ಯಾತ್ರೆ : ಪ್ರಸಿದ್ಧ ಝೆಕ್ ಕತೆಗಾರ್ತಿ ಯಾಕುಬಾ ಕಟಾಲ್ಪ ಕತೆ.

ಯೂರೋಪಿನ ಅಗ್ರ ಸಾಹಿತ್ಯಿಕ ಪ್ರಶಸ್ತಿಗಳಲ್ಲಿ ಒಂದಾದ “ಮಗ್ನೇಸಿಯಾ ಲಿಟೆರ” ಗೆ ಪಟ್ಟಿಗೊಂಡು “ಯೋಸೆಫ್ ಶ್ಕ್ವೊರೆತ್ಸ್ಕಿ” ಪುರಸ್ಕಾರಕ್ಕೆ ಪಾತ್ರವಾದ ಬರಹಗಾರ್ತಿ ಯಾಕುಬಾ ಕಟಾಲ್ಪರ ಒಂದು ಕತೆ ಇಲ್ಲಿದೆ. ಇದನ್ನು ಝೆಕ್ ರಿಪಬ್ಲಿಕ್ ನಲ್ಲಿ ವಾಸಿಸುತ್ತಿರುವ ಕಿರಣ್.ಎಸ್. ನಾಗವಳ್ಳಿ ಅವರು ಋತುಮಾನದ ಓದುಗರಿಗಾಗಿ ಅನುವಾದಿಸಿದ್ದಾರೆ.

ನೀರವತೆಯನ್ನು ಸೀಳುವ ಕೂಗಿನಂತೆ ಕಾಡಿನ ನಡುವೆ ಜನವಸತಿಯ ಕುರುಹು – ಹಣ್ಣಿನ ಮರಗಳ ಗುಂಪು. ಪ್ಲಮ್, ಚೆರ್ರಿ, ಸೇಬು; ಬಿದ್ದುಹೋಗಿದ್ದ ಗೋಡೆಯೊಂದರ ಬದಿಯಲ್ಲಿ ಅಡ್ಡಾದಿಡ್ಡಿ ಬೆಳೆದ ಪೇರ್ ಮರ, ಕುರುಚಲು ಗಿಡಗಳ ನಡುವೆ ಲೈಲ್ಯಾಕ್ ಹೂವಿನ ಪೊದೆ, ಯಾರ ಆರೈಕೆಯೂ ಇಲ್ಲದೇ ಬೆಳೆಯುತ್ತಲೇ ಇವೆ.

ನಿಧಾನವಾಗಿ ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಬಳಿಗೆ ಬರುತ್ತಾನೆ. ತನ್ನನ್ನು ತಾನೇ ಜಯಿಸಲು ಜೇಬಿನಲ್ಲಿರುವ ನಕಾಶೆಯನ್ನು ತೆಗೆಯದೇ ಹಳ್ಳಿಯ ಹೆಸರನ್ನು ನೆನಪಿಸಿಕೊಳ್ಳುವ ಯತ್ನ. ಏರಿನಲ್ಲಿರುವ ಹಳ್ಳಿಯನ್ನು ಸೇರುವ ಹೊತ್ತಿಗೆ ಏದುಸಿರು; ದಾರಿಯುದ್ದಕ್ಕೂ ಬರುವುದೋ, ಎಲ್ಲವನ್ನೂ ಬಿಟ್ಟುಕೊಟ್ಟು ತಪ್ಪಲಿನಲ್ಲಿದ್ದ ಬಸ್ ಸ್ಟಾಪಿನಲ್ಲಿ ಗೆಸ್ಟ್ ಹೌಸಿಗೆ ಹೋಗುವ ಬಸ್ಸಿಗಾಗಿ ಕಾಯುವುದೋ ಎಂಬ ಸೆಣೆಸಾಟ ಬೇರೆ. ಏರುತ್ತ ಬರುವ ದಾರಿಯಲ್ಲಿ ಹಿಂದೆಂದೋ ಗೋಡೆಗಳಾಗಿದ್ದ ಇಟ್ಟಿಗೆಯ ಸಾಲುಗಳು ಕಣ್ಣಿಗೆ ಬಿದ್ದು, ಗುರಿ ಮುಟ್ಟಿದ ಸಂಭ್ರಮಕ್ಕೆ ಸಿಗರೇಟು ಹಚ್ಚುವ ಹುಮ್ಮಸ್ಸು ಸೇರಿ ಕಾಲಿಗೆ ಬಲ ತುಂಬಿತು. ಹಳ್ಳಿಯ ಹೆಸರು ಇನ್ನೂ ನೆನಪಾಗಿಲ್ಲ, ಹಣ್ಣುಮರಗಳ ತೋಪು ಎನಿಸಿಕೊಂಡಿದ್ದ ಜಾಗದಲ್ಲಿ ನಿಂತು ನೋಡಿದಾಗ ಹಸಿರು ಮಣಿಗಳು ಪೋಣಿಸಿದಂತೆ ಚೆರ್ರಿ ಮರದಲ್ಲಿ ಕಾಯಿ ಕಚ್ಚಿತ್ತು. ಪಕ್ಕದಲ್ಲಿ ನಿಂತ ಸೇಬೂ ಅಷ್ಟೇ. ಜೇಬಿಗೆ ಹಾಕಿದ ಕೈಗೆ ಪೊಟ್ಟಣ ಸಿಕ್ಕಾಗ ಸಿಗರೇಟಿನ ನೆನಪಾಗಿ, ಲೈಟರ್ ತೆಗೆದು ಹತ್ತಿಸಿ ಮೊದಲ ದಮ್ಮು ಎಳೆದದ್ದೇ ಹಳ್ಳಿಯ ಹೆಸರು ಹೊಳೆಯಿತು – ಲುಡ್ವಿಗ್ಸ್‌ಬ್ರುನ್.

ಸಂಪೂರ್ಣ ಸಿದ್ಧತೆ ಮಾಡಿಕೊಂಡೇ ಹೊರಟಿದ್ದು ಗಡಿಗುಂಟದ ಈ ಯಾತ್ರೆಗೆ. ಕಾಲಿಗೆ ಸರಿಯಾದ ಶೂ, ಹೊಸರೀತಿಯ ಒದ್ದೆಯಾಗದ ಬಟ್ಟೆಯಿಂದ ಹೊಲೆದ ಪ್ಯಾಂಟ್, ಎರಡನ್ನೂ ಚಾರಣಿಗರಿಗೆಂದೇ ಮುಡಿಪಿಟ್ಟ ಅಂಗಡಿಯಿಂದ ತಂದಿದ್ದು. ಓವರ್‍ಕೋಟ್ ತಂದುಕೊಟ್ಟ ಮಗಳು ಜೊತೆಗೊಂದು ಮೊಬೈಲ್ ಫೋನ್ ತಂದಿದ್ದಳು. ಬಳಸುವುದು ಹೇಗೆಂದು ಗೊತ್ತಾಗದಿದ್ದರೂ ನಿರ್ದಿಷ್ಟ ಜಾಗದಲ್ಲಿ ಬಟನ್ ಒತ್ತಿದರೆ ಅವಳಿಗೆ ಕರೆ ಹೋಗುವುದೆಂದು ಮಾತ್ರ ಗೊತ್ತಿತ್ತು, ಪ್ರತಿ ಸಂಜೆ ಕರೆ ಮಾಡುವುದಾಗಿ ವಚನ ಕೊಟಿದ್ದ. ಹೆಗಲಿಗೇರಿಸಿದ್ದ ರಕ್‌ಸ್ಯಾಕಿನಲ್ಲಿ ಬದಲಾಯಿಸಲು ಬಟ್ಟೆ, ತಿನಿಸುಗಳ ಕ್ಯಾನುಗಳು, ಚಾಕು ಹಾಗೂ ಖಾಲಿ ನೋಟ್‌ಪುಸ್ತಕ. ಪಾಸ್‌ಪೋರ್ಟ್ ಇತ್ಯಾದಿ ಒಂದು ಪ್ಲಾಸ್ಟಿಕ್ ಕವರಲ್ಲಿ ಸುತ್ತಿ ರಕ್‌ಸ್ಯಾಕ್ ತಳದಲ್ಲಿ ಇಟ್ಟಿದ್ದ. ನಕಾಶೆಯಲ್ಲಿ ಹಳ್ಳಿಯಿಂದ ಹಳ್ಳಿಗೆ ಹಾದುಹೋಗುವ ಇಡೀ ದಾರಿಯನ್ನು ಕರಿಯ ಸ್ಕೆಚ್‌ಪೆನ್ನಿನಲ್ಲಿ ಬರೆದುಕೊಂಡಿದ್ದ, ದಾರಿ ತಪ್ಪಬಾರದೆಂದು ಮತ್ತೊಂದು ರಟ್ಟಿನ ಹಲಗೆಯ ಮೇಲೆ ಅದೇ ದಾರಿಯನ್ನು ಚಿತ್ರಿಸಿ ಬರೆದಿಟ್ಟುಕೊಂಡಿದ್ದ.

ವಿಮರ್ಶಕರೆಲ್ಲರೂ ಛೀಮಾರಿ ಹಾಕಿದ್ದ ತನ್ನ ಇತ್ತೀಚಿನ ಕಾದಂಬರಿಯೂ ಜೊತೆಯಲ್ಲೇ ಇತ್ತು – ಹೆಸರೂ ಯಾತ್ರೆಗೆ ಹೊಂದುವಂತಹದ್ದು – “ಸಂಚಾರಿ”. ಒಬ್ಬನಂತೂ: “ಥಾಮಸ್ ಮುಲ್ಲರ್‌ಗೆ ಯಶಸ್ಸು ನೆತ್ತಿಗೇರಿದೆ. ಈ ಪುಸ್ತಕದಲ್ಲಿ ಕಾಣುವುದು ಸೃಜನಶೀಲ ಬರಹಗಾರನ ಕೈಚಳಕವಲ್ಲ, ಬರೀ ಖ್ಯಾತ ಲೇಖಕನೆಂಬ ಸೊಕ್ಕಿನ ತತ್ತಿ ಈ ಹೊತ್ತಗೆ” ಎಂದು ಉಗಿದಿದ್ದ. ಅದನ್ನು ವಿಧ್ಯುಕ್ತವಾಗಿ ಸುಡುವುದೋ, ಮಣ್ಣು ಮಾಡುವುದೋ, ಒಂದೂ ತೋಚಿರಲಿಲ್ಲ. ಮೊದಲಿಂದ ಕೊನೆಗೆ ಸಂಪೂರ್ಣ ಮತ್ತೆ ಬರೆದರೂ ಆಯಿತು, ಅಥವಾ ಸಂಜೆಯ ವೇಳೆ ಕಾಡುಪ್ರಾಣಿಗಳಿಗೆ ಕೇಳುವಂತೆ ಓದಿದರೂ ಸರಿಯೇ.

ನೆಲದಲ್ಲಿ ಅಗೆದ ಸಣ್ಣ ಹೊಂಡವೊಂದರಲ್ಲಿ ಬೂದಿಯೊಡನೆ ಸಿಗರೇಟಿನ ತುಂಡನ್ನೂ ಹೂತುಹಾಕಿದ. ದಾರಿಯುದ್ದಕ್ಕೂ ಇಂತಹ ಸಿಗರೇಟು ತುಂಡಿನ ಗೋರಿಗಳ ಸಾಲಿಗೆ ಇದೂ ಸೇರಿತು.

                                                                          * * * * *

ಥಾಮಸ್ ಮುಲ್ಲರನ ಮಗಳು ಐರೀನ್ ಬಾಖ್‌ಗೆ ರೆಸ್ಟೋರಾಂಟ್‌ ಒಂದರಲ್ಲಿ ಮಹಿಳಾ ಮಾಸಿಕದ ಸಂಪಾದಕಿಯೊಡನೆ ಭೇಟಿ. ಎರಡು ವಸಂತಗಳ ಹಿಂದೆ ತನ್ನ ಇತ್ತೀಚಿನ ಕಾದಂಬರಿ ಪ್ರಕಟಿಸಿದ್ದ ತಂದೆಯ ಬಗ್ಗೆ ಐರೀನ್ ಮಾತಾಡುತ್ತಿದ್ದಾಳೆ.

