ಚಲನಚಿತ್ರ ನಿರ್ದೇಶಕ ನಿರ್ದೇಶಕ ಪಿ. ಎನ್. ರಾಮಚಂದ್ರ ಅವರು, 2010 -11ರಲ್ಲಿ, ಭಾರತ ಸರ್ಕಾರದ Films Division ಅವರಿಗಾಗಿ ಬಿ.ವಿ.ಕಾರಂತರ ಮೇಲೆ Baba: B. V. Karanth ಎಂಬ ಹೆಸರಿನ ಸಾಕ್ಷ್ಯಚಲನಚಿತ್ರ ತಯಾರಿಸಲು ಹೊರಟರು. ಅದಕ್ಕಾಗಿ ಅವರು ದೇಶದಾದ್ಯಂತ ತಿರುಗಾಡಿ ಅನೇಕ ಜನರನ್ನು ಮಾತನಾಡಿಸಿದರು. ಹಾಗೆಯೇ ನನ್ನನ್ನೂ ಮಾತನಾಡಿಸಿ, ಸಂದರ್ಶನದ ವಿಡಿಯೋ ಮುದ್ರಣ ಮಾಡಿಕೊಂಡರು. ತಯಾರಾದ ಸಾಕ್ಷ್ಯಚಿತ್ರ 2012ರಲ್ಲಿ ಬಿಡುಗಡೆಗೊಂಡಿತು. ಬಳಿಕ, 2020ರಲ್ಲಿ ಕೋವಿಡ್-19 ಮಾರಿಯಿಂದ ಇಡೀ ದೇಶ, ಜಗತ್ತು ತಲ್ಲಣಿಸುತ್ತಿದ್ದಾಗ, ಅವರು ತಾವು ಮಾಡಿದ ಎಲ್ಲ ಸಂದರ್ಶನಗಳ ಧ್ವನಿಮುದ್ರಣವನ್ನು BVK Archives ಮೂಲಕ YouTubeನಲ್ಲಿ ಹರಿಯಬಿಡಲು ತೀರ್ಮಾನಿಸಿದರು. ನನ್ನ ಪರವಾನಗಿ ಪಡೆಯಲು, ನನ್ನ ಸಂದರ್ಶನದ ಧ್ವನಿಗಡತವನ್ನು 2020ರ ಜುಲೈ ತಿಂಗಳ 24ರಂದು ನನಗೆ ಕಳಿಸಿಕೊಟ್ಟರು. ಆ ಧ್ವನಿಗಡತದಲ್ಲಿರುವ ಮಾತನ್ನು ಯಥಾವತ್ತಾಗಿ ಬರಹಕ್ಕಿಳಿಸಿದ ಬಳಿಕ, ಇಲ್ಲಿ, ಆಡುಮಾತಿನ ಬೀಸನ್ನು ಬಿಟ್ಟುಕೊಡದೇ ತುಸು (ತುಸುವೇ) ಹದಗೊಳಿಸಿ ಕೊಟ್ಟಿದೆ. ಅಗತ್ಯವೆನಿಸಿದ ಕಡೆ ಅಡಿಟಿಪ್ಪಣಿಗಳನ್ನು ಕೂಡ ಕೊಟ್ಟಿದೆ. – ರನಂ, 15 ಆಗಸ್ಟ್ 2020
Click here for an English version of this tribute : https://ruthumana.com/blog-post/ayyo-i-need-chaos-i-say-my-years-with-b-v-karanth-some-memories/
ನಾನು ಸಾವಿರದೊಂಭೈನೂರ ಎಪ್ಪತ್ತೆಂಟರಲ್ಲಿ ರಾಷ್ಟ್ರೀಯ ನಾಟಕಶಾಲೆಗೆ ವಿದ್ಯಾರ್ಥಿಯಾಗಿ ಹೋದೆ. ನನಗೆ ಕಾರಂತರ ಒಡನಾಟ ದಕ್ಕಿದ್ದು ಅಂದಿನಿಂದ.
ಅದಕ್ಕೆ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಶುರುವಾಗಿದ್ದ ಆ ಶಾಲೆಗೆ ಕಾರಂತರು ಬಂದದ್ದರಿಂದ ಅಲ್ಲಿ ಬದಲಾವಣೆಯ ಒಂದು ದೊಡ್ಡ ಬಿರುಗಾಳೀನೇ ಬೀಸಿಬಿಡ್ತು.
ಕಾರಂತರು ಯಾವಾಗಲೂ ಹೇಳೋವರು, ‘‘ನೋಡಿ, ನಮ್ಮದು ಬಹಳ ದೊಡ್ಡ ದೇಶ. ನನಗೆ… ಯಾರೋ ಕೆಲವರಿಗೆ ಮಾತ್ರ ರಂಗಶಿಕ್ಷಣವನ್ನ ಕೊಡೋದು, ಅದನ್ನ ಎಲೀಟಿಸ್ಟ್ ಮಾಡೋದು… ಅದೆಲ್ಲ ಇಷ್ಟವಾಗೋದಿಲ್ಲ. ನಮ್ಮ ಶಾಲೆ ಹೇಗಿರಬೇಕು ಅಂದರೆ, ಒಂದೊಂದು ಕ್ಲಾಸ್‍ನಲ್ಲಿ ಐವತ್ತು ಜನ ಇರಬೇಕು, ನೂರು ಜನ ಇರಬೇಕು.’’ ಕಾರಂತರವು ಯಾವಾಗಲೂ ಆ ಥರದ ಆಲೋಚನೆಗಳು: ಹೆಚ್ಚು, ಹೆಚ್ಚು ಹರಡಬೇಕು ಅಂತ ಹೇಳಿ.
ಇಮಾರತೀ ಕಾಮ್, ಮೈದಾನೀ ಕಾಮ್
ಎಷ್ಟೋ ವರ್ಷ ಆದಮೇಲೆ ನಾನು ಅವರೊಡನೆ ರಂಗಾಯಣದಲ್ಲಿ ಕೆಲಸಮಾಡ್ತಿರೋವಾಗ ಒಮ್ಮೊಮ್ಮೆ ಹೇಳೋವರು (ಯಾಕೆ ಅಂದರೆ ನಾವು ಯಾವ ಕೆಲಸವನ್ನೇ ಆಗಲಿ ತುಂಬ ಉನ್ನತ-ಉತ್ಕೃಷ್ಟವಾದ ರೀತಿಯಲ್ಲಿ ಮಾಡಬೇಕು; ರಿಗೊರಸ್ಸಾಗಿ ಮಾಡಬೇಕು; ಚೆನ್ನಾಗಿರಬೇಕು ಅದು ಅಂತ ಹೇಳ್ತಿದ್ದೆನಲ್ಲ ನಾನು, ಅದಕ್ಕೆ) –
‘‘ಕರೆಕ್ಟ್, ಕರೆಕ್ಟ್. ನೀನು ಅದನ್ನ ಮಾಡು. ಸರಿ ಅದು. ನಿಂದು ಇಮಾರತೀ ಕಾಮ್ , ನಂದು ಮೈದಾನೀ ಕಾಮ್,’’ ಅಂತ ಹಿಂದೂಸ್ತಾನಿ ಮಾತಲ್ಲಿ ಹೇಳ್ತಿದ್ದರು.
‘‘ನಂದು ಮೈದಾನೀ ಕಾಮ್. ಅಂದರೆ ನಾನು ಹರಡಿ, ಹರಡಿ, ಹರಡಿ, ಎಲ್ಲ ಕಡೆಗೆ ಹರಡಿಕೊಂಡು, ಆದಷ್ಟು ಜನರನ್ನ ಒಳಗೊಳ್ತಾ ಹೋಗ್ತೀನಿ… ಹಾಗೆ ಮೈದಾನೀ ಕಾಮ್ ನಂದು. ಇಮಾರತೀ ಕಾಮ್ ಅಂದರೆ ಕಟ್ಟಡಗಳನ್ನ ಕಟ್ಟೋದು.’’
‘‘ಅದೂ ಬೇಕಾಗ್ತದೆ, ಇದೂ ಬೇಕಾಗ್ತದೆ. ಎರಡೂ ಒಂದಕ್ಕೊಂದು ಪೂರಕವಾಗಿರೋಂಥವು,’’ ಅಂತ ಹೇಳ್ತಿದ್ದರು.
ಆ ತತ್ತ್ವವನ್ನ ಕಾರಂತರು ರಾಷ್ಟ್ರೀಯ ನಾಟಕಶಾಲೆಗೂ – ಶುರುವಿಗೇ – ತಂದುಬಿಟ್ಟರು, ತಾವು ಅಲ್ಲಿ ನಿರ್ದೇಶಕರಾದ ಮೊದಲಿಗೇನೇ. ಹೇಗೆ ಅಂದರೆ, ನನ್ನ ತರಗತಿಯಲ್ಲಿ ನಾವು ಮೂವತ್ತೈದು ಜನ ವಿದ್ಯಾರ್ಥಿಗಳಿದ್ದೆವು!. ರಾಷ್ಟ್ರೀಯ ನಾಟಕಶಾಲೆಯ ಇತಿಹಾಸದಲ್ಲಿ ಅಲ್ಲಿಯವರೆಗೆ ಒಂದು ಕ್ಲಾಸಿನಲ್ಲಿ ಅಷ್ಟೊಂದು ಜನ ವಿದ್ಯಾರ್ಥಿಗಳಿದ್ದದ್ದಿಲ್ಲ. ಅಲ್ಲಿ ಮಾತ್ರ ಅಲ್ಲ, ಬಹುಶಃ ಜಗತ್ತಿನಾದ್ಯಂತ, ಬೇರೆ ಕಡೆಗೆ ಹೋದರೂ, ಆಧುನಿಕ ರಂಗಶಾಲೆಗಳಲ್ಲಿ, ಒಂದು ಕ್ಲಾಸಿನಲ್ಲಿ ಹದಿನೈದು, ಇಪ್ಪತ್ತು ಜನ — ಹೆಚ್ಚು ಅಂದರೆ ಇಪ್ಪತ್ತು ಜನ — ಇರ್ತಾರೆ. ಆದರೆ ಇವರು ಒಮ್ಮೆಗೇ ಮೂವತ್ತೈದು ಜನರನ್ನ ತೊಗೊಂಡರು.
ಹಾಗೆ, ಕಾರಂತರಿಗೆ, ಮೊದಲಿಂದಲೂ, ಜನರೊಟ್ಟಿಗೆ ಇರೋದು, ಜನರನ್ನು ಒಳಗೊಳ್ಳೋದು ಮುಖ್ಯವಾಗಿತ್ತು. ಬಹಳ ದೊಡ್ಡ ವಿಷಯ, ಇದು.
ಲೀಲೆ, ದರ್ಶನ ಬೇರೆಬೇರೆ ಆಗದೆ
ಕಾರಂತರು ಐತಿಹಾಸಿಕವಾಗಿ ಮೈಲಿಗಲ್ಲಾಗಿರೋ ಅಂಥ ಒಂದು ಪ್ರಯೋಗ ಮಾಡಿದರು, ರಾಷ್ಟ್ರೀಯ ನಾಟಕಶಾಲೆಯಲ್ಲಿ… ಮತ್ತು ಭಾರತೀಯ ರಂಗಶಿಕ್ಷಣದ ಇತಿಹಾಸದಲ್ಲಿ…
ನಾನು ಮೊದಲನೇ ವರ್ಷದ ವಿದ್ಯಾರ್ಥಿ ಆಗಿದ್ದೆ ಅಂತ ಹೇಳಿದೆನಲ್ಲ… ನಮ್ಮ ತರಗತಿಗೆ ಮೊತ್ತಮೊದಲನೆಯ ರಂಗಪ್ರಯೋಗ ಅಂತ ಆದದ್ದು ಕಾರಂತರ ನಿರ್ದೇಶನದಲ್ಲಿ. ಅದು, ಭಾರತೇಂದು ಹರಿಶ್ಚಂದ್ರ ಬರೆದ ಅಂಧೇರ್ ನಗರೀ ಚೌಪಟ್ ರಾಜಾ ನಾಟಕದ ಪ್ರಯೋಗ. ಅದನ್ನ ಬಯಲಲ್ಲಿ ಮಾಡಿದರು.
ಆ ಮೂವತ್ತೈದೂ ಜನ ನಾವು ಹುಡುಗರು, ಹುಡುಗೀರು ಅರಿಶಿನ ಬಣ್ಣದ ಕಚ್ಚೆ ಉಟ್ಟು, ಹುಡುಗರು ಮೈಲ್ಮೈ ಬತ್ತಲೆ ಆಗಿದ್ದು, ಉತ್ತರೀಯ ಹಾಕ್ಕೊಂಡು, ತಾಳಗಳನ್ನು ಹಿಡಕೊಂಡು, ಧೋಲಕ್ಕು… ಇವೆಲ್ಲಾ ಇಟ್ಟುಕೊಂಡು ಕುಣೀತಾ ಕುಣೀತಾ ಕುಣೀತಾ ಶಾಲೆಯ ಆವರಣದ ಒಂದು ತುದಿಯಿಂದ ಇನ್ನೊಂದು ತುದಿಗೆ, ಬಯಲಲ್ಲಿ ಆ ವೇದಿಕೆ ಇದ್ದ ಜಾಗಕ್ಕೆ, ಕುಣೀತಾ ಬರೋದು.
ನಾವು ಬರ್ತಿದ್ದ ಹಜಾರ ಪೂsರ್ತಿ, ಹೆಜ್ಜೆಹೆಜ್ಜೆಗೂ, ಹಣತೆಗಳಿಂದ ಬೆಳಗ್ತಿತ್ತು; ಮಾವಿನೆಲೆ ತೋರಣ ಕಟ್ಟಿದ್ದರು; (ನಗು) ಹೂವಿನ ಸರ ಕಟ್ಟಿದ್ದರು. ಅಲ್ಲಿಗೆ ಬಂದು… ಆs… ಬಯಲಾಟದ ರೀತಿಯಲ್ಲಿ… ಮೂವತ್ತೈದು ಜನ ದೊsಡ್ಡ ಕೊರಳಲ್ಲಿ ಹಾಡ್ತಾ, ಕುಣೀತಾ ಇರೋದು…
ತುಂಬಾ ಜನ ಇವತ್ತಿಗೂ ಹೇಳ್ತಾರೆ ನೋಡಿ, ಕಾರಂತರ ರಂಗಭೂಮಿಯ ಪ್ರಮುಖವಾದ ಲಕ್ಷಣ ಏನು ಅಂತ ಕೇಳಿದರೆ… ಅದು ಒಂದು ಸಡಗರ, ಸಂಭ್ರಮವನ್ನ ಎತ್ತಿಹಿಡಿಯೋದು, ಸೆಲೆಬ್ರೇಷನ್ ಅನ್ನೋ ಅಂಥದು ಅಂತ. ಆ ಥರದ ಎಲ್ಲ ಪ್ರವೃತ್ತಿಗಳನ್ನ — ರಂಗಭೂಮಿಯಲ್ಲಿ ಏನಿರಬೇಕು, ಬಹಳ ಮುಖ್ಯವಾಗಿ ಇರಬೇಕಾದ್ದು ಏನು ಅಂತ ಅವರು ನಂಬಿದ್ದರೋ ಅದನ್ನ — ಅವರು ನಮಗೆ ನಮ್ಮ ಮೊತ್ತಮೊದಲನೆಯ ಪ್ರಯೋಗದಲ್ಲೇ ತಂದುಕೊಟ್ಟರು. ಅದು ಬಹಳ ದೊಡ್ಡ ಕೆಲಸ ಅಂತ ಅನ್ನಿಸುತ್ತೆ ನನಗೆ.
ಮತ್ತೊಂದೇನೂ ಅಂದರೆ, ಆ ಇಡೀ ಪ್ರಯೋಗದಲ್ಲಿ, ನಾವು ಮೂವತ್ತೈದು ಜನ ಇದ್ದೆವಲ್ಲ, ಮೂವತ್ತೈದೂ ಜನರ ಬಳಿ ತಾಳ… ಕೊರಳಿಗೊಂದು ಜತೆ ತಾಳ… ಬಿಟ್ಟರೆ ಬೇರೆ ಯಾವ ರಂಗಪರಿಕರವೂ ಇರಲಿಲ್ಲ. ಆ ತಾಳವೇ, ಬೇಕಾದಾಗ, ಮದಿರೆಯ ಒಂದು ಬಟ್ಟಲಾಗ್ತಾಯಿತ್ತು; ಅಥವಾ ಒಂದು ಆಯುಧ ಆಗ್ತಾಯಿತ್ತು; ಇಲ್ಲ, ಒಂದು ಮೈಕ್ ಆಗೋದು.
