ್ದರ ಬಗ್ಗೆ ಕಾಫ಼್ಕ ಮುನ್ಸೂಚನೆ ಕೊಟ್ಟನೆಂದು ವ್ಯಾಖ್ಯಾನಿಸಿದ್ದಾರೆ. ಯಹೂದಿಗಳನ್ನು ಹಿಟ್ಲರ್ ಸೆರೆಹಿಡಿದು ಕೊಲೆಕಾರ್ಖಾನೆಗಳಲ್ಲಿ ಕೂಡಿಹಾಕಿ ಕೊಲ್ಲಲು ಶುರಮಾಡುವ ಮೊದಲೆ ಕಾಫ಼್ಕ ತೀರಿಕೊಂಡಿದ್ದರೂ ಅವನ ಇಬ್ಬರು ಸೋದರಿಯರು ನಾಟ್ಸಿಯ ಯಹೂದಿ ನಿರ್ನಾಮ ಯೋಜನೆಗೆ  ತುತ್ತಾಗಿದ್ದರು. ಆದರೆ ಮಂದೆ ಬರಲಿರುವ ಸಂಕಷ್ಟಗಳ ಬಗ್ಗೆ ಕಾಫ಼್ಕ ಬರೆದ ಎಂದರೆ ಅವನು ದಿನಾ ಅನುಭವಿಸಿದ ತಾಪವನ್ನು ಕಡೆಗಣಿಸಿದ ಹಾಗಲ್ಲವೆ? ಹೃದಯ ವಿದ್ರಾವಕ ಕತೆ ಕಾದಂಬರಿಗಳನ್ನು ಬರೆಯಲು ಕಾಫ಼್ಕನಿಗೆ ಸ್ವಂತ ಅನುಭವಗಳ ಕೊರತೆ ಇರಲಿಲ್ಲ. ಅನನುಕೂಲದಲ್ಲಿ ಬದುಕುವವರಿಗೆ ಮಾತ್ರ ಆಗುವ ಅನ್ಯಾಯ, ಅಸಮಾನತೆ, ಕುರುಡು ಸೊಕ್ಕಿನ ದೇಶಭಕ್ತಿ, ಸರಕಾರ ಮತ್ತು ಪೋಲೀಸರ ದೌರ್ಜನ್ಯ, ಬಡವರ ಶೋಷಣೆ, ಅಲ್ಪ ಸಂಖ್ಯಾತರಮೇಲಿನ ದಬ್ಬಾಳಿಕೆ, ಚರ್ಮ-ಬಣ್ಣ ದ್ವೇಶ, ಮತಾಂಧತೆ, ಭಯೋತ್ಪಾದನೆ, ಸರಕಾರೀ ಭ್ರಷ್ಟಾಚಾರ, ಪರಿಭೇದ-ಪಂಕ್ತಿಭೇದ ಈಗಿನ ಪ್ರಪಂಚದಲ್ಲಿ ಎಲ್ಲೆಲ್ಲೂ ತುಂಬಿಕೊಂಡಿರುವಾಗ ಎಂದೋ ಬರಲಿರುವ ಯಾವುದೋ ಕಾಲದ ತಾಪತ್ರಯಗಳ ಬಗ್ಗೆ ಬರೆಯುವ ತುರ್ತು ಈಗಿನ ಲೇಖಕರಿಗೆ ಇರಲು ಸಾದ್ಯವೆ? ಕಾಫ಼್ಕನಿಗು ಹಾಗೆಯೆ; ವರ್ತಮಾನ ಸಾಕಿತ್ತು.