 “ಮೊದಮೊದಲಿಗೆ ಹೆಸರುಗಳು ಮರೆತುಹೋಗುತ್ತಿತ್ತು. ಗಂಡ, ಮಕ್ಕಳ ಹೆಸರು ಸರಿಯಾಗಿಯೇ ಇತ್ತು; ನನ್ನನ್ನು ಮಾತ್ರ ಲೀಸೆಲ್ ಎಂದು ಕರೆಯುತ್ತಿದ್ದ. ನಮ್ಮಮ್ಮನ ಹೆಸರಾದ್ದರಿಂದ ಚೇಷ್ಟೆಮಾಡುತ್ತಿದ್ದಾನೆ ಎನಿಸಿ, ಏಕೆಂದು ಕೇಳಲು ಮುಜುಗರವಾಗಿ, ನಾನೂ ಸುಮ್ಮನೇ ಇದ್ದುಬಿಟ್ಟೆ. ಕೆಲಕಾಲದ ಮೇಲೆ ತಲೆಯೊಳಗೇ ಹೆಸರನ್ನು ಹುಡುಕುತ್ತಿದ್ದಾನೆ ಎನಿಸಿತು, ಕೊನೆಗೆ ನಮ್ಮ ಹೆಸರುಗಳನ್ನೆಲ್ಲಾ ಅಂಟಿಸುವ ಕಾಗದದ ತುಂಡುಗಳ ಮೇಲೆ ಬರೆದಿಟ್ಟಿದ್ದು ಸಿಕ್ಕಿತು. ಅಲ್ಲೂ ನನ್ನ ಹೆಸರು ಲೀಸೆಲ್ ಎಂದು ಬರೆದಿದ್ದ; ನನಗೆ ರೇಗಿ, ‘ನನ್ನನ್ನು ಲೀಸೆಲ್ ಅನ್ನಬೇಡ’ ಎಂದು ತಾಕೀತು ಮಾಡಿದೆ. ಚಕಿತನಾದವನು ಕ್ಷಮಿಸು ಎಂದ. ಸಂಜೆ ನನಗೇ ಕನಿಕರವಾಗಿ ಫೋನ್ ಮಾಡಿ ಏನಾಯಿತೆಂದು ವಿಚಾರಿಸಿದಾಗ ‘ಬೈದಿದ್ದು ಸಾಕಾಗಲಿಲ್ವಾ’ ಎಂದು ನಕ್ಕಿದ್ದ. ಇದು ನಡೆದಿದ್ದು ಡಿಸೆಂಬರಿನಲ್ಲಿ, ಏಳು ತಿಂಗಳಾಯಿತು. ಅಲ್ಲಿಂದ ಒಂದೇ ಸಮ ಹದಗೆಡುತ್ತಾ ಬಂದಿದೆ.”

“ಹಾಗಾದ್ರೆ ಏನೋ ಸರಿಯಿಲ್ಲವೆಂದು ನಿಮಗೆ ಅರಿವಾದದ್ದು ಡಿಸೆಂಬರಲ್ಲಿ”.

“ಇಲ್ಲ”, ಗಾಜಿನ ಲೋಟವೆತ್ತಿ ನೀರು ಗುಟುಕಿಸಿದ ಐರೀನ್, ರೆಕಾರ್ಡರ್‌ನ ಮೇಲೆ ಮಿಣುಕುತಿದ್ದ ಕೆಂಪು ಚುಕ್ಕೆ ನೋಡಿ ಬದಿಯಲ್ಲಿದ್ದ ಬಾದಾಮಿ ಬಟ್ಟಲಿಗೆ ಕೈಹಾಕಿದಳು. “ಸುಮಾರು ಒಂದು ವರ್ಷದ ಹಿಂದೆ ಕನ್ನಡಕವನ್ನೂ ಸಾಬೂನನ್ನೂ ಫ್ರೀಜ಼ರ್‌ನಲ್ಲಿ ಇಡುವುದನ್ನು ಗಮನಿಸಿದೆ”, ಎಂದಳು ನಿಧಾನವಾಗಿ. “ಕೈ ತೊಳೆದುಕೊಂಡ ಮೇಲೆ ಸಾಬೂನನ್ನು ಜೋಪಾನವಾಗಿ ಫ್ರೀಜ಼ರ್‌ಗೆ ಹಾಕುವುದನ್ನು ನೋಡಿದ್ದೆ. ರಾತ್ರೆ ಮಲಗುವ ಮುನ್ನ ಕನ್ನಡಕ ಕೂಡಾ.”

“ಅದು ನಿಮಗೆ ಅಸಹಜ ಎನಿಸಲಿಲ್ಲವೇ?”

ಸಂಪಾದಕಿ ತುಟಿಗೆ ಹಚ್ಚಿದ್ದ ಬಣ್ಣ ಶನೆಲ್ ಅವರ ರೂಜ್ ಅಲ್ಲ್ಯೂರ್, ತಾನು ಕೊಂಡ ಅಂಗಡಿಯದ್ದೇ ಇರಬೇಕು.

“ಇಲ್ಲ, ಹಾಗೇನೂ ಅನಿಸಲಿಲ್ಲ. ವಿಚಿತ್ರ ಎನಿಸಿತ್ತು, ಅತಿರೇಕವೇನನಿಸಲಿಲ್ಲ. ಬರೆದದ್ದು ಮುಗಿಯುವವರೆಗೂ ಹೀಗೇ ಏನೋ ಒಂದನ್ನು ಮತ್ತೆ ಮತ್ತೆ ಮಾಡುವುದು ಅವನ ಸ್ವಭಾವ. ಆತಂಕಕ್ಕೆ ಕಾರಣವಿರಲಿಲ್ಲ”.

ಸಂಪಾದಕಿ ತಲೆಯಾಡಿಸಿದಳು. ಅವಳಿಗದು ಸ್ಪಷ್ಟವಾಗಿ ಅರ್ಥವೇ ಆಗಲಿಲ್ಲ, ಪ್ರಸಿದ್ಧ ಲೇಖಕನ ವಿಚಿತ್ರ ಅಭ್ಯಾಸಗಳು ಓದುಗರಿಗೆ ರೋಚಕ ವಸ್ತುವೆಂದು ಮಾತ್ರ ಗೊತ್ತಿತ್ತು.

ಬಾದಾಮಿಯನ್ನು ಬೆರಳಲ್ಲಿ ಆಡಿಸುತ್ತಾ, “ಸಂಚಾರಿ ಬರೆಯುತ್ತಿದ್ದಾಗ ಎರಡೂ ಕಾಲುಗಳಿಗೆ ಬೇರೆ ಬೇರೆ ಕಾಲುಚೀಲ ಹಾಕಿಕೊಂಡು ಮಲಗುತ್ತಿದ್ದ.”

ಸಂಪಾದಕಿ ಸಣ್ಣಗೆ ನಕ್ಕಳು.

 “ಇದೂ ಹಾಗೆಯೇ ಎಂದು ಸುಮ್ಮನಿದ್ದೆ. ಬರೆಯುವಾಗ ಗಮನವಿಡುವುದಕ್ಕೆ ಸಾಬೂನು ಫ್ರಿಜ್ಜಿನಲ್ಲಿ ಇಡುವುದು ನೆರವಾದರೆ ಹಾಗೇ ಸರಿ, ಅಲ್ವಾ?”

“ಇದಕ್ಕಿಂತ ಮೀರಿದ್ದು ಅಂತ ನಿಮಗನಿಸಿದ್ದು ಯಾವಾಗ?”

ಕೈಯಲ್ಲಿದ್ದ ಬಾದಾಮಿ ಬಟ್ಟಲಿಗೆ ವಾಪಸ್ ಬಿತ್ತು. “ಬರೆಯಲು ಮರೆತಾಗ.”

“ಸ್ಫೂರ್ತಿ ಬತ್ತಿಹೋಯಿತಾ?”

ಐರೀನ್ ಮೆನು ಕಾರ್ಡ್ ನೋಡುತ್ತಿದ್ದಳು. ಅಕ್ಷರಗಳ ಮೇಲೆ ಹಾಯುತ್ತಿದ್ದ ಕಣ್ಣಿನ ಹಿಂದೆ ತಂದೆಯ ಬಗೆಗಿನ ಚಿಂತೆ. ಅವನನ್ನು ಜರ್ಮನಿ ಮತ್ತು ಚೆಕ್ ರಿಪಬ್ಲಿಕ್‍ ನಡುವಿನ ಗಡಿ ದಾಟಿಸಿ ಅಲ್ಲಿನ ಸಣ್ಣ ಗೆಸ್ಟ್ ಹೌಸಿನಲ್ಲಿ ಬಿಟ್ಟು ಬಂದು ಎರಡು ದಿನವಾಗಿತ್ತು. ಈ ಹುಚ್ಚುತನವನ್ನು ಚಿಗುರಲ್ಲೇ ಚಿವುಟಿಹಾಕಬೇಕಿತ್ತೆನಿಸಿ ತುಸು ರೇಗಿತು.

“ಸ್ಫೂರ್ತಿಯ ಪ್ರಶ್ನೆಯಲ್ಲ. ಅಕ್ಷರ ಬರೆಯುವುದು ಮರೆತುಹೋಗಿತ್ತು”.

ಸಂಪಾದಕಿಯ ಕಣ್ಣುಗಳು ಅರಳಿದವು.

“ವ್ಯಂಜನಗಳು ಸುಮಾರಾಗಿ ನೆನಪಿದ್ದವು, ಸ್ವರಗಳೆಲ್ಲವೂ ಮರೆತುಹೋಗಿದ್ದವು.” ಸಂಪಾದಕಿ ಕೈಗೆ ಮೆನು ಕಾರ್ಡ್ ಕೊಟ್ಟಳು.

ಕೈಗೆ ಬಂದ ಮೆನುಕಾರ್ಡಿನಲ್ಲಿ ತನಗರಿವಿಲ್ಲದೆಯೇ ಐರೀನ್ ಮಾಡಿದ ಉಗುರಿನ ಗುರುತು ನೋಡಿ ಅದನ್ನೇ ತನಗೂ ಆರ್ಡರ್ ಮಾಡಿದಳು – ಹಸಿರು ಸಾಸ್ ಜೊತೆಗೆ ಸಾಲ್ಮನ್ ಮೀನು, ಅದರೊಡನೆ ಹುರಿದ ಆಲೂಗೆಡ್ಡೆ. ಪತ್ರಿಕೆಯ ಬಾಬತ್ತು.

                                                                           * * * * *

ಹಳ್ಳಿಯ ಅವಷೇಶಗಳ ನಡುವೆ ಕೂತು ತಿನ್ನಲು ಅವನಿಗೆ ಮನಸ್ಸಾಗಲಿಲ್ಲ. ಅಗಲವಾದ ಎಲೆಗಳ ತಂಪು ನೆರಳಿನಲ್ಲಿ ಸುಮಾರು ಅರ್ಧ ಕಿಲೋಮೀಟರ್ ನಡೆದವನಿಗೆ ಶಿಲುಬೆಗೆಂದು ಮಾಡಿದ್ದ ಸಿಮೆಂಟು ಗುಡ್ಡೆಯೊಂದರ ಕೆಳಗೆ ಗ್ರೀಷ್ಮದ ಮೊದಲ ಸ್ಟ್ರಾಬೆರ್ರಿ ಕೆಂಪಾಗಿ ನಗುತ್ತಿರುವುದು ಕಣ್ಣಿಗೆ ಬೀಳುತ್ತೆ. ಅವನ್ನು ಕಿತ್ತು ಬಾಯಿಗೆ ಹಾಕುತ್ತಾ, ತುಸುದೂರ ನಡೆದು ಕಾಲುದಾರಿಯ ಬದಿಯಲ್ಲಿ ಕೂರುತ್ತಾನೆ. ಎದುರುಗಡೆ ಬೃಹತ್ತಾದ ಬೀಚ್ ಮರವೊಂದರ ಥಳಥಳಿಸುವ ದಿಮ್ಮಿಯ ಮೇಲೆ ಚಾರಣಿಗರಿಗೆ ನೆರವಾಗಲೆಂದು ಬಿಳಿ-ಹಸಿರು ನಿಶಾನೆ ಬಳಿದಿದೆ. ಚಾಕು ಕೈಯಲ್ಲಿ ಹಿಡಿದು ಬ್ಯಾಗಿನಿಂದ ಬ್ರೆಡ್ ತೆಗೆದು ಎರಡು ತುಂಡು ಕುಯ್ದು ಮತ್ತೆ ಒಳಗಿಟ್ಟವನಿಗೆ ಕ್ಷಣಕಾಲ ಗಾಬರಿ. ಚಾಕು ಕೈಯಲ್ಲಿ ಹಿಡಿದುರುವುದೇಕೆಂದು ಮರೆತುಹೋಗಿ ತಲೆತುಂಬಾ ಅಸ್ತವ್ಯಸ್ತ ಆಲೋಚನೆಗಳು. ಹೊಟ್ಟೆ ಚುರ್‍‍ರ್ ಎಂದಾಗ ಹಸಿವು ನೆನಪಾಗಿ ಮತ್ತೆ ಬ್ಯಾಗಿಗೆ ಕೈಹಾಕಿ ಒಂದೆರಡು ತುಂಡು ಚೀಸ್ ತೆಗೆದು ಬ್ರೆಡ್ಡಿಗೆ ಹಚ್ಚಿ ತೊಡೆಯಮೇಲೆ ರಟ್ಟಿನ ನಕಾಶೆಯನ್ನು ಹರಡಿ ಸಣ್ಣಗೆ ಸೀಟಿ ಹೊಡೆಯುತ್ತಾ ತಿಂದು ಮುಗಿಸುತ್ತಾನೆ.

ಹೊಟ್ಟೆತುಂಬಿದವನೇ ಹುಲ್ಲು ಹಾಸಿಗೆ ಮೈಯೊರೆಗಿಸಿ ಕಣ್ಣುಮುಚ್ಚಿದ್ದ. ಮೈಗೆ ಮುದತರುವ ಜೂನ್ ತಿಂಗಳ ಬಿಸಿಲು ಮುಚ್ಚಿದ ಕಣ್ಣಮೇಲೆ ಬಿದ್ದು, ಜಗತ್ತಿಗೆ ಗುಲಾಬಿರಂಗಿನ ಚಾದರವನ್ನು ಹೊದೆಸಿತ್ತು. ನರಗಳಲ್ಲಿ ಹರಿವ ನೆತ್ತರಿನ ಕಂಪನ ಅರಿವಾಗುತ್ತದೆ, ಅದು ತಲೆಗೆ ಹೋಗಿ ಭಗ್ನವಾದ ಕೋಟೆಯಂತಿರುವ ಮೆದುಳಿಗೆ ಪಸರಿಸುವ ಗತಿಯನ್ನು ನೆನೆಯುತ್ತಾನೆ. ಸಾವಕಾಶವಾಗಿ, ಮಂದವಾಗಿ ಉಸಿರಾಡುತ್ತಾನೆ; ನಾನು ಹೀಗೆಯೇ ಈ ಪಾಳುಬಿದ್ದ ಊರಾಚೆ ಬಿದ್ದುಕೊಂಡರೆ ನನ್ನನ್ನು ಹುಡುಕಿಕೊಂಡು ಯಾರಾದರೂ ಬರುವರೇ? ಮತ್ತೊಮ್ಮೆ ಕೆಲಕ್ಷಣ ಗೊಂದಲ, ಎದೆಬಡಿತ ನಿಂತಂತೆ, ಹೆಸರು, ಮನೆತನ ನೆನಪಾಗದು. ಮುಂಗೈಯ ಮೇಲೆ ಕೂತ ನೊಣ ರೆಕ್ಕೆ ಕೊಡವಿಕೊಳ್ಳುವ ಹೊತ್ತಿಗೆ ಎಲ್ಲವೂ ಸ್ಪಷ್ಟ.

“ಥಾಮಸ್ ಮುಲ್ಲರ್!” ಕಾಡಿನ ಮೌನವನ್ನು ಸೀಳಿ ಬಂದಿತ್ತು ಹರ್ಷದ ಉದ್ಗಾರ.

ಹಾಗೆಯೇ ಹುಲ್ಲಿನ ಮೇಲೆ ಕೈಯಾಡಿಸುತ್ತಾ, ಒಂದೆರಡು ಹುಲ್ಲುಕಡ್ಡಿಯನ್ನು ಕಿತ್ತು ಬಾಯಿಗಿಡುತ್ತಾನೆ. ಕಡ್ಡಿಯನ್ನು ಅಗಿಯುತ್ತಾ ನಕಾಶೆಯನ್ನು ಹಾಸಿಕೊಂಡು ಮುಂದಿನ ಗ್ರಾಮ – ಗೋಲ್ಡ್‌ಬಾಖ್‌ಗೆ ಹೋಗುವ ದಾರಿಯನ್ನು ಗುರುತುಮಾಡಿಕೊಳ್ಳುತ್ತಾನೆ. ಇಲ್ಲಿಂದ ಐದು ಕಿಲೋಮೀಟರ್, ಹಸಿರು ನಿಶಾನೆಯ ಮೇರೆಗೆ ಮೊದಲು ಮೂರು, ಆಮೇಲೆ ಹಳದಿ ನಿಶಾನೆಯ ಮೇರೆಗೆ ಎರಡು. ಆ ಹಳ್ಳಿಯ ಪಳೆಯುಳಿಕೆ ನೋಡಿಕೊಂಡು ಎಲ್ಲಾದರೂ ಬಿಡಾರ ಹೂಡಲು ಯೋಜಿಸಿದ.

ನಿಧಾನವಾಗಿ ಹೆಜ್ಜೆಯಿಡುತ್ತಾ ಸಾಗುತ್ತಾನೆ. ಕಾಲುದಾರಿ ಅಷ್ಟೇನೂ ಅಗಲವಲ್ಲ, ಅಲ್ಲಲ್ಲಿ ಪೊದೆಗಳು, ಕೆಲಕಡೆ ಜಲ್ಲಿಯ ಹಾಸು, ಹಲವೆಡೆ ದಾರಿಯ ಪಕ್ಕದಲ್ಲಿ ಸಾಗಿಸಲು ಕಡಿದಿಟ್ಟ ಮರದ ದಿಮ್ಮಿಗಳು. ನಿಶಾನೆ ಬದಲಾಗುವ ತಿರುವಿಗೆ ತುಸುದೂರವಿದೆಯೆನ್ನುವಾಗ ಉಚ್ಚೆಗೆ ಹೋಗಬೇಕೆನಿಸಿ ದಾರಿ ಬಿಟ್ಟು ಮರಗಳ ನಡುವಿನಲ್ಲಿ ನಿಂತು ಸಂತೃಪ್ತಿಯಿಂದ ಕೆಲಸ ಮುಗಿಸುತ್ತಾನೆ.

ತಿರುವಿನಲ್ಲಿ ಚಾರಣಿಗರಿಗೆಂದು ಮಾಡಿದ್ದ ಬೆಂಚಿನ ಮೇಲೆ ಜೋಡಿಯೊಂದರ ಜೊತೆಗೆ ಮಕ್ಕಳಿಬ್ಬರು; ಬದಿಯಲ್ಲಿ ನಿಲ್ಲಿಸಿದ್ದ ಅವರ ಸೈಕಲ್‌ಗಳು. ಕತ್ತಿಗೆ ನೇತುಹಾಕಿದ್ದ ಪ್ಲಾಸ್ಟಿಕ್‍ ಹಾಕಿದ್ದ ರಟ್ಟಿನ ನಕಾಶೆ ಹೊತ್ತ ಇವನು ಕಾಡುಮೇಡುಗಳಲ್ಲಿ ಸ್ಫರ್ಧೆಗೆಂದು ಓಡುವವರಲ್ಲೊಬ್ಬನಂತೆ ಕಾಣುತ್ತಾನೆ. ಅವರೆಡೆಗೆ ಸಣ್ಣ ನಗೆ ಬೀರಿ ಹೆಜ್ಜೆ ಹಾಕುತ್ತಾನೆ. ಪೈನ್ ಮರಗಳ ನಡುವೆ ದಾರಿ ಹತ್ತುತ್ತಾ ಹೋಗುತ್ತದೆ. ಕೊನೆಯ ಎರಡು ಕಿಲೋಮೀಟರ್ ಒಂದೇ ಸಮನೆ ಹತ್ತಿ ಹೋಗುವುದು ಅಸಾಧ್ಯವೆನಿಸಿ ಎದುರಾದ ಬಂಡೆಯ ಮೇಲೊಮ್ಮೆ, ಮತ್ತೆ ಕೆಲದೂರದಲ್ಲಿ ಕಂಡ ಮರದ ಕೊರಡಿನ ಮೇಲೆ ಮತ್ತೊಮ್ಮೆ ಕೂತು ಸುಧಾರಿಸಿಕೊಂಡು ಹಳ್ಳಿ ತಲುಪುತ್ತಾನೆ.

ಯುದ್ಧಪೂರ್ವ ಗೋಲ್ಡ್‌ಬಾಖ್‌ನ ಜನಸಂಖ್ಯೆ ೧೬೦. ಊರ ನಡುವೆ ಸಣ್ಣ ಚರ್ಚ್, ಎರಡು ಅಂಗಡಿಗಳು, ಊರತುದಿಗಂಟಿದ ಕೊಳ. ಈಗ ಏನೂ ಉಳಿದಿಲ್ಲ, ಆರಡಿ ಗೋಡೆ ಬಿಟ್ಟರೆ ಚರ್ಚಿನ ಕುರುಹಿಲ್ಲ, ಬತ್ತಿದ ಕೊಳದಲ್ಲಿ ಕಳೆಕಡ್ಡಿ ಬೆಳೆದು ನಿಂತಿವೆ. ದಿನದ ಎರಡನೆಯ ಸಿಗರೇಟ್ ಮುಗಿಸಿ, ತುಂಡನ್ನು ದಫನ್ ಮಾಡಿ ಗೋಡೆಗೊರಗಿದವನ ಮೂಗಿಗೆ ಒದ್ದೆಯಾದ ಇಟ್ಟಿಗೆ ಗಾರೆಯ ಸುವಾಸನೆ.

ಕಣ್ಣು ಮುಚ್ಚಿದವನ ತಲೆಯಲ್ಲಿ ಆಲೋಚನೆಯಿಲ್ಲ, ಗಾಬರಿಯಿಲ್ಲ, ಹೆದರಿಕೆಯಿಲ್ಲ, ರೋಗವಿಲ್ಲ – ಶೂನ್ಯ ನೆಲೆಸಿತ್ತು.

ಊರುದಾಟಿ ತುಸುದೂರದಲ್ಲಿ ಡೇರೆ ಹೂಡಿ, ಅದರೊಳಗೆ ಚಾಪೆಹಾಸಿ, ಸ್ಲೀಪಿಂಗ್ ಬ್ಯಾಗ್ ಹೊರತೆಗೆದು ಸುಮಾರು ಅರ್ಧಘಂಟೆ ಅದನ್ನು ತಿರುಗಿಸುತ್ತಾ ಅದರ ಜಿಪ್‌ಗಳ ವ್ಯವಸ್ಥೆ ಅರ್ಥಮಾಡಿಕೊಳ್ಳಲು ಯತ್ನಿಸುತ್ತಾನೆ. ಕೊನೆಗೆ ಕ್ಯಾನ್‍ ಮಾಡಿದ್ದ ಮಾಂಸದ ಚೂರುಗಳನ್ನು ಬಿಸಿಮಾಡದೆಯೇ ತಿಂದು ಮುಗಿಸುತ್ತಾನೆ – ಬೆಂಕಿ ಹಚ್ಚುವುದಿಲ್ಲವೆಂದು ಐರೀನ್‍ಗೆ ಪ್ರಮಾಣ ಮಾಡಿದ್ದ. ಗಟಗಟನೆ ನೀರು ಕುಡಿದು, ಹಲ್ಲು ಉಜ್ಜದೇ ಹಣ್ಣಿನ ಸಕ್ಕರೆ ಮಿಠಾಯಿಯನ್ನು ಚೀಪುತ್ತಾ ಬರೀ ಚಡ್ಡಿ ಬನಿಯನ್ ತೊಟ್ಟು ಸ್ಲೀಪಿಂಗ್ ಬ್ಯಾಗ್ ಒಳಗೆ ನುಸುಳಿಕೊಂಡವನಿಗೆ ಮರಗಳ ಮರೆಯಲ್ಲಿ ಅಸ್ತವಾಗುತ್ತಿರುವ ನೇಸರು ಕಣ್ಣಿಗೆ ಬೀಳುತ್ತೆ. ರಾತ್ರಿ ಛಳಿಯಾಗಬಹುದೇ? ಪ್ರಾಣಿಗಳ ಕೂಗುಗಳಿಗೆ ಎಚ್ಚರವಾದರೆ? ಎಲ್ಲಕ್ಕಿಂತ ಹೆಚ್ಚಾಗಿ ಕೀಟಗಳ ಬಾಧೆ. ಒಮ್ಮೆಲೇ ಸೊಳ್ಳೆ ಸ್ಪ್ರೇ ಮರೆತೆನೆಂದು ದಡಬಡನೆ ಹೊರಬಂದು ನಾತಹೊಡೆಯುವ ದ್ರವ್ಯವನ್ನು ಮೈಗೆಲ್ಲಾ ಸವರಿಕೊಂಡು ಮತ್ತೆ ಬೆಚ್ಚಗಿನ ಬ್ಯಾಗಿನೊಳಗೆ ಮರಳಿ ಕಣ್ಣುಮುಚ್ಚುತ್ತಾನೆ.

ಎಚ್ಚರವಾದಾಗ ಎಲ್ಲೆಡೆ ಕತ್ತಲೆ. ಬ್ಯಾಗಿನ ಮೇಲೆ ಮಂಜಿನ ತೇವ, ಬಾನ ತುಂಬಾ ಚುಕ್ಕೆಗಳ ಮಿನುಗು. ಹೊರಗೆ ನಿದ್ದೆ ಮಾಡಿ ಎಷ್ಟು ವರ್ಷಗಳಾಗಿತ್ತೋ? ತಾರೆಗಳಲ್ಲಿ ಯಾವುದೋ ನಕ್ಷೆಯನ್ನು ಹುಡುಕುವಂತೆ ಬೆರಗಿನಿಂದ ನೋಡುತ್ತಿರುವಾಗ ನಿದ್ದೆ ಹತ್ತುತ್ತದೆ. ಅರೆಬರೆ ನಿದ್ದೆಯಲ್ಲಿ ಎಲ್ಲೋ ಪರಕೀಯನಾಗಿ, ಅನಾಥನಾಗಿ ಸೂರಿಲ್ಲದೇ ಮಲಗುವ ಗತಿಯನ್ನು ಹಳಿಯುತ್ತಾನೆ. ಊರಿಲ್ಲದ ಕಡೆ ಕತ್ತಲು ಎಷ್ಟು ಗಾಢ ಎನ್ನುವುದು ಮರೆತೇ ಹೋಗಿತ್ತು.

                                                                          * * * * *

ಮಹಿಳಾ ಪತ್ರಿಕೆಯ ಸಂಪಾದಕಿಯೊಂದಿಗೆ ಮಾತಾಡಲು ಒಪ್ಪಿಕೊಂಡಿದ್ದು ಆಲ್ಜೈಮರ್‌ ಕಾಯಿಲೆಯ ಬಗ್ಗೆ ಅಲ್ಲವೇ ಅಲ್ಲ. ಪ್ರಸ್ತಾಪಿಸಿದ್ದ ವಿಷಯ ಖ್ಯಾತ ಲೇಖಕನ ಜೊತೆ ಮಗಳ ಒಡನಾಟ. ಜರ್ಮನಿಯ ಪ್ರಸಿದ್ಧ ಬರಹಗಾರರ ಸಾಲಿಗೆ ಥಾಮಸ್ ಮುಲ್ಲರನ ಹೆಸರು ಸೇರಿದಾಗಿನಿಂದ ಐರೀನಳಿಗೆ ಈ ರೀತಿಯ ಪ್ರಶ್ನೆಗಳನ್ನೆದುರಿಸಿ ಅಭ್ಯಾಸವಾಗಿತ್ತು. ಇತ್ತೀಚೆಗಷ್ಟೇ ತಿಳಿದ ತಂದೆಯ ಈ ಸ್ಥಿತಿಯ ಧಕ್ಕೆ ಅವಳ ನಾಲಿಗೆಯನ್ನು ಸಡಿಲಿಸಿತ್ತು. ಸಂಪಾದಕಿಯ ಮುಂದೆ ಅದರ ಒಂದೊಂದೇ ಎಳೆಗಳನ್ನು ಬಿಡಿಸಿ ರೋಗ ಉಲ್ಬಣಿಸುತ್ತಿರುವ ರೀತಿಯನ್ನು ವಿವರಿಸುವಾಗ – ಪ್ಯಾಂಟಿನ ಮೇಲೆ ಹಾಕಿದ್ದ ಚಡ್ಡಿ, ಫ್ರಿಜ್ಜಿನಲ್ಲಿಟ್ಟ ಕನ್ನಡಕ, ಮರೆತ ವಾರದ ದಿನಗಳು – ಇವೆಲ್ಲವೂ ವಿಷಾದಕ್ಕಿಂತ ವಿನೋದಕರವಾಯಿತೆಂದು ತೋರಿತು. ಇದು ರೋಗವಲ್ಲ ಕುಚೇಷ್ಟೆಯಂತೆ ಕಾಣತೊಡಗಿತು.

“ಒಂದೆರಡು ದಿನಗಳ ಮೇಲೆ ಮತ್ತೆ ಸ್ವರಗಳು ನೆನಪಾಗಿ ಎಂದಿನಂತೆ ಓದಲು ಬರೆಯಲು ಶುರುಮಾಡಿದ. ಅದಾದ ಮೇಲೆ ಇಂಥದ್ದೇನೂ ಮತ್ತೆ ಆಗಿಲ್ಲ.”

ಟೇಬಲ್ಲಿನ ಮೇಲೆ ತಂದಿಟ್ಟ ಊಟಕ್ಕೆ ಇಬ್ಬರೂ ಕೈಹಾಕಿದ್ದರು.

ತಿಂದು ಮುಗಿಸಿ “ಡಾಕ್ಟರ್‌ಗಳು ಏನನ್ನುತ್ತಾರೆ?” ಇದುವರೆಗೂ ಈ ಕಾಯಿಲೆಯ ಬಗ್ಗೆ ಏನೂ ಗೊತ್ತಿರದ ಸಂಪಾದಕಿಗೆ ಐರೀನ್ ಹೇಳುತ್ತಿರುವುದೆಲ್ಲವೂ ನವೀನ.

“ದಿನಕಳೆದಂತೆ ಹದಗೆಡುತ್ತಾ ಹೋಗುತ್ತೆ ಅಷ್ಟೇ”.

ಎದ್ದು ಟಾಯ್ಲೆಟ್ ಸೇರಿ ವಾಷ್ ಬೇಸಿನ್ನಿಗೆ ಒರಗಿಕೊಂಡು ಮುಖವನ್ನು ನೀರಿನಲ್ಲೊಮ್ಮೆ ತೊಳೆದುಕೊಂಡು ಕನ್ನಡಿಯಲ್ಲಿ ನೋಡಿದಾಗ ಕಣ್ಣು ಕೆಂಪಾಗಿದ್ದರೂ ಕಣ್ಣೀರು ಇಲ್ಲ. “ಅಣ್ಣಾ” ಎಂದು ಸಣ್ಣಗೆ ಉದ್ಗರಿಸಿದಳು. ಮುಖ ಒರೆಸಿಕೊಂಡು ಟೇಬಲ್ಲಿಗೆ ಮರಳುವ ಮುನ್ನ ಲಿಪ್‍ಸ್ಟಿಕ್ ಹಚ್ಚಿಕೊಳ್ಳಲು ಮರೆಯುವುದಿಲ್ಲ.

                                                                          * * * * *

ಮಾರನೆಯ ದಿನ ಹಾವೊಂದನ್ನು ಕಂಡು ಬೆಚ್ಚಿಬೀಳುತ್ತಾನೆ. ಗಿಡಗಳ ಮರೆಯಲ್ಲಿ ಬುಸುಗುಟ್ಟಿದಂತಾಗಿ ತಲೆಯೆತ್ತಿ ನೋಡಿದಾಗ ಇಟ್ಟಿಗೆಗಳ ನಡುವಿನ ಬಿಸಿಲಲ್ಲಿ ಸಪೂರ ಕಪ್ಪು ಹಾವು ಹರಿಯುತ್ತಿದೆ, ಕಾಲು ತಪ್ಪಿದ್ದರೆ ತುಳಿದೇಬಿಡುತ್ತಿದ್ದ. ಬೆದರಿ ಅದನ್ನು ಓಡಿಸಲು ನೆಲದ ಮೇಲೆ ಕಾಲನ್ನು ಬಡಿಯುತ್ತಾ ಹಣೆಯಮೇಲಿನ ಬೆವರನ್ನು ಒರೆಸಿಕೊಳ್ಳುತ್ತಾನೆ. ಈ ಕೊಪ್ಪಲಿನ ಮೂಲ ಹೆಸರು ರೈಖೆನ್‌ತಾಲ್. ಬಿದ್ದುಹೋದ ಒಂದೆರಡು ಮೋಟುಗೋಡೆಗಳ ಬಿಟ್ಟರೆ ಉಳಿದದ್ದು ಚೆಲ್ಲಿಹೋದ ಕಲ್ಲುಚಪ್ಪಡಿಗಳು ಮಾತ್ರ. ಗದ್ದೆ, ತೋಟಗಳೆಲ್ಲಾ ಪಾಳುಬಿದ್ದು ಹಣ್ಣಿನ ಮರಗಳ ರೆಂಬೆಕೊಂಬೆಗಳ ಮೇಲೆ ಪಾಚಿ ಬೆಳೆದುಕೊಂಡಿದೆ. ಎಂದೋ ಫಲವತ್ತಾಗಿದ್ದ ಈ ಮರಗಳ ರೆಂಬೆಗಳು ಇಂದೂ ನೇರವಾಗಿ ಬೆಳೆಯುತ್ತಿವೆ. ಮಳೆಗಾಲ ಮುಗಿದು, ಹಣ್ಣು ಇಳಿಸಿದ ಮೇಲೆ ಥಾಮಸ್‌ನ ತಂದೆ ಸೇಬಿನ ಮರದ ಕೊಂಬೆಗಳನ್ನು ಅಲ್ಲಲ್ಲಿ ಕತ್ತರಿಸಿ, ಸೊಟ್ಟವಾಗಿ ಬೆಳೆಯದಂತೆ ಕಟ್ಟುತ್ತಿದ್ದ ಕಲ್ಲುಗಳ ಚಿತ್ರ ಮನದಲ್ಲಿ ಪ್ರತ್ಯಕ್ಷವಾಗುತ್ತದೆ. ಮ್ಯೂನಿಕ್ ಸೇರಿದ ಮೇಲೂ, ಊರಾಚೆಯಿದ್ದ ಪುಟ್ಟ ತೋಟಕ್ಕೆ ಸೈಕಲ್ ಹತ್ತಿ ಹೋಗುತ್ತಿದ್ದ ತಂದೆಯ ನೆನಪಗುತ್ತದೆ.

ಥಾಮಸ್ ಮುಖದಲ್ಲಿ ನಗು ಅರಳುತ್ತದೆ, ತಂದೆಯ ನೆನೆದು ಯುಗಗಳೇ ಆಗಿತ್ತು.

ರೈಖೆನ್‌ತಾಲ್ ಬಿಟ್ಟು ಉಲ್ಲಾಸದ ಹೆಜ್ಜೆಯಿಡುತ್ತಾ, ರೇಡಿಯೋದಲ್ಲಿ ಎಂದೋ ಕೇಳಿದ ಹಾಡನ್ನು ಗುನುಗುತ್ತಾ ಬಿರುಸಾಗಿ ನಡೆಯುತ್ತಾನೆ. ಹಾಡಿನ ಪದ ಗೊತ್ತಾಗದ ಕಡೆ ಶಿಳ್ಳೆ ಹೊಡೆಯುತ್ತಾ, ತಿರುವಿನವರೆಗಿನ ಎರಡು ಕಿಲೋಮೀಟರ್ ವಿರಾಮವಿಲ್ಲದೆ ಹಿಂದೆಹಾಕುತ್ತಾನೆ. ಮೈಗೆ, ಮನಸ್ಸಿಗೆ ಮತ್ತೆ ಯೌವ್ವನದ ಹುರುಪು, ಚೇತನ, ಸ್ವಸ್ತಿ. ತಿರುವಿನಲ್ಲಿ ಒಂದೆಡೆ ಕೂತು ಬ್ಯಾಗಿನಿಂದ ಹ್ಯಾಮ್ ತೆಗೆದು ಬ್ರೆಡ್ಡಿನ ಜೊತೆ ಸವಿಯುತ್ತಾನೆ. ಸಾಸಿವೆಯಿದ್ದಿದ್ದರೆ ಇನ್ನೂ ರುಚಿ ಎನಿಸುತ್ತದೆ. ಎಲ್ಲಾ ಪದಗಳು ಸರಾಗವಾಗಿ ಬರುತ್ತಿವೆಯೆಂದು ಖುಷಿಯಾಗುತ್ತೆ: ಹ್ಯಾಮ್ ಜೊತೆಗೆ ಸಾಸಿವೆಯಿರಬೇಕು, ಸಾಸೇಜ್‍ಗೆ ಈರುಳ್ಳಿ, ಕಟ್ಲೆಟ್‍ಗೆ ಆಲೂಗೆಡ್ಡೆ. ಜರ್ಮನಿಯಲ್ಲಿ ಮನೆಯಲ್ಲಿದ್ದಾಗ ಫೋರ್ಕ್ ಏತಕ್ಕೆ ಎನ್ನುವುದು ಮರೆತದ್ದು ಈಗ ರೋಚಕವೆನಿಸುತ್ತದೆ. ಈಗ, ಈ ಕಾಡಿನ ನಡುವೆ ಹ್ಯಾಮ್ ಡಬ್ಬಿಯನ್ನು ಚಾಕುವಿನ ತುದಿಯಿಂದ ತೆಗೆಯುವುದು ಎಷ್ಟು ಸರಾಗ? ಏಕೆಂದರೆ ಇದು ತನ್ನ ನಾಡು, ಇಲ್ಲಿನದು ತನಗೆ ಸ್ವಂತ – ತಾನು ಹುಟ್ಟಿ, ಆಡಿದ ನೆಲ.

ಸಿಗರೇಟ್ ಹಚ್ಚುತ್ತಾನೆ. ಐರೀನ್‍ಗೆ ಕರೆಮಾಡಿದಾಗ ಹೇಳಬೇಕು, ಸಮಯದ ಎಳೆಯೊಂದನ್ನು ಬಿಚ್ಚುತ್ತಾ ಹಿಂದೆ ಹೋದಂತೆ ಇಲ್ಲಿಗೆ ಬರಲು ತೀರ್ಮಾನಿಸಿದ್ದು ಖಂಡಿತಾ ಸರಿ. ಕೊನೆಗೆ ಏನು ಸಿಗುವುದೋ ಯಾರಿಗೆ ಗೊತ್ತು?

ಊಟ ಮುಗಿಸಿ ಬೆಚ್ಚನೆಯ ಬಿಸಿಲಲ್ಲಿ ಮೈಚಾಚಿದಾಗ ಹೊಸ ಕಥೆಯೊಂದರ ಆಲೋಚನೆ ಶುರುವಾಗುತ್ತದೆ. ಹಿಂದಿನ ಹೊತ್ತಗೆಯನ್ನು ಮರೆತು ಹೊಸಕಾರ್ಯಕ್ಕೆ ಕೈಹಾಕುವುದೇ ಸರಿ.

ಈಗ, ಈ ಬೀಳುಗಾಡಿನಲ್ಲಿ ಮತ್ತೆ ಬರೆಯಬೇಕೆಂಬ ಹಂಬಲ ಕೆರಳಿತ್ತು, ಮನಸ್ಸು ನಿಷ್ಕಲ್ಮಷ, ನಿರಾಳ – ಕಾಯಿಲೆ ಮಾಯವಾಯಿತೇನೋ ಎನಿಸಿತ್ತು.

ಸಂಜೆಮುಗಿದು ಕತ್ತಲಲ್ಲಿ ಸ್ಲೀಪಿಂಗ್ ಬ್ಯಾಗ್‌ನಲ್ಲಿ ಮುರುಟಿಕೊಂಡು ಫೋನ್‍ನಲ್ಲಿನ ಏಕೈಕ ಸಂಖ್ಯೆ – ಮಗಳಿಗೆ – ಕರೆ ಹಚ್ಚಿದ್ದ. “ಇಲ್ಲಿಗೆ ಹೇಗೆ ಬಂದೆ?” ಅಂದು ಏರುದನಿಯಲ್ಲಿ ರೋದಿಸಿದ. “ಕರ್ಕೊಂಡು ಬಂದಿದ್ದು ನೀನಾ?”

ಐರೀನ್ ಅವನಿಗೆ ಸಾಂತ್ವನ ಹೇಳುತ್ತಿದ್ದದ್ದು ಕೇಳುಸಿತ್ತಿಲ್ಲ. “ಸುತ್ತಲೂ ಕಗ್ಗತ್ತಲೆ, ಈಗಲೇ ಕಾರ್ ಮಾಡಿಕೊಂಡು ಬಾ.”

ಅಂತೂ ಇಂತೂ ಬ್ಯಾಗಿನಲ್ಲಿನ ಪುಟ್ಟ ಡಬ್ಬಿಯಲ್ಲಿದ್ದ ಎರಡು ಮಾತ್ರೆಗಳನ್ನು ತೆಗೆದು ತಿನ್ನಲು ಹೇಳಿದ್ದು ಗೊತ್ತಾಗಿ, ಅಗಿದು ನೀರಿಲ್ಲದೇ ನುಂಗಿದ ಮೇಲೆ ನಿಧಾನವಾಗಿ ಆತಂಕ ಇಳಿಯಿತು.

“ಅಣ್ಣಾ, ನೀನು ನಡೆದು ಹೊರಟಿರುವೆ, ವಿಹಾರಕ್ಕೆಂದು”. ಕಾಗದದ ಮೇಲೆ ಬರೆದಿಟ್ಟಿದ್ದ ಪಟ್ಟಿಯಿಂದ ಒಂದೊಂದಾಗಿ ಹಳ್ಳಿಗಳ ಹೆಸರುಗಳನ್ನು ಸಾವಕಾಶವಾಗಿ ಓದಿಹೇಳುತ್ತಾಳೆ. “ನಾಳಿದ್ದು ನಿನ್ನ ಇನ್ಸೆಲ್‍ತಾಲ್‍ ಇಂದ ವಾಪಾಸ್ ಕರಕೊಂಡು ಬರಬೇಕೆಂದು ನೀನೇ ಅಲ್ಲವಾ ಹೇಳಿದ್ದು? ಅಥವಾ ಈಗಲೇ ಬರಬೇಕಾ?”

ಆಕಡೆ ಥಾಮಸ್ ಉತ್ತರಿಸಲಿಲ್ಲ, ಬಿಕ್ಕಿ ಅಳುತ್ತಿದ್ದಾನೆ, ಕಾರ್ಗತ್ತಲೆಯ ಆಕಾಶದತ್ತ ತಲೆಯೆತ್ತಿ ನೋಡಿದಾಗ ಸಪ್ತರ್ಷಿ ಮಂಡಲ ಕಾಣುತ್ತದೆ, ಕಾಡಲ್ಲಿ ಏನುಮಾಡುತ್ತಿರುವೆನೆಂದು ಇನ್ನೂ ಖಾತ್ರಿಯಾಗಿಲ್ಲ. ಮತ್ತೊಂದು ಬಾರಿ ಐರೀನ್ ಹೇಳುತ್ತಿದ್ದ ಹಳ್ಳಿಗಳ ಹೆಸರು ಕೇಳಿ “ಇನ್ಸೆಲ್‍ತಾಲ್! ಅಲ್ಲಿಯೇ ನಾನು ಹುಟ್ಟಿದ್ದು!” ಎಂದು ಉದ್ಗರಿಸುತ್ತಾನೆ.

“ಹಾಂ! ಅದೇ. ಅಲ್ಲೀಗೇ ಹೋಗ್ತಾಯಿರೋದು”

“ಈಗ ಹೇಗೆ ಹೋಗಲಿ, ಸುತ್ತಲೂ ಕತ್ತಲೆ”

“ಮೊದಲು ನಿದ್ದೆ ಮಾಡು, ನಾಳೆ ಬೆಳಗ್ಗೆ ಹೋಗೋವೆಂತೆ. ಕರ್ಕೊಂಡು ಹೋಗೋಕ್ಕೆ ನಾಳೆ ಬೆಳಗ್ಗೆ ಬರಲಾ?”

“ಬೇಡ” ಎನ್ನುತ್ತಾನೆ. ಸುಸ್ತಾಗಿತ್ತು, ಕೈಕಾಲು ಅಲ್ಲಲ್ಲಿ ನೋಯುತ್ತಿತ್ತು, ತಿಂದ ಮಾತ್ರೆಯ ಪ್ರಭಾವದಿಂದ ಉದ್ವೇಗ ಇಳಿದಿತ್ತು. ಜೊತೆಗೆ ದೂರದ ಎಲ್ಲಿಂದಲೋ ಬರುತ್ತಿದ್ದ ಐರೀನಳ ಮೆಲುದನಿ ಕೂಡಿ ಜೊಂಪು ಹತ್ತಿತ್ತು. ಕೆಂಪು ಗುಂಡಿ ಒತ್ತಿದ ಕೂಡಲೇ ಐರೀನ್ ಮಾಯ. ಫೋನ್ ಜೇಬಿಗಿಳಿಸಿ ಕರ್ಛೀಫಿನಿಂದ ಕಣ್ಣು, ಮೂಗು ಒರೆಸಿಕೊಂಡು, ರೆಪ್ಪೆ ಭಾರವಾಗುತ್ತಾ ಗುಳಿಗೆಯ ನಿದ್ರೆಗೆ ಮೈಮರೆಯುತ್ತಾನೆ. ರಾತ್ರೆಯಿಡೀ ನಿದ್ದೆಮಾಡಿ ಬೆಳಗ್ಗೆ ಎಚ್ಚರವಾದಾಗ ತಲೆ ನಿಚ್ಚಳ, ಖಾಲಿ.

                                                                          * * * * *

ತನಗಾಗುತ್ತಿರುವುದು ವಯಸ್ಸಿನ ಅರುಳುಮರುಳಲ್ಲ, ಆಲ್ಜೈಮರ್‌ ಕಾಯಿಲೆಯ ಮೊದಲ ಹಂತ ಎಂದು ಡಾಕ್ಟರ್ ಹೇಳಿದಾಗ ನಿಬ್ಬೆರಗಾಗಿದ್ದ. ಅಲ್ಲಿಂದ ಮನೆಗೆ ಕರೆತಂದು ಬಿಟ್ಟದ್ದು ಐರೀನ್. ಅಡುಗೆಮನೆಯಿಂದ ಇಬ್ಬರಿಗೂ ಕಾಫಿ ಮಾಡಿಕೊಂಡು ಬರುವುದರಲ್ಲಿ ಥಾಮಸ್ ಡಾಕ್ಟರ್ ಬರೆದುಕೊಟ್ಟ ಮಾತ್ರೆಗಳ ಪಟ್ಟಿಯೊಂದಿಗೆ ಇದ್ದ ಕಿರುಹೊತ್ತಗೆಯನ್ನು ನೋಡುತ್ತಿದ್ದ. ಮುದುಕ ಮುದುಕಿ ನಗುನಗುತ್ತಾ ಕೈಕೈಹಿಡಿದುಕೊಂಡು ಬೆಟ್ಟ ಹತ್ತುತ್ತಿದ್ದ ಚಿತ್ರದ ಮೇಲೆ ತಲೆಬರಹ “ಆಲ್ಜೈಮರ್‌ನಿಂದ ಬಳಲುತ್ತಿರುವವರಿಗೆ ಹಾಗೂ ಅವರ ಮನೆಯವರಿಗೆ ಸಲಹೆಗಳು”.

“ಗುಂಡಿಕ್ಕಬೇಕು ಅಷ್ಟೇ” ಎಂದಿದ್ದ.

“ಹಂಗ್ಯಾಕೆ ಅಂತೀಯಾ?” ಎಂದಳು ಕಾಫಿ ಲೋಟ ಕೈಗಿಡುತ್ತಾ.

ಕ್ಲಿನಿಕ್ಕಿನಿಂದ ಬರುವ ದಾರಿಯುದ್ದಕ್ಕೂ ಅಳುತ್ತಿದ್ದಳೆಂದು ಗೊತ್ತಾಗಿತ್ತು. ಟಾಕ್ಸಿಯಲ್ಲಿ ಮುಂದಿನ ಸೀಟಿನಲ್ಲಿ ಕುಳಿತವಳ ಭುಜ ನಡುಗುತ್ತಿದ್ದದ್ದು ಹಿಂದಿನ ಸೀಟಿನಿಂದ ನೋಡಿ ವಿಚಿತ್ರ ಸಮಾಧಾನವೆನಿಸಿತ್ತು.

ಮಕ್ಕಳಿಬ್ಬರೂ ತಂದೆಯ ರೋಗವನ್ನು ಆದಷ್ಟೂ ನಿಧಾನಿಸುವುದೆಂದು ನಿರ್ಧಾರ ಮಾಡಿದ ಮೊದಲೆರಡು ತಿಂಗಳಲ್ಲಿ ವಿಟಮಿನ್ ಗುಳಿಗೆಗಳ ಪ್ಯಾಕೆಟ್ ಕೊಂಡು ತಂದರು. ಸೈಕ್ಯಾಟ್ರಿಸ್ಟ್ ಹತ್ತಿರ ಕರೆದುಕೊಂಡುಹೋಗಿ ಆತಂಕಶಮನಕ್ಕಾಗಿ ಮಾತ್ರೆ ಬರೆಸಿಕೊಂಡು ತಂದರು. ಅಲ್ಲದೇ ಕಾಫಿ, ಸಿಗರೇಟ್ ಅಭ್ಯಾಸ ಬಿಡಿಸಿ ಸ್ಟೇಶನರಿ ಸೈಕಲ್ ಮನೆಗೆ ತಂದಿಟ್ಟರು. ತನಗಾದ ಆಘಾತದ ಭರದಲ್ಲಿ ಥಾಮಸ್‍ಗೆ ಏನು ಹೇಳಲೂ ತೋಚಲಿಲ್ಲ. ಅಷ್ಟೇ ಅಲ್ಲದೇ ಈ ಕಾಳಜಿಯೆಲ್ಲಾ ಕೆಲವೇ ದಿನ ಎಂದೂ ಗೊತ್ತಿತ್ತು. ಅಂತೆಯೇ ಕಾಫಿ, ಸಿಗರೇಟ್, ಎರಡೂ ಮತ್ತೆ ಶುರುವಾಗಿ ಸ್ಟೇಶನರಿ ಸೈಕಲ್ ಅದರ ಡಬ್ಬದೊಂದಿಗೆ ಗ್ಯಾರೇಜಿನ ಮೂಲೆ ಸೇರಿತ್ತು.

ಐರೀನ್ ಪ್ರತಿವಾರವೂ ಒಮ್ಮೆ ಬಂದು ನೋಡಿಕೊಂಡು ಹೋಗುವುದು ರೂಢಿಯಾಯಿತು. ಬಂದಾಗಲೆಲ್ಲಾ ಮನೆಯಲ್ಲಿನ ವಸ್ತುಗಳೆಲ್ಲಾ ಯಥಾಸ್ಥಿತಿಯಲ್ಲಿವೆಯೆಂದು ಪರೀಕ್ಷಿಸಿ ನೋಡುತ್ತಿದ್ದಳು. ಮೊದಲಿಂದಲೂ ತಂದೆಗೆ ತನ್ನ ಮೇಲೆ ಅಕ್ಕರೆ ಹೆಚ್ಚೆಂದು ಗೊತ್ತಿದ್ದವಳ ಕಾಳಜಿ ತಾಯಿ ತೀರಿಕೊಂಡ ನಂತರ ಇನ್ನೂ ಹೆಚ್ಚಾಗಿತ್ತು. ದಿನವೂ ತಂದುಕೊಟ್ಟ ಊಟದ ಜೊತೆ ಮಾತ್ರೆ ಬಿಚ್ಚಿ ಕೊಡುವುದಕ್ಕೆ ನರ್ಸ್ ಒಬ್ಬಳನ್ನು ಗೊತ್ತು ಮಾಡಿದಳು (ಇಂಥವರನ್ನು ಹಿಂದಿನ ಕಾಲದಲ್ಲಿ ಆಯಾ ಅನ್ನುತ್ತಿದ್ದರು). ಇವೆಲ್ಲವನ್ನು ಕಂಡು ಕೆಲವೊಮ್ಮೆ ರೊಚ್ಚಿಗೆದ್ದರೂ ಕಾಲಕ್ರಮೇಣ ಥಾಮಸ್ ಸಿಟ್ಟನ್ನು ನುಂಗಲು ಕಲಿತ.

ಅವನಿಗೆ ಒಂದೇ ಚಿಂತೆ. ಬರೆಯುವದಕ್ಕೆ ಮತ್ತೆ ಸಾಧ್ಯವಾದೀತೇ? ಬರಹಗಾರನಿಗೆ ನೆನಪಿನ ಶಕ್ತಿ ಬೇಕೇ ಬೇಕಾ? ದಿನಕಳೆದಂತೆ ಬರೀ ನೆನಪೊಂದೇ ಅಲ್ಲ, ಅದರ ಜೊತೆಗೆ ಏಕಾಗ್ರತೆಯೂ ಮಾಯವಾಗುತ್ತಿರುವುದು ಮನವರಿಕೆಯಾಗಿ ಉಸಿರು ಕಟ್ಟಿದಂತಾಯಿತು; ಬಿಳಿಯ ಹಾಳೆಯನ್ನು ತುಂಬಲಾರದೇ ಅರಚುಕೊಳ್ಳುವಂತಾಗಿ, ಸೋತು ಕೈಯಲ್ಲಿ ತಲೆಹೊತ್ತು ಕುರ್ಚಿಯಲ್ಲಿ ಕುಸಿದಿದ್ದ.

ನೆನಪು ಉಳಿಯದೇ ದಿನೇದಿನೇ ಚಿಂತನಾಶಕ್ತಿಯೂ ಅವನತಿಯತ್ತ ಸಾಗುತ್ತಿತ್ತು. ಜೊತೆಗೆ ತನ್ನ ದುರ್ದಸೆಯನ್ನು ತಾನೇ ವೀಕ್ಷಿಸುವಷ್ಟು ಅರಿವು ಮಾತ್ರ ಸ್ಪಷ್ಟವಾಗಿ ಉಳಿದಿತ್ತು – ಕುಹಕವೋ ಎಂಬಂತೆ.

                                                                          * * * * *

ಮುಲ್‍ಹೌಸೆನ್‍ನಲ್ಲಿ ಉಳಿದದ್ದು ಸ್ಮಶಾನ ಮಾತ್ರ. ಊರನ್ನು ಸೇರಿದಾಗ ಸಂಜೆಯಾಗಿತ್ತು. ಗೋರಿಗಳ ನಡುವೆ ಸೈಕಲ್‍ ಏರಿ ಬಂದಿದ್ದ ಜೋಡಿಯೊಂದು; ಇಬ್ಬರೂ ಕೈಯಲ್ಲಿ ಏನೋ ಹಿಡಿದಂತಿತ್ತು. ಅಸ್ತಿಯೇನೋ ಎಂದು ಬಿಸಿಲಿಗೆ ಕೈಅಡ್ಡಮಾಡಿ ನೋಡಿದಾಗ ಕಾಣಿಸಿದ್ದು ಹೆಲ್ಮೆಟ್‍ಗಳು. ಸ್ಮಶಾನವನ್ನು ಜೋಪಾನ ಮಾಡಿದ್ದರು; ಗೋಡೆಗಳಿಗೆ ಹೊಸದಾಗಿ ಸುಣ್ಣ, ಮರದ ಬಾಗಿಲ ಪಕ್ಕ ಇತಿಹಾಸ ಹೇಳುವ ಪುಟ್ಟ ಬೋರ್ಡ್, ಅದಕ್ಕೆ ಒರಗಿದಂತೆ ಸೈಕಲ್ ಸ್ಟ್ಯಾಂಡ್. ಗೋರಿಗಳೆಲ್ಲಾ ಹತ್ತೊಂಬತ್ತನೆಯ ಶತಮಾನದವು, ಮತ್ತೆ ಮತ್ತೆ ಅದೇ ಹೆಸರುಗಳು – ಒಂದೇ ವಂಶದ ಎಲ್ಲ ಪೀಳಿಗೆಗಳೂ ಒಟ್ಟಾಗಿ ಸೇರಿದಂತೆ. ಒಪ್ಪವಾಗಿದ್ದ ಗೋರಿಗಳು ಮೃತರ ವಂಶದವರು ಬಂದು ಹೋಗುತ್ತಾರೆಂಬುದನ್ನು ಸಾರಿ ಹೇಳಿದ್ದವು. ಜರ್ಮನ್-ಚೆಕ್ ಗಡಿನಿರ್ಬಂಧ ತೆಗೆದಾಗಿನಿಂದ ತಮ್ಮ ವಂಶಜರನ್ನು ಎಲ್ಲಿಂದ ಎತ್ತಂಗಡಿ ಮಾಡಿತ್ತೋ ಆ ಊರುಗಳಿಗೆ ಜರ್ಮನ್ನರು ಹಿಂಡುಹಿಂಡಾಗಿ ಬರುವುದು ಸರ್ವೇಸಾಮಾನ್ಯವಾಗಿತ್ತು.

ಥಾಮಸ್‍ಗೆ ಹಿಂತಿರುಗಬೇಕೆಂದು ಅನಿಸಿಯೇ ಇರಲಿಲ್ಲ. ಎಲ್ಲವನ್ನೂ ಬಿಟ್ಟು, ವಲಸಿಗರ ಕ್ಯಾಂಪ್ ಮೂಲಕ ಹಾಯ್ದು, ಮ್ಯೂನಿಕ್ ನಗರದ ಹೊರವಲೆಯದ ಕಾರ್ಖಾನೆಗಳ ನಡುವಿನ ಕೊಂಪೆಯೊಂದರಲ್ಲಿ ಮನೆಮಾಡಿದಾಗ ಥಾಮಸ್ ಎಂಟು ವರ್ಷದ ಬಾಲಕ. ಹುಟ್ಟಿ ಬೆಳೆದ ನೆಲದಿಂದ ಕಿತ್ತೊಗೆದ ನೋವನ್ನು ಅನಿವಾರ್ಯವೆಂದು ನುಂಗಿದ್ದ, ಜನ್ಮಭೂಮಿಯನ್ನು ಕಾಲಕ್ರಮೇಣ ಮರೆತಿದ್ದ. ಹಾಗೆಂದು ಭಾವಿಸಿದ್ದ ಅಷ್ಟೇ – ಡಾಕ್ಟರ್ ತನ್ನ ತಲೆ ಜಾಲಂದ್ರವಾಗುತ್ತಿದೆ ಎನ್ನುವವರೆಗೂ.

ಐರೀನ್ ತಲೆಕೆಡಿಸಿಕೊಂಡು ಕೂತಿದ್ದಾಗ ಅವನಿಗೆ ನೆನಪಾದದ್ದು ಸೇಬಿನ ಮರ. ತಿನ್ನಲಾಗದೇ ಉಳಿದ ಹಣ್ಣುಗಳನ್ನು ಜ್ಯಾಮ್ ಮಾಡುತ್ತಿದ್ದ ತಾಯಿ ನೆನಪಾದಳು, ಸೇಬಿನ ಸುವಾಸನೆ ಮೂಗಿನ ಹೊಳ್ಳೆಗೆ ಅಂಟಿತ್ತು. ತನಗುಳಿದ ದಾರಿ ಅಳಿವಿನದ್ದು ಎಂದು ತಿಳಿದ ಕ್ಷಣ ಮನದಲ್ಲಿ ಬೀಡುಬಿಟ್ಟಿದ್ದು ಸೇಬಿನ ಮರ. ಎತ್ತರಕ್ಕೆ ಬೆಳದ ಮರವನ್ನು ಎಂಟು ವಸಂತಗಳ ಕಾಲ ಅಡುಗೆಮನೆಯ ಕಿಟಕಿಯಿಂದ ನೋಡಿದ್ದ. ವಿಶ್ವಸಮರದ ಕೊನೆಯಲ್ಲಿ ಇನ್ಸೆಲ್‍ತಾಲ್ ಬಿಟ್ಟುಹೋಗುವ ಹೊತ್ತಿಗೆ ಮರದ ತುಂಬಾ ಹೂಗಳು, ಜೇನ್ನೊಣಗಳ ಝೇಂಕಾರ ಮತ್ತೆ ಕಿವಿತುಂಬಿತು.

ಇನ್ಸೆಲ್‍ತಾಲ್ – ತೆವರು – ನದೀದ್ವೀಪ. ಹೆಸರನ್ನೊಮ್ಮೆ ಮೆಲುಕುಹಾಕಿದ.

ದೊಡ್ಡ ಮನೆಯ ನಡುವೆ ಒಪ್ಪವಾಗಿದ್ದ ಹಜಾರ, ಕೊಟ್ಟಿಗೆಯಲ್ಲಿನ ಆಕಳು, ಹುಲ್ಲಿನ ಮೇಲೆ ಒಣಹಾಕಿದ್ದ ಒಗೆದ ಬಟ್ಟೆಗಳ ಸುಗಂಧ, ಕಿಟಕಿಯ ಸುತ್ತ ಹಬ್ಬಿದ್ದ ಗುಲಾಬಿ, ಹಿಮ್ಮಡಿಯಿಂದ ಮಾಡಿದ್ದ ಹಳ್ಳದಲ್ಲಿನ ಹುಡುಗರ ಗೋಲಿಗಳ ಒಳಗೆ ರಂಗುರಂಗಿನ ಮಳೆಬಿಲ್ಲು.

ಕಾಲಚಕ್ರವನ್ನು ಹಿಂತಿರುಗಿಸಿ ಎಲ್ಲವೂ ಆರಂಭವಾದ ಆ ಹಳ್ಳಿಗೆ ಹೋಗಬೇಕೆಂದು ಹಠ ಮಾಡಿದಾಗ ತಾನೂ ಜೊತೆ ಬರುವೆ ಎಂದಳು ಐರೀನ್. ನಿರಾಕರಿಸಿ ಪಟ್ಟು ಹಿಡಿದಾಗ ದಿನವೂ ತಪ್ಪದೇ ಫೋನ್ ಮಾಡಬೇಕೆಂದು ಕಟ್ಟಳೆ ಹಾಕಿದ್ದಳು – ಸಮ್ಮತಿಸಿದ್ದ.

ಬೀಳುಬಿದ್ದ ಕೊಪ್ಪಲುಗಳ ಮೂಲಕ ಹಾದು ಇನ್ಸೆಲ್‍ತಾಲ್‍ಗೆ ಬರಲು ಸುಮಾರು ೩೦ ಕಿಲೋಮೀಟರ್ ಉದ್ದ ದಾರಿ, ಅಬ್ಬಬ್ಬಾ ಎಂದರೆ ಐದು ದಿನಗಳ ನಡಿಗೆಯೆಂದು ಅಂದಾಜು ಮಾಡಿದ್ದ. ಆಲ್ಜೈಮರ್‌ ಕಾಲಕಳೆದಂತೆ ಉಲ್ಬಣಿಸುತ್ತಾ ಹೋಗುವ ರೋಗವೆಂದು ಮುದಿಮುಖಗಳ ಕಿರುಹೊತ್ತಗೆಯಲ್ಲಿ ಓದಿದ್ದ. ಬಾಲ್ಯದ ನೆನಪುಗಳ ತಿಳಿಗೊಳದಲ್ಲಿ ಮಿಂದು ಬರುವಷ್ಟರಲ್ಲಿ ಕೊನೆಯ ಕಾದಂಬರಿಯೊಂದು ಸ್ಫುರಿಸಬಹುದೆಂಬ ಬಯಕೆ.

ರಕ್‍ಸ್ಯಾಕ್‍ಗೆ ಎಲ್ಲವನ್ನೂ ತುಂಬಿ ಸಿದ್ಧಪಡಿಸಲು ಐರೀನ್ ಸಹಾಯ ಮಾಡಿದ್ದಳು. ಕ್ಯಾನ್‍ಗಳಲ್ಲಿ ತಿನ್ನಲು ಸಿದ್ಧವಾದ ಹ್ಯಾಮ್, ನೀರಿನ ಎರಡು ಬಾಟಲಿ, ಉದ್ವೇಗ ತಡೆಯಲು ಮಾತ್ರೆ. ಜೊತೆಗೆ ಮಿಠಾಯಿಯ ಪ್ಯಾಕೆಟ್, ದೊಡ್ಡ ಚಾಕಲೇಟ್ ಬಾರ್, ದಾರಿಯನ್ನು ದಪ್ಪಗೆರೆಯಲ್ಲಿ ಗುರುತುಮಾಡಿದ್ದ ನಕಾಶೆ. ಹೆಸರು, ರೋಗದ ವಿವರಗಳೊಡನೆ ಐರೀನಳ ಫೋನ್ ಸಂಖ್ಯೆಯನ್ನು ರಟ್ಟಿಗೆ ಅಂಟಿಸಿ ಅದನ್ನು ಲ್ಯಾಮಿನೇಟ್ ಮಾಡಿ, ಕೈದಿಗಳಿಗೆ ಹಾಕುವಂತೆ ಕತ್ತಿಗೆ ನೇತುಹಾಕಲು ದಾರ ಪೋಣಿಸಿದ್ದಳು. ಸದಾ ಜೊತೆಯಲ್ಲಿ ಇಟ್ಟುಕೊಳ್ಳುತ್ತೇನೆಂದು ಪ್ರಮಾಣ ಮಾಡಿದ್ದ. ಮಂದಗತಿಯಲ್ಲಿ, ಪದೇ ಪದೇ ಆರಾಮಕ್ಕೆಂದು ನಿಂತು, ನಡೆಯಬೇಕೆಂಬ ಮಗಳ ತಾಕೀತಿಗೆ ತಲೆಯಾಡಿಸಿದ್ದ.

ಗಡಿಯ ಆಚೆಗಿನ ಊರಿನ ಸಣ್ಣ ಗೆಸ್ಟ್ ಹೌಸಿಗೆ ಕಾರಿನಲ್ಲಿ ತಂದು ಬಿಟ್ಟಿದ್ದಳು. ಮಾರನೆಯ ದಿನ ಬಸ್ ಹತ್ತಿ ಚಾರಣಮಾರ್ಗದ ಹತ್ತಿರ ಬಂದು ಇಳಿದಿದ್ದ. ಮಗುವಾಗಿದ್ದಾಗ ಆಡಿ ಬೆಳೆದ ಜಾಗಗಳ ನಡುವಿನ ಈ ಯಾತ್ರೆ ಬತ್ತಿಹೋಗುತ್ತಿರುವ ಮೆದುಳಿಗೆ ಅಮೃತವರ್ಷವನ್ನೆರೆದು, ಮತ್ತೆ ಬರೆಯುವುದಕ್ಕೆ ಹುರಿದುಂಬಿಸಬಹುದೆಂಬ ಆಸೆ ನೀರುಪಾಲಾದೀತೆಂಬ ಆತಂಕವೂ ಇತ್ತು.