ಹಾಗೆ, ಅದನ್ನೇ ಬೇರೆಬೇರೆಬೇರೆಬೇರೆ ರೀತಿಯಲ್ಲಿ ತೊಡಗಿಸಿಕೊಳ್ಳೋದನ್ನ ಮಾಡಿದ್ದು… ಆದ್ದರಿಂದ ರಂಗಭೂಮಿಯಲ್ಲಿ ಈ ಥರದ್ದು… ಒಂದು ವಸ್ತು ತಾನಲ್ಲದೆ ಇನ್ನೊಂದಾಗೋದು… ಆ ಮೂಲಕ ಒಂದು ದೊಡ್ಡ ದರ್ಶನವನ್ನ ಕೊಡೋದು… ಒಂದು ದೊಡ್ಡ ಆಟವಾಗೋದು… ಲೀಲೆ ಮತ್ತು ದರ್ಶನ ಬೇರೆಬೇರೆ ಆಗದೆ ಇರೋದು… ಇವೆಲ್ಲ ಕಾರಂತರ ಒಟ್ಟು ವ್ಯಕ್ತಿತ್ವ ಮತ್ತು ಕೆಲಸದ ಮುಖ್ಯಲಕ್ಷಣಗಳು.
ಇದೆಲ್ಲವೂ ಆ ಪ್ರಯೋಗದಲ್ಲಿ ಕಾಣಿಸಿಕೊಂಡಿತು.
ಸ್ಕೂಲ್ ಮೇಷ್ಟರು, ಬೆಳಗಿನ ಜಾವ
ಆಮೇಲೆ…. ನಾನು ಆ ಶಾಲೆಯಲ್ಲಿ ಓದ್ತಿದ್ದ ಹೊತ್ತಿಗೆ…. ಕಾರಂತರು ಬಹಳ ಶಿಸ್ತಿನ ವ್ಯಕ್ತಿ ಆಗಿದ್ದರು. ಅವರು ಕಡೆಗಾಲದ ತನಕ ಹೇಳೋವರು, ‘‘ನೋಡಿ, ಆರಂಭದಲ್ಲಿ ನಾನು ಸ್ಕೂಲ್ ಮೇಷ್ಟರಾಗಿದ್ದೆ…’’
ಹಿಂದೀ ಮೇಷ್ಟರಾಗಿದ್ದರಲ್ಲ ಅವರು…. ದೆಹಲಿಯ ಸರ್ದಾರ್ ಪಟೇಲ್ ವಿದ್ಯಾಲಯದಲ್ಲಿ…
‘‘ಮೇಷ್ಟರುಗಳಿಗೆ ಬೆಳಗಿನ ಜಾವ ಬೇಗ ಏಳೋ ಅಭ್ಯಾಸ ಇರುತ್ತೆ. ನನಗೆ ಆ ಅಭ್ಯಾಸ ಇವತ್ತಿನತನಕ ಬಿಟ್ಟುಹೋಗಿಲ್ಲ… ಬೆಳಗ್ಗೆ ಐದು ಗಂಟೆಗೆ ಎದ್ದುಬಿಡ್ತೇನೆ….’’
ಅವರು ಆಗ ಇನ್ನೂ ಬೇಗ ಏಳ್ತಿದ್ದರು, ಕಾಣುತ್ತೆ.
ನಾನು ರಾಷ್ಟ್ರೀಯ ನಾಟಕಶಾಲೆಯಲ್ಲಿ ಓದ್ತಿದ್ದಾಗ, ಬೆಳಗ್ಗೆ ಬಹಳ ಬೇಗ ಎದ್ದುಹೋಗಿ (ಅಷ್ಟುಹೊತ್ತಿಗೆ, ಶಾಲೆಯಲ್ಲಿ ಯಾರೂ ಇರ್ತಿರಲಿಲ್ಲ) ಎಕ್ಸರ್ಸೈಜ಼್, ವ್ಯಾಯಾಮ, ಮಾಡ್ತಾಯಿದ್ದೆ… ನಾಲಕ್ಕೂವರೆಗೇ ಅಲ್ಲಿರ್ತಿದ್ದೆ…
ನಾನು ಎಷ್ಟೋ ಸಲ ನೋಡಿದ್ದೇನೆ… ಮೇಷ್ಟರು ಐದು ಗಂಟೆಗೆ ಬರೋವರು ತಮ್ಮ ಮನೆಯಿಂದ… ಬಂದು, ಒಂದು ಮರದ ಹಿಂದೆ ನಿಂತುಕೊಂಡು, ಇವನೇನು ಮಾಡ್ತಿದ್ದಾನೆ ಅಂತ ನೋಡೋವರು… ಆಮೇಲೆ ಇಡೀ ಶಾಲೇನ ಒಂದ್ಸಲ ಸುತ್ತುಹಾಕೋವರು… ಸುತ್ತುಹಾಕಿ, ಸುಮಾರು ಅರ್ಧ- ಮುಕ್ಕಾಲು ಗಂಟೆ ಹೊತ್ತು ಶಾಲೆಯಲ್ಲಿ ಬೇರೆಬೇರೆಬೇರೆಬೇರೆ ಕಡೆ ಹೋಗಿ, ಐದೂಮುಕ್ಕಾಲು-ಆರು ಗಂಟೆ ಸುಮಾರಿಗೆ ವಾಪಸು ಮನೇಗೆ ಹೋಗೋವರು. ಮನೆಗೆ ಹೋಗಿ, ಸ್ನಾನಗೀನ ಮಾಡಿಕೊಂಡು, ವಾಪಸು ಬರೋವರು…
ಅವರು ಹಾಗೆ ಬೆಳಗಿನ ಜಾವ ಯಾಕೆ ಬರ್ತಾಯಿದ್ದರು? ಹೀಗೇ…. ಯಾರಾದರೂ ವಿದ್ಯಾರ್ಥಿಗಳು ಬಂದು ಏನಾದರೂ ಮಾಡ್ತಿದಾರಾ, ಎಲ್ಲಾ ಸರಿ ಇದೆಯಾ…ಯಾರು ಬೆಳಗ್ಗೆ ಬೇಗ ಬಂದು ಕೆಲಸಮಾಡ್ತಾರೆ, ವ್ಯಾಯಾಮ ಮಾಡ್ತಾರೆ ಅನ್ನೋದನ್ನ ನೋಡೋ ಒಂದು ಅಭ್ಯಾಸ ಅವರಿಗೆ…
ಮತ್ತು, ತಾನು ನಮ್ಮ ಕಣ್ಣಿಗೆ ಕಾಣದಹಾಗೆ ನೋಡಬೇಕು ಅಂತ!… ಯಾಕೆ ಅಂದರೆ, ಅವರನ್ನು ಕಂಡರೆ ನಾವು ಎಲ್ಲಿ ಬೆದರ್ತೀವೋ, ಮುಜುಗರಕ್ಕೆ ಒಳಗಾಗ್ತೀವೋ ಅಂತ…
ಹಾಗಾಗಿ ಯಾವುದೋ ಮರದ ಹಿಂದೆ ನಿಲ್ಲೋವರು…!
ಆದರೆ ಅಷ್ಟಾಗಿ, ನನಗೆ ಕಾಣ್ತಾಯಿತ್ತು, ಮರದ ಹಿಂದೆ ಅವರು ಅಡಗಿಕೊಂಡು ನೋಡ್ತಾಯಿದ್ದದ್ದು…!
Grace ರೂಢಿಸ್ಕೋಬೇಕು
ಮತ್ತೊಂದು… ನನ್ನ ಮನಸ್ಸಿನಲ್ಲಿ ಯಾವಾಗಲೂ ನಿಂತಿರೋ ಒಂದು ನೆನಪು…
ನಾನು ಬಹುಶಃ ಆಗಲೂ ಮೊದಲನೇ ವರ್ಷದಲ್ಲೇ… ಎರಡನೇ ಸೆಮಿಸ್ಟರ್‍ನಲ್ಲೋ ಏನೋ ಇದ್ದೆ… ಒಮ್ಮೆ, ಅಲ್ಲಿ, ಶಾಲೆ ಹಜಾರದಲ್ಲಿ, ಕರೆದರು… ಕರೆದು, ಒಂದು ಮಾತು ಹೇಳಿದರು…
‘‘ನೋಡುs, ನಾವು ಬ್ರಾಹ್ಮಣರು… ನಮಗೆ graceಏ ಇರೋದಿಲ್ಲ…’’
ಈ graceನ ಮಾತು ಬಹಳ ಆಡೋವರು…
‘‘Graceಏ ಇರೋದಿಲ್ಲ. ಗ್ರೇಸ್ ರೂಢಿಸ್ಕೋಬೇಕು. ಅಲ್ನೋಡು ನಿನ್ನ ಕ್ಲಾಸ್‍ಮೇಟು… ಅವನು… ಸುರೇಶ್ ಶೆಟ್ಟಿ ಇದಾನಲ್ಲ…ಎಷ್ಟು ಗ್ರೇಸ್ಫುಲ್ಲಾಗಿದಾನೆ ನೋಡು ಅವನು…!’’
ಮಂಗಳೂರಿನವನು, ಸುರೇಶ್…ಆಗಲೂ, ಈಗಲೂ ನನ್ನ ಒಲವಿನ ಗೆಳೆಯ.
‘‘ಎಷ್ಟು ಗ್ರೇಸ್ಫುಲ್ಲಾಗಿದಾನೆ! ನಾವು… ನೀನು… ಏನು ಮಾಡಬೇಕು ಗೊತ್ತಾ… ಒಬ್ಬ ಶೂದ್ರ ಹುಡುಗ…’’
ಈ ಇದೇ ಮಾತುಗಳನ್ನ ಆಡಿದವರು ಅವರು ಅವತ್ತು, ಮತ್ತು ತುಂಬಾ ಒಳ್ಳೇ ಮನಸ್ಸಿನಿಂದ ಆಡಿದರು….
‘‘ಒಬ್ಬ ಶೂದ್ರ ಹುಡುಗ … ಚಹಾದ ಒಂದು ಕಪ್ಪು, ಬಸಿ ಇಟ್ಟುಕೊಂಡು… ಆ ಚಹಾ ಕುಡಿಯೋ ರೀತಿ, ಅದನ್ನ ವಾಪಸು ಇಡೋ ರೀತಿ ನೋಡು… ಆ ಸುರೇಶ ಮಾಡೋ ರೀತೀ ನೋಡು… ನಾನು, ನೀನು ಮಾಡೋ ರೀತಿ ನೋಡು… ಬಹಳ ವ್ಯತ್ಯಾಸ ಇರ್ತದೆ…! ಆ grace ಅನ್ನ ಕಲೀಬೇಕು!’’[1]
ಅಂದರೆ, ಇಷ್ಟೇ ಹೇಳಿದ್ದು ಅವರು…‘ಜೀವನಕ್ಕೆ ನೀನು ತೆರಕೋಬೇಕು… ಕಣ್ಣು, ಕಿವಿ ತೆರೆದಿಟ್ಟುಕೊಂಡು ನೋಡು, ಕೇಳು… ನಿನ್ನನ್ನು ನೀನು ಕೊಟ್ಟುಕೋ…ಮತ್ತು ಯಾವುದರಲ್ಲೇ ಆಗಲಿ… ಈs… ಮೇಲುಕೀಳು ಅನ್ನೋದನ್ನ ಬಿಟ್ಟು… ಎಲ್ಲಾ ಒಳಗೊಳ್ಳೋ ಒಂದು ಮನಸ್ಸನ್ನ ಬೆಳೆಸ್ಕೋ…’ ಅನ್ನೋ ಥರದ ಮಾತು.
ಅದನ್ನೆಲ್ಲ ಯಾಕೆ ಹೇಳಿದರೋ ಏನೋ… ಆದರೆ ಅವರು, ಸಾಧಾರಣವಾಗಿ, ಜೀವನದುದ್ದಕ್ಕೂ ಈಬಗೆಯ ಮಾತುಗಳನ್ನ ಆಡ್ತಾಯಿದ್ದರು, ಮತ್ತು ತಾವು ಆಡಿದ ಮಾತಿನಂತೆ ನಡಕೊಳ್ತಾಯಿದ್ದರು ಕೂಡಾ…[2]
ಅವರು ತಮ್ಮ ಕಡೆಗಾಲದ ತನಕ ಹೇಳೋವರು, ‘‘ನಾಟಕ ಅನ್ನೋ ಅಂಥದು ಶೂದ್ರರ ಕಲೆ ಅಲ್ವಾ? ಅದು ಪಂಚಮವೇದ. ಆದ್ದರಿಂದ ನಾಟಕದವರು, ನಾವು… ನಾವೆಲ್ಲಾ ಶೂದ್ರರೇ, ಬಹಳ ಒಳ್ಳೇ ಅರ್ಥದಲ್ಲಿ. ಬಹಳ ಒಳ್ಳೇ ಅರ್ಥದಲ್ಲಿ ನಾವೆಲ್ಲಾ ಶೂದ್ರರು. ರಂಗಭೂಮಿಯವರದ್ದೇ ಒಂದು ಜಾತಿ,’’ ಅಂತ.
ಅದು ಇವತ್ತಿನತನಕ ನನ್ನ ಜೊತೆಗೆ ಉಳಿದಿದೆ, ಮತ್ತು ಬಹಳ ದೊಡ್ಡ ವಿಷಯ ಅಂತ ಅನ್ನಿಸುತ್ತೆ. ಯಾಕೆ ಅಂದರೆ, ಕಾರಂತರಿಂದ ಏನು ಪಡಕೊಂಡಿದ್ದೀವಿ ಅಂತ ಕೇಳಿದರೆ, ಬಹಳ ಢಾಳಾಗಿರೋ ಅಂಥ, ಬೌದ್ಧಿಕವಾಗಿರೋ ಅಂಥ ವಿಷಯಗಳು, ಮತ್ತು ಯಶಸ್ಸನ್ನು ಗಳಿಸಿದ ಕೆಲವು ಪ್ರಯೋಗಗಳು ಮಾತ್ರವಲ್ಲದೆ, ಈ ಬಗೆಯಲ್ಲಿ ಆಗೊಮ್ಮೆ ಈಗೊಮ್ಮೆ ಅಲಾಯಿದವಾಗಿ ಆಡಿರೋ ಕೆಲವು ಮಾತುಗಳಿರ್ತಾವಲ್ಲ, ದೊಡ್ಡವರುs… ಅದು ನಮ್ಮ ಜೊತೆ ಉಳೀತದೆ, ಅದು ನಿಜವಾಗಲೂ ನಮ್ಮನ್ನ ಬೆಳಸುತ್ತೆ…
ರಂಗಾಯಣ, ರಂಗಮಂಡಲ
ರಾಷ್ಟ್ರೀಯ ನಾಟಕಶಾಲೆಯಲ್ಲಿ ಅವರ ಜೊತೆ ಮೂರು ವರ್ಷ ಕಳೆದಮೇಲೆ, ನಾನು ಮತ್ತೆ ಅವರ ನೇರ ಒಡನಾಟಕ್ಕೆ ಬಂದದ್ದು ಮೈಸೂರಿನಲ್ಲಿ ರಂಗಾಯಣ ಶುರುವಾದಾಗ, ಸಾವಿರದ ಒಂಭೈನೂರಾ ಎಂಭತ್ತೊಂಭತ್ತರಲ್ಲಿ… ಅಲ್ಲಿ ನಾನು ಅಭಿನಯ ಪ್ರಶಿಕ್ಷಕನಾದಾಗ. ಅವರೇ ಹೇಳಿ ಕಳಿಸಿದರು, ‘ ನೀನು ಬಾ ಇಲ್ಲಿ. ಅಭಿನಯ ಪ್ರಶಿಕ್ಷಕನಾಗಿ ಕೆಲಸಮಾಡು’ ಅಂತ ಹೇಳಿ. ಕೆ. ವಿ. ಸುಬ್ಬಣ್ಣನವರು ಕೂಡ ಹೇಳಿದರು. ಆವಾಗ ನಾನು ಅಲ್ಲಿಗೆ ಹೋಗಿ ಕೆಲಸಮಾಡಲಿಕ್ಕೆ ಶುರುಮಾಡಿದೆ.