ನಾನು ಭಾಷಾಂತರಿಸಿರುವ ರೂಪಾಂತರದಲ್ಲಿ ಈ ಬಗೆಯ ತೊಳಲಾಟ ವಿಚಿತ್ರವಾದ ರೀತಿಯಲ್ಲಿ ವ್ಯಕ್ತವಾಗಿದೆ. ಇದು ಮನುಷ್ಕನೊಬ್ಬ ದೈತ್ಯಾಕಾರದ ಹುಳುವಾಗಿ ರೂಪಾಂತರಗೊಂಡಮೇಲೆ ಆತ ಹಲವು ದಿವಸ ಬದುಕಿದ್ದ ಕತೆ.  ಗ್ರಿಗೋರ್ ಸಾಂಸ ಒಬ್ಬ ಸಂಚಾರಿ ವ್ಯಾಪಾರಿ; ತಂದೆ, ತಾಯಿ, ಮತ್ತು ತಂಗಿಯ ಜೊತೆ ವಾಸಿಸುವವನು. ತಂದೆ ಮಾಡಿದ ಸಾಲದ ಹೊರೆಯನ್ನು ಹೊತ್ತು ಸಂಸಾರ ನಡೆಸುವ ಉದ್ದೇಶದಿಂದ ತನಗಿಷ್ಟವಿಲ್ಲದ ವ್ಯಾಪಾರೀ ವೃತ್ತಿ ಹಿಡಿದವನು. ತಂದೆಯ ಸಾಲ ಮುಗಿದಕೂಡಲೇ ಈ ಅನಿಷ್ಟ ಕೆಲಸವನ್ನು ತೊರೆದು ಸ್ಪತಂತ್ರನಾಗುವ ಹಂಬಲದಲ್ಲಿದ್ದವನು; ತಂಗಿಯನ್ನು ಸಂಗೀತ ಶಾಲೆಗೆ ಕಳಿಸುವ ಆಸೆಯಲ್ಲಿದ್ದವನು. ಆದರೆ ಇದ್ದಕ್ಕಿದ್ದಂತೆ ಒಂದು ಬೆಳಗ್ಗೆ ಎದ್ದು ಕೆಲಸಕ್ಕೆ ಹೋಗಬೇಕಾಗಿದ್ದವನಿಗೆ ಹಾಸಿಗೆಯಲ್ಲಿ ದೊಡ್ಡ ಹುಳುವಾಗಿ ರೂಪಾಂತರಗೊಂಡಿದ್ದು ವೇದ್ಯವಾಗುತ್ತದೆ. ಕತೆ ಶುರುವಾಗುವಾಗಲೇ ಈ ರೂಪಾಂತರ ಮುಗಿದು ಹೋಗಿರುವುದರಿಂದ ಗ್ರಿಗೋರ್ ಏಕೆ ಮತ್ತು ಹೇಗೆ ಹುಳುವಾದ ಎಂಬುದರ ವಿವರಣೆ ಕತೆಯಲ್ಲಿ ಇಲ್ಲ. ಅಲ್ಲದೆ ಕೆಲವು ಮುಖ್ಯವಾದ ಸಂಗತಿಗಳೆಂದರೆ  ಗ್ರಿಗೋರ್ ಹುಳುವಿನ ರೂಪಕ್ಕೆ ಮಾರ್ಪಾಡಾದರೂ ಮಾನವೀಯ ಆಲೋಚನೆ, ಭಾವನೆ, ಪ್ರತಿಕ್ರಿಯೆಗಳನ್ನು ಉಳಿಸಿ ಕೊಂಡಿರುವುದು; ಕತೆಯ ಬಹುಪಾಲು ಗ್ರಿಗೋರ್‌ನ ದೃಷ್ಟಿಯಲ್ಲೇ ತೆರೆದುಕೊಳ್ಳುತ್ತ ಹೋಗುವುದು. (ಆದರೆ, ಆತ ಸತ್ತ ಮೇಲೂ ಕತೆ ಒಂದಿಷ್ಟು ಮುಂದುವರಿಯುವುದರಿಂದ ಗ್ರಿಗೋರನೇ ಕತೆ ಹೇಳುತ್ತಿಲ್ಲವೆಂಬುದು ಸ್ಪಷ್ಟ.) ಆಗೀಗ ಅವನ ವರ್ತನೆ, ಭಾವನೆ, ಆಹಾರದ ರುಚಿ, ಇತ್ಯಾದಿಗಳಲ್ಲಿ ಮನುಷ್ಯತನ ಕ್ರಮೇಣ ಕುಂದುವಂತೆ ಕಂಡು ಬಂದರೂ, ಅದರ ಬಗ್ಗೆ ಅವನಲ್ಲೇ ಇರುವ ಪ್ರಜ್ಞೆಯಿಂದಾಗಿ ಆತ ಮತ್ತೆಮತ್ತೆ ಮಾನವೀಯ ವೃತ್ತಕ್ಕೆ ಹೊರಳಿಕೊಳ್ಳಲು ಪ್ರಯತ್ನಿಸುವುದು ವ್ಯಕ್ತವಾಗುತ್ತದೆ. ಕತೆಯಲ್ಲಿ ತುಂಬಿ ಕೊಂಡಿರುವ ಹಲವು ಬಗೆಯ ವಿಪರ್ಯಾಸಗಳಲ್ಲಿ ಇದೂ ಒಂದು.

ಯುವನಾಗಿ ರೂಪಾಂತರವಾಗುತ್ತಿದ್ದಾಗ ಕಾಫ್ಕಾ

ಯುವನಾಗಿ ರೂಪಾಂತರವಾಗುತ್ತಿದ್ದಾಗ ಕಾಫ್ಕಾ

ಕತೆಯ ಮೊದಲನೆಯ ವಾಕ್ಯವೊಂದನ್ನು ನಾವು ಒಪ್ಪಿಕೊಂಡ ಮೇಲೆ ಉಳಿದದ್ದೆಲ್ಲ ಅತ್ಯಂತ ತರ್ಕಬದ್ಧವಾಗಿ, ಸಮರ್ಪಕವಾಗಿ, ಸಹಜವಾಗಿ, ಮತ್ತು ಅನಿವಾರ್ಯವಾಗಿ ಕಾಣುತ್ತದೆ. ಆದರೆ ಮಗ ಏಕೆ ಹುಳುವಾಗಿ ಮಾರ್ಪಾಡಾದ ಎಂಬ ಪ್ರಶ್ನೆ ಮನೆಯವರನ್ನು ಅಷ್ಟಾಗಿ ಬಾಧಿಸುವುದಿಲ್ಲ. ಮನೆಯವರು ಪ್ರಾರಂಭದಲ್ಲಿ ದಿಗ್ಭ್ರಮೆಗೊಂಡವರು ಕೂಡಲೇ ಚೇತರಿಸಿಕೊಂಡು ತಮ್ಮ ದೈನಂದಿನ ವ್ಯವಹಾರಗಳಲ್ಲಿ ತೊಡಗಿಕೊಳ್ಳುತ್ತಾರೆ. ಮಗ ಹಣಗಳಿಸಿ ಸಂಸಾರ ನಡೆಸುತ್ತಿರುವಾಗ ಕೈಯ್ಯಲ್ಲಿ ಏನೂ ಸಾಗದಂತಹ ನಿರ್ಬಲನಾಗಿದ್ದ, ಕೆಲಸವಿಲ್ಲದೆ ಮನೆಯಲ್ಲೇ ಬಿದ್ದುಕೊಂಡಿರುತ್ತಿದ್ದ ತಂದೆ ಧಿಡೀರನೆ ಚೇತರಿಸಿಕೊಂಡು ಬ್ಯಾಂಕೊಂದರಲ್ಲಿ ಜವಾನನಾಗಿ ಸೇರಿ ಕೆಲಸ ಶುರುಮಾಡಿಬಿಡುತ್ತಾನೆ. ಹಾಗೆ ನೋಡಿದರೆ ಮನೆಯ ಆರ್ಥಿಕ ಪರಿಸ್ಥಿತಿ ಗ್ರಿಗೋರ್ ಭಾವಿಸಿದಷ್ಟು ಹದಗೆಟ್ಟಿರದೆ ವಸ್ತುಸ್ಥಿತಿ ಉತ್ತಮವಾಗಿದ್ದಂತೆಯೇ ತೋರುತ್ತದೆ. ಆದರೆ ಈ ಅನುಕೂಲಕರ ಪರಿಸ್ಥಿತಿಯಲ್ಲಿ ನಾವು ಕಾಣುವುದು ತಂದೆ ಮಗನನ್ನು ವಂಚಿಸಿದ್ದರ ಹೊಳವನ್ನೇ. ಏಕೆಂದರೆ, ಸಂಸಾರದ ನಿಜವಾದ ಆರ್ಥಿಕ ಪರಿಸ್ಥಿತಿಯ ಪರಿಚಯವಿದ್ದಿದ್ದರೆ ಗ್ರಿಗೋರ್ ಅಷ್ಟು ಕಷ್ಟಪಟ್ಟು ದುಡಿಯಬೇಕಾದ ಅವಶ್ಯಕತೆ ಇರುತ್ತಿರಲಿಲ್ಲ; ಇಲ್ಲವೇ ತನ್ನ ದರಿದ್ರ ಕೆಲಸದಿಂದ ಬಿಡುಗಡೆ ಪಡೆಯುವ ದಿನ ಹತ್ತಿರವಾಯಿತೆಂದು ಆತ ಉತ್ಸುಕನಾಗಬಹುದಿತ್ತು. ಮನೆಯವರೆಲ್ಲರ ಪೈಕಿ ಗ್ರಿಗೋರನ ತಂಗಿ ಮಾತ್ರ ಅವನ ಕ್ಷೇಮಚಿಂತನೆಯನ್ನು ಮಾಡಿದವಳು. ಆದ್ದರಿಂದ ಕೂಡಲೆ ಹುಳುವಿನ ಯೋಗಕ್ಷೇಮ ಅವಳ ದಿನಚರಿಯಾಯಿತು. ಆದರೆ ಅವಳೂ ಕೂಡ ಕ್ರಮೇಣ ಕ್ರಿಮಿಯ ರೂಪದಲ್ಲಿರುವ ತನ್ನ ಸೋದರನನ್ನು ಅಲಕ್ಷಿಸಲು ಶುರುಮಾಡಿದಳು; ಕೊನೆಗೆ ಗ್ರಿಗೋರನ ಕೋಣೆಯಲ್ಲಿ ಹಣಿಕಿಯಾದರೂ ನೋಡುತ್ತಿದ್ದ ವ್ಯಕ್ತಿಯೆಂದರೆ ಕೆಲಸದವಳೊಬ್ಬಳೇ. ಇಲ್ಲಿ ನಾವು ಗಮನಿಸಬೇಕಾದ ಅಂಶವೆಂದರೆ ಹುಳುವೊಂದನ್ನು ಹೇಗೆ ನೋಡಿಕೊಳ್ಳಬೇಕೋ ಹಾಗೆಯೆ ಮನೆಯವರೆಲ್ಲರೂ ಅವನನ್ನು ನೋಡಿಕೊಂಡಿದ್ದು; ಆದರೆ ಇದರಲ್ಲಿನ ದುರಂತವೆಂದರೆ ಆ ಹುಳು ಮಗನಾಗಿದ್ದುದು; ರೂಪವೊಂದನ್ನು ಬಿಟ್ಟರೆ ಈಗಲೂ ಮನುಷ್ಯನಾಗಿರುವುದು; ಮತ್ತು ಆ ಹುಳು ಮನುಷ್ಯನಂತೆಯೇ ವರ್ತಿಸುತ್ತಿರುವುದು. ಪರಿಣಾಮವಾಗಿ, ಹುಳುವಿನ ವರ್ತನೆ ಮನೆಯವರಿಗೂ, ಮನೆಯವರ ವರ್ತನೆ ಹುಳುವಿಗೂ ವ್ಯತಿರಿಕ್ತವಾಗಿ ಕಂಡುಬಂದರೂ ಅವರೆಲ್ಲರ ವರ್ತನೆಗಳೂ ಸಹಜವೇ; ತರ್ಕಬದ್ದವೇ.  ವಸ್ತುಸ್ಥಿತಿಯನ್ನು ಇದ್ದಂತೆಯೇ ಚಿತ್ರಿಸಿಯೂ ಅದರ ಚಿತ್ರಣದಲ್ಲಿ ಹಲವು ಬಗೆಯ, ಅಗಾಧವಾದ, ತಾಪದಾಯಕವಾದ ವಿಪರ್ಯಾಸಗಳನ್ನು ಹೊಳೆಯಿಸುವುದು ಕಾಫ಼್ಕನ ಬರಹದ ಅತಿ ಮುಖ್ಯ ಲಕ್ಷಣಗಳಲ್ಲಿ ಒಂದು.

ಮೆಟಮಾರ್ಫಸಿಸ್ ನ ಅನುವಾದಕ ಗಿರಿ

ಮೆಟಮಾರ್ಫಸಿಸ್ ನ ಅನುವಾದಕ ಗಿರಿ

ಒಂದು ದೃಷ್ಟಿಯಿಂದ ಮನುಷ್ಯರಿಂದ ಪೂರ್ತಿ ದೂರ ಸರಿದೂ ಅವರ ನಡುವೆ ಬದುಕಲೇಬೇಕಾದ ನೈತಿಕ ಅನಿವಾರ್ಯತೆಯನ್ನು ಗ್ರಿಗೋರ್ನ ರೂಪಾಂತರ ಬಲು ಸಮರ್ಥವಾಗಿ ಚಿತ್ರಿಸುತ್ತದೆ. ಈ ಸಂದಿಗ್ದತೆ, ಅನಿವಾರ್ಯತೆ ಮನುಷ್ಯರ ಮೂಲ ಸ್ಥಿತಿಗಳಲ್ಲಿ ಒಂದಾಗಿದೆ ಎನ್ನಬಹುದು. ಇನ್ನೊಂದು ದೃಷ್ಟಿಯಿಂದ ನೋಡಿದಾಗ, ಮನುಷ್ಯರ ಪರಿಸರ ನಾವು ಮನುಷ್ಯರೆಂಬ ಅರಿವನ್ನು ತೊಡೆದು ಹಾಕದೆ ನಮ್ಮನ್ನು ಹುಳುಗಳನ್ನಾಗಿ ಅಥವಾ ನಾವಲ್ಲದ ಇನ್ನೇನೋ ಆಗಿ ಪರಿವರ್ತಿಸುವ ಸಾಧ್ಯತೆಯಿಂದ ತುಂಬಿಕೊಂಡಿದೆ ಎನ್ನಿಸುತ್ತದೆ. ಏಕಕಾಲಕ್ಕೇ ಗ್ರಿಗೋರ್ ಮನುಷ್ಯನೂ ಹೌದು; ಹುಳುವೂ ಹೌದು. ಗ್ರಿಗೋರ್ ಹೀಗೆ ರೂಪಾಂತರಗೊಳ್ಳಲು ಆತ ಮಾಡಿದ ಪಾಪ (ಅಪರಾಧ) ವಾದರೂ ಏನು ಎಂಬ ಪ್ರಶ್ನೆ ಇಡೀ ಕೃತಿಗೆ ಅಪ್ರಸ್ತುತ; ಏಕೆಂದರೆ ತನ್ನ ತಪ್ಪುಗಳ ಪರಿಣಾಮವಾಗಿ ಆತ ಹುಳುವಾದ- ಎಂಬುದು ತೀರ ಸರಳವೂ ನಿಷ್ಟಯೋಜಕವೂ ಆದ ವಿವರಣೆಯಾಗುತ್ತದೆ. ಕಾಫ಼್ಕ ತನ್ನೆಲ್ಲ ಕೃತಿಗಳಲ್ಲೂ ಇದಕ್ಕಿಂತ ಸಂಕೀರ್ಣವಾದ, ನಿಜವಾಗಿ ವೈಜ್ಞಾನಿಕವೆನ್ನಬಹುದಾದ ದೃಷ್ಟಿಕೋನದ ವೈಶಿಷ್ಟ್ಯವನ್ನು ತೋರುತ್ತಾನೆ: ಮನುಷ್ಯರನ್ನು ಚುಚ್ಚುವ ಸಂಕೀರ್ಣ ಸಂಕಟಗಳು ಯಾವುದೇ ಒಂದು ತಪ್ಪಿನ ಪರಿಣಾಮವಲ್ಲ. ಆ ಸಂಕಟಗಳಿಗೆ ಅಷ್ಟೇ ಸಂಕೀರ್ಣವಾದ ಸಾಮಾಜಿಕ, ವೈಯಕ್ತಿಕ, ಸಾಂಸಾರಿಕ, ಮತ್ತಿತರ ಪರಿಸರದ ಅಂಶಗಳು ಕಾರಣವಾಗಿರುತ್ತವೆ.

ಫ್ರಾನ್ಸ್ ಕಾಫ಼್ಕ ಬರೆದ ಕತೆ-ಕಾದಂಬರಿಗಳಲ್ಲೆಲ್ಲ ಮೇಲೆ ನಮೂದಿಸಿದ ತೀರ್ಪು ಮತ್ತು ರೂಪಾಂತರ ಆತನ ಬದುಕಿಗೆ ಹೆಚ್ಚು ಹತ್ತಿರವಾದದ್ದಾಗಿದ್ದವು. ತೀರ್ಪು ಕತೆಯಲ್ಲಿ ಮರಣ ದಂಡನೆಯ ತೀರ್ಪನ್ನು ಕೊಟ್ಟ ತಂದೆ ಫ್ರಾನ್ಸ್ ಕಾಫ಼್ಕನ ತಂದೆ ಹರ್ಮನ್ ನಂತೆಯ; ಆ ತೀರ್ಪನ್ನು ಕೇಳಿದ ಕೂಡಲೆ ನದಿಗೆ ಹಾರಿ ಪ್ರಾಣಬಿಟ್ಟವನು  ಫ್ರಾನ್ಸ್ ಕಾಫ಼್ಕನಂತೆಯೆ. ಒಂದು ಕಡೆ ಫ್ರಾನ್ಸ್ ಕಾಫ಼್ಕನೆ ಹೇಳಿಕೊಂಡಿದ್ದಾನೆ: ಗ್ರಿಗೋರ್ ಸಾಂಸ ಕಾಫ಼್ಕನಂತೆ ಅಂದರೆ (ತನ್ನಂತೆ) ಎಂದರೆ ಸಾಲದು; ಕಾಫ಼್ಕನಲ್ಲದೆ ಸಾಂಸ ಬೇರೆ ಯಾರೂ ಅಲ್ಲ.