                                                                          * * * * *

ಅಕಸ್ಮಾತ್ತಾಗಿ ಹತ್ತಿರ ಬಂದಾಗ ಇಬ್ಬರೂ ಮಾತಾಡುವುದನ್ನು ಕೇಳಿ ಸೈಕಲ್ ಹಾಕಿಕೊಂಡು ಬಂದವರೂ ಜರ್ಮನ್ನರೇ ಎಂಬುದು ಖಾತ್ರಿಯಾಗಿತ್ತು. ಇನ್ನೇನು ತಿರುಗಬೇಕೆಂದಾಗ ಅವನನ್ನು ನೋಡಿದವರು ಅರೆಬರೆ ಚೆಕ್ ಭಾಷೆಯಲ್ಲಿ ಮಾತಾಡಿಸಿದಾಗ ಬೇಡವೆನಿಸದರೂ ಉತ್ತರ ಕೊಡದೇ ಇರಲಾಗಲಿಲ್ಲ. ಜರ್ಮನ್ ಎಂದು ಗೊತ್ತಾದಾಗ ಖುಷಿಯಿಂದಲೇ ಮಾತು ಸರಾಗವಾಗಿ ಮುಂದುವರೆದಿತ್ತು. ಬಿಸಿಲಿಗೊಡ್ಡಿದ ಕತ್ತಿನ ಪಟ್ಟಿಯಷ್ಟೇ ಕೆಂಪಗಿದ್ದ ತುಟಿಗಳನ್ನು ಅಗಲಿಸಿ ನಕ್ಕು, ತಾನು ಬವೇರಿಯಾದಲ್ಲಿ ಹುಟ್ಟಿಬೆಳೆದೆ, ತಾತನನ್ನು ಇಲ್ಲೇ ಮಣ್ಣುಮಾಡಿರುವುದೆಂದು ಒಪ್ಪವಾಗಿದ್ದ ಗೋರಿಯೊಂದರ ಕಡೆಗೆ ತೋರಿಸಿ ಬೀಗುತ್ತಾಳೆ. ಥಾಮಸ್‍ ಪ್ರಶಂಸೆಯ ಒಂದೆರಡು ಮಾತಾಡಿ ಕೈಬೀಸಿ ಇಬ್ಬರನ್ನೂ ಬೀಳ್ಕೊಡುತ್ತಾನೆ. ಸ್ಮಶಾನದಿಂದ ಹೊರಬಂದು ಕಾಲುದಾರಿಯ ಬದಿಯಲ್ಲಿನ ಬಂಡೆಯೊಂದರ ಮೇಲೆ ಕೂತು ಐರೀನ್‍ಗೆ ಫೋನ್ ಹಚ್ಚುತ್ತಾನೆ.

                                                                          * * * * *

ಮಹಿಳಾ ವಾರಪತ್ರಿಕೆಯ ಸಂಪಾದಕಿಯೊಂದಿಗಿನ ಮಾತುಕತೆಯ ಬಗ್ಗೆ ಐರೀನ್‍ಗೆ ಏನೋ ಅಸಮಾಧಾನ. ತಂದೆಯ ಕಾಯಿಲೆಯ ಬಗ್ಗೆ ಇಷ್ಟೆಲ್ಲಾ ಮಾತಾಡಿ ಅವಹೇಳನ ಮಾಡಿದಂತಾಯಿತೇನೋ ಅನಿಸಿತು. ಮೊದಲು ಗೊತ್ತಾದಾಗ ಹುಟ್ಟಿದ ಭಯಾನಕ ಆಲೋಚನೆಗಳೆಲ್ಲಾ ಕ್ರೋಢೀಕರಿಸಿ, ಭೀಭತ್ಸ ರೂಪ ತಳೆದುಕೊಂಡಿತು. ಪೂರಾ ಅಪರಿಚಿತನಾಗಿ ಹೋದರೆ? ನೋಡಿಕೊಳ್ಳಲಾರದೇ ವೃದ್ಧಾಶ್ರಮಕ್ಕೆ ಸೇರಿಸಬೇಕಾಗಿ ಬಂದರೆ? ಎಂದೆಲ್ಲಾ ಚಿಂತೆ ಶುರುವಾಯಿತು.

ಕಛೇರಿಯಲ್ಲಿದ್ದ ಐರೀನ್‍ಗೆ ಕೆಲಸದ ಮೇಲೆ ಗಮನವಿಡಲು ಸಾಧ್ಯವಾಗಲಿಲ್ಲ – ಬಾಲ್ಯವಿಡೀ ಕೈಗೆ ಸಿಕ್ಕದಂತೆ ಬರೆಯುವ ಕೋಣೆಯಲ್ಲಿ ಅಪ್ಪ ಬಂದಿಯಾಗುತ್ತಿದ್ದ. ತಂದೆ ಎನಿಸಿದವನನ್ನು ಕಂಡದ್ದು ಅವನ ಕಾದಂಬರಿಗಳ ಮೂಲಕ – ಅವೂ ಎಷ್ಟು ಕ್ಲಿಷ್ಟವಾಗಿದ್ದವೆಂದರೆ ತಂದೆಯಾದವನು ತನಗೆ ಗುರುತೇ ಇಲ್ಲ ಎನಿಸಿತು. ಈಗಲೂ ಗಡಿಯಾಚೆ ಯಾವುದೋ ಕಾಡಿನಲ್ಲಿ ತನಗೆ ಎಟುಕದೇ ಓಡುತ್ತಿರುವಂತೆ ಭಾಸವಾಯಿತು. ಪ್ರತಿಸಂಜೆ ಫೋನ್ ಮಾಡುತ್ತಾನೆಂದು ಕಾಯುವುದು, ಅವನ ಮಾತಲ್ಲಿ, ಧ್ವನಿಯಲ್ಲಿ ರೋಗದ ಕುರುಹುಗಳಿಗಾಗಿ ತಡಕಾಡುವುದು, ಇದೇ ಆಯಿತು. ಮಾತು ಮುಗಿಸಿ ಫೋನ್ ಕೆಳಗಿಟ್ಟು ಐರೀನ್ ಉಗುರುಕಡಿಯಲು ಶುರುಮಾಡಿದಳು. ಅವನೊಡನೆ ಆಡಬೇಕೆಂದುಕೊಂಡ ಯಾವ ಮಾತೂ ಆಡಲಿಕ್ಕಾಗದು – ತನ್ನಿಂದ ಬಹುದೂರ ಹೊರಟುಹೋಗಿದ್ದಾನೆ ಎನಿಸಿತ್ತು.

                                                                          * * * * *

ಇನ್ಸೆಲ್‍ತಾಲ್‍ ಪಕ್ಕದ ಹಳ್ಳಿ ಹೆಸರು ಸಂಟಾ ಕಥರೀನಾ. ಹಿಂದಿನ ಎಲ್ಲಾ ಊರುಗಳಂತೆ ಇಲ್ಲಿಯೂ ತುಂಡುಗೋಡೆಗಳ ನಡುವೆ ಬೆಳೆದು ನಿಂತ ಕಳ್ಳಿಗಿಡಗಳು. ಕಿರಿದಾದ ಕಾಲುದಾರಿಯಲ್ಲಿ ನಡೆದ ಥಾಮಸ್‍ಗೆ ಇಲ್ಲಿನ ಹುಡುಗರ ಜೊತೆಗೆ ಸ್ಕೂಲಿಗೆ ಹೋಗುತ್ತಿದ್ದ ನೆನಪು ಮರುಕಳಿಸುತ್ತದೆ. ಚರ್ಚ್ ನಿಂತಿದ್ದ ಜಾಗದಲ್ಲಿ ಉಳಿದಿರುವುದು ಶಿಲುಬೆಯೊಂದೇ. ಅದರಡಿ ನಿಂತು ಸಿಗರೇಟ್ ಸೇದಲು ಮನಸ್ಸಾಗದೆ ತುಸುದೂರ ಸರಿದು ಕಾಲುದಾರಿಯ ಪಕ್ಕಕ್ಕೆ ಅಂಡೂರಿ ಸಿಗರೇಟಿನ ಸ್ವಾದದೊಂದಿಗೆ ನೀರವ ಏಕಾಂತವನ್ನು ಸವಿಯುತ್ತಾನೆ. ತನ್ನ ಹಿಂದಿನ ಕಾದಂಬರಿಯ ವಿಮರ್ಶೆಯನ್ನು ನೆನೆಯುತ್ತಾನೆ. ಹೀಗಾಗುತ್ತೆ ಅಂತ ಗೊತ್ತಿದ್ದಿದ್ದರೆ ತನ್ನ ಬರವಣಿಗೆಯ ಗತಿ ಬದಲಾಗುತ್ತಿತ್ತೇ? ಅದನ್ನು ಮುಗಿಸಿ ಬರೆಯದೇ ಕಳೆದ ದಿನಗಳೆಲ್ಲ ಹಾಳು ಮಾಡಿದಂತಾಯಿತೇ?

ಸಿಗರೇಟಿನ ತುಂಡನ್ನು ಮಡಚಿ ಜೇಬಿಗೆಹಾಕಿ ಕಾಡಿನ ಸಪ್ಪಳಕ್ಕೆ ಕಿವಿಯೊಡ್ಡುತ್ತಾನೆ. ಯಾವುದೋ ಹಕ್ಕಿಯ ಗುಂಜನ – ಎಲ್ಲದರ ಬಗ್ಗೆಯೂ ಬರೆಯಬಹುದೆಂದು ಎಲ್ಲ ಪಕ್ಷಿಗಳ, ಮರಗಿಡಗಳ ಹೆಸರು ತಿಳಿದುಕೊಳ್ಳುವ ಹುಮ್ಮಸ್ಸಿತ್ತು ಆಗ.

ಈಗ ಉಳಿದದ್ದು? ತಪ್ಪದೇ ಅಳಿಸಿಹೋಗುವ ಹೆಸರುಗಳ ತುಣುಕುಗಳಷ್ಟೇ…

ಮತ್ತೆ ಅಮ್ಮನ ಬೆವರಿನ ಕಮಟಿನೊಂದಿಗೆ ಬೆರೆತ ಸೇಬಿನ ಕಂಪು.

ಅಂದು ಇನ್ನೆಲ್ಲಿಗೂ ಹೋಗುವುದಿಲ್ಲ. ಹಳ್ಳಿಯ ಅಂಚಿನ ತಗ್ಗಿನಲ್ಲಿ ಸ್ಲೀಪಿಂಗ್ ಬ್ಯಾಗ್ ಬಿಡಿಸಿಕೊಂಡು ಮಿಠಾಯಿ ಚೀಪುತ್ತಾ ಬಾನಿನೆಡೆಗೆ ನೋಡುತ್ತಾನೆ. ಚಿಕ್ಕಂದಿನಲ್ಲಿ ಗುರುತಾಗಿದ್ದ ತಾರಾಮಂಡಲಗಳು ಅಲ್ಲಲ್ಲೇ ಇವೆ, ತುಂಡುಮೋಡಗಳ ನಡುವೆ ಆಗಾಗ್ಗೆ ವಿಮಾನವೋ ಉಪಗ್ರಹವೋ ಹಾದುಹೋದದ್ದು ಕಂಡು ಇಲ್ಲಿರುವುದು ತಾನೊಬ್ಬನೇ ಅಲ್ಲವೆನಿಸಿ ಹಾಯಾಗಿ ನಿದ್ದೆಹೋಗುತ್ತಾನೆ.

ಸುಮಾರು ನೂರು ಕಿಲೋಮೇಟರ್ ದೂರದಲ್ಲಿ, ಬೆರಳ ನಡುವೆ ಉರಿಯುವ ಸಿಗರೇಟ್ ಹಿಡಿದ ಐರೀನ್, ಅದೇ ಆಕಾಶವನ್ನು ಬಾಲ್ಕನಿಯಲ್ಲಿ ನಿಂತು ನೋಡುತ್ತಿದ್ದಾಳೆ. ಬೀದಿ ದೀಪಗಳ ಕಂದು ಬೆಳಕಿನಲ್ಲಿ ನಕ್ಷತ್ರಗಳು ಕಾಣುವುದೇ ಕಷ್ಟ. ಸೇದುವುದನ್ನು ಮುಗಿಸಿ ಹಾಸಿಗೆ ಹತ್ತಿದರೂ ನಿದ್ದೆ ಹತ್ತದು. ಇದೆಂತಹ ತಾಪತ್ರಯ ತನಗೆ ಅಂಟಿಕೊಂಡಿತೋ ಎಂದೊಮ್ಮೆ ರೇಗಿತು. ವಿಚಿತ್ರ ಯಾತ್ರೆಯೊಂದಕ್ಕೆ ಹೊರಟ ತಂದೆಯದ್ದೇ ಚಿಂತೆ – ಎಲ್ಲೋ ಕಾಡಲ್ಲಿ ಅರೆಮರುಳಾಗಿಯೋ ಇಲ್ಲವೇ ಶವವಾಗಿಯೋ ಬಿದ್ದಿರಬಹುದೆಂಬ ಭೀತಿ. ಥಾಮಸ್ ನಿರುಮ್ಮಳವಾಗಿ ಮಲಗಿದ್ದ ಅಷ್ಟೂ ಹೊತ್ತು ಹೋಗಿಬರುವ ಕಾರುದೀಪಗಳು ಮಾಡಿನ ಮೇಲೆ ಮೂಡಿಸಿದ ಎಳೆಗಳನ್ನು ನೋಡುತ್ತಾ ಬಿದ್ದಿದ್ದಳು.