ಕೆಲವೊಮ್ಮೆ ಒಂದು ಪ್ರಶ್ನೆ ಬರುತ್ತೆ. ಕಾರಂತರು ಮೈಸೂರಿಗೆ ಬರೋದಕ್ಕೆ ಮೊದಲು ಭೋಪಾಲ ರಂಗಮಂಡಲವನ್ನ ಶುರುಮಾಡಿದರು. ಅದನ್ನ ಕಟ್ಟಿ ಬೆಳೆಸಿದರು. ಭೋಪಾಲ ರಂಗಮಂಡಲಕ್ಕೂ, ನಮ್ಮ ಮೈಸೂರಿನ ನಾಟಕ ಕರ್ನಾಟಕ ರಂಗಾಯಣಕ್ಕೂ ಏನು ವ್ಯತ್ಯಾಸ ಇತ್ತು, ಅವರು ಅದನ್ನ ಕಟ್ಟಿದ ರೀತಿಗೂ, ಇದನ್ನ ಕಟ್ಟಿದ ರೀತಿಗೂ ಏನು ವ್ಯತ್ಯಾಸ ಇತ್ತು ಅನ್ನೋ ಪ್ರಶ್ನೆಯನ್ನ ಕೇಳಿಕೊಂಡರೆ, ನನಗೆ ತಿಳಿದಮಟ್ಟಿಗೆ ಭೋಪಾಲ ರಂಗಮಂಡಲ ಬಹಳ ಒಳ್ಳೆಯ ಪ್ರಯೋಗಗಳನ್ನು ಕೈಗೊಳ್ತು, ಚೆನ್ನಾಗಿ ಮಾಡ್ತು… ಆದರೆ ಆ ರಂಗಮಂಡಲದಲ್ಲಿ ಪೂರ್ಣಾವಧಿ ಶಿಕ್ಷಕರು, ಪ್ರಶಿಕ್ಷಕರು ಇರಲಿಲ್ಲ. ನಿರಂತರವಾಗಿ ಅಲ್ಲಿಯ ನಟರ ಒಡನಾಡ್ತಾ ಅವರಿಗೆ ಶಿಕ್ಷಣವನ್ನ ಒದಗಿಸುವ ಜನ ಅಲ್ಲಿರಲಿಲ್ಲ. ಕಾರಂತರು, ಬಹುಶಃ ರಂಗಮಂಡಲದ ತಮ್ಮ ಅನುಭವದಿಂದಾಗಿ, ಅದೊಂದು ಕೊರತೆ ಆಯ್ತು ಅಂತ ಕಂಡುಕೊಂಡರೋ ಏನೋ, ಮೈಸೂರಿನಲ್ಲಿ ರಂಗಾಯಣ ಶುರುಮಾಡೋ ಹೊತ್ತಿಗೆ, ಜೊತೆಗೆ ಶಿಕ್ಷಕರೂ ಇರಬೇಕು ಅನ್ನುವ ಯೋಚನೆ ಅವರಿಗೆ ಬಂದದ್ದಿರಬೇಕು. ಹಾಗಾಗಿ ನನ್ನಂಥ ಕೆಲವರನ್ನ ಅವರು ಬರಮಾಡಿಕೊಂಡರು.
ನಾನು ಅಭಿನಯ ಪ್ರಶಿಕ್ಷಕನಾಗಿದ್ದೆ. ರಾಷ್ಟ್ರೀಯ ನಾಟಕಶಾಲೆಯಲ್ಲಿ ನನ್ನ ಸಹಪಾಠಿಯಾಗಿದ್ದು, ಆಮೇಲೆ ಕರ್ನಾಟಕ ಸರಕಾರದ ವಾರ್ತಾ ಮತ್ತು ಪ್ರಚಾರ ಇಲಾಖೆಯ ಅಧಿಕಾರಿಯಾದ ಜಯತೀರ್ಥ ಜೋಶಿ ಸಂಸ್ಥೆಯ ಆಡಳಿತದ ಉಪನಿರ್ದೇಶಕರಾಗಿ ನಮ್ಮನ್ನ ಸೇರಿಕೊಂಡರು. ಬಸವಲಿಂಗಯ್ಯನವರು ರಂಗಪ್ರಮುಖರಾಗಿ ಕೆಲಸಮಾಡಿದರು. ಗಂಗಾಧರಸ್ವಾಮಿ ಅವರು ನೇಪಥ್ಯ ಪ್ರಶಿಕ್ಷಕರಾಗಿದ್ದರು. ಚೀನಿ – ಶ್ರೀನಿವಾಸ ಭಟ್ಟರು – ಸಂಗೀತ ಶಿಕ್ಷಕರಾಗಿ ಬಂದರು. ಅಂಜು ಸಿಂಗ್ ಅವರನ್ನ ಸಮರಕಲೆಯ ಶಿಕ್ಷಕರಾಗಿ ತೊಗೊಂಡರು. ದ್ವಾರಕಿ ಅವರನ್ನ – ಎಚ್. ಕೆ. ದ್ವಾರಕಾನಾಥ್ ಅವರನ್ನ – ವಿನ್ಯಾಸದ ಶಿಕ್ಷಕರಾಗಿ ತೊಗೊಂಡರು. ಆಮೇಲೆ, ನಟರಾಜ ಏಣಗಿ ಅವರು ಕೂಡ ರಂಗಾಯಣದಲ್ಲಿ ಒಂದು ಆರು ತಿಂಗಳಿದ್ದರು. ಏಣಗಿ ಅವರು ಶಿಕ್ಷಕರಾಗಿ ಕೆಲಸಮಾಡಿದರು. ಆರು ತಿಂಗಳನಂತರ ಅವರು ತಮ್ಮದೇ ಕಾರಣಗಳಿಂದಾಗಿ ರಂಗಾಯಣವನ್ನ ಬಿಟ್ಟರು. [3]
ರಂಗಮಂಡಲ ಮತ್ತು ರಂಗಾಯಣಗಳ ನಡುವಿನ ಈ ವ್ಯತ್ಯಾಸ ಯಾಕೆ ಮುಖ್ಯ ಆಗುತ್ತೆ ಅಂದರೆ, ಭೋಪಾಲ ರಂಗಮಂಡಲ ಒಂದು ಐದು-ಆರು ವರ್ಷ ಕೆಲಸಮಾಡಿ, ಆಮೇಲೆ ಹೆಚ್ಚುಕಡಿಮೆ ನಿಂತೇ ಹೋಯಿತು. ಆದರೆ ಮೈಸೂರಿನ ರಂಗಾಯಣ ಎಂಭತ್ತೊಂಭತ್ತರಿಂದ ಇಂದಿನತನಕ (2011-12ರ ತನಕ), ಇಪ್ಪತ್ತೆರಡು-ಇಪ್ಪತ್ತಮೂರು ವರ್ಷಗಳ ಕಾಲ, ನಿರಂತರವಾಗಿ ಕೆಲಸ ಮಾಡ್ತಾಬಂದಿದೆ. ಅದರ ಕೆಲಸದಲ್ಲಿನ ಕುಂದು, ಕೊರತೆ ಏನೇ ಇರಲಿ, ಸಾಧಕ, ಬಾಧಕ ಏನೇ ಇರಲಿ, ಇಪ್ಪತ್ತೆರಡು ವರ್ಷ ಒಂದು ಕಂಪನಿ ಬಾಳಿಕೊಂಡು ಕೆಲಸ ಮಾಡ್ತಾಬಂದಿದೆಯಲ್ಲ, ಅದಕ್ಕೆ ಬಹುಶಃ ಕಾರಣ, ಅದು ತನ್ನ ಆರಂಭದ ವರ್ಷಗಳಲ್ಲಿ ಒಂದು ನಾಟಕ ಕಂಪನಿ ಆಗಿರುವುದರ ಜೊತೆಗೆ ಒಂದು ರಂಗಶಾಲೆಯೂ ಆಗಿತ್ತು ಅನ್ನೋದು, ಮತ್ತು ಆ ರಂಗಶಾಲೆಯಲ್ಲಿ ಉssದ್ದಕ್ಕೂ ತಮ್ಮನ್ನ ತಾವು ತರಬೇತಿಗೊಳಿಸಿಕೊಳ್ತಾ ಬಂದವರು ಇಪ್ಪತ್ತೆರಡೇ ಜನ ಅನ್ನೋದು (ಆರಂಭದಲ್ಲಿ ಇಪ್ಪತ್ತೈದು ಜನ ಇದ್ದರು. ಆಮೇಲೆ ಅದು ಬಹುಶಃ ಇಪ್ಪತೆರಕ್ಕೋ-ಮೂರಕ್ಕೋ ಏನೋ ಇಳೀತು…).
ಹಾಗಾಗಿ ಏನಾಯ್ತು ಅಂದರೆ, ಬೇರೆ ರಂಗಶಾಲೆಗಳಲ್ಲಿ ಕಾಣೋಕೆ ಸಿಗದೇಯಿರೋ ಅಂಥಾ ಒಂದು ಏಕಾಗ್ರತೆ ಮತ್ತು ನಿರಂತರತೆ ಅನ್ನೋದು ಅಲ್ಲಿ ಸಿಕ್ತು. ಯಾಕೆ ಅಂದರೆ, ನೀವು ನಿರಂತರವಾಗಿ – ಒಂದು ವರ್ಷ ಅಲ್ಲ, ಎರಡು ವರ್ಷ ಅಲ್ಲ, ಆsರು ವರ್ಷ – ನಿಮಗಿಂತ ಒಂದು ಸ್ವಲ್ಪವೇ ಹೆಚ್ಚು ವಯಸ್ಸಾದವರ ಜೊತೆ ಕೆಲಸಮಾಡ್ತಾ, ಪಳಗ್ತಾ ಬರ್ತಾ ಇದ್ದಿರಿ. ಅಂದರೆ, ಪ್ರಶಿಕ್ಷಕರು, ಶಿಕ್ಷಕರ ಜೊತೆ.
ಅದರಿಂದಾಗಿ, ನಟರು ಮತ್ತು ಶಿಕ್ಷಕರು ಪರಸ್ಪರರಿಂದ ಕಲಿಯೋ ಕೆಲಸ ಆಗುತ್ತೆ. ಆಮೇಲೆ, ಬಹಳ ಒಳ್ಳೆಯ ಅರ್ಥದಲ್ಲಿ, ಅಲ್ಲಿ, ನಿಜವಾದ ಒಂದು ಪ್ರೊಫೆಷನಲಿಜ಼ಮ್ ಅನ್ನೋದು ಬರ್ತದೆ. ನಾಟಕ ಆಡೋದಷ್ಟೇ ಮುಖ್ಯವಲ್ಲ, ರಂಗಭೂಮಿಯನ್ನು ಕುರಿತು, ನಾಟಕವನ್ನು ಕುರಿತು ನಿರಂತರವಾಗಿ ಯೋಚನೆಮಾಡ್ತಾ, ಅದನ್ನ ಮೆಲುಕುಹಾಕ್ತಾ, ಮನನಮಾಡ್ತಾ ಹೋಗೋದು ಕೂಡ ಮುಖ್ಯ ಅನ್ನೋವಂಥದನ್ನ – ಆ ಥರದ ಒಂದು ಪ್ರವೃತ್ತಿಯನ್ನ – ಅಲ್ಲಿ ಕಾರಂತರು ಆರಂಭದ ಸಮಯದಲ್ಲೇನೇ ಹುಟ್ಟುಹಾಕಿದರು. ಅದು ಬಹಳ ಮುಖ್ಯವಾದ ವಿಷಯ ಅಂತ ಕಾಣುತ್ತೆ ನನಗೆ.
ಸಹಜ ಪ್ರತಿಭೆ ಗುರುತಿಸೋದು
ಆಮೇಲೆ ಕಾರಂತರ ಒಂದು ದೊಡ್ಡ ಗುಣ…
ತಾವಿದ್ದ ಎಲ್ಲಿಯೇ ಆಗಲಿ, ರಾಷ್ಟ್ರೀಯ ನಾಟಕಶಾಲೆಯಲ್ಲಿ ಆಗಲಿ, ರಂಗಮಂಡಲದಲ್ಲಿ ಆಗಲಿ, ಇಲ್ಲ, ರಂಗಾಯಣದಲ್ಲಿ ಆಗಲಿ… ಸಹಜ ಪ್ರತಿಭೆಯನ್ನ ಗುರುತಿಸಬಲ್ಲವರಾಗಿದ್ದರು ಅವರು; ಸಹಜ ಪ್ರತಿಭೆಯನ್ನ ಅಷ್ಟೇ ಸಹಜವಾಗಿ ಗುರುತಿಸಬಲ್ಲವರಾಗಿದ್ದರು.
ಸಹಜ ಪ್ರತಿಭೆಯನ್ನ ಸಹಜವಾಗಿ ಗುರುತಿಸಬಲ್ಲವರಾಗಿದ್ದರು ಅನ್ನೋವಾಗ, ಸಹಜ ಅನ್ನೋದಕ್ಕೆ ಯಾಕೆ ಒತ್ತುಕೊಡ್ತೇನೆ ಅಂದರೆ, ಕಾರಂತರು ಎಷ್ಟೇ ವ್ಯವಹಾರಜ್ಞಾನ ಉಳ್ಳವರಾಗಿದ್ದರೂ (ವ್ಯವಹಾರಜ್ಞಾನವಿಲ್ಲದೆ ಇದ್ದಿದ್ದರೆ ಅವರಿಗೆ ಸಂಸ್ಥೆಗಳನ್ನ ಕಟ್ಟಲಿಕ್ಕೆ ಆಗ್ತಿರಲಿಲ್ಲ) ಪ್ರತಿಭೆಯ ವಿಷಯಕ್ಕೆ ಬಂದಾಗ, ಆಳವಾದ ಒಳನೋಟದ ವಿಷಯಕ್ಕೆ ಬಂದಾಗ ಅವರು ತಮ್ಮ ಲೆಕ್ಕಾಚಾರಗಳನ್ನೆಲ್ಲಾ ಬದಿಗಿಡೋವರು. ಆ ಪ್ರತಿಭೆಯನ್ನ ಅದು ಇದ್ದಷ್ಟೇ ಪ್ರಾಕೃತಿಕವಾಗಿ, ಅಷ್ಟೇ ಸಹಜವಾಗಿ ಗುರುತಿಸಿಬಿಡೋವರು. ಅದಕ್ಕೆ ಉತ್ತೇಜನ ಕೊಡೋವರು.
ಇದು, ನಿಜವಾಗಲೂ, ಒಬ್ಬ ದೊಡ್ಡ ಕಲಾವಿದನಿಗೆ, ಮತ್ತು ಕಲಾಸಂಸ್ಥೆಯೊಂದನ್ನ ಕಟ್ಟುವವನಿಗೆ, ಇರಬೇಕಾದ ಗುಣ ಅಂದುಕೊಂಡಿದ್ದೇನೆ.
ಸ್ವಾತಂತ್ರ್ಯ, ಗೊಂದಲ, Wildness
ಕಾರಂತರ ಜೊತೆ ಕೆಲಸಮಾಡ್ತಿರೋವರಿಗೆ ಎಲ್ಲಿಲ್ಲದ ಒಂದು ಸ್ವಾತಂತ್ರ್ಯದ ಭಾವ ಉಂಟಾಗ್ತಾಯಿತ್ತು. ನಾವು ಯಾವ ಭಿಡೆಯಿಲ್ಲದೆ ಕೆಲಸಮಾಡೋಕೆ ಬೇಕಾದ ವಾತಾವರಣವನ್ನ ಅವರು ಸೃಷ್ಟಿ ಮಾಡ್ತಾಯಿದ್ದರು. ಅಂದರೆ, ಏನು ಮಾಡಿದರೆ ಏನು ತಪ್ಪಾಗ್ತದೋ, ಇದನ್ನ ಮಾಡಬೇಕೋ ಬೇಡವೋ, ಇದನ್ನ ಮಾಡಿದರೆ ಏನಂದುಕೊಳ್ತಾರೋ ಮೇಷ್ಟರು, ಅಥವಾ ಏನು ಹೇಳ್ತಾರೋ ಅನ್ನೋದಿರಲಿಲ್ಲ… ಆ ಥರದ ಒಂದು ಭಿಡೆಯಿಲ್ಲದೆ ವಾತಾವರಣ, ಒಂದು free for all ವಾತಾವರಣ ಇರ್ತಿತ್ತು.
ಅದು ಒಂದೊಂದು ಸಲ ನಿಯಂತ್ರಣ ತಪ್ಪಿ ತುಂಬ ಅಶಿಸ್ತು ಮತ್ತು ಗೊಂದಲಕ್ಕೆ ಎಡೆ ಮಾಡಿಕೊಡ್ತಿತ್ತು!