ಈ ಭಾಷಾಂತರವನ್ನು ಮುದ್ರಣಕ್ಕೆ ಮೊದಲೇ ಓದಿ ಅನೇಕ ಸಲಹೆ ಸೂಚನೆಗಳನ್ನಿತ್ತ ನನ್ನ ಮಿತ್ರರಾದ ಜಿ.ಎಚ್‌. ನಾಯಕ ಅವರಿಗೆ ನಾನು ಕೃತಜ್ಞ. ಆದರೆ ಉಳಿದಿರಬಹುದಾದ ದೋಷಗಳಿಗೆ ಮಾತ್ರ ನಾನೇ ಹೊಣೆ. ಇದನ್ನು ಅಚ್ಚಿನ ರೂಪದಲ್ಲಿ ಪ್ರಕಟಿಸಲು ಅನುಮತಿ ಇತ್ತ ಶೋಕನ್‌ ಬುಕ್ಸ್‌, ನ್ಯೂಯಾರ್ಕ್‌ ಅವರಿಗೂ ನನ್ನ ವಂದನೆಗಳು. ಕನ್ನಡ ಓದುಗರು ಈ ಕೃತಿಯನ್ನು ಮೆಚ್ಚಿಕೊಂಡಾರೆಂಬುದು ನನ್ನ ಹಾರೈಕೆ.


3 comments to “ಫ್ರಾನ್ಸ್ ಕಾಫ್ಕಾ ನ “ರೂಪಾಂತರ” : ಗಿರಿ ಮುನ್ನುಡಿ”
  1. ಸುಮಾರು 48-50 ವರ್ಷಗಳ ಹಿಂದೆ ಕಾಲೇಜಿನಲ್ಲಿದ್ದಾಗ ಗಿರಿಯವರ ‘ಗತಿ-ಸ್ಥಿತಿ’ ಓದಲು ಪ್ರಯತ್ನ ಪಟ್ಟಿದ್ದೆ. ಥೂ.. ಇದೆಂತಾ ಪುಸ್ತಕ ಅಂತ ಅಲ್ಲಿಗೇ ಬಿಟ್ಟಿದ್ದೆ. ಆದರೂ ಶ್ರೀ ಗಿರಿ, ಮತ್ತು ‘ಸ್ಥಿತಿ-ಗತಿ’ ಇನ್ನೂ ನೆನಪಿನಿಂದ ಮಾಸಿಲ್ಲ, ಮತ್ತದು ನನ್ನ ಕೈಗೆ ಸಿಕ್ಕೂ ಇಲ್ಲ!

  2. ಕಾರ್ಲೋ ಸರ್
    ಎಂಥ ಕಾಕತಾಳೀಯ!
    ಇಂದಿಗೆ ಸರಿಯಾಗಿ ೩೫ ವರ್ಷಗಳ ಹಿಂದೆ ಕಲಬುರಗಿಯಲ್ಲಿ “ಸ್ಥಿತಿಗತಿ”ಯನ್ನು ಯಾವುದೋ ನಿಯತಕಾಲಿಕದಲ್ಲಿ ಪೂರ್ಣ ರೂಪದಲ್ಲಿ ಓದಿದ ನೆನಪು. ಅದರಲ್ಲಿ ಲೇಖಕರ ಹೆಸರು “ಗಿರಿಧರ ಸ್ಥಪತಿ” ಎಂದು ಅನಿಸಿಕೆ. ಅವರೇ ಇವರಾದರೆ ನನ್ನ ಆನಂದಕ್ಕೆ ಪಾರವೇ ಇಲ್ಲ.
    ಆನಂತರ ಅದೆಷ್ಟೋ ಬಾರಿ ಈ ಕಾದಂಬರಿಗಾಗಿ ಹುಡುಕಾಡಿದ್ದೇನೆ. ಅಖಿಲ ಭಾರತ ಸಾ.ಸಮ್ಮೇಳನಗಳ ಒಂದೂ ಮಳಿಗೆಯನ್ನು ಬಿಡದಂತೆ.
    ಸಿಕ್ಕರೆ ಈಗಲೂ ಓದುವಾಸೆ.
    ಡಿ. ಎಮ್. ನದಾಫ್;
    ಅಫಜಲಪುರ
    ೯೯೮೦೮೫೮೫೬೦

ಪ್ರತಿಕ್ರಿಯಿಸಿ