                                                                          * * * * *

ಇನ್ಸೆಲ್‍ತಾಲ್ ತಲುಪಿದಾಗ ನಡುಮಧ್ಯಾಹ್ನ.

ಎಳೆವಯಸ್ಸಿನಲ್ಲಿ ಊರು ಬಿಟ್ಟುಹೋಗುವಾಗ ನಿಂತಿದ್ದ ಮನೆಗಳು ಮನಃಪಟಲದಲ್ಲಿ ಅರೆಕ್ಷಣ ಹಾದುಹೋಗುತ್ತವೆ. ಇಲ್ಲಿ ಉಳಿದದ್ದೂ ಅಷ್ಟೇ – ಎತ್ತರಕ್ಕೆ ಬೆಳೆದು ನಿಂತ ಕಳ್ಳಿ, ಪಾಚಿಬೆಳೆದುಕೊಂಡ ಮೋಟುಗೋಡೆಗಳು.

ಥಾಮಸ್ ದೀರ್ಘವಾಗಿ ಉಸಿರಾಡುತ್ತಾ ಒಂದರ ಹಿಂದೆ ಮತ್ತೊಂದರಂತೆ ಎರಡು ಸಿಗರೇಟ್ ಸೇದಿದ – ಉದ್ವೇಗ ಸ್ವಲ್ಪ ಕಡಿಮೆಯಾದಂತೆನಿಸಿತು. ನಿಧಾನವಾಗಿ ಹೆಜ್ಜೆಯಿಡುತ್ತಾ, ಯಾವುದೋ ಕತ್ತಲು ಗವಿಯಿಂದ ಬರುವಂತೆ ಬರುವ ನೆನಪುಗಳನ್ನು ಹುಬ್ಬು ಗಂಟಿಕ್ಕಿ ಕಣ್ಣೆದುರು ಕಾಣುವ ವಾಸ್ತವಕ್ಕೆ ಹೋಲಿಸಲೆತ್ನಿಸುತ್ತಾನೆ. ಒಮ್ಮೆಲೇ ಹಿಂದೆ ತಿರುಗಿದಾಗ ಗೋಡೆಯ ಇಟ್ಟಿಗೆಯೊಂದನ್ನು ಎಡವಿ, ಹಿಮ್ಮಡಿ ಹಿಡಿಯಲು ಬಗ್ಗಿದಾಗ ಕಂಡದ್ದು ಕುದುರೆ ಕಟ್ಟುವುದಕ್ಕೆ ನೆಲದಲ್ಲಿ ಹಾಕಿದ್ದ ಲೋಹದ ಬಳೆ. ಅಕ್ಕಸಾಲಿಗ! ಜಾಗದ ಪರಿಚಯ ನೆನಪಾಗಿ ಬೀಗುತ್ತಾನೆ. ಸಾವಕಾಶವಾಗಿ ಆಚೀಚೆ ನೋಡುತ್ತಾ ಹುಷಾರಾಗಿ ಹೆಜ್ಜೆಯಿಡುತ್ತಾ ಹೊರಡುತ್ತಾನೆ.

ಈ ಊರಿನಲ್ಲೂ ಎಂದೋ ನೀಡುತ್ತಿದ್ದ ಫಸಲಿನ ನೆನಪುಗಳು ಹೆಪ್ಪುಗಟ್ಟಿದಂತೆ ಪಾಚಿಗಟ್ಟಿದ್ದ ಹಣ್ಣಿನ ಮರದ ರೆಂಬೆಗಳು. ಊರಿನ ಮೈದಾನದಲ್ಲಿ ಹುಲ್ಲು ಆಳೆತ್ತರ ಬೆಳೆದಿದೆ. ಥಾಮಸ್‍ ಹುಟ್ಟಿದ ಮನೆ ಊರಿನ ಅಂಚಿನಲ್ಲಿತ್ತು. ಕೊರೆಯುವ ನೀರನ್ನು ಗುಟುಕುಗುಟುಕಾಗಿ ಕುಡಿಯುವವನಂತೆ ಹೆಜ್ಜೆ ಮೇಲೆ ಹೆಜ್ಜೆಯಿಡುತ್ತಾ ಆಕಡೆ ತಿರುಗುತ್ತಾನೆ. ದಾರಿಯುದ್ದಕ್ಕೂ ಕುಸಿದುಬಿದ್ದ ನೆಲಮಾಳಿಗೆಗಳು. ಜೋರಾದ ಬಿಸಿಲಿನಲ್ಲಿ ಬೆನ್ನು, ಹಣೆಯಿಂದ ಬೆವರು ತೊಟ್ಟಿಕ್ಕಿತ್ತು.

ಒಮ್ಮೆಲೇ ಎದುರಾಗಿತ್ತು. ಗಿಡ್ಡ ಪೊದೆಗಳ ನಡುವೆ ಅಡ್ಡಾದಿಡ್ಡಿ ಬಿದ್ದಿದ್ದ ಕಲ್ಲುಗಳು, ಬಾಗಿಲು, ಕಿಟಕಿ, ಅಡುಗೆಮನೆಯೆಲ್ಲವೂ ಕಾಡುಪಾಲು. ರಕ್‍ಸ್ಯಾಕ್ ಬಿಚ್ಚಿ ಕೆಳಗಿಡುತ್ತಾನೆ. ಅಪೇಕ್ಷಿಸಿದ್ದ ಆಹ್ಲಾದದ ಬದಲು ಮನಸ್ಸಿಗೆ ನಾಟಿದ್ದು ಅದೇನೋ ಕಳೆದುಕೊಂಡ ಹತಾಶೆ. ಪೊದೆಗಳನ್ನು ದಾಟಿ ತರಗೆಲೆಗಳ ಮೇಲೆ ಕಾಲಿಡುತ್ತಾ ತನ್ನ ಮಂಚವಿದ್ದ ಜಾಗಕ್ಕೆ ಬಂದು ನಿಲ್ಲುತ್ತಾನೆ.

ಇದೇ ನನ್ನ ಮನೆ.

ಸೊರಗುತ್ತಿರುವ ಮೆದುಳಿನ ಮೇಲಿನ ಗಟ್ಟಿ ಬುರುಡೆಯನ್ನು ಕೈ ಸವರುತ್ತದೆ. ಅಡುಗೆಮನೆಯ ಕಡೆ ಹೆಜ್ಜೆಯಿಡುತ್ತಿದ್ದಂತೆ ತುದಿಬೆರಳುಗಳಲ್ಲಿ ಕಂಪನದಂತೆ ಶುರುವಾಗಿ ಹೊಟ್ಟೆ, ಎದೆ, ಹಾದು ನೆತ್ತಿಯವರೆಗೆ ಏರಿತ್ತು ನೀರವ ಆನಂದದ ಹರವು. ಅಡುಗೆಮನಯ ದೊಡ್ಡ ಕಿಟಕಿಯಿದ್ದ ದಿಕ್ಕಿನಲ್ಲಿ ನೋಡುತ್ತಾನೆ. ಬೆಳೆದು ನಿಂತ ಪೈನ್ ಮರಗಳು; ಕಂಡಕಂಡಲ್ಲಿ ಬೇರುಬಿಟ್ಟು, ವಯಸ್ಸಾದ ಪೇರ್ ಮರವನ್ನು ಅಡ್ಡಗಟ್ಟಿ, ಹರಡಿಕೊಂಡಿದ್ದ ರಾಸ್ಪ್‌ಬೆರ್ರಿ ಪೊದೆಗಳು; ಅಲ್ಲಲ್ಲಿ ಮುರಿದು ಬಿದ್ದ ಪ್ಲಮ್ ಮರದ ಕೊಂಬೆಗಳು. ಏಲ್ಲಕ್ಕಿಂತ ಮಿಗಿಲಾಗಿ ವರ್ಷವರ್ಷ ಜೇನಿನಂತಹ ರಸಭರಿತ ಹಳದಿಕೆಂಪು ಬಣ್ಣದ ಹಣ್ಣು ಬಿಡುತ್ತಿದ್ದ ಸೇಬಿನ ಮರ. ಆ ಹಣ್ಣುಗಳನ್ನು ನೆನೆಸಿಕೊಳ್ಳುತ್ತಾನೆ – ಇದು ಗ್ರಾಫೆನ್‍ಸ್ಟೈನ್ ಸೇಬು (ಸರಿಯಾದ ಹೆಸರು ಹೊಳೆದ ಖುಷಿ ಬೇರೆ). ಸುಮ್ಮನೆ ನಿಂತು ಅದನ್ನೇ ದಿಟ್ಟಿಸುತ್ತಾನೆ.

ನಾಲಗೆಯ ಮೇಲೆ ಜೇನಿನ ಸಿಂಚನೆ, ದವಡೆಯಿಂದ ಬಾಯಲ್ಲಿಲ್ಲದ ಬೀಜವೆರಡನ್ನು ಅಗಿದು, ಹಲ್ಲುಗಳನ್ನು ನಾಲಗೆಯಿಂದೊಮ್ಮೆ ಒರೆಸಿ ನುಂಗುತ್ತಾನೆ. ಪಟಲಕ್ಕೆ ಅಂಟಿಸಿಕೊಳ್ಳಲೋ ಎಂಬಂತೆ ಅಲ್ಲೇ ದೃಷ್ಟಿ ನೆಡುತ್ತಾನೆ.

ಕೆಲಕಾಲದ ನಂತರ ಐರೀನ್ ಅವನನ್ನು ಈ ಅವಸ್ಥೆಯಲ್ಲಿ ನೋಡುತ್ತಾಳೆ. ಗಾಳಿಯನ್ನು ಅಗಿಯುತ್ತಿರುವುದು ಕಾಯಿಲೆಯ ಇನ್ನೊಂದು ಸೂಚನೆಯೆನಿಸಿ ಗಾಬರಿಯಾಗುತ್ತದೆ.

ಅವಳಿಗೇನು ಗೊತ್ತು, ಥಾಮಸ್ ತನ್ನ ಬಾಲ್ಯವನ್ನು ಮೆಲುಕುಹಾಕಿದ್ದನೆಂದು.

ಚಿತ್ರ: ಮೇಘಾ. ಜೆ. ಶೆಟ್ಟಿ


ಅನುವಾದ : ನಾಗವಳ್ಳಿ ಎಸ್. ಕಿರಣ್ 
1972ರಲ್ಲಿ ಹುಟ್ಟಿದ್ದು ಬೆಂಗಳೂರಿನಲ್ಲಿ . ಸಸ್ಯಶಾಸ್ತ್ರದಲ್ಲಿ ಡಾಕ್ಟ್ರರೇಟ್ ಪದವಿ ಗಳಿಸಿ , 2013 ರ ವರೆಗೆ ಸಸ್ಯ ವಿಜ್ಞಾದಲ್ಲಿ ಸಂಶೋಧನೆ ಮಾಡಿ , ಪ್ರಸ್ತುತ ಎಲೆಕ್ಟ್ರಾನ್ ಮೈಕ್ರೋಸ್ಕೋಪುಗಳ ತಯಾರಿಕಾ ಸಂಸ್ಥೆಯಲ್ಲಿ ಸಂಶೋಧನಾ ಪ್ರಾಯೋಜನೆಗಳ ನಿರ್ವಾಹಕರಾಗಿ ಕಾರ್ಯ . ಜೊತೆಗೆ ಸುಮಾರು 20 ವರ್ಷಗಳಿಂದ ಅನುವಾದಕರೂ ಕೂಡ . ಜಯಂತ ಕಾಯ್ಕಣಿಯವರ ‘ ಅಮೃತಬಳ್ಳಿ ಕಷಾಯ’ ಸಂಕಲನದ ಎರಡು ಕಥೆಗಳು ಇಂಗ್ಲೀಶ್ ನಲ್ಲಿ ‘Dot and Lines’ ಎಂದು 2004 ರಲ್ಲಿ ಪ್ರಕಟವಾಯಿತು . ದೆಹಲಿಯ ಕಥಾ ಸಂಸ್ಥೆ ಬ್ರಿಟೀಷ್ ಕೌನ್ಸಿಲ್ ಜೊತೆಗೆ 1997-98 ರಲ್ಲಿ ಆಯೋಜಿಸಿದ್ದ ಎರಡನೇ ಅಖಿಲ ಭಾರತ ಕಥಾನುವಾದ ಸ್ಪರ್ಧೆಯಲ್ಲಿ ಶಾಂತಿನಾಥ ದೇಸಾಯಿಯವರ ಕಥೆಯೊಂದರ ಅನುವಾದ ಅಭಿನಂದನಾ ಪ್ರಶಸ್ತಿ ಗಳಿಸಿತು . ಕಳೆದ 20 ವರ್ಷಗಳಿಂದ ಚೆಕ್ ಗಣರಾಜ್ಯದಲ್ಲಿ ನೆಲೆಸಿದ್ದಾರೆ .

ಪ್ರತಿಕ್ರಿಯಿಸಿ