ಆದರೆ ಉಸಿರುಗಟ್ಟಿಸುವ ಶಿಸ್ತಿಗಿಂತ, ಒಂದಷ್ಟು… ನಿಜವಾಗಲೂ wild ಆದರೂ ಪರವಾಗಿಲ್ಲ, ಆ ಥರದ ಅಶಿಸ್ತೇ ವಾಸಿ ಅಂತ ನನಗೆ ಒಂದೊಂದು ಸಲ ಅನ್ನಿಸುತ್ತೆ. ಅಲ್ಲ, ಒಂದೊಂದು ಸಲ ಏನು, ಬಹಳ ಸಲ ಅನ್ನಿಸುತ್ತೆ…
ಆ ಥರದ ವಾತಾವರಣವನ್ನ ಉಂಟುಮಾಡೋದರಲ್ಲಿ ಕಾರಂತರು ನಿಸ್ಸೀಮರಾಗಿದ್ದರು. ಯಾಕಂದರೆ, ಅವರೇ ಒಂದಷ್ಟು wild ಆಗಿದ್ದರು, ಬಹಳ ಒಳ್ಳೆಯ ಅರ್ಥದಲ್ಲಿ!
ನೋಡಿ, ಉದಾಹರಣೆಗೆ, ನನ್ನದೇನೇ…
ನಾನು ಅಭಿನಯ ಪ್ರಶಿಕ್ಷಕನಾಗಿದ್ದಾಗ, ಅವರು ನನಗೆ ಎಷ್ಟು ಸ್ವಾತಂತ್ರ್ಯ ಕೊಟ್ಟಿದ್ದರು ಅಂತ ಹೇಳಿದರೆ, ನೀನು ಇಂಥಾದ್ದನ್ನೇ ಮಾಡಬೇಕು, ಹೀಗೇ ಮಾಡಬೇಕು,ಇಂಥಿಂಥಾದ್ದು ಮಾಡಬೇಕು ಅನ್ನಲಿಲ್ಲ…
ನಾವು ಆಗೀಗ — ವಾರಕ್ಕೊಂದು ಸಲ — ಸಭೆ ಸೇರ್ತಿದ್ದೆವು, ನಿಜ. ಅಲ್ಲಿ ಒಂದಷ್ಟು ಮಾತು ಬರೋದು, ಒಂದಷ್ಟು ವಿಷಯದ ಚರ್ಚೆ ಆಗೋದು, ಒಂದಷ್ಟು ಹೊಳಹು ಹೊಮ್ತಿದ್ದವು. ಆದರೆ ಅವರು ಯಾವತ್ತೂ ಕೂಡ ಬಂದು ‘ಏನು ಮಾಡ್ತಿದ್ದೀಯ? ಮತ್ತೇನು ಮಾಡ್ತೀಯಾ? ಯಾವ ಥರ ಆಗ್ತಿದೆ?’ ಅಂತ ಕೇಳೋದಿರಲಿಲ್ಲ. ಹಾಗಾಗಿ, ನಾನು ಮಾಡಬೇಕಾಗಿರೋ ಪಾಠಗಳನ್ನ ನಾನೇ ರೂಪಿಸಿಕೊಳ್ತಿದ್ದೆ, ಕ್ಲಾಸುಗಳನ್ನ ನಾನೇ ಸ್ಟ್ರಕ್ಚರ್ ಮಾಡ್ಕೊಳ್ತಿದ್ದೆ.
ಆದರೆ ಅಲ್ಲಿ ಏನು ಅಂತ ಹೇಳಿದರೆ, ಅವರ ಜೊತೆ ಕೆಲಸಮಾಡ್ತಾ ಬಂದದ್ದರಿಂದಾಗಿ, ನಮ್ಮೆಲ್ಲರಿಗೂ ಕೂಡಾನೂ ನಿಜವಾಗಲೂ ನಂಬಿಕೆಯಿದ್ದದ್ದು ಪ್ರಾಯೋಗಿಕ ಕೆಲಸದಲ್ಲಿಯೇ ಹೊರತು ಕೇವಲ ಸಿದ್ಧಾಂತದಲ್ಲಿ ಅಲ್ಲ, ಕೇವಲ ಮಾತುಗಾರಿಕೆಯಲ್ಲಲ್ಲ, ಥಿಯರಿಯಲ್ಲಲ್ಲ. ಯಾಕೆ ಅಂದರೆ, ನಮ್ಮೆಲ್ಲರಿಗೂ ನಾವು ಪ್ರೇಕ್ಷಕರ ಮುಂದೆ ಜೀವಂತಿಕೆ ತುಂಬಿದ ಆಟ ಆಡಬೇಕು, ನಿಜವಾದ ಜೀವಂತಿಕೆಯಿಂದ ನಾಟಕ ಆಡಬೇಕು ಅನ್ನೋ ಬಲವಾದ ಆಸೆ ಇತ್ತು…
ಮತ್ತು, ಯಾವುದೋ ಒಂದೇ ಬಗೆಯ ಪ್ರೇಕ್ಷಕರ ಮುಂದೆಯಲ್ಲ, ರಾಜ್ಯದಾದ್ಯಂತ ಆಟ ಆಡಬೇಕು, ಬಗೆಬಗೆಯ ಜನರನ್ನ ತಲುಪಬೇಕು ಅನ್ನೋ ಆಸೆಯಿತ್ತು…
ಆ ಎಲ್ಲಾ ಹಿನ್ನೆಲೆ ಇದ್ದದ್ದರಿಂದಾಗಿ, ಅದಕ್ಕೆ ತಕ್ಕ ರಂಗಶಿಕ್ಷಣವನ್ನ ನಾವು ಕೊಡ್ತಾಹೋದೆವು. ಮತ್ತು, ನಾವೂ ಪಡಕೊಳ್ತಾ ಹೋದೆವು…
ನೀನೇ ಜಾಸ್ತಿ ಕಲೀತಿದ್ದೀ!
ನೋಡಿ, ರಂಗಶಿಕ್ಷಣದಲ್ಲಿ ಏನಾಗುತ್ತೆ ಅಂದರೆ, ನಟರ ಒಟ್ಟಿಗೆ ಕೆಲಸಮಾಡ್ತಾಹೋಗೋವಾಗ, ತಾನು ಶಿಕ್ಷಕ ಅಂದುಕೊಂಡಿರೋವನು, ಅವನೇ ಬಹಳ ಹೆಚ್ಚು ಕಲಿಯೋದಿರುತ್ತೆ, ನಿಜವಾಗಲೂ.
ಅದಕ್ಕೇ ಮೇಷ್ಟರು ಎಷ್ಟೋ ಸಲ ಹೇಳೋವರು, ಜೋಕ್ ಮಾಡೋವರು…
ನಾನು ಕ್ಲಾಸ್ ಮಾಡ್ತಾ ಇರೋವಾಗ, ಒಂದೊಂದು ಸಲ ಹೀsಗೆ ಬಂದು ಇಣುಕಿನೋಡೋವರು. ಆಮೇಲೆ, ‘‘ಅವರಿಗಿಂತ ನೀನೇ ಜಾಸ್ತಿ ಕಲೀತಿದ್ದೀಯಾ ಅಂತ ಕಾಣುತ್ತೆ!’’ ಅನ್ನೋವರು.
ಅವರಿಗಿಂತ ನೀನೇ ಜಾಸ್ತಿ ಕಲೀತಿದ್ದೀಯಾ!
ನನಗೂ ನಗು ಬರ್ತಿತ್ತು. ‘‘ಹೌದು, ಸರ್,’’ ಅನ್ತಿದ್ದೆ. ಯಾಕೆ ಅಂದರೆ, ನಿಜವಾಗಲೂ ಬಹಳ ಕಲಿತೀದ್ದೆ!
ಕಾರಂತರಿಗೆ ಆ ಬಗೆಯ ವಾತಾವರಣ ಸೃಷ್ಟಿಮಾಡೋ ದೊಡ್ಡ ಗುಣ ಇತ್ತು.
ಗೋವು, ತಿರುಕ, ಜೋಗಿ
ಎರಡು ವಿಷಯ ನಾನು ಯಾವಾಗಲೂ ನೆನಸಿಕೊಳ್ತಾ ಇರ್ತೇ ನೆ, ನನಗೆ ನಾನೇ ಹೇಳಿಕೊಳ್ತಾ ಇರ್ತೇನೆ, ನನ್ನಲ್ಲಿ ನಾನೇ ಸವೀತಾ ಇರ್ತೇನೆ. ಏನು, ಹೇಳ್ತೇನೆ.
ಕಾರಂತರು ರಂಗಾಯಣವನ್ನ ಶುರುಮಾಡಿದಮೇಲೆ, ನಾವು ನಮ್ಮ ತರಬೇತಿಗೋಸ್ಕರ ಮಾಡ್ತಿದ್ದ ಕಸರತ್ತುಗಳು, ಎಕ್ಸರ್‍ಸೈಜು಼ಗಳು ಮುಂತಾದ್ದೆಲ್ಲ ಅಲ್ಲದೆ, ಕೈಗೆತ್ತಿಕೊಂಡು ಮಾಡಿದ ಮೊತ್ತಮೊದಲನೆಯ ರಂಗಪ್ರಯೋಗ, ಅಂದರೆ ಪ್ರೇಕ್ಷಕರ ಮುಂದೆ ಹೋಗಿ ಆಡಬೇಕು ಅಂತ ಹೇಳಿ ಮಾಡಿಕೊಂಡ ಮೊದಲನೆಯ ಪ್ರಯೋಗ, ಯಾವುದಪ್ಪಾ ಅಂದರೆ ಗೋವಿನ ಹಾಡು. ಗೋವಿನ ಹಾಡು, ಮೊತ್ತಮೊದಲನೆಯ ಪ್ರಯೋಗ. ಅದರ ಸಂಗೀತ ಮತ್ತು ಸ್ಥೂಲ ನಿರ್ದೇಶನ ನಮ್ಮ ಸಂಗೀತದ ಮೇಷ್ಟರಾಗಿದ್ದ ಎಚ್. ಕೆ. ಯೋಗಾನರಸಿಂಹ ಅವರದ್ದಾಗಿತ್ತು.
ಆಮೇಲೆ, ಒಂದೆರಡು ಪ್ರಯೋಗಳಾದಮೇಲೆ ಅವರು ಇನ್ನೊಂದು ಪ್ರಯೋಗವನ್ನ ಮಾಡಿದರು, ಕಾರಂತರು, ‘ಇದು ಆಗಬೇಕು’ ಅಂತ ಹೇಳಿ. ಅದು ತಿರುಕನ ಕನಸು, ಮುಪ್ಪಿನ ಷಡಕ್ಷರಿಯ ಪ್ರಸಿದ್ಧ ಪದ್ಯ. ಅದಕ್ಕೆ ಕೂಡ ಎಚ್. ಕೆ. ಯೋಗಾನರಸಿಂಹ ಮೇಷ್ಟರದ್ದೇ ಸಂಗೀತ ಮತ್ತು ಸ್ಥೂಲ ನಿರ್ದೇಶನ ಇತ್ತು.
ಆಮೇಲೆ ಕುವೆಂಪು ಅವರ ಬೊಮ್ಮನಹಳ್ಳಿಯ ಕಿಂದರಿ ಜೋಗಿ. ಕಿಂದರಿ ಜೋಗಿ ರಂಗಾಯಣ ಮಾಡಿದ ಮೊದಲ ದೊಡ್ಡಮಟ್ಟದ ಪ್ರಯೋಗ. ಒಂದು ಮೇಜರ್ ಪ್ರೊಡಕ್ಷನ್ ಅಂತ ಯಾವುದನ್ನು ಕರೀತೇವೋ ಅಂಥದ್ದು.
ಅಂದರೆ, ಇದು ಏನನ್ನ ತೋರಿಸುತ್ತೆ?
ಕಾರಂತರ ಮನಸ್ಸಿನಲ್ಲಿ, ‘ನೋಡಿ, ನಾವು ಕನ್ನಡದವರು. ಕನ್ನಡನಾಡಿನ ಬಹಳ ಜನಪ್ರಿಯವಾಗಿರುವಂಥ ಐತಿಹ್ಯ ಯಾವುದು ಅಂದರೆ ಗೋವಿನ ಹಾಡು-ತಿರುಕನ ಕನಸಿನಂಥ ಪದ್ಯ. ಮತ್ತು, ಕನ್ನಡನಾಡಿನ ಬಹಳಾ ದೊಡ್ಡ ಕವಿ ಕಟ್ಟಿದ, ಬಹಳಾ ಜನಪ್ರಿಯವಾಗಿರುವಂಥ ಪದ್ಯ ಕಿಂದರಿ ಜೋಗಿ. ಹಾಗಾಗಿ ಈ ಪ್ರಯೋಗಗಳನ್ನ ಮಾಡಬೇಕು’ ಅಂತ ಇತ್ತು ಅನ್ನಿಸುತ್ತೆ.
ಜನಮಾನಸದಲ್ಲಿ ಜೀವಂತವಾಗಿರುವಂಥಾ, ಜನಮಾನಸಕ್ಕೆ ಬಹಳಾ ಬೇಕಾಗುವಂಥಾ ಆ ಬಗೆಯ ಪದ್ಯಗಳನ್ನ, ಆ ಬಗೆಯ ಪಠ್ಯಗಳನ್ನ ಮೊದಲಿಗೇ ತೊಗೊಂಡು ಆಡಬೇಕು ನಾವು ಅನ್ನೋದಿತ್ತು ಅವರಿಗೆ.
Pure Genius
ಈಗ, ನಾನು ಈವತ್ತಿಗೂ ಹೇಳ್ತೇನೆ, ನನ್ನ ಅನುಭವದ ಮಿತಿಯಲ್ಲಿ: ಕಾರಂತರು ಕಿಂದರಿ ಜೋಗಿ ಪ್ರಯೋಗವನ್ನ ಮಾಡಿದರಲ್ಲ, ಅದಕ್ಕೆ ಅವರು ಮಾಡಿದ ಸಂಗೀತ ಸಂಯೋಜನೆ ಏನಿದೆ, ಆ ಬಗೆಯ ಸಂಗೀತ ಸಂಯೋಜನೆಯನ್ನ ನಾನು ಈವತ್ತಿನ ತನಕ ಭಾರತೀಯ ರಂಗಭೂಮಿಯಲ್ಲಿ ನೋಡಿಲ್ಲ, ಕೇಳಿಲ್ಲ. ಅಷ್ಟು ಅದ್ಭುತವಾಗಿತ್ತು ಅದು. It was a work of pure genius.
ಆವೊಂದು ಊsದ್ದ ಕಥನಕಾವ್ಯದಲ್ಲಿ ಎಷ್ಟೊಂದು ಬಗೆಯ ರಾಗಗಳು, ಎಷ್ಟು ಬಗೆಯ ಪಲುಕುಗಳು, ಎಷ್ಟು ಬಗೆಯ ಕಾಕುಗಳು, ಎಷ್ಟು ನಾಟಕೀಯವಾಗಿರುವಂಥ ತಿರುವುಗಳು! ಅದನ್ನೆಲ್ಲ ಅವರು ಆ ಸಂಗೀತ ಸಂಯೋಜನೆಯಲ್ಲೇ ತಂದರು ಅಂತ ಹೇಳಿದರೆ…! ನಿಬ್ಬೆರಗಾಗಿದ್ದೇನೆ, ಈವತ್ತಿಗೂ!
ರಂಗಭೂಮಿ ಮತ್ತು ಸಂಗೀತ, ಮತ್ತು ರಂಗಸಂಗೀತ – ಇವುಗಳ ಅಧ್ಯಯನ ಮಾಡೋದಕ್ಕೆ ಹೊರಟ ಯಾರೇ ಆಗಲಿ ನಿಜವಾಗಲೂ ಬಹಳ ಆಳವಾಗಿ ಅಧ್ಯಯನ ಮಾಡಬೇಕಾಗಿರೋ ಪ್ರಯೋಗ ಅದು.
ನನಗೆ ದುಃಖದ ಮಾತು ಏನು ಅಂತ ಹೇಳಿದರೆ, ಇಷ್ಟು ವರ್ಷ ಆದಮೇಲೂ, ಆ ಕಿಂದರಿ ಜೋಗಿಗೆ ಅವರು ಮಾಡಿದ ರಾಗಸಂಯೋಜನೆ, ಸಂಗೀತ ಸಂಯೋಜನೆ ಈವತ್ತಿಗೂ ಕೂಡ ಸುಲಭವಾಗಿ ನಮಗೆ ದಕ್ಕದೇ ಇರೋವಂಥ ಸ್ಥಿತಿಯಲ್ಲಿದೆ. ಅದು ನಿಜವಾಗಲೂ ಬಹಳ ಒಳ್ಳೆಯ ಒಂದು CD ಆಗಬೇಕು, ಹತ್ತಾರು ಜನ ಅದನ್ನ ಕೇಳೋ ಹಾಗೆ ಆಗಬೇಕು, ಅದರ ಅಧ್ಯಯನ ಮಾಡೋಹಾಗೆ ಆಗಬೇಕು.[4]
ಬೇಡರ jazz
ಅದೇ ರೀತಿ ನನಗೆ, ಕಾರಂತರ, ಬಹಳ ಇಷ್ಟವಾಗಿರೋ ಅಂಥ ಮತ್ತೊಂದು ಪ್ರಯೋಗ…
ಅವರು ಕುವೆಂಪು ಅವರ ಚಂದ್ರಹಾಸ ನಾಟಕವನ್ನ ರಂಗಾಯಣದಲ್ಲಿ ನಿರ್ದೇಶಿಸಿದರು. ಅದರಲ್ಲಿ, ಬೇಡರು ಬಾಲ ಚಂದ್ರಹಾಸನನ್ನ ಕಾಡಿಗೆ ಬಿಡ್ತಾರಲ್ಲ, ಆ ದೃಶ್ಯಕ್ಕೆ ಮೊದಲು, ಆ ಕಾಡಿನಲ್ಲಿ ಬೇಡರೆಲ್ಲರೂ ಬೇಟೆಗೆ ಹೋಗೋ ಒಂದು ದೃಶ್ಯ ಇದೆ. ಅಲ್ಲಿ ಕುವೆಂಪು ಅವರ ಹಾಡನ್ನ ಕಾರಂತರು ಒಂದು ಚೂರುಚೂರುಚೂರು ಬದಲಾಯಿಸಿ (ರಾಗಸಂಯೋಜನೆಗೆ ಹೊಂದಿಸಿಕೊಳ್ಳಬೇಕಲ್ಲ) ಒಂದು ಹಾಡು ಕಟ್ಟಿದರು.[5]
ಅದೆಷ್ಟು ಅದ್ಭುತವಾಗಿತ್ತು ಅಂತ ಹೇಳಿದರೆ… ಅದು ಏನುs… ಅದು ಜನಪದವೋ, ಆಧುನಿಕವಾದಂಥ jazz ಸಂಗೀತವೋ, rap ಸಂಗೀತವೋ … ಏನೂ ಗೊತ್ತಾಗದ ಹಾಗೆ ಒಟ್ಟೊಟ್ಟಿಗೇ ಅವೆಲ್ಲವೂ ಆಗಿ, ನಿಜವಾಗಲೂ ನನಗೆ ಬಹಳ ಇಷ್ಟವಾಗಿರೋ ಅಂಥ ಒಂದು ಹಾಡು.
Chaos theory, ಚಡಪಡಿಕೆ, ಆನಂದ
ಇದನ್ನೆಲ್ಲಾ ಹೇಳ್ತಾ, ಮತ್ತೊಂದು ವಿಷಯ…. ನಾನು ಅಷ್ಟೊಂದು ವರ್ಷ ಅವರ ಒಡನಾಡಿದ್ದರಿಂದಾಗಿ, ಆ ವಿಷಯ ಕುರಿತು ಆವತ್ತಿನಿಂದ ಇವತ್ತಿನ ತನಕ ನಿರಂತರವಾಗಿ ಯೋಚನೆಮಾಡ್ತಾ ಬಂದಿರೋದರಿಂದಾಗಿ, ಮತ್ತು ಅವರ ಜೊತೆ ಬಹಳ ಆಪ್ತವಾಗಿ ಕೂತು ಆ ವಿಷಯ ಮಾತನಾಡಿಕೊಂಡದ್ದರಿಂದಾಗಿ, ಹೇಳ್ತೇನೆ.
ತಮಾಷೆಯಾಗಿ ಹೇಳಬಹುದಾದರೆ, ಕಾರಂತರಿಗೆ ತಮ್ಮದೇ ಆದಂಥ chaos theory ಒಂದಿತ್ತು. ನಾನು ಕೆಲವೊಮ್ಮೆ ಅವರ ಜೊತೆ ಜಗಳ ಆಡ್ತಿದ್ದೆ, ‘‘ ಸರ್, ಇದು ಸಿಕ್ಕಾಪಟ್ಟೆ unstructured ಆಗಿಹೋಯ್ತು, ಇದಾಗಿಹೋಯ್ತು… ಇದೇನು ಹೀಗಾಗಿಬಿಟ್ಟರೆ ಹೇಗೆ,’’ ಅಂತ.
ಅವರು ‘‘ಇಲ್ಲ, ಇಲ್ಲ…’’ ಅನ್ನೋವರು.
ಮತ್ತೆ, ‘‘ಸರ್, ತುಂಬ chaotic ಆಗಿಹೋಯಿತು!’’ ಅಂತಿದ್ದೆ ಕೆಲವೊಂದು ಸಾರಿ.
ಯಾಕೆ ಅಂದರೆ, ಅವರಿಗೆ ಏನಾಗ್ತಿತ್ತು ಅಂದರೆ…
(ಇದನ್ನ ಬಹುಶಃ ಬೇರೆಯವರೂ ಹೇಳ್ತಾರೆ)…
ನಾನು ಕಂಡಹಾಗೆ ಕಾರಂತರ ಹೆಚ್ಚಿನ ನಾಟಕಗಳ ತಾಲೀಮಾದದ್ದು ಹೆಚ್ಚು ಅಂದರೆ ಹತ್ತು ದಿನ, ಹನ್ನೆರಡು ದಿನ… ಅಷ್ಟೆ! ನಾನು ರಂಗಾಯಣದಲ್ಲಿದ್ದಾಗ ನೋಡಿದ್ದೇನೆ. ಅವರು ಬಹುಶಃ ನಾಲ್ಕೆಂಟು ನಾಟಕಗಳನ್ನು ಆಡಿಸಿದ್ದರು ಅಲ್ಲಿ.[6]
ಆ ಪೈಕಿ, ಕಾರಂತರು ತಮ್ಮ ನಿರ್ದೇಶನದ ಯಾವುದಾದರೂ ನಾಟಕದ ತಾಲೀಮಿನುದ್ದಕ್ಕೂ ತಾವೇ ಇದ್ದು, ನೇರವಾಗಿ ತಾವೇ ತಾಲೀಮು ನಡೆಸಿದ್ದು ಅತೀ ಹೆಚ್ಚು ಅಂದರೆ ಎಷ್ಟು ದಿನ? ಹನ್ನೆರಡು ದಿನ!
ಅಸಲಿಗೆ ಅವರು ಆ ನಾಟಕಕ್ಕಾಗಿ ಒಂದೋ ಒಂದೂವರೆ ತಿಂಗಳೋ ಮೀಸಲಿಡ್ತಾ ಇದ್ದರು! ಆದರೆ ತಾವು ಅಷ್ಟೂ ದಿನ ಇರ್ತಿರಲಿಲ್ಲ ಅಲ್ಲಿ! ಮೊದಲಿಗೆ ತಾವು ಒಂದಷ್ಟು ಮಾಡಿ, ‘ನೀನು…ನೀನು ಮಾಡಿಸು’ ಅನ್ನೋವರು. ‘ಊಂ… ನೀವು ಒಂದಷ್ಟು ಓದಿ’ ಅನ್ನೋವರು. ಒಂದಷ್ಟು… ಊಂ… ಆಟ ಆಡಿ’ ಅನ್ನೋವರು. ಒಂದಷ್ಟು… ಊಂ… improvise ಮಾಡಿ. ರಘು, ನೀನೊಂದಷ್ಟು improvise ಮಾಡಿಸಿಬಿಡು’ ಅನ್ನೋವರು. ಇನ್ನೇನೋ ಮಾಡಿಸಿಬಿಡೋವರು… ಹೊರಟ್ಹೋಗೋವರು! ಅವರಿಗೆ ಅವರ ಲೋಕ ಪರಿಭ್ರಮಣ ಅನ್ನೋದಿರ್ತಿತ್ತಲ್ಲ! ಹೋಗೋವರು!
ಕಡೇಗೆ, ಬರೋವರು. ಇನ್ನೇನು ಇನ್ನು ಹದಿನೈದು ದಿನ ಇದೆ ಅನ್ನೋವಾಗ ಬರೋವರು. ಬಂದು… ಆಗಲೂ ತಕ್ಷಣ ಶುರುಮಾಡ್ತಿರಲಿಲ್ಲ… ಇನ್ನೇನು ನಾಟಕ ಆಡೋ ವೇಳೆ ಹತ್ತಿರ ಬರ್ತಾಯಿದೆ… ಬಂದು, ಒಂದೆರಡು-ಮೂರು ದಿನ ಸಂಗೀತ… ಮನೇಲಿ ಹಾರ್ಮೋನಿಯಮ್ ಬಾರಿಸ್ತಾ ಕೂತ್ಕೊಂಡು ಒಂದಷ್ಟು ಸಂಗೀತ ಹುಡುಕೋದು — ಅವರಿಗೆ ಅದೊಂದು ಬಾಗಿಲು ತೆರಕೋಬೇಕಿತ್ತು — ಹುಡುಕಿ, ಹುಡುಕಿ, ಹುಡುಕಿ… ಬಾಗಿಲು ತೆರಕೊಂಡಮೇಲೆ: ಆಂ…! ಈಗ ಬನ್ನಿ, ಕೂತ್ಕೊಳ್ಳಿ!
ಕೂರಿಸಿ, ಹಾಡು ಹೇಳಿಸೋವರು. ಹಾಡು ಹೇಳಿಕೊಟ್ಟು, ಆಮೇಲೆ ಒಂದಷ್ಟು ಆಟ ಆಡಿಸಿ, ಒಂದಷ್ಟು improvise ಮಾಡಿಸ್ತಾ ತಾಲೀಮು ಮಾಡೋವರು.
ಒಂದು ಸಲ ನಾನು ರೇಗಾಡಿದೆ. ‘‘ಇಲ್ಲ, ಇದು ತುಂಬ chaotic ಆಗುತ್ತೆ,’’ ಅಂತ.
‘‘ಇಲ್ಲ! ನನಗೆ chaos ಬೇಕು!’’
ನನಗೂ ಅವರಿಗೂ ಒಂಥರಾ ಪ್ರೀತಿಯಿಂದ, ಮತ್ತು ಉಗ್ರವಾಗಿ, ಆಗ್ತಿದ್ದ ಜಗಳಗಳು ಅವು.[7]
‘‘ನನಗೆ chaos ಬೇಕು ಕಣಯ್ಯ! ನಾನುs… ಇನ್ನೊಂದೇನೂ ಅಂದರೆ… ನಾನು chaos ಇಲ್ಲದ ಕಡೆ chaos ಸೃಷ್ಟಿಮಾಡ್ತೀನಿ!’’
ನನಗೆ ಅವರು ಹಾಗೆ ಮಾಡ್ತಿದ್ದಿದ್ದರಲ್ಲಿ ಕೂಡ ಒಂದರ್ಥ ಇದೆ, there is a method in that madness ಅನ್ನಿಸ್ತು. ಮತ್ತು ಈಗೀಗ – ಬರ್ತಾಬರ್ತಾ – ಇನ್ನೂ ಹೆಚ್ಚು ಅನ್ನಿಸ್ತಾಯಿದೆ.
ಯಾಕೆ ಅಂದರೆ, ಕಾರಂತರು ಬಹುಶಃ ಏನು ಮಾಡ್ತಿದ್ದರು ಅಂದರೆ, ಮನುಷ್ಯನನ್ನ ಆ ರೀತಿಯಲ್ಲಿ ಒಂದು ಒತ್ತಡಕ್ಕೆ ಸಿಲುಕಿಸೋ ಕೆಲಸಮಾಡ್ತಿದ್ದರು…
ಹೇಗೆ ಅಂದರೆ…
ಈಗ ನೀವು… ಕಡೇss ಹತ್ತು ದಿನ ಇದೆ ಈಗ ನಾಟಕಕ್ಕೆ, ಅಂತ ಹೇಳೋವಾಗ ಏನಾಗಿರುತ್ತೆ ಅಂತ ಹೇಳಿದರೆ, ನಟನಿಗೆ ಮತ್ತು ಆ ಒಟ್ಟು ತಂಡದಲ್ಲಿರುವವರಿಗೆ, ಎಲ್ಲರಿಗೂ ಕೂಡಾ ರಕ್ತ ಒಂದಷ್ಟು ಬಿಸಿಯೇರೋಕೆ ಶುರು ಆಗ್ತದೆ… ಕಾವು, ಕಾವು ಬರೋಕೆ ಶುರು ಆಗ್ತದೆ…ಯಾಕೆ ಅಂದರೆ, ಇನ್ನು ಪ್ರೇಕ್ಷಕರ ಮುಂದೆ ಹೋಗಬೇಕು, ನಾಟಕ ಆಡಬೇಕು, ಸಮಯ ಹತ್ತಿರ ಬಂದುಬಿಡ್ತು… ಆಗ ಏನಾಗುತ್ತೆ ಅಂದರೆ… ಕಬ್ಬಿಣ ಕಾದಾಗ ಬಡೀಬೇಕು, ನೋಡಿ… ಆಗ ಹ್ಯಾಗೆ ಬೇಕಾದರೂ ತಿರುಗುತ್ತೆ… ಮನಸ್ಸು ಹದ ಇರುತ್ತೆ, ದೇಹ ಹದ ಇರುತ್ತೆ… ನೀವು ನಿಮಗಿರೋ ಭಿಡೆಗಳನ್ನೆಲ್ಲಾ ಬಿಟ್ಟುಬಿಡ್ತೀರಿ… ಅಂದರೆ ಒಂದು ಬಗೆಯ… ಈ ಒಂದು ರೀತಿ despair ಅನ್ನೋದು ಇರುತ್ತಲ್ಲ, desperation ಅದು, ಆ desperationನಲ್ಲಿ ಬಂದುಬಿಡೋ ಅಂಥ ಒಂದು ಎನರ್ಜಿ…
ಅಂಥದು ಆಗಬೇಕು ಅನ್ನೋ ರೀತಿ ಮಾಡಿ, ಹಾಗೆ ಎಲ್ಲ ಹದವಾಗಿರೋವಾಗ ತಟ್ಟಿ, ಕುಟ್ಟಿ, ಬೀಸಿ ಹೊಡೆದುಹೊಡೆದು ಪಟ್‍ಪಟ್‍ಪಟ್ ತಯಾರು ಮಾಡಿಬಿಡೋವರು.
ಆದರೆ ನಿಜ ಏನು ಅಂದರೆ (ನಗು), ಅದರಿಂದ ಒಂದೊಂದು ಸಲ ಕೆಲಸ ಆಗ್ತಿತ್ತು, ಒಂದೊಂದು ಸಲ ಆಗ್ತಿರಲಿಲ್ಲ. Hit-or-Miss method ಅದು. ಆದರೆ ಕೆಲಸ ಆದಾಗ ಮಾತ್ರ ಅದಕ್ಕೆ ನಿಜವಾಗಲೂ ಸಾಟಿ ಇರಲಿಲ್ಲ. ಇದು ಕೂಡ ನಾವು ಗಮನಿಸಬೇಕಾದ ಸಂಗತಿ.
ಇನ್ನೊಂದು, ಅದರಿಂದ ಏನಾಗುತ್ತೆ ಅಂದರೆ… ಆ ಒತ್ತಡದಲ್ಲಿ ಕೆಲಸಮಾಡಿದಾಗ, ಅಂಥ ಒಂದು ಬಗೆಯ chaos ಅಲ್ಲಿ ಕೆಲಸಮಾಡೋ ಮನುಷ್ಯನಿಗೆ, ಆ ನಟನಿಗೆ, ತನಗೇ ಗೊತ್ತಿಲ್ಲದಿರೋ ತನ್ನ ಆಳಗಳು ಇದ್ದಕ್ಕಿದ್ದಹಾಗೆ ಹೊರಗಡೆಗೆ ಬಂದುಬಿಡುತ್ವೆ.
ಆದರೆ, ಆ ಬಗೆಯಲ್ಲಿ…ಸುಪ್ತಪ್ರಜ್ಞೆಯ ಅಂಥ ಪಾತಳಿಗಳು ಅಪ್ರಜ್ಞಾಪೂರ್ವಕವಾಗಿ ಎಂಬಂತೆ ಹೊರಗೆ ಬರಲಿ ಅಂತ ಹೇಳಿ ಕಾರಂತರ ಮಾಡ್ತಾಯಿದ್ದರೂ, ಅದೆಲ್ಲ ಅವರು ಮೊದಲೇ ಲೆಕ್ಕಾಚಾರ ಮಾಡಿಕೊಂಡು, ಮೊದಲು ಒಂದು ಸಿದ್ಧಾಂತ ಮಾಡಿಕೊಂಡು ಮಾಡಿದ್ದಲ್ಲ. ಅದು ಅವರ ಪ್ರವೃತ್ತೀನೇ ಆಗಿತ್ತು… ಮಾಡ್ತಾಮಾಡ್ತಾ ‘ಓಹೋಹೋ ಇದು ಹೀಗಾಗುತ್ತೆ, ಇದು ಒಳ್ಳೇದು’ ಅಂತ ಯಾವಾಗ ಕಂಡುಕೊಂಡರೋ, ಆಗ, ‘ನಾನು ಇನ್ನುಮೇಲೆ ನಾಟಕ ಹೀಗೇ ಮಾಡ್ತೀನಿ’ ಅಂತಂದ್ಕೊಂಡರು ಅಂತ ಕಾಣುತ್ತೆ.
ಹಾಗಾಗಿ ಏನು ಹೇಳ್ತಿದ್ದೇನೆ ಅಂದರೆ, ಅದೆಲ್ಲ ಸಿದ್ಧಾಂತದಿಂದ ಹೊರಟಿದ್ದಲ್ಲ. ಬದುಕ್ತಾ ಬದುಕ್ತಾ ಬದುಕ್ತಾ ಹಾಗೆ ಬದುಕೋದರ ಒಳಗಡೆಯಿಂದಲೇನೆ ಯಾವುದೋ ಒಂದು ಬಗೆಯ ಮಾರ್ಗದ ನಿರ್ಮಾಣ ಆಗೋದು… ಅದನ್ನ ಮಾಡಿಕೊಂಡಿದ್ದರು ಅಂತ ಕಾಣುತ್ತೆ.
ಹಾಗಾಗಿ ಕಾರಂತರನ್ನ ಕುರಿತು ಏನಾದರೂ ಹೇಳಬಹುದಾದರೆ, ಕಡೆಗೂ ಕಾರಂತರು ಅಂದರೆ ನಿತ್ಯ ಚಡಪಡಿಕೆ, ಮತ್ತು ನಿತ್ಯ ಆನಂದ – ಈ ಮಾತನ್ನ ಆಡಬಹುದು.
ನಿತ್ಯ ಚಡಪಡಿಕೆ, restlessness. ನಿಂತ ಕಡೆ ನಿಲ್ತಿರಲಿಲ್ಲ. ಯಾವಾಗಲೂ… ಇನ್ನೆಲ್ಲೋ ಹೋಗಬೇಕು ಇನ್ನೆಲ್ಲೋ ಹೋಗಬೇಕು ಇನ್ನೆಲ್ಲೋ ಹೋಗಬೇಕು ಅನ್ನೋ ಥರದ್ದು.
ಮತ್ತು, ಆನಂದ.
ಗಾಡಿ ಎಣಿಸು, ಮಳೇಲಿ ನೆನೆ
ಅವರ ಹತ್ತಿರ ತುಂಬ ಪುಸ್ತಕಗಳಿದ್ದವು. ಆ ಪುಸ್ತಕಗಳಲ್ಲಿ ಅವರಿಗೆ ಒಂದು ಪುಸ್ತಕ ಬಹಳ ಇಷ್ಟವಾಗಿತ್ತು. ಅವರು ಒಂದು ಸಲ ನನಗೆ ಅದನ್ನ ಕೊಟ್ಟರು, ಓದು ಅಂತ ಹೇಳಿ. ಅದರ ಹೆಸರು Missing the Pleasure ಅಂತ.
ಅದರಲ್ಲಿ ಒಂದೊಂದು, ಎರಡೆರಡು ಪುಟದ ಸಣ್ಣಸಣ್ಣಸಣ್ಣ ಲೇಖನಗಳಿದ್ದವು. ಯಾರೋ ಇಬ್ಬರು ಕೂಡಿ ಬರೆದದ್ದು… ಅವರ ಹೆಸರು ಮರೆತುಹೋಗಿದೆ.
ಲೇಖನಗಳು ಏನನ್ನು ಹೇಳ್ತಿದ್ದವು ಅಂದರೆ… ಉದಾಹರಣೆಗೆ…. ಸುಮ್ಮನೆ ಬೀದಿ ಬದೀಗೆ ಹೋಗೋದು. ಫುಟ್‍ಪಾತು. ಅಲ್ಲೊಂದು ಕಟ್ಟೆ ಇದೆ. ಸುಮ್ಮನೆ ಕೂತುಕೊಳ್ಳೋದಪ್ಪ. ಕೂತುಕೊಂಡು… ಗಾಡಿಗಳೆಲ್ಲಾ ಹೋಗ್ತಾಯಿರ್ತಾವಲ್ಲ, ಗಾಡಿಗಳನ್ನ ನೋಡ್ತಾssಹೋಗೋದು. ಚಿಕ್ಕಂದಿನಲ್ಲಿ ನಾವು ಮಾಡ್ತಾಯಿದ್ದೆವಲ್ಲ, ಎಷ್ಟು ಕಾರು ಹೋಗುತ್ತೆ, ಎಷ್ಟು ಸೈಕಲ್ಲು ಹೋಗುತ್ತೆ ಅಂತ ಎಣಿಸ್ತಾಯಿದ್ದೆವಲ್ಲ… ಸಣ್ಣ ಮಕ್ಕಳಾಗಿದ್ದಾಗ, ಎರಡು-ಮೂರನೇ ಕ್ಲಾಸಿನಲ್ಲಿದ್ದಾಗ… ಹಾಗೆ…
ಹೋಗಿ ಕೂತ್ಕೋ, ಸುಮ್ಮನೆ ಹೋಗಿ ಕೂತ್ಕೋ, ಇಡೀ ಒಂದೈದಾರು ಗಂಟೆ ಹೊತ್ತು ಕೂತ್ಕೊಂಡ್ಬಿಟ್ಟು ನೋಡ್ತಾsಹೋಗು…!
ಆ Missing the Pleasure… ಈ ಥರದ್ದು, ಅಲ್ಲಿದ್ದದ್ದು.
ಅಥವಾ, ಮೊದಲನೇ ಮಳೆ ಬರ್ತಾ ಇದೆ — ಮೊದಲನೇದಲ್ಲ, ನಾಲಕ್ಕನೇ ಮಳೇನೇ ಅಂತಿಟ್ಟುಕೊಳ್ಳಿ, ಪರವಾಗಿಲ್ಲ — ಮಳೆಯಲ್ಲಿ ನೆನೀತಾ ಓಡಾಡೋದು ಒಂದೆರಡು ಗಂಟೆ ಹೊತ್ತು… ಸುಮ್ಮನೆ (ಬೇಕಾದರೆ, ಊರಿನ ಒಂದು ತುದೀಯಿಂದ ಇನ್ನೊಂದು ತುದೀಗೆ) ನಡಕೊಂಡು, ಮಳೆಯಲ್ಲಿ ತೊಯ್ತಾssಹೋಗೋದು… ಸುಮ್ಮನೆ. ಯಾಕೆಂದರೆ, ಆ ಥರದ pleasureಗಳನ್ನೇ ನಾವು ಮಿಸ್ ಮಾಡ್ಕೊಳ್ತಾಯಿದ್ದೀವಿ…!
ಈ ಥರದ್ದನ್ನು ಹೇಳೋ ಎಷ್ಟೋ ಲೇಖನಗಳಿದ್ದವು.
ಕಾರಂತರಿಗೆ ಅಂಥದೆಲ್ಲ ಬಹಳ ಇಷ್ಟವಾಗೋದು. ಅಂದರೆ, ಹಾಗೆ ಯಾವುದೋ ಒಂದಕ್ಕೆ ತನ್ನನ್ನ ತಾನು ಕೊಟ್ಟುಕೊಂಡುಬಿಡೋದು… ಇಂಥ ಸಣ್ಣಸಣ್ಣಸಣ್ಣಸಣ್ಣ ವಿಷಯಗಳು.
ಆ ಅರ್ಥದಲ್ಲಿ ಕಾರಂತರ ಒಟ್ಟು ಪ್ರವೃತ್ತಿ ಮತ್ತು ರಂಗಭೂಮಿ, ಅದು ಆ ಬಗೆಯ ಒಂದು ನಿತ್ಯ ಚಡಪಡಿಕೆ, ಮತ್ತು ಆನಂದಗಳದ್ದು.
ಚಡಪಡಿಕೆಯ ಮೂಲಕ ಆನಂದ. ಮತ್ತು ಆನಂದಪಡ್ತಿರೋವಾಗಲೇ, ‘ಇಲ್ಲ, ಇದಲ್ಲ, ಇನ್ನೇನೋ ಮಾಡಬೇಕು’ ಅನ್ನೋ ಚಡಪಡಿಕೆ.
ಚಡಪಡಿಕೆ ಮತ್ತು ಆನಂದ – ಎರಡೂ ಇದ್ದವು ಅವರಲ್ಲಿ, ಒಟ್ಟೊಟ್ಟಿಗೇ.
ಮೈಸೂರು, ತಿಂಡಿ, ಬೆಸುಗೆ
ಒಂದು ವಿಷಯ ಇಲ್ಲಿ ಹೇಳಿಕೊಳ್ಳಲೇಬೇಕು.
ರಂಗಾಯಣ, ಕಾರಂತರು ಇದ್ದಾಗ ಹಾಗೆ ಬೆಳೆದ ರೀತಿ ಇತ್ತಲ್ಲ, ಮತ್ತು ಇವತ್ತಿನ ತನಕ ಅದು ನಿಂತಿದೆಯಲ್ಲ – ಅದರಲ್ಲೆಲ್ಲ ಆ ಮೈಸೂರು ಅನ್ನೋ ಊರಿನ ಬಹಳ ದೊಡ್ಡ ಕೊಡುಗೆ ಇದೆ. ಮೈಸೂರಿನ ದೊಡ್ಡವರು… ಅವರು ಮೈಸೂರಿಗೆ ದೊಡ್ಡವರು, ದೇಶಕ್ಕೆ ದೊಡ್ಡವರು, ಲೋಕಕ್ಕೆ ದೊಡ್ಡವರು… ಅಂಥವರು ಅದನ್ನ ಪೊರೆದಿದ್ದಾರೆ. ಜಿ. ಎಚ್. ನಾಯಕ್ ಮೇಷ್ಟರು, ಮತ್ತು ಮೀರಾ ನಾಯಕ್ ಅಂಥವರು, ನ. ರತ್ನ ಅವರು, ಬಾಲನ್ ವರ್ಮ, ರಾಮೇಶ್ವರೀ ವರ್ಮ, ಪಂಡಿತಾರಾಧ್ಯರು, ದೇವನೂರ ಮಹಾದೇವ, ರಾಮು, ಅಂದರೆ ಟಿ. ಎಸ್. ರಾಮಸ್ವಾಮಿ ಅವರು, ವಿಶ್ವನಾಥ ಮಿರ್ಲೆ ಅವರು, ರಘುನಾಥ್ ಅವರು ಮತ್ತು, ಅವರಿದ್ದಾಗ, ಚದುರಂಗರು – ಇಂಥ ಅನೇಕ ಜನ ಕಾರಂತರನ್ನ ತೆರೆದ ತೋಳಿನಿಂದ ಬರಮಾಡಿಕೊಂಡರು ಮೈಸೂರಿಗೆ. ಮತ್ತು, ಕಾರಂತರು ಕೂಡ ಅವರ ಜೊತೆಗೆ ಆ ರೀತಿಯ ಪ್ರೀತಿ-ವಿಶ್ವಾಸವನ್ನ ಕಡೇತನಕ ಉಳಿಸಿಕೊಂಡಿದ್ದರು.
ಕಾರಂತರು ನಮ್ಮ ರಂಗಾಯಣದ ತರಬೇತಿಯ ಅವಧಿಯಲ್ಲಿ ಹಮ್ಮಿಕೊಂಡ ಅನೇಕ ಯೋಜನೆಗಳಲ್ಲಿ ಒಂದು ಯೋಜನೆ ಏನು ಅಂದರೆ, ಪ್ರತೀ ಸೋಮವಾರ ಬೆಳಿಗ್ಗೆ ಐದೂ ಮುಕ್ಕಾಲು-ಆರು ಗಂಟೆಗೆ ರಂಗಾಯಣದ ಎಲ್ಲರೂ ತಯಾರಾಗಿ ಹೊರಡಬೇಕು ಅನ್ನೋದು. ಹೊರಟು, ಊರು ಸುತ್ತೋದು!
ಸುಮಾರು ಒಂದೂವರೆ ಗಂಟೆ – ಎರಡು ಗಂಟೆ ಹೊತ್ತು ನಡೆಯೋದು, ಆರು ಗಂಟೆಯಿಂದ ಎಂಟು-ಎಂಟೂವರೆ ತನಕ. ಪ್ರತೀ ಸಲ ಊರಿನ ಒಂದೊಂದು ಭಾಗಕ್ಕೆ ಹೋಗೋದು. ಹಾಗಾಗಿ, ಏನಾಯಿತು ಅಂದರೆ – ಕರ್ನಾಟಕದ ಬೇರೆಬೇರೆ ಕಡೆಯಿಂದ ಬಂದಿದ್ದೆವಲ್ಲ ರಂಗಾಯಣದವರು ನಾವು – ನಮಗೆ ಆ ಊರಿನ ಪರಿಚಯ ಆಗ್ತಿತ್ತು. ಯಾವುದೋ ಒಂದು ಜಾಗಕ್ಕೆ ಹೋಗೋದು: ಒಂದು ಮಂಟಪ, ಒಂದು ಉದ್ಯಾನವನ, ಒಂದು ಬಡಾವಣೆ ಅಥವಾ ಇನ್ನೊಂದು ಯಾವುದೋ ಜಾಗಕ್ಕೆ.
ಒಂದು ಸಲ ನಾವೆಲ್ಲ ಚಾಮುಂಡಿ ಬೆಟ್ಟ ಹತ್ತಿದೆವು. ಮೆಟ್ಟಿಲು ಹತ್ತಿ ಹೋಗಲಿಲ್ಲ, ಕಾಡಿಗೆ ಬಿದ್ದು, ಪೊದೆಗಳ ನಡುವೆ ನುಸುಳ್ತಾ, ಕಲ್ಲುಬಂಡೆ ಹತ್ತಿ ಇಳೀತಾ ಹೋದೆವು. ಕಾರಂತರೂ!
ಹೀಗೆ, ಯಾವ ಜಾಗಕ್ಕೇ ಇರಲಿ, ಎಲ್ಲಾ ಕಡೇಗೂ ನಡೆದುಕೊಂಡೇ ಹೋಗೋದು. ಹೋಗಿ, ಅಲ್ಲಿನ ಪರಿಸರವನ್ನೆಲ್ಲಾ ನೋಡಿದಮೇಲೆ… ಇವರು — ಕಾರಂತರು — ಅಲ್ಲಿ ಯಾರಿಗಾದರೂ ಒಬ್ಬರಿಗೆ, ರಂಗಾಯಣದ ಸ್ನೇಹಿತರಿಗೆ, ರಂಗಾಯಣವನ್ನ ಇಷ್ಟಪಡ್ತಿದ್ದವರಿಗೆ — ಒಬ್ಬ ಬರಹಗಾರರು, ಅಥವಾ ಒಬ್ಬ ಮೇಷ್ಟರು, ಅಥವಾ ಒಬ್ಬ ಸಣ್ಣ ಉದ್ಯಮಿ — ಇಂಥವರನ್ನ ಮೊದಲೇ ಗೊತ್ತುಮಾಡಿಕೊಂಡಿರ್ತಿದ್ದರು, ‘‘ನಾವು – ಒಬ್ಬರಲ್ಲ, ಇಬ್ಬರಲ್ಲ – ನಲವತ್ತು ಜನ ನಿಮ್ಮ ಮನೆಗೆ ತಿಂಡಿಗೆ ಬರ್ತೀವಿ, ಬೆಳಗ್ಗೆ ತಿಂಡಿಗೆ,’’ ಅಂತ.
So, ಬೆಳಗ್ಗೆ ಅವರ ಮನೆಗೆ ಹೋಗಿ ತಿಂಡಿ ತಿನ್ನೋದು. ನಲವತ್ತು ಜನ! ಅಪರೂಪಕ್ಕೊಮ್ಮೆ ನಲವತ್ತು ಜನ ಬರ್ತಾರೆ ಮತ್ತು, ಮೇಷ್ಟರು, ಕಾರಂತರು ಬರ್ತಾರೆ, ರಂಗಾಯಣದ ಕಚೇರಿಯ ಅಫಿಷಿಯಲ್ಸ್ ಎಲ್ಲಾ ಬರ್ತಾರೆ ಅಂದಮೇಲೆ ನಲವತ್ತು ಜನರಿಗೆ ಅವರು ತಿಂಡಿ ತಯಾರುಮಾಡಿರೋವರು.
ಅದರಿಂದಾಗಿ ಏನಾಯ್ತು ಅಂದರೆ ನಮಗೂ ಆ ಊರಿಗೂ ಒಂದು ಬೆಸುಗೆ ಆಯ್ತು. ಅದರಿಂದ ಹತ್ತಾರು ಜನರ ಪರಿಚಯ ಆಯ್ತು. ಮತ್ತು ಅವರಿಗೂ ಕೂಡಾ ತಾವು ಇಂಥವರನ್ನ ಕರೆದು ಅತಿಥಿ ಸತ್ಕಾರ ಮಾಡಿದೆವು ಅನ್ನೋ ಹಿಗ್ಗಿರುತ್ತಿತ್ತು. ಹಾಗೆ ಒಂದು… ಮಿಲನವನ್ನ ಕಾರಂತರು ಉಂಟುಮಾಡಿದರು. ಮತ್ತು, ಅದು, ಹತ್ತಿರಹತ್ತಿರ ಎರಡೂವರೆ ಮೂರುವರ್ಷಗಳ ಪರ್ಯಂತ, ಉದ್ದಕ್ಕೂ ನಡೀತು. ನಮಗೆ ಊರಿನ ಪರಿಚಯ ಆಯ್ತು, ಊರಿನ ತುಂಬಾ ಜನರ ಪರಿಚಯ ಆಗಿಹೋಯ್ತು.
ಹಾಗಾಗಿ ಇವತ್ತಿನ ತನಕ ಕೂಡ, ರಂಗಾಯಣ ಏನೇ ಸಮಸ್ಯೆಯನ್ನ ಎದುರಿಸಲಿ, ಆ ಊರಿನ ಜನ, ಮೈಸೂರಿನ ಜನ, ಮೈಸೂರಿನ ದೊಡ್ಡವರು — ಮಹಾದೇವ ಅಂಥವರು, ಜಿ. ಎಚ್. ನಾಯಕರಂಥವರು, ಇಂಥವರೆಲ್ಲರೂ — ರಂಗಾಯಣದ ಜೊತೆ ನಿಲ್ತಾರೆ. ಇದು ಬಹಳ ದೊಡ್ಡ ವಿಷಯ ಅಂತ ಅಂದ್ಕೊಡಿದ್ದೇನೆ.
ಹರೀಬೇಕು ನೀರು, ಬಗ್ಗಡವಾಗಬಾರದು
ಕಾರಂತರು ಆ ಇಪ್ಪತ್ತೈದು ಜನ ನಟರು ಮತ್ತು ನಟಿಯರನ್ನ ಆಯ್ಕೆಮಾಡಿ ರಂಗಾಯಣಕ್ಕೆ ತಂದುಕೊಂಡಾಗ, ಅವರೆಲ್ಲ ತಮ್ಮ ಉದ್ಯೋಗದಲ್ಲಿ ಖಾಯಂ ಆಗಿ ಇರ್ತಾರೆ – ಅಧಿಕೃತವಾಗಿ, ಸರ್ಕಾರೀ ನಿಯಮಗಳ ಪ್ರಕಾರ – ಅನ್ನೋ ಮಾತೇನೂ ಇರಲಿಲ್ಲ. ಆದರೆ ಅನಧಿಕೃತವಾಗಿ, ಬಹಳ ಆಪ್ತವಾಗಿರೋ ಅಂಥ ಯಾವುದೋ ಒಂದು ಮಟ್ಟದಲ್ಲಿ ಆ ಬಗೆಯ ಒಂದು ತಿಳಿವಳಿಕೆ ಆ ನಟ ಮತ್ತು ನಟಿಯರಲ್ಲಿ ಇತ್ತು, ಮತ್ತು ಕಾರಂತರು ಹಾಗೂ ನಟನಟಿಯರ ನಡುವೆ ಇತ್ತು ಅಂತ ಕಾಣುತ್ತೆ.
ಯಾಕೆ ಅಂದರೆ, ನಾನು ಯಾವತ್ತೂ ಮರೆಯೋದಿಲ್ಲ: ನಾನು ರಂಗಾಯಣಕ್ಕೆ ಸೇರಿದಾಗ ಕಾರಂತರು, ಅಕ್ಷರಶಃ, ನನ್ನ ಕೈಯನ್ನ ತಮ್ಮ ಕೈಮೇಲೆ ಇರಿಸಿಕೊಂಡು, ‘‘ನೋಡು, ನೀನಿಲ್ಲಿ ಇವರಿಗೆ ಅಭಿನಯ ಶಿಕ್ಷಣ ಕೊಡಲಿಕ್ಕೆ ಬಂದಿದ್ದೀಯ. ನೀನು ಇವರನ್ನ ಜೀವನಪರ್ಯಂತ ನಾಟಕ ಆಡಲಿಕ್ಕೆ ರೆಡೀ ಮಾಡಬೇಕು. ಮತ್ತು ಜೀವನಪರ್ಯಂತ ರಂಗಾಯಣದಲ್ಲಿದ್ದು ನಾಟಕ ಆಡೋದಕ್ಕೆ ರೆಡೀ ಮಾಡಬೇಕು,’’ ಅಂದರು.
ಅಂದರೆ, ಅವರು ಏನು ಹೇಳಿದ ಹಾಗಾಯ್ತು? ರಂಗಾಯಣ ಅನ್ನೋ ಅಂಥ ಸಂಸ್ಥೆಯೊಂದಿರ್ತದೆ, ಮತ್ತು ಆ ನಟರು, ನಟಿಯರು ನಿರಂತರವಾಗಿ, ತಮ್ಮ ನಿವೃತ್ತಿಯ ವಯಸ್ಸಿನವರೆಗೆ ರಂಗಾಯಣದಲ್ಲಿ ಕೆಲಸ ಮಾಡಬೇಕು,’’ ಅಂತ ತಾನೆ!
ಆವಾಗ ನೋಡಿ ಅದು ನಿಮಗೆ ಕೊಡುವ ಒಂದು ಉಮೇದು, ನಿಮಗೆ ಕೊಡುವಂಥ ಒಂದು ದರ್ಶನ. ‘ಅರೆ, ನಾನು ಇಲ್ಲಿ ಜೀವನಪರ್ಯಂತ ಕೆಲಸ ಮಾಡಬೇಕು. ಅಂಥದಕ್ಕೆ ಇವರನ್ನೂ ತಯಾರು ಮಾಡಬೇಕು! ಬಹಳ ದೊಡ್ಡ ಕೆಲಸ!’ ಅನ್ನೋ ಅಂಥದಲ್ಲವೇ?
ಆದರೆ ಆಮೇಲಾಮೇಲೆಮೇಲೆ ಏನಾಯ್ತು ಅಂತ ಹೇಳಿದರೆ, ಅಧಿಕೃತವಾಗಿ ಅವರ ಜೊತೆ ಮಾಡಿಕೊಂಡಿದ್ದರಲ್ಲ, ಆರು ವರ್ಷದ ಒಪ್ಪಂದ, ಅದರಲ್ಲಿ ಮೊದಲ ಮೂರು ವರ್ಷ ಮುಗಿಯೋ ಹೊತ್ತಿಗೆ, ‘ಇಲ್ಲ, ಖಾಯಂಗಿರಿ ಆಗೋದಿಲ್ಲ, ಇನ್ನು ಮೂರು ಕಳೆದಮೇಲೆ ನೀವೆಲ್ಲಾ ಹೊರಡಬೇಕು’ ಅಂತ ಸರಕಾರದವರು (ಮತ್ತು ಕಾರಂತರು) ಹೇಳಿದರು, ಆ ನಟರಿಗೆ, ನಟಿಯರಿಗೆ.[8]
ನಮಗಲ್ಲ, ಅಲ್ಲಿನ ಅಧ್ಯಾಪಕರಿಗಲ್ಲ. ಅಧ್ಯಾಪಕರು ಅಲ್ಲೇ ಮುಂದುವರೀಬಹುದು ಅನ್ನೋ ಥರ ಇತ್ತು. ಹಾಗಂತ ನಟನಟಿಯರಿಗೆ ಮಾತ್ರ ಹೇಳಿದರು. ಆಗ ಅವರಲ್ಲಿ ಬಹಳ ಚಡಪಡಿಕೆ ಉಂಟಾಯಿತು. ಆಮೇಲೆ ಅದು ಅನೇಕ ರೂಪಗಳನ್ನ ಪಡಕೊಳ್ತು – ಚಳವಳಿ ರೂಪವನ್ನ, ಮತ್ತೊಂದನ್ನ ಪಡಕೊಳ್ತು.[9]
ಕಲಾವಿದರೊಬ್ಬರು ಒಂದು ಸಂಸ್ಥೆಯಲ್ಲಿ ಖಾಯಮ್ಮಾಗಿ ಕೆಲಸಮಾಡೋದು, ಸರ್ಕಾರೀ ಸಂಸ್ಥೆಯಲ್ಲಿ ಖಾಯಮ್ಮಾಗಿ ಕೆಲಸಮಾಡೋದು ಅಷ್ಟು ಒಳ್ಳೇದಲ್ಲ; ಕಲೆಯಲ್ಲಿ ಬದಲಾವಣೆ ಅನ್ನೋದು ಬಹಳ ಮುಖ್ಯ; ಜೀವನ ಅನ್ನೋ ಅಂಥದು ಹರಿಯೋ ನೀರಿನ ಥರ; ನಿಜವಾದ ಕಲಾವಿದರೊಬ್ಬರು ಹಾಗೆ ಹರಿಯೋ ನೀರಿನ ಥರ ಇರಬೇಕು, ಒಂದು ಕಡೆ ನಿಂತ ನೀರಾಗಬಾರದು ಅನ್ನೋದು ಕಾರಂತರ ಕಲ್ಪನೆ ಇದ್ದಹಾಗೆ ಕಾಣುತ್ತೆ.
ಆ ಕಲ್ಪನೆ ಆ ನಟನಟಿಯರಿಗೆ ಕೂಡಾ ಮೊದಲೇ ಬಂದಿದ್ದು, ಆ ಒಪ್ಪಂದ ಅಲ್ಲಿ ಮೊದಲಿಗೇ — ಬರೀ ಕಾಗದದ ಮೇಲಲ್ಲ, ಅನೌಪಚಾರಿಕವಾಗಿ ಕೂಡ — ಸ್ಪಷ್ಟ ಆಗಿಬಿಟ್ಟಿದ್ದಿದ್ದರೆ, ಅಷ್ಟು ತೊಡಕು ಉಂಟಾಗ್ತಿರಲಿಲ್ಲ. ಆದರೆ ಆ ಸ್ಪಷ್ಟತೆ ಬಹುಶಃ ಆರಂಭದ ವರ್ಷಗಳಲ್ಲಿ ಇರಲಿಲ್ಲ. ಹಾಗಾಗಿ ಆ ನಟನಟಿಯರಲ್ಲಿ ಹಲವು ಅಪೇಕ್ಷೆಗಳು ಹುಟ್ಟಿದವು ಅಂತ ಕಾಣುತ್ತೆ.
ನೋಡಿ, ದೈನಂದಿನ ಜೀವನದ ಕೆಲವು ಒತ್ತಡಗಳಿರ್ತಾವೆ, ಕೆಲವು ವಾಸ್ತವಳಿರ್ತಾವೆ. ಆ ವಾಸ್ತವಗಳನ್ನ, ಮತ್ತು ಆ ವಾಸ್ತವಗಳು ಉಂಟುಮಾಡೋ ಅಪೇಕ್ಷೆಗಳನ್ನ, ಅಗತ್ಯಗಳನ್ನ ಕಾರಂತರು ಪೂರ್ತಿ ಮನಸ್ಸಿಗೆ ತಂದುಕೊಳ್ಳಲಿಲ್ಲ ಅಂತ ಕಾಣುತ್ತೆ. ಹಾಗಾಗಿ, ಯಾವಾಗ ಆ ಖಾಯಂಗಿರಿಗಾಗಿ ಒತ್ತಡ ಬಹಳ ದೊಡ್ಡಮಟ್ಟದಲ್ಲಿ ಶುರು ಆಯ್ತೋ ಆಗ ಕಾರಂತರು ರಂಗಾಯಣವನ್ನ ತೊರೆದು ನಡೀಬೇಕಾಯ್ತು.
ಆದರೆ ನಿಜ ಹೇಳಬೇಕು ಅಂದರೆ, ಆ ಖಾಯಂಗಿರಿ ಬರಲಿಕ್ಕೆ ಇನ್ನೇನು ಒಂದ ವಾರ ಇದೆ ಅನ್ನೋ ಹೊತ್ತಿಗೆ ನಾನೂ ಬಿಟ್ಟೆ ರಂಗಾಯಣವನ್ನ. ಯಾಕೆಂದರೆ, ನನಗೂ ಕೂಡಾ ಆ ರೀತಿಯಲ್ಲಿ ನಿಂತ ನೀರಾಗೋದು – ಅದು ಒಂದು ಸಂಸ್ಥೆಯೇ ಆಗಲಿ, ವ್ಯಕ್ತಿಗಳೇ ಆಗಲಿ – ಇಷ್ಟವೇ ಆಗೋದಿಲ್ಲ. ನಾನು ಬಿಟ್ಟೆ.
ಆದರೆ ಒಂದು ಮಾತು.
ಜೀವನ ಹರಿಯೋ ನೀರು, ನಿಜ. ಕಲೆ ಅನ್ನೋ ಅಂಥದು ಹಾಗೇ ಹರಿಯೋ ನೀರಾಗಬೇಕು, ನಿಜ. ಆದರೆ, ಆ ನೀರು ತಿಳಿಯಾಗಿ ಹರಿಯೋ ವ್ಯವಸ್ಥೆ ಆಗಬೇಕು. ಬಗ್ಗಡವಾಗಬಾರದು ಅದು. ಅದು ತಿಳಿಯಾದ ನಾಲೆಯಲ್ಲಿ, ತಿಳಿಯಾಗಿರೋ ಅಂಥ ಕಾಲುವೆಯಲ್ಲಿ ಅಥವಾ ನದಿಯ ಪಾತ್ರದಲ್ಲಿ ಹರಿಯೋ ವ್ಯವಸ್ಥೆಯನ್ನ ನಾವು ಮಾಡಿದರೆ, ಅದನ್ನು ಕಲುಷಿತಗೊಳಿಸದೆ ಬಿಟ್ಟರೆ, ತನ್ನ ಪಾಡಿಗೆ ತಾನು ಹರೀತಾಹೋಗುತ್ತೆ ಅದು, ಸಮಸ್ಯೆ ಇರೋಲ್ಲ. ಆದರೆ ಅದಕ್ಕೆ ದೈನಂದಿನ -ವಾಸ್ತವ ಜೀವನದಲ್ಲಿ ನೂರೆಂಟು ಅಡೆತಡೆಗಳು ಉಂಟಾದಾಗ, ಮತ್ತು ತಿಳಿವಳಿಕೆಯ ಮಟ್ಟದಲ್ಲಿ ಕೂಡ ಉಂಟಾದಾಗ ನೀರು ಬಗ್ಗಡವಾಗುತ್ತೆ. ಆವಾಗ ಅದನ್ನ ತಿಳಿಗೊಳಿಸುವ ಕೆಲಸ ಕೂಡ ಅದನ್ನ ಶುರುಮಾಡಿದವರದ್ದಾಗಿರುತ್ತೆ, ಅವರ ಜವಾಬ್ದಾರಿ ಆಗಿರುತ್ತೆ. ಆ ಜವಾಬ್ದಾರಿಯನ್ನ ಪೂರೈಸೋ ಕೆಲಸ ಆಗಲಿಲ್ಲ, ಸರ್ಕಾರದ ಮಟ್ಟದಿಂದ ಶುರುಮಾಡಿಕೊಂಡು ಬೇರೆ ಯಾವುದೇ ಹಂತ ಅಥವಾ ಮಟ್ಟದವರೆಗೆ ಯಾವ ಸ್ತರದಲ್ಲಿಯೂ ಯಾರೂ ಮಾಡಲಿಲ್ಲ ಅಂತ ಹೇಳಬಹುದು.
ಹಾಗಾಗಿ ಆ ಹೋರಾಟದಲ್ಲಿ ತೊಡಗಿಕೊಂಡ ನನ್ನ ಆ ಕಲಾವಿದ ಗೆಳೆಯರು ಆಳದಲ್ಲಿ ಒಂದು ಕಹಿಯನ್ನ ಬೆಳೆಸಿಕೊಂಡುಬಿಟ್ಟರು. ಆ ಕಹಿ, ಅದು ಅಲ್ಲೇ ಒಂದು ಸುಳಿಯಾಗಿ ಸುತ್ತುತಾ ಇದೆ, ಇವತ್ತಿನ ತನಕ. ಹಾಗಾಗಬಾರದಿತ್ತು.
ತುಂಬ ತಿಳಿಯಾಗಿರೋ ಅಂಥ ಒಪ್ಪಂದಗಳು, ತಿಳಿಯಾಗಿರೋ ಅಂಥ ಮಾತುಕತೆ ಆಗಿಬಿಟ್ಟಿದ್ದಿದ್ದರೆ ಬಹಳ ಒಳ್ಳೇದಿತ್ತು ಅಂತ ಕಾಣುತ್ತೆ.
ಇದಿಷ್ಟನ್ನ ಹೇಳಬಹುದು.
*********
ಟಿಪ್ಪಣಿಗಳು
[1] ಇದು ನಡೆದದ್ದು ಎಪ್ಪತ್ತರ ದಶಕದಲ್ಲಿ ಅನ್ನುವುದನ್ನು ನೆನೆಯಬೇಕು. ಲೋಹಿಯಾವಾದಿ ವಿಚಾರಗಳು ಕನ್ನಡದ ನವ್ಯಪಂಥದ ಹಲವು ಲೇಖಕರು ಮತ್ತು ಕಲಾವಿದರ ಒಲವನ್ನು ಗಳಿಸುತ್ತಿದ್ದ ಕಾಲ ಅದು, ಸಾಹಿತ್ಯ ಮತ್ತು ಕಲೆಯನ್ನು ಕುರಿತಂತೆ ಅವರು ನಡೆಸುತ್ತಿದ್ದ ಜಿಜ್ಞಾಸೆಯ ಮೇಲೆ ದಟ್ಟವಾದ ಪ್ರಭಾವ ಬೀರುತ್ತಿದ್ದ ಕಾಲ. ಕಾರಂತರು ಅಂಥದರ ಭಾಗವೇ ಆಗಿದ್ದರು. 1992ರ ಡಿಸೆಂಬರ್ 6ರಂದು ಬಾಬ್ರಿ ಮಸೀದಿಯನ್ನು ಹಿಂದೂತ್ವ ಮತಾಂಧರು ಕೆಡವಿದಾಗ ತಲ್ಲಣಗೊಂಡರು ಅವರು. ಆಗ ಸುದ್ದಿ ಪತ್ರಿಕೆಗಳಿಗೆ, ಬಾಬ್ರಿ ಮಸೀದಿಯನ್ನ ನಾವು ಮತ್ತೆ ಅದೇ ಜಾಗದಲ್ಲಿ ಕಟ್ಟಿಕೊಳ್ಳಬೇಕು. ಅದಕ್ಕಾಗಿ ನಾನು ಅಲ್ಲಿಗೆ ನನ್ನ ಬೆನ್ನಮೇಲೆ ಇಟ್ಟಿಗೆ ಹೊತ್ತೊಯ್ಯಲು ಸಿದ್ಧನಿದ್ದೇನೆ ಎಂಬಂಥ ಹೇಳಿಕೆಯನ್ನು ನೀಡಿದರು.
[2] ನಾನು ರಾಷ್ಟ್ರೀಯ ನಾಟಕಶಾಲೆಗೆ ಹೋಗುವ ಹೊತ್ತಿಗಾಗಲೇ, ಕಾಲೇಜು ಓದಿನ ದಿನಗಳಿಂದಲೇ, ಕಮ್ಯೂನಿಸ್ಟ್, ಲೋಹಿಯಾವಾದಿ, ಮತ್ತು ದಲಿತ ಚಳಗಳಿಗಳ ಭಾಗವಾಗಿದ್ದೆ, ಹಾಗೂ ಸಮುದಾಯ ರಂಗತಂಡದಲ್ಲಿದ್ದೆ. ಆದರೆ ಅಂದು ಕಾರಂತರು ಆಡಿದ ಆ ಮಾತು ಒಟ್ಟು ಜೀವನದ ಸಂದರ್ಭದಲ್ಲಿ, ಮತ್ತು ಕಲಾಜೀವನದ ಸಂದರ್ಭದಲ್ಲಿ, ಎಷ್ಟು ಆಡಿದರೂ ಸಾಲದಲ್ಲ.
[3] ರಾಷ್ಟ್ರೀಯ ನಾಟಕ ಶಾಲೆಯಲ್ಲಿ ನಾನು ಓದಿದ್ದು ಮೂರು ಮತ್ತೊಂದು ವರ್ಷ, ಒಟ್ಟು ನಾಲಕ್ಕು ವರ್ಷ, 1978ರಿಂದ ‘82ರವರೆಗೆ. ಮೊದಲ ಮೂರು ವರ್ಷ ಕಾರಂತರು ಶಾಲೆಯ ನಿರ್ದೇಶಕರಾಗಿದ್ದರು. ‘81ರಲ್ಲಿ ಅವರು ಭೋಪಾಲ ರಂಗಮಂಡಲಕ್ಕೆ ಹೋರಟುಹೋದರು. ನಾನು 1981-82ರಲ್ಲಿ ರಂಗನಿರ್ದೇಶನ ವಿಷಯದ ವಿಶೇಷ ಅಧ್ಯಯನ ಮಾಡಿದೆ. ಮೊದಲಿಂದಲೂ ಆ ಶಾಲೆಯಲ್ಲಿದ್ದದ್ದು, ಮತ್ತು ಈಗಲೂ ಇರುವುದು, ಮೂರು ವರ್ಷದ ಕೋರ್ಸ್ ಮಾತ್ರ. ಆ ಮೂರು ವರ್ಷದ ಓದು ಮುಗಿದಮೇಲೆ, ಕೆಲವರನ್ನು ಆಯ್ಕೆಮಾಡಿ ರಂಗನಿರ್ದೇಶನ, ಅಭಿನಯ, ಮತ್ತು ಶಾಲಾ ಶಿಕ್ಷಣದಲ್ಲಿ ರಂಗಭೂಮಿ ಎಂಬ ಮೂರು ವಿಷಯಗಳಲ್ಲಿ ಒಂದನ್ನು ಒಂದು ವರ್ಷದ ಕಾಲ ವಿಶೇಷ ಅಧ್ಯಯನಕ್ಕೆ ಅವಕಾಶ ನೀಡಬೇಕು ಅನ್ನುವುದು ಕಾರಂತರ ಯೋಜನೆ ಆಗಿತ್ತು. ಆದರೆ ಕೋರ್ಸ್ ಶುರುಮಾಡಿ, ಅವರು ಭೋಪಾಲಕ್ಕೆ ಹೊರಟುಹೋದರು. ವಿಶೇಷ ಅಧ್ಯಯನದ ಆ ಕೋರ್ಸ್ ಜಾರಿಯಲ್ಲಿದ್ದದ್ದು ಅದೊಂದು ವರ್ಷ ಮಾತ್ರ.
[4] ಇದೀಗ, 2020ರ ಆಗಸ್ಟ್ ಕೊನೆಯ ವಾರದಲ್ಲಿ, ರಂಗಾಯಣದವರು ಅದರ ಒಂದು ಧ್ವನಿಮುದ್ರಣ ಮಾಡಿದ್ದಾರೆ. ಅದು ಸದ್ಯದಲ್ಲೇ ಯೂಟ್ಯೂಬಿನಲ್ಲಿ ದೊರೆಯಲಿದೆ.
[5] ಅಲ್ಲಿ ಕುವೆಂಪು ಬರೆದದ್ದು ಹಾಡಲ್ಲ. ತುಣುಕುತುಣುಕು, ಉದ್ಗಾರದಂಥ ಮಾತು ಮತ್ತು ಕೂಗುಗಳನ್ನು.
[6] ಸರಿಯಾಗಿ ಎಣಿಸಿದರೆ, ಆರು ಪ್ರಯೋಗ: ಕಿಂದರಿ ಜೋಗಿ, ಮೂಕನ ಮಕ್ಕಳು, ಚಂದ್ರಹಾಸ, ಕತ್ತಲೆ-ಬೆಳಕು, ಮರ ಹೋತು ಬರ ಬಂತು ಢುಂ ಢುಂ ಢುಂ ಮತ್ತು ರಾಗಸರಾಗ (ಸಂಗೀತ ಲಯವಿನ್ಯಾಸಗಳ ಪ್ರಯೋಗ).
[7] ಅವರೊಂದಿಗಿನ ಈ ಥರದ ರೇಗಾಟ ಮತ್ತು ವಾಗ್ವಾದವೆಲ್ಲ, ಬಹಿರಂಗವಾಗಿ, ನಟನಟಿಯರು ಇಲ್ಲವೆ ಕಚೇರಿ ಸಿಬ್ಬಂದಿಯ ಮುಂದೆ ನಡೆಯದಂತೆ ಎಚ್ಚರವಹಿಸುತ್ತಿದ್ದೆ. ಅಂಥದೆಲ್ಲವನ್ನೂ ಒಂದೋ ಅಧ್ಯಾಪಕರ ಸಭೆಯಲ್ಲಿ ಅಥವಾ, ಅದಕ್ಕಿಂತ ಬಹಳ ಹೆಚ್ಚಾಗಿ, ಕಾರಂತರ ಮನೆಗೆ ಹೋಗಿ ಮಾಡುತ್ತಿದ್ದೆ. ಅವರ ಮನೆಗೆ ಬಹಳ ಹೋಗಿಬರುವುದಿತ್ತು, ಅವರೊಡನೆ, ಸುಮ್ಮನೆ, ಸಂತಸದಿಂದ ಮಾತನಾಡಲೆಂದು, ಇಲ್ಲವೆ ಹೀಗೆ ಬಿಸಿ ಚರ್ಚೆ ಮಾಡಲೆಂದು!
[8] ಆರು ವರ್ಷದ ಒಪ್ಪಂದಲ್ಲಿ ಮೂರು ವರ್ಷ ಕಳೆದಮೇಲೆ ಈ ಮಾತನ್ನು ಆಡಿದರು ಅನ್ನುವುದು ನಾನು ವಿಡಿಯೋ ಮುದ್ರಣದ ವೇಳೆ ತಪ್ಪಿ ಆಡಿದ ಮಾತು. ಸರಕಾರದವರು (ಮತ್ತು ಕಾರಂತರು) ಆ ನಿಲುವು ಪ್ರಕಟಿಸಿದ್ದು ರಂಗಾಯಣ ಶುರುವಾದ ಐದು ವರ್ಷದನಂತರ, ನಟರ ಆರು ವರ್ಷದ ಒಪ್ಪಂದದಲ್ಲಿನ ಇನ್ನೊಂದು ವರ್ಷ ಉಳಿದಿದೆ ಅನ್ನುವಾಗ.
[9] ಸ್ವಷ್ಟವಾಗಿ ಹೇಳುತ್ತೇನೆ: ನಾನು ಆಗ ಉದ್ದಕ್ಕೂ ನಟರೊಂದಿಗೆ ನಿಂತೆ, ಖಾಸಗಿಯಾಗಿಯೂ, ಸಾರ್ವಜನಿಕವಾಗಿಯೂ. ನಟರು ತಮ್ಮ ಪಟ್ಟುಬಿಡದೆಯೆ, ಆದರೆ ನಮ್ಮ ಕಲೆಯ ಕಾಯಕ ಮತ್ತು ಮರ್ಯಾದೆಗೆ ಧಕ್ಕೆಯಾಗದಂತೆ, ಘನವಾದ ರೀತಿಯಲ್ಲಿ ಪ್ರತಿಭಟಿಸುವಂತೆ, ಚಳವಳಿ ಮಾಡುವಂತೆ ಕಾಲಕಾಲಕ್ಕೆ ಸಲಹೆ ನೀಡಿದೆ, ಅವರೊಡನೆ ಕೂಡಿಕೊಂಡೆ. ಇಷ್ಟಾಗಿ, ಖಾಯಂಗಿರಿಯನ್ನು ಕೇಳುವುದು ಸರಿಯೇ ಎಂಬ ಅನುಮಾನವಿತ್ತು ನನಗೆ. ಅಲ್ಲದೆ ಅದು ನನಗಂತೂ ಬೇಡವಾಗಿತ್ತು. ಆದರೆ ಕಾರಂತರು ಆ ನಟನಟಿಯರಿಗೆ ಯಾವುದೋ ಒಂದು ರೀತಿಯಲ್ಲಿ ಮಾತು ಕೊಟ್ಟಿದ್ದರಲ್ಲ! ನನಗೆ ಒಂದು ದರ್ಶನ ನೀಡಿದ್ದರಲ್ಲ! ಅದೆಲ್ಲ ಆಗಿಲ್ಲ ಎಂಬಂತಿರುವುದು ಆತ್ಮವಂಚನೆ ಅನ್ನಿಸಿತು ನನಗೆ.
ಚಿತ್ರಗಳು: ರಘುವೀರ್ ಹೊಳ್ಳ
ನಾಟಕಕಾರ, ಕವಿ, ರಂಗನಿರ್ದೇಶಕ. ‘ಎತ್ತ ಹಾರಿದೆ ಹಂಸ’ ಇವರ ಪ್ರಕಟಿತ ನಾಟಕ. ಈ ಕೃತಿಗೆ 2012ರಲ್ಲಿ ಪು.ತಿ.ನ ಕಾವ್ಯ ಪುರಸ್ಕಾರ ಸಂದಿದೆ. ನೀನಾಸಮ್ ಪ್ರತಿಷ್ಠಾನವು ಕೊಡುವ ಬಿ. ವಿ.ಕಾರಂತ ಫೆಲೋಷಿಪ್ ಮೊತ್ತಮೊದಲು ಸಂದಿದ್ದು ರಘುನಂದನರಿಗೆ. ಇವರು 2002ನೇ ಸಾಲಿನ ಕರ್ನಾಟಕ ನಾಟಕ ಅಕಾಡೆಮಿಯ ಪ್ರಶಸ್ತಿಯನ್ನೂ, ೨೦೧೮ನೇ ಸಾಲಿನ ಸಂಗೀತ ನಾಟಕ ಅಕಾದೆಮಿ ಪ್ರಶಸ್ತಿಯನ್ನೂ ತಿರಸ್ಕರಿಸಿದ್ದಾರೆ. ಕನ್ನಡದ ಹಲವು ಪತ್ರಿಕೆಗಳಲ್ಲಿ ಇವರ ಕವಿತೆಗಳು ಪ್ರಕಟವಾಗಿವೆ.
ಸೊಗಸಾದಅರ್ಥಪೂರ್ಣ ಕಾರಂತ ದರ್ಶನ
ಬಹಳ ಅರ್ಥಪೂರ್ಣ
ನೀವು ನಮ್ಮ ಎದುರಿಗೇ ಕೂತು ಮಾತಾಡಿದ ಅನುಭವವಾಯಿತು. ಮೇಷ್ಟ್ರು…..ಅವರ ಹಾವಭಾವಗಳು ಕಣ್ಣ ಮುಂದೆ ಬಂದು ಅವರ ಆತ್ಮಕಥೆ ಮತ್ತೊಮ್ಮೆ ಓದುವ ಮನಸ್ಸಾಯಿತು. ನಿಮಗೆ NSD ಯಲ್ಲಿ ಮಾಡಿಸಿದ್ದ ನಾಟಕವನ್ನು ನೀನಾಸಮ್ ರಂಗ ಶಿಕ್ಷಣ ಕೇಂದ್ರದಲ್ಲಿ ನಮ್ಮ ಬ್ಯಾಚಿಗೆ ಮಾಡಿಸಿದ್ದರು ಅದೇ ಅವರ ನಿರ್ದೇಶನದ ಕೊನೆಯ ನಾಟಕವಾಗಿತ್ತು. ತಲೆಕೆಟ್ಟ ರಾಜನ ಪಾತ್ರ ಮಾಡುತ್ತಿದ್ದ ನಾನು ಮಾತುಗಳ ಮಧ್ಯೆ ಬಹಳ ಪಾಸ್ ತಗೋತಿದ್ದೆ…ಅದು ಕಾಮಿಡಿ ನಾಟಕ ಬೇರೆ ಮಾತು ಮೂಮೆಂಟು ಎಲ್ಲವು ಫಾಸ್ಟ್ ಇರಬೇಕು ಅದೆಲ್ಲ ನನಗಾಗ ಏನು ಗೊತ್ತು…? ಅದಕ್ಕೆ ಅವರು ನೀನು ಹಿಂದಿಯ ದೀಲಿಪ್ ಕುಮಾರ್ ಕಣಯ್ಯ ಅಂತ ಹೇಳೋರು…ಅದೆಲ್ಲಾ ನೆನಪಾಯಿತು.